ಕೊಡುವಂತಹ ಮನೋವೃತ್ತಿ ನಿಮಗಿದೆಯೊ?
ಜನರಿಗೆ ಕೊಡುವಂತೆ ಪ್ರಚೋದಿಸುವ ಒಂದಕ್ಕಿಂತ ಹೆಚ್ಚಿನ ಮನೋವೃತ್ತಿ ಇದೆಯೆಂಬುದನ್ನು ನೀವು ಅವಲೋಕಿಸಿದ್ದೀರೊ? ಒಂದು ಕೊಡುಗೆಯು ಪ್ರೀತಿಯ, ಉದಾರತೆಯ, ಗಣ್ಯತೆಯ ಒಂದು ವ್ಯಕ್ತಪಡಿಸುವಿಕೆಯಾಗಿರಬಹುದು. ಆದರೂ, ಅನುಗ್ರಹದಿಂದ ವೀಕ್ಷಿಸಲ್ಪಡುವಂತೆ ವ್ಯಕ್ತಿಯೊಬ್ಬನಿಗಿರುವ ಆಶೆಯಿಂದಲೂ ಒಂದು ಕೊಡುಗೆಯು ಬರಬಹುದೆಂಬುದನ್ನು ನೀವು ಗಮನಿಸಿಲ್ಲವೊ? ಅಥವಾ ಅದು ಕೇವಲ ಒಂದು ಹಂಗಿನ ಅನಿಸಿಕೆಯಿಂದ ಅಥವಾ ಕೊಡುವವನು ಪ್ರತಿಯಾಗಿ ಏನನ್ನೋ ಬಯಸುವುದರಿಂದ ಕೊಡಲ್ಪಡಬಹುದು.
ಕೊಡುಗೆಯು ಒಂದು ಸುಂದರ ಅಲಂಕಾರ ಪಟ್ಟಿಯಿಂದ ಕಟ್ಟಲ್ಪಟ್ಟಿರುವ ಒಂದು ಕಟ್ಟಿನಲ್ಲಿರಬಹುದು. ಆದರೆ ಒಂದು ಒಳ್ಳೆಯ ಕೊಡುಗೆಯು, ಒಂದು ಹೂಗೊಂಚಲು, ಒಂದು ಬಟ್ಟಲು ಆಹಾರ, ಅಥವಾ ಒಂದು ದಯೆಯ ಕೃತ್ಯವೂ ಆಗಿರಬಹುದೆಂಬುದು ಸತ್ಯವಲ್ಲವೊ? ವಾಸ್ತವದಲ್ಲಿ, ಅತಿ ಹೆಚ್ಚಾಗಿ ಗಣ್ಯಮಾಡಲ್ಪಡುವ ಕೊಡುಗೆಗಳು ತನ್ನನ್ನೇ ನೀಡಿಕೊಳ್ಳುವುದನ್ನು ಹೆಚ್ಚಾಗಿ ಒಳಗೂಡುತ್ತವೆ.
ಯಾರ ಅನುಗ್ರಹವನ್ನು ನೀವು ಅರಸುತ್ತೀರೋ ಅಂತಹವರು ಯಾರಾದರೂ ಇದ್ದಾರೊ?
ಯಾರ ಅನುಗ್ರಹವು ಅರಸಲ್ಪಡುತ್ತದೋ ಅಂತಹವರಿಗೆ ಒಂದು ಕೊಡುಗೆಯನ್ನು ಕೊಡುವುದು ಅಸಾಧಾರಣವಾಗಿರುವುದಿಲ್ಲ. ಕೆಲವು ದೇಶಗಳಲ್ಲಿ ಒಬ್ಬ ಭಾವಿ ವಧುವಿನ ಹೃದಯವನ್ನು ಗೆಲ್ಲಲು ಪ್ರಯತ್ನಿಸುತ್ತಿರುವ ಒಬ್ಬ ಯುವ ಪುರುಷನು, ಅವಳಿಗೆ ಹೂವುಗಳನ್ನು ತರಬಹುದು. ಆದಾಗಲೂ ವಿವೇಕಿಯಾದ ಹೆಂಗಸು ಆ ಕೊಡುಗೆಗಿಂತ ಮಿಗಿಲಾದದ್ದನ್ನು ನೋಡುತ್ತಾಳೆ. ಆ ಯುವ ಪುರುಷನ ಕೊಡುಗೆಯ ಮರೆಯಲ್ಲಿರುವ ಮನೋವೃತ್ತಿಯು, ಅವನನ್ನು ಒಬ್ಬ ಒಳ್ಳೆಯ ಗಂಡನನ್ನಾಗಿಯೂ ಮಾಡುವ ಒಂದು ಪ್ರೀತಿಯ ಮನೋವೃತ್ತಿಯಾಗಿದೆಯೊ ಎಂಬುದನ್ನು ಅವಳು ಪರಿಗಣಿಸುತ್ತಾಳೆ. ಅಂತಹ ಒಂದು ಕೊಡುಗೆಯು, ಅದು ಒಂದು ದೈವಭಕ್ತಿಯ ಮನೋವೃತ್ತಿಯನ್ನು ಪ್ರತಿಬಿಂಬಿಸುವಲ್ಲಿ, ಕೊಡುವವನನ್ನು ಹಾಗೂ ಪಡೆಯುವವನನ್ನು ಇಬ್ಬರನ್ನೂ ಹೆಚ್ಚಿನ ಸಂತೋಷಕ್ಕೆ ನಡಿಸಬಲ್ಲದು.
ನಾಬಾಲನ ಪತ್ನಿಯಾದ ಅಬೀಗೈಲಳು, ಇಸ್ರಾಯೇಲಿನ ಭಾವೀ ಅರಸನಾಗಿರಲು ದೇವರಿಂದ ಆರಿಸಲ್ಪಟ್ಟಿರುವವನಾಗಿ ಅವಳು ಗುರುತಿಸಿದ್ದ, ದಾವೀದನಿಗೋಸ್ಕರ ಒಂದು ಉದಾರವಾದ ಕೊಡುಗೆಯನ್ನು ಕ್ಷಿಪ್ರವಾಗಿ ತಯಾರಿಸಿದ ಒಂದು ಸಂದರ್ಭದ ಕುರಿತಾಗಿ ಬೈಬಲು ತಿಳಿಸುತ್ತದೆ. ಅವಳೂ ಅನುಗ್ರಹವನ್ನು ಅರಸಿದಳು. ಅವಳ ಗಂಡನು ದಾವೀದನನ್ನು ಧಿಕ್ಕರಿಸಿದ್ದನು ಮತ್ತು ದಾವೀದನ ಮನುಷ್ಯರಿಗೆ ಗದರಿಸುವಿಕೆಗಳನ್ನು ಅರಚಿದ್ದನು. ಸುಮಾರು 400 ಸಶಸ್ತ್ರ ಪುರುಷರ ಒಂದು ತಂಡದ ನಾಯಕನಾಗಿ, ದಾವೀದನು ನಾಬಾಲ್ ಮತ್ತು ಅವನ ಮನೆತನವನ್ನು ವಿನಾಶಗೊಳಿಸಲು ಹೊರಟಿದ್ದನು. ಅವನ ಪುರುಷರಿಗೆ ಆಹಾರದ ಸರಬರಾಯಿಗಳ ಒಂದು ಉದಾರವಾದ ಕೊಡುಗೆಯನ್ನು ದಾವೀದನಿಗೆ ಕೂಡಲೇ ಕಳುಹಿಸುತ್ತಾ, ಅಬೀಗೈಲಳು ನಡುವೆ ಬಂದಳು. ಅವಳ ಕೊಡುಗೆಯನ್ನು ಹಿಂಬಾಲಿಸುತ್ತಾ ಅವಳು ಸ್ವತಃ ಆಗಮಿಸಿದಳು, ಮತ್ತು ತನ್ನ ಗಂಡನು ಏನು ಮಾಡಿದ್ದನೋ ಅದಕ್ಕಾಗಿ ನಮ್ರತೆಯಿಂದ ಕ್ಷಮೆಯಾಚಿಸುತ್ತಾ, ಅವಳು ದಾವೀದನೊಂದಿಗೆ ತರ್ಕಿಸಿದಾಗ, ಮಹತ್ತಾದ ವಿವೇಚನಾಶಕ್ತಿಯ ಸಾಕ್ಷ್ಯವನ್ನು ಅವಳು ಕೊಟ್ಟಳು.
ಅವಳ ಉದ್ದಿಶ್ಯವು ಉದಾತ್ತವಾಗಿತ್ತು, ಮತ್ತು ಫಲಿತಾಂಶವು ಒಳ್ಳೇದಾಗಿತ್ತು. ದಾವೀದನು ಅವಳ ಕೊಡುಗೆಯನ್ನು ಸ್ವೀಕರಿಸಿ ಅವಳಿಗಂದದ್ದು: “ಸಮಾಧಾನದಿಂದ ಮನೆಗೆ ಹೋಗು; ನಿನ್ನನ್ನು ನೋಡಿ ನಿನ್ನ ವಿಜ್ಞಾಪನೆಯನ್ನು ಲಾಲಿಸಿದ್ದೇನೆ.” ಅನಂತರ ನಾಬಾಲನು ಸತ್ತ ಬಳಿಕ, ದಾವೀದನು ಅಬೀಗೈಲಳಿಗೆ ಮದುವೆಯನ್ನು ಪ್ರಸ್ತಾಪಿಸಿದನು ಮತ್ತು ಅವಳು ಸಂತೋಷದಿಂದ ಸ್ವೀಕರಿಸಿದಳು.—1 ಸಮುವೇಲ 25:13-42.
ಆದಾಗಲೂ, ಕೆಲವು ವಿದ್ಯಮಾನಗಳಲ್ಲಿ, ಒಬ್ಬ ವ್ಯಕ್ತಿಯು ಅರಸುತ್ತಿರುವ ಅನುಗ್ರಹವು, ಪಕ್ಷಪಾತದ ತೋರಿಸುವಿಕೆ, ನ್ಯಾಯದ ಪಥಭ್ರಷ್ಟತೆಯನ್ನೂ ಒಳಗೂಡಬಹುದು. ಅಂತಹ ವಿದ್ಯಮಾನದಲ್ಲಿ, ಆ ಕೊಡುಗೆಯು ಒಂದು ಲಂಚವಾಗಿದೆ. ಕೊಡುವವನು ತಾನು ಅದರಿಂದ ಪ್ರಯೋಜನ ಹೊಂದುವೆನೆಂದು ನೆನಸುತ್ತಾನೆ, ಆದರೆ ಅವನು ತನ್ನ ಮನಸ್ಸಿನ ಸಮಾಧಾನವನ್ನು ಸ್ವತಃ ಕಸಿದುಕೊಳ್ಳುತ್ತಾನೆ. ಇತರರು ಕಂಡುಹಿಡಿಯುವರು, ತನ್ನಿಂದ ಲೆಕ್ಕವನ್ನು ಕೇಳಲಾಗುವುದೆಂಬ ಅಪಾಯ ಯಾವಾಗಲೂ ಇರುತ್ತದೆ. ಅಪೇಕ್ಷಿಸಲ್ಪಟ್ಟ ಅನುಗ್ರಹವು ದೊರಕಿದರೂ, ಅದನ್ನು ಅರಸಿಕೊಂಡು ಹೋದವನು, ತನಗೆ ಈಗ, ಸಂದೇಹಾಸ್ಪದ ಹೇತುಗಳಿರುವ ಖ್ಯಾತಿಯಿರುವುದನ್ನು ಕಂಡುಕೊಳ್ಳಬಹುದು. ದೈವಿಕ ವಿವೇಕವನ್ನು ಪ್ರತಿಬಿಂಬಿಸುತ್ತಾ, ಅಂತಹ ಕೊಡುಗೆಗಳ ವಿರುದ್ಧವಾಗಿ ಬೈಬಲ್ ಎಚ್ಚರಿಸುತ್ತದೆ.—ಧರ್ಮೋಪದೇಶಕಾಂಡ 16:19; ಪ್ರಸಂಗಿ 7:7.
ಕೊಡುಗೆಯು ಒಂದು ಇಚ್ಛಾಪೂರ್ವಕ ಹೃದಯದಿಂದ ಬರುತ್ತದೋ?
ನೀವು ಪ್ರೀತಿಸುವ ಒಬ್ಬರಿಗೆ ನೀವು ಅದನ್ನು ಮಾಡಬಯಸುವುದರಿಂದ ಕೊಡುವುದು, ಇತರರು ನೀವು ಹಾಗೆ ಮಾಡಬೇಕೆಂದು ನಿಮಗೆ ಅನಿಸುವಂತೆ ಮಾಡುವದರಿಂದಾಗಿ ಕೊಡುವುದಕ್ಕಿಂತ ಹೆಚ್ಚಿನ ಆನಂದವನ್ನು ತರುತ್ತದೆ ಎಂಬ ವಿಷಯದಲ್ಲಿ ಯಾವ ಸಂದೇಹವೂ ಇಲ್ಲ.
ಭೌತಿಕವಾಗಿ ಅಗತ್ಯದಲ್ಲಿದ್ದ ಜೊತೆ ಕ್ರೈಸ್ತರಿಗಾಗಿ ಪರಿಹಾರ ಸರಬರಾಯಿಗಳ ಒಟ್ಟುಗೂಡಿಸುವಿಕೆಯ ಸಂಬಂಧದಲ್ಲಿ, ದೈವಿಕ ಕೊಡುವಿಕೆಯ ಕೆಲವು ಉತ್ಕೃಷ್ಟ ಸೂತ್ರಗಳನ್ನು ಅಪೊಸ್ತಲ ಪೌಲನು ರೇಖಿಸಿದನು. “ಒಬ್ಬನು ಕೊಡುವದಕ್ಕೆ ಮನಸ್ಸುಳ್ಳವನಾಗಿರುವಲ್ಲಿ ಅವನು ತನ್ನಲ್ಲಿ ಇರುವದಕ್ಕೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವದು; ಅವನಿಗೆ ಇಲ್ಲದ್ದನ್ನು ದೇವರು ಕೇಳಿಕೊಳ್ಳುವದಿಲ್ಲ” ಎಂದು ಅವನು ಬರೆದನು. “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.” (2 ಕೊರಿಂಥ 8:12; 9:7) ಹೀಗೆ, ನಿಮ್ಮ ಮೇಲೆ ಹೆಚ್ಚಿನದ್ದು ಅವಲಂಬಿಸಿದೆ. ಕೊಡುಗೆಗಳನ್ನು ಕೊಡುವ ಒಂದು ಆವೇಶದಲ್ಲಿ ಸಾಲಮಾಡುವ ಬದಲಿಗೆ, ನೀವು ನಿಮ್ಮ ಆದಾಯಕ್ಕನುಸಾರವಾಗಿ ಖರ್ಚುಮಾಡುತ್ತೀರೋ? ಮುಖ್ಯವಾಗಿ ಸಾಮಾಜಿಕ ಅಥವಾ ವಾಣಿಜ್ಯ ಒತ್ತಡದಿಂದಾಗಿ ಕೊಡಲು ಹಂಗಿಗರಾಗುವ ಬದಲಿಗೆ, ನೀವು ನಿಮ್ಮ ಹೃದಯದಲ್ಲಿ ನಿಶ್ಚಯಿಸಿದ್ದನ್ನು ಮಾಡುತ್ತೀರೋ? ಅಂತಹ ದೈವಿಕ ಸೂತ್ರಗಳನ್ನು ಅನ್ವಯಿಸಿದ ಆದಿ ಕ್ರೈಸ್ತರ ಕುರಿತಾಗಿ ಪೌಲನು ಬರೆದದ್ದು: “ದೇವಜನರಿಗೆ ಸಹಾಯಮಾಡುವ ಕೆಲಸದಲ್ಲಿ ತಾವು ಪಾಲುಗಾರರಾಗುವಂತೆ ಅಪ್ಪಣೆಯಾಗಬೇಕೆಂದು ನಮ್ಮನ್ನು ಬಹಳವಾಗಿ ಬೇಡಿಕೊಂಡರು.”—2 ಕೊರಿಂಥ 8:4.
ಅದಕ್ಕೆ ವಿಪರ್ಯಸ್ತವಾಗಿ, ಕ್ರಿಸ್ಮಸ್ನ ಮುಂಚಿನ ವಾರಗಳ ಕುರಿತಾಗಿ 1994ರ ನವೆಂಬರ್/ಡಿಸೆಂಬರ್ನ ರಾಯಲ್ ಬ್ಯಾಂಕ್ ಲೆಟರ್ ಹೇಳಿದ್ದು: “ಬೇರೆ ಸಮಯಗಳಲ್ಲಿ ಅವರು ಖರೀದಿಸದಿರುತ್ತಿದ್ದ ವಿಷಯಗಳನ್ನು ಖರೀದಿಸಲು ಬಳಕೆದಾರರನ್ನು ಪ್ರೇರೇಪಿಸಲು ವ್ಯಾಪಾರಿ ಹಿತಾಸಕ್ತಿಗಳಿಂದ ಪ್ರಚೋದಿಸಲ್ಪಟ್ಟಿರುವ ಕೃತಕ ಉದ್ರೇಕದ ಸ್ಥಿತಿಯಾಗಿ ಆ ಋತುವನ್ನು ಕಾಣಬಹುದು.” ಖರೀದಿಯು ಕ್ರೆಡಿಟ್ ಮೇಲೆ ಮಾಡಲ್ಪಟ್ಟಿರುವುದಾದರೆ, ಕೊಡುಗೆಗಳನ್ನು ಕೊಡುವುದರಿಂದ ಬರುವಂತಹ ಯಾವುದೇ ತೃಪ್ತಿಯು, ಬಿಲ್ ಪಾವತಿ ಮಾಡುವ ಸಮಯ ಬಂದಾಗ ಬೇಗನೇ ಮರೆಯಾಗುವುದು.
ನಿಮ್ಮ ಮುಖ್ಯ ಚಿಂತೆ—ಸಂದರ್ಭವೊ? ಅಥವಾ ಪ್ರೀತಿಯ ಒಂದು ವ್ಯಕ್ತಪಡಿಸುವಿಕೆಯೊ?
ಕೊಡುಗೆಗಳ ನಿಮ್ಮ ಕೊಡುವಿಕೆಯು, ಅವುಗಳನ್ನು ಅವಶ್ಯಪಡಿಸುವ ಸಂದರ್ಭಗಳಲ್ಲಿ ಹೆಚ್ಚಾಗಿ ಮಾಡಲ್ಪಡುತ್ತದೆಂದು ನೀವು ಕಂಡುಕೊಂಡಿದ್ದೀರೋ? ಹಾಗಿರುವಲ್ಲಿ, ಸ್ವಯಂ ಪ್ರೇರಿತ ಕೊಡುವಿಕೆಯು ತರಬಲ್ಲ ಹೆಚ್ಚಿನ ಆನಂದವನ್ನು ನೀವು ಕಳೆದುಕೊಳ್ಳುತ್ತಿರಬಹುದು.
ನಿರ್ದಿಷ್ಟ ದಿನಗಳಂದು ಕೊಡುಗೆ ಕೊಡುವಿಕೆಯ ಫಲಿತಾಂಶಗಳಿಂದ ಅಷ್ಟು ಪ್ರಸನ್ನರಾಗಿರದ ಅನೇಕ ಜನರಿದ್ದಾರೆ. ಒಬ್ಬ ಲೇಖಕಿಯೂ ಆಗಿರುವ ತಾಯಿಯೊಬ್ಬಳು ಅಂಗೀಕರಿಸಿದ್ದೇನೆಂದರೆ, ಕೊಡುಗೆಗಳು ನಿರೀಕ್ಷಿಸಲ್ಪಟ್ಟಿದ್ದ ದಿನವು ಹತ್ತರಿಸಿದಂತೆ ಅವಳ ಮಕ್ಕಳಲ್ಲಿ ಲೋಭವು ತಲೆದೋರುತ್ತಿತ್ತು. ಒಂದು ಸುಂದರ ಕೊಡುಗೆಯಲ್ಲಿ ಅವಳ ಸ್ವಂತ ಆನಂದಿಸುವಿಕೆಯು ಹಾಳಾಯಿತೆಂದು ಅವಳು ಒಪ್ಪಿದಳು, ಯಾಕಂದರೆ ಅವಳು ಬೇರೆ ಯಾವುದನ್ನೋ ನಿರೀಕ್ಷಿಸುತ್ತಿದ್ದಳು. ಉತ್ಸವಗಳನ್ನು ಮತ್ತು ಕೊಡುಗೆಗಳ ವಿನಿಮಯವನ್ನು ಒಳಗೂಡಿರುವ ರಜಾದಿನಗಳು, ಹೆಚ್ಚಿನ ಭಾವನಾತ್ಮಕ ಖಿನ್ನತೆ ಮತ್ತು ಮದ್ಯಪಾನ ದುರುಪಯೋಗವು ಇರುವ ಸಮಯಗಳೂ ಆಗಿರುತ್ತವೆಂದು ಅಸಂಖ್ಯಾತ ವರದಿಗಳು ಹೇಳುತ್ತವೆ.
ರಜಾ ಸಮಯದಲ್ಲಿ ಕೊಡುಗೆ ಕೊಡುವಿಕೆಯ ಮೇಲಿನ ಒತ್ತು ಕೆಲವೊಮ್ಮೆ ಮಕ್ಕಳನ್ನು ಪ್ರತಿಕೂಲವಾಗಿ ಬಾಧಿಸುತ್ತದೆಂಬುದನ್ನು ಅವಲೋಕಿಸಿದ್ದ ಕಾರಣ, ದ ನ್ಯೂ ಯಾರ್ಕ್ ಟೈಮ್ಸ್ನಲ್ಲಿ ಉದ್ಧರಿಸಲ್ಪಟ್ಟಿರುವ ಮನಶ್ಶಾಸ್ತ್ರದ ಒಬ್ಬ ಪ್ರೊಫೆಸರರು ಶಿಫಾರಸ್ಸು ಮಾಡುವುದು: “ಒತ್ತಡವನ್ನು ಕಡಿಮೆಗೊಳಿಸುವ ಒಂದು ವಿಧಾನದೋಪಾದಿ, ಕೆಲವು ಕೊಡುಗೆಗಳನ್ನು ಇತರ ದಿನಗಳಂದು ಕೊಡುವುದನ್ನು ಪರಿಗಣಿಸಿರಿ.” ಅದು ಒಂದು ಒಳ್ಳೆಯ ಪರಿಣಾಮವನ್ನು ಬೀರುವುದೆಂದು ನೀವು ನೆನಸುತ್ತೀರೊ?
ಕ್ರಿಸ್ಮಸ್ ಮತ್ತು ಜನ್ಮದಿನಗಳನ್ನು ಆಚರಿಸದ ಒಂದು ಮನೆತನದಲ್ಲಿರುವ 12 ವರ್ಷ ಪ್ರಾಯದ ಟ್ಯಾಮಿ, ಬರೆದುದು: “ನೀವು ಒಂದು ಕೊಡುಗೆಯನ್ನು ನಿರೀಕ್ಷಿಸದಂತಹ ಸಮಯದಲ್ಲಿ ಅದನ್ನು ಪಡೆಯುವುದು ಹೆಚ್ಚು ವಿನೋದಕರ.” ವರ್ಷದಲ್ಲಿ ಕೇವಲ ಒಂದು ಅಥವಾ ಎರಡು ಸಲ ಉಡುಗೊರೆಗಳನ್ನು ಕೊಡುವ ಬದಲಿಗೆ, ತನ್ನ ಹೆತ್ತವರು ತನಗೆ ಮತ್ತು ತನ್ನ ಸಹೋದರನಿಗೆ ಇಡೀ ವರ್ಷ ಕೊಡುತ್ತಿರುತ್ತಾರೆ ಎಂದು ಅವಳು ಹೇಳಿದಳು. ಆದರೆ ಅವಳಿಗೆ ಆ ಕೊಡುಗೆಗಳಿಗಿಂತಲೂ ಹೆಚ್ಚು ಪ್ರಾಮುಖ್ಯವಾಗಿರುವ ಯಾವುದೋ ಒಂದು ವಿಷಯವಿದೆ. ಅವಳು ಅನ್ನುವಂತೆ, “ನನಗೆ ಒಂದು ತುಂಬ ಸಂತೋಷದ ಕುಟುಂಬ ಜೀವಿತವಿದೆ.”
ಸೀಕ್ರೆಟ್ಸ್ ಆಫ್ ಸ್ಟ್ರಾಂಗ್ ಫ್ಯಾಮಿಲಿಸ್ ಎಂಬ ಪುಸ್ತಕವು ನೇರವಾಗಿ ತಿಳಿಸುವುದು: “ನಮ್ಮಲ್ಲಿ ಹೆಚ್ಚಿನವರು ಒಂದು ವರ್ಷದಲ್ಲಿ ಹಲವಾರು ಸಲ, ನಾವು ಪ್ರೀತಿಸುವಂತಹ ಜನರ ಜನ್ಮದಿನಗಳಿಗಾಗಿ, ವಾರ್ಷಿಕೋತ್ಸವಗಳು ಅಥವಾ ರಜಾದಿನಗಳಿಗಾಗಿ ಅತ್ಯಂತ ಯುಕ್ತವಾದ ಕೊಡುಗೆಗಳನ್ನು ಆರಿಸುವುದರಲ್ಲಿ ಸಮಯ ಮತ್ತು ಹಣವನ್ನು ವ್ಯಯಿಸುತ್ತೇವೆ. ಎಲ್ಲದಕ್ಕಿಂತ ಉತ್ತಮವಾದ ಕೊಡುಗೆಯು ಬ್ಯಾಂಕ್ ಅಕೌಂಟಿನಿಂದ ಏನನ್ನೂ ತೆಗೆಯದು. ಮತ್ತು ನೀವು ಅದಕ್ಕೆ ಹೊದಿಕೆ ಸುತ್ತಬೇಕಾಗಿರುವುದಿಲ್ಲ. ಅನೇಕ ಜನರಂತೆ, ನಿಮ್ಮಲ್ಲಿರುವ ಅತ್ಯಮೂಲ್ಯ ಆಸ್ತಿಯು ನಿಮ್ಮ ಜೀವವಾಗಿದೆ ಎಂಬುದನ್ನು ನೀವು ನಂಬುವಲ್ಲಿ, ನಿಮ್ಮ ಸಮಯದಲ್ಲಿ ಸ್ವಲ್ಪವು, ನೀವು ನೀಡಲಿಕ್ಕಿರುವ ಅತಿ ಬೆಲೆಬಾಳುವ ಕೊಡುಗೆಯಾಗಿದೆ. ನಮ್ಮ ಪ್ರಿಯ ಜನರಿಗೆ ನಾವು ಕೊಡುವ ಸಮಯದ ಮೊತ್ತದಲ್ಲಿ ಆ ಬೆಲೆಬಾಳುವ ಕೊಡುಗೆಯನ್ನು ನಾವು ಕೊಡುತ್ತೇವೆ.”
ಆ ಕೊಡುವಿಕೆಯು ನಿಮ್ಮ ಸ್ವಂತ ಕುಟುಂಬಕ್ಕಿಂತ ಆಚೆ ತಲಪುವಂತೆ ನೀವು ಬಿಡಸಾಧ್ಯವಿದೆ. ಇತರರಿಗಿರುವ ಒಂದು ಪ್ರತ್ಯಕ್ಷ ಅಗತ್ಯವನ್ನು ತುಂಬಿಸಲು ಸ್ವಯಂ ಪ್ರೇರಣೆಯ ಕೊಡುವಿಕೆಯು ವಿಶೇಷ ತೃಪ್ತಿಯನ್ನು ತರಬಲ್ಲದು. ಬಡವರು, ಕುಂಟರು, ಮತ್ತು ಕುರುಡರಿಗಾಗಿ ಅಂತಹ ಪ್ರೀತಿಯ ಚಿಂತೆಯನ್ನು ತೋರಿಸುವಂತೆ ಯೇಸು ಕ್ರಿಸ್ತನು ನಮ್ಮನ್ನು ಪ್ರೇರೇಪಿಸಿ, ಕೂಡಿಸಿದ್ದು: “ಅವರು ನಿನಗೆ ಮುಯ್ಯಿಗೆಮುಯ್ಯಿಮಾಡುವದಕ್ಕೆ ಏನೂ ಇಲ್ಲದವರಾಗಿದ್ದರೂ . . . ನೀನು ಧನ್ಯನಾಗುವಿ.”—ಲೂಕ 14:12-14.
ಆ ವಿಧದ ಕೊಡುವಿಕೆಯ ಕುರಿತಾಗಿ ರಾಕ್ಲೆಂಡ್ ಜರ್ನಲ್-ನ್ಯೂಸ್ (ಅಮೆರಿಕ) ಇತ್ತೀಚೆಗೆ ಒಂದು ಉದಾಹರಣೆಯನ್ನು ವರದಿಸಿತು. ಕುರುಡಿಯಾಗಿದ್ದ ಒಬ್ಬ ವೃದ್ಧ ಸ್ತ್ರೀಯ ಮನೆಯು ಕುಸಿದುಬಿದ್ದಾಗ, ಸ್ನೇಹಿತರು ಅವಳಿಗಾಗಿ ಒಂದು ಹೊಸ ಮನೆಯನ್ನು ಕಟ್ಟಿದರು. ಹಲವಾರು ಸ್ಥಳಿಕ ವ್ಯಾಪಾರ ಸಂಘಗಳಿಂದ ದಾನಗಳು ಮಾಡಲ್ಪಟ್ಟವು, ಮತ್ತು ಸ್ಥಳಿಕ ಸರಕಾರಿ ಏಜೆನ್ಸಿಯಿಂದ ಹಣಕಾಸಿನ ದಾನವು ಮಾಡಲ್ಪಟ್ಟಿತು. “ಆದರೂ, ಹೆಚ್ಚು ಪ್ರಾಮುಖ್ಯವಾಗಿ, ಯಾರಲ್ಲಿ ಹೆಚ್ಚಿನವರು ಹಾವೆರ್ಸ್ಟ್ರಾ ಯೆಹೋವನ ಸಾಕ್ಷಿಗಳ ಸಭೆಯನ್ನು ಹಾಜರಾಗುತ್ತಾರೋ, ಆ 150 ಅಥವಾ ಹೆಚ್ಚು ಜನರು, ಆ ಮನೆಯನ್ನು ಕಟ್ಟಲು ಸಮಯವನ್ನು ದಾನ ಮಾಡಿದರು” ಎಂದು ಆ ವಾರ್ತಾಪತ್ರಿಕೆಯು ಹೇಳಿತು.
ಆ ಲೇಖನವು ಮುಂದುವರಿಸಿದ್ದು: “ಆ ಕಟ್ಟಡ ನಿವೇಶನದಲ್ಲಿ, ಆಹಾರದಿಂದ ತುಂಬಿದಂತಹ ಮೇಜುಗಳ ಬಳಿಯಲ್ಲಿ ಸಾಮಾನುಗಳ ರಾಶಿಗಳು ಇದ್ದವು. ಕೆಲಸ ಮಾಡುವವರು ಎರಡು ದಿನಗಳಲ್ಲಿ ಮೂರು ಮಾಳಿಗೆಯ ಎತ್ತರಕ್ಕೆ, ಎರಡು ಕುಟುಂಬಗಳಿಗಾಗಿರುವ ಒಂದು ಮನೆಯನ್ನು ಕಟ್ಟಿದರು. . . . ಯೆಹೋವನ ಸಾಕ್ಷಿಗಳು ಕಟ್ಟಡಗಳನ್ನು ಕ್ಷಿಪ್ರವಾಗಿ ಕಟ್ಟುವ ಸಾಮರ್ಥ್ಯಕ್ಕಾಗಿ ಪ್ರಸಿದ್ಧರಾಗಿದ್ದಾರೆ. . . . ಅಂತಹ ಕ್ಷಿಪ್ರತೆಯಾದರೋ, ಅವರ ಉದ್ದೇಶದ ಚಿರಸ್ಥಾಯಿತದ್ವೊಂದಿಗೆ ವ್ಯತಿರಿಕ್ತವಾಗಿದೆ: ಪ್ರೀತಿಯ ಒಂದು ಕೆಲಸದಲ್ಲಿ ಬಾಳಿಕೆಯನ್ನು ಒದಗಿಸುವುದು. ಶ್ರೀಮತಿ ಬ್ಲೇಕ್ಲಿ ತನ್ನ ಹೊಸ ಮನೆಯನ್ನು ನೋಡಲಶಕ್ತಳಾಗಿರಬಹುದು, ಆದರೆ ಅವಳ ಕೈಗಳು ಅದನ್ನು ಸ್ಪರ್ಶಿಸಬಲ್ಲವು, ಮತ್ತು ಈ ನಿಸ್ವಾರ್ಥ ಕಾರ್ಯದಿಂದ ಅವಳ ಹೃದಯವು ಪ್ರಚೋದಿಸಲ್ಪಟ್ಟಿರುವ ಆಳವನ್ನು ಅದು ತಿಳಿದಿದೆ.”
ವರ್ಷವಿಡೀ ಇರುವ ಉದಾರತೆಯ ಮನೋವೃತ್ತಿ
ನಿಜವಾದ ಉದಾರತೆಯ ಮನೋವೃತ್ತಿ ಇರುವವರು ವಿಶೇಷ ದಿನಗಳಿಗಾಗಿ ಕಾಯುವುದಿಲ್ಲ. ಅವರ ಜೀವಿತಗಳು ಕೇವಲ ತಮ್ಮ ಸುತ್ತಲು ಕಟ್ಟಲ್ಪಟ್ಟಿರುವುದಿಲ್ಲ. ಅವರು ಯಾವುದೊ ಒಳ್ಳೇ ವಿಷಯವನ್ನು ಪಡೆಯುವಾಗ, ಅವರು ಅದನ್ನು ಇತರರೊಂದಿಗೆ ಹಂಚಿಕೊಳ್ಳುವುದರಲ್ಲಿ ಆನಂದಿಸುತ್ತಾರೆ. ಅವರು ಅಂತರ್ನಿರ್ಬಂಧದ ಕೊಡುಗೆ ಕೊಡುವವರಾಗಿದ್ದಾರೆಂದು ಇದರ ಅರ್ಥವಲ್ಲ. ಅವರ ಕುಟುಂಬಗಳು ವಂಚಿತವಾಗುವಷ್ಟರ ಮಟ್ಟಿಗೆ ಅವರು ಕೊಡುತ್ತಾರೆಂದು ಇದರ ಅರ್ಥವಲ್ಲ. ಗ್ರಾಹಕನ ಮೇಲೆ ಪರಿಣಾಮವೇನಾಗಿರುವುದು ಎಂಬುದನ್ನು ವಿಚಾರ ಮಾಡದೆ ಕೊಡುತ್ತಾರೆಂಬುದು ಇದರ ಅರ್ಥವಲ್ಲ. ಆದರೂ, ಯೇಸು ತನ್ನ ಶಿಷ್ಯರಿಗೆ ಮಾಡಲು ಕಲಿಸಿದಂತೆ, ಅವರು ‘ಕೊಡುವುದನ್ನು ಆಚರಿಸುವ’ ಜನರಾಗಿದ್ದಾರೆ.—ಲೂಕ 6:38, NW.
ವೃದ್ಧರಾಗಿರುವ, ಅಸ್ವಸ್ಥರಾಗಿರುವ ಅಥವಾ ಉತ್ತೇಜನದ ಅಗತ್ಯದಲ್ಲಿರುವ ಸ್ನೇಹಿತರ ಮತ್ತು ನೆರೆಹೊರೆಯವರ ಪರಿಸ್ಥಿತಿಗಳ ಕುರಿತಾಗಿ ಅವರು ಅರಿವುಳ್ಳವರಾಗಿದ್ದಾರೆ. ಅವರ “ಕೊಡುಗೆ”ಯು ಅಂಗಡಿಗೆ ಹೋಗುವುದು ಅಥವಾ ಮನೆಗೆಲಸದೊಂದಿಗೆ ಸಹಾಯ ಮಾಡುವುದು ಆಗಿರಬಹುದು. ಅದು ಸೌದೆ ಕಡಿಯುವಿಕೆ ಅಥವಾ ಹಿಮವನ್ನು ಗೋರುವುದು ಆಗಿರಬಹುದು. ಅದು ತಯಾರಿಸಲ್ಪಟ್ಟ ಒಂದು ಬಟ್ಟಲು ಆಹಾರವಾಗಿರಬಹುದು ಅಥವಾ ಭೇಟಿ ನೀಡಲು ಮತ್ತು ಜೊತೆಯಾಗಿ ಓದಲು ವ್ಯಯಿಸುವ ಒಂದು ತಾಸಿನ ಸಮಯವಾಗಿರಬಹುದು. ಅವರ ಸ್ವಂತ ಜೀವಿತಗಳು ಕಾರ್ಯಮಗ್ನವಾಗಿರಬಹುದು, ಆದರೆ ಸಹಾಯ ಮಾಡಲು ತೀರ ಕಾರ್ಯಮಗ್ನವಲ್ಲ. ನಿಜವಾಗಿಯೂ “ಪಡೆಯುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಸಂತೋಷವಿದೆ”ಯೆಂದು ಅವರು ಅನುಭವದಿಂದ ಕಲಿತಿದ್ದಾರೆ.—ಅ. ಕೃತ್ಯಗಳು 20:35, NW.
ಎಲ್ಲರಿಗಿಂತಲೂ ಅತ್ಯಂತ ಮಹಾನ್ ದಾತನು ನಿಶ್ಚಯವಾಗಿಯೂ, ನಮ್ಮ ಸೃಷ್ಟಿಕರ್ತನಾದ, ಯೆಹೋವ ದೇವರಾಗಿದ್ದಾನೆ. ಆತನು “ಎಲ್ಲರಿಗೂ ಜೀವಶ್ವಾಸ ಮುಂತಾದದ್ದೆಲ್ಲವನ್ನೂ ಕೊಡುವವನಾಗಿ”ದ್ದಾನೆ. (ಅ. ಕೃತ್ಯಗಳು 17:25) ದುಷ್ಟತನ, ಅಸ್ವಸ್ಥತೆ ಮತ್ತು ಮರಣಕ್ಕೆ ಒಂದು ಅಂತ್ಯವನ್ನು ತರುವ ಮತ್ತು ಈ ಭೂಮಿಯನ್ನು ಒಂದು ಪ್ರಮೋದವನವನ್ನಾಗಿ ಮಾಡುವ ತನ್ನ ಉದ್ದೇಶದ ಕುರಿತಾಗಿ ಆತನು ನಮಗೆ ಬೈಬಲಿನಲ್ಲಿ ಒಳನೋಟವನ್ನೂ ಒದಗಿಸುತ್ತಾನೆ. (ಕೀರ್ತನೆ 37:10, 11; ಪ್ರಕಟನೆ 21:4, 5) ಇದರ ಕುರಿತಾಗಿ ಕಲಿತ ಬಳಿಕ, ಉದಾರ ಮನೋವೃತ್ತಿಯುಳ್ಳವರು ಆ ಸುವಾರ್ತೆಯನ್ನು ತಮ್ಮಷ್ಟಕ್ಕೇ ಇಟ್ಟುಕೊಂಡಿರುವುದಿಲ್ಲ. ಅವರ ಅತಿ ಮಹತ್ತಾದ ಸಂತೋಷಗಳಲ್ಲಿ ಒಂದು, ಅದನ್ನು ಇತರರೊಂದಿಗೆ ಹಂಚಿಕೊಳ್ಳುವುದೇ ಆಗಿದೆ. ಅವರದ್ದು ನಿಜವಾಗಿಯೂ ಕೊಡುವಿಕೆಯ ಒಂದು ದೇವ ಭಕ್ತಿಯ ಮನೋವೃತ್ತಿಯಾಗಿದೆ. ನೀವು ಬೆಳೆಸಿಕೊಳ್ಳುತ್ತಿರುವ ಮನೋವೃತ್ತಿಯು ಅದೇ ಆಗಿದೆಯೋ?
[ಪುಟ 7 ರಲ್ಲಿರುವ ಚಿತ್ರಗಳು]
ಅತ್ಯಮೂಲ್ಯ ಕೊಡುಗೆಗಳಲ್ಲಿ ಕೆಲವೊಂದಕ್ಕೆ ಹಣವೆಚ್ಚ ತಗಲುವುದಿಲ್ಲ