ರಾಜ್ಯ ಘೋಷಕರು ವರದಿ ಮಾಡುತ್ತಾರೆ
“ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ”
ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಶಿಷ್ಯರಿಗೆ ಹೇಳಿದ್ದು: “ನೀವು ಲೋಕಕ್ಕೆ ಬೆಳಕಾಗಿದ್ದೀರಿ.” ಅವರನ್ನು ಇನ್ನೂ ಪ್ರೋತ್ಸಾಹಿಸುತ್ತಾ ಅವನಂದದ್ದು: “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.”—ಮತ್ತಾಯ 5:14-16.
ಇಟಲಿ ದೇಶದಲ್ಲಿ ಯೆಹೋವನ ಸಾಕ್ಷಿಗಳ ಒಳ್ಳೇ ಕ್ರಿಯೆಗಳು ಗಮನಕ್ಕೆ ಬಾರದೆ ಹೋಗಿರುವುದಿಲ್ಲ. ಉದಾಹರಣೆಗೆ, ಮುಂದಿನ ವರದಿಗಳು ದೃಢಪಡಿಸುವಂತೆ, ತಮ್ಮ ವಾರ್ಷಿಕ ಅಧಿವೇಶನಗಳನ್ನು ಹಾಜರಾಗುವಾಗ ಅವರು ತೋರಿಸುವ ಒಳ್ಳೆಯ ನಡತೆಯು ದೇವರಿಗೆ ಸ್ತುತಿಯನ್ನು ತರುತ್ತದೆ:
◼ ಅನೇಕ ವರ್ಷಗಳಿಂದ ಇಟಲಿಯ ಟರ್ನಿಯಲ್ಲಿರುವ ಸ್ತ್ರೀಯೊಬ್ಬಳು, ಆ ನಗರದ ಕ್ರೀಡಾಂಗಣದ ಹತ್ತಿರವಿದ್ದ ಒಂದು ಕಾಫಿಯಂಗಡಿಯನ್ನು ನಡೆಸಲು ತನ್ನ ಮಗಳಿಗೆ ಸಹಾಯ ಮಾಡುತ್ತಿದ್ದಳು. ಆಕೆ ವಿವರಿಸುವುದು: “ಅಲ್ಲಿಗೆ ಕಾಲ್ಚೆಂಡಾಟಗಳಿಗಾಗಿ ಬರುತ್ತಿದ್ದವರ ಮತ್ತು ಯೆಹೋವನ ಸಾಕ್ಷಿಗಳ ಅಧಿವೇಶನಗಳಲ್ಲಿರುವ ಪ್ರತಿನಿಧಿಗಳ ನಡುವೆ ನಾನು ಮಹತ್ತರವಾದ ಅಂತರವನ್ನು ಗಮನಿಸಿದೆ. ಸಾಕ್ಷಿಗಳು ತಮ್ಮ ಉಡುಗೆ ತೊಡುಗೆಯಲ್ಲಿ ಹೆಚ್ಚು ಸಭ್ಯರಾಗಿದ್ದರು, ಮತ್ತು ಅವರು ಪ್ರಾಮಾಣಿಕರೂ ಗೌರವಪೂರ್ಣರೂ ಆಗಿದ್ದರು. ವಿಭಿನ್ನ ಕುಲಗಳ ಜನರು ಇಷ್ಟು ಚೆನ್ನಾಗಿ ಹೇಗೆ ಹೊಂದಿಕೊಂಡು ಹೋಗಬಲ್ಲರೆಂದು ನಾನು ಅನೇಕ ವೇಳೆ ಸೋಜಿಗಪಡುತ್ತಿದ್ದೆ.
“ಒಂದು ದಿನ ಸಾಕ್ಷಿಯೊಬ್ಬಳು ನನ್ನನ್ನು ರಸ್ತೆಯಲ್ಲಿ ತಡೆದು, ದೇವರ ಹೆಸರು ನನಗೆ ಗೊತ್ತೊ ಎಂದು ಕೇಳಿದಳು. ನನಗೆ ಗೊತ್ತಿರಲಿಲ್ಲ, ಮತ್ತು ಯೆಹೋವನ ಸಾಕ್ಷಿಗಳು ಒಳ್ಳೆಯ ಜನರೆಂದು ನನಗೆ ತಿಳಿದಿದ್ದ ಕಾರಣ, ನನ್ನನ್ನು ಸಂದರ್ಶಿಸಲಿಕ್ಕಾಗಿ ಆಕೆ ಮಾಡಿದ ಏರ್ಪಾಡಿಗೆ ನಾನು ಸಮ್ಮತಿಸಿದೆ. ನನಗೆ ಸತ್ತವರ ಸ್ಥಿತಿಯ ಕುರಿತು ಪ್ರಶ್ನೆಗಳಿದ್ದವು, ಅವುಗಳನ್ನು ಆಕೆ ಬೈಬಲಿನಿಂದ ಉತ್ತರಿಸಿದಳು. ಹಿಂಜರಿಯದೆ, ನಾನೊಂದು ಬೈಬಲಧ್ಯಯನವನ್ನು ಸ್ವೀಕರಿಸಿದೆ ಮತ್ತು ಎರಡು ವಾರಗಳ ನಂತರ ಕೂಟಗಳಿಗೆ ಹಾಜರಾಗತೊಡಗಿದೆ.
“ಆರಂಭದಲ್ಲಿ ನನ್ನ ಮಗಳು ನನ್ನನ್ನು ವಿರೋಧಿಸಿದಳು, ಆದರೆ ನನ್ನ ನಡತೆ ಹಾಗೂ ದೃಢಸಂಕಲ್ಪವು ಆಕೆಯ ಮನೋಭಾವವನ್ನು ಬದಲಾಯಿಸಿದವು. ಒಂಬತ್ತು ತಿಂಗಳುಗಳ ಹಿಂದೆಯೇ ನಾನು ಅಭ್ಯಸಿಸಲು ಆರಂಭಿಸಿದೆ. ಇಂದು ನನ್ನ ಮಗಳು ಮತ್ತು ಆಕೆಯ ಗಂಡ, ತಮ್ಮ ಕಾಫಿಯಂಗಡಿಯನ್ನು ಬೆಂಬಲಿಸುವ ಸಾಕ್ಷಿಗಳಿಗೆ ಗುಣಗ್ರಾಹಿ ಹೇಳಿಕೆಗಳನ್ನು ಮಾಡುತ್ತಾರೆ. ನಾನಾದರೊ, ಈ ಕ್ರೀಡಾಂಗಣದಲ್ಲಿ ನಡೆದ ಒಂದು ಅಧಿವೇಶನದಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆ.”
◼ ರೋಸೆಟೋ ಡೆಲ್ಯೀ ಆಬ್ರೂಟ್ಸೀಯಲ್ಲಿ ನಡೆದ ಒಂದು ಅಧಿವೇಶನದ ನಂತರ, ಶಿಬಿರದಾಣದ ಒಬ್ಬ ಮ್ಯಾನೇಜರ್ ಗಮನಿಸಿದ್ದು: “ಯೆಹೋವನ ಸಾಕ್ಷಿಗಳು, ತಾವು ಮಾಡುವ ಎಲ್ಲ ಕಾರ್ಯಗಳಲ್ಲಿ ತುಂಬ ಪ್ರಾಮಾಣಿಕರಾಗಿದ್ದಾರೆಂದು ನಾನು ಗಮನಿಸಿದ್ದೇನೆ. ಕಳೆದ ವಾರ, ನನ್ನ ಶಿಬಿರದಾಣದಲ್ಲಿ 40 ಯೆಹೋವನ ಸಾಕ್ಷಿಗಳಿದ್ದರು, ಮತ್ತು ಅವರು ಯಾವ ಸಮಸ್ಯೆಗಳನ್ನೂ ಉಂಟುಮಾಡಲಿಲ್ಲ. ಅದಕ್ಕೆ ವಿರುದ್ಧವಾಗಿ, ತಮ್ಮ ಟ್ರೇಲರ್ ಅಥವಾ ಡೇರೆಯಲ್ಲಿ ಮತ್ತೊಬ್ಬ ವ್ಯಕ್ತಿಯು ಅವರೊಂದಿಗೆ ಉಳಿಯುವಲ್ಲಿ, ಆ ವಿಷಯವನ್ನು ಬಂದು ನಮಗೆ ತಿಳಿಸುವವರು ಅವರು ಮಾತ್ರ. ನನ್ನ ಅಭಿಪ್ರಾಯದಲ್ಲಾದರೊ, ನಾವು ಪಡೆಯಸಾಧ್ಯವಿರುವ ಗಿರಾಕಿಗಳಲ್ಲಿ ಅವರು ಅತ್ಯುತ್ತಮರು.”
◼ ಅದೇ ಅಧಿವೇಶನದ ನಂತರ, ಒಬ್ಬ ಹೋಟೆಲ್ ಮ್ಯಾನೇಜರ್ ಹೇಳಿದ್ದು: “ಯೆಹೋವನ ಸಾಕ್ಷಿಗಳೆಲ್ಲರೂ ಶಾಂತಿಪೂರ್ಣರು. ಅವರು ರೌಡಿಗಳಾಗಿರುವುದಿಲ್ಲ ಮತ್ತು ಬೇಗನೆ ಮಲಗುತ್ತಾರೆ. ಅವರು ನಿಜವಾಗಿಯೂ ದಯಾಪರರು, ಪ್ರಾಮಾಣಿಕರು, ಹಾಗೂ ಸ್ವದರ್ತನೆಯುಳ್ಳವರು. ಎಲ್ಲರೂ ಅವರಂತೆ ಇರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಇತರರು ಪ್ರತಿಯೊಂದನ್ನು—ಹೂದಾನಿಗಳು, ಬೂದಿತಟ್ಟೆಗಳು (ಆ್ಯಷ್ಟ್ರೇ), ಟ್ಲಾಯೆಟ್ ಪೇಪರ್ ಮತ್ತು ಸಕ್ಕರೆಯನ್ನೂ—ಕದಿಯುತ್ತಾರೆ! ನಿಮ್ಮ ವಿಷಯದಲ್ಲಿ ಅಂತಹದ್ದೇನೂ ಸಂಭವಿಸಿರುವುದಿಲ್ಲ. ಸಾಯಂಕಾಲ ನಿಮ್ಮ ಮಕ್ಕಳು ಶೀತಕ (ರಿಫ್ರಿಜೆರೇಟರ್)ದಿಂದ ಐಸ್ ಕ್ರೀಮ್ ಬಾರ್ಗಳನ್ನು ತೆಗೆದುಕೊಳ್ಳುವಾಗ, ಅವರು ಏನನ್ನು ತೆಗೆದುಕೊಂಡಿದ್ದಾರೆಂಬುದನ್ನು ಪರಿಶೀಲಿಸುವ ಗೋಜಿಗೇ ನಾನು ಹೋಗುವುದಿಲ್ಲ. ಅವರು ನನಗೆ ಎಷ್ಟು ಹಣವನ್ನು ಕೊಡಬೇಕೆಂಬುದನ್ನು ಲೆಕ್ಕಮಾಡಿ, ಕೂಡಲೇ ಬಂದು ಕೊಡುತ್ತಾರೆ. ನನಗೆ ಅವರಲ್ಲಿ ಅಪಾರ ನಂಬಿಕೆಯಿದೆ. ಇತರರು ಅವರಂತೆ ಇರುತ್ತಿದ್ದಲ್ಲಿ ಎಷ್ಟು ಚೆನ್ನಾಗಿರುತ್ತಿತ್ತು! ನನ್ನ ಅತಿಥಿಗಳೆಲ್ಲ ಯೆಹೋವನ ಸಾಕ್ಷಿಗಳಾಗಿರಬೇಕೆಂದು ನಾನು ಹಾರೈಸುತ್ತೇನೆ.”
ಭೂಮಿಯ ಇತರ ಅನೇಕ ಭಾಗಗಳಲ್ಲಿರುವಂತೆಯೇ, ಇಟಲಿಯಲ್ಲಿ ಯೆಹೋವನ ಸಾಕ್ಷಿಗಳು ಸುವಿದಿತರಾಗಿದ್ದಾರೆ. ಅವರು ‘ಅನ್ಯಜನರ ಮಧ್ಯದಲ್ಲಿ ತಮ್ಮ ನಡವಳಿಕೆಯನ್ನು ಯೋಗ್ಯವಾಗಿಟ್ಟುಕೊಂಡಿದ್ದಾರೆ.’ ಮತ್ತು ಹೀಗೆ ಯಾರ ಹೆಸರನ್ನು ಅವರು ಹೊಂದಿರುತ್ತಾರೊ ಆ ಸತ್ಯ ದೇವರಿಗೆ ಸ್ತುತಿಯನ್ನು ತರುತ್ತಾರೆ.—1 ಪೇತ್ರ 2:12.