ಕನ್ನಡಿ ಏನನ್ನು ಹೊರಗೆಡಹುತ್ತದೆ?
ಕನ್ನಡಿಯೊಂದರಲ್ಲಿ ನೋಡಿರಿ. ನೀವೇನನ್ನು ಕಾಣುತ್ತೀರಿ? ಕೆಲವೊಮ್ಮೆ, ಕನ್ನಡಿಯ ನಸುನೋಟವು ನಿಮ್ಮ ತೋರ್ಕೆಯಲ್ಲಿನ ಒಂದು ಸಂಕೋಚಕರ ಕುಂದನ್ನು ಹೊರಗೆಡಹುತ್ತದೆ, ಅದನ್ನು ಇತರರು ಗಮನಿಸುವುದಕ್ಕೆ ಮುಂಚೆ ಸರಿಪಡಿಸಿಕೊಳ್ಳಲು ನಿಮಗೆ ಸಂತೋಷವಾಗುತ್ತದೆ!
ಬೈಬಲ್ ಬಹುಮಟ್ಟಿಗೆ ಒಂದು ಕನ್ನಡಿಯಂತಿದೆ. ನಮ್ಮ ಕುರಿತ ಪ್ರಾಮಾಣಿಕ ವೀಕ್ಷಣೆ ಪಡೆಯಲು ಅದು ನಮಗೆ ನೆರವಾಗುತ್ತದೆ. ದೇವರ ದೃಷ್ಟಿಯಲ್ಲಿ ನಮ್ಮ ಅರ್ಹತೆ—ತೀರ ಹೆಚ್ಚು ಅಥವಾ—ತೀರ ಕಡಿಮೆ ಎಂದು ನೆನಸುವುದರಿಂದ ಅದು ನಮ್ಮನ್ನು ತಡೆಯುತ್ತದೆ. (ಮತ್ತಾಯ 10:29-31; ರೋಮಾಪುರ 12:3) ಅದಲ್ಲದೆ, ನಮ್ಮ ನುಡಿಗಳಲ್ಲಿ, ನಡೆಗಳಲ್ಲಿ, ಅಥವಾ ಮನೋಭಾವಗಳಲ್ಲಿ ನಾವು ಸರಿಪಡಿಸಬೇಕಾದ ದೋಷಗಳನ್ನು ಬೈಬಲು ಹೊರಗೆಡಹಬಲ್ಲದು. ಇದು ಸಂಭವಿಸುವಾಗ, ಕನ್ನಡಿಯು ಏನನ್ನು ಪ್ರಕಟಿಸುತ್ತದೊ ಅದನ್ನು ನೀವು ಅಲಕ್ಷಿಸುವಿರೊ?
ಬೈಬಲ್ ಲೇಖಕನಾದ ಯಾಕೋಬನು ಅನ್ನುವುದು: “ಯಾವನಾದರೂ ವಾಕ್ಯವನ್ನು ಕೇಳುವವನಾದರೂ ಅದರ ಪ್ರಕಾರ ನಡೆಯದಿದ್ದರೆ, ಅವನು ಕನ್ನಡಿಯಲ್ಲಿ ತನ್ನ ಹುಟ್ಟುಮುಖವನ್ನು ನೋಡಿದ ಮನುಷ್ಯನಂತಿರುವನು; ಇವನು ತನ್ನನ್ನು ನೋಡಿಕೊಂಡು ಹೋಗಿ ತಾನು ಹೀಗಿದ್ದೇನೆಂಬದನ್ನು ಆ ಕ್ಷಣವೇ ಮರೆತುಬಿಡುವನು.”—ಯಾಕೋಬ 1:23, 24.
ವೈದೃಶ್ಯದಲ್ಲಿ, ಯಾಕೋಬನು “ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣವನ್ನು ಲಕ್ಷ್ಯಕೊಟ್ಟು [ಇಣಿಕಿ, NW] ನೋಡಿ ಇನ್ನೂ ನೋಡುತ್ತಲೇ ಇರುವ” ಇನ್ನೊಬ್ಬ ಮನುಷ್ಯನನ್ನು ವರ್ಣಿಸುತ್ತಾನೆ. (ಯಾಕೋಬ 1:25) “ಇಣಿಕಿ” ನೋಡು ಎಂದು ತರ್ಜುಮೆಯಾದ ಗ್ರೀಕ್ ಪದಕ್ಕೆ ಪಕ್ಕದಲ್ಲಿ ಬಾಗುವುದು ಅಥವಾ ನೋಡಲು ಮುಂದೆ ಬಾಗುವುದು ಎಂಬರ್ಥವಿದೆ. “ಇಣಿಕಿ” ನೋಡುವುದು ಎಂಬರ್ಥದಲ್ಲಿ ಕೇವಲ ನಸುನೋಟಕ್ಕಿಂತ ಹೆಚ್ಚಿನದ್ದು ಒಳಗೊಳ್ಳುತ್ತದೆ” ಎಂದನ್ನುತ್ತದೆ ತಿಯೊಲಾಜಿಕಲ್ ಡಿಕ್ಷನರಿ ಆಫ್ ದ ನ್ಯೂ ಟೆಸ್ಟಮೆಂಟ್. ಈ ಶಬ್ದವು ಮರೆಯಾದ ಒಂದು ವಸ್ತುವಿಗಾಗಿ ಜಾಗ್ರತೆಯ ಹುಡುಕಾಟವನ್ನು ಸೂಚಿಸುತ್ತದೆ. “ವೀಕ್ಷಕನು ಅದನ್ನು ಕಾಣಲು ಮತ್ತು ಅದರ ಅರ್ಥವನ್ನು ಒಮ್ಮೆಲೆ ಗ್ರಹಿಸಿಕೊಳ್ಳಲು ಕಷ್ಟವಾದರೂ, ಅವನು ನೋಡಬಯಸುವ ಒಂದು ಪ್ರಾಮುಖ್ಯ ವಿಷಯವು ಅಲ್ಲಿದೆ” ಎಂದು ಬರೆಯುತ್ತಾರೆ ಬೈಬಲ್ ವಾಖ್ಯಾನಗಾರ ಆರ್. ವಿ. ಜಿ. ಟಾಸ್ಕರ್.
ದೇವರ ವಾಕ್ಯದ ಕನ್ನಡಿಯಲ್ಲಿ ನೀವು ಹೀಗೆ ನಿಮ್ಮನ್ನು ಸೂಕ್ಷ್ಮವಾಗಿ ಪರಿಶೋಧಿಸಿ ಅನಂತರ ಅದು ಏನನ್ನು ಆವಶ್ಯಪಡಿಸುತ್ತದೋ, ಅದಕ್ಕೆ ನಿಮ್ಮನ್ನು ಹೊಂದಿಸಿಕೊಳ್ಳುವಿರೊ? ಯಾಕೋಬನು ಮುಂದುವರಿಸುವುದು: “ಈ ಮನುಷ್ಯನು ವಾಕ್ಯವನ್ನು ಕೇಳಿ ಮರೆತು ಹೋಗುವವನಾಗಿರದೆ ಅದರ ಪ್ರಕಾರ ನಡೆಯುವವನಾಗಿದ್ದು ತನ್ನ ನಡತೆಯಿಂದ ಧನ್ಯನಾಗುವನು.”—ಯಾಕೋಬ 1:25, NW.