“ಜನರೇ, ಯಾಹುವನ್ನು ಸ್ತುತಿಸಿರಿ!”
“ಉಸಿರಾಡುವ ಪ್ರತಿಯೊಂದು ವಸ್ತುವೂ—ಯಾಹುವನ್ನು ಸ್ತುತಿಸಲಿ.”—ಕೀರ್ತನೆ 150:6, NW.
1, 2. (ಎ) ಪ್ರಥಮ ಶತಮಾನದಲ್ಲಿ ನಿಜ ಕ್ರೈಸ್ತತ್ವವು ಎಷ್ಟರ ಮಟ್ಟಿಗೆ ಏಳಿಗೆ ಹೊಂದಿತ್ತು? (ಬಿ) ಅಪೊಸ್ತಲರು ಯಾವ ಮುನ್ನೆಚ್ಚರಿಕೆಯನ್ನು ಕೊಟ್ಟಿದ್ದರು? (ಸಿ) ಧರ್ಮಭ್ರಷ್ಟತೆಯು ಹೇಗೆ ಬೆಳೆಯಿತು?
ಯೇಸು ತನ್ನ ಶಿಷ್ಯರನ್ನು ಕ್ರೈಸ್ತ ಸಭೆಯಾಗಿ ಸಂಘಟಿಸಿದನು. ಅದು ಪ್ರಥಮ ಶತಮಾನದಲ್ಲಿ ಏಳಿಗೆ ಹೊಂದಿತು. ಕಟುವಾದ ಧಾರ್ಮಿಕ ವಿರೋಧದ ಹೊರತೂ, “ಸುವಾರ್ತೆಯು . . . ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಿತು.” (ಕೊಲೊಸ್ಸೆ 1:23, NW) ಆದರೆ, ಯೇಸು ಕ್ರಿಸ್ತನ ಅಪೊಸ್ತಲರ ಮರಣದ ನಂತರ, ಸೈತಾನನು ವಂಚನೆಯಿಂದ ಧರ್ಮಭ್ರಷ್ಟತೆಯನ್ನು ಪ್ರೇರಿಸಿದನು.
2 ಅಪೊಸ್ತಲರು ಇದರ ಕುರಿತಾಗಿ ಮುಂಚೆಯೇ ಎಚ್ಚರಿಕೆಯನ್ನು ಕೊಟ್ಟಿದ್ದರು. ಉದಾಹರಣೆಗಾಗಿ, ಪೌಲನು ಎಫೆಸದ ಹಿರಿಯರಿಗೆ ಹೇಳಿದ್ದು: “ದೇವರು ಸ್ವರಕ್ತದಿಂದ [“ತನ್ನ ಸ್ವಂತ ಕುಮಾರನ ರಕ್ತದಿಂದ,” NW] ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ. ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವವೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸುವದಿಲ್ಲ. ಇದಲ್ಲದೆ ನಿಮ್ಮಲ್ಲಿಯೂ ಕೆಲವರು ಎದ್ದು ವ್ಯತ್ಯಾಸ ಬೋಧನೆಗಳನ್ನು ಮಾಡಿ ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು.” (ಅ. ಕೃತ್ಯಗಳು 20:28-30; 2 ಪೇತ್ರ 2:1-3ನ್ನು ಸಹ ನೋಡಿರಿ; 1 ಯೋಹಾನ 2:18, 19.) ಹೀಗೆ, ನಾಲ್ಕನೆಯ ಶತಮಾನದಲ್ಲಿ, ಧರ್ಮಭ್ರಷ್ಟ ಕ್ರೈಸ್ತತ್ವವು ರೋಮನ್ ಸಾಮ್ರಾಜ್ಯದೊಂದಿಗೆ ಐಕ್ಯಗೊಂಡು ಸಹಕರಿಸಲಾರಂಭಿಸಿತು. ಕೆಲವು ಶತಮಾನಗಳ ಬಳಿಕ, ರೋಮಿನ ಪೋಪ್‌ನೊಂದಿಗಿನ ಸಂಬಂಧಗಳೊಂದಿಗೆ ಪವಿತ್ರ ರೋಮನ್ ಸಾಮ್ರಾಜ್ಯವು, ಮಾನವಕುಲದ ಒಂದು ದೊಡ್ಡ ವಿಭಾಗದ ಮೇಲೆ ಆಳಲಾರಂಭಿಸಿತು. ಸಕಾಲದಲ್ಲಿ, ಪ್ರಾಟೆಸ್ಟಂಟ್ ಸುಧಾರಣೆಯು ಕ್ಯಾಥೋಲಿಕ್ ಚರ್ಚಿನ ದುಷ್ಟ ಲೋಲುಪತೆಗಳ ವಿರುದ್ಧ ದಂಗೆಯೆದ್ದಿತು, ಆದರೆ ಅದು ನಿಜ ಕ್ರೈಸ್ತತ್ವವನ್ನು ಪುನಃಸ್ಥಾಪಿಸುವುದರಲ್ಲಿ ವಿಫಲಗೊಂಡಿತು.
3. (ಎ) ಸುವಾರ್ತೆಯು ಸರ್ವಸೃಷ್ಟಿಗೆ ಯಾವಾಗ ಮತ್ತು ಹೇಗೆ ಸಾರಲ್ಪಟ್ಟಿತು? (ಬಿ) 1914ರಲ್ಲಿ ಯಾವ ಬೈಬಲಾಧರಿತ ನಿರೀಕ್ಷಣೆಗಳು ನಿಜವಾದವು?
3 ಆದಾಗಲೂ, 19ನೆಯ ಶತಮಾನದ ಅಂತ್ಯವು ಸಮೀಪಿಸಿದಂತೆ, ಬೈಬಲ್ ವಿದ್ಯಾರ್ಥಿಗಳ ಒಂದು ಪ್ರಾಮಾಣಿಕ ಗುಂಪು ಪುನಃ ಒಮ್ಮೆ ಸಾರುವುದರಲ್ಲಿ ಮತ್ತು ‘ಸರ್ವಸೃಷ್ಟಿಗೆ ಸುವಾರ್ತೆಯ ನಿರೀಕ್ಷೆಯನ್ನು’ ವಿಸ್ತರಿಸುವುದರಲ್ಲಿ ಕಾರ್ಯಮಗ್ನವಾಗಿತ್ತು. ತಮ್ಮ ಬೈಬಲ್ ಪ್ರವಾದನೆಯ ಅಧ್ಯಯನದ ಆಧಾರದ ಮೇಲೆ, ಈ ಗುಂಪು 30ಕ್ಕಿಂತಲೂ ಹೆಚ್ಚು ವರ್ಷಗಳ ಮುಂಚಿತವಾಗಿ, 1914ನೆಯ ಇಸವಿಯನ್ನು, ಸಾ.ಶ.ಪೂ. 607ರಲ್ಲಿ ಯೆರೂಸಲೇಮಿನ ನಿರ್ಜನತೆಯೊಂದಿಗೆ ಆರಂಭಿಸಿದ “ಏಳು ಕಾಲಗಳ” ಒಂದು ಅವಧಿ ಅಥವಾ 2,520 ವರ್ಷಗಳ, “ಅನ್ಯದೇಶದವರ ಸಮಯಗಳ” ಅಂತ್ಯವನ್ನು ಗುರುತಿಸುವುದಾಗಿ ನಿರ್ದೇಶಿಸಿತು. (ಲೂಕ 21:24; ದಾನಿಯೇಲ 4:16) ಅವರ ನಿರೀಕ್ಷಣೆಗಳ ನೆರವೇರಿಕೆಯಲ್ಲಿ, 1914, ಭೂಮಿಯ ಮೇಲಿರುವ ಮಾನವ ವ್ಯವಹಾರಗಳಲ್ಲಿ ಒಂದು ತಿರುಗು ಬಿಂದುವಾಗಿ ಪರಿಣಮಿಸಿತು. ಸ್ವರ್ಗದಲ್ಲೂ ಐತಿಹಾಸಿಕ ಘಟನೆಗಳು ನಡೆದವು. ಈ ಭೂಮಿಯಿಂದ ಎಲ್ಲಾ ದುಷ್ಟತನವನ್ನು ತೆಗೆದುಹಾಕಿ ಪ್ರಮೋದವನವನ್ನು ಪುನಸ್ಸ್ಥಾಪಿಸುವದಕ್ಕೆ ತಯಾರಿಯಲ್ಲಿ, ನಿತ್ಯತೆಯ ಅರಸನು ಆಗ ತನ್ನ ಜೊತೆ ಅರಸನಾದ ಯೇಸು ಕ್ರಿಸ್ತನನ್ನು ಒಂದು ಸ್ವರ್ಗೀಯ ಸಿಂಹಾಸನದ ಮೇಲೆ ಕೂರಿಸಿದನು.—ಕೀರ್ತನೆ 2:6, 8, 9; 110:1, 2, 5.
ಮೆಸ್ಸೀಯ ರಾಜನನ್ನು ನೋಡಿರಿ!
4. ಮೀಕಾಯೇಲ ಎಂಬ ತನ್ನ ಹೆಸರಿನ ಅರ್ಥಕ್ಕನುಸಾರವಾಗಿ ಯೇಸು ಹೇಗೆ ಜೀವಿಸಿದನು?
4 1914ರಲ್ಲಿ ಈ ಮೆಸ್ಸೀಯ ರಾಜನು ಕ್ರಿಯೆಗೈಯಲಾರಂಭಿಸಿದನು. ಬೈಬಲಿನಲ್ಲಿ ಅವನನ್ನು ಮೀಕಾಯೇಲನೆಂದೂ—ಅದರ ಅರ್ಥ “ದೇವರಂತೆ ಯಾರಿದ್ದಾನೆ?”—ಹೆಸರಿಸಲಾಗಿದೆ, ಯಾಕಂದರೆ ಅವನು ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯುವುದರಲ್ಲಿ ಆಸಕ್ತನಾಗಿದ್ದಾನೆ. ಪ್ರಕಟನೆ 12:7-12ರಲ್ಲಿ ದಾಖಲಿಸಲ್ಪಟ್ಟಂತೆ, ಏನು ಸಂಭವಿಸಲಿತ್ತೋ ಅದನ್ನು ಅಪೊಸ್ತಲ ಯೋಹಾನನು ದರ್ಶನದಲ್ಲಿ ವರ್ಣಿಸಿದನು: “ಪರಲೋಕದಲ್ಲಿ ಯುದ್ಧ ನಡೆಯಿತು. ಮೀಕಾಯೇಲನೂ ಅವನ ದೂತರೂ ಘಟಸರ್ಪನ ಮೇಲೆ ಯುದ್ಧಮಾಡುವದಕ್ಕೆ ಹೊರಟರು. ಘಟಸರ್ಪನೂ ಅವನ ದೂತರೂ ಯುದ್ಧಮಾಡಿ ಸೋತುಹೋದರು, ಮತ್ತು ಪರಲೋಕದೊಳಗೆ ಅವರಿಗೆ ಸ್ಥಾನವು ತಪ್ಪಿಹೋಯಿತು. ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು.” ಒಂದು ಭಾರೀ ಪತನವೇ ಸರಿ!
5, 6. (ಎ) 1914ನ್ನು ಅನುಸರಿಸಿ, ಯಾವ ರೋಮಾಂಚಕರ ಘೋಷಣೆಯು ಸ್ವರ್ಗದಿಂದ ಮಾಡಲ್ಪಟ್ಟಿತು? (ಬಿ) ಮತ್ತಾಯ 24:3-13 ಇದರೊಂದಿಗೆ ಹೇಗೆ ಸಂಬಂಧಿಸುತ್ತದೆ?
5 ಆಗ ಸ್ವರ್ಗದಲ್ಲಿ ಬಲವಾದ ಧ್ವನಿಯೊಂದು ಘೋಷಿಸಿದ್ದು: “ಈಗ ಜಯವೂ ಶಕ್ತಿಯೂ ರಾಜ್ಯವೂ ನಮ್ಮ ದೇವರಿಗೆ ಉಂಟಾಯಿತು; ಆತನು ಅಭಿಷೇಕಿಸಿದವನ ಅಧಿಕಾರವು ಈಗ ಸ್ಥಾಪಿತವಾಯಿತು; ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ. ಅವರು [ನಂಬಿಗಸ್ತ ಕ್ರೈಸ್ತರು] ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಮರಣಕ್ಕೆ ಹಿಂತೆಗೆಯದೆ ಯಜ್ಞದ ಕುರಿಯಾದಾತನ [ಕ್ರಿಸ್ತ ಯೇಸು] ರಕ್ತದ ಬಲದಿಂದಲೂ ತಮ್ಮ ವಾಕ್ಯದ ಬಲದಿಂದಲೂ ಅವನನ್ನು ಜಯಿಸಿದರು.” ಇದು, ಯೇಸುವಿನ ಅಮೂಲ್ಯ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನು ಇಟ್ಟಿರುವ ಸಮಗ್ರತಾ ಪಾಲಕರಿಗಾಗಿ ವಿಮೋಚನೆಯ ಅರ್ಥದಲ್ಲಿದೆ.—ಜ್ಞಾನೋಕ್ತಿ 10:2; 2 ಪೇತ್ರ 2:9.
6 ಸ್ವರ್ಗದಲ್ಲಿನ ಆ ಗಟ್ಟಿಯಾದ ಧ್ವನಿಯು ಘೋಷಿಸುತ್ತಾ ಮುಂದುವರಿದುದು: “ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” ಈ ಪ್ರಕಾರ ಭೂಮಿಗಾಗಿ ಪ್ರವಾದಿಸಲ್ಪಟ್ಟ “ದುರ್ಗತಿ”ಯು, ಈ ಶತಮಾನದಲ್ಲಿ ಭೂಮಿಯನ್ನು ಪೀಡಿಸಿರುವ ಜಾಗತಿಕ ಯುದ್ಧಗಳು, ಕ್ಷಾಮಗಳು, ಸೋಂಕು ರೋಗಗಳು, ಭೂಕಂಪಗಳು, ಮತ್ತು ನಿಯಮರಾಹಿತ್ಯದಲ್ಲಿ ಪ್ರತ್ಯಕ್ಷವಾಗಿದೆ. ಮತ್ತಾಯ 24:3-13 (NW) ವಿವರಿಸುವಂತೆ, ಇವು ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸೂಚನೆ’ಯ ಭಾಗವಾಗಿರುವುದೆಂದು ಯೇಸು ಮುಂತಿಳಿಸಿದನು. ಪ್ರವಾದನೆಯ ನೆರವೇರಿಕೆಯಲ್ಲಿ, 1914ರಿಂದ ಮಾನವಕುಲವು, ಹಿಂದಿನ ಮಾನವ ಇತಿಹಾಸದಲ್ಲೆಲ್ಲಾ ಅಭೂತಪೂರ್ವವಾಗಿರುವಂತಹ ದುರ್ಗತಿಯನ್ನು ಭೂಮಿಯ ಮೇಲೆ ಅನುಭವಿಸಿದೆ.
7. ಯೆಹೋವನ ಸಾಕ್ಷಿಗಳು ತುರ್ತಿನೊಂದಿಗೆ ಸಾರುತ್ತಾರೆ ಏಕೆ?
7 ಸೈತಾನಸಂಬಂಧಿತ ದುರ್ಗತಿಯ ಈ ಯುಗದಲ್ಲಿ, ಮಾನವಕುಲವು ಭವಿಷ್ಯತ್ತಿಗಾಗಿ ನಿರೀಕ್ಷೆಯನ್ನು ಕಂಡುಹಿಡಿಯಬಲ್ಲದೋ? ಹೌದು, ಯಾಕಂದರೆ ಮತ್ತಾಯ 12:21 ಯೇಸುವಿನ ಕುರಿತಾಗಿ ಹೇಳುವುದು: “ಅನ್ಯಜನರು ಈತನ ಹೆಸರನ್ನು ಕೇಳಿ ನಿರೀಕ್ಷೆಯಿಂದಿರುವರು”! ರಾಷ್ಟ್ರಗಳ ನಡುವಿನ ವಿಪತ್ಕಾರಕ ಪರಿಸ್ಥಿತಿಗಳು ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸೂಚನೆ’ಯನ್ನು ಮಾತ್ರವಲ್ಲ, ಮೆಸ್ಸೀಯ ಸಂಬಂಧಿತ ರಾಜ್ಯದ ಸ್ವರ್ಗೀಯ ರಾಜನಾಗಿ ‘ಯೇಸುವಿನ ಸಾನ್ನಿಧ್ಯದ ಸೂಚನೆ’ಯನ್ನೂ ಗುರುತಿಸುತ್ತವೆ. ಆ ರಾಜ್ಯದ ಕುರಿತಾಗಿ, ಯೇಸು ಮುಂದೆ ತಿಳಿಸುವುದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಇಂದು ಭೂಮಿಯ ಮೇಲಿನ ಯಾವ ಒಂದು ಜನತೆಯು ದೇವರ ರಾಜ್ಯದ ಆಳಿಕೆಯ ಭವ್ಯ ನಿರೀಕ್ಷೆಯ ಕುರಿತು ಸಾರುತ್ತಿದೆ? ಯೆಹೋವನ ಸಾಕ್ಷಿಗಳೇ! ನೀತಿ ಮತ್ತು ಶಾಂತಿಯ ದೇವರ ರಾಜ್ಯವು ಸ್ವಲ್ಪದರಲ್ಲೇ ಭೂಮಿಯ ವ್ಯವಹಾರಗಳನ್ನು ವಹಿಸಿಕೊಳ್ಳಲಿದೆ ಎಂದು, ಅವರು ತುರ್ತಿನೊಂದಿಗೆ, ಸಾರ್ವಜನಿಕವಾಗಿಯೂ ಮನೆಯಿಂದ ಮನೆಗೂ ಘೋಷಿಸುತ್ತಾರೆ. ನೀವು ಈ ಶುಶ್ರೂಷೆಯಲ್ಲಿ ಭಾಗವಹಿಸುತ್ತಿದ್ದೀರೋ? ಇದಕ್ಕಿಂತ ಮಹತ್ತಾದ ಸುಯೋಗವು ನಿಮಗಿರಲಾರದು!—2 ತಿಮೊಥೆಯ 4:2, 5.
“ಅಂತ್ಯ”ವು ಹೇಗೆ ಬರುತ್ತದೆ?
8, 9. (ಎ) “ದೇವರ ಮನೆ”ಯೊಂದಿಗೆ ನ್ಯಾಯತೀರ್ಪು ಆರಂಭಿಸಿದ್ದು ಹೇಗೆ? (ಬಿ) ಕ್ರೈಸ್ತಪ್ರಪಂಚವು ದೇವರ ವಾಕ್ಯವನ್ನು ಹೇಗೆ ಉಲ್ಲಂಘಿಸಿದೆ?
8 ಮಾನವಕುಲವು ನ್ಯಾಯತೀರ್ಪಿನ ಒಂದು ಅವಧಿಯನ್ನು ಪ್ರವೇಶಿಸಿದೆ. 1 ಪೇತ್ರ 4:17ರಲ್ಲಿ ನ್ಯಾಯತೀರ್ಪು “ದೇವರ ಮನೆ”ಯೊಂದಿಗೆ ಆರಂಭಿಸಿತ್ತೆಂದು ನಮಗೆ ತಿಳಿಸಲಾಗುತ್ತದೆ. ಇದು 1914-18ರ ಸಮಯದಲ್ಲಿ Iನೇ ಲೋಕ ಯುದ್ಧದ ಹತಿಸುವಿಕೆಯೊಂದಿಗೆ ಆರಂಭಿಸಿದ, “ಕಡೇ ದಿವಸಗಳಂದಿನಿಂದ ವ್ಯಕ್ತವಾಗಿರುವ, ಕ್ರೈಸ್ತ ಸಂಸ್ಥೆಗಳೆಂದು ಹೇಳಿಕೊಳ್ಳುವವುಗಳ ಒಂದು ನ್ಯಾಯತೀರ್ಪಾಗಿದೆ. ಕ್ರೈಸ್ತಪ್ರಪಂಚವು ಈ ನ್ಯಾಯತೀರ್ಪಿನಲ್ಲಿ ಹೇಗೆ ಹೊರಬಂತು? ಒಳ್ಳೇದು, 1914ರಿಂದ ಯುದ್ಧಗಳನ್ನು ಬೆಂಬಲಿಸುವುದರಲ್ಲಿ ಚರ್ಚುಗಳ ನಿಲುವನ್ನು ಪರಿಗಣಿಸಿರಿ. ಗುಂಡಿಗೆ ಬಲಿಬೀಳಲಿಕ್ಕಾಗಿ ಯೋಧ ಪಂಕ್ತಿಗಳಿಗೆ ಹೋಗುವಂತೆ ಅವರು ಸಾರಿದ “ನಿರ್ದೋಷಿಗಳಾದ ದರಿದ್ರರ ಪ್ರಾಣರಕ್ತ”ದಿಂದ ವೈದಿಕರು ಕಳಂಕಿತರಾಗಿಲ್ಲವೊ?—ಯೆರೆಮೀಯ 2:34.
9 ಮತ್ತಾಯ 26:52ಕ್ಕನುಸಾರ, ಯೇಸು ತಿಳಿಸಿದ್ದು: “ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು.” ಈ ಶತಮಾನದ ಯುದ್ಧಗಳಲ್ಲಿ ಇದೆಷ್ಟು ಸತ್ಯವಾಗಿ ಪರಿಣಮಿಸಿದೆ! ವೈದಿಕರು ಯುವ ಪುರುಷರನ್ನು ಅವರು ಇತರ ಯುವ ಪುರುಷರನ್ನು, ತಮ್ಮ ಸ್ವಂತ ಧರ್ಮದವರನ್ನು ಸಹ—ಕ್ಯಾಥೋಲಿಕರು ಕ್ಯಾಥೋಲಿಕರನ್ನು ಮತ್ತು ಪ್ರಾಟೆಸ್ಟಂಟರು ಪ್ರಾಟೆಸ್ಟಂಟರನ್ನು—ಹತಿಸುವಂತೆ ಉತ್ತೇಜಿಸಿದ್ದಾರೆ. ರಾಷ್ಟ್ರೀಯತೆಯು, ದೇವರು ಮತ್ತು ಕ್ರಿಸ್ತನಿಗಿಂತ ಉನ್ನತಕ್ಕೇರಿಸಲ್ಪಟ್ಟಿದೆ. ಇತ್ತೀಚೆಗೆ, ಕೆಲವು ಆಫ್ರಿಕನ್ ರಾಷ್ಟ್ರಗಳಲ್ಲಿ, ಕುಲಸಂಬಂಧಿತ ಸಂಬಂಧಗಳು ಬೈಬಲ್ ಸೂತ್ರಗಳಿಗಿಂತಲೂ ಮುಂದಿಡಲ್ಪಟ್ಟಿವೆ. ಎಲ್ಲಿ ಜನಸಂಖ್ಯೆಯಲ್ಲಿ ಹೆಚ್ಚಿನವರು ಕ್ಯಾಥೋಲಿಕರಾಗಿದ್ದಾರೊ, ಆ ರುಆಂಡದಲ್ಲಿ ಕಡಿಮೆ ಪಕ್ಷ ಐವತ್ತು ಲಕ್ಷ ಜನರು ಕುಲಸಂಬಂಧಿತ ಹಿಂಸಾಚಾರದಲ್ಲಿ ಹತಿಸಲ್ಪಟ್ಟರು. ವ್ಯಾಟಿಕನ್ ವಾರ್ತಾಪತ್ರವಾದ ಲಾಸೇರ್‌ವಾಟೋರೆ ರೊಮಾನೊದಲ್ಲಿ ಪೋಪ್ ಒಪ್ಪಿಕೊಂಡದ್ದು: “ಇದು ಸಂಪೂರ್ಣವಾಗಿ ಒಂದು ಸಾಮೂಹಿಕನಾಶವಾಗಿದೆ, ಇದಕ್ಕೆ ದುರದೃಷ್ಟಕರವಾಗಿ ಕ್ಯಾಥೋಲಿಕರೂ ಜವಾಬ್ದಾರರಾಗಿದ್ದಾರೆ.”—ಯೆಶಾಯ 59:2, 3ನ್ನು ಹೋಲಿಸಿ; ಮೀಕ 4:3, 5.
10. ಸುಳ್ಳು ಧರ್ಮದ ಮೇಲೆ ಯೆಹೋವನು ಯಾವ ನ್ಯಾಯತೀರ್ಪನ್ನು ಜಾರಿಗೊಳಿಸುವನು?
10 ಒಬ್ಬರು ಇನ್ನೊಬ್ಬರನ್ನು ಹತಿಸುವಂತೆ ಉತ್ತೇಜಿಸುವ ಅಥವಾ ತಮ್ಮ ಮಂದೆಯ ಸದಸ್ಯರು ಇತರ ಸದಸ್ಯರನ್ನು ಕೊಲ್ಲುವಾಗ ಸುಮ್ಮನೆ ನಿಂತುಕೊಳ್ಳುವ ಧರ್ಮಗಳನ್ನು ನಿತ್ಯತೆಯ ಅರಸನು ಹೇಗೆ ದೃಷ್ಟಿಸುತ್ತಾನೆ? ಸುಳ್ಳು ಧರ್ಮದ ಲೋಕವ್ಯಾಪಕ ವ್ಯವಸ್ಥೆಯಾದ ಮಹಾ ಬಾಬೆಲಿನ ಕುರಿತಾಗಿ, ಪ್ರಕಟನೆ 18:21, 24 ನಮಗನ್ನುವುದು: “ಆಗ ಬಲಿಷ್ಠನಾದ ಒಬ್ಬ ದೇವದೂತನು ದೊಡ್ಡ ಬೀಸುವ ಕಲ್ಲಿನಂತಿರುವ ಒಂದು ಕಲ್ಲನ್ನು ಎತ್ತಿ ಸಮುದ್ರದೊಳಗೆ ಹಾಕಿ—ಮಹಾ ಪಟ್ಟಣವಾದ ಬಾಬೆಲು ಹೀಗೆಯೇ ದಡದಡನೆ ಕೆಡವಲ್ಪಟ್ಟು ಇನ್ನೆಂದಿಗೂ ಕಾಣಿಸುವದಿಲ್ಲ. ಪ್ರವಾದಿಗಳ ರಕ್ತವೂ ದೇವಜನರ ರಕ್ತವೂ ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವೂ ನಿನ್ನಲ್ಲಿ ಸಿಕ್ಕಿತು ಎಂದು ಹೇಳಿದನು.”
11. ಕ್ರೈಸ್ತಪ್ರಪಂಚದಲ್ಲಿ ಯಾವ ಘೋರ ಸಂಗತಿಗಳು ಸಂಭವಿಸುತ್ತಿವೆ?
11 ಬೈಬಲ್ ಪ್ರವಾದನೆಯ ನೆರವೇರಿಕೆಯಲ್ಲಿ, ಕ್ರೈಸ್ತಪ್ರಪಂಚದಲ್ಲಿ ಘೋರ ಸಂಗತಿಗಳು ಸಂಭವಿಸುತ್ತಲಿವೆ. (ಯೆರೆಮೀಯ 5:30, 31; 23:14ನ್ನು ಹೋಲಿಸಿರಿ.) ಹೆಚ್ಚಿನಾಂಶ ವೈದಿಕರ ಸ್ವೇಚ್ಛಾಚಾರದ ಮನೋಭಾವದಿಂದಾಗಿ, ಅವರ ಮಂದೆಗಳು ಅನೈತಿಕತೆಯಿಂದ ತುಂಬಿವೆ. ಒಂದು ಕ್ರೈಸ್ತ ರಾಷ್ಟ್ರವೆಂದು ಹೇಳಿಕೊಳ್ಳುವ ಅಮೆರಿಕದಲ್ಲಿ, ಎಲ್ಲಾ ವಿವಾಹಗಳಲ್ಲಿ ಸುಮಾರು ಅರ್ಧದಷ್ಟು ವಿಚ್ಛೇದದಲ್ಲಿ ಅಂತ್ಯಗೊಳ್ಳುತ್ತವೆ. ಹದಿವಯಸ್ಕ ಗರ್ಭಾವಸ್ಥೆಗಳು ಮತ್ತು ಸಲಿಂಗಿ ಕಾಮವು ಚರ್ಚು ಸದಸ್ಯರೊಳಗೆ ಮಿತಿಮೀರಿದೆ. ಪಾದ್ರಿಗಳು ಎಳೆಯ ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗಿಸುತ್ತಿದ್ದಾರೆ—ಇದು ಕೇವಲ ಕೆಲವೇ ವಿದ್ಯಮಾನಗಳಲ್ಲಿ ಅಷ್ಟೆಯಲ್ಲ. ಈ ಮೊಕದ್ದಮೆಗಳನ್ನು ಒಳಗೊಂಡಿರುವ ಕೋರ್ಟ್ ಇತ್ಯರ್ಥಗಳು, ಅಮೆರಿಕದಲ್ಲಿನ ಕ್ಯಾಥೋಲಿಕ್ ಚರ್ಚಿಗೆ ಒಂದು ದಶಕದೊಳಗೆ ಒಂದು ಬಿಲಿಯ ಡಾಲರುಗಳ ವೆಚ್ಚ ತಗಲಿಸುವುದೆಂದು ಹೇಳಲಾಗಿದೆ. 1 ಕೊರಿಂಥ 6:9, 10ರಲ್ಲಿ ಕಂಡುಕೊಳ್ಳಲಾಗುವ ಅಪೊಸ್ತಲ ಪೌಲನ ಎಚ್ಚರಿಕೆಯನ್ನು ಕ್ರೈಸ್ತಪ್ರಪಂಚವು ಅಲಕ್ಷಿಸಿದೆ: “ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.”
12. (ಎ) ಮಹಾ ಬಾಬೆಲಿನ ವಿರುದ್ಧ ನಿತ್ಯತೆಯ ಅರಸನು ಹೇಗೆ ಕ್ರಿಯೆಗೈಯುವನು? (ಬಿ) ಕ್ರೈಸ್ತಪ್ರಪಂಚಕ್ಕೆ ವೈದೃಶ್ಯದಲ್ಲಿ, ದೇವರ ಜನರು ಯಾವ ಕಾರಣಕ್ಕಾಗಿ “ಹಲ್ಲೆಲೂಯಾ” ಮೇಳಗೀತಗಳನ್ನು ಹಾಡುವರು?
12 ಸ್ವಲ್ಪದರಲ್ಲೇ, ತನ್ನ ಸ್ವರ್ಗೀಯ ದಳಪತಿಯಾದ ಕ್ರಿಸ್ತ ಯೇಸುವಿನ ಮುಖಾಂತರ ಕ್ರಿಯೆಗೈಯುತ್ತಿರುವ ನಿತ್ಯತೆಯ ಅರಸನಾದ ಯೆಹೋವನು, ಮಹಾ ಸಂಕಟವನ್ನು ಆರಂಭಿಸುವನು. ಪ್ರಥಮವಾಗಿ, ಕ್ರೈಸ್ತಪ್ರಪಂಚವು ಮತ್ತು ಮಹಾ ಬಾಬೆಲಿನ ಇತರ ಎಲ್ಲಾ ವಿಭಾಗಗಳು ಯೆಹೋವನ ನ್ಯಾಯತೀರ್ಪಿನ ನೆರವೇರಿಕೆಯನ್ನು ಅನುಭವಿಸುವವು. (ಪ್ರಕಟನೆ 17:16, 17) ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಮೂಲಕ ಯೆಹೋವನು ಒದಗಿಸಿರುವ ರಕ್ಷಣೆಗೆ ತಾವು ಅಯೋಗ್ಯರೆಂದು ಅವರು ತೋರಿಸಿಕೊಂಡಿದ್ದಾರೆ. ಅವರು ದೇವರ ಪವಿತ್ರ ನಾಮವನ್ನು ತುಚ್ಛೀಕರಿಸಿದ್ದಾರೆ. (ಯೆಹೆಜ್ಕೇಲ 39:7ನ್ನು ಹೋಲಿಸಿ.) ತಮ್ಮ ಸಮೃದ್ಧವಾದ ಧಾರ್ಮಿಕ ಕಟ್ಟೋಣಗಳಲ್ಲಿ ಅವರು “ಹಲ್ಲೆಲೂಯಾ” ಮೇಳಗೀತಗಳನ್ನು ಹಾಡುವುದು ಎಂತಹ ಒಂದು ಪರಿಹಾಸವಾಗಿದೆ! ತಮ್ಮ ಬೈಬಲ್ ಭಾಷಾಂತರಗಳಿಂದ ಅವರು ಯೆಹೋವನ ಅಮೂಲ್ಯವಾದ ಹೆಸರನ್ನು ತೆಗೆದುಹಾಕುತ್ತಾರೆ ಆದರೆ “ಹಲ್ಲೆಲ್ಲೂಯಾ” ಅಂದರೆ “ಯಾಹುವನ್ನು ಸ್ತುತಿಸು”—“ಯಾಹು” “ಯೆಹೋವ” ಪದದ ಚುಟುಕುಗೊಳಿಸಲ್ಪಟ್ಟ ರೂಪ—ಎಂಬ ವಾಸ್ತವಾಂಶವನ್ನು ಅವರು ಮರೆತಿರುವಂತೆ ತೋರುತ್ತದೆ. ಸೂಕ್ತವಾಗಿಯೇ, ಪ್ರಕಟನೆ 19:1-6 ಮಹಾ ಬಾಬೆಲಿನ ಮೇಲೆ ದೇವರ ನ್ಯಾಯತೀರ್ಪಿನ ಜಾರಿಗೊಳಿಸುವಿಕೆಯ ಉತ್ಸವಾಚರಣೆಯಲ್ಲಿ ಬೇಗನೇ ಹಾಡಲ್ಪಡಲಿರುವ “ಹಲ್ಲೆಲೂಯಾ” ಮೇಳಗೀತಗಳನ್ನು ದಾಖಲಿಸುತ್ತದೆ.
13, 14. (ಎ) ಬಹುಮುಖ್ಯವಾದ ಯಾವ ಘಟನೆಗಳು ಮುಂದೆ ಸಂಭವಿಸುತ್ತವೆ? (ಬಿ) ದೇವರ ಭಯವುಳ್ಳ ಮಾನವರಿಗೆ ಸಂತೋಷಕರ ಫಲಿತಾಂಶವು ಏನಾಗಿರುವುದು?
13 ಸರದಿಯಲ್ಲಿ ಅನಂತರ, ರಾಷ್ಟ್ರಗಳು ಮತ್ತು ಜನಾಂಗಗಳ ಮೇಲೆ ನ್ಯಾಯತೀರ್ಪನ್ನು ಉಚ್ಚರಿಸಿ ಜಾರಿಗೊಳಿಸಲು ಯೇಸುವಿನ ‘ಆಗಮನವು’ ಇದೆ. ಆತನೇ ಪ್ರವಾದಿಸಿದ್ದು: “ಮನುಷ್ಯಕುಮಾರನು [ಕ್ರಿಸ್ತ ಯೇಸು] ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ ತನ್ನ ಮಹಿಮೆಯ [ನ್ಯಾಯತೀರ್ಪಿನ] ಸಿಂಹಾಸನದಲ್ಲಿ ಕೂತುಕೊಳ್ಳುವನು; ಮತ್ತು [ಭೂಮಿಯ ಮೇಲೆ] ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ ಆತನು ಅವರನ್ನು ಬೇರೆಬೇರೆಮಾಡಿ ಕುರಿಗಳನ್ನು ತನ್ನ ಬಲಗಡೆಯಲ್ಲಿ ಆಡುಗಳನ್ನು ಎಡಗಡೆಯಲ್ಲಿ ನಿಲ್ಲಿಸುವನು. ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ—ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ” ಎಂದು ಹೇಳುವನು. (ಮತ್ತಾಯ 25:31-34) ಆಡು ವರ್ಗವು “ನಿತ್ಯಶಿಕ್ಷೆಗೂ ನೀತಿವಂತರು ನಿತ್ಯಜೀವಕ್ಕೂ ಹೋಗುವರು” ಎಂದು ವಚನ 46 ಮುಂದುವರಿಸುತ್ತಾ ತಿಳಿಸುತ್ತದೆ.
14 “ರಾಜಾಧಿರಾಜನೂ ಕರ್ತರ ಕರ್ತನೂ,” ಆಗಿರುವ ನಮ್ಮ ಸ್ವರ್ಗೀಯ ಕರ್ತನಾದ ಯೇಸು ಕ್ರಿಸ್ತನು ಆ ಸಮಯದಲ್ಲಿ, ಸೈತಾನನ ವ್ಯವಸ್ಥೆಯ ರಾಜಕೀಯ ಮತ್ತು ವಾಣಿಜ್ಯ ಘಟಕಾಂಶಗಳನ್ನು ನಾಶಮಾಡುತ್ತಾ, ಅರ್ಮಗೆದೋನಿನಲ್ಲಿ ಹೋರಾಟದೊಳಗೆ ಸವಾರಿಗೈಯುವ ವಿಧವನ್ನು ಬೈಬಲ್ ಪುಸ್ತಕವಾದ ಪ್ರಕಟನೆಯು ವರ್ಣಿಸುತ್ತದೆ. ಹೀಗೆ ಕ್ರಿಸ್ತನು, ಸೈತಾನನ ಇಡೀ ಭೂ ರಾಜ್ಯದ ಮೇಲೆ “ಸರ್ವಶಕ್ತನಾದ ದೇವರ ಉಗ್ರಕೋಪ”ವನ್ನು ಹೊಯ್ದಿರುವನು. ‘ಮೊದಲಿದ್ದದ್ದೆಲ್ಲಾ ಇಲ್ಲದೆ ಹೋದಂತೆ’ ದೇವಭಯವುಳ್ಳ ಮಾನವರು, ಎಲ್ಲಿ ದೇವರು “ಕಣ್ಣೀರನ್ನೆಲ್ಲಾ ಒರಸಿಬಿಡುವ”ನೋ ಆ ಮಹಿಮಾಭರಿತ ಹೊಸ ಲೋಕದೊಳಗೆ ಕರೆದುಕೊಂಡು ಹೋಗಲ್ಪಡುವರು.—ಪ್ರಕಟನೆ 19:11-16; 21:3-5.
ಯಾಹುವನ್ನು ಸ್ತುತಿಸಲಿಕ್ಕಾಗಿ ಒಂದು ಸಮಯ
15, 16. (ಎ) ನಾವು ಯೆಹೋವನ ಪ್ರವಾದನಾತ್ಮಕ ವಾಕ್ಯಕ್ಕೆ ಲಕ್ಷ್ಯಕೊಡುವುದು ಅತ್ಯಾವಶ್ಯಕವಾಗಿದೆ ಏಕೆ? (ಬಿ) ರಕ್ಷಣೆಗಾಗಿ ನಾವೇನು ಮಾಡಬೇಕೆಂದು ಪ್ರವಾದಿಗಳು ಮತ್ತು ಅಪೊಸ್ತಲರು ಸೂಚಿಸುತ್ತಾರೆ, ಮತ್ತು ಇದು ಇಂದು ಜನಸಮುದಾಯಗಳಿಗೆ ಯಾವ ಅರ್ಥದಲ್ಲಿರಸಾಧ್ಯವಿದೆ?
15 ನ್ಯಾಯತೀರ್ಪನ್ನು ಜಾರಿಗೊಳಿಸುವ ಆ ದಿನವು ಹತ್ತಿರವಿದೆ! ಆದುದರಿಂದ ನಿತ್ಯತೆಯ ಅರಸನ ಪ್ರವಾದನಾತ್ಮಕ ವಾಕ್ಯಕ್ಕೆ ಲಕ್ಷ್ಯಕೊಡುವುದರಲ್ಲಿ ನಾವು ಒಳ್ಳೆಯದನ್ನು ಮಾಡುತ್ತೇವೆ. ಸುಳ್ಳು ಧರ್ಮದ ಬೋಧನೆಗಳು ಮತ್ತು ಪದ್ಧತಿಗಳಲ್ಲಿ ಇನ್ನೂ ಸಿಕ್ಕಿಕೊಂಡಿರುವವರಿಗೆ, ಒಂದು ಸ್ವರ್ಗೀಯ ಧ್ವನಿಯು ಘೋಷಿಸುವುದು: “ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು.” ಆದರೆ ತಪ್ಪಿಸಿಕೊಂಡವರು ಎಲ್ಲಿಗೆ ಹೋಗತಕ್ಕದ್ದು? ಕೇವಲ ಒಂದೇ ಒಂದು ಸತ್ಯ ಇರಸಾಧ್ಯವಿದೆ, ಆದುದರಿಂದ ಕೇವಲ ಒಂದು ಸತ್ಯ ಧರ್ಮವಿರಸಾಧ್ಯವಿದೆ. (ಪ್ರಕಟನೆ 18:4; ಯೋಹಾನ 8:31, 32; 14:6; 17:3) ಆ ಧರ್ಮವನ್ನು ಕಂಡುಹಿಡಿಯುವುದರ ಮತ್ತು ಅದರ ದೇವರಿಗೆ ವಿಧೇಯರಾಗುವುದರ ಮೇಲೆ ನಿತ್ಯ ಜೀವದ ನಮ್ಮ ಗಳಿಸುವಿಕೆಯು ಆಧರಿಸಿದೆ. ಕೀರ್ತನೆ 83:18ರಲ್ಲಿ ಬೈಬಲ್ ನಮ್ಮನ್ನು ಆತನೆಡೆಗೆ ಮಾರ್ಗದರ್ಶಿಸುತ್ತದೆ. ಅದು ಹೀಗೆ ಓದುತ್ತದೆ: “ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.”
16 ಆದಾಗಲೂ, ನಿತ್ಯತೆಯ ಅರಸನ ಹೆಸರನ್ನು ಬರೀ ತಿಳಿಯುವುದಕ್ಕಿಂತ ಹೆಚ್ಚನ್ನು ನಾವು ಮಾಡುವ ಅಗತ್ಯವಿದೆ. ನಾವು ಬೈಬಲನ್ನು ಅಭ್ಯಾಸಿಸಿ ಆತನ ಭವ್ಯ ಗುಣಗಳು ಮತ್ತು ಉದ್ದೇಶಗಳ ಕುರಿತಾಗಿ ಕಲಿಯುವ ಅಗತ್ಯವಿದೆ. ಅನಂತರ ನಾವು ರೋಮಾಪುರ 10:9-13ರಲ್ಲಿ ಸೂಚಿಸಲ್ಪಟ್ಟಿರುವಂತೆ ಈ ಸದ್ಯದ ಸಮಯಕ್ಕೆ ಇರುವ ಆತನ ಚಿತ್ತವನ್ನು ಮಾಡುವ ಅಗತ್ಯವಿದೆ. ಅಪೊಸ್ತಲ ಪೌಲನು ಪ್ರೇರಿತ ಪ್ರವಾದಿಗಳನ್ನು ಉಲ್ಲೇಖಿಸಿ ಸಮಾಪ್ತಿಗೊಳಿಸಿದ್ದು: “ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು.” (ಯೋವೇಲ 2:32; ಚೆಫನ್ಯ 3:9) ರಕ್ಷಿಸಲ್ಪಡುವುದು? ಹೌದು, ಯಾಕಂದರೆ ಸೈತಾನನ ಭ್ರಷ್ಟ ಲೋಕದ ಮೇಲೆ ನ್ಯಾಯತೀರ್ಪು ಜಾರಿಗೊಳಿಸಲ್ಪಡುವಾಗ, ಬರಲಿರುವ ಮಹಾ ಸಂಕಟದಿಂದ, ಕ್ರಿಸ್ತನ ಮೂಲಕ ಯೆಹೋವನ ಪ್ರಾಯಶ್ಚಿತ್ತ ಒದಗಿಸುವಿಕೆಯಲ್ಲಿ ಇಂದು ನಂಬಿಕೆಯನ್ನಿಡುವ ಜನಸಮುದಾಯಗಳು ವಿಮೋಚಿಸಲ್ಪಡುವವು.—ಪ್ರಕಟನೆ 7:9, 10, 14.
17. ಮೋಶೆ ಮತ್ತು ಕುರಿಮರಿಯ ಹಾಡನ್ನು ಹಾಡುವುದರಲ್ಲಿ ಈಗ ಜೊತೆಗೂಡುವಂತೆ ಯಾವ ಭವ್ಯ ನಿರೀಕ್ಷೆಯು ನಮ್ಮನ್ನು ಪ್ರಚೋದಿಸಬೇಕು?
17 ಪಾರಾಗಲು ನಿರೀಕ್ಷಿಸುವವರಿಗಾಗಿ ದೇವರ ಚಿತ್ತವೇನಾಗಿದೆ? ಆತನ ವಿಜಯದ ನಿರೀಕ್ಷೆಯಲ್ಲಿ ನಿತ್ಯತೆಯ ಅರಸನನ್ನು ಸ್ತುತಿಸುತ್ತಾ, ಮೋಶೆ ಮತ್ತು ಕುರಿಮರಿಯ ಹಾಡನ್ನು ಹಾಡುವುದರಲ್ಲಿ ನಾವು ಈಗಲೂ ಜೊತೆಗೂಡುವುದೇ ಆಗಿದೆ. ಇತರರಿಗೆ ಆತನ ಮಹಿಮಾಭರಿತ ಉದ್ದೇಶಗಳ ಕುರಿತಾಗಿ ತಿಳಿಸುವ ಮೂಲಕ ನಾವು ಇದನ್ನು ಮಾಡುತ್ತೇವೆ. ಬೈಬಲ್ ತಿಳಿವಳಿಕೆಯಲ್ಲಿ ನಾವು ಪ್ರಗತಿ ಮಾಡಿದಂತೆ, ನಾವು ನಿತ್ಯತೆಯ ಅರಸನಿಗೆ ನಮ್ಮ ಜೀವಿತಗಳನ್ನು ಸಮರ್ಪಿಸಿಕೊಳ್ಳುತ್ತೇವೆ. ಯೆಶಾಯ 65:17, 18ರಲ್ಲಿ ಕಂಡುಕೊಳ್ಳಲ್ಪಡುವಂತೆ, ಈ ಬಲಿಷ್ಠ ರಾಜನು ವರ್ಣಿಸುವಂತಹ ಏರ್ಪಾಡಿನ ಕೆಳಗೆ ಎಲ್ಲಾ ನಿತ್ಯತೆಗೂ ನಾವು ಜೀವಿಸುವದಕ್ಕೆ ಅದು ನಡಿಸುವುದು: “ನೂತನಾಕಾಶಮಂಡಲವನ್ನೂ [ಯೇಸುವಿನ ಮೆಸ್ಸೀಯ ಸಂಬಂಧಿತ ರಾಜ್ಯ] ನೂತನಭೂಮಂಡಲವನ್ನೂ [ಮಾನವಕುಲದ ಒಂದು ನೀತಿಯ ಹೊಸ ಸಮಾಜ] ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು; ಅದು ನೆನಪಿಗೆ ಬಾರದು. ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ.”
18, 19. (ಎ) ಕೀರ್ತನೆ 145ರಲ್ಲಿರುವ ದಾವೀದನ ಮಾತುಗಳು ಏನು ಮಾಡುವಂತೆ ನಮ್ಮನ್ನು ಹುರಿದುಂಬಿಸಬೇಕು? (ಬಿ) ಯೆಹೋವನ ಹಸ್ತದಿಂದ ನಾವು ಭರವಸೆಯಿಂದ ಏನನ್ನು ನಿರೀಕ್ಷಿಸಸಾಧ್ಯವಿದೆ?
18 ಕೀರ್ತನೆಗಾರನಾದ ದಾವೀದನು ನಿತ್ಯತೆಯ ಅರಸನನ್ನು ಈ ಮಾತುಗಳಲ್ಲಿ ವರ್ಣಿಸಿದನು: “ಯೆಹೋವನು ಮಹೋನ್ನತನೂ ಮಹಾಸ್ತುತಿಪಾತ್ರನೂ ಆಗಿದ್ದಾನೆ; ಆತನ ಮಹತ್ತು ಅಪಾರವಾದದ್ದು.” (ಕೀರ್ತನೆ 145:3) ಆತನ ಮಹೋನ್ನತೆಯು ಬಾಹ್ಯಾಕಾಶ ಮತ್ತು ನಿತ್ಯತೆಯ ಮಿತಿಗಳಷ್ಟು ಹುಡುಕಲಸಾಧ್ಯವಾದದ್ದಾಗಿದೆ! (ರೋಮಾಪುರ 11:33) ನಮ್ಮ ಸೃಷ್ಟಿಕರ್ತನ ಮತ್ತು ಆತನ ಮಗನಾದ ಕ್ರಿಸ್ತ ಯೇಸುವಿನ ಮೂಲಕ ಆತನ ಪ್ರಾಯಶ್ಚಿತ್ತ ಯಜ್ಞದ ಒದಗಿಸುವಿಕೆಯ ಕುರಿತಾಗಿ ನಾವು ಜ್ಞಾನವನ್ನು ತೆಗೆದುಕೊಳ್ಳುತ್ತಾ ಮುಂದುವರಿದಂತೆ, ನಾವು ನಮ್ಮ ನಿತ್ಯತೆಯ ಅರಸನನ್ನು ಇನ್ನೂ ಹೆಚ್ಚೆಚ್ಚಾಗಿ ಸ್ತುತಿಸಲು ಬಯಸುವೆವು. ಕೀರ್ತನೆ 145:11-13 ಹೇಳುವಂತೆ ನಾವು ಮಾಡಲು ಬಯಸುವೆವು: “ಅವರು ನಿನ್ನ ರಾಜ್ಯಮಹತ್ತನ್ನು ಪ್ರಸಿದ್ಧಪಡಿಸುವರು; ನಿನ್ನ ಪ್ರತಾಪವನ್ನು ವರ್ಣಿಸುವರು. ಹೀಗೆ ಮಾನವರು ನಿನ್ನ ಶೂರಕೃತ್ಯಗಳನ್ನೂ ನಿನ್ನ ರಾಜ್ಯದ ಮಹಾಪ್ರಭಾವವನ್ನೂ ಗ್ರಹಿಸಿಕೊಳ್ಳುವರು. ನಿನ್ನ ರಾಜ್ಯವು ಶಾಶ್ವತವಾಗಿದೆ; ನಿನ್ನ ಆಳಿಕೆಯು ತಲತಲಾಂತರಕ್ಕೂ ಇರುವದು.”
19 ನಮ್ಮ ದೇವರು ತನ್ನ ವಚನವನ್ನು ಪೂರೈಸುವನೆಂದು ನಾವು ಭರವಸೆಯಿಂದ ನಿರೀಕ್ಷಿಸಬಹುದು: “ನೀನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ.” ನಿತ್ಯತೆಯ ಅರಸನು ನಮ್ಮನ್ನು ಈ ಕಡೆಯ ದಿನಗಳ ಅಂತ್ಯದಲ್ಲೆಲ್ಲಾ ಕೋಮಲವಾಗಿ ನಡಿಸುವನು, ಯಾಕಂದರೆ ದಾವೀದನು ನಮಗೆ ಆಶ್ವಾಸನೆ ನೀಡಿದ್ದು: “ಯೆಹೋವನು ತನ್ನನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾನೆ; ಆದರೆ ಎಲ್ಲಾ ದುಷ್ಟರನ್ನು ಸಂಹರಿಸುತ್ತಾನೆ.”—ಕೀರ್ತನೆ 145:16, 20.
20. ಕೊನೆಯ ಐದು ಕೀರ್ತನೆಗಳಲ್ಲಿ ಧ್ವನಿಸಲ್ಪಟ್ಟಂತೆ, ನಿತ್ಯತೆಯ ಅರಸನ ಆಮಂತ್ರಣಕ್ಕೆ ನೀವು ಹೇಗೆ ಪ್ರತಿಕ್ರಿಯೆ ತೋರಿಸುತ್ತೀರಿ?
20 ಬೈಬಲಿನಲ್ಲಿ ಕೊನೆಯ ಕೀರ್ತನೆಗಳಲ್ಲಿ ಪ್ರತಿಯೊಂದು, “ಹಲ್ಲೆಲೂಯಾ” ಆಮಂತ್ರಣವೊಂದರೊಂದಿಗೆ ಆರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ. ಹೀಗೆ ಕೀರ್ತನೆ 146 ನಮ್ಮನ್ನು ಆಮಂತ್ರಿಸುವುದು: “ಜನರೇ, ಯಾಹುವನ್ನು ಸ್ತುತಿಸಿರಿ! ನನ್ನ ಪ್ರಾಣವೇ, ಯೆಹೋವನನ್ನು ಸ್ತುತಿಸು. ನನ್ನ ಜೀವಮಾನಕಾಲದಲ್ಲಿ ನಾನು ಯೆಹೋವನನ್ನು ಸ್ತುತಿಸುವೆನು. ಜೀವಮಾನವೆಲ್ಲಾ ನನ್ನ ದೇವರನ್ನು ಕೊಂಡಾಡುವೆನು.” ನೀವು ಆ ಕರೆಗೆ ಓಗೊಡುವಿರೋ? ನಿಶ್ಚಯವಾಗಿಯೂ ನೀವು ಆತನನ್ನು ಸ್ತುತಿಸಲು ಬಯಸತಕ್ಕದ್ದು! ಕೀರ್ತನೆ 148:12, 13ರಲ್ಲಿ ವರ್ಣಿಸಲ್ಪಟ್ಟವರ ನಡುವೆ ನೀವು ಇರುವಂತಾಗಲಿ: “ಪ್ರಾಯಸ್ಥರಾದ ಸ್ತ್ರೀಪುರುಷರೂ ಮುದುಕರೂ ಹುಡುಗರೂ ಯೆಹೋವನನ್ನು ಕೊಂಡಾಡಲಿ. ಆತನ ನಾಮವೊಂದೇ ಮಹತ್ವವುಳ್ಳದ್ದು; ಆತನ ಪ್ರಭಾವವು ಭೂಮ್ಯಾಕಾಶಗಳಲ್ಲಿ ಮೆರೆಯುತ್ತದೆ.” “ಜನರೇ, ಯಾಹುವನ್ನು ಸ್ತುತಿಸಿರಿ!” ಎಂಬ ಆಮಂತ್ರಣಕ್ಕೆ ನಾವು ಪೂರ್ಣಹೃದಯದಿಂದ ಪ್ರತಿಕ್ರಿಯೆ ತೋರಿಸೋಣ. ಏಕತೆಯಲ್ಲಿ, ನಿತ್ಯತೆಯ ಅರಸನನ್ನು ನಾವು ಸ್ತುತಿಸೋಣ!
ನಿಮ್ಮ ಹೇಳಿಕೆಯು ಏನಾಗಿದೆ?
◻ ಯೇಸುವಿನ ಅಪೊಸ್ತಲರು ಯಾವುದರ ಕುರಿತಾಗಿ ಮುನ್ನೆಚ್ಚರಿಸಿದರು?
◻ 1914ರಲ್ಲಿ ಆರಂಭಿಸುತ್ತಾ, ಯಾವ ನಿರ್ಣಯಾತ್ಮಕ ಕ್ರಿಯೆಗಳು ನಡೆದಿವೆ?
◻ ಯೆಹೋವನು ಯಾವ ನ್ಯಾಯತೀರ್ಪುಗಳನ್ನು ಜಾರಿಗೊಳಿಸಲಿದ್ದಾನೆ?
◻ ನಿತ್ಯತೆಯ ಅರಸನನ್ನು ಸ್ತುತಿಸಲು ಇದು ಅತೀ ಪ್ರಾಮುಖ್ಯ ಸಮಯವಾಗಿದೆ ಏಕೆ?
[ಪುಟ 19 ರಲ್ಲಿರುವ ಚೌಕ]
ಸಂಕ್ಷೋಭೆಯ ಈ ವಿಪ್ಲವದ ಯುಗ
20ನೆಯ ಶತಮಾನದ ಆರಂಭದಲ್ಲಿ ಸಂಕ್ಷೋಭೆಯ ಯುಗವೊಂದು ಆರಂಭವಾಯಿತು ಎಂಬುದು ಅನೇಕರಿಂದ ಅಂಗೀಕರಿಸಲ್ಪಟ್ಟಿದೆ. ಉದಾಹರಣೆಗಾಗಿ, ಅಮೆರಿಕದ ಸೆನೆಟರ್ ಡ್ಯಾನಿಯಲ್ ಪ್ಯಾಟ್ರಿಕ್ ಮೊಯಿನಿಹಾನ್‌ರಿಂದ, 1993ರಲ್ಲಿ ಪ್ರಕಾಶಿಸಲ್ಪಟ್ಟ ಪಾಂಡಿಮೋನಿಯಮ್ ಎಂಬ ಪುಸ್ತಕದ ಮುನ್ನುಡಿಯಲ್ಲಿ, “1914ರ ವಿಪ್ಲವ”ದ ಕುರಿತು ಒಂದು ಟಿಪ್ಪಣಿಯು ಹೀಗೆ ಹೇಳುತ್ತದೆ: “ಯುದ್ಧವು ಬಂದು ಲೋಕವು ಬದಲಾಯಿತು—ಸಂಪೂರ್ಣವಾಗಿ. ಇಂದು ಲೋಕದಲ್ಲಿ 1914ರಿಂದ ಅಸ್ತಿತ್ವದಲ್ಲಿದ್ದ ಮತ್ತು ಅಂದಿನಿಂದ ಹಿಂಸಾಚಾರದಿಂದ ತಮ್ಮ ಸರಕಾರವನ್ನು ಬದಲಾಯಿಸಿರದ ಕೇವಲ ಎಂಟು ರಾಜ್ಯಗಳಿವೆ. . . . ಉಳಿದಿರುವ 170 ಅಥವಾ ಹೆಚ್ಚು ಸಮಕಾಲೀನ ರಾಜ್ಯಗಳಲ್ಲಿ, ಕೆಲವು ಇತ್ತೀಚಿನ ಸಂಕ್ಷೋಭೆಯನ್ನು ಅನುಭವಿಸಿರಲು ತೀರ ಇತ್ತೀಚೆಗೆ ರಚಿಸಲ್ಪಟ್ಟಿವೆ.” ನಿಜವಾಗಿಯೂ, 1914ರಂದಿನ ಶಕದಿಂದ ಅನೇಕ ವಿಪ್ಲವಗಳನ್ನು ನೋಡಿದೆ!
1993ರಲ್ಲಿ ಔಟ್ ಆಫ್ ಕಂಟ್ರೋಲ್—ಗ್ಲೋಬಲ್ ಟರ್ಮಾಯ್‌ಲ್ ಆನ್ ದಿ ಈವ್ ಆಫ್ ದ ಟ್ವೆಂಟಿ-ಫಸ್ಟ್ ಸೆಂಚುರಿ ಎಂಬ ಪುಸ್ತಕವೂ ಪ್ರಕಾಶಿಸಲ್ಪಟ್ಟಿತು. ಅದರ ಲೇಖಕರು, ಅಮೆರಿಕದ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಮಾಜಿ ಮುಖ್ಯಸ್ಥ, ಸುಬೀಗ್ನೆಫ್ ಬ್ರೇಸಿಂಸ್ಕೀ ಆಗಿದ್ದಾರೆ. ಅವರು ಬರೆಯುವುದು: “ಇಪ್ಪತ್ತನೆಯ ಶತಮಾನದ ಆರಂಭವು ಹಲವಾರು ವ್ಯಾಖ್ಯಾನಗಳಲ್ಲಿ ವಿವೇಚನೆಯ ಯುಗದ ನಿಜವಾದ ಆರಂಭವೆಂದು ಜಯಕಾರವೆತ್ತಲಾಗಿತ್ತು. . . . ಅದರ ವಾಗ್ದಾನಕ್ಕೆ ವ್ಯತಿರಿಕ್ತವಾಗಿ, ಇಪ್ಪತ್ತನೆಯ ಶತಮಾನವು ಮಾನವಕುಲದ ಅತ್ಯಂತ ರಕ್ತಮಯ ಮತ್ತು ದ್ವೇಷಭರಿತ ಶತಮಾನ, ಭ್ರಾಂತಿಗೊಳಿಸುವ ರಾಜಕೀಯ ಮತ್ತು ಬೀಭತ್ಸ ಕೊಲ್ಲುವಿಕೆಗಳ ಒಂದು ಶತಮಾನವಾಗಿ ಪರಿಣಮಿಸಿತು. ಕ್ರೂರತ್ವವು ಹಿಂದೆಂದೂ ಕಂಡಿಲ್ಲದ ಒಂದು ಮಟ್ಟಕ್ಕೆ ವ್ಯವಸ್ಥಾಪಿಸಲ್ಪಟ್ಟಿತು, ಕೊಲ್ಲುವಿಕೆಯು ಒಂದು ಸಾಮೂಹಿಕ ಉತ್ಪಾದನೆಯ ಮಟ್ಟದಲ್ಲಿ ವ್ಯವಸ್ಥಾಪಿಸಲ್ಪಟ್ಟಿತು. ಒಳ್ಳೆಯದಕ್ಕಾಗಿರುವ ವೈಜ್ಞಾನಿಕ ಸಾಮರ್ಥ್ಯ ಮತ್ತು ವಾಸ್ತವವಾಗಿ ಹೊರಡಿಸಲ್ಪಟ್ಟ ರಾಜಕೀಯ ಕೆಡುಕಿನ ನಡುವಿನ ವ್ಯತ್ಯಾಸವು ದಿಗ್ಭ್ರಮೆಗೊಳಿಸುವಂತಹದ್ದಾಗಿತ್ತು. ಇತಿಹಾಸದಲ್ಲಿ ಎಂದೂ ಕೊಲ್ಲುವಿಕೆಯು ಇಷ್ಟು ಭೌಗೋಲಿಕವಾಗಿ ವ್ಯಾಪಿಸಿರಲಿಲ್ಲ, ಹಿಂದೆಂದೂ ಅದು ಇಷ್ಟೊಂದು ಜೀವಗಳನ್ನು ನಾಶಮಾಡಿರಲಿಲ್ಲ, ಮಾನವ ವಿನಾಶವು ಇಷ್ಟೊಂದು ದುರಹಂಕಾರದ ಅಸಹಜ ಗುರಿಗಳ ಪರವಾಗಿ ಸತತವಾದ ಪ್ರಯತ್ನದ ಇಷ್ಟೊಂದು ಚಿತ್ತೈಕಾಗ್ರತೆಯೊಂದಿಗೆ ಹಿಂದೆಂದೂ ಬೆನ್ನಟ್ಟಲ್ಪಟ್ಟಿರಲಿಲ್ಲ.” ಅದೆಷ್ಟು ಸತ್ಯವಾಗಿದೆ!
[ಪುಟ 17 ರಲ್ಲಿರುವ ಚಿತ್ರ]
ಮೀಕಾಯೇಲನು ಸೈತಾನನನ್ನು ಮತ್ತು ಅವನ ಪಡೆಗಳನ್ನು 1914ರಲ್ಲಿ ರಾಜ್ಯದ ಸ್ಥಾಪನೆಯ ನಂತರ ಭೂಮಿಗೆ ದೊಬ್ಬಿದನು