ಸತ್ಯದಿಂದಾಗಿ ಬಿಡುಗಡೆಗೊಳಿಸಲ್ಪಡುವುದು
ಅಮೆರಿಕದಲ್ಲಿ, ಹತ್ತು ಲಕ್ಷಕ್ಕಿಂತಲೂ ಹೆಚ್ಚಿನ ಜನರು ಸೆರೆಮನೆಗಳಲ್ಲಿ ಬಂಧಿತರಾಗಿದ್ದಾರೆ. ಇವರಲ್ಲಿ ಬಹುಮಟ್ಟಿಗೆ ಮೂರು ಸಾವಿರ ಮಂದಿಗೆ ಮರಣದಂಡನೆಯ ಶಿಕ್ಷೆ ವಿಧಿಸಲ್ಪಟ್ಟಿದೆ. ಆ ಸನ್ನಿವೇಶದಲ್ಲಿ ನಿಮ್ಮನ್ನು ಚಿತ್ರಿಸಿಕೊಳ್ಳಿರಿ. ನಿಮಗೆ ಹೇಗನಿಸುವುದು? ಅಂತಹ ಒಂದು ಪ್ರತೀಕ್ಷೆಯ ಆಲೋಚನೆಯು ಭಯಂಕರವಾಗಿದೆ ಎಂಬುದು ಸತ್ಯ. ಆದರೂ, ಒಂದರ್ಥದಲ್ಲಿ ಎಲ್ಲಾ ಮಾನವರು ತದ್ರೀತಿಯ ಒಂದು ಪರಿಸ್ಥಿತಿಯಲ್ಲಿದ್ದಾರೆ. ಬೈಬಲು ಹೇಳುವುದು: “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” (ರೋಮಾಪುರ 3:23) ಹೌದು, ಆದಾಮನ ವಂಶಜರೋಪಾದಿ, ನಾವು ಪಾಪಪೂರ್ಣ ಸ್ಥಿತಿಯಿಂದ “ಬಂಧಿಸಲ್ಪಟ್ಟಿ”ದ್ದೇವೆ. (ರೋಮಾಪುರ 5:12, NW) ಕ್ರೈಸ್ತ ಅಪೊಸ್ತಲ ಪೌಲನಿಗಾದಂತೆ, ನಮಗೆ ಪ್ರತಿ ದಿನ ನಮ್ಮ ಬಂಧಿತ ಸ್ಥಿತಿಯ ಪರಿಣಾಮಗಳ ಅನುಭವವಾಗುತ್ತದೆ. ಅವನು ಬರೆದುದು: “ನನ್ನ ಅಂಗಗಳಲ್ಲಿ ಬೇರೊಂದು ನಿಯಮ ಉಂಟೆಂದು ನೋಡುತ್ತೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದಾಗಿದೆ.”—ರೋಮಾಪುರ 7:22, 23.
ಸಾಂಕೇತಿಕವಾಗಿ ಹೇಳುವುದಾದರೆ, ನಮ್ಮ ಪಾಪಪೂರ್ಣ ಸ್ವಭಾವದ ಫಲಿತಾಂಶವಾಗಿ, ನಮ್ಮಲ್ಲಿ ಪ್ರತಿಯೊಬ್ಬರೂ ಮರಣದಂಡನೆಗೆ ಒಳಗಾಗಿದ್ದೇವೆ. ಏಕೆಂದರೆ ಬೈಬಲು ಹೇಳುವುದು: “ಪಾಪವು ಕೊಡುವ ಸಂಬಳ ಮರಣ.” (ರೋಮಾಪುರ 6:23) ಕೀರ್ತನೆಗಾರನಾದ ಮೋಶೆಯು ನಮ್ಮ ಸನ್ನಿವೇಶವನ್ನು ಸೂಕ್ತವಾಗಿ ವರ್ಣಿಸಿದನು: “ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ; ಬಲ ಹೆಚ್ಚಿದ್ದರೆ ಎಂಭತ್ತು. ಕಷ್ಟಸಂಕಟಗಳೇ ಅದರ ಆಡಂಬರ. ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿಹೋಗುತ್ತೇವೆ.”—ಕೀರ್ತನೆ 90:10; ಹೋಲಿಸಿರಿ ಯಾಕೋಬ 4:14.
ಮಾನವಕುಲವು ಪಾಪ ಮತ್ತು ಮರಣದ ದಾಸತ್ವದಲ್ಲಿರುವುದನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿಯೇ ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” (ಯೋಹಾನ 8:32) ಆ ಮಾತುಗಳಿಂದ, ರೋಮನ್ ಆಳ್ವಿಕೆಯಿಂದ ದೊರಕುವ ಸ್ವಾತಂತ್ರ್ಯಕ್ಕಿಂತಲೂ ಹೆಚ್ಚು ಮಹತ್ತಾದ ಯಾವುದೋ ಒಂದು ಸ್ವಾತಂತ್ರ್ಯದ ನಿರೀಕ್ಷೆಯನ್ನು, ಯೇಸು ತನ್ನ ಹಿಂಬಾಲಕರಿಗೆ ನೀಡುತ್ತಿದ್ದನು. ಅವನು ಅವರಿಗೆ ಪಾಪದಿಂದ ವಿಮುಕ್ತಿಯನ್ನೂ ಮರಣದಿಂದ ಬಿಡುಗಡೆಯನ್ನೂ ನೀಡುತ್ತಿದ್ದನು! ಇದನ್ನು ಅವರಿಗೆ ಹೇಗೆ ಒದಗಿಸಸಾಧ್ಯವಿತ್ತು? “ಮಗನು ನಿಮ್ಮನ್ನು ಬಿಡುಗಡೆಮಾಡಿದರೆ ನಿಜವಾಗಿ ನಿಮಗೆ ಬಿಡುಗಡೆಯಾಗುವದು” ಎಂದು ಯೇಸು ಅವರಿಗೆ ಹೇಳಿದನು. (ಯೋಹಾನ 8:36) ಹೌದು, “ಮಗ”ನಾದ ಯೇಸು ತನ್ನ ಜೀವವನ್ನು ಬಲಿಕೊಡುವ ಮೂಲಕ, ಆದಾಮನು ಕಳೆದುಕೊಂಡದ್ದನ್ನು ಹಿಂದಿರುಗಿ ಪಡೆಯಲಿಕ್ಕಾಗಿ ಪರಿಹಾರದಾಯಕ ಯಜ್ಞವಾಗಿ ಕಾರ್ಯನಡಿಸಿದನು. (1 ಯೋಹಾನ 4:10) ಇದು ಎಲ್ಲಾ ವಿಧೇಯ ಮಾನವಕುಲಕ್ಕೆ, ಪಾಪ ಮತ್ತು ಮರಣದ ಗುಲಾಮಗಿರಿಯಿಂದ ಬಿಡುಗಡೆ ಪಡೆಯುವಂತೆ ಮಾರ್ಗವನ್ನು ತೆರೆಯಿತು. ದೇವರ ಏಕಜಾತ ಪುತ್ರನು ‘ತನ್ನಲ್ಲಿ ನಂಬಿಕೆಯಿಡುವ ಒಬ್ಬನಾದರೂ ನಾಶವಾಗದೆ, ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು’ ಮರಣಪಟ್ಟನು.—ಯೋಹಾನ 3:16.
ಆದುದರಿಂದ, ನಮ್ಮನ್ನು ಬಿಡುಗಡೆಮಾಡಸಾಧ್ಯವಿರುವ ಸತ್ಯವು, ಯೇಸು ಕ್ರಿಸ್ತನ ಸುತ್ತಲೂ ಆವರ್ತಿಸುತ್ತದೆ. ದೇವರ ರಾಜ್ಯವು ಭೂಮಿಯ ಆಗುಹೋಗುಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವಾಗ, ಅವನ ಹೆಜ್ಜೆಜಾಡಿನ ಹಿಂಬಾಲಕರಾಗುವವರಿಗೆ, ಪಾಪ ಮತ್ತು ಮರಣದಿಂದ ಬಿಡುಗಡೆಗೊಳಿಸಲ್ಪಡುವ ನಿರೀಕ್ಷೆಯಿದೆ. ದೇವರ ವಾಕ್ಯದ ಸತ್ಯವನ್ನು ಅಂಗೀಕರಿಸುವವರು, ಈಗಲೂ ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ. ಯಾವ ವಿಧಗಳಲ್ಲಿ?
ಮೃತರ ಭಯದಿಂದ ಬಿಡುಗಡೆ
ಇಂದು ಕೋಟಿಗಟ್ಟಲೆ ಜನರು ಮೃತರ ಭಯದಲ್ಲಿ ಜೀವಿಸುತ್ತಾರೆ. ಏಕೆ? ಏಕೆಂದರೆ, ಮರಣದ ಸಮಯದಲ್ಲಿ ಪ್ರಾಣವೊಂದು ದೇಹವನ್ನು ಪರಿತ್ಯಜಿಸಿ, ಆತ್ಮಜೀವಿ ಕ್ಷೇತ್ರಕ್ಕೆ ಹೋಗುತ್ತದೆ ಎಂಬುದಾಗಿ ಅವರ ಧರ್ಮಗಳು ಅವರಿಗೆ ಕಲಿಸಿವೆ. ಆದುದರಿಂದಲೇ ಕೆಲವು ದೇಶಗಳಲ್ಲಿ, ಹಗಲೂರಾತ್ರಿ ಹೆಣಕಾಯುವುದು, ಮೃತರ ಸಂಬಂಧಿಕರಿಗೆ ಒಂದು ಸಂಪ್ರದಾಯವಾಗಿದೆ. ಅನೇಕವೇಳೆ ಇದು ದೊಡ್ಡ ಸ್ವರದಲ್ಲಿ ಹಾಡುವುದು ಹಾಗೂ ಡೋಲು ಬಡಿಯುವುದನ್ನು ಒಳಗೂಡುತ್ತದೆ. ಇದು ಮೃತ ವ್ಯಕ್ತಿಯನ್ನು ಸಂತೋಷಪಡಿಸುತ್ತದೆ, ಮತ್ತು ಜೀವಿತರ ಬೆನ್ನುಹತ್ತಲು ಅವನ ಆತ್ಮವು ಹಿಂದಿರುಗಿ ಬರುವುದನ್ನು ತಡೆಯುತ್ತದೆ ಎಂದು ಶೋಕಿತರು ನಂಬುತ್ತಾರೆ. ಮೃತರ ಕುರಿತಾದ ಕ್ರೈಸ್ತಪ್ರಪಂಚದ ಸುಳ್ಳು ಬೋಧನೆಗಳು, ಈ ಸಂಪ್ರದಾಯವನ್ನು ಚಿರಸ್ಮರಣೀಯಮಾಡಲಿಕ್ಕಾಗಿ ಮಾತ್ರವೇ ಕಾರ್ಯನಡಿಸಿವೆ.
ಬೈಬಲಾದರೋ ಮೃತರ ಸ್ಥಿತಿಯ ಕುರಿತಾದ ಸತ್ಯವನ್ನು ಪ್ರಕಟಪಡಿಸುತ್ತದೆ. ನಿಮ್ಮ ಪ್ರಾಣವು ಮರಣಾನಂತರ ಜೀವಿಸುತ್ತಾ ಮುಂದುವರಿಯುವ ನಿಮ್ಮ ದೇಹದ ಯಾವುದೋ ಒಂದು ರಹಸ್ಯಗರ್ಭಿತ ಭಾಗವಾಗಿಲ್ಲ, ಬದಲಾಗಿ ನೀವೇ ಆಗಿದ್ದೀರಿ ಎಂದು ಅದು ಸ್ಪಷ್ಟವಾಗಿ ತಿಳಿಸುತ್ತದೆ. (ಆದಿಕಾಂಡ 2:7; ಯೆಹೆಜ್ಕೇಲ 18:4) ಇದಲ್ಲದೆ, ಮೃತರಿಗೆ ಅಗ್ನಿನರಕವೊಂದರಲ್ಲಿ ಚಿತ್ರಹಿಂಸೆ ನೀಡಲಾಗುತ್ತಿಲ್ಲ, ಅಥವಾ ಅವರು ಜೀವಿತರನ್ನು ಬಾಧಿಸಸಾಧ್ಯವಿರುವ ಆತ್ಮಜೀವಿ ಕ್ಷೇತ್ರದ ಭಾಗವಾಗಿಯೂ ಇಲ್ಲ. ಬೈಬಲು ಹೀಗೆ ಹೇಳುತ್ತದೆ: “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ . . . ನೀನು ಸೇರಬೇಕಾದ ಪಾತಾಳದಲ್ಲಿ [“ಶಿಯೋಲ್ನಲ್ಲಿ,” NW] (ಸಮಾಧಿಯಲ್ಲಿ) ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.”—ಪ್ರಸಂಗಿ 9:5, 10.
ಈ ಬೈಬಲ್ ಸತ್ಯಗಳು ಅನೇಕ ಜನರನ್ನು, ಮೃತರ ಭಯದಿಂದ ಬಿಡುಗಡೆಮಾಡಿವೆ. ಇನ್ನೆಂದೂ ಅವರು ತಮ್ಮ ಪೂರ್ವಜರನ್ನು ತೃಪ್ತಿಪಡಿಸಲಿಕ್ಕಾಗಿ ದುಬಾರಿ ಯಜ್ಞಗಳನ್ನು ಅರ್ಪಿಸುವುದಿಲ್ಲ. ಅಥವಾ ತಮ್ಮ ಪ್ರಿಯ ಜನರಿಗೆ ಅವರ ಪಾಪಗಳಿಗಾಗಿ ನಿಷ್ಕಾರುಣ್ಯವಾಗಿ ಚಿತ್ರಹಿಂಸೆ ನೀಡಲಾಗುತ್ತಿದೆಯೆಂದು ಅವರು ಇನ್ನೆಂದೂ ಚಿಂತಿಸುವುದಿಲ್ಲ. ಮೃತಪಟ್ಟಿರುವವರಿಗಾಗಿ ಬೈಬಲು ಒಂದು ಅದ್ಭುತಕರವಾದ ನಿರೀಕ್ಷೆಯನ್ನು ಒದಗಿಸುತ್ತದೆ ಎಂಬುದನ್ನು ಅವರು ಕಲಿತುಕೊಂಡಿದ್ದಾರೆ. ಏಕೆಂದರೆ, ದೇವರ ನಿಯಮಿತ ಸಮಯದಲ್ಲಿ, “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗು”ವದು ಎಂದು ಅದು ನಮಗೆ ಹೇಳುತ್ತದೆ. (ಅ. ಕೃತ್ಯಗಳು 24:15; ಯೋಹಾನ 5:28, 29) ಹೀಗೆ, ಮೃತರು ಒಂದು ದೀರ್ಘ ನಿದ್ರೆಯಲ್ಲಿದ್ದಾರೋ ಎಂಬಂತೆ ಈಗ ಕೇವಲ ವಿಶ್ರಮಿಸುತ್ತಿದ್ದಾರೆ.—ಯೋಹಾನ 11:11-14ನ್ನು ಹೋಲಿಸಿರಿ.
ಮೃತರ ಸ್ಥಿತಿಯ ಕುರಿತಾದ ಸತ್ಯ ಮತ್ತು ಪುನರುತ್ಥಾನದ ನಿರೀಕ್ಷೆಯು, ಮರಣವು ತನ್ನೊಂದಿಗೆ ತರಸಾಧ್ಯವಿರುವ ಆಶಾಹೀನತೆಯಿಂದ ನಮ್ಮನ್ನು ಸ್ವತಂತ್ರಗೊಳಿಸಬಲ್ಲದು. ಅಮೆರಿಕದ ಒಬ್ಬ ವಿವಾಹಿತ ದಂಪತಿಗಳ ನಾಲ್ಕು ವರ್ಷ ಪ್ರಾಯದ ಮಗನು ಅಪಘಾತದಲ್ಲಿ ಕೊಲ್ಲಲ್ಪಟ್ಟಾಗ, ಅಂತಹ ನಿರೀಕ್ಷೆಯು ಅವರನ್ನು ಬಲಪಡಿಸಿತು. “ಪುನರುತ್ಥಾನದ ಮೂಲಕ ನಾವು ಪುನಃ ನಮ್ಮ ಮಗನನ್ನು ನೋಡುವ ವರೆಗೆ, ತುಂಬಲಾರದ ಶೂನ್ಯಭಾವವು ನಮ್ಮ ಜೀವಿತಗಳಲ್ಲಿ ಇರುತ್ತದೆ” ಎಂದು ಅವನ ತಾಯಿ ಒಪ್ಪಿಕೊಳ್ಳುತ್ತಾಳೆ. “ಆದರೆ ಯೆಹೋವನು ನಮ್ಮ ದುಃಖದ ಕಣ್ಣೀರನ್ನು ಒರಸಿಬಿಡುವ ವಾಗ್ದಾನವನ್ನು ಮಾಡಿರುವುದರಿಂದ, ನಮ್ಮ ನೋವು ಕೇವಲ ತಾತ್ಕಾಲಿಕವಾದದ್ದು ಎಂದು ನಮಗೆ ತಿಳಿದಿದೆ.”—ಪ್ರಕಟನೆ 21:3, 4.
ಭವಿಷ್ಯತ್ತಿನ ಕುರಿತಾದ ಭಯದಿಂದ ಬಿಡುಗಡೆ
ಭವಿಷ್ಯತ್ತು ಏನನ್ನು ಕಾದಿರಿಸಿದೆ? ನಮ್ಮ ಭೂಮಿಯು ನ್ಯೂಕ್ಲಿಯರ್ ಸರ್ವನಾಶದಲ್ಲಿ ದಹಿಸಲ್ಪಡುವುದೊ? ಭೂಮಿಯ ಪರಿಸರದ ಹಾಳುಗೆಡವುವಿಕೆಯು, ನಮ್ಮ ಭೂಗ್ರಹವನ್ನು ಜೀವಿಸಲು ಅನರ್ಹವಾದದ್ದಾಗಿ ಮಾಡುವುದೊ? ನೈತಿಕ ಕುಸಿತವು ಅರಾಜಕತೆ ಹಾಗೂ ಸಂಪೂರ್ಣ ಅವ್ಯವಸ್ಥಿತ ಸ್ಥಿತಿಗೆ ನಡಿಸುವುದೊ? ಇವು ಇಂದು ಅನೇಕರಿಗೆ ನೈಜ ಭಯಗಳಾಗಿವೆ.
ಬೈಬಲಾದರೋ ಅಂತಹ ವ್ಯಾಧಿಕಾರಕ ಭಯಗಳಿಂದ ಬಿಡುಗಡೆಯನ್ನು ಒದಗಿಸುತ್ತದೆ. “ಭೂಮಿಯಾದರೋ ಶಾಶ್ವತವಾಗಿ ನಿಲ್ಲುವದು” ಎಂದು ಅದು ನಮಗೆ ಆಶ್ವಾಸನೆ ನೀಡುತ್ತದೆ. (ಪ್ರಸಂಗಿ 1:4) ನಮ್ಮ ಭೂಗ್ರಹವು ಬೇಜವಾಬ್ದಾರಿಯುಳ್ಳ ಮಾನವರಿಂದ ನಾಶಗೊಳಿಸಲ್ಪಡುವುದನ್ನು ನೋಡಲಿಕ್ಕಾಗಿ ಮಾತ್ರವೇ ಯೆಹೋವನು ಅದನ್ನು ಸೃಷ್ಟಿಸಲಿಲ್ಲ. (ಯೆಶಾಯ 45:18) ಬದಲಾಗಿ, ಯೆಹೋವನು ಭೂಮಿಯನ್ನು ಸೃಷ್ಟಿಸಿದ್ದು, ಐಕ್ಯ ಮಾನವ ಕುಟುಂಬಕ್ಕಾಗಿ ಪ್ರಮೋದವನ ಮನೆಯೋಪಾದಿ ಕಾರ್ಯನಡಿಸಲಿಕ್ಕಾಗಿಯೇ. (ಆದಿಕಾಂಡ 1:27, 28) ಆತನ ಉದ್ದೇಶವು ಬದಲಾಗಿಲ್ಲ. ದೇವರು “ಭೂಮಿಯನ್ನು ನಾಶಪಡಿಸುತ್ತಿರುವವರನ್ನು ನಾಶಮಾಡು”ವನು (NW) ಎಂದು ಬೈಬಲು ನಮಗೆ ಹೇಳುತ್ತದೆ. (ಪ್ರಕಟನೆ 11:18) ತದನಂತರ, “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು” ಎಂದು ಬೈಬಲು ಹೇಳುತ್ತದೆ.—ಕೀರ್ತನೆ 37:11.
ಈ ವಾಗ್ದಾನವು ವಿಶ್ವಾಸಾರ್ಹವಾದದ್ದಾಗಿದೆ, ಏಕೆಂದರೆ ದೇವರು ಸುಳ್ಳಾಡುವುದಿಲ್ಲ. ಯೆಹೋವನು ತನ್ನ ಪ್ರವಾದಿಯಾದ ಯೆಶಾಯನ ಮೂಲಕ ಹೇಳಿದ್ದು: “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.” (ಯೆಶಾಯ 55:11; ತೀತ 1:2) ಆದುದರಿಂದ, ಬೈಬಲಿನಲ್ಲಿ 2 ಪೇತ್ರ 3:13ರಲ್ಲಿ “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು” ಎಂದು ದಾಖಲಿಸಲ್ಪಟ್ಟಿರುವ, ದೇವರ ವಾಗ್ದಾನದ ನೆರವೇರಿಕೆಯನ್ನು ನಾವು ದೃಢಭರವಸೆಯಿಂದ ಎದುರುನೋಡಸಾಧ್ಯವಿದೆ.
ಮನುಷ್ಯನ ಭಯದಿಂದ ಬಿಡುಗಡೆ
ತಾವು ದೇವರಿಗೆ ತೋರಿಸಿದ ಭಕ್ತಿಯಲ್ಲಿ ನಿರ್ಭೀತಿಯನ್ನು ತೋರಿಸಿದ, ಸ್ತ್ರೀಪುರುಷರ ಉತ್ಕೃಷ್ಟ ಉದಾಹರಣೆಗಳನ್ನು ಬೈಬಲು ನಮಗೆ ಒದಗಿಸುತ್ತದೆ. ಅವರಲ್ಲಿ, ಗಿದ್ಯೋನ್, ಬಾರಾಕ್, ದೆಬೋರಾ, ದಾನಿಯೇಲ, ಎಸ್ತೇರ್, ಯೆರೆಮೀಯ, ಅಬೀಗೈಲ, ಮತ್ತು ಯಾಯೇಲ್ ಸೇರಿದ್ದರು. ಹೆಸರಿಸಲಿಕ್ಕಾಗಿ ಇವು ಕೆಲವೇ ಉದಾಹರಣೆಗಳಾಗಿವೆ. ಈ ನಂಬಿಗಸ್ತ ಸ್ತ್ರೀಪುರುಷರು, ಕೀರ್ತನೆಗಾರನ ಮನೋಭಾವವನ್ನು ತೋರ್ಪಡಿಸಿದರು: “ದೇವರನ್ನು ನಂಬಿ ನಿರ್ಭಯದಿಂದಿರುವೆನು; ನರಪ್ರಾಣಿಗಳು ನನಗೆ ಮಾಡುವದೇನು?”—ಕೀರ್ತನೆ 56:11.
ಪ್ರಥಮ ಶತಮಾನದಲ್ಲಿ, ಧಾರ್ಮಿಕ ಅಧಿಕಾರಿಗಳು ಅಪೊಸ್ತಲ ಪೇತ್ರ ಹಾಗೂ ಯೋಹಾನರಿಗೆ ಸಾರುವುದನ್ನು ನಿಲ್ಲಿಸುವಂತೆ ಆಜ್ಞಾಪಿಸಿದಾಗ, ಅವರು ತದ್ರೀತಿಯ ಧೈರ್ಯವನ್ನು ತೋರ್ಪಡಿಸಿದರು. “ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು” ಎಂದು ಅವರು ಉತ್ತರಕೊಟ್ಟರು. ಅವರ ದೃಢ ನಿಲುವಿನ ಫಲಿತಾಂಶವಾಗಿ, ಪೇತ್ರ ಮತ್ತು ಯೋಹಾನರು ತದನಂತರ ಸೆರೆಮನೆಗೆ ಹಾಕಲ್ಪಟ್ಟರು. ಅವರು ಅದ್ಭುತಕರವಾಗಿ ಬಿಡುಗಡೆಗೊಳಿಸಲ್ಪಟ್ಟ ಬಳಿಕ, ತಮ್ಮ ಚಟುವಟಿಕೆಯನ್ನು ಮತ್ತೆ ಆರಂಭಿಸಿ, “ದೇವರ ವಾಕ್ಯವನ್ನು ಧೈರ್ಯದಿಂದ ಮಾತಾಡುವುದನ್ನು” (NW) ಮುಂದುವರಿಸಿದರು. ಬೇಗನೆ ಪೇತ್ರನನ್ನೂ ಇನ್ನಿತರ ಅಪೊಸ್ತಲರನ್ನೂ ಯೆಹೂದಿ ಹಿರೀಸಭೆಯ ಮುಂದೆ ಕರೆತರಲಾಯಿತು. “ನೀವು ಈ ಹೆಸರನ್ನು ಎತ್ತಿ ಉಪದೇಶಮಾಡಲೇಬಾರದೆಂದು ನಾವು ನಿಮಗೆ ಖಂಡಿತವಾಗಿ ಅಪ್ಪಣೆಕೊಟ್ಟೆವಲ್ಲಾ; ಆದರೂ ನೀವು ಯೆರೂಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿದಿರಿ” ಎಂದು ಮಹಾಯಾಜಕನು ಅವರಿಗೆ ಹೇಳಿದನು. ಪೇತ್ರನೂ ಇತರ ಅಪೊಸ್ತಲರೂ ಉತ್ತರಿಸಿದ್ದು: “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.”—ಅ. ಕೃತ್ಯಗಳು 4:16, 17, 19, 20, 31; 5:18-20, 27-29.
ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ತಮ್ಮ ಕೆಲಸದಲ್ಲಿ, ಯೆಹೋವನ ಸಾಕ್ಷಿಗಳು ಇಂದು ಪ್ರಥಮ ಶತಮಾನದ ಕ್ರೈಸ್ತರ ಹುರುಪನ್ನು ಅನುಕರಿಸಲು ಶ್ರಮಿಸುತ್ತಾರೆ. ಅವರ ಮಧ್ಯೆ ಇರುವ ಯುವ ಜನರು ಸಹ, ಅನೇಕವೇಳೆ ತಮ್ಮ ನಂಬಿಕೆಯ ಕುರಿತಾಗಿ ಇತರರೊಂದಿಗೆ ಮಾತಾಡುವ ಮೂಲಕ ತಾವು ನಿರ್ಭೀತರೆಂಬುದನ್ನು ಸ್ವತಃ ರುಜುಪಡಿಸುತ್ತಾರೆ. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
ಹದಿವಯಸ್ಕಳಾದ ಸ್ಟೇಸಿ ಸ್ವಭಾವತಃ ನಾಚಿಕೆ ಪ್ರವೃತ್ತಿಯವಳು. ಇದರ ಫಲಿತಾಂಶವಾಗಿ, ತನ್ನ ನಂಬಿಕೆಯ ಕುರಿತಾಗಿ ಇತರರೊಂದಿಗೆ ಮಾತಾಡುವುದು ಅವಳಿಗೆ ಆರಂಭದಲ್ಲಿ ಒಂದು ಪಂಥಾಹ್ವಾನವಾಗಿತ್ತು. ತನ್ನ ನಾಚಿಕೆ ಸ್ವಭಾವವನ್ನು ಜಯಿಸಲು ಅವಳು ಏನು ಮಾಡಿದಳು? “ನಾನು ಬೈಬಲನ್ನು ಅಭ್ಯಾಸಿಸಿದೆ ಮತ್ತು ನಾನು ಯಾವುದರ ಕುರಿತಾಗಿ ಮಾತಾಡುತ್ತಿದ್ದೆನೊ ಆ ವಿಷಯವನ್ನು ನಾನು ಅರ್ಥಮಾಡಿಕೊಂಡಿದ್ದೇನೆಂಬುದನ್ನು ಖಚಿತಪಡಿಸಿಕೊಂಡೆ” ಎಂದು ಅವಳನ್ನುತ್ತಾಳೆ. “ಅದು ಕೆಲಸವನ್ನು ಹೆಚ್ಚು ಸುಲಭವಾದದ್ದಾಗಿ ಮಾಡಿತು, ಮತ್ತು ನಾನು ನನ್ನಲ್ಲಿ ಹೆಚ್ಚು ಆತ್ಮವಿಶ್ವಾಸವನ್ನು ಪಡೆದುಕೊಂಡೆ.” ಸ್ಟೇಸಿಯ ಅತ್ಯುತ್ತಮ ಪ್ರಖ್ಯಾತಿಯು, ಸ್ಥಳಿಕ ವಾರ್ತಾಪತ್ರಿಕೆಯಲ್ಲಿ ವರದಿಸಲ್ಪಟ್ಟಿತು. ಅವಳ ಶಾಲೆಯಲ್ಲಿನ ಶಿಕ್ಷಕಿಯೊಬ್ಬಳಿಂದ ಬರೆಯಲ್ಪಟ್ಟಿದ್ದ ಆ ಲೇಖನವು ಹೇಳಿಕೆಯನ್ನಿತ್ತದ್ದು: “[ಸ್ಟೇಸಿಯ] ನಂಬಿಕೆಯು, ಅಧಿಕಾಂಶ ಹದಿವಯಸ್ಕರು ಅನುಭವಿಸುವಂತಹ ಅನೇಕ ಒತ್ತಡಗಳನ್ನು ಹೊಡೆದೋಡಿಸಲಿಕ್ಕಾಗಿ ಬೇಕಾದ ಬಲವನ್ನು ಅವಳಿಗೆ ನೀಡಿದ್ದಂತೆ ತೋರುತ್ತದೆ. . . . ದೇವರಿಗೆ ಸಲ್ಲಿಸುವ ಸೇವೆಯು ತನ್ನ ಮನಸ್ಸಿನಲ್ಲಿ ಅಗ್ರಗಣ್ಯ ಸ್ಥಾನದಲ್ಲಿರಬೇಕು ಎಂಬುದು ಅವಳ ಅನಿಸಿಕೆ.”
ಟಾಮಿ ಕೇವಲ ಐದು ವರ್ಷ ಪ್ರಾಯದವನಾಗಿದ್ದಾಗ, ತನ್ನ ಹೆತ್ತವರಿಂದ ಬೈಬಲಿನ ಕುರಿತು ಕಲಿಯಲಾರಂಭಿಸಿದನು. ಅತಿ ಚಿಕ್ಕ ಪ್ರಾಯದಲ್ಲಿಯೇ ಅವನು ಸತ್ಯಾರಾಧನೆಗಾಗಿ ಒಂದು ಧೈರ್ಯದ ನಿಲುವನ್ನು ತೆಗೆದುಕೊಂಡನು. ಅವನ ಎಳೆಯ ಸಹಪಾಠಿಗಳು ರಜಾದಿನವನ್ನು ವರ್ಣಿಸುವ ದೃಶ್ಯಗಳ ಚಿತ್ರಗಳನ್ನು ಬಿಡಿಸುತ್ತಿದ್ದಾಗ, ಟಾಮಿಯು ದೇವರ ವಾಗ್ದತ್ತ ಪ್ರಮೋದವನದ ದೃಶ್ಯಗಳನ್ನು ಬಿಡಿಸಿದನು. ಒಬ್ಬ ಹದಿವಯಸ್ಕನೋಪಾದಿ, ಯೆಹೋವನ ಸಾಕ್ಷಿಗಳ ನಂಬಿಕೆಗಳ ಕುರಿತು ಅನೇಕ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದರು ಎಂಬುದನ್ನು ಟಾಮಿ ಗಮನಿಸಿದನು. ಭಯದಿಂದ ಹಿಂಜರಿಯುವುದಕ್ಕೆ ಬದಲಾಗಿ, ಅವರ ಎಲ್ಲಾ ಪ್ರಶ್ನೆಗಳಿಗೆ ಏಕಕಾಲದಲ್ಲಿ ತಾನು ಉತ್ತರನೀಡಲು ಸಾಧ್ಯವಾಗುವಂತೆ, ತನ್ನ ತರಗತಿಯೊಂದಿಗೆ ತಾನು ಪ್ರಶ್ನೋತ್ತರದ ಚರ್ಚೆಯನ್ನು ನಡೆಸಸಾಧ್ಯವಿದೆಯೋ ಎಂದು ಅವನು ಶಿಕ್ಷಕರಲ್ಲೊಬ್ಬರಿಗೆ ಕೇಳಿದನು. ಇದಕ್ಕೆ ಅನುಮತಿ ಸಿಕ್ಕಿತು. ಮತ್ತು ಒಂದು ಒಳ್ಳೆಯ ಸಾಕ್ಷಿಯು ಕೊಡಲ್ಪಟ್ಟಿತು.
ಮಾರ್ಕೀಟ 17 ವರ್ಷ ಪ್ರಾಯದವಳಾಗಿದ್ದಾಗ, ತನ್ನ ನಂಬಿಕೆಯ ಕುರಿತಾಗಿ ತನ್ನ ತರಗತಿಯಲ್ಲಿನ ಇತರರೊಂದಿಗೆ ಮಾತಾಡಲಿಕ್ಕಾಗಿ ಅತ್ಯುತ್ತಮವಾದ ಒಂದು ಅವಕಾಶವನ್ನು ಕಂಡುಕೊಂಡಳು. “ಭಾಷಣವೊಂದನ್ನು ನೀಡುವ ನೇಮಕವನ್ನು ನಮಗೆ ನೀಡಲಾಯಿತು” ಎಂದು ಅವಳನ್ನುತ್ತಾಳೆ. “ನನ್ನ ವಿಷಯವನ್ನು ನಾನು ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್) ಎಂಬ ಪುಸ್ತಕದಿಂದ ಆರಿಸಿಕೊಂಡೆ.a ನಾನು ಆ ಪುಸ್ತಕದಿಂದ ಐದು ಅಧ್ಯಾಯಗಳನ್ನು ಆರಿಸಿಕೊಂಡು, ಅವುಗಳ ಶಿರೋನಾಮಗಳನ್ನು ಕರಿಹಲಗೆ (ಬ್ಲ್ಯಾಕ್ ಬೋರ್ಡ್)ಯ ಮೇಲೆ ಬರೆದೆ. ಇವನ್ನು ಯಾವುದು ಅವರಿಗೆ ಅತ್ಯಂತ ಪ್ರಾಮುಖ್ಯವಾದದ್ದೆಂದು ಅನಿಸುತ್ತದೋ ಆ ಕ್ರಮದಲ್ಲಿ ಗುರುತಿಸುವಂತೆ ಕೇಳಿಕೊಂಡೆ.” ಅನಂತರ ತರಗತಿಯ ಭಾಗವಹಿಸುವಿಕೆಯೊಂದಿಗೆ ಒಂದು ಚರ್ಚೆನಡೆಯಿತು. “ನಾನು ನನ್ನ ತರಗತಿಗೆ ಆ ಪುಸ್ತಕವನ್ನು ತೋರಿಸಿದೆ, ಮತ್ತು ಅನೇಕ ವಿದ್ಯಾರ್ಥಿಗಳು ಒಂದು ಪ್ರತಿಯನ್ನು ತಂದುಕೊಡುವಂತೆ ಕೇಳಿಕೊಂಡರು. ನನ್ನ ಶಿಕ್ಷಕಿ ಸಹ, ತನಗೂ ಒಂದು ಪುಸ್ತಕ ಬೇಕೆಂದು ಹೇಳಿದಳು” ಎಂದು ಮಾರ್ಕೀಟ ಮುಕ್ತಾಯಗೊಳಿಸುತ್ತಾಳೆ.
ನೀವು ಸತ್ಯದಿಂದಾಗಿ ಬಿಡುಗಡೆಗೊಳಿಸಲ್ಪಡಸಾಧ್ಯವಿದೆ
ನಾವು ನೋಡಿರುವಂತೆ, ಬೈಬಲಿನಲ್ಲಿ ಒಳಗೂಡಿರುವ ಸತ್ಯವನ್ನು ಅಭ್ಯಾಸಿಸುವ, ಅದರ ಸಂದೇಶವನ್ನು ಹೃದಯಕ್ಕೆ ತೆಗೆದುಕೊಳ್ಳುವ ಎಲ್ಲ ವಯೋವರ್ಗಗಳ ಜನರ ಮೇಲೆ, ಆ ಸತ್ಯವು ಬಿಡುಗಡೆಯ ಪರಿಣಾಮವನ್ನು ಬೀರುತ್ತದೆ. ಮೃತರ ಭಯ, ಭವಿಷ್ಯತ್ತಿನ ಕುರಿತಾದ ಭಯ, ಹಾಗೂ ಮನುಷ್ಯನ ಭಯದಿಂದ ಅದು ಅವರನ್ನು ವಿಮುಕ್ತಿಗೊಳಿಸುತ್ತದೆ. ಅಂತಿಮವಾಗಿ, ಯೇಸುವಿನ ಪ್ರಾಯಶ್ಚಿತ್ತವು, ವಿಧೇಯ ಮಾನವಕುಲವನ್ನು ಪಾಪ ಹಾಗೂ ಮರಣದಿಂದ ಬಿಡುಗಡೆಮಾಡುವುದು. ಬಾಧ್ಯತೆಯಾಗಿ ಪಡೆದ ನಮ್ಮ ಪಾಪಪೂರ್ಣ ಸ್ಥಿತಿಯಿಂದ ಇನ್ನೆಂದೂ ಬಂಧಿಸಲ್ಪಡದೆ, ಪ್ರಮೋದವನ ಭೂಮಿಯಲ್ಲಿ ಸದಾಕಾಲ ಜೀವಿಸುವುದು ಎಂತಹ ಒಂದು ಆನಂದವಾಗಿರುವುದು!—ಕೀರ್ತನೆ 37:29.
ದೇವರು ವಾಗ್ದಾನಿಸಿರುವ ಆಶೀರ್ವಾದಗಳ ಕುರಿತಾಗಿ ಹೆಚ್ಚು ವಿಷಯಗಳನ್ನು ಕಲಿತುಕೊಳ್ಳಲು ನೀವು ಬಯಸುತ್ತೀರೊ? ಬಯಸುವಲ್ಲಿ, ನೀವೇನು ಮಾಡಬೇಕು? ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ಆದುದರಿಂದ ಯೇಸು ತನ್ನ ಶಿಷ್ಯರಿಗೆ ವಾಗ್ದಾನಿಸಿದ ಸ್ವಾತಂತ್ರ್ಯವನ್ನು ನೀವೂ ಅನುಭವಿಸಲು ಬಯಸುವುದಾದರೆ, ನೀವು ಯೆಹೋವ ದೇವರ ಹಾಗೂ ಆತನ ಮಗನ ಕುರಿತಾಗಿ ಕಲಿಯಬೇಕು. ನೀವು ದೇವರ ಚಿತ್ತವೇನೆಂಬುದನ್ನು ತಿಳಿದುಕೊಳ್ಳುವ, ಹಾಗೂ ತದನಂತರ ಅದನ್ನು ಮಾಡುವ ಅಗತ್ಯವಿದೆ. ಏಕೆಂದರೆ ಬೈಬಲು ಹೇಳುವುದು: “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:17.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 7 ರಲ್ಲಿರುವ ಚಿತ್ರ]
ದೇವರ ರಾಜ್ಯದ ಕೆಳಗೆ, ಮಾನವಕುಲವು ಕಟ್ಟಕಡೆಗೆ ಪಾಪ ಮತ್ತು ಮರಣದಿಂದ ಬಿಡುಗಡೆಗೊಳಿಸಲ್ಪಡುವುದು