ಪೀಡಿತರಿಗೆ ಎಂದಾದರೂ ಪರಿಹಾರವಿರುವುದೊ?
ನಿಮಗೆ ಮಾತ್ರವಲ್ಲ, ಇಡೀ ಮಾನವಕುಲಕ್ಕೇ, ಕಷ್ಟಾನುಭವವು ಕೊನೆಗೊಳ್ಳುವುದನ್ನು ನೋಡಲು ನೀವು ಬಯಸುತ್ತೀರೊ? ಈ ಉದಾಹರಣೆಗಳನ್ನು ಪರಿಗಣಿಸಿರಿ:
ಸೋನ್ಯ ತುಂಬ ಕಷ್ಟಾನುಭವಿಸಿದ್ದಾಳೆ.a ಮೊದಲಾಗಿ, ತನ್ನ ಗಂಡನು ಹತ್ತು ವರ್ಷಗಳಿಂದ ವ್ಯಭಿಚಾರದ ಸಂಬಂಧವನ್ನು ಹೊಂದಿದ್ದನೆಂದು ಅವಳು ಕಂಡುಹಿಡಿದಳು. ತದನಂತರ ಅವಳ ಕಿರಿಯ ಮಗನು ಏಚ್ಐವಿಯಿಂದ ಸೋಂಕಿತನಾಗಿ, ಏಡ್ಸ್ ರೋಗದಿಂದ ಮೃತಪಟ್ಟನು. ಎರಡು ವರ್ಷಗಳ ಬಳಿಕ ಅವಳ ಇನ್ನೊಬ್ಬ ಮಗನೂ ಅಸ್ವಸ್ಥನಾಗಿ, ಸ್ವಲ್ಪ ಸಮಯದಲ್ಲೇ ಏಡ್ಸ್ ರೋಗದಿಂದ ಮೃತಪಟ್ಟನು. “ಅವನ ರೋಗದ ಅಂತಿಮ ಅವಸ್ಥೆಯು ದೀರ್ಘಕಾಲದ ವರೆಗೆ ಉಳಿದಿತ್ತು. ಅವನು ತೀವ್ರವಾದ ಖಿನ್ನತೆಯನ್ನು ಅನುಭವಿಸಿದನು, ಅವನ ಕೂದಲು ಉದುರಿಹೋಯಿತು, ಮತ್ತು ಅವನಿಗೆ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲ. ಅದು ತುಂಬಾ ದುಃಖಕರವಾಗಿತ್ತು” ಎಂದು ಸೋನ್ಯ ಜ್ಞಾಪಿಸಿಕೊಳ್ಳುತ್ತಾಳೆ.
ಬ್ರೆಸಿಲಿನ ವಿಶ್ವವಿದ್ಯಾನಿಲಯದ ಒಬ್ಬ ವಿದ್ಯಾರ್ಥಿನಿಯಾಗಿದ್ದ ಫಾಬ್ಯಾನ, ಲೋಕದ ಸಾಮಾಜಿಕ ಅನ್ಯಾಯಗಳ ಕುರಿತು ಚಿಂತಿತಳಾಗಿದ್ದಳು. ತದನಂತರ ಅವಳ ಜೀವಿತಕ್ಕೇ ದುರಂತವು ಬಡಿಯಿತು. ಖಿನ್ನತೆಯಿಂದ ಕಷ್ಟಾನುಭವಿಸುತ್ತಿದ್ದ ಅವಳ ಸಹೋದರನು, ಆತ್ಮಹತ್ಯೆ ಮಾಡಿಕೊಂಡನು. ಫಾಬ್ಯಾನಳು ತನ್ನ ಉದ್ಯೋಗವನ್ನು ಕಳೆದುಕೊಂಡಾಗ, ಅವಳು ಅಂತಹ ದೌರ್ಭಾಗ್ಯವನ್ನು ಅನುಭವಿಸುವಂತೆ, ಯಾರೋ ಒಬ್ಬರು ಅವಳನ್ನು ಮಂತ್ರಮುಗ್ಧಳಾಗಿ ಮಾಡಿದ್ದಾರೆಂದು ತರ್ಕಿಸುತ್ತಾ, ಪೈ ಡೀ ಸಾಂಟೂ (ಮಾಂತ್ರಿಕ)ವನ್ನು ಕಾಣಬೇಕೆಂದು ಫಾಬ್ಯಾನಳ ಗೆಳತಿಯೊಬ್ಬಳು ಸಲಹೆ ನೀಡಿದಳು! ಆದರೆ ಪೈ ಡೀ ಸಾಂಟೂವಿನಿಂದ ಯಾವುದೇ ಪರಿಹಾರ ಸಿಗಲಿಲ್ಲ. ಬದಲಾಗಿ, ತನ್ನ ಪ್ರತಿಕೂಲ ಪರಿಸ್ಥಿತಿಗಳ ಕಾರಣದಿಂದ ಫಾಬ್ಯಾನಳಿಗೆ ಚಿತ್ರಹಿಂಸೆಯ ಅನಿಸಿಕೆಯಾಗಿ, ನಿದ್ರಿಸುವುದು ಅಸಾಧ್ಯವಾಯಿತು.
ಆನಳ ಕಡುಸಂಕಟವು ಜೀವಿತದಲ್ಲಿ ಅತಿ ಬೇಗನೆ ಆರಂಭವಾಯಿತು. “ನಾನು ಒಂದು ವರ್ಷದವಳಿದ್ದಾಗ, ನನ್ನ ತಾಯಿ ನನ್ನನ್ನು ತೊರೆದರು, ಆದುದರಿಂದ ನಾನು ನನ್ನ ಅಜ್ಜಿಯಿಂದ ಪರಾಮರಿಸಲ್ಪಟ್ಟೆ” ಎಂದು ಅವಳು ಹೇಳುತ್ತಾಳೆ. ತದನಂತರ, ಆನ ಕೇವಲ ಮೂರು ವರ್ಷದವಳಿದ್ದಾಗ, ಅವಳ ಅಜ್ಜಿ ಮೃತಪಟ್ಟರು. ರೀಯೊ ಡೇ ಸನೆರೊದಲ್ಲಿರುವ ಒಂದು ಅನಾಥಾಲಯಕ್ಕೆ ಆನಳನ್ನು ಕಳುಹಿಸಲಾಯಿತು. ಅಲ್ಲಿ ಅವಳು 13 ವರ್ಷದವಳಾಗುವ ತನಕ ಉಳಿದಳು. “ಅಲ್ಲಿ ನಮ್ಮನ್ನು ತುಂಬ ಕೆಟ್ಟ ರೀತಿಯಲ್ಲಿ ಉಪಚರಿಸಲಾಯಿತು, ಮತ್ತು ನಾನು ದಂಗೆಕೋರಳಾದೆ” ಎಂದು ಅವಳು ಹೇಳುತ್ತಾಳೆ. “ನಾನು ದೊಡ್ಡವಳಾದಂತೆಲ್ಲಾ, ಬಹುಮಟ್ಟಿಗೆ ಪ್ರತಿಯೊಂದು ವಿಷಯದ ಕುರಿತಾಗಿ ಕಾದಾಡುತ್ತಿದ್ದೆ.”
ಒಂದಲ್ಲ ಒಂದು ವಿಧದಲ್ಲಿ ಕಡುಸಂಕಟವು ಪ್ರತಿಯೊಬ್ಬ ಮನುಷ್ಯನ ಜೀವಿತವನ್ನು ಬಾಧಿಸುವಂತೆ ತೋರುತ್ತದೆ. ವಾಸ್ತವವಾಗಿ, ನಾವು ಪ್ರತಿ ದಿನ, ವಾರ್ತೆಯನ್ನು ವೀಕ್ಷಿಸುವಾಗ, ಓದುವಾಗ, ಅಥವಾ ಅದಕ್ಕೆ ಕಿವಿಗೊಡುವಾಗಲೆಲ್ಲಾ, ಮಾನವ ದುರಂತದ ಕುರಿತಾದ ಕಥೆಗಳನ್ನು ಕೇಳಿಸಿಕೊಳ್ಳುತ್ತೇವೆ. “ಅಧಿಕ ಪ್ರಮಾಣದ ವಾರ್ತಾ ಸಂವಾದವಿರುವ ನಮ್ಮ . . . ಶಕವು, ನಾವು ದುರ್ವಾರ್ತೆಗಳ ಸತತ ಸುರಿಮಳೆಯಿಂದ ತಪ್ಪಿಸಿಕೊಳ್ಳುವುದನ್ನು, ಕಾರ್ಯತಃ ಅಸಾಧ್ಯವನ್ನಾಗಿ ಮಾಡಿಬಿಟ್ಟಿದೆ” ಎಂದು ಡಾ. ಮೇರಿ ಸೈಕ್ಸ್ ವೈಲಿ ಬರೆಯುತ್ತಾರೆ. “ಯುದ್ಧಗಳು, ನೈಸರ್ಗಿಕ ವಿಪತ್ತುಗಳು, ಕೈಗಾರಿಕೋದ್ಯಮದ ಮಹಾದುರಂತಗಳು, ಹೆದ್ದಾರಿ ಕಗ್ಗೊಲೆ, ದುಷ್ಕೃತ್ಯ, ಭಯೋತ್ಪಾದನೆ, ಲೈಂಗಿಕ ದುರುಪಯೋಗ, ಬಲಾತ್ಕಾರ ಸಂಭೋಗ, ಗೃಹ ಹಿಂಸಾಚಾರ—ಇವೆಲ್ಲವೂ ಆಘಾತವನ್ನು, 20ನೆಯ ಶತಮಾನದ ಕರಾಳವಾದ ಹಾಗೂ ದೈನಂದಿನ ಪ್ರಧಾನೋದ್ದೇಶವಾಗಿ ಮಾಡುತ್ತವೆ.” ಕ್ರೈಸ್ತ ಅಪೊಸ್ತಲ ಪೌಲನು ಮಾನವ ಅನುಭವವನ್ನು ವಾಸ್ತವಿಕವಾಗಿ ಸಾರಾಂಶಿಸಿ ಹೇಳಿದ್ದು: “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆ.”—ರೋಮಾಪುರ 8:22.
ನಿಮ್ಮ ಕುರಿತಾಗಿ ಏನು? ನೀವೂ ಕಡುಸಂಕಟವನ್ನು ಅನುಭವಿಸುತ್ತಿದ್ದೀರೊ? ನೀವು ಯಾವ ಪರಿಹಾರವನ್ನು ನಿರೀಕ್ಷಿಸಸಾಧ್ಯವಿದೆ? ನೀವು ಎಂದಾದರೂ ನಿಜ ಶಾಂತಿಯನ್ನು ಪಡೆದುಕೊಳ್ಳುವಿರೊ? ಸೋನ್ಯ, ಫಾಬ್ಯಾನ, ಮತ್ತು ಆನ, ನಿಜವಾದ ಸಾಂತ್ವನ ಹಾಗೂ ನೈಜ ಪ್ರಮಾಣದ ಶಾಂತಿಯನ್ನು ಕಂಡುಕೊಂಡರು! ಅದರ ಕುರಿತಾಗಿ ನೀವು ಮುಂದಿನ ಲೇಖನದಲ್ಲಿ ಓದಸಾಧ್ಯವಿದೆ.
[ಅಧ್ಯಯನ ಪ್ರಶ್ನೆಗಳು]
a ಈ ಲೇಖನದಲ್ಲಿ ಹೆಸರುಗಳು ಬದಲಾಯಿಸಲ್ಪಟ್ಟಿವೆ.