ನಿಮ್ಮ ಜೀವನದಲ್ಲಿ ಯಾವುದು ಪರಮಪ್ರಧಾನ?
“ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು.”—ಕೀರ್ತನೆ 143:8.
1. ಮಾನವ ಬೆನ್ನಟ್ಟುವಿಕೆಗಳು ಮತ್ತು ಸಾಧನೆಗಳ ಬಗ್ಗೆ ರಾಜ ಸೊಲೊಮೋನನು ಏನೆಂದು ತೀರ್ಮಾನಿಸಿದನು?
ಜೀವನವು ಚಟುವಟಿಕೆಗಳಿಂದ ಮತ್ತು ಚಿಂತೆಗಳಿಂದ ತುಂಬಿರುತ್ತದೆಂದು ಎಲ್ಲರಂತೆ ಪ್ರಾಯಶಃ ನೀವೂ ತಿಳಿದಿದ್ದೀರಿ. ಅದರ ಕುರಿತು ಯೋಚಿಸುವಾಗ, ಅವುಗಳಲ್ಲಿ ಕೆಲವು ಆವಶ್ಯಕವೆಂದು ನೀವು ಗುರುತಿಸಬಲ್ಲಿರಿ. ಇತರ ಚಟುವಟಿಕೆಗಳು ಮತ್ತು ಚಿಂತೆಗಳು ಕಡಮೆ ಪ್ರಾಮುಖ್ಯ ಅಥವಾ ವ್ಯರ್ಥವೂ ಹೌದು. ಇದನ್ನು ನೀವು ಗ್ರಹಿಸಿರುತ್ತೀರೆಂಬ ನಿಜತ್ವವು, ಜೀವಿಸಿರುವ ಅತಿ ವಿವೇಕಿಗಳಾದ ಪುರುಷರಲ್ಲಿ ಒಬ್ಬನಾದ ರಾಜ ಸೊಲೊಮೋನನೊಂದಿಗೆ ನೀವು ಹೊಂದಿಕೆಯಲ್ಲಿದ್ದೀರಿ ಎಂಬುದನ್ನು ಅರ್ಥೈಸುತ್ತದೆ. ಜೀವನದ ಚಟುವಟಿಕೆಗಳನ್ನು ಪೂರ್ತಿಯಾಗಿ ಪುನರ್ವಿಮರ್ಶಿಸಿದ ಬಳಿಕ ಅವನು ತೀರ್ಮಾನಿಸಿದ್ದು: “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.” (ಪ್ರಸಂಗಿ 2:4-9, 11; 12:13) ಇದರಲ್ಲಿ ಇಂದು ನಮಗಾಗಿ ಯಾವ ಸೂಚಿತಾರ್ಥವಿದೆ?
2. ದೇವಭಯವುಳ್ಳ ಜನರು ಸ್ವತಃ ಯಾವ ಮೂಲಭೂತ ಪ್ರಶ್ನೆಯನ್ನು ಕೇಳಿಕೊಳ್ಳಬೇಕು, ಇದು ಯಾವ ಸಂಬಂಧಿತ ಪ್ರಶ್ನೆಗಳಿಗೆ ನಡೆಸುತ್ತದೆ?
2 ನೀವು, “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳ”ಬಯಸುವಲ್ಲಿ ಸ್ವತಃ ಈ ಪಂಥಾಹ್ವಾನದ ಪ್ರಶ್ನೆಯನ್ನು ಕೇಳಿಕೊಳ್ಳಿರಿ, ‘ನನ್ನ ಜೀವನದಲ್ಲಿ ಯಾವುದು ಪರಮಪ್ರಧಾನ?’ ನಿಜ, ನೀವು ದಿನಾಲೂ ಈ ಪ್ರಶ್ನೆಯ ಕುರಿತು ಚಿಂತನೆ ಮಾಡಲಿಕ್ಕಿಲ್ಲವಾದರೂ ಈಗ ಪರಿಗಣಿಸಬಾರದೇಕೆ? ವಾಸ್ತವವೇನಂದರೆ, ಕೆಲವು ಸಂಬಂಧಿತ ಪ್ರಶ್ನೆಗಳನ್ನು, ‘ನಾನು ನನ್ನ ಕೆಲಸ, ಅಥವಾ ವೃತ್ತಿ ಅಥವಾ ಪ್ರಾಪಂಚಿಕ ವಿಷಯಗಳ ಮೇಲೆ ಅನುಚಿತವಾದ ಪ್ರಾಧಾನ್ಯವನ್ನು ಹಾಕುತ್ತಿರಬಹುದೆ? ಆ ದೃಶ್ಯದಲ್ಲಿ ನನ್ನ ಮನೆ, ಕುಟುಂಬ ಮತ್ತು ಪ್ರಿಯರು ಎಲ್ಲಿ ಹೊಂದಿಕೊಳ್ಳುತ್ತಾರೆ?’ ಎಂಬಂತಹ ಪ್ರಶ್ನೆಗಳನ್ನು ಇದು ಮನಸ್ಸಿಗೆ ತರುತ್ತದೆ. ಒಬ್ಬ ಯುವ ವ್ಯಕ್ತಿಯು ಹೀಗೆ ಕೇಳಬಹುದು, ‘ವಿದ್ಯಾಭ್ಯಾಸವು ನನ್ನ ಗಮನವನ್ನೂ ಸಮಯವನ್ನೂ ಎಷ್ಟರ ಮಟ್ಟಿಗೆ ತೆಗೆದುಕೊಳ್ಳುತ್ತದೆ? ನಿಜವಾಗಿಯೂ, ಒಂದು ಹವ್ಯಾಸ, ಆಟ, ಅಥವಾ ಮನೋರಂಜನೆಯ ಯಾವುದೋ ಒಂದು ರೂಪ ಅಥವಾ ಯಂತ್ರಕಲಾ ಶಾಸ್ತ್ರವು ನನ್ನ ಪ್ರಧಾನ ಅಭಿರುಚಿಯಾಗಿದೆಯೊ?’ ಮತ್ತು ನಮ್ಮ ವಯಸ್ಸು ಅಥವಾ ಪರಿಸ್ಥಿತಿ ಏನೇ ಆಗಿರಲಿ, ‘ದೇವರನ್ನು ಸೇವಿಸುವುದಕ್ಕೆ ನನ್ನ ಜೀವನದಲ್ಲಿ ಯಾವ ಸ್ಥಾನವಿದೆ?’ ಎಂದು ನಾವು ಯೋಗ್ಯವಾಗಿ ಪ್ರಶ್ನಿಸಿಕೊಳ್ಳಬೇಕು. ಆದ್ಯತೆಗಳ ಆವಶ್ಯಕತೆಯ ಕುರಿತು ನೀವು ಒಪ್ಪುವುದು ಸಂಭಾವ್ಯ. ಆದರೆ ಅವುಗಳನ್ನು ವಿವೇಕದಿಂದ ಕ್ರಮಪಡಿಸಿ ಇಡಲು ನಾವು ಹೇಗೆ ಮತ್ತು ಎಲ್ಲಿಂದ ಸಹಾಯವನ್ನು ಪಡೆಯಬಲ್ಲೆವು?
3. ಆದ್ಯತೆಗಳನ್ನಿಡುವುದು ಕ್ರೈಸ್ತರಿಗೆ ಏನನ್ನು ಒಳಗೊಳ್ಳುತ್ತದೆ?
3 “ಪರಮಪ್ರಧಾನ” ಎಂಬುದಕ್ಕೆ ಬೇರೆಲ್ಲವುಗಳಿಗಿಂತ ಮೊದಲಾಗಿ ಬರುವಂತಹದ್ದು ಅಥವಾ ಪ್ರಥಮವಾಗಿ ಪರಿಗಣಿಸಲು ಅಗತ್ಯವಿರುವಂತಹದ್ದು ಎಂಬ ಮೂಲಾರ್ಥವಿದೆ. ನೀವು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿರಲಿ ಅಥವಾ ಅವರೊಂದಿಗೆ ಕೂಡಿಕೊಂಡಿರುವ ದೇವರ ವಾಕ್ಯದ ಲಕ್ಷಾಂತರ ಯಥಾರ್ಥ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿರಲಿ, ಈ ಸತ್ಯವನ್ನು ಪರಿಗಣಿಸಿರಿ: “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; ಆಕಾಶದ ಕೆಳಗೆ ನಡೆಯುವ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.” (ಪ್ರಸಂಗಿ 3:1) ನ್ಯಾಯವಾಗಿ, ಅದರಲ್ಲಿ ನಿಮ್ಮ ಕುಟುಂಬ ಸಂಬಂಧಗಳಿಗೆ ಪ್ರೀತಿಯ ಚಿಂತೆಯನ್ನು ತೋರಿಸುವುದು ಸೇರಿರುತ್ತದೆ. (ಕೊಲೊಸ್ಸೆ 3:18-21) ಇದರಲ್ಲಿ ಐಹಿಕ ಕೆಲಸದ ಮೂಲಕ ನಿಮ್ಮ ಮನೆವಾರ್ತೆಗಾಗಿ ಪ್ರಾಮಾಣಿಕವಾದ ಒದಗಿಸುವಿಕೆಯನ್ನು ಮಾಡುವುದು ಸೇರಿದೆ. (2 ಥೆಸಲೊನೀಕ 3:10-12; 1 ತಿಮೊಥೆಯ 5:8) ಮತ್ತು ಕ್ರಮದಲ್ಲಿ ಬದಲಾವಣೆಗಾಗಿ, ಒಂದು ಹವ್ಯಾಸಕ್ಕೊ, ಸಾಂದರ್ಭಿಕ ವಿನೋದಕ್ಕೊ, ಮನೋರಂಜನೆಗೊ, ನೀವು ಸಮಯವನ್ನು ತೆಗೆದುಕೊಳ್ಳಬಹುದು. (ಮಾರ್ಕ 6:31ನ್ನು ಹೋಲಿಸಿರಿ.) ಆದರೆ ಗಂಭೀರ ಯೋಚನೆಯ ಅನಂತರ, ಇವುಗಳಲ್ಲಿ ಯಾವುದೂ ಪರಮಪ್ರಧಾನವಲ್ಲವೆಂದು ನೀವು ನೋಡುವುದಿಲ್ಲವೊ? ಹೆಚ್ಚು ಪ್ರಾಮುಖ್ಯವಾದ ಇನ್ನಾವುದೊ ಒಂದು ವಿಷಯವಿದೆ.
4. ನಾವು ಆದ್ಯತೆಗಳನ್ನಿಡುವುದಕ್ಕೆ ಫಿಲಿಪ್ಪಿ 1:9, 10 ಹೇಗೆ ಸಂಬಂಧಿಸುತ್ತದೆ?
4 ಬೈಬಲಿನ ಮಾರ್ಗದರ್ಶಕ ಮೂಲಸೂತ್ರಗಳು, ಆದ್ಯತೆಗಳನ್ನಿಡಲು ಮತ್ತು ವಿವೇಕಪ್ರದವಾದ ನಿರ್ಣಯಗಳನ್ನು ಮಾಡಲು ಬೆಲೆಬಾಳುವ ಸಹಾಯಕಗಳೆಂಬುದನ್ನು ನೀವು ಪ್ರಾಯಶಃ ಗ್ರಹಿಸುತ್ತೀರಿ. ಉದಾಹರಣೆಗೆ, ಫಿಲಿಪ್ಪಿ 1:9, 10, (NW)ರಲ್ಲಿ ಕ್ರೈಸ್ತರು, “ನಿಷ್ಕೃಷ್ಟ ಜ್ಞಾನ ಮತ್ತು ಪೂರ್ಣ ವಿವೇಚನೆಯಲ್ಲಿ ಇನ್ನೂ ಹೆಚ್ಚೆಚ್ಚಾಗಿ ಸಮೃದ್ಧಿ”ಹೊಂದಬೇಕೆಂದು ಪ್ರಚೋದಿಸಲ್ಪಡುತ್ತಾರೆ. ಯಾವ ಉದ್ದೇಶದಿಂದ? ಅಪೊಸ್ತಲ ಪೌಲನು ಕೂಡಿಸಿದ್ದು: “ನೀವು ಹೆಚ್ಚು ಪ್ರಮುಖ ವಿಷಯಗಳನ್ನು ಖಚಿತಪಡಿಸಿಕೊಳ್ಳುವಂತೆ.” ಅದು ಅರ್ಥವುಳ್ಳದ್ದಾಗಿರುವುದಿಲ್ಲವೊ? ನಿಷ್ಕೃಷ್ಟ ಜ್ಞಾನದ ಆಧಾರದ ಮೇರೆಗೆ, ಒಬ್ಬ ವಿವೇಚನೆಯುಳ್ಳ ಕ್ರೈಸ್ತನು ಜೀವನದಲ್ಲಿ ಪ್ರಥಮಾಸಕ್ತಿ—ಪರಮಪ್ರಧಾನ ಸಂಗತಿ—ಯಾವುದಾಗಿರಬೇಕೆಂದು ನಿರ್ಣಯಿಸಬಲ್ಲನು.
ಯಾವುದು ಪರಮಪ್ರಧಾನವೊ ಅದಕ್ಕೊಂದು ಮಾದರಿ
5. ಕ್ರೈಸ್ತರಿಗಾಗಿ ಇಡಲ್ಪಟ್ಟ ಮಾದರಿಯನ್ನು ವರ್ಣಿಸುವುದರಲ್ಲಿ, ಯೇಸುವಿನ ಜೀವನದಲ್ಲಿ ಯಾವುದು ಪರಮಪ್ರಧಾನವಾಗಿತ್ತೆಂದು ಶಾಸ್ತ್ರಗಳು ಹೇಗೆ ತೋರಿಸುತ್ತವೆ?
5 ಅಪೊಸ್ತಲ ಪೇತ್ರನ ಮಾತುಗಳಲ್ಲಿ ನಾವು ಜ್ಞಾನದ ಒಂದು ಅಮೂಲ್ಯಾಂಶವನ್ನು ಕಂಡುಕೊಳ್ಳುತ್ತೇವೆ: “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.” (1 ಪೇತ್ರ 2:21) ಹೌದು, ಜೀವನದಲ್ಲಿ ಯಾವುದು ಪರಮಪ್ರಧಾನವೆಂಬುದರ ಸುಳಿವುಗಳಿಗಾಗಿ, ಯೇಸು ಕ್ರಿಸ್ತನು ಅದರ ವಿಷಯ ಏನು ಯೋಚಿಸಿದನೆಂಬುದನ್ನು ನಾವು ಪರೀಕ್ಷಿಸಸಾಧ್ಯವಿದೆ. ಕೀರ್ತನೆ 40:8 ಅವನ ವಿಷಯದಲ್ಲಿ ಪ್ರವಾದನಾರೂಪವಾಗಿ ಹೇಳಿದ್ದು: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ.” ಅದೇ ಯೋಚನೆಯನ್ನು ಅವನು ಹೀಗೆ ಹೇಳಿದನು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.”—ಯೋಹಾನ 4:34; ಇಬ್ರಿಯ 12:2.
6. ದೇವರ ಚಿತ್ತವನ್ನು ಪ್ರಥಮವಾಗಿಡುವುದರಲ್ಲಿ ಯೇಸುವಿಗೆ ಸಿಕ್ಕಿದಂತಹದ್ದೇ ಫಲಗಳು ನಮಗೆ ಹೇಗೆ ದೊರೆಯಬಲ್ಲವು?
6 ಆ ಕೀಲಿ ಕೈಯನ್ನು—ದೇವರ ಚಿತ್ತವನ್ನು ಮಾಡುವುದು—ಗಮನಿಸಿರಿ. ಯೇಸುವಿನ ಮಾದರಿಯು, ಅವನ ಶಿಷ್ಯರು ಯೋಗ್ಯವಾಗಿ ಯಾವುದನ್ನು ತಮ್ಮ ಜೀವನದಲ್ಲಿ ಪರಮಪ್ರಧಾನವಾಗಿ ಮಾಡಬೇಕೆಂಬುದನ್ನು ಒತ್ತಿಹೇಳುತ್ತದೆ, ಏಕೆಂದರೆ ಅವನು, “ಪರಿಪೂರ್ಣವಾಗಿ ಕಲಿಸಲ್ಪಡುವ ಪ್ರತಿಯೊಬ್ಬನು ತನ್ನ ಬೋಧಕನಂತಾಗುವನು,” ಎಂದು ಹೇಳಿದನು. (ಲೂಕ 6:40, NW) ಮತ್ತು ಯೇಸು ತನ್ನ ಪಿತನು ಉದ್ದೇಶಿಸಿದ ಮಾರ್ಗದಲ್ಲಿ ನಡೆದಂತೆ, ದೇವರ ಚಿತ್ತವನ್ನು ಪರಮಪ್ರಧಾನವಾಗಿ ಇಡುವುದರಲ್ಲಿ “ಪರಿಪೂರ್ಣಸಂತೋಷ” ಇತ್ತೆಂಬುದನ್ನು ತೋರಿಸಿದನು. (ಕೀರ್ತನೆ 16:11; ಅ. ಕೃತ್ಯಗಳು 2:28) ಅದು ಪರೋಕ್ಷವಾಗಿ ಏನನ್ನು ಸೂಚಿಸುತ್ತದೆಂಬುದನ್ನು ನೀವು ನೋಡುತ್ತೀರೊ? ಯೇಸುವಿನ ಹಿಂಬಾಲಕರು ದೇವರ ಚಿತ್ತವನ್ನು ಮಾಡುವುದನ್ನು ತಮ್ಮ ಜೀವಿತಗಳಲ್ಲಿ ಪರಮಪ್ರಧಾನವೆಂದು ಆರಿಸಿಕೊಳ್ಳುವಾಗ, ಅವರು “ಪರಿಪೂರ್ಣಸಂತೋಷ” ಮತ್ತು ವಾಸ್ತವವಾದ ಜೀವವನ್ನು ಅನುಭವಿಸುವರು. (1 ತಿಮೊಥೆಯ 6:19) ಹೀಗೆ, ನಮ್ಮ ಜೀವಿತಗಳಲ್ಲಿ ದೇವರ ಚಿತ್ತದ ಮಾಡುವಿಕೆಗೆ ಆದ್ಯತೆಯನ್ನು ಕೊಡಲು ಅನೇಕ ಕಾರಣಗಳಿವೆ.
7, 8. ಯೇಸು ಯಾವ ಪರೀಕ್ಷೆಗಳನ್ನು ಎದುರಿಸಿದನು, ಮತ್ತು ನಾವು ಇದರಿಂದ ಏನನ್ನು ಕಲಿಯಬಲ್ಲೆವು?
7 ಯೇಸುವು ದೇವರ ಚಿತ್ತವನ್ನು ಮಾಡಲು ತನ್ನ ಒಪ್ಪಿಸಿಕೊಡುವಿಕೆಯನ್ನು ಸಂಕೇತಿಸಿದೊಡನೆ, ಪಿಶಾಚನು ಅವನನ್ನು ತಿರುಗಿಸಿಬಿಡಲು ಪ್ರಯತ್ನಿಸಿದನು. ಹೇಗೆ? ಮೂರು ಕ್ಷೇತ್ರಗಳಲ್ಲಿ ತಂದ ಶೋಧನೆಯಿಂದಲೇ. ಪ್ರತಿಯೊಂದು ಬಾರಿ, ಯೇಸುವು ಶಾಸ್ತ್ರಾನುಸಾರವಾಗಿ, ದ್ವಯಾರ್ಥವಿಲ್ಲದ ಮಾತುಗಳಲ್ಲಿ ಉತ್ತರಕೊಟ್ಟನು. (ಮತ್ತಾಯ 4:1-10) ಆದರೆ ಇನ್ನಷ್ಟು ಪರೀಕ್ಷೆಗಳು—ಹಿಂಸೆ, ಅಪಹಾಸ್ಯ, ಯೂದನಿಂದ ದ್ರೋಹ, ಸುಳ್ಳು ಅಪವಾದಗಳು ಮತ್ತು ಬಳಿಕ ಯಾತನೆಯ ಕಂಬದ ಮೇಲಿನ ಮರಣ—ಅವನಿಗಾಗಿ ಕಾದಿದ್ದವು. ಆದರೂ, ಈ ಪರೀಕ್ಷೆಗಳಾವುವೂ ದೇವರ ನಿಷ್ಠಾವಂತ ಕುಮಾರನನ್ನು ಮಾರ್ಗಚ್ಯುತಿ ಹೊಂದುವಂತೆ ಮಾಡಲಿಲ್ಲ. ಸಂದಿಗ್ಧ ಹಂತವೊಂದರಲ್ಲಿ ಯೇಸು, “ಹೇಗೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ . . . ನಿನ್ನ ಚಿತ್ತವೇ ಆಗಲಿ” ಎಂದು ಪ್ರಾರ್ಥನೆಮಾಡಿದನು. (ಮತ್ತಾಯ 26:39, 42) ನಮಗಾಗಿ ಬಿಟ್ಟುಹೋದ ಮಾದರಿಯ ಈ ಅಂಶದಿಂದ ನಮ್ಮಲ್ಲಿ ಪ್ರತಿಯೊಬ್ಬನು ಆಳವಾಗಿ ಪ್ರಚೋದಿಸಲ್ಪಟ್ಟು, ನಾವು “ಪ್ರಾರ್ಥನೆಯಲ್ಲಿ ಪಟ್ಟುಹಿಡಿಯು”ವಂತೆ ಮಾಡಬಾರದೊ?—ರೋಮಾಪುರ 12:12, NW.
8 ಹೌದು, ನಾವು ಜೀವನದಲ್ಲಿ ನಮ್ಮ ಆದ್ಯತೆಗಳನ್ನಿಡುವಾಗ, ದೈವಿಕ ಮಾರ್ಗದರ್ಶನ—ವಿಶೇಷವಾಗಿ ನಾವು ಸತ್ಯದ ವೈರಿಗಳನ್ನು ಮತ್ತು ದೇವರ ಚಿತ್ತದ ವಿರೋಧಿಗಳನ್ನು ಎದುರಿಸುವಲ್ಲಿ—ಪ್ರತ್ಯೇಕವಾಗಿ ಸಹಾಯಕರವಾಗಿದೆ. ಶತ್ರುವಿರೋಧವನ್ನು ಅನುಭವಿಸಿದಾಗ ನಂಬಿಗಸ್ತ ಅರಸನಾದ ದಾವೀದನು ಮಾರ್ಗದರ್ಶನಕ್ಕಾಗಿ ಬೇಡಿಕೊಂಡದ್ದನ್ನು ಮನಸ್ಸಿಗೆ ತಂದುಕೊಳ್ಳಿರಿ. ನಾವು ಕೀರ್ತನೆ 143ರ ಒಂದು ಭಾಗವನ್ನು ಪರಿಗಣಿಸುವಾಗ ಇದನ್ನು ನೋಡುವೆವು. ನಾವು ಯೆಹೋವನೊಂದಿಗೆ ನಮ್ಮ ವೈಯಕ್ತಿಕ ಸಂಬಂಧವನ್ನು ಬಲಪಡಿಸಿಕೊಂಡು, ನಮ್ಮ ಜೀವಿತಗಳಲ್ಲಿ ದೇವರ ಚಿತ್ತವನ್ನು ಮಾಡುವುದನ್ನು ಅಗ್ರಸ್ಥಾನದಲ್ಲಿಡಲು ಹೇಗೆ ಹುರಿದುಂಬಿಸಲ್ಪಡಲು ಸಾಧ್ಯವಿದೆಯೆಂಬುದನ್ನು ವಿವೇಚಿಸಲು ಇದು ಸಹಾಯಮಾಡಬೇಕು.
ಯೆಹೋವನು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನೆ ಹಾಗೂ ಉತ್ತರಿಸುತ್ತಾನೆ
9. (ಎ) ದಾವೀದನು ಪಾಪಿಯಾಗಿದ್ದರೂ, ಅವನ ಮಾತುಗಳೂ ಕ್ರಿಯೆಗಳೂ ಏನನ್ನು ತೋರಿಸುತ್ತವೆ? (ಬಿ) ಯಾವುದು ಸರಿಯಾಗಿದೆಯೋ ಅದನ್ನು ಮಾಡುವುದನ್ನು ನಾವು ಏಕೆ ಬಿಟ್ಟುಬಿಡಬಾರದು?
9 ಪಾಪಪೂರ್ಣ ಮರ್ತ್ಯನಾಗಿದ್ದರೂ, ಯೆಹೋವನು ತನ್ನ ಮೊರೆಗೆ ಕಿವಿಗೊಡುವನೆಂಬ ನಂಬಿಕೆ ದಾವೀದನಿಗಿತ್ತು. ಅವನು ದೀನಭಾವದಿಂದ ಬೇಡಿಕೊಂಡದ್ದು: “ಯೆಹೋವನೇ, ನನ್ನ ಪ್ರಾರ್ಥನೆಯನ್ನು ಆಲಿಸು; ನನ್ನ ಬಿನ್ನಹಕ್ಕೆ ಕಿವಿಗೊಡು; ನಿನ್ನ ನೀತಿಸತ್ಯತೆಗಳಿಗನುಸಾರವಾಗಿ ಸದುತ್ತರವನ್ನು ದಯಪಾಲಿಸು. ನಿನ್ನ ಸೇವಕನನ್ನು ವಿಚಾರಣೆಗೆ ಗುರಿಮಾಡಬೇಡ; ನಿನ್ನ ಸನ್ನಿಧಿಯಲ್ಲಿ ಯಾವ ಜೀವಿಯೂ ನೀತಿವಂತನಲ್ಲ.” (ಕೀರ್ತನೆ 143:1, 2) ದಾವೀದನಿಗೆ ತನ್ನ ಅಪರಿಪೂರ್ಣತೆಯ ಪ್ರಜ್ಞೆಯಿದ್ದರೂ ಅವನ ಹೃದಯವು ದೇವರ ಕಡೆಗೆ ಸಂಪೂರ್ಣವಾಗಿತ್ತು. ಹೀಗೆ, ತನಗೆ ನೀತಿಯಲ್ಲಿ ಉತ್ತರವು ದೊರೆಯುವುದೆಂಬ ದೃಢತೆಯು ಅವನಿಗಿತ್ತು. ಇದು ನಮ್ಮನ್ನು ಪ್ರೋತ್ಸಾಹಿಸುವುದಿಲ್ಲವೊ? ದೇವರ ನೀತಿಯನ್ನು ನಾವು ಮುಟ್ಟಲಾರೆವಾದರೂ, ನಮ್ಮ ಹೃದಯಗಳು ಆತನ ಕಡೆಗೆ ಸಂಪೂರ್ಣವಾಗಿರುವಲ್ಲಿ ಆತನು ನಮಗೆ ಕಿವಿಗೊಡುವನೆಂದು ನಾವು ದೃಢತೆಯಿಂದಿರಬಲ್ಲೆವು. (ಪ್ರಸಂಗಿ 7:20; 1 ಯೋಹಾನ 5:14) ಪ್ರಾರ್ಥನೆಯಲ್ಲಿ ಪಟ್ಟುಹಿಡಿದಿರುವಾಗ, ನಾವು ಈ ದುಷ್ಟ ದಿನಗಳಲ್ಲಿ, “ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸುವ” ಉದ್ದೇಶವುಳ್ಳವರಾಗಿರಬೇಕು.—ರೋಮಾಪುರ 12:20, 21; ಯಾಕೋಬ 4:7.
10. ದಾವೀದನನ್ನು ಚಿಂತೆಗೀಡುಮಾಡಿದ್ದ ಅವಧಿಗಳು ಏಕೆ ಇದ್ದವು?
10 ನಮಗಿರುವಂತೆಯೇ, ದಾವೀದನಿಗೆ ವೈರಿಗಳಿದ್ದರು. ಸೌಲನಿಂದ ತಲೆ ತಪ್ಪಿಸಿಕೊಂಡಿದ್ದಾಗ ಏಕಾಂತವಾದ, ದುರ್ಗಮ ಸ್ಥಳಗಳಲ್ಲಿ ಆಶ್ರಯ ಹುಡುಕಲು ನಿರ್ಬಂಧಿಸಲ್ಪಟ್ಟಾಗಲೇ ಆಗಲಿ, ಶತ್ರುಗಳಿಂದ ಪೀಡಿಸಲ್ಪಟ್ಟ ರಾಜನಾಗಿದ್ದಾಗಲೇ ಆಗಲಿ, ದಾವೀದನನ್ನು ಚಿಂತೆಗೀಡುಮಾಡಿದ್ದ ಸಮಯಾವಧಿಗಳಿದ್ದವು. ಇದು ಅವನನ್ನು ಹೇಗೆ ಬಾಧಿಸಿತೆಂದು ಅವನು ವರ್ಣಿಸಿದನು: “ವೈರಿಯು ನನ್ನ ಪ್ರಾಣವನ್ನು ಹಿಂಸಿಸಿದ್ದಾನೆ; . . . ಕಾರ್ಗತ್ತಲೆಯಲ್ಲಿ ನನ್ನನ್ನು ಹಾಕಿದ್ದಾನೆ; . . . ನನ್ನ ಆತ್ಮವು ಕುಂದಿಹೋಗಿದೆ; ನನ್ನ ಮನಸ್ಸು ಬೆರಗಾಗಿದೆ.” (ಕೀರ್ತನೆ 143:3, 4) ತದ್ರೀತಿಯ ಅನಿಸಿಕೆಯಾಗಲು ನಿಮಗೆ ಕಾರಣವಿತ್ತೊ?
11. ದೇವರ ಆಧುನಿಕ ದಿನದ ಸೇವಕರು ಯಾವ ಚಿಂತೆಯ ಕ್ಷಣಗಳನ್ನು ಎದುರಿಸಿದ್ದಾರೆ?
11 ವೈರಿ ಒತ್ತಡ, ಕಠಿನ ಆರ್ಥಿಕ ಕಷ್ಟದೆಸೆಯ ಕಾರಣ ಬರುವ ಪರೀಕ್ಷೆಗಳು, ಗಂಭೀರ ಕಾಯಿಲೆ, ಅಥವಾ ಇತರ ಚಿಂತಾಜನಕ ಸಮಸ್ಯೆಗಳು, ದೇವರ ಜನರಲ್ಲಿ ಕೆಲವರು, ನಿರಾಶಾಜನಕ ಸ್ಥಿತಿಯನ್ನು ಅವಲಂಬಿಸುವಂತೆ ನಡೆಸಿವೆ. ಸಂದರ್ಭಾನುಸಾರ ಅವರ ಹೃದಯಗಳು ಸಹ ಬೆರಗುಬಡಿದುಹೋದಂತಿದ್ದವು. ಅದು, ಅವರು ವೈಯಕ್ತಿಕವಾಗಿ ಹೀಗೆ ಕೂಗಿ ಹೇಳಿದ್ದಾರೋ ಎಂಬಂತಿದೆ: “ನಮ್ಮನ್ನು ಅನೇಕ ಕಷ್ಟನಷ್ಟಗಳಿಗೆ ಗುರಿಮಾಡಿದ ನೀನೇ ಪುನಃ ಉಜ್ಜೀವಿಸಮಾಡು; . . . ನನಗೆ ಅಭಿಮುಖನಾಗಿ ಸಂತೈಸು.” (ಕೀರ್ತನೆ 71:20, 21) ಅವರಿಗೆ ಹೇಗೆ ಸಹಾಯ ಮಾಡಲಾಗಿದೆ?
ವೈರಿ ಪ್ರಯತ್ನಗಳನ್ನು ಎದುರಿಸುವ ವಿಧ
12. ಅಪಾಯ ಮತ್ತು ಪರೀಕ್ಷೆಗಳನ್ನು ರಾಜ ದಾವೀದನು ಹೇಗೆ ನಿಭಾಯಿಸಿದನು?
12 ಅಪಾಯ ಮತ್ತು ಮಹಾ ಪರೀಕ್ಷೆಗಳಿಂದ ಸುತ್ತುವರಿಯಲ್ಪಟ್ಟಾಗ ದಾವೀದನು ಏನು ಮಾಡಿದನೆಂದು ಕೀರ್ತನೆ 143:5 ಸೂಚಿಸುತ್ತದೆ: “ಹಳೇ ದಿನಗಳನ್ನು ನೆನಸಿಕೊಳ್ಳುತ್ತೇನೆ; ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ; ನಿನ್ನ ಕೈಕೆಲಸಗಳನ್ನು ಸ್ಮರಿಸುತ್ತೇನೆ.” ದೇವರು ತನ್ನ ಸೇವಕರೊಂದಿಗೆ ಮಾಡಿದ ವ್ಯವಹಾರಗಳು ಮತ್ತು ಸ್ವತಃ ತಾನು ಅನುಭವಿಸಿದ ವಿಮೋಚನೆಯನ್ನು ದಾವೀದನು ಮನಸ್ಸಿಗೆ ತಂದುಕೊಂಡನು. ಯೆಹೋವನು ತನ್ನ ಮಹಾನಾಮದ ಸಲುವಾಗಿ ಮಾಡಿದ ಕಾರ್ಯಗಳನ್ನು ಅವನು ಧ್ಯಾನಿಸಿದನು. ಹೌದು, ದಾವೀದನು ದೇವರ ಕೆಲಸಗಳಲ್ಲಿ ಆಸಕ್ತಿ ವಹಿಸಿದನು.
13. ನಾವು ಪರೀಕ್ಷೆಗಳನ್ನು ಎದುರಿಸುವಾಗ, ಪುರಾತನ ಮತ್ತು ಆಧುನಿಕ ನಂಬಿಗಸ್ತ ಸೇವಕರ ಮಾದರಿಗಳ ಕುರಿತು ಯೋಚಿಸುವುದು ನಾವು ಸಹಿಸಿಕೊಳ್ಳುವಂತೆ ಹೇಗೆ ಸಹಾಯಮಾಡುವುದು?
13 ದೇವರು ತನ್ನ ಜನರೊಂದಿಗೆ ವ್ಯವಹರಿಸಿರುವುದನ್ನು ನಾವು ಅನೇಕ ವೇಳೆ ಜ್ಞಾಪಿಸಿಕೊಂಡಿಲ್ಲವೊ? ನಿಶ್ಚಯವಾಗಿಯೂ! ಇದರಲ್ಲಿ ಕ್ರೈಸ್ತಪೂರ್ವ ಸಮಯಗಳ ‘ಸಾಕ್ಷಿಗಳ ಮಹಾಮೇಘವು’ ಮಾಡಿದ ದಾಖಲೆಯು ಒಳಗೂಡಿದೆ. (ಇಬ್ರಿಯ 11:32-38; 12:1) ಒಂದನೆಯ ಶತಮಾನದ ಅಭಿಷಿಕ್ತ ಕ್ರೈಸ್ತರನ್ನು ಸಹ, ಅವರು “ಹಿಂದಿನ ದಿನಗಳನ್ನು” ಮತ್ತು ಅವರು ಸಹಿಸಿಕೊಂಡಿದ್ದುದ್ದನ್ನು “ನೆನಪಿಗೆ ತಂದು”ಕೊಳ್ಳುವಂತೆ ಪ್ರೋತ್ಸಾಹಿಸಲಾಯಿತು. (ಇಬ್ರಿಯ 10:32-34) ಆಧುನಿಕ ಸಮಯಗಳಲ್ಲಿ ದೇವರ ಸೇವಕರ ಅನುಭವಗಳ, ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್) ಪುಸ್ತಕದಲ್ಲಿ ಹೇಳಲ್ಪಟ್ಟಂತಹ ಅನುಭವಗಳ ಕುರಿತೇನು?a ಅಲ್ಲಿ ಮತ್ತು ಬೇರೆಡೆಗಳಲ್ಲಿ ದಾಖಲೆಯಾಗಿರುವ ವೃತ್ತಾಂತಗಳು, ಯೆಹೋವನು ತನ್ನ ಜನರಿಗೆ, ಅವರು ನಿಷೇಧಗಳು, ಸೆರೆಮನೆವಾಸಗಳು, ಜನರಿಂದ ದೊಂಬಿ, ಕೂಟ ಶಿಬಿರಗಳು ಮತ್ತು ಗುಲಾಮ ಚಾಕರಿಯ ಶಿಬಿರಗಳು—ಇವುಗಳನ್ನು ಸಹಿಸಿಕೊಳ್ಳುವಂತೆ ಹೇಗೆ ಸಹಾಯಮಾಡಿದ್ದಾನೆಂದು ನೆನಪಿಸಿಕೊಳ್ಳುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುತ್ತವೆ. ಬುರುಂಡಿ, ರುವಾಂಡ, ಲೈಬೀರಿಯ ಮತ್ತು ಹಿಂದಿನ ಯುಗೊಸ್ಲಾವಿಯದಂತಹ ಯುದ್ಧಛಿದ್ರಿತ ದೇಶಗಳಲ್ಲಿ ಪರೀಕ್ಷೆಗಳು ಬಂದಿವೆ. ವಿರೋಧವು ಕಾಣಿಸಿಕೊಂಡಾಗ, ಯೆಹೋವನೊಂದಿಗೆ ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳುತ್ತಿರುವ ಕಾರಣ ದೇವರ ಸೇವಕರು ತಾಳಿಕೊಂಡರು. ತಮ್ಮ ಜೀವಿತಗಳಲ್ಲಿ ಆತನ ಚಿತ್ತವನ್ನು ಮಾಡುವುದನ್ನು ಪರಮಪ್ರಧಾನವಾಗಿಟ್ಟವರನ್ನು ಆತನ ಹಸ್ತವು ಆಧಾರಿಸಿತು.
14. (ಎ) ನಮ್ಮದನ್ನು ಹೋಲಬಹುದಾದ ಪರಿಸ್ಥಿತಿಯಲ್ಲಿ ದೇವರು ಒಬ್ಬ ವ್ಯಕ್ತಿಯನ್ನು ಬೆಂಬಲಿಸಿದ ಒಂದು ಮಾದರಿಯು ಯಾವುದು? (ಬಿ) ಆ ಮಾದರಿಯಿಂದ ನೀವೇನು ಕಲಿಯುತ್ತೀರಿ?
14 ಆದರೂ, ಅಂತಹ ಪಾಶವೀಯ ದುರಾಚಾರವನ್ನು ನೀವು ಅನುಭವಿಸಿಲ್ಲವೆಂದು ನೀವು ಉತ್ತರಿಸಬಹುದು ಮತ್ತು ಎಂದೂ ಹಾಗೆ ಅನುಭವಿಸುವ ಸಂಭವನೀಯತೆಯೂ ಇಲ್ಲವೆಂದು ನಿಮಗನಿಸಬಹುದು. ಆದರೆ ತನ್ನ ಜನರಿಗೆ ದೇವರು ನೀಡುವ ಬೆಂಬಲವು, ಕೆಲವರು ನಾಟಕೀಯವೆಂದು ದೃಷ್ಟಿಸಬಹುದಾದ ಪರಿಸ್ಥಿತಿಗಳಲ್ಲಿಯೇ ಸದಾ ಆಗಿರುವುದಿಲ್ಲ. ಆತನು “ಸಾಮಾನ್ಯ” ಪರಿಸ್ಥಿತಿಗಳಲ್ಲಿದ್ದ “ಸಾಧಾರಣ” ವ್ಯಕ್ತಿಗಳನ್ನು ಬೆಂಬಲಿಸಿದ್ದಾನೆ. ಅನೇಕ ಉದಾಹರಣೆಗಳಲ್ಲಿ ಒಂದೇ ಒಂದು ಉದಾಹರಣೆಯು ಇಲ್ಲಿದೆ: ಡಿಸೆಂಬರ್ 1, 1996ರ ಕಾವಲಿನಬುರುಜು ಪತ್ರಿಕೆಯಲ್ಲಿ ಪೆನಲಪಿ ಮಾಕ್ರೀಸ್ ಹೇಳಿದ ವೃತ್ತಾಂತವು ಸೇರಿತ್ತು. ಕ್ರೈಸ್ತ ಸಮಗ್ರತೆಯ ಎಂತಹ ಒಂದು ಅತ್ಯುತ್ಕೃಷ್ಟ ಮಾದರಿ! ಅವರು ನೆರೆಯವರಿಂದ ಏನನ್ನು ಸಹಿಸಿಕೊಂಡರು, ಕಠಿನ ದುರ್ಬಲತೆಗಳೊಂದಿಗೆ ಹೇಗೆ ಹೋರಾಡಿದರು ಮತ್ತು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಮುಂದುವರಿಯಲು ಯಾವ ಪ್ರಯತ್ನಗಳನ್ನು ಹೂಡಿದರೆಂಬುದನ್ನು ನೀವು ಮನಸ್ಸಿಗೆ ತಂದುಕೊಳ್ಳಬಲ್ಲಿರೊ? ಮಿಟಲೀನ್ನಲ್ಲಿ ಅವರಿಗಾದ ಪ್ರತಿಫಲದಾಯಕ ಅನುಭವದ ಕುರಿತೇನು? ಮುಖ್ಯಾರ್ಥವೇನಂದರೆ, ನೀವು ಅಂತಹ ಉದಾಹರಣೆಗಳನ್ನು, ಆದ್ಯತೆಗಳನ್ನಿಡಲು, ನಮ್ಮ ಜೀವಿತಗಳಲ್ಲಿ ದೇವರ ಚಿತ್ತವನ್ನು ಮಾಡುವುದನ್ನು ಪ್ರಥಮವಾಗಿಡಲು ನಮ್ಮೆಲ್ಲರಿಗೂ ಕೊಡಲ್ಪಟ್ಟಿರುವ ಸಹಾಯಗಳೋಪಾದಿ ಪರಿಗಣಿಸುತ್ತೀರೊ?
15. ನಾವು ಮನನ ಮಾಡಬೇಕಾದ ಯೆಹೋವನ ಕೃತ್ಯಗಳಲ್ಲಿ ಕೆಲವು ಯಾವುವು?
15 ದಾವೀದನು ಮಾಡಿದಂತೆ, ಯೆಹೋವನ ಚಟುವಟಿಕೆಗಳನ್ನು ಮನನ ಮಾಡುವುದು ನಮ್ಮನ್ನು ಬಲಪಡಿಸುತ್ತದೆ. ತನ್ನ ಉದ್ದೇಶವನ್ನು ಸಾಧಿಸುವುದರಲ್ಲಿ, ಯೆಹೋವನು ತನ್ನ ಕುಮಾರನ ಮರಣ, ಪುನರುತ್ಥಾನ ಮತ್ತು ಮಹಿಮೆಗೇರಿಸುವಿಕೆಯ ಮೂಲಕ ರಕ್ಷಣೆಗಾಗಿ ಒದಗಿಸುವಿಕೆಯನ್ನು ಮಾಡಿದನು. (1 ತಿಮೊಥೆಯ 3:16) ಆತನು ತನ್ನ ಸ್ವರ್ಗೀಯ ರಾಜ್ಯವನ್ನು ಸ್ಥಾಪಿಸಿ, ಸೈತಾನನನ್ನೂ ಅವನ ದೆವ್ವಗಳನ್ನೂ ಸ್ವರ್ಗದಿಂದ ಹೊರಡಿಸಿ, ಇಲ್ಲಿ ಭೂಮಿಯ ಮೇಲೆ ಸತ್ಯಾರಾಧನೆಯನ್ನು ಪುನಃಸ್ಥಾಪಿಸಿದ್ದಾನೆ. (ಪ್ರಕಟನೆ 12:7-12) ಆತನು ಒಂದು ಆತ್ಮಿಕ ಪ್ರಮೋದವನವನ್ನು ರಚಿಸಿ, ತನ್ನ ಜನರನ್ನು ವೃದ್ಧಿಯಿಂದ ಆಶೀರ್ವದಿಸಿದ್ದಾನೆ. (ಯೆಶಾಯ 35:1-10; 60:22) ಆತನ ಜನರು ಈಗ, ಮಹಾ ಸಂಕಟವು ತಲೆದೋರುವ ಮುಂಚೆಯೇ, ಅಂತಿಮ ಸಾಕ್ಷಿಯೊಂದನ್ನು ಕೊಡುತ್ತಿದ್ದಾರೆ. (ಪ್ರಕಟನೆ 14:6, 7) ಹೌದು, ಮನನ ಮಾಡಲು ನಮಗೆ ಬಹಳಷ್ಟು ವಿಷಯಗಳಿವೆ.
16. ನಾವು ಯಾವುದರಲ್ಲಿ ಆಸಕ್ತರಾಗಿರುವಂತೆ ಪ್ರೋತ್ಸಾಹಿಸಲ್ಪಡುತ್ತೇವೆ, ಮತ್ತು ಇದು ನಮ್ಮಲ್ಲಿ ಯಾವುದನ್ನು ಅಚ್ಚೊತ್ತುವುದು?
16 ಮಾನವ ಪ್ರಯತ್ನಗಳಲ್ಲಿ ತಲ್ಲೀನರಾಗಿರುವ ಬದಲಿಗೆ, ದೇವರ ಕೈಕೆಲಸಗಳಲ್ಲಿ ನಮ್ಮನ್ನು ಆಸಕ್ತರನ್ನಾಗಿಟ್ಟುಕೊಳ್ಳುವುದು, ಯೆಹೋವನ ಪ್ರಯೋಗಿತ ಶಕ್ತಿಯು ಅನಿರೋಧಿತವಾಗಿದೆಯೆಂಬ ಭಾವನೆಯನ್ನು ನಮ್ಮಲ್ಲಿ ಅಚ್ಚೊತ್ತುತ್ತದೆ. ಆದರೂ, ಆ ಕೆಲಸಗಳು, ಆಕಾಶದಲ್ಲಿರುವ ಮತ್ತು ಇಲ್ಲಿ ಭೂಮಿಯ ಮೇಲಿರುವ ಸೃಷ್ಟಿಯ ಆಶ್ಚರ್ಯಕರವಾದ ಭೌತಿಕ ಕೃತ್ಯಗಳಿಗೆ ಸೀಮಿತವಾಗಿರುವುದಿಲ್ಲ. (ಯೋಬ 37:14; ಕೀರ್ತನೆ 19:1; 104:24) ಆತನ ಆಶ್ಚರ್ಯಕರವಾದ ಕೃತ್ಯಗಳಲ್ಲಿ, ಪುರಾತನ ಕಾಲದ ತಾನಾದುಕೊಂಡ ಜನರ ಅನುಭವಗಳಲ್ಲಿ ಪ್ರದರ್ಶಿಸಲ್ಪಟ್ಟಿರುವಂತೆ, ವೈರಿ ಶೋಷಕರಿಂದ ತನ್ನ ಜನರನ್ನು ವಿಮೋಚಿಸಿದ ಕೃತ್ಯಗಳೂ ಸೇರಿವೆ.—ವಿಮೋಚನಕಾಂಡ 14:31; 15:6.
ಯಾವುದರಲ್ಲಿ ನಡೆಯಬೇಕೊ ಆ ಮಾರ್ಗವನ್ನು ತಿಳಿದಿರುವುದು
17. ದಾವೀದನಿಗೆ ಯೆಹೋವನು ಎಷ್ಟು ವಾಸ್ತವವಾಗಿದ್ದನು, ಮತ್ತು ಇದರಿಂದ ನಾವು ಹೇಗೆ ಪುನರಾಶ್ವಾಸನೆ ಪಡೆಯಬಲ್ಲೆವು?
17 ಜೀವದ ತೇವವು ಒಣಗಿಹೋಗದಂತೆ, ಸಹಾಯಕ್ಕಾಗಿ ದಾವೀದನು ಪ್ರಾರ್ಥಿಸಿದನು: “ಕೈಯೊಡ್ಡಿ ಬೇಡುತ್ತೇನೆ; ಒಣನೆಲವು ನೀರಿಗಾಗಿ ಹೇಗೋ ಹಾಗೆಯೇ ನನ್ನ ಆತ್ಮವು ನಿನಗಾಗಿ ತವಕಪಡುತ್ತದೆ. ಯೆಹೋವನೇ, ಬೇಗನೆ ಸದುತ್ತರವನ್ನು ದಯಪಾಲಿಸು; ನನ್ನ ಆತ್ಮವು ಕುಂದಿಹೋಗಿದೆ. ನೀನು ವಿಮುಖನಾದರೆ ಸಮಾಧಿಯಲ್ಲಿ ಸೇರಿದವರಿಗೆ ನಾನು ಸಮಾನನಾಗಿರುವೆನು.” (ಕೀರ್ತನೆ 143:6, 7) ಒಬ್ಬ ಪಾಪಿಯಾಗಿದ್ದ ದಾವೀದನು, ದೇವರಿಗೆ ತನ್ನ ಸ್ಥಿತಿಯ ಅರಿವಿದೆಯೆಂದು ತಿಳಿದಿದ್ದನು. (ಕೀರ್ತನೆ 31:7) ಕೆಲವೊಮ್ಮೆ ನಮ್ಮ ಆತ್ಮಿಕತೆಯು ಅತಿ ಕೆಳಮಟ್ಟಕ್ಕೆ ಇಳಿದಿದೆಯೆಂದು ನಮಗೂ ಅನಿಸಬಹುದು. ಆದರೆ ಸನ್ನಿವೇಶವು ಆಶಾರಹಿತವಾಗಿರುವುದಿಲ್ಲ. ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುವ ಯೆಹೋವನು ನಮ್ಮನ್ನು ಪ್ರೀತಿಯ ಹಿರಿಯರಿಂದ, ಕಾವಲಿನಬುರುಜು ಲೇಖನಗಳಿಂದ ಅಥವಾ ನಮಗಾಗಿಯೇ ರಚಿಸಲ್ಪಟ್ಟಿವೆಯೊ ಎಂಬಂತಿರುವ ಕೂಟದ ಭಾಗಗಳಿಂದ ಚೈತನ್ಯಗೊಳಿಸುವ ಮೂಲಕ ನಮ್ಮ ಪುನಃಸ್ಥಾಪನೆಯನ್ನು ವೇಗಗೊಳಿಸಬಹುದು.—ಯೆಶಾಯ 32:1, 2.
18, 19. (ಎ) ಯೆಹೋವನಿಗೆ ನಮ್ಮ ಶ್ರದ್ಧಾಪೂರ್ವಕವಾದ ಬಿನ್ನಹವು ಏನಾಗಿರಬೇಕು? (ಬಿ) ನಾವು ಯಾವುದರ ಕುರಿತು ನಿಶ್ಚಿತರಾಗಿರಬಲ್ಲೆವು?
18 ಯೆಹೋವನಲ್ಲಿ ನಮಗಿರುವ ಭರವಸೆಯು ನಾವು ಹೀಗೆ ಬೇಡಿಕೊಳ್ಳುವಂತೆ ನಮ್ಮನ್ನು ಪ್ರಚೋದಿಸುತ್ತದೆ: “ನಿನ್ನ ಕೃಪೆಯು ನನಗೆ ಪ್ರಕಟವಾಗಲಿ; ನಿನ್ನಲ್ಲಿ ಭರವಸವಿಟ್ಟಿದ್ದೇನಲ್ಲಾ. ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು.” (ಕೀರ್ತನೆ 143:8) ಗ್ರೀಕ್ ದ್ವೀಪವೊಂದರಲ್ಲಿ ಒಬ್ಬೊಂಟಿಗರಾಗಿದ್ದ ಸಹೋದರಿ ಮಾಕ್ರೀಸ್ ಅವರನ್ನು ಆತನು ನಿರಾಶೆಗೊಳಪಡಿಸಿದನೊ? ಹಾಗಾದರೆ, ನೀವು ಆತನ ಚಿತ್ತವನ್ನು ಮಾಡುವುದನ್ನು ನಿಮ್ಮ ಜೀವಿತದಲ್ಲಿ ಪರಮಪ್ರಧಾನವಾಗಿ ಇಡುವಲ್ಲಿ ಆತನು ನಿಮ್ಮನ್ನು ನಿರಾಶೆಗೊಳಪಡಿಸುವನೊ? ಪಿಶಾಚನೂ ಅವನ ಸಿಬ್ಬಂದಿಗಳೂ ದೇವರ ರಾಜ್ಯವನ್ನು ಘೋಷಿಸುವ ನಮ್ಮ ಕೆಲಸವನ್ನು ತಡೆಯಲು ಅಥವಾ ಪೂರ್ತಿಯಾಗಿ ನಿಲ್ಲಿಸಲು ಇಷ್ಟಪಡುವರು. ನಾವು ಸತ್ಯಾರಾಧನೆಯು ಸಾಮಾನ್ಯವಾಗಿ ಅನುಮತಿಸಲ್ಪಡುವ ದೇಶಗಳಲ್ಲಿ ಸೇವೆಮಾಡುತ್ತಿರಲಿ, ಅದು ನಿರೋಧಿಸಲ್ಪಟ್ಟಿರುವ ದೇಶಗಳಲ್ಲಿ ಸೇವೆಮಾಡುತ್ತಿರಲಿ, ನಮ್ಮ ಐಕಮತ್ಯದ ಪ್ರಾರ್ಥನೆಗಳು ದಾವೀದನ ಬೇಡಿಕೆಯೊಂದಿಗೆ ಹೊಂದಿಕೆಯಲ್ಲಿರುತ್ತವೆ: “ಯೆಹೋವನೇ, ನಿನ್ನನ್ನೇ ಮರೆಹೊಕ್ಕಿದ್ದೇನೆ; ಶತ್ರುಗಳಿಂದ ನನ್ನನ್ನು ಬಿಡಿಸು.” (ಕೀರ್ತನೆ 143:9) ಆತ್ಮಿಕ ಆಪತ್ತಿನೆದುರು ನಮಗಿರುವ ಭದ್ರತೆಯು, ಸರ್ವೋನ್ನತನ ರಹಸ್ಯ ಸ್ಥಾನದಲ್ಲಿ ವಾಸಿಸುವುದರಲ್ಲಿ ಆಧಾರಿಸಿದೆ.—ಕೀರ್ತನೆ 91:1.
19 ಯಾವುದು ಪರಮಪ್ರಧಾನವೆಂಬುದರ ಕುರಿತ ನಮ್ಮ ನಿಶ್ಚಿತಾಭಿಪ್ರಾಯವು ಸ್ಥಿರವಾದ ಆಧಾರದ ಮೇಲಿದೆ. (ರೋಮಾಪುರ 12:1, 2) ಆದುದರಿಂದ, ಮಾನವ ವಿಷಯಗಳ ಯೋಜನೆಯಲ್ಲಿ ಯಾವುದು ಪ್ರಾಮುಖ್ಯವೆಂದು ಲೋಕವು ಯೋಚಿಸುತ್ತದೊ, ಅದನ್ನು ಅದು ನಿಮ್ಮ ಮೇಲೆ ಹೇರಲು ಮಾಡುವ ಪ್ರಯತ್ನಗಳನ್ನು ಪ್ರತಿಭಟಿಸಿರಿ. ನಿಮ್ಮ ಜೀವನದ ಪ್ರತಿಯೊಂದು ಅಂಶದಲ್ಲಿ, ಯಾವುದು ಪರಮಪ್ರಧಾನವೆಂದು ನಿಮಗೆ ತಿಳಿದಿದೆಯೊ—ದೇವರ ಚಿತ್ತವನ್ನು ಮಾಡುವುದು—ಅದನ್ನು ಪ್ರತಿಬಿಂಬಿಸುವುದನ್ನು ಮುಂದುವರಿಸಿರಿ.—ಮತ್ತಾಯ 6:10; 7:21.
20. (ಎ) ಕೀರ್ತನೆ 143:1-9ರಲ್ಲಿ ದಾವೀದನ ಕುರಿತು ನಾವೇನನ್ನು ಕಲಿತೆವು? (ಬಿ) ಇಂದು ಕ್ರೈಸ್ತರು ದಾವೀದನ ಮನೋಭಾವವನ್ನು ಹೇಗೆ ಪ್ರತಿಬಿಂಬಿಸುತ್ತಾರೆ?
20 ಕೀರ್ತನೆ 143ರ ಮೊದಲಿನ ಒಂಬತ್ತು ವಚನಗಳು, ಯೆಹೋವನೊಂದಿಗಿನ ದಾವೀದನ ನಿಕಟವಾದ ವೈಯಕ್ತಿಕ ಸಂಬಂಧವನ್ನು ಒತ್ತಿಹೇಳುತ್ತವೆ. ವೈರಿಗಳಿಂದ ಸುತ್ತುವರಿಯಲ್ಪಟ್ಟಾಗ, ಮಾರ್ಗದರ್ಶನಕ್ಕಾಗಿ ಅವನು ತಡೆಯಿಲ್ಲದೆ ದೇವರನ್ನು ಬೇಡಿಕೊಂಡನು. ಅವನು ತನ್ನ ಹೃದಯವನ್ನು ತೋಡಿಕೊಂಡು, ಸರಿಯಾದ ಮಾರ್ಗದಲ್ಲಿ ನಡೆಯಲು ಸಹಾಯವನ್ನು ಕೋರಿದನು. ಭೂಮಿಯ ಮೇಲಿರುವ ಆತ್ಮಾಭಿಷಿಕ್ತ ಉಳಿಕೆಯವರ ಹಾಗೂ ಅವರ ಸಂಗಾತಿಗಳ ವಿಷಯದಲ್ಲಿಯೂ ಇದು ತದ್ರೀತಿಯದ್ದಾಗಿದೆ. ಅವರು ಮಾರ್ಗದರ್ಶನಕ್ಕಾಗಿ ಬೇಡಿಕೊಳ್ಳುವಾಗ ಯೆಹೋವನೊಂದಿಗಿನ ತಮ್ಮ ಸಂಬಂಧವನ್ನು ಅಮೂಲ್ಯವಾದುದೆಂದೆಣಿಸುತ್ತಾರೆ. ಪಿಶಾಚನಿಂದ ಮತ್ತು ಲೋಕದಿಂದ ಬರುವ ಒತ್ತಡಗಳ ಹೊರತೂ, ದೇವರ ಚಿತ್ತವನ್ನು ಮಾಡುವುದನ್ನು ಅವರು ಅಗ್ರಸ್ಥಾನದಲ್ಲಿಡುತ್ತಾರೆ.
21. ನಾವು ಇತರರಿಗೆ ಅವರ ಜೀವಿತಗಳಲ್ಲಿ ಯಾವುದು ಪರಮಪ್ರಧಾನವಾಗಿರಬೇಕೆಂದು ಕಲಿಸಬೇಕಾದರೆ, ನಾವು ಉತ್ತಮ ಮಾದರಿಯನ್ನಿಡುವುದು ಏಕೆ ಪ್ರಾಮುಖ್ಯ?
21 ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಿನ ಅಭ್ಯಾಸವನ್ನು ಮಾಡುತ್ತಿರುವ ಲಕ್ಷಾಂತರ ಜನರು, ದೇವರ ಚಿತ್ತವನ್ನು ಮಾಡುವುದು ಪರಮಪ್ರಧಾನವೆಂಬುದನ್ನು ಮಾನ್ಯಮಾಡುವುದು ಅವಶ್ಯ. ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದ 13ನೆಯ ಅಧ್ಯಾಯವನ್ನು, ಯಾವುದು ವಾಕ್ಯಕ್ಕೆ ವಿಧೇಯರಾಗಿರುವುದರಲ್ಲಿ ಒಳಗೊಂಡಿರುವ ಮೂಲತತ್ವಗಳನ್ನು ಒತ್ತಿಹೇಳುತ್ತದೊ, ಆ ಅಧ್ಯಾಯವನ್ನು ಚರ್ಚಿಸುವಾಗ ಇದನ್ನು ಅವರು ತಿಳಿಯುವಂತೆ ನಾವು ಸಹಾಯಮಾಡಬಲ್ಲೆವು.b ನಾವು ಅವರಿಗೆ ಏನನ್ನು ಕಲಿಸುತ್ತೇವೊ ಅದು ನಮ್ಮಲ್ಲಿ ಆದರ್ಶೀಕರಿಸಿರುವಂತೆ ಅವರು ನೋಡಬೇಕೆಂಬುದು ನಿಶ್ಚಯ. ಸಾಪೇಕ್ಷವಾಗಿ ತುಸು ಸಮಯಾವಧಿಯ ಬಳಿಕ, ಅವರು ಕೂಡ ತಾವು ನಡೆಯಬೇಕಾದ ಮಾರ್ಗವನ್ನು ಅರಿತುಕೊಳ್ಳುವರು. ಈ ಲಕ್ಷಾಂತರ ಜನರು ತಮ್ಮ ಜೀವಿತಗಳಲ್ಲಿ ಯಾವುದು ಅತಿ ಪ್ರಧಾನ ಪ್ರಮುಖತೆಯದ್ದಾಗಿರಬೇಕೆಂಬುದನ್ನು ವೈಯಕ್ತಿಕವಾಗಿ ಗ್ರಹಿಸುವಾಗ, ಅನೇಕರು ಸಮರ್ಪಣೆ ಮತ್ತು ದೀಕ್ಷಾಸ್ನಾನದ ಹೆಜ್ಜೆಗಳನ್ನು ತೆಗೆದುಕೊಳ್ಳುವಂತೆ ಪ್ರಚೋದಿಸಲ್ಪಡುವರು. ಆ ಬಳಿಕ, ಅವರು ಜೀವಮಾರ್ಗದಲ್ಲಿ ನಡೆಯುತ್ತ ಹೋಗುವಂತೆ ಸಭೆಯು ಅವರಿಗೆ ಸಹಾಯಮಾಡಬಲ್ಲದು.
22. ಮುಂದಿನ ಲೇಖನದಲ್ಲಿ ಯಾವ ಪ್ರಶ್ನೆಗಳನ್ನು ಪರಿಗಣಿಸಲಾಗುವುದು?
22 ದೇವರ ಚಿತ್ತವು ತಮ್ಮ ಜೀವಿತಗಳಲ್ಲಿ ಅತ್ಯಂತ ಪ್ರಮುಖತೆಯ ವಿಷಯವಾಗಿರಬೇಕೆಂಬುದನ್ನು ಅನೇಕರು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಆದರೆ, ಯೆಹೋವನು ತನ್ನ ಚಿತ್ತವನ್ನು ಮಾಡುವುದನ್ನು ತನ್ನ ಸೇವಕರಿಗೆ ಹೇಗೆ ಪ್ರಗತಿಪರವಾಗಿ ಕಲಿಸುತ್ತಾನೆ? ಇದು ಅವರಿಗೆ ಯಾವ ಪ್ರಯೋಜನಗಳನ್ನು ತರುತ್ತದೆ? ಈ ಪ್ರಶ್ನೆಗಳನ್ನು, ಪ್ರಧಾನ ವಚನವಾದ ಕೀರ್ತನೆ 143:10ರ ಚರ್ಚೆಯೊಂದಿಗೆ ಮುಂದಿನ ಲೇಖನದಲ್ಲಿ ಪರಿಗಣಿಸಲಾಗುವುದು.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ 1993ರಲ್ಲಿ ಪ್ರಕಾಶಿತವಾಯಿತು.
b 1995ರಲ್ಲಿ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
ನಿಮ್ಮ ಉತ್ತರವೇನು?
◻ ಫಿಲಿಪ್ಪಿ 1:9, 10ನ್ನು ಅನ್ವಯಿಸಿಕೊಳ್ಳುವ ಮೂಲಕ, ನಾವು ಹೇಗೆ ಆದ್ಯತೆಗಳನ್ನಿಡಬಲ್ಲೆವು?
◻ ತನ್ನ ಜೀವನದಲ್ಲಿ ಯಾವುದು ಪರಮಪ್ರಧಾನವಾಗಿತ್ತೆಂದು ಯೇಸು ಹೇಗೆ ತೋರಿಸಿದನು?
◻ ದಾವೀದನು ಪರೀಕ್ಷೆಗೊಳಗಾಗಿದ್ದಾಗ, ಅವನು ನಡಿಸಿದ ಕ್ರಿಯೆಗಳಿಂದ ನಾವೇನನ್ನು ಕಲಿಯಬಲ್ಲೆವು?
◻ ಕೀರ್ತನೆ 143:1-9 ಇಂದು ನಮಗೆ ಯಾವ ವಿಧದಲ್ಲಿ ಸಹಾಯಮಾಡುತ್ತದೆ?
◻ ನಮ್ಮ ಜೀವಿತಗಳಲ್ಲಿ ಯಾವುದು ಪರಮಪ್ರಧಾನವಾಗಿರಬೇಕು?
[ಪುಟ 10 ರಲ್ಲಿರುವ ಚಿತ್ರ]
ದಾವೀದನ ಕ್ರಿಯೆಗಳು, ಅವನು ಯೆಹೋವನ ಮೇಲೆ ಆತುಕೊಂಡನೆಂಬುದನ್ನು ರುಜುಪಡಿಸಿದವು
[ಕೃಪೆ]
Reproduced from Illustrirte Pracht - Bibel/Heilige Schrift des Alten und Neuen Testaments, nach der deutschen Uebersetzung D. Martin Luther’s