ಒಂದು ಶಾಸನಬದ್ಧವಾದ ಭೇದನ
ಎಪ್ರಿಲ್ 1995ರಲ್ಲಿ ಒಂದು ಗಮನಾರ್ಹ ನ್ಯಾಯಾಲಯ ವಿಜಯವು ಪ್ರಾಪ್ತಿಸಿತು. ಅದೆಲ್ಲವು ಆರಂಭವಾದದ್ದು, 24 ವರ್ಷ ಪ್ರಾಯದ ಲೂಸ್ ನೆರೇಡ ಆಸೆವೆಡೊ ಕ್ವಿಲಸ್, ಪೋರ್ಟ ರೀಕೊದಲ್ಲಿ, ಒಂದು ಆಯ್ದ ಶಸ್ತ್ರಚಿಕಿತ್ಸೆಗಾಗಿ ಎಲ್ ಬೂಏನ್ ಪಾಸ್ಟಾರ್ ಆಸ್ಪತ್ರೆಗೆ ಸೇರಿಸಲ್ಪಟ್ಟಾಗ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದ ತಾನು ರಕ್ತ ಪೂರಣವನ್ನು ಸ್ವೀಕರಿಸಲಾರೆನೆಂದು ಆಸ್ಪತ್ರೆಗೆ ಸೇರುವಾಗಲೇ ಅವಳು ಬಾಯಿ ಮಾತಿನ ಮತ್ತು ಬರೆವಣಿಗೆಯ ಮೂಲಕ ತಿಳಿಯಪಡಿಸಿದ್ದಳು. (ಅ. ಕೃತ್ಯಗಳು 15:28, 29) ಇದರಲ್ಲಿ ಸೇರಿದ್ದ ಆಸ್ಪತ್ರೆಯ ಸಿಬ್ಬಂದಿಗೆ, ಅವಳನ್ನು ಉಪಚರಿಸಿದ ಡಾಕ್ಟರರಿಗೂ, ಅವಳ ಇಷ್ಟದ ಒಳ್ಳೆಯ ಅರಿವಿತ್ತು.
ಅವಳ ಶಸ್ತ್ರಕ್ರಿಯೆಯ ಎರಡು ದಿನಗಳ ಅನಂತರ, ಲೂಸ್ ಅಧಿಕ ಪ್ರಮಾಣದ ರಕ್ತವನ್ನು ಕಳೆದುಕೊಂಡಳು ಮತ್ತು ರಕ್ತಸ್ರಾವದಿಂದಾಗಿ ತೀವ್ರ ರಕ್ತಹೀನತೆಯನ್ನು ವಿಕಸಿಸಿಕೊಂಡಳು. ಅವಳಿಗೆ ನೆರವಾಗುವ ಒಂದೇ ದಾರಿಯು ರಕ್ತ ಪೂರಣವನ್ನು ಕೊಡುವುದೇ ಎಂದು ಉಪಚರಿಸುತ್ತಿದ್ದ ಡಾ. ಹೋಸೆ ರಾತ್ರಿಗಾತ್ ರಾತ್ರಿಗಾತ್ ನಂಬಿದರು. ಆದುದರಿಂದ ಅವಳ ತಿಳಿವು ಅಥವಾ ಒಪ್ಪಿಗೆಯಿಲ್ಲದೆ ಲೂಸ್‌ಗೆ ಪೂರಣ ನೀಡಲು ಅವರು ನ್ಯಾಯಾಲಯದ ಆದೇಶವನ್ನು ಕೋರಿದರು.
ಲೂಸ್ ಪೂರ್ಣ ಪ್ರಜ್ಞೆಯಿದ್ದವಳಾಗಿ ತನ್ನ ಪರವಾಗಿ ಮಾತಾಡಲು ಶಕ್ತಳಾಗಿದ್ದರೂ, ಡಾ. ರಾತ್ರಿಗಾತ್ ರಾತ್ರಿಗಾತ್, ಸನ್ನಿವೇಶದ ಜರೂರಿಯ ಕಾರಣ ಯಾರ ಒಪ್ಪಿಗೆಯನ್ನೂ ಪಡೆಯಲು ಸಮಯವಿದ್ದಿರಲಿಲ್ಲವೆಂದು ಪಟ್ಟುಹಿಡಿದರು. ಡಿಸ್ಟ್ರಿಕ್ಟ್ ವಕೀಲ ಎಡ್ವಾರ್ಡೊ ಪೆರೇತ್ ಸೋಟೊ ಪತ್ರಕ್ಕೆ ಸಹಿ ಹಾಕಿದರು ಮತ್ತು ಡಿಸ್ಟ್ರಿಕ್ಟ್ ನ್ಯಾಯಧೀಶ, ಮಾನ್ಯ ಆಂಕೆಲ್ ಲೂಈಸ್ ರಾತ್ರಿಗಾತ್ ರಾಮಾಸ್, ರಕ್ತ ಪೂರಣಕ್ಕಾಗಿ ನ್ಯಾಯಾಲಯದ ಅನುಜ್ಞೆಯನ್ನು ಹೊರಡಿಸಿದರು.
ಹೀಗೆ, ಜನವರಿ 31, 1992ರಂದು ಲೂಸ್ ಶಸ್ತ್ರಚಿಕಿತ್ಸೆಯ ಕೊಠಡಿಗೆ ಒಯ್ಯಲ್ಪಟ್ಟಳು ಮತ್ತು ಅವಳಿಗೆ ಅಲ್ಲಿ ರಕ್ತ ಪೂರಣವನ್ನು ನೀಡಲಾಯಿತು. ರಕ್ತ ಪೂರಣದ ಸಮಯದಲ್ಲಿ ಕೆಲವು ಆಸ್ಪತ್ರೆ ಸಿಬ್ಬಂದಿಗಳು ನಗುತ್ತಿರುವುದು ಆಕೆಗೆ ಕೇಳಿಸಿತು. ಅವಳಿಗೆ ಏನು ಮಾಡಲ್ಪಡುತ್ತಿದೆಯೋ ಅದು ಅವಳ ಸ್ವಂತ ಹಿತಕ್ಕಾಗಿ ಎಂದು ಹೇಳುತ್ತಾ ಇತರರು ಅವಳನ್ನು ಗದರಿಸಿದರು. ಆಕೆ ತನಗೆ ಶಕ್ಯವಾದಷ್ಟು ಹೋರಾಡಿದಳು—ಎಲ್ಲವೂ ವ್ಯರ್ಥವಾಯಿತು. ದಿನದಂತ್ಯದೊಳಗೆ, ಲೂಸ್ ನಾಲ್ಕು ಯುನಿಟ್ ರಕ್ತವನ್ನು ಪಡೆದಿದ್ದಳು.
ಪೋರ್ಟ ರೀಕೊದಲ್ಲಿ ರಕ್ತ ಪೂರಣಗಳು ಮತ್ತು ಯೆಹೋವನ ಸಾಕ್ಷಿಗಳನ್ನು ಒಳಗೊಂಡ ಕೇಸ್‌ಗಳಲ್ಲಿ ಲೂಸ್‌ಳ ಸನ್ನಿವೇಶವು ಮೊದಲನೆಯದೂ ಆಗಿರಲಿಲ್ಲ ಕೊನೆಯದೂ ಆಗಿರಲಿಲ್ಲ. ಅವಳಿಗಾದ ಅನುಭವಕ್ಕೆ ಮುಂಚೆ, ಪ್ರಾಪ್ತ ವಯಸ್ಕ ಯೆಹೋವನ ಸಾಕ್ಷಿಗಳ ಇಷ್ಟವಿರುದ್ಧವಾದ ರಕ್ತಪೂರಣಕ್ಕಾಗಿ ಕಡಿಮೆ ಪಕ್ಷ 15 ನ್ಯಾಯಾಲಯ ಆದೇಶಗಳು ಹೊರಡಿಸಲ್ಪಟ್ಟಿದ್ದವು, ಮತ್ತು ಅಂದಿನಿಂದ ಇನ್ನೂ ಹೆಚ್ಚು ಹೊರಡಿಸಲ್ಪಟ್ಟಿವೆ. ದುರಂತಕರವಾಗಿ, ಒಂದು ಸನ್ನಿವೇಶದಲ್ಲಿ ನ್ಯಾಯಾಲಯದ ಆದೇಶವು ಜಾರಿಗೆ ತರಲ್ಪಟ್ಟು, ರೋಗಿಗೆ ಅವಳು ಪ್ರಜ್ಞಾಹೀನಳಾಗಿದ್ದಾಗ ರಕ್ತ ಪೂರಣವನ್ನು ಬಲಾತ್ಕಾರದಿಂದ ನೀಡಲಾಯಿತು.
ಆದರೂ ಲೂಸ್‌ಳ ಹೋರಾಟವು ಶಸ್ತ್ರಕ್ರಿಯೆಯ ಕೋಣೆಯಲ್ಲಿ ಅಂತ್ಯಗೊಳ್ಳಲಿಲ್ಲ. ಅಕ್ಟೋಬರ್ 1993ರಲ್ಲಿ ಕಾಮನ್‌ವೆಲ್ತ್ ಆಫ್ ಪೋರ್ಟ ರೀಕೊದ ವಿರುದ್ಧ ಒಂದು ಮೊಕದ್ದಮೆಯನ್ನು ಹೂಡಲಾಯಿತು. ಉಚ್ಚ ನ್ಯಾಯಾಲಯವು ದಾವೆಯನ್ನು ಕೇಳಿತು, ಮತ್ತು ಎಪ್ರಿಲ್ 18, 1995ರಂದು ನ್ಯಾಯಾಲಯವು ಅವಳ ಪರವಾಗಿ ತೀರ್ಪನ್ನಿತ್ತಿತು. ರಕ್ತ ಪೂರಣವನ್ನು ನೀಡುವ ಆದೇಶವು “ರಾಜ್ಯ ವ್ಯವಸ್ಥೆಗೆ ವಿರುದ್ಧವಾದದ್ದು ಮತ್ತು ಅದು ವಾದಿಯ ಧರ್ಮ ಸ್ವಾತಂತ್ರ್ಯವನ್ನು, ಆಕೆಯ ಏಕಾಂತತೆಯನ್ನು, ಮತ್ತು ದೈಹಿಕ ಸ್ವನಿರ್ಣಯದ ಹಕ್ಕನ್ನು, ಸೂಕ್ತ ಕಾನೂನು ಕ್ರಮವಿಲ್ಲದೆ ಅಪಹರಿಸಿಯದೆ,” ಎಂದು ನ್ಯಾಯಾಲಯವು ಹೇಳಿತು.
ಈ ತೀರ್ಮಾನವು ಗಮನಾರ್ಹವಾಗಿತ್ತು, ಯಾಕೆಂದರೆ ಪೋರ್ಟ ರೀಕೊದ ಒಂದು ನ್ಯಾಯಾಲಯವು ರಕ್ತ ಪೂರಣದ ಒಂದು ದಾವೆಯಲ್ಲಿ ಯೆಹೋವನ ಸಾಕ್ಷಿಗಳ ಪರವಾಗಿ ನ್ಯಾಯ ವಿಧಿಸಿದ್ದು ಇದು ಮೊದಲನೆಯ ಬಾರಿ. ಆ ತೀರ್ಮಾನವು ಒಂದು ಪ್ರಚಂಡವಾದ ಪ್ರತಿಕ್ರಿಯೆಯನ್ನು ಹೊರತಂದಿತು. ಮುಖ್ಯ ವಾರ್ತಾಪತ್ರಗಳು, ರೇಡಿಯೊ ಮತ್ತು ಟೆಲಿವಿಷನ್ ಪತ್ರಕರ್ತರು ಕೂಡಿದ್ದ ಒಂದು ಪತ್ರಕಾರರ ಸಭೆಯೂ ನಡೆಯಿತು.
ಅದೇ ರಾತ್ರಿ ಒಂದು ರೇಡಿಯೊ ಕಾರ್ಯಕ್ರಮದಲ್ಲಿ ಲೂಸ್‌ಳ ವಕೀಲರಲ್ಲೊಬ್ಬರೊಡನೆ ಒಂದು ಇಂಟರ್‌ವ್ಯೂ ನಡಿಸಲ್ಪಟ್ಟಿತು. ಫೋನ್ ಮಾಡಿ ಪ್ರಶ್ನೆ ಕೇಳುವಂತೆ ಸಭಿಕರನ್ನು ಆಮಂತ್ರಿಸಲಾಯಿತು. ಅನೇಕ ಡಾಕ್ಟರುಗಳು ಮತ್ತು ವಕೀಲರು ಫೋನ್ ಮಾಡಿ, ದಾವೆಗೆ ತಮ್ಮ ಮೆಚ್ಚಿಕೆಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಫೋನ್ ಮಾಡಿದ ಒಬ್ಬನು ಅಂದದ್ದು: “ರಕ್ತ ಪೂರಣವು ಜೀವಗಳನ್ನು ರಕ್ಷಿಸುವುದು ಎಂಬುದನ್ನು ಖಚಿತಪಡಿಸಲು ವಿಜ್ಞಾನವು ಶಕ್ತವಾಗಿರುವುದಿಲ್ಲ, ಮತ್ತು ಆ ರೀತಿ ಯೋಚಿಸುವುದು ತಪ್ಪುಭ್ರಮೆಯಾಗಿದೆ.” ಅವನು ಮತ್ತೂ ಹೇಳಿದ್ದು: “ಶೀಘ್ರದಲ್ಲೇ ರಕ್ತ ಪೂರಣಗಳು ಆಧುನಿಕ ವೈದ್ಯಕೀಯ ಶಾಸ್ತ್ರದ ಅತ್ಯಂತ ದೊಡ್ಡ ಅಪಗತಿಗಳಲ್ಲಿ ಮತ್ತು ತಪ್ಪುಗಳಲ್ಲಿ ಒಂದಾಗಿ ಇತಹಾಸದಲ್ಲೇ ದಾಖಲೆಯಾಗುವುವು.”
ಅತಿ ಮಾನ್ಯರೆಂದು ಪರಿಗಣಿಸಲ್ಪಟ್ಟ ನ್ಯಾಯಶಾಸ್ತ್ರದ ಒಬ್ಬ ಪ್ರೊಫೆಸರರು ತದನಂತರ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸನ್ನು ಕರೆದು, ಯಾವುದನ್ನು ಅವರು “ಜನಜನಿತ ವಿಜಯ”ವೆಂದು ಕರೆದರೋ ಅದಕ್ಕಾಗಿ ತಮ್ಮ ಆಳವಾದ ತೃಪ್ತಿಯನ್ನು ವ್ಯಕ್ತಪಡಿಸಿದರು. ನ್ಯಾಯಾಲಯದ ತೀರ್ಮಾನವು, ಯೆಹೋವನ ಸಾಕ್ಷಿಗಳನ್ನು ಮಾತ್ರವಲ್ಲ, ಪೋರ್ಟ ರೀಕೊದ ಸಕಲ ನಾಗರಿಕರ ಶಾಸನಬದ್ಧ ಹಕ್ಕುಗಳನ್ನು ಪಕ್ಷಸಮರ್ಥನೆ ಮಾಡುತ್ತದೆ ಎಂದವರು ಕೂಡಿಸಿದರು.