“ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ”
“ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ. ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು . . . ಸಂತೋಷದಿಂದ ಹರ್ಷಿಸುತ್ತೀರಿ.”—1 ಪೇತ್ರ 1:8, 9.
1. ಇಂದು ಭೂಮಿಯ ಮೇಲಿರುವ ಯಾರೊಬ್ಬರೂ ಯೇಸುವನ್ನು ನೋಡಿಲ್ಲವಾದರೂ, ಕೆಲವು ಧಾರ್ಮಿಕ ಜನರು ಅವನಿಗೆ ಭಕ್ತಿಯನ್ನು ತೋರಿಸಲು ಹೇಗೆ ಪ್ರಯತ್ನಿಸುತ್ತಾರೆ?
ಇಂದು ಭೂಮಿಯಲ್ಲಿ ಜೀವಂತರಾಗಿರುವ ಒಬ್ಬರೂ ಯೇಸು ಕ್ರಿಸ್ತನನ್ನು ನೋಡಿರುವುದೇ ಇಲ್ಲ. ಆದರೂ, ಅವನನ್ನು ಪ್ರೀತಿಸುವುದಾಗಿ ಕೋಟ್ಯಂತರ ಜನರು ಪ್ರತಿಪಾದಿಸುತ್ತಾರೆ. ಪ್ರತಿ ವರ್ಷ ಜನವರಿ 9ರಂದು, ಫಿಲಿಪ್ಪೀನ್ಸ್ನ ಮನಿಲಾದಲ್ಲಿ, ಶಿಲುಬೆಯನ್ನು ಹೊತ್ತುಕೊಂಡಿರುವ ಯೇಸು ಕ್ರಿಸ್ತನ ಸಹಜವಾದ ಆಕಾರದ ಪ್ರತಿಮೆಯೊಂದು ಬೀದಿಗಳಲ್ಲಿ ಎಳೆದೊಯ್ಯಲ್ಪಡುತ್ತದೆ. ಇದನ್ನು ಆ ದೇಶದಲ್ಲಿನ ಜನಪ್ರಿಯ ಧರ್ಮದ ಅತಿ ಮಹತ್ತರವಾದ, ಅತಿ ಪ್ರೇಕ್ಷಣೀಯ ಪ್ರದರ್ಶನವೆಂದು ವರ್ಣಿಸಲಾಗಿದೆ. ಉದ್ರೇಕಗೊಂಡ ಸಮೂಹವು ನೂಕುತ್ತದೆ ಮತ್ತು ದೂಡುತ್ತದೆ; ಪ್ರತಿಮೆಯನ್ನು ಮುಟ್ಟುವ ಒಂದು ರೋಷಾವೇಶದ ಪ್ರಯತ್ನದಲ್ಲಿ ಜನರು ಒಬ್ಬರ ಮೇಲೊಬ್ಬರು ಏರುತ್ತಾರೆ ಸಹ. ಇದನ್ನು ಅವಲೋಕಿಸಲು ಉಪಸ್ಥಿತರಾಗಿರುವ ಅನೇಕರು ಮುಖ್ಯವಾಗಿ ಉಲ್ಲಾಸಶೀಲ ಮೆರವಣಿಗೆಯಿಂದ ಆಕರ್ಷಿಸಲ್ಪಟ್ಟಿದ್ದಾರೆ. ಆದರೂ, ಅವರಲ್ಲಿ ಕೆಲವರು ಯೇಸುವಿನ ಕಡೆಗೆ ಪ್ರಾಮಾಣಿಕವಾಗಿ ಸೆಳೆಯಲ್ಪಟ್ಟಿರುವ ಅನಿಸಿಕೆಯುಳ್ಳ ಜನರೆಂಬುದರಲ್ಲಿ ಸಂದೇಹವಿಲ್ಲ. ಅದರ ಪ್ರಮಾಣವಾಗಿ ಅವರು ಒಂದು ಶಿಲುಬೆಯನ್ನು ಧರಿಸಿಕೊಳ್ಳಬಹುದು ಇಲ್ಲವೆ ಕ್ರಮವಾಗಿ ಚರ್ಚಿಗೆ ಹೋಗಬಹುದು. ಹಾಗಿದ್ದರೂ, ಅಂತಹ ಮೂರ್ತಿಪೂಜೆಯನ್ನು ಸತ್ಯಾರಾಧನೆಯಾಗಿ ಪರಿಗಣಿಸಸಾಧ್ಯವೊ?
2, 3. (ಎ) ಯೇಸುವಿನ ಹಿಂಬಾಲಕರಲ್ಲಿ ಯಾರು ಅವನನ್ನು ನಿಜವಾಗಿಯೂ ನೋಡಿ, ಅವನು ಹೇಳಿದ್ದನು ಕೇಳಿದರು? (ಬಿ) ಅವರು ಯೇಸುವನ್ನು ಎಂದೂ ವೈಯಕ್ತಿಕವಾಗಿ ನೋಡಿರದಿದ್ದರೂ, ಇನ್ಯಾರು ಪ್ರಥಮ ಶತಮಾನದಲ್ಲಿ ಅವನನ್ನು ಪ್ರೀತಿಸಿದರು ಮತ್ತು ಅವನಲ್ಲಿ ನಂಬಿಕೆಯನ್ನಿಟ್ಟರು?
2 ಪ್ರಥಮ ಶತಮಾನದಲ್ಲಿ, ಯೇಸು ಕ್ರಿಸ್ತನನ್ನು ನಿಶ್ಚಯವಾಗಿ ವೈಯಕ್ತಿಕವಾಗಿ ನೋಡಿದ ಮತ್ತು ಅವನಿಗೆ ಕಿವಿಗೊಟ್ಟ ಅನೇಕ ಸಾವಿರಾರು ಜನರು ಯೂದಾಯ, ಸಮಾರ್ಯ, ಪೆರಿಯಾ, ಮತ್ತು ಗಲಿಲಾಯದ ರೋಮನ್ ಪ್ರಾಂತಗಳಲ್ಲಿದ್ದರು. ಅವನು ದೇವರ ರಾಜ್ಯದ ಕುರಿತು ಹೃದಯೋಲ್ಲಾಸದ ಸತ್ಯಗಳನ್ನು ವಿವರಿಸಿದಂತೆ, ಅವರು ಕಿವಿಗೊಟ್ಟರು. ಅವನು ನಡೆಸಿದ ಅದ್ಭುತಕಾರ್ಯಗಳಿಗೆ ಅವರು ಪ್ರತ್ಯಕ್ಷಸಾಕ್ಷಿಗಳಾಗಿದ್ದರು. ಇವರಲ್ಲಿ ಕೆಲವರು, ಅವನು “ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು” ಎಂಬುದಾಗಿ ಮನಗಾಣಿಸಲ್ಪಟ್ಟು, ಅವನ ದೃಢನಿಷ್ಠೆಯ ಶಿಷ್ಯರಾದರು. (ಮತ್ತಾಯ 16:16) ಹಾಗಿದ್ದರೂ, ಯಾರಿಗೆ ಅಪೊಸ್ತಲ ಪೇತ್ರನು ತನ್ನ ಪ್ರಥಮ ಪ್ರೇರಿತ ಪತ್ರವನ್ನು ಬರೆದನೊ, ಅವರು ಈ ಗುಂಪಿಗೆ ಸೇರಿದ ಜನರಾಗಿರಲಿಲ್ಲ.
3 ಪೇತ್ರನು ಯಾರನ್ನು ಸಂಬೋಧಿಸಿ ಬರೆದನೊ ಅವರು ರೋಮನ್ ಪ್ರಾಂತಗಳಾದ ಪೊಂತ, ಗಲಾತ್ಯ, ಕಪ್ಪದೋಕ್ಯ, ಆಸ್ಯ, ಮತ್ತು ಬಿಥೂನ್ಯ—ಇವೆಲ್ಲ ಆಧುನಿಕ ದಿನದ ಟರ್ಕಿಯ ಕ್ಷೇತ್ರದಲ್ಲಿವೆ—ದಲ್ಲಿದ್ದರು. ಅವರಿಗೆ ಪೇತ್ರನು ಬರೆದುದು: “ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ. ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು . . . ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.” (1 ಪೇತ್ರ 1:1, 8, 9) ಅವರು ಯೇಸು ಕ್ರಿಸ್ತನನ್ನು ಪ್ರೀತಿಸಿ, ಅವನಲ್ಲಿ ನಂಬಿಕೆಯನ್ನಿಡುವಷ್ಟರ ಮಟ್ಟಿಗೆ ಅವನ ಕುರಿತು ತಿಳಿದುಕೊಂಡದ್ದು ಹೇಗೆ?
4, 5. ಯೇಸುವನ್ನು ಎಂದೂ ನೋಡಿರದಿದ್ದ ಜನರು ಅವನನ್ನು ಪ್ರೀತಿಸಿ, ಅವನಲ್ಲಿ ನಂಬಿಕೆಯನ್ನಿಡಲು ಬೇಕಾದಷ್ಟು ವಿಷಯವನ್ನು ಹೇಗೆ ಕಲಿತರು?
4 ಸಾ.ಶ. 33ರಲ್ಲಿ ನಡೆದ ಪಂಚಾಶತ್ತಮದ ಉತ್ಸವವನ್ನು ಹಾಜರಾಗುತ್ತಿದ್ದ ಸಮೂಹಕ್ಕೆ ಅಪೊಸ್ತಲ ಪೇತ್ರನು ಸಾಕ್ಷಿನೀಡಿದಾಗ, ಕೆಲವರು ಯೆರೂಸಲೇಮಿನಲ್ಲಿದ್ದರೆಂಬುದು ವ್ಯಕ್ತ. ಉತ್ಸವದ ನಂತರ ಅನೇಕ ಶಿಷ್ಯರು ಅಪೊಸ್ತಲರಿಂದ ಹೆಚ್ಚಿನ ಉಪದೇಶವನ್ನು ಪಡೆದುಕೊಳ್ಳುವ ಸಲುವಾಗಿ ಯೆರೂಸಲೇಮಿನಲ್ಲಿ ತಂಗಿದರು. (ಅ. ಕೃತ್ಯಗಳು 2:9, 41, 42; ಹೋಲಿಸಿ 1 ಪೇತ್ರ 1:1.) ಸತತವಾದ ಮಿಷನೆರಿ ಸಂಚಾರಗಳಲ್ಲಿ ಅಪೊಸ್ತಲ ಪೌಲನು, ಯಾವ ಕ್ಷೇತ್ರಕ್ಕೆ ಪೇತ್ರನು ತದನಂತರ ಅವನ ಹೆಸರುಳ್ಳ ಪ್ರಥಮ ಬೈಬಲ್ ಸಂಬಂಧಿತ ಪತ್ರವನ್ನು ಕಳುಹಿಸಿದನೊ, ಆ ಜನರ ಮಧ್ಯದಲ್ಲಿಯೂ ಹುರುಪಿನ ಶುಶ್ರೂಷೆಯನ್ನು ನಡೆಸಿದನು.—ಅ. ಕೃತ್ಯಗಳು 18:23; 19:10; ಗಲಾತ್ಯ 1:1, 2.
5 ಯೇಸುವನ್ನು ಎಂದೂ ನೋಡಿರದಿದ್ದ ಆ ಜನರು ಅವನ ಕಡೆಗೆ ಅಷ್ಟು ಬಲವಾಗಿ ಏಕೆ ಆಕರ್ಷಿತರಾದರು? ನಮ್ಮ ದಿನದಲ್ಲಿ, ಭೂಗೋಳದ ಸುತ್ತಲೂ ಇರುವ ಇನ್ನೂ ಅನೇಕ ಲಕ್ಷಾಂತರ ಜನರು ಅವನನ್ನು ಗಾಢವಾಗಿ ಪ್ರೀತಿಸುವುದೇಕೆ?
ಅವರು ಆಲಿಸಿದ ವಿಷಯಗಳು
6. (ಎ) ಸಾ.ಶ. 33ರ ಪಂಚಾಶತ್ತಮದಲ್ಲಿ ಯೇಸುವಿನ ಕುರಿತು ಪೇತ್ರನು ಸಾಕ್ಷಿನೀಡುವುದನ್ನು ನೀವು ಆಲಿಸುತ್ತಾ ಇದ್ದಿದ್ದರೆ, ನೀವು ಏನನ್ನು ಕಲಿಯಸಾಧ್ಯವಿತ್ತು? (ಬಿ) ಇದು ಉಪಸ್ಥಿತರಿದ್ದ ಸುಮಾರು 3,000 ಮಂದಿಯನ್ನು ಹೇಗೆ ಪ್ರಭಾವಿಸಿತು?
6 ಸಾ.ಶ. 33ರಲ್ಲಿ ನೆರೆದುಬಂದಿದ್ದ ಆ ಉತ್ಸವದ ಸಮೂಹವನ್ನುದ್ದೇಶಿಸಿ ಪೇತ್ರನು ಮಾತಾಡಿದಾಗ ನೀವು ಯೆರೂಸಲೇಮಿನಲ್ಲಿ ಇದ್ದಿದ್ದರೆ, ಯೇಸುವಿನ ಕುರಿತು ನೀವು ಏನನ್ನು ಕಲಿಯುತ್ತಿದ್ದಿರಿ? ಅವನು ನಡೆಸಿದ ಅದ್ಭುತಕಾರ್ಯಗಳು, ಅವನು ನಿಸ್ಸಂದೇಹವಾಗಿ ದೇವರಿಂದ ಕಳುಹಿಸಲ್ಪಟ್ಟಿದ್ದನೆಂಬುದನ್ನು ತೋರಿಸಿದವು. ಪಾಪಪೂರ್ಣ ಜನರು ಯೇಸುವನ್ನು ಮರಣಕ್ಕೆ ಒಪ್ಪಿಸಿದ್ದರೂ, ಅವನು ಇನ್ನುಮುಂದೆ ಸಮಾಧಿಯಲ್ಲಿರಲಿಲ್ಲ ಬದಲಿಗೆ ಪುನರುತ್ಥಾನಗೊಂಡು, ನಂತರ ದೇವರ ಬಲಪಕ್ಕಕ್ಕೆ, ಸ್ವರ್ಗಕ್ಕೆ ಎತ್ತರಿಸಲ್ಪಟ್ಟಿದ್ದನೆಂಬುದನ್ನು ಕಲಿಯುತ್ತಿದ್ದಿರಿ. ಯೇಸುವೇ, ಯಾರ ಕುರಿತಾಗಿ ಪ್ರವಾದಿಗಳು ಬರೆದಿದ್ದರೊ ಆ ಕ್ರಿಸ್ತನೂ ಮೆಸ್ಸೀಯನೂ ಆಗಿದ್ದನೆಂಬುದನ್ನು ಕಲಿಯುತ್ತಿದ್ದಿರಿ. ಯೇಸು ಕ್ರಿಸ್ತನ ಮುಖಾಂತರ ಅವನ ಹಿಂಬಾಲಕರ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟ ಕಾರಣ, ದೇವರು ತನ್ನ ಮಗನ ಮೂಲಕ ಮಾಡುತ್ತಿದ್ದ ಮಹೋನ್ನತ ವಿಷಯಗಳ ಕುರಿತು ಅನೇಕ ರಾಷ್ಟ್ರಗಳ ಜನರಿಗೆ ಕೂಡಲೆ ಸಾಕ್ಷಿನೀಡಲು ಅವರು ಶಕ್ತರಾಗಿದ್ದರು ಎಂಬುದನ್ನು ಕಲಿಯುತ್ತಿದ್ದಿರಿ. ಆ ಸಂದರ್ಭದಲ್ಲಿ ಪೇತ್ರನಿಗೆ ಕಿವಿಗೊಟ್ಟ ಅನೇಕರ ಹೃದಯಗಳು ಸ್ಪರ್ಶಿಸಲ್ಪಟ್ಟವು ಮತ್ತು ಸುಮಾರು 3,000 ಮಂದಿ ಕ್ರೈಸ್ತ ಶಿಷ್ಯರಾಗಿ ದೀಕ್ಷಾಸ್ನಾನ ಪಡೆದುಕೊಂಡರು. (ಅ. ಕೃತ್ಯಗಳು 2:14-42) ನೀವು ಅಲ್ಲಿ ಇದ್ದಿದ್ದರೆ, ಅಂತಹ ನಿರ್ಣಾಯಕ ಕ್ರಿಯೆಯನ್ನು ಕೈಕೊಳ್ಳುತ್ತಿದ್ದಿರೊ?
7. (ಎ) ಅಪೊಸ್ತಲ ಪೌಲನು ಅಂತಿಯೋಕ್ಯದಲ್ಲಿ ಸಾರಿದಾಗ ನೀವು ಅಲ್ಲಿ ಇದ್ದಿದ್ದರೆ, ನೀವು ಏನನ್ನು ಕಲಿಯುತ್ತಿದ್ದಿರಿ? (ಬಿ) ಸಮೂಹದಲ್ಲಿ ಕೆಲವರು ವಿಶ್ವಾಸಿಗಳಾಗಿ, ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಂಡದ್ದೇಕೆ?
7 ಅಪೊಸ್ತಲ ಪೌಲನು ಅಂತಿಯೋಕ್ಯದಲ್ಲಿ, ರೋಮನ್ ಪ್ರಾಂತವಾದ ಗಲಾತ್ಯದಲ್ಲಿದ್ದವರಿಗೆ ಕಲಿಸಿದಾಗ ಉಪಸ್ಥಿತರಲ್ಲಿ ನೀವು ಒಬ್ಬರಾಗಿರುತ್ತಿದ್ದಿದ್ದರೆ, ಯೇಸುವಿನ ಕುರಿತು ಇನ್ನಾವ ವಿಷಯವನ್ನು ನೀವು ಕಲಿಯುತ್ತಿದ್ದಿರಿ? ಯೆರೂಸಲೇಮಿನಲ್ಲಿದ್ದ ಅರಸರಿಂದ ಯೇಸು ಮರಣಕ್ಕೆ ಖಂಡಿಸಲ್ಪಟ್ಟ ವಿಷಯವು ಪ್ರವಾದಿಗಳಿಂದ ಮುಂತಿಳಿಸಲ್ಪಟ್ಟಿತ್ತೆಂದು ಪೌಲನು ವಿವರಿಸುವುದನ್ನು ನೀವು ಕೇಳುತ್ತಿದ್ದಿರಿ. ಯೇಸುವಿನ ಪುನರುತ್ಥಾನದ ಪ್ರತ್ಯಕ್ಷಸಾಕ್ಷಿ ಪ್ರಮಾಣದ ಕುರಿತಾಗಿಯೂ ನೀವು ಕೇಳುತ್ತಿದ್ದಿರಿ. ಯೇಸುವನ್ನು ಸತ್ತವರಿಂದ ಪುನರುತ್ಥಾನಗೊಳಿಸುವ ಮೂಲಕ, ಅವನು ನಿಶ್ಚಯವಾಗಿಯೂ ದೇವರ ಮಗನೆಂದು ಯೆಹೋವನು ದೃಢಪಡಿಸಿದನೆಂಬ ಪೌಲನ ವಿವರಣೆಯಿಂದ ನೀವು ನಿಶ್ಚಯವಾಗಿಯೂ ಪ್ರಭಾವಿಸಲ್ಪಟ್ಟಿರುತ್ತಿದ್ದಿರಿ. ಯೇಸುವಿನಲ್ಲಿ ನಂಬಿಕೆಯ ಮೂಲಕ ಸಾಧ್ಯಗೊಳಿಸಲ್ಪಟ್ಟ ಪಾಪಗಳ ಕ್ಷಮಾಪಣೆಯು ನಿತ್ಯಜೀವಕ್ಕೆ ನಡೆಸಸಾಧ್ಯವಿತ್ತೆಂದು ನೀವು ಕಲಿತಾಗ, ನಿಮ್ಮ ಹೃದಯವು ಉಲ್ಲಾಸಗೊಳ್ಳದೆ ಇರುತ್ತಿತ್ತೊ? (ಅ. ಕೃತ್ಯಗಳು 13:16-41, 46, 47; ರೋಮಾಪುರ 1:4) ತಾವು ಯಾವ ವಿಷಯಕ್ಕೆ ಕಿವಿಗೊಡುತ್ತಿದ್ದರೊ ಅದರ ಮಹತ್ವವನ್ನು ಗ್ರಹಿಸುತ್ತಾ, ಅಂತಿಯೋಕ್ಯದಲ್ಲಿದ್ದ ಕೆಲವರು ಇತರರೊಂದಿಗೆ ಸುವಾರ್ತೆಯನ್ನು ಸಕ್ರಿಯವಾಗಿ ಹಂಚುತ್ತಾ—ಹಾಗೆ ಮಾಡುವುದು ತಾವು ತೀಕ್ಷ್ಣವಾದ ಹಿಂಸೆಯನ್ನು ಎದುರಿಸುವರು ಎಂಬುದನ್ನು ಅರ್ಥೈಸಿದರೂ—ಶಿಷ್ಯರಾದರು.—ಅ. ಕೃತ್ಯಗಳು 13:42, 43, 48-52; 14:1-7, 21-23.
8. ನೀವು ಎಫೆಸ ಸಭೆಯ ಕೂಟದಲ್ಲಿ—ಪೌಲನು ಅವರಿಗೆ ಬರೆದ ಪತ್ರವು ಅವರಿಗೆ ಸಿಕ್ಕಿದ ಸಮಯದಲ್ಲಿ ಅಲ್ಲಿ ಇದ್ದಿದ್ದರೆ, ನೀವು ಏನನ್ನು ಕಲಿಯಸಾಧ್ಯವಿತ್ತು?
8 ನೀವು ಆಸ್ಯದ ರೋಮನ್ ಪ್ರಾಂತವಾದ ಎಫೆಸದಲ್ಲಿನ ಕ್ರೈಸ್ತ ಸಭೆಯೊಂದಿಗೆ, ಅಲ್ಲಿನ ಶಿಷ್ಯರಿಗೆ ಪೌಲನ ಪ್ರೇರಿತ ಪತ್ರವು ಸಿಕ್ಕಿದಾಗ ಸಹವಸಿಸುತ್ತಾ ಇದ್ದಿದ್ದರೆ, ಆಗೇನು? ದೇವರ ಉದ್ದೇಶದಲ್ಲಿ ಯೇಸುವಿನ ಪಾತ್ರದ ಕುರಿತು ನೀವು ಅದರಿಂದ ಏನನ್ನು ಕಲಿಯಸಾಧ್ಯವಿತ್ತು? ಆ ಪತ್ರದಲ್ಲಿ ಪೌಲನು ವಿವರಿಸಿದ್ದೇನೆಂದರೆ, ಕ್ರಿಸ್ತನ ಮುಖಾಂತರ ಸ್ವರ್ಗದಲ್ಲಿ ಮತ್ತು ಭೂಮಿಯ ಮೇಲಿರುವ ಸಕಲ ವಿಷಯಗಳು ದೇವರ ಉದ್ದೇಶಕ್ಕೆ ಹೊಂದಿಕೆಯಲ್ಲಿ ಪುನಃ ತರಲ್ಪಡುವವು, ಕ್ರಿಸ್ತನ ಮುಖಾಂತರವಾದ ದೇವರ ಕೊಡುಗೆಯು ಎಲ್ಲ ರಾಷ್ಟ್ರಗಳ ಜನರಿಗೆ ವಿಸ್ತರಿಸಲ್ಪಟ್ಟಿತು, ತಮ್ಮ ಪಾಪಗಳ ಕಾರಣ ದೇವರ ದೃಷ್ಟಿಯಲ್ಲಿ ಸತ್ತುಹೋಗಿದ್ದ ವ್ಯಕ್ತಿಗಳು ಕ್ರಿಸ್ತನಲ್ಲಿ ನಂಬಿಕೆಯ ಮೂಲಕ ಜೀವಂತರಾಗಿ ಮಾಡಲ್ಪಡುತ್ತಿದ್ದರು ಮತ್ತು ಈ ಏರ್ಪಾಡಿನ ಪರಿಣಾಮವಾಗಿ, ಮನುಷ್ಯರಿಗೆ ಪುನಃ ದೇವರ ಪ್ರಿಯ ಪುತ್ರರಾಗಲು ಸಾಧ್ಯವಿತ್ತು.—ಎಫೆಸ 1:1, 5-10; 2:4, 5, 11-13.
9. (ಎ) ಯಾವ ವಿಷಯದ ಕುರಿತು ಪೌಲನು ಎಫೆಸದವರಿಗೆ ಬರೆದನೊ ಅದರ ಮಹತ್ವವನ್ನು ನೀವು ವೈಯಕ್ತಿಕವಾಗಿ ಗ್ರಹಿಸುತ್ತೀರೊ ಇಲ್ಲವೊ ಎಂಬುದನ್ನು ವಿವೇಚಿಸಲು ನಿಮಗೆ ಯಾವುದು ಸಹಾಯಮಾಡಬಲ್ಲದು? (ಬಿ) ಪೇತ್ರನಿಂದ ಉಲ್ಲೇಖಿಸಲ್ಪಟ್ಟ ರೋಮನ್ ಪ್ರಾಂತಗಳಲ್ಲಿದ್ದ ಸಹೋದರರು, ತಾವು ಯೇಸುವಿನ ಕುರಿತು ಕಲಿಯುತ್ತಿದ್ದ ವಿಷಯದಿಂದ ಹೇಗೆ ಪ್ರಭಾವಿಸಲ್ಪಟ್ಟರು?
9 ಈ ಎಲ್ಲ ವಿಷಯಕ್ಕಾಗಿರುವ ಗಣ್ಯತೆಯು, ದೇವರ ಮಗನಿಗಾಗಿ ನಿಮ್ಮ ಪ್ರೀತಿಯನ್ನು ಆಳಗೊಳಿಸಿರುತ್ತಿತ್ತೊ? ಆ ಪ್ರೀತಿಯು, ಎಫೆಸ 4ರಿಂದ 6ನೆಯ ಅಧ್ಯಾಯಗಳಲ್ಲಿ ಅಪೊಸ್ತಲ ಪೌಲನು ಉತ್ತೇಜಿಸಿದಂತೆ, ನಿಮ್ಮ ಅನುದಿನದ ಜೀವಿತವನ್ನು ಪ್ರಭಾವಿಸಿರುತ್ತಿತ್ತೊ? ಅಂತಹ ಗಣ್ಯತೆಯು ಜೀವನದಲ್ಲಿನ ನಿಮ್ಮ ಸ್ವಂತ ಆದ್ಯತೆಗಳನ್ನು ಜಾಗರೂಕವಾಗಿ ಪರಿಶೀಲಿಸುವಂತೆ ನಿಮ್ಮನ್ನು ಪ್ರೇರಿಸಿರುತ್ತಿತ್ತೊ? ದೇವರಿಗಾಗಿ ಪ್ರೀತಿ ಮತ್ತು ಆತನ ಮಗನಿಗಾಗಿ ಕೃತಜ್ಞತೆಯಿಂದ, ನಿಮ್ಮ ಜೀವನದಲ್ಲಿ ದೇವರ ಚಿತ್ತದ ಮಾಡುವಿಕೆಯು ನಿಜವಾಗಿಯೂ ಕೇಂದ್ರಬಿಂದುವಾಗಿರುವಂತೆ ನೀವು ಬೇಕಾದ ಹೊಂದಾಣಿಕೆಗಳನ್ನು ಮಾಡುತ್ತಿದ್ದಿರೊ? (ಎಫೆಸ 5:15-17) ಆಸ್ಯ, ಗಲಾತ್ಯ, ಮತ್ತು ಇತರ ರೋಮನ್ ಪ್ರಾಂತಗಳಲ್ಲಿನ ಕ್ರೈಸ್ತರು, ತಾವು ಕಲಿಯುತ್ತಿದ್ದ ವಿಷಯಗಳಿಂದ ಪ್ರಭಾವಿತರಾದ ವಿಧದ ಸಂಬಂಧದಲ್ಲಿ, ಅಪೊಸ್ತಲ ಪೇತ್ರನು ಅವರಿಗೆ ಬರೆದುದು: “ನೀವು ಆತನನ್ನು [ಯೇಸು ಕ್ರಿಸ್ತನು] ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ. . . . ಆತನಲ್ಲಿ ನಂಬಿಕೆಯಿಟ್ಟು . . . ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.”—1 ಪೇತ್ರ 1:8, 9.
10. (ಎ) ಯೇಸುವಿಗಾಗಿದ್ದ ಆದಿ ಕ್ರೈಸ್ತರ ಪ್ರೀತಿಗೆ ಯಾವುದು ನಿಸ್ಸಂದೇಹವಾಗಿ ನೆರವು ನೀಡಿತು? (ಬಿ) ನಾವು ಸಹ ಹೇಗೆ ಪ್ರಯೋಜನ ಪಡೆದುಕೊಳ್ಳಬಲ್ಲೆವು?
10 ಯಾರನ್ನು ಪೇತ್ರನು ಸಂಬೋಧಿಸಿದನೊ ಆ ಆದಿ ಕ್ರೈಸ್ತರಲ್ಲಿ ದೇವರ ಮಗನಿಗಾಗಿದ್ದ ಪ್ರೀತಿಗೆ, ನಿಸ್ಸಂದೇಹವಾಗಿ ಬೇರೆ ಯಾವುದೊ ವಿಷಯವು ನೆರವುನೀಡಿತು. ಅದು ಏನಾಗಿತ್ತು? ಪೇತ್ರನು ತನ್ನ ಪ್ರಥಮ ಪತ್ರವನ್ನು ಬರೆದ ಸಮಯದೊಳಗಾಗಿ, ಕಡಿಮೆ ಪಕ್ಷ ಸುವಾರ್ತೆಗಳಲ್ಲಿ ಎರಡು—ಮತ್ತಾಯ ಮತ್ತು ಲೂಕ—ಈಗಾಗಲೇ ಚಲಾವಣೆಯಲ್ಲಿದ್ದವು. ಯೇಸುವನ್ನು ಎಂದೂ ನೋಡಿರದ ಪ್ರಥಮ ಶತಮಾನದ ಕ್ರೈಸ್ತರು ಈ ಸುವಾರ್ತಾ ವೃತ್ತಾಂತಗಳನ್ನು ಓದಸಾಧ್ಯವಿತ್ತು. ನಾವೂ ಓದಬಲ್ಲೆವು. ಸುವಾರ್ತೆಗಳು ಕಾಲ್ಪನಿಕ ವೃತ್ತಾಂತಗಳಲ್ಲ, ಅವು ಅತಿ ವಿಶ್ವಸನೀಯ ಇತಿಹಾಸದ ಎಲ್ಲ ವೈಶಿಷ್ಟ್ಯಗಳನ್ನು ಪಡೆದಿವೆ. ಆ ಪ್ರೇರಿತ ದಾಖಲೆಗಳಲ್ಲಿ, ದೇವರ ಮಗನಿಗಾಗಿ ನಮ್ಮ ಪ್ರೀತಿಯನ್ನು ಆಳಗೊಳಿಸುವ ಹೆಚ್ಚಿನ ವಿಷಯವನ್ನು ನಾವು ಕಂಡುಕೊಳ್ಳುತ್ತೇವೆ.
ಅವನು ತೋರಿಸಿದ ಮನೋವೃತ್ತಿ
11, 12. ಯೇಸು ಇತರ ಮಾನವರ ಕಡೆಗೆ ತೋರಿಸಿದ ಮನೋವೃತ್ತಿಯ ವಿಷಯದಲ್ಲಿ, ಯಾವ ಸಂಗತಿಯು ನೀವು ಅವನನ್ನು ಪ್ರೀತಿಸುವಂತೆ ಮಾಡುತ್ತದೆ?
11 ಅಲ್ಲಿ ಯೇಸುವಿನ ಜೀವಿತದ ಲಿಖಿತ ದಾಖಲೆಯಲ್ಲಿ, ಅವನು ಇತರ ಮಾನವರೊಂದಿಗೆ ಹೇಗೆ ವರ್ತಿಸಿದನೆಂಬುದನ್ನು ನಾವು ಕಲಿಯುತ್ತೇವೆ. ಅವನು ತೋರಿಸಿದ ಮನೋವೃತ್ತಿಯು ಈಗಲೂ—ಅವನು ಸತ್ತು 1,960ಕ್ಕಿಂತಲೂ ಹೆಚ್ಚು ವರ್ಷಗಳ ನಂತರವೂ—ಜನರ ಹೃದಯವನ್ನು ಸ್ಪರ್ಶಿಸುತ್ತದೆ. ಜೀವಂತರಾಗಿರುವ ಪ್ರತಿಯೊಬ್ಬರು ಪಾಪದ ಪರಿಣಾಮಗಳಿಂದ ಪೀಡಿಸಲ್ಪಟ್ಟಿದ್ದಾರೆ. ಅನೇಕ ಕೋಟ್ಯಂತರ ಜನರು ಅನ್ಯಾಯದ ಆಹುತಿಗಳಾಗಿದ್ದಾರೆ, ಅನಾರೋಗ್ಯದಿಂದ ಕಷ್ಟಪಡುತ್ತಾರೆ, ಇಲ್ಲವೆ ಇತರ ಕಾರಣಗಳಿಗಾಗಿ ಗೋಳುಗುಟ್ಟಿಸುವ ನಿರಾಶೆಯನ್ನು ಅನುಭವಿಸುತ್ತಾರೆ. ಅಂಥವರೆಲ್ಲರಿಗೆ, ಯೇಸು ಹೇಳುವುದು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.”—ಮತ್ತಾಯ 11:28-30.
12 ಯೇಸು ಬಡವರಿಗೆ, ಹಸಿದವರಿಗೆ, ಮತ್ತು ದುಃಖಿಸುತ್ತಿರುವವರಿಗೆ ಸೂಕ್ಷ್ಮಗ್ರಾಹಿ ಚಿಂತೆಯನ್ನು ತೋರಿಸಿದನು. ಪರಿಸ್ಥಿತಿಗಳು ಕೇಳಿಕೊಂಡಾಗ, ಅವನು ದೊಡ್ಡ ಸಮೂಹಗಳಿಗೆ ಅದ್ಭುತಕರವಾಗಿ ಉಣಿಸಿದನು ಸಹ. (ಲೂಕ 9:12-17) ಅವನು ಅವರನ್ನು ದಾಸರನ್ನಾಗಿ ಮಾಡುವ ಸಂಪ್ರದಾಯಗಳಿಂದ ಮುಕ್ತಗೊಳಿಸಿದನು. ರಾಜಕೀಯ ಹಾಗೂ ಆರ್ಥಿಕ ದಬ್ಬಾಳಿಕೆಯನ್ನು ಕೊನೆಗೊಳಿಸಲಿರುವ ದೇವರ ಏರ್ಪಾಡಿನಲ್ಲಿ ಅವರ ನಂಬಿಕೆಯನ್ನೂ ಅವನು ಬಲಪಡಿಸಿದನು. ಈಗಾಗಲೇ ಅದುಮಲ್ಪಟ್ಟಿರುವವರ ಆತ್ಮವನ್ನು ಅವನು ಜಜ್ಜಲಿಲ್ಲ. ಕೋಮಲತೆ ಹಾಗೂ ಪ್ರೀತಿಯಿಂದ ಅವನು ಕೌಶಲಪೂರ್ಣವಾಗಿ ದೀನರನ್ನು ಮೇಲೆತ್ತಿದನು. ಅವನು ಬಾಗಿದ್ದ ಜಜ್ಜಲ್ಪಟ್ಟ ದಂಟುಗಳಂತಿದ್ದವರಿಗೆ ಮತ್ತು ನಂದಿಹೋಗಲಿದ್ದ ಕನಲುರಿಯುತ್ತಿರುವ ನಾರಿನ ಬತ್ತಿಗಳಂತಿದ್ದವರಿಗೆ ಚೈತನ್ಯವನ್ನುಂಟುಮಾಡಿದನು. ಆ ಸಮಯದಿಂದ ಇಂದಿನ ವರೆಗೆ, ಅವನ ಹೆಸರು, ಅವನನ್ನು ಎಂದೂ ನೋಡಿರದವರ ಹೃದಯಗಳಲ್ಲೂ ನಿರೀಕ್ಷೆಯನ್ನು ತುಂಬುತ್ತದೆ.—ಮತ್ತಾಯ 12:15-21; 15:3-10.
13. ಯೇಸು ಪಾಪಿಗಳೊಂದಿಗೆ ವ್ಯವಹರಿಸಿದ ವಿಧವು ಜನರನ್ನು ಏಕೆ ಆಕರ್ಷಿಸುತ್ತದೆ?
13 ಯೇಸು ತಪ್ಪುಮಾಡುವಿಕೆಯನ್ನು ಸಮ್ಮತಿಸಲಿಲ್ಲವಾದರೂ, ಜೀವನದಲ್ಲಿ ತಪ್ಪುಗಳನ್ನು ಮಾಡಿದ್ದ ಆದರೆ ಪಶ್ಚಾತ್ತಾಪವನ್ನು ಪ್ರದರ್ಶಿಸಿ, ಸಹಾಯಕ್ಕಾಗಿ ಅವನ ಕಡೆಗೆ ತಿರುಗಿದ ಜನರ ಕಡೆಗೆ ಅವನು ವಿವೇಚನೆಯನ್ನು ತೋರಿಸಿದನು. (ಲೂಕ 7:36-50) ಆತ್ಮಿಕವಾಗಿ ಅವರಿಗೆ ಸಹಾಯನೀಡಲು ಅದು ಒಂದು ಅವಕಾಶವನ್ನು ಒದಗಿಸುವುದೆಂದು ಅವನಿಗೆ ಅನಿಸಿದರೆ, ಅವನು ಸಮುದಾಯದಲ್ಲಿ ಉಪೇಕ್ಷಿಸಲ್ಪಟ್ಟ ಜನರೊಂದಿಗೆ ಕುಳಿತುಕೊಂಡು ಊಟಮಾಡುತ್ತಿದ್ದನು. (ಮತ್ತಾಯ 9:9-13) ಅವನು ಪ್ರದರ್ಶಿಸಿದ ಮನೋವೃತ್ತಿಯ ಫಲಿತಾಂಶವಾಗಿ, ಯೇಸುವನ್ನು ಎಂದೂ ನೋಡಿರದ, ತದ್ರೀತಿಯ ಪರಿಸ್ಥಿತಿಗಳಲ್ಲಿರುವ ಕೋಟ್ಯಂತರ ಜನರು ಅವನನ್ನು ಅರಿಯುವಂತೆ ಪ್ರೇರೇಪಿಸಲ್ಪಟ್ಟಿದ್ದಾರೆ ಮತ್ತು ಅವನಲ್ಲಿ ನಂಬಿಕೆಯನ್ನಿಟ್ಟಿದ್ದಾರೆ.
14. ಯೇಸು ಅಸ್ವಸ್ಥರು, ದುರ್ಬಲರು, ಇಲ್ಲವೆ ವಿಯೋಗಿಗಳಿಗೆ ಸಹಾಯಮಾಡಿದ ರೀತಿಯ ವಿಷಯದಲ್ಲಿ, ಯಾವ ಸಂಗತಿಯು ನಿಮ್ಮನ್ನು ಆಕರ್ಷಿಸುತ್ತದೆ?
14 ಅಸ್ವಸ್ಥರು ಇಲ್ಲವೆ ದುರ್ಬಲರಾಗಿದ್ದ ಜನರೊಂದಿಗೆ ಯೇಸು ವ್ಯವಹರಿಸಿದ ವಿಧವು, ಅವನ ಅನುರಾಗ, ಸಹಾನುಭೂತಿ ಅಲ್ಲದೆ ಅವರಿಗೆ ಪರಿಹಾರವನ್ನು ತರುವ ಅವನ ಸಾಮರ್ಥ್ಯದ ಪ್ರಮಾಣವನ್ನು ಕೊಡುತ್ತದೆ. ಹೀಗೆ, ಕುಷ್ಠ ರೋಗದಿಂದ ಆವರಿಸಲ್ಪಟ್ಟ ರೋಗಗ್ರಸ್ತ ಮನುಷ್ಯನು ಅವನನ್ನು ಸಮೀಪಿಸಿ, ಸಹಾಯಕ್ಕಾಗಿ ಬೇಡಿಕೊಂಡಾಗ, ಯೇಸು ಆ ನೋಟದಿಂದ ಹಿಮ್ಮೆಟ್ಟಲಿಲ್ಲ. ಮತ್ತು ಅವನಿಗಾಗಿ ಕನಿಕರವೆನಿಸಿದರೂ, ಪರಿಸ್ಥಿತಿಯು ಕೈಮೀರಿ ಹೋಗಿದ್ದರಿಂದ ಯಾವ ಸಹಾಯವನ್ನೂ ಮಾಡಸಾಧ್ಯವಿಲ್ಲವೆಂದು ಅವನು ಆ ಮನುಷ್ಯನಿಗೆ ಹೇಳಲಿಲ್ಲ. ಆ ಮನುಷ್ಯನು ಬೇಡಿಕೊಂಡದ್ದು: “ಸ್ವಾಮೀ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧ ಮಾಡಬಲ್ಲೆ.” ಹಿಂಜರಿಯದೆ, ಯೇಸು ತನ್ನ ಕೈಚಾಚಿ ಆ ಕುಷ್ಠರೋಗಿಯನ್ನು ಮುಟ್ಟುತ್ತಾ, ಹೇಳಿದ್ದು: “ನನಗೆ ಮನಸ್ಸುಂಟು; ಶುದ್ಧವಾಗು.” (ಮತ್ತಾಯ 8:2, 3) ಮತ್ತೊಂದು ಸಂದರ್ಭದಲ್ಲಿ ಸ್ತ್ರೀಯೊಬ್ಬಳು ಯಾರ ಕಣ್ಣಿಗೂ ಬೀಳದೆ, ಅವನ ಮೇಲಂಗಿಯ ಅಂಚನ್ನು ಮುಟ್ಟುವ ಮೂಲಕ ಗುಣಹೊಂದಲು ಪ್ರಯತ್ನಿಸಿದಳು. ಯೇಸು ಅವಳೊಂದಿಗೆ ದಯಾಪರವಾಗಿ ಹಾಗೂ ಮತ್ತೆ ಧೈರ್ಯತುಂಬುವ ವಿಧದಲ್ಲಿ ವ್ಯವಹರಿಸಿದನು. (ಲೂಕ 8:43-48) ಮತ್ತು ಅವನೊಂದು ಶವಸಂಸ್ಕಾರದ ಮೆರವಣಿಗೆಯನ್ನು ಎದುರುಗೊಂಡಾಗ, ಯಾರ ಏಕೈಕ ಮಗನು ಸತ್ತಿದ್ದನೊ ಆ ದುಃಖಿಸುತ್ತಿರುವ ವಿಧವೆಗಾಗಿ ಅವನಲ್ಲಿ ಮರುಕವುಂಟಾಯಿತು. ಯೇಸು ತನಗಾಗಿ ಆಹಾರವನ್ನು ಅದ್ಭುತಕರವಾಗಿ ಒದಗಿಸಿಕೊಳ್ಳಲು ತನ್ನ ದೇವದತ್ತ ಶಕ್ತಿಯನ್ನು ಉಪಯೋಗಿಸಲು ನಿರಾಕರಿಸಿದನಾದರೂ, ಆ ಸತ್ತ ಪುರುಷನನ್ನು ಪುನರುತ್ಥಾನಗೊಳಿಸಲು ಮತ್ತು ಅವನನ್ನು ತನ್ನ ತಾಯಿಗೆ ಒಪ್ಪಿಸಲು ಅದನ್ನು ಮುಕ್ತವಾಗಿ ಅವನು ಉಪಯೋಗಿಸಿದನು.—ಲೂಕ 4:2-4; 7:11-16.
15. ಯೇಸುವಿನ ಕುರಿತಾದ ವೃತ್ತಾಂತಗಳನ್ನು ಓದಿ, ಅದರ ಕುರಿತು ಮನನಮಾಡುವುದು ನಿಮ್ಮನ್ನು ಹೇಗೆ ಪ್ರಭಾವಿಸುತ್ತದೆ?
15 ಈ ವೃತ್ತಾಂತಗಳನ್ನು ನಾವು ಓದಿ, ಯೇಸು ಪ್ರದರ್ಶಿಸಿದ ಮನೋವೃತ್ತಿಯ ಕುರಿತು ಮನನಮಾಡಿದಂತೆ, ನಾವು ಸದಾಕಾಲ ಜೀವಿಸಸಾಧ್ಯವಾಗುವಂತೆ ತನ್ನ ಮಾನವ ಜೀವವನ್ನು ಬಲಿಕೊಟ್ಟ ಈ ವ್ಯಕ್ತಿಗಾಗಿ ನಮ್ಮ ಪ್ರೀತಿಯು ಆಳಗೊಳಿಸಲ್ಪಡುತ್ತದೆ. ನಾವು ಅವನನ್ನು ಎಂದೂ ನೋಡಿರದಿದ್ದರೂ, ನಾವು ಅವನ ಕಡೆಗೆ ಆಕರ್ಷಿತರಾಗಿ, ಅವನ ಹೆಜ್ಜೆಜಾಡುಗಳನ್ನು ಅನುಸರಿಸಬಯಸುತ್ತೇವೆ.—1 ಪೇತ್ರ 2:21.
ದೇವರ ಮೇಲೆ ಅವನ ನಮ್ರ ಅವಲಂಬನೆ
16. ಯಾರ ಮೇಲೆ ಯೇಸು ಪ್ರಥಮ ಗಮನವನ್ನು ಕೇಂದ್ರೀಕರಿಸಿದನು, ಮತ್ತು ಏನನ್ನು ಮಾಡುವಂತೆ ಅವನು ನಮ್ಮನ್ನು ಉತ್ತೇಜಿಸಿದನು?
16 ಎಲ್ಲಕ್ಕಿಂತ ಹೆಚ್ಚಾಗಿ, ಯೇಸು ತನ್ನ ಹಾಗೂ ನಮ್ಮ ಗಮನವನ್ನು ತನ್ನ ಸ್ವರ್ಗೀಯ ಪಿತನಾದ ಯೆಹೋವ ದೇವರ ಮೇಲೆ ಕೇಂದ್ರೀಕರಿಸಿದನು. ಧರ್ಮಶಾಸ್ತ್ರದಲ್ಲಿದ್ದ ಅತ್ಯಂತ ದೊಡ್ಡ ಆಜ್ಞೆಯನ್ನು ಅವನು ಗುರುತಿಸಿ ಹೇಳಿದ್ದು: “ನಿನ್ನ ದೇವರಾಗಿರುವ ಕರ್ತನನ್ನು [“ಯೆಹೋವನನ್ನು,” NW] ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು.” (ಮತ್ತಾಯ 22:36, 37) ಅವನು ತನ್ನ ಶಿಷ್ಯರಿಗೆ ಬುದ್ಧಿಹೇಳಿದ್ದು: “ನಿಮಗೆ ದೇವರಲ್ಲಿ ನಂಬಿಕೆಯಿರಲಿ.” (ಮಾರ್ಕ 11:22) ತಮ್ಮ ನಂಬಿಕೆಯ ಗಂಭೀರವಾದ ಪರೀಕ್ಷೆಯನ್ನು ಅವರು ಎದುರಿಸಿದಾಗ, ಅವನು ಅವರನ್ನು ಉತ್ತೇಜಿಸಿದ್ದು: ‘ಸತತವಾಗಿ ಪ್ರಾರ್ಥಿಸಿರಿ.’—ಮತ್ತಾಯ 26:41.
17, 18. (ಎ) ಯೇಸು ತನ್ನ ಪಿತನ ಮೇಲೆ ತನ್ನ ನಮ್ರ ಅವಲಂಬನೆಯನ್ನು ಹೇಗೆ ಪ್ರದರ್ಶಿಸಿದನು? (ಬಿ) ಅವನು ಏನನ್ನು ಮಾಡಿದನೊ ಅದು ನಮಗೆ ಅಷ್ಟೊಂದು ಪ್ರಾಮುಖ್ಯವಾಗಿದೆ ಏಕೆ?
17 ಸ್ವತಃ ಯೇಸು ಮಾದರಿಯನ್ನಿಟ್ಟನು. ಪ್ರಾರ್ಥನೆ ಅವನ ಜೀವನದ ಮುಖ್ಯ ಭಾಗವಾಗಿತ್ತು. (ಮತ್ತಾಯ 14:23; ಲೂಕ 9:28; 18:1) ತನ್ನ ಅಪೊಸ್ತಲರನ್ನು ಆರಿಸಿಕೊಳ್ಳುವ ಸಮಯ ಬಂದಾಗ, ಯೇಸು—ಈ ಹಿಂದೆ ಸ್ವರ್ಗದಲ್ಲಿರುವ ಎಲ್ಲ ದೇವದೂತರು ಅವನ ಮೇಲ್ವಿಚಾರಣೆಯ ಕೆಳಗಿದ್ದರೂ—ತನ್ನ ಸ್ವಂತ ವಿವೇಚನೆಯ ಮೇಲೆ ಆತುಕೊಳ್ಳಲಿಲ್ಲ. ನಮ್ರನಾಗಿ ಅವನು ಇಡೀ ರಾತ್ರಿಯನ್ನು ತನ್ನ ಪಿತನಿಗೆ ಪ್ರಾರ್ಥಿಸುತ್ತಾ ಕಳೆದನು. (ಲೂಕ 6:12, 13) ಯೇಸು ಕೈದು ಮತ್ತು ವೇದನಾಮಯ ಮರಣವನ್ನು ಎದುರಿಸಿದಾಗ, ಅವನು ಮನಃಪೂರ್ವಕವಾಗಿ ಪ್ರಾರ್ಥಿಸುತ್ತಾ, ಪುನಃ ತನ್ನ ಪಿತನ ಕಡೆಗೆ ತಿರುಗಿದನು. ತನಗೆ ಸೈತಾನನ ಒಳ್ಳೆಯ ಪರಿಚಯವಿತ್ತು ಮತ್ತು ಆ ದುಷ್ಟನು ಯೋಜಿಸಬಹುದಾದ ಯಾವ ವಿಷಯವನ್ನೂ ಸುಲಭವಾಗಿ ನಿರ್ವಹಿಸಸಾಧ್ಯವಿತ್ತೆಂಬ ದೃಷ್ಟಿಕೋನ ಅವನಿಗಿರಲಿಲ್ಲ. ತಾನು ವಿಫಲನಾಗದಿರುವುದು ಎಷ್ಟು ಪ್ರಾಮುಖ್ಯವಾಗಿತ್ತೆಂಬುದನ್ನು ಯೇಸು ಗ್ರಹಿಸಿದನು. ಯೇಸುವಿನ ವಿಫಲತೆ ಅವನ ಪಿತನಿಗೆ ಎಂತಹ ಅಪಮಾನವಾಗಿರುವುದು! ಮತ್ತು ಯಾರ ಜೀವನ ಪ್ರತೀಕ್ಷೆಗಳು ಯೇಸು ಅರ್ಪಿಸಲಿದ್ದ ಬಲಿಯ ಮೇಲೆ ಅವಲಂಬಿಸಿದವೊ, ಆ ಮಾನವಜಾತಿಗೆ ಅದು ಎಂತಹ ಒಂದು ನಷ್ಟ!
18 ಯೇಸು ಸತತವಾಗಿ—ಯೆರೂಸಲೇಮಿನಲ್ಲಿನ ಮೇಲಿನ ಕೋಣೆಯಲ್ಲಿ ತನ್ನ ಅಪೊಸ್ತಲರೊಂದಿಗೆ ಇದ್ದಾಗ ಮತ್ತು ಗೆತ್ಸೇಮನೆ ತೋಟದಲ್ಲಿ ಇನ್ನೂ ಉದ್ರಿಕ್ತನಾಗಿ ಪ್ರಾರ್ಥಿಸಿದನು. (ಮತ್ತಾಯ 26:36-44; ಯೋಹಾನ 17:1-26; ಇಬ್ರಿಯ 5:7) ಯಾತನಾ ಕಂಭದ ಮೇಲೆ ಕಷ್ಟಾನುಭವಿಸುತ್ತಿದ್ದಾಗ, ತನ್ನನ್ನು ಹಂಗಿಸಿದವರನ್ನು ಅವನು ಬಯ್ಯಲಿಲ್ಲ. ಬದಲಿಗೆ ಅಜ್ಞಾನದಲ್ಲಿ ವರ್ತಿಸುತ್ತಿದ್ದವರ ಪರವಾಗಿ ಅವನು ಪ್ರಾರ್ಥಿಸಿದ್ದು: “ತಂದೆಯೇ, ಅವರಿಗೆ ಕ್ಷಮಿಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು.” (ಲೂಕ 23:34) ಅವನು “ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿ,” ತನ್ನ ತಂದೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದನು. ಯಾತನಾ ಕಂಭದ ಮೇಲೆ ಅವನು ನುಡಿದ ಕೊನೆಯ ಮಾತುಗಳು ತನ್ನ ತಂದೆಗೆ ಮಾಡಿದ ಒಂದು ಪ್ರಾರ್ಥನೆಯಾಗಿತ್ತು. (1 ಪೇತ್ರ 2:23; ಲೂಕ 23:46) ಯೆಹೋವನ ಮೇಲೆ ಪೂರ್ಣ ಅವಲಂಬನೆಯಿಂದ, ಯೇಸು ನಂಬಿಗಸ್ತಿಕೆಯಿಂದ ಅವನ ತಂದೆ ಅವನಿಗೆ ಒಪ್ಪಿಸಿದ್ದ ನೇಮಕವನ್ನು ಪೂರ್ಣಗೊಳಿಸಿದ್ದಕ್ಕೆ ನಾವು ಎಷ್ಟು ಕೃತಜ್ಞರು! ನಾವು ಯೇಸು ಕ್ರಿಸ್ತನನ್ನು ಎಂದೂ ನೋಡಿರದಿದ್ದರೂ, ಅವನು ಮಾಡಿದಂತಹ ವಿಷಯಕ್ಕಾಗಿ ನಾವು ಅವನನ್ನು ಎಷ್ಟು ಆಳವಾಗಿ ಪ್ರೀತಿಸುತ್ತೇವೆ!
ಅವನಿಗಾಗಿ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು
19. ಯೇಸುವಿಗಾಗಿ ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ, ಸಂಪೂರ್ಣವಾಗಿ ಅಯೋಗ್ಯವೆಂಬಂತೆ ನಾವು ಯಾವ ಆಚರಣೆಗಳನ್ನು ತೊರೆಯಬೇಕು?
19 ನಾವು ಪ್ರತಿಪಾದಿಸುವ ಪ್ರೀತಿಯು ಬರಿಯ ಶಬ್ದಗಳಿಗಿಂತ ಹೆಚ್ಚಿನದ್ದಾಗಿದೆ ಎಂಬುದಕ್ಕೆ ನಾವು ಪುರಾವೆಯನ್ನು ಹೇಗೆ ಕೊಡಬಲ್ಲೆವು? ಯೇಸು ಯಾರನ್ನು ಪ್ರೀತಿಸಿದನೊ ಆ ಪಿತನು, ಮೂರ್ತಿಗಳನ್ನು ರಚಿಸುವುದನ್ನು ಮತ್ತು ಅನಂತರ ಅವುಗಳನ್ನು ಭಕ್ತಿಯ ವಸ್ತುಗಳಂತೆ ಉಪಚರಿಸುವುದನ್ನು ನಿಷೇಧಿಸಿದ ಕಾರಣ, ನಮ್ಮ ಕುತ್ತಿಗೆಯ ಸುತ್ತಲೂ ಒಂದು ಹಾರದಲ್ಲಿ ಅಂತಹ ಒಂದು ಮೂರ್ತಿಯನ್ನು ಧರಿಸುವ ಇಲ್ಲವೆ ಬೀದಿಗಳಲ್ಲಿ ಅದನ್ನು ಹೊತ್ತುಕೊಂಡು ಹೋಗುವುದರ ಮೂಲಕ, ಯೇಸುವಿಗೆ ಖಂಡಿತವಾಗಿಯೂ ನಾವು ಘನತೆಯನ್ನು ತರಲಾರೆವು. (ವಿಮೋಚನಕಾಂಡ 20:4, 5; ಯೋಹಾನ 4:24) ನಾವು ಧಾರ್ಮಿಕ ಸೇವೆಗಳಿಗೆ ಉಪಸ್ಥಿತರಾಗಿದ್ದು—ವಾರಕ್ಕೆ ಹಲವಾರು ಬಾರಿ ಹಾಗೆ ಮಾಡಿದರೂ—ವಾರದ ಉಳಿದ ಸಮಯದಲ್ಲಿ ಅವನ ಬೋಧನೆಗಳಿಗೆ ಹೊಂದಿಕೆಯಲ್ಲಿ ಜೀವಿಸದಿದ್ದಲ್ಲಿ ಅದು ಯೇಸುವಿಗೆ ಘನತೆಯನ್ನು ತಾರದು. ಯೇಸು ಹೇಳಿದ್ದು: “ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ತಂದೆಗೆ ಪ್ರಿಯನಾಗಿರುವನು.”—ಯೋಹಾನ 14:21, 23; 15:10.
20. ನಾವು ನಿಜವಾಗಿಯೂ ಯೇಸುವನ್ನು ಪ್ರೀತಿಸುತ್ತೇವೊ ಇಲ್ಲವೊ ಎಂಬುದನ್ನು ತೋರಿಸುವ ಕೆಲವು ವಿಷಯಗಳಾವುವು?
20 ಯಾವ ಆಜ್ಞೆಗಳನ್ನು ಅವನು ನಮಗೆ ಕೊಟ್ಟನು? ಪ್ರಪ್ರಥಮವಾಗಿ, ಸತ್ಯ ದೇವರಾದ ಯೆಹೋವನನ್ನು, ಆತನೊಬ್ಬನನ್ನೇ ಆರಾಧಿಸುವ ಆಜ್ಞೆಯನ್ನೇ. (ಮತ್ತಾಯ 4:10; ಯೋಹಾನ 17:3) ದೇವರ ಉದ್ದೇಶದಲ್ಲಿನ ಅವನ ಪಾತ್ರದ ಕಾರಣ, ದೇವರ ಮಗನಂತೆ ನಾವು ಅವನಲ್ಲಿ ನಂಬಿಕೆಯನ್ನಿಡಬೇಕು ಮತ್ತು ದುಷ್ಟ ಕಾರ್ಯಗಳನ್ನು ತೊರೆಯುವ ಮೂಲಕ ಹಾಗೂ ಬೆಳಕಿನಲ್ಲಿ ನಡೆಯುವ ಮೂಲಕ ಅದನ್ನು ತೋರಿಸಬೇಕೆಂದು ಸಹ ಯೇಸು ಕಲಿಸಿದನು. (ಯೋಹಾನ 3:16-21) ದೇವರ ರಾಜ್ಯ ಮತ್ತು ಆತನ ನೀತಿಯನ್ನು ಪ್ರಥಮವಾಗಿ ಹುಡುಕುವಂತೆ ಮತ್ತು ಅವುಗಳನ್ನು ಶಾರೀರಿಕ ಅಗತ್ಯಗಳ ಕುರಿತಾದ ಚಿಂತೆಗಿಂತ ಮುಂದಿಡುವಂತೆ ಅವನು ಸಲಹೆನೀಡಿದನು. (ಮತ್ತಾಯ 6:31-33) ಅವನು ನಮ್ಮನ್ನು ಪ್ರೀತಿಸಿದಂತೆ ನಾವು ಒಬ್ಬರನ್ನೊಬ್ಬರು ಪ್ರೀತಿಸುವಂತೆ ಅವನು ಆಜ್ಞಾಪಿಸಿದನು. (ಯೋಹಾನ 13:34; 1 ಪೇತ್ರ 1:22) ಮತ್ತು ಅವನು ಹೇಗೆ ದೇವರ ಉದ್ದೇಶದ ಸಂಬಂಧದಲ್ಲಿ ಸಾಕ್ಷಿಯಾಗಿದ್ದನೊ, ನಾವೂ ಹಾಗೆ ಇರುವಂತೆ ಅವನು ಆದೇಶಿಸಿದ್ದಾನೆ. (ಮತ್ತಾಯ 24:14; 28:19, 20; ಪ್ರಕಟನೆ 3:14) ಅವರು ಯೇಸುವನ್ನು ಎಂದೂ ನೋಡಿರದಿದ್ದರೂ, ಸುಮಾರು 50 ಲಕ್ಷ ಯೆಹೋವನ ಸಾಕ್ಷಿಗಳಿಂದು, ಆ ಆಜ್ಞೆಗಳನ್ನು ಪಾಲಿಸುವಂತೆ ಅವನಿಗಾಗಿರುವ ಯಥಾರ್ಥ ಪ್ರೀತಿಯಿಂದ ಪ್ರೇರೇಪಿಸಲ್ಪಟ್ಟಿದ್ದಾರೆ. ತಾವು ಯೇಸುವನ್ನು ವೈಯಕ್ತಿಕವಾಗಿ ನೋಡದೆ ಇರುವ ಸಂಗತಿಯು, ವಿಧೇಯರಾಗಿರುವ ಅವರ ದೃಢನಿಶ್ಚಯವನ್ನು ಯಾವುದೇ ರೀತಿಯಲ್ಲಿ ಬಲಹೀನಗೊಳಿಸುವುದಿಲ್ಲ. ಅಪೊಸ್ತಲ ತೋಮನಿಗೆ ತಮ್ಮ ಕರ್ತನು ಹೇಳಿದ ವಿಷಯವನ್ನು ಅವರು ಮನಸ್ಸಿಗೆ ತಂದುಕೊಳ್ಳುತ್ತಾರೆ: “ನೀನು ನನ್ನನ್ನು ನೋಡಿದ್ದರಿಂದ ನಂಬಿದ್ದೀ; ನೋಡದೆ ನಂಬಿದವರು ಧನ್ಯರು.”—ಯೋಹಾನ 20:29.
21. ಈ ವರ್ಷ ಆದಿತ್ಯವಾರ ಮಾರ್ಚ್ 23ರಂದು ನಡೆಸಲ್ಪಡಲಿರುವ ಕ್ರಿಸ್ತನ ಮರಣದ ಜ್ಞಾಪಕವನ್ನು ಹಾಜರಾಗುವುದರಿಂದ ನಾವು ಹೇಗೆ ಪ್ರಯೋಜನ ಪಡೆಯುತ್ತೇವೆ?
21 ಆದಿತ್ಯವಾರ ಮಾರ್ಚ್ 23, 1997ರಂದು ಸೂರ್ಯಾಸ್ತಮಾನದ ನಂತರ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಗಳಲ್ಲಿ ಲೋಕವ್ಯಾಪಕವಾಗಿ ಕೂಡಿಬರುವವರಲ್ಲಿ ನೀವು ಒಬ್ಬರಾಗಿರುವಿರೆಂದು ನಿರೀಕ್ಷಿಸಲಾಗುತ್ತದೆ. ಅದು ಮಾನವಜಾತಿಯ ಕಡೆಗೆ ದೇವರ ಪ್ರೀತಿಯ ಅತಿ ಮಹಾನ್ ಅಭಿವ್ಯಕ್ತಿಯನ್ನು ಜ್ಞಾಪಿಸಿಕೊಳ್ಳಲು ಮತ್ತು ಆತನ ನಿಷ್ಠಾವಂತ ಮಗನಾದ ಯೇಸು ಕ್ರಿಸ್ತನ ಮರಣವನ್ನು ಸ್ಮರಿಸಿಕೊಳ್ಳಲಿಕ್ಕಾಗಿರುವುದು. ಆ ಸಂದರ್ಭದಲ್ಲಿ ಏನನ್ನು ಹೇಳಲಾಗುವುದೊ ಮತ್ತು ಮಾಡಲಾಗುವುದೊ, ಅದು ಯೆಹೋವ ಮತ್ತು ಆತನ ಮಗನಿಗಾಗಿರುವ ಪ್ರೀತಿಯನ್ನು ಆಳಗೊಳಿಸಿ, ಹೀಗೆ ದೇವರ ಆಜ್ಞೆಗಳನ್ನು ಪಾಲಿಸುವ ಬಯಕೆಯನ್ನು ಹೆಚ್ಚಿಸಬೇಕು.—1 ಯೋಹಾನ 5:3.
ನೀವು ಹೇಗೆ ಉತ್ತರಿಸುವಿರಿ?
◻ ಯಾರಿಗೆ ಪೇತ್ರನ ಮೊದಲನೆಯ ಪುಸ್ತಕವು ಸಂಬೋಧಿಸಲ್ಪಟ್ಟಿತ್ತೊ, ಅವರು ಯೇಸುವನ್ನು ಅರಿತು, ಪ್ರೀತಿಸಿದ್ದು ಹೇಗೆ?
◻ ಆದಿ ಕ್ರೈಸ್ತರು ಕೇಳಿದಂತಹ ಯಾವ ಕೆಲವು ವಿಷಯಗಳು ನಿಮ್ಮನ್ನು ಪ್ರಭಾವಿಸುತ್ತವೆ?
◻ ಯೇಸು ತೋರಿಸಿದ ಮನೋವೃತ್ತಿಯ ವಿಷಯದಲ್ಲಿ, ಯಾವ ಸಂಗತಿಯು ಅವನಿಗಾಗಿರುವ ನಿಮ್ಮ ಪ್ರೀತಿಯನ್ನು ಆಳಗೊಳಿಸುತ್ತದೆ?
◻ ದೇವರ ಮೇಲೆ ಯೇಸುವಿನ ನಮ್ರ ಅವಲಂಬನೆಯು ನಮಗೆ ಏಕೆ ಅಷ್ಟು ಪ್ರಾಮುಖ್ಯವಾದದ್ದಾಗಿದೆ?
◻ ಯೇಸು ಕ್ರಿಸ್ತನಿಗಾಗಿ ನಮ್ಮ ಪ್ರೀತಿಯನ್ನು ನಾವು ಹೇಗೆ ಪ್ರದರ್ಶಿಸಬಲ್ಲೆವು?
[ಪುಟ 16,17 ರಲ್ಲಿರುವಚಿತ್ರಗಳು]
ಯೇಸು ತೋರಿಸಿದ ಮನೋವೃತ್ತಿಯ ಕಾರಣ, ಅವನ ಕಡೆಗೆ ಸೆಳೆಯಲ್ಪಟ್ಟ ಅನಿಸಿಕೆ ನಮಗಾಗುತ್ತದೆ