ಯೆಹೋವನ ಶುದ್ಧಾರಾಧನೆಗಾಗಿ ಈರ್ಷ್ಯೆ
“ಯಾರ ಹೆಸರು ಈರ್ಷ್ಯೆ ಎಂದಾಗಿದೆಯೋ ಆ ಯೆಹೋವನು ಒಬ್ಬ ಈರ್ಷ್ಯೆಯ ದೇವರಾಗಿದ್ದಾನೆ.”—ವಿಮೋಚನಕಾಂಡ 34:14, NW.
1. ದೇವರ ಪ್ರಧಾನ ಗುಣವು ಯಾವುದು, ಮತ್ತು ಅದು ಆತನ ಈರ್ಷ್ಯೆಗೆ ಹೇಗೆ ಸಂಬಂಧಿಸುತ್ತದೆ?
ಯೆಹೋವನು ತನ್ನನ್ನು “ಒಬ್ಬ ಈರ್ಷ್ಯೆಯ ದೇವರಾಗಿ” ವರ್ಣಿಸಿಕೊಳ್ಳುತ್ತಾನೆ. “ಈರ್ಷ್ಯೆ” ಎಂಬ ಪದಕ್ಕೆ ನಕಾರಾತ್ಮಕ ಒಳಾರ್ಥಗಳಿರುವುದರಿಂದ, ಹೀಗೆ ಏಕೆಂದು ನೀವು ಕುತೂಹಲಪಟ್ಟೀರಿ. ನಿಶ್ಚಯವಾಗಿ ದೇವರ ಪ್ರಧಾನ ಗುಣವು ಪ್ರೀತಿಯಾಗಿದೆ. (1 ಯೋಹಾನ 4:8) ಆದುದರಿಂದ ಆತನಲ್ಲಿನ ಈರ್ಷ್ಯೆಯ ಯಾವುದೇ ಭಾವನೆಗಳು ಮಾನವಕುಲದ ಹಿತಕ್ಕಾಗಿರಲೇಬೇಕು. ವಾಸ್ತವದಲ್ಲಿ ದೇವರ ಈರ್ಷ್ಯೆಯು ವಿಶ್ವದ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಅತ್ಯಾವಶ್ಯಕವೆಂದು ನಾವು ನೋಡುವೆವು.
2. “ಈರ್ಷ್ಯೆ” ಗಾಗಿರುವ ಹೀಬ್ರು ಪದಗಳನ್ನು ಭಾಷಾಂತರಿಸುವ ಕೆಲವು ವಿಧಾನಗಳು ಯಾವುವು?
2 “ಈರ್ಷ್ಯೆ”ಗೆ ಸಂಬಂಧಿಸಿದ ಹೀಬ್ರು ಪದಗಳು ಹೀಬ್ರು ಶಾಸ್ತ್ರಗಳಲ್ಲಿ 80 ಕ್ಕಿಂತಲೂ ಹೆಚ್ಚುಸಾರಿ ತೋರಿಬರುತ್ತವೆ. ಈ ನಿರ್ದೇಶನಗಳಲ್ಲಿ ಬಹುಮಟ್ಟಿಗೆ ಅರ್ಧ ಪಾಲಷ್ಟು ನಿರ್ದೇಶನಗಳು ಯೆಹೋವ ದೇವರ ಕುರಿತಾಗಿವೆ. ಜಿ. ಏಚ್. ಲಿವಿಂಗ್ಸ್ಟನ್ ವಿವರಿಸುವುದು: “ಈರ್ಷ್ಯೆಯ ಭಾವರೂಪವು ದೇವರಿಗೆ ಅನ್ವಯಿಸಲ್ಪಡುವಾಗ, ಅದೊಂದು ವಕ್ರ ಭಾವೋದ್ರೇಕದ ಅರ್ಥವನ್ನಲ್ಲ, ಬದಲಾಗಿ ಯೆಹೋವನ ಆರಾಧನೆಯ ಏಕನಿಷ್ಠೆಯ ಮೇಲೆ ಆಗ್ರಹವನ್ನು ಹಾಕುವ ಅರ್ಥವನ್ನು ಕೊಡುತ್ತದೆ.” (ಪೆಂಟಟ್ಯೂಕ್ ಅದರ ಸಾಂಸ್ಕೃತಿಕ ಪರಿಸರದಲ್ಲಿ, ಇಂಗ್ಲಿಷ್) ಹೀಗೆ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಕೆಲವೊಮ್ಮೆ ಈ ಹೀಬ್ರು ನಾಮಪದವನ್ನು “ಏಕನಿಷ್ಠ ಭಕ್ತಿಯ ಮೇಲೆ ಆಗ್ರಹ” ವಾಗಿ ಭಾಷಾಂತರಿಸುತ್ತದೆ. (ಯೆಹೆಜ್ಕೇಲ 5:13, NW) ಇತರ ಸೂಕ್ತವಾದ ಭಾಷಾಂತರಗಳು “ಹುಮ್ಮಸ್ಸು” ಅಥವಾ “ಹುರುಪು” ಆಗಿವೆ.—ಕೀರ್ತನೆ 79:5, NW; ಯೆಶಾಯ 9:7, NW.
3. ಯಾವ ವಿಧಗಳಲ್ಲಿ ಈರ್ಷ್ಯೆಯು ಕೆಲವೊಮ್ಮೆ ಒಂದು ಸದುದ್ದೇಶವನ್ನು ಸಾಧಿಸಬಲ್ಲದು?
3 ಮನುಷ್ಯನು ಈರ್ಷ್ಯೆಪಡುವ ಸಾಮರ್ಥ್ಯದೊಂದಿಗೆ ನಿರ್ಮಿಸಲ್ಪಟ್ಟನು, ಆದರೆ ಮಾನವಕುಲವು ಪಾಪಕ್ಕೆ ಬಿದುದ್ದರಿಂದ ಈರ್ಷ್ಯೆಯ ವಿಕೃತರೂಪವು ಪರಿಣಮಿಸಿದೆ. ಆದರೂ, ಮಾನುಷ ಈರ್ಷ್ಯೆಯು ಒಂದು ಸದುದ್ದೇಶವನ್ನು ಸಾಧಿಸಬಲ್ಲದು. ಪ್ರಿಯನೊಬ್ಬನನ್ನು ಕೆಟ್ಟ ಪ್ರಭಾವಗಳಿಂದ ರಕ್ಷಿಸಲು ಅದು ಒಬ್ಬ ವ್ಯಕ್ತಿಯನ್ನು ಪ್ರೇರೇಪಿಸಬಲ್ಲದು. ಅಷ್ಟಲ್ಲದೆ, ಮನುಷ್ಯರು ಯೆಹೋವನಿಗಾಗಿ ಮತ್ತು ಆತನ ಆರಾಧನೆಗಾಗಿ ಈರ್ಷ್ಯೆಯನ್ನು ಯೋಗ್ಯವಾಗಿ ತೋರಿಸಬಲ್ಲರು. (1 ಅರಸುಗಳು 19:10) ಯೆಹೋವನಿಗಾಗಿ ಅಂತಹ ಈರ್ಷ್ಯೆಯ ಸರಿಯಾದ ತಿಳಿವಳಿಕೆಯನ್ನು ಕೊಡಲಿಕ್ಕಾಗಿ, ಆ ಹೀಬ್ರು ನಾಮಪದವನ್ನು, ಆತನೆಡೆಗೆ “ಯಾವದೇ ಪ್ರತಿಸ್ಪರ್ಧೆಯನ್ನೂ ಸಹಿಸಿಕೊಳ್ಳದ” ಎಂಬರ್ಥದಲ್ಲಿ ಭಾಷಾಂತರಿಸಬಹುದು.—2 ಅರಸುಗಳು 10:16, NW.
ಚಿನ್ನದ ಬಸವ
4. ನೀತಿಯುಳ್ಳ ಈರ್ಷ್ಯೆಯು ಒಳಗೊಂಡಿರುವ ಯಾವ ಆಜ್ಞೆಯು ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ದೇವರ ಧರ್ಮಶಾಸ್ತ್ರದಲ್ಲಿ ಪ್ರಧಾನವಾಗಿತ್ತು?
4 ಸೀನಾಯಿ ಬೆಟ್ಟದಲ್ಲಿ ಇಸ್ರಾಯೇಲ್ಯರು ಧರ್ಮಶಾಸ್ತ್ರವನ್ನು ಪಡೆದ ಮೇಲೆ ಏನು ಸಂಭವಿಸಿತೋ ಅದು, ನೀತಿಯುಳ್ಳ ಈರ್ಷ್ಯೆಯ ಒಂದು ಉದಾಹರಣೆಯಾಗಿದೆ. ಮನುಷ್ಯ ನಿರ್ಮಿತ ದೇವರುಗಳನ್ನು ಅವರು ಪೂಜಿಸಬಾರದೆಂದು ಅವರಿಗೆ ಪದೇ ಪದೇ ಎಚ್ಚರಿಕೆ ನೀಡಲಾಗಿತ್ತು. ಯೆಹೋವನು ಅವರಿಗೆ ಹೇಳಿದ್ದು: “ನಿನ್ನ ದೇವರಾದ ಯೆಹೋವನೆಂಬ ನಾನು ಏಕನಿಷ್ಠ ಭಕ್ತಿಯನ್ನು ಕೇಳಿಕೊಳ್ಳುವ ದೇವರು [ಅಥವಾ, “ಈರ್ಷ್ಯೆಯುಳ್ಳ (ಹುರುಪುಳ್ಳ) ದೇವರು; ಪ್ರತಿಸ್ಪರ್ಧೆಯನ್ನು ಸಹಿಸಿಕೊಳ್ಳದ ದೇವರು”].” (ವಿಮೋಚನಕಾಂಡ 20:5, NW, ಪಾದಟಿಪ್ಪಣಿ; ಹೋಲಿಸಿ ವಿಮೋಚನಕಾಂಡ 20:22, 23; 22:20; 23:13, 24, 32, 33.) ಯೆಹೋವನು ಇಸ್ರಾಯೇಲ್ಯರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡು, ಅವರನ್ನು ಆಶೀರ್ವದಿಸುವೆನೆಂದೂ ಮತ್ತು ವಾಗ್ದತ್ತ ದೇಶದೊಳಗೆ ಬರಮಾಡುವೆನೆಂದೂ ವಚನವಿತ್ತನು. (ವಿಮೋಚನಕಾಂಡ 23:22, 31) ಮತ್ತು ಜನರು ಹೇಳಿದ್ದು: “ಯೆಹೋವನ ಆಜ್ಞೆಗಳನ್ನೆಲ್ಲಾ ನಾವು ಅನುಸರಿಸಿ ವಿಧೇಯರಾಗಿರುವೆವು.”—ವಿಮೋಚನಕಾಂಡ 24:7.
5, 6. (ಎ) ಸೀನಾಯಿ ಬೆಟ್ಟದಲ್ಲಿ ಪಾಳೆಯ ಮಾಡಿಕೊಂಡಿದ್ದಾಗ, ಇಸ್ರಾಯೇಲ್ಯರು ಘೋರ ಪಾಪವನ್ನು ಮಾಡಿದ್ದು ಹೇಗೆ? (ಬಿ) ಯೆಹೋವನು ಮತ್ತು ಆತನ ನಿಷ್ಠಾವಂತ ಸೇವಕರು ಸೀನಾಯಿ ಬೆಟ್ಟದಲ್ಲಿ ನೀತಿಯುಕ್ತ ಈರ್ಷ್ಯೆಯನ್ನು ತೋರಿಸಿದ್ದು ಹೇಗೆ?
5 ಆದರೂ, ಇಸ್ರಾಯೇಲ್ಯರು ಸ್ವಲ್ಪ ಸಮಯದಲ್ಲಿಯೇ ದೇವರ ವಿರುದ್ಧವಾಗಿ ಪಾಪಗೈದರು. ಅವರಿನ್ನೂ ಸೀನಾಯಿ ಬೆಟ್ಟದ ಬುಡದಲ್ಲಿ ಪಾಳೆಯಮಾಡಿಕೊಂಡಿದ್ದರು. ಮೋಶೆಯು ಅನೇಕ ದಿನಗಳಿಂದ, ದೇವರಿಂದ ಅಧಿಕ ಉಪದೇಶವನ್ನು ಹೊಂದುತ್ತಾ, ಬೆಟ್ಟದ ಮೇಲೆಯೇ ಇದ್ದನು, ಮತ್ತು ತಮಗಾಗಿ ಒಂದು ದೇವರನ್ನು ಮಾಡುವಂತೆ ಜನರು ಮೋಶೆಯ ಅಣನ್ಣಾದ ಆರೋನನನ್ನು ಒತ್ತಯಾಪಡಿಸಿದರು. ಆರೋನನು ಜನರ ಕೋರಿಕೆಯಂತೆ ನಡೆದು, ಅವರು ಒದಗಿಸಿದ ಚಿನ್ನದಿಂದ ಒಂದು ಬಸವನನ್ನು ಮಾಡಿದನು. ಈ ಮೂರ್ತಿಯು ಯೆಹೋವನನ್ನು ಪ್ರತಿನಿಧೀಕರಿಸಿತೆಂದು ಹೇಳಲಾಯಿತು. (ಕೀರ್ತನೆ 106:20) ಮರುದಿನ ಅವರು ಯಜ್ಞಗಳನ್ನು ಅರ್ಪಿಸುತ್ತಾ “ಅದಕ್ಕೆ ಅಡಬ್ಡಿದ್ದ”ರು. ಆಮೇಲೆ “ಎದ್ದು ಕುಣಿದಾಡಿದರು.”—ವಿಮೋಚನಕಾಂಡ 32:1, 4, 6, 8, 17-19.
6 ಇಸ್ರಾಯೇಲ್ಯರು ಉತ್ಸವವನ್ನು ಮಾಡುತ್ತಾ ಇದ್ದಾಗ, ಮೋಶೆಯು ಬೆಟ್ಟದಿಂದ ಇಳಿದುಬಂದನು. ಅವರ ಈ ಅವಮಾನಕರ ನಡವಳಿಕೆಯನ್ನು ಕಂಡು ಅವನು ಕೂಗಿ ಹೇಳಿದ್ದು: “ಯೆಹೋವನ ಪಕ್ಷದವರೆಲ್ಲರು ನನ್ನ ಬಳಿಗೆ ಬರಬೇಕು.” (ವಿಮೋಚನಕಾಂಡ 32: 25, 26) ಲೇವಿಯ ಪುತ್ರರು ಮೋಶೆಯ ಬಳಿಗೆ ಕೂಡಿಬಂದರು, ಮತ್ತು ಅವರು ಕತ್ತಿಗಳನ್ನು ತೆಗೆದುಕೊಂಡು ಆ ಮೂರ್ತಿಪೂಜಕ ವಿಲಾಸಿಗಳನ್ನು ಸಂಹರಿಸುವಂತೆ ಅವನು ಅವರಿಗೆ ಅಪ್ಪಣೆಕೊಟ್ಟನು. ದೇವರ ಶುದ್ಧಾರಾಧನೆಗಾಗಿ ತಮ್ಮ ಈರ್ಷ್ಯೆಯನ್ನು ಪ್ರದರ್ಶಿಸುತ್ತಾ, ಲೇವಿಯರು ದೋಷಿಗಳಾಗಿದ್ದ ತಮ್ಮ ಸಹೋದರರಲ್ಲಿ ಸುಮಾರು 3,000 ಮಂದಿಯನ್ನು ಕೊಂದುಹಾಕಿದರು. ಬದುಕಿ ಉಳಿದವರ ಮೇಲೆ ಒಂದು ವ್ಯಾಧಿಯನ್ನು ಬರಮಾಡುವ ಮೂಲಕ ಯೆಹೋವನು ಆ ಕ್ರಿಯೆಯನ್ನು ಪುಷ್ಟೀಕರಿಸಿದನು. (ವಿಮೋಚನಕಾಂಡ 32:28, 35) ಬಳಿಕ ದೇವರು ಈ ಆಜ್ಞೆಯನ್ನು ಪುನರುಚ್ಚರಿಸಿದನು: “ನೀವು ಇನ್ನೊಬ್ಬ ದೇವನಿಗೆ ಅಡ್ಡಬೀಳಲೇಬಾರದು, ಏಕೆಂದರೆ ಯಾರ ಹೆಸರು ಈರ್ಷ್ಯೆ ಎಂದಾಗಿದೆಯೋ ಆ ಯೆಹೋವನು ಒಬ್ಬ ಈರ್ಷ್ಯೆಯ ದೇವರಾಗಿದ್ದಾನೆ.”—ವಿಮೋಚನಕಾಂಡ 34:14, NW.
ಪೆಗೋರದ ಬಾಳನು
7, 8. (ಎ) ಪೆಗೋರದ ಬಾಳನ ಸಂಬಂಧದಲ್ಲಿ ಅನೇಕ ಇಸ್ರಾಯೇಲ್ಯರು ಘೋರ ವಿಗ್ರಹಾರಾಧನೆಗೆ ಬಲಿಬಿದ್ದದ್ದು ಹೇಗೆ? (ಬಿ) ಯೆಹೋವನಿಂದ ತರಲ್ಪಟ್ಟ ವ್ಯಾಧಿಯು ಕೊನೆಗೊಂಡದ್ದು ಹೇಗೆ?
7 ನಾಲ್ವತ್ತು ವರ್ಷಗಳ ಬಳಿಕ, ಇಸ್ರಾಯೇಲ್ ಜನಾಂಗವು ವಾಗ್ದತ್ತ ದೇಶವನ್ನು ಪ್ರವೇಶಿಸಲಿದ್ದಾಗ, ಆಕರ್ಷಕ ಮೋವಾಬ್ಯ ಮತ್ತು ಮಿದ್ಯಾನ ಸ್ತ್ರೀಯರು, ಅನೇಕ ಇಸ್ರಾಯೇಲ್ಯರು ಬಂದು ತಮ್ಮ ಅತಿಥಿ ಸತ್ಕಾರವನ್ನು ಅನುಭೋಗಿಸುವಂತೆ ಸೆಳೆದರು. ಸುಳ್ಳು ದೇವರುಗಳ ಆರಾಧಕರೊಂದಿಗಿನ ಈ ಅತ್ಯಾಪ್ತ ಸಂಬಂಧವನ್ನು ಈ ಪುರುಷರು ತಿರಸ್ಕರಿಸಬೇಕಿತ್ತು. (ವಿಮೋಚನಕಾಂಡ 34:12, 15) ಬದಲಾಗಿ, ಅವರು ‘ಹೋರಿಗಳಂತೆ ವಧ್ಯಸ್ಥಾನಕ್ಕೆ’ ಓಡಿ, ಆ ಸ್ತ್ರೀಯರೊಂದಿಗೆ ಜಾರತನವನ್ನು ನಡಿಸುತ್ತಾ, ಪೆಗೋರದ ಬಾಳನಿಗೆ ಅಡ್ಡಬೀಳುವುದರಲ್ಲಿ ಅವರೊಂದಿಗೆ ಜೊತೆಗೂಡಿದರು.—ಜ್ಞಾನೋಕ್ತಿ 7:21, 22; ಅರಣ್ಯಕಾಂಡ 25:1-3.
8 ಈ ಅವಮಾನಕರವಾದ ಲೈಂಗಿಕ ಆರಾಧನೆಯಲ್ಲಿ ಒಳಗೊಂಡವರನ್ನು ಕೊಲ್ಲುವಂತೆ ಯೆಹೋವನು ಒಂದು ವ್ಯಾಧಿಯನ್ನು ಬರಮಾಡಿದನು. ನಿರ್ದೋಷಿಗಳಾದ ಇಸ್ರಾಯೇಲ್ಯರು ದೋಷಿಗಳಾದ ತಮ್ಮ ಸಹೋದರರನ್ನು ಕೊಲ್ಲುವಂತೆಯೂ ದೇವರು ಅಪ್ಪಣೆಕೊಟ್ಟನು. ಜಿಮ್ರಿ ಎಂಬ ಒಬ್ಬ ಇಸ್ರಾಯೇಲ್ ಮುಖ್ಯಸ್ಥನು, ನಾಚಿಕೆಗೆಟ್ಟ ಪ್ರತಿಭಟನೆಯಲ್ಲಿ ತನ್ನ ಪಾಳೆಯಕ್ಕೆ ಒಬ್ಬ ಮಿದ್ಯಾನಿನ ರಾಜಕುವರಿಯನ್ನು ಸಂಗಮಿಸುವುದಕ್ಕಾಗಿ ಕರೆತಂದನು. ಇದನ್ನು ಕಂಡ ದೈವಭೀತಿಯ ಯಾಜಕನಾದ ಫೀನೆಹಾಸನು ಆ ಅನೈತಿಕ ದಂಪತಿಗಳನ್ನು ಸಂಹರಿಸಿಬಿಟ್ಟನು. ಆಗ ವ್ಯಾಧಿಯು ನಿಂತಿತು, ಮತ್ತು ದೇವರು ಘೋಷಿಸಿದ್ದು: “ಫೀನೆಹಾಸನು . . . ಇಸ್ರಾಯೇಲ್ಯರ ಮೇಲಿದ್ದ ನನ್ನ ಕೋಪವನ್ನು ತೊಲಗಿಸಿದ್ದಾನೆ; ನನ್ನನ್ನು ಪ್ರೇರಿಸಿದ ಅದೇ ಈರ್ಷ್ಯೆಯುಳ್ಳ ಕ್ರೋಧವನ್ನು ಅವನು ಅವರ ಮಧ್ಯೆ ತೋರಿಸಿದರ್ದಿಂದ ನಾನು ನನ್ನ ಈರ್ಷ್ಯೆಯಲ್ಲಿ ಇಸ್ರಾಯೇಲ್ಯರನ್ನು ನಿರ್ಮೂಲಗೊಳಿಸಲಿಲ್ಲ.” (ಅರಣ್ಯಕಾಂಡ 25:11, ದ ನ್ಯೂ ಇಂಗ್ಲಿಷ್ ಬೈಬಲ್) ಜನಾಂಗವು ನಾಶನದಿಂದ ಪಾರಾದರೂ, ಕಡಿಮೆಪಕ್ಷ 23,000 ಇಸ್ರಾಯೇಲ್ಯರು ಸತ್ತರು. (1 ಕೊರಿಂಥ 10:8) ವಾಗ್ದತ್ತ ದೇಶವನ್ನು ಪ್ರವೇಶಿಸುವ ದೀರ್ಘಕಾಲದಿಂದ ನೆಚ್ಚಿಕೊಂಡಿದ್ದ ನಿರೀಕ್ಷೆಯನ್ನು ಅವರು ಕಳೆದುಕೊಂಡರು.
ಒಂದು ಎಚ್ಚರಿಕೆಯ ಪಾಠ
9. ಯೆಹೋವನ ಶುದ್ಧಾರಾಧನೆಗಾಗಿ ಈರ್ಷ್ಯೆಯಿಲ್ಲದವರಾಗಿದ್ದ ಕಾರಣ ಇಸ್ರಾಯೇಲ್ ಮತ್ತು ಯೆಹೂದದ ಜನರಿಗೆ ಏನು ಸಂಭವಿಸಿತು?
9 ಶೋಚನೀಯವಾಗಿ, ಇಸ್ರಾಯೇಲ್ಯರು ಬೇಗನೆ ಈ ಪಾಠಗಳನ್ನು ಮರೆತುಬಿಟ್ಟರು. ಯೆಹೋವನ ಶುದ್ಧಾರಾಧನೆಗಾಗಿ ಅವರು ಈರ್ಷ್ಯೆಯುಳ್ಳವರಾಗಿ ಪರಿಣಮಿಸಲಿಲ್ಲ. “ತಮ್ಮ ವಿಗ್ರಹಗಳಿಂದ [ದೇವರನ್ನು] ಈರ್ಷ್ಯೆಗೆ ಪ್ರೇರೇಪಿಸುತ್ತಾ ಇದ್ದರು.” (ಕೀರ್ತನೆ 78:58, NW) ಪರಿಣಾಮವಾಗಿ, ಇಸ್ರಾಯೇಲಿನ ಹತ್ತು ಕುಲಗಳು ಸಾ.ಶ.ಪೂ. 740 ರಲ್ಲಿ ಅಶ್ಶೂರ್ಯರಿಂದ ಬಂದಿವಾಸಿಗಳಾಗಿ ಒಯ್ಯಲ್ಪಡುವಂತೆ ಯೆಹೋವನು ಬಿಟ್ಟುಕೊಟ್ಟನು. ಸಾ.ಶ.ಪೂ. 607 ರಲ್ಲಿ ಅವರ ಪ್ರಧಾನ ಪಟ್ಟಣವಾದ ಯೆರೂಸಲೇಮ್ ನಾಶಮಾಡಲ್ಪಟ್ಟಾಗ, ಯೆಹೂದದ ಉಳಿದ ಎರಡು-ಕುಲ ರಾಜ್ಯವೂ ತದ್ರೀತಿಯ ಶಿಕ್ಷೆಯನ್ನು ಅನುಭವಿಸಿತು. ಅನೇಕರು ಕೊಲ್ಲಲ್ಪಟ್ಟರು, ಮತ್ತು ಪಾರಾಗಿ ಉಳಿದವರು ಬಾಬೆಲಿಗೆ ಬಂದಿವಾಸಿಗಳಾಗಿ ಒಯ್ಯಲ್ಪಟ್ಟರು. ಇಂದು ಎಲ್ಲ ಕ್ರೈಸ್ತರಿಗೆ ಎಂತಹ ಒಂದು ಎಚ್ಚರಿಕೆಯ ನಿದರ್ಶನ!—1 ಕೊರಿಂಥ 10:6, 11.
10. ಪಶ್ಚಾತ್ತಾಪಪಡದ ಮೂರ್ತಿಪೂಜಕರಿಗೆ ಏನು ಸಂಭವಿಸುವುದು?
10 ಈಗ ಭೂಮಿಯ ಜನಸಂಖ್ಯೆಯ ಮೂರನೆಯ ಒಂದು ಭಾಗವು—ಸುಮಾರು 190 ಕೋಟಿ—ತನ್ನನ್ನು ಕ್ರೈಸ್ತರೆಂದು ಹೇಳಿಕೊಳ್ಳುತ್ತದೆ. (1994ರ ಬ್ರಿಟ್ಯಾನಿಕ ವರ್ಷದ ಪುಸ್ತಕ, ಇಂಗ್ಲಿಷ್) ಇವುಗಳಲ್ಲಿ ಹೆಚ್ಚಿನವರು ತಮ್ಮ ಆರಾಧನೆಗಳಲ್ಲಿ ಪ್ರತಿಮೆಗಳನ್ನು, ವಿಗ್ರಹಗಳನ್ನು ಮತ್ತು ಕ್ರೂಜೆಗಳನ್ನು ಬಳಸುವ ಚರ್ಚುಗಳಿಗೆ ಸೇರಿದವರು. ತಮ್ಮ ಮೂರ್ತಿಪೂಜೆಯ ಮೂಲಕ ಅವನನ್ನು ಈರ್ಷ್ಯೆಗೆ ಪ್ರೇರೇಪಿಸಿದ ತನ್ನ ಸ್ವಂತ ಜನರನ್ನು ಯೆಹೋವನು ಉಳಿಸಲಿಲ್ಲ. ಹೀಗಿರಲಾಗಿ, ಭೌತಿಕ ವಸ್ತುಗಳ ಸಹಾಯದಿಂದ ಆರಾಧನೆ ಮಾಡುವ ಕ್ರೈಸ್ತರೆನ್ನಿಸಿಕೊಳ್ಳುವವರನ್ನೂ ಆತನು ಉಳಿಸನು. “ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು,” ಎಂದನು ಯೇಸು ಕ್ರಿಸ್ತನು. (ಯೋಹಾನ 4:24) ಅದಲ್ಲದೆ, ವಿಗ್ರಹಗಳಿಗೆ ವಿರುದ್ಧವಾಗಿ ಕಾಪಾಡಿಕೊಳ್ಳುವಂತೆ ಬೈಬಲು ಕ್ರೈಸ್ತರನ್ನು ಎಚ್ಚರಿಸುತ್ತದೆ. (1 ಯೋಹಾನ 5:21) ದೇವರ ರಾಜ್ಯಕ್ಕೆ ಬಾಧ್ಯರಾಗದೆ ಇರುವವರಲ್ಲಿ ಪಶ್ಚಾತ್ತಾಪಪಡದ ವಿಗ್ರಹಾರಾಧಕರೂ ಸೇರಿರುತ್ತಾರೆ.—ಗಲಾತ್ಯ 5:20, 21.
11. ಒಂದು ವಿಗ್ರಹಕ್ಕೆ ಅಡ್ಡಬೀಳದೇ ಒಬ್ಬ ಕ್ರೈಸ್ತನು ವಿಗ್ರಹಾರಾಧನೆಯ ದೋಷಿಯಾಗಬಹುದು ಹೇಗೆ, ಮತ್ತು ಅಂತಹ ವಿಗ್ರಹಾರಾಧನೆಯನ್ನು ವರ್ಜಿಸಲು ಒಬ್ಬನಿಗೆ ಯಾವುದು ಸಹಾಯ ಮಾಡುವುದು? (ಎಫೆಸ 5:5)
11 ಸತ್ಕ್ರೈಸ್ತನೊಬ್ಬನು ಒಂದು ವಿಗ್ರಹಕ್ಕೆ ಎಂದೂ ಅಡ್ಡಬೀಳನಾದರೂ, ದೇವರು ಯಾವುದನ್ನು ಮೂರ್ತಿಪೂಜೆಯಾಗಿ, ಅಶುದ್ಧವಾಗಿ, ಮತ್ತು ಪಾಪಪೂರ್ಣವಾಗಿ ವೀಕ್ಷಿಸುತ್ತಾನೋ ಅದನ್ನೂ ಅವನು ವರ್ಜಿಸಲೇಬೇಕು. ದೃಷ್ಟಾಂತಕ್ಕೆ, ಬೈಬಲು ಎಚ್ಚರಿಸುವುದು: “ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ; ಇವುಗಳ ನಿಮಿತ್ತ ದೇವರ ಕೋಪವು ಉಂಟಾಗುತ್ತದೆ.” (ಕೊಲೊಸ್ಸೆ 3:5, 6, ಓರೆಅಕ್ಷರಗಳು ನಮ್ಮವು.) ಈ ಮಾತುಗಳಿಗೆ ವಿಧೇಯತೆಯು ಅನೈತಿಕ ವರ್ತನೆಯ ತಿರಸ್ಕಾರವನ್ನು ಅವಶ್ಯಪಡಿಸುತ್ತದೆ. ಅಶುದ್ಧವಾದ ಕಾಮಾಭಿಲಾಷೆಯನ್ನು ಕೆರಳಿಸಲು ರಚಿಸಲ್ಪಡುವ ಮನೋರಂಜನೆಯ ವರ್ಜನೆಯನ್ನೂ ಇದು ಕೇಳಿಕೊಳ್ಳುತ್ತದೆ. ಅಂಥ ಒಂದು ಅಭಿಲಾಷೆಯನ್ನು ತೃಪ್ತಿಗೊಳಿಸುವ ಬದಲಾಗಿ, ಸತ್ಯ ಕ್ರೈಸ್ತರು ದೇವರ ಶುದ್ಧಾರಾಧನೆಗಾಗಿ ಈರ್ಷ್ಯೆಯುಳ್ಳವರಾಗುತ್ತಾರೆ.
ದಿವ್ಯಭಕ್ತಿಯ ಈರ್ಷ್ಯೆಯ ಈಚಿನ ಮಾದರಿಗಳು
12, 13. ದೇವರ ಶುದ್ಧಾರಾಧನೆಗಾಗಿ ಈರ್ಷ್ಯೆ ತೋರಿಸಿದುದರಲ್ಲಿ ಯೇಸು ಒಂದು ಮಹತ್ತಾದ ಮಾದರಿಯನ್ನಿಟ್ಟದ್ದು ಹೇಗೆ?
12 ದೇವರ ಶುದ್ಧಾರಾಧನೆಗಾಗಿ ಈರ್ಷ್ಯೆಯನ್ನು ತೋರಿಸಿದ ಮನುಷ್ಯನೊಬ್ಬನ ಅತಿ ಮಹತ್ತಾದ ಮಾದರಿಯು ಯೇಸು ಕ್ರಿಸ್ತನದ್ದು. ತನ್ನ ಶುಶ್ರೂಷೆಯ ಮೊದಲನೆಯ ವರ್ಷದಲ್ಲಿ, ದೇವಾಲಯದ ಅಂಗಣದಲ್ಲಿ ವ್ಯಾಪಾರ ನಡೆಸುತ್ತಿದ್ದ ಲೋಭಿ ವರ್ತಕರನ್ನು ಅವನು ಕಂಡನು. ಸಂದರ್ಶಿಸುವ ಯೆಹೂದ್ಯರಿಗೆ ತಮ್ಮ ವಿದೇಶೀ ಹಣವನ್ನು, ಆಲಯದ ತೆರಿಗೆಯಾಗಿ ಸ್ವೀಕರಿಸಲ್ಪಡುತ್ತಿದ್ದ ಹಣವಾಗಿ ಮಾರ್ಪಡಿಸಲು ಚಿನಿವಾರರ ಸೇವೆಗಳು ಬೇಕಾಗಿದ್ದಿರಬಹುದು. ದೇವರ ಧರ್ಮಶಾಸ್ತ್ರದಿಂದ ಅವಶ್ಯಪಡಿಸಲ್ಪಟ್ಟ ಯಜ್ಞಗಳನ್ನು ಅರ್ಪಿಸುವುದಕ್ಕಾಗಿ ಅವರಿಗೆ ಪಶುಗಳನ್ನು ಮತ್ತು ಪಕ್ಷಿಗಳನ್ನು ಖರೀದಿಸುವ ಅಗತ್ಯವೂ ಇತ್ತು. ಅಂತಹ ವ್ಯಾಪಾರ ವ್ಯವಹಾರಗಳು ದೇವಾಲಯದ ಅಂಗಣಗಳ ಹೊರಗೆ ನಡಿಸಲ್ಪಡುತ್ತಿದ್ದವು. ಇನ್ನೂ ಕೆಟ್ಟದ್ದಾಗಿ, ವ್ಯಾಪಾರಿಗಳು ವಿಪರೀತ ಬೆಲೆಯನ್ನು ಹೇರುವ ಮೂಲಕ ತಮ್ಮ ಸಹೋದರರ ಧಾರ್ಮಿಕ ಅಗತ್ಯಗಳ ದುರುಪಯೋಗಮಾಡಿ ಲಾಭಗಳಿಸುತ್ತಿದ್ದರು. ದೇವರ ಶುದ್ಧಾರಾಧನೆಗಾಗಿ ಈರ್ಷ್ಯೆಯಿಂದ ದಹಿಸಲ್ಪಟ್ಟವನಾಗಿ ಯೇಸು ಒಂದು ಕೊರಡೆಯನ್ನು ಬಳಸಿ ಕುರಿ, ದನಗಳನ್ನು ಅಲ್ಲಿಂದ ಹೊರಗಟ್ಟಿಬಿಟ್ಟನು. “ನನ್ನ ತಂದೆಯ ಮನೆಯನ್ನು ಸಂತೆ ಮಾಡಬೇಡಿರಿ,” ಎಂದು ಹೇಳುತ್ತಾ, ಚಿನಿವಾರರ ಮೇಜುಗಳನ್ನು ಸಹ ಅವನು ಕೆಡವಿಹಾಕಿದನು. (ಯೋಹಾನ 2:14-16) ಹೀಗೆ ಯೇಸು ಕೀರ್ತನೆ 69:9ರ ಮಾತುಗಳನ್ನು ನೆರವೇರಿಸಿದನು: “ನಿನ್ನ ಆಲಯಾಭಿಮಾನವು [ಅಥವಾ, “ಈರ್ಷ್ಯೆಯು,” ಬೈಯಿಂಗ್ಟನ್] ನನ್ನನ್ನು ಬೆಂಕಿಯಂತೆ ದಹಿಸಿದೆ.”
13 ಲೋಭಿ ವ್ಯಾಪಾರಿಗಳು ಯೆಹೋವನಾಲಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದನ್ನು ಯೇಸುವು ಮೂರು ವರ್ಷಗಳ ಅನಂತರ ಪುನಃ ಗಮನಿಸಿದನು. ಆತನು ಅದನ್ನು ಎರಡನೆಯ ಬಾರಿ ಶುದ್ಧೀಕರಿಸುವನೋ? ಆತನು ಶುಶ್ರೂಷೆಯನ್ನು ಪ್ರಾರಂಭಿಸಿದಾಗ ದೇವರ ಶುದ್ಧಾರಾಧನೆಗಾಗಿ ಅವನಿಗಿದ್ದ ಈರ್ಷ್ಯೆಯು ಆಗಲೂ ಅಷ್ಟೇ ಬಲವಾಗಿತ್ತು. ಮಾರುವವರನ್ನೂ ಕೊಳ್ಳುವವರನ್ನೂ ಅವನು ಹೊರಗಟ್ಟಿದನು. ತನ್ನ ಕ್ರಿಯೆಗಳಿಗಾಗಿ ಅವನು ಇನ್ನಷ್ಟು ಹೆಚ್ಚು ಬಲವಾದ ಕಾರಣವನ್ನು ಕೊಡುತ್ತಾ ಅಂದದ್ದು: “ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವದು ಎಂದು ಬರೆದಿದೆಯಲ್ಲಾ? ಆದರೆ ನೀವು ಅದನ್ನು ಕಳ್ಳರ ಗವಿ ಮಾಡಿದ್ದೀರಿ.” (ಮಾರ್ಕ 11:17) ದಿವ್ಯಭಕ್ತಿಯ ಈರ್ಷ್ಯೆಯನ್ನು ತೋರಿಸುವುದರಲ್ಲಿ ಪಟ್ಟುಹಿಡಿಯುವಿಕೆಯ ಎಂತಹ ಒಂದು ಆಶ್ಚರ್ಯಕರ ಮಾದರಿ!
14. ಶುದ್ಧಾರಾಧನೆಗಾಗಿ ಯೇಸುವಿನ ಈರ್ಷ್ಯೆಯು ನಮ್ಮನ್ನು ಹೇಗೆ ಪ್ರಭಾವಿಸಬೇಕು?
14 ಈಗ ಮಹಿಮಾಭರಿತನಾಗಿರುವ ಕರ್ತನಾದ ಯೇಸು ಕ್ರಿಸ್ತನ ವ್ಯಕ್ತಿತ್ವವು ಬದಲಾಗಿರುವುದಿಲ್ಲ. (ಇಬ್ರಿಯ 13:8) ಆತನು ಭೂಮಿಯಲ್ಲಿದ್ದಾಗ ಹೇಗೋ ಹಾಗೆಯೇ, ಈ 20 ನೆಯ ಶತಮಾನದಲ್ಲೂ, ತನ್ನ ತಂದೆಯ ಶುದ್ಧಾರಾಧನೆಗಾಗಿ ಅವನು ಅಷ್ಟೇ ಈರ್ಷ್ಯೆ ಉಳ್ಳವನಾಗಿದ್ದಾನೆ. ಪ್ರಕಟನೆ ಪುಸ್ತಕದಲ್ಲಿ ಏಳು ಸಭೆಗಳಿಗೆ ದಾಖಲೆಯಾದ ಯೇಸುವಿನ ಸಂದೇಶಗಳಲ್ಲಿ ಇದನ್ನು ಕಾಣಸಾಧ್ಯವಿದೆ. ಇವುಗಳ ಪ್ರಮುಖ ಅನ್ವಯವು ಈಗ, ಅಂದರೆ “ಕರ್ತನ ದಿನ” ದಲ್ಲಿ ಆಗುತ್ತಿದೆ. (ಪ್ರಕಟನೆ 1:10; 2:1–3:22) ಮಹಿಮಾಭರಿತ ಯೇಸು ಕ್ರಿಸ್ತನ “ಕಣ್ಣುಗಳು ಬೆಂಕಿಯ ಉರಿಯಂತೆ” ಇರುವುದನ್ನು ದರ್ಶನದಲ್ಲಿ ಅಪೊಸ್ತಲ ಯೋಹಾನನು ಕಂಡನು. (ಪ್ರಕಟನೆ 1:15) ಇದು ಸೂಚಿಸುವುದೇನಂದರೆ, ಸಭೆಗಳು ಯೆಹೋವನ ಸೇವೆಗಾಗಿ ಶುದ್ಧವೂ ಸ್ವೀಕಾರಾರ್ಹವೂ ಆಗಿ ಉಳಿಯುವಂತೆ ನಿಶ್ಚಿತಗೊಳಿಸಲು ಕ್ರಿಸ್ತನು ಅವುಗಳನ್ನು ಪರೀಕ್ಷಿಸುವಾಗ, ಯಾವುದೂ ಆತನ ದೃಷ್ಟಿಗೆ ಮರೆಯಾಗುವುದಿಲ್ಲ. ಇಬ್ಬರು ಯಜಮಾನರನ್ನು—ದೇವರನ್ನೂ ಧನವನ್ನೂ—ಸೇವಿಸಲು ಪ್ರಯತ್ನಿಸುವುದರ ವಿರುದ್ಧವಾಗಿ ಯೇಸು ಕೊಟ್ಟ ಎಚ್ಚರಿಕೆಯನ್ನು ಇಂದಿನ ದಿನದ ಕ್ರೈಸ್ತರು ಮನಸ್ಸಿನಲ್ಲಿಡುವ ಅಗತ್ಯವಿದೆ. (ಮತ್ತಾಯ 6:24) ಲವೊದಿಕೀಯ ಸಭೆಯ ಪ್ರಾಪಂಚಿಕ ಸದಸ್ಯರಿಗೆ ಯೇಸು ಹೇಳಿದ್ದು: “ನೀನು ಬೆಚ್ಚಗೂ ಇಲ್ಲದೆ ತಣ್ಣಗೂ ಇಲ್ಲದೆ ಉಗುರುಬೆಚ್ಚಗೆರುವದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಕಾರುವೆನು. . . . ಆದದರಿಂದ ನೀನು ಆಸಕ್ತನಾಗಿರು; ದೇವರ ಕಡೆಗೆ ತಿರುಗಿಕೋ.” (ಪ್ರಕಟನೆ 3:14-19) ನೇಮಿತ ಸಭಾ ಹಿರಿಯರು ತಮ್ಮ ನುಡಿಯಿಂದಲೂ ಮಾದರಿಯಿಂದಲೂ, ತಮ್ಮ ಜೊತೆ ವಿಶ್ವಾಸಿಗಳಿಗೆ ಪ್ರಾಪಂಚಿಕತೆಯ ಪಾಶವನ್ನು ವರ್ಜಿಸಲು ಸಹಾಯ ಮಾಡಬೇಕು. ಈ ಕಾಮಾಭಿಮುಖವಾದ ಜಗತ್ತಿನ ನೈತಿಕ ಭ್ರಷ್ಟಾಚಾರದಿಂದಲೂ ಹಿರಿಯರು ಹಿಂಡನ್ನು ಕಾಪಾಡಬೇಕು. ಇನ್ನೂ ಹೆಚ್ಚಾಗಿ, ದೇವಜನರು ಸಭೆಯಲ್ಲಿ ಯಾವುದೇ ಈಜೆಬೇಲ್ ಪ್ರಭಾವವನ್ನು ಸಹಿಸಿಕೊಳ್ಳಲು ಧೈರ್ಯಪಡಬಾರದು.—ಇಬ್ರಿಯ 12:14, 15; ಪ್ರಕಟನೆ 2:20.
15. ಯೆಹೋವನ ಆರಾಧನೆಗಾಗಿ ಈರ್ಷ್ಯೆ ತೋರಿಸಿದುದರಲ್ಲಿ ಅಪೊಸ್ತಲ ಪೌಲನು ಯೇಸುವನ್ನು ಅನುಕರಿಸಿದ್ದು ಹೇಗೆ?
15 ಅಪೊಸ್ತಲ ಪೌಲನು ಕ್ರಿಸ್ತನ ಒಬ್ಬ ಅನುಕರಣಕಾರನಾಗಿದ್ದನು. ಹೊಸತಾಗಿ ಸ್ನಾನಿತರಾದ ಕ್ರೈಸ್ತರನ್ನು ಆತ್ಮಿಕವಾಗಿ ಅಹಿತಕರವಾದ ಪ್ರಭಾವಗಳಿಂದ ಕಾಪಾಡುವುದಕ್ಕಾಗಿ ಅವನಂದದ್ದು: “ದಿವ್ಯಭಕ್ತಿಯ ಈರ್ಷ್ಯೆಯಿಂದ ನಾನು ನಿಮ್ಮ ಮೇಲೆ ಈರ್ಷ್ಯೆಪಡುತ್ತೇನೆ.” (2 ಕೊರಿಂಥ 11:2, NW) ಇದಕ್ಕೆ ಮುಂಚಿತವಾಗಿ, ಶುದ್ಧಾರಾಧನೆಗಾಗಿ ಪೌಲನ ಈರ್ಷ್ಯೆಯು, ಭ್ರಷ್ಟ ಪ್ರಭಾವವಾಗಿದ್ದ ಪಶ್ಚಾತ್ತಾಪಪಡದ ಒಬ್ಬ ಜಾರನನ್ನು ಬಹಿಷ್ಕರಿಸುವಂತೆ ಇದೇ ಸಭೆಗೆ ಸೂಚಿಸಲು ಪ್ರೇರಿಸಿತ್ತು. ಆ ಸಂದರ್ಭದಲ್ಲಿ ಕೊಡಲ್ಪಟ್ಟ ಪ್ರೇರಿತ ಉಪದೇಶಗಳು, ಇಂದಿನ ಹಿರಿಯರಿಗೆ, ಅವರು ಯೆಹೋವನ ಸಾಕ್ಷಿಗಳ 75,500 ಕ್ಕಿಂತಲೂ ಹೆಚ್ಚು ಸಭೆಗಳನ್ನು ಶುದ್ಧವಾಗಿಡಲು ಪರಿಶ್ರಮಪಡುತ್ತಿರುವಾಗ, ಒಂದು ಮಹಾ ಸಹಾಯಕವಾಗಿ ಪರಿಣಮಿಸಿವೆ.—1 ಕೊರಿಂಥ 5:1, 9-13.
ದೇವರ ಈರ್ಷ್ಯೆಯು ಆತನ ಜನರಿಗೆ ಪ್ರಯೋಜನವಾಗುತ್ತದೆ
16, 17. (ಎ) ಪುರಾತನ ಯೆಹೂದವನ್ನು ದೇವರು ಶಿಕ್ಷಿಸಿದಾಗ, ಜನಾಂಗಗಳು ಯಾವ ಮನೋಭಾವವನ್ನು ತೋರಿಸಿದವು? (ಬಿ) ಯೆಹೂದದ 70 ವರ್ಷಗಳ ಬಂದಿವಾಸದ ಬಳಿಕ, ಯೆಹೋವನು ಯೆರೂಸಲೇಮಿಗಾಗಿ ತನ್ನ ಈರ್ಷ್ಯೆ ತೋರಿಸಿದ್ದು ಹೇಗೆ?
16 ಯೆಹೂದದ ಜನರನ್ನು ಬಾಬೆಲಿಗೆ ಬಂದಿವಾಸಿಗಳಾಗಿ ಒಯ್ಯಲ್ಪಡುವಂತೆ ಬಿಡುವ ಮೂಲಕ ದೇವರು ಅವರನ್ನು ಶಿಕ್ಷಿಸಿದಾಗ, ಅವರು ಅಪಹಾಸ್ಯ ಮಾಡಲ್ಪಟ್ಟರು. (ಕೀರ್ತನೆ 137:3) ಈರ್ಷ್ಯೆಯ ದ್ವೇಷದಿಂದ, ಎದೋಮ್ಯರು ದೇವಜನರ ಮೇಲೆ ವಿಪತ್ತನ್ನು ತರಲು ಬಾಬೆಲಿನವರಿಗೂ ಸಹಾಯ ಮಾಡಿದರು, ಮತ್ತು ಯೆಹೋವನು ಇದನ್ನು ಗಮನಕ್ಕೆ ತೆಗೆದುಕೊಂಡನು. (ಯೆಹೆಜ್ಕೇಲ 35:11; 36:15) ಪಾರಾಗಿ ಉಳಿದವರು ಬಂದಿವಾಸದಲ್ಲಿ ಪಶ್ಚಾತ್ತಾಪಪಟ್ಟರು, ಮತ್ತು 70 ವರ್ಷಗಳ ಬಳಿಕ ಯೆಹೋವನು ಅವರನ್ನು ಅವರ ದೇಶಕ್ಕೆ ಪುನಃಸ್ಥಾಪಿಸಿದನು.
17 ಆರಂಭದಲ್ಲಿ, ಯೆಹೂದದ ಜನರು ಒಂದು ನಿರಾಶಾಕರ ದಶೆಯಲಿದ್ದರು. ಯೆರೂಸಲೇಮ್ ಪಟ್ಟಣ ಮತ್ತು ಅದರ ದೇವಾಲಯವು ಧ್ವಂಸವಾಗಿ ಬಿದ್ದಿವೆ. ಆದರೆ ಸುತ್ತಮುತ್ತಲಿನ ಜನಾಂಗಗಳು ದೇವಾಲಯವನ್ನು ಪುನಃ ಕಟ್ಟುವ ಪ್ರಯತ್ನಗಳೆಲ್ಲವನ್ನು ವಿರೋಧಿಸಿದವು. (ಎಜ್ರ 4:4, 23, 24) ಇದರ ಕುರಿತು ಯೆಹೋವನಿಗೆ ಹೇಗನಿಸಿತು? ಪ್ರೇರಿತ ದಾಖಲೆಯು ಹೇಳುವುದು: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ಯೆರೂಸಲೇಮಿಗೂ ಚೀಯೋನಿಗೂ ಅವಮಾನವಾಯಿತಲ್ಲಾ ಎಂದು ಬಹಳವಾಗಿ ಕುದಿಯು [“ಈರ್ಷ್ಯೆಪಡು,” NW] ತ್ತೇನೆ. ನೆಮ್ಮದಿಯಾಗಿರುವ ಜನಾಂಗಗಳ ಮೇಲೆ ನನಗೆ ಬಲು ಸಿಟ್ಟೇರಿದೆ; ನಾನು [ಯೆರೂಸಲೇಮಿನ ಮೇಲೆ] ಸ್ವಲ್ಪ ಮಾತ್ರ ಸಿಟ್ಟುಗೊಂಡು ಮಾಡಿಸಬೇಕೆಂದಿದ್ದ ಕೇಡಿಗಿಂತ ಅವು ಹೆಚ್ಚಾಗಿ ಮಾಡಿದವಷ್ಟೆ. ಹೀಗಿರಲು ಯೆಹೋವನು ಇಂತೆನ್ನುತ್ತಾನೆ—ನಾನು ಕನಿಕರವುಳ್ಳವನಾಗಿ ಯೆರೂಸಲೇಮಿಗೆ ಹಿಂದಿರುಗಿದ್ದೇನೆ; ನನ್ನ ಆಲಯವು ಅಲ್ಲಿ ಕಟ್ಟಲ್ಪಡುವದು; ಇದು ಸೇನಾಧೀಶ್ವರ ಯೆಹೋವನ ನುಡಿ.” (ಜೆಕರ್ಯ 1:14-16) ಈ ವಾಗ್ದಾನಕ್ಕೆ ಸರಿಯಾಗಿ, ದೇವಾಲಯ ಮತ್ತು ಯೆರೂಸಲೇಮ್ ಪಟ್ಟಣವು ಯಶಸ್ವಿಯಾಗಿ ಪುನಃ ಕಟ್ಟಲ್ಪಟ್ಟವು.
18. ಒಂದನೆಯ ಜಾಗತಿಕ ಯುದ್ಧದ ಸಮಯದಲ್ಲಿ ಸತ್ಯ ಕ್ರೈಸ್ತರು ಏನನ್ನು ಅನುಭವಿಸಿದರು?
18 ನಿಜ ಕ್ರೈಸ್ತ ಸಭೆಗೆ 20 ನೆಯ ಶತಮಾನದಲ್ಲಿ ತದ್ರೀತಿಯ ಅನುಭವವಾಗಿತ್ತು. ಮೊದಲನೆಯ ಜಾಗತಿಕ ಯುದ್ಧದ ಸಮಯದಲ್ಲಿ, ಯೆಹೋವನು ತನ್ನ ಜನರನ್ನು ಶಿಸ್ತುಗೊಳಿಸಿದನು, ಯಾಕೆಂದರೆ ಆ ಜಾಗತಿಕ ಹೋರಾಟದಲ್ಲಿ ಅವರು ಕಟ್ಟುನಿಟ್ಟಿನ ತಾಟಸ್ಥ್ಯವನ್ನು ತೋರಿಸಿರಲಿಲ್ಲ. (ಯೋಹಾನ 17:16) ರಾಜಕೀಯ ಶಕ್ತಿಗಳು ಅವರನ್ನು ದಬ್ಬುವಂತೆ ದೇವರು ಬಿಟ್ಟುಕೊಟ್ಟನು, ಮತ್ತು ಕ್ರೈಸ್ತಪ್ರಪಂಚದ ವೈದಿಕರು ಈ ವಿಪತ್ತಿನ ನಿಮಿತ್ತವಾಗಿ ಉಲ್ಲಾಸಪಟ್ಟರು. ವಾಸ್ತವದಲ್ಲಿ, ಯೆಹೋವನ ಸಾಕ್ಷಿಗಳು ಆಗ ಕರೆಯಲ್ಪಟ್ಟಂತೆ, ಬೈಬಲ್ ವಿದ್ಯಾರ್ಥಿಗಳ ಕೆಲಸವನ್ನು ನಿಷೇಧಿಸಲಿಕ್ಕಾಗಿ ರಾಜಕೀಯ ಮೂಲಾಂಶಗಳನ್ನು ಲಭ್ಯಗೊಳಿಸುವುದರಲ್ಲಿ ನಾಯಕತ್ವವನ್ನು ವಹಿಸಿದವರು ವೈದಿಕರೇ ಆಗಿದ್ದರು.—ಪ್ರಕಟನೆ 11:7, 10.
19. 1919 ರಿಂದ ಯೆಹೋವನು ತನ್ನ ಆರಾಧನೆಗಾಗಿ ಹೇಗೆ ಈರ್ಷ್ಯೆಯನ್ನು ತೋರಿಸಿದ್ದಾನೆ?
19 ಆದರೂ ಯೆಹೋವನು ತನ್ನ ಆರಾಧನೆಗಾಗಿ ಈರ್ಷ್ಯೆಯನ್ನು ತೋರಿಸಿ, ಪಶ್ಚಾತ್ತಾಪಪಟ್ಟ ತನ್ನ ಜನರನ್ನು ಯುದ್ಧಾನಂತರದ ವರ್ಷವಾದ 1919 ರಲ್ಲಿ ತನ್ನ ಅನುಗ್ರಹಕ್ಕೆ ಪುನಃಸ್ಥಾಪಿಸಿದನು. (ಪ್ರಕಟನೆ 11:11, 12) ಪರಿಣಾಮವಾಗಿ, 1918 ರಲ್ಲಿ 4,000 ಕ್ಕಿಂತಲೂ ಕಡಿಮೆಯಿದ್ದ ಯೆಹೋವನ ಸುತ್ತಿಗಾರರ ಸಂಖ್ಯೆಯು ಇಂದು 50 ಲಕ್ಷಕ್ಕೂ ಮಿಕ್ಕಿದೆ. (ಯೆಶಾಯ 60:22) ಶೀಘ್ರದಲ್ಲೀ, ಶುದ್ಧಾರಾಧನೆಗಾಗಿ ಯೆಹೋವನ ಈರ್ಷ್ಯೆಯು ಅಧಿಕ ಕೌತುಕವನ್ನುಂಟುಮಾಡುವ ವಿಧಗಳಲ್ಲಿ ತೋರಿಬರಲಿದೆ.
ದೈವಿಕ ಈರ್ಷ್ಯೆಯ ಕುರಿತಾದ ಭವಿಷ್ಯತ್ತಿನ ಕ್ರಿಯೆಗಳು
20. ಶುದ್ಧಾರಾಧನೆಗಾಗಿ ತನ್ನ ಈರ್ಷ್ಯೆಯನ್ನು ತೋರಿಸಲು ದೇವರು ಬೇಗನೆ ಏನು ಮಾಡುವನು?
20 ಶತಮಾನಗಳಿಂದ ಕ್ರೈಸ್ತಪ್ರಪಂಚದ ಚರ್ಚುಗಳು ಯೆಹೋವನನ್ನು ಈರ್ಷ್ಯೆಗೆ ಪ್ರೇರೇಪಿಸಿದ ಧರ್ಮಭ್ರಷ್ಟ ಯೆಹೂದ್ಯರ ಮಾರ್ಗವನ್ನು ಹಿಂಬಾಲಿಸಿವೆ. (ಯೆಹೆಜ್ಕೇಲ 8:3, 17, 18) ಬೇಗನೆ ಯೆಹೋವನು ಸಂಯುಕ್ತ ರಾಷ್ಟ್ರದ ಸದಸ್ಯರ ಹೃದಯಗಳೊಳಗೆ ಒಂದು ತೀಕ್ಷ್ಣವಾದ ವಿಚಾರವನ್ನು ಹಾಕುವ ಮೂಲಕ ಕ್ರಿಯೆಕೈಕೊಳ್ಳುವನು. ಇದು ಈ ರಾಜಕೀಯ ಶಕ್ತಿಗಳನ್ನು, ಕ್ರೈಸ್ತಪ್ರಪಂಚವನ್ನೂ ಇನ್ನುಳಿದ ಮಿಥ್ಯಾ ಧರ್ಮಗಳನ್ನೂ ನಿರ್ಜನಾವಸ್ಥೆಗೆ ತರುವಂತೆ ಪ್ರೇರಿಸುವುದು. (ಪ್ರಕಟನೆ 17:16, 17) ಸತ್ಯಾರಾಧಕರು ಆ ಭಯಂಕರವಾದ ದೈವಿಕ ನ್ಯಾಯತೀರ್ಪಿನ ವಿಧಿಸುವಿಕೆಯಿಂದ ಪಾರಾಗುವರು. ಅವರು ಹೀಗೆ ಹೇಳುವ ಸ್ವರ್ಗೀಯ ಜೀವಿಗಳ ಈ ಮಾತುಗಳಿಗೆ ಪ್ರತಿಕ್ರಿಯೆ ತೋರಿಸುವರು: “ಹಲ್ಲೆಲೂಯಾ. . . . ತನ್ನ ಜಾರತ್ವ [ಅವಳ ಸುಳ್ಳು ಬೋಧನೆಗಳು ಮತ್ತು ಭ್ರಷ್ಟ ರಾಜಕೀಯಕ್ಕೆ ಬೆಂಬಲ] ದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾ ಜಾರಸ್ತ್ರೀ [ಸುಳ್ಳು ಧರ್ಮ]ಗೆ ಆತನು ನ್ಯಾಯತೀರಿಸಿ ಅವಳು ಆತನ ಸೇವಕರನ್ನು ಕೊಂದದ್ದಕ್ಕಾಗಿ ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ.”—ಪ್ರಕಟನೆ 19:1, 2.
21. (ಎ) ಸುಳ್ಳು ಧರ್ಮವು ನಾಶವಾದ ಬಳಿಕ ಸೈತಾನನೂ ಅವನ ವ್ಯವಸ್ಥೆಯೂ ಏನು ಮಾಡುವದು? (ಬಿ) ದೇವರು ಹೇಗೆ ಪ್ರತಿಕ್ರಿಯಿಸುವನು?
21 ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವು ನಾಶವಾದ ಬಳಿಕ ಏನು ಸಂಭವಿಸುವುದು? ಯೆಹೋವನ ಜನರ ಮೇಲೆ ಒಂದು ಭೌಗೋಲಿಕ ಆಕ್ರಮಣವನ್ನು ಸಂಘಟಿಸುವಂತೆ ಸೈತಾನನು ರಾಜಕೀಯ ಶಕ್ತಿಗಳನ್ನು ಪ್ರಚೋದಿಸುವನು. ಸತ್ಯಾರಾಧನೆಯನ್ನು ಭೂಮಿಯ ಮೇಲಿಂದ ಅಳಿಸಿಬಿಡುವ ಸೈತಾನನ ಈ ಪ್ರಯತ್ನಕ್ಕೆ ಸತ್ಯ ದೇವರು ಹೇಗೆ ಪ್ರತಿಕ್ರಿಯಿಸುವನು? ಯೆಹೆಜ್ಕೇಲ 38:19-23 ನಮಗೆ ತಿಳಿಸುತ್ತದೆ: “ನಾನು [ಯೆಹೋವನು] ರೋಷಾವಿಷನ್ಟಾಗಿ [ಅಥವಾ, ಈರ್ಷ್ಯೆಯಲ್ಲಿ] ಕೋಪದಿಂದುರಿಯುತ್ತಾ ಹೀಗೆ ನುಡಿದಿದ್ದೇನೆ . . . ನಾನು ಗೋಗನ [ಸೈತಾನನ] ಸಂಗಡ ವ್ಯಾಜ್ಯವಾಡುತ್ತಾ ಅವನನ್ನು ವ್ಯಾಧಿಗೂ ವಧೆಗೂ ಗುರಿಮಾಡಿ ಅವನ ಮೇಲೂ ಅವನ ಗುಮ್ಮಿಗಳ ಮೇಲೂ ಅವನೊಂದಿಗಿರುವ ಬಹು ಜನಾಂಗಗಳ ಮೇಲೂ ವಿಪರೀತ ಮಳೆ, ದೊಡ್ಡ ದೊಡ್ಡ ಆನೆಕಲ್ಲು, ಬೆಂಕಿ, ಗಂಧಕ, ಇವುಗಳನ್ನು ಸುರಿಸುವೆನು. ಹೀಗೆ ನಾನು ನನ್ನ ಮಹಿಮೆಯನ್ನು ತೋರ್ಪಡಿಸಿ ನನ್ನ ಗೌರವವನ್ನು ಕಾಪಾಡಿಕೊಂಡು ಬಹು ಜನಾಂಗಗಳು ನಾನೇ ಯೆಹೋವನು ಎಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತನಾಗುವೆನು.”—ಚೆಫನ್ಯ 1:18; 3:8ನ್ನೂ ನೋಡಿ.
22. ಯೆಹೋವನ ಶುದ್ಧಾರಾಧನೆಗಾಗಿ ನಾವು ಈರ್ಷ್ಯೆಯುಳ್ಳವರೆಂದು ಹೇಗೆ ತೋರಿಸಬಲ್ಲೆವು?
22 ವಿಶ್ವದ ಪರಮಾಧಿಕಾರಿಯು ತನ್ನ ಸತ್ಯಾರಾಧಕರನ್ನು ಈರ್ಷ್ಯೆಯಿಂದ ಪರಿಪಾಲಿಸುತ್ತಾನೆಂಬುದನ್ನು ತಿಳಿಯುವುದು ಅದೆಷ್ಟು ಸಾಂತ್ವನಕರವಾಗಿದೆ! ಆತನ ಅಪಾತ್ರ ಕೃಪೆಗಾಗಿ ಆಳವಾದ ಗಣ್ಯತೆಯಿಂದ, ಯೆಹೋವ ದೇವರ ಶುದ್ಧಾರಾಧನೆಗಾಗಿ ನಾವು ಈರ್ಷ್ಯೆಯಿಂದಿರೋಣ. ನಾವು ಹುರುಪಿನಿಂದ ಸುವಾರ್ತೆಯನ್ನು ಸಾರುತ್ತಾ ಇರುವವರು ಮತ್ತು ಯೆಹೋವನು ತನ್ನ ಮಹಾ ನಾಮವನ್ನು ಮಹಿಮೆಪಡಿಸುವ ಹಾಗೂ ಪವಿತ್ರೀಕರಿಸುವ ಆ ಮಹಾ ದಿನಕ್ಕಾಗಿ ಭರವಸೆಯಿಂದ ಕಾಯುವವರು ಆಗಿರುವಂತಾಗಲಿ.—ಮತ್ತಾಯ 24:14.
ಮನನಕ್ಕಾಗಿ ವಿಷಯಗಳು
◻ ಯೆಹೋವನಿಗಾಗಿ ಈರ್ಷ್ಯೆಯುಳ್ಳವರಾಗಿರುವುದು ಎಂದರೇನು?
◻ ಪುರಾತನ ಇಸ್ರಾಯೇಲ್ಯರಿಂದ ಇಡಲ್ಪಟ್ಟ ಮಾದರಿಯಿಂದ ನಾವೇನನ್ನು ಕಲಿಯಬಲ್ಲೆವು?
◻ ಯೆಹೋವನನ್ನು ಈರ್ಷ್ಯೆಗೆ ಪ್ರೇರಿಸುವುದನ್ನು ನಾವು ಹೇಗೆ ವರ್ಜಿಸಬಲ್ಲೆವು?
◻ ದೇವರು ಮತ್ತು ಕ್ರಿಸ್ತನು ಶುದ್ಧಾರಾಧನೆಗಾಗಿ ಈರ್ಷ್ಯೆಯನ್ನು ತೋರಿಸಿದ್ದಾರೆ ಹೇಗೆ?
[ಪುಟ 12 ರಲ್ಲಿರುವ ಚೌಕ]
ಪ್ರೀತಿ ಈರ್ಷ್ಯೆಪಡುವುದಿಲ್ಲ
ಅಸೂಯೆಯ ಕುರಿತು, 19 ನೆಯ ಶತಮಾನದ ಬೈಬಲ್ ವಿದ್ವಾಂಸರಾದ ಆಲ್ಬರ್ಟ್ ಬಾರ್ನ್ಸ್ ಬರೆದದ್ದು: “ಅದು ದುಷ್ಟತನದ ಅತ್ಯಂತ ಸಾಮಾನ್ಯ ಪ್ರದರ್ಶನೆಗಳಲ್ಲಿ ಒಂದಾಗಿದ್ದು, ಮನುಷ್ಯನ ಆಳವಾದ ನೀಚತನವನ್ನು ಸ್ಪಷ್ಟವಾಗಿಗಿ ತೋರಿಸುತ್ತದೆ.” ಅವರು ಮತ್ತೂ ಹೇಳಿದ್ದು: “ಸಕಲ ಯುದ್ಧಗಳ ಮತ್ತು ಕಲಹಗಳ ಮತ್ತು ಐಹಿಕ ಯೋಜನೆಗಳ ಮೂಲವನ್ನು—ತಮ್ಮ ಧರ್ಮವನ್ನು ಕೆಡಿಸಲು ಮತ್ತು ತಮ್ಮನ್ನು ಲೌಕಿಕ ಮನಸ್ಕರಾಗಿ ಮಾಡಲು ಬಹಳಷ್ಟನ್ನು ಮಾಡುವ ಕ್ರೈಸ್ತರೆನ್ನಿಸಿಕೊಳ್ಳುವವರ ಯೋಜನೆಗಳ ಮತ್ತು ಹೇತುಗಳ ನಿಜ ಮೂಲವನ್ನೂ ಶೋಧಿಸಶಕ್ತನಾದ ಒಬ್ಬನು—ಅದಕ್ಕೆ ಅಸೂಯೆಯು ಎಷ್ಟರ ಮಟ್ಟಿಗೆ ಆರೋಪಿತವೆಂದು ಕಾಣಲು ಆಶ್ಚರ್ಯಪಟ್ಟಾನು. ಇತರರು ನಮಗಿಂತ ಹೆಚ್ಚು ಸಮೃದ್ಧರಾಗಿರುವುದು ನಮ್ಮನ್ನು ನೋಯಿಸುತ್ತದೆ; ಅದಕ್ಕೆ ನಮಗೆ ಯಾವ ಹಕ್ಕು ಇಲ್ಲದಿದ್ದರೂ, ಬೇರೆಯವರಲ್ಲಿರುವ ವಸ್ತುಗಳನ್ನು ನಾವು ಪಡೆದುಕೊಳ್ಳಲು ಆಶಿಸುತ್ತೇವೆ; ಮತ್ತು ಇದು, ಅವರು ಅದರಲ್ಲಿ ಪಡೆಯುವ ಆನಂದವನ್ನು ಕಡಿಮೆಗೊಳಿಸುವಂತೆ, ಅಥವಾ ನಾವಾಗಿಯೇ ಅದನ್ನು ಪಡೆದುಕೊಳ್ಳುವಂತೆ, ಅಥವಾ ಸಾಮಾನ್ಯವಾಗಿ ಇರಬೇಕಾದಷ್ಟು ಆಸ್ತಿವಂತರು ಆಗಿಲ್ಲವೆಂದು ತೋರಿಸಲು ಅನೇಕ ದೋಷಯುಕ್ತ ವಿಧಾನಗಳನ್ನು ಕೈಕೊಳ್ಳುವಂತೆ ನಡೆಸುತ್ತದೆ. . . . ಹೀಗೆ ನಮ್ಮ ಅಂತರ್ಯದಲ್ಲಿರುವ ಅಸೂಯೆಯು ತಣಿಸಲ್ಪಡುತ್ತದೆ.”—ರೋಮಾಪುರ 1:29; ಯಾಕೋಬ 4:5.
ಇದಕ್ಕೆ ವೈದೃಶ್ಯವಾಗಿ, “ಅಸೂಯೆಪಡದ” ಪ್ರೀತಿಯ ಕುರಿತಾಗಿ ಒಂದು ಆಸಕ್ತಿಕರ ಹೇಳಿಕೆಯನ್ನು ಬಾರ್ನ್ಸ್ ಕೊಟ್ಟರು. (1 ಕೊರಿಂಥ 13:4, ಕಿಂಗ್ ಜೇಮ್ಸ್ ವರ್ಷನ್) ಅವರು ಬರೆದುದು: “ಇತರರು ಅನುಭೋಗಿಸುವ ಸಂತೋಷವನ್ನು ಪ್ರೀತಿಯು ಅಸೂಯೆಯಿಂದ ನೋಡುವುದಿಲ್ಲ; ಅವರ ಹಿತಚಿಂತನೆಯಲ್ಲಿ ಅದು ಉಲ್ಲಾಸಗೊಳ್ಳುತ್ತದೆ; ಮತ್ತು ಅವರ ಸಂತೋಷವು ವೃದ್ಧಿಯಾದಂತೆ . . . ಯಾರು ಪ್ರೀತಿಯಿಂದ ಪ್ರಭಾವಿಸಲ್ಪಡುತ್ತಾರೋ ಅವರು . . . ಅದನ್ನು ಕುಂದಿಸುವುದಿಲ್ಲ; ಅವರ ಒಡೆತನಕ್ಕಾಗಿ ಅವರನ್ನು ಪೇಚಾಟಕ್ಕೊಳಪಡಿಸರು; ಆ ಸಂತೋಷದಿಂದ ಅವರು ಕಡಮೆಮಾಡರು; ತಾವು ಸ್ವತಃ ಅಷ್ಟು ಹೆಚ್ಚಾಗಿ ಅನುಗ್ರಹಿತರಾಗಿರದ್ದಕ್ಕಾಗಿ ಗುಣುಗುಟ್ಟರು ಇಲ್ಲವೆ ಆಶಾಭಂಗಪಡರು. . . . ನಾವು ಇತರರನ್ನು ಪ್ರೀತಿಸಿದ್ದಲ್ಲಿ—ಅವರ ಸಂತೋಷದಲ್ಲಿ ಹರ್ಷಿಸಿದ್ದಲ್ಲಿ, ಅವರ ಕುರಿತು ನಾವು ಅಸೂಯೆಪಡಬಾರದು.”
[ಪುಟ 10 ರಲ್ಲಿರುವ ಚಿತ್ರ]
ಫೀನೆಹಾಸನು ಯೆಹೋವನ ಶುದ್ಧಾರಾಧನೆಗಾಗಿ ಈರ್ಷ್ಯೆಯುಳ್ಳವನಾಗಿದ್ದನು