ಸಂಚರಣ ಮೇಲ್ವಿಚಾರಕರು—ಪುರುಷರಲ್ಲಿ ವರಗಳು
“ಅವನು ಉನ್ನತಕ್ಕೇರಿದಾಗ ಬಂದಿಗಳನ್ನು ಕೊಂಡೊಯ್ದನು; ಅವನು ಪುರುಷರಲ್ಲಿ ವರಗಳನ್ನು ಕೊಟ್ಟನು.”—ಎಫೆಸ 4:8, NW.
1. ಈ ಪತ್ರಿಕೆಯಲ್ಲಿ, 1894ರಲ್ಲಿ ಯಾವ ಹೊಸ ಕೆಲಸವನ್ನು ಪ್ರಕಟಿಸಲಾಯಿತು?
ಒಂದು ಶತಮಾನಕ್ಕೂ ಹೆಚ್ಚು ಮೊದಲು, ವಾಚ್ ಟವರ್ ಪತ್ರಿಕೆಯು ಯಾವುದೋ ಒಂದು ಹೊಸ ವಿಷಯವನ್ನು ಪ್ರಕಟಿಸಿತು. ಅದನ್ನು “ಸಾರುವ ಕೆಲಸದ ಇನ್ನೊಂದು ಕ್ಷೇತ್ರ”ವೆಂದು ವರ್ಣಿಸಲಾಯಿತು. ಈ ಹೊಸ ಚಟುವಟಿಕೆಯು ಏನನ್ನು ಒಳಗೊಂಡಿತು? ಸಂಚರಣ ಮೇಲ್ವಿಚಾರಕರ ಕೆಲಸದ ಆಧುನಿಕ ದಿನದ ಉದ್ಘಾಟನೆಯು ಅದಾಗಿತ್ತು. ಈ ಪತ್ರಿಕೆಯ ಸೆಪ್ಟಂಬರ್ 1, 1894ರ ಸಂಚಿಕೆಯು, ಈಗಿನಿಂದ ಅರ್ಹರಾಗುವ ಸಹೋದರರು, ಬೈಬಲ್ ವಿದ್ಯಾರ್ಥಿಗಳ ಗುಂಪುಗಳನ್ನು, ‘ಸತ್ಯದಲ್ಲಿ ಅವರನ್ನು ಕಟ್ಟುವ ಉದ್ದೇಶದಿಂದ’ ಭೇಟಿಮಾಡುವರು ಎಂದು ವಿವರಿಸಿತು.
2. ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ ಮೇಲ್ವಿಚಾರಕರಿಗೆ ಯಾವ ಕರ್ತವ್ಯಗಳಿವೆ?
2 ಸಾ.ಶ. ಒಂದನೆಯ ಶತಮಾನದಲ್ಲಿ, ಕ್ರೈಸ್ತ ಸಭೆಗಳನ್ನು ಪೌಲ ಮತ್ತು ಬಾರ್ನಬರಂತಹ ಮೇಲ್ವಿಚಾರಕರು ಭೇಟಿಮಾಡಿದರು. ಈ ನಂಬಿಗಸ್ತ ಪುರುಷರು ಸಭೆಗಳನ್ನು ‘ಕಟ್ಟುವ’ ಹೇತುವುಳ್ಳವರಾಗಿದ್ದರು. (2 ಕೊರಿಂಥ 10:8) ಇಂದು, ಇದನ್ನು ಕ್ರಮಬದ್ಧವಾದ ರೀತಿಯಲ್ಲಿ ಮಾಡುವ ಸಾವಿರಾರು ಮಂದಿ ಪುರುಷರಿಂದ ನಾವು ಆಶೀರ್ವದಿತರಾಗಿದ್ದೇವೆ. ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯು ಅವರನ್ನು ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ ಮೇಲ್ವಿಚಾರಕರನ್ನಾಗಿ ನೇಮಿಸಿದೆ. ಒಬ್ಬ ಸರ್ಕಿಟ್ ಮೇಲ್ವಿಚಾರಕನು, ಒಂದು ವರ್ಷಕ್ಕೆ ಸುಮಾರು ಎರಡು ಬಾರಿ, ಪ್ರತಿ ವಾರ ಒಂದರಂತೆ ಸುಮಾರು 20 ಸಭೆಗಳಲ್ಲಿ, ಅವುಗಳ ದಾಖಲೆಪತ್ರಗಳನ್ನು ಪರೀಕ್ಷಿಸುತ್ತ, ಭಾಷಣಗಳನ್ನು ಕೊಡುತ್ತ, ಸ್ಥಳಿಕ ರಾಜ್ಯ ಪ್ರಚಾರಕರೊಂದಿಗೆ ಕ್ಷೇತ್ರ ಶುಶ್ರೂಷೆಯಲ್ಲಿ ಒಳಗೂಡುತ್ತ ಸೇವೆಮಾಡುತ್ತಾನೆ. ಡಿಸ್ಟ್ರಿಕ್ಟ್ ಮೇಲ್ವಿಚಾರಕನು ಅನೇಕ ಸರ್ಕಿಟುಗಳ ವಾರ್ಷಿಕ ಸರ್ಕಿಟ್ ಸಮ್ಮೇಳನಗಳಲ್ಲಿ ಪ್ರತಿಯೊಂದರ ಅಧ್ಯಕ್ಷನಾಗಿದ್ದು, ಆತಿಥೇಯ ಸಭೆಗಳೊಂದಿಗೆ ಕ್ಷೇತ್ರ ಶುಶ್ರೂಷೆಗಳಲ್ಲಿ ಭಾಗವಹಿಸಿ, ಬೈಬಲಾಧಾರಿತ ಭಾಷಣಗಳಲ್ಲಿ ಪ್ರೋತ್ಸಾಹನೆಯನ್ನು ಒದಗಿಸುತ್ತಾನೆ.
ಅವರ ಆತ್ಮತ್ಯಾಗ ಮನೋಭಾವ
3. ಸಂಚರಣ ಮೇಲ್ವಿಚಾರಕರಲ್ಲಿ ಆತ್ಮತ್ಯಾಗ ಮನೋಭಾವವು ಏಕೆ ಅಗತ್ಯ?
3 ಸಂಚರಣ ಮೇಲ್ವಿಚಾರಕರು ಸತತವಾಗಿ ಸಂಚರಿಸುತ್ತಿರುತ್ತಾರೆ. ಇದು ತಾನೇ ಆತ್ಮತ್ಯಾಗ ಮನೋಭಾವವನ್ನು ಕೇಳಿಕೊಳ್ಳುತ್ತದೆ. ಒಂದು ಸಭೆಯಿಂದ ಇನ್ನೊಂದಕ್ಕೆ ಪಯಣಿಸುವುದು ಅನೇಕ ವೇಳೆ ಕಷ್ಟಕರವಾಗಿರಬಲ್ಲದು, ಆದರೆ ಈ ಪುರುಷರು ಮತ್ತು ಅವರ ಪತ್ನಿಯರು ಇದನ್ನು ಹರ್ಷಚಿತ್ತದಿಂದ ಮಾಡುತ್ತಾರೆ. ಒಬ್ಬ ಸರ್ಕಿಟ್ ಮೇಲ್ವಿಚಾರಕನು ಹೇಳಿದ್ದು: “ನನ್ನ ಪತ್ನಿ ತೀರ ಬೆಂಬಲ ಕೊಡುವವಳೂ ದೂರುಹೇಳದವಳೂ ಆಗಿದ್ದಾಳೆ . . . ಅವಳ ಆತ್ಮತ್ಯಾಗ ಮನೋಭಾವಕ್ಕಾಗಿ ಅವಳು ತುಂಬ ಪ್ರಶಂಸಾರ್ಹಳು.” ಕೆಲವು ಸರ್ಕಿಟ್ ಮೇಲ್ವಿಚಾರಕರು ಸಭೆಗಳ ಮಧ್ಯೆ 1,000ಕ್ಕೂ ಹೆಚ್ಚು ಕಿಲೊಮೀಟರುಗಳಷ್ಟು ಪ್ರಯಾಣಿಸುತ್ತಾರೆ. ಅನೇಕರು ವಾಹನಗಳನ್ನು ನಡೆಸುತ್ತಾರಾದರೂ, ಇತರರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ, ಸಾರ್ವಜನಿಕ ಸಾರಿಗೆ, ಸೈಕಲ್, ಕುದುರೆಯ ಮೇಲೆ ಅಥವಾ ನಡೆದುಕೊಂಡು ಹೋಗುತ್ತಾರೆ. ಒಬ್ಬ ಆಫ್ರಿಕನ್ ಸರ್ಕಿಟ್ ಮೇಲ್ವಿಚಾರಕನು ಒಂದು ಸಭೆಯನ್ನು ತಲಪಬೇಕಾದರೆ, ತನ್ನ ಹೆಂಡತಿಯನ್ನು ಹೆಗಲಮೇಲೆ ಹೊತ್ತುಕೊಂಡು ಒಂದು ನದಿಯನ್ನೂ ನಡೆದು ಹಾದುಹೋಗಬೇಕಾಗುತ್ತದೆ. ಅವನ ಮಿಷನೆರಿ ಪ್ರಯಾಣಗಳಲ್ಲಿ, ಅಪೊಸ್ತಲ ಪೌಲನಿಗೆ ಸೆಕೆ ಮತ್ತು ಚಳಿ, ಹಸಿವು ಮತ್ತು ಬಾಯಾರಿಕೆ, ನಿದ್ರಾರಹಿತ ರಾತ್ರಿಗಳು, ವಿವಿಧ ಅಪಾಯಗಳು ಮತ್ತು ಬಿರುಸಾದ ಹಿಂಸೆಯನ್ನು ನಿಭಾಯಿಸಬೇಕಾಗಿತ್ತು. ಅವನಿಗೆ “ಎಲ್ಲಾ ಸಭೆಗಳ ವಿಷಯವಾದ ಚಿಂತೆ”ಯೂ—ಇಂದು ಸಂಚರಣ ಮೇಲ್ವಿಚಾರಕರಿಗೆ ಸಾಮಾನ್ಯವಾಗಿರುವ ಒಂದು ಅನುಭವ—ಇತ್ತು.—2 ಕೊರಿಂಥ 11:23-29.
4. ಸಂಚರಣ ಮೇಲ್ವಿಚಾರಕರ ಮತ್ತು ಅವರ ಹೆಂಡತಿಯರ ಜೀವನಗಳಲ್ಲಿ ಆರೋಗ್ಯ ಸಮಸ್ಯೆಗಳು ಯಾವ ಪರಿಣಾಮವನ್ನು ಬೀರಬಲ್ಲವು?
4 ಪೌಲನ ಸಂಗಡಿಗನಾದ ತಿಮೊಥೆಯನಂತೆ, ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರಿಗೆ ಕೆಲವು ಬಾರಿ ಆರೋಗ್ಯ ಸಮಸ್ಯೆಗಳಿರುತ್ತವೆ. (1 ತಿಮೊಥೆಯ 5:23) ಇದು ಅವರ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತದೆ. ಒಬ್ಬ ಸರ್ಕಿಟ್ ಮೇಲ್ವಿಚಾರಕನ ಪತ್ನಿ ವಿವರಿಸುವುದು: “ನನಗೆ ಸೌಖ್ಯವಿಲ್ಲದಿರುವಾಗ ಸದಾ ಸಹೋದರರ ಸಂಗಡ ಇರುವುದು ಒತ್ತಡವನ್ನು ತರುತ್ತದೆ. ಋತುಬಂಧವು ಆರಂಭಗೊಂಡಂದಿನಿಂದ ಇದು ವಿಶೇಷವಾಗಿ ಕಷ್ಟಕರವೆಂದು ನಾನು ಕಂಡುಕೊಂಡಿದ್ದೇನೆ. ಪ್ರತಿ ವಾರ ನಮ್ಮ ಸ್ವತ್ತುಗಳನ್ನೆಲ್ಲ ಕಟ್ಟಿಕೊಂಡು, ಇನ್ನೊಂದು ಸ್ಥಳಕ್ಕೆ ಹೋಗುವುದು ಒಂದು ನಿಜವಾದ ಪಂಥಾಹ್ವಾನ. ಅನೇಕ ವೇಳೆ, ನಾನು ನಿಂತು, ಹೀಗೆಯೇ ಮುಂದುವರಿಯುತ್ತಾ ಹೋಗಲು ಯೆಹೋವನು ನನಗೆ ಶಕ್ತಿಯನ್ನು ಕೊಡುವಂತೆ ಪ್ರಾರ್ಥಿಸಬೇಕಾಗುತ್ತದೆ.”
5. ವಿವಿಧ ಪರೀಕ್ಷೆಗಳ ಹೊರತೂ, ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರಿಂದ ಯಾವ ಮನೋಭಾವವು ತೋರಿಸಲ್ಪಟ್ಟಿದೆ?
5 ಆರೋಗ್ಯ ಸಮಸ್ಯೆಗಳು ಮತ್ತು ಇತರ ಪರೀಕ್ಷೆಗಳ ಹೊರತೂ, ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರು ತಮ್ಮ ಸೇವೆಯಲ್ಲಿ ಸಂತೋಷವನ್ನು ಕಂಡುಕೊಂಡು, ಆತ್ಮತ್ಯಾಗದ ಪ್ರೀತಿಯನ್ನು ತೋರಿಸುತ್ತಾರೆ. ಕೆಲವರು ಹಿಂಸೆ ಅಥವಾ ಯುದ್ಧಕಾರ್ಯಾಚರಣೆಯ ಸಮಯಗಳಲ್ಲಿ ಆತ್ಮಿಕ ಸಹಾಯವನ್ನು ನೀಡಲಿಕ್ಕಾಗಿ ತಮ್ಮ ಜೀವಗಳನ್ನು ಅಪಾಯಕ್ಕೊಡ್ಡಿದ್ದಾರೆ. ಸಭೆಗಳನ್ನು ಸಂದರ್ಶಿಸುವಾಗ, ಪೌಲನದ್ದಕ್ಕೆ ಸಮಾನವಾದ ಮನೋಭಾವವನ್ನು ಅವರು ಪ್ರದರ್ಶಿಸಿದ್ದಾರೆ. ಅವನು ಥೆಸಲೊನೀಕದ ಕ್ರೈಸ್ತರಿಗೆ ಹೇಳಿದ್ದು: “ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡಕೊಂಡಿದ್ದೆವು. ನೀವು ನಮಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ಪ್ರಾಣವನ್ನೇ ಕೊಡುವದಕ್ಕೆ ಸಂತೋಷಿಸುವವರಾದೆವು.”—1 ಥೆಸಲೊನೀಕ 2:7, 8.
6, 7. ಪ್ರಯಾಸಪಟ್ಟು ಕೆಲಸಮಾಡುವ ಸಂಚರಣ ಮೇಲ್ವಿಚಾರಕರು, ಯಾವ ಸಕಾರಾತ್ಮಕ ಪ್ರಭಾವವನ್ನು ಒದಗಿಸಬಲ್ಲರು?
6 ಕ್ರೈಸ್ತ ಸಭೆಯಲ್ಲಿರುವ ಇತರ ಹಿರಿಯರಂತೆ, ಸಂಚರಣ ಮೇಲ್ವಿಚಾರಕರು “ಪ್ರಸಂಗದಲ್ಲಿಯೂ ಉಪದೇಶದಲ್ಲಿಯೂ ಕಷ್ಟಪಡು”ತ್ತಾರೆ. ಇಂತಹ ಹಿರಿಯರೆಲ್ಲರೂ, “ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು” ಎಣಿಸಲ್ಪಡಬೇಕು. (1 ತಿಮೊಥೆಯ 5:17) ‘ಅವರ ನಡತೆಯು ಹೇಗೆ ಪರಿಣಮಿಸುವುದೆಂದು ಆಲೋಚಿಸಿದ ಮೇಲೆ ನಾವು ಅವರ ನಂಬಿಕೆಯನ್ನು ಅನುಕರಿಸುವಲ್ಲಿ,’ ಅವರ ಮಾದರಿಯು ಪ್ರಯೋಜನಕರವಾಗಿ ಪರಿಣಮಿಸಬಲ್ಲದು.—ಇಬ್ರಿಯ 13:7.
7 ಕೆಲವು ಸಂಚರಣ ಮೇಲ್ವಿಚಾರಕರು ಇತರರ ಮೇಲೆ ಯಾವ ಪ್ರಭಾವವನ್ನು ಬೀರಿದ್ದಾರೆ? “ನನ್ನ ಜೀವನದಲ್ಲಿ ಸಹೋದರ ಪ—— ಎಷ್ಟು ಅದ್ಭುತಕರವಾದ ಪ್ರಭಾವವಾಗಿದ್ದರು!” ಎಂದು ಬರೆದನು ಯೆಹೋವನ ಸಾಕ್ಷಿಗಳಲ್ಲೊಬ್ಬನು. “ಅವರು 1960ರಿಂದ ಮೆಕ್ಸಿಕೋದಲ್ಲಿ ಒಬ್ಬ ಸಂಚರಣ ಮೇಲ್ವಿಚಾರಕರಾಗಿದ್ದರು. ನಾನು ಚಿಕ್ಕವನಾಗಿದ್ದಾಗ ಅವರ ಸಂದರ್ಶನಗಳನ್ನು ನಿರೀಕ್ಷಣೆ ಮತ್ತು ಆನಂದದಿಂದ ಎದುರುನೋಡುತ್ತಿದ್ದೆ. ನಾನು ಹತ್ತು ವರ್ಷ ವಯಸ್ಸಿನವನಾಗಿದ್ದಾಗ, ‘ನೀನೂ ಒಬ್ಬ ಸರ್ಕಿಟ್ ಮೇಲ್ವಿಚಾರಕನಾಗುತ್ತೀ’ ಎಂದು ಅವರು ನನಗೆ ಹೇಳಿದರು. ಕಷ್ಟಕರವಾದ ಹದಿಪ್ರಾಯದ ವರ್ಷಗಳಲ್ಲಿ, ನಾನು ಪದೇ ಪದೇ ಅವರನ್ನು ಹುಡುಕಿಕೊಂಡುಹೋದೆ, ಏಕೆಂದರೆ ನೀಡಲಿಕ್ಕಾಗಿ ಅವರಲ್ಲಿ ವಿವೇಕದ ಮಾತುಗಳು ಯಾವಾಗಲೂ ಇದ್ದವು. ಮಂದೆಯನ್ನು ಪಾಲಿಸಲಿಕ್ಕಾಗಿಯೇ ಅವರು ಜೀವಿಸಿದರು! ಈಗ ನಾನು ಒಬ್ಬ ಸರ್ಕಿಟ್ ಮೇಲ್ವಿಚಾರಕನಾಗಿರುವುದರಿಂದ, ನಾನು ಸದಾ ಎಳೆಯರಿಗೆ ನನ್ನ ಸಮಯವನ್ನು ಮೀಸಲಾಗಿಡಲು ಮತ್ತು ಅವರು ನನಗೆ ಮಾಡಿದಂತೆ ದೇವಪ್ರಭುತ್ವ ಗುರಿಗಳನ್ನು ಅವರ ಮುಂದಿಡಲು ಪ್ರಯತ್ನಿಸುತ್ತೇನೆ. ಅವರ ಜೀವನದ ಕೊನೆಯ ವರುಷಗಳಲ್ಲಿ ಕೂಡ, ಹೃದ್ರೋಗದ ಸಮಸ್ಯೆಗಳ ಹೊರತೂ, ಸಹೋದರ ಪ—— ಸದಾ ಪ್ರೋತ್ಸಾಹಕರವಾದ ಮಾತನ್ನಾಡಲು ಪ್ರಯತ್ನಿಸಿದರು. ಫೆಬ್ರವರಿ 1995ರಲ್ಲಿ ಅವರ ಮರಣಕ್ಕೆ ಒಂದೇ ಒಂದು ದಿನದ ಮೊದಲು, ಅವರು ನನ್ನ ಜೊತೆಯಲ್ಲಿ ವಿಶೇಷ ಸಮ್ಮೇಳನ ದಿನಕ್ಕೆ ಹೋಗಿ, ವಾಸ್ತುಶಿಲ್ಪಿಯಾಗಿರುವ ಒಬ್ಬ ಸಹೋದರನ ಮುಂದೆ ಉತ್ತಮ ಗುರಿಗಳನ್ನಿಟ್ಟರು. ಆ ಸಹೋದರನು ಬೆತೆಲ್ನಲ್ಲಿ ಸೇವೆಮಾಡಲು ಒಡನೆಯೇ ಅರ್ಜಿ ಹಾಕಿದನು.”
ಅವರು ಗಣ್ಯಮಾಡಲ್ಪಡುತ್ತಾರೆ
8. ಎಫೆಸ 4ನೆಯ ಅಧ್ಯಾಯದಲ್ಲಿ ವರ್ಣಿಸಲ್ಪಟ್ಟಿರುವ “ಪುರುಷರಲ್ಲಿ ವರಗಳು” ಯಾರು, ಮತ್ತು ಅವರು ಸಭೆಗೆ ಹೇಗೆ ಪ್ರಯೋಜನವಾಗುತ್ತಾರೆ?
8 ದೇವರ ಅಪಾತ್ರ ದಯೆಯಿಂದಾಗಿ ಸೇವಾ ನೇಮಕಗಳಿಂದ ಅನುಗ್ರಹಿತರಾದ ಸಂಚರಣ ಮೇಲ್ವಿಚಾರಕರು ಮತ್ತು ಇತರ ಹಿರಿಯರನ್ನು, “ಪುರುಷರಲ್ಲಿ ವರಗಳು” (NW) ಎಂದು ಕರೆಯಲಾಗುತ್ತದೆ. ಯೆಹೋವನ ಪ್ರತಿನಿಧಿ ಹಾಗೂ ಸಭೆಯ ಶಿರಸ್ಸಾಗಿರುವ ಯೇಸು, ನಾವು ವೈಯಕ್ತಿಕವಾಗಿ ಕಟ್ಟಲ್ಪಡುವಂತೆ ಮತ್ತು ಪಕ್ವತೆಯನ್ನು ಸಾಧಿಸುವಂತೆ ಈ ಆತ್ಮಿಕ ಪುರುಷರನ್ನು ಒದಗಿಸಿದ್ದಾನೆ. (ಎಫೆಸ 4:8-15) ಯಾವುದೇ ವರವು ಗಣ್ಯತೆಯನ್ನು ವ್ಯಕ್ತಪಡಿಸಲು ಅರ್ಹವಾದುದಾಗಿದೆ. ನಾವು ಯೆಹೋವನನ್ನು ಸೇವಿಸುವಂತೆ ನಮ್ಮನ್ನು ಬಲಪಡಿಸುವ ವರದ ವಿಷಯದಲ್ಲಾದರೊ ಇದು ವಿಶೇಷವಾಗಿ ಸತ್ಯ. ಹಾಗಾದರೆ, ಸಂಚರಣ ಮೇಲ್ವಿಚಾರಕರ ಕೆಲಸಕ್ಕೆ ನಾವು ಹೇಗೆ ಗಣ್ಯತೆಯನ್ನು ಪ್ರದರ್ಶಿಸಬಲ್ಲೆವು? ನಾವು ಯಾವ ವಿಧಗಳಲ್ಲಿ ‘ಅಂಥವರನ್ನು ಮಾನ್ಯರೆಂದು’ ಎಣಿಸುತ್ತೇವೆಂದು ತೋರಿಸಬಲ್ಲೆವು?—ಫಿಲಿಪ್ಪಿ 2:29.
9. ನಾವು ಸಂಚರಣ ಮೇಲ್ವಿಚಾರಕರಿಗೆ ಯಾವ ವಿಧಗಳಲ್ಲಿ ಗಣ್ಯತೆಯನ್ನು ತೋರಿಸಬಲ್ಲೆವು?
9 ಸರ್ಕಿಟ್ ಮೇಲ್ವಿಚಾರಕರ ಸಂದರ್ಶನವು ಪ್ರಕಟಿಸಲ್ಪಟ್ಟಾಗ, ಆ ವಾರದ ಸಭಾ ಚಟುವಟಿಕೆಗಳಲ್ಲಿ ಪೂರ್ಣವಾಗಿ ಭಾಗವಹಿಸಲು ನಾವು ಯೋಜನೆಗಳನ್ನು ಮಾಡಲಾರಂಭಿಸಬಲ್ಲೆವು. ಸಂದರ್ಶನದ ಸಮಯದಲ್ಲಿ ಕ್ಷೇತ್ರ ಸೇವಾ ಏರ್ಪಾಡುಗಳನ್ನು ಬೆಂಬಲಿಸಲಿಕ್ಕಾಗಿ ನಾವು ಪ್ರಾಯಶಃ ಹೆಚ್ಚು ಸಮಯವನ್ನು ಬದಿಗಿರಿಸಬಲ್ಲೆವು. ಆ ತಿಂಗಳಲ್ಲಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆಮಾಡಲು ನಾವು ಶಕ್ತರಾಗಬಹುದು. ನಾವು ನಮ್ಮ ಶುಶ್ರೂಷೆಯನ್ನು ಉತ್ತಮಗೊಳಿಸಿಕೊಳ್ಳಲಿಕ್ಕಾಗಿ, ನಿಶ್ಚಯವಾಗಿಯೂ ಸಂಚರಣ ಮೇಲ್ವಿಚಾರಕರ ಸೂಚನೆಗಳನ್ನು ಕಾರ್ಯರೂಪಕ್ಕೆ ಹಾಕಬಯಸುವೆವು. ಅಂತಹ ತೀವ್ರಗ್ರಹಣ ಮನೋಭಾವವು ನಮಗೆ ಪ್ರಯೋಜನವನ್ನು ತಂದು, ತನ್ನ ಸಂದರ್ಶನವು ಉಪಯುಕ್ತವಾದದ್ದಾಗಿದೆಯೆಂಬ ಪುನರಾಶ್ವಾಸನೆಯನ್ನು ಅವನಿಗೆ ಕೊಡುವುದು. ಹೌದು, ಸರ್ಕಿಟ್ ಮೇಲ್ವಿಚಾರಕರು ನಮ್ಮ ಆತ್ಮೋನ್ನತಿಮಾಡಲಿಕ್ಕಾಗಿ ಸಭೆಯನ್ನು ಸಂದರ್ಶಿಸುತ್ತಾರಾದರೂ, ಅವರೂ ಆತ್ಮಿಕವಾಗಿ ಕಟ್ಟಲ್ಪಡುವ ಅಗತ್ಯವಿದೆ. ಪೌಲನಿಗೆ ಪ್ರೋತ್ಸಾಹನೆಯು ಅಗತ್ಯವಿದ್ದ ಸಮಯಗಳಿದ್ದವು ಮತ್ತು ಜೊತೆ ಕ್ರೈಸ್ತರು ತನಗಾಗಿ ಪ್ರಾರ್ಥಿಸುವಂತೆ ಅವನು ಅನೇಕ ವೇಳೆ ಕೇಳಿಕೊಂಡನು. (ಅ. ಕೃತ್ಯಗಳು 28:15; ರೋಮಾಪುರ 15:30-32; 2 ಕೊರಿಂಥ 1:11; ಕೊಲೊಸ್ಸೆ 4:2, 3; 1 ಥೆಸಲೊನೀಕ 5:25) ಪ್ರಸಕ್ತ ದಿನದ ಸಂಚರಣ ಮೇಲ್ವಿಚಾರಕರಿಗೂ ತದ್ರೀತಿ ನಮ್ಮ ಪ್ರಾರ್ಥನೆಗಳು ಮತ್ತು ಪ್ರೋತ್ಸಾಹನೆ ಅಗತ್ಯ.
10. ಒಬ್ಬ ಸಂಚರಣ ಮೇಲ್ವಿಚಾರಕನ ಕೆಲಸವನ್ನು ಸಂತೋಷವುಳ್ಳದ್ದಾಗಿ ಮಾಡಲು ನಾವು ಹೇಗೆ ಸಹಾಯಮಾಡಬಲ್ಲೆವು?
10 ಅವರ ಸಂದರ್ಶನಗಳನ್ನು ನಾವೆಷ್ಟು ಗಣ್ಯಮಾಡುತ್ತೇವೆಂದು ನಾವು ಸರ್ಕಿಟ್ ಮೇಲ್ವಿಚಾರಕನಿಗೂ ಅವನ ಪತ್ನಿಗೂ ಹೇಳಿದ್ದೇವೊ? ಅವನು ನಮಗೆ ಕೊಡುವ ಸಹಾಯಕರ ಸಲಹೆಗಾಗಿ ನಾವು ಅವನಿಗೆ ಉಪಕಾರ ಹೇಳುತ್ತೇವೊ? ಅವನು ಕೊಟ್ಟ ಕ್ಷೇತ್ರ ಸೇವಾ ಸೂಚನೆಗಳು ಶುಶ್ರೂಷೆಯಲ್ಲಿ ನಮ್ಮ ಸಂತೋಷವನ್ನು ಹೆಚ್ಚಿಸುವಾಗ ನಾವು ಅವನಿಗೆ ತಿಳಿಸುತ್ತೇವೊ? ನಾವು ಹಾಗೆ ಮಾಡುವಲ್ಲಿ, ಇದು ಅವನ ಕೆಲಸವನ್ನು ಆನಂದಭರಿತವನ್ನಾಗಿ ಮಾಡಲು ಸಹಾಯಮಾಡುವುದು. (ಇಬ್ರಿಯ 13:17) ಸ್ಪೆಯ್ನ್ನ ಒಬ್ಬ ಸರ್ಕಿಟ್ ಮೇಲ್ವಿಚಾರಕನು, ಸಭೆಯನ್ನು ಸಂದರ್ಶಿಸಿದ ಬಳಿಕ ತಮಗೆ ದೊರಕಿದ ಥ್ಯಾಂಕ್ಯೂ ಕಾರ್ಡುಗಳನ್ನು, ತಾನೂ ತನ್ನ ಪತ್ನಿಯೂ ಎಷ್ಟು ಅಮೂಲ್ಯವೆಂದು ಭಾವಿಸುತ್ತೇವೆಂಬುದರ ಕುರಿತು ವಿಶೇಷವಾಗಿ ಮಾತಾಡಿದನು. “ನಾವು ಈ ಕಾರ್ಡುಗಳನ್ನು ಇಟ್ಟುಕೊಂಡು, ಉತ್ಸಾಹಶೂನ್ಯರಾಗುವಾಗ ಅವನ್ನು ಓದುತ್ತೇವೆ, ಅವು ನಿಜ ಪ್ರೋತ್ಸಾಹದ ಮೂಲವಾಗಿವೆ” ಎಂದು ಅವನು ಹೇಳುತ್ತಾನೆ.
11. ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ ಮೇಲ್ವಿಚಾರಕರ ಪತ್ನಿಯರಿಗೆ, ನಾವು ಅವರನ್ನು ಪ್ರೀತಿಸುತ್ತೇವೆಂದೂ ಗಣ್ಯಮಾಡುತ್ತೇವೆಂದೂ ಏಕೆ ತಿಳಿಸಬೇಕು?
11 ಸಂಚರಣ ಮೇಲ್ವಿಚಾರಕರ ಪತ್ನಿಯು ಪ್ರಶಂಸೆಯ ಮಾತುಗಳಿಂದ ನಿಶ್ಚಯವಾಗಿಯೂ ಪ್ರಯೋಜನ ಹೊಂದುತ್ತಾಳೆ. ಈ ಸೇವಾ ಕ್ಷೇತ್ರದಲ್ಲಿ ತನ್ನ ಪತಿಗೆ ನೆರವಾಗಲು ಆಕೆ ಮಹಾ ತ್ಯಾಗಗಳನ್ನು ಮಾಡಿದ್ದಾಳೆ. ಈ ನಂಬಿಗಸ್ತ ಸಹೋದರಿಯರು ತಮ್ಮ ಸ್ವಂತ ಮನೆಯಿರುವ, ಮತ್ತು ಅನೇಕ ಸಂದರ್ಭಗಳಲ್ಲಿ, ಮಕ್ಕಳನ್ನು ಪಡೆಯಬೇಕೆಂಬ ಸ್ವಾಭಾವಿಕ ಬಯಕೆಯನ್ನು ತ್ಯಜಿಸುತ್ತಾರೆ. ಯೆಪ್ತಾಹನ ಮಗಳು, ತನ್ನ ತಂದೆಯು ಮಾಡಿದ ಪ್ರತಿಜ್ಞೆಯ ಕಾರಣ ಒಬ್ಬ ಪತಿಯನ್ನು ಮತ್ತು ಒಂದು ಕುಟುಂಬವನ್ನು ಪಡೆಯುವ ಅವಕಾಶವನ್ನು ಇಚ್ಛಾಪೂರ್ವಕವಾಗಿ ತ್ಯಜಿಸಿದ ಯೆಹೋವನ ಸೇವಕರಲ್ಲಿ ಒಬ್ಬಳು. (ನ್ಯಾಯಸ್ಥಾಪಕರು 11:30-39) ಆಕೆಯ ತ್ಯಾಗವನ್ನು ಹೇಗೆ ವೀಕ್ಷಿಸಲಾಯಿತು? ನ್ಯಾಯಸ್ಥಾಪಕರು 11:40 ಹೇಳುವುದು: “ಇಸ್ರಾಯೇಲ್ಯರ ಹೆಣ್ಣುಮಕ್ಕಳು ಪ್ರತಿವರುಷದಲ್ಲಿಯೂ ನಾಲ್ಕು ದಿವಸ ಗಿಲ್ಯಾದ್ಯನಾದ ಯೆಪ್ತಾಹನ ಮಗಳನ್ನು ವರ್ಣಿಸುತ್ತಾರೆ.” ನಾವು ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ ಮೇಲ್ವಿಚಾರಕರ ಪತ್ನಿಯರಿಗೆ, ಅವರು ಪ್ರೀತಿಪಾತ್ರರಾಗಿದ್ದಾರೆ ಮತ್ತು ಗಣ್ಯಮಾಡಲ್ಪಡುತ್ತಾರೆ ಎಂದು ಅವರಿಗೆ ಹೇಳಲು ಪ್ರಯತ್ನಿಸುವುದಾದರೆ, ಅದೆಷ್ಟು ಉತ್ತಮ!
“ಅತಿಥಿಸತ್ಕಾರಮಾಡುವದನ್ನು ಮರೆಯಬೇಡಿರಿ”
12, 13. (ಎ) ಸಂಚರಣ ಮೇಲ್ವಿಚಾರಕರಿಗೆ ಮತ್ತು ಅವರ ಪತ್ನಿಯರಿಗೆ ಅತಿಥಿಸತ್ಕಾರ ಮಾಡುವವರಾಗಿರುವುದಕ್ಕೆ ಶಾಸ್ತ್ರಾಧಾರವೇನು? (ಬಿ) ಇಂಥ ಆತಿಥ್ಯವು ಹೇಗೆ ಪರಸ್ಪರವಾಗಿ ಲಾಭದಾಯಕವೆಂಬುದನ್ನು ದೃಷ್ಟಾಂತಿಸಿರಿ.
12 ಕ್ರೈಸ್ತ ಸಂಚರಣ ಕೆಲಸದಲ್ಲಿರುವವರಿಗೆ ಅತಿಥಿಸತ್ಕಾರವನ್ನು ತೋರಿಸುವುದು ಪ್ರೀತಿ ಮತ್ತು ಗಣ್ಯತೆಯನ್ನು ಪ್ರದರ್ಶಿಸುವ ಇನ್ನೊಂದು ವಿಧ. (ಇಬ್ರಿಯ 13:2) ಸಂಚರಣ ಮಿಷನೆರಿಗಳಾಗಿ ಸಭೆಯನ್ನು ಸಂದರ್ಶಿಸುವವರಿಗೆ ಅತಿಥಿಸತ್ಕಾರವನ್ನು ನೀಡಿದ್ದಕ್ಕಾಗಿ ಅಪೊಸ್ತಲ ಯೋಹಾನನು ಗಾಯನನ್ನು ಪ್ರಶಂಸಿಸಿದನು. ಯೋಹಾನನು ಬರೆದುದು: “ಪ್ರಿಯನೇ, ಪರಿಚಯವಿಲ್ಲದವರಾದ ಸಹೋದರರಿಗೂ ನೀನು ಸತ್ಕಾರವನ್ನು ಮಾಡುವದರಲ್ಲಿ ನಂಬುವವನಿಗೆ ಯೋಗ್ಯನಾಗಿ ನಡೆಯುತ್ತೀ. ಅವರು ಸಭೆಯ ಮುಂದೆ ನಿನ್ನ ಪ್ರೀತಿಗೆ ಸಾಕ್ಷಿಹೇಳಿದರು. ಅವರನ್ನು ನೀನು ದೇವರ ಸೇವಕರಿಗೆ ಯೋಗ್ಯವಾದ ರೀತಿಯಿಂದ ಸಾಗ ಕಳುಹಿಸಿದರೆ ಚೆನ್ನಾಗಿರುವದು. ಯಾಕಂದರೆ ಅವರು ಕ್ರಿಸ್ತನ ಹೆಸರನ್ನು ಪ್ರಸಿದ್ಧಿಪಡಿಸುವದಕ್ಕೋಸ್ಕರ ಹೊರಟುಹೋಗಿದ್ದಾರೆ ಮತ್ತು ಅನ್ಯಜನಗಳಿಂದ ಏನೂ ತೆಗೆದುಕೊಳ್ಳುವವರಲ್ಲ. ಆದದರಿಂದ ನಾವು ಸತ್ಯಕ್ಕೆ ಸಹಕಾರಿಗಳಾಗುವಂತೆ ಅಂಥವರನ್ನು ಸೇರಿಸಿಕೊಳ್ಳುವ ಹಂಗಿನಲ್ಲಿದ್ದೇವೆ.” (3 ಯೋಹಾನ 5-8) ಇಂದು ಸಂಚರಣ ಮೇಲ್ವಿಚಾರಕರಿಗೂ ಅವರ ಪತ್ನಿಯರಿಗೂ ತದ್ರೀತಿಯ ಆತಿಥ್ಯವನ್ನು ನೀಡಿ, ನಾವು ರಾಜ್ಯ ಸಾರುವ ಚಟುವಟಿಕೆಯನ್ನು ವರ್ಧಿಸಬಲ್ಲೆವು. ನಿಶ್ಚಯವಾಗಿಯೂ ತೃಪ್ತಿಕರವಾದ ವಸತಿಸೌಕರ್ಯಗಳಿವೆಯೆಂಬುದನ್ನು ಸ್ಥಳಿಕ ಹಿರಿಯರು ಖಾತರಿಮಾಡಿಕೊಳ್ಳಬೇಕಾದರೂ, ಒಬ್ಬ ಡಿಸ್ಟ್ರಿಕ್ಟ್ ಮೇಲ್ವಿಚಾರಕನು ಹೇಳಿದ್ದು: “ಸಹೋದರರೊಂದಿಗಿನ ನಮ್ಮ ತನ್ಮಯತೆಯು ಅವರು ನಮಗೆ ಏನು ಮಾಡಬಲ್ಲರು ಎಂಬುದರ ಮೇಲೆ ಆಧಾರಿಸಸಾಧ್ಯವಿಲ್ಲ. ನಾವು ಆ ಅಭಿಪ್ರಾಯವನ್ನು ಕೂಡ ಕೊಡಬಯಸುವುದಿಲ್ಲ. ನಮ್ಮ ಸಹೋದರರಲ್ಲಿ—ಅವರು ಧನಿಕರಾಗಿರಲಿ, ಬಡವರಾಗಿರಲಿ—ಯಾರದೇ ಆತಿಥ್ಯವನ್ನೂ ನಾವು ಅಂಗೀಕರಿಸಲು ಅಪೇಕ್ಷಿಸಬೇಕು.”
13 ಆತಿಥ್ಯವು ಪರಸ್ಪರವಾಗಿ ಲಾಭದಾಯಕವಾಗಿರಬಲ್ಲದು. ಹಿಂದೆ ಸರ್ಕಿಟ್ ಮೇಲ್ವಿಚಾರಕನಾಗಿದ್ದು, ಈಗ ಬೆತೆಲ್ನಲ್ಲಿ ಸೇವೆಮಾಡುತ್ತಿರುವ ಸಾರ್ಸೆ ಜ್ಞಾಪಿಸಿಕೊಳ್ಳುವುದು: “ನನ್ನ ಕುಟುಂಬದಲ್ಲಿ ಸಂಚರಣ ಮೇಲ್ವಿಚಾರಕರನ್ನು ನಮ್ಮೊಂದಿಗೆ ಉಳಿದುಕೊಳ್ಳುವಂತೆ ಆಮಂತ್ರಿಸುವ ಪದ್ಧತಿಯಿತ್ತು. ಈ ಭೇಟಿಗಳು ನನಗೆ ನಾನು ಆಗ ಗ್ರಹಿಸಿದ್ದುದಕ್ಕಿಂತಲೂ ಹೆಚ್ಚಾಗಿ ಸಹಾಯಮಾಡಿದವೆಂದು ನನ್ನ ಭಾವನೆ. ನನ್ನ ತರುಣಾವಸ್ಥೆಯಲ್ಲಿ, ನನಗೆ ಆತ್ಮಿಕ ಸಮಸ್ಯೆಗಳಿದ್ದವು. ನನ್ನ ತಾಯಿ ಈ ವಿಷಯದಲ್ಲಿ ಚಿಂತಿತರಾಗಿದ್ದರೂ ಹೇಗೆ ಸಹಾಯಮಾಡುವುದೆಂದು ತಿಳಿಯದಿದ್ದ ಕಾರಣ, ನನ್ನೊಡನೆ ಮಾತಾಡುವಂತೆ ಸರ್ಕಿಟ್ ಮೇಲ್ವಿಚಾರಕರನ್ನು ಕೇಳಿಕೊಂಡರು. ಪ್ರಥಮವಾಗಿ ನಾನು, ಟೀಕಿಸಲ್ಪಡುವೆನೆಂಬ ಭಯದಿಂದ ಅವರಿಂದ ತಪ್ಪಿಸಿಕೊಂಡೆ. ಆದರೆ ಅವರ ಸ್ನೇಹಪರ ರೀತಿಯು, ಕೊನೆಗೆ ನಾನು ಅವರೊಂದಿಗೆ ಸಂವಾದಮಾಡುವಂತೆ ನನ್ನನ್ನು ಒಡಂಬಡಿಸಿತು. ಒಂದು ಸೋಮವಾರ ಅವರು ನನ್ನನ್ನು ತನ್ನೊಂದಿಗೆ ಊಟಮಾಡಲಿಕ್ಕಾಗಿ ಕರೆಕೊಟ್ಟರು ಮತ್ತು ನನ್ನನ್ನು ಅರ್ಥಮಾಡಿಕೊಳ್ಳಲಾಗುತ್ತಿದೆಯೆಂದು ನನಗೆ ಖಾತರಿಯಾದ ಕಾರಣ ನಾನು ಹೃದಯ ಬಿಚ್ಚಿ ಮಾತಾಡಿದೆ. ಅವರು ಜಾಗರೂಕತೆಯಿಂದ ಕಿವಿಗೊಟ್ಟರು. ಅವರ ಪ್ರಾಯೋಗಿಕ ಸೂಚನೆಗಳು ನಿಜವಾಗಿಯೂ ಕಾರ್ಯನಡಿಸಿದವು ಮತ್ತು ನಾನು ಆತ್ಮಿಕವಾಗಿ ಪ್ರಗತಿಹೊಂದತೊಡಗಿದೆ.”
14. ಸಂಚರಣ ಹಿರಿಯರ ವಿಷಯದಲ್ಲಿ ನಾವು ಟೀಕೆಮಾಡುವ ಬದಲು ಏಕೆ ಗಣ್ಯಮಾಡುವವರಾಗಿರಬೇಕು?
14 ಸಂಚರಣ ಮೇಲ್ವಿಚಾರಕನು ಎಳೆಯರಿಗೂ ವೃದ್ಧರಿಗೂ ಏಕರೀತಿಯಲ್ಲಿ ಆತ್ಮಿಕವಾಗಿ ಸಹಾಯಮಾಡುವವನಾಗಿರಲು ಪ್ರಯತ್ನಿಸುತ್ತಾನೆ. ಆದುದರಿಂದ, ನಿಶ್ಚಯವಾಗಿಯೂ ನಾವು ಅವನ ಪ್ರಯತ್ನಗಳಿಗಾಗಿ ನಮ್ಮ ಗಣ್ಯತೆಯನ್ನು ತೋರಿಸಬೇಕು. ಆದರೂ ಅವನ ದೋಷಗಳ ಕಾರಣ ನಾವು ಅವನನ್ನು ಟೀಕಿಸುವುದಾದರೆ ಅಥವಾ ಸಭೆಯನ್ನು ಸಂದರ್ಶಿಸಿರುವ ಇತರರೊಂದಿಗೆ ಅವನನ್ನು ಪ್ರತಿಕೂಲವಾಗಿ ಸರಿಹೋಲಿಸುವುದಾದರೆ ಆಗೇನು? ಅದು ಅತಿ ನಿರುತ್ಸಾಹಗೊಳಿಸುವಂತಹದ್ದಾಗಿರುವುದು ಸಂಭಾವ್ಯ. ತನ್ನ ಕೆಲಸದ ಟೀಕೆ ಪೌಲನಿಗೆ ಪ್ರೋತ್ಸಾಹಕರವಾಗಿರಲಿಲ್ಲ. ಕೊರಿಂಥದ ಕೆಲವು ಕ್ರೈಸ್ತರು ಅವನ ತೋರಿಕೆ ಮತ್ತು ವಾಕ್ಸಾಮರ್ಥ್ಯದ ಕುರಿತು ಹೀನಯಿಸಿ ಮಾತಾಡುತ್ತಿದ್ದರೆಂಬುದು ವ್ಯಕ್ತ. ಇಂತಹ ವಿಮರ್ಶಕರು ಹೀಗೆ ಹೇಳುತ್ತಿದ್ದರೆಂಬುದನ್ನು ಅವನೇ ಉದ್ಧರಿಸುತ್ತಾನೆ: “ಅವನಿಂದ ಬಂದ ಪತ್ರಿಕೆಗಳು ಗೌರವವಾದವುಗಳೂ ಬಲವುಳ್ಳವುಗಳೂ ಆಗಿವೆ; ಅವನು ಸಾಕ್ಷಾತ್ತಾಗಿ ಬಂದರೆ ಅವನು ನಿರ್ಬಲನು, ಅವನ ಮಾತು ಗಣನೆಗೆ ಬಾರದ್ದು ಅನ್ನುತ್ತಾರೆ.” (2 ಕೊರಿಂಥ 10:10) ಆದರೆ, ಸಂತೋಷಕರವಾಗಿ, ಸಂಚರಣ ಮೇಲ್ವಿಚಾರಕರು ಸಾಮಾನ್ಯವಾಗಿ ಪ್ರೀತಿಪೂರ್ವಕವಾದ ಗಣ್ಯತೆಯ ಮಾತುಗಳನ್ನೇ ಕೇಳುತ್ತಾರೆ.
15, 16. ತಮ್ಮ ಜೊತೆವಿಶ್ವಾಸಿಗಳಿಂದ ತೋರಿಸಲ್ಪಡುವ ಪ್ರೀತಿ ಮತ್ತು ಆಸಕ್ತಿಯಿಂದ ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರು ಹೇಗೆ ಪ್ರಭಾವಿತರಾಗುತ್ತಾರೆ?
15 ಲ್ಯಾಟಿನ್ ಅಮೆರಿಕದ ಒಬ್ಬ ಸರ್ಕಿಟ್ ಮೇಲ್ವಿಚಾರಕನು, ಗೆರಿಲಗಳ ಹತೋಟಿಯಲ್ಲಿರುವ ವಲಯದ ತನ್ನ ಆತ್ಮಿಕ ಸಹೋದರ ಸಹೋದರಿಯರನ್ನು ಭೇಟಿಮಾಡಲು ಇಡೀ ದಿನ ಕೆಸರು ದಾರಿಯಲ್ಲಿ ನಡೆಯುತ್ತಾನೆ. “ಸಹೋದರರು ಸಂದರ್ಶನಕ್ಕೆ ಗಣ್ಯತೆಯನ್ನು ತೋರಿಸುವ ವಿಧವು ಮನಸ್ಸನ್ನು ಕರಗಿಸುತ್ತದೆ. ಅಲ್ಲಿಗೆ ಹೋಗಿ ಮುಟ್ಟಲು ನಾನು ಅನೇಕ ಅಪಾಯಗಳನ್ನೂ ಕಷ್ಟದೆಸೆಗಳನ್ನೂ ಎದುರಿಸಬೇಕಾದರೂ, ಸಹೋದರರು ತೋರಿಸುವ ಪ್ರೀತಿ ಮತ್ತು ಆಸಕ್ತಿಯಿಂದ ಇದಕ್ಕೆಲ್ಲ ಪ್ರತಿಫಲ ದೊರೆಯುತ್ತದೆ,” ಎಂದು ಅವನು ಬರೆಯುತ್ತಾನೆ.
16 ಆಫ್ರಿಕದ ಒಬ್ಬ ಸರ್ಕಿಟ್ ಮೇಲ್ವಿಚಾರಕನು ಬರೆಯುವುದು: “ಸಹೋದರರು ನಮಗೆ ತೋರಿಸಿದ ಪ್ರೀತಿಯ ಕಾರಣದಿಂದ ನಾವು ಟಾನ್ಸೆನೀಯದ ಪ್ರದೇಶವನ್ನು ಎಷ್ಟೋ ಪ್ರೀತಿಸಿದೆವು! ಸಹೋದರರು ನಮ್ಮಿಂದ ಕಲಿಯಲು ಸಿದ್ಧರಾಗಿದ್ದರು ಮತ್ತು ತಮ್ಮ ಮನೆಗಳಲ್ಲಿ ನಮ್ಮನ್ನು ಬರಮಾಡಿಕೊಳ್ಳಲು ಸಂತೋಷಿತರಾಗಿದ್ದರು.” ಅಪೊಸ್ತಲ ಪೌಲ ಮತ್ತು ಒಂದನೆಯ ಶತಮಾನದ ವಿವಾಹಿತ ದಂಪತಿಗಳಾದ ಅಕ್ವಿಲ ಮತ್ತು ಪ್ರಿಸ್ಕರ ಮಧ್ಯೆ ಪ್ರೀತಿ ಮತ್ತು ಸಂತೋಷಕರವಾದ ಸಂಬಂಧವಿತ್ತು. ವಾಸ್ತವವಾಗಿ, ಪೌಲನು ಅವರ ಕುರಿತು ಹೇಳಿದ್ದು: “ಕ್ರಿಸ್ತ ಯೇಸುವಿನ ಸೇವೆಯಲ್ಲಿ ನನ್ನ ಜೊತೆಕೆಲಸದವರಾದ ಪ್ರಿಸ್ಕಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ಹೇಳಿರಿ. ಅವರು ನನ್ನ ಪ್ರಾಣದ ಸಂರಕ್ಷಣೆಗಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡಿದರು. ನಾನು ಮಾತ್ರವೇ ಅಲ್ಲ, ಅನ್ಯಜನರ ಸಭೆಗಳವರೆಲ್ಲರೂ ಅವರ ಉಪಕಾರವನ್ನು ಸ್ಮರಿಸುತ್ತಾರೆ.” (ರೋಮಾಪುರ 16:3, 4) ಆತಿಥ್ಯವನ್ನು ತೋರಿಸಲು ಮತ್ತು ಸಾಹಚರ್ಯವನ್ನು ಒದಗಿಸಲಿಕ್ಕಾಗಿ ವಿಶೇಷ ಪ್ರಯತ್ನವನ್ನು ಮಾಡುವ ಆಧುನಿಕ ದಿನದ ಅಕ್ವಿಲ ಮತ್ತು ಪ್ರಿಸ್ಕರು, ತಮ್ಮ ಮಿತ್ರರಾಗಿರುವುದಕ್ಕೆ ಸಂಚರಣ ಮೇಲ್ವಿಚಾರಕರೂ ಅವರ ಪತ್ನಿಯರೂ ಆಭಾರಿಗಳಾಗಿದ್ದಾರೆ.
ಸಭೆಗಳನ್ನು ಬಲಪಡಿಸುವುದು
17. ಸಂಚರಣ ಮೇಲ್ವಿಚಾರಕರ ಏರ್ಪಾಡಿನ ಹಿಂದೆ ವಿವೇಕವಿದೆಯೆಂದು ಏಕೆ ಹೇಳಸಾಧ್ಯವಿದೆ, ಮತ್ತು ಅವರು ತಮ್ಮ ಉಪದೇಶವನ್ನು ಎಲ್ಲಿಂದ ಪಡೆಯುತ್ತಾರೆ?
17 “ವಿವೇಕವು ತನ್ನ ಕಾರ್ಯಗಳಿಂದ ನೀತಿಯದ್ದಾಗಿ ರುಜುಪಡಿಸಲ್ಪಡುತ್ತದೆ,” ಎಂದನು ಯೇಸು. (ಮತ್ತಾಯ 11:19, NW) ದೇವರ ಜನರ ಸಭೆಗಳನ್ನು ಬಲಪಡಿಸಲು ಸಹಾಯಮಾಡುವುದರಿಂದ ಸಂಚರಣ ಮೇಲ್ವಿಚಾರಕ ಏರ್ಪಾಡಿನ ಹಿಂದಿರುವ ವಿವೇಕವು ಪ್ರತ್ಯಕ್ಷವಾಗುತ್ತದೆ. ಪೌಲನ ಎರಡನೆಯ ಮಿಷನೆರಿ ಪ್ರಯಾಣದಲ್ಲಿ, ಅವನೂ ಸೀಲನೂ, “ಸಿರಿಯ ಕಿಲಿಕ್ಯ ಸೀಮೆಗಳಲ್ಲಿ ಸಂಚರಿಸುತ್ತಾ ಸಭೆಗಳನ್ನು ಬಲ”ಪಡಿಸಿದರು. ಅಪೊಸ್ತಲರ ಕೃತ್ಯಗಳ ಪುಸ್ತಕವು ನಮಗೆ ಹೇಳುವುದು: “ಬಳಿಕ ಅವರು ಊರೂರುಗಳಲ್ಲಿ ಸಂಚಾರಮಾಡುತ್ತಿರುವಾಗ ಯೆರೂಸಲೇಮಿನಲ್ಲಿದ್ದ ಅಪೊಸ್ತಲರೂ ಸಭೆಯ ಹಿರಿಯರೂ ನಿರ್ಣಯಿಸಿದ್ದ ವಿಧಿಗಳನ್ನು ಅವರಿಗೆ ಒಪ್ಪಿಸಿ ಇವುಗಳನ್ನು ನೀವು ಅನುಸರಿಸಿ ನಡೆಯಬೇಕೆಂದು ಬೋಧಿಸಿದರು. ಸಭೆಗಳು ಕ್ರಿಸ್ತನಂಬಿಕೆಯಲ್ಲಿ ದೃಢವಾಗುತ್ತಾ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ ಬಂದವು.” (ಅ. ಕೃತ್ಯಗಳು 15:40, 41; 16:4, 5) ಇತರ ಎಲ್ಲ ಕ್ರೈಸ್ತರು ಪಡೆಯುವಂತೆಯೇ, ಪ್ರಸಕ್ತ ದಿನದ ಸಂಚರಣ ಮೇಲ್ವಿಚಾರಕರು ಆತ್ಮಿಕ ಶಿಕ್ಷಣವನ್ನು ಶಾಸ್ತ್ರಗಳಿಂದಲೂ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ”ನ ಪ್ರಕಾಶನಗಳಿಂದಲೂ ಪಡೆಯುತ್ತಾರೆ.—ಮತ್ತಾಯ 24:45.
18. ಸಂಚರಣ ಮೇಲ್ವಿಚಾರಕರು ಸಭೆಗಳನ್ನು ಹೇಗೆ ಬಲಪಡಿಸುತ್ತಾರೆ?
18 ಹೌದು, ಸಂಚರಣ ಹಿರಿಯರು ಯೆಹೋವನ ಆತ್ಮಿಕ ಮೇಜಿನಿಂದ ಉಣ್ಣುತ್ತ ಮುಂದುವರಿಯಬೇಕು. ದೇವರ ಸಂಸ್ಥೆಯು ಅನುಸರಿಸುವ ವಿಧಾನಗಳು ಮತ್ತು ಮಾರ್ಗದರ್ಶನಗಳ ಸುಪರಿಚಿತರು ಅವರಾಗಿರಬೇಕು. ಹಾಗಿರುವಲ್ಲಿ ಇಂಥಹ ಪುರುಷರು ಇತರರಿಗೆ ನಿಜಾಶೀರ್ವಾದವಾಗಿರುವರು. ಕ್ಷೇತ್ರ ಸೇವೆಯಲ್ಲಿ ತಮ್ಮ ಹುರುಪಿನ ಉತ್ತಮ ಮಾದರಿಯ ಮೂಲಕ, ಕ್ರೈಸ್ತ ಶುಶ್ರೂಷೆಯಲ್ಲಿ ಜೊತೆ ವಿಶ್ವಾಸಿಗಳು ಅಭಿವೃದ್ಧಿಗೊಳ್ಳುವಂತೆ ಅವರು ಸಹಾಯಮಾಡಬಲ್ಲರು. ಈ ಭೇಟಿಮಾಡುವ ಹಿರಿಯರು ಕೊಡುವ ಬೈಬಲಾಧಾರಿತ ಭಾಷಣಗಳು, ಕೇಳುಗರನ್ನು ಆತ್ಮಿಕವಾಗಿ ಉನ್ನತಿಗೊಳಿಸುತ್ತವೆ. ಸಂಚರಣ ಮೇಲ್ವಿಚಾರಕರು, ದೇವರ ವಾಕ್ಯದ ಸಲಹೆಯನ್ನು ಅನ್ವಯಿಸಿಕೊಳ್ಳಲು, ಭೂವ್ಯಾಪಕವಾಗಿ ಯೆಹೋವನ ಜನರೊಂದಿಗೆ ಹೊಂದಿಕೆಯಲ್ಲಿ ಸೇವೆಮಾಡಲು ಮತ್ತು ದೇವರು ‘ನಂಬಿಗಸ್ತ ಆಳಿ’ನ ಮೂಲಕ ಮಾಡಿರುವ ಆತ್ಮಿಕ ಒದಗಿಸುವಿಕೆಗಳನ್ನು ಬಳಸಲು ಸಹಾಯಮಾಡುವ ಮೂಲಕ, ತಮಗೆ ಭೇಟಿಮಾಡುವ ಸುಯೋಗವಿರುವ ಸಭೆಗಳನ್ನು ಬಲಪಡಿಸುತ್ತಾರೆ.
19. ಪರಿಗಣನೆಗಾಗಿ ಯಾವ ಪ್ರಶ್ನೆಗಳು ಉಳಿದಿವೆ?
19 ಸುಮಾರು ನೂರು ವರುಷಗಳ ಹಿಂದೆ, ಯೆಹೋವನ ಸಂಸ್ಥೆಯು ಬೈಬಲ್ ವಿದ್ಯಾರ್ಥಿಗಳ ಮಧ್ಯೆ ಸಂಚರಣ ಮೇಲ್ವಿಚಾರಕರ ಕೆಲಸವನ್ನು ಸ್ಥಾಪಿಸಿದಾಗ, ಈ ಪತ್ರಿಕೆಯು ಹೇಳಿದ್ದು: “ನಾವು ಫಲಿತಾಂಶಗಳಿಗಾಗಿ ಮತ್ತು ಕರ್ತನ ಇನ್ನೂ ಹೆಚ್ಚಿನ ಮುನ್ನಡೆಸುವಿಕೆಗಾಗಿ ಕಾಯೋಣ.” ಯೆಹೋವನ ನಡೆಸುವಿಕೆಯು ಸ್ಪಷ್ಟವಾಗಿ ಪ್ರತ್ಯಕ್ಷವಾಗಿದೆ. ಆತನ ಆಶೀರ್ವಾದದ ಕಾರಣದಿಂದ ಮತ್ತು ಆಡಳಿತ ಮಂಡಳಿಯ ಉಸ್ತುವಾರಿಯ ಕೆಳಗೆ, ಈ ಕೆಲಸವು ಗತ ವರುಷಗಳಲ್ಲಿ ವಿಸ್ತರಿಸಲ್ಪಟ್ಟು, ನಾಜೂಕುಗೊಳಿಸಲ್ಪಟ್ಟಿದೆ. ಇದರ ಫಲವಾಗಿ, ಭೂಮ್ಯಾದ್ಯಂತ ಯೆಹೋವನ ಸಾಕ್ಷಿಗಳ ಸಭೆಗಳು ನಂಬಿಕೆಯಲ್ಲಿ ಬಲಗೊಳಿಸಲ್ಪಡುತ್ತಿವೆ ಮತ್ತು ಸಂಖ್ಯೆಯಲ್ಲಿ ದಿನೇ ದಿನೇ ವೃದ್ಧಿಯಾಗುತ್ತಿವೆ. ಯೆಹೋವನು ಈ ಪುರುಷರಲ್ಲಿ ವರಗಳ ಆತ್ಮತ್ಯಾಗ ಮನೋಭಾವವನ್ನು ಆಶೀರ್ವದಿಸುತ್ತಿದ್ದಾನೆಂಬುದು ವ್ಯಕ್ತ. ಆದರೆ ಸಂಚರಣ ಮೇಲ್ವಿಚಾರಕರು ತಮ್ಮ ಕೆಲಸವನ್ನು ಯಶಸ್ವಿಯಾಗಿ ಹೇಗೆ ನಿರ್ವಹಿಸಬಲ್ಲರು? ಅವರ ಲಕ್ಷ್ಯಗಳೇನು? ಅವರು ಅತ್ಯಂತ ಹೆಚ್ಚಿನ ಒಳಿತನ್ನು ಹೇಗೆ ಸಾಧಿಸಬಲ್ಲರು?
ನೀವು ಹೇಗೆ ಉತ್ತರಿಸುವಿರಿ?
◻ ಸರ್ಕಿಟ್ ಮತ್ತು ಡಿಸ್ಟ್ರಿಕ್ಟ್ ಮೇಲ್ವಿಚಾರಕರ ಕೆಲವು ಕರ್ತವ್ಯಗಳಾವುವು?
◻ ಸಂಚರಣ ಮೇಲ್ವಿಚಾರಕರಿಗೆ ಆತ್ಮತ್ಯಾಗ ಮನೋಭಾವವು ಏಕೆ ಅಗತ್ಯ?
◻ ಸಂಚರಣ ಹಿರಿಯರ ಮತ್ತು ಅವರ ಪತ್ನಿಯರ ಕೆಲಸಕ್ಕೆ ಗಣ್ಯತೆಯನ್ನು ಹೇಗೆ ತೋರಿಸಸಾಧ್ಯವಿದೆ?
◻ ಸಭೆಗಳು ನಂಬಿಕೆಯಲ್ಲಿ ದೃಢವಾಗಿರುವಂತೆ ಸಂಚರಣ ಮೇಲ್ವಿಚಾರಕರು ಏನು ಮಾಡಬಲ್ಲರು?
[ಪುಟ 10 ರಲ್ಲಿರುವ ಚಿತ್ರ]
ಸತತ ಸಂಚರಣೆಯು ಆತ್ಮತ್ಯಾಗ ಮನೋಭಾವವನ್ನು ಕೇಳಿಕೊಳ್ಳುತ್ತದೆ
[ಪುಟ 13 ರಲ್ಲಿರುವ ಚಿತ್ರ]
ಸಂಚರಣ ಮೇಲ್ವಿಚಾರಕರಿಗೂ ಅವರ ಪತ್ನಿಯರಿಗೂ ನೀವು ಅತಿಥಿಸತ್ಕಾರವನ್ನು ತೋರಿಸಿದ್ದೀರೊ?