ನೋಡಿ! ನೀವೂಏಯಲ್ಲಿ ಒಂದು ರಾಜ್ಯ ಸಭಾಗೃಹ
ನೀವೂಏ, ದಕ್ಷಿಣ ಶಾಂತ ಸಾಗರದಲ್ಲಿ, ನ್ಯೂ ಸೀಲೆಂಡ್ನಿಂದ 2,160 ಕಿಲೊಮೀಟರ್ಗಳಷ್ಟು ಈಶಾನ್ಯದಲ್ಲಿರುವ ಒಂದು ಚಿಕ್ಕ ಹವಳ ದ್ವೀಪ. ಒಂದು ಪ್ರವಾಸ ಬ್ರೋಷರಿಗನುಸಾರ, ನೀವೂಏ ಎಂಬ ಹೆಸರು ಎರಡು ಪದಗಳಿಂದ, ನೀವೂ ಅಂದರೆ “ತೆಂಗಿನ ಮರ” ಮತ್ತು ಏ ಅಂದರೆ “ಗಮನಿಸಿ,” ಅಥವಾ “ನೋಡಿ”—ಇವುಗಳಿಂದ ಬಂದಿರುತ್ತದೆ. ಆ ಬ್ರೋಷರ್ ಹೇಳುವುದು: “ಪ್ರಥಮ ಪಾಲಿನೇಷ್ಯನ್ ನೆಲಸಿಗರು ಬಂದು ಆ ಜಮೀನಿನ ಮೇಲೆ ತೆಂಗಿನ ಮರಗಳು ಬೆಳೆಯುವುದನ್ನು ನೋಡಿದಾಗ ಈ ಮಾತುಗಳನ್ನು ಉಚ್ಚರಿಸಿದರೆಂದು ಐತಿಹ್ಯವು ಹೇಳುತ್ತದೆ.”
ಇಂದು ನೀವೂಏಯಲ್ಲಿ ಯೆಹೋವನ ಸಾಕ್ಷಿಗಳು ಭೇಟಿಗಾರರಿಗೆ, “ನೋಡಿ! ನಮ್ಮ ರಾಜ್ಯ ಸಭಾಗೃಹ!” ಎಂಬರ್ಥ ಕೊಡುವ, “ಏ! ಫಾಲೆ ಹೇ ಕಾವುಟೂ ಮಾವುಟಾಲೂ!” ಎಂದು ಹೇಳಲು ಅಭಿಮಾನಪಡುತ್ತಾರೆ. ಈ ಸಭಾಗೃಹದ ಬಗೆಗೆ ಅವರಿಗೇಕೆ ಅಷ್ಟು ಆಳವಾದ ಅನಿಸಿಕೆಗಳು? ಯೆಹೋವನ ಸಾಕ್ಷಿಗಳಿಗೆ ಎಲ್ಲೆಲ್ಲಿಯೂ ತಮ್ಮ ರಾಜ್ಯ ಸಭಾಗೃಹಗಳ ಮೇಲೆ, ವಿಶೇಷವಾಗಿ ತಾವೇ ಅದರ ನಿರ್ಮಾಪಕರಾಗಿರುವಲ್ಲಿ ಅಭಿಮಾನವಿದೆ. ಆದರೆ ವಿಶಾಲವಾದ ದಕ್ಷಿಣ ಶಾಂತ ಸಾಗರದ ಮಧ್ಯೆ ಇರುವ ಒಂದು ದೂರದ ದ್ವೀಪದ ಮೇಲೆ, ಒಂದು ರಾಜ್ಯ ಸಭಾಗೃಹವನ್ನು ಕಟ್ಟುವುದು ತೀರ ವ್ಯತ್ಯಾಸವಾದ ಸಂಗತಿ. ಎಷ್ಟೆಂದರೂ, ನೀವೂಏ ಕೇವಲ 260 ಚದರ ಕಿಲೊಮೀಟರುಗಳನ್ನು ಆವರಿಸುತ್ತದೆ, ಮತ್ತು ಇಡೀ ದ್ವೀಪದಲ್ಲಿರುವುದು 2,300 ಜನರು ಮಾತ್ರ.
ರಾಜ್ಯ ಸಭಾಗೃಹವನ್ನು ಯಾರು ಕಟ್ಟುವುದೆಂಬ ಪ್ರಶ್ನೆಯಿತ್ತು. ನೀವೂಏಯ ಏಕಮಾತ್ರ ಸಭೆಯಲ್ಲಿ ಕೇವಲ 32 ಸಾಕ್ಷಿಗಳಿದ್ದಾರೆ. ಬೇಕಾಗಿದ್ದ ಟ್ರಕ್ಗಳು, ಬುಲ್ಡೋಸರ್ಗಳು, ಕ್ರೇನ್ಗಳಂತಹ ದೊಡ್ಡ ಸರಂಜಾಮುಗಳ ಧಣಿ ಸರಕಾರವಾಗಿದೆ. ಇದಲ್ಲದೆ, ಕಾರ್ಯತಃ ಎಲ್ಲ ಆವಶ್ಯಕ ಕಟ್ಟಡ ಸಾಮಗ್ರಿಗಳು—ಉಕ್ಕು, ಕಾಂಕ್ರೀಟ್ ದಿಮ್ಮಿಗಳು, ಚಾವಣಿ ಸಾಮಾನು, ಇಲೆಕ್ಟಿಕ್ರಲ್ ಮತ್ತು ಕೊಳಾಯಿ ಸಾಮಾನುಗಳು, ಧ್ವನಿವರ್ಧಕ ಸಲಕರಣೆ ಮತ್ತು ಕುರ್ಚಿಗಳು—ಇವೆಲ್ಲವನ್ನು ನ್ಯೂ ಸೀಲೆಂಡ್ನಿಂದ ಐದು ವಾರಗಳಿಗೆ ಒಮ್ಮೆ ಮಾತ್ರ ಕಾರ್ಯನಡಿಸುವ ಸಾರಿಗೆ ವ್ಯವಸ್ಥೆಯ ಮೂಲಕ ರವಾನಿಸಬೇಕಿತ್ತು. ಕೊನೆಗೆ, ದ್ವೀಪದ ಶಿಲಾಮಯ ಮೇಲ್ಮೈಯು ನಿರ್ಮಾಣ ಕೆಲಸವನ್ನು ಕಷ್ಟಕರವಾಗಿ ಮಾಡಲಿತ್ತು, ಮತ್ತು ಆ ಸಭಾಗೃಹವು ಉಷ್ಣವಲಯದ ಚಂಡಮಾರುತಗಳನ್ನು ತಡೆದು ನಿಲ್ಲಬೇಕಾಗಿತ್ತು. ಯಾರಿಗೂ, ಕೆಲಸವು ದುಸ್ಸಾಧ್ಯವಾಗಿತ್ತು ನಿಶ್ಚಯ!
ಆದರೂ, ಇಲ್ಲಿ ದೊಡ್ಡ ವ್ಯತ್ಯಾಸವೊಂದಿತ್ತು. ಯೆಹೋವನ ಸಾಕ್ಷಿಗಳಿಗಾದರೊ, ರಾಜ್ಯ ಸಭಾಗೃಹವು ಸ್ಥಳಿಕವಾಗಿ ಸತ್ಯಾರಾಧನೆಯ ಕೇಂದ್ರವಾಗಿದೆ ಮತ್ತು ಅವರು ಮಾರ್ಗದರ್ಶನೆ ಹಾಗೂ ಸಹಾಯಕ್ಕಾಗಿ ಯೆಹೋವನ ಕಡೆಗೆ ನೋಡುತ್ತಾರೆ. (ಕೀರ್ತನೆ 56:11; 127:1) ನ್ಯೂ ಸೀಲೆಂಡ್ನ ಕ್ರೈಸ್ತ ಸಹೋದರರು, ಆಕ್ಲೆಂಡ್ನ ನೀವೂಏಯನ್ ಸಭೆಯ ಸದಸ್ಯರೂ ಕೂಡಿ, ಆ ಕಟ್ಟಡ ನಿರ್ಮಾಣದ ಯೋಜನೆಗೆ ಹೃತ್ಪೂರ್ವಕ ಬೆಂಬಲವನ್ನು ಕೊಡುತ್ತ, ನೀವೂಏಯ ಸಾಕ್ಷಿಗಳ ಸಣ್ಣ ಗುಂಪಿನ ಸಹಾಯಕ್ಕೆ ಬಂದರು.
ಮುಂದುವರಿಯುವ ನಿರ್ಣಯ
ಜೂನ್ 1994ರಲ್ಲಿ ನ್ಯೂ ಸೀಲೆಂಡ್ನ ರೋಟರೂಅದ ಕಟ್ಟಡ ರಚನೆಯ ನಿವೇಶನದಲ್ಲಿ, ನೀವೂಏಯ ಯೋಜನೆಯಲ್ಲಿ ಭಾಗವಹಿಸಲು ಆಸಕ್ತಿ ಇರುವವರಿಗಾಗಿ ಒಂದು ಕರೆಯು ಕೊಡಲ್ಪಟ್ಟಿತು. ವಿಸ್ಮಯಕರವಾಗಿ, 200 ಕ್ರೈಸ್ತ ಸಹೋದರರು ಮತ್ತು ಸಹೋದರಿಯರು ಸ್ವಯಂಸೇವೆಗೆ ಓಗೊಟ್ಟರು. ಇವರಿಂದ ಬಡಗಿಗಳು, ಉಕ್ಕು ಕೆಲಸಗಾರರು, ಕೊಳಾಯಿಗಾರರು, ಚಾವಣಿಗಾರರು, ಗಾರೆಗಾರರು, ಬಣ್ಣಗಾರರು, ಎಲೆಕ್ಟಿಕ್ರಲ್ ಕೆಲಸಗಾರರು, ಧ್ವನಿ ತಂತ್ರಜ್ಞರು, ಕಾಂಕ್ರೀಟ್ ಕೆಲಸಗಾರರು, ಇಟ್ಟಿಗೆ ಕೆಲಸಗಾರರು ಮತ್ತು ಜೀತಗಾರರು—ಇವರನ್ನು ಸೇರಿಸಿ 80 ವ್ಯಕ್ತಿಗಳನ್ನು ಆರಿಸಲಾಯಿತು.
ಸಹೋದರರು ರಚನಾಕ್ರಮಗಳನ್ನು ತಯಾರಿಸಿ, ಯೆಹೋವನಲ್ಲಿ ಭರವಸೆಯಿಡುತ್ತ ಮುಂದುವರಿದರು. ನೀವೂಏಯ ಸಭೆಯ ಇಬ್ಬರು ಹಿರಿಯರಲ್ಲಿ ಸ್ಥಳಿಕ ವ್ಯಾಪಾರಿಯಾದ ಒಬ್ಬರು, ಬೇಕಾಗಿದ್ದ ಎಲ್ಲ ಸಾಮಗ್ರಿಗಳ ರವಾನೆಯ ಏರ್ಪಾಡುಗಳನ್ನು ಪ್ರಾರಂಭಿಸಿದರು. ತಮ್ಮ ಸ್ವಂತ ಖರ್ಚುಗಳನ್ನು ಕೊಡಲು ಇಷ್ಟಪಟ್ಟ ವಿದೇಶೀ ಕೆಲಸಗಾರರಿಗಾಗಿ ಒಂದು ಪ್ರತ್ಯೇಕ ವಿಮಾನ ಪ್ರಯಾಣ/ವಸತಿ ದರವನ್ನು ಪ್ರಸ್ತಾವಿಸಲಾಯಿತು, ಮತ್ತು ಕಟ್ಟಡ ನಿರ್ಮಾಣದ ತಾರೀಖುಗಳನ್ನು ಏರ್ಪಡಿಸಲಾಯಿತು. ಆ ಯೋಜನೆಯು 20 ದಿವಸಗಳಲ್ಲಿ—ಮಾರ್ಚ್ 4ರಿಂದ ಮಾರ್ಚ್ 23, 1995ರ ತನಕ—ಮುಗಿದು, ರಾಜ್ಯ ಸಭಾಗೃಹದ ಪ್ರಾರಂಭೋತ್ಸವ ನಡೆಯಬೇಕಾಗಿತ್ತು.
“ನಾನು ನಿವೇಶನವನ್ನು ನೋಡಿದಾಗ ನನಗೆ ಗಾಬರಿಯ ಪ್ರಥಮಾನುಭವವಾಯಿತು,” ಎಂದು ನ್ಯೂ ಸೀಲೆಂಡ್ನಿಂದ ಒಂದು ವಾರ ಮೊದಲು ವಿಷಯಗಳನ್ನು ಕ್ರಮಪಡಿಸಿಡಲು ಬಂದ ಪ್ರಾಜೆಕ್ಟ್ ಡೈರೆಕ್ಟರ್ ಹೇಳಿದರು. “ನೆಲವೆಲ್ಲ ಕಲ್ಲುಬಂಡೆ. ಅಡಿವರಿಸೆಯನ್ನು ಅಗೆಯುವುದಕ್ಕೇ ಎರಡು ವಾರ ಹಿಡಿದೀತು.” ಆದರೆ ತಾವು ಸ್ಥಳಿಕ ಸಾಕ್ಷಿಗಳಿಗೆ ಕಡಮೆ ಬೆಲೆ ಕಟ್ಟಿದೆವ್ದೆಂದು ಅವರು ಆಮೇಲೆ ಒಪ್ಪಿಕೊಂಡರು. “ನೀವೂಏಯ ಸಹೋದರರಿಗೆ ಬಂಡೆಗಳ ರಚನೆಯ ಪರಿಚಯವಿದೆ. ಅದರ ದೊಡ್ಡ ತುಂಡುಗಳು ಬಿದ್ದುಹೋಗುವಂತೆ ಬಂಡೆಗೆ ಎಲ್ಲಿ ಹೊಡೆಯಬೇಕೆಂದು ಅವರಿಗೆ ಗೊತ್ತು,” ಎಂದರವರು. ಅಡಿವರಿಸೆಯನ್ನು ಎರಡು ದಿನಗಳಲ್ಲಿ ಮುಗಿಸಲಾಯಿತು!
ಮಾರ್ಚ್ 4ರಂದು ನ್ಯೂ ಸೀಲೆಂಡ್ನಿಂದ, ಸಾಕ್ಷಿಗಳಿಂದ ತುಂಬಿದ ಪ್ರಥಮ ವಿಮಾನವು ಬಂದಾಗ, ಕಾಂಕ್ರೀಟ್ ಕೆಲಸವನ್ನು ಮಾಡಿ ಮುಗಿಸಲಾಯಿತು. ಕೆಲಸಗಾರರ ಗುಂಪು ಒಂದರ ಹಿಂದೊಂದು ಬರಲಾಗಿ ಯೋಜನೆಯ ವಿವಿಧ ಅಂಶಗಳು ಮುಗಿಸಲಟ್ಟವು. ಕೆಲಸದ ದಿನಗಳು, ಪೂರ್ವಾಹ್ಣ 7 ಗಂಟೆಗೆ ದಿನದ ಬೈಬಲ್ ವಚನದ ಸಂಕ್ಷಿಪ್ತ ಚರ್ಚೆಯೊಂದಿಗೆ ಆರಂಭಗೊಂಡವು. ಕೆಲವು ಸಹೋದರರು 97 ಡಿಗ್ರಿ ಫ್ಯಾರನ್ಹೈಟ್ ತಾಪಮಾನದಲ್ಲಿ 12 ತಾಸು ಕೆಲಸ ಮಾಡಿದರು. ಕೊನೆಗೆ, ಮಾರ್ಚ್ 23ರೊಳಗೆ ಆ ಜಮೀನು ಅಲಂಕಾರೋದ್ಯಾನವಾಗಿತ್ತು. ಮಾವಿನ ಮರದಿಂದ ಮಾಡಿದ ಒಂದು ಆಕರ್ಷಕವಾದ ಗುರುತುಹಲಗೆ ಆ ಕಟ್ಟಡವನ್ನು, “ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹ” ಎಂದು ಗುರುತಿಸಿತು.
ಸಹಕಾರ ಮತ್ತು ಅತಿಥಿ ಸತ್ಕಾರದ ಮನೋಭಾವ
ಈ ಯೋಜನೆಯ ಯಶಸ್ಸಿಗೆ ಸಹಾಯಮಾಡಿದ ಒಂದು ಪ್ರಧಾನ ಸಂಗತಿಯು ನೀವೂಏಯ ಜನರ ಸಹಕಾರವೇ. ಸ್ಥಳಿಕ ಗ್ರಾಮ ನಿವಾಸಿಗಳು, ಆ ಸಂದರ್ಭದ ಮನೋಭಾವದಿಂದ ಪ್ರಚೋದಿತರಾಗಿ ಆಹಾರ ಮತ್ತು ಹಣವನ್ನು ವಂತಿಗೆಯಾಗಿ ಕೊಟ್ಟರು. ಅನೇಕರು ಸಭಾಗೃಹದ ನಿರ್ಮಾಣವನ್ನು ತಮ್ಮ ಯೋಜನೆಯಾಗಿ ವೀಕ್ಷಿಸಿದರು. ಸರಕಾರಿ ಅಧಿಕಾರಿಗಳೂ ವ್ಯಾಪಾರಿಗಳೂ ತಮ್ಮ ಕರ್ತವ್ಯವು ಕೇಳಿಕೊಳ್ಳುವುದನ್ನು ಮೀರಿ ಸೇವೆಗಳನ್ನು ಸಲ್ಲಿಸಿದರು. ಬೇಕಾಗಿದ್ದ ಸಲಕರಣೆಗಳನ್ನು ದೊರಕಿಸಲಾಯಿತು, ಒಂದು ಮರಗೆಲಸದ ಕಾರ್ಖಾನೆಯನ್ನು ಸಹ. ಬೇಕಾಗಿದ್ದ ಸಾಮಗ್ರಿಗಳು ಸಕಾಲದಲ್ಲಿಯೇ ಬಂದು ಮುಟ್ಟುವಂತೆ, ಹಡಗು ಕಂಪೆನಿಯು ತನ್ನ ಹಡಗನ್ನು ಹೊಸದಾರಿಯಲ್ಲಿಯೂ ಕಳುಹಿಸಿತು.
ಭೇಟಿಗಾರರು, ಯಾರು ತಮ್ಮ ಮನೆಗಳಲ್ಲಿಯೂ ಸ್ವತ್ತುಗಳಲಿಯ್ಲೂ ಪಾಲಿಗರಾದರೊ ಆ ನೀವೂಏಯ ಸಾಕ್ಷಿಗಳ ಕಠಿನ ಕೆಲಸವನ್ನೂ ಅತಿಥಿ ಸತ್ಕಾರವನ್ನೂ ನಿಜವಾಗಿಯೂ ಮಾನ್ಯಮಾಡಿದರು. “ಸ್ಥಳಿಕ ಸಹೋದರಿಯರು ಶ್ಲಾಘ್ಯರಾಗಿದ್ದರು,” ಎಂದನು ಒಬ್ಬ ನಿರ್ಮಾಣ ಕೆಲಸಗಾರನು. ಪ್ರತಿ ದಿನ ಮಧ್ಯಾಹ್ನದ ಬಿಸಿ ಊಟವಲ್ಲದೆ, ಸಹೋದರಿಯರು ಅಡುಗೆ ಮಾಡಿ ತಯಾರಿಸಿದ ಹೊತ್ತರೂಟವನ್ನು ಪ್ರತಿ ಬೆಳಗ್ಗೆ 6:30ಕ್ಕೆ ಬಡಿಸಿದರು. ಊಟ ತಯಾರಿಸಲು ಕೆಲವರು ಬೆಳಗ್ಗೆ 4:30ಗೆ ಎದ್ದರು. ಒಬ್ಬ ನಿರ್ಮಾಣ ಕೆಲಸಗಾರನು ಹೇಳಿದ್ದು: “ನಮ್ಮ ಸ್ವಂತ ಮನೆಗಳಿಗಿಂತಲೂ ಹೆಚ್ಚು ಒಳ್ಳೆಯದಾಗಿ ನಾವು ಇಲ್ಲಿ ಜೀವಿಸಿದ್ದೇವೆಂದು ನನ್ನ ಯೋಚನೆ.”
ಮಾರ್ಚ್ 10ರಂದು ಆ ಸಂಭವದ ಬಗೆಗೆ ನೀವೂಏ ಸ್ಟಾರ್, “ನೀವೂಏಯಲ್ಲಿ ಪ್ರಥಮ ರಾಜ್ಯ ಸಭಾಗೃಹ” ಎಂಬ ಶೀರ್ಷಿಕೆಯಲ್ಲಿ ಒಂದು ಮುಖಪುಟ ಕಥೆಯನ್ನು ಮತ್ತು ನ್ಯೂ ಸೀಲೆಂಡ್ನವರು ಮತ್ತು ನೀವೂಏಯವರು ನಿವೇಶನದಲ್ಲಿ ಕೆಲಸಮಾಡುವ ಚಿತ್ರವನ್ನು ವರದಿಮಾಡಿತು. ಸಭಾಗೃಹವು ಗಾತ್ರದಲ್ಲಿ 280 ಚದರ ಮೀಟರುಗಳದ್ದೆಂದೂ 70ರಿಂದ 100 ಜನರನ್ನು ಕುಳ್ಳಿರಿಸುತ್ತದೆಂದೂ ಅದು ಹೇಳಿತು. ಆ ಲೇಖನವು ಕೂಡಿಸಿದ್ದು: “ಆ ಕೆಲಸವನ್ನು ಎರಡು [ವಾರಗಳಲ್ಲಿ] ಮುಗಿಸಸಾಧ್ಯವಿದೆ, ಆದರೆ ಈ ಸಂದರ್ಭದಲ್ಲಿ ಇದನ್ನು ಲಂಬಿಸಲಾಗುವುದು. ಈ ಹಂತದಲ್ಲಿ, ಕೆಲಸವಾರಂಭವಾಗಿ ಎರಡೇ ದಿನಗಳಲ್ಲಿ, ಅಸ್ತಿವಾರ, ಚೌಕಟ್ಟುಗಳು, ತೊಲೆಗಳು ಮತ್ತು ಚಾವಣಿಯು ಸಮಯಕ್ಕೆ ಮೊದಲೇ ನಿರ್ಮಿಸಲ್ಪಟ್ಟಿವೆ.”
ಒಬ್ಬ ಸ್ಥಳಿಕ ವ್ಯಾಪಾರಿಯು, ನೀವೂಏ ದ್ವೀಪದ ಸಕಲರೂ ಈ ಯೋಜನೆಯನ್ನು ನೋಡಿ ಅದರಿಂದ ಒಂದು ಪಾಠವನ್ನು ಕಲಿಯಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದನು. ಪ್ರೀತಿ ಮತ್ತು ಸಹಕಾರದಿಂದ ಏನನ್ನು ಮಾಡಸಾಧ್ಯವಿದೆ ಎಂಬುದನ್ನು ಅದು ಪ್ರತಿಯೊಬ್ಬರಿಗೆ ತೋರಿಸುವುದಾಗಿ ತಾನು ನಿರೀಕ್ಷಿಸಿದೆನೆಂದು ಅವನು ಹೇಳಿದನು.
ಪ್ರಾರಂಭೋತ್ಸವಕ್ಕೆ 204 ಜನರ ಸಮೂಹವು ಬಂತು. ಉಪಸ್ಥಿತರಾಗಿದ್ದ ಸಕಲರಿಗೆ ಅತಿ ಪ್ರೇರಕ ಅನುಭವವಾಗಿ ಪರಿಣಮಿಸಿದ್ದು, ನೀವೂಏಯ ಸಹೋದರರು, ಸಹೋದರಿಯರು, ಮತ್ತು ಮಕ್ಕಳು, ರಾಜ್ಯ ಸಭಾಗೃಹ ನಿರ್ಮಾಣವನ್ನು ಗೀತ ಮತ್ತು ಕುಣಿತದಲ್ಲಿ ಚಿತ್ರಿಸಿದ ಒಂದು ವಿಶೇಷ ಅರ್ಪಣೆಯೇ. ನಿರ್ಮಾಣ ತಂಡಕ್ಕೆ ಮತ್ತು ಯಾವನ ಆತ್ಮವು ಮನಸ್ಸುಗಳನ್ನೂ ಹೃದಯಗಳನ್ನೂ ಕೈಗಳನ್ನೂ ಆ ಕೆಲಸವನ್ನು ಮಾಡಿ ಮುಗಿಸಲು ಪ್ರೇರಿಸಿತೊ, ಆ ಯೆಹೋವನಿಗೆ ಉಪಕಾರಗಳ ಅಭಿವ್ಯಕ್ತಿಗಳನ್ನು ಸಲ್ಲಿಸಲಾಯಿತು.—ಯೆಶಾಯ 40:28-31.