ಯೆಹೋವನ ಆಶೀರ್ವಾದದೊಂದಿಗೆ ವಿಸ್ತಾರ್ಯ
ಸೆಪ್ಟೆಂಬರ್ 18, 1995ರ ಸಂಜೆಯಂದು ನಡೆದ ಒಂದು ಸಮರ್ಪಣಾ ಕಾರ್ಯಕ್ರಮವು, ಯೆಹೋವ ದೇವರು ತನ್ನ ಸಾಕ್ಷಿಗಳ ವಿಸ್ತಾರ್ಯವನ್ನು, ನ್ಯೂ ಯಾರ್ಕಿನ ಬ್ರೂಕ್ಲಿನ್ನಲ್ಲಿರುವ ಅವರ ಜಾಗತಿಕ ಮುಖ್ಯಕಾರ್ಯಾಲಯಗಳಲ್ಲಿ ನಿಜವಾಗಿ ಆಶೀರ್ವದಿಸಿದ್ದಾನೆಂಬುದನ್ನು ಒತ್ತಿಹೇಳಿತು.
6,000ಕ್ಕಿಂತಲೂ ಹೆಚ್ಚು ಮಂದಿ ಸಮರ್ಪಣಾ ಕಾರ್ಯಕ್ರಮಕ್ಕೆ ಕಿವಿಗೊಟ್ಟರು. ಅವರು ಎಲ್ಲಿ ಈ ಕಾರ್ಯಕ್ರಮವು ಉದ್ಭವಿಸಿತೊ ಆ ಬ್ರೂಕ್ಲಿನ್ನಲ್ಲಿ, ಹಾಗೂ ನ್ಯೂ ಯಾರ್ಕಿನ ಪ್ಯಾಟರ್ಸನ್ ಮತ್ತು ವಾಲ್ಕಿಲ್ನ ಹತ್ತಿರವಿರುವ ಯೆಹೋವನ ಸಾಕ್ಷಿಗಳ ದೊಡ್ಡ ಸೌಕರ್ಯಗಳಲ್ಲಿ ಮತ್ತು ಕೆನಡದ ಟೊರಾಂಟೊದ ಹತ್ತಿರದ ತಮ್ಮ ಬ್ರಾಂಚಿನಂತಹ ಇತರ ನಿವೇಶನಗಳಲ್ಲಿ ಕೂಡಿಬಂದರು. ಬ್ರೂಕ್ಲಿನ್ನನ್ನು ಬಿಟ್ಟು ಇತರ ನಿವೇಶನಗಳಲ್ಲಿದ್ದವರು ಕಾರ್ಯಾವಳಿಗಳನ್ನು ಟೆಲಿಫೋನ್ ಸಂಪರ್ಕಗಳ ಮೂಲಕ ಕೇಳಿಸಿಕೊಂಡರು.
ಒಂದು ಹೃದಯೋಲ್ಲಾಸದ ಕಾರ್ಯಕ್ರಮ
ಕಾರ್ಯಕ್ರಮಕ್ಕೆ ಕಿವಿಗೊಡುತ್ತಿದ್ದ ಬೆತೆಲಿಗರು—ಆ ಸ್ವಯಂ ಸೇವಕರು ಕರೆಯಲ್ಪಡುವಂತೆ—ಲೋಕವ್ಯಾಪಕವಾದ ಬೆತೆಲ್ ಕುಟುಂಬದ 16,400ಕ್ಕಿಂತ ಹೆಚ್ಚಿನ ಸದಸ್ಯರ ಒಂದು ದೊಡ್ಡ ಭಾಗವನ್ನು ರಚಿಸಿದರು. ಅಂತಹ ಸದಸ್ಯರು ಸುಮಾರು ನೂರು ದೇಶಗಳಲ್ಲಿ ಸೇವೆ ಸಲ್ಲಿಸುತ್ತಾರೆ, ಅವರು ಅಲ್ಲಿ, ಲೋಕದಲ್ಲಿರುವ ಯೆಹೋವನ ಸಾಕ್ಷಿಗಳ 78,600ಕ್ಕಿಂತಲೂ ಹೆಚ್ಚಿನ ಸಭೆಗಳಿಗಾಗಿ ಬೈಬಲ್ ಸಾಹಿತ್ಯವನ್ನು ಮುದ್ರಿಸುತ್ತಾರೆ ಮತ್ತು ಬೆಂಬಲಾತ್ಮಕ ಸೇವೆಗಳನ್ನು ಒದಗಿಸುತ್ತಾರೆ.
ಸಂಜೆ 6:30ಕ್ಕೆ ಸಮರ್ಪಣಾ ಕಾರ್ಯಕ್ರಮವು ಸಂಗೀತದಿಂದ ಆರಂಭಿಸಿ, ಕಾರ್ಲ್ ಕ್ಲೇನ್ರಿಂದ ಪ್ರಾರ್ಥನೆಯೊಂದಿಗೆ ಹಿಂಬಾಲಿಸಲ್ಪಟ್ಟಾಗ ಆತುರತೆಯು ತೀವ್ರವಾಗಿತ್ತು. ಕಾರ್ಯಕ್ರಮದ ಅಧ್ಯಕ್ಷರಾದ, ಲಾಯ್ಡ್ ಬ್ಯಾರಿಯವರು, ಆ ಸಂದರ್ಭದ ಮಹತ್ವದ ಮೇಲೆ ಸಂಕ್ಷಿಪ್ತ ಹೇಳಿಕೆಗಳೊಂದಿಗೆ ಎಲ್ಲರನ್ನು ಹೃದಯೋಲ್ಲಾಸದಿಂದ ಸ್ವಾಗತಿಸಿದರು. ಆ್ಯಲ್ಬರ್ಟ್ ಶ್ರೋಡರ್ರವರು ವಾರದ ಕಾವಲಿನಬುರುಜು ಪಾಠವನ್ನು ಪುನರ್ವಿಮರ್ಶಿಸಿದರು ಮತ್ತು ಅನಂತರ ಡ್ಯಾನಿಯಲ್ ಸಿಡ್ಲಿಕ್ರವರು, “ಬೆತೆಲಿನಲ್ಲಿ ನಮ್ಮ ಪವಿತ್ರ ಸೇವೆ” ಎಂಬ ಮುಖ್ಯ ವಿಷಯದ ಮೇಲೆ ಮಾತಾಡಿದರು. ಕಾರ್ಯಕ್ರಮದಲ್ಲಿ ಮೊದಲು ಇದ್ದ ಇವರೆಲ್ಲರು, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗಿದ್ದರು.
ಮುಂದಿನ ಎರಡು ಕಾರ್ಯಕ್ರಮ ಭಾಗಗಳು—“ವಸತಿಯ ಕುರಿತಾದ ನಮ್ಮ ವಿಸ್ತರಿಸುವ ಅಗತ್ಯಗಳನ್ನು ಪೂರೈಸುವುದು, 1974-1995,” ಮತ್ತು “ಬ್ರೂಕ್ಲಿನ್ನಲ್ಲಿ ಬೆತೆಲಿನ ನವೀಕರಣ ಮತ್ತು ನಿರ್ಮಾಣದ ಮುಖ್ಯಾಂಶಗಳು”—ಸಮರ್ಪಿಸಲ್ಪಟ್ಟ ಕಟ್ಟಡಗಳ ನಿರ್ಮಾಣ ಅಥವಾ ದೊರಕಿಸಿಕೊಳ್ಳುವಿಕೆಯ ಕುರಿತಾದ ಮುಖ್ಯಾಂಶಗಳನ್ನು ತೋರಿಸಿದವು. ಈಗ ಸುಮಾರು ಒಂದು ಸಾವಿರ ಬೆತೆಲಿಗರು ಉಪಯೋಗಿಸುತ್ತಿರುವ, ಇತ್ತೀಚೆಗೆ ಮುಗಿಸಲ್ಪಟ್ಟ ನಿವಾಸ ಕಟ್ಟಡದ ಮೇಲೆ ಹೇಳಿಕೆಗಳು ಗಮನವನ್ನು ಕೇಂದ್ರೀಕರಿಸಿದವು. 90 ಸ್ಯಾಂಡ್ಸ್ ಸ್ಟ್ರೀಟ್ನಲ್ಲಿರುವ ಈ 115 ಮೀಟರ್ ಎತ್ತರದ ಮನೆಯು, ಮುದ್ರಣ ಫ್ಯಾಕ್ಟರಿಯ ಸಂಕೀರ್ಣದ ಪಕ್ಕದಲ್ಲಿದೆ.
ಕಾರ್ಯಕ್ರಮವು, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಅಧ್ಯಕ್ಷರಾದ ಮಿಲ್ಟನ್ ಹೆನ್ಶಲ್ರಿಂದ ಕೊಡಲ್ಪಟ್ಟ ಸಮರ್ಪಣಾ ಭಾಷಣವನ್ನು ಮುಖ್ಯವಿಷಯವಾಗಿ ಪ್ರದರ್ಶಿಸಿತು. ಯೆಹೋವನ ಸೇವೆಯಲ್ಲಿ ಉಪಯೋಗಿಸಲಿಕ್ಕಾಗಿ ಕಟ್ಟಡಗಳನ್ನು ಸಮರ್ಪಿಸುವ ಬೈಬಲ್ ಪೂರ್ವನಿದರ್ಶನಗಳನ್ನು ಅವರು ಒತ್ತಿಹೇಳಿದರು. ಒಂದು ಸಂಗೀತದ ನಂತರ ಕಾರ್ಯವಳಿಗಳು, ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿರುವ ಕ್ಯಾರಿ ಬಾರ್ಬರ್ರಿಂದ ಪ್ರಾರ್ಥನೆಯ ಮೂಲಕ ಸಮಾಪ್ತಿಗೊಳಿಸಲ್ಪಟ್ಟವು. ಆದರೆ ಕಾರ್ಯಕ್ರಮದ ಕೆಲವು ಮುಖ್ಯಾಂಶಗಳು ಏನಾಗಿದ್ದವು?
ಸಮರ್ಪಿಸಲ್ಪಟ್ಟಂತಹ ಕಟ್ಟಡಗಳು
ಬೆತೆಲ್ ಮನೆಯ ಮೇಲ್ವಿಚಾರಕರಾದ, ಜಾರ್ಜ್ ಕೌಚ್, 1969ರ ಮೇ 2ರಂದು ಬ್ರೂಕ್ಲಿನ್ನಲ್ಲಿ ಬೆತೆಲ್ ನಿವಾಸದ ಕೊನೆಯ ಸಮರ್ಪಣೆಯಂದಿನಿಂದ 17 ನಿವಾಸಗಳು ಕೂಡಿಸಲ್ಪಟ್ಟಿವೆ ಎಂದು ವಿವರಿಸಿದರು.a ಇವು ಒಂದೇ ಹೊಸತಾಗಿ ಕಟ್ಟಲ್ಪಟ್ಟ ಮನೆಗಳು ಅಥವಾ ಖರೀದಿಸಲ್ಪಟ್ಟು, ನವೀಕರಿಸಲ್ಪಟ್ಟ ಕಟ್ಟಡಗಳಾಗಿದ್ದವು. ಈ ಸಮರ್ಪಣೆಯು ವಾಸ್ತವವಾಗಿ, ಈ 17 ನಿವಾಸಗಳದ್ದು, ಎರಡು ಚಿಕ್ಕ ಕಟ್ಟಡಗಳದ್ದು—1940ಗಳಲ್ಲಿ ಖರೀದಿಸಲ್ಪಟ್ಟು, ಬೆತೆಲ್ ನಿವಾಸಗಳಾಗಿ ಮಾರ್ಪಡಿಸಲ್ಪಟ್ಟವು—ಹಾಗೂ ಮಾರ್ಚ್ 15, 1982ರಂದು ಯೆಹೋವನ ಸಾಕ್ಷಿಗಳ ಎಕ್ಸೆಕ್ಯುಟಿವ್ ಆಫೀಸುಗಳ ಸಮರ್ಪಣೆಯಂದಿನಿಂದ ಕಟ್ಟಲ್ಪಟ್ಟ ಅಥವಾ ಖರೀದಿಸಲ್ಪಟ್ಟಿದ್ದಂತಹ ಫ್ಯಾಕ್ಟರಿ ಮತ್ತು ಆಫೀಸ್ ಸೌಕರ್ಯಗಳದ್ದಾಗಿತ್ತು.b
ಸಮರ್ಪಿಸಲ್ಪಟ್ಟ ಕಟ್ಟಡಗಳಲ್ಲಿ ಅತಿ ದೊಡ್ಡದು 360 ಫರ್ಮನ್ ಸ್ಟ್ರೀಟ್ನಲ್ಲಿರುವಂತಹದ್ದಾಗಿದೆ. ಮೂಲತಃ 1928ರಲ್ಲಿ ನಿರ್ಮಿಸಲ್ಪಟ್ಟು, ಅದು ಮಾರ್ಚ್ 15, 1983ರಲ್ಲಿ ಯೆಹೋವನ ಸಾಕ್ಷಿಗಳಿಂದ ಖರೀದಿಸಲ್ಪಟ್ಟಿತು, ಮತ್ತು ಸಂಪೂರ್ಣವಾಗಿ ನವೀಕರಿಸಲ್ಪಟ್ಟಿತು. ಅದು 93,000 ಚದರ ಮೀಟರ್ ನೆಲ ಜಾಗವನ್ನು, ಅಥವಾ ಬಹುಮಟ್ಟಿಗೆ 23 ಎಕರೆಗಳನ್ನು ಹೊಂದಿರುತ್ತದೆ. ಸಮರ್ಪಣೆಯಲ್ಲಿ ಒಳಗೂಡಿದ್ದಂತಹ ಇತರ ಕಟ್ಟಡಗಳು, 175 ಪರ್ಲ್ ಸ್ಟ್ರೀಟ್ನಲ್ಲಿರುವ ಫ್ಯಾಕ್ಟರಿ ಮತ್ತು ಇತ್ತೀಚಿನ ವರ್ಷಗಳಲ್ಲಿ ಕಟ್ಟಲ್ಪಟ್ಟಂತಹ ದೊಡ್ಡ ಗ್ಯಾರೇಜುಗಳು ಆಗಿದ್ದವು.
ಹೆಚ್ಚಿನ ವಸತಿಯ ಅಗತ್ಯವಿರುವ ಕಾರಣ
1969ರಲ್ಲಿ ಕೊನೆಯ ಬ್ರೂಕ್ಲಿನ್ ಬೆತೆಲ್ ನಿವಾಸ ಕಟ್ಟಡವು ಸಮರ್ಪಿಸಲ್ಪಟ್ಟಾಗ, ಲೋಕವ್ಯಾಪಕವಾಗಿ ದೇವರ ರಾಜ್ಯದ ಸುವಾರ್ತೆಯನ್ನು ಸಾರುವ 13,36,112 ಸಾಕ್ಷಿಗಳ ಉಚ್ಛಾಂಕವಿತ್ತು. ಆದರೆ 1995ರಲ್ಲಿ ಹಾಗೆ ಮಾಡುತ್ತಿದ್ದ 51,99,895 ಜನರಿದ್ದರು, ಮೂರುವರೆ ಪಟ್ಟಿಗಿಂತಲೂ ಹೆಚ್ಚು! ಹೀಗಿರುವುದರಿಂದ, ಬೈಬಲ್ ಸಾಹಿತ್ಯಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಸಮಹೆಜ್ಜೆ ಇಡಲು, ಬ್ರೂಕ್ಲಿನ್ ಬೆತೆಲ್ ಕುಟುಂಬವು 1969ರಲ್ಲಿ 1,042 ಕ್ರಮದ ಸದಸ್ಯರಿಂದ, ಈಗ 22 ನಿವಾಸಗಳಲ್ಲಿ ಜೀವಿಸುತ್ತಿರುವ 3,360ಕ್ಕೆ ಹೆಚ್ಚಿದೆ!
1974ರಿಂದ 1995ರ ವರೆಗೆ, ಹೆಚ್ಚಿನ ವಸತಿಗಾಗಿರುವ ಅಗತ್ಯವನ್ನು ನಿಭಾಯಿಸಿದ ವಿಧವನ್ನು ಜಾರ್ಜ್ ಕೌಚ್ ಚರ್ಚಿಸಿದರು. 1970ಗಳ ಆರಂಭದಲ್ಲಿ, ಬೆಳೆಯುತ್ತಿದ್ದ ಬೆತೆಲ್ ಕುಟುಂಬಕ್ಕೆ ವಸತಿ ಕೊಡಲು ಹತ್ತಿರದಲ್ಲಿದ್ದ ಟವರ್ಸ್ ಹೋಟೆಲಿನ ಅನೇಕ ಮಾಳಿಗೆಗಳು ಯೆಹೋವನ ಸಾಕ್ಷಿಗಳಿಂದ ಗುತ್ತಿಗೆಗೆ ತೆಗೆದುಕೊಳ್ಳಲ್ಪಟ್ಟವು. ಡಿಸೆಂಬರ್ 1973ರಲ್ಲಿ, ವಾಚ್ ಟವರ್ ಸೊಸೈಟಿಯ ಆಗಿನ ಅಧ್ಯಕ್ಷರಾಗಿದ್ದ, ನೆತನ್ ನಾರರು, ಸೊಸೈಟಿಯು ‘ಅಕ್ಟೋಬರ್ 1, 1974ರಷ್ಟಕ್ಕೆ ಟವರ್ಸ್ ಹೋಟೆಲಿನಿಂದ ಸ್ಥಳಾಂತರಿಸಲು’ ಯೋಜಿಸಿತೆಂದು, ಬೆತೆಲ್ ಆಫೀಸ್ ಹಾಗೂ ಟವರ್ಸ್ ನಿರ್ವಾಹಕ ಮಂಡಲಿಗೆ ಬರೆದರು.
ಟವರ್ಸ್ನಲ್ಲಿ ಜೀವಿಸುತ್ತಿದ್ದ ಬೆತೆಲಿಗರಿಗೆ ವಸತಿ ನೀಡಲು ಬೇರೆ ಯಾವ ಜಾಗವೂ ಇರಲಿಲ್ಲವಾದುದರಿಂದ ತಾನು ತಲ್ಲಣಗೊಂಡಿದ್ದೆ ಎಂದು ಸಹೋದರ ಕೌಚ್ ಹೇಳಿದರು. ಟವರ್ಸ್ ನಿರ್ವಾಹಕ ಮಂಡಲಿಯೂ ತಲ್ಲಣಗೊಂಡಿತು, ಯಾಕಂದರೆ ಅವರು ತಮ್ಮ ಎಲ್ಲಾ ಕಾನೂನುಬದ್ಧ ಸಾಲಗಳನ್ನು ತೀರಿಸಲು ಸೊಸೈಟಿಯ ಬಾಡಿಗೆಯ ಹಣದ ಮೇಲೆ ಹೊಂದಿಕೊಂಡಿದ್ದರು. ಫಲಿತಾಂಶವು ಏನಾಗಿತ್ತೆಂದರೆ, ಯೆಹೋವನ ಸಾಕ್ಷಿಗಳು ಹೋಟೆಲನ್ನು ಖರೀದಿಸುವಂತೆ ಟವರ್ಸ್ ನಿರ್ವಾಹಕ ಮಂಡಳಿಯು ಉತ್ತೇಜಿಸಿತು. “ನಾವು ಈ ನೆರೆಹೊರೆಯಲ್ಲಿ ಇದ್ದಂದಿನಿಂದ ನೀವು ಬೆಳೆಯುತ್ತಿದ್ದೀರಿ ಮತ್ತು ನಿಮಗೆ ಕಟ್ಟಡದ ಅಗತ್ಯವಿದೆ,” ಎಂದು ಅವರು ಹೇಳಿದರು.
“ಅದು ಬಾಡಿಗೆದಾರರಿಂದ ತುಂಬಿದೆ,” ಎಂಬುದು ಸೊಸೈಟಿಯ ಪ್ರತಿನಿಧಿಗಳ ಉತ್ತರವಾಗಿತ್ತು. “ನಾವು ಅದನ್ನು ಖರೀದಿಸಿದಲ್ಲಿ, ನಾವು ನಮ್ಮ ಸ್ವಂತ ಜನರನ್ನು ಅಲ್ಲಿ ಇರಿಸಲು ಬಯಸುವೆವು.”
“ನಾವು ನಿಮಗಾಗಿ ಕಟ್ಟಡವನ್ನು ಖಾಲಿಮಾಡಿಸುವೆವು” ಎಂದು ಟವರ್ಸ್ ನಿರ್ವಾಹಕ ಮಂಡಳಿಯು ಮಾತುಕೊಟ್ಟಿತು. ಒಳ್ಳೇದು, ಸ್ವಲ್ಪ ಸಮಯದ ನಂತರ ಯೆಹೋವನ ಸಾಕ್ಷಿಗಳು ಟವರ್ಸ್ ಕಟ್ಟಡವನ್ನು ಒಂದು ಯೋಗ್ಯವಾದ ಬೆಲೆಗೆ ಖರೀದಿಸಿದರು. “ಸಹೋದರ ನಾರ್ ಆ ಪತ್ರವನ್ನು ಏಕೆ ಬರೆದರು?” ಎಂದು ಕೌಚ್ ಸ್ತಬ್ಧರಾಗಿದ್ದ ತಮ್ಮ ಸಭಿಕರನ್ನು ಕೇಳಿದರು. “ಪ್ರಾಯಶಃ ಸ್ವತಃ ಅವರಿಗೆ ತಿಳಿದಿರಲಿಲ್ಲ, ಆದರೆ ಆ ಘಟನೆಯೇ ಟವರ್ಸ್ ಹೋಟೆಲನ್ನು ವಾಚ್ ಟವರ್ ಸೊಸೈಟಿಗೆ ಮಾರಿಬಿಟ್ಟಿತು.”
ಮೂಲ ಬೆತೆಲ್ ಮನೆಯಿಂದ ಬೀದಿಯ ಆಚೆ ಪಕ್ಕದಲ್ಲಿ, ಪ್ರಸಿದ್ಧ ಮಾರ್ಗರೆಟ್ ಹೋಟೆಲಿನ ಹಿಂದಿನ ನಿವೇಶನವಾಗಿದ್ದ, 97 ಕೊಲೊಂಬಿಯ ಹೈಟ್ಸ್ ಅನ್ನು ಯೆಹೋವನ ಸಾಕ್ಷಿಗಳು ಖರೀದಿಸಿದ ವಿಧವನ್ನು ಕೂಡ ಭಾಷಣಕಾರರು ವರ್ಣಿಸಿದರು. ಸ್ಥಳವು ಒಳ್ಳೆಯದಾಗಿತ್ತು, ಯಾಕಂದರೆ ಅದು ಬೆತೆಲ್ ಸಂಕೀರ್ಣಕ್ಕೆ ಬೀದಿಯ ಕೆಳಗಿನ ಒಂದು ಸುರಂಗದ ಮೂಲಕ ಸುಲಭವಾಗಿ ಜೋಡಿಸಲ್ಪಡಸಾಧ್ಯವಿತ್ತು. ಫೆಬ್ರವರಿ 1980ರಲ್ಲಿ, ಕಟ್ಟಡವು ಪುನರ್ರೂಪಿಸಲ್ಪಡುತ್ತಿದ್ದಾಗ, ಸುಟ್ಟು ಹೋಯಿತು. ಅನಂತರ, ಆ ಸ್ಥಳದಲ್ಲಿ ಒಂದು ಹೊಸ ಕಟ್ಟಡವನ್ನು ನಿರ್ಮಿಸುವುದರಲ್ಲಿ ದಣಿಗೆ ಕಷ್ಟಗಳಿದ್ದುದರಿಂದ ಅವನು ಆ ಆಸ್ತಿಯನ್ನು ಯೆಹೋವನ ಸಾಕ್ಷಿಗಳಿಗೆ ಮಾರಿದನು.
ಸಹೋದರ ಕೌಚ್ ಗಮನಿಸಿದ್ದು: “ಈ ಕಟ್ಟಡಗಳಲ್ಲಿ ಕಾರ್ಯತಃ ಪ್ರತಿಯೊಂದರ ಮರೆಯಲ್ಲಿ ಒಂದು ಆಸಕ್ತಕರ ಕಥೆಯಿದೆ. ಇದು ಒಂದು ವಿಷಯಕ್ಕೆ ನಿರ್ದೇಶಿಸುತ್ತದೆ—ಏನಂದರೆ ಆ ನಿರ್ದಿಷ್ಟ ಕಟ್ಟಡವನ್ನು ಪಡೆಯಲು ದೃಶ್ಯ ಸಂಸ್ಥೆಯನ್ನು ಮಾರ್ಗದರ್ಶಿಸಿದವನು ಯೆಹೋವ ದೇವರಾಗಿದ್ದಾನೆ.”
90 ಸ್ಯಾಂಡ್ಸ್ ಕಟ್ಟಡದ ಮರೆಯಲ್ಲಿರುವ ಕಥೆ
ತೀರ ಹೊಸದಾದ ಮತ್ತು ಅತ್ಯಂತ ದೊಡ್ಡದಾದ ನಿವಾಸವು 90 ಸ್ಯಾಂಡ್ಸ್ ಸ್ಟ್ರೀಟ್ ಆಗಿದೆ. ಡಿಸೆಂಬರ್ 1986ರಲ್ಲಿ ಆ ಆಸ್ತಿಯು ಯೆಹೋವನ ಸಾಕ್ಷಿಗಳಿಂದ ಖರೀದಿಸಲ್ಪಟ್ಟಾಗ, ಅದು 160 ಜೇ ಸ್ಟ್ರೀಟ್ನಲ್ಲಿ ಒಂದು ದೊಡ್ಡ ಫ್ಯಾಕ್ಟರಿಯ ಸ್ಥಳವಾಗಿತ್ತು.c ಫ್ಯಾಕ್ಟರಿಯನ್ನು ನೆಲಸಮಮಾಡಲಾಯಿತು, ಮತ್ತು ಆ ಸ್ಥಳದಲ್ಲಿ 30 ಮಾಳಿಗೆಯ ವಸತಿ ಸೌಕರ್ಯವನ್ನು ಕಟ್ಟಿಸಲು ಒಂದು ಪರವಾನಗಿಯನ್ನು ಹೊರಡಿಸಲಾಗಿತ್ತೆಂದು ಆಗಸ್ಟ್ 30, 1990ರಂದು ಬೆತೆಲ್ ಕುಟುಂಬಕ್ಕೆ ಹೇಳಲಾಯಿತು.
ಆಡಳಿತ ಮಂಡಲಿಯ ಸದಸ್ಯರಾದ ತೀಯಡೋರ್ ಜರಸ್ರಿಂದ ನಡಸಲ್ಪಟ್ಟ ಒಂದು ಸಂದರ್ಶನದಲ್ಲಿ, ಸೊಸೈಟಿಯ ಬ್ರೂಕ್ಲಿನ್ ಫ್ಯಾಕ್ಟರಿ ಮೇಲ್ವಿಚಾರಕರಾದ ಮ್ಯಾಕ್ಸ್ ಲಾರ್ಸನ್, 90 ಸ್ಯಾಂಡ್ಸ್ ಸ್ಟ್ರೀಟ್ ನಿವಾಸವನ್ನು ಕಟ್ಟಲು ಪರವಾನಗಿಯು ನೀಡಲ್ಪಟ್ಟ ವಿಧವನ್ನು ವರ್ಣಿಸಿದರು. ಹಿಂದೆ 1965ರಲ್ಲಿ ಏನು ಸಂಭವಿಸಿತ್ತೋ, ಅದು ಬಹು ಮುಖ್ಯವಾಗಿತ್ತೆಂದು ಸಹೋದರ ಲಾರ್ಸನ್ ವಿವರಿಸಿದರು.
ಆ ಸಮಯದಲ್ಲಿ ಸೊಸೈಟಿಯು ತನ್ನ ಇತರ ಫ್ಯಾಕ್ಟರಿಗಳ ಪಕ್ಕದಲ್ಲಿರುವ ಜಮೀನಿನಲ್ಲಿ ಹತ್ತು ಮಾಳಿಗೆಯ ಒಂದು ಫ್ಯಾಕ್ಟರಿಯನ್ನು ನಿರ್ಮಿಸಲು ಬಯಸಿತ್ತು, ಆದರೆ ಆ ಜಮೀನಿನ ಸೋನಿಂಗ್ ಕೇವಲ ಎರಡು ಮಾಳಿಗೆಯ ನಿರ್ಮಾಣಕ್ಕೆ ಅನುಮತಿಯನ್ನಿತ್ತಿತು. ಹೊಸತಾಗಿ ಯೋಜನೆ ಮಾಡಲ್ಪಟ್ಟ ಫ್ಯಾಕ್ಟರಿಗಾಗಿ ಒಬ್ಬ ವಾಸ್ತುಶಿಲ್ಪಿಯು ಕಟ್ಟಡದ ಪ್ರಿಂಟ್ಗಳನ್ನು ತಯಾರಿಸಲು ಒಪ್ಪಿದನು, ಆದರೆ ಅವನು ಹೇಳಿದ್ದು: “ಬೋರ್ಡ್ಗೆ ಅವುಗಳನ್ನು ಪ್ರಸ್ತುತಪಡಿಸುವ ಮೂಲಕ ನಾನು ಸ್ವತಃ ಪೇಚಿಗೆ ಗುರಿಯಾಗುವುದಿಲ್ಲ.” ಬೋರ್ಡ್ ಆಫ್ ಸ್ಟ್ಯಾಂಡರ್ಡ್ಸ್ ಆ್ಯಂಡ್ ಅಪ್ಪೀಲ್ಸ್, ಆ ಜಮೀನಿನ ಸೋನಿಂಗ್ ನಿಯಮಗಳನ್ನು ಎಂದೂ ಬದಲಾಯಿಸದು ಎಂದು ಅವನಿಗೆ ದೃಢನಿಶ್ಚಯವಿತ್ತು. ಕಟ್ಟಡದ ಪ್ರಿಂಟ್ಗಳು ಸಮ್ಮತಿಸಲ್ಪಟ್ಟಾಗ ಅವನು ಉದ್ಗರಿಸಿದ್ದು: “ಅದು ನಿಮಗೆ ಸಿಕ್ಕಿರುವುದಾದರೂ ಹೇಗೆ!”
ಕಾರಣವೇನಾಗಿತ್ತೆಂದರೆ, ನಮ್ಮ ಹತ್ತು ಮಾಳಿಗೆಯ ಫ್ಯಾಕ್ಟರಿಗಾಗಿ ಆ ಜಮೀನು ರೀಸೋನ್ ಮಾಡಲ್ಪಟ್ಟಾಗ, ಹತ್ತಿರದಲ್ಲಿದ್ದ ಜಮೀನುಗಳೂ—160 ಜೇ ಸ್ಟ್ರೀಟ್ ಕಟ್ಟಡವನ್ನು ಹೊಂದಿದ್ದಂತಹದ್ದನ್ನು ಸೇರಿಸಿ—ರೀಸೋನ್ ಮಾಡಲ್ಪಟ್ಟಿದ್ದವು ಎಂದು ಲಾರ್ಸನ್ ಮುಂದುವರಿಸಿದರು. ಮತ್ತು ಆಶ್ಚರ್ಯಜನಕವಾಗಿ ಆ ರೀಸೋನಿಂಗ್ ಒಂದು ಹೋಟೆಲನ್ನು ಅನುಮತಿಸಿತು. ಆದರೆ, ಅದು ಯಾರೂ ಗಮನಕ್ಕೆ ತೆಗೆದುಕೊಂಡಿರದಂತಹ ಒಂದು ವಿಷಯವಾಗಿತ್ತು—ಕಡಿಮೆಪಕ್ಷ ಸುಮಾರು 25 ವರ್ಷಗಳ ಬಳಿಕ, ನಾವು ಒಂದು ಹೊಸ ಬೆತೆಲ್ ಮನೆಯನ್ನು ಕಟ್ಟಲು ಒಂದು ಸ್ಥಳಕ್ಕಾಗಿ ಹುಡುಕಲಾರಂಭಿಸಿದ ನಂತರದ ತನಕ, ಎಂದು ಲಾರ್ಸನ್ರು ಹೇಳಿದರು. ಆಗ ಸೋನಿಂಗ್ ನಿಯಮವನ್ನು ಪುನಃ ಕಂಡುಹಿಡಿಯಲಾಯಿತು!
ಏನು ಸಂಭವಿಸಿತ್ತೆಂಬುದನ್ನು ಸಹೋದರ ಲಾರ್ಸನ್ ವಿವರಿಸಿದರು: “ನಮ್ಮ 30 ಮಾಳಿಗೆಯ ನಿವಾಸಕ್ಕಾಗಿ ಪ್ರಿಂಟ್ಗಳನ್ನು ತಯಾರಿಸಿ, ಕಟ್ಟಡ ಇಲಾಖೆಗೆ ಕೊಂಡೊಯ್ದಾಗ, ನಮಗೆ ಹೀಗೆ ಹೇಳಲಾಯಿತು: ‘ನೀವು ಅಲ್ಲಿ ಒಂದು ನಿವಾಸವನ್ನು ಹೊಂದಲಾರಿರಿ. ಅದೆಲ್ಲಾ ಉತ್ಪಾದನೆಗೋಸ್ಕರ ಬದಿಗಿರಿಸಲ್ಪಟ್ಟಿದೆ ಮತ್ತು ಅವರು ನಿಮಗಾಗಿ ಸೋನಿಂಗನ್ನು ಬದಲಾಯಿಸರು.’
“‘ಅವರು ಅದನ್ನು ಬದಲಾಯಿಸಬೇಕಾಗಿಲ್ಲ,’ ಎಂದು ನಾವು ಅಧಿಕಾರಿಗಳಿಗೆ ತಿಳಿಸಿದೆವು. ‘ಅದು ಈಗಾಗಲೇ ಒಂದು ಹೋಟೆಲಿಗಾಗಿ ಸೋನ್ ಮಾಡಲ್ಪಟ್ಟಿದೆ.’ ಅವರು ರೆಕಾರ್ಡುಗಳನ್ನು ನೋಡಿದಾಗ, ಅವರಿಗೆ ಅದನ್ನು ನಂಬಲಾಗಲಿಲ್ಲ! ಒಳ್ಳೇದು ಹೀಗೆ ನಾವು ನಮ್ಮ 30 ಮಾಳಿಗೆಯ ಕಟ್ಟಡವನ್ನು ಹೊಂದಿದೆವು,” ಎಂದು ಲಾರ್ಸನ್ ಸಮಾಪ್ತಿಗೊಳಿಸಿದರು.
ಯೆಹೋವನ ಆಶೀರ್ವಾದವು ಸುವ್ಯಕ್ತ
ಒಬ್ಬ ಬೈಬಲ್ ಕೀರ್ತನೆಗಾರನು ಬರೆದುದು: “ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವದು ವ್ಯರ್ಥ.” (ಕೀರ್ತನೆ 127:1) ಯೇಸು ತನ್ನ ಹಿಂಬಾಲಕರಿಗೆ ಮಾಡಲು ಆಜ್ಞಾಪಿಸಿದ ಲೋಕವ್ಯಾಪಕ ಸಾರುವಿಕೆ ಮತ್ತು ಕಲಿಸುವಿಕೆಯ ಕೆಲಸವನ್ನು ಸುಗಮ ಮಾಡಲು, ಯೆಹೋವನ ಸಾಕ್ಷಿಗಳ ನಿರ್ಮಾಣ ಚಟುವಟಿಕೆಯ ಮೇಲೆ ಯೆಹೋವನ ಆಶೀರ್ವಾದವಿದೆ ಎಂಬುದು ಸ್ಪಷ್ಟ.—ಮತ್ತಾಯ 24:14; 28:19, 20.
ಸೆಪ್ಟೆಂಬರ್ 18, 1995ರಂದು ಕಾರ್ಯಕ್ರಮವನ್ನು ಕೇಳಲು ಸುಯೋಗ ಹೊಂದಿದವರು, ಯೆಹೋವನ ಸೇವಕರ ಜಾಗತಿಕ ಮುಖ್ಯಕಾರ್ಯಲಯಗಳ ವಿಸ್ತಾರ್ಯದ ಮೇಲೆ ಅಂತಹ ಆಶೀರ್ವಾದದ ಪುರಾವೆಯಿಂದಾಗಿ ರೋಮಾಂಚಿತರಾಗಿದ್ದರು. ಆತನು ಏನನ್ನು ಆಜ್ಞಾಪಿಸುತ್ತಾನೋ ಅದನ್ನು ಅವರು ಮಾಡುತ್ತಾ ಮುಂದುವರಿದಂತೆ, ಆತನ ನಿರಂತರ ಆಶೀರ್ವಾದದ ಕುರಿತಾಗಿ ಯೆಹೋವನ ಜನರು ದೃಢಭರವಸೆಯಿಂದಿರಸಾಧ್ಯವಿದೆ.
[ಅಧ್ಯಯನ ಪ್ರಶ್ನೆಗಳು]
[ಪುಟ 23 ರಲ್ಲಿರುವ ಚಿತ್ರ]
90 ಸ್ಯಾಂಡ್ಸ್ ಸ್ಟ್ರೀಟ್ • 1995
[ಪುಟ 24,25 ರಲ್ಲಿರುವಚಿತ್ರಗಳು]
ಸಮರ್ಪಿಸಲ್ಪಟ್ಟ ಇನ್ನೂ ಹೆಚ್ಚಿನ ನಿವಾಸಗಳಲ್ಲಿ ಕೆಲವು
97 ಕೊಲೊಂಬಿಯ ಹೈಟ್ಸ್ • 1986
ಬೊಸೆರ್ಟ್ ಹೋಟೆಲ್, 98 ಮೊಂಟೇಗ್ ಸ್ಟ್ರೀಟ್ • 1983
34 ಆರೆಂಜ್ ಸ್ಟ್ರೀಟ್ • 1945
ಸ್ಟ್ಯಾಂಡಿಷ್ ಹೋಟೆಲ್, 169 ಕೊಲೊಂಬಿಯ ಹೈಟ್ಸ್ • 1981
67 ಲಿವಿಂಗ್ಸ್ಟನ್ ಸ್ಟ್ರೀಟ್ • 1989
108 ಜೊರಾಲೆಮೊನ್ ಸ್ಟ್ರೀಟ್ • 1988
ಟವರ್ಸ್ ಹೋಟೆಲ್, 79-99 ಸ್ಟ್ರೀಟ್ • 1975
[ಪುಟ 26 ರಲ್ಲಿರುವ ಚಿತ್ರಗಳು]
175 ಪರ್ಲ್ ಸ್ಟ್ರೀಟ್ • 1983
69 ಆ್ಯಡಮ್ಸ್ ಸ್ಟ್ರೀಟ್ • 1991
360 ಫರ್ಮನ್ ಸ್ಟ್ರೀಟ್ • 1983