ಶುದ್ಧ ಹಸ್ತಗಳಿಂದ ಯೆಹೋವನನ್ನು ಆರಾಧಿಸಿರಿ
ಕೀರ್ತನೆಗಾರನಾದ ದಾವೀದನು ಪ್ರೇರಿತನಾಗಿ ಹಾಡಿದ್ದು: “ಯೆಹೋವನೇ, ನಾನು ನಿಷ್ಕಳಂಕನೆಂದು ಕೈಗಳನ್ನು ತೊಳೆದುಕೊಂಡವನಾಗಿ . . . ನಿನ್ನ ಯಜ್ಞವೇದಿಯನ್ನು ಪ್ರದಕ್ಷಿಣೆಮಾಡುವೆನು.”—ಕೀರ್ತನೆ 26:6, 7.
ಈ ಮಾತುಗಳನ್ನು ಸಂಕಲಿಸುವಾಗ, ದಾವೀದನು ಇಸ್ರಾಯೇಲಿನ ಲೇವ್ಯ ಯಾಜಕರು ಯಜ್ಞವೇದಿಯ ಏರನ್ನು ಹತ್ತಿ, ಅನಂತರ ತಮ್ಮ ಬಲಿಗಳನ್ನು ಬೆಂಕಿಯ ಮೇಲೆ ಇಡುತ್ತಿದ್ದ ಪದ್ಧತಿಗೆ ಉದ್ದೇಶಿಸಿ ಹೇಳಿದ್ದಿರಬಹುದು. ಆದರೆ ಈ ಆರಾಧನಾ ಕ್ರಿಯೆಯನ್ನು ನಡಸುವ ಮೊದಲು, ಯಾಜಕರು ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳುವಂತೆ ಅವಶ್ಯಪಡಿಸಲಾಗಿತ್ತು. ಇದೊಂದು ಅಲ್ಪ ವಿಷಯವಾಗಿರಲಿಲ್ಲ. ಈ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳದಿದ್ದರೆ ಯಾಜಕನು ಪ್ರಾಣನಷ್ಟ ಪಡಸಾಧ್ಯವಿತ್ತು!—ವಿಮೋಚನಕಾಂಡ 30:18-21.
ಸಾಂಕೇತಿಕ ತೊಳೆಯುವಿಕೆಯಿಂದ ಆತ್ಮಿಕ ಮತ್ತು ನೈತಿಕ ಶುದ್ಧತೆಯು ಫಲಿಸುತ್ತದೆ. (ಯೆಶಾಯ 1:16; ಎಫೆಸ 5:26) ಆತನನ್ನು ಸೇವಿಸುವ ಮೂಲಕ ನಾವು ಇಂದು ‘ಆತನ ಯಜ್ಞವೇದಿಯನ್ನು ಪ್ರದಕ್ಷಿಣೆಮಾಡುವಂತೆ’ ಯೆಹೋವನು ಬಯಸುತ್ತಾನೆ. ಆದರೆ ನಾವು ಶುದ್ಧ ಹಸ್ತಗಳಿಂದ—ದಾವೀದನು ಹೇಳಿದಂತೆ, “ನಿಷ್ಕಳಂಕ”ವಾಗಿ ತೊಳೆದ ಕೈಗಳಿಂದ ಹಾಗೆ ಮಾಡುವಂತೆ—ಆತನು ಅವಶ್ಯಪಡುತ್ತಾನೆ. ಇದೇನೂ ಕ್ಷುಲ್ಲಕ ಆವಶ್ಯಕತೆಯಲ್ಲ, ಯಾಕೆಂದರೆ ಅಶುದ್ಧತೆಯನ್ನು ಅಭ್ಯಾಸಿಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. (ಗಲಾತ್ಯ 5:19-21) ದೈವಿಕ ಕೆಲಸದಲ್ಲಿನ ಜೀವನವು ಒಬ್ಬನಿಗೆ ಅನೈತಿಕ ನಡತೆಯಲ್ಲಿ ತೊಡಗುವ ಪರವಾನಗಿಯನ್ನು ಕೊಡುವುದಿಲ್ಲ. ಹೀಗೆ ಅಪೊಸ್ತಲ ಪೌಲನು ಬರೆದುದು: “ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.”—1 ಕೊರಿಂಥ 9:27.
ಯಾರು ದೈವಿಕ ಸಮ್ಮತಿಯನ್ನು ಮತ್ತು ನಿಜ ಸಂತೋಷವನ್ನು ಹುಡುಕುತ್ತಾರೋ, ಅವರು ಯೆಹೋವನನ್ನು ಶುದ್ಧ ಹಸ್ತಗಳಿಂದ ಸೇವಿಸಲೇಬೇಕು. ದಾವೀದನಂತೆ ಅವರು, “ಪೂರ್ಣಮನಸ್ಸಿನಿಂದಲೂ ಯಥಾರ್ಥಚಿತ್ತದಿಂದಲೂ” ನಡೆಯಬೇಕು.—1 ಅರಸುಗಳು 9:4.