“ತನಿಖಾತ್ಮಕ ನ್ಯಾಯತೀರ್ಪು” ಬೈಬಲಾಧಾರಿತ ಸಿದ್ಧಾಂತವೊ?
ಅಮೆರಿಕದ ಪೂರ್ವತೀರದ ಸುಮಾರು 50,000 ಮಂದಿಗೆ ಅಕ್ಟೋಬರ್ 22, 1844, ಮಹಾ ನಿರೀಕ್ಷೆಯ ಒಂದು ದಿನವಾಗಿತ್ತು. ಅವರ ಆತ್ಮಿಕ ನಾಯಕನಾಗಿದ್ದ ವಿಲ್ಯಮ್ ಮಿಲರ್, ಅದೇ ದಿನದಂದು ಯೇಸು ಕ್ರಿಸ್ತನು ಹಿಂದಿರುಗಿ ಬರುವನೆಂದು ಹೇಳಿದ್ದನು. ಮಿಲರ್ನ ಹಿಂಬಾಲಕರು ಎಂದು ಕರೆಯಲ್ಪಡುತ್ತಿದ್ದ ಅವರು, ತಮ್ಮ ಕೂಟದ ಸ್ಥಳಗಳಲ್ಲಿ ರಾತ್ರಿಯಾಗುವ ತನಕ ಕಾದರು. ಆದರೆ ಮರುದಿನ ಬೆಳಗ್ಗೆಯಾದರೂ ಕರ್ತನು ಬಂದಿರಲಿಲ್ಲ. ಭ್ರಮನಿರಸನಗೊಂಡ ಅವರು ಮನೆಗೆ ಹಿಂದಿರುಗಿ ಆ ಬಳಿಕ ಆ ದಿನವನ್ನು “ಮಹಾ ಆಶಾಭಂಗ”ವೆಂದು ಕರೆದರು.
ಆದರೆ ಆಶಾಭಂಗವು ಬೇಗನೆ ನಿರೀಕ್ಷೆಗೆ ದಾರಿಮಾಡಿಕೊಟ್ಟಿತು. ಎಲನ್ ಹಾರ್ಮನ್ ಎಂಬ ಯುವತಿಯು, ದೇವರು ದರ್ಶನಗಳ ಮೂಲಕ ಅವರ ಕಾಲಗಣನೆ ಸರಿಯಾಗಿತ್ತೆಂದು ತನಗೆ ತೋರಿಸಿಕೊಟ್ಟಿದ್ದನೆಂದು ಮಿಲರ್ನ ಹಿಂಬಾಲಕರ ಒಂದು ಚಿಕ್ಕ ಗುಂಪಿಗೆ ಮನಗಾಣಿಸಿದಳು. ಆ ದಿನದಂದು, ಒಂದು ಮಹತ್ತ್ವದ ಘಟನೆ ಸಂಭವಿಸಿತೆಂದು, ಕ್ರಿಸ್ತನು ಆಗ “ಸ್ವರ್ಗೀಯ ಪವಿತ್ರಾಲಯದ ಅತಿ ಪವಿತ್ರ ಸ್ಥಳವನ್ನು” ಪ್ರವೇಶಿಸಿದ್ದನೆಂದು ಅವಳು ಅಭಿಪ್ರಯಿಸಿದಳು.
ಒಂದು ದಶಕಕ್ಕೂ ಹೆಚ್ಚು ಸಮಯದ ಬಳಿಕ, ಆ್ಯಡ್ವೆಂಟಿಸ್ಟ್ ಸುವಾರ್ತಿಕನಾದ ಜೇಮ್ಸ್ ವೈಟ್ (ಇವನು ಎಲನ್ ಹಾರ್ಮನಳನ್ನು ಮದುವೆಯಾಗಿದ್ದನು), ಅಕ್ಟೋಬರ್ 1844ರಿಂದ ಕ್ರಿಸ್ತನ ಕೆಲಸದ ಸ್ಥಿತಿಯನ್ನು ವರ್ಣಿಸಲು ಒಂದು ವಾಕ್ಸರಣಿಯನ್ನು ರಚಿಸಿದನು. ಜನವರಿ 29, 1857ರ ರಿವ್ಯೂ ಆ್ಯಂಡ್ ಹೆರಲ್ಡ್ನಲ್ಲಿ, ಯೇಸು ಒಂದು “ತನಿಖಾತ್ಮಕ ನ್ಯಾಯತೀರ್ಪ”ನ್ನು ಪ್ರಾರಂಭಿಸಿದ್ದನೆಂದು ವೈಟ್ ಹೇಳಿದನು. ಮತ್ತು ಇದು, ತಮ್ಮನ್ನು ಸೆವೆಂತ್-ಡೇ ಆ್ಯಡ್ವೆಂಟಿಸ್ಟ್ಸ್ ಎಂದು ಕರೆದುಕೊಳ್ಳುವ ಸುಮಾರು 70 ಲಕ್ಷ ಮಂದಿಯ ಮೂಲನಂಬಿಕೆಯಾಗಿ ಉಳಿದಿದೆ.
ಆದರೂ, ಸೆವೆಂತ್-ಡೇ ಆ್ಯಡ್ವೆಂಟಿಸ್ಟ್ (ಎಸ್ಡಿಎ) ಚರ್ಚಿನ ಕೆಲವು ಗಣ್ಯ ವಿದ್ವಾಂಸರು, ಈ “ತನಿಖಾತ್ಮಕ ನ್ಯಾಯತೀರ್ಪು” ಬೈಬಲಾಧಾರಿತವಾದ ಒಂದು ಸಿದ್ಧಾಂತವೊ ಎಂದು ಕುತೂಹಲ ಪಡುತ್ತಿದ್ದಾರೆ. ಆದರೆ ಅವರಿಗೆ ಇದರ ವಿಷಯದಲ್ಲಿ ಪುನರಾಲೋಚನೆಯೇಕೆ? ನೀವು ಒಬ್ಬ ಸೆವೆಂತ್-ಡೇ ಆ್ಯಡ್ವೆಂಟಿಸ್ಟ್ ಆಗಿರುತ್ತಿದ್ದಲ್ಲಿ ಈ ಪ್ರಶ್ನೆಯು ನಿಮ್ಮನ್ನು ಬಾಧಿಸೀತು. ಆದರೆ ಪ್ರಥಮವಾಗಿ, “ತನಿಖಾತ್ಮಕ ನ್ಯಾಯತೀರ್ಪು” ಎಂದರೇನು?
ಅದೇನು?
ಈ ಸಿದ್ಧಾಂತವನ್ನು ಬೆಂಬಲಿಸಲು ಉದ್ಧರಿಸಲ್ಪಡುವ ಪ್ರಧಾನ ವಚನವು ದಾನಿಯೇಲ 8:14. ಅದನ್ನು ಹೀಗೆ ಓದಲಾಗುತ್ತದೆ: “ಅವನು ನನಗೆ ಹೇಳಿದ್ದು, ಎರಡು ಸಾವಿರದ ಮುನ್ನೂರು ದಿನಗಳು; ಬಳಿಕ ಪವಿತ್ರಾಲಯವು ಶುದ್ಧಮಾಡಲ್ಪಡುವುದು.” (ಕಿಂಗ್ ಜೇಮ್ಸ್ ವರ್ಷನ್) “ಬಳಿಕ ಪವಿತ್ರಾಲಯವು ಶುದ್ಧಮಾಡಲ್ಪಡುವುದು” ಎಂಬ ವಾಕ್ಸರಣಿಯ ಕಾರಣ, ಅನೇಕ ಆ್ಯಡ್ವೆಂಟಿಸ್ಟರು ಈ ವಚನವನ್ನು ಯಾಜಕಕಾಂಡ 16ನೆಯ ಅಧ್ಯಾಯಕ್ಕೆ ಜೋಡಿಸುತ್ತಾರೆ. ಅದು ಪಾಪಪರಿಹಾರಕ ದಿನದಲ್ಲಿ ಯೆಹೂದಿ ಮಹಾಯಾಜಕನು ಪವಿತ್ರಾಲಯವನ್ನು ಶುಚಿಗೊಳಿಸುವುದನ್ನು ವರ್ಣಿಸುತ್ತದೆ. ಅವರು ದಾನಿಯೇಲನ ಮಾತುಗಳನ್ನು, ಸ್ವರ್ಗದಲ್ಲಿ ಉಚ್ಚ ಮಹಾಯಾಜಕನಾಗಿರುವ ಯೇಸುವನ್ನು ವರ್ಣಿಸುವ ಇಬ್ರಿಯ 9ನೆಯ ಅಧ್ಯಾಯಕ್ಕೂ ಜೋಡಿಸುತ್ತಾರೆ. ಈ ತರ್ಕಸರಣಿಯು “ಪ್ರೂಫ್-ಟೆಕ್ಸ್ಟ್” ವಿಧಾನದ ಮೇಲೆ ಆಧಾರಗೊಂಡಿದೆಯೆಂದು ಎಸ್ಡಿಎ ವಿದ್ವಾಂಸರೊಬ್ಬರು ಹೇಳುತ್ತಾರೆ. ಒಬ್ಬ ವ್ಯಕ್ತಿಯು “ದಾನಿ. 8:14ರ ಪವಿತ್ರಾಲಯದಂತಹ ಒಂದು ಪದವನ್ನು, ಯಾಜಕ. 16ರಲ್ಲಿಯೂ, ಅದೇ ಪದವನ್ನು ಇಬ್ರಿ. 7, 8, 9ರಲ್ಲಿಯೂ” ಕಂಡುಕೊಳ್ಳುತ್ತಾನೆ ಮತ್ತು “ಅವು ಒಂದೇ ವಿಚಾರದ ಕುರಿತಾಗಿ ಮಾತಾಡುತ್ತವೆ” ಎಂಬ ನಿರ್ಧಾರಕ್ಕೆ ಬರುತ್ತಾನೆ.
ಆ್ಯಡ್ವೆಂಟಿಸ್ಟರು ಹೀಗೆ ತರ್ಕಿಸುತ್ತಾರೆ: ಪುರಾತನ ಇಸ್ರಾಯೇಲಿನ ಯಾಜಕರು, ದೇವಾಲಯದಲ್ಲಿ ಪವಿತ್ರವೆಂದು ಕರೆಯಲ್ಪಡುವ ವಿಭಾಗದಲ್ಲಿ ಪ್ರತಿದಿನ ಸೇವೆ ಮಾಡಿದರು. ಇದರಿಂದಾಗಿ ಪಾಪಗಳ ಕ್ಷಮಾಪಣೆಯಾಗುತ್ತಿತ್ತು. ದೋಷಪರಿಹಾರಕ ದಿನದಂದು, ಮಹಾಯಾಜಕನು ಅತಿ ಪವಿತ್ರ ಸ್ಥಳ (ದೇವಾಲಯದ ಅತಿ ಒಳಗಿನ ಕೋಣೆ)ದಲ್ಲಿ ಒಂದು ವಾರ್ಷಿಕ ಸೇವೆಯನ್ನು ಸಲ್ಲಿಸಿದನು. ಇದರಿಂದ ಪಾಪಗಳು ತೊಡೆದುಹಾಕಲ್ಪಟ್ಟವು. ಸ್ವರ್ಗದಲ್ಲಿ ಕ್ರಿಸ್ತನ ಯಾಜಕ ಶುಶ್ರೂಷೆಯಲ್ಲಿ ಎರಡು ಭಾಗಗಳಿವೆಯೆಂದು ಅವರು ತೀರ್ಮಾನಿಸುತ್ತಾರೆ. ಇದರಲ್ಲಿ ಒಂದನೆಯದು ಒಂದನೆಯ ಶತಮಾನದ ಅವನ ದಿವಾರೋಹಣದಲ್ಲಿ ಮೊದಲ್ಗೊಂಡು 1844ರಲ್ಲಿ ಅಂತ್ಯವಾಗಿ ಪಾಪಗಳ ಕ್ಷಮೆಯಲ್ಲಿ ಫಲಿಸಿತು. ಎರಡನೆಯ ಭಾಗವು ಅಥವಾ “ನ್ಯಾಯತೀರ್ಪಿನ ಭಾಗವು,” ಅಕ್ಟೋಬರ್ 22, 1844ರಲ್ಲಿ ಆರಂಭಗೊಂಡು, ಇನ್ನೂ ಮುಂದುವರಿಯುತ್ತಿದ್ದು, ಪಾಪಗಳ ತೊಡೆದುಹಾಕುವಿಕೆಯಲ್ಲಿ ಪರಿಣಮಿಸುತ್ತದೆ. ಇದು ಹೇಗೆ ಸಾಧಿಸಲ್ಪಡುತ್ತದೆ?
ಯೇಸು 1844ರಿಂದ ವಿಶ್ವಾಸಿಗಳೆಂದು ಹೇಳಿಕೊಳ್ಳುವವರೆಲ್ಲರ (ಪ್ರಥಮವಾಗಿ ಮೃತರ, ಆ ಬಳಿಕ ಜೀವಿತರ) ಜೀವನ ದಾಖಲೆಗಳನ್ನು—ಅವರು ನಿತ್ಯಜೀವಕ್ಕೆ ಅರ್ಹರೊ ಎಂಬುದನ್ನು ನಿರ್ಧರಿಸಲಿಕ್ಕಾಗಿ—ತನಿಖೆ ಮಾಡುತ್ತಿದ್ದಾನೆ ಎಂದು ಹೇಳಲಾಗುತ್ತದೆ. ಈ ಪರೀಕ್ಷೆಯೇ “ತನಿಖಾತ್ಮಕ ನ್ಯಾಯತೀರ್ಪು.” ಜನರಿಗೆ ಹೀಗೆ ನ್ಯಾಯತೀರಿಸಿದ ಮೇಲೆ, ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರ ಪಾಪಗಳು ದಾಖಲೆ ಪುಸ್ತಕಗಳಿಂದ ಅಳಿಸಿಹಾಕಲ್ಪಡುವುವು. ಆದರೆ, ಉತ್ತೀರ್ಣರಾಗದವರ ‘ಹೆಸರುಗಳು ಜೀವಪುಸ್ತಕದಿಂದ ಅಳಿಸಿಹಾಕಲ್ಪಡುವುವು’ ಎಂದು ಎಲನ್ ವೈಟ್ ವಿವರಿಸಿದಳು. ಹೀಗೆ, “ಎಲ್ಲರ ಅದೃಷ್ಟವು ಜೀವಕ್ಕಾಗಿ ಅಥವಾ ಮರಣಕ್ಕಾಗಿ ನಿರ್ಣಯಿಸಲ್ಪಟ್ಟಿರುವುದು.” ಆ ಹಂತದಲ್ಲಿ, ಸ್ವರ್ಗೀಯ ಪವಿತ್ರಾಲಯವು ಶುದ್ಧಗೊಳಿಸಲ್ಪಡುತ್ತದೆ ಮತ್ತು ದಾನಿಯೇಲ 8:14 ನೆರವೇರುತ್ತದೆ. ಸೆವೆಂತ್-ಡೇ ಆ್ಯಡ್ವೆಂಟಿಸ್ಟರು ಹಾಗೆ ಬೋಧಿಸುತ್ತಾರೆ. ಆದರೆ ಎಸ್ಡಿಎ ಪ್ರಕಾಶನವಾದ ಆ್ಯಡ್ವೆಂಟಿಸ್ಟ್ ರಿವ್ಯೂ ಒಪ್ಪಿಕೊಳ್ಳುವುದು: “ತನಿಖಾತ್ಮಕ ನ್ಯಾಯತೀರ್ಪು ಎಂಬ ವಾಕ್ಸರಣಿ ಬೈಬಲಿನಲ್ಲಿ ಕಂಡುಬರುವುದಿಲ್ಲ.”
ಭಾಷಿಕ ಸರಣಿಯ ಲೋಪ
ಈ ಬೋಧನೆಯು ಕೆಲವು ಆ್ಯಡ್ವೆಂಟಿಸ್ಟರನ್ನು ಕಳವಳಗೊಳಿಸಿದೆ. ಒಬ್ಬ ಪ್ರೇಕ್ಷಕನು ಹೇಳುವುದು: “ನಮ್ಮ ಸಾಂಪ್ರದಾಯಿಕ ತನಿಖಾತ್ಮಕ ನ್ಯಾಯತೀರ್ಪಿನ ಬೋಧನೆಯ ಕುರಿತು ಚಿಂತಿಸಿದಾಗ ನಮ್ಮ ನಿಷ್ಠಾವಂತ ನಾಯಕರು ಸಂಕಟಪಟ್ಟಿದ್ದಾರೆಂದು ಇತಿಹಾಸವು ತೋರಿಸುತ್ತದೆ.” ಇತ್ತೀಚಿನ ವರುಷಗಳಲ್ಲಿ, ವಿದ್ವಾಂಸರು “ನಮ್ಮ ರೂಢಿಯ ಪವಿತ್ರಾಲಯ ವಿವರಣೆಯಲ್ಲಿ ಅನೇಕ ಆಧಾರ ಸ್ತಂಭಗಳಾದ ವಿಷಯಗಳನ್ನು ಪ್ರಶ್ನಿಸ”ತೊಡಗಿದಾಗ ಆ ಸಂಕಟವು ಸಂದೇಹವಾಗಿ ಮಾರ್ಪಟ್ಟಿದೆ ಎಂದು ಅವನು ಕೂಡಿಸಿ ಹೇಳಿದನು. ಈಗ ನಾವು ಅವುಗಳಲ್ಲಿ ಎರಡನ್ನು ಪರೀಕ್ಷಿಸೋಣ.
ಆಧಾರಸ್ತಂಭ ಒಂದು: ದಾನಿಯೇಲ 8ನೆಯ ಅಧ್ಯಾಯಕ್ಕೆ ಯಾಜಕಕಾಂಡ 16ನೆಯ ಅಧ್ಯಾಯದೊಂದಿಗೆ ಸಂಬಂಧವಿದೆ. ಈ ಪೂರ್ವಭಾವನೆಯು ಎರಡು ಮುಖ್ಯ ಸಮಸ್ಯೆಗಳಿಂದಾಗಿ—ಭಾಷೆ ಮತ್ತು ಪೂರ್ವೋತ್ತರ ಸಂದರ್ಭ—ದುರ್ಬಲಗೊಳಿಸಲ್ಪಟ್ಟಿದೆ. ಪ್ರಥಮವಾಗಿ, ಭಾಷೆಯನ್ನು ಪರಿಗಣಿಸಿರಿ. ದಾನಿಯೇಲ 8ನೆಯ ಅಧ್ಯಾಯದಲ್ಲಿರುವ ‘ಶುದ್ಧಗೊಳಿಸಲ್ಪಟ್ಟ ಪವಿತ್ರಾಲಯ’ವು ಯಾಜಕಕಾಂಡ 16ನೆಯ ಅಧ್ಯಾಯದ ‘ಶುದ್ಧಗೊಳಿಸಲ್ಪಟ್ಟ ಪವಿತ್ರಾಲಯ’ದ ಸೂಚಿತರೂಪವಾಗಿದೆಯೆಂದು ಆ್ಯಡ್ವೆಂಟಿಸ್ಟರು ನಂಬುತ್ತಾರೆ. ಕಿಂಗ್ ಜೇಮ್ಸ್ ವರ್ಷನ್ನ “ಶುದ್ಧಗೊಳಿಸಲ್ಪಟ್ಟ” ಎಂಬ ವಾಕ್ಸರಣಿಯು, ದಾನಿಯೇಲ 8:14ರಲ್ಲಿ ಉಪಯೋಗಿಸಿರುವ ಟ್ಸಡಾಕ್ (“ನೀತಿವಂತನಾಗಿರುವ” ಎಂದು ಅರ್ಥ) ಎಂಬ ಹೀಬ್ರು ಕ್ರಿಯಾಪದದ ಒಂದು ರೂಪದ ತಪ್ಪು ಭಾಷಾಂತರವೆಂದು ಭಾಷಾಂತರಕಾರರು ಕಂಡುಹಿಡಿಯುವ ತನಕ, ಈ ಹೋಲಿಕೆಯು ಅಂಗೀಕಾರಾರ್ಹವೆಂದು ತೋರಿತು. ದೇವತಾಶಾಸ್ತ್ರದ ಪ್ರೊಫೆಸರ್ ಆ್ಯಂಥನಿ ಎ. ಹೋಕಮ ಗಮನಿಸುವುದು: “ಆ ಪದವು ಶುದ್ಧಗೊಳಿಸಲ್ಪಡು ಎಂದು ಭಾಷಾಂತರಗೊಂಡದ್ದು ವಿಷಾದಕರ, ಏಕೆಂದರೆ ಸಾಮಾನ್ಯವಾಗಿ ಶುದ್ಧಗೊಳಿಸಲ್ಪಟ್ಟದ್ದು [ಟಾಹೆರ್] ಎಂಬುದಾಗಿ ಭಾಷಾಂತರಿಸಲ್ಪಡುವ ಹೀಬ್ರು ಕ್ರಿಯಾಪದವನ್ನು ಇಲ್ಲಿ ಉಪಯೋಗಿಸಿಯೇ ಇಲ್ಲ.”a ಇದನ್ನು ಯಾಜಕಕಾಂಡ 16ನೆಯ ಅಧ್ಯಾಯದಲ್ಲಿ ಉಪಯೋಗಿಸಲಾಗಿದೆ. ಅಲ್ಲಿ ಕಿಂಗ್ ಜೇಮ್ಸ್ ವರ್ಷನ್, ಟಾಹೆರ್ನ ರೂಪಗಳನ್ನು “ಶುದ್ಧಮಾಡು” ಮತ್ತು “ಶುದ್ಧವಾಗು” ಎಂದು ಭಾಷಾಂತರಿಸುತ್ತದೆ. (ಯಾಜಕಕಾಂಡ 16:19, 30) ಆದಕಾರಣ, ಡಾ. ಹೋಕಮ ಸರಿಯಾಗಿ ತೀರ್ಮಾನಿಸುವುದು: “ದೋಷಪರಿಹಾರಕ ದಿನದಲ್ಲಿ ಮಾಡುತ್ತಿದ್ದಂತಹ ಶುದ್ಧಗೊಳಿಸುವಿಕೆಯನ್ನು ದಾನಿಯೇಲನು ಅರ್ಥೈಸುತ್ತಿದ್ದಿದ್ದರೆ, ಅವನು ಟ್ಸಡಾಕ್ [ಟ್ಸಧಾಕ್]ನ ಬದಲಿಗೆ ಟಾಹೀರ್ [ಟಾಹೆರ್] ಪದವನ್ನು ಉಪಯೋಗಿಸುತ್ತಿದ್ದನು.” ಆದರೂ, ಯಾಜಕಕಾಂಡದಲ್ಲಿ ಟ್ಸಧಾಕ್ ಪದವು ಕಂಡುಬರುವುದಿಲ್ಲ ಮತ್ತು ದಾನಿಯೇಲ ಪುಸ್ತಕದಲ್ಲಿ ಟಾಹೆರ್ ಪದವು ಕಂಡುಬರುವುದಿಲ್ಲ. ಈ ಭಾಷಿಕ ಸರಣಿ ಲೋಪವಾಗಿರುತ್ತದೆ.
ಪೂರ್ವೋತ್ತರ ಸಂದರ್ಭವು ಏನು ತಿಳಿಸುತ್ತದೆ?
ಈಗ ಪೂರ್ವೋತ್ತರ ಸಂದರ್ಭವನ್ನು ಪರಿಗಣಿಸಿರಿ. ದಾನಿಯೇಲ 8:14 “ಒಂದು ಸಂದರ್ಭೋಚಿತ ದ್ವೀಪ”ವೆಂದೂ ಅದಕ್ಕೆ ಹಿಂದಿನ ವಚನಗಳೊಂದಿಗೆ ಯಾವ ಸಂಬಂಧವೂ ಇಲ್ಲವೆಂದೂ ಆ್ಯಡ್ವೆಂಟಿಸ್ಟರ ನಂಬಿಕೆ. ಆದರೆ ಇದರ ಜೊತೆಗಿರುವ “ದಾನಿಯೇಲ 8:14 ಪೂರ್ವೋತ್ತರ ಸಂದರ್ಭದಲ್ಲಿ” ಎಂಬ ಶಿರೋನಾಮದ ರೇಖಾಚೌಕದಲ್ಲಿ, ದಾನಿಯೇಲ 8:9-14ನ್ನು ನೀವು ಓದುವಾಗ ನಿಮಗೆ ಹಾಗೆನಿಸುತ್ತದೊ? ಅಲ್ಲಿ, 9ನೆಯ ವಚನವು ಆಕ್ರಮಣಕಾರನಾದ ಒಂದು ಚಿಕ್ಕ ಕೊಂಬನ್ನು ಗುರುತಿಸುತ್ತದೆ. ಈ ಆಕ್ರಮಣಕಾರನು ಪವಿತ್ರಾಲಯವನ್ನು ಆಕ್ರಮಿಸುವನೆಂದು 10-12ನೆಯ ವಚನಗಳು ತಿಳಿಯಪಡಿಸುತ್ತವೆ. ಈ ಆಕ್ರಮಣವು “ಎಷ್ಟು ಕಾಲ ನಡೆಯುವದು” ಎಂದು 13ನೆಯ ವಚನವು ಕೇಳುತ್ತದೆ. ಮತ್ತು 14ನೆಯ ವಚನವು ಉತ್ತರಿಸುವುದು: “ಉದಯಾಸ್ತಮಾನಗಳ ಎರಡು ಸಾವಿರದ ಮುನ್ನೂರರ ವರೆಗೆ ನಡೆಯುವವು; ಅನಂತರ ಪವಿತ್ರಾಲಯಕ್ಕೆ ಪುನಃ ನ್ಯಾಯಸ್ಥಾಪನೆಯಾಗುವದು.” ವಚನ 13 ಎಬ್ಬಿಸುವ ಪ್ರಶ್ನೆಗೆ 14ನೆಯ ವಚನವು ಉತ್ತರಿಸುತ್ತದೆಂಬುದು ಸ್ಪಷ್ಟ. ದೇವತಾಶಾಸ್ತ್ರಜ್ಞ ಡೆಸ್ಮಂಡ್ ಫೋರ್ಡ್ ಹೇಳುವುದು: “ದಾನಿ. 8:14ನ್ನು ಈ ಕರೆ [“ಎಷ್ಟು ಕಾಲ?” ವಚನ 13]ಯಿಂದ ಬೇರ್ಪಡಿಸುವುದು, ವಿವರಣಾತ್ಮಕವಾಗಿ ಲಂಗರವಿಲ್ಲದೆ ಸಮುದ್ರದಲ್ಲಿರುವ ಹಾಗೆ.”b
ಆ ಪೂರ್ವೋತ್ತರ ದಿಂದ ಆ್ಯಡ್ವೆಂಟಿಸ್ಟರು 14ನೆಯ ವಚನವನ್ನು ಬೇರ್ಪಡಿಸುವುದೇಕೆ? ಪೇಚಾಟಕ್ಕೊಳಪಡುವ ತೀರ್ಮಾನಕ್ಕೆ ಬರುವುದನ್ನು ತಪ್ಪಿಸಲಿಕ್ಕಾಗಿಯೇ. ವಚನ 14ರಲ್ಲಿ ಪ್ರಸ್ತಾಪಿಸಲಾಗಿರುವ ಪವಿತ್ರಾಲಯದ ಹೊಲಸುಮಾಡುವಿಕೆಯನ್ನು, ಪೂರ್ವೋತ್ತರ ವು ಆ ಚಿಕ್ಕ ಕೊಂಬಿನ ಚಟುವಟಿಕೆಗಳ ಮೇಲೆ ಹೇರುತ್ತದೆ. ಆದರೆ, “ತನಿಖಾತ್ಮಕ ನ್ಯಾಯತೀರ್ಪು” ಸಿದ್ಧಾಂತವು, ಪವಿತ್ರಾಲಯದ ಹೊಲಸುಮಾಡುವಿಕೆಯನ್ನು ಕ್ರಿಸ್ತನ ಚಟುವಟಿಕೆಗಳ ಮೇಲೆ ಆರೋಪಿಸುತ್ತದೆ. ವಿಶ್ವಾಸಿಗಳ ಪಾಪಗಳನ್ನು ಅವನು ಸ್ವರ್ಗೀಯ ಪವಿತ್ರಾಲಯಕ್ಕೆ ಸ್ಥಳಾಂತರಿಸುತ್ತಾನೆಂದು ಹೇಳಲಾಗುತ್ತದೆ. ಹಾಗಾದರೆ, ಆ್ಯಡ್ವೆಂಟಿಸ್ಟರು ಈ ಸಿದ್ಧಾಂತವನ್ನೂ ಅದರ ಪೂರ್ವೋತ್ತರ ವನ್ನೂ ಅಂಗೀಕರಿಸುವಲ್ಲಿ ಏನು ಸಂಭವಿಸೀತು? ಒಬ್ಬ ಸೆವೆಂತ್ ಡೇ ಆ್ಯಡ್ವೆಂಟಿಸ್ಟರೂ, ಎಸ್ಡಿಎ ಬೈಬಲ್ ಕಾಮೆಂಟರಿಯ ಮಾಜಿ ಜೊತೆ ಸಂಪಾದಕರೂ ಆಗಿದ್ದ ಡಾ. ರೇಮಂಡ್ ಎಫ್. ಕಾಟ್ರಲ್ ಬರೆಯುವುದು: “ಎಸ್ಡಿಎ ಅನುವಾದವು ದಾನಿಯೇಲ 8:14ನ್ನು ಪೂರ್ವೋತ್ತರ ಸಂದರ್ಭದಂತೆ ಪರೀಕ್ಷಿಸುತ್ತದೆಂದು ನಮಗೆ ನಾವೇ ನಟಿಸಿಕೊಳ್ಳುವುದು, ಆ ಚಿಕ್ಕ ಕೊಂಬನ್ನು ಕ್ರಿಸ್ತನೆಂದು ಗುರುತಿಸಿದಂತೆ.” ಡಾ. ಕಾಟ್ರಲ್ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು: “ಪೂರ್ವೋತ್ತರ ಸಂದರ್ಭ ಮತ್ತು ಆ್ಯಡ್ವೆಂಟಿಸ್ಟರ ಅನುವಾದ—ಇವೆರಡನ್ನೂ ನಾವು ಹೊಂದಿಸಸಾಧ್ಯವಿಲ್ಲ.” ಆದಕಾರಣ, ಈ “ತನಿಖಾತ್ಮಕ ನ್ಯಾಯತೀರ್ಪಿ”ನ ವಿಷಯದಲ್ಲಿ ಆ್ಯಡ್ವೆಂಟಿಸ್ಟ್ ಚರ್ಚಿಗೆ ಒಂದು ಆಯ್ಕೆಯನ್ನು ಮಾಡಲೇಬೇಕಾಯಿತು—ಸಿದ್ಧಾಂತವನ್ನು ಇಲ್ಲವೆ ದಾನಿಯೇಲ 8:14ರ ಪೂರ್ವೋತ್ತರ ಸಂದರ್ಭವನ್ನು ಸ್ವೀಕರಿಸುವುದು. ಆದರೆ ಅಸಂತೋಷಕರವಾಗಿ, ಆ ಚರ್ಚು, ಮೊದಲನೆಯದನ್ನು ಸ್ವೀಕರಿಸಿ ಎರಡನೆಯದನ್ನು ಬಿಟ್ಟುಬಿಟ್ಟಿತು. ತಿಳಿವಳಿಕೆಯಿರುವ ಬೈಬಲ್ ವಿದ್ಯಾರ್ಥಿಗಳು ಆ್ಯಡ್ವೆಂಟಿಸ್ಟರನ್ನು, “ಯಾವುದನ್ನು ವಚನದಿಂದ ಸೆಳೆಯ”ಸಾಧ್ಯವಿಲ್ಲವೊ ಅದನ್ನು “ವಚನದಲ್ಲಿ ಊಹಿಸುವುದಕ್ಕೆ” ದೂರುವುದು ಆಶ್ಚರ್ಯವಲ್ಲವೆಂದು ಡಾ. ಕಾಟ್ರಲ್ ಹೇಳುತ್ತಾರೆ!
ಡಾ. ಕಾಟ್ರಲ್ 1967ರಲ್ಲಿ ದಾನಿಯೇಲ ಪುಸ್ತಕದ ಮೇಲೆ ಒಂದು ಸಬ್ಬತ್ ಶಾಲಾ ಪಾಠವನ್ನು ತಯಾರಿಸಿದರು. ಇದನ್ನು ಲೋಕವ್ಯಾಪಕವಾಗಿ ಎಸ್ಡಿಎ ಚರ್ಚುಗಳಿಗೆ ಕಳುಹಿಸಲಾಯಿತು. ಅದರಲ್ಲಿ, ದಾನಿಯೇಲ 8:14 ಅದರ ಪೂರ್ವೋತ್ತರ ಸಂದರ್ಭಕ್ಕೆ ನಿಶ್ಚಯವಾಗಿ ಸಂಬಂಧಿತವಾಗಿದೆಯೆಂದೂ ಅಲ್ಲಿ ಹೇಳಿರುವ ‘ಶುದ್ಧಮಾಡುವಿಕೆ’ ವಿಶ್ವಾಸಿಗಳಿಗೆ ಅನ್ವಯಿಸುವುದಿಲ್ಲವೆಂದೂ ಅದು ಕಲಿಸಿತು. ಗಮನಾರ್ಹವಾಗಿ, ಆ ಪಾಠವು “ತನಿಖಾತ್ಮಕ ನ್ಯಾಯತೀರ್ಪಿ”ನ ಕುರಿತ ಯಾವುದೇ ಹೇಳಿಕೆಯನ್ನು ಬಿಟ್ಟುಬಿಡುತ್ತದೆ.
ಕೆಲವು ಗಮನಾರ್ಹ ಉತ್ತರಗಳು
ಈ ಆಧಾರಸ್ತಂಭವು “ತನಿಖಾತ್ಮಕ ನ್ಯಾಯತೀರ್ಪು” ಸಿದ್ಧಾಂತವನ್ನು ಆಧಾರಿಸಲು ತೀರ ಅಶಕ್ತವಾಗಿದೆ ಎಂಬ ಅರಿವು ಆ್ಯಡ್ವೆಂಟಿಸ್ಟರಲ್ಲಿ ಎಷ್ಟು ವ್ಯಾಪಕವಾಗಿದೆ? ‘ದಾನಿಯೇಲ ಅಧ್ಯಾಯ 8 ಮತ್ತು ಯಾಜಕಕಾಂಡ ಅಧ್ಯಾಯ 16ರ ನಡುವೆ ಇರುವ ಸಂಬಂಧಕ್ಕೆ ನೀವು ಯಾವ ಭಾಷಿಕ ಇಲ್ಲವೆ ಸಂದರ್ಭೋಚಿತ ಕಾರಣಗಳನ್ನು ಕೊಡಬಲ್ಲಿರಿ?’ ಎಂದು, ಡಾ. ಕಾಟ್ರಲ್ 27 ಪ್ರಮುಖ ಆ್ಯಡ್ವೆಂಟಿಸ್ಟ್ ದೇವತಾಶಾಸ್ತ್ರಜ್ಞರನ್ನು ಕೇಳಿದರು. ಅವರ ಪ್ರತ್ಯುತ್ತರವೇನಾಗಿತ್ತು?
“ದಾನಿ. 8:14ನ್ನು ಸೂಚಿತರೂಪದ ದೋಷಪರಿಹಾರಕ ದಿನ ಮತ್ತು ತನಿಖಾತ್ಮಕ ನ್ಯಾಯತೀರ್ಪಿಗೆ ಅನ್ವಯಿಸಲು ಯಾವುದೇ ಭಾಷಿಕ ಅಥವಾ ಸಂದರ್ಭೋಚಿತ ಕಾರಣಗಳಿಲ್ಲವೆಂಬುದನ್ನು ಇಪ್ಪತ್ತೇಳು ಮಂದಿಯೂ ದೃಢೀಕರಿಸಿದರು.” ಅವರು ‘ಈ ಸಂಬಂಧವನ್ನು ಕಲ್ಪಿಸಲು ನಿಮಗೆ ಇನ್ನಾವ ಕಾರಣಗಳಾದರೂ ಇವೆಯೊ?’ ಎಂದು ಅವರನ್ನು ಪ್ರಶ್ನಿಸಿದರು. ಹೆಚ್ಚಿನ ಆ್ಯಡ್ವೆಂಟಿಸ್ಟ್ ವಿದ್ವಾಂಸರು ತಮಗೆ ಇನ್ನಾವ ಕಾರಣಗಳೂ ಇಲ್ಲವೆಂದರು. ಎಲನ್ ವೈಟ್ ಈ ಸಂಬಂಧವನ್ನು ಕಲ್ಪಿಸಿದ್ದರಿಂದ ತಾವೂ ಕಲ್ಪಿಸಿದೆವೆಂದು ಐವರು ಉತ್ತರಿಸಿದರು. ಮತ್ತು ಭಾಷಾಂತರದಲ್ಲಿ ಆದ “ಶುಭಸೂಚಕ ಅವಕಾಶ”ದ ಮೇಲೆ ತಾವು ಈ ಸಿದ್ಧಾಂತವನ್ನು ಆಧಾರಿಸಿದ್ದೇವೆಂದು ಇಬ್ಬರು ಹೇಳಿದರು. ದೇವತಾಶಾಸ್ತ್ರಜ್ಞ ಫೋರ್ಡ್ ಹೇಳುವುದು: “ನಮ್ಮ ಪಂಡಿತರಲ್ಲಿ ಅಗ್ರರಿಂದ ನೀಡಲ್ಪಟ್ಟ ಇಂತಹ ತೀರ್ಮಾನಗಳು, ದಾನಿ. 8:14ರ ಮೇಲಿನ ನಮ್ಮ ಸಾಂಪ್ರದಾಯಿಕ ಬೋಧನೆಯು ಕಾರ್ಯತಃ ಅಸಮರ್ಥನೀಯವೆಂದು ಕಂಠೋಕ್ತವಾಗಿ ಹೇಳುತ್ತವೆ.”
ಇಬ್ರಿಯ ಪುಸ್ತಕದಿಂದ ಯಾವುದೇ ಸಹಾಯವಿದೆಯೆ?
ಆಧಾರಸ್ತಂಭ ಎರಡು: ದಾನಿಯೇಲ 8:14 ಇಬ್ರಿಯ ಅಧ್ಯಾಯ 9ಕ್ಕೆ ಸಂಬಂಧಿಸಿದೆ. “ದಾನಿ. 8:14ನ್ನು ವಿವರಿಸುವಾಗ ನಮ್ಮ ಆದಿ ಕೃತಿಗಳೆಲ್ಲ ಇಬ್ರಿ. 9ನ್ನು ತುಂಬ ಉಪಯೋಗಿಸುತ್ತವೆ” ಎನ್ನುತ್ತಾರೆ ದೇವತಾಶಾಸ್ತ್ರಜ್ಞ ಫೋರ್ಡ್. 1844ರಲ್ಲಿನ “ಮಹಾ ಆಶಾಭಂಗ”ದ ಬಳಿಕ ಈ ಸಂಬಂಧವು ಹುಟ್ಟಿತು. ಮಾರ್ಗದರ್ಶನೆಯನ್ನು ಹುಡುಕುತ್ತ, ಮಿಲರ್ನ ಹಿಂಬಾಲಕ ಹೈರಮ್ ಎಡ್ಸನ್ ತನ್ನ ಬೈಬಲನ್ನು ಮೇಜಿನ ಮೇಲೆ, ಅದು ಬಿದ್ದು ತೆರೆಯುವಂತೆ ಬೀಳಿಸಿದನು. ಫಲಿತಾಂಶವೇನು? ಇಬ್ರಿಯ 8 ಮತ್ತು 9ನೆಯ ಅಧ್ಯಾಯಗಳು ಅವನ ಎದುರಿಗಿದ್ದವು. ಫೋರ್ಡ್ ಹೇಳುವುದು: “ಈ ಅಧ್ಯಾಯಗಳು 1844 ಮತ್ತು ದಾನಿ. 8:14ರ ಅರ್ಥಕ್ಕೆ ಕೀಲಿ ಕೈಯಾಗಿವೆ ಎಂಬ ಆ್ಯಡ್ವೆಂಟಿಸ್ಟರ ವಾದಕ್ಕೆ ಇನ್ನಾವುದು ಹೆಚ್ಚು ಯೋಗ್ಯವೂ ಸಾಂಕೇತಿಕವೂ ಆಗಿರಸಾಧ್ಯವಿದೆ!”
ದಾನಿಯೇಲ 8:14, ದೋಷಪರಿಹಾರಕ ದಿನ ಮತ್ತು ತನಿಖಾತ್ಮಕ ನ್ಯಾಯತೀರ್ಪು (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ, “ಆ ಸಮರ್ಥನೆಯು ಸೆವೆಂತ್ ಡೇ ಆ್ಯಡ್ವೆಂಟಿಸ್ಟರಿಗೆ ನಿರ್ಧಾರಕವಾಗಿದೆ” ಎನ್ನುತ್ತಾರೆ ಡಾ. ಫೋರ್ಡ್. “ಇಬ್ರಿ. 9ರಲ್ಲಿ ಮಾತ್ರ . . . ನಮಗೆ ಮಹತ್ತ್ವದ್ದಾಗಿರುವ ಪವಿತ್ರಾಲಯ ಸಿದ್ಧಾಂತದ . . . ಗಮನಾರ್ಹತೆಯ ಸವಿವರವಾದ ವಿವರಣೆಯನ್ನು ಕಂಡುಕೊಳ್ಳಸಾಧ್ಯವಿದೆ.” ಹೌದು, ಯಾಜಕಕಾಂಡ 16ನೆಯ ಅಧ್ಯಾಯದ ಪ್ರವಾದನಾರ್ಥವನ್ನು “ಹೊಸ ಒಡಂಬಡಿಕೆ”ಯಲ್ಲಿ ವಿವರಿಸುವ ಒಂದೇ ಅಧ್ಯಾಯವು ಇಬ್ರಿಯ 9ನೆಯ ಅಧ್ಯಾಯ ಆಗಿದೆ. ಆದರೆ “ಹಳೆಯ ಒಡಂಬಡಿಕೆ”ಯಲ್ಲಿ ಹಾಗೆ ವಿವರಿಸುವ ಒಂದೇ ವಚನವು ದಾನಿಯೇಲ 8:14 ಎಂದೂ ಆ್ಯಡ್ವೆಂಟಿಸ್ಟರನ್ನುತ್ತಾರೆ. ಈ ಎರಡು ಹೇಳಿಕೆಗಳೂ ಸರಿಯಾಗಿರುವಲ್ಲಿ, ಇಬ್ರಿಯ 9ನೆಯ ಅಧ್ಯಾಯ ಮತ್ತು ದಾನಿಯೇಲ 8ನೆಯ ಅಧ್ಯಾಯಕ್ಕೂ ಸಂಬಂಧವಿರಲೇಬೇಕು.
ಡೆಸ್ಮಂಡ್ ಫೋರ್ಡ್ ಅವಲೋಕಿಸುವುದು: “ಇಬ್ರಿ. 9ನ್ನು ಒಬ್ಬನು ಓದಿದೊಡನೆ ಕೆಲವು ವಿಷಯಗಳು ಎದ್ದು ಕಾಣುತ್ತವೆ. ದಾನಿಯೇಲ ಪುಸ್ತಕದ ಪ್ರಸ್ತಾಪ ಅಲ್ಲಿಲ್ಲ, ಮತ್ತು ದಾನಿ. 8:14ಕಕ್ಕಂತೂ ಇಲ್ಲವೇ ಇಲ್ಲ. . . . ಒಟ್ಟಿನಲ್ಲಿ ಇಡೀ ಅಧ್ಯಾಯವು ಯಾಜಕ. 16ರ ಅನ್ವಯವಾಗಿದೆ.” ಅವರು ಹೇಳುವುದು: “ನಮ್ಮ ಪವಿತ್ರಾಲಯ ಬೋಧನೆಯು, ಪವಿತ್ರಾಲಯ ಸೇವೆಗಳ ವೈಶಿಷ್ಟ್ಯವನ್ನು ಚರ್ಚಿಸುವ ಹೊಸ ಒಡಂಬಡಿಕೆಯ ಒಂದೇ ಪುಸ್ತಕದಲ್ಲಿ ದೊರೆಯಸಾಧ್ಯವಿಲ್ಲ. ಇದನ್ನು ಲೋಕದ ಸುತ್ತಲಿನ ಪ್ರಸಿದ್ಧ ಆ್ಯಡ್ವೆಂಟಿಸ್ಟ್ ಲೇಖಕರು ಒಪ್ಪಿದ್ದಾರೆ.” ಹೀಗೆ, ಎರಡನೆಯ ಆಧಾರಸ್ತಂಭವೂ ಈ ಸಮಸ್ಯಾತ್ಮಕ ಸಿದ್ಧಾಂತವನ್ನು ಬೆಂಬಲಿಸಲು ತೀರ ಅಶಕ್ತವಾಗಿದೆ.
ಆದರೂ, ಈ ತೀರ್ಮಾನವು ಹೊಸದಲ್ಲ. ಡಾ. ಕಾಟ್ರಲ್ ಹೇಳುವುದು, ಅನೇಕ ವರ್ಷಗಳಲ್ಲಿ, “ದಾನಿಯೇಲ 8:14 ಮತ್ತು ಇಬ್ರಿಯ 9ರ ಬಗೆಗೆ ನಮ್ಮ ಸಾಂಪ್ರದಾಯಿಕ ಅರ್ಥವಿವರಣೆಯು ಎದುರಿಸುವ ವಿವರಣಾತ್ಮಕ ಸಮಸ್ಯೆಗಳನ್ನು ಚರ್ಚಿನ ಬೈಬಲ್ ವಿದ್ವಾಂಸರು ಒಳ್ಳೆಯದಾಗಿ ತಿಳಿದಿದ್ದಾರೆ.” ಸುಮಾರು 80 ವರ್ಷಗಳ ಹಿಂದೆ, ಪ್ರಭಾವಶಾಲಿ ಸೆವೆಂತ್ ಡೇ ಆ್ಯಡ್ವೆಂಟಿಸ್ಟ್ ಇ. ಜೆ. ವ್ಯಾಗನರ್ ಬರೆದುದು: “ಪವಿತ್ರಾಲಯದ ಕುರಿತ ಆ್ಯಡ್ವೆಂಟಿಸ್ಟ್ ಬೋಧನೆಯು, ಅದರ ‘ತನಿಖಾತ್ಮಕ ನ್ಯಾಯತೀರ್ಪಿ’ನೊಂದಿಗೆ . . . , ದೋಷಪರಿಹಾರದ ಕಾರ್ಯತಃ ಅಲ್ಲಗಳೆಯುವಿಕೆಯಾಗಿದೆ.” (ನಂಬಿಕೆಯ ನಿವೇದನೆ, ಇಂಗ್ಲಿಷ್) 30ಕ್ಕೂ ಹೆಚ್ಚು ವರ್ಷಗಳ ಹಿಂದೆ, ಇಂತಹ ಸಮಸ್ಯೆಗಳನ್ನು ಎಸ್ಡಿಎ ನಾಯಕತ್ವವಾದ ಜನರಲ್ ಕಾನ್ಫರೆನ್ಸ್ಗೆ ಸಾದರಪಡಿಸಲಾಯಿತು.
ಸಮಸ್ಯೆಗಳು ಮತ್ತು ಬಿಕ್ಕಟ್ಟು
ಆ ಜನರಲ್ ಕಾನ್ಫರೆನ್ಸ್ “ದಾನಿಯೇಲ ಪುಸ್ತಕದ ಸಮಸ್ಯೆಗಳ ಕುರಿತ ಕಮಿಟಿ”ಯೊಂದನ್ನು ನೇಮಿಸಿತು. ದಾನಿಯೇಲ 8:14ರ ಕುರಿತು ಎದ್ದಿರುವ ತೊಂದರೆಗಳನ್ನು ಹೇಗೆ ಬಗೆಹರಿಸುವುದೆಂಬ ವಿಷಯದಲ್ಲಿ ಅದು ಒಂದು ವರದಿಯನ್ನು ತಯಾರಿಸಬೇಕಾಗಿತ್ತು. ಆ ಕಮಿಟಿಯ 14 ಮಂದಿ ಸದಸ್ಯರು ಐದು ವರ್ಷಕಾಲ ಆ ವಿವಾದವನ್ನು ಅಧ್ಯಯನಿಸಿದರೂ ಸರ್ವಾನುಮತದ ಪರಿಹಾರವನ್ನು ಮಂಡಿಸುವುದರಲ್ಲಿ ನಿಷ್ಫಲರಾದರು. ಕಮಿಟಿಯ ಹೆಚ್ಚಿನ ಸದಸ್ಯರು, ದಾನಿಯೇಲ 8:14ರ ಮೇಲಿನ ಆ್ಯಡ್ವೆಂಟಿಸ್ಟ್ ಅರ್ಥವಿವರಣೆಯನ್ನು “ಊಹೆಗಳ” ಒಂದು ಸರಣಿಯ ಮೂಲಕ “ತೃಪ್ತಿಕರವಾಗಿ ಸ್ಥಾಪಿಸಲ್ಪಡ”ಸಾಧ್ಯವಿದೆಯೆಂದೂ ಸಮಸ್ಯೆಗಳನ್ನು “ಮರೆತು ಬಿಡಬೇಕು” ಎಂದೂ ಎಣಿಸಿದರೆಂದು, 1980ರಲ್ಲಿ ಕಮಿಟಿಯ ಸದಸ್ಯರಾದ ಕಾಟ್ರಲ್ ಹೇಳಿದರು. ಅವರು ಕೂಡಿಸಿ ಹೇಳಿದ್ದು: “ಕಮಿಟಿಯ ಹೆಸರು, ದಾನಿಯೇಲ ಪುಸ್ತಕದ ಸಮಸ್ಯೆಗಳ ಕುರಿತ ಕಮಿಟಿ ಎಂದು ಜ್ಞಾಪಿಸಿಕೊಳ್ಳಿ, ಆದರೂ ನಾವು ಸಮಸ್ಯೆಗಳನ್ನು ಮರೆತುಬಿಡಬೇಕೆಂದೂ ಅವುಗಳ ವಿಷಯ ಏನೂ ಹೇಳಬಾರದೆಂದೂ ಅವರಲ್ಲಿ ಹೆಚ್ಚಿನವರು ಹೇಳುತ್ತಿದ್ದರು.” ಅದರ ಅರ್ಥವು, “ನಮ್ಮಲ್ಲಿ ಉತ್ತರಗಳಿಲ್ಲ” ಎಂದು ಒಪ್ಪಿಕೊಂಡಂತಾಗುತ್ತಿತ್ತು. ಆದಕಾರಣ ಅಲ್ಪಸಂಖ್ಯಾಕರು ಬಹುಸಂಖ್ಯಾಕರ ಅಭಿಪ್ರಾಯವನ್ನು ಬೆಂಬಲಿಸಲಿಲ್ಲ ಮತ್ತು ಔಪಚಾರಿಕ ವರದಿಯು ಕೊಡಲ್ಪಡಲಿಲ್ಲ. ಸೈದ್ಧಾಂತಿಕ ಸಮಸ್ಯೆಗಳು ಬಗೆಹರಿಸಲ್ಪಡದೆ ಉಳಿದವು.
ಈ ಬಿಕ್ಕಟ್ಟಿನ ಕುರಿತು ಮಾತಾಡುತ್ತ, ಡಾ. ಕಾಟ್ರಲ್ ಹೇಳುವುದು: “ದಾನಿಯೇಲ 8:14ರ ವಿವಾದಾಂಶವು ಇನ್ನೂ ನಮ್ಮಲ್ಲಿದೆ. ಯಾಕೆಂದರೆ ಇಷ್ಟರ ವರೆಗೆ ನಾವು, ತೀರ ವಾಸ್ತವವಾದ ವಿವರಣಾತ್ಮಕ ಸಮಸ್ಯೆಯು ಅಸ್ತಿತ್ವದಲ್ಲಿದೆ ಎಂಬ ನಿಜತ್ವವನ್ನು ಎದುರಿಸಲು ಇಷ್ಟಪಟ್ಟಿರುವುದಿಲ್ಲ. ಸಮಸ್ಯೆಯಿಲ್ಲವೆಂದು ನಾವು ನಟಿಸುತ್ತಿರುವಷ್ಟರ ವರೆಗೆ, ನಾವು ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ತಲೆಗಳನ್ನು ನಮ್ಮ ಪೂರ್ವಕಲ್ಪಿತ ಅಭಿಪ್ರಾಯಗಳೆಂಬ ಮರಳಿನಲ್ಲಿ ಹೊಗಿಸಿಡಲು ಪಟ್ಟುಹಿಡಿಯುವ ವರೆಗೆ ಆ ವಿವಾದಾಂಶವು ಹೊರಟುಹೋಗಲಾರದು.”—ಸ್ಪೆಕ್ಟ್ರಮ್, ಅಸೋಸಿಯೇಷನ್ ಆಫ್ ಆ್ಯಡ್ವೆಂಟಿಸ್ಟ್ ಫಾರಮ್ಸ್ ಪ್ರಕಟಿಸುವ ಒಂದು ಪತ್ರಿಕೆ.
“ನಾವು ಯಾವುದರ ಅರ್ಥವಿವರಣೆಯನ್ನು ಆ್ಯಡ್ವೆಂಟಿಸ್ಟ್ ವಾದಕ್ಕೆ ಅತ್ಯಗತ್ಯವಾದ ಶಾಸ್ತ್ರವಚನಗಳ ಮೇಲೆ ಆಧಾರಿಸಿದ್ದೇವೊ ಅದರ ಮೂಲ ಊಹೆಗಳ ಮತ್ತು ವಿವರಣೆಗಳ ಮೂಲತತ್ತ್ವಗಳ ಜಾಗರೂಕತೆಯ ಪುನರ್ಪರಿಶೀಲನೆಯನ್ನು” ಮಾಡಬೇಕೆಂದು ಡಾ. ಕಾಟ್ರಲ್ ಆ್ಯಡ್ವೆಂಟಿಸ್ಟರನ್ನು ಪ್ರೋತ್ಸಾಹಿಸುತ್ತಾರೆ. ಆ್ಯಡ್ವೆಂಟಿಸ್ಟರು “ತನಿಖಾತ್ಮಕ ನ್ಯಾಯತೀರ್ಪು” ಸಿದ್ಧಾಂತದ ಆಧಾರಸ್ತಂಭಗಳು ಬೈಬಲಿನ ಮೇಲೆ ದೃಢವಾಗಿ ಆಧಾರಿಸಿವೆಯೊ ಇಲ್ಲವೆ ಸಂಪ್ರದಾಯದ ಅಸ್ಥಿರ ಮರಳಿನ ಮೇಲೆ ಆಧಾರಿಸಿವೆಯೊ ಎಂದು ನೋಡಲು, ಅದನ್ನು ಪರೀಕ್ಷಿಸಬೇಕೆಂದು ನಾವು ಪ್ರೋತ್ಸಾಹಿಸುತ್ತೇವೆ.c ಅಪೊಸ್ತಲ ಪೌಲನು ವಿವೇಕಯುತವಾಗಿ ಉತ್ತೇಜಿಸಿದ್ದು: “ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.”—1 ಥೆಸಲೊನೀಕ 5:21.
[ಅಧ್ಯಯನ ಪ್ರಶ್ನೆಗಳು]
a ವಿಲ್ಸನ್ಸ್ ಓಲ್ಡ್ ಟೆಸ್ಟಮೆಂಟ್ ವರ್ಡ್ ಸ್ಟಡೀಸ್, ಟ್ಸಡಾಕ್ (ಅಥವಾ, ಟ್ಸಧಾಕ್) ಪದವನ್ನು “ನೀತಿವಂತನಾಗಿರು, ಸಮರ್ಥಿಸಲ್ಪಟ್ಟವನಾಗಿರು” ಎಂದೂ, ಟಾಹೀರ್ (ಅಥವಾ, ಟಾಹೆರ್) ಪದವನ್ನು “ಸ್ಪಷ್ಟವಾಗಿರು, ಉಜ್ವಲವಾಗಿರು, ಪ್ರಕಾಶಮಾನವಾಗಿರು; ಶುದ್ಧವಾಗಿರು, ನಿಷ್ಕಳಂಕವಾಗಿರು, ಪರಿಶುದ್ಧವಾಗಿರು; ಸರ್ವ ಮಾಲಿನ್ಯ ಹಾಗೂ ಕಲ್ಮಶಗಳಿಂದ ದೂರವಾಗಿರು” ಎಂದು ನಿರೂಪಿಸುತ್ತದೆ.
b ಡಾ. ಫೋರ್ಡ್, ಅಮೆರಿಕದ ಚರ್ಚ್ ಪ್ರಾಯೋಜಿತ ಪೆಸಿಫಿಕ್ ಯೂನಿಯನ್ ಕಾಲೆಜಿನಲ್ಲಿ ಪ್ರೊಫೆಸರ್ ಆಫ್ ರಿಲಿಜನ್ ಆಗಿದ್ದರು. ಎಸ್ಡಿಎ ನಾಯಕರು 1980ರಲ್ಲಿ ಅವರು ಆ ಸಿದ್ಧಾಂತದ ಕುರಿತು ಅಧ್ಯಯನಿಸಲಿಕ್ಕಾಗಿ ಆರು ತಿಂಗಳ ರಜೆಯನ್ನು ಕೊಟ್ಟರಾದರೂ, ಅವರು ಅವನ ಕಂಡುಹಿಡಿತಗಳನ್ನು ತಿರಸ್ಕರಿಸಿದರು. ಇವುಗಳನ್ನು ಅವರು, ದಾನಿಯೇಲ 8:14, ದೋಷಪರಿಹಾರಕ ದಿನ ಮತ್ತು ತನಿಖಾತ್ಮಕ ನ್ಯಾಯತೀರ್ಪು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಪ್ರಕಟಿಸಿದರು.
c ದಾನಿಯೇಲ 8ನೆಯ ಅಧ್ಯಾಯದ ಒಂದು ತರ್ಕಬದ್ಧ ವಿವರಣೆಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಾಶಿತ “ನಿನ್ನ ಚಿತ್ತವು ಭೂಮಿಯ ಮೇಲೆ ಆಗಲಿ” (ಇಂಗ್ಲಿಷ್) ಎಂಬ ಪುಸ್ತಕದ 8ನೆಯ ಅಧ್ಯಾಯದ 188-219ನೆಯ ಪುಟಗಳನ್ನು ನೋಡಿ.
[ಪುಟ 27 ರಲ್ಲಿರುವ ಚೌಕ]
ದಾನಿಯೇಲ 8:14 ಪೂರ್ವೋತ್ತರ ಸಂದರ್ಭದಲ್ಲಿ
ದಾನಿಯೇಲ 8:9 “ಅವುಗಳೊಳಗೆ ಒಂದರಿಂದ ಇನ್ನೊಂದು ಚಿಕ್ಕ ಕೊಂಬು ಮೇಲಕ್ಕೆ ಬಂತು, ಮತ್ತು ಅದು ದಕ್ಷಿಣದ ಕಡೆಗೆ ಮತ್ತು ಸೂರ್ಯೋದಯದ ಕಡೆಗೆ ಮತ್ತು ಅಲಂಕರಣದ ಕಡೆಗೆ ಬಹು ದೊಡ್ಡದಾಗುತ್ತ ಹೋಯಿತು. 10 ಅದು ಆಕಾಶಮಂಡಲದ ನಕ್ಷತ್ರಗಣದ ತನಕ ದೊಡ್ಡದಾಗುತ್ತ ಹೋಗಲಾಗಿ, ಗಣದಲ್ಲಿ ಸ್ವಲ್ಪ ಅಂಶವನ್ನು ನಕ್ಷತ್ರಗಳಲ್ಲಿ ಕೆಲವನ್ನು ಭೂಮಿಗೆ ಬೀಳುವಂತೆ ಮಾಡಿ, ಅದು ಅವನ್ನು ತುಳಿದು ಹಾಕಿತು. 11 ಮತ್ತು ಅದು ಗಣದ ಪ್ರಭುವಿನ ವರೆಗೂ ಮಹಾ ಜಂಬವನ್ನು ತೋರಿಸಿತು, ಮತ್ತು ಅವನ ಬಳಿಯಿಂದ ನಿತ್ಯಹೋಮವನ್ನು ತೆಗೆದುಬಿಡಲಾಯಿತು, ಮತ್ತು ಅವನ ಪವಿತ್ರಾಲಯದ ಸ್ಥಾಪಿತ ಸ್ಥಳವು ಕೆಡವಲ್ಪಟ್ಟಿತು. 12 ಮತ್ತು ಉಲ್ಲಂಘನೆಯ ಕಾರಣ ಒಂದು ಗಣವನ್ನೇ ಕ್ರಮೇಣ ನಿತ್ಯಹೋಮದೊಂದಿಗೆ ಒಪ್ಪಿಸಲಾಯಿತು; ಮತ್ತು ಅದು ಸತ್ಯವನ್ನು ನೆಲಕ್ಕೆ ಎಸೆಯುತ್ತ ಹೋಯಿತು, ಮತ್ತು ಅದು ಕ್ರಿಯೆಗೈದು ಯಶಸ್ಸನ್ನು ಪಡೆಯಿತು.
“13 ಒಬ್ಬಾನೊಬ್ಬ ಪವಿತ್ರ ವ್ಯಕ್ತಿಯು ಮಾತನಾಡುವುದನ್ನು ನಾನು ಕೇಳಿದೆನು, ಮತ್ತು ಇನ್ನೊಬ್ಬ ಪವಿತ್ರ ವ್ಯಕ್ತಿಯು ಮಾತನಾಡುತ್ತಿದ್ದ ಆ ನಿರ್ದಿಷ್ಟ ವ್ಯಕ್ತಿಗೆ ಹೇಳತೊಡಗಿದ್ದು: ‘ಪವಿತ್ರ ಸ್ಥಳ ಮತ್ತು ಗಣ ಇವೆರಡನ್ನೂ ತುಳಿಯುವ ವಸ್ತುಗಳಾಗಿ ಮಾಡಲು, ನಿತ್ಯಹೋಮದ ಮತ್ತು ವಿನಾಶವನ್ನು ಉಂಟುಮಾಡುವ ಉಲ್ಲಂಘನೆಯ ದರ್ಶನವು ಎಷ್ಟು ಕಾಲ ಇರುವುದು?’ 14 ಆಗ ಅವನು ನನಗೆ ಹೇಳಿದ್ದು: ‘ಎರಡು ಸಾವಿರದ ಮುನ್ನೂರು ಸಾಯಂಕಾಲಗಳು ಮತ್ತು ಪ್ರಾತಃಕಾಲಗಳ ವರೆಗೆ; ಮತ್ತು ಪವಿತ್ರ ಸ್ಥಳವು ನಿಶ್ಚಯವಾಗಿ ಸುಸ್ಥಿತಿಗೆ ತರಲ್ಪಡುವುದು.’”—ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್.