ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 5/15 ಪು. 4-7
  • ನಿಜ ಭದ್ರತೆ ಈಗ ಮತ್ತು ಸದಾಕಾಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಜ ಭದ್ರತೆ ಈಗ ಮತ್ತು ಸದಾಕಾಲ
  • ಕಾವಲಿನಬುರುಜು—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರ ಸೇವಕರಿಗಾಗಿ ಭದ್ರತೆ
  • ದೇವರು ತನ್ನ ಜನರಿಗಾಗಿ ಮಾಡುವ ಸಂಗತಿಗಳು
  • ಎಲ್ಲರಿಗಾಗಿ ನಿಜ ಭದ್ರತೆಯೊ?
  • ಕೊನೆಗೆ—ಸದಾಕಾಲಕ್ಕೂ ನಿಜ ಭದ್ರತೆ!
  • ಯಾವ ವಿಧದ ಭದ್ರತೆಗಾಗಿ ನೀವು ಹಾರೈಸುತ್ತೀರಿ?
    ಕಾವಲಿನಬುರುಜು—1992
  • ಶಾಶ್ವತ ಭದ್ರತೆಯ ಒಂದು ಜೀವಿತ
    ಎಚ್ಚರ!—1998
  • ದೇವರು ಏನು ಮಾಡುತ್ತಾನೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ಒಂದು ಉತ್ತಮ ಜೀವನವು ವಾಗ್ದಾನಿಸಲ್ಪಟ್ಟಿದೆ
    ಕಾವಲಿನಬುರುಜು—1995
ಇನ್ನಷ್ಟು
ಕಾವಲಿನಬುರುಜು—1996
w96 5/15 ಪು. 4-7

ನಿಜ ಭದ್ರತೆ ಈಗ ಮತ್ತು ಸದಾಕಾಲ

ಯೆಹೋವ ದೇವರು ತನ್ನ ಜನರಿಗೆ ಭದ್ರತೆಯನ್ನು ಒದಗಿಸಬಲ್ಲನೆಂಬುದು ನಿಸ್ಸಂದೇಹ. ಅವನು “ಸರ್ವಶಕ್ತನು” ಆಗಿದ್ದಾನೆ. (ಕೀರ್ತನೆ 68:14) ಆತನ ಅಪೂರ್ವವಾದ ಹೆಸರಿನ ಅರ್ಥ “ಅವನು ಆಗುವಂತೆ ಮಾಡುತ್ತಾನೆ” ಎಂದಾಗಿದೆ. ತನ್ನ ವಾಗ್ದಾನಗಳನ್ನು ನೆರವೇರಿಸಲು ಮತ್ತು ತನ್ನ ಚಿತ್ತವನ್ನು ಪೂರೈಸಲು ಯಾವುದೇ ಅಡಚಣೆಯನ್ನು ಜಯಿಸಶಕ್ತನಾದ, ವಿಶ್ವದಲ್ಲಿನ ಏಕಮಾತ್ರ ವ್ಯಕ್ತಿಯಾಗಿ ಇದು ಆತನನ್ನು ಗುರುತಿಸುತ್ತದೆ. ದೇವರು ತಾನೇ ತಿಳಿಸುವದು: “ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”—ಯೆಶಾಯ 55:11.

ತನ್ನಲ್ಲಿ ಭರವಸೆಯಿಡುವವರಿಗಾಗಿ ದೇವರು ಭದ್ರತೆಯನ್ನು ಒದಗಿಸುತ್ತಾನೆ. ಆತನ ವಾಕ್ಯವು ಇದಕ್ಕೆ ಖಾತರಿಯನ್ನು ಕೊಡುತ್ತದೆ. “ಯೆಹೋವನ ನಾಮವು ಬಲವಾದ ಬುರುಜು” ಎಂದು ಬುದ್ಧಿವಂತ ರಾಜನಾದ ಸೊಲೊಮೋನನು ದೈವಿಕ ಪ್ರೇರಣೆಯ ಕೆಳಗೆ ತಿಳಿಸಿದನು. “ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.” ಅವನು ಮುಂದೆ ಹೇಳಿದ್ದು: “ಯೆಹೋವನ ಭರವಸ ಉದ್ಧಾರ.”—ಜ್ಞಾನೋಕ್ತಿ 18:10; 29:25.

ದೇವರ ಸೇವಕರಿಗಾಗಿ ಭದ್ರತೆ

ತನ್ನ ಮೇಲೆ ಆತುಕೊಳ್ಳುವವರಿಗಾಗಿ ಯೆಹೋವನು ಯಾವಾಗಲೂ ಭದ್ರತೆಯನ್ನು ಒದಗಿಸಿದ್ದಾನೆ. ಉದಾಹರಣೆಗಾಗಿ, ಪ್ರವಾದಿಯಾದ ಯೆರೆಮೀಯನು ದೇವರ ಸಂರಕ್ಷಣೆಯಲ್ಲಿ ಆನಂದಿಸಿದನು. ಧರ್ಮಭ್ರಷ್ಟ ಯೆರೂಸಲೇಮನ್ನು ಬಾಬೆಲಿನ ಸೈನ್ಯಗಳು ವಶಪಡಿಸಿಕೊಂಡಾಗ, ಜನರು “ಅನ್ನವನ್ನು ತೂಕದ ಪ್ರಕಾರ ಬೆದರಿನಿಂದ ತಿನ್ನ”ಬೇಕಾಗಿತ್ತು. (ಯೆಹೆಜ್ಕೇಲ 4:16) ಪರಿಸ್ಥಿತಿಯು ಎಷ್ಟು ವಿಷಮವಾಯಿತೆಂದರೆ, ಕೆಲವು ಸ್ತ್ರೀಯರು ತಮ್ಮ ಸ್ವಂತ ಮಕ್ಕಳನ್ನು ಬೇಯಿಸಿ ತಿಂದರು. (ಪ್ರಲಾಪಗಳು 2:20; 4:10) ತನ್ನ ನಿರ್ಭೀತ ಸಾರುವಿಕೆಗಾಗಿ ಯೆರೆಮೀಯನು ಆ ಸಮಯದಲ್ಲಿ ಬಂಧನದಲ್ಲಿಡಲ್ಪಟ್ಟರೂ, “ಪಟ್ಟಣದ ರೊಟ್ಟಿಯೆಲ್ಲಾ ತೀರುವ ತನಕ ರೊಟ್ಟಿಯ ಪೇಟೆಯಿಂದ ದಿನವಹಿ ಒಂದೊಂದು ರೊಟ್ಟಿಯನ್ನು ಅವನಿಗೆ ತಂದು ಕೊಡು”ವಂತೆ ಯೆಹೋವನು ನೋಡಿಕೊಂಡನು.—ಯೆರೆಮೀಯ 37:21.

ಯೆರೂಸಲೇಮ್‌ ಬಬಿಲೋನ್ಯರ ವಶವಾದಾಗ, ಯೆರೆಮೀಯನು ಕೊಲ್ಲಲ್ಪಡಲಿಲ್ಲ ಅಥವಾ ಬಾಬೆಲಿಗೆ ಸೆರೆಯಾಳಾಗಿ ಎಳೆದೊಯ್ಯಲ್ಪಡಲಿಲ್ಲ. ಅದರ ಬದಲಿಗೆ, “[ಬಬಿಲೋನ್ಯ ಅಂಗರಕ್ಷಕರ ಮುಖ್ಯಸ್ಥನು,” NW] ಬುತ್ತಿಯನ್ನೂ ಬಹುಮಾನವನ್ನೂ ಕೊಡಿಸಿ ಅವನನ್ನು ಕಳುಹಿಸಿಬಿಟ್ಟನು.”—ಯೆರೆಮೀಯ 40:5.

ಶತಮಾನಗಳ ಅನಂತರ ಯೇಸು ಕ್ರಿಸ್ತನು ದೇವರ ಸೇವಕರಿಗೆ ಆಶ್ವಾಸನೆಯನ್ನಿತ್ತದ್ದು: “ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ. ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.”—ಮತ್ತಾಯ 6:31-33.

ಯೆಹೋವನ ಸೇವಕರು ಸದ್ಯದ ದಿನದ ಎಲ್ಲಾ ವಿಪತ್ತಿನಿಂದ ದೈವಿಕ ಸಂರಕ್ಷಣೆಯನ್ನು ಅನುಭವಿಸುವರೆಂದು ಇದು ಅರ್ಥೈಸುತ್ತದೊ? ಇಲ್ಲ, ಅದು ಹಾಗೆ ಅರ್ಥೈಸುವುದಿಲ್ಲ. ನಂಬಿಗಸ್ತರು ಹಾನಿಯಿಂದ ರಕ್ಷಿತರಲ್ಲ. ಸತ್ಯ ಕ್ರೈಸ್ತರು ಅಸ್ವಸ್ಥರಾಗುತ್ತಾರೆ, ಹಿಂಸೆಯನ್ನು ಅನುಭವಿಸುತ್ತಾರೆ, ಪಾತಕದ ಬಲಿಗಳಾಗುತ್ತಾರೆ, ಅಪಘಾತಗಳಲ್ಲಿ ಸಾಯುತ್ತಾರೆ ಮತ್ತು ಇತರ ವಿಧಗಳಲ್ಲಿ ಕಷ್ಟಾನುಭವಿಸುತ್ತಾರೆ.

ಯೆಹೋವನು ಹಾನಿಯಿಂದ ಸಂಪೂರ್ಣ ಭದ್ರತೆಯನ್ನು ಇನ್ನೂ ಒದಗಿಸದಿರುವುದಾದರೂ, ತನ್ನ ಸೇವಕರಿಗಾಗಿ ಒದಗಿಸಲು ಮತ್ತು ಅವರನ್ನು ಸಂರಕ್ಷಿಸಲು ಆತನು ತನ್ನ ಶಕ್ತಿಯನ್ನು ಉಪಯೋಗಿಸುತ್ತಾನೆಂದು ವರದಿಗಳು ತೋರಿಸುತ್ತವೆ. ಕ್ರೈಸ್ತರು ತಮ್ಮ ಜೀವಿತಗಳಲ್ಲಿ ಬೈಬಲ್‌ ಮೂಲಸೂತ್ರಗಳನ್ನು ಅನ್ವಯಿಸಿಕೊಳ್ಳುವುದರಿಂದಲೂ ಅನೇಕ ಸಮಸ್ಯೆಗಳಿಂದ ಕಾಪಾಡಲ್ಪಡುತ್ತಾರೆ. (ಜ್ಞಾನೋಕ್ತಿ 22:3) ಇನ್ನೂ ಹೆಚ್ಚಾಗಿ, ಅವರು ಪ್ರೀತಿಪರ ಆತ್ಮಿಕ ಸಹೋದರಸಹೋದರಿಯರ ಒಂದು ಲೋಕವ್ಯಾಪಕ ಸಹವಾಸದ ಭದ್ರತೆಯನ್ನು ಅನುಭವಿಸುತ್ತಾರೆ. ಇವರು ಅಗತ್ಯದ ಸಮಯಗಳಲ್ಲಿ ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುತ್ತಾರೆ. (ಯೋಹಾನ 13:34, 35; ರೋಮಾಪುರ 8:28) ಉದಾಹರಣೆಗಾಗಿ, ಯುದ್ಧ-ಛಿದ್ರ ರುಆಂಡದಲ್ಲಿರುವ ತಮ್ಮ ಸಹೋದರರ ಹತಾಶೆಯ ಸ್ಥಿತಿಗೆ ಪ್ರತಿಕ್ರಿಯೆಯಲ್ಲಿ, ಯೂರೋಪಿನಲ್ಲಿನ ಯೆಹೋವನ ಸಾಕ್ಷಿಗಳು ತ್ವರಿತವಾಗಿ ದಾನ ಮಾಡಿ, ಅವರಿಗೆ 65 ಟನ್ನುಗಳಷ್ಟು ಉಡುಗೆತೊಡುಗೆ ಮತ್ತು 16,00,000 ಡಾಲರುಗಳಷ್ಟು ಬೆಲೆಯುಳ್ಳ ಔಷಧ, ಆಹಾರ ಮತ್ತು ಇತರ ಸರಬರಾಯಿಗಳನ್ನು ಕಳುಹಿಸಿದರು.—ಹೋಲಿಸಿ ಅ. ಕೃತ್ಯಗಳು 11:28, 29.

ಸತ್ಯ ಕ್ರೈಸ್ತರ ಮೇಲೆ ಸಂಕಷ್ಟಗಳು ಬರುವಂತೆ ಯೆಹೋವನು ಅನುಮತಿಸುವುದಾದರೂ, ತಾಳಿಕೊಳ್ಳಲು ಆತನು ತಮಗೆ ಬಲ, ನೆರವು ಮತ್ತು ಬುದ್ಧಿಯನ್ನು ಕೊಡುವನೆಂಬ ಆಶ್ವಾಸನೆ ಅವರಿಗಿದೆ. ಜೊತೆ ವಿಶ್ವಾಸಿಗಳಿಗೆ ಬರೆಯುತ್ತಾ, ಅಪೊಸ್ತಲ ಪೌಲನು ಹೇಳಿದ್ದು: “ಮನುಷ್ಯರು ಸಹಿಸಬಹುದಾದ ಶೋಧನೆಯೇ [ಸಂಕಷ್ಟ] ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆ [ಸಂಕಷ್ಟ]ಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.”—1 ಕೊರಿಂಥ 10:13.

ದೇವರು ತನ್ನ ಜನರಿಗಾಗಿ ಮಾಡುವ ಸಂಗತಿಗಳು

ಇಂದು ಲಕ್ಷಾಂತರ ಜನರು ದೇವರ ಚಿತ್ತವನ್ನು ಮಾಡಲು ಸಂತೋಷಿಸುತ್ತಾರೆ. ಅವರು ದೇವರನ್ನು ಸೇವಿಸಲು ಬಲಾತ್ಕರಿಸಲ್ಪಡುವುದಿಲ್ಲ; ಅವರು ಆತನನ್ನು ತಿಳಿದು ಪ್ರೀತಿಸುವ ಕಾರಣದಿಂದ ಹಾಗೆ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ, ಯೆಹೋವನು ತನ್ನ ನಿಷ್ಠಾವಂತ ಸೇವಕರನ್ನು ಪ್ರೀತಿಸುವ ಕಾರಣದಿಂದ, ಭೂಮಿಯನ್ನು, ಎಲ್ಲಿ ವಿಧೇಯ ಮಾನವಕುಲವು ಶಾಂತಿ, ಆರೋಗ್ಯ ಮತ್ತು ಭದ್ರತೆಯನ್ನು ಸದಾಕಾಲ ಆನಂದಿಸುವುದೊ ಆ ಒಂದು ಪ್ರಮೋದವನವನ್ನಾಗಿ ಪರಿವರ್ತಿಸಲು ಆತನು ಉದ್ದೇಶಿಸುತ್ತಾನೆ.—ಲೂಕ 23:43.

ತನ್ನ ನೇಮಿತ ರಾಜನಾದ ಯೇಸು ಕ್ರಿಸ್ತನನ್ನು ಅದರ ಪ್ರಭುವಾಗಿ ಹೊಂದಿರುತ್ತಾ, ಒಂದು ಸ್ವರ್ಗೀಯ ಸರಕಾರದ ಮೂಲಕ ದೇವರು ಇದನ್ನು ಮಾಡುವನು. (ದಾನಿಯೇಲ 7:13, 14) ಬೈಬಲು ಈ ಸರಕಾರವನ್ನು “ದೇವರ ರಾಜ್ಯ” ಮತ್ತು “ಪರಲೋಕರಾಜ್ಯ” ಆಗಿ ಸಂಬೋಧಿಸುತ್ತದೆ. (1 ಕೊರಿಂಥ 15:50; ಮತ್ತಾಯ 13:44) ದೇವರ ರಾಜ್ಯವು ಎಲ್ಲಾ ಮಾನವ ಸರಕಾರಗಳನ್ನು ಸ್ಥಾನಪಲ್ಲಟಗೊಳಿಸುವುದು. ಭೂಮಿಯ ಮೇಲೆ ಅನೇಕ ಸರಕಾರಗಳನ್ನು ಹೊಂದಿರುವ ಬದಲಿಗೆ, ಕೇವಲ ಒಂದು ಸರಕಾರವು ಇರುವುದು. ಅದು ಇಡೀ ಭೂಮಿಯ ಮೇಲೆ ನೀತಿಯಿಂದ ಆಳುವುದು.—ಕೀರ್ತನೆ 72:7, 8; ದಾನಿಯೇಲ 2:44.

ಆ ರಾಜ್ಯದ ಕೆಳಗೆ ಜೀವಿಸಲು ಯೆಹೋವನು ಎಲ್ಲರಿಗೂ ಆಮಂತ್ರಣವನ್ನು ವಿಸ್ತರಿಸುತ್ತಾನೆ. ಇದನ್ನು ಆತನು ಮಾಡುವ ಒಂದು ವಿಧವು, ಬೈಬಲಿನ ವಿಸ್ತಾರವಾದ ವಿತರಣೆಯ ಮೂಲಕವೇ. ಈ ಪುಸ್ತಕವು, ಆ ರಾಜ್ಯವು ಮಾನವಕುಲಕ್ಕಾಗಿ ಏನನ್ನು ಮಾಡುವುದೆಂಬುದನ್ನು ವಿವರಿಸುತ್ತದೆ. ಬೈಬಲು ಲೋಕದ ಅತ್ಯಂತ ವ್ಯಾಪಕವಾಗಿ ಹಂಚಲ್ಪಟ್ಟ ಪುಸ್ತಕವಾಗಿದೆ ಮತ್ತು ಈಗ ಅದು ಇಡೀ ಅಥವಾ ಭಾಗಶಃವಾಗಿ 2,000ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ.

ರಾಜ್ಯದ ಕುರಿತಾಗಿ ಬೈಬಲ್‌ ಏನನ್ನು ಕಲಿಸುತ್ತದೊ ಅದನ್ನು ತಿಳಿಯಲು ಯೆಹೋವ ದೇವರು ಪ್ರೀತಿಪೂರ್ವಕವಾಗಿ ಜನರಿಗೆ ಸಹಾಯ ಮಾಡುತ್ತಾನೆ. ಶಾಸ್ತ್ರವಚನಗಳನ್ನು ಇತರರಿಗೆ ವಿವರಿಸಲು ಜನರನ್ನು ಉಪದೇಶಿಸಿ ಕಳುಹಿಸುವ ಮೂಲಕ ಆತನು ಇದನ್ನು ಮಾಡುತ್ತಾನೆ. 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಐವತ್ತು ಲಕ್ಷಕ್ಕಿಂತಲೂ ಹೆಚ್ಚಿನ ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಸುವಾರ್ತೆಯನ್ನು ಈಗ ಘೋಷಿಸುತ್ತಿದ್ದಾರೆ.

ಎಲ್ಲರಿಗಾಗಿ ನಿಜ ಭದ್ರತೆಯೊ?

ಆತನ ನೀತಿಯ ಮಟ್ಟಗಳನ್ನು ಪಾಲಿಸುವ ಮೂಲಕ ಪ್ರತಿಯೊಬ್ಬರೂ ದೇವರ ರಾಜ್ಯದ ಒಬ್ಬ ಪ್ರಜೆಯಾಗುವ ಆಮಂತ್ರಣವನ್ನು ಸ್ವೀಕರಿಸುವರೋ? ಇಲ್ಲ, ಯಾಕಂದರೆ ಅನೇಕ ಜನರಿಗೆ ದೇವರ ಚಿತ್ತವನ್ನು ಮಾಡುವುದರಲ್ಲಿ ಆಸಕ್ತಿಯಿಲ್ಲ. ತಮ್ಮ ಜೀವಿತಗಳನ್ನು ಉತ್ತಮಗೊಳಿಸಲು ಅವರಿಗೆ ಸಹಾಯ ಮಾಡುವ ಪ್ರಯತ್ನಗಳನ್ನು ಅವರು ತಿರಸ್ಕರಿಸುತ್ತಾರೆ. ನಿಶ್ಚಯವಾಗಿಯೂ, ಅವರು ಯೇಸು ಯಾರ ಕುರಿತಾಗಿ ಹೇಳಿದನೋ ಅವರಂತೆ ಇರುವುದನ್ನು ತೋರಿಸಿಕೊಡುತ್ತಾರೆ: “ಈ ಜನರ ಹೃದಯವು ಕೊಬ್ಬಿತು; ಇವರ ಕಿವಿ ಮಂದವಾಯಿತು; ಇವರು ಕಣ್ಣು ಮುಚ್ಚಿಕೊಂಡಿದ್ದಾರೆ. ತಾವು ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ [ದೇವರಿಂದ] ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಮಾಡಿಕೊಂಡಿದ್ದಾರೆ.”—ಮತ್ತಾಯ 13:15.

ದೇವರ ನೀತಿಯ ಮಾರ್ಗಗಳಿಗೆ ಹೊಂದಿಕೆಯಲ್ಲಿ ಜೀವಿಸಲು ನಿರಾಕರಿಸುವವರ ನಡುವೆ, ಭೂಮಿಯ ಮೇಲೆ ಎಂದಾದರೂ ನಿಜ ಭದ್ರತೆಯು ಹೇಗಿರಸಾಧ್ಯವಿದೆ? ಇರಸಾಧ್ಯವಿಲ್ಲ. ಭಕ್ತಿಹೀನ ಜನರು ಯೆಹೋವನನ್ನು ಸೇವಿಸಲು ಬಯಸುವವರ ಭದ್ರತೆಗೆ ಬೆದರಿಕೆಯನ್ನೊಡ್ಡುತ್ತಾರೆ.

ದೇವರು ಜನರನ್ನು ಬದಲಾಗುವಂತೆ ಒತ್ತಾಯಿಸುವುದಿಲ್ಲ, ಆದರೆ ಆತನು ನಿರಂತರವಾಗಿ ದುಷ್ಟತನವನ್ನೂ ಸಹಿಸನು. ತನ್ನ ಮಾರ್ಗಗಳ ಮತ್ತು ಉದ್ದೇಶಗಳ ಕುರಿತಾಗಿ ಜನರಿಗೆ ಕಲಿಸಲು ಯೆಹೋವನು ತಾಳ್ಮೆಯಿಂದ ತನ್ನ ಸಾಕ್ಷಿಗಳನ್ನು ಕಳುಹಿಸುವುದನ್ನು ಮುಂದುವರಿಸುವುದಾದರೂ, ಆತನು ಇನ್ನೂ ಹೆಚ್ಚು ಸಮಯ ಹಾಗೆ ಮುಂದುವರಿಯನು. ಯೇಸು ಕ್ರಿಸ್ತನು ಮುಂತಿಳಿಸಿದ್ದು: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”—ಮತ್ತಾಯ 24:14.

ದೇವರ ಮಟ್ಟಗಳನ್ನು ತಿರಸ್ಕರಿಸುವವರಿಗೆ “ಅಂತ್ಯ”ವು ಏನನ್ನು ಅರ್ಥೈಸುವುದು? ಅದು ಅವರ ಪ್ರತಿಕೂಲ ನ್ಯಾಯತೀರ್ಪು ಮತ್ತು ನಾಶನವನ್ನು ಅರ್ಥೈಸುವುದು. “ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು” ಸಲ್ಲಿಸುವ ಕುರಿತಾಗಿ ಬೈಬಲು ಮಾತಾಡುತ್ತದೆ. “ಅಂಥವರು . . . ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು.”—2 ಥೆಸಲೊನೀಕ 1:6-9.

ಕೊನೆಗೆ—ಸದಾಕಾಲಕ್ಕೂ ನಿಜ ಭದ್ರತೆ!

ಯೆಹೋವನ ಶಾಂತಿಯ ಮಾರ್ಗಗಳನ್ನು ತಿರಸ್ಕರಿಸುವವರ ನಾಶನವನ್ನು ಹಿಂಬಾಲಿಸಿ, ದೇವರ ರಾಜ್ಯವು ಭೂಮಿಯ ಮೇಲಿರುವ ನೀತಿವಂತರ ಪ್ರಯೋಜನಕ್ಕೋಸ್ಕರ ಭದ್ರತೆಯ ಒಂದು ಮಹಿಮಾಭರಿತ ಯುಗವನ್ನು ಒಳತರುವುದು. (ಕೀರ್ತನೆ 37:10, 11) ನಾವು ಇಂದು ಜೀವಿಸುತ್ತಿರುವ ಲೋಕಕ್ಕೆ ಹೋಲಿಕೆಯಲ್ಲಿ ಆ ಹೊಸ ಲೋಕವು ಎಷ್ಟು ವ್ಯತಿರಿಕ್ತವಾಗಿರುವುದು!—2 ಪೇತ್ರ 3:13.

ಕ್ಷಾಮ ಮತ್ತು ಹಸಿವು ಇನ್ನಿರದು. ಎಲ್ಲರಿಗೆ ತಿನ್ನಲು ಬೇಕಾದಷ್ಟಿರುವುದು. ‘ಸಕಲಜನಾಂಗಗಳು ಸಾರವತ್ತಾದ ಮೃಷ್ಟಾನ್ನದಿಂದ ಕೂಡಿದ ಔತಣವನ್ನು ಆನಂದಿಸುವರು’ ಎಂದು ಬೈಬಲ್‌ ಹೇಳುತ್ತದೆ. (ಯೆಶಾಯ 25:6) ಆಹಾರದ ಅಭಾವವಿರದು, ಯಾಕಂದರೆ “ಭೂಮಿಯ ಮೇಲೆ ಹೇರಳವಾಗಿ ಧಾನ್ಯವು ದೊರೆಯುವುದು; ಬೆಟ್ಟಗಳ ಮೇಲೆಲ್ಲಾ ಬೆಳೆಯು ತುಂಬಿ ಹರಿಯುವುದು.”—ಕೀರ್ತನೆ 72:16, NW.

ಇನ್ನು ಮುಂದೆ ಜನರು ಗುಡಿಸಿಲುಗಳು ಮತ್ತು ಜೋಪಡಿಪಟ್ಟಣಗಳಲ್ಲಿ ವಾಸಿಸರು. ದೇವರ ರಾಜ್ಯದಡಿಯಲ್ಲಿ ಎಲ್ಲರಿಗೂ ಸೊಗಸಾದ ಮನೆಗಳಿರುವವು ಮತ್ತು ಅವರು ತಮ್ಮ ಸ್ವಂತ ನೆಲದಲ್ಲಿ ಉತ್ಪಾದಿಸಲ್ಪಟ್ಟ ಆಹಾರವನ್ನು ತಿನ್ನುವರು. ಬೈಬಲ್‌ ವಾಗ್ದಾನಿಸುವುದು: “ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು.”—ಯೆಶಾಯ 65:21.

ವ್ಯಾಪಕವಾದ ನಿರುದ್ಯೋಗದ ಬದಲಿಗೆ, ಉತ್ಪನ್ನಕಾರಕ ಕೆಲಸವಿರುವುದು, ಮತ್ತು ಜನರು ಅದರಿಂದ ಒಳ್ಳೆಯ ಫಲಗಳನ್ನು ಕಾಣುವರು. ದೇವರ ವಾಕ್ಯವು ಹೇಳುವುದು: “ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು. ಅವರು ವ್ಯರ್ಥವಾಗಿ ದುಡಿಯರು.”—ಯೆಶಾಯ 65:22, 23.

ರಾಜ್ಯದಾಳಿಕೆಯ ಕೆಳಗೆ, ಜನರು ರೋಗದಿಂದ ಬಳಲಿ ಸಾಯರು. ದೇವರು ವಾಕ್ಯವು ನಮಗೆ ಆಶ್ವಾಸನೆಯನ್ನೀಯುವುದು: “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”—ಯೆಶಾಯ 33:24.

ಬೇಗನೆ ವಾಸ್ತವಿಕತೆಯಾಗಲಿರುವ ಭೂಪ್ರಮೋದವನದಲ್ಲಿ, ಕಷ್ಟಾನುಭವ ಮತ್ತು ವೇದನೆ, ದುಃಖ ಮತ್ತು ಮರಣವು ತೆಗೆದುಹಾಕಲ್ಪಡುವುದು. ಹೌದು, ಮರಣ ಸಹ! ಜನರು ಪ್ರಮೋದವನದಲ್ಲಿ ಸದಾಕಾಲ ಜೀವಿಸುವರು! ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು” ಎಂದು ಬೈಬಲ್‌ ನಮಗೆ ಹೇಳುತ್ತದೆ.—ಪ್ರಕಟನೆ 21:4.

“ಶಾಂತಿಯ ಪ್ರಭು”ವಾದ ಯೇಸು ಕ್ರಿಸ್ತನ ಆಳ್ವಿಕೆಯ ಕೆಳಗೆ, ಭೂಮಿಯ ಮೇಲಿನ ಜೀವಿತವು ಕಟ್ಟಕಡೆಗೆ ನಿಜವಾಗಿ ಭದ್ರವಾಗಿರುವುದು. ಖಂಡಿತವಾಗಿಯೂ, ಒಂದೇ ಸರಕಾರ—ದೇವರ ರಾಜ್ಯ—ದ ನೀತಿಯ, ಪ್ರೀತಿಪರ ಆಳ್ವಿಕೆಯ ಕೆಳಗೆ ಲೋಕವ್ಯಾಪಕ ಭದ್ರತೆಯು ಅಸ್ತಿತ್ವದಲ್ಲಿರುವುದು.—ಯೆಶಾಯ 9:6, 7; ಪ್ರಕಟನೆ 7:9, 17.

[ಪುಟ 4 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಮಾನವ ಭದ್ರತೆಯು ನಾಳಿನ ದಿನದಲ್ಲಿ ಭರವಸೆಯನ್ನು, . . . ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯ ಸ್ಥಿರತೆ[ಯಲ್ಲಿ ಭರವಸೆಯನ್ನು] ಸೂಚಿಸುತ್ತದೆ.”—ಏಷಿಯದಲ್ಲಿ ಜೀವಿಸುತ್ತಿರುವ ಒಬ್ಬ ಹೆಂಗಸು

[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಎಲ್ಲದಕ್ಕಿಂತ ಹೆಚ್ಚಾಗಿ ನಿಮಗೆ ಅಭದ್ರವಾಗಿ ಅನಿಸುವಂತೆ ಮಾಡುವಂತಹದ್ದು ಹಿಂಸಾಚಾರ ಮತ್ತು ಅಪರಾಧವೇ.”—ದಕ್ಷಿಣ ಅಮೆರಿಕದಲ್ಲಿ ಜೀವಿಸುತ್ತಿರುವ ಒಬ್ಬ ಪುರುಷ

[ಪುಟ 6 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಆಕ್ರಮಣದ . . . ಸಮಯದಲ್ಲಿ ನನಗೆ ಭದ್ರತೆಯ ಅನಿಸಿಕೆಯಾಗಲಿಲ್ಲ. ಒಂದು ದೇಶವು ಯುದ್ಧದಲ್ಲಿ ಒಳಗೊಂಡಿರುವಲ್ಲಿ, ಜನರಿಗೆ ಹೇಗೆ ಭದ್ರತೆಯ ಅನಿಸಿಕೆಯಾಗುವುದು?”—ಮಧ್ಯ ಪೂರ್ವದಲ್ಲಿನ ಪ್ರಾಥಮಿಕ ಶಾಲೆಯ ಒಬ್ಬ ವಿದ್ಯಾರ್ಥಿ

[ಪುಟ 7 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಬಲಾತ್ಕಾರಸಂಭೋಗಕ್ಕೆ ಗುರಿಯಾಗದೆ ನಾನು ರಾತ್ರಿಯಲ್ಲಿ ಬೀದಿಗಳಲ್ಲಿ ನಡೆಯಸಾಧ್ಯವಿದೆಯೆಂದು ನನಗೆ ತಿಳಿದಿರುವಾಗ ನನಗೆ ಭದ್ರತೆಯ ಭಾವನೆಯು ಇರುವುದು.”—ಆಫ್ರಿಕದಲ್ಲಿನ ಒಬ್ಬ ಶಾಲಾಹುಡುಗಿ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ