“ಸತ್ಯವಂದರೇನು?”
ಒಬ್ಬರನ್ನೊಬ್ಬರು ಎದುರಿಸುತ್ತಿದ್ದ ಆ ಇಬ್ಬರು ಪುರುಷರು ವಿಪರೀತವಾಗಿ ಭಿನ್ನವಾಗಿದ್ದರು. ಒಬ್ಬನು, ನಿಂದಾಶೀಲನು, ಮಹತ್ವಾಕಾಂಕ್ಷೆಯವನು, ಧನವಂತನು ಮತ್ತು ತನ್ನ ಸ್ವಂತ ಕಸಬನ್ನು ಮುಂದುವರಿಸಲು ಏನನ್ನೂ ಮಾಡಲು ಸಿದ್ಧನಿರುವ ಒಬ್ಬ ರಾಜಕಾರಣಿಯಾಗಿದ್ದನು. ಇನ್ನೊಬ್ಬನು ಧನ ಮತ್ತು ಪ್ರತಿಷ್ಠೆಯನ್ನು ತಳ್ಳಿಹಾಕಿದ ಮತ್ತು ಇತರರ ಜೀವಗಳನ್ನು ಉಳಿಸಲು ತನ್ನ ಜೀವವನ್ನು ತ್ಯಾಗಮಾಡಲು ಸಿದ್ಧನಾಗಿದ್ದ ಒಬ್ಬ ಬೋಧಕನಾಗಿದ್ದನು. ಈ ಇಬ್ಬರು ಪುರುಷರು ಏಕಾಭಿಪ್ರಾಯಪಡಲಿಲ್ಲವೆಂದು ಹೇಳಬೇಕಾಗಿಲ್ಲ! ಒಂದು ನಿರ್ದಿಷ್ಟ ವಿಷಯದ ಮೇಲೆ ಅವರು ಸಂಪೂರ್ಣವಾಗಿ ಅಸಮ್ಮತಿಸಿದರು—ಅದು ಸತ್ಯದ ವಿಷಯವಾಗಿತ್ತು.
ಆ ಪುರುಷರು ಪೊಂತ್ಯ ಪಿಲಾತನು ಮತ್ತು ಯೇಸು ಕ್ರಿಸ್ತನು ಆಗಿದ್ದರು. ಯೇಸು ಪಿಲಾತನ ಮುಂದೆ ಖಂಡಿಸಲ್ಪಟ್ಟ ಒಬ್ಬ ಪಾತಕಿಯೋಪಾದಿ ನಿಂತಿದ್ದನು. ಯಾಕೆ? ಯೇಸು ವಿವರಿಸಿದ್ದೇನೆಂದರೆ ಇದಕ್ಕಾಗಿರುವ ಕಾರಣ—ಖಂಡಿತವಾಗಿಯೂ, ಆತನು ಈ ಭೂಮಿಗೆ ಬಂದು ಆತನ ಶುಶ್ರೂಷೆಯನ್ನು ಕೈಗೊಂಡಿದ್ದ ಅದೇ ಕಾರಣ—ಒಂದೇ ಆಗಿತ್ತು: ಸತ್ಯ. “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ” ಎಂದು ಅವನು ಹೇಳಿದನು.—ಯೋಹಾನ 18:37.
ಪಿಲಾತನ ಉತ್ತರವು ಒಂದು ಸ್ಮರಣೀಯ ಪ್ರಶ್ನೆಯಾಗಿತ್ತು: “ಸತ್ಯವಂದರೇನು?” (ಯೋಹಾನ 18:38) ಅವನು ನಿಜವಾಗಿಯೂ ಒಂದು ಉತ್ತರವನ್ನು ಬಯಸಿದನೋ? ಪ್ರಾಯಶಃ ಇರಲಿಕ್ಕಿಲ್ಲ. ತನಗೆ ಪ್ರಾಮಾಣಿಕತೆಯಿಂದ ಕೇಳಲ್ಪಟ್ಟಿರುವ ಯಾವುದೇ ಪ್ರಶ್ನೆಯನ್ನು ಉತ್ತರಿಸಶಕ್ತನಾದ ವ್ಯಕ್ತಿ ಯೇಸುವಾಗಿದ್ದನು, ಆದರೆ ಅವನು ಪಿಲಾತನಿಗೆ ಉತ್ತರಿಸಲಿಲ್ಲ. ಮತ್ತು ತನ್ನ ಪ್ರಶ್ನೆಯನ್ನು ಕೇಳಿದ ನಂತರ ಪಿಲಾತನು ಸಭಾಂಗಣದಿಂದ ನೇರವಾಗಿ ಹೊರಹೋದನೆಂದು ಬೈಬಲ್ ಹೇಳುತ್ತದೆ. ರೋಮನ್ ದೇಶಾಧಿಪತಿಯು ತಿರಸ್ಕಾರದ ಅಪನಂಬಿಕೆಯಿಂದ “ಸತ್ಯ? ಅದೇನು? ಅಂತಹ ಯಾವುದೇ ವಿಷಯವಿಲ್ಲ!” ಎಂದು ಹೇಳುವಂತೆ ಆ ಪ್ರಶ್ನೆಯನ್ನು ಕೇಳಿರಬೇಕು.a
ಸತ್ಯದ ಕುರಿತಾದ ಪಿಲಾತನ ಸಂದೇಹಾಸ್ಪದ ನೋಟವು ಇಂದು ಅಸಾಮಾನ್ಯವೇನೂ ಆಗಿರುವುದಿಲ್ಲ. ಸತ್ಯವು ಸಂಬಂಧಕವಾಗಿದೆ—ಬೇರೆ ಮಾತುಗಳಲ್ಲಿ, ಒಬ್ಬನಿಗೆ ಸತ್ಯವಾಗಿರುವಂತಹದ್ದು ಇನ್ನೊಬ್ಬನಿಗೆ ಅಸತ್ಯವಾಗಿರಬಹುದು, ಹೀಗೆ ಇಬ್ಬರೂ “ಸರಿ” ಯಾಗಿರಬಹುದು ಎಂದು ಅನೇಕರು ನಂಬುತ್ತಾರೆ. ಈ ನಂಬಿಕೆಯು ಎಷ್ಟು ವ್ಯಾಪಕವಾಗಿದೆಯೆಂದರೆ ಅದಕ್ಕಾಗಿ ಒಂದು ಶಬ್ದವಿದೆ: “ರಿಲೇಟಿವಿಸಮ್” (ಸತ್ಯ ಜ್ಞಾನ ಸಂಬಂಧ ವಾದ). ಸತ್ಯದ ವಿಷಯವನ್ನು ನೀವು ವೀಕ್ಷಿಸುವ ವಿಧವು ಇದೇ ಆಗಿದೆಯೋ? ಹಾಗಿರುವಲ್ಲಿ, ಅದನ್ನು ಸಮಗ್ರವಾಗಿ ಪ್ರಶ್ನಿಸದೆ ನೀವು ಈ ನೋಟವನ್ನು ಸ್ವೀಕರಿಸಿರುವ ಸಾಧ್ಯತೆಯಿದೆಯೋ? ನೀವು ಹಾಗೆ ಮಾಡಿರದಿದ್ದರೂ, ಈ ತತ್ವಜ್ಞಾನವು ನಿಮ್ಮ ಜೀವಿತವನ್ನು ಎಷ್ಟು ಬಾಧಿಸುತ್ತದೆಂದು ನಿಮಗೆ ತಿಳಿದಿದೆಯೋ?
ಸತ್ಯದ ಮೇಲೆ ಒಂದು ದಾಳಿ
ಪೊಂತ್ಯ ಪಿಲಾತನು ಸಂಪೂರ್ಣ ಸತ್ಯದ ವಿಚಾರವನ್ನು ಪ್ರಶ್ನಿಸಿದ ಪ್ರಥಮ ವ್ಯಕ್ತಿಯಾಗಿರಲಿಲ್ಲ. ಕೆಲವು ಪ್ರಾಚೀನ ಗ್ರೀಕ್ ತತ್ವಜ್ಞಾನಿಗಳು ಅಂತಹ ಸಂದೇಹಗಳ ಕಲಿಸುವಿಕೆಯನ್ನು ಕಾರ್ಯತಃ ತಮ್ಮ ಜೀವನದ ಕಸಬನ್ನಾಗಿ ಮಾಡಿಕೊಂಡರು! ಪಿಲಾತನಿಗಿಂತ ಐದು ಶತಮಾನಗಳ ಮುಂಚೆ, ಪಾರ್ಮೆನಿಡಿಸ್ (ಯೂರೋಪಿಯನ್ ಭೌತಾತೀತ ವಿದ್ಯೆಯ ಮೂಲಪಿತನೆಂದು ಪರಿಗಣಿಸಲ್ಪಟ್ಟಿರುವವನು) ನಿಜ ಜ್ಞಾನವು ಅಪ್ರಾಪ್ಯವೆಂದು ನಂಬಿದನು. “ಪ್ರಾಚೀನ ತತ್ವಜ್ಞಾನಿಗಳಲ್ಲಿ ಅತ್ಯಂತ ಮಹಾನ್” ಎಂದು ಸಂಬೋಧಿಸಲ್ಪಟ್ಟಿರುವ ಡಿಮಾಕ್ರಿಟಸ್, ಸಮರ್ಥಿಸಿದ್ದು: “ಸತ್ಯವು ಆಳವಾಗಿ ಹುದುಗಿಸಲ್ಪಟ್ಟಿದೆ. . . . ನಮಗೆ ನಿಶ್ಚಿತವಾದದ್ದೇನೂ ತಿಳಿದಿಲ್ಲ.” ಪ್ರಾಯಶಃ ಅವರೆಲ್ಲರಿಗಿಂತಲೂ ಹೆಚ್ಚು ಪೂಜ್ಯನೆಂದು ಭಾವಿಸಲ್ಪಟ್ಟ, ಸೊಕ್ರೆಟಿಸ್, ತನಗೆ ನಿಜವಾಗಿಯೂ ತಿಳಿದಿರುವಂತಹದ್ದು—ತನಗೆ ಏನೂ ತಿಳಿಯದಿರುವುದೇ ಎಂದು ಹೇಳಿದನು.
ಸತ್ಯವು ತಿಳಿಯಲ್ಪಡಬಲ್ಲದೆಂಬ ವಿಚಾರದ ಮೇಲೆ ಈ ದಾಳಿಯು ನಮ್ಮ ದಿನಗಳ ವರೆಗೆ ಮುಂದುವರಿದಿದೆ. ಉದಾಹರಣೆಗಾಗಿ ಕೆಲವು ತತ್ವಜ್ಞಾನಿಗಳು ಹೇಳುತ್ತಾರೇನೆಂದರೆ, ಜ್ಞಾನವು ನಮ್ಮ ಇಂದ್ರಿಯಗಳ ಮೂಲಕ—ಯಾವುವು ವಂಚಿಸಲ್ಪಡಬಲ್ಲದೋ—ನಮ್ಮನ್ನು ತಲಪುವುದರಿಂದ, ಯಾವ ಜ್ಞಾನವೂ ಸತ್ಯವೆಂದು ರುಜುವಾತಿನಿಂದ ಹೇಳಲಸಾಧ್ಯ. ಫ್ರೆಂಚ್ ತತ್ವಜ್ಞಾನಿ ಮತ್ತು ಗಣಿತಶಾಸ್ತ್ರಜ್ಞ ರನೇ ಡೇಕಾರ್ಟ್, ತನಗೆ ನಿಶ್ಚಯವಾಗಿ ತಿಳಿದಿದೆಯೆಂದು ಅವನು ನೆನಸಿದ ಎಲ್ಲಾ ವಿಷಯಗಳನ್ನು ಪರೀಕ್ಷಿಸಲು ನಿರ್ಣಯಿಸಿದನು. ಅಖಂಡ್ಯವೆಂದು ಅವನು ಅಭಿಪ್ರಾಯಪಟ್ಟ ಒಂದು ಸತ್ಯವನ್ನು ಬಿಟ್ಟು ಅವನು ಎಲ್ಲವನ್ನು ತ್ಯಜಿಸಿದನು: “ಕೊಗೀಟೊ ಎರ್ಗೊ ಸುಮ್” ಅಥವಾ “ನಾನು ಯೋಚಿಸುತ್ತೇನೆ ಆದುದರಿಂದ ನಾನಿದ್ದೇನೆ.”
ಸಂಬಂಧ ವಾದದ ಒಂದು ಸಂಸ್ಕೃತಿ
ಸಂಬಂಧ ವಾದವು ತತ್ವಜ್ಞಾನಿಗಳಿಗೆ ಸೀಮಿತವಾಗಿಲ್ಲ. ಅದು ಧಾರ್ಮಿಕ ಮುಖಂಡರಿಂದ ಕಲಿಸಲ್ಪಡುತ್ತದೆ, ಶಾಲೆಗಳಲ್ಲಿ ಕಲಿಸಲ್ಪಡುತ್ತದೆ ಮತ್ತು ವಾರ್ತಾ ಮಾಧ್ಯಮದಿಂದ ಹರಡಿಸಲ್ಪಡುತ್ತದೆ. ಕೆಲವು ವರ್ಷಗಳ ಹಿಂದೆ ಇಪಿಸ್ಕೊಪಲ್ ಬಿಷಪ್ ಜಾನ್ ಎಸ್. ಸ್ಪಾಂಗ್ ಹೇಳಿದ್ದು: “ನಾವು . . . ನಮ್ಮಲ್ಲಿ ಸತ್ಯವಿದೆ ಮತ್ತು ಇತರರು ನಮ್ಮ ದೃಷ್ಟಿಕೋನಕ್ಕೆ ಬರಬೇಕೆಂಬ ಆಲೋಚನೆಯಿಂದ, ಸಂಪೂರ್ಣ ಸತ್ಯವು ನಮ್ಮೆಲ್ಲರ ಹಿಡಿತಕ್ಕೆ ಮೀರಿದೆಯೆಂಬ ಅರಿವಿಗೆ ಬರಬೇಕು.” ಸ್ಪಾಂಗ್‌ರವರ ಸಂಬಂಧ ವಾದವು, ಇಂದಿನ ವೈದಿಕರಲ್ಲಿ ಹೆಚ್ಚಿನವರದಂತೆ, “ಪ್ರತಿಯೊಬ್ಬನಿಗೆ ತನ್ನ ಸ್ವಂತದ್ದು” ಎಂಬ ತತ್ವಜ್ಞಾನದ ಪರವಾಗಿ ಬೈಬಲಿನ ನೈತಿಕ ಬೋಧನೆಗಳನ್ನು ತೊರೆಯಲು ತ್ವರಿತವಾಗಿದೆ. ಉದಾಹರಣೆಗಾಗಿ, ಸಲಿಂಗೀ ಕಾಮಿಗಳನ್ನು ಇಪಿಸ್ಕೊಪಲ್ ಚರ್ಚಿನಲ್ಲಿ ಹೆಚ್ಚು “ಹಾಯಾಗಿರುವಂತೆ” ಮಾಡುವ ಒಂದು ಪ್ರಯತ್ನದಲ್ಲಿ, ಅಪೊಸ್ತಲ ಪೌಲನು ಒಬ್ಬ ಸಲಿಂಗೀ ಕಾಮಿಯಾಗಿದ್ದನು ಎಂದು ವಾದಿಸುವ ಒಂದು ಪುಸ್ತಕವನ್ನು ಸ್ಪಾಂಗ್ ಬರೆದನು!
ಅನೇಕ ದೇಶಗಳಲ್ಲಿ ಶಾಲಾ ವ್ಯವಸ್ಥೆಗಳು ತದ್ರೀತಿಯ ಆಲೋಚನಾ ನಮೂನೆಯನ್ನು ಉಂಟುಮಾಡುತ್ತಿರುವಂತೆ ತೋರುತ್ತದೆ. ದ ಕ್ಲೋಸಿಂಗ್ ಆಫ್ ದಿ ಅಮೆರಿಕನ್ ಮೈಂಡ್ ಎಂಬ ತನ್ನ ಪುಸ್ತಕದಲ್ಲಿ ಆ್ಯಲನ್ ಬ್ಲೂಮ್ ಬರೆದದ್ದು: “ಒಬ್ಬ ಪ್ರೊಫೆಸರನು ಸಂಪೂರ್ಣವಾಗಿ ನಿಶ್ಚಿತನಾಗಿರಬಲ್ಲ ಒಂದು ವಿಷಯವಿದೆ: ವಿಶ್ವವಿದ್ಯಾನಿಲಯವನ್ನು ಪ್ರವೇಶಿಸುವ ಪ್ರತಿಯೊಬ್ಬ ವಿದ್ಯಾರ್ಥಿಯು, ಸತ್ಯವು ಸಂಬಂಧಕವೆಂದು ನಂಬುತ್ತಾನೆ ಅಥವಾ ನಂಬುತ್ತಾನೆಂದು ಆತನು ಹೇಳುತ್ತಾನೆ.” ಈ ವಿಷಯದ ಮೇಲೆ ವಿದ್ಯಾರ್ಥಿಗಳ ಮನವರಿಕೆಗೆ ತಾನು ಸವಾಲೆಸೆದರೆ, “ತಾನು 2+2=4 ಎಂಬದನ್ನು ಪ್ರಶ್ನಿಸುತ್ತಿದ್ದೇನೋ ಎಂಬಂತೆ” ಆಶ್ಚರ್ಯದೊಂದಿಗೆ ಪ್ರತಿವರ್ತಿಸುವರೆಂದು ಬ್ಲೂಮ್ ಕಂಡುಹಿಡಿದರು.
ಅದೇ ಆಲೋಚನೆಯು ಇತರ ಅಸಂಖ್ಯಾತ ವಿಧಗಳಲ್ಲಿ ಪ್ರವರ್ಧಿಸಲಾಗಿದೆ. ಉದಾಹರಣೆಗಾಗಿ ಟಿವಿ ಮತ್ತು ವಾರ್ತಾಪತ್ರ ವರದಿಗಾರರು, ಒಂದು ಕಥೆಯ ಕುರಿತಾದ ವಾಸ್ತವಾಂಶಗಳನ್ನು ಪ್ರಸ್ತುತಪಡಿಸುವದಕ್ಕಿಂತ ತಮ್ಮ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಹೆಚ್ಚು ಆಸಕ್ತರಿರುವಂತೆ ಅನೇಕ ಸಲ ತೋರುತ್ತದೆ. ಕೆಲವು ವಾರ್ತಾ ಕಾರ್ಯಕ್ರಮಗಳನ್ನು, ಅವು ಹೆಚ್ಚು ನಾಟಕೀಯವಾಗಿ ತೋರಿಬರುವಂತೆ ಮಾಡಲು ಅಕ್ರಮವಾಗಿ ಬದಲಾಯಿಸಲಾಗಿವೆ ಅಥವಾ ಒಂದು ಸುಳ್ಳು ಫಿಲ್ಮ್ ಸಾದರಪಡಿಸುವಿಕೆಯನ್ನು ಸಹ ಮಾಡಿವೆ. ಮತ್ತು ಮನೋರಂಜನೆಯಲ್ಲಿ ಸತ್ಯದ ಮೇಲೆ ಒಂದು ಇನ್ನೂ ಹೆಚ್ಚು ಬಲವಾದ ಆಕ್ರಮಣವು ಏರಿಸಲ್ಪಟ್ಟಿದೆ. ನಮ್ಮ ಹೆತ್ತವರು ಮತ್ತು ಅಜ್ಜಅಜ್ಜಿಯರು ಜೀವಿಸಿದ ಮೌಲ್ಯಗಳು ಮತ್ತು ನೈತಿಕ ಸತ್ಯಗಳು ಬಳಕೆಯಲ್ಲಿಲ್ಲದ್ದಾಗಿ ವ್ಯಾಪಕವಾಗಿ ವೀಕ್ಷಿಸಲ್ಪಟ್ಟಿವೆ ಮತ್ತು ಹೆಚ್ಚಾಗಿ ಮುಚ್ಚುಮರೆಯಿಲ್ಲದೆ ನಿಂದಿಸಲ್ಪಟ್ಟಿವೆ.
ಈ ಸಂಬಂಧ ವಾದದಲ್ಲಿ ಹೆಚ್ಚಿನದ್ದು ಸೌಹಾರ್ದತೆಯನ್ನು ಪ್ರತಿನಿಧಿಸುತ್ತದೆಂದು ಮತ್ತು ಈ ಕಾರಣದಿಂದ ಮಾನವ ಸಮಾಜದ ಮೇಲೆ ಒಂದು ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆಂದು ಕೆಲವರು ತರ್ಕಿಸಬಹುದು, ಖಂಡಿತ. ಆದಾಗಲೂ, ಅದು ಹಾಗೆ ಮಾಡುತ್ತದೋ? ಮತ್ತು ನಿಮ್ಮ ಮೇಲೆ ಅದರ ಪ್ರಭಾವದ ಕುರಿತಾಗಿ ಏನು? ಸತ್ಯವು ಸಂಬಂಧಕ ಅಥವಾ ಅಸ್ತಿತ್ವದಲ್ಲಿಲ್ಲವೆಂಬದನ್ನು ನೀವು ನಂಬುತ್ತೀರೋ? ಹಾಗಿದ್ದಲ್ಲಿ, ಅದಕ್ಕಾಗಿ ಅನ್ವೇಷಿಸುವುದು ಸಮಯದ ಹಾಳುಮಾಡುವಿಕೆಯಾಗಿ ನಿಮಗೆ ತೋರಬಹುದು. ಅಂತಹ ಒಂದು ಹೊರನೋಟವು ನಿಮ್ಮ ಭವಿಷ್ಯವನ್ನು ಪ್ರಭಾವಿಸುವುದು.
[ಅಧ್ಯಯನ ಪ್ರಶ್ನೆಗಳು]
a ಬೈಬಲ್ ವಿದ್ವಾಂಸ ಆರ್. ಸಿ. ಎಚ್. ಲೆನ್‌ಸ್ಕಿಯವರಿಗನುಸಾರ ಪಿಲಾತನ “ಸರ್ವವು, ಧಾರ್ಮಿಕ ಸತ್ಯದ ಸ್ವರೂಪದಲ್ಲಿರುವ ಯಾವುದೇ ಸಂಗತಿಯು ಒಂದು ಉಪಯೋಗವಿಲ್ಲದ ವಿಚಾರವಾಗಿದೆಯೆಂದು ತನ್ನ ಪ್ರಶ್ನೆಯ ಮೂಲಕ ಹೇಳಲು ಉದ್ದೇಶಿಸುವ ಒಬ್ಬ ಉದಾಸೀನಭಾವದ ಪ್ರಾಪಂಚಿಕ ವ್ಯಕ್ತಿಯವನಂತಿದೆ.”