ಯೆಹೋವನ ಸಾಕ್ಷಿಗಳ ವಿರುದ್ಧವಾದ ಮೊಕದ್ದಮೆ ನಿರ್ಣಯಿಸಲ್ಪಟ್ಟದ್ದು
ಗ್ರೀಸ್ನ ಥೆಸಲೊನೀಕದಲ್ಲಿರುವ ಕೋರ್ಟ್ ಆಫ್ ಅಪೀಲ್ಸ್, ಪದೇ ಪದೇ ಮುಂದೂಡುವಿಕೆಗಳನ್ನು ಮಾಡಿದ ನಂತರ, ಯೆಹೋವನ ಸಾಕ್ಷಿಗಳಾದ ನಾಲ್ಕು ಮಂದಿ ಸ್ತ್ರೀಯರ ವಿರುದ್ಧವಾದ ಮೊಕದ್ದಮೆಯನ್ನು ವಿಚಾರಿಸಲು, ಅಂತಿಮವಾಗಿ ಜೂನ್ 8, 1995ರಂದು ಸೇರಿತು. ಅವರ ವಿರುದ್ಧ ತರಲ್ಪಟ್ಟ ಆಪಾದನೆ? ಐದು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಗ್ರೀಕ್ ನಿಯಮವು ನಿಷೇಧಿಸಿರುವ, ಮತಪರಿವರ್ತನೆಯೇ.
ಆದಾಗಲೂ, ನ್ಯಾಯಾಲಯವು ಕೂಡಿ ಬರುವಷ್ಟರಲ್ಲಿ ಫಿರ್ಯಾದಿ ಪಕ್ಷಕ್ಕಾಗಿದ್ದ ಪ್ರಧಾನ ಸಾಕ್ಷಿಯು—ಆ ನಾಲ್ಕು ಸ್ತ್ರೀಯರ ವಿರುದ್ಧ ಮೊಕದ್ದಮೆಗೆ ಪ್ರೇರೇಪಣೆ ಕೊಟ್ಟಿದ್ದ ಪಾದ್ರಿಯು—ಮರಣಹೊಂದಿದ್ದನು. ಅವನ ಜಾಗದಲ್ಲಿ ಸಾಕ್ಷಿ ಕೊಡಲು ಇನ್ನೊಬ್ಬ ಪಾದ್ರಿಯು ಪ್ರಯತ್ನಿಸಿದನು, ಆದರೆ ನ್ಯಾಯಾಲಯವು ಅವನ ಬೇಡಿಕೆಯನ್ನು ಸ್ವೀಕರಿಸಲಿಲ್ಲ. ಹೀಗೆ, ವಿಚಾರಣೆಯು ಕೇವಲ 15 ನಿಮಿಷಗಳಷ್ಟು ದೀರ್ಘವಾಗಿದ್ದದ್ದು ಆಶ್ಚರ್ಯಜನಕವಲ್ಲ! ನ್ಯಾಯಾಧೀಶರು ಫಿರ್ಯಾದಿ ಪಕ್ಷದ ಇತರ ಸಾಕ್ಷಿಗಳನ್ನು ಪರೀಕ್ಷಿಸಿದರು ಮತ್ತು ಪ್ರತಿವಾದಿಗಳು ನಿಯಮಬಾಹಿರವಾದ ಮತಪರಿವರ್ತನೆಯ ದೋಷಿಗಳಾಗಿರಲಿಲ್ಲವೆಂಬುದನ್ನು ಕಂಡುಕೊಂಡರು. ಗ್ರೀಕ್ ನ್ಯಾಯಾಲಯಗಳು, 1993ರಲ್ಲಿ ಯೂರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ನಿಂದ ಮಾಡಲ್ಪಟ್ಟ ನಿರ್ಣಯವನ್ನು ಗೌರವಿಸಲು ಮತ್ತು ಪಾಲಿಸಲು ಇಚ್ಛೆಯುಳ್ಳವುಗಳಾಗಿವೆಯೆಂದು ಈ ನಿರ್ಣಯವು ಸೂಚಿಸುತ್ತದೆ.
ಫಿರ್ಯಾದಿ ಪಕ್ಷಕ್ಕಾಗಿ ಸಾಕ್ಷಿಕೊಟ್ಟ ಮೂವರು ಸ್ತ್ರೀಯರು, ಸಾಕ್ಷಿ ಪ್ರತಿವಾದಿಗಳನ್ನು ಸಮೀಪಿಸಿ, ಅವರನ್ನು ಪೂರ್ಣಹೃದಯದಿಂದ ಅಭಿವಂದಿಸುವುದನ್ನು ನೋಡುವುದು ವಿಶೇಷವಾಗಿ ಆಶ್ಚರ್ಯಜನಕವಾಗಿತ್ತು. “ಸಂಭವಿಸಿದಂತಹ ಈ ಎಲ್ಲಾ ಸಂಗತಿಗಳಿಗಾಗಿ ನಾವು ಕ್ಷಮೆಯಾಚಿಸುತ್ತೇವೆ” ಎಂದಳು ಅವರಲ್ಲೊಬ್ಬಳು. ಅವಳು ಕೂಡಿಸಿದ್ದು: “ಅದು ನಮ್ಮ ದೋಷವಾಗಿರಲಿಲ್ಲ. ನಿಮ್ಮ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ನಮ್ಮನ್ನು ಪಾದ್ರಿಯು ಒತ್ತಾಯಿಸಿದನು. ಅವನು ಈಗ ಜೀವಿಸದಿರುವುದರಿಂದ, ನೀವು ನಮ್ಮ ಹಳ್ಳಿಗೆ ಮತ್ತು ನಮ್ಮ ಮನೆಗಳಿಗೆ ಬರುವಂತೆ ನಾವು ಬಯಸುತ್ತೇವೆ.”
ಹೀಗೆ, ಯೆಹೋವನು ಪುನಃ ಒಮ್ಮೆ ಗ್ರೀಸ್ನಲ್ಲಿರುವ ತನ್ನ ಜನರಿಗೆ ಒಂದು ಅದ್ಭುತಕರವಾದ ವಿಜಯವನ್ನು ದಯಪಾಲಿಸಿದ್ದಾನೆ. 1938 ಮತ್ತು 1939ರಲ್ಲಿ ಮತಪರಿವರ್ತನೆಯ ಕುರಿತಾದ ನಿಯಮಗಳು ಗ್ರೀಸ್ನಲ್ಲಿ ಮಂಜೂರು ಮಾಡಲ್ಪಟ್ಟಿದ್ದವು. ಯೆಹೋವನ ಸಾಕ್ಷಿಗಳನ್ನು ಹಿಂಸಿಸಲು ಈ ನಿಯಮವನ್ನು ಬಳಸುವುದು ತಪ್ಪಾಗಿದೆಯೆಂದು 1993ರಲ್ಲಿ ಯೂರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ ತೀರ್ಪುಕೊಟ್ಟಿತು.—ಸೆಪ್ಟೆಂಬರ್ 1, 1993ರ ಕಾವಲಿನಬುರುಜು ಪತ್ರಿಕೆಯ 27-31ನೆಯ ಪುಟಗಳನ್ನು ನೋಡಿರಿ.