ಯೆಹೋವನು ನಿಷ್ಠೆಯಿಂದ ಕ್ರಿಯೆಗೈಯುತ್ತಾನೆ
ಪೀಟರ್ ಪಲೀಸರ್ ಹೇಳಿರುವಂತೆ
ಡಿಸೆಂಬರ್ 1985ರ ಸಮಯವಾಗಿತ್ತು. ಕೆನ್ಯದ ನೈರೋಬಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾವು ನಮ್ಮ ಅವರೋಹಣವನ್ನು ಆರಂಭಿಸಿದಂತೆ ಉದ್ರೇಕವು ಹೆಚ್ಚಿತು. ನಗರದೊಳಕ್ಕೆ ವಾಹನದಲ್ಲಿ ಹೋಗುತ್ತಿದ್ದಂತೆ, ಪರಿಚಿತ ನೋಟಗಳು ಮತ್ತು ಶಬ್ದಗಳಿಂದ ಜಾಗೃತಗೊಳಿಸಲ್ಪಟ್ಟ ಸ್ಮರಣೆಗಳು ನುಗ್ಗಿಬಂದವು.
ಯೆಹೋವನ ಸಾಕ್ಷಿಗಳ “ಸಮಗ್ರತೆ ಪಾಲಕರು” ಜಿಲ್ಲಾ ಅಧಿವೇಶನವನ್ನು ಹಾಜರಾಗಲು ನಾವು ಕೆನ್ಯಕ್ಕೆ ಬಂದೆವು. ಹನ್ನೆರಡು ವರ್ಷಗಳ ಹಿಂದೆ ನನ್ನ ಹೆಂಡತಿ ಮತ್ತು ನಾನು, ನಮ್ಮ ಸಾರುವ ಕಾರ್ಯದ ಮೇಲಿನ ನಿಷೇಧದಿಂದಾಗಿ ಕೆನ್ಯವನ್ನು ಬಿಟ್ಟುಹೋಗಲು ಒತ್ತಾಯಿಸಲ್ಪಟ್ಟಿದ್ದೆವು. ನಾವು ಅಲ್ಲಿ ಬೆತೆಲ್—ಯೆಹೋವನ ಸಾಕ್ಷಿಗಳ ಬ್ರಾಂಚ್ ಸೌಕರ್ಯಗಳಿಗೆ ಕೊಡಲ್ಪಟ್ಟಿರುವ ಹೆಸರು—ನಲ್ಲಿ ವಾಸಿಸುತ್ತಿದ್ದೆವು. ನಾವು ಭೇಟಿಕೊಡಲು ಅಲ್ಲಿಗೆ ಹಿಂದಿರುಗಿ ಹೋದಾಗ, ಎಂತಹ ಒಂದು ಹರ್ಷಮಯ ಆಶ್ಚರ್ಯವು ನಮಗಾಗಿ ಕಾದಿತ್ತು!
ಬೆತೆಲಿನಲ್ಲಿ ಮಧ್ಯಾಹ್ನದೂಟವನ್ನು ತಯಾರಿಸಲು ಸಹಾಯ ಮಾಡುತ್ತಿದ್ದವರಲ್ಲಿ, ಎರಡು ವರ್ಷ ಪ್ರಾಯದವಳಾಗಿದ್ದಂದಿನಿಂದ ನಮಗೆ ಪರಿಚಿತಳಾಗಿದ್ದ ಒಬ್ಬ ಯುವ ಸಾಕ್ಷಿಯು ಇದ್ದಳು. ಬೆತೆಲ್ ಕುಟುಂಬದ ಕಡಿಮೆಪಕ್ಷ ಆರು ಮಂದಿ ಸದಸ್ಯರು, ಅವರು ಮಕ್ಕಳಾಗಿದ್ದಂದಿನಿಂದ ನಮಗೆ ಪರಿಚಿತರಾಗಿದ್ದರು. ಈಗ ಯುವ ವಯಸ್ಕರಾಗಿ, ತಮ್ಮ ಕುಟುಂಬಗಳೊಂದಿಗೆ ಎಲ್ಲರೂ ಶುಶ್ರೂಷೆಯಲ್ಲಿ ಇನ್ನೂ ಸಕ್ರಿಯರಾಗಿರುವುದನ್ನು ನೋಡುವುದು ಎಂತಹ ಒಂದು ಆನಂದವಾಗಿತ್ತು! ನಮ್ಮ ದೇವರಾದ ಯೆಹೋವನು, ಈ ಬೈಬಲ್ ವಾಗ್ದಾನಕ್ಕೆ ಹೊಂದಿಕೆಯಲ್ಲಿ ಅವರನ್ನು ಪರಾಮರಿಸಿದ್ದನು: “ನಿಷ್ಠಾವಂತನೊಂದಿಗೆ ನೀನು ನಿಷ್ಠೆಯಿಂದ ಕ್ರಿಯೆಗೈಯುವಿ” (NW). (2 ಸಮುವೇಲ 22:26) ನನ್ನ ಯೌವನ, ಮತ್ತು ಈ ಯುವ ಜನರು ನಡಿಸುತ್ತಿದ್ದ ಪ್ರತಿಫಲದಾಯಕ ಜೀವನದ ನಡುವೆ, ನಾನು ಎಂತಹ ಒಂದು ವ್ಯತ್ಯಾಸವನ್ನು ಕಂಡುಕೊಂಡೆ!
ಉದ್ದೇಶವಿಲ್ಲದ ಆರಂಭದ ಜೀವನ
ಆಗಸ್ಟ್ 14, 1918ರಂದು, ಇಂಗ್ಲೆಂಡಿನ ಸ್ಕಾರ್ಬರೊನಲ್ಲಿ ನಾನು ಜನಿಸಿದೆ. ಎರಡು ವರ್ಷಗಳ ಬಳಿಕ ನನ್ನ ಅಮ್ಮ ಮತ್ತು ಮಲಸಹೋದರಿ ಕೆನಡಕ್ಕೆ ಸ್ಥಳಾಂತರಿಸಿದರು. ಆದುದರಿಂದ ಮುಂದಿನ ಮೂರು ವರ್ಷಗಳನ್ನು ನಾನು ನನ್ನ ತಂದೆ, ಅಜ್ಜಿ, ಮತ್ತು ಸೋದರತ್ತೆಯೊಂದಿಗೆ ವಾಸಿಸುತ್ತಾ ಕಳೆದೆ. ಐದು ವರ್ಷದವನಾಗಿದ್ದಾಗ, ಅಮ್ಮ ನನ್ನನ್ನು ತಂದೆಯಿಂದ ಅಪಹರಿಸಿಕೊಂಡು, ಕೆನಡದ ಮಾಂಟ್ರೀಯಲ್ಗೆ ಕೊಂಡೊಯ್ದರು. ನಾಲ್ಕು ವರ್ಷಗಳ ಬಳಿಕ ಅವರು ನನ್ನನ್ನು ತಂದೆಯೊಂದಿಗೆ ವಾಸಿಸಲು ಮತ್ತು ಶಾಲೆಗೆ ಹೋಗಲು ಇಂಗ್ಲೆಂಡಿಗೆ ಹಿಂದೆ ಕಳುಹಿಸಿದರು.
ನನ್ನ ಅಮ್ಮ ಮತ್ತು ಮಲಸಹೋದರಿಯು, ಸುಮಾರು ಆರು ತಿಂಗಳಿಗೊಮ್ಮೆ ನನಗೆ ಪತ್ರ ಬರೆಯುತ್ತಿದ್ದರು. ಅವರ ಪತ್ರಗಳ ಅಂತ್ಯದಲ್ಲಿ, ನಾನು ರಾಜ ಮತ್ತು ದೇಶಕ್ಕೆ ನಿಷ್ಠನಾಗಿದ್ದು, ಒಬ್ಬ ಒಳ್ಳೆಯ ಪ್ರಜೆಯಾಗಿರುವ ಅಪೇಕ್ಷೆಯನ್ನು ಅವರು ವ್ಯಕ್ತಪಡಿಸುತ್ತಿದ್ದರು. ನನ್ನ ಉತ್ತರಗಳು ಅವರನ್ನು ಬಹುಶಃ ನಿರಾಶೆಗೊಳಿಸಿದವು, ಯಾಕಂದರೆ ರಾಷ್ಟ್ರೀಯವಾದ ಹಾಗೂ ಯುದ್ಧ ತಪ್ಪಾಗಿವೆಯೆಂದು ನಾನು ನಂಬುತ್ತೇನೆಂಬುದಾಗಿ ಬರೆಯುತ್ತಿದ್ದೆ. ಆದರೂ ನನ್ನ ಹದಿವಯಸ್ಸಿನಲ್ಲಿ ಯಾವುದೇ ಸ್ಪಷ್ಟ ನಿರ್ದೇಶನವಿಲ್ಲದೆ, ನಾನು ಉದ್ದೇಶರಹಿತವಾದ ಜೀವನವನ್ನು ನಡಿಸುತ್ತಿದ್ದೆ.
ಅನಂತರ ಜುಲೈ 1939ರಲ್ಲಿ, IIನೆಯ ಜಾಗತಿಕ ಯುದ್ಧವು ಆರಂಭಿಸುವ ಆರು ವಾರಗಳ ಮುಂಚೆ, ನನ್ನನ್ನು ಬ್ರಿಟಿಷ್ ಸೇನೆಯಲ್ಲಿ ಕಡ್ಡಾಯವಾಗಿ ಸೇರಿಸಲಾಯಿತು. ನಾನು ಕೇವಲ 20 ವರ್ಷ ಪ್ರಾಯದವನಾಗಿದ್ದೆ. ಸ್ವಲ್ಪ ಸಮಯದಲ್ಲೇ, ನನ್ನ ಪಡೆಯು ಉತ್ತರ ಫ್ರಾನ್ಸ್ಗೆ ಕಳುಹಿಸಲ್ಪಟ್ಟಿತು. ಜರ್ಮನ್ ವಾಯುನೌಕೆಯು ನಮ್ಮ ಮೇಲೆ ಆಕ್ರಮಣ ಮಾಡಿದಾಗ, ಯುವ ಪುರುಷರಾದ ನಾವು, ನಮ್ಮ ಬಂದೂಕುಗಳನ್ನು ಗುರಿಯಿಟ್ಟು ಗುಂಡುಹಾರಿಸಿದೆವು. ಅದೊಂದು ಭಯಗೊಳಿಸುವ ಜೀವಿತವಾಗಿತ್ತು. ಮುಂದೆ ಸಾಗುತ್ತಿದ್ದ ಜರ್ಮನ್ ಸೈನ್ಯಗಳ ಮುಂದೆ ನಾವು ಹಿಮ್ಮೆಟ್ಟಿದೆವು, ಮತ್ತು ಜೂನ್ 1940ರ ಮೊದಲನೆಯ ವಾರದಲ್ಲಿ ಡನ್ಕರ್ಕ್ ಅನ್ನು ಬಿಟ್ಟು ಹೊರಟವರಲ್ಲಿ ನಾನೂ ಇದ್ದೆ. ಸಮುದ್ರ ಬದಿಯಲ್ಲೆಲ್ಲಾ ಚದರಿಸಲ್ಪಟ್ಟ ಒಂದು ಇಡೀ ದಳದ ಶವಗಳ ದೃಶ್ಯವನ್ನು ನಾನು ಈಗಲೂ ಭೀತಿಯಿಂದ ಜ್ಞಾಪಿಸಿಕೊಳ್ಳುತ್ತೇನೆ. ನಾನು ಆ ಘೋರಘಟನೆಯಿಂದ ಪಾರಾಗಿ, ಪೂರ್ವ ಇಂಗ್ಲೆಂಡಿನ ಹಾರ್ವಿಚ್ಗೆ ಒಂದು ಚಿಕ್ಕ ಸರಕು ಹಡಗಿನ ಮೂಲಕ ಆಗಮಿಸಿದೆ.
ಮುಂದಿನ ವರ್ಷ, ಮಾರ್ಚ್ 1941ರಲ್ಲಿ, ನಾನು ಭಾರತಕ್ಕೆ ಕಳುಹಿಸಲ್ಪಟ್ಟೆ. ಅಲ್ಲಿ ನಾನು ವಾಯುನೌಕೆ ಉಪಕರಣದ ಯಂತ್ರಿಗ (ಮೆಕ್ಯಾನಿಕ್)ನಾಗಿ ತರಬೇತನ್ನು ಪಡೆದೆ. ಸೋಂಕಿನ ಪರಿಣಾಮವಾಗಿ ಆಸ್ಪತ್ರೆಯಲ್ಲಿ ಸ್ವಲ್ಪ ಸಮಯ ಕಳೆದ ಅನಂತರ, ನಾನು ಭಾರತದ ರಾಜಧಾನಿಯಾದ ದಿಲ್ಲಿಯಲ್ಲಿರುವ ಒಂದು ಸೇನಾ ತಂಡಕ್ಕೆ ಸ್ಥಳಾಂತರಿಸಲ್ಪಟ್ಟೆ. ಮನೆಯಿಂದ ದೂರವಿದ್ದು, ಇನ್ನೂ ಅಸೌಖ್ಯವಿದ್ದುದರಿಂದ, ನಾನು ಭವಿಷ್ಯತ್ತಿನ ಕುರಿತಾಗಿ ಯೋಚಿಸಲಾರಂಭಿಸಿದೆ. ನಾವು ಸತ್ತಾಗ ನಮಗೇನು ಸಂಭವಿಸುತ್ತದೆಂಬುದರ ಕುರಿತಾಗಿ ನಾನು ವಿಶೇಷವಾಗಿ ಕುತೂಹಲಪಟ್ಟೆ.
ಒಂದು ಹೊಸ ರೀತಿಯ ನಿಷ್ಠೆಯನ್ನು ಪ್ರದರ್ಶಿಸುವುದು
ಒಬ್ಬ ಜೊತೆ ಆಂಗ್ಲನಾದ ಬರ್ಟ್ ಗೇಲ್, ದಿಲ್ಲಿಯಲ್ಲಿ ನನ್ನ ಕೋಣೆಯ ಸಂಗಾತಿಯಾಗಿದ್ದನು. ಒಂದು ದಿನ ಅವನು, “ಧರ್ಮವು ಪಿಶಾಚನಿಗೆ ಸೇರಿದ್ದು” ಎಂದು ಹೇಳಿದನು. ಈ ಹೇಳಿಕೆಯು ನನ್ನ ಆಸಕ್ತಿಯನ್ನು ಕೆರಳಿಸಿತು. ಅವನ ಹೆಂಡತಿಯು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದಳು, ಮತ್ತು ಆಗಿಂದಾಗ್ಗೆ ಅವಳು ಅವನಿಗೆ ಬೈಬಲ್ ಪ್ರಕಾಶನಗಳನ್ನು ಕಳುಹಿಸುತ್ತಿದ್ದಳು. ಇವುಗಳಲ್ಲಿ ಒಂದಾದ, ನಿರೀಕ್ಷೆ (ಇಂಗ್ಲಿಷ್) ಎಂಬ ಪುಸ್ತಿಕೆಯು ನನ್ನ ಆಸಕ್ತಿಯನ್ನು ಸೆರೆಹಿಡಿಯಿತು. ಪುನರುತ್ಥಾನದ ನಿರೀಕ್ಷೆಯ ಕುರಿತಾದ ಅದರ ಚರ್ಚೆಯು, ನನಗೆ ಪ್ರಶಾಂತತೆಯ ನಿಜವಾದ ಪ್ರಜ್ಞೆಯನ್ನು ಒದಗಿಸಿತು.
ಇಸವಿ 1943ರ ಆದಿ ಭಾಗದಲ್ಲಿ, ಮಿಲಿಟರಿ ಬೇಸ್ನಲ್ಲಿ ನಮ್ಮೊಂದಿಗೆ ಕೆಲಸಮಾಡುತ್ತಿದ್ದ ಟೆಡಿ ಗ್ರಬರ್ಟ್ ಹೆಸರಿನ ಒಬ್ಬ ಆಂಗ್ಲಭಾರತೀಯ ಪೌರನೊಂದಿಗೆ ಬರ್ಟ್ ಮಾತಾಡಿದನು. ನಮ್ಮ ಆಶ್ಚರ್ಯಕ್ಕೆ, ಟೆಡಿ ಒಬ್ಬ ಸಾಕ್ಷಿಯಾಗಿದ್ದನೆಂದು ನಮಗೆ ತಿಳಿದುಬಂತು. 1941ರಲ್ಲಿ ಯೆಹೋವನ ಸಾಕ್ಷಿಗಳ ಪ್ರಕಾಶನಗಳ ಮೇಲೆ ನಿಷೇಧವು ಹಾಕಲ್ಪಟ್ಟಿತ್ತಾದರೂ, ಅವನು ನಮ್ಮನ್ನು ದಿಲ್ಲಿಯಲ್ಲಿ ಸಾಕ್ಷಿಗಳಿಂದ ನಡೆಸಲ್ಪಡುತ್ತಿದ್ದ ಕೂಟಗಳಿಗೆ ಕರೆದುಕೊಂಡು ಹೋದನು. ಆ ಚಿಕ್ಕ ಸಭೆಯಲ್ಲಿ, ನಾನು ನನ್ನ ಜೀವಿತದಲ್ಲಿ ಪ್ರಥಮ ಬಾರಿ ಪ್ರಾಮಾಣಿಕವಾದ, ಹೃದಯೋಲ್ಲಾಸದ ಸಾಹಚರ್ಯವನ್ನು ಕಂಡುಕೊಂಡೆ. ಗ್ರೀಸ್ನಿಂದ ಬಂದಿದ್ದ ಒಬ್ಬ ಹಿರಿಯ ಕ್ರೈಸ್ತ ಸಹೋದರರಾದ ಬ್ಯಾಸಿಲ್ ಟ್ಸಾಟಸ್, ನನ್ನಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸಿ, ನನ್ನ ಪ್ರಶ್ನೆಗಳನ್ನು ಉತ್ತರಿಸಿದರು. ನಾವು ವೃದ್ಧರಾಗಿ ಸಾಯುವ ಕಾರಣ, ಪುನರುತ್ಥಾನ ಮತ್ತು ದೇವರ ವಾಗ್ದತ್ತ ನೀತಿಯ ಹೊಸ ಲೋಕದ ಕುರಿತಾದ ಪ್ರಶ್ನೆಗಳಿಗೆ ಅವರು ಸ್ಪಷ್ಟವಾದ ಬೈಬಲ್ ಉತ್ತರಗಳನ್ನು ಕೊಟ್ಟರು.—ಅ. ಕೃತ್ಯಗಳು 24:15; ರೋಮಾಪುರ 5:12; 2 ಪೇತ್ರ 3:13; ಪ್ರಕಟನೆ 21:3, 4.
ಇಸವಿ 1942ರಲ್ಲಿ ಪ್ರಕಾಶಿಸಲ್ಪಟ್ಟ, ಶಾಂತಿ—ಅದು ಬಾಳಬಲ್ಲದೊ? (ಇಂಗ್ಲಿಷ್) ಎಂಬ ಪುಸ್ತಿಕೆಯು ವಿಶೇಷವಾಗಿ ನನ್ನ ಆಸಕ್ತಿಯನ್ನು ಸೆರೆಹಿಡಿಯಿತು. ಅದು ಜನಾಂಗ ಸಂಘವನ್ನು “ರಕ್ತವರ್ಣದ ಮೃಗ” ಎಂದು ಗುರುತಿಸಿತು. (ಪ್ರಕಟನೆ 17:3) ಪ್ರಕಟನೆ ಅಧ್ಯಾಯ 17, ವಚನ 11ನ್ನು ಉಲ್ಲೇಖಿಸುತ್ತಾ, ಆ ಪುಸ್ತಿಕೆಯು ಹೇಳಿದ್ದು: “ಜನಾಂಗ ಸಂಘವು ‘ಇತ್ತು ಆದರೆ ಇಲ್ಲ’ ಎಂದು ಈಗ ಹೇಳಸಾಧ್ಯವಿದೆ.” ಅದು ಮುಂದುವರಿಸುತ್ತಾ ಹೇಳಿದ್ದು: “ಲೌಕಿಕ ರಾಷ್ಟ್ರಗಳ ಆ ಸಂಘವು ಪುನಃ ಮೇಲೆ ಬರುವುದು.” ಮೂರು ವರ್ಷಗಳಿಗಿಂತ ಹೆಚ್ಚು ಸಮಯದ ಅನಂತರ, 1945ರಲ್ಲಿ, ವಿಶ್ವ ಸಂಸ್ಥೆಯು ರಚಿಸಲ್ಪಟ್ಟಾಗ ಇದು ನಿಖರವಾಗಿ ಸಂಭವಿಸಿತು!
ಸಾಕ್ಷಿಗಳ ಸಾಹಿತ್ಯದ ಮೇಲಿನ ನಿಷೇಧದ ಸಮಯದಲ್ಲಿ, ನಾನು ನನ್ನ ಹೊಸ ಸ್ನೇಹಿತರಿಗೆ ಸಹಾಯ ಮಾಡಲು ಶಕ್ತನಾದೆ. ಶಾಂತಿ—ಅದು ಬಾಳಬಲ್ಲದೊ? ಎಂಬ ಪುಸ್ತಿಕೆಗಳ ಒಂದು ಕಾರ್ಟನ್ ಬಂದು ತಲಪುತ್ತಿದ್ದಾಗ, ಅದರ ರಕ್ಷಣೆಗಾಗಿ ಸಭೆಯು ಅದನ್ನು ನನಗೆ ವಹಿಸಿಕೊಡುತ್ತಿತ್ತು. ನಿಷೇಧಿಸಲ್ಪಟ್ಟಿರುವ ಸಾಹಿತ್ಯಕ್ಕಾಗಿ ಸೇನಾ ಶಿಬಿರದಲ್ಲಿ ಹುಡುಕಲು ಯಾರು ಯೋಚಿಸುವರು? ನಾನು ಪ್ರತಿ ಸಲ ಕೂಟಗಳಿಗೆ ಹೋದಾಗ, ಸಹೋದರರಿಗೆ ಬೇಕಾಗುವಷ್ಟು ಪುಸ್ತಿಕೆಗಳು ಇರುವಂತೆ, ನಾನು ಅವರಿಗಾಗಿ ಕೆಲವು ಪುಸ್ತಿಕೆಗಳನ್ನು ಕೊಂಡೊಯ್ಯುತ್ತಿದ್ದೆ. ತಮ್ಮ ಮನೆಗಳನ್ನು ಶೋಧಿಸಲಾಗುವುದೆಂದು ಅವರು ಹೆದರಿದಾಗ, ನಾನು ಅವರ ವೈಯಕ್ತಿಕ ಬೈಬಲ್ ಸಾಹಿತ್ಯವನ್ನೂ ಅಡಗಿಸಿಡುತ್ತಿದ್ದೆ. ಕೊನೆಗೆ, ಡಿಸೆಂಬರ್ 11, 1944ರಂದು ನಿಷೇಧವು ತೆಗೆಯಲ್ಪಟ್ಟಿತು.
ನಮ್ಮ ಸೇನಾ ಪಡೆಗಾಗಿ ಯೋಜಿಸಲ್ಪಟ್ಟ, 1943ರ ಕ್ರಿಸ್ಮಸ್ ಸಮಾರಂಭಗಳ ಸಮಯದಲ್ಲಿ ಕ್ರೈಸ್ತ ಬೋಧನೆಗಳಿಗಾಗಿರುವ ನನ್ನ ನಿಷ್ಠೆಯು ಪರೀಕ್ಷೆಗೊಡ್ಡಲ್ಪಟ್ಟಿತು. ನಾನು ಭಾಗವಹಿಸಲು ನಿರಾಕರಿಸಿದೆ, ಯಾಕಂದರೆ ಯೇಸು ಡಿಸೆಂಬರ್ ತಿಂಗಳಿನ ಚಳಿಯಲ್ಲಿ ಜನಿಸಲಿಲ್ಲ ಮತ್ತು ಆದಿ ಕ್ರೈಸ್ತರು ಕ್ರಿಸ್ಮಸನ್ನು ಆಚರಿಸಲಿಲ್ಲವೆಂಬುದನ್ನು ನಾನು ಕಲಿತಿದ್ದೆ.—ಲೂಕ 2:8-12ನ್ನು ಹೋಲಿಸಿರಿ.
“ಐಕ್ಯ ಘೋಷಕರು” ಎಂಬ ಸಮ್ಮೇಳನವು 1944, ಡಿಸೆಂಬರ್ 27ರಿಂದ 31ರ ವರೆಗೆ ಜಬಲ್ಪುರ್ನಲ್ಲಿ ನಡಿಸಲ್ಪಟ್ಟಾಗ, ಉಪಸ್ಥಿತರಿದ್ದ ಸುಮಾರು 150 ಮಂದಿಯ ನಡುವೆ ನಾನೂ ಇದ್ದೆ. ಅಧಿವೇಶನದ ಅನೇಕ ಪ್ರತಿನಿಧಿಗಳು, ದಿಲ್ಲಿಯಿಂದ ರೈಲಿನ ಮೂಲಕ ಪ್ರಯಾಣಿಸಿದರು. ಇದು 600 ಕಿಲೋಮೀಟರುಗಳಿಗಿಂತಲೂ ದೂರದ ಪ್ರಯಾಣವಾಗಿತ್ತು. ಆ ಹೊರಾಂಗಣ ಹಿನ್ನಲೆಯಲ್ಲಿನ ಆ ಅದ್ಭುತಕರವಾದ ವಾತಾವರಣವನ್ನು ನಾನು ಎಂದಿಗೂ ಮರೆಯಲಾರೆ. ಅಲ್ಲಿ ನಾನು ಯೆಹೋವನ ಸಂಸ್ಥೆಯು ಕಾರ್ಯಪ್ರವೃತ್ತವಾಗಿರುವುದನ್ನು ನೋಡಿದೆ.
ಅಧಿವೇಶನದ ಪ್ರತಿನಿಧಿಗಳಿಗೆ ಶಾಲಾ ಶಯನಶಾಲೆಗಳಲ್ಲಿ ವಸತಿಯನ್ನು ಕೊಡಲಾಯಿತು. ಅಲ್ಲಿ ನಾವು ರಾಜ್ಯ ಗೀತೆಗಳನ್ನು ಹಾಡಿದೆವು ಮತ್ತು ಸಂತೋಷಕರ ಕ್ರೈಸ್ತ ಸಹವಾಸದಲ್ಲಿ ಆನಂದಿಸಿದೆವು. ಆ ಅಧಿವೇಶನದ ಸಮಯದಲ್ಲಿ ನಾನು ಸಾರ್ವಜನಿಕ ಸಾರುವ ಕೆಲಸದಲ್ಲಿ ಪಾಲ್ಗೊಳ್ಳಲಾರಂಭಿಸಿದೆ. ಇದು, ಅಂದಿನಿಂದ ನನಗೆ ಅತಿ ಪ್ರಿಯವಾಗಿ ಉಳಿದಿರುವ ಒಂದು ಕೆಲಸವಾಗಿದೆ.
ಇಂಗ್ಲೆಂಡಿನಲ್ಲಿ ಪೂರ್ಣ ಸಮಯದ ಶುಶ್ರೂಷೆ
ನಾನು 1946ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿ, ಬೇಗನೆ ವಲ್ವರ್ಟನ್ ಸಭೆಯೊಂದಿಗೆ ಸಹವಾಸ ಮಾಡಲಾರಂಭಿಸಿದೆ. ನಮ್ಮಲ್ಲಿ ಸುಮಾರು ಹತ್ತು ಮಂದಿ ರಾಜ್ಯ ಪ್ರಚಾರಕರು ಮಾತ್ರವಿದ್ದರೂ, ಅವರು ನನಗೆ ಹಾಯಾಗಿರುವಂತೆ ಮಾಡಿದರು, ಮತ್ತು ಭಾರತದಲ್ಲಿದ್ದ ನನ್ನ ಸಹೋದರರ ನಡುವೆ ನನಗಿದ್ದ ಅದೇ ಸಂತೃಪ್ತಿಯನ್ನು ನಾನು ಅನುಭವಿಸಿದೆ. ಸಭೆಯಲ್ಲಿ, ವಿರಾ ಕ್ಲಿಫ್ಟನ್, ಒಬ್ಬ ಪ್ರಾಮಾಣಿಕ, ಹೃದಯೋಲ್ಲಾಸಿತ ವ್ಯಕ್ತಿಯಾಗಿ ಎದ್ದುಕಾಣುತ್ತಿದ್ದಳು. ಅವಳಿಗೂ ನನ್ನಂತೆಯೇ ಒಬ್ಬ ಪಯನೀಯರ್—ಪೂರ್ಣ ಸಮಯದ ಶುಶ್ರೂಷಕರು ಕರೆಯಲ್ಪಡುವಂತೆ—ಆಗುವ ಅಪೇಕ್ಷೆಯಿದೆಯೆಂದು ನನಗೆ ತಿಳಿದುಬಂದಾಗ, ನಾವು ಮೇ 24, 1947ರಂದು ಮದುವೆಯಾದೆವು. ನಾನು ಒಂದು ಕ್ಯಾರವ್ಯಾನ್, ಅಥವಾ ಚಲಿಸುವ ಮನೆಯನ್ನು ಸಿದ್ಧಗೊಳಿಸಿದೆ, ಮತ್ತು ಮುಂದಿನ ವರ್ಷ ನಾವು ನಮ್ಮ ಪ್ರಥಮ ಪಯನೀಯರ್ ನೇಮಕವನ್ನು ಪಡೆದೆವು. ಅದು ಹಂಟಿಂಗ್ಡನ್ ಎಂಬ ಗ್ರಾಮೀಣ ಪಟ್ಟಣವಾಗಿತ್ತು.
ಆ ದಿನಗಳಲ್ಲಿ ನಾವು ಬೆಳಗ್ಗೆ ಬೇಗನೆ ಎದ್ದು, ಗ್ರಾಮೀಣ ಟೆರಿಟೊರಿಗೆ ನಮ್ಮ ಸೈಕಲುಗಳ ಮೇಲೆ ಹೊರಡುತ್ತಿದ್ದೆವು. ನಮ್ಮ ಇಡೀ ದಿನದ ಸಾರುವಿಕೆಯಲ್ಲಿ, ನಮ್ಮ ಮಧ್ಯಾಹ್ನದೂಟವನ್ನು ತಿನ್ನಲಿಕ್ಕಾಗಿ ಮಾತ್ರ ನಾವು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತಿದ್ದೆವು. ಎದುರುಗಾಳಿಯು ಎಷ್ಟೇ ಬಲವಾಗಿರಲಿ ಅಥವಾ ಮಳೆಯು ಎಷ್ಟೇ ಜೋರಾಗಿರಲಿ, ನಾವು ಮನೆಗೆ ನಮ್ಮ ಸೈಕಲುಗಳಲ್ಲಿ ಹಿಂದಿರುಗುತ್ತಿದ್ದಾಗ, ನಾವು ಕರ್ತನ ಕೆಲಸದಲ್ಲಿ ಸಂತೋಷಿತರೂ ತೃಪ್ತರೂ ಆಗಿರುತ್ತಿದ್ದೆವು.
ಸಮಯಾನಂತರ ನಾವು ನಮ್ಮ ಶುಶ್ರೂಷೆಯನ್ನು ವಿಸ್ತರಿಸಿ, ಇತರ ದೇಶಗಳ ಜನರೊಂದಿಗೆ “ಸುವಾರ್ತೆಯ”ನ್ನು ಹಂಚಲು ಹಾತೊರೆದೆವು. (ಮತ್ತಾಯ 24:14) ಆದುದರಿಂದ ನಾವು ಅಮೆರಿಕದ ನ್ಯೂ ಯಾರ್ಕಿನ ಸೌತ್ ಲ್ಯಾನ್ಸಿಂಗ್ನಲ್ಲಿರುವ ಗಿಲ್ಯಡ್ ಮಿಷನೆರಿ ಶಾಲೆಗೆ ಹಾಜರಾಗಲು ಅರ್ಜಿ ಹಾಕಿದೆವು. ಫೆಬ್ರವರಿ 1956ರಲ್ಲಿ ಪದವಿಪ್ರಾಪ್ತಿಯಾದ ಗಿಲ್ಯಡ್ನ 26ನೆಯ ತರಗತಿಗೆ ನಾವು ಕೊನೆಗೆ ಸ್ವೀಕರಿಸಲ್ಪಟ್ಟೆವು.
ಆಫ್ರಿಕದಲ್ಲಿ ವಿಸ್ತೃತ ಶುಶ್ರೂಷೆ
ನಮ್ಮ ಮಿಷನೆರಿ ನೇಮಕವು ಆಫ್ರಿಕದಲ್ಲಿರುವ, ಉತ್ತರ ರೊಡೇಷಿಯ (ಈಗ ಸಾಂಬಿಯಾ) ಆಗಿತ್ತು. ನಾವು ಆಗಮಿಸಿದ ಸ್ವಲ್ಪ ಸಮಯದಲ್ಲೇ, ನಾವು ಆ ದೇಶದ ಬೆತೆಲಿನಲ್ಲಿ ಸೇವೆ ಸಲ್ಲಿಸಲು ಕರೆಯಲ್ಪಟ್ಟೆವು. ನನ್ನ ಬೆತೆಲ್ ಕೆಲಸದ ಭಾಗವಾಗಿ, ನಾನು ಪೂರ್ವ ಆಫ್ರಿಕದ ಪತ್ರವ್ಯವಹಾರವನ್ನು ನೋಡಿಕೊಂಡೆ. ಈ ಪೂರ್ವ ಆಫ್ರಿಕದ ದೇಶಗಳಲ್ಲಿ ಒಂದಾದ ಕೆನ್ಯದಲ್ಲಿ, 1956ರಲ್ಲಿ ಕೇವಲ ನಾಲ್ಕು ಸಾಕ್ಷಿಗಳಿದ್ದರೂ, ಉತ್ತರ ರೊಡೇಷಿಯದಲ್ಲಿ 24,000ಕ್ಕಿಂತಲೂ ಹೆಚ್ಚು ಸಾಕ್ಷಿಗಳು ಇದ್ದರು. ಎಲ್ಲಿ ಅಗತ್ಯವು ಹೆಚ್ಚಾಗಿದೆಯೊ ಅಲ್ಲಿ ಸೇವೆ ಸಲ್ಲಿಸುವುದು ಎಷ್ಟು ಉತ್ತಮವಾಗಿರುವುದು ಎಂಬುದರ ಕುರಿತಾಗಿ ವಿರಾ ಮತ್ತು ನಾನು ಯೋಚಿಸಲಾರಂಭಿಸಿದೆವು.
ಅನಂತರ ನನಗೆ ಅನಿರೀಕ್ಷಿತವಾಗಿ, ಮೇಲ್ವಿಚಾರಕರ ಹತ್ತು ತಿಂಗಳ ವ್ಯಾಸಂಗಕ್ಕಾಗಿ ಗಿಲ್ಯಡ್ ಶಾಲೆಗೆ ಹೋಗಲು ಇನ್ನೊಂದು ಆಮಂತ್ರಣವು ಸಿಕ್ಕಿತು. ವಿರಾಳನ್ನು ಉತ್ತರ ರೊಡೇಷಿಯದಲ್ಲಿ ಬಿಟ್ಟು, ಆ ಸಮಯದಲ್ಲಿ ಗಿಲ್ಯಡ್ ಶಾಲೆಯು ನೆಲೆಗೊಂಡಿದ್ದ ನ್ಯೂ ಯಾರ್ಕ್ ನಗರಕ್ಕೆ ನಾನು ಪ್ರಯಾಣಿಸಿದೆ. ನವೆಂಬರ್ 1962ರಲ್ಲಿ ವ್ಯಾಸಂಗವನ್ನು ಮುಗಿಸಿದ ಅನಂತರ, ಕೆನ್ಯದಲ್ಲಿ ಒಂದು ಬ್ರಾಂಚ್ ಆಫೀಸನ್ನು ಸ್ಥಾಪಿಸಲಿಕ್ಕಾಗಿ ನಾನು ಅಲ್ಲಿಗೆ ನೇಮಿಸಲ್ಪಟ್ಟೆ. ಆ ಸಮಯದೊಳಗೆ, ಕೆನ್ಯದಲ್ಲಿ ನೂರಕ್ಕಿಂತಲೂ ಹೆಚ್ಚು ಸಾಕ್ಷಿಗಳಿದ್ದರು.
ವಿರಾಳನ್ನು ಭೇಟಿಯಾಗಲು ಉತ್ತರ ರೊಡೇಷಿಯಕ್ಕೆ ಹಿಂದಿರುಗುವ ಮಾರ್ಗದಲ್ಲಿ, ನಾನು ಕೆನ್ಯದ ನೈರೋಬಿಯಲ್ಲಿ ಸ್ವಲ್ಪ ಸಮಯ ತಂಗಬೇಕಾಗಿತ್ತು. ಆದರೆ ನಾನು ಆಗಮಿಸಿದಾಗ, ಒಡನೆಯೇ ಕೆನ್ಯದೊಳಕ್ಕೆ ಪ್ರವೇಶಿಸಲು ಅಧಿಕೃತ ಅನುಮತಿಯನ್ನು ಪಡೆಯುವ ಒಂದು ಅವಕಾಶವಿದೆಯೆಂದು, ಗಿಲ್ಯಡ್ನ 25ನೆಯ ತರಗತಿಯ ಒಬ್ಬ ಪದವೀಧರನಾದ ಬಿಲ್ ನಿಸ್ಬೆಟ್ ನನಗೆ ಹೇಳಿದನು. ನಾವು ವಲಸಿಗರಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಸಮೀಪಿಸಿದೆವು ಮತ್ತು ಕೆಲವೇ ನಿಮಿಷಗಳೊಳಗೆ, ಕೆನ್ಯದಲ್ಲಿ ಐದು ವರ್ಷಗಳ ವರೆಗೆ ಉಳಿಯಲು ನಮ್ಮನ್ನು ಅನುಮತಿಸುವ ದಸ್ತಾವೇಜುಗಳನ್ನು ನಾನು ಪಡೆದುಕೊಂಡೆ. ಆದುದರಿಂದ ನಾನು ಎಂದೂ ಉತ್ತರ ರೊಡೇಷಿಯಕ್ಕೆ ಹಿಂದಿರುಗಿ ಹೋಗಲಿಲ್ಲ; ಬದಲಿಗೆ, ವಿರಾ ನನ್ನನ್ನು ನೈರೋಬಿಯಲ್ಲಿ ಜೊತೆಗೂಡಿದಳು.
ನಮಗಾಗಿ ತಯಾರಿಸಲ್ಪಟ್ಟ ಸ್ವಾಹಿಲಿ ಭಾಷೆಯ ವ್ಯಾಸಂಗಕ್ಕೆ ಹಾಜರಾದ ಅನಂತರ, ಚಿಕ್ಕದಾದ ನೈರೋಬಿ ಸಭೆಯೊಂದಿಗೆ ನಾವು ಶುಶ್ರೂಷೆಯಲ್ಲಿ ಜೊತೆಗೂಡಿದೆವು. ಕೆಲವೊಮ್ಮೆ ನಾವು ನಮ್ಮ ಸ್ವಾಹಿಲಿ ಭಾಷೆಯ ಪ್ರಸಂಗವನ್ನು ಓದಿದ ಬಳಿಕ, ಮನೆಯವನು “ನನಗೆ ಇಂಗ್ಲಿಷ್ ಅರ್ಥವಾಗುವುದಿಲ್ಲ!” ಎಂದು ಉದ್ಗರಿಸುತ್ತಿದ್ದನು. ಇದೆಲ್ಲದ್ದರ ಎದುರಿನಲ್ಲಿಯೂ, ನಾವು ಪಟ್ಟುಹಿಡಿದು, ನಿಧಾನವಾಗಿ ಭಾಷೆಯ ತಡೆಗಟ್ಟನ್ನು ಜಯಿಸಿದೆವು.
ನಮ್ಮ ಟೆರಿಟೊರಿಯಲ್ಲಿ, ಯೆರೂಸಲೇಮ್ ಮತ್ತು ಯೆರಿಕೊ ಎಂಬಂತಹ ಬೈಬಲ್ ಹೆಸರುಗಳುಳ್ಳ ದೊಡ್ಡ ನಿವಾಸ ಸಂಕೀರ್ಣಗಳು ಒಳಗೂಡಿದ್ದವು. ಆಸಕ್ತಿಯನ್ನು ಕ್ಷಿಪ್ರವಾಗಿ ಬೆಳೆಸಲಾಯಿತು, ಮತ್ತು ಈ ಕ್ಷೇತ್ರಗಳಿಂದ ಅನೇಕರು ಹೊಸ ರಾಜ್ಯ ಪ್ರಚಾರಕರಾಗಿ ಪರಿಣಮಿಸಿದರು. ಬೈಬಲ್ ಸತ್ಯವು ಈ ಜನರ ಮೇಲೆ ಎಂತಹ ಒಂದು ಗಮನಾರ್ಹವಾದ ಪ್ರಭಾವವನ್ನು ಬೀರಿತ್ತು! ರಾಜ್ಯಕ್ಕಾಗಿ ನಿಷ್ಠೆಯು ಯೆಹೋವನ ಜನರ ನಡುವೆ ಐಕ್ಯವನ್ನು ತಂದಂತೆ, ಕುಲಸಂಬಂಧಿತ ಶ್ರೇಷ್ಠಭಾವದ ಅನಿಸಿಕೆಗಳು ಮಾಯವಾದವು. ಸಾಕ್ಷ್ಯೇತರರ ನಡುವೆ ತೀರ ಅಸಾಮಾನ್ಯವಾದ ಸಂಗತಿಯಾಗಿರುವ ಅಂತರ್ಕುಲ ವಿವಾಹಗಳೂ ನಡೆದವು.
ಹೊಸ ರಾಜ್ಯ ಘೋಷಕರು ಸತ್ಯವನ್ನು ಹುರುಪಿನಿಂದ ಅಂಗೀಕರಿಸಿದರು. ಉದಾಹರಣೆಗಾಗಿ, ಸತ್ಯವು ತನ್ನ ಮನೆ ಕ್ಷೇತ್ರವನ್ನು ಪ್ರವೇಶಿಸುವಂತೆ ಸಾಮ್ಸನ್ ಎಷ್ಟು ಕಾತುರನಾಗಿದ್ದನೆಂದರೆ, ಅಲ್ಲಿಗೆ ಪಯನೀಯರರು ಕಳುಹಿಸಲ್ಪಡುವಂತೆ ಅವನು ಬೇಡುತ್ತಾ ಇದ್ದನು. ವಾಸ್ತವದಲ್ಲಿ, ಅವರಿಗಾಗಿ ವಸತಿಯನ್ನು ಒದಗಿಸಲು, ಉಕಾಂಬಾನಿ ಪ್ರದೇಶದಲ್ಲಿರುವ ತನ್ನ ಮನೆಗೆ ಅವನು ಒಂದು ಕೋಣೆಯನ್ನು ಸೇರಿಸಿದನು. ಸ್ವಲ್ಪ ಸಮಯದೊಳಗೆ, ರಾಜ್ಯ ಘೋಷಕರ ಒಂದು ಹೊಸ ಸಭೆಯು ಅಲ್ಲಿ ಸ್ಥಾಪಿಸಲ್ಪಟ್ಟಿತು.
ಹಲವಾರು ಸಲ, ನಾನು ಪೂರ್ವ ಆಫ್ರಿಕ ದೇಶವಾದ ಇಥಿಯೋಪ್ಯದಲ್ಲಿನ ಸಹೋದರರನ್ನು ಭೇಟಿಮಾಡಿದೆ. ಅವರು, ಸೆರೆಮನೆವಾಸಗಳು, ಹೊಡೆತಗಳು, ಮತ್ತು ಸತತವಾದ ಕಾವಲಿನ ಎದುರಿನಲ್ಲೂ ಶುಶ್ರೂಷೆಯಲ್ಲಿ ಒಂದು ತಿಂಗಳಿಗೆ ಸರಾಸರಿ 20ಕ್ಕಿಂತಲೂ ಹೆಚ್ಚು ತಾಸುಗಳನ್ನು ಕಳೆಯುತ್ತಿದ್ದರು. ಒಮ್ಮೆ, ಎರಡು ಬಸ್ ತುಂಬ ಇಥಿಯೋಪ್ಯದ ಸಹೋದರ ಸಹೋದರಿಯರು, ಕೆನ್ಯದಲ್ಲಿನ ಒಂದು ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು, ಅಪಾಯಕಾರಿಯಾದ ಪರ್ವತ ಸಾಲುಗಳನ್ನು ದಾಟುತ್ತಾ, ಒಂದು ವಾರ ಪ್ರಯಾಣಿಸಿದರು. ಅವರ ದೇಶದಲ್ಲಿ ರಾಜ್ಯ ಸಾಹಿತ್ಯವು ಲಭ್ಯವಿರುವಂತೆ ಏರ್ಪಡಿಸುವುದರಲ್ಲಿನ ಅವರ ವ್ಯಾವಹಾರಿಕ ಜಾಣತನವು ಗಮನಾರ್ಹವಾಗಿತ್ತು. ಕೆನ್ಯದಲ್ಲಿದ್ದ ನಾವು, ಅವರಿಗೆ ಬೇಕಾಗುವಷ್ಟು ಸಾಹಿತ್ಯವು ಇರುವಂತೆ ಸಹಾಯ ಮಾಡಲು ಸಂತೋಷಿತರಾಗಿದ್ದೆವು.
ಕೆನ್ಯದಲ್ಲಿನ ನಮ್ಮ ಕೆಲಸದ ಮೇಲಿನ ಅಧಿಕೃತ ನಿಷೇಧವು 1973ರಲ್ಲಿ ವಿಧಿಸಲ್ಪಟ್ಟಿತು, ಮತ್ತು ಮಿಷನೆರಿಗಳು ದೇಶವನ್ನು ಬಿಟ್ಟುಹೋಗುವಂತೆ ಒತ್ತಾಯಿಸಲ್ಪಟ್ಟರು. ಅಷ್ಟರೊಳಗೆ ಕೆನ್ಯದಲ್ಲಿ 1,200ಕ್ಕಿಂತಲೂ ಹೆಚ್ಚು ಸಾಕ್ಷಿಗಳಿದ್ದರು ಮತ್ತು ಇವರಲ್ಲಿ ಹೆಚ್ಚಿನವರು, ನಮಗೆ ಒಂದು ಮರೆಯಲಾಗದ ಬೀಳ್ಕೊಡುವಿಕೆಯನ್ನು ಕೊಡಲು ವಿಮಾನ ನಿಲ್ದಾಣಕ್ಕೆ ಬಂದರು. ಅವರ ಉಪಸ್ಥಿತಿಯು, ನಾವು ಯಾವುದೊ ರೀತಿಯ ಪ್ರಸಿದ್ಧ ವ್ಯಕ್ತಿಗಳಾಗಿದ್ದೇವೊ ಎಂದು ಕೇಳುವಂತೆ ಒಬ್ಬ ಜೊತೆ ಪ್ರಯಾಣಿಕನನ್ನು ಪ್ರಚೋದಿಸಿತು. ವಿರಾ ಮತ್ತು ನಾನು ಇಂಗ್ಲೆಂಡಿಗೆ ಹಿಂದಿರುಗಿದೆವು ಮತ್ತು ಅಲ್ಲಿ ನಮಗೆ ಒಂದು ನೇಮಕವು ನೀಡಲ್ಪಟ್ಟಿತ್ತಾದರೂ, ನಾವು ಆಫ್ರಿಕಕ್ಕೆ ಹಿಂದಿರುಗಲು ಹಾತೊರೆದೆವು.
ಪುನಃ ಆಫ್ರಿಕಕ್ಕೆ
ಹೀಗೆ ಕೆಲವು ತಿಂಗಳುಗಳ ನಂತರ, ಪಶ್ಚಿಮ ಆಫ್ರಿಕದ ದೇಶವಾಗಿರುವ ಘಾನದ ರಾಜಧಾನಿಯಾದ, ಆಕ್ರದಲ್ಲಿರುವ ಬೆತೆಲಿಗೆ ನಮ್ಮ ಹೊಸ ನೇಮಕವನ್ನು ನಾವು ಪಡೆದೆವು. ಇಲ್ಲಿ ನನ್ನ ನೇಮಕಗಳಲ್ಲಿ ಒಂದು, ಅಲ್ಲಿರುವ ನಮ್ಮ ಸಹೋದರರು ಎದುರಿಸಿದ ಕಷ್ಟಗಳೊಂದಿಗೆ ಎದುರೆದುರಾಗಿ ನಿಲ್ಲಿಸಿತು. ಬೆತೆಲ್ ಕುಟುಂಬದ ಆಹಾರ ಮತ್ತು ಸರಬರಾಯಿಗಳ ಖರೀದಿಗಳನ್ನು ನಾನು ನೋಡಿಕೊಂಡಂತೆ, ಆಹಾರ ಸಾಮಗ್ರಿಗಳ ವಿಪರೀತವಾದ ಬೆಲೆಗಳನ್ನು ನೋಡಿ ಆಶ್ಚರ್ಯಚಕಿತನಾದೆ. ಅನೇಕವೇಳೆ ಒಬ್ಬನು ತನಗೆ ಅಗತ್ಯವಿರುವ ಐಟಮ್ಗಳನ್ನು ಖರೀದಿಸಲು ಸಾಧ್ಯವೇ ಇರಲಿಲ್ಲ. ಪೆಟ್ರೋಲಿನ ಅಭಾವಗಳು ಮತ್ತು ಬಿಡಿ ಭಾಗಗಳ ಕೊರತೆಯು ಹೆಚ್ಚಿನ ಸಮಸ್ಯೆಗಳನ್ನು ತಂದವು.
ಘಾನದಲ್ಲಿರುವ ನಮ್ಮ ಸಹೋದರರು ವಿಕಸಿಸಿಕೊಂಡಿರುವ ಒಂದು ಗುಣವಾದ, ತಾಳ್ಮೆಯ ಮಹತ್ವವನ್ನು ನಾನು ಕಲಿತುಕೊಂಡೆ. ಲಂಚದ ಮೂಲಕ ಜೀವನದ ಆವಶ್ಯಕತೆಗಳನ್ನು ಪಡೆದುಕೊಳ್ಳುವ ಪ್ರಲೋಭನೆಯನ್ನು ಅವರು ತಿರಸ್ಕರಿಸಿದಂತೆ, ಅವರು ಕಾಪಾಡಿಕೊಂಡ ಹರ್ಷಚಿತ್ತ ಮನೋಭಾವವನ್ನು ನೋಡುವುದು ತುಂಬ ಉತ್ತೇಜನದಾಯಕವಾಗಿತ್ತು. ಫಲಸ್ವರೂಪವಾಗಿ, ಘಾನದಲ್ಲಿನ ಯೆಹೋವನ ಜನರು, ತಮ್ಮ ಪ್ರಾಮಾಣಿಕತೆಗಾಗಿ ಸುಪ್ರಸಿದ್ಧರಾದರು ಮತ್ತು ಅನೇಕ ಅಧಿಕಾರಿಗಳೊಂದಿಗೆ ಒಂದು ಒಳ್ಳೆಯ ಹೆಸರನ್ನು ಆನಂದಿಸಿದರು.
ಆದಾಗಲೂ, ಭೌತಿಕ ಅಭಾವಗಳ ಎದುರಿನಲ್ಲಿಯೂ, ಹೆಚ್ಚುತ್ತಿರುವ ಆತ್ಮಿಕ ಸಮೃದ್ಧಿಯು ಇತ್ತು. ದೇಶದಾದ್ಯಂತ, ನಮ್ಮ ಬೈಬಲ್ ಪ್ರಕಾಶನಗಳು ಕಾರ್ಯತಃ ಪ್ರತಿಯೊಂದು ಮನೆಯಲ್ಲಿ ಕಂಡುಬರುತ್ತಿದ್ದವು. ಮತ್ತು ಘಾನದಲ್ಲಿ ರಾಜ್ಯ ಘೋಷಕರ ಸಂಖ್ಯೆಯು, 1973ರಲ್ಲಿ ನಾವು ಆಗಮಿಸಿದಾಗ ಇದ್ದ 17,156ರಿಂದ 1981ರಲ್ಲಿ 23,000ಕ್ಕಿಂತಲೂ ಹೆಚ್ಚಿನ ಸಂಖ್ಯೆಗೆ ಬೆಳೆಯುವುದನ್ನು ನಾವು ನೋಡಿದೆವು. ಅದೇ ವರ್ಷದಲ್ಲಿ, ಭಾರತ ಮತ್ತು ಆಫ್ರಿಕದಲ್ಲಿ ಸೂರ್ಯನಿಗೆ ಅನೇಕ ವರ್ಷಗಳ ಒಡ್ಡುವಿಕೆಯಿಂದಾಗಿ ನಿಸ್ಸಂದೇಹವಾಗಿ ಹೆಚ್ಚಿಸಲ್ಪಟ್ಟ ನನ್ನ ಚರ್ಮದ ಕ್ಯಾನ್ಸರ್ನೊಂದಿಗಿನ ನನ್ನ ಪಾಳಿಗಳು, ನಾವು ಘಾನವನ್ನು ಬಿಡುವಂತೆ ಮತ್ತು ಕ್ರಮದ ಚಿಕಿತ್ಸೆಗಾಗಿ ಇಂಗ್ಲೆಂಡಿಗೆ ಹಿಂದಿರುಗುವಂತೆ ನಮ್ಮನ್ನು ಒತ್ತಾಯಿಸಿದವು.
ಇಂಗ್ಲೆಂಡಿನಲ್ಲಿನ ಹೊಸ ಪರಿಸ್ಥಿತಿಗಳು
ನನಗೆ, ನಮ್ಮ ಹಿಂದಿರುಗುವಿಕೆಯು, ನಮ್ಮ ಶುಶ್ರೂಷೆಯಲ್ಲಿ ಒಂದು ಗಣನೀಯ ಅಳವಡಿಸುವಿಕೆಯನ್ನು ಅರ್ಥೈಸಿತು. ದೇವರನ್ನು ಮತ್ತು ಬೈಬಲನ್ನು ಗೌರವಿಸಿದ ಜನರೊಂದಿಗೆ ಸುಲಭವಾಗಿ ಮಾತಾಡುವದು ನನಗೆ ಒಗ್ಗಿಹೋಗಿತ್ತು. ಆದರೆ ಲಂಡನಿನಲ್ಲಿ ನಾನು ಅಂತಹ ಮನೋಭಾವವನ್ನು ಕಂಡುಕೊಳ್ಳುವುದೇ ಅಪರೂಪ. ಬ್ರಿಟನಿನಲ್ಲಿರುವ ಸಹೋದರರ ಪಟ್ಟುಹಿಡಿಯುವಿಕೆಯಿಂದ ನಾನು ಬೆರಗಾಗುತ್ತೇನೆ. ಇದು, ಆತ್ಮಿಕವಾಗಿ “ತೊಳಲಿ ಬಳಲಿ ಹೋಗಿ”ರುವ ಜನರಿಗಾಗಿ ಹೆಚ್ಚು ಅನುಭೂತಿಯನ್ನು ವಿಕಸಿಸಿಕೊಳ್ಳುವ ಅಗತ್ಯವನ್ನು ನಾನು ಕಾಣುವಂತೆ ಮಾಡಿಯದೆ.—ಮತ್ತಾಯ 9:36.
ಆಫ್ರಿಕದಿಂದ ನಾವು ಹಿಂದಿರುಗಿ ಬಂದ ಅನಂತರ, ವಿರಾ ಮತ್ತು ನಾನು ಲಂಡನ್ ಬೆತೆಲಿನಲ್ಲಿ, ಸೆಪ್ಟೆಂಬರ್ 1991ರಲ್ಲಿ 73ನೆಯ ವಯಸ್ಸಿನಲ್ಲಿ ಅವಳ ಮರಣದ ತನಕ ಜೊತೆಯಾಗಿ ಸೇವಿಸಿದೆವು. ಇಷ್ಟೊಂದು ವರ್ಷಗಳ ವರೆಗೆ ಶುಶ್ರೂಷೆಯಲ್ಲಿ ನನ್ನೊಂದಿಗೆ ಜೊತೆಜೊತೆಯಾಗಿ ಶ್ರಮಿಸಿರುವ ಇಂತಹ ಒಬ್ಬ ನಂಬಿಗಸ್ತ ಸಂಗಾತಿಯನ್ನು ಕಳೆದುಕೊಳ್ಳುವುದು ಸುಲಭವಾಗಿರುವುದಿಲ್ಲ. ನನಗೆ ಬಹಳವಾಗಿ ಅವಳ ಅಗಲಿಕೆಯ ಅನಿಸಿಕೆಯಾಗುತ್ತದೆ. ಆದರೆ ಸುಮಾರು 250 ಸದಸ್ಯರುಗಳುಳ್ಳ ನಮ್ಮ ಬೆತೆಲ್ ಕುಟುಂಬದಿಂದ ನಾನು ಪಡೆಯುವ ಉತ್ತಮವಾದ ಬೆಂಬಲಕ್ಕಾಗಿ ನಾನು ಸಂತೋಷಿಸುತ್ತೇನೆ.
ಯೆಹೋವನ ಸಂಸ್ಥೆಯ ಮುನ್ಚಲನೆಯನ್ನು ಅನುಭವಿಸುವುದು ಮತ್ತು ಅನೇಕರು ಪೂರ್ಣ ಸಮಯದ ಶುಶ್ರೂಷೆಯನ್ನು ತಮ್ಮ ಜೀವನ ರೀತಿಯಾಗಿ ಮಾಡಿಕೊಳ್ಳುತ್ತಿರುವುದನ್ನು ನೋಡುವುದನ್ನು ನಾನು ನಿಜವಾಗಿ ಒಂದು ಸುಯೋಗವಾಗಿ ಎಣಿಸುತ್ತೇನೆ. ಇದಕ್ಕಿಂತಲೂ ಹೆಚ್ಚು ಉತ್ತಮವಾದ ಜೀವನ ರೀತಿಯಿಲ್ಲ ಎಂದು ನಾನು ನಿಮಗೆ ಆಶ್ವಾಸನೆ ನೀಡಬಲ್ಲೆ, ಯಾಕಂದರೆ “ಯೆಹೋವನು . . . ತನ್ನ ನಿಷ್ಠಾವಂತರನ್ನು ಬಿಟ್ಟುಬಿಡುವುದಿಲ್ಲ.”—ಕೀರ್ತನೆ 37:28, NW.
[ಪುಟ 23 ರಲ್ಲಿರುವ ಚಿತ್ರ]
ನಾವು 1947ರಿಂದ 1955ರ ವರೆಗೆ, ಇಂಗ್ಲೆಂಡಿನಲ್ಲಿ ಪಯನೀಯರ್ ಸೇವೆ ಮಾಡಿದೆವು
[ಪುಟ 23 ರಲ್ಲಿರುವ ಚಿತ್ರ]
ಭಾರತದಲ್ಲಿನ ಒಂದು ಅಧಿವೇಶನದ ಸಮಯದಲ್ಲಿ ಪ್ರಥಮ ಸಲ ಶುಶ್ರೂಷೆಯಲ್ಲಿ
[ಪುಟ 23 ರಲ್ಲಿರುವ ಚಿತ್ರ]
ಉತ್ತರ ರೊಡೇಷಿಯದಲ್ಲಿ ನಾವು ಮಿಷನೆರಿಗಳಾಗಿದ್ದಾಗ
[ಪುಟ 23 ರಲ್ಲಿರುವ ಚಿತ್ರ]
1985ರಲ್ಲಿ, 12 ವರ್ಷಗಳಿಂದ ನಾವು ನೋಡಿರದಿದ್ದ ಸ್ನೇಹಿತರೊಂದಿಗೆ