ದೈವಿಕ ಶಾಂತಿಯ ಸಂದೇಶವಾಹಕರು ಕೂಡಿಬರುತ್ತಾರೆ
“ನಾವು ಹಾಜರಾದಂತಹ ಪ್ರತಿಯೊಂದು ಜಿಲ್ಲಾ ಅಧಿವೇಶನದಿಂದ ನಮಗೆ ಆತ್ಮೋನ್ನತಿಯಾಗಿದೆ,” ಎಂದು ಅಮೆರಿಕದ ಒಬ್ಬ ಕ್ರೈಸ್ತ ಹಿರಿಯನು ಹೇಳುತ್ತಾನೆ. “ಆದಾಗಲೂ, ಈ ವರ್ಷದ ಅಧಿವೇಶನವು ಅವರ್ಣನೀಯವಾಗಿತ್ತು. ಮುಂದಿನ ದಿನದ ಕಾರ್ಯಕ್ರಮವು ನಮ್ಮ ನಿರೀಕ್ಷಣೆಗಳನ್ನು ಹೇಗೆ ಮೀರಿಸುವುದೆಂದು ಕುತೂಹಲಪಡುತ್ತಾ ನಾವು ಪ್ರತಿ ದಿನ ಅಧಿವೇಶನದಿಂದ ತೆರಳುತ್ತಿದ್ದೆವು, ಮತ್ತು ನಾವು ನಿರಾಶೆಗೊಳಿಸಲ್ಪಡಲಿಲ್ಲ!”
“ದೈವಿಕ ಶಾಂತಿಯ ಸಂದೇಶವಾಹಕರು” ಜಿಲ್ಲಾ ಅಧಿವೇಶನಗಳಲ್ಲಿ ಒಂದಕ್ಕೆ ನೀವು ಹಾಜರಾಗಿದ್ದಲ್ಲಿ, ನಿಸ್ಸಂದೇಹವಾಗಿ ನೀವು ಕೂಡ ಈ ಉತ್ಸಾಹಿ ಪ್ರತಿನಿಧಿಯೊಂದಿಗೆ ಸಮ್ಮತಿಸುವಿರಿ. ಅಧಿವೇಶನದ ಪ್ರತಿಯೊಂದು ದಿನವು, ದೇವರ ಸಂದೇಶವಾಹಕರೋಪಾದಿ ಯೆಹೋವನ ಸಾಕ್ಷಿಗಳು ನಡೆಸುವಂತಹ ನಿಯೋಗದ ಒಂದು ವಿಭಿನ್ನ ರೂಪದ ಮೇಲೆ ಕೇಂದ್ರೀಕರಿಸಿತು. ಮೂರು ದಿನದ ಕಾರ್ಯಕ್ರಮವನ್ನು ನಾವು ಪುನರ್ವಿಮರ್ಶಿಸೋಣ.
“ಶಾಂತಿಯನ್ನು ಪ್ರಕಟಪಡಿಸುತ್ತಿರುವವನು . . . ಎಷ್ಟೋ ಅಂದವಾಗಿದ್ದಾನೆ”
ಇದು ಅಧಿವೇಶನದ ಪ್ರಥಮ ದಿನದ ಮುಖ್ಯ ಶೀರ್ಷಿಕೆಯಾಗಿತ್ತು. ಅದು ಯೆಶಾಯ 52:7ರ ಮೇಲೆ ಆಧಾರಿತವಾಗಿತ್ತು. ಈ ಕಷ್ಟಕರ ಸಮಯಗಳಲ್ಲಿ, ಅನೇಕರು ಪಂಥಾಹ್ವಾನಕರವಾದ ಪರಿಸ್ಥಿತಿಗಳಡಿಯಲ್ಲಿ ಯೆಹೋವನಿಗೆ ಸೇವೆಸಲ್ಲಿಸುತ್ತಿದ್ದಾರೆ. “ಶಾಂತಿಯ ಹುರುಪಿನ ಘೋಷಕರಿಂದ ಕೇಳುವುದು” ಎಂಬ ಭಾಷಣವು, ಈ ನಂಬಿಗಸ್ತರಲ್ಲಿ ಕೆಲವರೊಂದಿಗಿನ ಸಾಕ್ಷಾತ್ ಸಂದರ್ಶನಗಳನ್ನು ಒಳಗೂಡಿತ್ತು. ಅವರ ವೈಯಕ್ತಿಕ ಅಭಿವ್ಯಕ್ತಿಗಳನ್ನು ಕೇಳಿಸಿಕೊಳ್ಳುವುದು ನಿಜವಾಗಿಯೂ ಉತ್ತೇಜನದಾಯಕವಾಗಿತ್ತು. ಮತ್ತು ಈ ರೀತಿಯಲ್ಲಿ, ತಾಳಿಕೊಳ್ಳುವಂತೆ ಅವರಿಗೆ ಸಹಾಯಮಾಡಲು ‘ಬಲಾಧಿಕ್ಯ’ವನ್ನು ಸಹ ಒದಗಿಸುತ್ತಾ, ಯೆಹೋವನು ಅವರನ್ನೂ ಬಲಪಡಿಸಸಾಧ್ಯವಿದೆಯೆಂದು ಅಧಿವೇಶನಕಾರರಿಗೆ ಆಶ್ವಾಸನೆಯನ್ನೀಯಲಾಯಿತು.—2 ಕೊರಿಂಥ 4:7.
ಯೆಹೋವನ ಆವಶ್ಯಕತೆಗಳು ಭಾರದಾಯಕವಲ್ಲ. (1 ಯೋಹಾನ 5:3) ಇದನ್ನು, ಬೆಳಗ್ಗಿನ ಕಾರ್ಯಕ್ರಮದ ಕೊನೆಯ ಭಾಷಣದಲ್ಲಿ ಸ್ಪಷ್ಟಪಡಿಸಲಾಯಿತು. ಈ ಭಾಷಣವು, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಶೀರ್ಷಿಕೆಯುಳ್ಳ 32 ಪುಟದ ಬ್ರೋಷರಿನ ಬಿಡುಗಡೆಯೊಂದಿಗೆ ಒಂದು ಪರಾಕಾಷ್ಠೆಗೆ ತಲಪಿತು. ಸುಂದರವಾಗಿ ಸಚಿತ್ರಗೊಳಿಸಲ್ಪಟ್ಟಿರುವ ಈ ಹೊಸ ಅಧ್ಯಯನ ಸಹಾಯಕವು, ಇನ್ನೂ ಹೆಚ್ಚು ಜನರು ದೇವರ ಉದ್ದೇಶಗಳ ಕುರಿತಾಗಿ ಕಲಿಯುವುದರಲ್ಲಿ ನಿಸ್ಸಂದೇಹವಾಗಿ ಒಂದು ಪ್ರಾಮುಖ್ಯ ಪಾತ್ರವನ್ನು ವಹಿಸುವುದು. ಈ ಹೊಸ ಪ್ರಕಾಶನದ ಉಪಯೋಗದ ಕುರಿತಾದ ಹೇಳಿಕೆಗಳು, ಈ ಪತ್ರಿಕೆಯ ಕೊನೆಯ ಅಭ್ಯಾಸ ಲೇಖನದಲ್ಲಿ ಮತ್ತು 16 ಹಾಗೂ 17ನೆಯ ಪುಟಗಳಲ್ಲಿ ಕಂಡುಬರುತ್ತವೆ.
ಯೆಹೋವನಿಗೆ ನಮ್ಮ ಸಂಕಷ್ಟಗಳ ವಿಷಯದಲ್ಲಿ ಚೆನ್ನಾಗಿ ಅರಿವಿದೆಯೆಂಬುದನ್ನು, “ಒಳ್ಳೇ ಕೆಲಸದಲ್ಲಿ ತಾಳಿಕೊಂಡಿರುವುದು” ಎಂಬ ಭಾಷಣವು ಒತ್ತಿಹೇಳಿತು. ನಮ್ಮ ನೆಲೆಯಲ್ಲಿ ದೃಢರಾಗಿ ನಿಂತು, ನಿರೀಕ್ಷೆಯನ್ನು ಕಳೆದುಕೊಳ್ಳದಿರುವುದೇ ತಾಳ್ಮೆಯ ಅರ್ಥ. ನಮಗೆ ನೆರವನ್ನೀಯಲು ಯೆಹೋವನು ತನ್ನ ವಾಕ್ಯ, ತನ್ನ ಆತ್ಮ, ಮತ್ತು ತನ್ನ ಸಂಸ್ಥೆಯನ್ನು ಕೊಟ್ಟಿದ್ದಾನೆ. ಸಾರಲಿಕ್ಕಾಗಿ ತಾಳ್ಮೆಯು ಬೇಕಾದರೂ, ಸಾರುವಿಕೆಯು ನಮಗೆ ತಾಳಿಕೊಳ್ಳುವಂತೆ ಸಹಾಯ ಮಾಡುತ್ತದೆ, ಯಾಕಂದರೆ ಅದು ನಮ್ಮ ನಂಬಿಕೆಯನ್ನು ಸಜೀವವಾಗಿರಿಸುತ್ತದೆ. ಕೊನೆಮುಟ್ಟುವ ಎಲ್ಲೆಗೆರೆಗೆ ಇಷ್ಟು ಹತ್ತಿರವಿರಲಾಗಿ, ನಮ್ಮ ಸಮಸ್ಯೆಗಳು ನಮ್ಮ ಹುರುಪನ್ನು ಕುಂದಿಸುವಂತೆ ನಾವು ಬಿಡಬಾರದು, ಯಾಕಂದರೆ ಯಾರು ಅಂತ್ಯದ ವರೆಗೆ ತಾಳಿಕೊಳ್ಳುತ್ತಾರೊ ಅವರು ಮಾತ್ರ ರಕ್ಷಿಸಲ್ಪಡುವರು.—ಮತ್ತಾಯ 24:13.
“ದೈವಿಕ ಶಾಂತಿಯ ಸಂದೇಶವಾಹಕರೋಪಾದಿ ನಮ್ಮ ಪಾತ್ರ” ಎಂಬ ಮುಖ್ಯ ಭಾಷಣವು, ಸಾ.ಶ.ಪೂ. 537ರಲ್ಲಿ ಬಾಬೆಲಿನಿಂದ ಯೆಹೂದಿ ಸೆರೆವಾಸಿಗಳ ಬಿಡುಗಡೆ ಮತ್ತು ಯೆರೂಸಲೇಮಿನಲ್ಲಿ ಶುದ್ಧ ಆರಾಧನೆಯ ಪುನಃಸ್ಥಾಪನೆಗೆ ಗಮನವನ್ನು ಸೆಳೆಯಿತು. ಭಾಷಣಕರ್ತನು ವಿವರಿಸಿದಂತೆ, ಈ ಘಟನೆಯು ದೇವರ ರಾಜ್ಯವು ಬೇಗನೆ ಒಂದು ಭೂವ್ಯಾಪಕ ಪ್ರಮಾಣದಲ್ಲಿ ಪೂರೈಸಲಿರುವ ವಿಷಯಗಳ ಮುನ್ರುಚಿ ಆಗಿತ್ತಷ್ಟೇ. (ಕೀರ್ತನೆ 72:7; ಯೆಶಾಯ 9:7) ನಮ್ಮ ಸದ್ಯದ ನೇಮಕವು, ಈ ರಾಜ್ಯದ ಕುರಿತಾದ ಸುವಾರ್ತೆಯನ್ನು ಸಾರುವುದು ಮತ್ತು ಆ ಸಂದೇಶಕ್ಕೆ ಹೊಂದಿಕೆಯಲ್ಲಿ ಜೀವಿಸುವುದೇ ಆಗಿದೆ. ದೇವರಿಗಾಗಿ ಮತ್ತು ನೆರೆಯವರಿಗಾಗಿ ಪ್ರೀತಿಯು, ನಾವು ಈ ಕೆಲಸದಲ್ಲಿ ಎಡೆಬಿಡದೆ ಮುಂದುವರಿಯುವಂತೆ ನಮ್ಮನ್ನು ಪ್ರಚೋದಿಸತಕ್ಕದ್ದು.—ಅ. ಕೃತ್ಯಗಳು 5:42.
ಶುಕ್ರವಾರದ ಕಾರ್ಯಕ್ರಮದ ಒಂದು ಮುಖ್ಯ ಅಂಶವು, “ಮನೋರಂಜನೆಯ ಮರೆಯಾಗಿರುವ ಪಾಶಗಳಿಗೆ ಎಚ್ಚರವಾಗಿರ್ರಿ” ಎಂಬ ಭಾಷಣಮಾಲೆಯಾಗಿತ್ತು. ಇಂದಿನ ಸಂಗೀತ, ಚಲನ ಚಿತ್ರಗಳು, ವಿಡಿಯೊಗಳು, ಟೆಲಿವಿಷನ್ ಪ್ರದರ್ಶನಗಳು, ವಿಡಿಯೊ ಆಟಗಳು, ಪುಸ್ತಕಗಳು, ಪತ್ರಿಕೆಗಳು, ಮತ್ತು ಕಾಮಿಕ್ ಪುಸ್ತಕಗಳು ಅನೇಕವೇಳೆ ಪೈಶಾಚಿಕ ವಿಚಾರವನ್ನು ಪ್ರತಿಬಿಂಬಿಸುತ್ತವೆ. ಆದುದರಿಂದ, ನಾವು ‘ಕೆಟ್ಟತನವನ್ನು ಹೇಸಿ, ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳ’ಬೇಕು. (ರೋಮಾಪುರ 12:9) ಹೌದು, ನಾವು ಭ್ರಷ್ಟ ಮನೋರಂಜನೆಯನ್ನು ಅಸಹ್ಯವೆಂದು ಎಣಿಸಬೇಕು ಮತ್ತು ಅದರಿಂದ ದೂರ ಸರಿಯಬೇಕು. ಹೀಗೆ ಮಾಡುತ್ತಿರುವಾಗ, ನಾವು ಶುದ್ಧವೂ, ಸದ್ಗುಣವುಳ್ಳದ್ದೂ, ಸ್ತುತಿಪಾತ್ರವೂ ಆದ ವಿಷಯಗಳ ಕುರಿತು ಆಲೋಚಿಸುತ್ತಿರಬೇಕು. (ಫಿಲಿಪ್ಪಿ 4:8) ಯೆಹೋವನ ಸಂಸ್ಥೆಯಿಂದ ಒದಗಿಸಲ್ಪಡುವ ಪ್ರಕಾಶನಗಳು ಮತ್ತು ಸಂಶೋಧನಾ ಸಾಧನಗಳು, ಭಕ್ತಿವರ್ಧಕವಾದ ವಿಚಾರಗಳಿಂದ ನಮ್ಮ ಮನಸ್ಸುಗಳನ್ನು ಪ್ರಚೋದಿಸಲು ಮತ್ತು ತಪ್ಪಾಗಿರುವ ವಿಷಯದಿಂದ ಸರಿಯಾಗಿರುವ ವಿಷಯದ ಭೇದವನ್ನು ಗುರುತಿಸಲು ನಮ್ಮನ್ನು ತರಬೇತು ಮಾಡುತ್ತವೆ. (ಇಬ್ರಿಯ 5:14) ಒಂದು ಅಲ್ಲೋಲಕಲ್ಲೋಲವಾದ ಸಮುದ್ರದಲ್ಲಿ ನಾವು ಒಂದು ಮರದ ದಿಮ್ಮಿಗೆ ಹೇಗೆ ಅಂಟಿಕೊಂಡಿರುವೆವೊ, ಹಾಗೆಯೇ ಈ ಒದಗಿಸುವಿಕೆಗಳಿಗೆ ನಾವು ಅಂಟಿಕೊಂಡಿರಬೇಕು.
“ಪಿಶಾಚನನ್ನು ವಿರೋಧಿಸಿರಿ—ಯಾವುದೇ ಪ್ರತಿಸ್ಪರ್ಧೆಯನ್ನು ಸಹಿಸದಿರಿ” ಎಂಬುದು ಮುಂದಿನ ಭಾಷಣವಾಗಿತ್ತು. ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವುದಕ್ಕೆ ಸ್ವಲ್ಪ ಮುಂಚೆ, ಅವರಲ್ಲಿ ಸಾವಿರಾರು ಮಂದಿ ಅನೈತಿಕತೆಯ ಪಾಶಕ್ಕೆ ಬಲಿಬಿದ್ದರು. ಫೀನೆಹಾಸನು ಸತ್ಯಾರಾಧನೆಯ ಕಡೆಗೆ ಯಾವುದೇ ಪ್ರತಿಸ್ಪರ್ಧೆಯನ್ನು ಸಹಿಸಲಿಲ್ಲ. ಅವನು ತಪ್ಪಿತಸ್ಥರ ವಿರುದ್ಧ ನಿರ್ಣಾಯಕ ಕ್ರಿಯೆಯನ್ನು ಕೈಕೊಂಡನು, ಮತ್ತು ಅವನ ಸಂಪೂರ್ಣವಾದ ಭಕ್ತಿಯು ಯೆಹೋವನನ್ನು ಪ್ರಸನ್ನಗೊಳಿಸಿತು. (ಅರಣ್ಯಕಾಂಡ 25:1-13) ನಮ್ಮಲ್ಲಿ ಪ್ರತಿಯೊಬ್ಬರನ್ನು ದೇವರ ಹೊಸ ಲೋಕದಲ್ಲಿ ಪ್ರವೇಶಿಸಲು ಅಯೋಗ್ಯರನ್ನಾಗಿ ಮಾಡುವುದೇ ಸೈತಾನನ ಗುರಿಯಾಗಿದೆ. ಆದುದರಿಂದ ಫೀನೆಹಾಸನಂತೆ, ನಮ್ಮನ್ನು ಕಲುಷಿತಗೊಳಿಸಲು ಮಾಡಲ್ಪಡುವ ಪಿಶಾಚನ ಪ್ರಯತ್ನಗಳನ್ನು ನಾವು ವಿರೋಧಿಸಬೇಕು. ವಿವಾಹಿತರಾಗಿರಲಿ ಅವಿವಾಹಿತರಾಗಿರಲಿ, ನಾವು “ಜಾರತ್ವಕ್ಕೆ ದೂರವಾಗಿ ಓಡಿ”ಹೋಗಬೇಕು.—1 ಕೊರಿಂಥ 6:18.
ಅಧಿವೇಶನದ ಪ್ರಥಮ ದಿನದ ಸಮಾಪ್ತಿಯ ಭಾಷಣವು, “ದೇವರ ವಾಕ್ಯದ ಸಮಗ್ರತೆಯನ್ನು ನಿಷ್ಠೆಯಿಂದ ಎತ್ತಿಹಿಡಿಯುವುದು” ಎಂದಾಗಿತ್ತು. ಅನೇಕ ಭಾಷಾಂತರಕಾರರು ಶಾಸ್ತ್ರವಚನಗಳ ಭಾಗಗಳನ್ನು ಬದಲಾಯಿಸುತ್ತಾರೆ ಅಥವಾ ಬಿಟ್ಟುಬಿಡುತ್ತಾರೆ. ಉದಾಹರಣೆಗಾಗಿ, ಸ್ತ್ರೀಯರ ಹಕ್ಕುಗಳ ಸಮರ್ಥಕರನ್ನು ಸಮಾಧಾನಗೊಳಿಸಲಿಕ್ಕಾಗಿ, ಹೊಸ ಒಡಂಬಡಿಕೆ ಮತ್ತು ಕೀರ್ತನೆಗಳು: ಒಂದು ಅಂತರ್ಗತ ಭಾಷಾಂತರ (ಇಂಗ್ಲಿಷ್)ದ ಭಾಷಾಂತರಕಾರರು ದೇವರನ್ನು ತಂದೆಯೆಂದಲ್ಲ, ಬದಲಾಗಿ ತಂದೆ-ತಾಯಿ ಎಂದು ಮತ್ತು ಯೇಸುವನ್ನು “ಮನುಷ್ಯ ಪುತ್ರ” ಎಂಬುದರ ಬದಲಿಗೆ “ಮಾನವನು” ಎಂದು ಸೂಚಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆರಂಭದ ಭಾಷೆಯ ಮೂಲಗ್ರಂಥಗಳಿಗೆ ಎಷ್ಟು ನಂಬಿಗಸ್ತಿಕೆಯಿಂದ ಅಂಟಿಕೊಳ್ಳುತ್ತದೆಂದರೆ, ಹಲವಾರು ಶಾಸ್ತ್ರೀಯ ವಿಷಯಗಳ ಮೇಲಿನ ನಮ್ಮ ಆಲೋಚನೆಯನ್ನು ಸ್ಪಷ್ಟೀಕರಿಸುವಂತೆ ಅದು ಕಾರ್ಯನಡಿಸಿದೆ. ಉದಾಹರಣೆಗಾಗಿ, ಭಾಷಣಕರ್ತರು ಹೇಳಿದ್ದು: “ಹಿರಿಯರ ಮಂಡಲಿಗಳನ್ನು ನೇಮಿಸುವ ಮೂಲಕ ಪ್ರಥಮ ಶತಮಾನದ ಕ್ರೈಸ್ತ ಸಭೆಗೆ ಹೆಚ್ಚು ನಿಕಟವಾದ ಸರಿಹೊಂದಿಸುವಿಕೆಯಲ್ಲಿ ಸಭೆಗಳ ಪುನರ್ವ್ಯವಸ್ಥಾಪನೆಗೆ ಆಧಾರವನ್ನು ಒದಗಿಸಿದಂತಹವು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನಲ್ಲಿನ ನಿಷ್ಕೃಷ್ಟ ಭಾಷಾಂತರಗಳಾಗಿದ್ದವು.” ದೇವರ ವಾಕ್ಯವನ್ನು ಪ್ರತಿದಿನ ಓದುವ ಮೂಲಕ ಮತ್ತು ಅದರ ಸಲಹೆಯನ್ನು ಅನ್ವಯಿಸಿಕೊಳ್ಳುವ ಮೂಲಕ ನಾವು ಅದರ ಕಡೆಗಿನ ನಮ್ಮ ನಿಷ್ಠೆಯನ್ನು ಪ್ರದರ್ಶಿಸುತ್ತೇವೆ. ಭಾಷಣಕರ್ತರು ಇದನ್ನೂ ಹೇಳಿದರು: “ಅದನ್ನು ಹುರುಪಿನಿಂದ ಇತರರಿಗೆ ಸಾರುವ ಮೂಲಕ ಮತ್ತು ನಾವು ಇತರರಿಗೆ ಕಲಿಸುವಾಗ, ನಮ್ಮ ವಿಚಾರಗಳಿಗೆ ಹೊಂದಿಕೆಯಾಗುವಂತೆ ಅದನ್ನು ತಿರಿಚಿಕೊಳ್ಳುವ ಮೂಲಕ ಅಥವಾ ಅದು ಹೇಳುವ ವಿಷಯವನ್ನು ಅತ್ಯುಕ್ತಿಗೊಳಿಸಲು ಎಂದೂ ಪ್ರಯತ್ನಿಸದಿರುವ ಮೂಲಕ ಅದನ್ನು ಜಾಗರೂಕತೆಯಿಂದ ಉಪಯೋಗಿಸುವುದರಿಂದ ನಾವು ದೇವರ ವಾಕ್ಯದ ನಿಷ್ಠಾವಂತ ಸಮರ್ಥಕರಾಗಿದ್ದೇವೆಂಬುದನ್ನು ನಾವು ತೋರಿಸುತ್ತೇವೆ.”
‘ಎಲ್ಲಾ ಗ್ರಹಿಕೆಯನ್ನು ಮೀರುವ ದೇವರ ಶಾಂತಿ’
ಫಿಲಿಪ್ಪಿ 4:7ರ ಮೇಲೆ ಆಧಾರಿತವಾದ ಈ ಮುಖ್ಯಶೀರ್ಷಿಕೆಯು, ಅಧಿವೇಶನದ ಎರಡನೆಯ ದಿನಕ್ಕಾಗಿ ನಾದವನ್ನು ನೀಡಿತು. ಪ್ರಸ್ತುತಪಡಿಸಲಾದ ಮಾಹಿತಿಯಲ್ಲಿ ಹೆಚ್ಚಿನದ್ದು, ಒಬ್ಬನ ಶುಶ್ರೂಷೆ, ಕುಟುಂಬ, ಸಮರ್ಪಣೆ, ಮತ್ತು ದೈನಂದಿನ ಜೀವಿತದ ಇತರ ಅಂಶಗಳ ಯೋಗ್ಯವಾದ ನೋಟದೊಂದಿಗೆ ವ್ಯವಹರಿಸಿತು.
ದಿನದ ವಚನದ ಒಂದು ಚರ್ಚೆಯ ಬಳಿಕ, “ಶಾಂತಿಯ ಸುವಾರ್ತೆಯನ್ನು ತರುತ್ತಿರುವ ಸಂದೇಶವಾಹಕರು” ಎಂಬ ಶೀರ್ಷಿಕೆಯ ಒಂದು ಭಾಷಣಮಾಲೆಯನ್ನು ಪ್ರಸ್ತುತಪಡಿಸಲಾಯಿತು. ನಮ್ಮ ಸಂದೇಶವು, ಶಾಂತಿಯ ಸಂದೇಶವಾಗಿದೆ, ಮತ್ತು ಅದು ಒಂದು ಶಾಂತಪೂರ್ಣ ರೀತಿಯಲ್ಲಿ ನೀಡಲ್ಪಡಬೇಕು. (ಎಫೆಸ 6:15) ನಮ್ಮ ಉದ್ದೇಶವು, ವಾದಗಳನ್ನು ಅಲ್ಲ, ಬದಲಾಗಿ ಹೃದಯಗಳನ್ನು ಗೆಲ್ಲುವುದಾಗಿದೆ. ಯೆಹೋವನ ಸಂಸ್ಥೆಯಿಂದ ನಾವು ಪಡೆಯುವ ತರಬೇತಿ ಮತ್ತು ಪ್ರಕಾಶನಗಳು ನಮಗೆ ಅದನ್ನೇ ಮಾಡಲು ಸಹಾಯ ಮಾಡುತ್ತವೆ. ಉದಾಸೀನತೆ ಅಥವಾ ನಿರಾಸಕ್ತಿಯು ನಮ್ಮನ್ನು ನಿರುತ್ತೇಜಿಸಲು ನಾವು ಬಿಡಬಾರದು. ಅದರ ಬದಲು, ವೈಯಕ್ತಿಕ ಅಧ್ಯಯನ, ಕೂಟದ ಹಾಜರಿ, ಮತ್ತು ಸಾರುವ ಕೆಲಸದಲ್ಲಿ ಭಾಗವಹಿಸುವಿಕೆಯ ಒಂದು ಒಳ್ಳೆಯ ನಿಯತಕ್ರಮವನ್ನು ಹೊಂದಿರುತ್ತಾ, ‘ನಮ್ಮ ಕೈಲಾದದ್ದೆಲ್ಲವನ್ನು’ ನಾವು ಮಾಡುತ್ತಾ ಮುಂದುವರಿಯಬೇಕು. (2 ತಿಮೊಥೆಯ 2:15) ಇತರರಿಗೆ—ವಿಶೇಷವಾಗಿ ನಮಗೆ ನಂಬಿಕೆಯಲ್ಲಿ ಸಂಬಂಧಿಸಿರುವವರಿಗೆ—ಒಳಿತನ್ನು ಮಾಡುವುದನ್ನು ನಾವು ಅಲಕ್ಷಿಸಬಾರದು. (ಗಲಾತ್ಯ 6:10) ನಮ್ಮ ಕೈಲಾದದ್ದೆಲ್ಲವನ್ನು ಮಾಡುವುದು, ನಿಶ್ಚಯವಾಗಿ ಶಕ್ತಿಮೀರಿ ಕಾರ್ಯನಡಿಸುವುದನ್ನು ಅರ್ಥೈಸುವುದಿಲ್ಲ. ಪ್ರತಿಯೊಬ್ಬನೂ ತನ್ನ ಸ್ವಂತ ಸಾಮರ್ಥ್ಯ ಮತ್ತು ಪರಿಸ್ಥಿತಿಗಳಿಗನುಸಾರವಾಗಿ ಏನನ್ನು ಮಾಡಲು ಶಕ್ತನಾಗಿದ್ದಾನೊ ಅದು ಯೆಹೋವನಿಗೆ ಸ್ವೀಕಾರಾರ್ಹವಾಗಿದೆ.
ದೇವರ ಜನರು ರಾಜ್ಯಾಭಿರುಚಿಗಳನ್ನು ಮುಂದುವರಿಸಲು, ತಮ್ಮ ಸಮಯ, ಶಕ್ತಿ, ಮತ್ತು ಸಂಪನ್ಮೂಲಗಳನ್ನು ಕೊಡುತ್ತಾರೆ. ಹೆಚ್ಚೆಚ್ಚು ಕುರಿಸದೃಶ ವ್ಯಕ್ತಿಗಳು ರಾಜ್ಯ ಸಂದೇಶಕ್ಕೆ ಪ್ರತಿಕ್ರಿಯೆ ತೋರಿಸಿದಂತೆ, ಹೆಚ್ಚಿನ ಉಪಕರಣ, ಕೂಟದ ಸ್ಥಳಗಳು ಮತ್ತು ಬ್ರಾಂಚ್ ಸೌಕರ್ಯಗಳ ಅಗತ್ಯವಿದೆಯೆಂಬ ವಿಷಯವನ್ನು, “ಯೆಹೋವನ ಸಂಸ್ಥೆಯೊಳಗೆ ಹರ್ಷಚಿತ್ತದ ಕೊಡುವಿಕೆ” ಎಂಬ ಭಾಷಣವು ವ್ಯಕ್ತಪಡಿಸಿತು. ನಮ್ಮ ಕಾಣಿಕೆಗಳು, ಲೋಕವ್ಯಾಪಕವಾದ ಸಾರುವಿಕೆಯ ಕಾರ್ಯವನ್ನು ಪೂರೈಸಲು ಅಗತ್ಯವಿರುವಂತಹದ್ದೆಲ್ಲವೂ ಉಪಯೋಗಕ್ಕಾಗಿ ಸಿದ್ಧವಾಗಿರುವಂತೆ ಸಂಸ್ಥೆಯನ್ನು ಶಕ್ತಗೊಳಿಸುತ್ತವೆ. ಉದಾರವಾದ ಕೊಡುವಿಕೆಯು ಯೆಹೋವನನ್ನು ಸನ್ಮಾನಿಸುತ್ತದೆ ಕೂಡ ಮತ್ತು ಕೊಡುವವನಿಗೆ ಆನಂದವನ್ನು ತರುತ್ತದೆ. ಆದುದರಿಂದ, ಕ್ರೈಸ್ತರೋಪಾದಿ ನಾವು, ನಮ್ಮ ಆರಾಧನೆಯ ಈ ಪ್ರಾಮುಖ್ಯ ಅಂಶವನ್ನು ಅಲಕ್ಷಿಸಬಾರದು.—2 ಕೊರಿಂಥ 8:1-7.
ಬೆಳಗ್ಗಿನ ಸೆಶನನ್ನು ಮುಕ್ತಾಯಗೊಳಿಸಿದಂತಹದ್ದು ದೀಕ್ಷಾಸ್ನಾನದ ಭಾಷಣವಾಗಿತ್ತು. ಇದು ಯೆಹೋವನ ಸಾಕ್ಷಿಗಳ ದೊಡ್ಡ ಕೂಟಗಳಲ್ಲಿ ಯಾವಾಗಲೂ ಒಂದು ಪ್ರಮುಖ ಭಾಗವಾಗಿರುತ್ತದೆ. ನೀರಿನ ದೀಕ್ಷಾಸ್ನಾನಕ್ಕೆ ಒಳಪಡಿಸಿಕೊಳ್ಳುವ ಮೂಲಕ ಹೊಸದಾಗಿ ಸಮರ್ಪಿತರಾದ ವ್ಯಕ್ತಿಗಳು, ಯೇಸುವಿನ ಹೆಜ್ಜೆಜಾಡನ್ನು ಹಿಂಬಾಲಿಸುವುದನ್ನು ನೋಡುವುದು ಎಂತಹ ಒಂದು ಆನಂದ! (ಮತ್ತಾಯ 3:13-17) ಈ ಹೆಜ್ಜೆಯನ್ನು ತೆಗೆದುಕೊಳ್ಳುವವರೆಲ್ಲರೂ ಅತಿ ಮಹಾನ್ ವಿವೇಕದ ಮೂಲವಾಗಿರುವ ಬೈಬಲಿನ ವಿಷಯದಲ್ಲಿ ಶಿಕ್ಷಿತರಾಗಿದ್ದಾರೆ. ಇನ್ನೂ ಹೆಚ್ಚಾಗಿ, ಅವರು ಜೀವಿತದಲ್ಲಿ ನಿಜವಾದ ಉದ್ದೇಶವನ್ನು ಕಂಡುಕೊಂಡಿದ್ದಾರೆ, ಮತ್ತು ತಾವು ಏನನ್ನು ಮಾಡುತ್ತಿದ್ದೇವೊ ಅದು ಸರಿಯಾದ ಸಂಗತಿಯಾಗಿದೆ ಎಂಬುದನ್ನು ಅರಿತಿರುವುದರಿಂದ ಬರುವ ಶಾಂತಿಯೊಂದಿಗೆ ಆಶೀರ್ವದಿಸಲ್ಪಟ್ಟಿದ್ದಾರೆ.—ಪ್ರಸಂಗಿ 12:13.
“ವಿವೇಚನಾಶಕ್ತಿಯು ನಿಮ್ಮನ್ನು ಕಾಪಾಡಲಿ” ಎಂಬ ಭಾಷಣದಲ್ಲಿ ಮನಸ್ಸಿಗೆ ನಾಟುವಂತಹ ಸಲಹೆಯು ಕೊಡಲ್ಪಟ್ಟಿತು. ವ್ಯಾಪಾರ ವ್ಯವಹಾರಗಳ ವಿಷಯದಲ್ಲಿ ವಿವೇಚನಾಶಕ್ತಿಯು ಅತಿ ಪ್ರಾಮುಖ್ಯ. ನಾವು ರಾಜ್ಯ ಸಭಾಗೃಹದಲ್ಲಿ ವೈಯಕ್ತಿಕ ವ್ಯಾಪಾರ ಚಟುವಟಿಕೆಗಳನ್ನು ನಡೆಸಬಾರದು, ಅಥವಾ ಆರ್ಥಿಕ ಲಾಭಕ್ಕಾಗಿ ನಮ್ಮ ಜೊತೆ ಕ್ರೈಸ್ತರ ಶೋಷಣೆಮಾಡಬಾರದು. (ಯೋಹಾನ 2:15, 16ನ್ನು ಹೋಲಿಸಿರಿ.) ಒಂದು ವ್ಯಾಪಾರದಲ್ಲಿ ಬಂಡವಾಳ ಹೂಡುವಾಗ ಅಥವಾ ಹಣವನ್ನು ಎರವಲು ಪಡೆಯುವಾಗ ಅಥವಾ ಹಣವನ್ನು ನೀಡುವಾಗಲೂ ವಿವೇಚನಾಶಕ್ತಿಯು ಅಗತ್ಯ. “ಕ್ರೈಸ್ತರ ನಡುವಿನ ಸಾಹಸ ವ್ಯಾಪಾರ ಉದ್ಯಮಗಳ ಸೋಲುಗಳು, ಆಶಾಭಂಗಕ್ಕೆ ಮತ್ತು ಹಣಮಾಡುವ ಅಪಾಯಕಾರಿ ಯೋಜನೆಗಳೊಳಗೆ ಅವಸರದಿಂದ ಪ್ರವೇಶಿಸಿದವರ ಆತ್ಮಿಕತೆಯ ನಷ್ಟಕ್ಕೂ ನಡಿಸಿವೆ” ಎಂದು ಭಾಷಣಕರ್ತರು ಅವಲೋಕಿಸಿದರು. ಕ್ರೈಸ್ತರು ಒಬ್ಬರು ಇನ್ನೊಬ್ಬರೊಂದಿಗೆ ವ್ಯಾಪಾರವನ್ನು ಮಾಡುವುದು ತಪ್ಪಾಗಿರದಿದ್ದರೂ, ಮುನ್ಜಾಗ್ರತೆಯು ನಿಶ್ಚಯವಾಗಿಯೂ ವಿವೇಕಯುತವಾಗಿದೆ. ಮತ್ತು ಎರಡು ಪಕ್ಷಗಳ ನಡುವೆ ಒಂದು ವ್ಯಾಪಾರ ಸಂಧಾನವು ಮಾಡಲ್ಪಡುವಾಗ, ಷರತ್ತುಗಳು ಯಾವಾಗಲೂ ಬರವಣಿಗೆಯಲ್ಲಿ ಸೂಚಿಸಲ್ಪಡಬೇಕು.
“ಆತನು ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು” ಎಂಬ ಭಾಷಣದಲ್ಲಿ, ಪುರುಷರು ಮತ್ತು ಸ್ತ್ರೀಯರಿಗಾಗಿರುವ ದೇವರ ಮಟ್ಟವು ಚರ್ಚಿಸಲ್ಪಟ್ಟಿತು. ಲಿಂಗಜಾತಿಗಳ ಪಾತ್ರಗಳು ಇತಿಹಾಸದಾದ್ಯಂತ ವಿರೂಪಗೊಳಿಸಲ್ಪಟ್ಟಿವೆ. “ಹೆಚ್ಚಿನ ಜನರು ಪೌರುಷವನ್ನು ಕಠೋರ ದಬ್ಬಾಳಿಕೆ, ಗಡುಸುತನ ಅಥವಾ ಗಂಡುತನದ ಗರ್ವದೊಂದಿಗೆ ತಪ್ಪಾಗಿ ಸಮಗೊಳಿಸುತ್ತಾರೆ” ಎಂದು ಭಾಷಣಕರ್ತರು ಹೇಳಿದರು. “ಕೆಲವು ಸಂಸ್ಕೃತಿಗಳಲ್ಲಿ, ಒಬ್ಬ ಪುರುಷನು ಬಹಿರಂಗವಾಗಿ ಅಥವಾ ಖಾಸಗಿಯಾಗಿಯೂ ಅಳುವುದು ವಿರಳವಾಗಿರುವುದು ಅಥವಾ ಲಜ್ಜಾಸ್ಪದವೂ ಆಗಿರುವುದು. ಆದರೂ, ಯೋಹಾನ 11:35 ತಿಳಿಸುವುದೇನಂದರೆ, ಲಾಜರನ ಸಮಾಧಿಯ ಹೊರಗಿದ್ದ ಜನರ ಗುಂಪಿನಲ್ಲಿದ್ದಾಗ ‘ಯೇಸು ಕಣ್ಣೀರು ಬಿಟ್ಟನು.’” ಸ್ತ್ರೀಯರ ಕುರಿತಾಗಿ ಏನು? ಹೆಣ್ಣುತನವನ್ನು ಅನೇಕವೇಳೆ ದೈಹಿಕ ಆಕರ್ಷಣೆಯೊಂದಿಗೆ ಸಮಗೊಳಿಸಲಾಗುತ್ತದೆ. ಆದರೆ ಭಾಷಣಕರ್ತನು ಕೇಳಿದ್ದು: “ಒಬ್ಬ ಸ್ತ್ರೀಯು ಸುಂದರಿಯಾಗಿದ್ದರೂ, ತಿಳಿವಳಿಕೆಯ ಕೊರತೆಯುಳ್ಳವಳು ಮತ್ತು ವಾದಶೀಲಳು, ಅಣಕಿಸುವವಳು ಅಥವಾ ಅಹಂಕಾರವುಳ್ಳವಳು ಆಗಿರುವಲ್ಲಿ, ಅವಳು ನಿಜವಾಗಿಯೂ ಸುಂದರಿಯೂ ನಿಜವಾಗಿ ಸ್ತ್ರೀಸಹಜ ಗುಣವುಳ್ಳವಳಾಗಿರಸಾಧ್ಯವಿದೆಯೊ?” (ಹೋಲಿಸಿರಿ ಜ್ಞಾನೋಕ್ತಿ 11:22; 31:26.) ತಮ್ಮ ಮಾತು, ನಡತೆ, ಮತ್ತು ಕೇಶಶೈಲಿಯಲ್ಲಿ ಕ್ರೈಸ್ತ ಪುರುಷರು ಮತ್ತು ಸ್ತ್ರೀಯರು ಬೈಬಲಿನ ಮಟ್ಟಗಳನ್ನು ಅನುಸರಿಸಲು ಶ್ರಮಿಸುತ್ತಾರೆ. ಭಾಷಣಕರ್ತರು ಅಂದುದು: “ಆತ್ಮದ ಫಲವನ್ನು ಪ್ರದರ್ಶಿಸುವ ಒಬ್ಬ ಪುರುಷನನ್ನು ಗೌರವಿಸುವುದು ಸುಲಭ, ಮತ್ತು ಹಾಗೆ ಮಾಡುವ ಸ್ತ್ರೀಯನ್ನು ಪ್ರೀತಿಸುವುದು ಸುಲಭ.”—ಗಲಾತ್ಯ 5:22, 23.
ಅನಂತರದ ವಿಷಯ “ಶಾಂತಿಯ ದೇವರು ನಿಮ್ಮ ಕುರಿತಾಗಿ ಕಾಳಜಿ ವಹಿಸುತ್ತಾನೆ” ಎಂಬ ಭಾಷಣಮಾಲೆ. ಅನೇಕ ಕ್ರೈಸ್ತರಿಗೆ ಹಣಕಾಸಿನ ಚಿಂತೆಗಳಿವೆ. ಹಾಗಿದ್ದರೂ, ಯೆಹೋವನು ವಾಗ್ದಾನಿಸುವುದು: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.” (ಇಬ್ರಿಯ 13:5) ಆರ್ಥಿಕ ಕಷ್ಟಗಳ ಹೊರತೂ, ಕೆಲವರು ಆಕ್ಸಿಲಿಯರಿ ಅಥವಾ ಕ್ರಮದ ಪಯನೀಯರ್ ಸೇವೆಯನ್ನು ಪ್ರವೇಶಿಸುವ ಮೂಲಕ ಈ ವಾಗ್ದಾನದಲ್ಲಿ ಭರವಸೆಯನ್ನು ತೋರಿಸಿದ್ದಾರೆ. ಈಗ ಪಯನೀಯರ್ ಸೇವೆಯನ್ನು ಮಾಡಸಾಧ್ಯವಿರದ ಇತರರು, ಸಾಕ್ಷಿಕೊಡಲಿಕ್ಕಾಗಿ ಪ್ರತಿಯೊಂದು ಅವಕಾಶವನ್ನು ವಶಪಡಿಸಿಕೊಳ್ಳುವ ಮೂಲಕ ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡುತ್ತಾರೆ. (ಮತ್ತಾಯ 6:33) ಅಂತಹ ಪ್ರಯತ್ನಗಳೆಲ್ಲವೂ ಪ್ರಶಂಸಿಸಲ್ಪಡತಕ್ಕವುಗಳು! ನಮ್ಮ ಶುಶ್ರೂಷೆಯಲ್ಲಿ ನಮಗೆ ನೆರವು ನೀಡಲು ಮತ್ತು ನಮ್ಮ ಸಮಸ್ಯೆಗಳನ್ನು ನಿಭಾಯಿಸಲಿಕ್ಕಾಗಿ ಸಹಾಯ ಮಾಡಲು, ಯೆಹೋವನ ಸಂಸ್ಥೆಯು ನಮಗೆ ಅಸಂಖ್ಯಾತ ಪ್ರಕಾಶನಗಳನ್ನು ಒದಗಿಸಿದೆ. ನಾವು ಯೆಹೋವನ ಆತ್ಮಿಕ ಒದಗಿಸುವಿಕೆಗಳಿಗಾಗಿ ಗಣ್ಯತೆಯನ್ನು ತೋರಿಸುವಲ್ಲಿ, ಅವನು ನಮ್ಮನ್ನು ಆರ್ಥಿಕವಾಗಿ ಕೋಲಾಹಲಮಯವಾಗಿರುವ ಈ ಸಮಯಗಳಲ್ಲಿ ಶಾಂತಿಯೊಂದಿಗೆ ಆಶೀರ್ವದಿಸುವನು.—ಕೀರ್ತನೆ 29:11.
ಆ ದಿನದ, “ಕುಟುಂಬ ಜೀವನದಲ್ಲಿ ದೈವಿಕ ಶಾಂತಿಯನ್ನು ಬೆನ್ನಟ್ಟಿರಿ” ಎಂಬ ಕೊನೆಯ ಭಾಷಣದ ಸಮಾಪ್ತಿಯಲ್ಲಿ, ಅಧಿವೇಶನಕಾರರು ಕುಟುಂಬ ಸಂತೋಷದ ರಹಸ್ಯ ಎಂಬ ಹೊಸ ಪುಸ್ತಕವನ್ನು ಪಡೆಯಲು ಹರ್ಷಗೊಂಡರು. “ಈ ಪುಸ್ತಕವನ್ನು ವೈಯಕ್ತಿಕವಾಗಿ ಮತ್ತು ಕುಟುಂಬ ಗುಂಪುಗಳಾಗಿ ಶ್ರದ್ಧಾಪೂರ್ವಕವಾಗಿ ಅಭ್ಯಾಸ ಮಾಡಿರಿ,” ಎಂದು ಭಾಷಣಕರ್ತರು ಪ್ರೇರೇಪಿಸಿದರು. “ಅದರ ಬೈಬಲ್ ಆಧಾರಿತ ಸಲಹೆಯನ್ನು ಅನ್ವಯಿಸಲು ಶ್ರದ್ಧೆಯಿಂದ ಪ್ರಯತ್ನಿಸಿರಿ, ಆಗ ನಿಮ್ಮ ಕುಟುಂಬದ ಶಾಂತಿ ಮತ್ತು ಸಂತೋಷವನ್ನು ಹೆಚ್ಚಿಸುವ ಖಾತ್ರಿ ನಿಮಗಿರಬಲ್ಲದು.”
“ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು . . . ಐಕ್ಯವನ್ನು ಕಾಪಾಡಿಕೊಳ್ಳುವದಕ್ಕೆ ಆಸಕ್ತರಾಗಿರಿ”
ಎಫೆಸ 4:3ರ ಮೇಲೆ ಆಧಾರಿತವಾಗಿದ್ದು, ಇದು ಅಧಿವೇಶನದ ಕೊನೆಯ ದಿನಕ್ಕಾಗಿ ತಕ್ಕದ್ದಾದ ಶೀರ್ಷಿಕೆಯಾಗಿತ್ತು. ಲೋಕದ ಎಲ್ಲಾ ರಾಷ್ಟ್ರಗಳಿಂದ ಬಂದಿರುವ ಯೆಹೋವನ ಸಾಕ್ಷಿಗಳು, ದೇವರಿಂದ ಕಲಿಸಲ್ಪಟ್ಟವರಾಗಿದ್ದಾರೆ. ಆದುದರಿಂದ ಅವರು ಶಾಂತಿಯನ್ನು ಪ್ರೀತಿಸುತ್ತಾರೆ. ಅವರು ಯೇಸುವಿನ ಮಾದರಿಯನ್ನು ಅನುಸರಿಸುತ್ತಾರೆ ಮತ್ತು “ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊ”ಳ್ಳಲು ಪ್ರಯತ್ನಿಸುತ್ತಾರೆ.
ದೇವರ ಸಂಸ್ಥೆಯಲ್ಲಿ ಹರಡಿರುವ ಶಾಂತಿಯು, “ಯೋಗ್ಯ ರೀತಿಯ ಸಂದೇಶವಾಹಕರನ್ನು ಗುರುತಿಸುವುದು” ಎಂಬ ಭಾಷಣಮಾಲೆಯಲ್ಲಿ ಎತ್ತಿತೋರಿಸಲ್ಪಟ್ಟಿತು. ಪುರಾತನ ಇಸ್ರಾಯೇಲಿನಲ್ಲಿ ಸುಳ್ಳು ಪ್ರವಾದಿಗಳಿದ್ದರು. ಆದಾಗಲೂ, ಯೆಶಾಯ, ಯೆಹೆಜ್ಕೇಲ, ಮತ್ತು ಯೆರೆಮೀಯರಂತಹ ದೇವರ ನಿಜ ಸಂದೇಶವಾಹಕರು, ಯೆರೂಸಲೇಮಿನ ಪತನ, ದೇಶಭ್ರಷ್ಟತೆಯ ಅವಧಿ, ಮತ್ತು ದೇವರ ಜನರ ಕಟ್ಟಕಡೆಯ ಬಿಡುಗಡೆಯನ್ನು ನಿಷ್ಕೃಷ್ಟವಾಗಿ ಮುಂತಿಳಿಸಿದರು. ತದ್ರೀತಿಯ ಸನ್ನಿವೇಶವು ಇಂದು ಅಸ್ತಿತ್ವದಲ್ಲಿದೆ. ರಾಜಕೀಯ ಮತ್ತು ಸುಳ್ಳು ಧರ್ಮದ ಕ್ಷೇತ್ರಗಳಲ್ಲಿ ಸುಳ್ಳು ಸಂದೇಶವಾಹಕರು ತುಂಬಿ ತುಳುಕುತ್ತಿದ್ದಾರೆ. ಆದರೂ, ಈ ವಿಷಯಗಳ ವ್ಯವಸ್ಥೆಯ ಸಂಬಂಧದಲ್ಲಿ ತನ್ನ ಉದ್ದೇಶವನ್ನು ಘೋಷಿಸಲಿಕ್ಕಾಗಿ ಯೆಹೋವನು ತನ್ನ ಸಾಕ್ಷಿಗಳನ್ನು ಎಬ್ಬಿಸಿದ್ದಾನೆ. ನಿರ್ದಿಷ್ಟವಾಗಿ 1919ರಿಂದ, ಯೆಹೋವನ ಸೇವಕರು ದೇವರ ಸಂದೇಶವನ್ನು ಘೋಷಿಸಲಿಕ್ಕಾಗಿ ಉಪಯೋಗಿಸಲ್ಪಟ್ಟಿದ್ದಾರೆ. ಕ್ರೈಸ್ತಪ್ರಪಂಚದ ಸುಳ್ಳು ಸಂದೇಶವಾಹಕರಿಂದ ಅವರು ಎಷ್ಟು ಭಿನ್ನರಾಗಿದ್ದಾರೆ! ಅದು ತೀರಿದೆಯೆಂದು ಯೆಹೋವನು ಹೇಳುವ ತನಕ, ಈ ಕೆಲಸದಲ್ಲಿ ನಾವು ಶ್ರದ್ಧಾಪೂರ್ವಕವಾಗಿ ನಮ್ಮ ಪಾತ್ರವನ್ನು ನಿರ್ವಹಿಸೋಣ.
“ದೇವರ ವಾಕ್ಯಕ್ಕೆ ಕಿವಿಗೊಟ್ಟು ವಿಧೇಯರಾಗಿರಿ” ಎಂಬ ಭಾಷಣವು, ಶಾಸ್ತ್ರವಚನಗಳು, ಮಾರ್ಗದರ್ಶನ, ಸಾಂತ್ವನ ಮತ್ತು ನಿರೀಕ್ಷೆಯ ಅತಿ ದೊಡ್ಡ ಮೂಲವಾಗಿವೆಯೆಂಬುದನ್ನು ಒತ್ತಿಹೇಳಿತು. (ಯೆಶಾಯ 30:20, 21; ರೋಮಾಪುರ 15:4) ಇಂದಿನ ಲೋಕವು ಹೆಚ್ಚೆಚ್ಚಾಗಿ ಸ್ವಚ್ಛಂದವಾಗಿದೆ. ಆದುದರಿಂದ ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ, ದೇವರ ವಾಕ್ಯ ಮತ್ತು ಸಂಸ್ಥೆಯಿಂದ ಬರುವ ಸಲಹೆಗೆ ನಾವು ಕಿವಿಗೊಡುವ ಅಗತ್ಯವಿದೆ. ಯೆಹೋವನಿಗೆ ನಮ್ಮ ಬಲಹೀನತೆಗಳು ತಿಳಿದಿವೆ ಮತ್ತು ನಮಗೆ ಲಾಭ ತರುವಂತಹ ಮಾರ್ಗಕ್ರಮವನ್ನು ಆತನು ತನ್ನ ವಾಕ್ಯದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾನೆ. ಯೆಹೋವನು ನಮ್ಮನ್ನು ಬೆಂಬಲಿಸುತ್ತಿದ್ದಾನೆಂಬುದನ್ನು ತಿಳಿದಿರುವುದು, ಆತನು ನಮ್ಮಿಂದ ಕೇಳಿಕೊಳ್ಳುವ ಯಾವುದೇ ಕಾರ್ಯದೊಂದಿಗೆ ಮುಂದೊತ್ತುವಂತೆ ನಮಗೆ ಆತ್ಮವಿಶ್ವಾಸವನ್ನು ಕೊಡುತ್ತದೆ.
ಹಿಂಬಾಲಿಸಿದಂತಹ ಪೂರ್ಣ ಪೋಷಾಕಿನ ನಾಟಕಕ್ಕಾಗಿ ಇದು ಸಭಿಕರ ಮನಸ್ಸನ್ನು ಸಿದ್ಧಪಡಿಸಿತು. ಅದರ ಶೀರ್ಷಿಕೆಯು “ದೇವಪ್ರಭುತ್ವದ ಏರ್ಪಾಡುಗಳನ್ನು ಏಕೆ ಗೌರವಿಸಬೇಕು?” ಎಂದಾಗಿತ್ತು. ಗಿದ್ಯೋನನ ಕುರಿತಾದ ಬೈಬಲ್ ವೃತ್ತಾಂತವನ್ನು ಒಂದು ಆಧಾರವಾಗಿ ಬಳಸುತ್ತಾ, ಈ ನಿರೂಪಣೆಯು, ನಾವು ದೇವರ ಉಪದೇಶಗಳನ್ನು ಅನುಸರಿಸಬೇಕು ಮತ್ತು ದೇವಪ್ರಭುತ್ವ ಸಲಹೆಗೆ ಬದಲಿಯಾಗಿ ನಮ್ಮ ಸ್ವಂತ ಆಲೋಚನೆಯನ್ನು ಇಡಬಾರದು ಅಥವಾ ಅದಕ್ಕೆ ಪಕ್ಕಹೆಜ್ಜೆಯಿಡಬಾರದು ಎಂಬ ಒಂದು ಪ್ರಬಲವಾದ ಪಾಠವನ್ನು ಬಲವಾಗಿ ಒತ್ತಿಹೇಳಿತು.
ಸಾರ್ವಜನಿಕ ಭಾಷಣವು, “ಕಟ್ಟಕಡೆಗೆ ನಿಜ ಶಾಂತಿ!—ಯಾವ ಮೂಲದಿಂದ?” ಎಂಬ ವಿಷಯದ ಕುರಿತಾಗಿತ್ತು. ದೇವರು ವಾಗ್ದಾನಿಸುವಂತಹ ಶಾಂತಿಯು, ಈ ಲೋಕವು ಊಹಿಸಸಾಧ್ಯವಿರುವಂತಹ ಯಾವುದೇ ವಿಷಯವನ್ನು ಮೀರಿ ಹೋಗುತ್ತದೆ. “ನಿಜ ಶಾಂತಿಯೆಂದರೆ, ಪ್ರತಿ ದಿನ ಶಾಂತಿ,” ಎಂದು ಭಾಷಣಕರ್ತರು ಹೇಳಿದರು. “ದೇವರ ಶಾಂತಿಯೆಂದರೆ, ಅಸ್ವಸ್ಥತೆ, ವೇದನೆ, ದುಃಖ ಮತ್ತು ಮರಣವಿಲ್ಲದ ಒಂದು ಲೋಕ ಎಂದರ್ಥ.” ಯೆಹೋವನು “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ” ಎಂದು ಬೈಬಲ್ ನಮಗೆ ಹೇಳುತ್ತದೆ. (ಕೀರ್ತನೆ 46:9) ಆತನು ಇದನ್ನು ಹೇಗೆ ಮಾಡುವನು? ಯುದ್ಧದ ಪ್ರಚೋದಕನಾದ ಪಿಶಾಚನಾದ ಸೈತಾನನನ್ನು ತೆಗೆದುಹಾಕುವ ಮೂಲಕವೇ. (ಪ್ರಕಟನೆ 20:1-3) ಇದು ದೀನರಿಗೆ ‘ದೇಶವನ್ನು ಅನುಭವಿಸಿ ಮಹಾಸೌಖ್ಯದಿಂದ ಆನಂದಿಸಲು’ ದಾರಿಯನ್ನು ತೆರೆಯುವುದು.—ಕೀರ್ತನೆ 37:11.
ಆ ವಾರಕ್ಕಾಗಿರುವ ಕಾವಲಿನಬುರುಜು ಅಭ್ಯಾಸ ಲೇಖನದ ಸಾರಾಂಶದ ನಂತರ, ಅಧಿವೇಶನದ ಕೊನೆಯ ಭಾಷಣವು ಸಾದರಪಡಿಸಲ್ಪಟ್ಟಿತು. ಅದು “ದೈವಿಕ ಶಾಂತಿಯ ಸಂದೇಶವಾಹಕರೋಪಾದಿ ಮುನ್ನಡೆಯುತ್ತಿರುವುದು” ಎಂಬ ಶೀರ್ಷಿಕೆಯುಳ್ಳದ್ದಾಗಿದ್ದು, ನಮ್ಮ ಸಾರುವಿಕೆಯ ಕೆಲಸವು ಅಪೂರ್ವವೂ, ತುರ್ತಿನದ್ದೂ ಆಗಿದೆಯೆಂದು ಈ ಪ್ರೇರಕ ಭಾಷಣವು ಒತ್ತಿಹೇಳಿತು. ವಿಶ್ರಮಿಸುವ, ಕಾಲಕಳೆಯುವ, ಅಥವಾ ತಪ್ಪಾದಂತಹ ವಿಚಾರಗಳಿಗೆ ಹಿಂದಿರುಗಿಹೋಗುವಂತಹ ಸಮಯವು ಇದಲ್ಲ. ನಮಗೆ ಏನು ಅಗತ್ಯವಾಗಿದೆಯೊ—ದೇವರ ಸಂದೇಶ, ಆತನ ಪವಿತ್ರಾತ್ಮ ಮತ್ತು ಆತನ ಪ್ರೀತಿಯ ದೇವಪ್ರಭುತ್ವ ಸಂಸ್ಥೆಯಿಂದ ಬರುವಂತಹ ಅಸಂಖ್ಯಾತ ಒದಗಿಸುವಿಕೆಗಳು—ಅದರೊಂದಿಗೆ ನಾವು ಸಜ್ಜಿತರಾಗಿದ್ದೇವೆ. ಹೀಗಿರುವುದರಿಂದ, ಯೆಹೋವನ ಸೇವಕರೋಪಾದಿ, ದೈವಿಕ ಶಾಂತಿಯ ಸಂದೇಶವಾಹಕರೋಪಾದಿ ನಾವು ಮುಂದೊತ್ತುತ್ತಾ ಇರೋಣ!
[ಪುಟ 9 ರಲ್ಲಿರುವ ಚೌಕ/ಚಿತ್ರಗಳು]
ಕುಟುಂಬಗಳಿಗಾಗಿ ಒಂದು ಪ್ರೀತಿಪರ ಒದಗಿಸುವಿಕೆ
“ದೈವಿಕ ಶಾಂತಿಯ ಸಂದೇಶವಾಹಕರು” ಜಿಲ್ಲಾ ಅಧಿವೇಶನದ ಎರಡನೆಯ ದಿನದಂದು ಹಾಜರಿದ್ದವರು, ಕುಟುಂಬ ಸಂತೋಷದ ರಹಸ್ಯ ಎಂಬ ಶೀರ್ಷಿಕೆಯುಳ್ಳ ಹೊಸ ಪ್ರಕಾಶನವನ್ನು ಪಡೆದುಕೊಳ್ಳಲು ರೋಮಾಂಚಿತರಾದರು. ದೇವರನ್ನು ಪ್ರೀತಿಸುವ ಎಲ್ಲಾ ಕುಟುಂಬಗಳಿಗೆ ಲಾಭ ತರಲಿರುವ ಶಾಸ್ತ್ರೀಯ ಮಾಹಿತಿಯನ್ನು ಈ ಪುಸ್ತಕವು ಒಳಗೊಂಡಿದೆ.
ಅಮೆರಿಕದ ಕನೆಕ್ಟಿಕಟ್ನ ಒಬ್ಬ ಹಿರಿಯನು ಹೇಳಿಕೆಯನ್ನಿತ್ತದ್ದು: “ಜೂನ್ 15ರಂದು ನಾವು ನಮ್ಮ ಕುಟುಂಬ ಸಂತೋಷ ಪುಸ್ತಕವನ್ನು ಪಡೆದುಕೊಂಡೆವು. ಜೂನ್ 16ರೊಳಗೆ, ನಾನು ಅದನ್ನು ಅರ್ಧದಷ್ಟು ಓದಿದ್ದೆ. 17ರಂದು, ನಾವು ಅದರಲ್ಲಿ ನಮ್ಮ ಪ್ರಥಮ ಕುಟುಂಬ ಅಭ್ಯಾಸವನ್ನು ನಡಿಸಿದೆವು, ಮತ್ತು ನಾವು ತುಂಬ ಉತ್ತೇಜಿಸಲ್ಪಟ್ಟೆವು! ಅದೇ ದಿನದಂದು, ನಾನು ಪುಸ್ತಕವನ್ನು ಓದಿ ಮುಗಿಸಿದೆ. ಈ ಉತ್ತಮವಾದ ಪ್ರಕಾಶನವು, ಯಾರು ಅದರ ಲಾಭವನ್ನು ಪಡೆದುಕೊಳ್ಳುತ್ತಾರೊ ಅವರಿಗೆ ಅಮೂಲ್ಯವಾದದ್ದಾಗಿ ಪರಿಣಮಿಸುವುದೆಂಬುದು ನಿಸ್ಸಂಶಯ. ಪುಸ್ತಕದ ನಿಷ್ಕಾಪಟ್ಯ ಮತ್ತು ಕಾಲೋಚಿತವಾದ ಮಾಹಿತಿಯು, ‘ನಂಬಿಗಸ್ತನೂ ವಿವೇಕಿಯೂ ಆದ ಆಳು ಹೊತ್ತುಹೊತ್ತಿಗೆ ಆಹಾರವನ್ನು’ ಕೊಡುತ್ತಿದ್ದಾನೆ ಮತ್ತು ಈ ಕಷ್ಟಸಾಧ್ಯವಾದ ಸಮಯಗಳಲ್ಲಿ ನಮ್ಮ ಅಗತ್ಯಗಳ ಕುರಿತು ಚೆನ್ನಾಗಿ ಅರಿವುಳ್ಳವನಾಗಿದ್ದಾನೆಂಬುದಕ್ಕೆ ಹೆಚ್ಚಿನ ರುಜುವಾತಾಗಿದೆ.”—ಮತ್ತಾಯ 24:45-47.
[ಪುಟ 7 ರಲ್ಲಿರುವ ಚಿತ್ರ]
ದೇವರು ಏನನ್ನು ಅಪೇಕ್ಷಿಸುತ್ತಾನೆಂಬುದನ್ನು ಅಬಾಲ ವೃದ್ಧರು ಏಕಪ್ರಕಾರವಾಗಿ ತಿಳಿಯಲು ಬಯಸುತ್ತಾರೆ