ಗ್ರೀಸ್ನಲ್ಲಿ “ದೇವರ ಮಂದಿರಕ್ಕೂ” ವಿಗ್ರಹಗಳಿಗೂ ಒಪ್ಪಂದವೋ?
ಧಗಧಗಿಸುವ ಈ ಬೇಸಿಗೆಯ ದಿನದಂದು, ಕಾಲುಹಾದಿಯಲ್ಲಿ ಹೊಳೆಯುತ್ತಿರುವ ಕಲ್ಲುಗಳ ಮೇಲೆ ಸೂರ್ಯನು ಬಿರುಸಾಗಿ ಬಡಿಯುತ್ತಾನೆ. ಆದರೂ ಈ ಅತಿಯಾದ ಬಿಸಿಲು, ಬೆಟ್ಟದ ತುದಿಯಲ್ಲಿರುವ ಪ್ರಾರ್ಥನಾಲಯಕ್ಕೆ ಹೋಗುವ ಭಕ್ತರಾದ, ಗ್ರೀಕ್ ಆರ್ತೊಡಾಕ್ಸ್ ತೀರ್ಥಯಾತ್ರಿಕರ ಗುಂಪಿನ ಹುರುಪನ್ನೂ ತೀವ್ರ ದೃಢನಿಶ್ಚಯವನ್ನೂ ಕುಂದಿಸಿರುವಂತೆ ತೋರುವುದಿಲ್ಲ.
ಗ್ರೀಸ್ನ ಬಹು ದೂರದ ಒಂದು ಭಾಗದಿಂದ ಪಯಣಿಸಿದ—ದಣಿದಿದ್ದರೂ ನಡೆಯುತ್ತಾ ಇರಲು ಕಷ್ಟಪಡುತ್ತಿರುವ—ಒಬ್ಬ ಬಳಲಿರುವ ವೃದ್ಧ ಮಹಿಳೆಯನ್ನು ನೀವು ಕಾಣುತ್ತೀರಿ. ಸ್ವಲ್ಪ ಮೇಲಕ್ಕೆ, ನೂಕುನುಗ್ಗಲಿರುವ ಗುಂಪಿನ ಮಧ್ಯೆ ದಾರಿಯನ್ನು ಮಾಡಿಕೊಳ್ಳಲು ಕಾತರದಿಂದ ಪ್ರಯತ್ನಿಸುತ್ತಾ, ಒಬ್ಬ ಅತ್ಯುತ್ಸಾಹಿ ಮನುಷ್ಯನು ತುಂಬ ಬೆವರುತ್ತಿದ್ದಾನೆ. ಮತ್ತು ತನ್ನ ಮುಖದಲ್ಲಿ ಹತಾಶ ಭಾವನೆಯನ್ನು ವ್ಯಕ್ತಪಡಿಸುತ್ತಾ, ವೇದನಾಭರಿತಳಾಗಿದ್ದಂತೆ ಕಂಡುಬಂದ ಯುವ ಪ್ರಾಯದ ಹುಡುಗಿಯೊಬ್ಬಳು, ವಿಪರೀತವಾಗಿ ರಕ್ತಸ್ರಾವವಾಗುತ್ತಿರುವ ಮೊಣಕಾಲುಗಳಿಂದ ತೆವಳಿಕೊಂಡು ಹೋಗುತ್ತಿದ್ದಾಳೆ. ಅವರ ಗುರಿಯೇನಾಗಿದೆ? ಸಮಯಕ್ಕೆ ಸರಿಯಾಗಿ ತಲಪುವುದು, ಮೂರ್ತಿಯ ಮುಂದೆ ಪ್ರಾರ್ಥಿಸುವುದು ಹಾಗೂ ಸಾಧ್ಯವಾದಲ್ಲಿ ಹೆಸರಾಂತ “ಸಂತ” ಮೂರ್ತಿಯನ್ನು ಮುಟ್ಟಿ, ಮುತ್ತುಕೊಡುವುದೇ ಅವರ ಗುರಿಯಾಗಿದೆ.
ಇದೇ ರೀತಿಯ ದೃಶ್ಯಗಳು, “ಸಂತರ” ಪೂಜ್ಯಭಾವಕ್ಕೆ ಮೀಸಲಾಗಿರಿಸಲ್ಪಟ್ಟ ಸ್ಥಳಗಳಲ್ಲಿ ಲೋಕದಾದ್ಯಂತವಾಗಿ ಪುನರಾವರ್ತಿಸಲ್ಪಡುತ್ತವೆ. ಸುವ್ಯಕ್ತವಾಗಿಯೇ, ಈ ಎಲ್ಲ ತೀರ್ಥಯಾತ್ರಿಕರು, ಈ ವಿಧದಲ್ಲಿ ತಾವು ದೇವರನ್ನು ಸಮೀಪಿಸುವ ಮಾರ್ಗವನ್ನು ಅನುಸರಿಸುತ್ತಿದ್ದೇವೆಂದು, ಈ ರೀತಿಯಲ್ಲಿ ತಮ್ಮ ಭಕ್ತಿಯನ್ನೂ ನಂಬಿಕೆಯನ್ನೂ ವ್ಯಕ್ತಪಡಿಸುತ್ತಿದ್ದೇವೆಂದು ಮನಗಾಣಿಸಲ್ಪಟ್ಟಿದ್ದಾರೆ. ನಮ್ಮ ಸಂಪ್ರದಾಯಬದ್ಧ ಕ್ರೈಸ್ತ ನಂಬಿಕೆ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ನಾವು [“ಸಂತರ”] ಸ್ಮಾರಕೋತ್ಸವವನ್ನು ಆಚರಿಸುತ್ತೇವೆ, ಅವರ ಪವಿತ್ರ ಗಣ್ಯ ವ್ಯಕ್ತಿಗಳಿಗೆ ಮಹಿಮೆಯನ್ನೂ ಸನ್ಮಾನವನ್ನೂ ಸಲ್ಲಿಸುತ್ತೇವೆ . . . , ಮತ್ತು ದೇವರ ಮುಂದೆ ನಮ್ಮ ಪರವಾಗಿ ಅವರು ಮಾಡುವ ಪ್ರಾರ್ಥನೆಗಳನ್ನೂ ಭಿನ್ನಹಗಳನ್ನೂ, ನಮ್ಮ ಜೀವಿತಗಳ ಅನೇಕ ಅಗತ್ಯಗಳಲ್ಲಿ ಅವರ ನೆರವನ್ನೂ ನಾವು ಕೇಳಿಕೊಳ್ಳುತ್ತೇವೆ. . . . ನಮ್ಮ ಆತ್ಮಿಕ ಹಾಗೂ ಶಾರೀರಿಕ ಅಗತ್ಯಗಳಿಗಾಗಿ . . . ಅದ್ಭುತಕಾರ್ಯ ನಡೆಸುವ ಸಂತರ ಬಳಿಗೆ ಸಹಾಯಕ್ಕಾಗಿ ಮರೆಹೋಗುತ್ತೇವೆ.” ಹಾಗೂ ರೋಮನ್ ಕ್ಯಾಥೊಲಿಕ್ ಚರ್ಚಿನ ಪ್ರತಿನಿಧಿ ಮಂಡಲಿಯ ಶಾಸನಗಳಿಗನುಸಾರವಾಗಿ, “ಸಂತರನ್ನು” ದೇವರೊಂದಿಗಿನ ಮಧ್ಯಸ್ಥಗಾರರೋಪಾದಿ ಪ್ರಾರ್ಥನಾಪೂರ್ವಕವಾಗಿ ಆಹ್ವಾನಿಸಬೇಕು, ಮತ್ತು “ಸಂತರ” ಸ್ಮಾರಕವಸ್ತುಗಳನ್ನೂ ಮೂರ್ತಿಗಳನ್ನೂ—ಎರಡನ್ನೂ—ಪೂಜ್ಯಭಾವದಿಂದ ಆರಾಧಿಸಬೇಕು.
ಒಬ್ಬ ಯಥಾರ್ಥ ಕ್ರೈಸ್ತನ ಪ್ರಾಥಮಿಕ ಆಸ್ಥೆಯು, ದೇವರನ್ನು “ಆತ್ಮದಿಂದ ಹಾಗೂ ಸತ್ಯದಿಂದ” (NW) ಆರಾಧಿಸುವಂಥದ್ದೇ ಆಗಿರಬೇಕು. (ಯೋಹಾನ 4:24) ಈ ಕಾರಣಕ್ಕಾಗಿಯೇ, “ಸಂತರ” ಪೂಜ್ಯಭಾವನೆಯು, ಯಾವ ರೀತಿಯಲ್ಲಿ ಕ್ರೈಸ್ತಪ್ರಪಂಚದ ಧಾರ್ಮಿಕ ಆಚರಣೆಗಳ ಭಾಗವಾಗಿ ಪರಿಚಯಿಸಲ್ಪಟ್ಟಿತು ಎಂಬುದರ ಕುರಿತಾದ ಕೆಲವು ನಿಜಾಂಶಗಳನ್ನು ನಾವು ಪರಿಗಣಿಸೋಣ. ದೇವರಿಗೆ ಸ್ವೀಕಾರಯೋಗ್ಯವಾದ ರೀತಿಯಲ್ಲಿ ಆತನನ್ನು ಸಮೀಪಿಸುವ ಅಭಿಲಾಷೆಯುಳ್ಳ ಪ್ರತಿಯೊಬ್ಬನಿಗೂ, ಇಂಥ ಒಂದು ಪರೀಕ್ಷೆಯು ಬಹಳ ಜ್ಞಾನೋದಯದ ವಿಷಯವಾಗಿರಬೇಕು.
“ಸಂತರು” ಅಂಗೀಕರಿಸಲ್ಪಟ್ಟ ವಿಧ
ಕ್ರೈಸ್ತ ಗ್ರೀಕ್ ಶಾಸ್ತ್ರವು, ಕ್ರಿಸ್ತನ ರಕ್ತದಿಂದ ಶುದ್ಧೀಕರಿಸಲ್ಪಟ್ಟ ಹಾಗೂ ಕ್ರಿಸ್ತನ ಭಾವೀ ಸಹಬಾಧ್ಯಸ್ಥರಾಗಿ ದೇವರ ಸೇವೆಗಾಗಿ ಮೀಸಲಾಗಿಡಲ್ಪಟ್ಟ ಎಲ್ಲ ಆದಿ ಕ್ರೈಸ್ತರನ್ನು “ಪವಿತ್ರ ಜನರು” (NW) ಅಥವಾ “ಸಂತರು” (NW) ಎಂದು ಗೊತ್ತುಪಡಿಸುತ್ತದೆ. (ಅ. ಕೃತ್ಯಗಳು 9:32; 2 ಕೊರಿಂಥ 1:1; 13:13)a ಸಭೆಯಲ್ಲಿದ್ದ ಪುರುಷರೂ ಮಹಿಳೆಯರೂ, ಗಣ್ಯರೂ ವಿನೀತರೂ—ಎಲ್ಲರೂ—ಭೂಮಿಯಲ್ಲಿ ಜೀವಿಸುತ್ತಿದ್ದಾಗ, “ಪವಿತ್ರ ಜನರು” ಎಂಬುದಾಗಿ ವರ್ಣಿಸಲ್ಪಟ್ಟರು. ಅವರು ಸಾಯವುದಕ್ಕಿಂತಲೂ ಮುಂಚೆ, ಶಾಸ್ತ್ರೀಯ ಅರ್ಥದಲ್ಲಿ, ಅವರು ಸಂತರಾಗಿ ಜ್ಞಾತರಾಗಿದ್ದರು.
ಸಾ.ಶ. ಎರಡನೆಯ ಶತಮಾನದ ಅನಂತರವಾದರೋ, ಧರ್ಮಭ್ರಷ್ಟ ಕ್ರೈಸ್ತತ್ವವು ವಿಕಸಿಸುತ್ತಿರುವಾಗ, ಕ್ರೈಸ್ತತ್ವವನ್ನು ಜನಪ್ರಿಯವನ್ನಾಗಿ—ವಿಧರ್ಮಿ ಜನರಿಗೆ ಹಿಡಿಸುವ ಹಾಗೂ ಅವರಿಗೆ ಬಹಳ ಸುಲಭವಾಗಿ ಸ್ವೀಕಾರಯೋಗ್ಯವಾದ ಒಂದು ಧರ್ಮವನ್ನಾಗಿ—ಮಾಡಲು ಪ್ರಯತ್ನಿಸುವ ಪ್ರವೃತ್ತಿಯಿತ್ತು. ಈ ವಿಧರ್ಮಿ ಜನರು ಬಹುದೇವತೆಗಳನ್ನು ಆರಾಧಿಸಿದರು, ಹಾಗೂ ಹೊಸ ಧರ್ಮವು ಕಟ್ಟುನಿಟ್ಟಾಗಿ ಏಕದೇವರ ಆರಾಧನೆಯಾಗಿತ್ತು. ಆದುದರಿಂದ ಪ್ರಾಚೀನ ದೇವತೆಗಳು, ದೇವಮಾನವರು ಹಾಗೂ ಕಾಲ್ಪನಿಕ ಮಹಾಪುರುಷರ ಸ್ಥಾನವನ್ನು ತೆಗೆದುಕೊಳ್ಳುವ “ಸಂತರ” ಸ್ವೀಕೃತಿಯ ಮೂಲಕವೇ ಸಂಧಾನಮಾಡಿಕೊಳ್ಳುವುದು ಸಾಧ್ಯವಿತ್ತು. ಇದರ ಕುರಿತಾಗಿ ಹೇಳಿಕೆಯನ್ನು ನೀಡುತ್ತಾ, ಎಕ್ಲಿಸಿಯಾಸ್ಟಿಕಿ ಇಸ್ಟೊರಿಯಾ (ಎಕ್ಲಿಸಿಯಾಸ್ಟಿಕಲ್ ಹಿಸ್ಟರಿ) ಎಂಬ ಪುಸ್ತಕವು ಹೇಳುವುದು: “ವಿಧರ್ಮಿಮತದಿಂದ ಕ್ರೈಸ್ತಮತಕ್ಕೆ ಮತಾಂತರಿಸಲ್ಪಡುತ್ತಿರುವವರಿಗೆ, ತಮ್ಮ ತೊರೆಯಲ್ಪಟ್ಟ ಮಹಾಪುರುಷರನ್ನು ಹುತಾತ್ಮರಲ್ಲಿ ಗುರುತಿಸುವುದು ಹಾಗೂ ಹಿಂದೆ ತಾವು ಮಹಾಪುರುಷರಿಗೆ ಕೊಡುತ್ತಿದ್ದ ಸನ್ಮಾನವನ್ನು ಹುತಾತ್ಮರಿಗೆ ಸಲ್ಲಿಸಲು ಪ್ರಾರಂಭಿಸುವುದು ಸುಲಭವಾಗಿತ್ತು. . . . ಆದರೂ ಆಗಾಗ್ಗೆ, ಸಂತರಿಗೆ ಸಲ್ಲಿಸಲ್ಪಟ್ಟ ಅಂಥ ಸನ್ಮಾನವು, ಬರಿಯ ವಿಗ್ರಹಾರಾಧನೆಯಾಗಿತ್ತು.”
ಕ್ರೈಸ್ತಪ್ರಪಂಚದೊಳಕ್ಕೆ “ಸಂತರು” ಪರಿಚಯಿಸಲ್ಪಟ್ಟ ವಿಧವನ್ನು, ಮತ್ತೊಂದು ಪ್ರಮಾಣ ಗ್ರಂಥವು ಹೀಗೆ ವಿವರಿಸುತ್ತದೆ: “ಗ್ರೀಕ್ ಆರ್ತೊಡಾಕ್ಸ್ ಚರ್ಚಿನ ಸಂತರಿಗೆ ಸನ್ಮಾನವನ್ನು ಸಲ್ಲಿಸುವುದರಲ್ಲಿ, ವಿಧರ್ಮಿ ಧರ್ಮವು ಪಡೆದಿದ್ದ ಬಲವಾದ ಪ್ರಭಾವದ ಸ್ಫುಟ ಪುರಾವೆಗಳನ್ನು ನಾವು ಕಂಡುಕೊಳ್ಳುತ್ತೇವೆ. ಕ್ರೈಸ್ತತ್ವಕ್ಕೆ ಮತಾಂತರಹೊಂದುವ ಮುನ್ನ [ಜನರು] ಒಲಿಂಪಸ್ಸಿನ ದೇವತೆಗಳಿಗೆ ಆಧ್ಯಾರೋಪಿಸಿದ ಗುಣಗಳು ಈಗ ಸಂತರಿಗೆ ಆಧ್ಯಾರೋಪಿಸಲ್ಪಟ್ಟವು. . . . ಹೊಸ ಧರ್ಮದ ಆದಿ ವರ್ಷಗಳಿಂದ, ಅದರ ಅವಲಂಬಿಗಳು ಸೂರ್ಯದೇವ (ಫೀಬಸ್ ಅಪಾಲೊ)ನ ಸ್ಥಾನದಲ್ಲಿ ಪ್ರವಾದಿಯಾದ ಎಲೀಯನನ್ನು ಸ್ಥಾನಪಲ್ಲಟಗೊಳಿಸುತ್ತಾ, ಈ ದೇವತೆಯ ಪುರಾತನ ದೇವಾಲಯಗಳು ಅಥವಾ ಗುಡಿಗಳ ಅವಶೇಷಗಳ ಮೇಲೆ, ಅಥವಾ ಅದರ ಪಕ್ಕದಲ್ಲಿ, ಚರ್ಚುಗಳನ್ನು—ಹೆಚ್ಚಾಗಿ ಗುಡ್ಡಗಳು ಹಾಗೂ ಪರ್ವತಗಳ ತುದಿಯಲ್ಲಿ, ಎಲ್ಲೆಲ್ಲಿ ಪ್ರಾಚೀನ ಗ್ರೀಕರು ಜ್ಯೋತಿದಾತ ಪೀಬಸ್ ಅಪಾಲೊನನ್ನು ಸನ್ಮಾನಿಸಿದರೋ, ಆ ಪ್ರತಿಯೊಂದು ಸ್ಥಳದಲ್ಲಿ—ಕಟ್ಟುತ್ತಿರುವುದನ್ನು ನಾವು ಕಾಣುತ್ತೇವೆ. . . . ಅವರು ಸ್ವತಃ ಕನ್ಯೆ ಮರಿಯಳೊಂದಿಗೆ ಕನ್ಯೆ ದೇವತೆಯಾದ ಆ್ಯಥೇನಾಳನ್ನೂ ಗುರುತಿಸಿದರು. ಹೀಗೆ, ಆ್ಯಥೇನಾ ವಿಗ್ರಹವು ನಾಶಗೊಳಿಸಲ್ಪಟ್ಟರೂ, ಪರಿವರ್ತಿತ ವಿಗ್ರಹಾರಾಧಕನ ಮನದಲ್ಲಿ ಯಾವುದೇ ಶೂನ್ಯಭಾವನೆಯಿರಲಿಲ್ಲ.”—ನಿಯಾಟಿರಾನ್ ಎಂಗ್ಲೀಕೊಪ್ಯಾಡೀಕಾನ್ ಲೆಕ್ಸೀಕಾನ್ (ನ್ಯೂ ಎನ್ಸೈಕ್ಲೊಪೀಡಿಕ್ ಡಿಕ್ಷನರಿ), ಸಂಪುಟ 1, ಪುಟಗಳು 270-1.
ದೃಷ್ಟಾಂತಕ್ಕಾಗಿ, ಸಾ.ಶ. ನಾಲ್ಕನೆಯ ಶತಮಾನದ ಅಂತ್ಯಭಾಗದಷ್ಟು ಹಿಂದಕ್ಕೆ ಆ್ಯಥೇನ್ಸ್ನಲ್ಲಿ ಅಸ್ತಿತ್ವದಲ್ಲಿದ್ದ ಪರಿಸ್ಥಿತಿಯನ್ನು ಪರೀಕ್ಷಿಸಿರಿ. ಆ ನಗರದ ನಿವಾಸಿಗರಲ್ಲಿ ಹೆಚ್ಚಿನವರು ಇನ್ನೂ ವಿಧರ್ಮಿಗಳಾಗಿದ್ದರು. ಅವರ ಅತ್ಯಂತ ಪವಿತ್ರ ಮತಸಂಸ್ಕಾರಗಳಲ್ಲಿ ಒಂದು, ಆ್ಯಥೇನ್ಸಿನ ವಾಯವ್ಯದಿಂದ 23 ಕಿಲೊಮೀಟರುಗಳಷ್ಟು ದೂರದಲ್ಲಿರುವ, ಎಲ್ಯುಸಿಸ್ ಪಟ್ಟಣದಲ್ಲಿ, ಫೆಬ್ರವರಿ ತಿಂಗಳು ವಾರ್ಷಿಕವಾಗಿ ಆಚರಿಸಲ್ಪಡುವ ಎಲ್ಯುಸಿನಿಯನ್ ಉತ್ಸವ ರಹಸ್ಯಗಳೇ—ದ್ವಿಘಟನೆb—ಆಗಿದ್ದವು. ಈ ಉತ್ಸವ ರಹಸ್ಯಗಳಿಗೆ ಹಾಜರಾಗಲು, ವಿಧರ್ಮಿ ಆ್ಯಥೇನಿಯದವರು ಪವಿತ್ರ ಮಾರ್ಗ (ಹಯೆರಾ ಹಾಡೋಸ್)ವನ್ನು ಅನುಸರಿಸಬೇಕಾಗಿತ್ತು. ಆರಾಧನೆಯ ಬದಲಿ ಸ್ಥಳವೊಂದನ್ನು ಒದಗಿಸುವ ಪ್ರಯತ್ನದಲ್ಲಿ, ಆ ನಗರದ ಮುಖಂಡರು ಅತಿಬುದ್ಧಿವಂತಿಕೆಯುಳ್ಳವರಾಗಿ ಪರಿಣಮಿಸಿದರು. ಅದೇ ರಸ್ತೆಯಲ್ಲಿ, ಆ್ಯಥೇನ್ಸ್ನಿಂದ ಸುಮಾರು 10 ಕಿಲೊಮೀಟರುಗಳಷ್ಟು ದೂರದಲ್ಲಿ, ವಿಧರ್ಮಿಗಳನ್ನು ಆಕರ್ಷಿಸಲಿಕ್ಕಾಗಿ ಹಾಗೂ ಉತ್ಸವ ರಹಸ್ಯಗಳಿಗೆ ಹಾಜರಾಗುವುದರಿಂದ ಅವರನ್ನು ತಡೆಯಲಿಕ್ಕಾಗಿ, ಡ್ಯಾಫ್ನಿ ಸಂನ್ಯಾಸಿ ಮಠವು ಕಟ್ಟಲ್ಪಟ್ಟಿತು. ಆ ಸಂನ್ಯಾಸಿ ಮಠದ ಚರ್ಚು, ಗ್ರೀಕ್ ದೇವನಾದ ಡ್ಯಾಫ್ನೆಯಸ್ ಅಥವಾ ಪಿತಿಯೊಸ್ ಅಪಾಲೊವಿಗೆ ಅರ್ಪಿತವಾಗಿದ್ದ ಪುರಾತನ ದೇವಾಲಯದ ಅಸ್ತಿವಾರದ ಮೇಲೆ ಕಟ್ಟಲ್ಪಟ್ಟಿತು.
“ಸಂತರ” ಆರಾಧನೆಯೊಳಗೆ, ವಿಧರ್ಮಿ ದೇವತೆಗಳ ಅನುಕಲನ ಪುರಾವೆಯನ್ನು ಗ್ರೀಸ್ನ ಕೀತಿರಾ ದ್ವೀಪದ ಮೇಲೆ ಸಹ ಕಂಡುಕೊಳ್ಳಸಾಧ್ಯವಿದೆ. ದ್ವೀಪದ ಶಿಖರಗಳಲ್ಲೊಂದರ ಮೇಲೆ, ಎರಡು ಸಣ್ಣ ಬೈಸ್ಯಾಂಟಿಯಮ್ನ ಪ್ರಾರ್ಥನಾಲಯಗಳಿವೆ—ಅವುಗಳಲ್ಲಿ ಒಂದು “ಸಂತ” ಜಾರ್ಜ್ಗೂ, ಮತ್ತೊಂದು ಕನ್ಯೆ ಮರಿಯಳಿಗೂ ಅರ್ಪಿತವಾಗಿವೆ. ಇದು ಹೆಚ್ಚುಕಡಿಮೆ 3,500 ವರ್ಷಗಳ ಹಿಂದೆ, ಆರಾಧನಾ ಸ್ಥಳವಾಗಿ ಕಾರ್ಯಸಲ್ಲಿಸಿದ ಮಿನೋಸನ ಶಿಖರ ಗುಡಿಯ ಸ್ಥಳವಾಗಿತ್ತೆಂಬುದನ್ನು ಅಗೆತಗಳು ಬಯಲುಪಡಿಸಿದವು. ಸಾ.ಶ. ಆರನೆಯ ಅಥವಾ ಏಳನೆಯ ಶತಮಾನದಲ್ಲಿ, ಶಿಖರ ಗುಡಿಯ ಸ್ಥಳದಲ್ಲಿಯೇ “ಕ್ರೈಸ್ತರು,” “ಸಂತ” ಜಾರ್ಜ್ಗಾಗಿ ತಮ್ಮ ಪ್ರಾರ್ಥನಾಲಯವನ್ನು ಕಟ್ಟಿದರು. ಈ ಕುಶಲತೆಯು ತೀರ ಸಾಂಕೇತಿಕವಾಗಿತ್ತು; ಇಜಿಯನ್ ಸಮುದ್ರದ ಕಡಲ ಮಾರ್ಗಗಳು ಮಿನೋಸನ ಧರ್ಮದ ಪ್ರಗತಿಶೀಲ ಕೇಂದ್ರದ ಹಿಡಿತದಲ್ಲಿದ್ದವು. ಅವರ್ ಲೇಡಿ (ನಮ್ಮ ಮಾತೆ) ಮತ್ತು “ಸಂತ” ಜಾರ್ಜ್ನ ಅನುಗ್ರಹವನ್ನು ಪಡೆದುಕೊಳ್ಳಲು ಎರಡು ಚರ್ಚುಗಳು ಕಟ್ಟಲ್ಪಟ್ಟವು. “ನಾವಿಕರ ರಕ್ಷಕ”ನಾದ “ಸಂತ” ನಿಕೊಲಾಸ್ ಅನ್ನು ಆಚರಿಸುವ ಅದೇ ದಿನದಂದು “ಸಂತ” ಜಾರ್ಜ್ನ ಹಬ್ಬವು ಆಚರಿಸಲ್ಪಡುತ್ತದೆ. ಧಾರ್ಮಿಕ ಸೇವೆಗಳನ್ನು ನಡೆಸುವ ಸಲುವಾಗಿ, “ಪ್ರಾಚೀನ ಸಮಯಗಳಲ್ಲಿ ಮಿನೋಸನ ಪುರೋಹಿತನು ಮಾಡಿದಂತೆಯೇ, ಇಂದು [ಗ್ರೀಕ್ ಆರ್ತೊಡಾಕ್ಸ್] ಪಾದ್ರಿಯು ಬೆಟ್ಟವನ್ನು ಹತ್ತುವನು,” ಎಂದು ಈ ಕಂಡುಹಿಡಿತದ ಕುರಿತಾಗಿ ವರದಿಸಿದ ಒಂದು ವಾರ್ತಾಪತ್ರಿಕೆಯು ಹೇಳಿತು!
ಧರ್ಮಭ್ರಷ್ಟ ಕ್ರೈಸ್ತತ್ವವು ಎಷ್ಟರ ಮಟ್ಟಿಗೆ ವಿಧರ್ಮಿ ಗ್ರೀಕ್ ಧರ್ಮದಿಂದ ಪ್ರಭಾವಿಸಲ್ಪಟ್ಟಿತ್ತೆಂಬುದನ್ನು ಸಾರಾಂಶಿಸುತ್ತಾ, ಒಬ್ಬ ಐತಿಹಾಸಿಕ ಸಂಶೋಧಕಿಯು ನಿರ್ದೇಶಿಸುವುದು: “ಕ್ರೈಸ್ತ ಧರ್ಮದ ವಿಧರ್ಮಿ ಅಡಿಪಾಯವು, ಅನೇಕ ವೇಳೆ ಜನಪ್ರಿಯ ನಂಬಿಕೆಗಳಲ್ಲಿ ಬದಲಾಗದ ವಿಷಯವಾಗಿ ಉಳಿಯುತ್ತದೆ; ಹೀಗೆ ಇದು ಸಂಪ್ರದಾಯದ ಸಹಿಷ್ಣು ಸ್ವಭಾವಕ್ಕೆ ಸಾಕ್ಷ್ಯವನ್ನು ಒದಗಿಸುತ್ತದೆ.”
‘ನಾವು ಅರಿತಿರುವದನ್ನೇ ಆರಾಧಿಸುವುದು’
ಸಮಾರ್ಯದ ಸ್ತ್ರೀಗೆ ಯೇಸು ಹೇಳಿದ್ದು: “ನಾವು ಅರಿತಿರುವದನ್ನೇ ಆರಾಧಿಸುವವರಾಗಿದ್ದೇವೆ; . . . ಸತ್ಯಾರಾಧಕರು ಆತ್ಮದಿಂದ ಹಾಗೂ ಸತ್ಯದಿಂದ ತಂದೆಯನ್ನು ಆರಾಧಿಸುವರು, ಏಕೆಂದರೆ ನಿಶ್ಚಯವಾಗಿಯೂ, ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ.” (ಯೋಹಾನ 4:22, 23, NW) ಸತ್ಯದಿಂದ ಆರಾಧಿಸುವುದು ಅತ್ಯಾವಶ್ಯಕವಾಗಿದೆ ಎಂಬುದನ್ನು ಗಮನಿಸಿರಿ! ಆದುದರಿಂದ ಸತ್ಯದ ನಿಷ್ಕೃಷ್ಟ ಜ್ಞಾನವಿಲ್ಲದೆ, ಸತ್ಯಕ್ಕಾಗಿ ಆಳವಾದ ಪ್ರೀತಿಯಿಲ್ಲದೆ, ದೇವರಿಗೆ ಸ್ವೀಕಾರಯೋಗ್ಯವಾಗಿ ಆರಾಧಿಸುವುದು ಅಸಾಧ್ಯವಾದ ವಿಷಯವಾಗಿದೆ. ಸತ್ಯ ಕ್ರೈಸ್ತ ಧರ್ಮವು, ಸತ್ಯದ ಮೇಲೆ ಆಧಾರಿಸಿರತಕ್ಕದ್ದು, ವಿಧರ್ಮಿ ಧರ್ಮದಿಂದ ಎರವಲಾಗಿ ಪಡೆದುಕೊಂಡ ಸಂಪ್ರದಾಯಗಳ ಹಾಗೂ ಆಚರಣೆಗಳ ಮೇಲಲ್ಲ. ಜನರು ಯೆಹೋವನನ್ನು ತಪ್ಪಾದ ವಿಧದಲ್ಲಿ ಆರಾಧಿಸಲು ಪ್ರಯತ್ನಿಸುವಾಗ, ಆತನಿಗೆ ಹೇಗೆ ಅನಿಸುತ್ತದೆ ಎಂಬುದು ನಮಗೆ ತಿಳಿದಿದೆ. ಪ್ರಾಚೀನ ಗ್ರೀಕ್ ನಗರವಾದ ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಬರೆದುದು: ‘ಕ್ರಿಸ್ತನಿಗೂ ಸೈತಾನನಿಗೂ ಒಡನಾಟವೇನು? . . . ದೇವರ ಮಂದಿರಕ್ಕೂ ವಿಗ್ರಹಗಳಿಗೂ ಒಪ್ಪಿಗೆ ಏನು?’ (2 ಕೊರಿಂಥ 6:15, 16) ದೇವರ ಮಂದಿರವನ್ನು ವಿಗ್ರಹಗಳೊಂದಿಗೆ ಸಮರಸ ಮಾಡುವ ಯಾವುದೇ ಪ್ರಯತ್ನವು, ಆತನಿಗೆ ಹೇವರಿಕೆಯನ್ನು ಉಂಟುಮಾಡುವಂಥದ್ದಾಗಿದೆ.
ಇನ್ನೂ ಹೆಚ್ಚಾಗಿ, ಅತಿ ಸ್ಫುಟವಾದೊಂದು ವಿಧದಲ್ಲಿ, “ಸಂತರು” ದೇವರೊಂದಿಗೆ ಮಧ್ಯಸ್ಥಗಾರರಾಗಿ ಕಾರ್ಯನಡೆಸುವ ಸಲುವಾಗಿ, ಅವರಿಗೆ ಪ್ರಾರ್ಥಿಸುವ ವಿಚಾರವನ್ನು ಶಾಸ್ತ್ರಗಳು ನಿಷೇಧಿಸುತ್ತವೆ. ತನ್ನ ಮಾದರಿ ಪ್ರಾರ್ಥನೆಯಲ್ಲಿ ಯೇಸು, ಪ್ರಾರ್ಥನೆಗಳು ಕೇವಲ ತಂದೆಗೆ ಮಾತ್ರವೇ ಸಂಬೋಧಿಸಲ್ಪಡಬೇಕೆಂಬುದನ್ನು ಕಲಿಸಿದನು; ಆದುದರಿಂದ ಅವನು ತನ್ನ ಹಿಂಬಾಲಕರನ್ನು ಹೀಗೆ ಮಾರ್ಗದರ್ಶಿಸಿದನು: “ಆದದರಿಂದ ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು—ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:9) ಯೇಸು ಮತ್ತೂ ಹೇಳಿದ್ದು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ. ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಬೇಡಿಕೊಂಡರೆ ಅದನ್ನು ನೆರವೇರಿಸುವೆನು.” ಹಾಗೂ ಅಪೊಸ್ತಲ ಪೌಲನು ಹೇಳಿದ್ದು: “ದೇವರು ಒಬ್ಬನೇ; ದೇವರಿಗೂ ಮನುಷ್ಯರಿಗೂ ಮಧ್ಯಸ್ಥನು ಒಬ್ಬನೇ; ಆತನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ.”—ಯೋಹಾನ 14:6, 14; 1 ತಿಮೊಥೆಯ 2:5.
ನಮ್ಮ ಪ್ರಾರ್ಥನೆಗಳು ದೇವರಿಂದ ಆಲಿಸಲ್ಪಡಬೇಕೆಂದು ನಾವು ನಿಜವಾಗಿಯೂ ಅಪೇಕ್ಷಿಸುವಲ್ಲಿ, ಆತನ ವಾಕ್ಯವು ಮಾರ್ಗದರ್ಶಿಸುವ ರೀತಿಯಲ್ಲಿ ನಾವು ಆತನನ್ನು ಸಮೀಪಿಸುವುದು ಅತ್ಯಾವಶ್ಯಕ. ಯೆಹೋವನನ್ನು ಸಮೀಪಿಸುವುದಕ್ಕಿರುವ ಸಮಂಜಸವಾದ ಏಕಮಾತ್ರ ವಿಧವನ್ನು ಒತ್ತಿಹೇಳುತ್ತಾ, ಪೌಲನು ಹೀಗೂ ಬರೆದನು: “ಕ್ರಿಸ್ತ ಯೇಸು ಮರಣವನ್ನು ಹೊಂದಿದ್ದಲ್ಲದೆ ಜೀವಿತನಾಗಿ ಎದ್ದು ದೇವರ ಬಲಗಡೆಯಲ್ಲಿದ್ದು ನಮಗೋಸ್ಕರ ಬೇಡುವವನಾಗಿದ್ದಾನೆ.” “ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ.”—ರೋಮಾಪುರ 8:34; ಇಬ್ರಿಯ 7:25.
‘ಆತ್ಮದಿಂದ ಹಾಗೂ ಸತ್ಯದಿಂದ ಆರಾಧಿಸುವುದು’
ವಿಧರ್ಮಿಗಳು ಸುಳ್ಳು ಆರಾಧನೆಯನ್ನು ತೊರೆದುಬಿಡುವಂತೆ ಹಾಗೂ ಯೇಸು ಕ್ರಿಸ್ತನ ಸತ್ಯಪೂರ್ಣ ಬೋಧನೆಗಳನ್ನು ಅನುಸರಿಸುವಂತೆ ಅವರನ್ನು ಪ್ರಚೋದಿಸಲು, ಧರ್ಮಭ್ರಷ್ಟ ಕ್ರೈಸ್ತತ್ವಕ್ಕೆ ಆತ್ಮಿಕ ಶಕ್ತಿ ಇಲ್ಲವೇ ದೇವರ ಪವಿತ್ರಾತ್ಮದ ಬೆಂಬಲವಿರಲಿಲ್ಲ. ಮತಾಂತರಿಗಳು, ಶಕ್ತಿ ಹಾಗೂ ಜನಪ್ರಿಯತೆಗಾಗಿರುವ ತನ್ನ ಅನ್ವೇಷಣೆಯಲ್ಲಿ ಅದು, ವಿಧರ್ಮಿ ನಂಬಿಕೆಗಳನ್ನೂ ಆಚರಣೆಗಳನ್ನೂ ಹೀರಿಕೊಂಡಿತು. ಈ ಕಾರಣಕ್ಕಾಗಿಯೇ, ಅದು ದೇವರಿಗೆ ಹಾಗೂ ಕ್ರಿಸ್ತನಿಗೆ ಸ್ವೀಕಾರಯೋಗ್ಯವಾದ ದೃಢ ಕ್ರೈಸ್ತರನ್ನಲ್ಲ, ಬದಲಿಗೆ ರಾಜ್ಯಕ್ಕೆ ಅಯೋಗ್ಯವಾದ “ಹಣಜಿ”ಗಳನ್ನು, ಖೋಟಾ ವಿಶ್ವಾಸಿಗಳನ್ನು ಉತ್ಪಾದಿಸಿತು.—ಮತ್ತಾಯ 13:24-30.
ಅಂತ್ಯದ ಈ ಸಮಯದಲ್ಲಿಯಾದರೋ, ಯೆಹೋವನ ಮಾರ್ಗದರ್ಶನದ ಕೆಳಗೆ, ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುವುದರಲ್ಲಿ ಬಹು ಪರಿಣಾಮಕಾರಿಯಾದ ಸಂಘಟನಾ ಪ್ರಯತ್ನವಿದೆ. ಲೋಕವ್ಯಾಪಕವಾಗಿರುವ ಯೆಹೋವನ ಜನರು, ತಮ್ಮ ಸಾಂಸ್ಕೃತಿಕ, ಸಾಮಾಜಿಕ ಅಥವಾ ಹಿಂದಿನ ಧಾರ್ಮಿಕ ಹಿನ್ನೆಲೆಗಳು ಏನೇ ಆಗಿರಲಿ, ಬೈಬಲಿನ ಮಟ್ಟಗಳಿಗನುಗುಣವಾಗಿ ತಮ್ಮ ಜೀವಿತಗಳನ್ನು ಹಾಗೂ ನಂಬಿಕೆಗಳನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ದೇವರನ್ನು “ಆತ್ಮದಿಂದ ಹಾಗೂ ಸತ್ಯದಿಂದ” ಹೇಗೆ ಆರಾಧಿಸಬೇಕೆಂಬುದರ ಕುರಿತಾಗಿ ನೀವು ಹೆಚ್ಚನ್ನು ಕಲಿಯಲು ಬಯಸುವಲ್ಲಿ, ನೀವು ವಾಸಿಸುವ ಸ್ಥಳದಲ್ಲಿರುವ ಯೆಹೋವನ ಸಾಕ್ಷಿಗಳನ್ನು ದಯವಿಟ್ಟು ಸಂಪರ್ಕಿಸಿರಿ. ನಿಮ್ಮ ವಿವೇಚನಾಶಕ್ತಿ ಹಾಗೂ ಆತನ ವಾಕ್ಯದ ನಿಷ್ಕೃಷ್ಟ ಜ್ಞಾನದ ಆಧಾರದ ಮೇಲೆ, ದೇವರಿಗೆ ಸ್ವೀಕಾರಯೋಗ್ಯವಾದ ಪವಿತ್ರ ಸೇವೆಯನ್ನು ನೀಡುವಂತೆ ನಿಮಗೆ ಸಹಾಯಮಾಡಲಿಕ್ಕಾಗಿ ಅವರು ಬಹಳ ಸಂತೋಷಿಸುವರು. ಪೌಲನು ಬರೆದುದು: “ಸಹೋದರರೇ, ದೇವರ ಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವದೇನಂದರೆ—ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ [“ವಿವೇಚನಾಶಕ್ತಿ,” NW] ಆರಾಧನೆಯು. ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” ಮತ್ತು ಕೊಲೊಸ್ಸೆಯವರಿಗೆ ಅವನು ಹೇಳಿದ್ದು: “ನಾವು ನಿಮ್ಮ ಸುದ್ದಿಯನ್ನು ಕೇಳಿದ ದಿವಸದಿಂದ ನಿಮಗೋಸ್ಕರ ಪ್ರಾರ್ಥಿಸುವದನ್ನು ಬಿಡದೆ ನೀವು ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ ಕರ್ತನ [“ಯೆಹೋವನ,” NW] ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರಬೇಕೆಂತಲೂ ನೀವು ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ ಅಭಿವೃದ್ಧಿಯಾಗುತ್ತಿರಬೇಕೆಂತಲೂ . . . ದೇವರನ್ನು ಬೇಡಿಕೊಳ್ಳುತ್ತೇವೆ.”—ರೋಮಾಪುರ 12:1, 2; ಕೊಲೊಸ್ಸೆ 1:9-12.
[ಅಧ್ಯಯನ ಪ್ರಶ್ನೆಗಳು]
a ಕೆಲವು ಬೈಬಲ್ ಭಾಷಾಂತರಗಳು, ಹೇಜಿಯಾಸ್ ಎಂಬ ಗ್ರೀಕ್ ಪದವನ್ನು “ಪವಿತ್ರ ಜನ” ಎಂದೂ, ಇತರ ಬೈಬಲ್ ಭಾಷಾಂತರಗಳು “ಸಂತರು” ಎಂದೂ ತರ್ಜುಮೆ ಮಾಡುತ್ತವೆ.
b ಮಹಾ ಎಲ್ಯುಸಿನಿಯವು, ಆ್ಯಥೇನ್ಸ್ ಹಾಗೂ ಎಲ್ಯುಸಿಸ್ನಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಆಚರಿಸಲ್ಪಡುತ್ತಿತ್ತು.
[ಪುಟ 28 ರಲ್ಲಿರುವ ಚೌಕ/ಚಿತ್ರಗಳು]
ಪಾರ್ಥಿನಾನ್ ದೇವಾಲಯದ ಅಸಂಭವ ಬಳಕೆ
“ಕ್ರೈಸ್ತ” ಸಮ್ರಾಟನಾದ IIನೆಯ ಥಿಯೊಡಾಸಿಯಸ್, ಆ್ಯಥೇನ್ಸಿನ ನಗರಕ್ಕೆ (ಸಾ.ಶ. 438) ಸಂಬಂಧಿಸಿದ ಶಾಸನಗಳೊಂದಿಗೆ ವಿಧರ್ಮಿ ಸಂಸ್ಕಾರಗಳನ್ನೂ ಉತ್ಸವ ರಹಸ್ಯಗಳನ್ನೂ ರದ್ದುಮಾಡಿದನು, ವಿಧರ್ಮಿ ದೇವಾಲಯಗಳನ್ನು ಮುಚ್ಚಿಬಿಟ್ಟನು. ಅನಂತರ ಅವುಗಳನ್ನು ಕ್ರೈಸ್ತ ಚರ್ಚುಗಳನ್ನಾಗಿ ಪರಿವರ್ತಿಸಸಾಧ್ಯವಿತ್ತು. ದೇವಾಲಯದ ಒಂದು ಯಶಸ್ವಿ ಪರಿವರ್ತನೆಗಾಗಿದ್ದ ಏಕಮಾತ್ರ ಆವಶ್ಯಕತೆಯು, ಅದರಲ್ಲಿ ಒಂದು ಶಿಲುಬೆಯನ್ನಿಡುವ ಮೂಲಕ ಅದನ್ನು ಶುದ್ಧೀಕರಿಸುವುದೇ ಆಗಿತ್ತು!
ಪರಿವರ್ತನೆಮಾಡಲ್ಪಟ್ಟ ಪ್ರಥಮ ದೇವಾಲಯಗಳಲ್ಲಿ ಒಂದು ದೇವಾಲಯವು, ಪಾರ್ಥಿನಾನ್ ಆಗಿತ್ತು. ಪಾರ್ಥಿನಾನ್ ದೇವಾಲಯವನ್ನು “ಕ್ರೈಸ್ತ” ದೇವಾಲಯವಾಗಿ ಬಳಸುವಂತೆ ಯೋಗ್ಯವಾಗಿಸುವ ಸಲುವಾಗಿ, ಪ್ರಮುಖ ಜೀರ್ಣೋದ್ಧಾರ ಕಾರ್ಯವು ಮಾಡಲ್ಪಟ್ಟಿತು. ಸಾ.ಶ. 869ರಿಂದ, ಅದು ಆ್ಯಥೇನ್ಸಿನ ಮುಖ್ಯ ಚರ್ಚ್ ಆಗಿ ಕಾರ್ಯನಡೆಸಿತು. ಆರಂಭದಲ್ಲಿ ಅದಕ್ಕೆ “ಪವಿತ್ರ ವಿವೇಕ”ದ ಚರ್ಚು ಎಂಬ ಬಿರುದನ್ನು ನೀಡಲಾಯಿತು. ದೇವಾಲಯದ ಮೂಲ “ಒಡತಿ,” ಆ್ಯಥೇನಾ—ವಿವೇಕದ ದೇವತೆ—ಆಗಿದ್ದಳೆಂಬ ನಿಜಾಂಶದ ಒಂದು ಉದ್ದೇಶಪೂರ್ವಕ ಜ್ಞಾಪನವು ಇದಾಗಿದ್ದಿರಸಾಧ್ಯವಿದೆ. ಅನಂತರ ಅದು “ನಮ್ಮ ಮಾತೆಯಾದ ಆ್ಯಥೇನಿಯನ್” (ಅವರ್ ಲೇಡಿ ದ ಆ್ಯಥೇನಿಯನ್)ಗೆ ಸಮರ್ಪಿಸಲ್ಪಟ್ಟಿತು. ಆರ್ತೊಡಾಕ್ಸ್ ಉಪಯೋಗಿಸಿದ ಎಂಟು ಶತಮಾನಗಳ ಅನಂತರ, ಆ ದೇವಾಲಯವು ಆ್ಯಥೇನ್ಸಿನ ಸೆಂಟ್ ಮೇರಿಯ ಕ್ಯಾಥೊಲಿಕ್ ಚರ್ಚಾಗಿ ಪರಿವರ್ತನೆಗೊಂಡಿತು. ಪಾರ್ಥಿನಾನ್ನ ಅಂಥ ಧಾರ್ಮಿಕ “ಪುನರ್ಆವರ್ತನ”ವು, 15ನೇ ಶತಮಾನದಲ್ಲಿ, ಅದನ್ನು ಆಟಮನ್ ತುರ್ಕರು ಮಸೀದಿಯಾಗಿ ಪರಿವರ್ತಿಸುವ ತನಕವೂ ಮುಂದುವರಿಯಿತು.
ಇಂದು ಪಾರ್ಥಿನಾನ್, ವಿವೇಕದ ಗ್ರೀಕ್ ದೇವತೆಯಾದ ಆ್ಯಥೇನಾ ಪಾರ್ಥಿನಾಸ್ (“ಕನ್ಯೆ”)ಳ ಪುರಾತನ ಡಾರಿಕ್ ದೇವಾಲಯವು, ಸಾವಿರಾರು ಪ್ರವಾಸಿಗರಿಂದ ಗ್ರೀಕ್ ವಾಸ್ತುಶಿಲ್ಪದ ಒಂದು ಅತ್ಯುತ್ತಮ ಕೌಶಲದ ಕೆಲಸಗಾರಿಕೆಯೋಪಾದಿ ಮಾತ್ರವೇ ಸಂದರ್ಶಿಸಲ್ಪಡುತ್ತಿದೆ.
[ಪುಟ 26 ರಲ್ಲಿರುವ ಚಿತ್ರ]
ಡಾಫ್ನಿ ಸಂನ್ಯಾಸಿಮಠ—ಪ್ರಾಚೀನ ಆ್ಯಥೇನ್ಸಿನ ವಿಧರ್ಮಿಗಳಿಗೆ ಒಂದು ಬದಲಿ ಆರಾಧನಾ ಸ್ಥಳ