ಪವಿತ್ರ ಸೇವೆಗಾಗಿ ಸಂಪದ್ಭರಿತ ಪ್ರತಿಫಲಗಳು
ಹ್ಯಾರಿ ಬ್ಲುರ್ ಹೇಳಿದಂತೆ
ಸುಮಾರು ಒಂದು ನೂರು ವರ್ಷಗಳ ಹಿಂದೆ, ನನ್ನ ಅಜ್ಜನವರು, ಮೆತೊಡಿಸ್ಟ್ ಚರ್ಚಿನ ಬಹಳ ವಿಶ್ವಾಸಾರ್ಹ ಸದಸ್ಯರಾಗಿದ್ದರು. ಅವರು ಗೌರವಾನಿತ್ವ ಲೌಕಿಕ ಸೌವಾರ್ತಿಕರೂ ಆಗಿದ್ದರು. ಇಂಗ್ಲೆಂಡಿನ ಕುಂಬಾರ ಪಟ್ಟಣವಾದ, ಸ್ಟಾಕ್ ಆನ್ ಟ್ರೆಂಟ್ನಲ್ಲಿನ ಅನೇಕ ಆರಾಧನಾ ಮಂದಿರಗಳನ್ನು ಬೆಂಬಲಿಸಲಿಕ್ಕಾಗಿ ಅವರು ಬಹಳ ಉದಾರವಾಗಿ ದಾನ ನೀಡಿದರು. ತದನಂತರ ಅವರು ಹಣಕಾಸಿನ ಮುಗ್ಗಟ್ಟಿನಿಂದಾಗಿ ಕಷ್ಟಕಾಲಗಳನ್ನು ಅನುಭವಿಸಿದರು. ಅಜ್ಜನವರಿಗೆ ಸಹಾಯ ಮಾಡಲಿಕ್ಕಾಗಿ, ನನ್ನ ತಂದೆಯವರು ಅವರಿಗೆ ಒಂದು ಚಿಕ್ಕ ಹಳ್ಳಿ ಅಂಗಡಿಯನ್ನು ನಡೆಸುವಂತೆ ಏರ್ಪಡಿಸಿದರು. ಆ ಅಂಗಡಿಯಲ್ಲಿ ಬಿಯರ್ ಮಾರಲು ಪರವಾನೆಯು ದೊರಕಿತ್ತು, ಮತ್ತು ಮೆತೊಡಿಸ್ಟರಿಗೆ ಇದು ತಿಳಿದುಬಂದಾಗ, ಆ ಕೂಡಲೆ ಅವರು ಅಜ್ಜನನ್ನು ಬಹಿಷ್ಕರಿಸಿಬಿಟ್ಟರು.
ತಂದೆಯವರು ರೋಷಾವೇಶಗೊಂಡಿದ್ದರು ಮತ್ತು ಪುನಃ ತಾನೆಂದಿಗೂ ಧರ್ಮದೊಂದಿಗೆ ಸಂಪರ್ಕವನ್ನು ಇಡುವುದಿಲ್ಲವೆಂದು ಅವರು ಪ್ರತಿಜ್ಞೆಮಾಡಿದರು. ಮತ್ತು ಅವರು ತಮ್ಮ ವಚನವನ್ನು ಪಾಲಿಸಿದರು. ಅವರು ಒಬ್ಬ ಪೊಲೀಸರಾಗಿದ್ದರು, ಆದರೆ ತದನಂತರ ಅವರು ಒಂದು ಮದ್ಯದಂಗಡಿಯ ಮಾಲಿಕರಾದರು. ಆದುದರಿಂದ ನಾನು ಆ ಸ್ಥಳದ ವಾಸನೆಗಳು ಮತ್ತು ಹೊಗೆಸೊಪ್ಪಿನ ಹೊಗೆಯ ನಡುವೆ ಬೆಳೆಸಲ್ಪಟ್ಟೆ. ಧರ್ಮವು ನನ್ನ ಜೀವಿತದಲ್ಲಿ ಯಾವುದೇ ಪಾತ್ರವನ್ನು ವಹಿಸದಿದ್ದರೂ, ಅಧಿಕಾಂಶ ಬೋರ್ಡ್ ಗೇಮ್ಸ್ಗಳನ್ನು ನಿಪುಣವಾಗಿ ಆಡಲು ನಾನು ಕಲಿತುಕೊಂಡೆ! ಹಾಗಿದ್ದರೂ, ಅಜ್ಜನ ಆರಂಭದ ಪ್ರಭಾವದ ಕಾರಣದಿಂದ, ಬೈಬಲಿನ ವಿಷಯದಲ್ಲಿ ನಾನು ಪರಿಗಣನಾರ್ಹವಾದ ಗೌರವವನ್ನು ಇಟ್ಟುಕೊಂಡಿದ್ದೆ. ಆದರೂ ಅದರ ಕುರಿತು ನನಗೆ ಸ್ವಲ್ಪಮಾತ್ರವೇ ತಿಳಿದಿತ್ತು.
ಬೈಬಲ್ ಸತ್ಯತೆಯನ್ನು ನಾನು ಕಲಿತೆ
1923ರಲ್ಲಿ, ನಾನು 24 ವರ್ಷದವನಾಗಿದ್ದಾಗ, ನಾನು ನಾಟಿಂಗಮ್ನ ಪೂರ್ವಕ್ಕೆ ಸ್ಥಳಾಂತರಿಸಿದೆ ಮತ್ತು ಸುಮಾರು 40 ಕಿಲೊಮೀಟರುಗಳಷ್ಟು ದೂರವಿದ್ದ, ಲೆಸ್ಟರ್ ನೈರುತ್ಯದಿಕ್ಕಿನಲ್ಲಿರುವ ವ್ಹೆಟ್ಸ್ಟೋನ್ನ ಹಳ್ಳಿಯಲ್ಲಿ ವಾಸಿಸುತ್ತಿದ್ದ ಮೇರಿಯ ಪ್ರೇಮಯಾಚನೆಮಾಡತೊಡಗಿದೆ. ಅವಳ ತಂದೆಯಾದ ಆರ್ಥರ್ ರೆಸ್ಟ್, ಸ್ಥಳಿಯ ಆರಾಧನಾ ಮಂದಿರದಲ್ಲಿ ಆರ್ಗನ್ ವಾದಕರಾಗಿದ್ದರು. ಆದರೆ ಈ ಸಮಯದಷ್ಟಕ್ಕೆ ಅವರು ಒಬ್ಬ ಉತ್ಸಾಹಿ ಬೈಬಲ್ ವಿದ್ಯಾರ್ಥಿ—ಆಗ ಯೆಹೋವನ ಸಾಕ್ಷಿಗಳು ಹೀಗೆ ಪ್ರಸಿದ್ಧರಾಗಿದ್ದರು—ಯಾಗಿದ್ದರು. ಹೊಸದಾಗಿ ಕಂಡುಕೊಳ್ಳಲ್ಪಟ್ಟ ತಮ್ಮ ನಂಬಿಕೆಯ ಕುರಿತು ಆರ್ಥರ್ ಯಾವಾಗಲೂ ನನ್ನೊಂದಿಗೆ ಮಾತಾಡುತ್ತಿದ್ದರು. ಆದರೆ ನಾನು ತೀರ ಕೊಂಚ ಆಸಕ್ತಿಯನ್ನು ತೋರಿಸುತ್ತಿದ್ದೆ. ಆದರೂ, ಅಗ್ರಗಣ್ಯ ಬ್ಯಾಪ್ಟಿಸ್ಟನಾಗಿದ್ದ ಪಾರ್ಲಿಮೆಂಟಿನ ಸದಸ್ಯನೊಬ್ಬನಿಂದ ಕೊಡಲ್ಪಟ್ಟ ಒಂದು ಉಪನ್ಯಾಸವನ್ನು ಕೇಳಲಿಕ್ಕಾಗಿ, 1924ರ ಜುಲೈ 13ರ ಆದಿತ್ಯವಾರ ಮಧ್ಯಾಹ್ನದಂದು ಸ್ಥಳಿಯ ಬ್ಯಾಪ್ಟಿಸ್ಟ್ ಆರಾಧನಾ ಮಂದಿರಕ್ಕೆ ನಾನು ಅವರೊಂದಿಗೆ ಜೊತೆಗೂಡಿ ಹೋದಾಗ, ನನ್ನ ಆಸಕ್ತಿಯು ಹೊತ್ತಿಕೊಂಡಿತು. “ಪಾಸ್ಟರ್ ರಸಲ್ರ ಬೋಧನೆಗಳು ಶಾಸ್ತ್ರದ ಬೆಳಕಿನಲ್ಲಿ ಪರೀಕ್ಷಿಸಲ್ಪಟ್ಟದ್ದು” ಎಂಬ ಅವನ ವಿಷಯವು ನನ್ನ ಕುತೂಹಲವನ್ನು ಕೆರಳಿಸಿತು. ಆಗ ನಾನು ಬರೆದುಕೊಂಡಿದ್ದಂತಹ ನೋಟ್ಸ್ಗಳು ಇನ್ನೂ ನನ್ನ ಬಳಿಯಲ್ಲಿವೆ.
ತಮ್ಮ ನಂಬಿಕೆಗಳ ವಿಷಯದಲ್ಲಿನ ಈ ಆಕ್ರಮಣಕ್ಕೆ ಪ್ರತ್ಯುತ್ತರವನ್ನು ಕೊಡಲಿಕ್ಕಾಗಿ ಬೈಬಲ್ ವಿದ್ಯಾರ್ಥಿಗಳು ಮಾಡಿದ ವಿನಂತಿಯನ್ನು ಬ್ಯಾಪ್ಟಿಸ್ಟರು ನಿರಾಕರಿಸಿದರು. ಇದನ್ನು ನೋಡಿ ನಾನು ರೇಗಿಹೋದೆ ಮತ್ತು ಅಂತಹ ಒಂದು ಕೂಟವನ್ನು ನಡೆಸಲಿಕ್ಕಾಗಿ ಒಂದು ಬದಲಿ ಸ್ಥಳವನ್ನು ಕಂಡುಕೊಳ್ಳಲು ನಾನು ನಿರ್ಧರಿಸಿದೆ. ಸಮೀಪದಲ್ಲಿದ್ದ ಉಗ್ರಾಣವು ಒಂದು ಆದರ್ಶಪ್ರಾಯ ಸ್ಥಳವನ್ನು ಒದಗಿಸಿತು. ನಾವು ಅದನ್ನು ಸ್ವಚ್ಛವಾಗಿ ಗುಡಿಸಿದೆವು, ಜೇಡರ ಬಲೆಗಳನ್ನು ಝಾಡಿಸಿದೆವು, ಒಕ್ಕು ಯಂತ್ರ (ತ್ರೆಷಿಂಗ್ ಮಷೀನ್)ಗಳನ್ನು ಒಂದು ಬದಿಗೆ ಸರಿಸಿದೆವು, ಮತ್ತು ಆಗ ನಾವೆಲ್ಲರೂ ಸಿದ್ಧರಾಗಿದ್ದೆವು. ನಾವು 70 ಕುರ್ಚಿಗಳನ್ನು ಒಟ್ಟುಗೂಡಿಸಿದೆವು, ಮತ್ತು ನಾವು ಕರಪತ್ರಗಳನ್ನು ಮುದ್ರಿಸಿದೆವು.
ಭಾಷಣವನ್ನು ಕೊಡಲಿಕ್ಕಾಗಿ ಫ್ರಾಂಕ್ ಫ್ರಿರ್ ಅವರು ಲೆಸ್ಟರ್ನಿಂದ ಆಗಮಿಸಿದಾಗ, ಎಲ್ಲ ಆಸನಗಳು ಭರ್ತಿಯಾಗಿದ್ದು, ಇನ್ನೂ 70 ಮಂದಿ ನಿಂತುಕೊಂಡಿದ್ದರು! ಫ್ರಾಂಕರು ಶಾಸ್ತ್ರಗಳಿಂದ ನೀಡಿದ ಸ್ಪಷ್ಟವಾದ ತರ್ಕಸರಣಿಯು ನನಗೆ ಹಿಡಿಸಿತು, ಹಾಗೆಯೇ ಉಪಸ್ಥಿತರಿದ್ದ ಇನ್ನೂ ಅನೇಕರಿಗೆ ಅದು ಹಿಡಿಸಿತು. ಆ ಸಮಯದಂದಿನಿಂದ, ಲೆಸ್ಟರ್ನ ಸಮೀಪದಲ್ಲಿರುವ ಬ್ಲೇಬೀಯಲ್ಲಿದ್ದ ಬೈಬಲ್ ವಿದ್ಯಾರ್ಥಿಗಳ ಚಿಕ್ಕ ಸಭೆಯು ತೀವ್ರಗತಿಯಲ್ಲಿ ವಿಸ್ತರಿಸಿತು. ಇದು ನನ್ನ ಜೀವಿತದಲ್ಲಿಯೂ—ಮೇರಿಯ ಜೀವಿತದಲ್ಲಿಯೂ—ಒಂದು ತಿರುಗು ಬಿಂದುವಾಗಿತ್ತು. 1925ರಲ್ಲಿ ನಾವಿಬ್ಬರೂ ಯೆಹೋವನಿಗೆ ನಮ್ಮ ಸಮರ್ಪಣೆಯನ್ನು ಮಾಡಿಕೊಂಡು, ದೀಕ್ಷಾಸ್ನಾನ ಪಡೆದುಕೊಂಡೆವು, ಮತ್ತು ವಿವಾಹವಾದೆವು.
ಆತ್ಮಿಕ ಆಶೀರ್ವಾದಗಳು
ತದನಂತರದ ವರ್ಷದಲ್ಲಿ, ನಾನು ಬ್ಲೇಬೀ ಸಭೆಯ ಸೇವಾ ನಿರ್ದೇಶಕನಾಗಿ ನೇಮಿತನಾದೆ. ನನ್ನ ಹೆಂಡತಿಯೂ ನಾನೂ, ಕಾಲ್ಪೋರ್ಟರ್ರ ಹೆಜ್ಜೆಜಾಡುಗಳನ್ನು ಅನುಸರಿಸಿ ನಡೆದು, ಪೂರ್ಣ ಸಮಯದ ಸೌವಾರ್ತಿಕರಾಗಲು ಬಯಸಿದೆವು. ಆದರೆ ಮೇರಿಯ ಆರೋಗ್ಯವು ಅಂತಹ ಹುರುಪಿನ ಕಾಲತಖ್ತೆಯನ್ನು ಕಾಪಾಡಿಕೊಂಡು ಹೋಗಲು ಅವಳನ್ನು ಅನುಮತಿಸುವುದಿಲ್ಲವೆಂಬುದು ಬೇಗನೆ ಸುವ್ಯಕ್ತವಾಯಿತು. 1987ರಲ್ಲಿ ಅವಳು ಮೃತಪಡುವ ತನಕ ಅವಳು ನ್ಯೂನ ಆರೋಗ್ಯದಿಂದ ಕಷ್ಟಾನುಭವಿಸಿದಳಾದರೂ, ಅವಳು ಒಬ್ಬ ಉತ್ತಮ ಸಹಕಾರಿಣಿಯೂ, ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಹಾಗೂ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದರಲ್ಲಿ ಪ್ರವೀಣಳಾಗಿದ್ದ ಒಬ್ಬ ಅತ್ಯುತ್ತಮ ಶುಶ್ರೂಷಕಿಯೂ ಆಗಿದ್ದಳು. ನಮ್ಮ ಹೆಚ್ಚಿನ ಸಾಯಂಕಾಲಗಳನ್ನು ಕೂಟಗಳಿಗೆ ಹಾಜರಾಗುವುದಕ್ಕಾಗಿ ಅಥವಾ ನಮ್ಮ ನೆರೆಯವರೊಂದಿಗೆ ಬೈಬಲ್ ಸತ್ಯತೆಗಳನ್ನು ಹಂಚಿಕೊಳ್ಳಲಿಕ್ಕಾಗಿ ವ್ಯಯಿಸಿದೆವು.
ನಾನು ಒಬ್ಬ ಇಂಜಿನಿಯರನಾಗಿದ್ದೆ ಮತ್ತು ಮರಕೊಯ್ಯುವ ಯಂತ್ರಭಾಗಗಳನ್ನು ತಯಾರಿಸಿದ ಒಂದು ಕಾರ್ಖಾನೆಯಲ್ಲಿ ಕೆಲಸಮಾಡುತ್ತಿದ್ದೆ. ನನ್ನ ಕೆಲಸವು ಬ್ರಿಟನ್ ಹಾಗೂ ಫ್ರಾನ್ಸ್ನ ಸುತ್ತಲೂ ವ್ಯಾಪಕವಾಗಿ ಪ್ರಯಾಣಿಸುವುದನ್ನು ಒಳಗೊಂಡಿತ್ತು, ಮತ್ತು ಸಾಮಾನ್ಯವಾಗಿ ಮೇರಿ ನನ್ನೊಂದಿಗೆ ಜೊತೆಗೂಡುತ್ತಿದ್ದಳು. ಈ ಪ್ರಯಾಣಗಳು ನಮಗೆ ವ್ಯಾಪಕವಾಗಿ ಸಾಕ್ಷಿನೀಡುವ ಅವಕಾಶಗಳನ್ನು ಒದಗಿಸಿದವು.
ವಿಸ್ತರಣೆಗಾಗಿ ಅಸ್ತಿವಾರಗಳು
1925ರಲ್ಲಿ ನಾವು ಬ್ಲೇಬೀಯಲ್ಲಿನ ನಮ್ಮ ಕೂಟಗಳಿಗಾಗಿ ಒಂದು ಒಳ್ಳೆಯ ಕಟ್ಟಡವನ್ನು ಕಟ್ಟಿದೆವು, ಮತ್ತು ಅಲ್ಲಿಂದ ನಾವು ಒಂದು ಪರಿಣಾಮಕರವಾದ ಸಾಕ್ಷಿ ನೀಡುವಿಕೆಯ ಕಾರ್ಯಕ್ರಮವನ್ನು ವ್ಯವಸ್ಥಾಪಿಸಿದೆವು. ಪ್ರತಿ ರವಿವಾರ ಬೆಳಗ್ಗೆ, ದೂರ ದೂರ ಚದುರಿದ್ದ ಹಳ್ಳಿಗಳು ಹಾಗೂ ಚಿಕ್ಕಪುಟ್ಟ ಪಟ್ಟಣಗಳಿಗೆ ನಮ್ಮನ್ನು ಕೊಂಡೊಯ್ದ ಬಸ್ಸನ್ನು ನಾವು ಬಾಡಿಗೆಗೆ ತೆಗೆದುಕೊಂಡೆವು. ಪ್ರಚಾರಕರನ್ನು ಸಾರಲಿಕ್ಕಾಗಿ ದಾರಿಯುದ್ದಕ್ಕೂ ಇಳಿಸಲಾಯಿತು, ಮತ್ತು ತದನಂತರ ಹಿಂದಿರುಗುವ ಪ್ರಯಾಣದಲ್ಲಿ ಬಸ್ಸು ಅವರನ್ನು ಪುನಃ ಹತ್ತಿಸಿಕೊಂಡಿತು. ಬೆಚ್ಚನೆಯ ಹವಾಮಾನವಿರುವ ಬೇಸಗೆಯ ತಿಂಗಳುಗಳಲ್ಲಿ, ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಯೊಂದನ್ನು ಉಪಯೋಗಿಸಿ, ನಾವು ರವಿವಾರದಂದು ಮಧ್ಯಾಹ್ನ ತಡವಾಗಿ ಬೈಬಲ್ ಅಭ್ಯಾಸವನ್ನು ನಡೆಸಿದೆವು. ತದನಂತರ ಎಂಟು ಗಂಟೆಗೆ ಲೆಸ್ಟರ್ನ ಮಾರುಕಟ್ಟೆಯಲ್ಲಿ, ಬಯಲು ಪ್ರದೇಶದ ಬಹಿರಂಗ ಭಾಷಣಕ್ಕಾಗಿ ನಾವು ಕೂಡಿಬಂದೆವು. ಒಂದು ರಾತ್ರಿ 200 ಜನರು ಭಾಷಣಕ್ಕೆ ಕಿವಿಗೊಟ್ಟರು. ಈ ಚಟುವಟಿಕೆಯು, ಲೆಸ್ಟರ್ನಲ್ಲಿ ಹಾಗೂ ಸುತ್ತುಮುತ್ತಣ ಪ್ರದೇಶದಲ್ಲಿ ಇಂದು ಅಸ್ತಿತ್ವದಲ್ಲಿರುವ ಅನೇಕ ಸಭೆಗಳಿಗೆ ಅಸ್ತಿವಾರಗಳನ್ನು ಹಾಕಿತು.
1926ರಲ್ಲಿ, ಲಂಡನಿನ ಆ್ಯಲೆಗ್ಸಾಂಡ್ರ ಪ್ಯಾಲೆಸ್ ಮತ್ತು ರಾಯಲ್ ಆ್ಯಲ್ಬರ್ಟ್ ಹಾಲ್ನಲ್ಲಿ ಹೊಸ ಯುಗಾರಂಭದ ಒಂದು ಅಧಿವೇಶನವು ಒಟ್ಟೊಟ್ಟಿಗೆ ನಡೆಸಲ್ಪಟ್ಟಿತು. ಆ ಸಂದರ್ಭದಲ್ಲಿ, ವಾಚ್ ಟವರ್ ಸೊಸೈಟಿಯ ಆಗಿನ ಅಧ್ಯಕ್ಷರಾಗಿದ್ದ ಜೋಸೆಫ್ ಎಫ್. ರದರ್ಫರ್ಡರು, ವಿಮೋಚನೆ (ಇಂಗ್ಲಿಷ್) ಎಂಬ ಪುಸ್ತಕವನ್ನು ಬಿಡುಗಡೆಮಾಡಿದರು. “ಲೋಕದ ಧುರೀಣರಿಗೆ ಒಂದು ಸಾಕ್ಷ್ಯ” ಎಂಬ ಠರಾವು ಮತ್ತು “ಲೋಕ ಶಕ್ತಿಗಳು ತತ್ತರಿಸುತ್ತಾ ಇರುವ ಕಾರಣ—ಪರಿಹಾರ” ಎಂಬ ಸಹೋದರ ರದರ್ಫರ್ಡರ ಪ್ರಬಲವಾದ ಬಹಿರಂಗ ಭಾಷಣವು, ಸಾದರಪಡಿಸಲ್ಪಟ್ಟ ಮರುದಿನವೇ ಅತ್ಯಂತ ಪ್ರಸಿದ್ಧವಾದ ವಾರ್ತಾಪತ್ರಿಕೆಯಲ್ಲಿ ಸಂಪೂರ್ಣವಾಗಿ ಮುದ್ರಿಸಲ್ಪಟ್ಟಿತು. 10,000ಕ್ಕಿಂತಲೂ ಹೆಚ್ಚು ಮಂದಿ ಬಹಿರಂಗ ಭಾಷಣವನ್ನು ಆಲಿಸಿದರು, ಮತ್ತು ತರುವಾಯ ಆ ಠರಾವಿನ 5,00,00,000 ಪ್ರತಿಗಳು ಲೋಕವ್ಯಾಪಕವಾಗಿ ವಿತರಿಸಲ್ಪಟ್ಟವು. ಆ ಅಧಿವೇಶನವು, ಬ್ರಿಟನಿನಲ್ಲಿ ಸಾರುವ ಕಾರ್ಯವನ್ನು ತೀವ್ರಗೊಳಿಸಲು ಕಾರ್ಯನಡಿಸಿತು.
ಯುದ್ಧ ಸಮಯದಲ್ಲಿ ದೊಡ್ಡ ಅಧಿವೇಶನ
1939ರ ಸೆಪ್ಟೆಂಬರ್ ತಿಂಗಳಿನಲ್ಲಿ ಎರಡನೆಯ ಲೋಕ ಯುದ್ಧವು ತಲೆದೋರಿತು. ಮತ್ತು 1941ರಷ್ಟಕ್ಕೆ ಯುದ್ಧವು ತನ್ನ ಉತ್ತುಂಗದಲ್ಲಿತ್ತು. ಜರ್ಮನ್ ಬಾಂಬ್ದಾಳಿ ವಿಮಾನಗಳು ಹಗಲೂರಾತ್ರಿ ದಾಳಿಮಾಡಿದವು, ಮತ್ತು ರಾಷ್ಟ್ರವ್ಯಾಪಕವಾಗಿ ಕತ್ತಲಾಗಿಸುವುದು ಜಾರಿಯಲ್ಲಿತ್ತು. ಆಹಾರವು ವಿರಳವಾಗಿತ್ತು, ಮತ್ತು ಏನು ಲಭ್ಯವಿತ್ತೋ ಅದು ಕಟ್ಟುನಿಟ್ಟಾಗಿ ಪಡಿವ್ಯವಸ್ಥೆಮಾಡಲ್ಪಟ್ಟಿತ್ತು. ಸಂಚಾರ ಸಾರಿಗೆಯು ತೀರ ಪರಿಮಿತವಾಗಿತ್ತು—ರೈಲು ಪ್ರಯಾಣವು ಸಹ. ಜಯಿಸಲಸಾಧ್ಯವಾದಂತೆ ಕಂಡುಬಂದ ಈ ವಿಘ್ನಗಳು ಇದ್ದರೂ, 1941ರ ಸೆಪ್ಟೆಂಬರ್ 3-7ರಂದು ನಾವು ಐದು ದಿನದ ರಾಷ್ಟ್ರೀಯ ಅಧಿವೇಶನವನ್ನು ನಡೆಸಿದೆವು.
ಲೆಸ್ಟರ್ನ ಡೀ ಮಾಂಟ್ಫರ್ಟ್ ಹಾಲ್ ಅನ್ನು ಅಧಿವೇಶನ ನಿವೇಶನವಾಗಿ ಆರಿಸಿಕೊಳ್ಳಲಾಗಿತ್ತು. ಏಕೆಂದರೆ ಲೆಸ್ಟರ್ ಇಂಗ್ಲೆಂಡಿನ ಕೇಂದ್ರ ಭಾಗದಲ್ಲಿದೆ. ನಾನು ಟಿಂಬರ್ ಉದ್ಯಮದಲ್ಲಿದ್ದುದರಿಂದ, ಜಾಹೀರಾತು ಸೂಚನೆಗಳ ನಿರ್ಮಾಣ ಕಾರ್ಯದಲ್ಲಿ ನಾನು ಸಹಾಯ ಮಾಡಲು ಶಕ್ತನಾಗಿದ್ದೆ. ಅಧಿವೇಶನಕ್ಕೆ ಹಾಜರಾಗುವವರಿಗಾಗಿ ನಾನು ಸ್ಥಳಿಕ ಸಂಚಾರ ಸಾರಿಗೆಯನ್ನು ಸಹ ಏರ್ಪಡಿಸಿದೆ. ಮುಂದಾಗಿಯೇ ಟಿಕೆಟ್ಗಳನ್ನು ಖರೀದಿಸಿ, ಕ್ರಮವಾಗಿ ಕೊಡುವ ಬೆಲೆಗಿಂತಲೂ ಹೆಚ್ಚು ಬೆಲೆಯನ್ನು ಪಾವತಿಮಾಡುವ ಮೂಲಕ, ರವಿವಾರದಂದು ಸಹ ಲೆಸ್ಟರ್ನ ಟ್ರಾಮ್ಗಾಡಿಗಳು ಓಡಾಡುತ್ತಿರುವಂತೆ ಮಾಡಿದೆವು.
ಪ್ರಯಾಣದ ಮೇಲೆ ನಿರ್ಬಂಧಗಳಿದ್ದುದರಿಂದ, ಬಹುಶಃ 3,000 ಸಾಕ್ಷಿಗಳು ಬರಸಾಧ್ಯವಿದೆಯೆಂದು ನಾವು ನಿರೀಕ್ಷಿಸಿದ್ದೆವು. 10,000ಕ್ಕಿಂತಲೂ ಹೆಚ್ಚು ಪ್ರತಿನಿಧಿಗಳು, ತಾವು ಬರುವೆವೆಂದು ಹೇಳಿದಾಗ ಆದ ರೋಮಾಂಚನವನ್ನು ಊಹಿಸಿಕೊಳ್ಳಿರಿ! ಆದರೆ ಅವರು ಎಲ್ಲಿ ತಂಗುವರು? ಲೆಸ್ಟರ್ನ ಪ್ರಜೆಗಳು ದಯಾಭಾವದಿಂದ ತಮ್ಮ ಮನೆಗಳಲ್ಲಿ ತಂಗುವಂತೆ ಅನೇಕರನ್ನು ಆಮಂತ್ರಿಸಿದರು. ಇದಕ್ಕೆ ಕೂಡಿಸಿ, ಸುಮಾರು ಒಂದು ಸಾವಿರ ಮಂದಿಗೆ, ಅಧಿವೇಶನ ನಿವೇಶನದಿಂದ ಮೂರು ಕಿಲೊಮೀಟರುಗಳಷ್ಟು ದೂರದ ಒಂದು ಕ್ಷೇತ್ರದಲ್ಲಿ ಕಟ್ಟಲ್ಪಟ್ಟಿದ್ದ ಡೇರೆಗಳಲ್ಲಿ ವಸತಿಯನ್ನು ನೀಡಲಾಯಿತು. ಕ್ಯಾಂಪ್ ಗಿಡ್ಯನ್—ನಾವು ಅದನ್ನು ಹೀಗೆಂದು ಕರೆದೆವು—ಆ ಸಮುದಾಯದಲ್ಲಿ ಬಹಳಷ್ಟು ಕೋಲಾಹಲವನ್ನು ಉಂಟುಮಾಡಿತು.
ಅಧಿವೇಶನದ ಇಲಾಖೆಗಳಿಗಾಗಿ ಮತ್ತು ವಿಪರೀತ ಕಿಕ್ಕಿರಿದಿರುವ ದೊಡ್ಡ ಗುಂಪುಗಳಿಗೆ ವಸತಿಯನ್ನು ಒದಗಿಸಲಿಕ್ಕಾಗಿ, ದೊಡ್ಡದಾದ ಬಿಳಿಯ ಡೇರೆಗಳು ಬಾಡಿಗೆಗೆ ತೆಗೆದುಕೊಳ್ಳಲ್ಪಟ್ಟವು. ಪ್ರಕಾಶಮಾನವಾದ ಬೆಳದಿಂಗಳಿನಲ್ಲಿ ಆ ಡೇರೆಗಳು, ನಾಸಿ ಬಾಂಬ್ದಾಳಿ ವಿಮಾನಗಳಿಗೆ ಗುರಿಹಲಗೆಯಾಗಿ ಕಾರ್ಯನಡಿಸಬಹುದೆಂದು ನಿರ್ಧರಿಸಲಾದಾಗ, ಅವುಗಳನ್ನು ತ್ವರೆಯಾಗಿ ಮರೆಮಾಡಲಾಯಿತು. ಯುದ್ಧ, ಮತ್ತು ವಿಶೇಷವಾಗಿ ಅದರಲ್ಲಿ ಸಾಕ್ಷಿಗಳ ಭಾಗವಹಿಸದಿರುವಿಕೆಯು, ಸಾರ್ವಜನಿಕರು ಆಸಕ್ತಿ ವಹಿಸಿದ ವಿಷಯವಾಗಿತ್ತು. ಆ ಸಮಯದಲ್ಲಿ ತಾಟಸ್ಥ್ಯದ ಕುರಿತಾದ ತಮ್ಮ ಬೈಬಲ್ ಆಧಾರಿತ ನಿಲುವಿನ ಕಾರಣದಿಂದಾಗಿ, ನೂರಾರು ಸಾಕ್ಷಿಗಳು ಸೆರೆಮನೆಯಲ್ಲಿದ್ದರು.—ಯೆಶಾಯ 2:4; ಯೋಹಾನ 17:16.
ಸೆಪ್ಟೆಂಬರ್ 7, 1941ರ ದ ಸಂಡೇ ಪಿಕ್ಟೋರಿಯಲ್ ವರದಿಸಿದ್ದು: “10,000 ಜನರು, ಅಧಿಕಾಂಶ ಯುವ ಜನರು, ಯುದ್ಧದ ಪ್ರಸ್ತಾಪವನ್ನೇ ಮಾಡದೆ—ಕೇವಲ ಒಂದು ಪ್ರಾಸಂಗಿಕ ವಾದಾಂಶವಾಗಿ ಹೊರತು—ಧರ್ಮದ ಕುರಿತಾಗಿಯೇ ಮಾತಾಡುತ್ತಾ ಒಂದು ವಾರವನ್ನು ಕಳೆದುದನ್ನು ಕಂಡುಕೊಳ್ಳುವುದು ಸ್ತಂಭೀಭೂತಗೊಳಿಸುವ ಸಂಗತಿಯಾಗಿದೆ.
“ಈ ಸಾಕ್ಷಿಗಳಿಗೆ ಜರ್ಮನಿಯಲ್ಲಿ ಯಾವುದೇ ಸದಸ್ಯರು ಇದ್ದರೋ ಎಂದು ನಾನು ಪ್ರಶ್ನಿಸಿದೆ. ಹೌದು ಎಂದು ನನಗೆ ಹೇಳಲಾಯಿತು ಮತ್ತು ಬಹುಮಟ್ಟಿಗೆ ಅವರೆಲ್ಲರೂ—ಸುಮಾರು 6,000 ಮಂದಿ—ಕೂಟಶಿಬಿರಗಳಲ್ಲಿದ್ದರು.”
ಆ ವರದಿಗಾರನು ಕೂಡಿಸಿದ್ದು: “ಓ ಹೌದು, ನಾಸಿಗಳು ವೈರಿಗಳಾಗಿದ್ದಾರೆಂಬುದು ನಿಜವಾದರೂ, ಸಾಕ್ಷಿಗಳು ಕಿರುಹೊತ್ತಗೆಗಳನ್ನು ಮಾರುವುದನ್ನು ಮತ್ತು ಭಾಷಣಗಳಿಗೆ ಕಿವಿಗೊಡುವುದನ್ನು ಬಿಟ್ಟು, ವೈರಿಗಳೊಂದಿಗೆ ಹೋರಾಡಲು ಏನನ್ನೂ ಮಾಡುತ್ತಿಲ್ಲ.”
ನಮ್ಮ ಕುರಿತಾದ ವಾರ್ತಾಪತ್ರಿಕೆಯ ಹೇಳಿಕೆಗಳು ಸರ್ವಸಾಮಾನ್ಯವಾಗಿ ನಕಾರಾತ್ಮಕವಾಗಿದ್ದವು, ಮತ್ತು ವಿರೋಧಿಗಳು ನಮ್ಮ ಅಧಿವೇಶನವನ್ನು ಭಂಗಪಡಿಸಲಿಕ್ಕಾಗಿ ಯಶಸ್ವಿಕರವಲ್ಲದ ಪ್ರಯತ್ನಗಳೋಪಾದಿ ಹಿಂಸಾಚಾರವನ್ನು ಸಹ ಅವಲಂಬಿಸಿದರು. ಆದರೂ, ಲಂಡನಿನ ದ ಡೇಲಿ ಮೇಲ್ ಸ್ವಲ್ಪಮಟ್ಟಿಗಿನ ಅಸಮಾಧಾನದಿಂದಲೇ ಹೀಗೆ ಒಪ್ಪಿಕೊಂಡಿತು: “ಆ ಸಂಸ್ಥೆಯು ಪ್ರಶಾಂತವಾದದ್ದೂ, ಅಪ್ರಸಿದ್ಧವಾದದ್ದೂ, ದಕ್ಷವಾದದ್ದೂ ಆಗಿತ್ತು.”
ನಗರದಲ್ಲಿನ ಸಿಗರೇಟುಗಳ ಸರಬರಾಯಿಯ ಕೊರತೆಗೆ ನಾವು ಕಾರಣರಾಗಿದ್ದೇವೆಂದು ನಮ್ಮನ್ನು ನಿಂದಿಸಲಾಗಿತ್ತು. ಆದರೆ ದ ಡೇಲಿ ಮೇಲ್ ವಿವರಿಸಿದ್ದು: “ಸಾಕ್ಷಿಗಳು ಲೆಸ್ಟರ್ನ ಸಿಗರೇಟುಗಳ ಸರಬರಾಯಿಯನ್ನು ಬರಿದುಮಾಡುತ್ತಿದ್ದಾರೆಂದು, ಲೆಸ್ಟರ್ ಆಗಲಿ ಹೊಗೆಸೊಪ್ಪಿನ ನಿಯಂತ್ರಕರಾಗಲಿ ದೂರಸಾಧ್ಯವಿಲ್ಲ. ಅವರು ಧೂಮಪಾನ ಮಾಡುವುದಿಲ್ಲ.” ಹಾಗೂ, ಸಾಕ್ಷಿಗಳು ತಮ್ಮೊಂದಿಗೆ ಬಹುಮಟ್ಟಿಗೆ ತಮ್ಮ ಸ್ವಂತ ಆಹಾರ ಸರಬರಾಯಿಯನ್ನು ತಂದಿದ್ದರೆಂಬುದು ವಿವರಿಸಲ್ಪಟ್ಟಾಗ, ಸಾಕ್ಷಿಗಳಿಂದ ಸ್ಥಳಿಯ ನಿವಾಸಿಗಳ ಆಹಾರವು ಕಸಿದುಕೊಳ್ಳಲ್ಪಟ್ಟಿತ್ತೆಂಬ ದೂರುಗಳು ತೊಲಗಿಸಲ್ಪಟ್ಟವು. ವಾಸ್ತವದಲ್ಲಿ, ಅಧಿವೇಶನದ ಕೊನೆಯಲ್ಲಿ, 150 ನಾಲ್ಕು-ಪೌಂಡ್ ಬ್ರೆಡ್ಡಿನ ತುಂಡುಗಳನ್ನು ಲೆಸ್ಟರ್ ರಾಯಲ್ ಇನ್ಫರ್ಮರಿಗೆ ದಾನಮಾಡಲಾಯಿತು. ಇದು ಆಹಾರದ ಅಭಾವಗಳಿದ್ದ ಆ ಸಮಯಗಳಲ್ಲಿ ಒಂದು ಗಮನಾರ್ಹವಾದ ಕಾಣಿಕೆಯಾಗಿತ್ತು.
ಈ ಅಧಿವೇಶನವು, ಬ್ರಿಟನಿನಲ್ಲಿದ್ದ ಸುಮಾರು 11,000 ಸಾಕ್ಷಿಗಳಿಗೆ ಒಂದು ಭಾರಿ ಆತ್ಮಿಕ ಏಳಿಗೆಯನ್ನು ಒದಗಿಸಿತು. ಸುಮಾರು 12,000 ಮಂದಿ ಹಾಜರಿದ್ದರೆಂಬುದನ್ನು ಕೇಳಿ ಅವರು ರೋಮಾಂಚಗೊಂಡಿದ್ದರು! ಪ್ರತಿನಿಧಿಗಳು ಹರ್ಷಭರಿತರಾಗಿ, ಲೆಸ್ಟರ್ನಲ್ಲಿ ಹಿಂದೆಂದೂ ಕಂಡಿಲ್ಲದ ಪ್ರಮಾಣದಲ್ಲಿ ಬೀದಿ ಸಾಕ್ಷಿಕಾರ್ಯವನ್ನು ಮಾಡುವುದರಲ್ಲಿ ಒಳಗೂಡಿದರು, ಮತ್ತು ಅವರು ಫೋನೋಗ್ರಾಫ್ ಭಾಷಣಗಳೊಂದಿಗೆ ದೂರ ದೂರದ ಹಳ್ಳಿಗಳನ್ನು ಸಂದರ್ಶಿಸಿದರು.
ಅಧಿವೇಶನದ ಪ್ರಮುಖ ಭಾಷಣಗಳು, ಹಿಂದಿನ ತಿಂಗಳಿನಲ್ಲಿ ಅಮೆರಿಕದ ಸೆಂಟ್ ಲೂಯಿಸ್, ಮಿಸ್ಸೋರಿಯಲ್ಲಿ ನಡೆದ ಯೆಹೋವನ ಸಾಕ್ಷಿಗಳ ಐದು ದಿನದ ಅಧಿವೇಶನದಲ್ಲಿ ಸಾದರಪಡಿಸಲ್ಪಟ್ಟ ಭಾಷಣಗಳ ರೆಕಾರ್ಡಿಂಗ್ಗಳಾಗಿದ್ದವು. ಸಹೋದರ ರದರ್ಫರ್ಡರ “ರಾಜನ ಮಕ್ಕಳು” ಎಂಬ ಭಾಷಣದ ರೆಕಾರ್ಡಿಂಗ್, ಅಧಿವೇಶನದ ಅತ್ಯುಜ್ವಲ ಭಾಗವಾಗಿತ್ತು. ಸೆಂಟ್ ಲೂಯಿಸ್ನಲ್ಲಿ ಬಿಡುಗಡೆಮಾಡಲ್ಪಟ್ಟ ಮಕ್ಕಳು (ಇಂಗ್ಲಿಷ್) ಎಂಬ ಪುಸ್ತಕದ ಪ್ರತಿಗಳನ್ನು ಆಮದುಮಾಡುವುದು ಅಸಾಧ್ಯವಾಗಿದ್ದುದರಿಂದ, ಅದೇ ಪುಸ್ತಕದ ಮೆತುವಾದ ಹೊರರಟ್ಟುಳ್ಳ ಒಂದು ವಿಶೇಷ ಮುದ್ರಣವನ್ನು ಬ್ರಿಟನಿನಲ್ಲಿ ತದನಂತರ ಉತ್ಪಾದಿಸಲಾಯಿತು. ಆ ಅಧಿವೇಶನಕ್ಕೆ ಹಾಜರಾಗಿದ್ದ ಎಲ್ಲ ಮಕ್ಕಳಿಗೆ, ಅದರ ಒಂದು ಪ್ರತಿಯು ಕಳುಹಿಸಲ್ಪಟ್ಟಿತು.
ಲೆಸ್ಟರ್ನ ಅಪೂರ್ವವಾದ ವಾರ್ಷಿಕ ಕೂಟ
ಯುದ್ಧಾನಂತರ, ಬ್ರಿಟನಿನ ರಾಜ್ಯ ಘೋಷಕರ ಬೆಳವಣಿಗೆಯು ಅದ್ಭುತಕರವಾಗಿತ್ತು! 1980ಗಳ ಆದಿ ಭಾಗದಷ್ಟಕ್ಕೆ, ಲೆಸ್ಟರ್ನಲ್ಲಿದ್ದ ಸಭೆಗಳ ಸಂಖ್ಯೆಯು ಹತ್ತಕ್ಕೆ ಏರಿತ್ತು. ಆ ಬಳಿಕ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ವಾರ್ಷಿಕ ಕೂಟವನ್ನು, 1983ರಲ್ಲಿ ಲೆಸ್ಟರ್ನಲ್ಲಿ ನಡೆಸಲು ನಿರ್ಧರಿಸಿತ್ತು ಎಂದು ಸಹ ನಮಗೆ ಮಾಹಿತಿ ಕೊಡಲಾಗಿತ್ತು. ಲೆಸ್ಟರ್ನ ಸಿಟಿ ಮೇಲ್ವಿಚಾರಕನೋಪಾದಿ ನಾನು, ಬೇಗನೆ ಸಿದ್ಧತೆಗಳನ್ನು ಮಾಡುವುದರಲ್ಲಿ—ಇದರಲ್ಲಿ ಪುನಃ ಡೀ ಮಾಂಟ್ಫರ್ಟ್ ಹಾಲ್ ಅನ್ನು ಬಾಡಿಗೆಗೆ ತೆಗೆದುಕೊಳ್ಳುವುದೂ ಸೇರಿತ್ತು—ಒಳಗೂಡಿದೆ.
ಈ ಸಂದರ್ಭಕ್ಕಾಗಿ, ಸೊಸೈಟಿಯ ಬ್ರೂಕ್ಲಿನ್ ಮುಖ್ಯಕಾರ್ಯಾಲಯದಿಂದ ಆಡಳಿತ ಮಂಡಲಿಯ ಹದಿಮೂರು ಸದಸ್ಯರು ಬಂದರು. ಒಟ್ಟಿಗೆ 3,671 ಮಂದಿ ಪ್ರತಿನಿಧಿಗಳು—ಈ ಬಾರಿ ಲೋಕದ ಸುತ್ತುಮುತ್ತಲಿಂದ, ಮತ್ತು ಮುಖ್ಯವಾಗಿ ಅನೇಕ ವರ್ಷಗಳಿಂದ ಇದ್ದ ಸಾಕ್ಷಿಗಳು—ಸಭಾಂಗಣದಲ್ಲಿ ಸೇರಿಬಂದರು. ಮತ್ತು ಸಮೀಪವಿದ್ದ ಅಸೆಂಬ್ಲಿ ಹಾಲ್ನಲ್ಲಿ ಇನ್ನೂ ಹೆಚ್ಚಿನ 1,500 ಮಂದಿ ಕಾರ್ಯಕ್ರಮಕ್ಕೆ ಕಿವಿಗೊಟ್ಟರು.
ಯುದ್ಧ ಕಾಲದ ಲೆಸ್ಟರ್ ಅಧಿವೇಶನದ ಸಮಯದಲ್ಲಿ ಲಂಡನಿನಲ್ಲಿನ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ ಆ್ಯಲ್ಬರ್ಟ್ ಡಿ. ಶ್ರೋಡರ್, ಈ ವಾರ್ಷಿಕ ಕೂಟದ ಅಧ್ಯಕ್ಷತೆ ವಹಿಸಿಕೊಂಡಿದ್ದರು. 1941ರ ಅಧಿವೇಶನಕ್ಕೆ ಹಿನ್ನೋಟ ಬೀರುತ್ತಾ, ಸಹೋದರ ಶ್ರೋಡರ್ ಕೇಳಿದ್ದು: “ಇಂದು ನಮ್ಮೊಂದಿಗಿರುವ ನಿಮ್ಮಲ್ಲಿ, ಆಗ ಎಷ್ಟು ಮಂದಿ ಹಾಜರಿದ್ದಿರಿ?” ಸಭಿಕರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ತಮ್ಮ ಕೈಗಳನ್ನು ಎತ್ತಿದರು. “ಓಹೋ! ನಂಬಿಗಸ್ತರೂ, ನಿಷ್ಠಾವಂತರೂ ಆಗಿರುವ ನಿಮಗೆಲ್ಲರಿಗೆ ಎಂತಹ ಒಂದು ಪುನರ್ಮಿಲನ!” ಎಂದು ಅವರು ಉದ್ಗರಿಸಿದರು. ನಿಜವಾಗಿಯೂ ಅದೊಂದು ಅವಿಸ್ಮರಣೀಯ ಅನುಭವವಾಗಿತ್ತು.
98ರ ಪ್ರಾಯದಲ್ಲಿ, ನಾನು ಇನ್ನೂ ನಮ್ಮ ಸಭೆಯಲ್ಲಿ ಸೆಕ್ರಿಟರಿಯೋಪಾದಿ ಸೇವೆಮಾಡುತ್ತಿದ್ದೇನೆ ಮತ್ತು ಬಹಿರಂಗ ಭಾಷಣಗಳನ್ನು ಕೊಡುವುದನ್ನು ಮುಂದುವರಿಸಿದ್ದೇನೆ. ಆದರೆ ಈಗ ನಾನು ಬಹಿರಂಗ ಭಾಷಣಗಳನ್ನು ಕುಳಿತುಕೊಂಡೇ ಕೊಡುತ್ತೇನೆ. 1987ರಲ್ಲಿ ಮೇರಿ ಮೃತಪಟ್ಟ ಬಳಿಕ, ಅನೇಕ ವರ್ಷಗಳಿಂದ ಮೇರಿಗೆ ಹಾಗೂ ನನಗೆ ಪರಿಚಯವಿದ್ದಂತಹ ಒಬ್ಬ ವಿಧವೆಯಾದ ಬಟೀನಳನ್ನು ನಾನು ವಿವಾಹವಾದೆ. ಶಾರೀರಿಕವಾಗಿಯೂ ಆತ್ಮಿಕವಾಗಿಯೂ ಇಷ್ಟು ಚೆನ್ನಾಗಿ ಆರೈಕೆಮಾಡಲ್ಪಡುತ್ತಿರುವುದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಮೇರಿಯ ನ್ಯೂನ ಆರೋಗ್ಯದಿಂದ, ಮತ್ತು ಈಗ ನನ್ನ ಸ್ವಂತ ವೃದ್ಧಾಪ್ಯದಿಂದ ನಿರ್ಬಂಧಗಳು ಹೊರಿಸಲ್ಪಟ್ಟರೂ, ಪವಿತ್ರ ಸೇವೆಯಲ್ಲಿ ಬಹಳಷ್ಟನ್ನು ಮಾಡಲಿಕ್ಕಿರುವುದು, ಯಾವಾಗಲೂ ಸಂಪದ್ಭರಿತವಾಗಿ ಪ್ರತಿಫಲವನ್ನು ತರುವಂತಹದ್ದಾಗಿದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ.—1 ಕೊರಿಂಥ 15:58.
[ಪುಟ 26 ರಲ್ಲಿರುವ ಚಿತ್ರ]
1920ಗಳಲ್ಲಿ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ಸಿದ್ಧನಾಗಿರುವುದು
[ಪುಟ 26 ರಲ್ಲಿರುವ ಚಿತ್ರ]
ಲೆಸ್ಟರ್ ಅಧಿವೇಶನದ ದೃಶ್ಯಗಳು