ಪೂರ್ಣ ಸಮಯದ ಸೇವೆಯಲ್ಲಿ ಆನಂದವನ್ನು ಕಾಪಾಡಿಕೊಳ್ಳುವ ವಿಧ
ಈ ಭಕ್ತಿರಹಿತ ವ್ಯವಸ್ಥೆಯ ಕಡೇ ದಿವಸಗಳಲ್ಲಿ ನಾವು ಜೀವಿಸುತ್ತಿದ್ದೇವೆಂಬುದನ್ನು ಬೈಬಲ್ ಪ್ರವಾದನೆಯ ನೆರವೇರಿಕೆಯು ಸ್ಪಷ್ಟವಾಗಿ ತೋರಿಸುತ್ತದೆ. ಇದರ ಅರಿವುಳ್ಳವರಾಗಿದ್ದು, ಯೆಹೋವ ದೇವರ ಸೇವಕರು, ಆತನ ರಾಜ್ಯದ ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ತಮ್ಮಿಂದ ಸಮಂಜಸವಾಗಿ ಸಾಧ್ಯವಿರುವಷ್ಟು ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. 6,00,000ಕ್ಕಿಂತಲೂ ಹೆಚ್ಚು ಯೆಹೋವನ ಸಾಕ್ಷಿಗಳು, ಪೂರ್ಣ ಸಮಯದ ಸೇವೆಯಲ್ಲಿ ಭಾಗವಹಿಸುವಂತೆ ತಮ್ಮ ಜೀವಿತಗಳನ್ನು ಏರ್ಪಡಿಸಿಕೊಂಡಿದ್ದಾರೆ. ಕೆಲವರು, ಪಯನೀಯರರೆಂದು ಕರೆಯಲ್ಪಡುವ ಪೂರ್ಣ ಸಮಯದ ರಾಜ್ಯ ಘೋಷಕರಾಗಿದ್ದಾರೆ. ಇತರರು, ವಾಚ್ ಟವರ್ ಸೊಸೈಟಿಯ ಮುಖ್ಯಕಾರ್ಯಾಲಯದಲ್ಲಿ ಅಥವಾ ಅದರ ಬ್ರಾಂಚ್ ಆಫೀಸುಗಳಲ್ಲಿ ಬೆತೆಲ್ ಸ್ವಯಂಸೇವಕರಾಗಿದ್ದಾರೆ. ಇನ್ನಿತರರು, ಮಿಷನೆರಿಗಳು ಮತ್ತು ಸಂಚರಣ ಮೇಲ್ವಿಚಾರಕರಾಗಿದ್ದಾರೆ.
ಕಡೇ ದಿವಸಗಳಲ್ಲಿ, “ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು” (NW) ಇರುವವೆಂದು ಬೈಬಲ್ ಸೂಚಿಸುತ್ತದೆ. (2 ತಿಮೊಥೆಯ 3:1-5) “ಘೋರವಾದ ನೇಮಿತ ಕಾಲಗಳು” ಎಂದು ಭಾಷಾಂತರಿಸಬಹುದಾದ ಒಂದು ಅಭಿವ್ಯಕ್ತಿಯನ್ನು ಗ್ರೀಕ್ ಬೈಬಲ್ ಗ್ರಂಥಪಾಠವು ಉಪಯೋಗಿಸುತ್ತದೆ. ಹೀಗಿರುವುದರಿಂದ, ನಮ್ಮ ದಿನದಲ್ಲಿ ಒಂದು ತೊಂದರೆಮುಕ್ತ ಜೀವನವನ್ನು ಯಾರೂ ನಿರೀಕ್ಷಿಸಬಾರದು. ಕೆಲವು ಕ್ರೈಸ್ತ ಶುಶ್ರೂಷಕರಿಗೆ ಸಮಸ್ಯೆಗಳು ಎಷ್ಟು ಗಂಭೀರವಾಗಿ ತೋರುತ್ತವೆಂದರೆ, ‘ನಾನು ಪೂರ್ಣ ಸಮಯದ ಸೇವೆಯಲ್ಲಿ ಮುಂದುವರಿಯಬಲ್ಲೆನೊ, ಅಥವಾ ನಾನು ನಿಲ್ಲಿಸಬೇಕೊ?’ ಎಂದು ಅವರು ಸ್ವತಃ ಕೇಳಿಕೊಳ್ಳಬಹುದು.
ಒಬ್ಬ ಪಯನೀಯರ್, ಬೆತೆಲ್ ಸ್ವಯಂಸೇವಕ, ಸಂಚರಣ ಮೇಲ್ವಿಚಾರಕ ಅಥವಾ ಮಿಷನೆರಿಯೋಪಾದಿ ತಾನು ಸಲ್ಲಿಸುವ ಸೇವೆಯನ್ನು ಒಬ್ಬ ವ್ಯಕ್ತಿಯು ಮತ್ತೊಮ್ಮೆ ತೂಗಿನೋಡುವಂತೆ ಮಾಡುವ ಪರಿಸ್ಥಿತಿಗಳು ಯಾವುವು? ಒಂದು ಗಂಭೀರ ಆರೋಗ್ಯ ಸಮಸ್ಯೆಯಿರಬಹುದು. ಪ್ರಾಯಶಃ ಒಬ್ಬ ವೃದ್ಧ ಅಥವಾ ದುರ್ಬಲ ಸಂಬಂಧಿಕನಿಗೆ ಸತತವಾದ ಆರೈಕೆಯ ಅಗತ್ಯವಿದೆ. ಒಬ್ಬ ವಿವಾಹಿತ ದಂಪತಿಗಳು ಒಂದು ಕುಟುಂಬವನ್ನು ಆರಂಭಿಸುತ್ತಿರಬಹುದು. ಅಂತಹ ಕಾರಣಗಳಿಗಾಗಿ ಮತ್ತು ಶಾಸ್ತ್ರೀಯ ಹಂಗುಗಳ ಕಾರಣದಿಂದ ಪೂರ್ಣ ಸಮಯದ ಸೇವೆಯನ್ನು ನಿಲ್ಲಿಸಿಬಿಡುವ ಯಾವ ವ್ಯಕ್ತಿಯೂ, ಪೂರ್ಣ ಸಮಯದ ಸೇವೆಯನ್ನು ನಿಲ್ಲಿಸಿದ್ದಕ್ಕಾಗಿ ಲಜ್ಜಿತನಾಗುವ ಅಗತ್ಯವಿಲ್ಲ.
ಆದಾಗಲೂ, ಆನಂದದ ಕೊರತೆಯ ಕಾರಣದಿಂದ ಒಬ್ಬರು ಪೂರ್ಣ ಸಮಯದ ಸೇವೆಯನ್ನು ನಿಲ್ಲಿಸಲು ಯೋಜಿಸುತ್ತಿರುವುದಾದರೆ ಆಗೇನು? ಪ್ರಾಯಶಃ ಒಬ್ಬ ಪಯನೀಯರನು ತನ್ನ ಶುಶ್ರೂಷೆಯಲ್ಲಿ ಯಾವುದೇ ಪ್ರತಿಕ್ರಿಯೆಯನ್ನು ಕಾಣದೆ, ‘ತೀರ ಕಡಿಮೆ ಜನರು ಕಿವಿಗೊಡುವಾಗ ನಾನು ನನ್ನ ಸ್ವತ್ಯಾಗಿ ಜೀವನ ಶೈಲಿಯನ್ನು ಏಕೆ ಮುಂದುವರಿಸಬೇಕು?’ ಎಂದು ಕೇಳಿಕೊಳ್ಳಬಹುದು. ಒಬ್ಬ ಬೆತೆಲ್ ಸ್ವಯಂಸೇವಕನು ತನ್ನ ನೇಮಕದ ಕುರಿತಾಗಿ ಅಷ್ಟೊಂದು ಸಂತೋಷದಿಂದಿರಲಿಕ್ಕಿಲ್ಲ. ಅಥವಾ ಅದು ಕಾಡುತ್ತಿರುವ ನ್ಯೂನ ಆರೋಗ್ಯವಾಗಿರಸಾಧ್ಯವಿದೆ. ಇದು ಪಯನೀಯರ್ ಸೇವೆಯನ್ನು ಅಸಾಧ್ಯವನ್ನಾಗಿ ಮಾಡದಿದ್ದರೂ, ಕೊನೆಯಲ್ಲಿ ಒಬ್ಬ ವ್ಯಕ್ತಿಯ ಸಂತೋಷವನ್ನು ಸವೆಯಿಸಬಹುದು. ಅಂತಹ ವ್ಯಕ್ತಿಗಳು ತಮ್ಮ ಆನಂದವನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ? ಕೆಲವು ಅನುಭವಸ್ಥ ಶುಶ್ರೂಷಕರು ಏನನ್ನು ಹೇಳುತ್ತಾರೊ ಅದನ್ನು ನಾವು ಪರಿಗಣಿಸೋಣ.
ಆಶಾಭಂಗವನ್ನು ನಿಭಾಯಿಸುವುದು
ಸ್ವಿಟ್ಸರ್ಲೆಂಡ್ನಿಂದ ಬರುವ ಆನಿ, 1950ರಲ್ಲಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ಗೆ ಹಾಜರಾದಳು. ಆಕೆಯು, ಒಂದು ಐರೋಪ್ಯೇತರ ನೇಮಕಕ್ಕಾಗಿ ಎದುರು ನೋಡಿದಳು. ಯೂರೋಪಿನಲ್ಲಿ ಬೆತೆಲ್ ಕೆಲಸಕ್ಕೆ ಪುನರ್ನೇಮಿಸಲ್ಪಟ್ಟಾಗ, ಆನಿ ಆಶಾಭಂಗಗೊಂಡಳು. ಹಾಗಿದ್ದರೂ, ಆಕೆ ಭಾಷಾಂತರ ವಿಭಾಗದಲ್ಲಿ ತನ್ನ ನೇಮಕವನ್ನು ಸ್ವೀಕರಿಸಿದಳು ಮತ್ತು ಈಗಲೂ ಆ ಕೆಲಸವನ್ನು ಮಾಡುತ್ತಿದ್ದಾಳೆ. ತನ್ನ ಆಶಾಭಂಗವನ್ನು ಆಕೆ ಹೇಗೆ ಜಯಿಸಿದಳು? “ಮಾಡಲಿಕ್ಕಾಗಿ ತುಂಬ ಕೆಲಸ ಇತ್ತು ಮತ್ತು ಇದೆ. ನನ್ನ ಅನಿಸಿಕೆಗಳು ಮತ್ತು ಇಷ್ಟಗಳು, ಕೆಲಸದಷ್ಟು ಪ್ರಾಮುಖ್ಯವಾಗಿರುವುದಿಲ್ಲ” ಎಂದು ಆನಿ ವಿವರಿಸುತ್ತಾಳೆ.
ನಮ್ಮ ನೇಮಕದಿಂದ ನಾವು ಆಶಾಭಂಗಗೊಂಡಿರುವಲ್ಲಿ, ಪ್ರಾಯಶಃ ನಾವು ಆನಿಯ ಮನೋಭಾವವನ್ನು ಬೆಳೆಸಿಕೊಳ್ಳಸಾಧ್ಯವಿದೆ. ನಮ್ಮ ವೈಯಕ್ತಿಕ ಇಷ್ಟವು ಪರಮ ಪ್ರಾಮುಖ್ಯತೆಯ ಸಂಗತಿಯಾಗಿರುವುದಿಲ್ಲ. ರಾಜ್ಯ ಸಂದೇಶದ ಹಬ್ಬುವಿಕೆಯೊಂದಿಗೆ ಸಂಬಂಧಿಸಿರುವ ಎಲ್ಲ ವಿವಿಧ ಜವಾಬ್ದಾರಿಗಳು, ಚೆನ್ನಾಗಿ ನಿರ್ವಹಿಸಲ್ಪಡಬೇಕೆಂಬುದೇ ಅತಿ ಪ್ರಾಮುಖ್ಯ ಸಂಗತಿ. “ಶ್ರಮೆಯಿಂದ ಸಮೃದ್ಧಿ” ಎಂದು ಜ್ಞಾನೋಕ್ತಿ 14:23 ನಮಗೆ ಹೇಳುತ್ತದೆ. ನಮಗೆ ಕೊಡಲ್ಪಟ್ಟಿರುವ ನೇಮಕವು ಏನೇ ಆಗಿರಲಿ, ಅದನ್ನು ನಡೆಸಿಕೊಂಡು ಹೋಗುವುದು ರಾಜ್ಯ ಕೆಲಸದ ಪೂರೈಸುವಿಕೆಗೆ ನೆರವು ನೀಡುತ್ತದೆ. ಮತ್ತು ಅಂತಹ ದೇವದತ್ತ ಕೆಲಸದಲ್ಲಿ ಭಾರೀ ತೃಪ್ತಿ—ಹೌದು, ಆನಂದವಿರಸಾಧ್ಯವಿದೆ.—1 ಕೊರಿಂಥ 12:18, 27, 28ನ್ನು ಹೋಲಿಸಿರಿ.
ಇತರರೊಂದಿಗೆ ಹೊಂದಿಕೊಂಡು ಹೋಗುವುದು
ಪೂರ್ಣ ಸಮಯದ ಸೇವೆಯು ಎಲ್ಲ ವಿಧಗಳ ಜನರೊಂದಿಗೆ—ಕ್ಷೇತ್ರ ಸೇವೆಯಲ್ಲಿ, ಬೆತೆಲಿನಲ್ಲಿ, ಒಂದು ಮಿಷನೆರಿ ಮನೆಯಲ್ಲಿ, ಅಥವಾ ಒಬ್ಬ ಸಂಚರಣ ಮೇಲ್ವಿಚಾರಕನಾಗಿ ಒಂದರ ನಂತರ ಒಂದು ಸಭೆಯನ್ನು ಸಂದರ್ಶಿಸುವಾಗ—ನಿಕಟವಾದ ಸಂಪರ್ಕವನ್ನು ಒಳಗೂಡಿಸುತ್ತದೆ. ಈ ಕಾರಣದಿಂದ, ಆನಂದವು ಇತರರೊಂದಿಗೆ ಚೆನ್ನಾಗಿ ಹೊಂದಿಕೊಂಡು ಹೋಗುವುದರ ಮೇಲೆ ಬಹುಮಟ್ಟಿಗೆ ಅವಲಂಬಿಸುತ್ತದೆ. ಆದಾಗಲೂ, ಈ ಕಡೇ ದಿವಸಗಳಿಗಾಗಿ ಮುಂತಿಳಿಸಲ್ಪಟ್ಟಿರುವ ‘ಘೋರ ಕಾಲಗಳು,’ ಮಾನವ ಸಂಬಂಧಗಳ ಮೇಲೆ ಭಾರೀ ಒತ್ತಡವನ್ನು ಹಾಕುತ್ತವೆ. ಯಾರಾದರೂ ಒಬ್ಬ ಶುಶ್ರೂಷಕನನ್ನು ರೇಗಿಸಿದರೂ, ಅವನು ತನ್ನ ಆನಂದವನ್ನು ಹೇಗೆ ಕಳೆದುಕೊಳ್ಳದೇ ಇರಬಲ್ಲನು? ಪ್ರಾಯಶಃ ನಾವು ವಿಲ್ಹೆಲ್ಮ್ನಿಂದ ಸ್ವಲ್ಪ ವಿಷಯವನ್ನು ಕಲಿತುಕೊಳ್ಳಬಹುದು.
ವಿಲ್ಹೆಲ್ಮ್, 1947ರಲ್ಲಿ ಯೂರೋಪಿನಲ್ಲಿರುವ ಬೆತೆಲ್ ಕುಟುಂಬದ ಒಬ್ಬ ಸದಸ್ಯನಾದನು. ತದನಂತರ, ಅವನು ಪಯನೀಯರ್ ಕೆಲಸದಲ್ಲಿ ಮತ್ತು ಸೇವೆಯಲ್ಲಿ ಒಬ್ಬ ಸಂಚರಣ ಮೇಲ್ವಿಚಾರಕನಾಗಿ ಸಮಯವನ್ನು ಕಳೆದನು. “ಸರಿಯಲ್ಲವೆಂದು ನಾವು ನೆನಸುವಂತಹ ಅಥವಾ ನಮ್ಮನ್ನು ವೈಯಕ್ತಿಕವಾಗಿ ಚಿಂತೆಗೀಡುಮಾಡುವ ವಿಷಯಗಳನ್ನು ನನ್ನ ಹೆಂಡತಿಯೂ ನಾನೂ ನೋಡುವಲ್ಲಿ, ನಮಗೆ ಹೇಗನಿಸುತ್ತದೆಂದು ನಾವು ಯೆಹೋವನಿಗೆ ಹೇಳಿ, ಅನಂತರ ಅವುಗಳನ್ನು ಬಗೆಹರಿಸುವುದನ್ನು ಆತನಿಗೆ ಬಿಟ್ಟುಬಿಡುತ್ತೇವೆ” ಎಂದು ವಿಲ್ಹೆಲ್ಮ್ ವಿವರಿಸುತ್ತಾನೆ.—ಕೀರ್ತನೆ 37:5.
ಪ್ರಾಯಶಃ ಸ್ವತಃ ನೀವು, ನಿಮ್ಮೊಂದಿಗೆ ಅಗೌರವಪೂರ್ಣವಾಗಿ ಅಥವಾ ವಿಚಾರಹೀನವಾಗಿ ಮಾತಾಡಿದಂತಹ ಒಬ್ಬ ಜೊತೆ ಕ್ರೈಸ್ತನ ನಡವಳಿಕೆಯಿಂದ ಕ್ಷೋಭೆಗೊಂಡಿದ್ದೀರಿ. ನಾವೆಲ್ಲರೂ ನಮ್ಮ ಮಾತಿನಲ್ಲಿ ಅನೇಕ ಸಲ ಎಡವಿಬೀಳುತ್ತೇವೆಂಬುದನ್ನು ಜ್ಞಾಪಕದಲ್ಲಿಡಿರಿ. (ಯಾಕೋಬ 3:2) ಆದುದರಿಂದ ಈ ಸನ್ನಿವೇಶವನ್ನು ‘ಪ್ರಾರ್ಥನೆಯನ್ನು ಕೇಳುವವನಿಗೆ’ ಹೆಚ್ಚು ನಿಕಟವಾಗಲು ಏಕೆ ಉಪಯೋಗಿಸಬಾರದು? (ಕೀರ್ತನೆ 65:2) ಆ ವಿಷಯದ ಕುರಿತಾಗಿ ಯೆಹೋವನೊಂದಿಗೆ ಮಾತಾಡಿರಿ, ಮತ್ತು ಅನಂತರ ಅದನ್ನು ಅವನ ಹಸ್ತಗಳಲ್ಲಿ ಬಿಟ್ಟುಬಿಡಿರಿ. ದೇವರು ಬದಲಾವಣೆಗಳನ್ನು ಮಾಡಲು ಬಯಸುವಲ್ಲಿ, ಆತನು ಅದನ್ನು ಮಾಡುವನು. ಒಂದು ಮಿಷನೆರಿ ಮನೆಯಲ್ಲಿ ಜೀವಿಸುತ್ತಿರುವವರು, ತದ್ರೀತಿಯ ಸಮಸ್ಯೆಗಳಿಂದಾಗಿ ಒತ್ತಡವು ಬೆಳೆಯುವಲ್ಲಿ ಇದನ್ನು ಮನಸ್ಸಿನಲ್ಲಿಡುವ ಅಗತ್ಯವಿರಬಹುದು. ಯಾಕಂದರೆ ಇದು ಅವರು ಯೆಹೋವನ ಸೇವೆಯಲ್ಲಿ ತಮ್ಮ ಆನಂದವನ್ನು ಕಾಪಾಡಿಕೊಳ್ಳುವಂತೆ ಅವರಿಗೆ ಸಹಾಯ ಮಾಡುವುದು.
ನ್ಯೂನ ಆರೋಗ್ಯವನ್ನು ಹೊಂದಿರುವಾಗ
ನಿರಂತರವಾಗಿ ಉತ್ತಮ ಆರೋಗ್ಯವನ್ನು ಅನುಭವಿಸುವ ಜನರು ಕೊಂಚ. ಜೀವನದ ಉತ್ತಮ ದೆಸೆಯೆಂದು ಹೇಳಲಾಗುವ ಪ್ರಾಯದಲ್ಲಿರುವವರೂ, ಖಿನ್ನತೆ ಅಥವಾ ರೋಗದಿಂದ ಬಾಧಿತರಾಗಿರಬಹುದು. ಕೆಲವರು ಪೂರ್ಣ ಸಮಯದ ಸೇವೆಯನ್ನು ನಿಲ್ಲಿಸಿಬಿಡುವಂತೆ ಅನಾರೋಗ್ಯವು ಅಗತ್ಯಪಡಿಸುತ್ತದಾದರೂ, ತದನಂತರ ಅವರು ರಾಜ್ಯ ಪ್ರಚಾರಕರಾಗಿ ಅತ್ಯುತ್ತಮ ಕೆಲಸವನ್ನು ಮಾಡುತ್ತಾರೆ. ಇತರರಾದರೊ, ನ್ಯೂನ ಆರೋಗ್ಯದ ಎದುರಿನಲ್ಲೂ ಪೂರ್ಣ ಸಮಯದ ಸೇವೆಯನ್ನು ಮುಂದುವರಿಸಿಕೊಂಡು ಹೋಗಲು ಶಕ್ತರಾಗಿರುತ್ತಾರೆ. ಉದಾಹರಣೆಗಾಗಿ, ಹಾರ್ಟ್ಮೂಟ್ ಮತ್ತು ಗೀಸ್ಲಿಂಡ್ರನ್ನು ಪರಿಗಣಿಸಿರಿ.
ಹಾರ್ಟ್ಮೂಟ್ ಮತ್ತು ಗೀಸ್ಲಿಂಡ್ರು, ಪಯನೀಯರರಾಗಿ, ಮಿಷನೆರಿಗಳಾಗಿ, ಮತ್ತು ಸಂಚರಣ ಕೆಲಸದಲ್ಲಿ 30 ವರ್ಷಗಳನ್ನು ಕಳೆದಿರುವ ಒಬ್ಬ ವಿವಾಹಿತ ದಂಪತಿಗಳಾಗಿದ್ದಾರೆ. ಕೆಲವು ಸಮಯಗಳಲ್ಲಿ ಅವರನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬರಿದುಮಾಡಿರುವ ಗಂಭೀರ ಕಾಯಿಲೆಯ ಸರದಿಗಳನ್ನು ಅವರಿಬ್ಬರೂ ಅನುಭವಿಸಿದ್ದಾರೆ. ಹಾಗಿದ್ದರೂ, ಅವರು ಅತ್ಯುತ್ತಮವಾದ ಕೆಲಸವನ್ನು ಮಾಡಿದ್ದಾರೆ ಮತ್ತು ತದ್ರೀತಿಯ ಕಷ್ಟಗಳನ್ನು ಅನುಭವಿಸುತ್ತಿರುವ ಇತರರನ್ನು ಪ್ರೋತ್ಸಾಹಿಸಲು ಶಕ್ತರಾಗಿದ್ದಾರೆ. ಅವರು ಯಾವ ಬುದ್ಧಿವಾದವನ್ನು ನೀಡುತ್ತಾರೆ? “ಗತಕಾಲದ ಕಡೆಗಲ್ಲ, ಭವಿಷ್ಯತ್ತಿನೆಡೆಗೆ ನೋಡಿರಿ. ಪ್ರತಿಯೊಂದು ಪರಿಸ್ಥಿತಿಯನ್ನು ಪ್ರಯೋಜನಕರವಾಗಿ ಬಳಸಿಕೊಳ್ಳಿರಿ. ಪ್ರತಿ ದಿನವು, ಯೆಹೋವನನ್ನು ಸ್ತುತಿಸಲು ಕೇವಲ ಒಂದು ಅವಕಾಶವನ್ನು ತರಬಹುದು. ಆ ಅವಕಾಶವನ್ನು ಬಳಸಿಕೊಳ್ಳಿರಿ ಮತ್ತು ಅದರಲ್ಲಿ ಆನಂದಿಸಿರಿ.”
ಹಾನಲೊರಾಳ ವಿದ್ಯಮಾನವನ್ನು ಪರಿಗಣಿಸಿರಿ. ಒಬ್ಬ ಪಯನೀಯರಳಾಗಿ, ಒಬ್ಬ ಮಿಷನೆರಿಯಾಗಿ, ತನ್ನ ಗಂಡನೊಂದಿಗೆ ಸಂಚರಣ ಕೆಲಸದಲ್ಲಿ ಮತ್ತು ಬೆತೆಲ್ ಸೇವೆಯಲ್ಲಿ ಕಳೆದ 30 ವರ್ಷಗಳ ಸಮಯದಲ್ಲಿ ಅವಳು ಪುನಃ ಪುನಃ ಬರುತ್ತಿದ್ದ ಕಾಯಿಲೆಯಿಂದ ತೊಂದರೆಗೀಡಾಗಿದ್ದಾಳೆ. ಹಾನಲೊರಾ ಹೇಳುವುದು: “ಮಾನವರು, ತಮಗೆ ಸುಲಭವಾಗಿರುವಾಗ ಮಾತ್ರ ಯೆಹೋವನಿಗೆ ಸೇವೆಸಲ್ಲಿಸುತ್ತಾರೆಂಬ ಸೈತಾನನಿಂದ ಎಬ್ಬಿಸಲ್ಪಟ್ಟಿರುವ ವಿವಾದಾಂಶದ ಮೇಲೆ ನಾನು ಗಮನವನ್ನು ಕೇಂದ್ರೀಕರಿಸುತ್ತೇನೆ. ಕಷ್ಟಗಳನ್ನು ತಾಳಿಕೊಳ್ಳುವ ಮೂಲಕ, ಸೈತಾನನು ತಪ್ಪಾಗಿದ್ದಾನೆಂದು ರುಜುಪಡಿಸುವುದರಲ್ಲಿ ನನಗೆ ಒಂದು ಪಾತ್ರವಿರಸಾಧ್ಯವಿದೆ.” ಇದೊಂದು ಬಲವಾದ ಪ್ರಚೋದನೆಯಾಗಿರಸಾಧ್ಯವಿದೆ. ಶೋಧನೆಯ ಕೆಳಗೆ ಯೆಹೋವನೆಡೆಗೆ ನಿಮ್ಮ ವೈಯಕ್ತಿಕ ನಿಷ್ಠೆಯು, ಆತನಿಗೆ ಪ್ರಾಮುಖ್ಯವಾದ ಸಂಗತಿಯಾಗಿದೆಯೆಂಬುದನ್ನು ಜ್ಞಾಪಕದಲ್ಲಿಡಿರಿ.—ಯೋಬ 1:8-12; ಜ್ಞಾನೋಕ್ತಿ 27:11.
ನಿಮ್ಮ ಆರೋಗ್ಯದ ಕುರಿತಾಗಿ ಒಂದು ಸಮತೆಯ ನಿರ್ಣಯವನ್ನು ಮಾಡಲು ಪ್ರಯತ್ನಿಸುತ್ತಿರುವಾಗ, ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತಾದ ಯೇಸು ಕ್ರಿಸ್ತನ ಪ್ರವಾದನೆಯ ಎರಡು ವೈಶಿಷ್ಟ್ಯಗಳನ್ನು ಪರಿಗಣಿಸಿರಿ. ಒಂದಾದ ಮೇಲೆ ಇನ್ನೊಂದು ಸ್ಥಳದಲ್ಲಿ ಅಂಟುರೋಗಗಳು ಬರುವವು ಎಂದು ಯೇಸು ಮುಂತಿಳಿಸಿದನು. ಅವನು ಮತ್ತೂ ಹೇಳಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು.” (ಮತ್ತಾಯ 24:3, 14; ಲೂಕ 21:11) ಕಡೇ ದಿವಸಗಳಲ್ಲಿ, ತನ್ನ ಹಿಂಬಾಲಕರು ಅಸ್ವಸ್ಥತೆಯೊಂದಿಗೆ ಹೆಣಗಾಡುವರೆಂದು ಯೇಸುವಿಗೆ ತಿಳಿದಿತ್ತು. ಆದರೆ, ಸಾರುವ ಕೆಲಸವು ಕೇವಲ ಉತ್ತಮ ಆರೋಗ್ಯದಲ್ಲಿರುವವರಿಂದ ಮಾತ್ರವಲ್ಲ, ಗಂಭೀರವಾದ ಕಾಯಿಲೆಯನ್ನು ಅನುಭವಿಸುವ ವ್ಯಕ್ತಿಗಳಿಂದಲೂ ಪೂರೈಸಲ್ಪಡುವುದೆಂಬುದನ್ನು ಅವನು ಗ್ರಹಿಸಿದನು. ಅನಾರೋಗ್ಯದ ಎದುರಿನಲ್ಲೂ ನಾವು ಪೂರ್ಣ ಸಮಯದ ಸೇವೆಯಲ್ಲಿ ಮುಂದುವರಿಯಲು ಶಕ್ತರಾಗಿರುವಲ್ಲಿ, ನಾವು ಆತನ ಹೆಸರಿಗಾಗಿ ತೋರಿಸುವ ಪ್ರೀತಿಯನ್ನು ಯೆಹೋವನು ಎಂದಿಗೂ ಮರೆಯನು.—ಇಬ್ರಿಯ 6:10.
ಸಾರ್ವಜನಿಕ ಅನಾಸಕ್ತಿಯ ಎದುರಿನಲ್ಲೂ ಆನಂದವನ್ನು ಕಾಪಾಡಿಕೊಳ್ಳುವುದು
ರಾಜ್ಯ ಸಾರುವಿಕೆಯ ಕೆಲಸಕ್ಕೆ ಜನರು ಪ್ರತಿಕ್ರಿಯೆ ತೋರಿಸುವ ವಿಧದಿಂದಲೂ ನಮ್ಮ ಮನೋಭಾವವು ಬಾಧಿಸಲ್ಪಡಸಾಧ್ಯವಿದೆ. “ಪಯನೀಯರರಿಗೂ, ಒಬ್ಬ ಮನೆಯವನೊಂದಿಗೆ ಸಂಭಾಷಣೆಯನ್ನು ಆರಂಭಿಸುವುದು ಕಷ್ಟಕರವಾಗುತ್ತಿದೆ” ಎಂದು ಒಬ್ಬ ಅನುಭವಿ ಶುಶ್ರೂಷಕನು ಹೇಳಿದನು. “ನಮ್ಮ ಆನಂದವನ್ನು ಕಾಪಾಡಿಕೊಳ್ಳಲು ನಾವೆಲ್ಲರೂ ಹೋರಾಡಬೇಕು.” ಹೌದು, ಸಾರ್ವಜನಿಕ ಅನಾಸಕ್ತಿಯು, ಕ್ಷೇತ್ರ ಸೇವೆಯಲ್ಲಿನ ನಮ್ಮ ಆನಂದವನ್ನು ಕುಗ್ಗಿಸಬಲ್ಲದು. ಆದುದರಿಂದ, ಕ್ರಮವಾಗಿ ಉದಾಸೀನತೆಯನ್ನು ಎದುರಿಸುವ ಒಬ್ಬ ಪಯನೀಯರನು ತನ್ನ ಆನಂದವನ್ನು ಹೇಗೆ ಕಾಪಾಡಿಕೊಳ್ಳಬಲ್ಲನು? ಪ್ರಯತ್ನಿಸಿ, ಪರೀಕ್ಷಿಸಲ್ಪಟ್ಟಿರುವ ಈ ಮುಂದಿನ ಸಲಹೆಗಳನ್ನು ಅನುಭವಿ ಶುಶ್ರೂಷಕರು ನೀಡುತ್ತಾರೆ.
ಅನಾಸಕ್ತಿಯು ಒಂದು ಪಂಥಾಹ್ವಾನವನ್ನು ಪ್ರಸ್ತುತಪಡಿಸುತ್ತದಾದರೂ, ಅದು ಅಪಜಯವನ್ನು ಅರ್ಥೈಸುವ ಅಗತ್ಯವಿಲ್ಲ. ವ್ಯಾಪಕವಾದ ಉದಾಸೀನತೆಯು ತಾನೇ, ಪೂರ್ಣ ಸಮಯದ ಸೇವೆಯನ್ನು ನಿಲ್ಲಿಸಲು ಒಂದು ಕಾರಣವಲ್ಲ. ಶಾಸ್ತ್ರಗಳ ಶ್ರದ್ಧಾಪೂರ್ವಕ ಅಧ್ಯಯನಕ್ಕಾಗಿ ಸಾಕಷ್ಟು ಸಮಯವನ್ನು ನಾವು ಬದಿಗಿರಿಸುವಲ್ಲಿ, ನಾವು ಅನಾಸಕ್ತಿಯ ಎದುರಿನಲ್ಲಿ ನಮ್ಮ ಆನಂದವನ್ನು ಕಾಪಾಡಿಕೊಳ್ಳಸಾಧ್ಯವಿದೆ. ಶಾಸ್ತ್ರಗಳು ‘ನಮ್ಮನ್ನು ಸಕಲಸತ್ಕಾರ್ಯಕ್ಕೆ ಸನ್ನದ್ಧುಗೊಳಿಸು’ತ್ತವೆ ಮತ್ತು ಈ ಸತ್ಕಾರ್ಯವು, ಸುವಾರ್ತೆಗೆ ಕಿವಿಗೊಡದವರೊಂದಿಗೆ ಮಾತಾಡುವುದನ್ನೂ ಒಳಗೊಳ್ಳುತ್ತದೆ. (2 ತಿಮೊಥೆಯ 3:16, 17) ಜನರು ಪ್ರವಾದಿಯಾದ ಯೆರೆಮೀಯನಿಗೆ ಕಿವಿಗೊಡಲು ಬಯಸದಿದ್ದರೂ, ಅದು ಅವನನ್ನು ತಡೆಯಲಿಲ್ಲ. (ಯೆರೆಮೀಯ 7:27) ಕ್ರೈಸ್ತ ಪ್ರಕಾಶನಗಳ ಸಹಾಯದೊಂದಿಗೆ ಬೈಬಲನ್ನು ಅಭ್ಯಾಸಿಸುವಾಗ, ನಮ್ಮ ನಂಬಿಕೆಯನ್ನು ಬಲಪಡಿಸುವ ಮತ್ತು ಅನಾಸಕ್ತಿಯೊಂದಿಗೆ ವ್ಯವಹರಿಸಲು ನಮಗೆ ಸಹಾಯ ಮಾಡುವ ವಿಚಾರಗಳಿಗೆ ನಾವು ಗಮನ ಕೊಡುವಲ್ಲಿ, ನಾವು ಮಹತ್ತರವಾಗಿ ಪ್ರಯೋಜನಪಡೆಯಸಾಧ್ಯವಿದೆ.
ಅನಾಸಕ್ತಿಯು ಒಂದು ಪಂಥಾಹ್ವಾನವಾಗಿದೆಯೆಂಬುದನ್ನು ಒಪ್ಪಿಕೊಳ್ಳುತ್ತಾ, ನಾವು ಯಾರಿಗೆ ಸಾರುತ್ತೇವೊ ಅವರ ಕಡೆಗಿನ ನಮ್ಮ ಮನೋಭಾವವನ್ನು ನಾವು ಪರೀಕ್ಷಿಸೋಣ. ಅವರು ಏಕೆ ಉದಾಸೀನರಾಗಿದ್ದಾರೆ? ದೃಷ್ಟಾಂತಕ್ಕೆ, ಯೂರೋಪಿನ ಭಾಗಗಳಲ್ಲಿ ವ್ಯಾಪಕವಾದ ಅನಾಸಕ್ತಿಗೆ ಒಂದು ಕಾರಣವು, ಸುಳ್ಳು ಧರ್ಮದ ದೂಷಣೀಯ ದಾಖಲೆಯಾಗಿದೆ. ತಮ್ಮ ಜೀವಿತಗಳಲ್ಲಿ ಧರ್ಮಕ್ಕೆ ಒಂದು ಸ್ಥಾನವಿದೆಯೆಂದು ಇನ್ನು ಮುಂದೆ ಜನರಿಗೆ ಅನಿಸುವುದೂ ಇಲ್ಲ, ಮತ್ತು ಅದರೊಂದಿಗೆ ಅವರು ಯಾವುದೇ ಸಂಬಂಧವನ್ನು ಇರಿಸಲು ಬಯಸುವುದೂ ಇಲ್ಲ. ಅವರನ್ನು ಬಾಧಿಸುವಂತಹ, ನಿರುದ್ಯೋಗ, ಅನಾರೋಗ್ಯ, ಪಾತಕ, ಅಸಹಿಷ್ಣುತೆ, ಪರಿಸರ, ಮತ್ತು ಯುದ್ಧದ ಬೆದರಿಕೆಯಂತಹ ವಿಷಯಗಳ ಕುರಿತಾಗಿ ಜನರೊಂದಿಗೆ ಮಾತಾಡುತ್ತಾ ನಾವು ನಮ್ಯರಾಗಿರುವ ಅಗತ್ಯವಿದೆ.
ಮನೆಯವನೊಂದಿಗಿನ ನಮ್ಮ ಆರಂಭದ ಮಾತುಗಳಲ್ಲಿ, ಸ್ಥಳಿಕವಾಗಿ ಆಸಕ್ತಿಕರವಾಗಿರುವ ಒಂದು ವಿಷಯವನ್ನು ನಾವು ಉಲ್ಲೇಖಿಸಬಹುದು. ಡೀಟ್ಮಾರ್ ಅದನ್ನೇ ಮಾಡಲು ಪ್ರಯತ್ನಿಸಿದನು. ಅವನು ಒಂದು ಹಳ್ಳಿಯಲ್ಲಿ ಸಾರುತ್ತಿದ್ದನು, ಅಲ್ಲಿ ಅವನಿಗೆ ಸ್ವಲ್ಪವೇ ಯಶಸ್ಸು ಸಿಗುತ್ತಿತ್ತು. ಹಿಂದಿನ ದಿನ ಹಳ್ಳಿಯು ಒಂದು ದುರಂತವನ್ನು ಅನುಭವಿಸಿತೆಂದು ಒಬ್ಬ ನಿವಾಸಿಯು ತಿಳಿಸಿದನು. ತದನಂತರ, ಡೀಟ್ಮಾರ್ ಪ್ರತಿಯೊಂದು ಮನೆಬಾಗಿಲಿನಲ್ಲಿ, ಆ ದುರಂತಕ್ಕಾಗಿ ಪ್ರಾಮಾಣಿಕವಾದ ವಿಷಾದವನ್ನು ವ್ಯಕ್ತಪಡಿಸಿದನು. “ಒಮ್ಮೆಲೆ, ಜನರು ಮಾತಾಡಲಾರಂಭಿಸಿದರು. ಆ ದುರಂತವು ಎಲ್ಲರ ಮನಸ್ಸಿನಲ್ಲಿತ್ತು. ಅವರ ಜೀವಿತಗಳಲ್ಲಿ ನಾನು ಆಸಕ್ತಿಯನ್ನು ತೋರಿಸಿದ್ದರಿಂದ, ಆ ದಿನ ನಾನು ಅನೇಕ ಉತ್ತಮ ಸಂಭಾಷಣೆಗಳನ್ನು ನಡೆಸಿದೆ” ಎಂದು ಅವನು ಹೇಳಿದನು.
ನಾವು ಜನರನ್ನು ಕಂಡುಕೊಳ್ಳುವಲ್ಲೆಲ್ಲಾ, ಅವರಿಗೆ ಒಂದು ರಾಜ್ಯ ಸಾಕ್ಷಿಯನ್ನು ಕೊಡುವ ಅಗತ್ಯವಿದೆ. ಅನೌಪಚಾರಿಕ ಸಾಕ್ಷಿಕಾರ್ಯವು ಫಲಪ್ರದವಾಗಿರಬಹುದು, ಮತ್ತು ಬೈಬಲ್ ಆಧಾರಿತ ಪ್ರಕಾಶನಗಳಲ್ಲಿ ನೀಡಲ್ಪಟ್ಟಿರುವ ಸಲಹೆಗಳನ್ನು ಉಪಯೋಗಿಸುವ ಮೂಲಕ ಈ ಚಟುವಟಿಕೆಯಲ್ಲಿ ನಾವು ನಮ್ಮನ್ನೇ ತರಬೇತಿಗೊಳಿಸಿಕೊಳ್ಳಸಾಧ್ಯವಿದೆ. ಒಬ್ಬ ಮನೆಯವನೊಂದಿಗೆ ಕೆಲವೊಂದು ಸ್ನೇಹಪರ ಮಾತುಗಳನ್ನಾಡುವುದರಿಂದ ಅಥವಾ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತಿಗಳನ್ನು ನೀಡುವುದರಿಂದ ಆನಂದವು ಫಲಿಸಸಾಧ್ಯವಿದೆ. ನಾವು ಪುನರ್ಭೇಟಿಗಳನ್ನು ಮಾಡಿ, ಒಬ್ಬ ಆಸಕ್ತ ವ್ಯಕ್ತಿಯೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ನಡೆಸಲು ಆರಂಭಿಸಿರುವಲ್ಲಿ, “ಬೈಬಲ್ ಅಧ್ಯಯನ ಮಾಡಲು ಇಷ್ಟಪಡಬಹುದಾದ ಬೇರೆ ಯಾವುದೇ ವ್ಯಕ್ತಿಯ ಪರಿಚಯ ನಿಮಗಿದೆಯೊ?” ಎಂದು ಕೇಳುವ ಮೂಲಕ, ನಾವು ಒಬ್ಬ ವ್ಯಕ್ತಿಯ ಹೆಸರಿನ ಶಿಫಾರಸ್ಸನ್ನು ಪಡೆದುಕೊಳ್ಳಬಹುದು. ಇದು ಇನ್ನೊಂದು ಮನೆ ಬೈಬಲ್ ಅಧ್ಯಯನವನ್ನು ಸ್ಥಾಪಿಸಲು ನಡೆಸಸಾಧ್ಯವಿದೆ. ಏನೇ ಆಗಿರಲಿ, ನಾವು ಸಕಾರಾತ್ಮಕರಾಗಿದ್ದು, ಯೆಹೋವನ ಮೇಲೆ ಪ್ರಾರ್ಥನಾಪೂರ್ವಕವಾಗಿ ಆತುಕೊಳ್ಳುತ್ತಾ, ಅನಾಸಕ್ತಿಯು ನಮ್ಮನ್ನು ನಿರುತ್ತೇಜಿಸುವಂತೆ ಬಿಡದಿರೋಣ.
ಇತರರಿಂದ ಉತ್ತೇಜನ
ಯೂರ್ಗೆನ್ ಮತ್ತು ಕ್ರಿಸ್ಟಿಯಾನಾ, 30ಕ್ಕಿಂತಲೂ ಹೆಚ್ಚು ವರ್ಷಗಳಿಂದ ಪಯನೀಯರ್ ಸೇವೆಯಲ್ಲಿ ಮತ್ತು ಸಂಚರಣ ಕೆಲಸದಲ್ಲಿ ಒಳಗೂಡಿರುತ್ತಾರೆ. ಒಮ್ಮೆ ಅವರಿಗೆ, ಎಲ್ಲಿ ಹೆಚ್ಚಿನ ಜನರು ಅನಾಸಕ್ತರೂ, ಹಟಮಾರಿಗಳೂ ಆಗಿದ್ದರೊ ಆ ಒಂದು ಕ್ಷೇತ್ರದಲ್ಲಿ ಸಾರುವುದನ್ನು ಒಳಗೊಂಡಿದ್ದ ಒಂದು ನೇಮಕವು ದೊರಕಿತು. ಯೂರ್ಗೆನ್ನೂ ಅವನ ಹೆಂಡತಿಯೂ ಒಂದಿಷ್ಟು ಉತ್ತೇಜನಕ್ಕಾಗಿ ಎಷ್ಟೊಂದು ಹಾತೊರೆದರು! ಆದರೆ, ಯಾವುದೊ ಕಾರಣಕ್ಕಾಗಿ, ಸಭೆಯಲ್ಲಿದ್ದ ಇತರರು ಅವರ ಈ ಅಗತ್ಯಕ್ಕೆ ಪ್ರತಿಕ್ರಿಯಿಸಲಿಲ್ಲ.
ಆದುದರಿಂದ, ಯೂರ್ಗೆನ್ಗೆ ಅನುಭವದಿಂದ ತಿಳಿದಿದೆಯೇನೆಂದರೆ, “ಕೆಲವು ಪಯನೀಯರರಿಗೆ ತುಂಬ ಕಷ್ಟವಿರುತ್ತದೆ. ಅವರಿಗೆ ಹಿರಿಯರಿಂದ ಮತ್ತು ಇತರ ಪ್ರಚಾರಕರಿಂದ ಹೆಚ್ಚಿನ ಉತ್ತೇಜನದ ಅಗತ್ಯವಿದೆ.” ಯೆಹೋಶುವನನ್ನು ಉತ್ತೇಜಿಸಿ ಬಲಪಡಿಸುವಂತೆ ದೇವರು ಮೋಶೆಗೆ ಹೇಳಿದನು. (ಧರ್ಮೋಪದೇಶಕಾಂಡ 3:26-28) ಮತ್ತು ಕ್ರೈಸ್ತರು, ಪರಸ್ಪರ ಉತ್ತೇಜನದ ಮೂಲಗಳಾಗಿರಬೇಕು. (ರೋಮಾಪುರ 1:11, 12) ಭಕ್ತಿವೃದ್ಧಿಮಾಡುವ ಮಾತುಗಳಿಂದಲೂ, ಆಗಿಂದಾಗ್ಗೆ ಅವರೊಂದಿಗೆ ಶುಶ್ರೂಷೆಯಲ್ಲಿ ಜೊತೆಗೂಡುವುದರಿಂದಲೂ ರಾಜ್ಯ ಪ್ರಚಾರಕರು ಪೂರ್ಣ ಸಮಯದ ಸೇವೆಯಲ್ಲಿರುವವರನ್ನು ಉತ್ತೇಜಿಸಸಾಧ್ಯವಿದೆ.
ಯೆಹೋವನ ಆನಂದ—ನಮ್ಮ ಆಶ್ರಯ
ಹೆಚ್ಚಿನ ಸಮಸ್ಯೆಗಳು ಅಲ್ಪಾವಧಿಯವುಗಳೂ, ಆದರೆ ಕೆಲವು ಸಮಸ್ಯೆಗಳು ದೀರ್ಘ ಸಮಯ ಬಾಳುವಂತಹವುಗಳೆಂದೂ, ಪಯನೀಯರರೋಪಾದಿ ಅಥವಾ ಮಿಷನೆರಿಗಳೋಪಾದಿ, ಬೆತೆಲಿನಲ್ಲಿ ಸೇವೆಸಲ್ಲಿಸುತ್ತಾ, ಅಥವಾ ಸಂಚರಣ ಕೆಲಸದಲ್ಲಿ ಸಭೆಗಳನ್ನು ಸಂದರ್ಶಿಸುತ್ತಾ ತಮ್ಮ ಜೀವಿತಗಳ ಹೆಚ್ಚಿನಾಂಶವನ್ನು ಕಳೆದಿರುವ ಕ್ರೈಸ್ತರು ಕಂಡುಕೊಂಡಿದ್ದಾರೆ. ಎಂದಿಗೂ ಪರಿಹಾರವಾಗದಂತೆ ತೋರುವ ಕೆಲವೇ ಸಮಸ್ಯೆಗಳು ಕೂಡ, ನಮ್ಮಿಂದ ನಮ್ಮ ಆನಂದವನ್ನು ಕಸಿದುಕೊಳ್ಳಬಾರದು. ಸಮಸ್ಯೆಗಳು ನಮ್ಮನ್ನು ದುಃಖಿತರನ್ನಾಗಿ ಮಾಡುವಾಗಲೆಲ್ಲಾ, “ನಾವು ನಮಗಿರುವ ಅನೇಕ ಆಶೀರ್ವಾದಗಳ ಕುರಿತಾಗಿ ಮತ್ತು ಹೆಚ್ಚು ಭಾರಿಯಾದ ಕಷ್ಟಗಳನ್ನು ಅನುಭವಿಸುತ್ತಿರುವ ಇತರ ಸಾವಿರಾರು ಮಂದಿಯ ಕುರಿತಾಗಿ ಯೋಚಿಸಬೇಕು” ಎಂದು, 45ಕ್ಕಿಂತಲೂ ಹೆಚ್ಚು ವರ್ಷಗಳಿಂದ ಒಂದು ವಿದೇಶಿ ನೇಮಕದಲ್ಲಿ ಸೇವೆಸಲ್ಲಿಸಿರುವ ರಾಮೊನ್ ಸಲಹೆ ನೀಡುತ್ತಾರೆ. ಖಂಡಿತವಾಗಿಯೂ, ಲೋಕವ್ಯಾಪಕವಾಗಿ ನಮ್ಮ ಜೊತೆ ವಿಶ್ವಾಸಿಗಳಿಂದ ಕಷ್ಟಗಳು ಅನುಭವಿಸಲ್ಪಡುತ್ತಿವೆ ಮತ್ತು ಯೆಹೋವನು ನಿಜವಾಗಿಯೂ ನಮ್ಮೆಲ್ಲರ ಕುರಿತಾಗಿ ಕಾಳಜಿ ವಹಿಸುತ್ತಾನೆ.—1 ಪೇತ್ರ 5:6-9.
ಹಾಗಾದರೆ, ನಮ್ಮ ವೈಯಕ್ತಿಕ ಪರಿಸ್ಥಿತಿಗಳು ನಾವು ಪೂರ್ಣ ಸಮಯದ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಮತ್ತು ಅದರಲ್ಲಿ ಉಳಿಯುವಂತೆ ನಮ್ಮನ್ನು ಅನುಮತಿಸುವಲ್ಲಿ, ನಮ್ಮ ಸ್ವರ್ಗೀಯ ತಂದೆಯ ಮೇಲೆ ಆತುಕೊಳ್ಳುವ ಮೂಲಕ ನಾವು ನಮ್ಮ ಆನಂದವನ್ನು ಕಾಪಾಡಿಕೊಳ್ಳೋಣ. ಆತನು ತನ್ನ ಸೇವಕರನ್ನು ಬಲಪಡಿಸುತ್ತಾನೆ, ಮತ್ತು ‘ಯೆಹೋವನ ಆನಂದವೇ ನಮ್ಮ ಆಶ್ರಯವಾಗಿದೆ’ ಎಂಬುದನ್ನು ನಾವೆಲ್ಲರೂ ಜ್ಞಾಪಕದಲ್ಲಿಡತಕ್ಕದ್ದು.—ನೆಹೆಮೀಯ 8:10.
[ಪುಟ 21 ರಲ್ಲಿರುವ ಚಿತ್ರ]
“ನನ್ನ ಅನಿಸಿಕೆಗಳು ಮತ್ತು ಇಷ್ಟಗಳು, ಕೆಲಸದಷ್ಟು ಪ್ರಾಮುಖ್ಯ ವಾಗಿರುವುದಿಲ್ಲ”
[ಪುಟ 22 ರಲ್ಲಿರುವ ಚಿತ್ರ]
“ನಮಗೆ ಹೇಗನಿಸುತ್ತದೆಂದು ನಾವು ಯೆಹೋವನಿಗೆ ಹೇಳಿ, ಅನಂತರ ಅವುಗಳನ್ನು ಬಗೆಹರಿಸುವುದನ್ನು ಆತನಿಗೆ ಬಿಟ್ಟುಬಿಡುತ್ತೇವೆ”
[ಪುಟ 23 ರಲ್ಲಿರುವ ಚಿತ್ರ]
“ಪ್ರತಿಯೊಂದು ಪರಿಸ್ಥಿತಿಯನ್ನು ಪ್ರಯೋಜನಕರವಾಗಿ ಬಳಸಿಕೊಳ್ಳಿರಿ. ಪ್ರತಿ ದಿನವು, ಯೆಹೋವನನ್ನು ಸ್ತುತಿಸಲು ಕೇವಲ ಒಂದು ಅವಕಾಶವನ್ನು ತರಬಹುದು”
[ಪುಟ 23 ರಲ್ಲಿರುವ ಚಿತ್ರ]
“ಕಷ್ಟಗಳನ್ನು ತಾಳಿಕೊಳ್ಳುವ ಮೂಲಕ, ಸೈತಾನನು ತಪ್ಪಾಗಿದ್ದಾನೆಂದು ರುಜುಪಡಿಸುವುದರಲ್ಲಿ ನನಗೆ ಒಂದು ಪಾತ್ರವಿರಸಾಧ್ಯವಿದೆ”
[ಪುಟ 24 ರಲ್ಲಿರುವ ಚಿತ್ರ]
“ಕೆಲವು ಪಯನೀಯರರಿಗೆ ತುಂಬ ಕಷ್ಟವಿರುತ್ತದೆ. ಅವರಿಗೆ ಹಿರಿಯರಿಂದ ಮತ್ತು ಇತರ ಪ್ರಚಾರಕರಿಂದ ಹೆಚ್ಚಿನ ಉತ್ತೇಜನದ ಅಗತ್ಯವಿದೆ”
[ಪುಟ 24 ರಲ್ಲಿರುವ ಚಿತ್ರ]
“ನಾವು ನಮಗಿರುವ ಅನೇಕ ಆಶೀರ್ವಾದಗಳ ಕುರಿತಾಗಿ ಯೋಚಿಸಬೇಕು”