ಲೌಕಿಕ ಧರ್ಮವು ಅಂತ್ಯಗೊಳ್ಳಲಿರುವುದಕ್ಕೆ ಕಾರಣ
“ಅವಳೊಂದಿಗೆ ಅವಳ ಪಾಪಗಳಲ್ಲಿ ಪಾಲುಗಾರರಾಗಲು ನೀವು ಬಯಸದಿದ್ದರೆ, ಮತ್ತು ಅವಳ ಉಪದ್ರವಗಳ ಅಂಶವನ್ನು ಪಡೆಯಲು ನೀವು ಬಯಸದಿದ್ದರೆ, ನನ್ನ ಜನರೇ, ಅವಳನ್ನು ಬಿಟ್ಟು ಹೊರಗೆ ಬನ್ನಿರಿ.”—ಪ್ರಕಟನೆ 18:4, NW.
1. (ಎ) ಯಾವ ವಿಧದಲ್ಲಿ ಮಹಾ ಬಾಬೆಲ್ ಬಿದ್ದಿದೆ? (ಬಿ) ಈ ಘಟನೆಯು ಯೆಹೋವನ ಸಾಕ್ಷಿಗಳನ್ನು ಹೇಗೆ ಪ್ರಭಾವಿಸಿದೆ?
“ಮಹಾ ಬಾಬೆಲ್ ಬಿದ್ದಿದ್ದಾಳೆ!” ಹೌದು, ಯೆಹೋವನ ದೃಷ್ಟಿಕೋನದಿಂದ ಸುಳ್ಳುಧರ್ಮದ ಲೋಕ ಸಾಮ್ರಾಜ್ಯವು ಬಿದ್ದಿದೆ. ಇದು ಕ್ರಿಸ್ತನ ಸಹೋದರರಲ್ಲಿ ಉಳಿಕೆಯವರು, ರಹಸ್ಯಾರ್ಥಕ ಬಾಬೆಲಿನ ಒಂದು ಪ್ರಮುಖ ಭಾಗವಾದ ಕ್ರೈಸ್ತಪ್ರಪಂಚದ ಪ್ರಭಾವದ ಕೆಳಗಿನಿಂದ ಹೊರಬಂದಾಗ, 1919ರಂದಿನಿಂದಲೂ ಸತ್ಯವಾಗಿ ಪರಿಣಮಿಸಿದೆ. ಫಲಿತಾಂಶವಾಗಿ, ಸುಳ್ಳುಧರ್ಮವನ್ನು ಬಹಿರಂಗವಾಗಿ ಆಪಾದಿಸಲು ಮತ್ತು ಮೆಸ್ಸೀಯ ಸಂಬಂಧಿತ ರಾಜ್ಯದ ಮುಖಾಂತರ ದೇವರ ನೀತಿಯುಕ್ತ ಆಳ್ವಿಕೆಯನ್ನು ಪ್ರಕಟಿಸಲು ಅವರು ಸ್ವತಂತ್ರರಾಗಿದ್ದಾರೆ. ಈ ಶತಮಾನದಾದ್ಯಂತ ಯೆಹೋವನ ನಿಷ್ಠಾವಂತ ಸಾಕ್ಷಿಗಳು, “ಭೂಲೋಕದವರೆಲ್ಲರನ್ನು” ದಾರಿತಪ್ಪಿಸಲಿಕ್ಕೆ ಸೈತಾನನು ನಿರ್ವಹಿಸಿಕೊಂಡಿರುವ ಸೂತ್ರದ ಬೊಂಬೆ ಧರ್ಮಗಳ ಮಿಶ್ರಣವನ್ನು ಬಯಲುಗೊಳಿಸಿದ್ದಾರೆ.—ಪ್ರಕಟನೆ 12:9; 14:8, NW; 18:2.
ಮಹಾ ಬಾಬೆಲ್ ಹೇಗೆ ಬಿದ್ದಿದ್ದಾಳೆ?
2. ಲೋಕ ಧರ್ಮಗಳ ಪ್ರಸ್ತುತ ಸ್ಥಿತಿಯು ಏನಾಗಿದೆ?
2 ಹಾಗಿದ್ದರೂ, ‘ಇಷ್ಟೊಂದು ದೇಶಗಳಲ್ಲಿ ಧರ್ಮವು ಏಳಿಗೆ ಹೊಂದುತ್ತಿರುವಂತೆ ತೋರುತ್ತಿರುವಾಗ, ಮಹಾ ಬಾಬೆಲ್ ಬಿದ್ದಿದ್ದಾಳೆ ಎಂದು ನೀವು ಹೇಗೆ ಹೇಳಬಲ್ಲಿರಿ?’ ಎಂದು ಯಾರಾದರೊಬ್ಬರು ಕೇಳಬಹುದು. ಕ್ಯಾಥೊಲಿಕ್ ಮತ್ತು ಇಸ್ಲಾಮ್ಮತಗಳು—ಪ್ರತಿಯೊಂದು—ಒಂದು ನೂರು ಕೋಟಿಗಿಂತ ಹೆಚ್ಚು ವಿಶ್ವಾಸಿಗಳಿದ್ದಾರೆಂದು ಸಮರ್ಥಿಸಿಕೊಳ್ಳುತ್ತವೆ. ಪ್ರಾಟೆಸ್ಟಂಟ್ ಮತವು, ಎಲ್ಲಿ ಹೊಸ ಚರ್ಚುಗಳು ಮತ್ತು ಪ್ರಾರ್ಥನಾಲಯಗಳು ನಿರಂತರವಾಗಿ ಹೊಮ್ಮುತ್ತವೋ, ಆ ಅಮೆರಿಕದಲ್ಲಿ ಇನ್ನೂ ಸಮೃದ್ಧಗೊಳ್ಳುತ್ತಿದೆ. ಕೋಟಿಗಟ್ಟಲೆ ಜನರು ಬೌದ್ಧ ಮತ್ತು ಹಿಂದೂಧರ್ಮದ ಸಂಸ್ಕಾರಗಳನ್ನು ಅನುಸರಿಸುತ್ತಾರೆ. ಆದರೂ, ಈ ಎಲ್ಲ ಧರ್ಮವು ಈ ನೂರಾರು ಕೋಟಿ ಜನರ ನಡತೆಯ ಮೇಲೆ ಎಷ್ಟರ ಮಟ್ಟಿಗೆ ಒಂದು ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ? ಇದು ಉತ್ತರ ಐಯರ್ಲೆಂಡ್ನಲ್ಲಿ ಒಬ್ಬರು ಇನ್ನೊಬ್ಬರನ್ನು ಕೊಲ್ಲುವುದರಿಂದ ಕ್ಯಾಥೊಲಿಕ್ ಮತ್ತು ಪ್ರಾಟೆಸ್ಟಂಟರನ್ನು ತಡೆದಿದೆಯೋ? ಮಧ್ಯ ಪೂರ್ವದಲ್ಲಿರುವ ಯೆಹೂದ್ಯರಿಗೆ ಮತ್ತು ಮುಸಲ್ಮಾನರಿಗೆ ಅದು ನಿಜವಾದ ಶಾಂತಿಯನ್ನು ತಂದಿದೆಯೋ? ಇದು ಭಾರತದಲ್ಲಿನ ಹಿಂದೂಗಳ ಮತ್ತು ಮುಸಲ್ಮಾನರ ನಡುವಿನ ಸಾಮರಸ್ಯಕ್ಕೆ ನಡಸಿದೆಯೋ? ಮತ್ತು, ತೀರ ಇತ್ತೀಚೆಗೆ ಇದು “ಕುಲಸಂಬಂಧವಾದ ಶುದ್ಧೀಕರಣ,” ಸೂರೆ, ಬಲಾತ್ಕಾರಸಂಭೋಗ, ಮತ್ತು ಒಬ್ಬರು ಇನ್ನೊಬ್ಬರನ್ನು ಹತಿಸುವುದನ್ನು ಬೆನ್ನಟ್ಟುವುದರಿಂದ, ಸರ್ಬಿಯನ್ ಆರ್ತೊಡಾಕ್ಸ್, ಕ್ರೋಏಷನ್ ಕ್ಯಾಥೊಲಿಕರು, ಮತ್ತು ಬಾಸ್ನಿಯದ ಮುಸಲ್ಮಾನರನ್ನು ತಡೆದುಹಿಡಿದಿದೆಯೋ? ಧರ್ಮವು ಅನೇಕ ವೇಳೆ ಕೇವಲ ಒಂದು ಹೆಸರು ಪಟ್ಟಿಯಾಗಿದೆ, ಸ್ವಲ್ಪವೇ ಒತ್ತಡದ ಕೆಳಗೆ ಒಡೆದುಹೋಗುವ ಮೊಟ್ಟೆಚಿಪ್ಪಿನಷ್ಟು ತೆಳುವಾದ ಒಂದು ಹೊರಹೊದಿಕೆಯಾಗಿದೆ.—ಗಲಾತ್ಯ 5:19-21; ಹೋಲಿಸಿ ಯಾಕೋಬ 2:10, 11.
3. ಧರ್ಮವು ದೇವರ ಮುಂದೆ ನ್ಯಾಯತೀರ್ಪನ್ನು ಹೊಂದಲಿದೆ ಏಕೆ?
3 ದೇವರ ದೃಷ್ಟಿಕೋನದಿಂದ, ಜನರ ಮೂಲಕ ನೀಡಲ್ಪಡುವ ಧಾರ್ಮಿಕ ಬೆಂಬಲವು, ತಪ್ಪಿಸಿಕೊಳ್ಳಲಾಗದ—ಎಲ್ಲ ಧರ್ಮವು ದೇವರ ಮುಂದೆ ನ್ಯಾಯತೀರ್ಪನ್ನು ಹೊಂದಲಿದೆ ಎಂಬ—ಒಂದು ವಾಸ್ತವಾಂಶವನ್ನು ಮಾರ್ಪಡಿಸುವುದಿಲ್ಲ. ಮಹಾ ಬಾಬೆಲ್, ಅವಳ ಇತಿಹಾಸದಿಂದ ಸುವ್ಯಕ್ತಗೊಳಿಸಲ್ಪಟ್ಟಂತೆ, “ಅವಳ ಪಾಪಗಳು ಒಂದರ ಮೇಲೊಂದು ಸೇರಿ ಆಕಾಶದ ಪರ್ಯಂತರಕ್ಕೂ ಬೆಳೆದವೆ. ದೇವರು ಅವಳ ಅನ್ಯಾಯಗಳನ್ನು ಜ್ಞಾಪಿಸಿ”ಕೊಂಡಿರುವ ಕಾರಣದಿಂದ ಪ್ರತಿಕೂಲವಾಗಿ ನ್ಯಾಯತೀರ್ಪನ್ನು ಪಡೆಯಲು ಅರ್ಹಳಾಗಿದ್ದಾಳೆ. (ಪ್ರಕಟನೆ 18:5) ಪ್ರವಾದನಾತ್ಮಕ ಭಾಷೆಯಲ್ಲಿ ಹೋಶೇಯನು ಬರೆದುದು: “ಅವರು ಗಾಳಿಯನ್ನು ಬಿತ್ತುತ್ತಾರೆ, ಬಿರುಗಾಳಿಯನ್ನು ಕೊಯ್ದುಕೊಳ್ಳುವರು.” ಸೈತಾನನ ಲೋಕವ್ಯಾಪಕ ಸುಳ್ಳು ಧರ್ಮಗಳಲ್ಲಿ ಎಲ್ಲವೂ, ದೇವರ, ಆತನ ಪ್ರೀತಿ, ಆತನ ನಾಮ, ಮತ್ತು ಆತನ ಪುತ್ರನಿಗೆ ತೋರಿಸಿರುವ ತಮ್ಮ ವಿಶ್ವಾಸಘಾತುಕತೆಗೆ ಅಧಿಕತಮ ಬೆಲೆಯನ್ನು ತೆರುವರು.—ಹೋಶೇಯ 8:7; ಗಲಾತ್ಯ 6:7; 1 ಯೋಹಾನ 2:22, 23.
ನೀವು ಆರಿಸಿಕೊಳ್ಳಲೇಬೇಕು
4, 5. (ಎ) ನಾವು ಇಂದು ಯಾವ ಪರಿಸ್ಥಿತಿಗಳಲ್ಲಿ ಜೀವಿಸುತ್ತಿದ್ದೇವೆ? (ಬಿ) ಯಾವ ಪ್ರಶ್ನೆಗಳನ್ನು ನಾವು ಉತ್ತರಿಸತಕ್ಕದ್ದು?
4 ನಾವು “ಕಡೇ ದಿವಸಗಳ” ಅಂತಿಮ ಭಾಗದಲ್ಲಿ ಜೀವಿಸುತ್ತಿದ್ದೇವೆ, ಮತ್ತು ಸತ್ಕ್ರೈಸ್ತರೋಪಾದಿ ಈ “ನಿಭಾಯಿಸಲು ಕಷ್ಟಕರವಾದ ಸಮಯಗಳ”ನ್ನು (NW) ಪಾರಾಗಲು ನಾವು ಹೆಣಗಾಡುತ್ತಿದ್ದೇವೆ. (2 ತಿಮೊಥೆಯ 3:1-5) ಒಬ್ಬ ಕೊಲೆಗಾರನು, ಒಬ್ಬ ಸುಳ್ಳುಗಾರನು ಮತ್ತು ಒಬ್ಬ ಆಪಾದಕನೋಪಾದಿ ತನ್ನ ಭ್ರಷ್ಟ ವ್ಯಕ್ತಿತ್ವವನ್ನು ನಿಜವಾಗಿಯೂ ಪ್ರತಿಬಿಂಬಿಸುವ, ಸೈತಾನನ ಲೋಕದಲ್ಲಿ ಸತ್ಯ ಕ್ರೈಸ್ತರು ತಾತ್ಕಾಲಿಕ ನಿವಾಸಿಗಳಾಗಿದ್ದಾರೆ. (ಯೋಹಾನ 8:44; 1 ಪೇತ್ರ 2:11, 12; ಪ್ರಕಟನೆ 12:10) ನಾವು ಹಿಂಸಾಕೃತ್ಯ, ಮೋಸ, ವಂಚನೆ, ಭ್ರಷ್ಟಾಚಾರ, ಮತ್ತು ಒರಟು ಅನೈತಿಕತೆಯಿಂದ ಸುತ್ತುವರಿಯಲ್ಪಟ್ಟಿದ್ದೇವೆ. ಮೂಲಸೂತ್ರಗಳು ಕಡೆಗಣಿಸಲ್ಪಟ್ಟಿವೆ. ಸೌಖ್ಯವೇ ಮುಖ್ಯ ಪುರುಷಾರ್ಥವೆಂಬ ವಾದ ಮತ್ತು ಅನುಕೂಲ ಸಿಂಧು ಪರ್ಯಾಯಶಬ್ದಗಳಾಗಿವೆ. ಮತ್ತು ಅನೇಕ ವಿದ್ಯಮಾನಗಳಲ್ಲಿ, ವೈದಿಕರು ಸಲಿಂಗಿ ಕಾಮ, ವ್ಯಭಿಚಾರ, ಮತ್ತು ಜಾರತ್ವದ ಕುರಿತಾದ ಬೈಬಲಿನ ಸ್ಫುಟವಾದ ಖಂಡನೆಯನ್ನು ಸತ್ತ್ವಗುಂದಿಸುವ ಮೂಲಕ, ನೈತಿಕ ಭ್ರಷ್ಟಾಚಾರವನ್ನು ಮನ್ನಿಸುತ್ತಾರೆ. ಹೀಗೆ ಪ್ರಶ್ನೆಯೇನಂದರೆ, ನೀವು ಸುಳ್ಳಾರಾಧನೆಯನ್ನು ಬೆಂಬಲಿಸಿ ಮನ್ನಿಸುತ್ತೀರೋ, ಅಥವಾ ನೀವು ಸತ್ಯಾರಾಧನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೀರೋ?—ಯಾಜಕಕಾಂಡ 18:22; 20:13; ರೋಮಾಪುರ 1:26, 27; 1 ಕೊರಿಂಥ 6:9-11.
5 ಇದೀಗ ಬೇರ್ಪಡಿಸುವ ಸಮಯ. ಆದುದರಿಂದ, ಸುಳ್ಳಾರಾಧನೆ ಮತ್ತು ಸತ್ಯಾರಾಧನೆಯ ನಡುವೆ ವ್ಯತ್ಯಾಸವನ್ನು ಕಲ್ಪಿಸುವದಕ್ಕೆ ಇನ್ನೂ ಹೆಚ್ಚು ಕಾರಣವಿದೆ. ಅವುಗಳನ್ನು ಇಷ್ಟೊಂದು ತೆಗಳುವಂತೆ ಮಾಡುವ ಇನ್ಯಾವ ವಿಷಯಗಳನ್ನು ಕ್ರೈಸ್ತಪ್ರಪಂಚದ ಧರ್ಮಗಳು ಮಾಡಿವೆ?—ಮಲಾಕಿಯ 3:18; ಯೋಹಾನ 4:23, 24.
ಸುಳ್ಳು ಧರ್ಮವು ದೋಷಾರೋಪಿಸಲ್ಪಟ್ಟದ್ದು
6. ಕ್ರೈಸ್ತಪ್ರಪಂಚವು ದೇವರ ರಾಜ್ಯಕ್ಕೆ ಹೇಗೆ ನಂಬಿಕೆದ್ರೋಹವನ್ನು ಬಗೆದಿದೆ?
6 ಕ್ರೈಸ್ತಪ್ರಪಂಚದಲ್ಲಿರುವ ಕೋಟಿಗಟ್ಟಲೆ ಜನರು, ಯಾವುದರಲ್ಲಿ ತಾವು ದೇವರ ರಾಜ್ಯದ ಬರೋಣಕ್ಕಾಗಿ ಪ್ರಾರ್ಥಿಸುತ್ತಾರೋ, ಆ ಕರ್ತನ ಪ್ರಾರ್ಥನೆಯನ್ನು ಕ್ರಮವಾಗಿ ಉಪಯೋಗಿಸಿದರೂ, ಆ ದೇವಪ್ರಭುತ್ವ ಆಳ್ವಿಕೆಯನ್ನು ಹೊರತು, ರಾಜಕೀಯ ಅಭಿವ್ಯಕ್ತಿಯ ಪ್ರತಿಯೊಂದು ರೂಪವನ್ನು ಅವರು ಶ್ರದ್ಧಾಪೂರ್ವಕವಾಗಿ ಬೆಂಬಲಿಸಿದ್ದಾರೆ. ಶತಮಾನಗಳ ಹಿಂದೆ, ಕಾರ್ಡಿನಲ್ಗಳಾದ ರಿಚೆಲ್ಯು, ಮ್ಯಾಸಾರಿನ್, ಮತ್ತು ವೊಲ್ಸಿ ಇವರಂತಹ ಕ್ಯಾಥೊಲಿಕ್ ಚರ್ಚಿನ “ರಾಜಕುಮಾರರು” ಐಹಿಕ ರಾಜ ನೀತಿಜ್ಞರಾಗಿ, ಸರಕಾರದ ಮಂತ್ರಿಗಳಾಗಿಯೂ ಕ್ರಿಯೆಗೈದರು.
7. 50ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಯೆಹೋವನ ಸಾಕ್ಷಿಗಳು ಕ್ರೈಸ್ತಪ್ರಪಂಚದ ವೈದಿಕರನ್ನು ಹೇಗೆ ಬಯಲುಪಡಿಸಿದರು?
7 50ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, ಧರ್ಮವು ಬಿರುಗಾಳಿಯನ್ನು ಕೊಯ್ಯುತ್ತದೆ (ಇಂಗ್ಲಿಷ್) ಎಂಬ ಶೀರ್ಷಿಕೆಯುಳ್ಳ ಪುಸ್ತಿಕೆಯಲ್ಲಿ, ರಾಜಕೀಯದೊಂದಿಗೆ ಕ್ರೈಸ್ತಪ್ರಪಂಚದ ಒಳಗೂಡುವಿಕೆಯನ್ನು ಯೆಹೋವನ ಸಾಕ್ಷಿಗಳು ಬಯಲುಪಡಿಸಿದರು.a ಆಗ ಹೇಳಲ್ಪಟ್ಟಿದ್ದಂತಹ ವಿಷಯವು ಇಂದು ಅಷ್ಟೇ ಪ್ರಬಲವಾಗಿ ಅನ್ವಯಿಸುತ್ತದೆ: “ಎಲ್ಲ ಪಂಗಡಗಳ ಧಾರ್ಮಿಕ ವೈದಿಕರ ವರ್ತನೆಯ ಪ್ರಾಮಾಣಿಕ ಪರಿಶೀಲನೆಯು, ಸಕಲ ‘ಕ್ರೈಸ್ತಪ್ರಪಂಚ’ದ ಧಾರ್ಮಿಕ ಮುಖಂಡರು, ‘ಈ ಪ್ರಸ್ತುತ ದುಷ್ಟ ಲೋಕ’ದ ರಾಜಕೀಯದಲ್ಲಿ ಕಟ್ಟಾಸಕ್ತಿಯಿಂದ ಭಾಗವಹಿಸುತ್ತಿದ್ದಾರೆ ಮತ್ತು ಅದರ ಲೌಕಿಕ ವಿಷಯಗಳಲ್ಲಿ ಕೈಹಾಕುತ್ತಿದ್ದಾರೆ ಎಂಬುದನ್ನು ಪ್ರಕಟಪಡಿಸುವುದು.” ನಾಸಿ ಹಿಟ್ಲರ್ (1933)ನೊಂದಿಗೆ ಮತ್ತು ಫ್ಯಾಸಿಸ್ಟ್ ಫ್ರ್ಯಾಂಕೊ (1941)ನೊಂದಿಗೆ ಪೋಪ್ ಪೈಯಸ್ XIIರ ಕರಾರುಗಳು ಹಾಗೂ ಕುಪ್ರಸಿದ್ಧ ಪರ್ಲ್ ಹಾರ್ಬರ್ ಆಕ್ರಮಣದ ಕೆಲವೇ ತಿಂಗಳುಗಳ ಬಳಿಕ, ಮಾರ್ಚ್ 1942ರಲ್ಲಿ ಆಕ್ರಮಣಕರ ರಾಷ್ಟ್ರವಾದ ಜಪಾನ್ನೊಂದಿಗೆ ರಾಜತಾಂತ್ರಿಕ ಪ್ರತಿನಿಧಿಗಳ ಪೋಪ್ರ ವಿನಿಮಯಕ್ಕಾಗಿ, ಸಾಕ್ಷಿಗಳು ಆ ಸಮಯದಲ್ಲಿ ಅವರನ್ನು ತೀಕ್ಷ್ಣವಾಗಿ ಟೀಕಿಸಿದರು. ಪೋಪನು ಯಾಕೋಬನ ಎಚ್ಚರಿಕೆಗೆ ಕಿವಿಗೊಡಲು ತಪ್ಪಿಹೋದನು: “ವ್ಯಭಿಚಾರಿಗಳು ನೀವು; ಇಹಲೋಕಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.”—ಯಾಕೋಬ 4:4.
8. ರೋಮನ್ ಕ್ಯಾಥೊಲಿಕ್ ಚರ್ಚ್ ಇಂದು ಹೇಗೆ ರಾಜಕೀಯದಲ್ಲಿ ಒಳಗೊಂಡಿದೆ?
8 ಇಂದಿನ ಪರಿಸ್ಥಿತಿ ಏನು? ಪೋಪ್ಗುರುವಿನ ಅಧಿಕಾರವು, ತನ್ನ ವೈದಿಕರ ಮತ್ತು ತನ್ನ ಲೌಕಿಕ ಪ್ರತಿನಿಧಿಗಳ, ಇವರಿಬ್ಬರ ಮುಖಾಂತರವೂ ರಾಜಕೀಯದಲ್ಲಿ ಇನ್ನೂ ಒಳಗೊಂಡಿದೆ. ಇತ್ತೀಚಿನ ಪೋಪ್ಗಳು, ವಿಶ್ವ ಸಂಸ್ಥೆಯನ್ನು, ಆ ಮಾನವ ನಿರ್ಮಿತ ಅನುಕರಣವನ್ನು ಲೋಕ ಶಾಂತಿಗಾಗಿ ಸಂಬೋಧಿಸುವ ಮೂಲಕ ತಾವು ಅದನ್ನು ಮೆಚ್ಚುತ್ತೇವೆಂಬುದನ್ನು ತೋರಿಸಿದ್ದಾರೆ. ವ್ಯಾಟಿಕನ್ನ ಅಧಿಕೃತ ವಾರ್ತಾಪತ್ರಿಕೆಯಾದ ಲಾಸೇರ್ವಾಟೋರೆ ರೊಮಾನೊವಿನ ಇತ್ತೀಚಿನ ಒಂದು ಸಂಚಿಕೆಯು, “ಪೋಪ್ನ ನ್ಯಾಯಾಧಿಕಾರಕ್ಕೆ ರಾಯಭಾರಿಗಳು,” ಏಳು ಹೊಸ ರಾಜತಂತ್ರಜ್ಞರು ತಮ್ಮ ಲಿಖಿತ ಸಾಕ್ಷ್ಯವನ್ನು “ಪವಿತ್ರ ಪಿತ”ನಿಗೆ ಒಪ್ಪಿಸಿದರು ಎಂಬುದಾಗಿ ಪ್ರಕಟಿಸಿತು. ಇಂತಹ ರಾಜತಾಂತ್ರಿಕ ವಿನಿಮಯಗಳಲ್ಲಿ ಯೇಸು ಮತ್ತು ಪೇತ್ರರು ಒಳಗೂಡಿರುವುದನ್ನು ನಾವು ಊಹಿಸಿಕೊಳ್ಳಸಾಧ್ಯವಿದೆಯೋ? ಯೇಸು, ಯೆಹೂದ್ಯರಿಂದ ರಾಜನಾಗಿ ಮಾಡಲ್ಪಡಲು ನಿರಾಕರಿಸಿದನು ಮತ್ತು ತನ್ನ ರಾಜ್ಯವು ಈ ಲೋಕದ್ದಾಗಿರಲಿಲ್ಲವೆಂದು ಹೇಳಿದನು.—ಯೋಹಾನ 6:15; 18:36.
9. ಪ್ರಾಟೆಸ್ಟಂಟ್ ಧರ್ಮಗಳು ತಮ್ಮ ಕ್ಯಾಥೊಲಿಕ್ ಪ್ರತಿರೂಪಗಳಿಗಿಂತ ಏನೂ ಉತ್ತಮವಾಗಿಲ್ಲವೆಂಬುದಾಗಿ ನಾವು ಏಕೆ ಹೇಳಬಲ್ಲೆವು?
9 ಪ್ರಾಟೆಸ್ಟಂಟ್ ಮುಖಂಡರು ತಮ್ಮ ಕ್ಯಾಥೊಲಿಕ್ ಪ್ರತಿರೂಪಗಳಿಗಿಂತ ಸ್ವಲ್ಪವಾದರೂ ಉತ್ತಮರಾಗಿದ್ದಾರೋ? ಅಮೆರಿಕದಲ್ಲಿ, ಅನೇಕ ಸಂಪ್ರದಾಯವಾದಿ ಪ್ರಾಟೆಸ್ಟಂಟ್ ಧರ್ಮಗಳು, ಮತ್ತು ಮಾರ್ಮನ್ ಪಂಥಗಳು ಸಹ, ನಿರ್ದಿಷ್ಟವಾದೊಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಲ್ಪಟ್ಟಿವೆ. ಕ್ರೈಸ್ತ ಒಕ್ಕೂಟವು ಅಮೆರಿಕದ ರಾಜಕೀಯದಲ್ಲಿ ಆಳವಾಗಿ ಒಳಗೊಂಡಿದೆ. ಇತರ ಪ್ರಾಟೆಸ್ಟಂಟ್ ವೈದಿಕರು ಭಿನ್ನವಾದೊಂದು ರಾಜಕೀಯ ನಿಲುವಿನೊಂದಿಗೆ ಸ್ಫುಟವಾಗಿ ಗುರುತಿಸುತ್ತಾರೆ. ಅಮೆರಿಕದಲ್ಲಿ ಪ್ಯಾಟ್ ರಾಬರ್ಟ್ಸನ್ ಮತ್ತು ಜೆಸ್ಸಿ ಜ್ಯಾಕ್ಸನ್ರಂತಹ ರಾಜಕೀಯ ವದನಕರು, ಉತ್ತರ ಐಯರ್ಲೆಂಡಿನ ಪಾರ್ಲಿಮೆಂಟ್ನ ಬ್ರಿಟಿಷ್ ಸದಸ್ಯ ಇಯಾನ್ ಪೆಸ್ಲಿಯಂತೆ “ರೆವೆರೆಂಡ್ಗಳು” ಕೂಡ ಆಗಿದ್ದಾರೆ ಅಥವಾ ಆಗಿದ್ದರು ಎಂಬ ವಿಷಯವನ್ನು ಕೆಲವೊಮ್ಮೆ ಮರೆತುಬಿಡಲಾಗುತ್ತದೆ. ಅವರು ತಮ್ಮ ಸ್ಥಾನಗಳನ್ನು ಸಮರ್ಥಿಸಿಕೊಳ್ಳುತ್ತಾರಾದರೂ ಹೇಗೆ?—ಅ. ಕೃತ್ಯಗಳು 10:34, 35; ಗಲಾತ್ಯ 2:6.
10. 1944ರಲ್ಲಿ ಯಾವ ಸ್ಫುಟವಾದ ಹೇಳಿಕೆಯು ಮಾಡಲ್ಪಟ್ಟಿತು?
10 1944ರಲ್ಲಿ ಧರ್ಮವು ಬಿರುಗಾಳಿಯನ್ನು ಕೊಯ್ಯುತ್ತದೆ ಎಂಬ ಪುಸ್ತಿಕೆಯು ಕೇಳಿದಂತೆಯೇ, ನಾವೀಗ ಕೇಳುತ್ತೇವೆ: “ಈ ಲೋಕದಿಂದ ಲಾಭವನ್ನು ಮತ್ತು ಸಂರಕ್ಷಣೆಯನ್ನು ನಿರೀಕ್ಷಿಸುತ್ತಾ, ಲೌಕಿಕ ಶಕ್ತಿಗಳೊಂದಿಗೆ ಸಂಧಾನಗಳೊಳಗೆ ಪ್ರವೇಶಿಸುವ ಮತ್ತು ಈ ಲೋಕದ ರಾಜಕೀಯ ವಿಚಾರಗಳೊಳಗೆ ತನ್ನನ್ನು ಸಕ್ರಿಯವಾಗಿ ಚಾತುರ್ಯದಿಂದ ನುಸುಳಿಸಿಕೊಳ್ಳುವ ಯಾವುದೇ ಸಂಸ್ಥೆಯು . . . ಭೂಮಿಯ ಮೇಲೆ ದೇವರ ಸಭೆಯಾಗಿರಲು ಅಥವಾ ಕ್ರಿಸ್ತ ಯೇಸುವನ್ನು ಪ್ರತಿನಿಧಿಸಲು ಸಾಧ್ಯವೋ? . . . ಸುವ್ಯಕ್ತವಾಗಿಯೇ, ಯಾರು ಈ ಲೋಕದ ರಾಜ್ಯಗಳೊಂದಿಗೆ ತದ್ರೀತಿಯ ಗುರಿಗಳಲ್ಲಿ ಪಾಲಿಗರೋ ಆ ಎಲ್ಲ ಧರ್ಮದ ಜನರು ಕ್ರಿಸ್ತ ಯೇಸುವಿನ ಮೂಲಕ ದೇವರ ರಾಜ್ಯವನ್ನು ಪ್ರತಿನಿಧಿಸಸಾಧ್ಯವಿಲ್ಲ.”
ಸುಳ್ಳು ಧರ್ಮದ ಕಾಯಿನನ ಆತ್ಮ
11. ಸುಳ್ಳು ಧರ್ಮವು ಕಾಯಿನನ ಉದಾಹರಣೆಯನ್ನು ಹೇಗೆ ಅನುಸರಿಸಿತು?
11 ಇತಿಹಾಸದಾದ್ಯಂತವಾಗಿ ಸುಳ್ಳು ಧರ್ಮವು, ಯಾರು ತನ್ನ ತಮ್ಮನಾದ ಹೇಬೆಲನನ್ನು ಕೊಂದನೋ, ಆ ಭ್ರಾತೃಘಾತಕನಾದ ಕಾಯಿನನ ಆತ್ಮವನ್ನು ತೋರಿಸಿದೆ. “ಇವರು ದೇವರ ಮಕ್ಕಳೆಂಬದೂ ಅವರು ಸೈತಾನನ ಮಕ್ಕಳೆಂಬದೂ ಇದರಿಂದ ವ್ಯಕ್ತವಾಗುತ್ತದೆ. ನೀತಿಯನ್ನು ಅನುಸರಿಸದವನೂ ತನ್ನ ಸಹೋದರನನ್ನು ಪ್ರೀತಿಸದವನೂ ದೇವರಿಂದ ಹುಟ್ಟಿದವರಲ್ಲ. ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನೀವು ಮೊದಲಿನಿಂದಲೂ ಕೇಳಿದ ವಾಕ್ಯವಾಗಿದೆ. ಕೆಡುಕನಿಂದ ಹುಟ್ಟಿ ತನ್ನ ತಮ್ಮನನ್ನು ಕೊಂದು ಹಾಕಿದ ಕಾಯಿನನಂತೆ ನಾವು ಇರಬಾರದು. ಯಾವ ಕಾರಣದಿಂದ ಅವನನ್ನು ಕೊಂದುಹಾಕಿದನು? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ನೀತಿಗೆ ಸರಿಯಾದವುಗಳೂ ಆಗಿದ್ದದರಿಂದಲೇ.” ತನ್ನ ಸಹೋದರನ ಶುದ್ಧವೂ ಸ್ವೀಕಾರಯೋಗ್ಯವೂ ಆದ ದೇವರ ಆರಾಧನೆಯನ್ನು ಸಹಿಸಲಶಕ್ಯನಾಗಿ, ಕಾಯಿನನು ಹಿಂಸಾಕೃತ್ಯವನ್ನು—ತಮ್ಮ ಕೃತ್ಯಗಳನ್ನು ವಿವರಿಸಲು ಸಾಧ್ಯವಾಗದವರ ಕೊನೆಯ ಆಶ್ರಯವನ್ನು—ಅವಲಂಬಿಸಿದನು.—1 ಯೋಹಾನ 3:10-12.
12. ಯುದ್ಧಗಳಲ್ಲಿ ಮತ್ತು ಕಲಹಗಳಲ್ಲಿ, ಧರ್ಮದ ಜೊತೆಗೂಡುವಿಕೆಯ ಯಾವ ಪುರಾವೆಯಿದೆ?
12 ವಾಸ್ತವಾಂಶಗಳು ಸುಳ್ಳು ಧರ್ಮದ ಈ ದೋಷಾರೋಪಣೆಯನ್ನು ಬೆಂಬಲಿಸುತ್ತವೊ? ಸೌವಾರ್ತಿಕರು ಶಸ್ತ್ರಗಳನ್ನು ನೀಡುತ್ತಾರೆ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಲೇಖಕನು ಹೇಳಿದ್ದು: “ನಾಗರಿಕತೆಗಳ ಇತಿಹಾಸದಲ್ಲಿ, . . . ಒಂದು ಉಭಯ ಮೈತ್ರಿಯಲ್ಲಿ ಎರಡು ಶಕ್ತಿಗಳು ಯಾವಾಗಲೂ ಒಟ್ಟಿಗೆ ಕೂಡಿಕೊಂಡಿವೆ. ಅವು ಯುದ್ಧ ಮತ್ತು ಧರ್ಮವಾಗಿವೆ. ಮತ್ತು, ಲೋಕದ ಎಲ್ಲ ಮಹಾ ಧರ್ಮಗಳಲ್ಲಿ, . . . ಯಾವ ಧರ್ಮವೂ [ಯುದ್ಧ]ಕ್ಕೆ [ಕ್ರೈಸ್ತಪ್ರಪಂಚ]ದಷ್ಟು ಹೆಚ್ಚು ಅರ್ಪಿತವಾಗಿರುವುದಿಲ್ಲ.” ಕೆಲವು ವರ್ಷಗಳ ಹಿಂದೆ, ವ್ಯಾಂಕೊವರ್, ಕೆನಡಾದ ದ ಸನ್ ವಾರ್ತಾಪತ್ರಿಕೆಯು ಹೇಳಿದ್ದು: “ಚರ್ಚು ರಾಷ್ಟ್ರೀಯವಾದಿಯಾಗಿದೆ ಎಂಬುದು ಪ್ರಾಯಶಃ ಎಲ್ಲಾ ವ್ಯವಸ್ಥಾಪಿತ ಧರ್ಮದ ಒಂದು ಬಲಹೀನತೆಯಾಗಿದೆ . . . ಪ್ರತಿಯೊಂದು ಪಕ್ಷದಲ್ಲಿ ದೇವರು ಇದ್ದಾನೆಂದು ವಾದಿಸಲ್ಪಟ್ಟಿರದ ಯಾವ ಯುದ್ಧವು ಇಷ್ಟರ ವರೆಗೆ ಹೋರಾಡಲ್ಪಟ್ಟಿದೆ?” ಇದರ ರುಜುವಾತನ್ನು ಯಾವುದಾದರೊಂದು ಸ್ಥಳಿಕ ಚರ್ಚಿನಲ್ಲಿ ನೀವು ನೋಡಿರಬಹುದು. ತೀರ ಹೆಚ್ಚಾಗಿ, ರಾಷ್ಟ್ರೀಯ ಧ್ವಜಗಳು ಪೂಜಾವೇದಿಕೆಯನ್ನು ಅಲಂಕರಿಸುತ್ತವೆ. ಯೇಸು ಒಬ್ಬ ಸೈನಿಕನೋಪಾದಿ ಯಾವ ಧ್ವಜದ ಕೆಳಗೆ ನಡೆಯುವನೆಂದು ನೀವು ನೆನಸುತ್ತೀರಿ? ಅವನ ಮಾತುಗಳು ಶತಮಾನಗಳಾದ್ಯಂತ ಪ್ರತಿಧ್ವನಿಸಿವೆ: “ನನ್ನ ರಾಜ್ಯವು ಈ ಲೋಕದ ಭಾಗವಾಗಿಲ್ಲ”!—ಯೋಹಾನ 18:36, NW.
13. (ಎ) ಆಫ್ರಿಕದಲ್ಲಿ ಸುಳ್ಳು ಧರ್ಮವು ಹೇಗೆ ವಿಫಲಗೊಂಡಿದೆ? (ಬಿ) ಕ್ರೈಸ್ತತ್ವದ ಯಾವ ಗುರುತು ಚಿಹ್ನೆಯನ್ನು ಯೇಸು ನೀಡಿದನು?
13 ಕ್ರೈಸ್ತಪ್ರಪಂಚದ ಧರ್ಮಗಳು ತಮ್ಮ ಹಿಂಡುಗಳಿಗೆ ಯಥಾರ್ಥ ಸಹೋದರ ಪ್ರೀತಿಯ ಸತ್ಯವನ್ನು ಕಲಿಸಿಲ್ಲ. ಬದಲಿಗೆ, ರಾಷ್ಟ್ರೀಯ, ಗೋತ್ರ, ಮತ್ತು ಕುಲಸಂಬಂಧವಾದ ಭಿನ್ನತೆಗಳು ತಮ್ಮ ಸದಸ್ಯರನ್ನು ವಿಭಜಿಸುವಂತೆ ಅನುಮತಿಸಲ್ಪಟ್ಟಿವೆ. ಕ್ಯಾಥೊಲಿಕ್ ಮತ್ತು ಆ್ಯಂಗ್ಲಿಕನ್ ವೈದಿಕರು ರುಆಂಡದಲ್ಲಾದ ಕುಲಸಂಬಂಧಿತ ಸಮೂಹ ಹತ್ಯೆಯಲ್ಲಿ ಫಲಿಸಿದ ವಿಭಜನೆಗಳಲ್ಲಿ ಒಂದು ಪಾತ್ರವನ್ನು ವಹಿಸಿದರೆಂದು ವರದಿಗಳು ಸೂಚಿಸುತ್ತವೆ. ದ ನ್ಯೂ ಯಾರ್ಕ್ ಟೈಮ್ಸ್ ವರದಿಸಿದ್ದು: “ರುಆಂಡದಲ್ಲಿನ ಸಾಮೂಹಿಕ ಹತ್ಯೆಯು, ಅಲ್ಲಿರುವ ಅನೇಕ ರೋಮನ್ ಕ್ಯಾಥೊಲಿಕರಿಗೆ, ಚರ್ಚ್ ಪುರೋಹಿತ ಪ್ರಭುತ್ವದಿಂದ ನಂಬಿಕೆದ್ರೋಹಗೊಳಿಸಲ್ಪಟ್ಟಂತಹ ಅನಿಸಿಕೆಯಾಗುವಂತೆ ಮಾಡಿದೆ. ಚರ್ಚ್ ಅನೇಕ ವೇಳೆ ಕುಲಸಂಬಂಧವಾದ ವಿಷಯಗಳ ಸಂಬಂಧದಲ್ಲಿ—ಹೂಟೂ ಮತ್ತು ಟೂಟ್ಸಿ ನಡುವೆ—ವಿಭಜಿಸಲ್ಪಟ್ಟಿತ್ತು.” ಅದೇ ವಾರ್ತಾಪತ್ರಿಕೆಯು ಮೇರಿನೊಲ್ ಪಾದ್ರಿಯೊಬ್ಬನು ಹೀಗೆ ಹೇಳುವುದನ್ನು ಉದ್ಧರಿಸಿತು: “1994ರಲ್ಲಿ ರುಆಂಡದಲ್ಲಿ ಚರ್ಚ್ ಅತ್ಯಂತ ಕ್ಷುದ್ರವಾಗಿ ವಿಫಲಗೊಂಡಿತು. ರುಆಂಡದ ಅನೇಕ ಜನರು ಒಂದು ಅರ್ಥದಲ್ಲಿ ಚರ್ಚನ್ನು ಮನಸ್ಸಿನಿಂದ ಹೊರದೂಡಿದ್ದಾರೆ. ಅದಕ್ಕೆ ಇನ್ನು ಮುಂದೆ ಯಾವುದೇ ವಿಶ್ವಾಸಾರ್ಹತೆಯು ಇರುವುದಿಲ್ಲ.” ಯೇಸುವಿನ ಮಾತುಗಳಿಗೆ ಎಂಥ ಒಂದು ವ್ಯತಿರಿಕ್ತತೆ: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”—ಯೋಹಾನ 13:35.
14. ಪ್ರಧಾನವಾದ ಕ್ರೈಸ್ತೇತರ ಧರ್ಮಗಳು ನಡತೆಯ ಯಾವ ದಾಖಲೆಯನ್ನು ಪ್ರಸ್ತುತಪಡಿಸುತ್ತವೆ?
14 ಮಹಾ ಬಾಬೆಲಿನ ಇತರ ಪ್ರಧಾನ ಧರ್ಮಗಳು, ಹೆಚ್ಚು ಉತ್ತಮವಾದ ಒಂದು ಮಾದರಿಯನ್ನು ಇಟ್ಟಿಲ್ಲ. ಭಾರತವು ಇಬ್ಭಾಗವಾದಾಗ, 1947ರ ಭೀಷಣವಾದ ಸಾಮೂಹಿಕ ಹತ್ಯೆಗಳು, ಅಲ್ಲಿನ ಪ್ರಧಾನ ಧರ್ಮಗಳು ಸಹಿಷ್ಣುತೆಯನ್ನು ಉತ್ಪಾದಿಸಿಲ್ಲವೆಂಬುದನ್ನು ತೋರಿಸುತ್ತವೆ. ಭಾರತದಲ್ಲಿ ಮುಂದುವರಿದಿರುವ ಕೋಮು ಹಿಂಸಾಕೃತ್ಯವು, ಹೆಚ್ಚಿನ ಜನರು ಬದಲಾಗಿಲ್ಲವೆಂಬುದನ್ನು ಪುಷ್ಟೀಕರಿಸುತ್ತದೆ. ಇಂಡಿಯ ಟುಡೇ ಪತ್ರಿಕೆಯು ಹೀಗೆ ತೀರ್ಮಾನಿಸಿರುವುದರಲ್ಲಿ ಆಶ್ಚರ್ಯವಿಲ್ಲ: “ಯಾವುದರ ಅಡಿಯಲ್ಲಿ ಅತಿ ಹೆಚ್ಚಿನ ಘೋರ ಪಾತಕಗಳು ನಡಿಸಲ್ಪಟ್ಟಿವೆಯೊ ಅಂತಹ ಒಂದು ಪತಾಕೆ ಧರ್ಮವಾಗಿದೆ. . . . ಅದು ಪ್ರಚಂಡವಾದ ಹಿಂಸಾಕೃತ್ಯವನ್ನು ಹೊರಬಿಡುತ್ತದೆ ಮತ್ತು ಒಂದು ಅತ್ಯಂತ ವಿನಾಶಕರವಾದ ಶಕ್ತಿಯಾಗಿದೆ.”
“ಗಮನ ಸೆಳೆಯುವ ಅಸಂಗತೋಕ್ತಿ”
15. ಪಾಶ್ಚಿಮಾತ್ಯ ಲೋಕದಲ್ಲಿ ಧರ್ಮದ ಸ್ಥಿತಿಯು ಏನಾಗಿದೆ?
15 ಮನವೊಪ್ಪಿಸಲು, ನಿಜ ಮೌಲ್ಯಗಳನ್ನು ಬೋಧಿಸಲು, ಮತ್ತು ಐಹಿಕ ನೀತಿಯ ಅತಿಕ್ರಮಣವನ್ನು ನಿರೋಧಿಸುವುದರಲ್ಲಿ, ಧರ್ಮದ ವೈಫಲ್ಯವನ್ನು ಐಹಿಕ ವ್ಯಾಖ್ಯಾನಗಾರರು ಕೂಡ ಗಮನಿಸಿದ್ದಾರೆ. ಹತೋಟಿಗೆ ಮೀರಿದ್ದು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಸುಬೆಗ್ನೆಫ್ ಬ್ರೆಸಿನ್ಸ್ಕೀ ಬರೆದುದು: “‘ದೇವರು ಸತ್ತಿದ್ದಾನೆ’ ಎಂಬ ಹೇಳಿಕೆಗೆ ಅತ್ಯಂತ ಮಹಾನ್ ವಿಜಯವು ಮಾರ್ಕ್ಸಿಸ್ಟ್ ಪ್ರಧಾನ ರಾಜ್ಯಗಳಲ್ಲಿ ಅಲ್ಲ . . . ಬದಲಾಗಿ ಸಾಂಸ್ಕೃತಿಕವಾಗಿ ನೈತಿಕ ಭಾವಶೂನ್ಯತೆಯನ್ನು ಪೋಷಿಸಿರುವ ಪಾಶ್ಚಿಮಾತ್ಯ ಸ್ವತಂತ್ರ ಪ್ರಜಾಪ್ರಭುತ್ವ ಸಮಾಜಗಳಲ್ಲಿ ಸಂಭವಿಸಿರುವುದು ಒಂದು ಗಮನ ಸೆಳೆಯುವ ಅಸಂಗತೋಕ್ತಿಯಾಗಿದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ, ವಾಸ್ತವಾಂಶವೇನಂದರೆ ಧರ್ಮವು ಒಂದು ಪ್ರಧಾನ ಸಾಮಾಜಿಕ ಶಕ್ತಿಯಾಗಿ ಇರುವುದು ನಿಂತುಹೋಗಿದೆ.” ಅವರು ಮುಂದುವರಿಸಿದ್ದು: “ಯೂರೋಪಿನವರ ಸಂಸ್ಕೃತಿಯ ಮೇಲಿರುವ ಧರ್ಮದ ಹಿಡಿತವು ಮಹತ್ತರವಾಗಿ ಕ್ಷೀಣಿಸಿದೆ, ಮತ್ತು ಯೂರೋಪ್ ಇಂದು—ಅಮೆರಿಕಕ್ಕಿಂತಲೂ ಎಷ್ಟೋ ಹೆಚ್ಚು—ಸಾರಭೂತವಾಗಿ ಒಂದು ಐಹಿಕ ಸಮಾಜವಾಗಿದೆ.”
16, 17. (ಎ) ತನ್ನ ದಿನದಲ್ಲಿದ್ದ ವೈದಿಕರ ಸಂಬಂಧದಲ್ಲಿ ಯೇಸು ಯಾವ ಸಲಹೆಯನ್ನು ನೀಡಿದನು? (ಬಿ) ಫಲಗಳ ಕುರಿತಾಗಿ ಯೇಸು ಯಾವ ಉತ್ತಮ ತತ್ತ್ವವನ್ನು ವ್ಯಕ್ತಪಡಿಸಿದನು?
16 ತನ್ನ ದಿನದಲ್ಲಿದ್ದ ಯೆಹೂದಿ ವೈದಿಕರ ಕುರಿತಾಗಿ ಯೇಸು ಏನನ್ನು ಹೇಳಿದನು? “ಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಪೀಠದಲ್ಲಿ [ಟೊರಾ ನಿಯಮಶಾಸ್ತ್ರವನ್ನು ಬೋಧಿಸಲಿಕ್ಕಾಗಿ] ಕೂತುಕೊಂಡಿದ್ದಾರೆ; ಆದದರಿಂದ ಅವರು ನಿಮಗೆ ಏನೇನು ಹೇಳುತ್ತಾರೋ ಅದನ್ನೆಲ್ಲಾ ಮಾಡಿರಿ, ಕಾಪಾಡಿಕೊಳ್ಳಿರಿ; ಆದರೆ ಅವರ ನಡತೆಯ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೇ ಹೊರತು ನಡೆಯುವದಿಲ್ಲ.” ಹೌದು, ಧಾರ್ಮಿಕ ಕಪಟತನವೇನೂ ಹೊಸತಲ್ಲ.—ಮತ್ತಾಯ 23:2, 3.
17 ಸುಳ್ಳು ಧರ್ಮದ ಫಲವು ಅದನ್ನು ಖಂಡಿಸುತ್ತದೆ. ಯೇಸುವಿನಿಂದ ಕೊಡಲ್ಪಟ್ಟಿರುವ ನಿಯಮವು ಬಹಳ ಅನ್ವಯಯೋಗ್ಯವಾಗಿದೆ: “ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು. ಒಳ್ಳೇ ಮರವು ಕೆಟ್ಟ ಫಲವನ್ನು ಕೊಡಲಾರದು; ಹುಳುಕು ಮರವು ಒಳ್ಳೇ ಫಲವನ್ನು ಕೊಡಲಾರದು. ಒಳ್ಳೇ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ. ಹೀಗಿರಲಾಗಿ ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ.”—ಮತ್ತಾಯ 7:17-20.
18. ಕ್ರೈಸ್ತಪ್ರಪಂಚವು ತನ್ನ ಸದಸ್ಯರನ್ನು ಹೇಗೆ ಶುದ್ಧವಾಗಿರಿಸಬೇಕಾಗಿತ್ತು?
18 ಕ್ರೈಸ್ತಪ್ರಪಂಚದ ಧರ್ಮಗಳು, ಅದರ ಸದಸ್ಯರೆಂದು ಪ್ರತಿಪಾದಿಸಿಕೊಳ್ಳುತ್ತಿರುವವರಿಂದ ಮಾಡಲ್ಪಟ್ಟಿರುವ ಸಕಲ ನಿಯಮರಾಹಿತ್ಯ ಕೃತ್ಯಗಳಿಗಾಗಿ, ಬಹಿಷ್ಕಾರದ ಅಥವಾ ಜಾತಿಯಿಂದ ಹೊರಹಾಕುವ ಕ್ರೈಸ್ತ ಶಿಸ್ತನ್ನು ಅನ್ವಯಿಸುವುದರಲ್ಲಿ ನಿಷ್ಠಾವಂತವಾಗಿರುತ್ತಿದ್ದಲ್ಲಿ ಏನು ಸಂಭವಿಸುತ್ತಿತ್ತು? ಎಲ್ಲ ಪಶ್ಚಾತ್ತಾಪರಹಿತ ಸುಳ್ಳುಗಾರರು, ಜಾರರು, ವ್ಯಭಿಚಾರಿಗಳು, ಸಲಿಂಗಿ ಕಾಮಿಗಳು, ಮೋಸಗಾರರು, ಪಾತಕಿಗಳು, ಅಮಲೌಷಧ ವ್ಯಾಪಾರಿಗಳು ಮತ್ತು ವ್ಯಸನಿಗಳು, ಹಾಗೂ ಸಂಘಟಿತ ಪಾತಕದ ಸದಸ್ಯರಿಗೆ ಏನು ಸಂಭವಿಸುತ್ತಿತ್ತು? ಪ್ರಶ್ನಾತೀತವಾಗಿ, ಕ್ರೈಸ್ತಪ್ರಪಂಚದ ಕೊಳೆತುಹೋದ ಫಲವು, ದೇವರಿಂದ ನಾಶಕ್ಕಾಗಿ ಮಾತ್ರವೇ ಅದನ್ನು ಯೋಗ್ಯವುಳ್ಳದ್ದಾಗಿ ಮಾಡುತ್ತದೆ.—1 ಕೊರಿಂಥ 5:9-13; 2 ಯೋಹಾನ 10, 11.
19. ಧಾರ್ಮಿಕ ಮುಂದಾಳುತ್ವದ ಸಂಬಂಧದಲ್ಲಿ ಯಾವ ಒಪ್ಪಿಕೊಳ್ಳುವಿಕೆಗಳು ಮಾಡಲ್ಪಟ್ಟಿವೆ?
19 ಅಮೆರಿಕದಲ್ಲಿನ ಪ್ರೆಸ್ಬಿಟೇರಿಯನ್ ಚರ್ಚ್ನ ಜೆನೆರಲ್ ಎಸೆಂಬ್ಲಿ ಒಪ್ಪಿಕೊಂಡದ್ದು: “ಅದರ ಪ್ರಮಾಣಗಳು ಮತ್ತು ಅರ್ಥಗಳಲ್ಲಿ ಭಯಂಕರವಾಗಿರುವ ಒಂದು ಬಿಕ್ಕಟ್ಟನ್ನು ನಾವು ಎದುರಿಸುತ್ತಿದ್ದೇವೆ. . . . ರಾಷ್ಟ್ರಾದ್ಯಂತವಾಗಿ 10 ಮತ್ತು 23 ಪ್ರತಿಶತದ ನಡುವಿನ ವೈದಿಕರು, ಚರ್ಚ್ ಸದಸ್ಯರು, ಗಿರಾಕಿಗಳು, ಕೆಲಸ ಮಾಡುವವರು, ಮುಂತಾದವರೊಂದಿಗೆ ಲೈಂಗಿಕ ವರ್ತನೆ ಅಥವಾ ಲೈಂಗಿಕ ಸಂಪರ್ಕದಲ್ಲಿ ತೊಡಗಿದ್ದಾರೆ.” ಅಮೆರಿಕದ ವ್ಯಾಪಾರಸ್ಥನೊಬ್ಬನು ವಿಷಯವನ್ನು ಚೆನ್ನಾಗಿ ಸಾರಾಂಶಿಸಿದನು: “ಧಾರ್ಮಿಕ ಸಂಘಟನೆಗಳು ತಮ್ಮ ಐತಿಹಾಸಿಕ ಮೌಲ್ಯಗಳನ್ನು ರವಾನಿಸಲು ತಪ್ಪಿಹೋಗಿವೆ, ಮತ್ತು ಅನೇಕ ವಿದ್ಯಮಾನಗಳಲ್ಲಿ ಸಮಸ್ಯೆಯ ಭಾಗವಾಗಿವೆ.”
20, 21. (ಎ) ಯೇಸು ಮತ್ತು ಪೌಲರು ಕಪಟತನವನ್ನು ಹೇಗೆ ಬಹಿರಂಗವಾಗಿ ಆಪಾದಿಸಿದರು? (ಬಿ) ಯಾವ ಪ್ರಶ್ನೆಗಳು ಉತ್ತರಿಸಲ್ಪಡಲು ಉಳಿದಿವೆ?
20 ಧಾರ್ಮಿಕ ಕಪಟತನದ ಯೇಸುವಿನ ಬಹಿರಂಗ ಆಪಾದನೆಯು, ಆತನ ಸಮಯದಲ್ಲಿ ಸತ್ಯವಾಗಿ ಪರಿಣಮಿಸಿದಂತೆಯೇ ಇಂದು ಸತ್ಯವಾಗಿ ಪರಿಣಮಿಸಿದೆ: “ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ವಿಹಿತವಾಗಿ ಪ್ರವಾದಿಸಿದ್ದಾನೆ; ಅವನು ಬರೆದದ್ದೇನಂದರೆ—ಈ ಜನರು ಮಾತಿನಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಮನಸ್ಸು ನನಗೆ ದೂರವಾಗಿದೆ. ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವದರಿಂದ ನನಗೆ ಭಕ್ತಿ ತೋರಿಸುವದು ವ್ಯರ್ಥ ಎಂಬದೇ.” (ಮತ್ತಾಯ 15:7-9) ತೀತನಿಗೆ ಬರೆದ ಪೌಲನ ಮಾತುಗಳು ಸಹ ನಮ್ಮ ಆಧುನಿಕ ಪರಿಸ್ಥಿತಿಯನ್ನು ವರ್ಣಿಸುತ್ತವೆ: “ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರು ಅಸಹ್ಯರೂ ಅವಿಧೇಯರೂ ಸತ್ಕಾರ್ಯಗಳಿಗೆಲ್ಲಾ ಅಪ್ರಯೋಜಕರೂ ಆಗಿರುವದರಿಂದ ದೇವರನ್ನು ಅರಿಯೆವೆಂದು ತಮ್ಮ ಕಾರ್ಯಗಳಿಂದಲೇ ಹೇಳಿದಂತಾಯಿತು.”—ತೀತ 1:16.
21 ಕುರುಡನು ಕುರುಡನಿಗೆ ದಾರಿತೋರಿಸುವುದಾದರೆ, ಇಬ್ಬರೂ ಕುಣಿಯಲ್ಲಿ ಬೀಳುವರೆಂದು ಯೇಸು ಹೇಳಿದನು. (ಮತ್ತಾಯ 15:14) ನೀವು ಮಹಾ ಬಾಬೆಲಿನೊಂದಿಗೆ ಅಂತ್ಯಗೊಳ್ಳಲು ಬಯಸುತ್ತೀರೋ? ಅಥವಾ ನಿಮ್ಮ ಕಣ್ಣುಗಳನ್ನು ತೆರೆದುಕೊಂಡು ನೇರವಾದ ಹಾದಿಗಳಲ್ಲಿ ನಡೆಯಲು ಮತ್ತು ಯೆಹೋವನ ಆಶೀರ್ವಾದವನ್ನು ಅನುಭವಿಸಲು ನೀವು ಬಯಸುತ್ತೀರೋ? ನಮ್ಮನ್ನು ಈಗ ಎದುರಿಸುವ ಪ್ರಶ್ನೆಗಳು ಇವಾಗಿವೆ: ಯಾವ ಧರ್ಮವು—ಯಾವುದೇ ಧರ್ಮವು ಇರುವಲ್ಲಿ—ದಿವ್ಯ ಫಲವನ್ನು ಉತ್ಪಾದಿಸುತ್ತದೆ? ದೇವರಿಗೆ ಸ್ವೀಕಾರಯೋಗ್ಯವಾದ ಸತ್ಯಾರಾಧನೆಯನ್ನು ನಾವು ಹೇಗೆ ಗುರುತಿಸಬಲ್ಲೆವು?—ಕೀರ್ತನೆ 119:105.
[ಪಾದಟಿಪ್ಪಣಿ]
a 1944ರಲ್ಲಿ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟದ್ದು; ಈಗ ಪ್ರತಿಗಳೆಲ್ಲ ಖರ್ಚಾಗಿಹೋಗಿವೆ.
ನೀವು ಜ್ಞಾಪಿಸಿಕೊಳ್ಳುತ್ತೀರೊ?
◻ ದೇವರ ಮುಂದೆ ಮಹಾ ಬಾಬೆಲಿನ ಪ್ರಸ್ತುತ ನಿಲುವು ಏನಾಗಿದೆ?
◻ ಯಾವ ಆಧಾರದ ಮೇಲೆ ಸುಳ್ಳು ಧರ್ಮವು ದೋಷಾರೋಪಿಸಲ್ಪಟ್ಟಿದೆ?
◻ ಸುಳ್ಳು ಧರ್ಮವು ಹೇಗೆ ಕಾಯಿನನ ಆತ್ಮವನ್ನು ತೋರಿಸಿದೆ?
◻ ಯಾವುದೇ ಧರ್ಮದ ತೀರ್ಪು ಮಾಡಲಿಕ್ಕಾಗಿ ಯಾವ ತತ್ತ್ವವನ್ನು ಯೇಸು ವ್ಯಕ್ತಪಡಿಸಿದನು?
[ಪುಟ 13 ರಲ್ಲಿರುವ ಚಿತ್ರ]
ಇತಿಹಾಸದಾದ್ಯಂತವಾಗಿ ಧಾರ್ಮಿಕ ಮುಖಂಡರು ರಾಜಕೀಯದಲ್ಲಿ ಮಧ್ಯೆ ಪ್ರವೇಶಿಸಿದ್ದಾರೆ
[ಪುಟ 15 ರಲ್ಲಿರುವ ಚಿತ್ರಗಳು]
ಈ ವೈದಿಕರು ಶಕ್ತಿಯುತ ರಾಜ ನೀತಿಜ್ಞರೂ ಆಗಿದ್ದರು
ಕಾರ್ಡಿನಲ್ ಮ್ಯಾಸಾರಿನ್
ಕಾರ್ಡಿನಲ್ ರಿಚೆಲ್ಯು
ಕಾರ್ಡಿನಲ್ ವೊಲ್ಸಿ
[ರಲ್ಲಿರುವ ಚಿತ್ರ ಕೃಪೆ]
Cardinal Mazarin and Cardinal Richelieu: From the book Ridpath’s History of the World (Vol. VI and Vol. V respectively). Cardinal Wolsey: From the book The History of Protestantism (Vol. I).