ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 4/1 ಪು. 21-25
  • ಪ್ರೌಢತೆಗೇರುವ ನನ್ನ ನಿರ್ಧಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರೌಢತೆಗೇರುವ ನನ್ನ ನಿರ್ಧಾರ
  • ಕಾವಲಿನಬುರುಜು—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯುದ್ಧವು ನಮ್ಮ ಜೀವನಗಳನ್ನು ಬದಲಾಯಿಸುತ್ತದೆ
  • ಆತ್ಮಿಕ ಅಭಿವೃದ್ಧಿಗೆ ವಿಘ್ನಗಳು
  • ಪಯನೀಯರ್‌ ಸೇವೆಯನ್ನು ಪ್ರವೇಶಿಸುವುದು
  • ಮಿಷನೆರಿ ಸೇವೆಯನ್ನು ಬೆನ್ನಟ್ಟಿದ್ದು
  • ಒಂದು ವಿದೇಶೀ ಕ್ಷೇತ್ರಕ್ಕೆ ಸರಿಹೊಂದಿಸಿಕೊಂಡದ್ದು
  • ಅಮೆರಿಕಕ್ಕೆ ಒಂದು ಭೇಟಿ
  • ಆತ್ಮಿಕವಾಗಿ ಅಭಿವೃದ್ಧಿ ಹೊಂದುತ್ತಾ ಮುಂದುವರಿಯುವುದು
  • ನನ್ನನ್ನು ನಿಜವಾಗಿಯೂ ಪ್ರೀತಿಸಿದ ಕುಟುಂಬ
    ಎಚ್ಚರ!—1995
ಕಾವಲಿನಬುರುಜು—1995
w95 4/1 ಪು. 21-25

ಪ್ರೌಢತೆಗೇರುವ ನನ್ನ ನಿರ್ಧಾರ

ಕಾರ್ಲ್‌ ಡಾಕಾವ್‌ ಹೇಳಿದಂತೆ

“ಪ್ರೌಢತೆಗೇರುವುದು ಅಥವಾ ಪಾಪದೊಳಗೆ ಮತ್ತೆ ಬೀಳುವುದು, ನೀವು ಯಾವುದನ್ನು ಆರಿಸಿಕೊಳ್ಳುವಿರಿ?” ಎಂಬುದು ದ ವಾಚ್‌ಟವರ್‌ 1948, ಜೂನ್‌ 15ರ ಸಂಚಿಕೆಯಲ್ಲಿನ ಲೇಖನವೊಂದರ ಶಿರೋನಾಮವಾಗಿತ್ತು. ಅಮೆರಿಕದ ವ್ಯವಸಾಯಕ್ಷೇತ್ರಗಳಲ್ಲಿ ಆತ್ಮಿಕ ಅಪಾಯದ ಸ್ಥಿತಿಯಿಂದ, 43 ವರ್ಷಗಳಿಗಿಂತಲೂ ಅಧಿಕವಾಗಿ ವಿಸ್ತರಿಸಿರುವ, ದಕ್ಷಿಣ ಅಮೆರಿಕದಲ್ಲಿ ಒಂದು ಮಿಷನೆರಿ ಜೀವನ ಮಾರ್ಗಕ್ಕೆ ಬದಲಾಗುವಂತೆ ಆ ಲೇಖನವು ನನ್ನನ್ನು ಪ್ರಚೋದಿಸಿತು.

1914ರ ಮಾರ್ಚ್‌ 31 ರಂದು, ಮಿನೆಸೋಟದ ವರ್ಗಸ್‌ನಲ್ಲಿ, ಮರದ ದಿಮ್ಮಿಗಳ ಕೋಣೆಯೊಂದರಲ್ಲಿ, ನಾನು ನಾಲ್ವರು ಹುಡುಗರಲ್ಲಿ ಮೂರನೆಯವನಾಗಿ ಜನಿಸಿದೆ. ನನ್ನ ಯೌವನದ ವರ್ಷಗಳು ಆನಂದಕರವಾಗಿದ್ದವು. ನನ್ನ ತಂದೆಯೊಂದಿಗೆ ಮೀನು ಹಿಡಿಯುತ್ತಿದುದ್ದನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ. ಆದರೂ, ತಾಯಿ ಆಗಾಗ್ಗೆ ಅಸ್ವಸ್ಥರಾಗುತ್ತಿದ್ದರು, ಮತ್ತು ಮನೆಯ ಚಟುವಟಿಕೆಗಳಲ್ಲಿ ಅವರಿಗೆ ಸಹಾಯ ಮಾಡಲಿಕ್ಕಾಗಿ ನಾನು ಐದನೆಯ ದರ್ಜೆಯಲ್ಲಿ ಶಾಲೆಯನ್ನು ಬಿಡಬೇಕಾಯ್ತು. ನಾನು 13 ವರ್ಷ ಪ್ರಾಯದವನಿದ್ದಾಗ, ಅವರ ಕಾಯಿಲೆಯು ಶ್ವಾಸ ಕೋಶದ ಕ್ಯಾನ್ಸರ್‌ ಎಂಬುದಾಗಿ ರೋಗ ನಿರ್ಣಯ ಮಾಡಲಾಯಿತು.

ತಾನು ಹೆಚ್ಚು ದೀರ್ಘಕಾಲ ಜೀವಿಸುವುದಿಲ್ಲವೆಂದು ತಾಯಿ ತಿಳಿದಿದ್ದರು, ಆದುದರಿಂದ ಅವರ ಸ್ಥಾನವನ್ನು ನಾನು ತೆಗೆದುಕೊಳ್ಳಲಿಕ್ಕಾಗಿ ನನ್ನನ್ನು ಸಿದ್ಧಗೊಳಿಸಲು ಆರಂಭಿಸಿದರು. ಅವರು ಅಡಿಗೆ ಮನೆಯಲ್ಲಿ ಕುಳಿತುಕೊಂಡು, ಅಡಿಗೆ ಮಾಡುವುದರ ಕುರಿತು ನನಗೆ ನಿರ್ದೇಶನಗಳನ್ನು ಕೊಡುತ್ತಿದ್ದರು. ಅದರ ಜೊತೆಗೆ, ವಸ್ತ್ರಗಳನ್ನು ಒಗೆಯುವುದು, ತೋಟವನ್ನು ನೋಡಿಕೊಳ್ಳುವುದು, ಮತ್ತು ನೂರು ಕೋಳಿಮರಿಗಳ ರಕ್ಷಣೆ ಮಾಡುವುದನ್ನು ಅವರು ನನಗೆ ಕಲಿಸಿದರು. ಅವರು ಪ್ರತಿದಿನ ಬೈಬಲಿನ ಒಂದು ಅಧ್ಯಾಯವನ್ನು ಓದುವಂತೆ ಸಹ ನನ್ನನ್ನು ಉತ್ತೇಜಿಸಿದರು, ನನ್ನ ಪರಿಮಿತವಾದ ವಾಚನ ಸಾಮರ್ಥ್ಯದ ಹೊರತಾಗಿಯೂ ನಾನದನ್ನು ಮಾಡಿದೆ. ಹತ್ತು ತಿಂಗಳುಗಳ ವರೆಗೆ ನನ್ನನ್ನು ತರಬೇತುಗೊಳಿಸಿದ ಅನಂತರ, 1928ರ ಜನವರಿ 27 ರಂದು ತಾಯಿ ಮರಣಹೊಂದಿದರು.

ಯುದ್ಧವು ನಮ್ಮ ಜೀವನಗಳನ್ನು ಬದಲಾಯಿಸುತ್ತದೆ

1939ರ ಸಪ್ಟಂಬರದಲ್ಲಿ II ನೆಯ ಲೋಕ ಯುದ್ಧವು ಆರಂಭಗೊಂಡ ಬಳಿಕ, ಲ್ಯೂತರನ್‌ ಚರ್ಚಿನಲ್ಲಿ ಸೈನ್ಯದಳಗಳ ಪರವಾಗಿ ಪ್ರತಿ ಆದಿತ್ಯವಾರ ಪ್ರಾರ್ಥನೆಗಳು ಹೇಳಲ್ಪಡುತ್ತಿದ್ದವು. ಕೊಲ್ಲಬಾರದೆಂದು ನನ್ನ ಅಣನ್ಣಾದ ಫ್ರ್ಯಾಂಕ್‌ ನಿರ್ಧರಿಸಿದ್ದುದರಿಂದ ಮಿಲಿಟರಿ ಸೇವೆಯನ್ನು ಅವನು ನಿರಾಕರಿಸಿದಾಗ, ಅವನನ್ನು ಬಂಧಿಸಲಾಯಿತು. ಅವನ ವಿಚಾರಣೆಯಲ್ಲಿ ಅವನು ಹೇಳಿದ್ದು: “ನಾನು ಮುಗ್ಧರಾದ ಜನರನ್ನು ಕೊಲ್ಲುವುದಕ್ಕೆ ಮೊದಲು, ನೀವು ನನ್ನನ್ನು ಗುಂಡು ಹಾರಿಸಿ ಕೊಲ್ಲಬಹುದು!” ವಾಷಿಂಗ್‌ಟನ್‌ ಸ್ಟೇಟ್‌ನ ತೀರದ ಆಚೆ ಮೆಕ್ನೀಲ್‌ ದ್ವೀಪದ ಸೆರೆಮನೆಯಲ್ಲಿ ಒಂದು ವರ್ಷ ಕಳೆಯುವಂತೆ ಅವನಿಗೆ ಶಿಕ್ಷೆವಿಧಿಸಲಾಯಿತು.

ಅಲ್ಲಿ, ಯುದ್ಧದ ಸಮಯದಲ್ಲಿ ಅವರು ನಿರ್ದಿಷ್ಟಾರ್ಥದಲ್ಲಿ ತಟಸ್ಥರಾಗಿದ್ದ ಕಾರಣದಿಂದ ಸೆರೆಮನೆಯಲ್ಲಿ ಹಾಕಲ್ಪಟ್ಟಿದ್ದ 300 ಕ್ಕಿಂತಲೂ ಹೆಚ್ಚಿನ ಯೆಹೋವನ ಸಾಕ್ಷಿಗಳನ್ನು ಫ್ರ್ಯಾಂಕ್‌ ಕಂಡುಕೊಂಡನು. (ಯೆಶಾಯ 2:4; ಯೋಹಾನ 17:16) ಬೇಗನೆ ಅವನು ಅವರೊಂದಿಗೆ ಸಹವಾಸಿಸಲು ಆರಂಭಿಸಿದನು ಮತ್ತು ಸೆರೆಮನೆಯಲ್ಲಿಯೇ ದೀಕ್ಷಾಸ್ನಾನವನ್ನು ಪಡೆದುಕೊಂಡನು. ಸೆರೆಯಾಳಿನೋಪಾದಿ ಒಂದು ಒಳ್ಳೆಯ ನಡವಳಿಕೆಯ ಫಲಿತಾಂಶವಾಗಿ, ಅವನ ಶಿಕ್ಷೆಯು ಒಂಬತ್ತು ತಿಂಗಳುಗಳಿಗೆ ಇಳಿಸಲ್ಪಟ್ಟಿತು. 1942ರ ನವಂಬರದಲ್ಲಿ, ಫ್ರ್ಯಾಂಕ್‌ನನ್ನು ಸೆರೆಮನೆಯಿಂದ ಬಿಡುಗಡೆಗೊಳಿಸಲಾಯಿತು ಎಂಬ ಸಮಾಚಾರವನ್ನು ನಾವು ಪಡೆದೆವು, ಮತ್ತು ತದನಂತರ ಕೂಡಲೆ ಅವನು ದೇವರ ರಾಜ್ಯದ ಸುವಾರ್ತೆಯ ಕುರಿತು ನಮಗೆ ಹೇಳಿದನು. ನಮ್ಮ ಬೈಬಲ್‌ಗಳೊಂದಿಗೆ ಆ ಸಂದೇಶವನ್ನು ಜಾಗರೂಕತೆಯಿಂದ ಪರಿಶೀಲಿಸಿದ ಬಳಿಕ, ಫ್ರ್ಯಾಂಕ್‌ ನಮಗೆ ಕಲಿಸುತ್ತಿದುದು ಸತ್ಯವಾಗಿತ್ತೆಂದು ನಾವೆಲ್ಲರೂ ಅವಲೋಕಿಸಲು ಸಾಧ್ಯವಾಯಿತು.

ಆತ್ಮಿಕ ಅಭಿವೃದ್ಧಿಗೆ ವಿಘ್ನಗಳು

1944 ರಲ್ಲಿ, ನನ್ನ ಮಾವನೊಂದಿಗೆ ವಾಸಿಸಲಿಕ್ಕಾಗಿ ಮೊಂಟ್ಯಾನದ ಮಾಲ್ಟ ಕ್ಷೇತ್ರಕ್ಕೆ ನಾನು ಸ್ಥಳ ಬದಲಾಯಿಸಿದೆ. ನಾವಿಬ್ಬರೂ ಒಂದು ವಿಷಯದಲ್ಲಿ ಸಮಾನರಾಗಿದ್ದೆವು—ವಿವಾಹದ ಆರು ತಿಂಗಳುಗಳ ಬಳಿಕ ನಮ್ಮಿಬ್ಬರ ಪತ್ನಿಯರು ನಮ್ಮನ್ನು ಬಿಟ್ಟುಹೋಗಿದ್ದರು. ಹೊಲದ ಕೆಲಸದಲ್ಲಿ ಮತ್ತು ಅಡಿಗೆ ಮಾಡುವುದರಲ್ಲಿ ಅವರಿಗೆ ಸಹಾಯ ಮಾಡಲಿಕ್ಕಾಗಿ ನನ್ನನ್ನು ಇಟ್ಟುಕೊಳ್ಳಲು ಅವರು ಸಂತೋಷಪಟ್ಟರು, ಮತ್ತು ನಮ್ಮ ಲಾಭಗಳನ್ನು ನಾವು ಸಮ ಭಾಗವಾಗಿ ಹಂಚಿಕೊಂಡೆವು. ನಾನು ಅವರೊಂದಿಗೆ ಜೀವಿಸುವಲ್ಲಿ, ನಾನು ಅವರ 640 ಎಕರೆ (260 ಹೆಕ್ಟರ್‌) ಜಮೀನಿಗೆ ಉತ್ತರಾಧಿಕಾರಿಯಾಗಸಾಧ್ಯವಿದೆಯೆಂದು ನನ್ನ ಮಾವ ಹೇಳಿದರು. ಅವುಗಳು ವ್ಯವಸಾಯದ ಸಮೃದ್ಧ ವರ್ಷಗಳಾಗಿದ್ದವು, ಮತ್ತು ನಾನು ಅದನ್ನು ಬಹಳವಾಗಿ ಆನಂದಿಸಿದೆ! ಪ್ರತಿ ವರ್ಷ ನಮಗೆ ಭಾರಿ ಪ್ರಮಾಣದ ಬೆಳೆಯು ದೊರಕುತ್ತಿತ್ತು, ಮತ್ತು ಗೋಧಿಯನ್ನು ಕೊಳಗವೊಂದಕ್ಕೆ ಸುಮಾರು 3.16 ಡಾಲರುಗಳಷ್ಟು ಹೆಚ್ಚು ಬೆಲೆಗೆ ಮಾರಲಾಯಿತು.

ಆದರೂ, ನಾನು ಮಾಲ್ಟದಲ್ಲಿರುವ ಸಾಕ್ಷಿಗಳ ಒಂದು ಚಿಕ್ಕ ಸಭೆಯ ಕೂಟಗಳಿಗೆ ಹಾಜರಾದ ಸಂಗತಿಯನ್ನು ನನ್ನ ಮಾವ ಇಷ್ಟಪಡಲಿಲ್ಲ. 1947ರ ಜೂನ್‌ 7 ರಂದು, ನನ್ನ ಮಾವನಿಗೆ ಗೊತ್ತಿಲ್ಲದೆ, ವುಲ್ಫ್‌ ಪಾಯಿಂಟ್‌ನ ಯೆಹೋವನ ಸಾಕ್ಷಿಗಳ ಸರ್ಕಿಟ್‌ ಸಮ್ಮೇಳನದಲ್ಲಿ ನಾನು ದೀಕ್ಷಾಸ್ನಾನ ಪಡೆದುಕೊಂಡೆ. ಅಲ್ಲಿ ಒಬ್ಬ ಪಯನೀಯರ್‌, ಅಥವಾ ಪೂರ್ಣ ಸಮಯದ ಶುಶ್ರೂಷಕನಾಗಲು ಒಬ್ಬ ಕ್ರೈಸ್ತ ಸಹೋದರನು ನನ್ನನ್ನು ಆಮಂತ್ರಿಸಿದನು. ನನ್ನ ಜೀವಿತವನ್ನು ಅಂತಹ ಒಂದು ಮಾರ್ಗದಲ್ಲಿ ಉಪಯೋಗಿಸುವುದು ನನ್ನ ಹೃದಯದ ಅಪೇಕ್ಷೆಯಾಗಿತ್ತಾದರೂ, ಶುಶ್ರೂಷೆಗೆ ಅಷ್ಟು ಅಧಿಕ ಸಮಯವನ್ನು ಮೀಸಲಾಗಿಡಲು ನನಗೆ ನನ್ನ ಮಾವ ಎಂದಿಗೂ ಅನುಮತಿ ಕೊಡಲಾರರು ಎಂದು ನಾನು ವಿವರಿಸಿದೆ.

ತರುವಾಯ, ನಾನು ಒಬ್ಬ ಪೂರ್ಣ ಸಮಯದ ಶುಶ್ರೂಷಕನಾಗುವಂತೆ ನನ್ನನ್ನು ಪ್ರಚೋದಿಸಿದ ಒಬ್ಬ ಗೆಳೆಯನಿಂದ ನನಗೆ ಬರೆಯಲ್ಪಟ್ಟ ಒಂದು ಪತ್ರವನ್ನು ನನ್ನ ಮಾವ ತೆರೆದು ಓದಿದರು. ವಿಪರೀತ ಕೋಪಗೊಂಡವರಾಗಿ, ನನ್ನ ಮಾವ ನನಗೆ, ಸಾರುವುದನ್ನು ನಿಲ್ಲಿಸು ಅಥವಾ ಇಲ್ಲಿಂದ ತೊಲಗು ಎಂಬ ಕಟ್ಟಕಡೆಯ ನಿರ್ಧಾರವನ್ನು ಕೊಟ್ಟರು. ಆ ಕಟ್ಟಕಡೆಯ ನಿರ್ಧಾರವು ಒಂದು ಒಳ್ಳೆಯ ವಿಷಯವಾಗಿತ್ತು, ಯಾಕೆಂದರೆ ವ್ಯವಸಾಯವನ್ನು ನಾನು ಬಹಳವಾಗಿ ಪ್ರೀತಿಸುತ್ತಿದ್ದುದರಿಂದ ನನ್ನ ಸ್ವಂತ ನಿರ್ಧಾರದ ಮೇಲೆ ನಾನು ಇದನ್ನು ಬಿಡುತ್ತಿದ್ದೆನೊ ಇಲ್ಲವೊ ನನಗೆ ಗೊತ್ತಿಲ್ಲ. ಆದುದರಿಂದ ಕೂಡಲೆ ನಾನು ಮಿನೆಸೋಟದಲ್ಲಿರುವ ನನ್ನ ಕುಟುಂಬಕ್ಕೆ ಹಿಂದಿರುಗಿದೆ, ಅವರಲ್ಲಿ ಎಲ್ಲರು ಈ ಹೊತ್ತಿಗೆ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದು, ಡಿಟ್ರೈಟ್‌ ಲೇಕ್ಸ್‌ ಸಭೆಯೊಂದಿಗೆ ಜೊತೆಗೂಡುತ್ತಿದ್ದರು.

ಆರಂಭದಲ್ಲಿ ನನ್ನ ಕುಟುಂಬವು ಪಯನೀಯರ್‌ ಸೇವೆಯನ್ನು ಮಾಡುವಂತೆ ನನ್ನನ್ನು ಉತ್ತೇಜಿಸಿತು, ಆದರೆ 1948 ರಲ್ಲಿ ಅವರು ಆತ್ಮಿಕವಾಗಿ ಹುರುಪನ್ನು ಕಳೆದುಕೊಳ್ಳಲಾರಂಭಿಸಿದರು. ಆಗಲೇ “ಪ್ರೌಢತೆಗೇರುವುದು ಅಥವಾ ಪಾಪದೊಳಗೆ ಮತ್ತೆ ಬೀಳುವುದು, ನೀವು ಯಾವುದನ್ನು ಆರಿಸಿಕೊಳ್ಳುವಿರಿ?” ಎಂಬ ಲೇಖನವು ನನಗೆ ಅಗತ್ಯವಾಗಿದ್ದ ಆತ್ಮಿಕ ವೃದ್ಧಿಯನ್ನು ಒದಗಿಸಿತು. “ಪ್ರವರ್ಧಮಾನಕ್ಕೆ ಬರುತ್ತಿರುವ ಜ್ಞಾನದೊಂದಿಗೆ ಹೊಂದಿಕೆಯಲ್ಲಿ ಇಟ್ಟುಕೊಳ್ಳಲು ನಾವು ಇಚ್ಛಾಪೂರ್ವಕವಾಗಿ ನಿರಾಕರಿಸುವುದಾದರೆ, ತೀರ ದುಃಖಕರವಾದ ಪರಿಣಾಮಗಳು ನಿಶ್ಚಯವಾಗಿ ಹಿಂಬಾಲಿಸುವವು” ಎಂದು ಅದು ಎಚ್ಚರಿಸಿತು. ಆ ಲೇಖನವು ಹೇಳಿದ್ದು: “ನಾವು ಚಲಿಸದೆ ನಿಂತು ಹಿಂದೆ ಬೀಳುವುದು ಆಗದು, ಬದಲಾಗಿ ನೀತಿಯಿಂದ ಪ್ರಗತಿಯನ್ನು ಮಾಡಬೇಕು. ಪ್ರಗತಿ—ನಿಲ್ಲುವಿಕೆಯಲ್ಲ—ಮರುಕೊಳಿಸುವುದರ ವಿರುದ್ಧವಾದ ಅತ್ಯಂತ ಮಹಾನ್‌ ಪ್ರತಿಶಕ್ತಿಯಾಗಿದೆ.”

ನನ್ನ ಕುಟುಂಬವು ಇತರ ಕಾರಣಗಳನ್ನು ಕೊಟ್ಟಾಗ್ಯೂ, ಐಶ್ವರ್ಯವಂತರಾಗುವ ಅವರ ಅಪೇಕ್ಷೆಯೇ ನಿಜವಾದ ಸಮಸ್ಯೆಯಾಗಿತ್ತೆಂದು ನಾನು ನಂಬಿದೆ. ವ್ಯವಸಾಯದಲ್ಲಿ ಅಧಿಕ ಸಮಯವನ್ನು ಮತ್ತು ಸಾರುವಿಕೆಯಲ್ಲಿ ಕಡಿಮೆ ಸಮಯವನ್ನು ವಿನಿಯೋಗಿಸುವುದರ ಕುರಿತಾದ ಆರ್ಥಿಕ ಲಾಭಗಳನ್ನು ಅವರು ಅವಲೋಕಿಸಸಾಧ್ಯವಿತ್ತು. ಐಶ್ವರ್ಯಕ್ಕಾಗಿರುವ ಬಯಕೆಯಿಂದ ಬಂಧನದಲ್ಲಿ ಸಿಕ್ಕಿಕೊಳ್ಳುವುದಕ್ಕೆ ಬದಲಾಗಿ, ಪಯನೀಯರ್‌ ಸೇವೆಯನ್ನು ಮಾಡಲು ನಾನು ಯೋಜನೆಗಳನ್ನು ಮಾಡಿದೆ. ಅದು ಸುಲಭವಾಗಿರಸಾಧ್ಯವಿಲ್ಲವೆಂದು ನನಗೆ ತಿಳಿದಿತ್ತು, ಮತ್ತು ನಾನು ಒಬ್ಬ ಪಯನೀಯರನಾಗಲಾರೆನೆಂದೂ ನಾನು ಆಲೋಚಿಸಿದ್ದೆ. ಆದುದರಿಂದ 1948 ರಲ್ಲಿ, ವರ್ಷದಲ್ಲಿ ತೀರ ಕೆಟ್ಟದಾದ್ದ ಹವಾಮಾನವನ್ನು ಹೊಂದಿರುವ ದಶಂಬರ ತಿಂಗಳನ್ನು ಪಯನೀಯರ್‌ ಸೇವೆಯನ್ನು ಆರಂಭಿಸಲು ಉದ್ದೇಶಪೂರ್ವಕವಾಗಿ ಉಪಯೋಗಿಸಿಕೊಳ್ಳುವ ಮೂಲಕವಾಗಿ ನನ್ನನ್ನು ನಾನು ಪರೀಕ್ಷಿಸಿಕೊಂಡೆ.

ಪಯನೀಯರ್‌ ಸೇವೆಯನ್ನು ಪ್ರವೇಶಿಸುವುದು

ಯೆಹೋವನು ನನ್ನ ಪ್ರಯತ್ನಗಳನ್ನು ಆಶೀರ್ವದಿಸಿದನು. ಉದಾಹರಣೆಗಾಗಿ, ಒಂದು ದಿನ ತಾಪಮಾನವು ಗಾಳಿಯ ಕೊರೆತವನ್ನು ಲೆಕ್ಕಿಸದೆ, ಸೊನ್ನೆಗಿಂತ 27 ಡಿಗ್ರಿ ಸೆಲ್ಸಿಯಸ್‌ ಕೆಳಗಿತ್ತು. ನನ್ನ ಕೈಗಳನ್ನು ಅನೇಕಾವರ್ತಿ—ಒಂದು ಕೈಯಲ್ಲಿ ಪತ್ರಿಕೆಗಳನ್ನು ಹಿಡಿದಿರುವಾಗ, ಆ ಕೈಯು ತೀರ ತಣ್ಣಗಾಗಿ, ಕೈಯನ್ನು ಜೇಬಿನಲ್ಲಿ ಹಾಕುವಂತೆ ಅಗತ್ಯಪಡಿಸುವ ಸರದಿಯು ಬರುವ ವರೆಗೆ, ತಣ್ಣಗಾದ ಒಂದು ಕೈಯನ್ನು ನನ್ನ ಜೇಬಿನಲ್ಲಿ ಹಾಕುತ್ತಿದ್ದೆ—ಬದಲಾಯಿಸುತ್ತಾ, ನಾನು ಯಥಾಪ್ರಕಾರವಾಗಿ ನನ್ನ ರಸ್ತೆಯ ಸಾಕ್ಷಿ ಸೇವೆಯನ್ನು ಮಾಡುತ್ತಿದೆ. ಒಬ್ಬ ಮನುಷ್ಯನು ಸಮೀಪಿಸಿದನು. ನನ್ನ ಚಟುವಟಿಕೆಯನ್ನು ಸ್ವಲ್ಪ ಸಮಯದಿಂದ ತಾನು ಗಮನಿಸಿದ್ದೇನೆಂದು ಹೇಳುತ್ತಾ, ಅವನು ಕೇಳಿದ್ದು: “ಈ ಚಳಿಯಲ್ಲಿ ನಿನ್ನನ್ನು ಇಲ್ಲಿ ನಿಲ್ಲುವಂತೆ ಮಾಡುವಷ್ಟು ಪ್ರಾಮುಖ್ಯವಾಗಿರುವ ಯಾವ ವಿಷಯವು ಆ ಪತ್ರಿಕೆಗಳಲ್ಲಿದೆ? ನಾನು ಅವುಗಳನ್ನು ಓದಶಕ್ತನಾಗುವಂತೆ ಆ ಎರಡು ಪತ್ರಿಕೆಗಳನ್ನು ನನಗೆ ಕೊಡು.”

ಈ ನಡುವೆ, ನನ್ನ ಕುಟುಂಬದೊಂದಿಗಿನ ಸಹವಾಸವು ನನ್ನ ಸ್ವಂತ ಆತ್ಮಿಕತೆಯನ್ನು ಅಪಾಯದಲ್ಲಿ ಹಾಕುತ್ತಿದೆ ಎಂಬುದನ್ನು ನಾನು ಅವಲೋಕಿಸಸಾಧ್ಯವಿತ್ತು, ಆದುದರಿಂದ ವಾಚ್‌ ಟವರ್‌ ಸೊಸೈಟಿಗೆ ವಿನಂತಿಸಿಕೊಂಡ ಬಳಿಕ, ಮೊಂಟ್ಯಾನದ ಮೈಲ್ಸ್‌ ಸಿಟಿಯಲ್ಲಿ ಒಂದು ಹೊಸ ನೇಮಕವು ನನಗೆ ಕೊಡಲ್ಪಟ್ಟಿತು. ಅಲ್ಲಿ ನಾನು ಈಗ ಅಧ್ಯಕ್ಷ ಮೇಲ್ವಿಚಾರಕನೆಂದು ಪ್ರಸಿದ್ಧವಾಗಿರುವ, ಕಂಪನಿ ಸರ್ವೆಂಟ್‌ನೋಪಾದಿ ಸೇವೆಮಾಡಿದೆ. ಎರಡು ಮೀಟರ್‌ ಅಗಲ, ಮೂರು ಮೀಟರ್‌ ಉದ್ದದ ಒಂದು ಟ್ರೆಯರ್ಲ್‌ನಲ್ಲಿ ವಾಸಿಸುತ್ತಾ, ಡ್ರೈಕ್ಲೀನ್‌ ಉದ್ಯೋಗವೊಂದರಲ್ಲಿ ಆಂಶಿಕ ಸಮಯ ಕೆಲಸ ಮಾಡುವ ಮೂಲಕ ನನ್ನನ್ನು ಬೆಂಬಲಿಸಿಕೊಂಡೆ. ಸಂದರ್ಭಾನುಸಾರವಾಗಿ ನಾನು ಅತ್ಯಂತ ಹೆಚ್ಚಾಗಿ ಇಷ್ಟಪಡುತ್ತಿದ್ದ ಕೊಯಿನ್ಲ ಕೆಲಸಕ್ಕಾಗಿ ಕೂಲಿಗೆ ಹಿಡಿಯಲ್ಪಡುತ್ತಿದ್ದೆ.

ಆ ಸಮಯದಲ್ಲಿ, ನನ್ನ ಕುಟುಂಬದ ಅಧಿಕವಾಗಿ ಕೆಟ್ಟುಹೋಗುತ್ತಿರುವ ಆತ್ಮಿಕ ಸ್ಥಿತಿಯ ಕುರಿತು ನನಗೆ ವರ್ತಮಾನ ಬರುತ್ತಿತ್ತು. ಅಂತಿಮವಾಗಿ ಅವರು, ಹಾಗೂ ಡಿಟ್ರೈಟ್‌ ಲೇಕ್ಸ್‌ ಸಭೆಯಲ್ಲಿರುವ ಇತರರು ಯೆಹೋವನ ಸಂಸ್ಥೆಗೆ ವಿರುದ್ಧವಾಗಿ ತಿರುಗಿದರು. ಆ ಸಭೆಯಲ್ಲಿನ 17 ರಾಜ್ಯ ಪ್ರಚಾರಕರಲ್ಲಿ ಕೇವಲ 7 ಮಂದಿ ಮಾತ್ರ ನಂಬಿಗಸ್ತರಾಗಿ ಉಳಿದರು. ನಾನು ಸಹ ಯೆಹೋವನ ಸಂಸ್ಥೆಯನ್ನು ತೊರೆಯುವಂತೆ ಮಾಡಲು ನನ್ನ ಕುಟುಂಬವು ನಿರ್ಧರಿಸಿತ್ತು, ಆದುದರಿಂದ ಒಂದೇ ಒಂದು ಪರಿಹಾರವು ಇನ್ನೂ ಹೆಚ್ಚಿನ ಪ್ರಗತಿಯನ್ನು ಮಾಡುವುದೇ ಆಗಿತ್ತೆಂದು ನಾನು ಗ್ರಹಿಸಿದೆ. ಆದರೆ ಹೇಗೆ?

ಮಿಷನೆರಿ ಸೇವೆಯನ್ನು ಬೆನ್ನಟ್ಟಿದ್ದು

1950 ರಲ್ಲಿ ನ್ಯೂ ಯಾರ್ಕ್‌ ಸಿಟಿಯಲ್ಲಿ ಅಂತಾರಾಷ್ಟ್ರೀಯ ಅಧಿವೇಶನದ ಸಮಯದಲ್ಲಿ, ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 15 ನೆಯ ತರಗತಿಯ ಮಿಷನೆರಿ ವಿದ್ಯಾರ್ಥಿಗಳು ಪದವಿ ಪಡೆಯುವುದನ್ನು ನಾನು ನೋಡಿದೆ. ‘ಓಹೋ, ಒಂದು ವಿದೇಶೀ ನೇಮಕದಲ್ಲಿ ಯೆಹೋವನ ಸೇವೆ ಮಾಡಲು ಹೋಗುತ್ತಿರುವವರಲ್ಲಿ ನಾನು ಇರುತ್ತಿದ್ದರೆ’ ಎಂದು ನಾನು ಆಲೋಚಿಸಿದೆ.

ನಾನು ಒಂದು ಅರ್ಜಿಯನ್ನು ಕಳುಹಿಸಿದೆ ಮತ್ತು 1951ರ ಫೆಬ್ರವರಿಯಲ್ಲಿ ಪ್ರಾರಂಭವಾದ ಗಿಲ್ಯಡ್‌ನ 17 ನೆಯ ತರಗತಿಯ ಒಬ್ಬ ಸದಸ್ಯನೋಪಾದಿ ನನ್ನನ್ನು ಅಂಗೀಕರಿಸಲಾಯಿತು. ನ್ಯೂ ಯಾರ್ಕಿನ ಒಂದು ಹೊಲದಲ್ಲಿನ ಶಾಲೆಯ ಸ್ಥಳವು ಸುಂದರವಾಗಿತ್ತು. ತರಗತಿಯ ತಾಸುಗಳ ಬಳಿಕ, ಹೊಲದಲ್ಲಿ, ಬಹುಶಃ ಹಸುಗಳೊಂದಿಗೆ ಕೊಟ್ಟಿಗೆಯಲ್ಲಿ ಅಥವಾ ಹೊರಗೆ ಬೆಳೆಗಳೊಂದಿಗೆ ಕೆಲಸಮಾಡಲು ನಾನು ಎಷ್ಟು ಇಷ್ಟಪಟ್ಟೆ! ಆದರೆ, ಡ್ರೈಕ್ಲೀನಿಂಗ್‌ನಲ್ಲಿ ಕೊಂಚವಾದರೂ ಅನುಭವವಿದ್ದವನು ನಾನು ಮಾತ್ರವೇ ಆಗಿದ್ದೆ ಎಂದು, ಆ ಸಮಯದಲ್ಲಿ ಕಿಂಗ್‌ಡಮ್‌ ಫಾರ್ಮ್‌ನ ಮೇಲ್ವಿಚಾರಕರಾದ ಜಾನ್‌ ಬೂತ್‌ ವಿವರಿಸಿದರು. ಆದುದರಿಂದ ಆ ಕೆಲಸವನ್ನು ಮಾಡುವಂತೆ ನಾನು ನೇಮಿಸಲ್ಪಟ್ಟೆ.

ಐದನೆಯ ದರ್ಜೆಯ ವಿದ್ಯಾಭ್ಯಾಸವನ್ನು ಮಾತ್ರವೇ ಹೊಂದಿದ್ದಂತಹ ಯಾರಿಗಾದರೂ ಗಿಲ್ಯಡ್‌ ಸುಲಭವಾದದ್ದಾಗಿರಲಿಲ್ಲ. ದೀಪಗಳನ್ನು 10.30ಕ್ಕೆ ಆರಿಸಬೇಕಾಗಿತ್ತಾದರೂ, ನಾನು ಅನೇಕಾವರ್ತಿ ಮಧ್ಯರಾತ್ರಿಯ ವರೆಗೆ ಅಭ್ಯಸಿಸಿದೆ. ಒಂದು ದಿನ ಶಿಕ್ಷಕರಲ್ಲಿ ಒಬ್ಬರು ನನ್ನನ್ನು ತಮ್ಮ ಆಫೀಸಿಗೆ ಬರುವಂತೆ ಕೇಳಿಕೊಂಡರು. “ಕಾರ್ಲ್‌, ನಿನ್ನ ಗ್ರೇಡ್‌ಗಳು ಬಹಳ ಉತ್ತಮವಾಗಿಲ್ಲ ಎಂಬುದನ್ನು ನಾನು ಅವಲೋಕಿಸಬಲ್ಲೆ” ಎಂದು ಅವರು ಹೇಳಿದರು.

“ಓಹೋ, ಗಿಲ್ಯಡ್‌ ಬಿಟ್ಟುಹೋಗುವಂತೆ ಅವರು ನನ್ನನ್ನು ಕೇಳಲಿದ್ದಾರೆ’ ಎಂದು ನಾನು ನನ್ನಷ್ಟಕ್ಕೆ ಆಲೋಚಿಸಿದೆ.

ಆದರೂ, ಅಷ್ಟು ತಡವಾಗಿ ಅಭ್ಯಾಸ ಮಾಡದೆ ನನ್ನ ಸಮಯದ ಅತ್ಯುತ್ತಮವಾದ ಉಪಯೋಗವನ್ನು ನಾನು ಹೇಗೆ ಮಾಡಸಾಧ್ಯವಿದೆ ಎಂಬುದರ ಕುರಿತು, ಆ ಶಿಕ್ಷಕರು ಪ್ರೀತಿಯಿಂದ ಕೆಲವು ಸಲಹೆಗಳನ್ನು ಕೊಟ್ಟರು. ನಾನು ಭಯಭರಿತನಾಗಿ ಕೇಳಿದ್ದು: “ಗಿಲ್ಯಡ್‌ನಲ್ಲಿ ಉಳಿಯುವುದನ್ನು ಮುಂದುವರಿಸಲು ನಾನು ಶೈಕ್ಷಣಿಕವಾಗಿ ಸಾಕಷ್ಟು ಅರ್ಹತೆಯುಳ್ಳವನಾಗಿದ್ದೇನೊ?”

“ಖಂಡಿತವಾಗಿಯೂ ಹೌದು, ಆದರೆ ಡಿಪ್ಲೋಮವೊಂದಕ್ಕೆ ನೀನು ಅರ್ಹನಾಗುವಿಯೊ ಇಲ್ಲವೊ ಎಂಬುದು ನನಗೆ ಗೊತ್ತಿಲ್ಲ” ಎಂದು ಅವರು ಉತ್ತರಿಸಿದರು.

ಶಾಲೆಯ ಅಧ್ಯಕ್ಷರಾದ ನೇತನ್‌ ಏಚ್‌. ನಾರರ ಮಾತುಗಳಿಂದ ನಾನು ಸಾಂತ್ವನವನ್ನು ಪಡೆದುಕೊಂಡೆ. ಅವರ ನೇಮಕಗಳಲ್ಲಿ ಉಳಿದಿದ್ದ ಮಿಷನೆರಿಗಳ “ದೃಢವಾಗಿ ಅಂಟಿಕೊಳ್ಳುವ ಸ್ವಭಾವ” ದಷ್ಟು ಹೆಚ್ಚಾಗಿ ಉತ್ತಮ ಗ್ರೇಡ್‌ಗಳು ತನ್ನ ಮೆಚ್ಚುಗೆಯನ್ನು ಗಳಿಸಲಿಲ್ಲವೆಂದು ಅವರು ವಿದ್ಯಾರ್ಥಿಗಳಿಗೆ ಈ ಮುಂಚೆಯೇ ಹೇಳಿದ್ದರು.

ಸ್ಪ್ಯಾನಿಷ್‌ ಭಾಷೆಯು ನನ್ನ ಅತ್ಯಂತ ಕಷ್ಟಕರ ವಿಷಯವಾಗಿತ್ತು, ಆದರೆ ಮೊಂಟ್ಯಾನದಲ್ಲಿ ನನಗೆ ಒಗ್ಗಿದ್ದ, ಅಂತಹದ್ದೆ ಶೀತವಾದ ಹವಾಮಾನವಿದ್ದ ಅಲಾಸ್ಕಕ್ಕೆ ಒಂದು ನೇಮಕಕ್ಕಾಗಿ ನಾನು ನಿರೀಕ್ಷಿಸುತ್ತಿದ್ದೆ. ಅಲ್ಲದೆ, ಇಂಗ್ಲಿಷ್‌ನಲ್ಲಿ ಸಾರಲು ನಾನು ಶಕ್ತನಾಗುತ್ತಿದ್ದೆ. ಕೋರ್ಸಿನ ಮಧ್ಯದಲ್ಲಿ, ದಕ್ಷಿಣ ಅಮೆರಿಕದ ಎಕಡ್ವಾರನ್ನು ನನ್ನ ನೇಮಕವನ್ನಾಗಿ ಸ್ವೀಕರಿಸಿದಾಗ ನನಗಾದ ಆಶ್ಚರ್ಯವನ್ನು ನೀವು ಊಹಿಸಿಕೊಳ್ಳಬಲ್ಲಿರಿ. ಹೌದು, ನಾನು ಸ್ಪ್ಯಾನಿಷ್‌ ಭಾಷೆಯನ್ನು ಮಾತಾಡಬೇಕಿತ್ತು, ಮತ್ತು ವಿಪರೀತ ಸುಡುವ ಸಮಭಾಜಕ ವೃತ್ತದ ಮೇಲೆಯೇ ಇರುವ ಒಂದು ಸ್ಥಳದಲ್ಲಿ ಇರಬೇಕಿತ್ತು!

ಒಂದು ದಿನ ಎಫ್‌ಬಿಐ ನಿಯೋಗಿಯೊಬ್ಬನು ಗಿಲ್ಯಡ್‌ ಶಾಲೆಯಲ್ಲಿ ನನ್ನನ್ನು ಸಂದರ್ಶಿಸಿದನು. ಡಿಟ್ರೈಟ್‌ ಲೇಕ್ಸ್‌ನಲ್ಲಿ ನಮ್ಮ ಸಂಸ್ಥೆಯನ್ನು ಬಿಟ್ಟುಹೋಗಿದ್ದ, ಕಂಪನಿ ಸರ್ವೆಂಟ್‌ನ ಮಗನ ಕುರಿತು ಆತನು ಕೇಳಿದನು. ಕೊರಿಯನ್‌ ಯುದ್ಧವು ನಡೆಯುತ್ತಿತ್ತು, ಮತ್ತು ಈ ಯೌವನಸ್ಥನು ತಾನೊಬ್ಬ ಯೆಹೋವನ ಸಾಕ್ಷಿಗಳ ಶುಶ್ರೂಷಕನಾಗಿದ್ದೇನೆಂದು ಪ್ರತಿಪಾದಿಸಿದನು ಮತ್ತು ಹೀಗೆ ಮಿಲಿಟರಿ ಸೇವೆಯಿಂದ ಬಿಡುಗಡೆ ಹೊಂದಿದ್ದನು. ಅವನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿ ಇರುವುದಿಲ್ಲವೆಂದು ನಾನು ವಿವರಿಸಿದೆ. ಆ ನಿಯೋಗಿಯು ನನ್ನಿಂದ ಬೀಳ್ಕೊಳ್ಳುತ್ತಿದ್ದಂತೆ, “ನಿನ್ನ ದೇವರು ನಿನ್ನ ಕೆಲಸದಲ್ಲಿ ನಿನ್ನನ್ನು ಆಶೀರ್ವದಿಸಲಿ” ಎಂದು ಹೇಳಿದನು.

ತದನಂತರ, ಆ ಯೌವನಸ್ಥನು ಕೊರಿಯದಲ್ಲಿ ತನ್ನ ಪ್ರಥಮ ಕದನಗಳಲ್ಲೊಂದರಲ್ಲಿ ಕೊಲ್ಲಲ್ಪಟ್ಟನೆಂದು ನನಗೆ ತಿಳಿದುಬಂತು. ದೇವರ ಸಂಸ್ಥೆಯಲ್ಲಿ ಪ್ರೌಢತೆಗೇರಸಾಧ್ಯವಿದ್ದ ಒಬ್ಬನಿಗೆ ಎಂತಹ ದುಃಖಕರವಾದ ಒಂದು ಪರಿಣಾಮ!

ಅಂತಿಮವಾಗಿ, 1951ರ ಜುಲೈ 22 ರಂದು ನಮ್ಮ ಆನಂದದ ಪದವಿ ಪಡೆಯುವ ದಿನ ಬಂತು. ಸಹಜವಾಗಿ, ನನ್ನ ಕುಟುಂಬದಲ್ಲಿ ಯಾರೂ ಉಪಸ್ಥಿತರಿರಲಿಲ್ಲ, ಆದರೆ ನಾನು ಮಾಡಿದಂತಹ ಪ್ರಗತಿಯ ಕಾರಣದಿಂದ ಡಿಪ್ಲೋಮವೊಂದನ್ನು ಪಡೆದುಕೊಂಡಾಗ ನನ್ನ ಹರ್ಷವು ಪೂರ್ಣವಾಗಿತ್ತು.

ಒಂದು ವಿದೇಶೀ ಕ್ಷೇತ್ರಕ್ಕೆ ಸರಿಹೊಂದಿಸಿಕೊಂಡದ್ದು

ನನ್ನ ನೇಮಕಕ್ಕೆ ನಾನು ಹೋದೊಡನೆಯೇ, ತಾಯಿಯವರ ತರಬೇತಿಯು ನಿಜವಾಗಿಯೂ ಪ್ರಯೋಜನಕರವಾಗಿತ್ತೆಂಬುದನ್ನು ನಾನು ಕಂಡುಕೊಂಡೆ. ಅಡಿಗೆ ಮಾಡುವುದು, ಕೈಯಿಂದ ವಸ್ತ್ರಗಳನ್ನು ಒಗೆಯುವುದು, ಮತ್ತು ಕೊಳಾಯಿಯ ನೀರಿನ ಕೊರತೆಯು ನನಗೆ ಹೊಸತಾಗಿರಲಿಲ್ಲ. ಆದರೆ ಸ್ಪ್ಯಾನಿಷ್‌ ಭಾಷೆಯಲ್ಲಿ ಸಾರುವುದು ಹೊಸತಾಗಿತ್ತು! ಬಹಳ ಸಮಯದ ವರೆಗೆ ನಾನು ಒಂದು ಮುದ್ರಿತ ಸ್ಪ್ಯಾನಿಷ್‌ ಪ್ರಸಂಗವನ್ನು ಉಪಯೋಗಿಸಿದೆ. ನಾನು ಸ್ಪ್ಯಾನಿಷ್‌ ಭಾಷೆಯಲ್ಲಿ ಪ್ರಸಂಗವೊಂದನ್ನು ಕೊಡಸಾಧ್ಯವಾಗಲು ಮೂರು ವರ್ಷಗಳು ತಗಲಿದವು ಮತ್ತು ಅದನ್ನು ವಿಸ್ತಾರವಾದ ಟಿಪ್ಪಣಿಗಳ ಉಪಯೋಗದಿಂದ ಮಾಡಿದೆ.

1951 ರಲ್ಲಿ ನಾನು ಎಕಡ್ವಾರ್‌ಗೆ ಆಗಮಿಸಿದಾಗ, 200 ಕ್ಕಿಂತಲೂ ಕಡಿಮೆ ರಾಜ್ಯ ಪ್ರಚಾರಕರಿದ್ದರು. ಸುಮಾರು ಮೊದಲ 25 ವರ್ಷಗಳ ವರೆಗೆ ಶಿಷ್ಯರನ್ನಾಗಿ ಮಾಡುವುದು ನಿಧಾನವಾಗಿದ್ದಂತೆ ತೋರಿತು. ನಮ್ಮ ಬೈಬಲ್‌ ಬೋಧನೆಗಳು, ಕ್ಯಾತೊಲಿಕ್‌ ಚರ್ಚಿನ ಅಶಾಸ್ತ್ರೀಯ ಸಂಪ್ರದಾಯಗಳಿಗಿಂತ ತೀರ ಭಿನ್ನವಾಗಿದ್ದವು, ಮತ್ತು ಒಬ್ಬ ವಿವಾಹ ಸಂಗಾತಿಗೆ ತೋರಿಸಬೇಕಾದ ನಂಬಿಗಸ್ತಿಕೆಯ ಕುರಿತಾದ ಬೈಬಲಿನ ಉಪದೇಶಗಳಿಗೆ ನಮ್ಮ ಅಂಟಿಕೊಳ್ಳುವಿಕೆಯು ವಿಶೇಷವಾಗಿ ಜನಪ್ರಿಯವಲ್ಲದ್ದಾಗಿತ್ತು.—ಇಬ್ರಿಯ 13:4.

ಆದರೂ, ಅನೇಕ ಬೈಬಲ್‌ ಸಾಹಿತ್ಯವನ್ನು ನೀಡಲು ನಾವು ಶಕ್ತರಾದೆವು. ಬಾಳೆಹಣ್ಣನ್ನು ಉತ್ಪಾದಿಸುವ ವ್ಯವಸಾಯಕ್ಷೇತ್ರಗಳ ಕೇಂದ್ರದಲ್ಲಿ ನೆಲೆಸಿದ್ದ, ಮಚಾಲ ಪಟ್ಟಣದಲ್ಲಿನ ನಮ್ಮ ಶುಶ್ರೂಷೆಯು ಇದನ್ನು ದೃಷ್ಟಾಂತಿಸಲು ಸಹಾಯ ಮಾಡುತ್ತದೆ. 1956 ರಲ್ಲಿ ನಾವು ಆಗಮಿಸಿದಾಗ, ನಿಕೊಲಾಸ್‌ ವೆಸ್ಲಿ ಮತ್ತು ನಾನು ಮಾತ್ರ ಅಲ್ಲಿದ್ದ ಸಾಕ್ಷಿಗಳಾಗಿದ್ದೆವು. ಆ ದಿನಗಳಲ್ಲಿ ಕಟ್ಟಲ್ಪಡುತ್ತಿದ್ದ ಹೆದ್ದಾರಿಗಳಲ್ಲಿ ಕೆಲಸಕ್ಕಾಗಿ ಉಪಯೋಗಿಸಲ್ಪಡುತ್ತಿದ್ದ ಸರಕನ್ನು ಬಗ್ಗಿಸಿ ಬೀಳಿಸುವ ಟ್ರಕ್‌ಗಳಲ್ಲಿ ನಾವು ಬೆಳಗ್ಗೆ ಹೊತ್ತಿಗೆ ಮುಂಚೆಯೇ ಹೊರಡುತ್ತಿದ್ದೆವು. ಬಹಳ ದೂರದ ತನಕ ಪ್ರಯಾಣಿಸಿದ ಬಳಿಕ, ನಾವು ಇಳಿಯುತ್ತಿದ್ದೆವು ಮತ್ತು ನಾವು ಉಳಿದುಕೊಳ್ಳುತ್ತಿದ್ದ ಸ್ಥಳದ ವರೆಗೆ ಹಿಂದಿರುಗುತ್ತಾ ದಾರಿಯುದ್ದಕ್ಕೂ ಜನರಿಗೆ ಸಾಕ್ಷಿ ನೀಡುತ್ತಿದ್ದೆವು.

ಒಂದು ನಿರ್ದಿಷ್ಟ ದಿನದಂದು, ನಮ್ಮಲ್ಲಿ ಯಾರು ಹೆಚ್ಚು ಪತ್ರಿಕೆಗಳನ್ನು ನೀಡುತ್ತಾರೆಂದು ನೋಡಲಿಕ್ಕಾಗಿ, ನಿಕ್‌ ಮತ್ತು ನಾನು ಒಂದು ದಾಖಲೆಯನ್ನಿಟ್ಟೆವು. ಮಧ್ಯಾಹ್ನದ ಹೊತ್ತಿಗೆ ನಾನು ನಿಕ್‌ಗಿಂತ ಹೆಚ್ಚು ಪತ್ರಿಕೆಗಳನ್ನು ನೀಡಿದ್ದೆ, ಆದರೆ ಸಂಜೆಯಷ್ಟಕ್ಕೆ ನಮ್ಮಲ್ಲಿ ಒಬ್ಬೊಬ್ಬರು 114 ಪತ್ರಿಕೆಗಳನ್ನು ನೀಡಿದ್ದೆವು ಎಂಬುದನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ. ನಮ್ಮ ಪತ್ರಿಕಾ ಮಾರ್ಗಗಳ ಮೂಲಕವಾಗಿ ಪ್ರತಿ ತಿಂಗಳು ನಾವು ನಮ್ಮ ನೂರಾರು ಪತ್ರಿಕೆಗಳನ್ನು ಜನರಲ್ಲಿ ಬಿಟ್ಟೆವು. ಒಂದು ತಿಂಗಳಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚು ಪತ್ರಿಕೆಗಳನ್ನು ನಾನು ಆರು ಬಾರಿ ನೀಡಿದೆ. ಆ ಪತ್ರಿಕೆಗಳಿಂದ ಎಷ್ಟು ಜನರು ಬೈಬಲ್‌ ಸತ್ಯಗಳನ್ನು ಕಲಿಯಬಹುದೆಂಬುದನ್ನು ಆಲೋಚಿಸಿರಿ!

ಮಚಾಲದಲ್ಲಿ, ಎಕಡ್ವಾರ್‌ನಲ್ಲಿ ಸಭೆಯ ಸ್ವಂತದಾದ್ದ ಮೊದಲ ರಾಜ್ಯ ಸಭಾಗೃಹವನ್ನು ಕಟ್ಟುವ ಸುಯೋಗವೂ ನಮಗಿತ್ತು. ಅದು 1960 ರಲ್ಲಿ, 35 ವರ್ಷಗಳ ಹಿಂದೆಯಾಗಿತ್ತು. ಆ ಆರಂಭದ ದಿನಗಳಲ್ಲಿ, ನಮ್ಮ ಕೂಟಗಳಿಗೆ ಹಾಜರಿಯಲ್ಲಿ ಸುಮಾರು 15 ಮಂದಿ ಮಾತ್ರವೇ ಇರುತ್ತಿದ್ದರು. ಇಂದು ಮಚಾಲ ಅಭಿವೃದ್ಧಿ ಹೊಂದುತ್ತಿರುವ 11 ಸಭೆಗಳನ್ನು ಹೊಂದಿದೆ!

ಅಮೆರಿಕಕ್ಕೆ ಒಂದು ಭೇಟಿ

1970 ಗಳ ಕೊನೆಯಲ್ಲಿ, ನಾನು ರಜೆಯಲ್ಲಿ ಅಮೆರಿಕಕ್ಕೆ ಹಿಂದಿರುಗಿದೆ ಮತ್ತು ನನ್ನ ಅಣ್ಣ ಫ್ರ್ಯಾಂಕ್‌ನೊಂದಿಗೆ ಕೆಲವು ತಾಸುಗಳನ್ನು ಕಳೆದೆ. ಅವನು ನನ್ನನ್ನು ತನ್ನ ಕಾರಿನಲ್ಲಿ, ರೆಡ್‌ ರಿವರ್‌ ಕಣಿವೆಯುದ್ದಕ್ಕೂ ನಾವು ದೂರದ ತನಕ ನೋಡಸಾಧ್ಯವಿರುವ ಒಂದು ಸಣ್ಣ ಗುಡ್ಡದ ಮೇಲೆ ಕರೆದೊಯನ್ದು. ಭಾರವಾದ ತೆನೆಗಳನ್ನು ಹೊಂದಿರುವ ಗೋಧಿಯ ವಿಸ್ತಾರವಾದ ಹೊಲವು, ಗಾಳಿಯಲ್ಲಿ ತೂಗಾಡುತ್ತಿರುವ ಹಣ್ಣಾದ ಬೆಳೆಯಿಂದ ಸುಂದರವಾಗಿತ್ತು. ದೂರದಲ್ಲಿ ಮರಗಳು ಸಾಲುಗೂಡಿರುವ ಷೆಯೆನ್‌ ನದಿಯನ್ನು ಗೋಚರವಾಗುತ್ತಿತ್ತು. ನನ್ನ ಅಣ್ಣನು ತನ್ನ ಸಾಮಾನ್ಯ ಸಂಭಾಷಣೆಯನ್ನು ಆರಂಭಿಸಿದಾಗ, ಆ ಶಾಂತಿಭರಿತ ಸೌಂದರ್ಯದ ಆನಂದವು ಅಡಯಿಸ್ಡಲ್ಪಟ್ಟಿತು.

“ನೀನು ದಕ್ಷಿಣ ಅಮೆರಿಕದಲ್ಲಿ ಅಲೆದಾಡುತ್ತಿರುವ ಅಂತಹ ಒಬ್ಬ ಮೂರ್ಖನಾಗಿರದೆ ಇರುತ್ತಿದ್ದಲ್ಲಿ, ಈ ಹೊಲವು ನಿನ್ನದೂ ಆಗಿರಬಹುದಿತ್ತು!”

“ಫ್ರ್ಯಾಂಕ್‌, ಸಂಭಾಷಣೆಯನ್ನು ಅಲ್ಲಿಗೇ ನಿಲ್ಲಿಸು” ಎಂದು ನಾನು ಕೂಡಲೆ ತಡೆ ಮಾಡಿದೆ.

ಅವನು ಮರುನುಡಿಯಲಿಲ್ಲ. ಕೆಲವು ವರ್ಷಗಳ ಬಳಿಕ, ಉತ್ತರ ಡಕೋಟದಲ್ಲಿ ಒಟ್ಟಿಗೆ ಒಂದು ಸಾವಿರ ಎಕರೆ (400 ಹೆಕ್ಟರ್‌) ಗಳಿಗಿಂತ ದೊಡ್ಡದಾದ ಮೂರು ಸುಂದರ ಪಶುಪಾಲನ ಕ್ಷೇತ್ರಗಳನ್ನು, ಹಾಗೂ ಮೊಂಟ್ಯಾನದಲ್ಲಿ ಅವನು ಉತ್ತರಾಧಿಕಾರಿಯಾಗಿದ್ದ ನನ್ನ ಮಾವನ 640 ಎಕರೆ (260 ಹೆಕ್ಟರ್‌) ಜಮೀನನ್ನು ಹಿಂದೆ ಬಿಟ್ಟು, ಅವನು ಅನಿರೀಕ್ಷಿತವಾಗಿ ಮಿದುಳು ಲಕ್ವದಿಂದ ಮರಣ ಹೊಂದಿದನು.

ಈಗ ನನ್ನ ಕುಟುಂಬದಲ್ಲಿ ಎಲ್ಲರೂ ಮರಣ ಹೊಂದಿದ್ದಾರೆ. ಆದರೆ ವರ್ಷಗಳ ಹಿಂದೆ ನಾವೆಲ್ಲರೂ ಯೆಹೋವನ ಸಾಕ್ಷಿಗಳೋಪಾದಿ ನಮ್ಮ ಜೀವನಗಳನ್ನು ಆರಂಭಿಸಿದ ಡಿಟ್ರೈಟ್‌ ಲೇಕ್ಸ್‌ನಲ್ಲಿ, 90 ಕ್ಕಿಂತಲೂ ಹೆಚ್ಚು ಸಹೋದರರು ಮತ್ತು ಸಹೋದರಿಯರ ಒಂದು ಆತ್ಮಿಕ ಕುಟುಂಬ ನನಗಿದೆ.

ಆತ್ಮಿಕವಾಗಿ ಅಭಿವೃದ್ಧಿ ಹೊಂದುತ್ತಾ ಮುಂದುವರಿಯುವುದು

ಕಳೆದ 15 ವರ್ಷಗಳು, ಎಕಡ್ವಾರ್‌ನಲ್ಲಿ ಆತ್ಮಿಕ ಕೊಯಿನ್ಲಲ್ಲಿ ಸಮೃದ್ಧವಾದ ಬೆಳೆಗಳನ್ನು ಉತ್ಪತ್ತಿ ಮಾಡಿವೆ. 1980 ರಲ್ಲಿ ಸುಮಾರು 5,000 ರಾಜ್ಯ ಪ್ರಚಾರಕರಿಂದ, ಈಗ 26,000 ಕ್ಕಿಂತಲೂ ಹೆಚ್ಚು ರಾಜ್ಯ ಪ್ರಚಾರಕರನ್ನು ನಾವು ಹೊಂದಿದ್ದೇವೆ. ಇವರಲ್ಲಿ ನೂರಕ್ಕಿಂತಲೂ ಹೆಚ್ಚು ಮಂದಿಗೆ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವಂತೆ ಸಹಾಯ ಮಾಡುವ ಆಶೀರ್ವಾದವನ್ನು ನಾನು ಅನುಭವಿಸಿದ್ದೇನೆ.

1951 ರಲ್ಲಿ ನನ್ನ 150 ತಾಸಿನ ಕೋಟವನ್ನು ಪೂರ್ಣಗೊಳಿಸಲು ನಾನು ಕಾರ್ಯನಡಿಸಿದ್ದಕ್ಕಿಂತಲೂ, ಈಗ 80ರ ಪ್ರಾಯದಲ್ಲಿ, ಶುಶ್ರೂಷೆಯಲ್ಲಿ ಒಂದು ತಿಂಗಳಿಗೆ 30 ತಾಸುಗಳನ್ನು ತುಂಬಲು ನಾನು ಹೆಚ್ಚು ಕಠಿನವಾಗಿ ಕೆಲಸ ಮಾಡುತ್ತೇನೆ. 1989 ರಿಂದ, ನನಗೆ ಪ್ರಾಸ್ಟೇಟ್‌ ಗ್ರಂಥಿಯ ಕ್ಯಾನ್ಸರ್‌ ಇದೆಯೆಂದು ನಾನು ತಿಳಿದಂದಿನಿಂದ, ನನ್ನ ಚೇತರಿಸಿಕೊಳ್ಳುವ ಸಮಯವನ್ನು ಓದಲಿಕ್ಕಾಗಿ ಸದುಪಯೋಗವನ್ನು ನಾನು ಮಾಡಿದ್ದೇನೆ. ಆ ವರ್ಷದಿಂದ, ನಾನು ಬೈಬಲನ್ನು ಆದ್ಯಂತವಾಗಿ 19 ಬಾರಿ ಮತ್ತು ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌) ಪುಸ್ತಕವನ್ನು 6 ಬಾರಿ ಓದಿದ್ದೇನೆ. ಈ ರೀತಿಯಲ್ಲಿ ನಾನು ಆತ್ಮಿಕವಾಗಿ ಅಭಿವೃದ್ಧಿ ಹೊಂದುತ್ತಾ ಇದ್ದೇನೆ.

ಹೌದು, ಅಮೆರಿಕದ ವ್ಯವಸಾಯಕ್ಷೇತ್ರಗಳಲ್ಲಿ ಪ್ರಾಪಂಚಿಕ ಪ್ರಯೋಜನಗಳನ್ನು ಕೊಯ್ಯುವ ಅವಕಾಶಗಳು ನನಗಿದ್ದವು. ಆದರೆ ಆತ್ಮಿಕ ಕೊಯಿನ್ಲಲ್ಲಿ ನಾನು ಅನುಭವಿಸಿರುವ ಆನಂದಕ್ಕೆ ಪ್ರಾಪಂಚಿಕ ಐಶ್ವರ್ಯದ ಪ್ರತಿಫಲಗಳನ್ನು ಹೋಲಿಸುವಾಗ ಅವು ಕ್ಷುಲ್ಲಕವಾಗಿವೆ. ನನ್ನ ಮಿಷನೆರಿ ಬದುಕಿನಲ್ಲಿ ನಾನು 1,47,000 ಕ್ಕಿಂತಲೂ ಹೆಚ್ಚು ಪತ್ರಿಕೆಗಳು ಮತ್ತು 18,000 ಪುಸ್ತಕಗಳನ್ನು ನೀಡಿದ್ದೇನೆಂದು ಎಕಡ್ವಾರ್‌ನಲ್ಲಿರುವ ಬ್ರಾಂಚ್‌ ನನಗೆ ತಿಳಿಸುತ್ತದೆ. ನಾನು ಇವುಗಳನ್ನು ಆತ್ಮಿಕ ಬೀಜಗಳಾಗಿ ಪರಿಗಣಿಸುತ್ತಿದ್ದು, ಅವುಗಳಲ್ಲಿ ಅನೇಕ ಬೀಜಗಳು ಈಗಾಗಲೇ ಮೊಳಕೆಯೊಡೆದಿವೆ; ಇತರ ಬೀಜಗಳು, ಜನರು ಈ ರಾಜ್ಯ ಸತ್ಯತೆಗಳ ಕುರಿತು ತಾವು ಓದಿದಂತೆ ಅವರ ಹೃದಯಗಳಲ್ಲಿ ಇನ್ನು ಮೊಳಕೆಯೊಡೆಯಬಹುದು.

ನನ್ನ ಆತ್ಮಿಕ ಮಕ್ಕಳೆಲ್ಲರೊಂದಿಗೆ ಮತ್ತು ನಮ್ಮ ದೇವರಾದ ಯೆಹೋವನ ಸೇವೆ ಮಾಡಲು ಆರಿಸಿಕೊಂಡಿರುವ ಲಕ್ಷಾಂತರ ಜನರೊಂದಿಗೆ ಅಭಿವೃದ್ಧಿ ಹೊಂದುತ್ತಾ ಮುಂದುವರಿಯುವುದಕ್ಕಿಂತ ಹೆಚ್ಚು ಉತ್ತಮವಾದ ಬೇರಾವ ವಿಷಯದ ಕುರಿತೂ ನಾನು ಆಲೋಚಿಸಲಾರೆ. ಹಣವು ಒಬ್ಬನನ್ನು ಈ ದುಷ್ಟ ಲೋಕದ ಅಂತ್ಯದಿಂದ ರಕ್ಷಿಸುವುದಿಲ್ಲ. (ಜ್ಞಾನೋಕ್ತಿ 11:4; ಯೆಹೆಜ್ಕೇಲ 7:19) ಆದರೂ, ನಮ್ಮಲ್ಲಿ ಪ್ರತಿಯೊಬ್ಬರು ಪ್ರೌಢತೆಗೇರಲು ಮುಂದುವರಿಯುವುದಾದರೆ, ನಮ್ಮ ಆತ್ಮಿಕ ಕೆಲಸದ ಫಲವು ಮುಂದುವರಿಯುವುದು.

[ಪುಟ 24 ರಲ್ಲಿರುವ ಚಿತ್ರ]

1949 ರಲ್ಲಿ, ಮೊಂಟ್ಯಾನದ ಮೈಲ್ಸ್‌ ಸಿಟಿಯಲ್ಲಿ ಪಯನೀಯರ್‌ ಸೇವೆಯನ್ನು ಮಾಡಲು ಸಿದ್ಧನಾಗಿರುವುದು

[ಪುಟ 24 ರಲ್ಲಿರುವ ಚಿತ್ರ]

1952, ನಮ್ಮ ಮಿಷನೆರಿ ಗೃಹಕ್ಕಾಗಿ ನೀರನ್ನು ಸಂಗ್ರಹಿಸುತ್ತಿರುವುದು

[ಪುಟ 25 ರಲ್ಲಿರುವ ಚಿತ್ರ]

1957, ಮಚಾಲದಲ್ಲಿ ಸಾರುತ್ತಿರುವುದು

[ಪುಟ 25 ರಲ್ಲಿರುವ ಚಿತ್ರ]

1989 ರಲ್ಲಿ ಅಸ್ವಸ್ಥನಾದಾಗಿನಿಂದ, ನಾನು ಬೈಬಲನ್ನು ಆದ್ಯಂತವಾಗಿ 19 ಬಾರಿ ಓದಿದ್ದೇನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ