ಅತ್ಯಂತ ಮಹಾನ್ ಹೆಸರನ್ನು ಅವನು ಬಳಸಿದುದರ ಕಾರಣ
“ನನ್ನ ವಿಮರ್ಶಕರಲ್ಲಿ ಒಬ್ಬನಿಗನುಸಾರ, ಯಾವುದು ಶತಮಾನಗಳಿಂದ ಅದರ ವಾಡಿಕೆಯ ಸಮಾನಾರ್ಥಕವಾಗಿದೆಯೋ ಆ ‘ಕರ್ತನು’ ಎಂಬ ಶಬ್ದದ ಬದಲಿಗೆ ‘ಯೆಹೋವ’ ಎಂಬ ಪದವನ್ನು ಒಳಸೇರಿಸುವುದರಲ್ಲಿ ನಾನು ಪಾಪಗೈದಿದ್ದೇನೆ.”
ಇದು 1864ರಲ್ಲಿ ಪ್ರಥಮವಾಗಿ ಪ್ರಕಾಶಿಸಲ್ಪಟ್ಟ ಕೀರ್ತನೆಯ ಪುಸ್ತಕದ ತನ್ನ ತರ್ಜುಮೆಯ ಎರಡನೆಯ ಮುದ್ರಣದ ಪ್ರಸ್ತಾವನೆಯಲ್ಲಿ ಜೆ. ಜೆ. ಸ್ಟೀವರ್ಟ್ ಪೆರೌನ್ರವರ ಹೇಳಿಕೆಯಾಗಿತ್ತು. ಜುಲೈ 2, 1864ರ ಸ್ಯಾಟರ್ಡೇ ರಿವ್ಯೂನಲ್ಲಿ ಬರೆಯುತ್ತಾ ಆ ವಿಮರ್ಶಕನು, ಆ ತರ್ಜುಮೆಯಲ್ಲಿ ದೇವರ ನಾಮದ ಬಳಕೆಯನ್ನು ಆಕ್ಷೇಪಿಸಿದನು, ಏಕೆಂದರೆ ಅದು ಇನ್ನು ಮುಂದೆ ಯೆಹೂದಿ ಅಥವಾ ಕ್ರೈಸ್ತ ಚರ್ಚುಗಳಲ್ಲಿ ಉಪಯೋಗಿಸಲ್ಪಡುತ್ತಿರಲಿಲ್ಲ. ಯೆಹೋವ ಎಂಬ ಹೆಸರು ಯೆಹೂದ್ಯರೊಂದಿಗೆ ತೀರ ಹೆಚ್ಚು ನಿಕಟವಾಗಿ ಸಂಬಂಧಿಸಿದೆ ಮತ್ತು “ಯಾವುದಕ್ಕೆ ಯಾವುದೇ ಸ್ಥಳೀಯ ಅಥವಾ ರಾಷ್ಟ್ರೀಯ ವಿಷಯವು ಇಲ್ಲ”ವೊ, ಆ “ಕರ್ತನು” ಅಥವಾ “ದೇವರು” ಎಂಬಂತಹ ಇನ್ನೊಂದು ಶಬ್ದವು ಉಪಯೋಗಿಸಲ್ಪಡಬೇಕೆಂದು ಅವನು ವಾದಿಸಿದನು.
ಪೆರೌನ್ ಈ ವಾದಗಳೊಂದಿಗೆ ಸಮ್ಮತಿಸಲಿಲ್ಲ, ಯಾಕಂದರೆ ಅವನು, ಮನುಷ್ಯರಿಗೆ ಕೊಡಲ್ಪಟ್ಟ ದೇವರ ಪ್ರಕಟನೆಯ “ಒಂದೇ ಒಂದು ಅಕ್ಷರವನ್ನೂ ಅಳಿಸಿಬಿಡಲು ಇಚ್ಛಿಸ”ಲಿಲ್ಲ. ಹೀಬ್ರು ದೈವಿಕ ನಾಮವನ್ನು “ಕರ್ತನು” ಎಂದು ಭಾಷಾಂತರಿಸುವ ತರ್ಜುಮೆಗಾರರು, ಆ ಎರಡು ಹೀಬ್ರು ಶಬ್ದಗಳ ನಡುವಿನ ವ್ಯತ್ಯಾಸವನ್ನು ಕಾಣಲು ತಪ್ಪುತ್ತಾರೆಂದು ಅವನು ಯೋಗ್ಯವಾಗಿಯೇ ವಾದಿಸಿದನು.
ಇನ್ನೂ ಹೆಚ್ಚಾಗಿ, ದೈವಿಕ ನಾಮದ ಪುನಸ್ಸ್ಥಾಪಿಸುವಿಕೆಯ ಪರವಾಗಿ ಇದ್ದಂತಹ, ತುಂಬ ಅರ್ಹತೆಯುಳ್ಳ ಅಧಿಕಾರಿಗಳಿದ್ದರೆಂದು ಪೆರೌನ್ ಪ್ರತಿಪಾದಿಸಿದರು. ಪ್ರಸಿದ್ಧ ಇಂಗ್ಲಿಷ್ ಕವಿ, ಸಾಮ್ಯುವೇಲ್ ಟೇಲರ್ ಕಾಲೆರಿಡ್ಜ್ರನ್ನು ಅವರು ಉಲ್ಲೇಖಿಸಿದರು:
“ಸೆಪ್ಟುಅಜಿಂಟ್ನ ಮಾಧ್ಯಮದ ಮೂಲಕ, ಹೀಬ್ರುವಿನಿಂದ ಇಂಗ್ಲಿಷ್ ಭಾಷೆಗೆ ಭಾಷಾಂತರವನ್ನು ಮಧ್ಯವರ್ತಿಯಾಗಿ ಏಕೆ ಮುಂದುವರಿಸಬೇಕು? ಯೆಹೋವ ಎಂಬ ಹೀಬ್ರು ಪದವನ್ನು ನಾವು ದತ್ತುಸ್ವೀಕರಿಸಿಲ್ಲವೊ? ಸೆಪ್ಟುಅಜಿಂಟ್ನ Κύριος ಅಥವಾ ಕರ್ತನು ಎಂಬ ಪದವು, ಯೆಹೋವ ಎಂಬ ಹೀಬ್ರು ಪದಕ್ಕೆ ಅಗಣಿತ ಸಂದರ್ಭಗಳಲ್ಲಿ ಒಂದು ಗ್ರೀಕ್ ಬದಲಿಯಾಗಿಲ್ಲವೊ? ಹಾಗಿರುವಾಗ, ಹಳೆಯ ಒಡಂಬಡಿಕೆಯಲ್ಲಿ ಯೆಹೋವ ಎಂಬ ಪದವನ್ನು ನಿಷ್ಠೆಯಿಂದ ಯೆಹೋವ ಎಂದು ತರ್ಜುಮೆ ಮಾಡಿ, ಹೊಸ ಒಡಂಬಡಿಕೆಯಲ್ಲಿ ಹಳೆಯ ಒಡಂಬಡಿಕೆಗೆ ಸೂಚಿತವಾದ ಪ್ರತಿಯೊಂದು ವಚನದಲ್ಲಿ, ಆ ವಚನದಿಂದ ನಿರ್ದೇಶಿಸಲ್ಪಟ್ಟ ಹೀಬ್ರು ಪದಕ್ಕೆ ಸೂಚಿಸುವ ಮೂಲಕ ಆ ಮೂಲ ಶಬ್ದವನ್ನು ಏಕೆ ಪುನಸ್ಸ್ಥಾಪಿಸಬಾರದು?”
ಹೀಬ್ರು ಟೆಟ್ರಗ್ರಾಮಟನ್ನಿನ ನಿಖರ ಉಚ್ಚಾರಣೆಯು ಕಳೆದುಹೋಗಿದೆಯೆಂದು ಪೆರೌನ್ ಒಪ್ಪಿಕೊಂಡರು, ಆದರೆ ಅವರು ಹೇಳಿದ್ದು: “ಬರಿಯ ಮೂಢನಂಬಿಕೆಯ ಅಳುಕುಗಳಿಂದಾಗಿ ಯೆಹೂದಿ ಚರ್ಚಿನಲ್ಲಿ ಆ ಹೆಸರಿನ ಬಳಕೆಯು ನಿಂತುಹೋಗಿರುವುದಾದರೆ, ಮತ್ತು ಗ್ರೀಕ್ ಹಾಗೂ ಲ್ಯಾಟಿನ್ ಭಾಷಾಂತರಗಳ ತೀರ ಅಂಧಾನುಕರಣ ನಕಲಿನಿಂದಾಗಿ ನಮ್ಮ ಸ್ವಂತ [ಇಂಗ್ಲಿಷ್] ಭಾಷಾಂತರವು ಆ ಹೆಸರನ್ನು ಕಳೆದುಕೊಂಡಿರುವುದಾದರೆ, ಅದರ ಮೂಲ ಉಪಯೋಗಕ್ಕೆ ಹಿಂದಿರುಗುವುದರ ವಿರುದ್ಧ ಬಲವಂತಪಡಿಸದ ಕಾರಣಗಳು ಇವಾಗಿವೆ.” ಪೆರೌನ್ “ಯೆಹೋವ” ಎಂಬ ಪದವನ್ನು ಮೆಚ್ಚಿದರು, ಯಾಕಂದರೆ ಅದು ಪ್ರಸಿದ್ಧವಾಗಿತ್ತು. ಅಂದಿನಿಂದ ಹೆಚ್ಚಿನ ಸಂಖ್ಯೆಯ ಆಧುನಿಕ ಭಾಷಾಂತರಗಳೂ ಆ ದೈವಿಕ ಹೆಸರನ್ನು ಬಳಸಿವೆ. ದ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್, ಯೆಹೋವ ಎಂಬ ಹೆಸರನ್ನು ಹೀಬ್ರು ಮತ್ತು ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ 7,200ಕ್ಕಿಂತಲೂ ಹೆಚ್ಚು ಬಾರಿ ಉಪಯೋಗಿಸುತ್ತದೆ.
ಕೀರ್ತನೆಗಳ ತಮ್ಮ ಭಾಷಾಂತರದಲ್ಲಿ, ಪೆರೌನ್ “ಹೀಬ್ರುವಿನ ಪದರೂಪಕ್ಕೆ, ಅದರ ವೈಶಿಷ್ಟ್ಯ ಮತ್ತು ವಾಕ್ಯಾಂಶಗಳ ರಚನೆಗಳಿಗೂ ಹೆಚ್ಚು ನಿಕಟವಾಗಿ” ಅಂಟಿಕೊಳ್ಳಲು ಪ್ರಯತ್ನಿಸಿದರು. ಕೀರ್ತನೆ 69, 5 ಮತ್ತು 6ನೇ ವಚನಗಳನ್ನು ಭಾಷಾಂತರಿಸುವಾಗ, “ದೇವರು” (ಇಲೊಹಿಮ್), “ಕರ್ತನು” (ಎಡೊನೊಯಿ) ಮತ್ತು “ಯೆಹೋವ”ಕ್ಕಾಗಿರುವ ಹೀಬ್ರು ಪದಗಳ ನಡುವೆ ವ್ಯತ್ಯಾಸವನ್ನು ಗ್ರಹಿಸುವ ಅಗತ್ಯವನ್ನು ಅವರು ಕಂಡರು: “ಓ ದೇವರೇ [ಇಲೊಹಿಮ್], ನೀನು ನನ್ನ ಮೂರ್ಖತನವನ್ನು ಬಲ್ಲಿ, ಮತ್ತು ನನ್ನ ದೋಷವು ನಿನ್ನಿಂದ ಮರೆಯಾಗಿಡಲ್ಪಟ್ಟಿಲ್ಲ. ಓ ಕರ್ತನೇ [ಎಡೊನೊಯಿ], ಸೇನೆಗಳ (ದೇವರಾದ) ಯೆಹೋವನೇ, ನಿನ್ನ ಮೇಲೆ ಆತುಕೊಳ್ಳುವವರು ನನ್ನ ಮೂಲಕ ನಾಚಿಕೆಪಡದಿರಲಿ. ಓ ಇಸ್ರಾಯೇಲಿನ ದೇವರೇ, ನಿನ್ನನ್ನು ಹುಡುಕುವವರು ನನ್ನ ಮೂಲಕ ದಿಕ್ಕುಪಾಲಾಗದಿರಲಿ.”