ಈ ಸಮಯಗಳು ಏಕೆ ಇಷ್ಟೊಂದು ಕೆಟ್ಟದ್ದಾಗಿವೆ?
ನೀವು ವಾರ್ತಾಪತ್ರಿಕೆಯೊಂದನ್ನು ಓದಲು, ಟಿವಿಯಲ್ಲಿ ವಾರ್ತೆಯನ್ನು ನೋಡಲು, ಅಥವಾ ರೇಡಿಯೋದಲ್ಲಿ ವಾರ್ತಾಪ್ರಸಾರವನ್ನು ಕೇಳಲು ಕುಳಿತುಕೊಂಡಾಗ, ಕೆಲವು ಕೆಟ್ಟ ವಾರ್ತೆಯನ್ನು ನಿರೀಕ್ಷಿಸುತ್ತೀರಿ, ಅಲ್ಲವೇ? ನಡೆಯುತ್ತಿದ್ದ ಯುದ್ಧವು ಇನ್ನೂ ನಡೆಯುತ್ತಿದೆ, ಹಿಂಸಾತ್ಮಕ ಪಾತಕವು ಇನ್ನೂ ಅತಿರೇಕವಾಗಿದೆ ಅಥವಾ ಕ್ಷಾಮವು ಅಭಿವೃದ್ಧಿಶೀಲ ದೇಶವೊಂದರ ಶಕ್ತಿಯನ್ನು ಇನ್ನೂ ಕಸಿದುಕೊಳ್ಳುತ್ತಿದೆ ಎಂಬುದನ್ನು ಅರಿತುಕೊಳ್ಳಲು ನಿಮಗೆ ಪ್ರಾಯಶಃ ಆಶ್ಚರ್ಯವಾಗಲಿಕ್ಕಿಲ್ಲ.
ನೀವು ಈ ಸಂಭವಗಳಿಂದ ಕೊಂಚ ದೂರದಲ್ಲಿ ಜೀವಿಸುತ್ತಿದ್ದರೆ, ಪ್ರಾಯಶಃ ನೀವು ಇಂತಹ ವರದಿಗಳಿಂದ ಯಾವಾಗಲೂ ಅತಿಯಾಗಿ ತೊಂದರೆಗೀಡಾಗಲಿಕ್ಕಿಲ್ಲ. ಎಷ್ಟಾದರೂ, ಕಷ್ಟಾನುಭವಿಸುವ ಆ ಸಾಮಾನ್ಯ ಜನರೆಲ್ಲರಿಗೆ ಅನುಕಂಪವನ್ನು ತೋರಿಸಲು ಯಾರಿಗೆ ಸಾಧ್ಯವಿದೆ? ಹಾಗಿದ್ದರೂ, ವ್ಯಕ್ತಿಗಳನ್ನು ಕಷ್ಟಾನುಭವ ಬಾಧಿಸುವ ರೀತಿಯೊಂದಿಗೆ ನಾವು ಮುಖಾಮುಖಿ ತರಲ್ಪಟ್ಟಾಗ, ಮನತಟ್ಟದವರಾಗಿ ಉಳಿಯುವುದು ಬಹಳ ಕಷ್ಟಸಾಧ್ಯ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಒಂದು ಯುದ್ಧದ ಕುರಿತಾಗಿ ಓದುವುದು ಹಾಗೂ ಮರಣಗಳ ಬಗ್ಗೆ ಸಂಖ್ಯಾಸಂಗ್ರಹಣವನ್ನು ಪರ್ಯಾಲೋಚಿಸುವುದು ಒಂದು ವಿಷಯವಾದರೆ, ಬಾಂಬು ಮನೆಯನ್ನು ನಾಶಮಾಡಿದಾಗ ತಾಯಿ ಸತ್ತುಹೋದ, ಒಂಬತ್ತು ವರುಷ ಪ್ರಾಯದ, ಬೋಸ್ನಿಯದ ಚಿಕ್ಕ ಹುಡುಗನಾದ ಆಡ್ನನ್ನ ಕುರಿತಾಗಿ ಓದುವುದು ಮತ್ತೊಂದು ವಿಷಯವಾಗಿದೆ. ಕೆಲವೇ ತಿಂಗಳುಗಳ ನಂತರ ಅವರು ಜೊತೆಯಾಗಿ ರಸ್ತೆಯಲ್ಲಿ ನಡೆಯುತ್ತಿದ್ದಾಗ, ಆಡ್ನನ್ನ ತಂದೆಯು ಹಂತಕನಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟನು. ಕೇವಲ ಕೆಲವೇ ವಾರಗಳ ನಂತರ, ಅವನ ಸಹೋದರಿಯು ಶಾಲೆಯ ಅಂಗಳದಲ್ಲಿ ಫಿರಂಗಿಯ ಗುಂಡಿಗೆ ಬಲಿಯಾಗಿ, ರಕ್ತ ಸ್ರವಿಸಿ ಅವನ ಕಣ್ಣ ಮುಂದೆಯೇ ಸತ್ತಳು. ಹುಡುಗನು ಅನಿಸಿಕೆರಹಿತನಾಗಿದ್ದು, ಕುತೂಹಲವನ್ನು ಸೇರಿಸಿ ಎಲ್ಲಾ ಅನಿಸಿಕೆರಹಿತನಾಗಿದ್ದನು ಎಂದು ಮಾನಸಿಕ ಆಘಾತಕ್ಕಾಗಿ ಆಡ್ನನ್ಗೆ ಚಿಕಿತ್ಸೆ ನಡಸುತ್ತಿದ್ದ ವೈದ್ಯರು ಕಂಡುಕೊಂಡರು. ಭಯಗಳು ಮತ್ತು ಹಿಂದಿನ ಜ್ಞಾಪಕಗಳು ಅವನು ಎಚ್ಚರವಾಗಿರುವಾಗ ಅವನನ್ನು ಪೀಡಿಸುತ್ತಿದ್ದವು; ಭಯಂಕರ ಸ್ವಪ್ನಗಳು ಅವನ ನಿದ್ದೆಯನ್ನು ಹಾಳುಮಾಡುತ್ತಿದ್ದವು. ಆಡ್ನನ್ ಸಂಖ್ಯಾಸಂಗ್ರಹಣವಲ್ಲ. ಅವನು ಕಷ್ಟಾನುಭವಿಸುತ್ತಿರುವ ಒಬ್ಬ ಮಗು; ಅವನಿಗೆ ನಾವು ಸಹಾಯಮಾಡಶಕ್ತರಲ್ಲ, ಕೇವಲ ಅನುಕಂಪವನ್ನು ತೋರಿಸಸಾಧ್ಯವಿದೆ.
ಲೋಕದ ಇತರ ಉಪದ್ರವಗಳ ವಿಷಯದಲ್ಲೂ ಇದು ಸತ್ಯ. ಕ್ಷಾಮದ ಕುರಿತು ಓದುವುದು ಒಂದು ವಿಷಯವಾದರೆ, ಉಬ್ಬಿದ ಹೊಟ್ಟೆಯ ಹಾಗೂ ಬಡಕಲಾದ ಕೈಕಾಲುಗಳ—ಹೊಟ್ಟೆಗಿಲ್ಲದಿರುವಿಕೆಯ ಬಲಿಯಾಗಿ ಅರೆ ಜೀವಿಸುತ್ತಿರುವ—ಐದು ವರುಷ ಪ್ರಾಯದ ಒಂದು ಹುಡುಗಿಯ ಚಿತ್ರವನ್ನು ನೋಡುವುದು ಮತ್ತೊಂದು ವಿಷಯವಾಗಿದೆ. ಪಾತಕದ ಕುರಿತಾದ ಸಂಖ್ಯಾಸಂಗ್ರಹಣವನ್ನು ಓದುವುದು ಒಂದು ವಿಷಯವಾದರೆ, ಒಬ್ಬ ವೃದ್ಧ ವಿಧವೆಯನ್ನು ಕ್ರೂರವಾಗಿ ಹೊಡೆದು, ದೋಚಿ, ಅತ್ಯಾಚಾರ ಮಾಡಿದ ವಿಷಯವನ್ನು ಕೇಳುವುದು ಮತ್ತೊಂದು ವಿಷಯವಾಗಿದೆ. ಕುಟುಂಬದ ಕುಸಿತದ ಕುರಿತಾಗಿ ಓದುವುದು ಒಂದು ವಿಷಯವಾದರೆ, ಒಬ್ಬ ತಾಯಿ ಉದ್ದೇಶಪೂರ್ವಕವಾಗಿ ತನ್ನ ಸ್ವಂತ ಮಗುವಿಗೆ ಆಹಾರಕೊಡದೆ, ಕೆಟ್ಟ ರೀತಿಯಲ್ಲಿ ಅದನ್ನು ದುರುಪಯೋಗಪಡಿಸಿದ ಕುರಿತಾಗಿ ತಿಳಿಯುವುದು ಮತ್ತೊಂದು ವಿಷಯವಾಗಿದೆ.
ಇಂತಹ ವಿಷಯಗಳನ್ನು ಓದುವುದು ವೇದನಾಭರಿತವಾದದ್ದಾಗಿದೆ. ಆದರೆ, ಇಂತಹ ಲೋಕವ್ಯಾಪಕವಾದ ವ್ಯಾಧಿಗಳಲ್ಲೊಂದು ನಮ್ಮನ್ನು ನೇರವಾಗಿ ಪೀಡಿಸುವಾಗ ಅದು ಎಷ್ಟು ಹೆಚ್ಚು ಕೆಟ್ಟದ್ದಾದೀತು! ನೀವು ವೈಯಕ್ತಿಕವಾಗಿ ಕೆಟ್ಟದ್ದನ್ನು ಅನುಭವಿಸುವಾಗ, ಲೋಕ ವಾರ್ತೆಯಲ್ಲಿ ತೋರಿಸಲಾದ ಲೋಕವ್ಯಾಪಕವಾದ ಪರಿಸ್ಥಿತಿಯು ನಿಮ್ಮನ್ನು ಪೂರ್ತಿ ಮುಳುಗಿಸಿಬಿಡಸಾಧ್ಯವಿದೆ. ಪಾತಕದಿಂದಲೂ, ಯುದ್ಧದಿಂದಲೂ, ಕ್ಷಾಮದಿಂದಲೂ ಹಾಗೂ ರೋಗದಿಂದಲೂ ಆಗುವ ಕಷ್ಟಾನುಭವವು ಮಾನವ ಇತಿಹಾಸದಲ್ಲಿ ಹಿಂದೆಂದೂ ಕಂಡಿಲ್ಲದ ಶ್ರೇಣಿಯಲ್ಲಿ ಹೆಚ್ಚಾಗುತ್ತಿರುವ ವಿಷಯವನ್ನು ಎದುರಿಸುವುದು ಭಯ ಹುಟ್ಟಿಸುವಂತದ್ದಾಗಿದೆ. 20ನೆಯ ಶತಮಾನದ ನಿಜತ್ವಗಳೊಂದಿಗೆ ಜೀವಿಸುವುದರ ಪರಿಣಾಮಗಳು ನಿಶ್ಚಯವಾಗಿಯೂ ಘೋರವಾಗಿವೆ—ದಿಗ್ಭ್ರಾಂತಿ, ಭಯ, ಮತ್ತು ಖಿನ್ನತೆ ಸರ್ವಸಾಮಾನ್ಯವಾಗಿವೆ.
ವಿಷಯಗಳು ಏಕೆ ಇಷ್ಟೊಂದು ಕೆಟ್ಟದ್ದಾಗಿವೆ? ಮಾನವಕುಲ ಎಲ್ಲಿಗೆ ಸಾಗುತ್ತಿದೆ? ಎಂಬಂತಹ ಗೊಂದಲಗೊಳಿಸುವ ಪ್ರಶ್ನೆಗಳಿಗೆ ಅನೇಕ ಧರ್ಮಗಳ ಜನರು ಉತ್ತರಗಳನ್ನು ಹುಡುಕುತ್ತಿದ್ದಾರೆ.
ದುಃಖಕರವಾಗಿ, ಧರ್ಮಗಳು ಇಂದು ತೃಪ್ತಿಕರ ಉತ್ತರಗಳನ್ನು ನೀಡುವುದೇ ವಿರಳ. ಈ ಪತ್ರಿಕೆಯ ಮುಖಪುಟದಲ್ಲಿರುವ ಪ್ರಶ್ನೆಯನ್ನು ನೀವು ಮೊದಲಾಗಿ ನೋಡಿದಾಗ, ನೀವು ಸಂದೇಹದಿಂದ ಪ್ರತಿಕ್ರಿಯಿಸಿದ್ದಿರಬಹುದು—ಒಂದು ಗ್ರಾಹ್ಯ ಪ್ರತಿಕ್ರಿಯೆ. ಮೂಲಭೂತ ವಾದಿಗಳ ಧರ್ಮಗಳು ಹೆಚ್ಚಾಗಿ ಬೈಬಲಿನಲ್ಲಿ ಏನು ತಿಳಿಸಲ್ಪಟ್ಟಿಲ್ಲವೋ ಆ ವಿಷಯವನ್ನು—ಲೋಕ ನಾಶನದ ನಿರ್ದಿಷ್ಟ ದಿನ ಮತ್ತು ತಾಸು—ಒತ್ತಾಯಿಸಲು ಪ್ರಯತ್ನಿಸುತ್ತವೆ. (ಮತ್ತಾಯ 24:36ನ್ನು ನೋಡಿರಿ.) ಆದರೆ, ಈ ಪತ್ರಿಕೆಯ ಪ್ರಕಾಶಕರು ಅದನ್ನು ಬೈಬಲ್ ತಾನೇ ವಿವರಿಸುವಂತೆ ಬಿಡಲು ಇಷ್ಟಪಡುತ್ತಾರೆ. ಕಡೇ ದಿವಸಗಳ ಕುರಿತಾದ ಬೈಬಲಿನ ಚರ್ಚೆಯು ವಾಸ್ತವಿಕವೂ, ಸಮಂಜಸವೂ ಆಗಿದೆ ಎಂದು ತಿಳಿಯಲು ನಿಮಗೆ ಆಶ್ಚರ್ಯವಾಗಬಹುದು. ಮತ್ತು ವಿಷಯಗಳು ಇಷ್ಟೊಂದು ಕೆಟ್ಟದ್ದಾಗಿರುವ ಕಾರಣವನ್ನು ವಿವರಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಬೈಬಲ್ ಮಾಡುತ್ತದೆ. ಅದು ಭವಿಷ್ಯತ್ತಿಗಾಗಿ, ಒಂದು ನಿಜವಾಗಿಯೂ ಸಂತೈಸುವಂತಹ ನಿರೀಕ್ಷೆಯನ್ನೂ ಒದಗಿಸುತ್ತದೆ. ಇದು ಹೇಗೆ ಎಂಬುದಾಗಿ ನೋಡಲು ಮುಂದಿನ ಲೇಖನಗಳನ್ನು ಪರಿಗಣಿಸುವರೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.
[ಪುಟ 3 ರಲ್ಲಿರುವ ಚಿತ್ರ ಕೃಪೆ]
Jobard/Sipa Press