ನಾವಹೊ ಪ್ರದೇಶದಲ್ಲಿ ಕುರಿಸದೃಶರಿಗಾಗಿ ಹುಲ್ಲುಗಾವಲು
ಹಸೋನೀ ಎಂದರೆ ನಾವಹೊ ಇಂಡಿಯನರ ಭಾಷೆಯಲ್ಲಿ “ಸೊಗಸು.” ಮತ್ತು ನಾವಹೊ ಜನರು ತಮ್ಮ ಪ್ರದೇಶವನ್ನು ವರ್ಣಿಸುವುದು ಹಾಗೆಯೇ. ಅಮೆರಿಕ ಸರಕಾರವು, 1868ರಿಂದ ಈಶಾನ್ಯ ಆ್ಯರಿಸೋನದಲ್ಲಿ ಸುಮಾರು 62,000 ಚದರ ಕಿಲೊಮೀಟರುಗಳಷ್ಟು ಮೀಸಲು ಪ್ರದೇಶವನ್ನು ನಾವಹೊ ಜನರಿಗೆ ಪಾಲುಮಾಡಿಕೊಟ್ಟಿದೆ. ಆ್ಯರಿಸೋನ, ಕಾಲರಾಡೊ, ನ್ಯೂ ಮೆಕ್ಸಿಕೊ ಮತ್ತು ಯೂಟಾ ಎಂಬ ನಾಲ್ಕು ರಾಜ್ಯಗಳು ಕೂಡಿಬರುವ ನಾಲ್ಕು ಮೂಲೆಗಳೆಂದು ಕರೆಯಲ್ಪಡುವುದರ ಸುತ್ತಲೂ ಇದಿದೆ. ವೆಸ್ಟರ್ನ್ ಚಲನಚಿತ್ರಗಳು ಪ್ರಸಿದ್ಧವಾಗಿಸಿದ ಮಾನ್ಯುಮೆಂಟ್ ವ್ಯಾಲಿಯನ್ನು ಈಗ ನಾವಹೊ ಟ್ರೈಬಲ್ ಪಾರ್ಕ್ ಆಗಿ ರಕ್ಷಿಸಲಾಗಿದ್ದು, ಅದು ಲೋಕದ ಎಲ್ಲ ಕಡೆಗಳಿಂದ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಆ ಕಣಿವೆಯಲ್ಲಿ ಮುನ್ನೂರು ಮೀಟರುಗಳಷ್ಟು ಎತ್ತರದ ಪ್ರೇಕ್ಷಣೀಯ ಕೆಮ್ಮರಳು ಶಿಲೆಗಳಿವೆ. ಇವು ಎತ್ತರದ ಮರುಭೂಮಿ ಬಯಲುಗಳ ಮೇಲೆ ಭವ್ಯ ಏಕಾಂತತೆಯಲ್ಲಿ ಎದ್ದು ನಿಂತಿರುತ್ತವೆ. ಯೋಗ್ಯವಾಗಿಯೇ, ಈ ಕಣಿವೆಗಿರುವ ನಾವಹೊ ಪದದ ಅರ್ಥವು, “ಬಂಡೆಗಳ ಮಧ್ಯದಲ್ಲಿನ ಸ್ಥಳ.”
ನಾವಹೊ ಜನರು ಮೊತ್ತದಲ್ಲಿ, ಅವರ ವಿನೀತ ಶಿಷ್ಟಾಚಾರಗಳು, ಹಾರ್ದಿಕ ಆತಿಥ್ಯ ಮತ್ತು ಅನ್ಯೋನ್ಯವಾದ ಲಂಬಿಸಿದ ಕುಟುಂಬಗಳಿಗೆ ಜ್ಞಾತರು. ಆ ಮೀಸಲು ಪ್ರದೇಶದಲ್ಲಿರುವ 1,70,000 ನಿವಾಸಿಗಳು, ಸಾಂಪ್ರದಾಯಿಕ ಜೀವನ ವಿಧಾನಗಳನ್ನು ಅನುಸರಿಸುತ್ತ ಮುಖ್ಯವಾಗಿ ಪ್ರತ್ಯೇಕ ವಸತಿಪ್ರದೇಶಗಳಲ್ಲಿ ಜೀವಿಸುತ್ತಾರೆ. ಕೆಲವರು ಇನ್ನೂ ಕುರಿಗಳನ್ನು ಬೆಳೆಸುತ್ತ ಹೋಗಾನ್ಗಳೆಂದು ಕರೆಯಲ್ಪಡುವ ಮಣ್ಣು ಸವರಿರುವ ದಿಮ್ಮಿ ಗುಡಿಸಿಲುಗಳಲ್ಲಿ ಜೀವಿಸುತ್ತಾರೆ. ನಾವಹೊ ಕುಶಲಕಲೆಗಳು ವ್ಯಾಪಕವಾದ ಜನಪ್ರಿಯತೆಯನ್ನು ಪಡೆದಿವೆ. ಕುರಿಯ ಉಣ್ಣೆಯಿಂದ ಮಾಡಿದ, ವರ್ಣರಂಜಿತವಾದ ಜ್ಯಾಮಿತೀಯ ಅಥವಾ ಸಾಂಪ್ರದಾಯಿಕ ವಿನ್ಯಾಸಗಳಿರುವ ನೆಲಹಾಸುಗಳು ಮತ್ತು ಹಾಸುಗಂಬಳಿಗಳು ವಿಶೇಷವಾಗಿ ಅಮೂಲ್ಯವೆಂದೆಣಿಸಲ್ಪಡುತ್ತವೆ. ಆಕಾಶ ನೀಲವರ್ಣದ ಪ್ರಶಸ್ತಶಿಲೆ ಮತ್ತು ಇನ್ನಿತರ ನೈಸರ್ಗಿಕ ಸಾಮಗ್ರಿಗಳಿಂದ ಮಾಡಿದ ನಾವಹೊ ಬೆಳ್ಳಿಯ ಆಭರಣಗಳೂ ಸಮಾನವಾಗಿ ಪ್ರಸಿದ್ಧವಾಗಿವೆ.
ನಾವಹೊ ಪ್ರದೇಶಕ್ಕೆ ಸುವಾರ್ತೆಯನ್ನು ತರುವುದು
ಯೆಹೋವನ ಸಾಕ್ಷಿಗಳು ನಾವಹೊ ಪ್ರದೇಶಕ್ಕೆ 30ಕ್ಕೂ ಹೆಚ್ಚು ವರುಷಗಳಿಂದ ಬಂದಿದ್ದಾರೆ; ಕೇವಲ ನೋಟಕರಾಗಿಯಲ್ಲ, ದೇವರ ರಾಜ್ಯದ ಸುವಾರ್ತೆಯನ್ನು ಈ ದೂರದ ಮೂಲೆಯಲ್ಲಿರುವ ಪ್ರದೇಶಕ್ಕೆ ಕೊಂಡುಹೋಗಲಿಕ್ಕಾಗಿಯೂ. (ಮತ್ತಾಯ 24:14) ಯೆಹೋವನ ಸಾಕ್ಷಿಗಳ ಕ್ರಮದ ಮತ್ತು ವಿಶೇಷ ಪಯನೀಯರ್ ಶುಶ್ರೂಷಕರು ಸಾರುವ ಕೆಲಸದಲ್ಲಿ ಮುಂದಾಳುತ್ವವನ್ನು ವಹಿಸಿದ್ದಾರೆ. ಅವರಲ್ಲಿ ಅನೇಕರು ಹೆಚ್ಚು ಅಗತ್ಯವಿರುವಲ್ಲಿ ಸಹಾಯ ನೀಡಲಿಕ್ಕಾಗಿ, ಸಂಚರಣ ಮೇಲ್ವಿಚಾರಕರ ಮತ್ತು ಸ್ಥಳಿಕ ಸಾಕ್ಷಿಗಳ ಕರೆಗಳಿಗೆ ಪ್ರತಿಕ್ರಿಯಿಸಿ ಬಂದಿದ್ದಾರೆ. ಕೆಲವರು ಹತ್ತಿರದ ಸಭೆಗಳಿಂದ ಬಂದಿರುವಾಗ, ವಿವಿಧ ಅಮೆರಿಕನ್ ಮೂಲನಿವಾಸಿ ಕುಲಗಳ ಸದಸ್ಯರಾಗಿರುವ ಇತರರು ಅಮೆರಿಕದ ವಿವಿಧ ಭಾಗಗಳಿಂದ ಬಂದಿದ್ದಾರೆ.
ಈ ಆತ್ಮತ್ಯಾಗಿಗಳಾದ ಸ್ತ್ರೀಪುರುಷರು ತಮ್ಮ ಇಲ್ಲಿಯ ಶುಶ್ರೂಷೆಯನ್ನು ಮಿಷನೆರಿ ನೇಮಕಕ್ಕೆ ಹೋಲಿಸಿದ್ದಾರೆ. ಏಕೆ? ಪ್ರಥಮವಾಗಿ, ಮೂಲನಿವಾಸಿಗಳ ಭಾಷೆಗಳನ್ನು, ಅವುಗಳ ಜಟಿಲ ಧ್ವನಿಗಳು, ರಚನೆ ಮತ್ತು ಅಭಿವ್ಯಕ್ತಿಗಳ ಕಾರಣ ಕಲಿಯುವುದು ವಿಪರೀತ ಕಷ್ಟಕರ. ಅನಂತರ, ಮೂಲನಿವಾಸಿಗಳು ಹೆಚ್ಚಾಗಿ, ಧರ್ಮ, ಕುಟುಂಬ ರಚನೆ ಮತ್ತು ಜೀವನೋಪಾಯಕ್ಕಾಗಿ ಜಮೀನಿನ ಮೇಲೆ ಅವಲಂಬಿಸಿಕೊಂಡಿರುವ ಸಾಂಪ್ರದಾಯಿಕ ವಿಧಗಳಿಗೆ ಅಂಟಿಕೊಂಡಿದ್ದಾರೆ. ಕೂಡಿಕೆಯಾಗಿ, ಮೂಲನಿವಾಸಿಗಳಲ್ಲದವರಿಗೆ ವಸತಿ ಮತ್ತು ಕೆಲಸ ವಿರಳವಾಗಿರುವುದರಿಂದ, ಬಂದವರು ಅಲ್ಲಿಯೇ ಉಳಿಯುವುದನ್ನು ಇದು ಕಠಿನವಾಗಿಸುತ್ತದೆ. ಕೊನೆಯದಾಗಿ, ಬಿಳಿಯರ ಕೈಯಿಂದ ಈ ಜನರಿಗಾದ ದುರ್ವರ್ತನೆಯು ಅವರಲ್ಲಿ ಪರಕೀಯರೆಡೆಗೆ ತುಸು ಅಪನಂಬಿಕೆಯನ್ನು ಹುಟ್ಟಿಸಿರುವುದು ಗ್ರಾಹ್ಯವೇ.a
ಮೊದಲಲ್ಲಿ, ಸಾಕ್ಷಿಗಳು ವಿಶೇಷ ಬಟ್ಟೆ, ಟೈಗಳನ್ನು ಧರಿಸಿಕೊಂಡು ಮನೆಯಿಂದ ಮನೆಗೆ ಭೇಟಿನೀಡುತ್ತಾ ಹೋದಾಗ, ಇವರನ್ನು ಮಾರ್ಮನ್ ಪಂಗಡದವರೆಂದು ತಪ್ಪೆಣಿಸಿ ಅನೇಕರು ಬಾಗಿಲುಗಳನ್ನು ತೆರೆಯುತ್ತಿರಲಿಲ್ಲ. ಆದರೆ ಸಾಧಾರಣ ಬಟ್ಟೆಗೆ ಬದಲಾಯಿಸಿದಾಗ, ಅವರನ್ನು ಒಂದು ಅಥವಾ ಹೆಚ್ಚು ತಾಸುಗಳಿಗಾಗಿ ಒಳಗೆ ಕರೆಯಲಾಯಿತು. ಈಗ, ಶುಶ್ರೂಷೆಯಲ್ಲಿ ಪುನಃ ಬಿಸಿನೆಸ್ ಬಟ್ಟೆಬರೆಗಳು ಧರಿಸಲ್ಪಡುತ್ತವೆಯಾದರೂ, ಜನರು ಯೆಹೋವನ ಸಾಕ್ಷಿಗಳನ್ನು ಗುರುತಿಸುತ್ತಾರೆ.
ನಾವಹೊ ಮೀಸಲು ಪ್ರದೇಶದಲ್ಲಿ ಜೀವಿಸುವ ಜನರನ್ನು ತಲಪುವುದೇ ಒಂದು ದೊಡ್ಡ ಪಂಥಾಹ್ವಾನ. ಕಲ್ಲು, ಮರಳು ಮತ್ತು ಕೆಸರಿರುವ, ಗುರುತಿಲ್ಲದ ಹಾದಿಗಳಲ್ಲಿ ಅನೇಕ ಕಿಲೊಮೀಟರುಗಳಷ್ಟು ದೂರ ವಾಹನ ನಡೆಸುವುದು ಇಲ್ಲಿ ಸಾಧಾರಣದ ಸಂಗತಿ. ಸಹಜವಾಗಿ, ಇದು ವಾಹನಗಳನ್ನೂ ಪ್ರಯಾಣಿಕರನ್ನೂ ಹೆಚ್ಚು ಸವೆಯಿಸಿ, ದಣಿಸುತ್ತದೆ. ವಾಹನಗಳು ಕೆಸರಿನಲ್ಲಿ ಹೂತುಹೋಗಬಹುದಾದರೂ, ಸಾಮಾನ್ಯವಾಗಿ ದಾರಿಹೋಕರು ನೆರವಾಗಲು ಸಿದ್ಧರಾಗಿರುತ್ತಾರೆ. ಆಸಕ್ತರನ್ನು ಪುನರ್ಭೇಟಿಮಾಡುವುದು, ಗೃಹ ಬೈಬಲ್ ಅಧ್ಯಯನಕ್ಕಾಗಿ ಹೋಗುವುದು ಅಥವಾ ಯಾರನ್ನಾದರೂ ಕ್ರೈಸ್ತ ಕೂಟಕ್ಕೆ ಒಯ್ಯುವುದು—ಇದಕ್ಕೆ ಅನೇಕಸಲ ಅನೇಕ ತಾಸುಗಳ ಸುತ್ತಾಟ ಬೇಕಾಗುತ್ತದೆ. ಆದರೆ ಸಾಕ್ಷಿಗಳು ಇಷ್ಟಪೂರ್ವಕವಾಗಿ ತಮ್ಮನ್ನು ಬಳಸಿಕೊಂಡು, ಮೂಲನಿವಾಸಿಗಳ ಕಡೆಗೆ ಅವರಿಗಿರುವ ಪ್ರೀತಿಯನ್ನು ಪ್ರದರ್ಶಿಸುತ್ತಾರೆ.—ಹೋಲಿಸಿ 1 ಥೆಸಲೊನೀಕ 2:8.
ನಾವಹೊ ಜನರು ಬೈಬಲ್ ಚರ್ಚೆಗಳಲ್ಲಿ ಆನಂದಿಸುತ್ತಾರೆ. ವಾಡಿಕೆಯಾಗಿ, ಮಾನವಕುಲದ ಭಾವೀ ಪ್ರಮೋದವನ್ಯ ಬೀಡಿನ ನಿರೀಕ್ಷೆಯ ಕುರಿತು ಕೇಳಲು ಅವರು ಇಡೀ ಕುಟುಂಬವನ್ನು—ಮಕ್ಕಳು, ಹೆತ್ತವರು, ಅಜ್ಜಅಜ್ಜಿಯರನ್ನು ಒಟ್ಟುಗೂಡಿಸುತ್ತಾರೆ. ಪ್ರಮೋದವನವು ಹೇಗಿರಬಹುದೆಂದು ಒಬ್ಬ ನಾವಹೊ ಪುರುಷನಿಗೆ ಕೇಳಿದಾಗ, ಭೂಮಿ ಮತ್ತು ಕುರಿಹಿಂಡಿನ ವಿಷಯದಲ್ಲಿ ಅವರಿಗಿರುವ ಪ್ರೀತಿಯನ್ನು ಪ್ರತಿಬಿಂಬಿಸುತ್ತ, “ತುಂಬ ಕುರಿಗಳಿರುವ ಹಸಿರು ಹುಲ್ಲುಗಾವಲು” ಎಂದು ಉತ್ತರಿಸಿದನು. ಬೈಬಲ್ ಸಾಹಿತ್ಯವನ್ನೂ ಅವರು ಅಮೂಲ್ಯವೆಂದೆಣಿಸುತ್ತಾರೆ. ಇದನ್ನು ಅವರು ಕೆಲವು ವೇಳೆ, ರಾಜ್ಯ ಶುಶ್ರೂಷೆಯನ್ನು ಬೆಂಬಲಿಸಲಿಕ್ಕಾಗಿ ಮಣಿಗಳನ್ನೊ, ಸಾಬೂನನ್ನೊ, ಡಬ್ಬಿ ಹಾಲು ಮುಂತಾದುವನ್ನೊ ಕಾಣಿಕೆಯಾಗಿ ಕೊಟ್ಟು ತೋರಿಸುತ್ತಾರೆ. ಒಬ್ಬ ಸ್ಪೆಷಲ್ ಪಯನೀಯರನು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗೆ ಒಂದು ವರ್ಷದಲ್ಲಿ 200 ಚಂದಾಗಳನ್ನು ಪಡೆದನು. ಇವುಗಳಲ್ಲಿ ಎರಡನ್ನು ಕುದುರೆ ಸವಾರಿಮಾಡಿಕೊಂಡು ಹೋಗುತ್ತಿದ್ದ ಒಬ್ಬ ಪುರುಷನಿಂದ ಪಡೆದನು.
ಒಂದು “ಕುರಿ ಶಿಬಿರ”ವನ್ನು ನಿರ್ಮಿಸುವುದು
ಬೇಸಗೆ ಬಂದಾಗ, ನಾವಹೊ ಕುರುಬನಿಗೆ ಅಥವಾ ಕುರುಬ ಸ್ತ್ರೀಗೆ ತನ್ನ ಮಂದೆಯನ್ನು ಕುರಿ ಶಿಬಿರಕ್ಕೆ ಒಯ್ಯುವ ಕಾಲ ಬರುತ್ತದೆ. ಹಸಿರು ಹುಲ್ಲುಗಾವಲಿಗೆ ಮತ್ತು ಉತ್ತಮ ಜಲಮೂಲಕ್ಕೆ ಹತ್ತಿರವಿರುವ ಕಾರಣ ಆರಿಸಲ್ಪಟ್ಟ ಈ ಬೇಸಗೆಯ ಕುರಿ ಶಿಬಿರವು, ಕುರಿಮಂದೆಯು ಒಳ್ಳೆಯದಾಗಿ ಬೆಳೆಯಲು ಸಹಾಯಮಾಡುತ್ತದೆ. ಸಂಕೇತಾರ್ಥದಲ್ಲಿ, ಒಂದು ರಾಜ್ಯ ಸಭಾಗೃಹ—ಆತ್ಮಿಕ ಹುಲ್ಲುಗಾವಲು ಮತ್ತು ಸತ್ಯಜಲಗಳ ಮೂಲ—ವನ್ನು ಇಂತಹ ಒಂದು ಶಿಬಿರಕ್ಕೆ ಹೋಲಿಸಸಾಧ್ಯವಿದೆ. ಅಲ್ಲಿಗೆ ಬರುವ ಜನರು, ಅವರನ್ನು ಆತ್ಮಿಕವಾಗಿ ಆರೋಗ್ಯವಂತರನ್ನಾಗಿಯೂ ಬಲಾಢ್ಯರನ್ನಾಗಿಯೂ ಮಾಡುವ ಆತ್ಮಿಕ ಪೋಷಣೆಯನ್ನು ಕಂಡುಕೊಳ್ಳಬಲ್ಲರು.
ಸ್ವಲ್ಪ ಸಮಯದ ವರೆಗೆ, ಕೂಟಗಳು ಆ್ಯರಿಸೋನದ ಕೇಅಂಟದ ಒಂದು ತರಗತಿಯಲ್ಲಿ ನಡೆಸಲ್ಪಟ್ಟವು. ಆ ಬಳಿಕ, 1992ರ ಆಗಸ್ಟ್ ತಿಂಗಳಿನಲ್ಲಿ, ಅನೇಕ ರಾಜ್ಯಗಳಿಂದ ಬಂದ ನೂರಾರು ಮಂದಿ ಸಾಕ್ಷಿ ಸ್ವಯಂಸೇವಕರ ಸಹಾಯದಿಂದ ಕೇಅಂಟದಲ್ಲಿ ಒಂದು ಹೊಸ ರಾಜ್ಯ ಸಭಾಗೃಹವನ್ನು ಕಟ್ಟಲಾಯಿತು. ಈ ರಾಜ್ಯ ಸಭಾಗೃಹವೂ ಆ ಪ್ರದೇಶದ ಅನೇಕ ಬೇರೆ ಸಭಾಗೃಹಗಳೂ ಸ್ಥಳೀಯರ ಮನಸ್ಸುಗಳಲ್ಲಿ ಸಾರುವ ಕಾರ್ಯಕ್ಕೆ ಚಿರಸ್ಥಾಯಿತ್ವವನ್ನು ಕೊಡುತ್ತವೆ. ಈ ವಿಸ್ತಾರವಾದ ಪ್ರದೇಶದಲ್ಲಿ ಕಾರ್ಯಮಾಡುತ್ತಿರುವ ಬೇರೆ ಸಭಾಗೃಹಗಳಲ್ಲಿ, ಮೀಸಲು ಪ್ರದೇಶದಲ್ಲಿರುವ ಟೂಬ ಸಿಟಿ ಮತ್ತು ಚಿನ್ಲೀ ಸಭಾಗೃಹಗಳು, ನಾವಹೊ ಮೀಸಲು ಪ್ರದೇಶದೊಳಗಿರುವ ಹೋಪೀ ಬುಡಕಟ್ಟು ಜಮೀನಿನಲ್ಲಿರುವ ಕೀಮ್ಸ್ ಕ್ಯಾನ್ಯನ್ನಲ್ಲಿರುವ ಒಂದು ಸಭಾಗೃಹ ಮತ್ತು ಮೀಸಲು ಪ್ರದೇಶದ ಮೇರೆಗಳಲ್ಲಿರುವ ಪಟ್ಟಣಗಳ ಇನ್ನನೇಕ ರಾಜ್ಯ ಸಭಾಗೃಹಗಳು ಸೇರಿವೆ. ಇದರ ಪರಿಣಾಮವೇನಾಗಿದೆ?
ರಾಜ್ಯ ಸಂದೇಶಕ್ಕೆ ಮಿತಿಮೀರಿದ ಪ್ರತಿಕ್ರಿಯೆ
ಕೇಅಂಟದಲ್ಲಿ ರಾಜ್ಯ ಸಭಾಗೃಹವು ಕಟ್ಟಲ್ಪಟ್ಟಂದಿನಿಂದ, ಸತ್ಯಾರಾಧನೆಯ ಈ ಸ್ಥಳದ ಮೇಲೆ ಯೆಹೋವನ ಆಶೀರ್ವಾದವನ್ನು ಸೂಚಿಸುತ್ತ, ಹನ್ನೆರಡಕ್ಕೂ ಹೆಚ್ಚು ಸ್ಥಳಿಕ ಜನರು ದೀಕ್ಷಾಸ್ನಾನ ಹೊಂದಿದ್ದಾರೆ. ಯೆಹೋವನ ಸಾಕ್ಷಿಗಳು ಇಲ್ಲಿ ಖಾಯಂ ಇರುತ್ತಾರೆಂಬುದಕ್ಕೆ ಸಭಾಗೃಹವು ಪುರಾವೆಯನ್ನು ಕೊಟ್ಟು, ಅವರು ಸಾರುವ ರಾಜ್ಯ ಸುವಾರ್ತೆಯಲ್ಲಿ ಭರವಸೆಯನ್ನು ಬೆಳೆಸುತ್ತದೆ. ಇತ್ತೀಚೆಗೆ, ನಾವಹೊ ಭಾಷೆಯಲ್ಲಿ ಪ್ರಥಮ ಸಾರ್ವಜನಿಕ ಬೈಬಲ್ ಭಾಷಣವನ್ನು ಅಲ್ಲಿ ಕೊಡಲಾಯಿತು. ಆ ಸಭೆಯ 40 ಮಂದಿ ಸದಸ್ಯರು, ತಂದೆತ್ತಾಯನದ ಜವಾಬ್ದಾರಿಗಳ ವಿಷಯದಲ್ಲಿ ಕೊಡಲ್ಪಟ್ಟ ಭಾಷಣಕ್ಕೆ 245 ಜನರನ್ನು ಸ್ವಾಗತಿಸಲು ಆನಂದಪಟ್ಟರು. ಎಂಟು ಮಂದಿಯ ಒಂದು ಕುಟುಂಬವು, ಮಾನ್ಯತೆಯ ಹೃದಯಗಳುಳ್ಳವರಾಗಿ ಈ ಭಾಷಣವನ್ನು ಕೇಳಲಿಕ್ಕಾಗಿ, ಬಂದು ಹೋಗಲು ಆರು ತಾಸುಗಳ ಪ್ರಯಾಣವನ್ನು ಮಾಡಿದರು. ಇದು ರಾಜ್ಯ ಸಭಾಗೃಹಕ್ಕೆ ಅವರ ಪ್ರಪ್ರಥಮ ಭೇಟಿಯಾಗಿತ್ತು.
ಯೆಹೋವನು ಒದಗಿಸಿರುವ ಇನ್ನೊಂದು ಉಪಯುಕ್ತ ಸಾಧನವು, ನಾವಹೊ ಭಾಷೆಯಲ್ಲಿ ಭೂಮಿಯ ಮೇಲೆ ಅನಂತ ಜೀವನವನ್ನು ಅನುಭವಿಸಿರಿ! ಎಂಬ ಬ್ರೋಷರಾಗಿದೆ. ವಿಪರೀತ ಜಟಿಲ ಭಾಷೆಯಾದ ನಾವಹೊಗೆ ಆ ಬ್ರೋಷರನ್ನು ಭಾಷಾಂತರಿಸುವುದು ದುಸ್ಸಾಧ್ಯವಾದ ಒಂದು ಪಂಥಾಹ್ವಾನವಾಗಿತ್ತು. ಈ ಬ್ರೋಷರು ರಾಜ್ಯ ಸಂದೇಶವನ್ನು ಸರಿಯಾಗಿ ಅರುಹುತ್ತದೆಂಬುದನ್ನು ಖಾತರಿಮಾಡಿಕೊಳ್ಳಲು ಭಾಷಾಂತರಕಾರರು ಒಟ್ಟು 1,000ಕ್ಕೂ ಹೆಚ್ಚು ತಾಸುಗಳನ್ನು ವ್ಯಯಿಸಿದರು. ಇದು 1995ರ ಅಂತ್ಯಭಾಗದಲ್ಲಿ ಬಿಡುಗಡೆ ಹೊಂದಿದಂದಿನಿಂದ, ಸ್ಥಳಿಕ ಸಾಕ್ಷಿಗಳು ಇದರ ಅನೇಕ ಸಾವಿರ ಪ್ರತಿಗಳನ್ನು ನೀಡಿದ್ದಾರೆ ಮತ್ತು ಪರಿಣಾಮವಾಗಿ, ಸತ್ಯಾನ್ವೇಷಕರೊಂದಿಗೆ ಡಜನುಗಟ್ಟಲೆ ಬೈಬಲ್ ಅಧ್ಯಯನಗಳು ನಡೆಸಲ್ಪಡುತ್ತವೆ.
ರಾಜ್ಯ ಪ್ರಚಾರಕರು ನಾವಹೊ ಭಾಷೆಯನ್ನು ಕಲಿತಂತೆ, ಹೆಚ್ಚೆಚ್ಚಾಗಿ ಆ ಭಾಷೆಯನ್ನು ಶುಶ್ರೂಷೆಯಲ್ಲಿ ಉಪಯೋಗಿಸಲಾಗುತ್ತಿದೆ. ಈ ಪ್ರದೇಶದ ಸಭೆಗಳು ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ನಾವಹೊ ಭಾಷೆಯನ್ನು ಉಪಯೋಗಿಸತೊಡಗಿದ್ದಾರೆ ಮತ್ತು ಪ್ರಚಾರಕರನ್ನು ನಾವಹೊ ಭಾಷೆಯಲ್ಲಿ ತರಬೇತುಗೊಳಿಸಲಿಕ್ಕಾಗಿ ಕ್ಲಾಸುಗಳು ನಡೆಸಲ್ಪಡುತ್ತವೆ. ಇದಕ್ಕೆ ಕೂಡಿಸಿ, ಸ್ಥಳಿಕ ಸಮ್ಮೇಳನಗಳ ಕಾರ್ಯಕ್ರಮವನ್ನೂ ನಾವಹೊ ಭಾಷೆಗೆ ಭಾಷಾಂತರಿಸಲಾಗುತ್ತದೆ. ಈ ಎಲ್ಲ ಪ್ರಯತ್ನಗಳು ಮೀಸಲು ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಪ್ರತಿಕ್ರಿಯೆಗೆ ನಡೆಸುವುದು ಖಂಡಿತ.
ಈ ಇಂಡಿಯನ್ ಮೀಸಲು ಪ್ರದೇಶದಲ್ಲಿ ತೋರಿಬಂದಿರುವ ರಾಜ್ಯ ಫಲಗಳಲ್ಲಿ, ನಮ್ಮ ನಾವಹೊ ಸಹೋದರರು ತೋರಿಸಿರುವ ಅಪ್ಪಟ ಆತ್ಮಿಕ ಗುಣಗಳನ್ನು ಅಲಕ್ಷ್ಯ ಮಾಡಲಾಗುವುದಿಲ್ಲ. ಏಳು ವರ್ಷಗಳಿಂದ, ಜಿಮಿ ಮತ್ತು ಸ್ಯಾಂಡ್ರ, ತಮ್ಮ ಐದು ಮಂದಿ ಮಕ್ಕಳೊಂದಿಗೆ ಸಾಪ್ತಾಹಿಕ ಕೂಟಗಳಿಗೆ ಹಾಜರಾಗುವರೆ ಒಮ್ಮೆಗೆ 120 ಕಿಲೊಮೀಟರುಗಳಷ್ಟು ದೂರದ ಪ್ರಯಾಣ ಮಾಡಿದರು. ಈ ದೀರ್ಘ ಪ್ರಯಾಣಗಳಲ್ಲಿ, ರಾಜ್ಯ ಗೀತೆಗಳನ್ನು ಹಾಡಿದ ಮತ್ತು ಕೂಡಿ ಬೈಬಲ್ ಅಧ್ಯಯನ ನಡೆಸಿದ ಅಚ್ಚುಮೆಚ್ಚಿನ ಸ್ಮರಣೆಗಳು ಈ ಕುಟುಂಬಕ್ಕಿವೆ. ಸತ್ಯಕ್ಕಾಗಿ ಹೆತ್ತವರಿಗಿದ್ದ ಪ್ರೀತಿ ಮತ್ತು ಹುರುಪು, ಯೆಹೋವನ ಸಮರ್ಪಿತ ಸ್ತುತಿಗಾರರಾಗುವುದರಲ್ಲಿ ಅವರ ಮಾದರಿಯನ್ನು ಅನುಸರಿಸುವಂತೆ ಮಕ್ಕಳನ್ನು ಪ್ರಚೋದಿಸಿತು. ಅವರಲ್ಲಿ ನಾಲ್ವರು ಈಗ ಕ್ರಮದ ಪಯನೀಯರರಾಗಿ ಸೇವೆಮಾಡುತ್ತಾರೆ ಮತ್ತು ಜಿಮಿ ಒಬ್ಬ ಹಿರಿಯನಾಗಿರುತ್ತಾನೆ. ಈ ಕುಟುಂಬದ ಆನಂದಕ್ಕೆ ಕೂಡಿಸಿ, ಜಿಮಿಯ ಅಕ್ಕ ಎಲ್ಸಿ, ಇತ್ತೀಚೆಗೆ ದೀಕ್ಷಾಸ್ನಾನಹೊಂದಿದ್ದು, ನಾವಹೊ ಭಾಷೆಯನ್ನು ಮಾತಾಡುವವರಲ್ಲಿಯೇ ಮೊತ್ತಮೊದಲಾಗಿ ದೀಕ್ಷಾಸ್ನಾನ ಪಡೆದುಕೊಂಡವಳಾಗಿ ಪರಿಣಮಿಸಿದಳು.
ಸ್ಥಳಿಕ ಕುರುಬರೂ ಅವರ ಹಿಂಡುಗಳೂ ನಾವಹೊ ಮೀಸಲು ಪ್ರದೇಶವನ್ನು ಅಲಂಕರಿಸುವ ಶಿಲಾ ಸ್ಮಾರಕಗಳಿಗೆ ಗ್ರಾಮಕ ಪ್ರಶಾಂತತೆಯ ಛಾಯೆಯನ್ನು ಕೊಡುತ್ತವೆ. ಬಹಳ ಸಮಯದ ಹಿಂದೆಯೇ ಪ್ರವಾದಿಯಾದ ಯೆಶಾಯನು ಯೆಹೋವನ ಕುರಿತು ಮುಂತಿಳಿಸಿದ್ದು: “ಆತನು ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು, ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು. ಹಾಲು ಕುಡಿಸುವ ಕುರಿಗಳನ್ನು ಮೆಲ್ಲಗೆ ನಡಿಸುವನು.” (ಯೆಶಾಯ 40:11) ಯೆಹೋವನು, ತನ್ನ ಒಳ್ಳೆಯ ಕುರುಬನಾದ ಯೇಸು ಕ್ರಿಸ್ತನ ಮುಖಾಂತರ, ನಾವಹೊ ಮೀಸಲು ಪ್ರದೇಶದಲ್ಲಿ ರಾಜ್ಯದ ಸುವಾರ್ತೆಯನ್ನು ಕೇಳಲು ಮತ್ತು ಆತನ ನಿತ್ಯಾಶೀರ್ವಾದಗಳನ್ನು ಅಂಗೀಕರಿಸಲು ಇಚ್ಛಿಸುವ ಎಲ್ಲರನ್ನು ತನ್ನ ಆತ್ಮಿಕ ಹುಲ್ಲುಗಾವಲಿನೊಳಗೆ ಕೂಡಿಸುತ್ತಿದ್ದಾನೆ.
[ಅಧ್ಯಯನ ಪ್ರಶ್ನೆಗಳು]
a ಅವೇಕ್! ಪತ್ರಿಕೆಯ ಮೇ 8, 1948; ಫೆಬ್ರವರಿ 22, 1952; ಜೂನ್ 22, 1954 ಮತ್ತು ಸೆಪ್ಟೆಂಬರ್ 8, 1996—ಈ ಸಂಚಿಕೆಗಳನ್ನು ನೋಡಿ.
[ಪುಟ 24 ರಲ್ಲಿರುವ ಚಿತ್ರ]
ನಾವಹೊ ಕುರುಬ ಸ್ತ್ರೀ ಸುವಾರ್ತೆಯನ್ನು ಕೇಳುತ್ತಾಳೆ