ನಿಮ್ಮ ಮಗುವಿನ ಜೀವವನ್ನು ರಕ್ಷಿಸಿರಿ!
ಮೈಕಲ್ ಮತ್ತು ಆಲ್ಫೀನ, ದಕ್ಷಿಣ ಆಫ್ರಿಕದ ಕ್ವಾಸೂಲೂ-ನಟಾಲ್ನ ಹಸುರು ಗುಡ್ಡಗಳ ಮಧ್ಯೆಯಿರುವ ಒಂದು ಗ್ರಾಮೀಣ ಕಣಿವೆಯಲ್ಲಿ ಜೀವಿಸುತ್ತಾರೆ. ಏಳು ಮಂದಿ ಮಕ್ಕಳನ್ನು ಬೆಳೆಸುವುದರಲ್ಲಿ ಅವರು ಅನೇಕ ಪಂಥಾಹ್ವಾನಗಳನ್ನು ಎದುರಿಸಿದರು. ತನ್ನ ಹೆಂಡತಿಯ ಪೂರ್ತಿ ಬೆಂಬಲವುಳ್ಳವನಾಗಿ ಮೈಕಲ್, ಬೈಬಲು ತಂದೆಗಳಿಗೆ ಕೊಟ್ಟ, “[ನಿಮ್ಮ ಮಕ್ಕಳನ್ನು] ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಬೆಳೆಸುತ್ತ ಹೋಗಿರಿ” ಎಂಬ ಆಜ್ಞೆಗೆ ವಿಧೇಯನಾಗಲು ಬಹಳವಾಗಿ ಪ್ರಯತ್ನಿಸಿದನು. (ಎಫೆಸ 6:4, NW) ಆದರೆ ಕೆಲವು ಸಲ ಸಮಸ್ಯೆಗಳು ವಿಕಾಸಗೊಳ್ಳುತ್ತವೆ.
ಉದಾಹರಣೆಗೆ, ಆಫ್ರಿಕದ ದನಮೇಯಿಸುವ ಹುಡುಗರಿಗೆ, ಅವರು ಕೂಡಿ ಆಡಲು ಹೆಚ್ಚು ಸಮಯವು ದೊರೆಯುವಂತೆ ಕೆಲವು ಕುಟುಂಬಗಳ ಜಾನುವಾರುಗಳನ್ನು ಕೂಡಿಸಿ ಮೇಯಿಸುವುದು ಸಾಮಾನ್ಯ. ಆದರೆ ಕೆಲವು ಸಲ ಅವರು ತುಂಟರಾಗಿ, ಚರ್ಚಿಸಬಾರದ ಸಂಗತಿಗಳ ಕುರಿತು ಮಾತಾಡುತ್ತಾರೆ. ಮೈಕಲ್ನ ಗಂಡುಮಕ್ಕಳು ಕುಟುಂಬದ ದನಗಳನ್ನು ಮೇಯಿಸಲು ಹೋದಾಗ, ಕೆಲವು ಮಕ್ಕಳೊಂದಿಗೆ ಒಡನಾಟ ಮಾಡಬಾರದೆಂದು ಅವನು ಅವರಿಗೆ ಕಟ್ಟುನಿಟ್ಟಾದ ಆದೇಶಗಳನ್ನು ಕೊಟ್ಟನು. (ಯಾಕೋಬ 4:4) ಆದರೂ, ಕೆಲಸದಿಂದ ಮನೆಗೆ ಹಿಂದಿರುಗುತ್ತಿದ್ದಾಗ, ತನ್ನ ಮಕ್ಕಳು ಆ ಮಕ್ಕಳೊಂದಿಗೆ ಒಡನಾಟಮಾಡುವುದನ್ನು ಅವನು ಕೆಲವೊಮ್ಮೆ ಕಂಡುಹಿಡಿಯುತ್ತಿದ್ದನು. ಪರಿಣಾಮವಾಗಿ, ಅವನು ಅವರನ್ನು ಶಿಸ್ತಿಗೊಳಪಡಿಸಬೇಕಾಗುತ್ತಿತ್ತು.—ಜ್ಞಾನೋಕ್ತಿ 23:13, 14.
ಮೈಕಲ್ ತನ್ನ ಮಕ್ಕಳನ್ನು ತೀರ ಕಟ್ಟುನಿಟ್ಟಾಗಿ ನೋಡಿಕೊಳ್ಳುತ್ತಿದ್ದನೆಂದು ನೀವೆಣಿಸುತ್ತೀರೊ? ಕೆಲವರಿಗೆ ಹಾಗನಿಸಬಹುದು, ಆದರೆ “ವಿವೇಕವು ಅದರ ಕ್ರಿಯೆಗಳ ಮೂಲಕ ನೀತಿಯದ್ದಾಗಿ ಸ್ಥಾಪಿಸಲ್ಪಡುತ್ತದೆ” ಎಂದು ಯೇಸು ಕ್ರಿಸ್ತನು ಹೇಳಿದನು. (ಮತ್ತಾಯ 11:19, NW) ಮೈಕಲ್ ಮತ್ತು ಆಲ್ಫೀನ ತಮ್ಮ ಮನೆಯಲ್ಲಿ, ಮಕ್ಕಳೊಂದಿಗೆ ಸಮಯವನ್ನು ಕಳೆಯುತ್ತ ಮತ್ತು ಅವರಿಗೆ ಬೈಬಲ್ ವೃತ್ತಾಂತಗಳನ್ನೂ ಸತ್ಯಗಳನ್ನೂ ಕಲಿಸುತ್ತ ಒಂದು ಪ್ರೀತಿಪೂರ್ಣ ವಾತಾವರಣವನ್ನು ನಿರ್ಮಿಸಿದರು.
ಮೈಕಲ್ ಮತ್ತು ಆಲ್ಫೀನರಿಗೆ, ಟಿಂಬಕೀಲೀ, ಸಫೀವ, ಟಾಲಕೆಲೀ ಮತ್ತು ಟಿಂಬಕಾನೀ ಎಂಬ ನಾಲ್ವರು ಹೆಣ್ಣುಮಕ್ಕಳು ಇದ್ದಾರೆ. ಇವರೆಲ್ಲರೂ ದೇವರ ರಾಜ್ಯದ ಸುವಾರ್ತೆಯ ಪೂರ್ಣ ಸಮಯದ ಸುವಾರ್ತಿಕರಾಗಿದ್ದಾರೆ. ಅವರ ಗಂಡುಮಕ್ಕಳಲ್ಲಿ ಇಬ್ಬರು ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಅಧ್ಯಕ್ಷ ಮೇಲ್ವಿಚಾರಕರಾಗಿ ಸೇವೆಮಾಡುತ್ತಾರೆ. ಅವರ ಮೂರನೆಯ ಮಗನು—ಅವನ ಹೆಂಡತಿಯೂ ಪೂರ್ಣ ಸಮಯದ ಸೌವಾರ್ತಿಕಳು—ಶುಶ್ರೂಷಾ ಸೇವಕನಾಗಿ ಸೇವೆಮಾಡುತ್ತಾನೆ.
ದೊಡ್ಡ ಕುಟುಂಬಗಳಿರುವ ಅನೇಕ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ಸಾಫಲ್ಯವನ್ನು ಪಡೆದಿದ್ದಾರೆ. ಆದರೂ, ಹೆತ್ತವರಿಂದ ಉತ್ತಮ ಪಾಲನೆಯನ್ನು ಪಡೆಯುವ ಕೆಲವು ಮಕ್ಕಳು ಸತ್ಯವನ್ನು ತೊರೆಯುತ್ತಾರೆ. ಅವರ ಹೆತ್ತವರು, ದುಂದುವ್ಯಯ ಮಾಡಿದ ಮಗನ ಕುರಿತ ಯೇಸುವಿನ ದೃಷ್ಟಾಂತವನ್ನು ಮನಸ್ಸಿನಲ್ಲಿಟ್ಟು, ತಮ್ಮ ಮಗ ಅಥವಾ ಮಗಳು ಪಶ್ಚಾತ್ತಾಪಪಟ್ಟು ಕೊನೆಗೆ ರಕ್ಷಣೆಯನ್ನು ಪಡೆಯುವರೆಂಬ ನಿರೀಕ್ಷೆಯಲ್ಲಿ ಜೀವಿಸುತ್ತಾರೆಂಬುದು ನಿಸ್ಸಂದೇಹ.—ಲೂಕ 15:21-24.
ಆದರೆ ದುಃಖಕರವಾಗಿ, ಕೆಲವು ಕ್ರೈಸ್ತ ಹೆತ್ತವರು ತಮ್ಮ ಮಕ್ಕಳೆಲ್ಲರನ್ನೂ ಲೋಕಕ್ಕೆ ಕಳೆದುಕೊಳ್ಳುತ್ತಾರೆ. ಆಫ್ರಿಕದ ಕೆಲವು ಭಾಗಗಳಲ್ಲಿ ಇದು ವಿಶೇಷವಾಗಿ ಚಿಂತೆಗೆ ಕಾರಣವಾಗಿದೆ. ಅಲ್ಲಿ ಮಕ್ಕಳು ಹದಿವಯಸ್ಸನ್ನು ತಲಪುವ ತನಕ ಒಳ್ಳೆಯವರಾಗಿ ಕಂಡುಬರುತ್ತಾರೆ. ಬಳಿಕ, ಯೌವನದ ಪ್ರೌಢಾವಸ್ಥೆಯಲ್ಲಿ ಅವರು ಸೈತಾನನ ಲೋಕದ ದುರಾಚಾರದ ಮಾರ್ಗಗಳಿಗೆ ಆಕರ್ಷಿತರಾಗುತ್ತಾರೆ. (1 ಯೋಹಾನ 5:19) ಇದರ ಪರಿಣಾಮವಾಗಿ, ಅನೇಕ ತಂದೆಯರು ಸಭಾ ಹಿರಿಯರಾಗಿ ಸೇವೆಮಾಡಲು ಅರ್ಹರಾಗುವುದಿಲ್ಲ. (1 ತಿಮೊಥೆಯ 3:1, 4, 5) ಒಬ್ಬ ಕ್ರೈಸ್ತ ತಂದೆಯು ತನ್ನ ಸ್ವಂತ ಮನೆವಾರ್ತೆಯ ರಕ್ಷಣೆಯನ್ನು ಅತಿ ಪ್ರಮುಖವಾದ ವಿಷಯವಾಗಿ ವೀಕ್ಷಿಸಬೇಕೆಂಬುದು ವ್ಯಕ್ತ. ಹಾಗಾದರೆ, ತಮ್ಮ ಮಕ್ಕಳ ಜೀವಗಳನ್ನು ರಕ್ಷಿಸಲು ಹೆತ್ತವರು ಏನು ಮಾಡಬಲ್ಲರು?
ಆಪ್ತ ಮಿತ್ರರಾಗಿರಿ
ಯೇಸು ಪರಿಪೂರ್ಣನಾಗಿದ್ದನು ಮಾತ್ರವಲ್ಲ, ಜ್ಞಾನ ಮತ್ತು ಅನುಭವದಲ್ಲಿ ಇನ್ನಾವ ಮಾನವನಿಗಿಂತಲೂ ಎಷ್ಟೋ ಶ್ರೇಷ್ಠನಾಗಿದ್ದನು. ಆದರೂ, ಅವನು ತನ್ನ ಅಪರಿಪೂರ್ಣ ಶಿಷ್ಯರನ್ನು ಆಪ್ತ ಮಿತ್ರರಂತೆ ಉಪಚರಿಸಿದನು. (ಯೋಹಾನ 15:15) ಆ ಕಾರಣದಿಂದಲೇ ಅವರು ಅವನೊಂದಿಗೆ ಇರಬಯಸಿ ಅವನ ಸಮಕ್ಷಮದಲ್ಲಿ ಏಳಿಗೆಹೊಂದಿದರು. (ಯೋಹಾನ 1:14, 16, 39-42; 21:7, 15-17) ಹೆತ್ತವರು ಇದರಿಂದ ಕಲಿಯಬಲ್ಲರು. ಚಿಕ್ಕ ಸಸಿಗಳು ಬಿಸಿಯಾದ ಸೂರ್ಯನ ಬೆಳಕಿನ ಕಡೆಗೆ ತಮ್ಮ ಎಲೆಗಳನ್ನು ಒಡ್ಡುವ ಹಾಗೆ, ಮನೆಯಲ್ಲಿ ಪ್ರೀತಿಪೂರ್ಣವಾದ, ಸ್ನೇಹಮಯ ವಾತಾವರಣವಿರುವಲ್ಲಿ ಮಕ್ಕಳು ಏಳಿಗೆ ಹೊಂದುತ್ತಾರೆ.
ಹೆತ್ತವರೇ, ನಿಮ್ಮ ಮಕ್ಕಳು ತಮ್ಮ ಎಲ್ಲ ಚಿಂತೆಗಳೊಂದಿಗೆ ನಿಮ್ಮನ್ನು ಸಮೀಪಿಸಲು ಮುಕ್ತಭಾವದವರಾಗಿದ್ದಾರೊ? ನೀವು ಅವರಿಗೆ ಕಿವಿಗೊಡುತ್ತೀರೊ? ನೀವು ತೀರ್ಮಾನವನ್ನು ತೆಗೆದುಕೊಳ್ಳುವ ಮೊದಲು, ಸಂಪೂರ್ಣ ಚಿತ್ರಣವನ್ನು ಪಡೆಯಲು ನೀವು ಅವರ ಆಲೋಚನೆಗಳನ್ನೂ ಅನಿಸಿಕೆಗಳನ್ನೂ ಹೊರತರಿಸುತ್ತೀರೊ? ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ಅವರೊಂದಿಗೆ ಬೈಬಲ್ ಪ್ರಕಾಶನಗಳಲ್ಲಿ ಸಂಶೋಧನೆಮಾಡಿ, ತಾಳ್ಮೆಯಿಂದ ಅವರಿಗೆ ಸಹಾಯಮಾಡುತ್ತೀರೊ?
ದಕ್ಷಿಣ ಆಫ್ರಿಕದ ಒಬ್ಬ ತಾಯಿ ವಿವರಿಸುವುದು: “ನಮ್ಮ ಮಗಳು ಶಾಲೆಗೆ ಹೋದ ಪ್ರಥಮ ದಿನ ಮೊದಲ್ಗೊಂಡು, ದಿನದ ಆಗುಹೋಗುಗಳನ್ನು ಹೇಳುವಂತೆ ನಾವು ಅವಳನ್ನು ಯಾವಾಗಲೂ ಪ್ರೋತ್ಸಾಹಿಸಿದೆವು. ಉದಾಹರಣೆಗೆ, ನಾನು ಹೀಗೆ ಕೇಳುತ್ತಿದ್ದೆ: ‘ನೀನು ಊಟದ ವಿರಾಮವನ್ನು ಯಾರೊಂದಿಗೆ ಕಳೆದೆ? ನಿನ್ನ ಹೊಸ ಟೀಚರ್ನ ಕುರಿತು ನನಗೆ ಹೇಳು. ಅವರು ಹೇಗೆ ಕಾಣುತ್ತಾರೆ? ಇಡೀ ವಾರಕ್ಕಾಗಿ ಯಾವ ಚಟುವಟಿಕೆಗಳನ್ನು ಯೋಜಿಸಲಾಗಿದೆ?’ ಒಮ್ಮೆ, ನಮ್ಮ ಮಗಳು ಮನೆಗೆ ಬಂದು, ತಮ್ಮ ಇಂಗ್ಲಿಷ್ ಟೀಚರ್ ತಮ್ಮ ಕ್ಲಾಸನ್ನು ಒಂದು ಫಿಲ್ಮ್ ನೋಡಲು ಕೊಂಡೊಯ್ಯುತ್ತಾರೆಂದೂ, ಆ ಬಳಿಕ ಅದರ ಪುನರ್ವಿಮರ್ಶೆ ಬರೆಯಲಿಕ್ಕಿದೆಯೆಂದೂ ಹೇಳಿದಳು. ಆ ಫಿಲ್ಮಿನ ಹೆಸರು ಸಂದೇಹಾಸ್ಪದವಾಗಿತ್ತು. ತಪಾಸಣೆ ನಡೆಸಿದಾಗ, ಒಬ್ಬ ಕ್ರೈಸ್ತನಿಗೆ ಯೋಗ್ಯವಾಗಿರಲಿಲ್ಲವೆಂಬುದನ್ನು ನಾವು ಕಂಡುಹಿಡಿದೆವು. ಅದನ್ನು ನಾವು ಕುಟುಂಬವಾಗಿ ಚರ್ಚಿಸಿದೆವು. ಮರುದಿನ ನಮ್ಮ ಮಗಳು ಆ ಟೀಚರನ್ನು ಸಮೀಪಿಸಿ, ಆ ಫಿಲ್ಮಿನಲ್ಲಿ ಚಿತ್ರಿಸಿರುವ ನೈತಿಕತೆಯು ತನ್ನ ಕ್ರೈಸ್ತ ನಂಬಿಕೆಗೆ ಹೊಂದಿಕೆಯಲ್ಲಿಲ್ಲದಿರುವುದರಿಂದ ತಾನು ಆ ಫಿಲ್ಮನ್ನು ನೋಡಲು ಬಯಸುವುದಿಲ್ಲವೆಂದು ಹೇಳಿದಳು. ಆ ಟೀಚರ್ ಅದರ ಕುರಿತು ಯೋಚಿಸಿ, ತಾನು ವಿಷಾದಿಸಬಹುದಾದ ಯಾವುದನ್ನಾದರೂ ನೋಡುವರೆ ಕ್ಲಾಸನ್ನು ಒಯ್ಯುವುದಿಲ್ಲವೆಂದು ಹೇಳಿ, ಆ ಬಳಿಕ ನಮ್ಮ ಮಗಳಿಗೆ ಉಪಕಾರಹೇಳಿದರು.” ಈ ಹೆತ್ತವರು ತಮ್ಮ ಮಗಳ ರಕ್ಷಣೆಯಲ್ಲಿ ಹೊಂದಿಕೆಯಿಂದ ತೋರಿಸಿದ ಪ್ರೀತಿಪೂರ್ವಕವಾದ ಆಸಕ್ತಿಯು ಸುಫಲವನ್ನು ಕೊಟ್ಟಿತು. ಅವಳಲ್ಲಿ ಸಂತೋಷದ, ಸಕಾರಾತ್ಮಕ ಪ್ರಕೃತಿಯಿದ್ದು, ಆಕೆ ಈಗ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ದಕ್ಷಿಣ ಆಫ್ರಿಕ ಬ್ರಾಂಚಿನಲ್ಲಿ ಸ್ವಯಂ ಸೇವೆ ಮಾಡುತ್ತಿದ್ದಾಳೆ.
ಬೇರೆ ಜನರ ಮಕ್ಕಳೊಂದಿಗೆ ವ್ಯವಹರಿಸುವುದರಲ್ಲಿ ಯೇಸು ಒಂದು ಅತ್ಯುತ್ಕೃಷ್ಟ ಮಾದರಿಯನ್ನಿಟ್ಟನು. ಅವನು ಅವರ ಒಡನಾಟದಲ್ಲಿ ಸಂತೋಷಪಟ್ಟನು. (ಮಾರ್ಕ 10:13-16) ತಮ್ಮ ಸ್ವಂತ ಮಕ್ಕಳೊಂದಿಗೆ ಕೂಡಿ ಕೆಲಸಮಾಡುವುದರಲ್ಲಿ ಹೆತ್ತವರು ಎಷ್ಟು ಸಂತುಷ್ಟರಾಗಿರಬೇಕು! ಆಫ್ರಿಕದ ಕೆಲವು ಭಾಗಗಳಲ್ಲಿ, ತನ್ನ ಗಂಡುಮಕ್ಕಳೊಂದಿಗೆ ಚೆಂಡಾಡುವುದನ್ನು ಇಲ್ಲವೆ ಇತರ ಆಟಗಳನ್ನಾಡುವುದನ್ನು ನೋಡಲ್ಪಡುವುದು ತಂದೆಗೆ ನಾಚಿಕೆಯ ವಿಷಯ. ಆದರೆ ತನ್ನ ಮಕ್ಕಳೊಂದಿಗೆ ಆಟವಾಡುವಾಗ ನೋಡಲ್ಪಡುವುದು ತನ್ನ ಪ್ರಮುಖ ಸ್ಥಾನಕ್ಕೆ ಕುಂದೆಂದು ಒಬ್ಬ ಕ್ರೈಸ್ತ ತಂದೆಯು ಅಭಿಪ್ರಯಿಸಲೇಬಾರದು. ಎಳೆಯ ಮಕ್ಕಳಿಗೆ ತಮ್ಮೊಂದಿಗೆ ಸಮಯ ಕಳೆಯುವುದರಲ್ಲಿ ಸಂತೋಷಿಸುವ ಹೆತ್ತವರು ಅಗತ್ಯ. ಇದು ತಮ್ಮ ಚಿಂತೆಗಳನ್ನು ವ್ಯಕ್ತಪಡಿಸುವರೆ ಮಕ್ಕಳಿಗೆ ಸುಲಭ ಮಾಡುತ್ತದೆ. ಇಂತಹ ಭಾವಾತ್ಮಕ ಆವಶ್ಯಕತೆಗಳು ಅಸಡ್ಡೆಮಾಡಲ್ಪಡುವಾಗ, ಮಕ್ಕಳು—ವಿಶೇಷವಾಗಿ ಸದಾ ತಿದ್ದಲ್ಪಡುತ್ತಿರುವಲ್ಲಿ—ಕೆರಳಿಸಲ್ಪಡಬಹುದು ಅಥವಾ ನಿಸ್ಸಂಗಿಗಳಾಗಬಹುದು.
ಕುಟುಂಬ ಸಂಬಂಧಗಳ ಕುರಿತು ಬರೆಯುವಾಗ ಪೌಲನಂದದ್ದು: “ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.” (ಕೊಲೊಸ್ಸೆ 3:21) ಕೆಲವು ಬಾರಿ ವಿಪರೀತ ಶಿಸ್ತು ಮತ್ತು ಅತಿ ಕೊಂಚ ಮೈತ್ರಿಯ ಅಸಮತೆಯಿರುತ್ತದೆಂಬುದನ್ನು ಇದು ಸೂಚಿಸಬಹುದು. ಪ್ರೀತಿಸಲ್ಪಟ್ಟು ಶ್ಲಾಘಿಸಲ್ಪಡುವ ಹದಿಪ್ರಾಯದವರನ್ನೊಳಗೊಂಡಿರುವ ಮಕ್ಕಳು ಅಗತ್ಯವಿರುವ ಶಿಸ್ತಿಗೆ ಪ್ರತಿಕ್ರಿಯೆ ತೋರಿಸುವುದು ಹೆಚ್ಚು ಸಂಭವನೀಯ.
ದೇವರ ಪ್ರೀತಿ
ಹೆತ್ತವರು ತಮ್ಮ ಮಕ್ಕಳಿಗೆ ದಾಟಿಸಸಾಧ್ಯವಿರುವುದರಲ್ಲಿ ಅತ್ಯಮೂಲ್ಯವಾದ ಬಾಧ್ಯತೆಯು, ಪ್ರೀತಿ ತೋರಿಸುವ ತಮ್ಮ ಸ್ವಂತ ಮಾದರಿಯೇ. ತಮ್ಮ ಹೆತ್ತವರು ದೇವರ ಕಡೆಗೆ ನಿಜ ಪ್ರೀತಿಯನ್ನು ವ್ಯಕ್ತಪಡಿಸಿ, ಅದನ್ನು ತೋರಿಸುವುದನ್ನು ಮಕ್ಕಳು ನೋಡಿ, ಕೇಳಿಸಿಕೊಳ್ಳುವುದು ಅಗತ್ಯ. ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ದಕ್ಷಿಣ ಆಫ್ರಿಕ ಬ್ರಾಂಚಿನಲ್ಲಿ ಸೇವೆಮಾಡುತ್ತಿರುವ ಒಬ್ಬ ಯುವಕನು ಹೇಳುವುದು: “ನಾನು ಹುಡುಗನಾಗಿದ್ದಾಗ, ಮನೆಯ ಸುತ್ತಲಿನ ಕೆಲಸದಲ್ಲಿ ನಾನು ನನ್ನ ತಂದೆಗೆ ಸಹಾಯಮಾಡುತ್ತಿದ್ದೆ. ಅಪ್ಪ ನಾನು ಮಾಡಿದ ಕೊಂಚ ಕೆಲಸವನ್ನು ನಿಜವಾಗಿಯೂ ಶ್ಲಾಘಿಸುತ್ತಿದ್ದ ಕಾರಣದಿಂದಲೇ ನಾನು ಅವರಿಗೆ ಸಹಾಯಮಾಡಲು ಸಂತೋಷಪಡುತ್ತಿದ್ದೆ. ಯೆಹೋವನ ಕುರಿತು ನನಗೆ ಅನೇಕ ವಿಷಯಗಳನ್ನು ತಿಳಿಸಲು ಅವರು ಆ ಸಮಯವನ್ನು ಉಪಯೋಗಿಸುತ್ತಿದ್ದರು. ಉದಾಹರಣೆಗೆ, ಒಂದು ಶನಿವಾರ ನಾವು ಹುಲ್ಲು ಕತ್ತರಿಸುವುದರಲ್ಲಿ ಬಹಳವಾಗಿ ಶ್ರಮಿಸುತ್ತಿದ್ದುದನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ. ಬಿಸಿಲಿನ ತಾಪ ವಿಪರೀತವಾಗಿತ್ತು. ಅಪ್ಪ ಬೆವರುತ್ತಿದ್ದರು, ಆದುದರಿಂದ ನಾನು ಓಡಿಹೋಗಿ ಎರಡು ಗ್ಲಾಸು ನೀರು ತಂದು ಅವುಗಳಿಗೆ ಐಸ್ ಹಾಕಿದೆ. ಅಪ್ಪ ಹೇಳಿದ್ದು: ‘ಮಗನೇ, ಯೆಹೋವನು ಎಷ್ಟು ವಿವೇಕಿಯೆಂಬುದು ನಿನಗೆ ಗೊತ್ತೋ? ಐಸ್ ನೀರಿನಲ್ಲಿ ತೇಲುತ್ತದೆ. ಅದು ತಳಕ್ಕಿಳಿಯುವುದಾದರೆ, ಸರೋವರಗಳು, ಮತ್ತು ಕೆರೆಗಳಡಿಯಲ್ಲಿರುವ ಎಲ್ಲ ಜೀವವೂ ಸಾಯುವುದು. ಆದರೆ ಐಸ್ ಒಂದು ನಿರೋಧಕ ಕಂಬಳಿಯಂತೆ ಕೆಲಸಮಾಡುತ್ತದೆ! ಅದು ನಾವು ಯೆಹೋವನನ್ನು ಹೆಚ್ಚು ಉತ್ತಮವಾಗಿ ತಿಳಿಯುವಂತೆ ಸಹಾಯ ಮಾಡುವುದಿಲ್ಲವಾ?’a ಸಮಯಾನಂತರ, ತಾಟಸ್ಥ್ಯವನ್ನು ಪಾಲಿಸಿದುದಕ್ಕಾಗಿ ನಾನು ಸೆರೆಮನೆಗೆ ಹೋದಾಗ, ನನಗೆ ಯೋಚಿಸಲು ಸಮಯವಿತ್ತು. ಒಂದು ರಾತ್ರಿ ಮನಗುಂದಿದವನಾಗಿ ನನ್ನ ಸೆರೆಕೋಣೆಯಲ್ಲಿದ್ದಾಗ, ನಾನು ತಂದೆಯ ಆ ಮಾತುಗಳನ್ನು ಜ್ಞಾಪಿಸಿಕೊಂಡೆ. ಅವು ಎಷ್ಟು ಅರ್ಥಗರ್ಭಿತವಾಗಿದ್ದವು! ಸಾಧ್ಯವಾಗುವಲ್ಲಿ ನಾನು ಯೆಹೋವನನ್ನು ಸದಾಕಾಲ ಸೇವಿಸುವೆ.”
ಹೌದು, ಹೆತ್ತವರು ಮಾಡುವ ಪ್ರತಿಯೊಂದು ಕೆಲಸದಲ್ಲಿ ದೇವರ ಪ್ರೀತಿಯು ಪ್ರತಿಬಿಂಬಿಸಲ್ಪಡುವುದನ್ನು ಮಕ್ಕಳು ನೋಡುವುದು ಅಗತ್ಯ. ದೇವರ ಪ್ರೀತಿ ಮತ್ತು ಆತನಿಗೆ ಇಷ್ಟಪೂರ್ವಕವಾದ ವಿಧೇಯತೆ—ಇವು ಕ್ರೈಸ್ತ ಕೂಟಗಳಲ್ಲಿ ಉಪಸ್ಥಿತಿ, ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವಿಕೆ ಮತ್ತು ಕುಟುಂಬ ಬೈಬಲ್ ವಾಚನ ಮತ್ತು ಅಧ್ಯಯನದ ಹಿಂದಿರುವ ಪ್ರಚೋದಕ ಶಕ್ತಿಯಾಗಿ ವಿಶೇಷವಾಗಿ ಕಂಡುಬರಬೇಕು. (1 ಕೊರಿಂಥ 13:3) ಹೆಚ್ಚು ಪ್ರಾಮುಖ್ಯವಾಗಿ, ಹೃತ್ಪೂರ್ವಕವಾದ ಕುಟುಂಬ ಪ್ರಾರ್ಥನೆಗಳಲ್ಲಿ ದೇವರ ಪ್ರೀತಿಯು ಪ್ರತಿಬಿಂಬಿಸಲ್ಪಡಬೇಕು. ನಿಮ್ಮ ಮಕ್ಕಳಿಗೆ ಇಂತಹ ಬಾಧ್ಯತೆಯ ಕೊಡೋಣವನ್ನು ಎಷ್ಟು ಒತ್ತಿಹೇಳಿದರೂ ಸಾಲದು. ಆ ಕಾರಣದಿಂದಲೇ ಇಸ್ರಾಯೇಲ್ಯರಿಗೆ ಆಜ್ಞಾಪಿಸಲಾದದ್ದು: “ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು. ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.”—ಧರ್ಮೋಪದೇಶಕಾಂಡ 6:5-7; ಹೋಲಿಸಿ ಮತ್ತಾಯ 22:37-40.
ದೇವರನ್ನು ಪ್ರೀತಿಸಿ ವಿಧೇಯರಾಗುವುದಕ್ಕಿರುವ ಒಂದು ಮಹಾ ಅಡ್ಡಿತಡೆಯು, ನಾವು ಬಾಧ್ಯತೆಯಾಗಿ ಪಡೆದ ಪಾಪಪೂರ್ಣ ಪ್ರಕೃತಿಯಾಗಿದೆ. (ರೋಮಾಪುರ 5:12) ಆದುದರಿಂದ ಬೈಬಲು, “ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ,” ಎಂದೂ ಆಜ್ಞಾಪಿಸುತ್ತದೆ. (ಕೀರ್ತನೆ 97:10) ಕೆಟ್ಟ ಯೋಚನೆಗಳು ಅನೇಕ ವೇಳೆ ಕೆಟ್ಟ ವರ್ತನೆಗಳಿಗೆ ನಡೆಸುತ್ತವೆ. ಇದರಿಂದ ದೂರವಿರಲು, ಒಂದು ಮಗುವು ಇನ್ನೊಂದು ಮಹತ್ವವುಳ್ಳ ಗುಣಲಕ್ಷಣವನ್ನೂ ವಿಕಸಿಸಿಕೊಳ್ಳಬೇಕು.
ದೇವರ ಭಯ
ಯೆಹೋವನನ್ನು ಮೆಚ್ಚಿಸದೆ ಹೋದೇವೆಂಬ ಪೂಜ್ಯರೀತಿಯ ಭಯದೊಂದಿಗೆ ಸೇರಿರುವ ಪ್ರೀತಿಯು ಅತ್ಯಪೇಕ್ಷಣೀಯ. ಯೇಸು ಕ್ರಿಸ್ತನು ತಾನೇ ನಮಗಾಗಿ “ಯೆಹೋವನ ಭಯ”ದಲ್ಲಿ ಸಂತೋಷವನ್ನು ಕಂಡುಕೊಂಡ ಒಬ್ಬನ ಪರಿಪೂರ್ಣ ಮಾದರಿಯನ್ನಿಟ್ಟನು. (ಯೆಶಾಯ 11:1-3) ಒಂದು ಮಗು ಯೌವನದ ಪ್ರೌಢಾವಸ್ಥೆಯನ್ನು ಮುಟ್ಟಿ, ಶಕ್ತಿಯುತವಾದ ಕಾಮಾಸಕ್ತಿಗಳನ್ನು ಅನುಭವಿಸಲಾರಂಭಿಸುವಾಗ ಇಂತಹ ಭಯವು ಮಹತ್ವಪೂರ್ಣವಾಗಿರುತ್ತದೆ. ದೇವರ ಭಯವು ಒಬ್ಬ ಯುವ ವ್ಯಕ್ತಿಯು, ಅನೈತಿಕ ನಡತೆಗೆ ನಡೆಸಬಹುದಾದ ಲೌಕಿಕ ಒತ್ತಡಗಳನ್ನು ತಡೆಯುವಂತೆ ಸಹಾಯಮಾಡಬಲ್ಲದು. (ಜ್ಞಾನೋಕ್ತಿ 8:13) ಕೆಲವು ಸಮುದಾಯಗಳಲ್ಲಿ, ಲೈಂಗಿಕ ಶೋಧನೆಗಳನ್ನು ನಿಭಾಯಿಸುವುದು ಹೇಗೆಂಬುದನ್ನು ಮಕ್ಕಳಿಗೆ ಕಲಿಸುವ ವಿಷಯದಲ್ಲಿ ಹೆತ್ತವರು ನಾಚಿಕೆಪಡುತ್ತಾರೆ. ವಾಸ್ತವವೇನಂದರೆ, ಈ ವಿಷಯಗಳನ್ನು ಚರ್ಚಿಸುವುದು ತಪ್ಪೆಂದು ಅನೇಕರ ಅನಿಸಿಕೆ. ಆದರೆ ಹೆತ್ತವರ ಈ ಅಸಡ್ಡೆಯ ಫಲಿತಾಂಶವೇನಾಗಿದೆ?
ಬೂಗ, ಆಮಾಕೋ ಮತ್ತು ಟ್ಸಾಯೀಯಾನ ಎಂಬ ಮೂವರು ವೈದ್ಯಕೀಯ ವಿಶೇಷಜ್ಞರು, ದಕ್ಷಿಣ ಆಫ್ರಿಕದ ಟ್ರ್ಯಾನ್ಸ್ಕೈಯ ಗ್ರಾಮೀಣ ಪ್ರದೇಶದಲ್ಲಿನ 1,702 ಹುಡುಗಿಯರು ಮತ್ತು 903 ಹುಡುಗರ ಇಂಟರ್ವ್ಯೂ ನಡೆಸಿದರು. ಸೌತ್ ಆಫ್ರಿಕನ್ ಮೆಡಿಕಲ್ ಜರ್ನಲ್ ವರದಿಸಿದ್ದೇನಂದರೆ, “ಈ ಸಮೀಕ್ಷೆಯಲ್ಲಿದ್ದ 76% ಹುಡುಗಿಯರು ಮತ್ತು 90.1% ಹುಡುಗರು ಆಗಲೇ ಲೈಂಗೀಕಾನುಭವವುಳ್ಳವರಾಗಿದ್ದರು.” ಹುಡುಗಿಯರ ಸರಾಸರಿ ಪ್ರಾಯ 15 ವರ್ಷಗಳಾಗಿದ್ದು, ಅನೇಕರನ್ನು ಲೈಂಗಿಕ ಸಂಭೋಗಕ್ಕೆ ಬಲಾತ್ಕರಿಸಲಾಗಿತ್ತು. 250ಕ್ಕೂ ಹೆಚ್ಚು ಹುಡುಗಿಯರು ಒಂದು ಅಥವಾ ಹೆಚ್ಚು ಬಾರಿ ಗರ್ಭವತಿಯರಾಗಿದ್ದರು. ಇನ್ನೊಂದು ಫಲಿತಾಂಶವು ರತಿ ರವಾನಿತ ರೋಗದ ಉನ್ನತ ಪ್ರಮಾಣವೇ.
ವಿವಾಹಪೂರ್ವ ಸಂಭೋಗದಿಂದ ಹೇಗೆ ದೂರವಿರಬೇಕೆಂದು ತಮ್ಮ ಮಕ್ಕಳಿಗೆ ಕಲಿಸುವ ಅಗತ್ಯವನ್ನು ಅನೇಕ ಹೆತ್ತವರು ಮನಗಾಣುವುದಿಲ್ಲವೆಂಬುದು ಸ್ಪಷ್ಟ. ಬದಲಾಗಿ, ಮೇಲಿನ ಪತ್ರಿಕೆಯು ವಿವರಿಸುವುದು: “ಗ್ರಾಮೀಣ ಟ್ರ್ಯಾನ್ಸ್ಕೈ ಸಮಾಜದಲ್ಲಿ ಹೆರಿಗೆ ಮತ್ತು ತಾಯ್ತನಗಳು ಸ್ತ್ರೀಯರಲ್ಲಿರಬೇಕಾದ ಗೌರವಾರ್ಹ ಗುಣಲಕ್ಷಣಗಳಾಗಿವೆ, ಮತ್ತು ಇದು, ಆಗ ತಾನೆ ಪ್ರೌಢಾವಸ್ಥೆಗೆ ಬಂದಿರುವ ಹುಡುಗಿಯರಿಂದ ಬೇಗನೆ ಗ್ರಹಿಸಲ್ಪಡುತ್ತದೆ.” ಇದೇ ಸಮಸ್ಯೆಯು ಲೋಕದ ಇತರ ಭಾಗಗಳಲ್ಲಿಯೂ ಪ್ರಮಾಣೀಕರಿಸಲ್ಪಟ್ಟಿದೆ.
ಆಫ್ರಿಕದ ಅನೇಕ ಯುವ ಜನರು, ತಮ್ಮ ಲೈಂಗಿಕತೆಯನ್ನು ತಿಳಿದುಕೊಳ್ಳುವ ವಿಷಯದಲ್ಲಿ ಸಹಾಯಮಾಡದಿದ್ದುದಕ್ಕಾಗಿ ತಮ್ಮ ಹೆತ್ತವರಲ್ಲಿ ತಪ್ಪು ಕಂಡುಹಿಡಿಯುತ್ತಿದ್ದಾರೆ. ನಿಮ್ಮ ಯೌವನ—ಅದರಿಂದ ಅತ್ಯುತ್ತಮವಾದುದನ್ನು ಪಡೆಯುವುದು (ಇಂಗ್ಲಿಷ್) ಎಂಬ ಪುಸ್ತಕವನ್ನು ಉಪಯೋಗಿಸಲು ಕೆಲವು ಕ್ರೈಸ್ತ ಹೆತ್ತವರು ತೀರ ನಾಚಿಕೆಪಟ್ಟಿದ್ದಾರೆ.b ಅದರ 20-3ನೆಯ ಪುಟಗಳಲ್ಲಿ, ಅದು ಲೈಂಗೀಕಾವಯವಗಳ ಗೌರವಾರ್ಹ ಉಪಯೋಗವನ್ನು ಮತ್ತು ಪ್ರೌಢಾವಸ್ಥೆಯಲ್ಲಿ ಆಗುವ ಬದಲಾವಣೆಗಳನ್ನು ವಿವರಿಸುತ್ತದೆ.
ತಮ್ಮ ಮಕ್ಕಳೊಡನೆ ಕಾಮದ ಕುರಿತ ದೇವರ ವೀಕ್ಷಣವನ್ನು ಚರ್ಚಿಸುವ ಪಂಥಾಹ್ವಾನವನ್ನು ನಿಭಾಯಿಸುವ ಕ್ರೈಸ್ತ ಹೆತ್ತವರು ಪ್ರಶಂಸಾರ್ಹರು. ಇದನ್ನು ಪ್ರಗತಿಪರವಾಗಿ, ಮಗುವಿಗೆ ವಿಷಯಗಳನ್ನು ಗ್ರಹಿಸಲು ಇರುವ ಸಾಮರ್ಥ್ಯಾನುಸಾರ ಮಾಡುವುದು ಅತ್ಯುಚಿತ. ಮಗುವಿನ ವಯಸ್ಸಿನಂತಹ ಸಂಗತಿಯ ಮೇಲೆ ಹೊಂದಿಕೊಂಡು, ದೇಹಾಂಗಗಳು ಮತ್ತು ಅವುಗಳ ಕೆಲಸಗಳನ್ನು ಸೂಚಿಸುವಾಗ ಹೆತ್ತವರು ನಿಖರವಾಗಿರುವ ಅಗತ್ಯವಿದ್ದೀತು. ಇಲ್ಲದಿದ್ದರೆ, ಅನನುಭವಿಯಾದ ಎಳೆಯ ವ್ಯಕ್ತಿಗೆ ಹೇಳಲ್ಪಡುತ್ತಿರುವ ವಿಷಯದ ಅರ್ಥವು ತಿಳಿಯದೆಹೋದೀತು.—1 ಕೊರಿಂಥ 14:8, 9.
ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿರುವ ದಕ್ಷಿಣ ಆಫ್ರಿಕದ ಒಬ್ಬ ತಂದೆಯು ವಿವರಿಸುವುದು: “ಆಗಾಗ್ಗೆ, ಲೈಂಗಿಕ ವಿಷಯಗಳ ಸುಲಭ ಸಂವೇದನಾಶೀಲ ವಿಷಯವನ್ನು ಹುಡುಗಿಯರೊಂದಿಗೆ ಚರ್ಚಿಸುವ ಸಂದರ್ಭಗಳು ನನಗಿದ್ದವು. ನನ್ನ ಹೆಂಡತಿಯಾದರೊ, ನಿಮ್ಮ ಯೌವನ—ಅದರಿಂದ ಅತ್ಯುತ್ತಮವಾದುದನ್ನು ಪಡೆಯುವುದು (ಇಂಗ್ಲಿಷ್) ಎಂಬ ಪುಸ್ತಕವನ್ನು ಉಪಯೋಗಿಸುತ್ತ, ನಮ್ಮ ಹೆಣ್ಣುಮಕ್ಕಳಿಗೆ ವಿಶೇಷ ಗಮನವನ್ನು ಕೊಟ್ಟಳು. [26-31ನೆಯ ಪುಟಗಳನ್ನು ನೋಡಿರಿ.] ನನ್ನ ಮಗ 12 ವಯಸ್ಸಿನವನಾಗಿದ್ದಾಗ, ನಾನು ದೂರ ನಡೆದಾಡಲು ಬೆಟ್ಟಗಳಿಗೆ ಅವನನ್ನು ಕರೆದುಕೊಂಡು ಹೋಗಲು ನಿರ್ಣಯಿಸಿದೆ. ಆ ಸಂದರ್ಭದಲ್ಲಿ, ಒಬ್ಬ ಹುಡುಗನ ದೇಹದ ಬೆಳವಣಿಗೆ ಮತ್ತು ಅದು ತರುವಾಯ ವಿವಾಹದಲ್ಲಿ ವಹಿಸುವ ವಿಶೇಷ ಉದ್ದೇಶದ ಕುರಿತು ನಾವು ವಿವರವಾಗಿ ಚರ್ಚಿಸಿದೆವು. ಮುಷ್ಟಿಮೈಥುನದ ನೀತಿಭ್ರಷ್ಟ ದುರಭ್ಯಾಸದಿಂದ ದೂರವಿರುವಂತೆಯೂ, ಹುಡುಗಿಯರನ್ನು, ತನ್ನ ತಾಯಿ ಮತ್ತು ಸಹೋದರಿಯರನ್ನು ಅವನು ನೋಡುವಂತೆಯೇ ಗೌರವ ಮತ್ತು ಮರ್ಯಾದೆಯಿಂದ ನೋಡುವ ಅಗತ್ಯವನ್ನೂ ನಾನು ಅವನೊಂದಿಗೆ ಚರ್ಚಿಸಿದೆ.”
ಹರ್ಷಭರಿತ ಪ್ರತಿಫಲಗಳು
ಈಗ ತಾನೇ ಸೂಚಿಸಿರುವ ತಂದೆತಾಯಿಯರು ಶ್ರದ್ಧಾಪೂರ್ವಕವಾಗಿ ಕೆಲಸಮಾಡಿ, ತಮ್ಮ ಮೂವರು ಮಕ್ಕಳನ್ನು ಬೆಳೆಸುವುದರಲ್ಲಿ ತಮಗೆ ಉತ್ತಮ ಫಲಿತಾಂಶವು ಬಂದಿರುವುದಕ್ಕೆ ಆನಂದಿತರಾಗಿದ್ದಾರೆ. ಮೂವರೂ ಈಗ ವಯಸ್ಕರಾಗಿ, ನಂಬಿಗಸ್ತ ಕ್ರೈಸ್ತರನ್ನು ವಿವಾಹವಾಗಿದ್ದಾರೆ. ಅವರ ಮಗನೂ ಅಳಿಯಂದಿರೂ ಕ್ರೈಸ್ತ ಸಭೆಯಲ್ಲಿ ಹಿರಿಯರಾಗಿ ಸೇವೆಮಾಡುತ್ತಾರೆ. ಮತ್ತು ಇವರಲ್ಲಿ ಎರಡು ವಿವಾಹಿತ ದಂಪತಿಗಳು ಅನೇಕ ವರ್ಷಗಳಿಂದ ಪೂರ್ಣ ಸಮಯದ ಸುವಾರ್ತಾಸೇವೆಯಲ್ಲಿದ್ದಾರೆ.
ಹೌದು, ತಮ್ಮ ಮನೆವಾರ್ತೆಯ ರಕ್ಷಣೆಗಾಗಿ ಶ್ರಮಪಟ್ಟು ಕಾರ್ಯನಡಿಸುವ ಹೆತ್ತವರು, ಅಂತಹ ಬೈಬಲ್ ಬೋಧನೆಗೆ ಪ್ರತಿವರ್ತಿಸುವ ಮಕ್ಕಳಿಂದ ಹರ್ಷಭರಿತ ಪ್ರತಿಫಲವನ್ನು ನಿರೀಕ್ಷಿಸಬಲ್ಲರು. ಏಕೆಂದರೆ ಜ್ಞಾನೋಕ್ತಿ 23:24, 25 ಹೇಳುವುದು: “ಜ್ಞಾನಿಯನ್ನು ಹೆತ್ತವನು ಅವನಲ್ಲಿ ಆನಂದಿಸುವನು. ನಿನ್ನ ತಂದೆತಾಯಿಗಳು ಉಲ್ಲಾಸಗೊಳ್ಳಲಿ.” ಈ ಲೇಖನದ ಪೀಠಿಕೆಯಲ್ಲಿ ಹೇಳಲಾದ ಆ ದೊಡ್ಡ ಕುಟುಂಬದ ಕುರಿತು ಯೋಚಿಸಿರಿ. ಆಲ್ಫೀನ ಹೇಳುವುದು: “ನನ್ನ ಮಕ್ಕಳು ಮಾಡಿರುವ ಆತ್ಮಿಕ ಪ್ರಗತಿಯ ಕುರಿತು ನಾನು ಯೋಚಿಸುವಾಗ ನನ್ನ ಹೃದಯವು ಹರ್ಷದಿಂದ ತುಂಬಿತುಳುಕುತ್ತದೆ.” ಎಲ್ಲ ಕ್ರೈಸ್ತ ಹೆತ್ತವರು ಈ ಸಂತೋಷದ ಪ್ರತಿಫಲದ ಗುರಿಯನ್ನಿಟ್ಟು ಕೆಲಸಮಾಡುವಂತಾಗಲಿ.
[ಅಧ್ಯಯನ ಪ್ರಶ್ನೆಗಳು]
a ನೀರು ಘನೀಕರಣ ಬಿಂದುವನ್ನು ಮುಟ್ಟುವಾಗ, ಅದರ ಸಾಂದ್ರತೆ ಕಡಮೆಯಾಗಿ ಮೇಲ್ಮೈಗೆ ಎದ್ದುಬರುತ್ತದೆ. ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಜೀವ—ಅದು ಇಲ್ಲಿಗೆ ಬಂದದ್ದು ಹೇಗೆ? ವಿಕಾಸದ ಮೂಲಕವೊ ಸೃಷ್ಟಿಯ ಮೂಲಕವೊ? (ಇಂಗ್ಲಿಷ್) ಎಂಬ ಪುಸ್ತಕದ 137-8ನೆಯ ಪುಟಗಳನ್ನು ನೋಡಿ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಾಶಿತ ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕವನ್ನೂ ನೋಡಿ.
[ಪುಟ 23 ರಲ್ಲಿರುವ ಚಿತ್ರ]
ಜೀವಿತದ ವಾಸ್ತವಾಂಶಗಳನ್ನು ವಿವರಿಸಲು ಒಬ್ಬ ತಂದೆಯು ಸರಿಯಾದ ಸನ್ನಿವೇಶವನ್ನು ಏರ್ಪಡಿಸಬಲ್ಲನು