ಅಂತಿಯೋಕ್ಯದ ತೀಯಫೆಲಸ್ ಯಾರಾಗಿದ್ದನು?
“ಇದು ಹೊಂದಲು ಒಂದು ನಿಂದನೀಯ ಹೆಸರಾಗಿದೆಯೋ ಎಂಬಂತೆ, ನೀನು ನನ್ನನ್ನು ಒಬ್ಬ ಕ್ರೈಸ್ತನೆಂದು ಕರೆಯುತ್ತೀ, ನಾನಾದರೋ, ನಾನು ಒಬ್ಬ ಕ್ರೈಸ್ತನೆಂದು ಮತ್ತು ದೇವರಿಗೆ ಉಪಯುಕ್ತನಾಗಿರುವುದನ್ನು ನಿರೀಕ್ಷಿಸುತ್ತಾ ದೇವರಿಗೆ ಪ್ರಿಯವಾದ ಈ ಹೆಸರನ್ನು ಹೊರುತ್ತೇನೆಂದು ಪ್ರಕಟವಾಗಿ ಘೋಷಿಸುತ್ತೇನೆ.”
ಹೀಗೆ ತೀಯಫೆಲಸನು ತೀಯಫೆಲಸ್ ಟು ಒಟೊಲೆಕಸ್ (ತೀಯಫೆಲಸ್ನಿಂದ ಆಟೊಲಿಕಸನಿಗೆ) ಎಂಬ ಶೀರ್ಷಿಕೆಯ ತನ್ನ ಮೂರು ಭಾಗಗಳ ಕೃತಿಯನ್ನು ಪ್ರಾರಂಭಿಸುತ್ತಾನೆ. ಎರಡನೆಯ ಶತಮಾನದ ಧರ್ಮಭ್ರಷ್ಟತೆಯ ವಿರುದ್ಧವಾದ ಅವನ ಸಮರ್ಥನೆಯ ಆರಂಭ ಅದಾಗಿದೆ. ತೀಯಫೆಲಸ್ ತನ್ನನ್ನು ಕ್ರಿಸ್ತನ ಹಿಂಬಾಲಕನಾಗಿ ಧೈರ್ಯದಿಂದ ಗುರುತಿಸಿಕೊಳ್ಳುತ್ತಾನೆ. “ದೇವರಿಗೆ ಪ್ರಿಯ”ನಾದವನಾಗಿ—ಅವನ ಹೆಸರಿನ ಗ್ರೀಕ್ ಭಾಷೆಯ ಅರ್ಥಕ್ಕೆ ಹೊಂದಾಣಿಕೆಯಲ್ಲಿ—ಪರಿಣಮಿಸಲಿಕ್ಕೆ ತನ್ನ ವ್ಯವಹಾರಗಳನ್ನು ನಡಸಲು ಅವನು ನಿರ್ಧರಿತನಾಗಿರುವಂತೆ ತೋರುತ್ತಾನೆ. ತೀಯಫೆಲಸ್ ಯಾರಾಗಿದ್ದನು? ಅವನು ಯಾವಾಗ ಜೀವಿಸಿದನು? ಮತ್ತು ಅವನು ಏನನ್ನು ಸಾಧಿಸಿದನು?
ವೈಯಕ್ತಿಕ ಇತಿಹಾಸ
ತೀಯಫೆಲಸನ ವೈಯಕ್ತಿಕ ಇತಿಹಾಸದ ಕುರಿತಾಗಿ ಸ್ವಲ್ಪವೇ ಜ್ಞಾತವಾಗಿದೆ. ಅವನು ಅಕ್ರೈಸ್ತ ಹೆತ್ತವರಿಂದ ಬೆಳಸಲ್ಪಟ್ಟಿದ್ದನು. ತೀಯಫೆಲಸ್ ಅನಂತರ ಕ್ರೈಸ್ತತ್ವಕ್ಕೆ ಪರಿವರ್ತಿತನಾದನು ಆದರೆ ಶಾಸ್ತ್ರಗಳ ಒಂದು ಜಾಗರೂಕ ಅಧ್ಯಯನದ ನಂತರವೇ. ಅವನು, ಇಂದು ಟರ್ಕಿಯಲ್ಲಿ ಅನ್ಟಾಕ್ಯಾವೆಂದು ಜ್ಞಾತವಾಗಿರುವ, ಸಿರಿಯನ್ ಅಂತಿಯೋಕ್ಯದಲ್ಲಿನ ಸಭೆಯ ಬಿಷಪನಾದನು.
ಯೇಸುವಿನ ಆಜ್ಞೆಗೆ ಹೊಂದಿಕೆಯಲ್ಲಿ, ಪ್ರಥಮ ಶತಮಾನದ ಕ್ರೈಸ್ತರು ಅಂತಿಯೋಕ್ಯದ ಜನರ ನಡುವೆ ಸಾರಿದರು. ಲೂಕನು ಹೀಗೆ ಹೇಳುತ್ತಾ ಅವರ ಯಶಸ್ಸನ್ನು ವರದಿಸಿದನು: “ಕರ್ತನ ಹಸ್ತವು ಅವರಿಗೆ ಸಹಾಯವಾದ್ದರಿಂದ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿಕೊಂಡರು.” (ಅ. ಕೃತ್ಯಗಳು 11:20, 21) ದೈವಿಕವಾಗಿ ಮಾರ್ಗದರ್ಶಿಸಲ್ಪಟ್ಟಂತೆ, ಯೇಸು ಕ್ರಿಸ್ತನ ಹಿಂಬಾಲಕರು ಕ್ರೈಸ್ತರೆಂದು ಜ್ಞಾತರಾದರು. ಈ ಪದವು ಪ್ರಥಮವಾಗಿ ಸಿರಿಯನ್ ಅಂತಿಯೋಕ್ಯದಲ್ಲಿ ಅನ್ವಯಿಸಲ್ಪಟ್ಟಿತು. (ಅ. ಕೃತ್ಯಗಳು 11:26) ಸಾ.ಶ. ಪ್ರಥಮ ಶತಮಾನದಲ್ಲಿ, ಅಪೊಸ್ತಲ ಪೌಲನು ಸಿರಿಯನ್ ಅಂತಿಯೋಕ್ಯಕ್ಕೆ ಪ್ರಯಾಣಿಸಿದನು, ಮತ್ತು ಅದು ಅವನ ಮನೆ ನೆಲೆಗಟ್ಟಾಯಿತು. ಬಾರ್ನಬ ಮತ್ತು ಪೌಲ, ಮಾರ್ಕನೆನಸಿಕೊಂಡ ಯೋಹಾನನೊಂದಿಗೆ ಜೊತೆಗೂಡಲ್ಪಟ್ಟು, ಅಂತಿಯೋಕ್ಯದಿಂದ ತಮ್ಮ ಪ್ರಥಮ ಮಿಷನೆರಿ ಪ್ರವಾಸದಲ್ಲಿ ತೊಡಗಿದರು.
ಅಂತಿಯೋಕ್ಯದ ಆದಿ ಕ್ರೈಸ್ತರು ತಮ್ಮ ನಗರಕ್ಕೆ ಅಪೊಸ್ತಲರ ಭೇಟಿಗಳಿಂದ ಮಹತ್ತಾಗಿ ಉತ್ತೇಜಿಸಲ್ಪಟ್ಟಿದ್ದಿರಬೇಕು. ದೇವರ ವಾಕ್ಯದ ಸತ್ಯಕ್ಕೆ ಅವರ ಉತ್ಸಾಹಭರಿತ ಪ್ರತಿಕ್ರಿಯೆಯು ಅಂಶಿಕವಾಗಿ, ಆಡಳಿತ ಮಂಡಳಿಯ ಪ್ರಥಮ ಶತಮಾನದ ಪ್ರತಿನಿಧಿಗಳ ನಂಬಿಕೆಯನ್ನು ಬಲಪಡಿಸುವ ಭೇಟಿಗಳಿಂದಾಗಿತ್ತು ಎಂಬುದು ನಿಸ್ಸಂದೇಹ. (ಅ. ಕೃತ್ಯಗಳು 11:22, 23) ಅಂತಿಯೋಕ್ಯದ ಇಷ್ಟೊಂದು ನಿವಾಸಿಗಳು ಯೆಹೋವ ದೇವರಿಗೆ ತಮ್ಮ ಜೀವಿತಗಳನ್ನು ಸಮರ್ಪಿಸುವುದನ್ನು ನೋಡುವುದು ಅವರಿಗೆಷ್ಟು ಉತ್ತೇಜನಕರವಾಗಿದ್ದಿದ್ದಿರಬೇಕು! ಆದರೂ, ತೀಯಫೆಲಸನು ಅಂತಿಯೋಕ್ಯದಲ್ಲಿ ಜೀವಿಸಿದ್ದು 100ಕ್ಕಿಂತಲೂ ಹೆಚ್ಚು ವರ್ಷಗಳ ಬಳಿಕವೇ.
ಕ್ರಿಸ್ತನ ಅಪೊಸ್ತಲರ ಸಮಯದಿಂದ ಹಿಡಿದು ಲೆಕ್ಕ ಮಾಡುತ್ತಾ ತೀಯಫೆಲಸನು ಅಂತಿಯೋಕ್ಯದ ಆರನೆಯ ಬಿಷಪನಾಗಿದ್ದನು ಎಂದು ಇತಿಹಾಸಗಾರನಾದ ಯುಸೀಬಿಯಸನು ತಿಳಿಸಿದನು. ತೀಯಫೆಲಸನು ಪಾಷಂಡವಾದದ ವಿರುದ್ಧವಾದ ಗಣನೀಯ ಸಂಖ್ಯೆಯ ಮೌಖಿಕ ಚರ್ಚೆಗಳನ್ನು ಮತ್ತು ಖಂಡನೆಯ ವಾದಗಳನ್ನು ಬರೆದನು. ಅವನ ದಿನದ ಹನ್ನೆರಡು ಅಥವಾ ಹೆಚ್ಚು ಕ್ರೈಸ್ತ ಸಮರ್ಥಕರಲ್ಲಿ ಅವನನ್ನು ಸೇರಿಸಲಾಗಿದೆ.
ಅವನ ಬರವಣಿಗೆಗಳ ಕಡೆಗೆ ಒಂದು ನೋಟ
ಈ ಮುಂಚಿನ ಒಂದು ಸಂವಾದಕ್ಕೆ ಪ್ರತಿಕ್ರಿಯಿಸುತ್ತಾ, ತೀಯಫೆಲಸನು ವಿಧರ್ಮಿ ಒಟೊಲೆಕಸನಿಗೆ ಈ ಆರಂಭದ ಮಾತುಗಳೊಂದಿಗೆ ಬರೆಯುತ್ತಾನೆ: “ಒಂದು ವಾಗ್ಝರಿಯ ನಾಲಿಗೆ ಮತ್ತು ಒಂದು ನಯವಾದ ಶೈಲಿಯು, ಯಾವುದರಲ್ಲಿ ವ್ಯರ್ಥತೆಯು ಹರ್ಷಪಡುತ್ತದೊ ಅಂತಹ ಆಹ್ಲಾದವನ್ನು ಮತ್ತು ಸ್ತುತಿಯನ್ನು, ಮನಸ್ಸಿನಲ್ಲಿ ಭ್ರಷ್ಟಗೊಳಿಸಲ್ಪಟ್ಟಿರುವ ತುಚ್ಛ ಮನುಷ್ಯರಿಗೆ ಕೊಡುತ್ತದೆ.” ಹೀಗೆ ಹೇಳುತ್ತಾ ತೀಯಫೆಲಸನು ವಿವರಿಸುತ್ತಾನೆ: “ಸತ್ಯವನ್ನು ಪ್ರೀತಿಸುವವನು ಅಲಂಕೃತವಾದ ಭಾಷಣಗಳಿಗೆ ಗಮನಕೊಡುವುದಿಲ್ಲ, ಬದಲಾಗಿ ಭಾಷಣದ ನಿಜವಾದ ಭಾವವನ್ನು ಪರೀಕ್ಷಿಸುತ್ತಾನೆ . . . ಮರ ಮತ್ತು ಕಲ್ಲಿನ, ಸುತ್ತಿಗೆಯಿಂದ ಕುಟ್ಟಲ್ಪಟ್ಟ ಮತ್ತು ಎರಕಹೊಯ್ಯಲ್ಪಟ್ಟ, ಕೆತ್ತಲ್ಪಟ್ಟ ಮತ್ತು ಕೊರೆಯಲ್ಪಟ್ಟ, ನಿಮ್ಮ ದೇವರುಗಳ ಕುರಿತಾಗಿ ಕೊಚ್ಚಿಕೊಳ್ಳುತ್ತಾ ನೀನು ಪೊಳ್ಳಾದ ಮಾತುಗಳಿಂದ ನನ್ನ ಮೇಲೆ ಎರಗಿದ್ದೀ. ಅವು ನೋಡಲಾರವು ಅಥವಾ ಕೇಳಿಸಿಕೊಳ್ಳಲಾರವು, ಯಾಕಂದರೆ ಅವು ಮೂರ್ತಿಗಳಾಗಿವೆ, ಮತ್ತು ಮನುಷ್ಯನ ಕೈಕೆಲಸಗಳಾಗಿವೆ.”—ಕೀರ್ತನೆ 115:4-8ನ್ನು ಹೋಲಿಸಿ.
ತೀಯಫೆಲಸನು ವಿಗ್ರಹಾರಾಧನೆಯ ತಪ್ಪನ್ನು ಬಯಲುಗೊಳಿಸುತ್ತಾನೆ. ಅವನ ಸಾಮಾನ್ಯ ಬರವಣಿಗೆಯ ಶೈಲಿಯಲ್ಲಿ, ಮಿತಿಮೀರಿದ ಪದಪ್ರಯೋಗವಿದ್ದರೂ, ಅವನು ವಾಗ್ವೈಖರಿಯಿಂದ ಸತ್ಯ ದೇವರ ನೈಜ ಸ್ಥಿತಿಯನ್ನು ತಿಳಿಸಲು ಪ್ರಯತ್ನಿಸುತ್ತಾನೆ. ಅವನು ವಿವರಿಸುವುದು: “ದೇವರ ತೋರಿಕೆಯು ವರ್ಣನಾತೀತ, ಮತ್ತು ಮಾನವ ಕಣ್ಣುಗಳಿಂದ ನೋಡಲಸಾಧ್ಯ. ಯಾಕಂದರೆ ಮಹಿಮೆಯಲ್ಲಿ ಆತನು ಅಪರಿಮಿತನಾಗಿದ್ದಾನೆ, ಮಹೋನ್ನತೆಯಲ್ಲಿ ಅಳೆಯಲಸಾಧ್ಯನಾಗಿದ್ದಾನೆ, ಔನತ್ಯದಲ್ಲಿ ಯೋಚಿಸಲಸಾಧ್ಯನಾಗಿದ್ದಾನೆ, ಶಕ್ತಿಯಲ್ಲಿ ಹೋಲಿಸಲಾರದವನು, ವಿವೇಕದಲ್ಲಿ ಸಾಟಿಯಿಲ್ಲದವನು, ಒಳ್ಳೆಯತನದಲ್ಲಿ ಅನುಕರಿಸಲಸಾಧ್ಯನು, ದಯೆಯಲ್ಲಿ ವರ್ಣಿಸಲಾಗದವನು ಆಗಿದ್ದಾನೆ.”
ದೇವರ ಕುರಿತಾದ ಈ ವರ್ಣನೆಗೆ ಕೂಡಿಸುತ್ತಾ, ತೀಯಫೆಲಸ್ ಮುಂದುವರಿಸುವುದು: “ಆದರೆ ಆತನು ಕರ್ತನಾಗಿದ್ದಾನೆ, ಯಾಕಂದರೆ ಆತನು ವಿಶ್ವವನ್ನು ಆಳುತ್ತಾನೆ; ತಂದೆಯಾಗಿದ್ದಾನೆ, ಯಾಕಂದರೆ ಎಲ್ಲಾ ವಿಷಯಗಳಿಗಿಂತ ಮುಂಚೆ ಆತನು ಇದ್ದನು; ಸೊಗಸುಗಾರನು ಮತ್ತು ನಿರ್ಮಾಣಿಕನು, ಯಾಕಂದರೆ ಆತನು ಸೃಷ್ಟಿಕರ್ತನು ಮತ್ತು ವಿಶ್ವದ ನಿರ್ಮಾಣಿಕನು ಆಗಿದ್ದಾನೆ; ಅತಿ ಉನ್ನತನು ಯಾಕಂದರೆ ಆತನು ಎಲ್ಲರಿಗಿಂತಲೂ ಶ್ರೇಷ್ಠನಾಗಿದ್ದಾನೆ; ಮತ್ತು ಸರ್ವಶಕ್ತನು ಯಾಕಂದರೆ, ಸ್ವತಃ ಆತನು ಎಲ್ಲರನ್ನು ಆಳುತ್ತಾನೆ ಮತ್ತು ಆವರಿಸುತ್ತಾನೆ.”
ಮುಂದೆ, ದೇವರ ನಿರ್ದಿಷ್ಟ ಸಾಧನೆಗಳ ಮೇಲೆ ಕೇಂದ್ರೀಕರಿಸುತ್ತಾ, ತೀಯಫೆಲಸನು ತನ್ನ ಸಮಗ್ರ ಮತ್ತು ಸಾಧಾರಣ ಪುನರುಚ್ಚರಣೆಯ ಶೈಲಿಯ ಒಂದು ನಮೂನೆಯಲ್ಲಿ ಮುಂದುವರಿಯುತ್ತಾ ಹೇಳುತ್ತಾನೆ: “ಯಾಕಂದರೆ ಪರಲೋಕವು ಆತನ ಕೆಲಸವಾಗಿದೆ, ಭೂಮಿಯು ಆತನ ಸೃಷ್ಟಿಯಾಗಿದೆ, ಸಮುದ್ರವು ಆತನ ಕೈಕೆಲಸ; ಮನುಷ್ಯನು ಆತನ ರಚನೆ ಮತ್ತು ಆತನ ಪ್ರತಿರೂಪವಾಗಿದ್ದಾನೆ; ಸೂಚನೆಗಳು, ಕಾಲಗಳು, ದಿನಗಳು ಮತ್ತು ವರ್ಷಗಳಿಗಾಗಿ ಮಾಡಲ್ಪಟ್ಟು, ಅವು ಮನುಷ್ಯರಿಗೆ ಸೇವೆ ಸಲ್ಲಿಸಿ ದಾಸರಾಗಿರುವಂತೆ ಸೂರ್ಯ, ಚಂದ್ರ, ಮತ್ತು ನಕ್ಷತ್ರಗಳು ಆತನ ಘಟಕಾಂಶಗಳಾಗಿವೆ; ಮತ್ತು ಆತನ ಕಾರ್ಯಗಳ ಮೂಲಕ ಆತನ ಮಹೋನ್ನತೆಯು ತಿಳಿಯಲ್ಪಟ್ಟು ಗ್ರಹಿಸಲ್ಪಡಲಿಕ್ಕಾಗಿ ಎಲ್ಲಾ ವಿಷಯಗಳನ್ನು ದೇವರು ಇಲ್ಲದಂತಹ ವಿಷಯಗಳಿಂದ ಇರುವಂತಹ ವಿಷಯಗಳಾಗಿ ಮಾಡಿದ್ದಾನೆ.”
ತನ್ನ ದಿನದ ಸುಳ್ಳು ದೇವರುಗಳ ಮೇಲೆ ತೀಯಫೆಲಸನ ಆಕ್ರಮಣದ ಒಂದು ಹೆಚ್ಚಿನ ನಮೂನೆಯು, ಒಟೊಲೆಕಸನಿಗೆ ಆತನ ಮುಂದಿನ ಮಾತುಗಳಲ್ಲಿ ಗಮನಕ್ಕೆ ಬರುತ್ತದೆ: “ನೀವು ಆರಾಧಿಸುತ್ತೀರೆಂದು ನೀವು ಹೇಳುವವರ ಹೆಸರುಗಳು, ಸತ್ತ ಮನುಷ್ಯರ ಹೆಸರುಗಳಾಗಿವೆ. . . . ಮತ್ತು ಅವರು ಯಾವ ರೀತಿಯ ಮನುಷ್ಯರಾಗಿದ್ದರು? ತನ್ನ ಸ್ವಂತ ಮಕ್ಕಳನ್ನು ನಾಶಮಾಡಿ ಕಬಳಿಸುವ ಸಾಟರ್ನ್ ಒಬ್ಬ ನರಭಕ್ಷಕನಲ್ಲವೊ? ಮತ್ತು ನೀವು ಆತನ ಮಗನನ್ನು ಜುಪಿಟರ್ ಎಂದು ಹೆಸರಿಸುವಲ್ಲಿ . . . ಅವನು ಒಂದು ಆಡಿನಿಂದ ಮೊಲೆಯುಣಿಸಲ್ಪಟ್ಟ ವಿಧ . . . ಮತ್ತು ಅವನ ಇತರ ಕೃತ್ಯಗಳು—ಆತನ ಅಗಮ್ಯಗಮನ, ಮತ್ತು ವ್ಯಭಿಚಾರ ಮತ್ತು ಕಾಮಾಸಕ್ತಿ.”
ತನ್ನ ವಾದವನ್ನು ಮುಂದುವರಿಸುತ್ತಾ, ತೀಯಫೆಲಸನು ವಿಧರ್ಮಿ ವಿಗ್ರಹಾರಾಧನೆಗೆ ವಿರೋಧದಲ್ಲಿ ತನ್ನ ನಿಲುವನ್ನು ದೃಢಪಡಿಸುತ್ತಾನೆ. ಅವನು ಬರೆಯುವುದು: “ಐಗುಪ್ತ್ಯರಿಂದ ಆರಾಧಿಸಲ್ಪಡುವ ಪ್ರಾಣಿಗಳ ಗುಂಪನ್ನು, ಸರೀಸೃಪಗಳು ಹಾಗೂ ದನಕರು, ಮತ್ತು ಕಾಡುಮೃಗಗಳು ಮತ್ತು ಪಕ್ಷಿಗಳು ಮತ್ತು ನದಿ ಮೀನುಗಳನ್ನು ನಾನು ಮುಂದುವರಿಸುತ್ತಾ ನೆನಪಿಸಬೇಕೊ? . . . ಗ್ರೀಕ್ ಜನರು ಮತ್ತು ಇತರ ಜನಾಂಗಗಳು, ಅವರು ಕಲ್ಲುಗಳು ಮತ್ತು ಮರ, ಮತ್ತು ಇತರ ವಿಧಗಳ ಭೌತಿಕ ವಸ್ತುಗಳನ್ನು ಆರಾಧಿಸುತ್ತಾರೆ.” “ಆದರೆ ನಾನು ದೇವರನ್ನು, ಜೀವಂತನಾಗಿರುವ ಮತ್ತು ಸತ್ಯವಾಗಿರುವ ದೇವರನ್ನು ಆರಾಧಿಸುತ್ತೇನೆ,” ಎಂದು ತೀಯಫೆಲಸನು ಘೋಷಿಸುತ್ತಾನೆ.—2 ಸಮುವೇಲ 22:47ನ್ನು ಹೋಲಿಸಿರಿ; ಅ. ಕೃತ್ಯಗಳು 14:15; ರೋಮಾಪುರ 1:22, 23.
ಬೆಲೆಬಾಳುವ ಸಾಕ್ಷ್ಯ
ಒಟೊಲೆಕಸನು ತಪ್ಪೆಂದು ಸಿದ್ಧಪಡಿಸುತ್ತಾ ತೀಯಫೆಲಸನು ಬರೆದ ಮೂರು ಭಾಗದ ಕೃತಿಯಲ್ಲಿನ ಬುದ್ಧಿವಾದಗಳು ಮತ್ತು ಉತ್ತೇಜನಗಳು ಬಹುಮುಖವುಳ್ಳದ್ದೂ ವಿವರಣಾತ್ಮಕವೂ ಆಗಿವೆ. ತೀಯಫೆಲಸನ ಇತರ ಬರವಣಿಗೆಗಳು ಹೆರ್ಮೊಜಿನಿಸ್ ಮತ್ತು ಮಾರ್ಸ್ಯಿನ್ನ ವಿರುದ್ಧ ನಿರ್ದೇಶಿಸಲ್ಪಟ್ಟಿವೆ. ಅವನು ಸುವಾರ್ತೆಗಳ ಮೇಲೆ ವ್ಯಾಖ್ಯಾನಗಳನ್ನು ಕೂಡಿಸುತ್ತಾ, ಉಪದೇಶ ಮತ್ತು ತಿಳಿವಳಿಕೆಯನ್ನು ಕೊಡುವ ಪುಸ್ತಕಗಳನ್ನೂ ಬರೆದನು. ಆದಾಗಲೂ, ಕೇವಲ ಒಟೊಲೆಕಸನಿಗೆ ಬರೆಯಲ್ಪಟ್ಟ ಮೂರು ಪುಸ್ತಕಗಳ, ಒಂದು ಏಕಮಾತ್ರ ಹಸ್ತಪ್ರತಿಯು ಸಂರಕ್ಷಿಸಲ್ಪಟ್ಟಿದೆ.
ಪ್ರಥಮ ಪುಸ್ತಕವು ಕ್ರೈಸ್ತ ಧರ್ಮದ ಸಮರ್ಥನೆಯಲ್ಲಿ ಒಟೊಲೆಕಸನಿಗೆ ಬರೆಯಲ್ಪಟ್ಟ ಒಂದು ಸಮರ್ಥನೆಯಾಗಿದೆ. ಒಟೊಲೆಕಸನಿಗೆ ಬರೆಯಲ್ಪಟ್ಟ ಎರಡನೆಯ ಪುಸ್ತಕವು ಜನಪ್ರಿಯ ವಿಧರ್ಮಿ ಧರ್ಮ, ಊಹಾಪೋಹ, ತತ್ವಜ್ಞಾನಿಗಳು ಮತ್ತು ಕವಿಗಳ ವಿರುದ್ಧವಾಗಿ ವಾದಿಸುತ್ತದೆ. ತೀಯಫೆಲಸನ ಮೂರನೆಯ ಪುಸ್ತಕದಲ್ಲಿ ವಿಧರ್ಮಿ ಸಾಹಿತ್ಯವು ಶಾಸ್ತ್ರವಚನಗಳೊಂದಿಗೆ ಹೋಲಿಸಲ್ಪಟ್ಟಿದೆ.
ತೀಯಫೆಲಸನ ಮೂರನೆಯ ಪುಸ್ತಕದ ಪ್ರಾರಂಭದಲ್ಲಿ, ಒಟೊಲೆಕಸನು ಇನ್ನೂ, ಸತ್ಯದ ವಾಕ್ಯವು ಒಂದು ಕಟ್ಟುಕಥೆಯಾಗಿದೆಯೆಂಬ ಅಭಿಪ್ರಾಯದವನಾಗಿದ್ದನು ಎಂಬುದು ಸುವ್ಯಕ್ತ. ತೀಯಫೆಲಸ್ ಹೀಗೆ ವಾದಿಸುತ್ತಾ, ಒಟೊಲೆಕಸನನ್ನು ಟೀಕಿಸುತ್ತಾನೆ: “ನೀನು ಮೂರ್ಖರನ್ನು ಸಂತೋಷದಿಂದ ತಾಳಿಕೊಳ್ಳುತ್ತೀ. ಇಲ್ಲದಿದ್ದಲ್ಲಿ, ಪೊಳ್ಳಾದ ಮಾತುಗಳಿಗೆ ಬಗ್ಗಲು ನೀನು ಮೂರ್ಖ ಮನುಷ್ಯರಿಂದ ಪ್ರೇರಿಸಲ್ಪಡುತ್ತಿರಲಿಲ್ಲ, ಮತ್ತು ಆ ಚಾಲ್ತಿಯಲ್ಲಿರುವ ವದಂತಿಯನ್ನು ನಂಬುತ್ತಿರಲಿಲ್ಲ.”
ಆ ‘ಚಾಲ್ತಿಯಲ್ಲಿದ್ದ ವದಂತಿ’ ಏನಾಗಿತ್ತು? ತೀಯಫೆಲಸ್ ಆ ಮೂಲವನ್ನು ಪ್ರಕಟಪಡಿಸುತ್ತಾನೆ. “ನಮ್ಮೆಲ್ಲರ ಹೆಂಡತಿಯರನ್ನು ಲೈಂಗಿಕ ಉದ್ದೇಶಗಳಿಗಾಗಿ ಹಂಚಿಕೊಳ್ಳಲಾಗುತ್ತದೆಂದು; ಮತ್ತು ನಾವು ನಮ್ಮ ಸ್ವಂತ ಸಹೋದರಿಯರೊಂದಿಗೆ ಅಗಮ್ಯಗಮನವನ್ನು ನಡಸುತ್ತೇವೆಂದು ಸಹ, ಮತ್ತು ಎಲ್ಲಕ್ಕಿಂತಲೂ ತೀರ ಅಧಾರ್ಮಿಕ ಮತ್ತು ಪಾಶವೀಯಾಗಿರುವ ಸಂಗತಿ, ನಾವು ಮಾನವ ಮಾಂಸವನ್ನು ತಿನ್ನುತ್ತೇವೆಂದು ಆರೋಪ ಹೊರಿಸುತ್ತಾ, ದೇವರ ಆರಾಧಕರಾಗಿರುವ ಮತ್ತು ಕ್ರೈಸ್ತರೆಂದು ಕರೆಯಲ್ಪಡುವ [ನಮ್ಮನ್ನು], ಭಕ್ತಿಹೀನ ತುಟಿಗಳಿರುವ” ಮಿಥ್ಯಾಪವಾದಿಗಳು “ದೂಷಿಸುತ್ತಾರೆ.” ಎರಡನೆಯ ಶತಮಾನದ ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದವರ ಕುರಿತಾಗಿ ಈ ಅತಿ ತಪ್ಪಾದ ವಿಧರ್ಮಿ ದೃಷ್ಟಿಕೋನದ ವಿರುದ್ಧ ಹೋರಾಡಲು ತೀಯಫೆಲಸ್ ಶ್ರಮಿಸಿದನು. ದೇವರ ಪ್ರೇರಿತ ವಾಕ್ಯದಲ್ಲಿ ಅಡಕವಾಗಿರುವ ಸತ್ಯದ ಬೆಳಕನ್ನು ಅವನು ಉಪಯೋಗಿಸಿದನು.—ಮತ್ತಾಯ 5:11, 12.
ಹೀಬ್ರು ಮತ್ತು ಗ್ರೀಕ್ ಬೈಬಲ್ ವಚನಗಳ ಆತನ ಅಡಿಗಡಿಗಿನ ಬಳಕೆ ಮತ್ತು ಸೂಚನೆಯು, ದೇವರ ವಾಕ್ಯದೊಂದಿಗಿನ ತೀಯಫೆಲಸನ ಒಳ್ಳೆಯ ಪರಿಚಯಕ್ಕೆ ಸಾಕ್ಷ್ಯ ನೀಡುತ್ತದೆ. ಅವನು ಸುವಾರ್ತೆಗಳ ಅತಿ ಆರಂಭದ ವ್ಯಾಖ್ಯಾನಗಾರರಲ್ಲಿ ಒಬ್ಬನಾಗಿದ್ದನು. ಶಾಸ್ತ್ರವಚನಗಳಿಗೆ ತೀಯಫೆಲಸನ ಅನೇಕ ಸೂಚನೆಗಳು, ಅವನ ಸಮಯದಲ್ಲಿ ಚಾಲ್ತಿಯಲ್ಲಿದ್ದ ಯೋಚನೆಯೊಳಗೆ ವಿಪುಲವಾದ ಒಳನೋಟವನ್ನು ಒದಗಿಸುತ್ತದೆ. ಪ್ರೇರಿತ ಬರವಣಿಗೆಗಳೊಂದಿಗಿನ ತನ್ನ ಪರಿಚಯವನ್ನು ಅವನು, ವಿಧರ್ಮಿ ತತ್ವಜ್ಞಾನದ ಮೇಲಿನ ಅವುಗಳ ಅಪಾರ ಉತ್ಕೃಷ್ಟತೆಯನ್ನು ಪ್ರದರ್ಶಿಸಲು ಬಳಸಿದನು.
ತೀಯಫೆಲಸನ ವಿಷಯದ ಕ್ರಮವು, ಅವನ ಉಪದೇಶಾತ್ಮಕ ಶೈಲಿಯು ಮತ್ತು ಪುನರಾವೃತ್ತಿಯ ಶೈಲಿಯು ಕೆಲವು ಜನರಿಗೆ ಆಕರ್ಷಣೀಯವಾಗಿರಲಿಕ್ಕಿಲ್ಲ. ಮುಂತಿಳಿಸಲ್ಪಟ್ಟಿದ್ದ ಧರ್ಮಭ್ರಷ್ಟತೆಯು ಅವನ ದೃಷ್ಟಿಕೋನದ ನಿಷ್ಕೃಷ್ಟತೆಯನ್ನು ಎಷ್ಟರ ಮಟ್ಟಿಗೆ ಬಾಧಿಸಿರಬಹುದು ಎಂಬುದನ್ನು ನಾವು ಪ್ರಸ್ತುತವಾಗಿ ಹೇಳಸಾಧ್ಯವಿಲ್ಲ. (2 ಥೆಸಲೊನೀಕ 2:3-12) ಹಾಗಿದ್ದರೂ, ಅವನ ಮರಣದ ಸಮಯದಷ್ಟಕ್ಕೆ, ಸಾ.ಶ. 182ರ ಸುಮಾರಿಗೆ, ಯಾರ ಬರವಣಿಗೆಗಳು ನಮ್ಮ ಆಧುನಿಕ ಯುಗದ ಯಥಾರ್ಥ ಕ್ರೈಸ್ತರಿಗೆ ಅಭಿರುಚಿಯುಳ್ಳದ್ದಾಗಿವೆಯೋ, ಆ ತೀಯಫೆಲಸನು ವ್ಯಕ್ತವಾಗಿ ಒಬ್ಬ ದಣಿಯದ ಸಮರ್ಥಕನಾಗಿ ಪರಿಣಮಿಸಿದ್ದನು.
[ಪುಟ 30 ರಲ್ಲಿರುವ ಚಿತ್ರ]
ತೀಯಫೆಲಸನು ಒಟೊಲೆಕಸನ ವಾದಗಳನ್ನು ಧೈರ್ಯದಿಂದ ತಪ್ಪೆಂದು ಸಿದ್ಧಪಡಿಸಿದನು
[ಪುಟ 28 ರಲ್ಲಿರುವ ಚಿತ್ರ ಕೃಪೆ]
Illustrations on pages 28 and 30 reproduced from Illustrirte Pracht - Bibel/Heilige Schrift des Alten und Neuen Testaments, nach der deutschen Uebersetzung D. Martin Luther’s