ಕ್ರೈಸ್ತ ಪ್ರಪಂಚದ ಆರಾಧನೆಯನ್ನು ದೇವರು ಹೇಗೆ ವೀಕ್ಷಿಸುತ್ತಾನೆ?
“ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ” ಎಂದನು ಯೇಸು ಕ್ರಿಸ್ತನು, “ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು. ಸ್ವಾಮೀ, ಸ್ವಾಮೀ, . . . ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ—ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.”—ಮತ್ತಾಯ 7:21-23.
ತನ್ನ ಪವಿತ್ರ ವಾಕ್ಯವಾದ ಪವಿತ್ರ ಬೈಬಲಿನ ಮೂಲಕ, ದೇವರು ತನ್ನ ಚಿತ್ತವೇನೆಂಬುದನ್ನು ಸ್ಪಷ್ಟಗೊಳಿಸಿದ್ದಾನೆ. ಕ್ರೈಸ್ತ ಪ್ರಪಂಚದ ಚರ್ಚುಗಳು ದೇವರ ಚಿತ್ತವನ್ನು ಮಾಡುತ್ತಿವೆಯೆ? ಇಲ್ಲವೆ ಅವರು “ಧರ್ಮವನ್ನು ಮೀರಿನಡೆಯುವವರು” ಎಂಬುದಾಗಿ ಯೇಸು ಕರೆದವರಾಗಿದ್ದಾರೊ?
ರಕ್ತಪಾತ
ತನ್ನ ಸ್ವಾಮಿಯ ಮರಣಕ್ಕೆ ಹಿಂದಿನ ರಾತ್ರಿ, ಯೇಸುವನ್ನು ದಸ್ತಗಿರಿ ಮಾಡಲು ಕಳುಹಿಸಲ್ಪಟ್ಟ ಸೈನಿಕ ತಂಡದೊಂದಿಗೆ ಪೇತ್ರನು ಹೆಚ್ಚುಕಡಮೆ ಒಂದು ಸಶಸ್ತ್ರ ಹೋರಾಟವನ್ನೇ ಆರಂಭಿಸಿದನು. (ಯೋಹಾನ 18:3, 10) ಆದರೆ ಯೇಸುವು ಶಾಂತಿಯನ್ನು ಪುನಸ್ಸ್ಥಾಪಿಸಿ, ಪೇತ್ರನಿಗೆ, “ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು,” ಎಂದು ಎಚ್ಚರಿಸಿದನು. (ಮತ್ತಾಯ 26:52) ಈ ಸ್ಪಷ್ಟವಾದ ಎಚ್ಚರಿಕೆಯು ಪ್ರಕಟನೆ 13:10ರಲ್ಲಿ ಪುನರಾವೃತ್ತಿಸಲ್ಪಡುತ್ತದೆ. ಕ್ರೈಸ್ತ ಪ್ರಪಂಚದ ಚರ್ಚುಗಳು ಇದನ್ನು ಆಲಿಸಿವೆಯೆ? ಇಲ್ಲವೆ, ಭೂಮಿಯ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧಗಳ ಜವಾಬ್ದಾರಿಯಲ್ಲಿ ಅವರು ಭಾಗಿಗಳೊ?
IIನೇ ಜಾಗತಿಕ ಯುದ್ಧದ ಸಮಯದಲ್ಲಿ, ನೂರಾರು ಸಾವಿರ ಸರ್ಬಿಯನರು ಮತ್ತು ಕ್ರೊಆ್ಯಟರು ಧರ್ಮದ ಹೆಸರಿನಲ್ಲಿ ಕೊಲೆಮಾಡಲ್ಪಟ್ಟರು. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ವರದಿಸುವುದು: “ಸ್ಥಳೀಯ ಫ್ಯಾಸಿಸ್ಟ್ ಆಡಳಿತವು, ನಾಸಿ ಆಚಾರಗಳನ್ನೂ ಮೀರಿಸಿದ ‘ಕುಲಸಂಬಂಧಿತ ಶುದ್ಧೀಕರಣ’ ಎಂಬ ಕಾರ್ಯನೀತಿಯನ್ನು ಸ್ಥಾಪಿಸಿತು. . . . ಸರ್ಬಿಯದ ಜನಸಂಖ್ಯೆಯಲ್ಲಿ ಮೂರರಲ್ಲಿ ಒಂದಂಶವು ಗಡೀಪಾರು ಮಾಡಲ್ಪಡುವುದೆಂದೂ, ಮೂರರಲ್ಲಿ ಒಂದಂಶ ರೋಮನ್ ಕ್ಯಾಥೊಲಿಕ್ ಮತಕ್ಕೆ ಪರಿವರ್ತನೆ ಮಾಡಲ್ಪಡುವುದೆಂದೂ ಮತ್ತು ಮೂರರಲ್ಲಿ ಒಂದಂಶ ಕೊಲ್ಲಲ್ಪಡುವುದೆಂದೂ ಘೋಷಿಸಲ್ಪಟ್ಟಿತು. . . . ಈ ಆಚಾರಗಳಲ್ಲಿ ಕ್ಯಾಥೊಲಿಕ್ ವೈದಿಕರ ಆಂಶಿಕ ಸಹಯೋಗವು ಯುದ್ಧಾನಂತರ ಚರ್ಚ್-ಸರಕಾರ ಸಂಬಂಧಗಳನ್ನು ಗುರುತರವಾಗಿ ಕೆಡಿಸಿತು.” ಜನರಲ್ಲಿ ಅಸಂಖ್ಯಾತರನ್ನು ಕಥೋಲಿಕತ್ವಕ್ಕೆ ಮತಾಂತರಗೊಳ್ಳುವಂತೆ ಇಲ್ಲವೆ ಸಾಯುವಂತೆ ಬಲಾತ್ಕರಿಸಲಾಯಿತು; ಸಾವಿರಾರು ಇತರರಿಗೆ ಆಯ್ಕೆಯೇ ಕೊಡಲ್ಪಡಲಿಲ್ಲ. ಇಡಿಯ ಹಳ್ಳಿಗಳನ್ನು—ಸ್ತ್ರೀ, ಪುರುಷರು ಮತ್ತು ಮಕ್ಕಳನ್ನು—ಆರ್ಥೊಡಕ್ಸ್ ಚರ್ಚುಗಳೊಳಗೆ ಬಲಾತ್ಕಾರದಿಂದ ನುಗ್ಗಿಸಿ ಕೊಲ್ಲಲಾಯಿತು. ವಿರೋಧಿಸುತ್ತಿದ್ದ ಕಮ್ಯೂನಿಸ್ಟ್ ಸೈನ್ಯಗಳ ಕುರಿತೇನು? ಅವರಿಗೂ ಧಾರ್ಮಿಕ ಬೆಂಬಲವಿತ್ತೊ?
“ಪಾದ್ರಿಗಳಲ್ಲಿ ಕೆಲವರು ಯುದ್ಧದಲ್ಲಿ ಆ ಕ್ರಾಂತಿಕಾರಿ ಸೈನ್ಯಗಳ ಪಕ್ಷದಲ್ಲಿ ಭಾಗವಹಿಸಿದರು,” ಎಂದು ಯುಗೊಸ್ಲಾವಿಯದ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕವು ವರದಿಸುತ್ತದೆ. “ಪಕ್ಷಾವಲಂಬಿ ಸೈನ್ಯಗಳಲ್ಲಿ, ಸರ್ಬಿಯನ್ ಆರ್ಥೊಡಕ್ಸ್ ಮತ್ತು ರೋಮನ್ ಕ್ಯಾಥೊಲಿಕ್ ಚರ್ಚ್—ಇವೆರಡರ ಪಾದ್ರಿಗಳೂ ಸೇರಿದ್ದರು,” ಎಂದು ಯುಗೊಸ್ಲಾವಿಯ ಮತ್ತು ಹೊಸ ಕಮ್ಯೂನಿಸ್ಮ್ (ಇಂಗ್ಲಿಷ್) ಎಂಬ ಪುಸ್ತಕವು ಹೇಳುತ್ತದೆ. ಧಾರ್ಮಿಕ ವ್ಯತ್ಯಾಸಗಳು ಬಾಲ್ಕನ್ ದೇಶಗಳಲ್ಲಿ ಯುದ್ಧಜ್ವಾಲೆಗಳನ್ನು ಕೆರಳಿಸುವುದನ್ನು ಮುಂದುವರಿಸುತ್ತವೆ.
ಮತ್ತು ರುವಾಂಡದ ಕುರಿತೇನು? ಕ್ಯಾಥೊಲಿಕ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ರಿಲೇಶನ್ಸ್ನ ಜನರಲ್ ಸೆಕ್ರಿಟರಿಯಾದ ಇಯನ್ ಲಿಂಡನ್, ದ ಮಂತ್ ಪತ್ರಿಕೆಯಲ್ಲಿ ಈ ಅಂಗೀಕಾರವನ್ನು ಮಾಡಿದರು: “ಲಂಡನ್ನಲ್ಲಿ ಆಫ್ರಿಕನ್ ರೈಟ್ಸ್ ಮಾಡಿದ ತನಿಖೆಗಳು, ಸ್ಥಳಿಕ ಕ್ಯಾಥೊಲಿಕ್, ಆ್ಯಂಗ್ಲಿಕನ್ ಮತ್ತು ಬ್ಯಾಪ್ಟಿಸ್ಟ್ ಚರ್ಚ್ ಮುಖಂಡರು ಪ್ರಜಾಸೈನ್ಯಗಳು ಮಾಡಿದ ಹತ್ಯೆಗಳಲ್ಲಿ ಕರ್ತವ್ಯಲೋಪ ಅಥವಾ ಅಕೃತ್ಯಗಳಿಂದ ದೋಷಿಗಳಾಗಿರುವ ಒಂದೊ ಎರಡೊ ಉದಾಹರಣೆಗಳನ್ನು ಒದಗಿಸುತ್ತವೆ . . . ಪ್ಯಾರಿಷ್ಗಳಲ್ಲಿ ಪ್ರಮುಖ ಕ್ರೈಸ್ತರ ಗಮನಾರ್ಹ ಸಂಖ್ಯೆಗಳು ಹತ್ಯೆಗಳಲ್ಲಿ ಸೇರಿದ್ದವೆಂಬುದಕ್ಕೆ ಕಿಂಚಿತ್ತೂ ಸಂದೇಹವಿಲ್ಲ.” ವಿಷಾದಕರವಾಗಿ, ಕ್ರೈಸ್ತರೆಂದು ಹೇಳಿಕೊಳ್ಳುವವರ ಮಧ್ಯೆ ಹೋರಾಟಗಳು ಮಧ್ಯ ಆಫ್ರಿಕವನ್ನು ಬಾಧಿಸುವುದನ್ನು ಮುಂದುವರಿಸುತ್ತವೆ.
ಜಾರತ್ವ ಮತ್ತು ವ್ಯಭಿಚಾರ
ದೇವರ ವಾಕ್ಯಾನುಸಾರ, ಕಾಮಕ್ಕಿರುವ ಒಂದೇ ಒಂದು ಗೌರವಾರ್ಹ ಸ್ಥಳವು ವಿವಾಹಬಂಧದೊಳಗಾಗಿದೆ. “ವಿವಾಹವು ಸಕಲರ ಮಧ್ಯೆ ಗೌರವಾರ್ಹವಾಗಿರಲಿ, ಮತ್ತು ವಿವಾಹಮಂಚವು ಕಳಂಕರಹಿತವಾಗಿರಲಿ, ಏಕೆಂದರೆ ದೇವರು ಜಾರರಿಗೂ ವ್ಯಭಿಚಾರಿಗಳಿಗೂ ನ್ಯಾಯತೀರಿಸುವನು” ಎಂದು ಬೈಬಲು ಹೇಳುತ್ತದೆ. (ಇಬ್ರಿಯ 13:4, NW) ಚರ್ಚ್ ಮುಖಂಡರು ದೇವರ ಈ ಬೋಧನೆಯನ್ನು ಸಮರ್ಥಿಸುತ್ತಾರೆಯೆ?
ಆಸ್ಟ್ರೇಲಿಯದಲ್ಲಿನ ಆ್ಯಂಗ್ಲಿಕನ್ ಚರ್ಚು 1989ರಲ್ಲಿ, ದಂಪತಿಗಳು ಪರಸ್ಪರವಾಗಿ ಪೂರ್ತಿ ಬದ್ಧರಾಗಿರುವಲ್ಲಿ ವಿವಾಹಪೂರ್ವದ ಸಂಭೋಗವು ತಪ್ಪಲ್ಲ ಎಂಬುದನ್ನು ಸೂಚಿಸುವ, ಲೈಂಗಿಕತೆಯ ಕುರಿತಾದ ಒಂದು ಅಧಿಕೃತ ಪ್ರಮಾಣಪತ್ರವನ್ನು ಬಿಡುಗಡೆಮಾಡಿತು. ಇನ್ನೂ ಇತ್ತೀಚೆಗೆ, ಸ್ಕಾಟ್ಲೆಂಡ್ನಲ್ಲಿನ ಆ್ಯಂಗ್ಲಿಕನ್ ಚರ್ಚಿನ ನಾಯಕನು ಹೇಳಿದ್ದು: “ಪ್ರಣಯ ಪ್ರಸಂಗಗಳನ್ನು ಚರ್ಚು ಪಾಪಕರವೂ ತಪ್ಪೂ ಆಗಿದೆಯೆಂದು ಖಂಡಿಸಬಾರದು. ವ್ಯಭಿಚಾರವನ್ನು ನಮ್ಮ ತಳಿಶಾಸ್ತ್ರವು ಆಗಿಸುತ್ತದೆಂಬುದನ್ನು ಚರ್ಚು ಒಪ್ಪಿಕೊಳ್ಳಬೇಕು.”
ದಕ್ಷಿಣ ಆಫ್ರಿಕದಲ್ಲಿನ ವೈದಿಕರಲ್ಲಿ ಅನೇಕರು ಸಲಿಂಗಿ ಕಾಮವನ್ನು ಸಮರ್ಥಿಸುತ್ತ ಮಾತಾಡಿದ್ದಾರೆ. ಉದಾಹರಣೆಗೆ, 1990ರಲ್ಲಿ ದಕ್ಷಿಣ ಆಫ್ರಿಕನ್ ಪತ್ರಿಕೆಯಾದ ಯೂ, ಒಬ್ಬ ಪ್ರಮುಖ ಆ್ಯಂಗ್ಲಿಕನ್ ಶುಶ್ರೂಷಕನು ಹೀಗೆ ಹೇಳಿದನೆಂದು ಉಲ್ಲೇಖಿಸಿತು: “ಶಾಸ್ತ್ರವು ಸದಾಕಾಲಕ್ಕೆ ಬದ್ಧವಾಗಿಲ್ಲ. . . . ಸಲಿಂಗಿ ಕಾಮಿಗಳ ಕಡೆಗೆ ಚರ್ಚಿನ ಮನೋಭಾವ ಮತ್ತು ಕಾರ್ಯನೀತಿಯಲ್ಲಿ ಬದಲಾವಣೆಗಳಿರುವವೆಂದು ನಾನು ನಂಬುತ್ತೇನೆ.”—ವ್ಯತ್ಯಾಸ ನೋಡಿರಿ ರೋಮಾಪುರ 1:26, 27.
1994 ಬ್ರಿಟ್ಯಾನಿಕ ಬುಕ್ ಆಫ್ ದ ಯಿಯರ್ಗನುಸಾರ ಅಮೆರಿಕನ್ ಚರ್ಚುಗಳಲ್ಲಿ ಲೈಂಗಿಕತೆಯು ಪ್ರಬಲವಾದ ವಿವಾದಾಂಶವಾಗಿ ಪರಿಣಮಿಸಿದೆ—ವಿಶೇಷವಾಗಿ “ಪ್ರಕಟಿತ ಪುರುಷಗಾಮಿಗಳನ್ನು ಮತ್ತು ಸ್ತ್ರೀಗಾಮಿಗಳನ್ನು ಪೌರೋಹಿತ್ಯಕ್ಕೆ ನೇಮಿಸುವುದು, ಸಲಿಂಗಿ ಕಾಮಿಗಳ ಹಕ್ಕುಗಳ ಧಾರ್ಮಿಕ ಗ್ರಹಿಕೆ, ‘ಪುರುಷಗಾಮಿ ಮದುವೆ’ ಮತ್ತು ಸಲಿಂಗಿ ಕಾಮದೊಂದಿಗೆ ಜೊತೆಗೂಡಿರುವ ಜೀವನಶೈಲಿಗಳ ನ್ಯಾಯಸಮ್ಮತತೆ ಅಥವಾ ಖಂಡನೆ”ಯಂತಹ ವಿಷಯಗಳು. ಹೆಚ್ಚಿನ ಲೈಂಗಿಕ ಸ್ವಾತಂತ್ರ್ಯಕ್ಕಾಗಿ ಚಳವಳಿ ಹೂಡುವ ವೈದಿಕರನ್ನು ಪ್ರಧಾನ ಚರ್ಚ್ ಪಂಗಡಗಳು ಸಹಿಸಿಕೊಳ್ಳುತ್ತವೆ. 1995 ಬ್ರಿಟ್ಯಾನಿಕ ಬುಕ್ ಆಫ್ ದ ಯಿಯರ್ಗನುಸಾರ, 55 ಮಂದಿ ಇಪಿಸ್ಕೊಪಲ್ ಬಿಷಪರು, “ಸಲಿಂಗಿ ಕಾಮ ದೀಕ್ಷೆ ಮತ್ತು ಆಚಾರವನ್ನು ಅಂಗೀಕರಿಸುವುದನ್ನು ದೃಢೀಕರಿಸುತ್ತ” ಒಂದು ಘೋಷಣೆಗೆ ಸಹಿಹಾಕಿದರು.
ಕೆಲವು ವೈದಿಕರು, ಯೇಸು ಸಲಿಂಗಿ ಕಾಮದ ವಿರುದ್ಧ ಮಾತಾಡಲೇ ಇಲ್ಲವೆಂದು ಹೇಳುತ್ತ, ಅದರ ಪರವಾಗಿ ವಾದಿಸುತ್ತಾರೆ. ಆದರೆ ವಿಷಯವು ನಿಜವಾಗಿಯೂ ಹಾಗಿದೆಯೊ? ದೇವರ ವಾಕ್ಯವು ಸತ್ಯವೆಂದು ಯೇಸು ಕ್ರಿಸ್ತನು ತಿಳಿಯಪಡಿಸಿದನು. (ಯೋಹಾನ 17:17) ಅಂದರೆ, ಯಾಜಕಕಾಂಡ 18:22ರಲ್ಲಿ ವರ್ಣಿಸಲಾಗಿರುವ ಸಲಿಂಗಿ ಕಾಮದ ವಿಷಯದ ದೇವರ ನೋಟವನ್ನು ಅವನು ಅನುಮೋದಿಸಿದನು. ಅಲ್ಲಿ ಓದುವುದು: “ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಬಾರದು; ಅದು ಹೇಸಿಗೆಯಾದ ಕೆಲಸ.” ಇದಲ್ಲದೆ, ಯೇಸು ಜಾರತ್ವ ಮತ್ತು ವ್ಯಭಿಚಾರವನ್ನು “ಈ ಕೆಟ್ಟ ವಿಷಯಗಳ” ಪಟ್ಟಿಯಲ್ಲಿ ಸೇರಿಸಿ, ಅವು “ಒಳಗಿನಿಂದ ಹೊರಟು ಮನುಷ್ಯನನ್ನು ಹೊಲೆಮಾಡುತ್ತವೆ” ಎಂದನು. (ಮಾರ್ಕ 7:21-23) ಜಾರತ್ವಕ್ಕಿರುವ ಗ್ರೀಕ್ ಪದವು, ವ್ಯಭಿಚಾರದ್ದಕ್ಕಿಂತಲೂ ಹೆಚ್ಚು ವಿಶಾಲಾರ್ಥವುಳ್ಳ ಶಬ್ದವಾಗಿದೆ. ಶಾಸನಬದ್ಧ ವಿವಾಹದ ಹೊರಗಣ ಸಕಲ ರೂಪಗಳ ಲೈಂಗಿಕ ಸಂಬಂಧಗಳನ್ನು—ಸಲಿಂಗಿ ಕಾಮವನ್ನು ಸೇರಿಸಿ—ಇದು ವರ್ಣಿಸುತ್ತದೆ. (ಯೂದ 7) ಯಾರು ಜಾರತ್ವದ ಗಂಭೀರತೆಯನ್ನು ಲಘುವಾಗಿ ತೆಗೆದುಕೊಳ್ಳುತ್ತಾನೊ ಅಂತಹ ಯಾವನೇ ಕ್ರೈಸ್ತ ಬೋಧಕನೆನಿಸಿಕೊಳ್ಳುವವನನ್ನು ಸಹಿಸಿಕೊಳ್ಳಬಾರದೆಂದು ಸಹ ಯೇಸು ಕ್ರಿಸ್ತನು ತನ್ನ ಅನುಯಾಯಿಗಳನ್ನು ಎಚ್ಚರಿಸಿದನು.—ಪ್ರಕಟನೆ 1:1; 2:14, 20.
ಧಾರ್ಮಿಕ ನಾಯಕರು ಪುರುಷಗಾಮಿಗಳ ಮತ್ತು ಸ್ತ್ರೀಗಾಮಿಗಳ ದೀಕ್ಷೆಗಾಗಿ ಚಳವಳಿ ಹೂಡುವಾಗ, ಅವರ ಚರ್ಚುಗಳ ಸದಸ್ಯರ ಮೇಲೆ, ವಿಶೇಷವಾಗಿ ಯುವ ಜನರ ಮೇಲೆ, ಇದು ಯಾವ ಪರಿಣಾಮವನ್ನುಂಟುಮಾಡುತ್ತದೆ? ವಿವಾಹದ ಹೊರಗಣ ಕಾಮದ ಪರೀಕ್ಷಾಪ್ರಯೋಗವನ್ನು ಮಾಡಲು ಇದೊಂದು ಪ್ರಚೋದನೆಯಲ್ಲವೆ? ಇದಕ್ಕೆ ವ್ಯತಿರಿಕ್ತವಾಗಿ, ದೇವರ ವಾಕ್ಯವು ಕ್ರೈಸ್ತರನ್ನು, “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ,” ಎಂದು ಪ್ರೋತ್ಸಾಹಿಸುತ್ತದೆ. (1 ಕೊರಿಂಥ 6:18) ಒಬ್ಬ ಜೊತೆವಿಶ್ವಾಸಿಯು ಇಂತಹ ಪಾಪದಲ್ಲಿ ಬೀಳುವುದಾದರೆ, ದೇವರ ಅನುಗ್ರಹಕ್ಕೆ ಆ ವ್ಯಕ್ತಿಯನ್ನು ಪುನಸ್ಸ್ಥಾಪಿಸುವ ದೃಷ್ಟಿಯಲ್ಲಿ ಪ್ರೀತಿಪೂರ್ವಕವಾದ ಸಹಾಯವು ಕೊಡಲ್ಪಡುತ್ತದೆ. (ಯಾಕೋಬ 5:16, 19, 20) ಈ ಸಹಾಯವು ನಿರಾಕರಿಸಲ್ಪಟ್ಟರೆ ಆಗೇನು? ಅಂತಹವರು ಪಶ್ಚಾತ್ತಾಪಪಡುವ ಹೊರತು, ಅವರು ‘ರಾಜ್ಯವನ್ನು ಬಾಧ್ಯತೆಯಾಗಿ ಪಡೆಯುವುದಿಲ್ಲ’ ಎಂದು ಬೈಬಲು ಹೇಳುತ್ತದೆ.—1 ಕೊರಿಂಥ 6:9, 10.
“ವಿವಾಹ ನಿಷೇಧ”
“ಜಾರತ್ವವು ಪ್ರಬಲವಾಗಿರುವದರಿಂದ,” “ಕಾಮತಾಪಪಡುವದಕ್ಕಿಂತ ಮದುವೆಮಾಡಿಕೊಳ್ಳುವದು ಉತ್ತಮ”ವೆಂದು ಬೈಬಲು ಹೇಳುತ್ತದೆ. (1 ಕೊರಿಂಥ 7:2, 9) ಈ ವಿವೇಕಪೂರ್ಣವಾದ ಸಲಹೆಯ ಹೊರತೂ, ವೈದಿಕರಲ್ಲಿ ಅನೇಕರು ನೈಷ್ಠಿಕರಾಗಿ ಅಂದರೆ ಅವಿವಾಹಿತರಾಗಿ ಉಳಿಯುವಂತೆ ಕೇಳಿಕೊಳ್ಳಲ್ಪಡುತ್ತಾರೆ. ದ ವ್ಯಾಟಿಕನ್ ಪೇಪರ್ಸ್ ಎಂಬ ತನ್ನ ಪುಸ್ತಕದಲ್ಲಿ, ನೀನೊ ಲೊಬೆಲೊ ವಿವರಿಸುವುದು: “ಒಬ್ಬ ಪಾದ್ರಿ, ಸಂನ್ಯಾಸಿ ಅಥವಾ ಸಂನ್ಯಾಸಿನಿಯು ಲೈಂಗಿಕ ಸಂಬಂಧಗಳಲ್ಲಿ ಒಳಗೂಡುವುದಾದರೆ, ನೈಷ್ಠಿಕ ವ್ರತವು ಮುರಿಯುವುದಿಲ್ಲ. . . . ಪಾಪನಿವೇದನ ಸ್ಥಳದಲ್ಲಿ ಒಂದು ಪ್ರಾಮಾಣಿಕವಾದ ಪ್ರಕಟನೆಯನ್ನು ಮಾಡುವಲ್ಲಿ ಲೈಂಗಿಕ ಸಂಬಂಧಗಳಿಗೆ ಕ್ಷಮಾಪಣೆಯನ್ನು ಪಡೆಯಸಾಧ್ಯವಿದೆ. ಆದರೆ ಯಾವುದೇ ಪಾದ್ರಿಯ ವಿವಾಹವನ್ನು ಚರ್ಚು ಸರಳವಾಗಿ ಒಪ್ಪಿಕೊಳ್ಳುವುದಿಲ್ಲ.” ಈ ಬೋಧನೆಯು ಒಳ್ಳೆಯ ಫಲವನ್ನು ಫಲಿಸಿದೆಯೊ, ಕೆಟ್ಟದನ್ನೊ?—ಮತ್ತಾಯ 7:15-19.
ಅನೇಕ ಮಂದಿ ಪಾದ್ರಿಗಳು ನೈತಿಕವಾಗಿ ನಿರ್ಮಲ ಜೀವನಗಳನ್ನು ಜೀವಿಸುತ್ತಾರೆಂಬುದು ನಿಸ್ಸಂಶಯ, ಆದರೆ ಒಂದು ದೊಡ್ಡ ಸಂಖ್ಯೆ ಹಾಗೆ ಜೀವಿಸುವುದಿಲ್ಲ. 1992 ಬ್ರಿಟ್ಯಾನಿಕ ಬುಕ್ ಆಫ್ ದ ಯಿಯರ್ಗನುಸಾರ, “ರೋಮನ್ ಕ್ಯಾಥೊಲಿಕ್ ಚರ್ಚು, ವೈದಿಕ ಲೈಂಗಿಕ ದುರುಪಯೋಗದ ಮೊಕದ್ದಮೆಗಳನ್ನು ಇತ್ಯರ್ಥಮಾಡಲು 30 ಕೋಟಿ ಡಾಲರುಗಳನ್ನು ತೆತ್ತಿದೆಯೆಂಬ ವದಂತಿಯಿದೆ.” ತರುವಾಯ, 1994 ಮುದ್ರಣವು ಹೇಳಿದ್ದು: “ಏಡ್ಸ್ನಿಂದ ಉಂಟುಮಾಡಲ್ಪಟ್ಟ ಅನೇಕ ವೈದಿಕರ ಮರಣವು ಪುರುಷಗಾಮಿ ಪಾದ್ರಿಗಳ ಇರುವಿಕೆಯನ್ನು ಬಯಲುಪಡಿಸಿ, ಪುರುಷಗಾಮಿಗಳು . . . ಮಿತಿಮೀರಿದ ಸಂಖ್ಯೆಯಲ್ಲಿ ಪಾದ್ರಿತನಕ್ಕೆ ಆಕರ್ಷಿಸಲ್ಪಡುತ್ತಾರೆಂಬ ಅಭಿಪ್ರಾಯಗಳಿಗೆ ನಡೆಸಿತು.” “ವಿವಾಹ ನಿಷೇಧ”ವು ‘ದೆವ್ವಗಳ ಬೋಧನೆ’ಯಾಗಿದೆ ಎಂದು ಬೈಬಲ್ ಹೇಳುವುದರಲ್ಲಿ ಆಶ್ಚರ್ಯವಿಲ್ಲ. (1 ತಿಮೊಥೆಯ 4:1-3, NW) “ಕೆಲವು ಇತಿಹಾಸಗಾರರ ನೋಟದಲ್ಲಿ [ಪಾದ್ರಿ ನೈಷ್ಠಿಕತೆಯು] ನೈತಿಕತೆಗಳಿಗೆ ಪಾಶ್ಚಾತ್ಯ ಲೋಕದ ಇನ್ನಾವ ಏರ್ಪಾಡಿಗಿಂತಲೂ—ವೇಶ್ಯಾವಾಟಿಕೆ ಸೇರಿಸಿ—ಪ್ರಾಯಶಃ ಹೆಚ್ಚು ಹಾನಿಯನ್ನು ತಂದಿದೆ. . . . [ಇದು] ಅನೇಕ ವೇಳೆ ಕ್ರೈಸ್ತತ್ವದ ಹೆಸರಿನ ಮೇಲೆ ಒಂದು ಕಲೆಯಾಗಿದೆ. . . . ನಿರ್ಬಂಧಿಸಲ್ಪಟ್ಟಿರುವ ನೈಷ್ಠಿಕತೆಯು ಯಾವಾಗಲೂ ವೈದಿಕ ವರ್ಗದ ಕಪಟತೆಗೆ ನಡೆಸಿದೆ. . . . ಒಬ್ಬ ಪಾದ್ರಿಯು ಸಾವಿರ ಬಾರಿ ಅನೈತಿಕ ಕೃತ್ಯವನ್ನು ಮಾಡಸಾಧ್ಯವಿದೆ, ಆದರೆ ಕ್ರೈಸ್ತ ಮಠದ ನಿಯಮವು ಅವನನ್ನು ವಿವಾಹವಾಗುವುದರಿಂದ ನಿಷೇಧಿಸುತ್ತದೆ,” ಎಂದು ಪೀಟರ್ ಡೆರೋಸ, ತನ್ನ ವಿಕರ್ಸ್ ಆಫ್ ಕ್ರೈಸ್ಟ್ ಪುಸ್ತಕದಲ್ಲಿ ಬರೆಯುತ್ತಾರೆ.
ಬಾಳನ ಆರಾಧನೆಯ ಕುರಿತು ದೇವರ ನೋಟವನ್ನು ಪರಿಗಣಿಸುವಾಗ, ಆತನು ಕ್ರೈಸ್ತ ಪ್ರಪಂಚದ ವಿಭಾಗಿತ ಚರ್ಚುಗಳನ್ನು ಹೇಗೆ ವೀಕ್ಷಿಸಬೇಕೆಂಬುದನ್ನು ವಿವೇಚಿಸಿ ತಿಳಿಯುವುದು ಕಷ್ಟವಲ್ಲ. ಬೈಬಲಿನ ಕೊನೆಯ ಪುಸ್ತಕವು ಸುಳ್ಳು ಆರಾಧನೆಯ ಸಕಲ ರೂಪಗಳನ್ನು, “ಮಹಾ ಬಾಬೆಲ್, ಭೂಮಿಯಲ್ಲಿರುವ ಜಾರಸ್ತ್ರೀಯರ ಮತ್ತು ಅಸಹ್ಯ ವಸ್ತುಗಳ ತಾಯಿ” ಎಂಬ ಹೆಸರಿನ ಕೆಳಗೆ ಸಂಯೋಜಿಸುತ್ತದೆ. ಬೈಬಲು ಕೂಡಿಸಿ ಹೇಳುವುದು: “ಪ್ರವಾದಿಗಳ ರಕ್ತವೂ ಪವಿತ್ರ ಜನರ ರಕ್ತವೂ ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವೂ ಅವಳಲ್ಲಿ ಸಿಕ್ಕಿತು.”—ಪ್ರಕಟನೆ 17:5; 18:24, NW.
ಆದಕಾರಣ, ತನ್ನ ಸತ್ಯಾರಾಧಕರಾಗಬಯಸುವ ಸಕಲರನ್ನೂ ದೇವರು ಪ್ರೋತ್ಸಾಹಿಸುವುದು: “ಅವಳೊಂದಿಗೆ ಅವಳ ಪಾಪಗಳಲ್ಲಿ ಪಾಲುಗಾರರಾಗಲು ನೀವು ಬಯಸದಿದ್ದರೆ, ಮತ್ತು ಅವಳ ಉಪದ್ರವಗಳ ಅಂಶವನ್ನು ನೀವು ಪಡೆಯಲು ಬಯಸದಿದ್ದರೆ, ನನ್ನ ಜನರೇ, ಅವಳನ್ನು ಬಿಟ್ಟು ಹೊರಗೆ ಬನ್ನಿರಿ. . . . ಅವಳ ವ್ಯಾಧಿಗಳು—ಮರಣ, ಶೋಕ, ಕ್ಷಾಮ—ಒಂದೇ ದಿನದಲ್ಲಿ ಬರುವುವು, ಮತ್ತು ಆಕೆ ಬೆಂಕಿಯಿಂದ ಸಂಪೂರ್ಣವಾಗಿ ಸುಡಲ್ಪಡುವಳು, ಏಕೆಂದರೆ ಆಕೆಗೆ ನ್ಯಾಯತೀರಿಸಿದ ಯೆಹೋವನು ಬಲಿಷ್ಠನಾಗಿದ್ದಾನೆ.”—ಪ್ರಕಟನೆ 18:4, 8, NW.
ಈಗ ಏಳುವ ಪ್ರಶ್ನೆಯು: ಸುಳ್ಳು ಧರ್ಮದಿಂದ ಹೊರಬಂದ ಬಳಿಕ, ಒಬ್ಬ ವ್ಯಕ್ತಿಯು ಎಲ್ಲಿಗೆ ಹೋಗಬೇಕು? ಯಾವ ರೀತಿಯ ಆರಾಧನೆಯು ದೇವರಿಗೆ ಅಂಗೀಕಾರಾರ್ಹವಾಗಿದೆ?
[ಪುಟ 5 ರಲ್ಲಿರುವ ಚೌಕ/ಚಿತ್ರಗಳು]
ವಿಗ್ರಹಾರಾಧನೆ
ಬಾಳಾರಾಧನೆಯಲ್ಲಿ ವಿಗ್ರಹಗಳ ಬಳಕೆ ಸೇರಿತ್ತು. ಇಸ್ರಾಯೇಲ್ಯರು ಯೆಹೋವನ ಆರಾಧನೆಯನ್ನು ಬಾಳನದ್ದರೊಂದಿಗೆ ಒಟ್ಟುಗೂಡಿಸಲು ಪ್ರಯತ್ನಿಸಿದರು. ಅವರು ಯೆಹೋವನ ಆಲಯದೊಳಗೆ ವಿಗ್ರಹಗಳನ್ನೂ ತಂದರು. ದೇವರು ಯೆರೂಸಲೇಮಿನ ಮೇಲೂ ಅದರ ಆಲಯದ ಮೇಲೂ ನಾಶನವನ್ನು ತಂದಾಗ ವಿಗ್ರಹಾರಾಧನೆಯ ಕಡೆಗೆ ಆತನ ವೀಕ್ಷಣವು ಸ್ಪಷ್ಟಗೊಳಿಸಲ್ಪಟ್ಟಿತು.
ಕ್ರೈಸ್ತ ಪ್ರಪಂಚದ ಅನೇಕ ಚರ್ಚುಗಳು ವಿಗ್ರಹಗಳಿಂದ—ಅವು ಶಿಲುಬೆ, ಮೂರ್ತಿಗಳಾಗಿರಬಹುದು ಅಥವಾ ಮರಿಯಳ ಪ್ರತಿಮೆಗಳಾಗಿರಬಹುದು—ತುಂಬಿವೆ. ಇದಲ್ಲದೆ, ಅನೇಕ ಚರ್ಚ್ಹೋಕರಿಗೆ ಅವರು ವಿಗ್ರಹಗಳ ಮುಂದೆ ಅಡ್ಡಬಿದ್ದು, ಮೊಣಕಾಲೂರಲು ಅಥವಾ ಶಿಲುಬೆಯ ಗುರುತನ್ನು ಮಾಡಲು ಕಲಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಸತ್ಕ್ರೈಸ್ತರಿಗೆ, “ವಿಗ್ರಹಾರಾಧನೆಯಿಂದ ಓಡಿಹೋಗಿರಿ,” ಎಂದು ಆಜ್ಞಾಪಿಸಲಾಗಿದೆ. (1 ಕೊರಿಂಥ 10:14, NW) ಅವರು ದೇವರನ್ನು ಭೌತಿಕ ವಸ್ತುಗಳ ಸಹಾಯದಿಂದ ಆರಾಧಿಸಲು ಪ್ರಯತ್ನಿಸುವುದಿಲ್ಲ.—ಯೋಹಾನ 4:24.
[ಕೃಪೆ]
Musée du Louvre, Paris
[ಪುಟ 7 ರಲ್ಲಿರುವ ಚೌಕ]
“ಚರ್ಚ್ ನಾಯಕನು ದೋಷರಹಿತನಾಗಿರಬೇಕು”
ಟುಡೇಸ್ ಇಂಗ್ಲಿಷ್ ವರ್ಷನ್ಗನುಸಾರ, ಈ ಅಭಿವ್ಯಕ್ತಿಯು ತೀತ 1:7ರಿಂದ ತೆಗೆಯಲ್ಪಟ್ಟದ್ದಾಗಿದೆ. ಕಿಂಗ್ ಜೇಮ್ಸ್ ವರ್ಷನ್ ಓದುವುದು: “ಬಿಷಪನೊಬ್ಬನು ನಿರ್ದೋಷಿಯಾಗಿರತಕ್ಕದ್ದು.” “ಬಿಷಪ್” ಎಂಬ ಶಬ್ದವು, “ಮೇಲ್ವಿಚಾರಕ” ಎಂಬರ್ಥವನ್ನು ಕೊಡುವ ಗ್ರೀಕ್ ಶಬ್ದದಿಂದ ಬರುತ್ತದೆ. ಹೀಗೆ ಸತ್ಕ್ರೈಸ್ತ ಸಭೆಯಲ್ಲಿ ಮುಂದಾಳುತ್ವವನ್ನು ತೆಗೆದುಕೊಳ್ಳಲು ನೇಮಿತರಾಗಿರುವ ಪುರುಷರು, ಮೂಲಭೂತ ಬೈಬಲ್ ಮಟ್ಟಗಳಿಗನುಸಾರವಾಗಿ ಜೀವಿಸತಕ್ಕದ್ದು. ಅವರು ಅದಕ್ಕನುಸಾರವಾಗಿ ಜೀವಿಸದಿದ್ದಲ್ಲಿ, ಅವರು ಇನ್ನುಮುಂದೆ “ಮಂದೆಗೆ ಮಾದರಿ”ಗಳಾಗಿಲ್ಲದಿರುವುದರಿಂದ, ಅವರ ಮೇಲ್ವಿಚಾರಣೆಯ ಸ್ಥಾನದಿಂದ ಅವರು ತೆಗೆದುಹಾಕಲ್ಪಡಬೇಕು. (1 ಪೇತ್ರ 5:2, 3) ಈ ಆವಶ್ಯಕತೆಯು, ಕ್ರೈಸ್ತಪ್ರಪಂಚದ ಚರ್ಚುಗಳಿಂದ ಎಷ್ಟು ಗಂಭೀರವಾಗಿ ಪರಿಗಣಿಸಲ್ಪಟ್ಟಿದೆ?
ಡಾ. ಈವ್ರಟ್ ವರ್ಥಿಂಗ್ಟನ್, ಐ ಕೇರ್ ಎಬೌಟ್ ಯುವರ್ ಮ್ಯಾರೇಜ್ ಎಂಬ ತಮ್ಮ ಪುಸ್ತಕದಲ್ಲಿ, ಅಮೆರಿಕದ ವರ್ಜಿನಿಯ ರಾಜ್ಯದಲ್ಲಿ 100 ಮಂದಿ ಪಾಸ್ಟರ್ಗಳ ಸಮೀಕ್ಷೆಯೊಂದಕ್ಕೆ ನಿರ್ದೇಶಿಸುತ್ತಾರೆ. ತಮ್ಮ ವಿವಾಹ ಸಹಭಾಗಿಯಾಗಿರದ ಯಾರಾದರೊಂದಿಗೆ, ಕಾಮೋದ್ರೇಕಗೊಳಿಸುವ ನಡವಳಿಕೆಯ ಯಾವುದೋ ರೂಪದಲ್ಲಿ ತಾವು ಒಳಗೂಡಿದ್ದಾಗಿ, 40ಕ್ಕಿಂತಲೂ ಹೆಚ್ಚು ಪ್ರತಿಶತ ಮಂದಿ ಒಪ್ಪಿಕೊಂಡರು. ಅವರಲ್ಲಿ ಅನೇಕ ಪಾಸ್ಟರ್ಗಳು ವ್ಯಭಿಚಾರವನ್ನೂ ನಡೆಸಿದ್ದರು.
“ಕಳೆದ ದಶಕದಲ್ಲಿ, ಚರ್ಚು ತನ್ನ ಅತ್ಯಂತ ಗೌರವಾನಿತ್ವ ನಾಯಕರಲ್ಲಿ ಕೆಲವರಿಂದ ನಡೆಸಲ್ಪಟ್ಟ ಅನೈತಿಕ ನಡತೆಯ ಪ್ರಕರಣಗಳಿಂದ ಆಗಿಂದಾಗ್ಗೆ ಸ್ಥೈರ್ಯಗೆಟ್ಟಿದೆ” ಎಂದು ಕ್ರಿಸ್ಟಿಆ್ಯನಿಟಿ ಟುಡೇ ಗಮನಿಸುತ್ತದೆ. “ವ್ಯಭಿಚಾರಾತ್ಮಕರಾದ ಪಾಸ್ಟರ್ಗಳು ತಮ್ಮ ಹಿಂದಣ ಸ್ಥಾನಗಳಿಗೆ ಪುನಸ್ಸ್ಥಾಪಿಸಲ್ಪಡಬಾರದಾಗಿರುವುದಕ್ಕೆ ಕಾರಣ” ಎಂಬ ಲೇಖನವು, ಚರ್ಚಿನ ನಾಯಕರು “ಲೈಂಗಿಕ ಪಾಪದ ತಪ್ಪಿತಸ್ಥರೆಂದು ನಿರ್ಣಯಿ”ಸಲ್ಪಟ್ಟ ಬಳಿಕವೂ, ಆ ಕೂಡಲೆ ಅವರನ್ನು ಅವರ ಹಿಂದಣ ಸ್ಥಾನಗಳಿಗೆ ಪುನಸ್ಸ್ಥಾಪಿಸುವ ಕ್ರೈಸ್ತಪ್ರಪಂಚದಲ್ಲಿನ ಸಾಮಾನ್ಯ ಪದ್ಧತಿಯನ್ನು ಪಂಥಾಹ್ವಾನಿಸಿತು.