ರಾಜ್ಯ ಘೋಷಕರು ವರದಿ ಮಾಡುತ್ತಾರೆ
ರಷ್ಯದಲ್ಲಿರುವ “ಬಾಯಾರಿದವ”ರಿಗೆ ನೆರವು
“ನೀತಿಗೆ ಹಸಿದು ಬಾಯಾರಿದವರು ಧನ್ಯರು; ಅವರಿಗೆ ತೃಪ್ತಿಯಾಗುವದು,” ಎಂದು ಯೇಸು ಹೇಳಿದನು. (ಮತ್ತಾಯ 5:6) ಈ ಮುಂದಿನ ಅನುಭವಗಳು, ಎಲ್ಲಿ 70ಕ್ಕಿಂತಲೂ ಹೆಚ್ಚಿನ ವರ್ಷಗಳ ವರೆಗೆ ಧಾರ್ಮಿಕ ಸ್ವಾತಂತ್ರ್ಯವು ಮೊಟಕುಗೊಳಿಸಲ್ಪಟ್ಟಿತ್ತೊ, ಆ ರಷ್ಯದಲ್ಲಿರುವ ಅನೇಕರ ಆತ್ಮಿಕ ಬಾಯಾರಿಕೆಯನ್ನು ತೃಪ್ತಿಪಡಿಸಲು ಯೆಹೋವನ ಸಾಕ್ಷಿಗಳು ಹೇಗೆ ನೆರವು ನೀಡುತ್ತಿದ್ದಾರೆಂಬುದನ್ನು ವಿಶದಗೊಳಿಸುತ್ತವೆ.
▪ ಅನೇಕ ವರ್ಷಗಳ ವರೆಗೆ ಉತ್ತರಿಸಲ್ಪಡದೇ ಹೋಗಿದ್ದ ಗಂಭೀರವಾದ ಬೈಬಲ್ ಪ್ರಶ್ನೆಗಳು, ವಲ್ಯಿಂಟ್ಯೀನ ಎಂಬ ಹೆಸರಿನ ಸ್ತ್ರೀಯಲ್ಲಿದ್ದವು. ಉದಾಹರಣೆಗೆ, ಆಕೆ ಕುತೂಹಲಪಟ್ಟದ್ದು: ‘ಯೇಸು ಯಾರಿಗೆ ಪ್ರಾರ್ಥಿಸಿದನು?’ ಯೇಸು ತನಗಿಂತಲೂ ಉನ್ನತನಾಗಿರುವ ಯಾರೊ ಒಬ್ಬನಿಗೆ ಪ್ರಾರ್ಥಿಸಿದ್ದಿರಬೇಕೆಂದು ಆಕೆ ವಿವೇಚಿಸಿದಳು ಮತ್ತು ಈ ವ್ಯಕ್ತಿಯ ಹೆಸರಿನ ಬಗ್ಗೆ ಕುತೂಹಲಪಟ್ಟಳು.
ಆಕೆ ರಷ್ಯನ್ ಆರ್ತೊಡಾಕ್ಸ್ ಚರ್ಚನ್ನು ಸಂದರ್ಶಿಸಿದಳು. ಹಾಗಿದ್ದರೂ, ಆ ಧರ್ಮದಲ್ಲಿ ಆಕೆ ತನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲಿಲ್ಲ. ತೃಪ್ತಳಾಗದೆ, ಆಕೆ ಒಂದು ಪ್ರಾಟೆಸ್ಟೆಂಟ್ ಚರ್ಚಿಗೆ ಹೋದಳು ಆದರೆ ಪುನಃ ಸ್ಪಷ್ಟವಾದ ಉತ್ತರಗಳನ್ನು ಕಂಡುಕೊಳ್ಳಲಿಲ್ಲ. ಇನ್ನಾವ ಕಡೆಗೆ ಹೋಗುವುದೆಂದು ಅರಿಯದೆ, ಸ್ವತಃ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾ, ವಲ್ಯಿಂಟ್ಯೀನ ಬೈಬಲನ್ನು—ಯಾವ ಪ್ರಯೋಜನವೂ ಇಲ್ಲದೆ—ಓದಲಾರಂಭಿಸಿದಳು. ಆಕೆ ಸಹಾಯಕ್ಕಾಗಿ ಪ್ರಾರ್ಥಿಸಿದಳು.
ಸ್ವಲ್ಪ ಸಮಯದ ನಂತರ, ಯೆಹೋವನ ಸಾಕ್ಷಿಗಳು ಆಕೆಯ ಬಾಗಿಲನ್ನು ತಟ್ಟಿದರು. ದೇವರ ಹೆಸರು ಯೆಹೋವ ಎಂಬುದನ್ನು ಅವರು ಬೈಬಲಿನಿಂದ ಆಕೆಗೆ ತೋರಿಸಿದರು. ಯೇಸು ಯಾರಿಗೆ ಪ್ರಾರ್ಥಿಸಿದ್ದನೆಂಬುದನ್ನು ಆಕೆ ಕೊನೆಗೂ ತಿಳಿದುಕೊಂಡಳು! ಆಕೆ ಸಾಕ್ಷಿಗಳೊಂದಿಗೆ ಬೈಬಲನ್ನು ಕ್ರಮವಾಗಿ ಅಭ್ಯಸಿಸಲು ತೊಡಗಿದಳು. ಅನೇಕ ವೇಳೆ ಆಕೆ ವಾಚ್ ಟವರ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಸಾಹಿತ್ಯವನ್ನು ಓದುತ್ತಾ ಮತ್ತು ಬೈಬಲ್ ವಚನಗಳನ್ನು ತೆರೆದು ನೋಡುತ್ತಾ ಇಡೀ ರಾತ್ರಿ ಎಚ್ಚರವಾಗಿರುತ್ತಿದ್ದಳು. ತಾನು ಸತ್ಯವನ್ನು ಕಂಡುಕೊಂಡಿದ್ದೇನೆಂದು ವಲ್ಯಿಂಟ್ಯೀನ ಬೇಗನೆ ತೀರ್ಮಾನಿಸಿದಳು. ಮೂರು ತಿಂಗಳುಗಳೊಳಗೆ ಆಕೆ ಸಾರುವ ಕೆಲಸದಲ್ಲಿ ಭಾಗವಹಿಸಲಾರಂಭಿಸಿದಳು, ಮತ್ತು ಅದಾದ ಎರಡು ತಿಂಗಳುಗಳ ನಂತರ, ಆಕೆ ದೀಕ್ಷಾಸ್ನಾನಪಡೆದುಕೊಂಡಳು. ಸತ್ಯಕ್ಕಾಗಿ ಆಕೆಯ ಪ್ರಾರ್ಥನಾಪೂರ್ವಕವಾದ ಅನ್ವೇಷಣೆಯು ಬಹುಮಾನಿಸಲ್ಪಟ್ಟಿತು.
▪ ಸಾಕ್ಷಿಯೊಬ್ಬನು ಬಹು ದೂರದಲ್ಲಿರುವ ಒಂದು ಕ್ಷೇತ್ರದಲ್ಲಿ ಸಾರಲು, ಬಸ್ಸಿನ ಮೂಲಕ ಪ್ರಯಾಣಿಸಿದನು. ಸಂಚಾರದ ಸಮಯದಲ್ಲಿ ಅವನು ಬೈಬಲಿನ ವಾಗ್ದಾನಗಳ ಕುರಿತು ಒಬ್ಬ ಯುವ ಸ್ತ್ರೀಯೊಂದಿಗೆ ಮಾತಾಡಿದನು, ಆದರೆ ಆ ಯುವ ಸ್ತ್ರೀಯು ಅದರಲ್ಲಿ ಆಸಕ್ತಳಾಗಿರಲಿಲ್ಲ. ಎರಡು ತಿಂಗಳುಗಳ ತರುವಾಯ, ಒಂದು ಬಹಿರಂಗ ಭಾಷಣವನ್ನು ಕೊಡಲು ಸಾಕ್ಷಿಯು ಅದೇ ಕ್ಷೇತ್ರಕ್ಕೆ ಎರಡನೆಯ ಸಂಚಾರವನ್ನು ಕೈಕೊಂಡನು. ಭಾಷಣದ ನಂತರ ಅವನೊಬ್ಬ ಸಂದರ್ಶಕನನ್ನು ಸಮೀಪಿಸಿ, ಅವನನ್ನು ಕೇಳಿದ್ದು: “ಬೈಬಲಿನಿಂದ ಸುವಾರ್ತೆಯ ಕುರಿತು ನಿನ್ನೊಂದಿಗೆ ಯಾರಾದರೊಬ್ಬರು ಈಗಾಗಲೇ ಮಾತಾಡಿದ್ದಾರೊ?” “ಹೌದು, ನೀನು ಮಾತಾಡಿದ್ದಿ,” ಎಂದು ಆ ಮನುಷ್ಯನು ಉತ್ತರಿಸಿದನು. ಅವನು ತಮಾಷೆ ಮಾಡುತ್ತಿದ್ದಾನೆಂದು ಸಾಕ್ಷಿಯು ನೆನಸಿದನು. ಆದರೆ ಎರಡು ತಿಂಗಳುಗಳ ಮುಂಚೆ, ಬಸ್ ಸಂಚಾರದ ಸಮಯದಲ್ಲಿ, ಸಾಕ್ಷಿ ಮತ್ತು ಆ ಯುವ ಸ್ತ್ರೀಯ ನಡುವಿನ ಸಂಭಾಷಣೆಯನ್ನು ಅವನು ಕೇಳಿಸಿಕೊಂಡಿದ್ದನೆಂದು ಆ ಯುವ ಪುರುಷನು ವಿವರಿಸಿದನು. “ನಾನು ಹೆಚ್ಚನ್ನು ತಿಳಿದುಕೊಳ್ಳಲು ಬಯಸಿದೆ, ಆದರೆ ನೀನು ಬಸ್ಸಿನಿಂದ ಇಳಿದುಹೋದೆ, ಮತ್ತು ಯೆಹೋವನ ಸಾಕ್ಷಿಗಳನ್ನು ನಾನೆಂದಿಗೂ ಪುನಃ ನೋಡಲಾರೆನೆಂದು ನಾನು ನೆನಸಿದೆ. ಅನಂತರ ನನ್ನ ಕೆಲಸದ ಸ್ಥಳದಲ್ಲಿ, ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಸಿಸುತ್ತಿರುವ ಒಬ್ಬ ಮನುಷ್ಯನನ್ನು ನಾನು ಸಂಧಿಸಿದೆ. ಮತ್ತು ಹೀಗೆ ನಾನಿಲ್ಲಿದ್ದೇನೆ!”
ಆ ಮನುಷ್ಯನು ಮತ್ತು ಅವನ ಹೆಂಡತಿಯು ಬೈಬಲನ್ನು ಅಭ್ಯಸಿಸಲಾರಂಭಿಸಿದರು. ಬಹಳ ಕೊಂಚ ಸಮಯದ ನಂತರ, ತನ್ನ ಉದ್ಯೋಗವು ಬೈಬಲ್ ಮೂಲತತ್ವಗಳಿಗೆ ವಿರುದ್ಧವಾಗಿರುವುದನ್ನು ಅವನು ನೋಡಸಾಧ್ಯವಿತ್ತು. ದೇವರ ಮುಂದೆ ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ಇಟ್ಟುಕೊಳ್ಳಲು ಬಯಸುತ್ತಾ, ತನ್ನ ವೃತ್ತಿಯನ್ನು ಅವನು ಬದಲಾಯಿಸಿದನು. ಈಗ ಪ್ರತಿಯೊಂದು ಸಂದರ್ಭದಲ್ಲಿ ಅವನು ದೇವರ ರಾಜ್ಯದ ಕುರಿತು ಇತರರಿಗೆ ಹೇಳುತ್ತಾನೆ. ಅವನ ಹೆಂಡತಿಯೂ ಬೈಬಲಿನ ಆಕೆಯ ಅಧ್ಯಯನದಲ್ಲಿ ಪ್ರಗತಿಮಾಡುತ್ತಿದ್ದಾಳೆ.
ರಷ್ಯದ ವಿಶಾಲವಾದ ಟೆರಿಟೊರಿಯಲ್ಲಿರುವ ಯೆಹೋವನ ಸಾಕ್ಷಿಗಳು, ಸಕಲ ಪ್ರಾಮಾಣಿಕ ಜನರಿಗೆ ಹೀಗೆ ಹೇಳುವುದರಲ್ಲಿ ಒಂದು ಪಾಲನ್ನು ಪಡೆದಿರಲು ಸಂತೋಷಿಸುತ್ತಾರೆ: “ಬಾ . . . ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.”—ಪ್ರಕಟನೆ 22:17.