ಲೋಕದ ಸುತ್ತಲೂ ಯೆಹೋವನ ಸಾಕ್ಷಿಗಳು—ಸ್ವೀಡನ್
ಸ್ವೀಡನ್, ಸ್ಕಾಂಡಿನೇವಿಯನ್ ದ್ವೀಪಕಲ್ಪದ ಮೂಡಲ ದಿಕ್ಕಿನಲ್ಲಿ ವ್ಯಾಪಿಸಿರುತ್ತದೆ ಮತ್ತು ಉತ್ತರ ಧ್ರುವ ವೃತ್ತದ ಮೇಲೆ ಚಾಚುತ್ತದೆ. ಅದರ ಹುಲುಸಾದ ನಿತ್ಯಹಸುರು ಕಾಡುಗಳು ಹಾಗೂ ಅದರ ಸರೋವರಗಳು, ಮತ್ತು ಪರ್ವತಗಳು ಲೋಕವ್ಯಾಪಕವಾಗಿ ಪ್ರಸಿದ್ಧವಾಗಿದ್ದು, ಸ್ವೀಡನ್ ಯೂರೋಪಿನಲ್ಲಿ ಅತೀ ದೂರ ದೂರವಾಗಿ ಚೆದರಿರುವ ಜನವಸತಿಯಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಹಾಗಿದ್ದರೂ, 1800 ಗಳ ಕೊನೆಯ ಭಾಗದಿಂದ ಸತ್ಯದ ಪ್ರೇಮಿಗಳಿಗಾಗಿ ಯೆಹೋವನ ಸಾಕ್ಷಿಗಳು ಸಾಫಲ್ಯದೊಂದಿಗೆ ಹುಡುಕಿದ್ದಾರೆ. ಇತ್ತೀಚೆಗಿನ ಒಂದು ಉದಾಹರಣೆಯನ್ನು ಪರಿಗಣಿಸಿರಿ.
ಒಬ್ಬ ಹೆಂಗಸು ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸುತ್ತಿದ್ದಳು, ಆದರೆ ಅವಳ ಗಂಡನಿಗೆ ಇದು ಇಷ್ಟವಿರಲಿಲ್ಲ. ಅವನು ತನ್ನ ಹೆಂಡತಿಗೆ ಅಭ್ಯಾಸಿಸುವದನ್ನು ನಿಲ್ಲಿಸಲು ಹೇಳಿದನು, ಮತ್ತು ಅವಳು ಹಾಗೆಯೇ ಮಾಡಿದಳು. ಈ ಮನುಷ್ಯನು ಸಾರಾಯಿ ಉತ್ಪನ್ನಗಳ ಒಂದು ಉಗ್ರಾಣದಲ್ಲಿ ಕೆಲಸ ಮಾಡುತ್ತಿದ್ದನು. ಒಂದು ದಿನ ಒಬ್ಬ ಟ್ರಕ್ ಚಾಲಕನು ತನ್ನ ಹತ್ತು ವರ್ಷ ಪ್ರಾಯದ ಮೊಮ್ಮಗನೊಂದಿಗೆ ಉಗ್ರಾಣಕ್ಕೆ ಬಂದನು. ತಾನು ತನ್ನ ಟ್ರಕ್ಕನ್ನು ತುಂಬಿಸುತ್ತಿರುವಾಗ ಹುಡುಗನ ಮೇಲೆ ಕಣ್ಣಿಡುವಂತೆ ಅಜ್ಜನು ಆ ಮನುಷ್ಯನಿಗೆ ಕೇಳಿಕೊಂಡನು. ಸಂಭಾಷಣೆಯ ಸಲುವಾಗಿ ಆ ಮನುಷ್ಯನು, ಹುಡುಗನು ತನ್ನ ಇತ್ತೀಚೆಗಿನ ಜನ್ಮದಿನಕ್ಕಾಗಿ ಯಾವ ಉಡುಗೊರೆಗಳನ್ನು ಪಡೆದಿದ್ದನೆಂದು ಕೇಳಿದನು. ಆ ಮನುಷ್ಯನ ಆಶ್ಚರ್ಯಕ್ಕೆ, ತಾವು ಯೆಹೋವನ ಸಾಕ್ಷಿಗಳಾಗಿರುವದರಿಂದ ತಾನು ಮತ್ತು ತನ್ನ ಕುಟುಂಬವು ಜನ್ಮದಿನಗಳನ್ನು ಆಚರಿಸುತ್ತಿರಲಿಲ್ಲವೆಂದು ಹುಡುಗನು ಹೇಳಿದನು. ತನಗೆ ವರ್ಷದ ಇತರ ಸಮಯಗಳಲ್ಲಿ ಉಡುಗೊರೆಗಳು ದೊರೆಯುತ್ತವೆಂದು ಮತ್ತು ತನಗೆ ತುಂಬ ಆದರಣೆಯ ಮತ್ತು ಪ್ರೀತಿಯುಳ್ಳ ಒಂದು ಕುಟುಂಬವಿದುದ್ದರಿಂದ ತನಗೆ ಯಾವುದೇ ವಿಷಯದ ಅಭಾವ ಅನಿಸುವದಿಲ್ಲವೆಂದೂ ಆ ಹುಡುಗನು ಹೇಳಿದನು. ಬೇರೆ ಯಾವ ಕೊಡುಗೆಗಳು ಅದಕ್ಕಿಂತ ಹೆಚ್ಚು ಬೆಲೆಯುಳ್ಳವುಗಳಾಗಿರಲಿಲ್ಲವೆಂದು ಅವನು ಕೂಡಿಸಿದನು.
ಹುಡುಗನು ತನ್ನ ಅಜ್ಜನೊಂದಿಗೆ ಹಲವಾರು ಸಲ ಹಿಂದಿರುಗಿ ಬಂದನು. ಪ್ರತಿ ಸಲ, ಆ ಮನುಷ್ಯನು ಹುಡುಗನಿಗೆ ತುಂಬ ಪ್ರಶ್ನೆಗಳನ್ನು ಕೇಳುತ್ತಿದ್ದನು, ಮತ್ತು ಯಾವುದೇ ಹಿಂಜರಿತವಿಲ್ಲದೆ ಹುಡುಗನು ಪ್ರಾಮಾಣಿಕವಾದ, ನೇರ ಉತ್ತರಗಳನ್ನು ಕೊಟ್ಟ ವಿಧದಿಂದ ಅವನು ಗಾಢವಾಗಿ ಪ್ರಭಾವಿಸಲ್ಪಟ್ಟನು. ನಿಜವಾದ ಮೌಲ್ಯಗಳಿಗಾಗಿರುವ ಹುಡುಗನ ಗಣ್ಯತೆಯಿಂದಲೂ ಅವನು ಪ್ರಚೋದಿತನಾದನು. ಒಂದು ರಾತ್ರಿ, ಲೋಕದಲ್ಲಿರುವ ಸಂಕಟಕರ ಪರಿಸ್ಥಿತಿಗಳನ್ನು ತೋರಿಸಿದ ಒಂದು ಟೆಲಿವಿಷನ್ ಕಾರ್ಯಕ್ರಮವನ್ನು ನೋಡಿದ ಬಳಿಕ, ತಾನು ಆತ್ಮಿಕ ವಿಷಯಗಳನ್ನು ಹೆಚ್ಚು ಗಂಭೀರವಾಗಿ ಪರಿಶೀಲಿಸಬೇಕೆಂದು ಆ ಮನುಷ್ಯನು ಗ್ರಹಿಸಿದನು. ತನ್ನ ಪತ್ನಿಯೊಂದಿಗೆ ಅಭ್ಯಾಸಿಸಿದ್ದ ಸಾಕ್ಷಿಗೆ ಅವನು ಫೋನ್ ಮಾಡಿ, ಅವಳು ಪುನಃ ಬರುವಂತೆ ಕೇಳಿಕೊಂಡನು. ಸ್ವಲ್ಪ ಸಮಯದಲ್ಲೇ, ಒಬ್ಬ ಸಾಕ್ಷಿಯು ಆ ಮನುಷ್ಯನೊಂದಿಗೆ ಒಂದು ಅಭ್ಯಾಸವನ್ನು ನಡಿಸುತ್ತಿದ್ದನು ಮತ್ತು ಅವನು ತೀವ್ರ ಪ್ರಗತಿಯನ್ನು ಮಾಡಿದನು. ಅವನು 1994, ಎಪ್ರಿಲ್ 10 ರಂದು ದೀಕ್ಷಾಸ್ನಾನ ಹೊಂದಿದನು. ಈಗ ಅವನ ಹೆಂಡತಿ ಸಹ ದೀಕ್ಷಾಸ್ನಾನ ಹೊಂದಿದ್ದಾಳೆ.
ಬೆಳವಣಿಗೆಯು ಕಟ್ಟೋಣವನ್ನು ಅವಶ್ಯಪಡಿಸುತ್ತದೆ
ಸ್ವೀಡನ್, ಇತರ ದೇಶಗಳಿಂದ ಬಂದ ಅನೇಕ ಆಶ್ರಿತರಿಗೆ ಮನೆಯಾಗಿದೆ, ಮತ್ತು ಅವರಿಗೆ ಸಾರುವದರಿಂದ ಸ್ವೀಡಿಷ್ ಸಾಕ್ಷಿಗಳು ಒಳ್ಳೆಯ ಫಲಿತಾಂಶಗಳನ್ನು ಪಡೆದಿದ್ದಾರೆ. ಸಾಮಾನ್ಯವಾಗಿ ಕಾರ್ಯಕ್ಕೆ ಎಷ್ಟೊಂದು ಯಶಸ್ಸು ಲಭಿಸಿದೆಯೆಂದರೆ, ಈ ವಿಸ್ತರಣೆಗೆ ಎಡೆಮಾಡಿಕೊಡಲು ಹೊಸ ರಾಜ್ಯ ಸಭಾಗೃಹಗಳ ಆವಶ್ಯಕತೆಯಿರುತ್ತದೆ. 1986 ರಿಂದ 1993ರ ವರೆಗೆ ಕ್ಷಿಪ್ರ ನಿರ್ಮಾಣ ವಿಧಾನದ ಮೂಲಕ 37 ರಾಜ್ಯ ಸಭಾಗೃಹಗಳು ಕಟ್ಟಲ್ಪಟ್ಟವು, ಮತ್ತು 8 ಸಭಾಗೃಹಗಳನ್ನು ವಿಸ್ತರಿಸಿ ನವೀಕರಿಸಲಾಯಿತು. 1994 ರಲ್ಲೇ, ಹೆಚ್ಚಿನ ಏಳು ರಾಜ್ಯ ಸಭಾಗೃಹಗಳನ್ನು ಕಟ್ಟಲಾಯಿತು, ಮತ್ತು ಮೂರನ್ನು ನವೀಕರಿಸಲಾಯಿತು.
ಸದ್ಯಕ್ಕೆ, 65 ಸಭೆಗಳು ಒಂದು ಹೊಸ ರಾಜ್ಯ ಸಭಾಗೃಹವನ್ನು ಕಟ್ಟಲು ಅಥವಾ ತಮ್ಮ ಸದ್ಯದ ಸಭಾಗೃಹವನ್ನು ನವೀಕರಿಸಲು ಸಹಾಯಕ್ಕಾಗಿ ಕಾದುಕೊಂಡಿವೆ. ಸುಮಾರು 2,500 ಸ್ವಯಂಸೇವಕರು ಇಂತಹ ನಿರ್ಮಾಣ ಯೋಜನೆಗಳಲ್ಲಿ ಸಹಾಯ ಮಾಡುತ್ತಾರೆ, ಮತ್ತು ಸಭೆಗಳು ಅವರ ಪ್ರೀತಿಪೂರ್ವಕ ನೆರವನ್ನು ತುಂಬ ಗಣ್ಯಮಾಡುತ್ತವೆ.
ಉತ್ತರ ಧ್ರುವ ವೃತ್ತದ ಮೇಲೆ ವ್ಯಾಪಿಸಿರುವ ಸ್ವೀಡನಿನ ಉತ್ತರ ಭಾಗವನ್ನು ಮಧ್ಯರಾತ್ರಿಯ ಸೂರ್ಯನ ದೇಶವೆಂದು ಕೆಲವೊಮ್ಮೆ ಕರೆಯಲಾಗುತ್ತದೆ. ಇದು ಯಾಕಂದರೆ ಬೇಸಗೆಯ ಒಂದು ಭಾಗದಲ್ಲಿ ಸೂರ್ಯನು ಅಲ್ಲಿ ಮುಳುಗುವದೇ ಇಲ್ಲ. ಹಾಗೆಯೇ ಸ್ವೀಡನ್ನಲ್ಲೆಲ್ಲ ಸತ್ಯದ ಬೆಳಕು ಸಹ ಉಜ್ವಲವಾಗಿ ಪ್ರಕಾಶಿಸುವದನ್ನು ಮುಂದುವರಿಸುತ್ತಾ ಇದೆ. ಯೆಹೋವನ ಆಶೀರ್ವಾದದೊಂದಿಗೆ, ಆ ಆತ್ಮಿಕ ಬೆಳಕು ಎಂದೂ ಮಂದವಾಗಲಾರದು ಬದಲಾಗಿ ಇನ್ನೂ ಹೆಚ್ಚೆಚ್ಚು ಉಜ್ವಲವಾಗುತ್ತಾ ಪ್ರಕಾಶಿಸುವುದು.
[ಪುಟ 8 ರಲ್ಲಿರುವ ಚೌಕ]
ದೇಶದ ಪಾರ್ಶ್ವದೃಶ್ಯ
1994ರ ಸೇವಾ ವರ್ಷ
ಸಾಕ್ಷಿ ನೀಡುತ್ತಿರುವವರ ಉಚ್ಚಾಂಕ: 24, 246
ಪ್ರಮಾಣ: 1 ಸಾಕ್ಷಿಗೆ 362
ಜ್ಞಾಪಕ ಹಾಜರಿ: 40,372
ಸರಾಸರಿ ಪಯನೀಯರ್ ಪ್ರಚಾರಕರು: 2,509
ಸರಾಸರಿ ಬೈಬಲ್ ಅಧ್ಯಯನಗಳು: 11,306
ದೀಕ್ಷಾಸ್ನಾನ ಪಡೆದವರು: 850
ಸಭೆಗಳ ಸಂಖ್ಯೆ: 358
ಬ್ರಾಂಚ್ ಆಫೀಸ್: ಆರ್ಬೋಗಾ
[ಪುಟ 9 ರಲ್ಲಿರುವ ಚಿತ್ರ]
ಆರ್ಬೋಗಾದಲ್ಲಿ ಬ್ರಾಂಚ್ ಆಫೀಸ್ ಮತ್ತು ಬೆತೆಲ್ ಗೃಹ
[ಪುಟ 9 ರಲ್ಲಿರುವ ಚಿತ್ರ]
ಜೋಯಲ್ಲಿನ ಆರಂಭದ ಸಾಕ್ಷಿಗಳು ಸುಮಾರು 5,000 ಚದರ ಕಿಲೋಮೀಟರ್ಗಳ ಒಂದು ಟೆರಿಟೊರಿಯನ್ನು ಆವರಿಸಲು ಈ ಮಿನಿ ಬಸ್ಸನ್ನು ಉಪಯೋಗಿಸಿದರು