ಇತ್ತೀಚೆಗೆ ನೀವು ಯಾರನ್ನಾದರೂ ಉತ್ತೇಜಿಸಿದ್ದೀರೋ?
ಎಲನಳಿಗೆ ಅಂಡಾಶಯದ ಕ್ಯಾನ್ಸರ್ ಇದೆಯೆಂದು ವೈದ್ಯರು ಕಂಡುಹಿಡಿದಾಗ, ಆಕೆ ಕೇವಲ 17 ವರ್ಷ ಪ್ರಾಯದವಳಾಗಿದ್ದಳು. ಆಕೆಯ ತಾಯಿಯಾದ ಮಾರಿ, ಅತ್ಯಂತ ಯಾತನೆಯಲ್ಲಿ ಎಲನಳನ್ನು ನೋಡುವ ಸಂಕಟವನ್ನು ನಿಭಾಯಿಸಬೇಕಿತ್ತು.
ಕಟ್ಟಕಡೆಗೆ, ಎಲನಳನ್ನು ಕನೆರಿ ದ್ವೀಪಗಳಲ್ಲಿರುವ ಆಕೆಯ ಮನೆಯಿಂದ 1,900 ಕಿಲೊಮೀಟರುಗಳು ದೂರವಿರುವ ಸ್ಪೆಯಿನ್ನ ಮ್ಯಡ್ರಿಡ್ನಲ್ಲಿರುವ ಒಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮ್ಯಡ್ರಿಡ್ನಲ್ಲಿ ವೈದ್ಯರ ಒಂದು ತಂಡವು ರಕ್ತವಿಲ್ಲದೆ ಶಸ್ತ್ರಕ್ರಿಯೆ ಮಾಡಲು ಸಿದ್ಧವಾಗಿತ್ತು. (ಅ. ಕೃತ್ಯಗಳು 15:28, 29) ಆದರೆ ಶಸ್ತ್ರಕ್ರಿಯೆಯು ತೊಡಗಿದ ಕೊಂಚ ಹೊತ್ತಿನಲ್ಲೇ, ಎಲನಳ ಸ್ಥಿತಿ ಕಟ್ಟಕಡೆಗೆ ಆಕೆಯ ಮರಣಕ್ಕೆ ನಡೆಸುವುದೆಂದು ಸ್ಪಷ್ಟವಾಗಿಯಿತು. ಕ್ಯಾನ್ಸರ್ ಈಗಾಗಲೇ ಆಕೆಯ ದೇಹದ ಎಲ್ಲೆಡೆಯೂ ವ್ಯಾಪಿಸಿತ್ತು ಮತ್ತು ಶಸ್ತ್ರಚಿಕಿತ್ಸಕರಿಗೆ ಏನನ್ನೂ ಮಾಡಲು ಸಾಧ್ಯವಿರಲಿಲ್ಲ. ಮ್ಯಡ್ರಿಡ್ನಲ್ಲಿ ಬಂದು ತಲಪಿದ ಎಂಟು ದಿನಗಳ ತರುವಾಯ ಎಲನ ಮರಣ ಹೊಂದಿದಳು.
ಆ ಭಯಂಕರವಾದ ಪರೀಕ್ಷೆಯನ್ನು ಮಾರಿ ಒಬ್ಬಳೇ ಎದುರಿಸಬೇಕಾಗಿರಲಿಲ್ಲ. ತಮ್ಮ ಸ್ವಂತ ವೆಚ್ಚದಲ್ಲಿ ಇಬ್ಬರು ಕ್ರೈಸ್ತ ಹಿರಿಯರು, ಆಕೆಯೊಂದಿಗೆ ಮತ್ತು ಆಕೆಯ ಹಿರಿಯ ಮಗನೊಂದಿಗೆ ಮ್ಯಡ್ರಿಡ್ಗೆ ಹೋದರು ಮತ್ತು ಎಲನಳ ಮರಣದ ತನಕ ಅಲ್ಲಿ ಉಳಿದರು. “ಅಂತರಂಗದಲ್ಲಿ ನನಗನಿಸಿದ ಭಯಂಕರವಾದ ಶೂನ್ಯತೆಯನ್ನು ತುಂಬಲು ಅವರು ನನಗೆ ಸಹಾಯ ಮಾಡಿದರು,” ಎಂದು ಮಾರಿ ವಿವರಿಸುತ್ತಾಳೆ. “ಅವರು ನನಗೆ ನೀಡಿದ ಉತ್ತೇಜನವನ್ನು ನಾನೆಂದೂ ಮರೆಯಲಾರೆ. ಅವರ ಆತ್ಮಿಕ ಬೆಂಬಲ ಹಾಗೂ ಪ್ರಾಯೋಗಿಕ ಸಹಾಯವು ಅಮೂಲ್ಯವಾಗಿದ್ದವು. ಅವರು ನಿಜವಾಗಿಯೂ ‘ಗಾಳಿಯಲ್ಲಿ ಮರೆಯಂತೆ’ ಇದ್ದರು.”—ಯೆಶಾಯ 32:1, 2.
ಇವರಂತಹ ಪ್ರೀತಿಯ ಕುರುಬರು ತನ್ನ ಕುರಿಗಳನ್ನು ಇಷ್ಟು ಕೋಮಲವಾಗಿ ಪರಾಮರಿಸುತ್ತಾರೆಂಬ ವಿಷಯದಿಂದ ಯೆಹೋವನು ಸಂತೋಷಪಡುತ್ತಾನೆ. (ಜ್ಞಾನೋಕ್ತಿ 19:17; 1 ಪೇತ್ರ 5:2-4) ಆದರೂ ಉತ್ತೇಜನವನ್ನು ನೀಡುವುದು, ಕೇವಲ ಹಿರಿಯರ ಸುಯೋಗವಾಗಿರುವುದಿಲ್ಲ. ಎಲ್ಲ ಕ್ರೈಸ್ತರು ಆತ್ಮಿಕ ಉಪದೇಶವನ್ನು ಪಡೆಯಲು ಮತ್ತು ‘ಒಬ್ಬರನ್ನೊಬ್ಬರು ಉತ್ತೇಜಿಸಲು’ ಒಟ್ಟಿಗೆ ಸೇರಿಬರುತ್ತಾರೆ. (ಇಬ್ರಿಯ 10:24, 25) ಉತ್ತೇಜನವು ಕ್ರೈಸ್ತ ಸಹವಾಸದ ವಾಸ್ತವಿಕ ಭಾಗವಾಗಿದೆ.
ಉತ್ತೇಜನವು ಏನನ್ನು ಒಳಗೊಳ್ಳುತ್ತದೆ?
ನೀರು ಇಲ್ಲದೆ ಹೋಗುವಾಗ ಸುಂದರವಾದ ಹೂವೊಂದು ಹೇಗೆ ಬಾಡಿಹೋಗುತ್ತದೊ, ಹಾಗೆಯೇ ವ್ಯಕ್ತಿಗಳು—ಕುಟುಂಬದಲ್ಲಿಯೂ ಸಭೆಯಲ್ಲಿಯೂ—ಉತ್ತೇಜನದ ಕೊರತೆಯಿಂದ ಬಾಡಬಲ್ಲರು. ಇನ್ನೊಂದು ಪಕ್ಕದಲ್ಲಿ, ಸಮಯೋಚಿತವಾದ ಉತ್ತೇಜನವು, ಶೋಧನೆಯನ್ನು ಎದುರಿಸುವವರನ್ನು ಬಲಪಡಿಸಬಲ್ಲದು, ಎದೆಗುಂದಿದವರನ್ನು ಸಂತುಷ್ಟರನ್ನಾಗಿ ಮಾಡಬಲ್ಲದು, ಮತ್ತು ನಂಬಿಗಸ್ತರಾಗಿ ದೇವರನ್ನು ಸೇವಿಸುತ್ತಿರುವವರನ್ನು ಚೇತನಗೊಳಿಸಬಲ್ಲದು.
“ಉತ್ತೇಜನ” ವೆಂದು ಭಾಷಾಂತರಿಸಲಾದ ಗ್ರೀಕ್ ಪದವು, ಸಂತೈಸಿಕೆ, ಪ್ರಬೋಧನೆ, ಮತ್ತು ಸಾಂತ್ವನದ ವಿಚಾರವನ್ನು ಒಳಗೊಳ್ಳುತ್ತದೆ. ಆದುದರಿಂದ, ಉತ್ತೇಜನವು ಯಾವನೋ ಒಬ್ಬನನ್ನು ಪ್ರಶಂಸಿಸುವುದಕ್ಕೆ ಸೀಮಿತವಾಗಿಲ್ಲ. ಪ್ರಾಯೋಗಿಕ ನೆರವು ಮತ್ತು ಆತ್ಮಿಕ ಸಹಾಯವನ್ನು ಒದಗಿಸುವುದನ್ನೂ ಅದು ಒಳಗೊಳ್ಳಬಹುದು.
ನಿಜವಾಗಿ, “ಉತ್ತೇಜನ” ಎಂಬುದಾಗಿ ಭಾಷಾಂತರಿಸಲಾದ ಗ್ರೀಕ್ ಪದವು, ಅಕ್ಷರಾರ್ಥಕವಾಗಿ “ಒಬ್ಬನ ಪಕ್ಕಕ್ಕೆ ಬರಲು ಕರೆ” ಎಂಬ ಅರ್ಥವನ್ನು ಹೊಂದಿದೆ. ನಮ್ಮ ಆತ್ಮಿಕ ಸಹೋದರ ಸಹೋದರಿಯರೊಂದಿಗೆ ಒತ್ತಾಗಿ ನಡೆಯುವುದು, ಅವರಲ್ಲಿ ಒಬ್ಬರು ಆಯಾಸಗೊಂಡರೆ ಅಥವಾ ಎಡವಿದರೆ ತತ್ಕ್ಷಣ ಬೆಂಬಲ ಕೊಡಲು ನಮ್ಮನ್ನು ಶಕ್ತಗೊಳಿಸುತ್ತದೆ. (ಪ್ರಸಂಗಿ 4:9, 10) ಸ್ವಾರಸ್ಯಕರವಾಗಿ, ಯೆಹೋವನ ಜನರು ‘ಭುಜಕ್ಕೆ ಭುಜ ಕೊಟ್ಟು ಆತನ ಸೇವೆ ಮಾಡುತ್ತಾರೆ.’ (ಚೆಫನ್ಯ 3:9, NW) ಒಬ್ಬಾನೊಬ್ಬ ಕ್ರೈಸ್ತನನ್ನು ಅಪೊಸ್ತಲ ಪೌಲನು “ಸತ್ಯ ಸಯುಜ” ನೆಂದು ಕರೆದನು. (ಫಿಲಿಪ್ಪಿ 4:3) ಭುಜಕ್ಕೆ ಭುಜ ಕೊಟ್ಟು ಸೇವೆ ಮಾಡುವ ಮೂಲಕ ಅದೇ ನೊಗದ ಕೆಳಗೆ ಒಟ್ಟಿಗೆ ಕೆಲಸಮಾಡುವುದು, ವಿಶೇಷವಾಗಿ ಆತ್ಮಿಕವಾಗಿ ಬಲಿಷ್ಠರಾಗಿರದವರಿಗೆ, ಭಾರವನ್ನು ಹಗುರವಾಗಿ ಮಾಡುತ್ತದೆ.—ಹೋಲಿಸಿ ಮತ್ತಾಯ 11:29.
ಅವರು ಉತ್ತೇಜನವನ್ನು ನೀಡಿದರು
ಉತ್ತೇಜನವು ಬಹಳ ಪ್ರಾಮುಖ್ಯವಾಗಿರುವುದರಿಂದ, ಅದರ ಕೆಲವು ಶಾಸ್ತ್ರೀಯ ಉದಾಹರಣೆಗಳನ್ನು ನಾವು ಪರಿಗಣಿಸೋಣ. ದೇವರ ಪ್ರವಾದಿಯಾದ ಮೋಶೆಯು ತನ್ನ ಜೀವನದ ಅಂತ್ಯವನ್ನು ಸಮೀಪಿಸುತ್ತಿದ್ದಾಗ, ಇಸ್ರಾಯೇಲ್ಯರ ನಾಯಕನಾಗಿರುವಂತೆ ಯೆಹೋವನು ಯೆಹೋಶುವನನ್ನು ನೇಮಿಸಿದನು. ಸ್ವತಃ ಮೋಶೆಗೆ ಚೆನ್ನಾಗಿ ಗೊತ್ತಿದ್ದಂತೆ, ಇದೊಂದು ಸರಳವಾದ ನೇಮಕವಾಗಿರಲಿಲ್ಲ. (ಅರಣ್ಯಕಾಂಡ 11:14, 15) ಆದಕಾರಣ, ‘ಯೆಹೋಶುವನಿಗೆ ಅಧಿಕಾರವನ್ನು ಕೊಡುವಂತೆ, ಅವನನ್ನು ಉತ್ತೇಜಿಸುವಂತೆ ಮತ್ತು ಧೈರ್ಯಪಡಿಸುವಂತೆ’ ಯೆಹೋವನು ಮೋಶೆಗೆ ಹೇಳಿದನು.—ಧರ್ಮೋಪದೇಶಕಾಂಡ 3:28.
ಇಸ್ರಾಯೇಲಿನ ನ್ಯಾಯಸ್ಥಾಪಕರ ಸಮಯದಲ್ಲಿ, ಯೆಹೋವನ ಆಲಯದಲ್ಲಿ ಸೇವೆ ಮಾಡುವ ಸಲುವಾಗಿ, ಕುಟುಂಬವೊಂದನ್ನು ಪಡೆಯುವ ಸಾಧ್ಯತೆಯನ್ನು ತ್ಯಜಿಸಿಬಿಡುವ ಮೂಲಕ, ಯೆಪ್ತಾಹನ ಮಗಳು ತನ್ನ ತಂದೆಯ ಹರಕೆಯೊಂದಿಗೆ ಮನಃಪೂರ್ವಕವಾಗಿ ಅನುವರ್ತಿಸಿದಳು. ಅವಳ ತ್ಯಾಗವು ಗಮನಕ್ಕೆ ಬಾರದೆ ಹೋಯಿತೇ? ಇಲ್ಲ, ಯಾಕೆಂದರೆ ನ್ಯಾಯಸ್ಥಾಪಕರು 11:40 ಹೇಳುವುದು: “ಇಸ್ರಾಯೇಲ್ಯರ ಹೆಣ್ಣುಮಕ್ಕಳು ಪ್ರತಿವರುಷದಲ್ಲಿಯೂ ನಾಲ್ಕು ದಿವಸ ಗಿಲ್ಯಾದ್ಯನಾದ ಯೆಪ್ತಾಹನ ಮಗಳನ್ನು ವರ್ಣಿಸುತ್ತಾರೆ (“ಪ್ರಶಂಸಿಸು,” NW).” ಅಂತಹ ಸಂದರ್ಶನಗಳು ಸ್ವತ್ಯಾಗವನ್ನು ಮಾಡಿದ ಯೆಪ್ತಾಹನ ಮಗಳಿಗೆ ಬಹಳ ಉತ್ತೇಜನದಾಯಕವಾಗಿದ್ದಿರಬೇಕು.
ಉತ್ತೇಜನದ ನೀಡಿಕೆ ಕೆಲವೊಮ್ಮೆ ಧೈರ್ಯವನ್ನು ಕೇಳಿಕೊಳ್ಳುತ್ತದೆ. ಅಪೊಸ್ತಲ ಪೌಲನ ಪ್ರಥಮ ಮಿಷನೆರಿ ಯಾತ್ರೆಯ ಸಮಯದಲ್ಲಿ, ಏಷಿಯ ಮೈನರ್ನ ಹಲವಾರು ಪಟ್ಟಣಗಳಲ್ಲಿ ಅವನು ತೀವ್ರವಾದ ವಿರೋಧವನ್ನು ಎದುರಿಸಿದನು. ಅವನು ಅಂತಿಯೋಕ್ಯದಿಂದ ಹೊರದೂಡಲ್ಪಟ್ಟನು, ಇಕೋನ್ಯದಲ್ಲಿ ಮರಣ ದಂಡನೆಯನ್ನು ಕಷ್ಟದಲ್ಲಿ ತಪ್ಪಿಸಿಕೊಂಡನು, ಮತ್ತು ಲುಸ್ತ್ರದಲ್ಲಿ ಕಲ್ಲೆಸೆಯಲ್ಪಟ್ಟು, ಸತ್ತನೆಂದು ಭಾವಿಸಲ್ಪಟ್ಟನು. ಆದರೂ, ಇದಾದ ತರುವಾಯ, ಪೌಲನು ಮತ್ತು ಅವನ ಸಂಗಾತಿಗಳು ಈ ಪಟ್ಟಣಗಳಿಗೆ ಹಿಂದಿರುಗಿ, “ಶಿಷ್ಯರ ಮನಸ್ಸುಗಳನ್ನು ದೃಢಪಡಿಸಿದರು ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕೆಂಬದಾಗಿ ಎಚ್ಚರಿಕೆಯ ಮಾತನ್ನು ಹೇಳಿ ಕ್ರಿಸ್ತನಂಬಿಕೆಯಲ್ಲಿ ಸ್ಥಿರವಾಗಿರ್ರಿ ಎಂದು ಅವರನ್ನು ಧೈರ್ಯಗೊಳಿಸಿದರು.” (ಅ. ಕೃತ್ಯಗಳು 14:21, 22) ಈ ಹೊಸ ಶಿಷ್ಯರನ್ನು ಉತ್ತೇಜಿಸಲಿಕ್ಕಾಗಿ ತನ್ನ ಜೀವವನ್ನು ಅಪಾಯಕ್ಕೀಡುಮಾಡಲು ಪೌಲನು ಸಿದ್ಧನಾಗಿದ್ದನು.
ಆದರೂ, ಹೊಸ ಶಿಷ್ಯರು, ಉತ್ತೇಜನದ ಅಗತ್ಯವಿರುವ ಏಕಮಾತ್ರ ಕ್ರೈಸ್ತರಾಗಿರುವುದಿಲ್ಲ. ವರ್ಷಗಳಾನಂತರ ಪೌಲನು ರೋಮ್ಗೆ—ಎಲ್ಲಿ ಅವನು ನ್ಯಾಯ ವಿಚಾರಣೆಗೆ ಗುರಿಯಾಗಬೇಕಿತ್ತೊ ಅಲ್ಲಿಗೆ—ಹೋಗುವಾಗ, ಪ್ರಯಾಸಕರ ಪ್ರಯಾಣವನ್ನು ಅನುಭವಿಸಿದನು. ತನ್ನ ಗಮ್ಯಸ್ಥಾನವನ್ನು ಅವನು ಸಮೀಪಿಸಿದಂತೆ, ಅವನು ಕೊಂಚಮಟ್ಟಿಗೆ ಎದೆಗುಂದಿರಬಹುದು. ಆದರೆ ಅವನು ರೋಮ್ನ ಆಗ್ನೇಯ ದಿಕ್ಕಿನಿಂದ 74 ಕಿಲೋಮೀಟರುಗಳ ಅಂತರದಲ್ಲಿದ್ದ ಒಂದು ಬಿಂದುವನ್ನು ತಲಪಿದಾಗ, ಅವನು ಹುರಿದುಂಬಿಸಲ್ಪಟ್ಟನು. ಏಕೆ? ಏಕೆಂದರೆ ರೋಮ್ನಲ್ಲಿದ್ದ ಸಹೋದರರು ಅವನನ್ನು ಅಪ್ಪಿಯಪೇಟೆಯಲ್ಲಿ ಮತ್ತು ತ್ರಿಛತ್ರದಲ್ಲಿ ಸಂದರ್ಶಿಸಲು ಬಂದಿದ್ದರು. “ಪೌಲನು ಅವರನ್ನು ನೋಡಿ ದೇವರ ಸ್ತೋತ್ರವನ್ನು ಮಾಡಿ ಧೈರ್ಯಗೊಂಡನು.” (ಅ. ಕೃತ್ಯಗಳು 28:15) ತದ್ರೀತಿಯ ಸಂದರ್ಭಗಳಲ್ಲಿ, ಕೇವಲ ನಮ್ಮ ಉಪಸ್ಥಿತಿಯೇ ಜೊತೆ ವಿಶ್ವಾಸಿಗಳಿಗೆ ಬಹಳ ಉತ್ತೇಜನದಾಯಕವಾಗಿರಬಹುದು.
ಉತ್ತೇಜನವನ್ನು ನೀಡಲಿಕ್ಕಾಗಿರುವ ಅವಕಾಶಗಳ ಉಪಯೋಗವನ್ನು ಮಾಡಿರಿ
ಉತ್ತೇಜನವನ್ನು ನೀಡಲಿಕ್ಕಾಗಿರುವ ಅವಕಾಶಗಳು ಅನೇಕ ಎಂಬುದು ನಿಶ್ಚಯ. ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಒಬ್ಬ ಸಹೋದರ ಅಥವಾ ಸಹೋದರಿಯಿಂದ ನೀಡಲ್ಪಟ್ಟ ಒಂದು ಒಳ್ಳೆಯ ವಿದ್ಯಾರ್ಥಿ ಭಾಷಣದಿಂದ ನಿಮ್ಮ ಹೃದಯವು ಪ್ರೇರಿಸಲ್ಪಟ್ಟಿತೊ? ಸಭೆಯಲ್ಲಿ ಆತ್ಮಿಕವಾಗಿ ದೃಢರಾಗಿರುವ ಹದಿವಯಸ್ಕರು ಇದ್ದಾರೆಂಬ ವಿಷಯಕ್ಕಾಗಿ ನೀವು ಸಂತೋಷಿಸುತ್ತೀರೊ? ವೃದ್ಧರ ತಾಳ್ಮೆಯು ನಿಮ್ಮನ್ನು ಪ್ರಭಾವಿಸಿದೆಯೊ? ಪಯನೀಯರರಲ್ಲಿ ಒಬ್ಬನು, ಮನೆಮನೆಯ ಶುಶ್ರೂಷೆಯಲ್ಲಿ ಬೈಬಲನ್ನು ಉಪಯೋಗಿಸಿದ ವಿಧವನ್ನು ನೀವು ಮೆಚ್ಚಿದಿರೊ? ಹಾಗಾದರೆ ಪ್ರಶಂಸೆಯನ್ನು ನೀಡಿರಿ, ಮತ್ತು ಉತ್ತೇಜನದಾಯಕವಾಗಿರುವ ಏನನ್ನಾದರೂ ಹೇಳಿರಿ.
ಉತ್ತೇಜನವು ಕುಟುಂಬದಲ್ಲಿ ಅಷ್ಟೇ ಅಲ್ಲದೆ ಸಭೆಯಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ತಮ್ಮ ಮಕ್ಕಳನ್ನು ‘ಯೆಹೋವನ ಶಿಸ್ತಿನಲ್ಲಿ ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ’ ಬೆಳೆಸುವಂತೆ ಅದು ಹೆತ್ತವರಿಗೆ ಸಹಾಯ ಮಾಡಬಲ್ಲದು. (ಎಫೆಸ 6:4, NW) ತಾನು ಚೆನ್ನಾಗಿ ಮಾಡಿರುವನೆಂದು ಒಂದು ಮಗುವಿಗೆ ಹೇಳುವುದು, ಏಕೆಂದು ವಿವರಿಸುವುದು, ಎಷ್ಟು ಉತ್ತೇಜನದಾಯಕವಾಗಿರಬಲ್ಲದು! ಯುವ ಜನರು ಅನೇಕ ಶೋಧನೆಗಳನ್ನು ಮತ್ತು ಒತ್ತಡಗಳನ್ನು ಎದುರಿಸುವ ಹದಿವಯಸ್ಕ ವರ್ಷಗಳಲ್ಲಿ, ಸತತವಾದ ಉತ್ತೇಜನವು ಪ್ರಾಮುಖ್ಯವಾಗಿದೆ.
ಬಾಲ್ಯಾವಸ್ಥೆಯಲ್ಲಿ ಉತ್ತೇಜನದ ಕೊರತೆಯು, ಬಹಳ ಹಾನಿಕರವಾಗಿರಬಲ್ಲದು. ಇಂದು ಒಬ್ಬ ಕ್ರೈಸ್ತ ಹಿರಿಯನಾಗಿರುವ ಮೈಕಲ್, ಸ್ನೇಹಭಾವವುಳ್ಳವನಾಗಿದ್ದಾನೆ, ಆದರೆ ಅವನು ಹೇಳುವುದು: “ನಾನು ಯಾವ ವಿಷಯವನ್ನಾದರೂ ಚೆನ್ನಾಗಿ ಮಾಡಿರುವೆನೆಂದು ನನ್ನ ತಂದೆ ಒಮ್ಮೆಯೂ ಹೇಳಲಿಲ್ಲ. ಆದುದರಿಂದ ನಾನು ಆತ್ಮ ಗೌರವದ ಕೊರತೆಯೊಂದಿಗೆ ಬೆಳೆದೆ. . . . ಈಗ ನಾನು 50 ವರ್ಷ ಪ್ರಾಯದವನಾಗಿದ್ದರೂ, ಒಬ್ಬ ಹಿರಿಯನೋಪಾದಿ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೇನೆಂದು ನನ್ನ ಗೆಳೆಯರ ಮೂಲಕ ಪುನರಾಶ್ವಾಸಿಸಲ್ಪಡುವುದನ್ನು ನಾನು ಇನ್ನೂ ಗಣ್ಯಮಾಡುತ್ತೇನೆ. . . . ಇತರರಿಗೆ ಉತ್ತೇಜನವನ್ನು ನೀಡುವುದು ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ನನ್ನ ಸ್ವಂತ ಅನುಭವವು ನನಗೆ ಕಲಿಸಿದೆ, ಮತ್ತು ಅದನ್ನು ನೀಡಲು ನಾನು ಪ್ರಯಾಸ ಪಡುತ್ತೇನೆ.”
ಉತ್ತೇಜನದ ಅಗತ್ಯ ಯಾರಿಗಿದೆ?
ಕಷ್ಟಪಟ್ಟು ಕೆಲಸಮಾಡುವ ಕ್ರೈಸ್ತ ಹಿರಿಯರು ಉತ್ತೇಜನಾರ್ಹರಾಗಿದ್ದಾರೆ. ಪೌಲನು ಬರೆದದ್ದು: “ಸಹೋದರರೇ, ಯಾರು ನಿಮ್ಮಲ್ಲಿ ಪ್ರಯಾಸಪಟ್ಟು ಕರ್ತನ ಕಾರ್ಯಗಳಲ್ಲಿ ನಿಮ್ಮ ಮೇಲೆ ಮುಖ್ಯಸ್ಥರಾಗಿದ್ದು ನಿಮಗೆ ಬುದ್ಧಿ ಹೇಳುತ್ತಾರೋ ಅವರನ್ನು ಲಕ್ಷಿಸಿ ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಬಹಳವಾಗಿ ಸನ್ಮಾನಮಾಡಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ.” (1 ಥೆಸಲೊನೀಕ 5:12, 13) ಹಿರಿಯರ ಕಠಿನ ಕೆಲಸವನ್ನು ಲಘುವಾಗಿ ಭಾವಿಸುವುದು ಸುಲಭವಾಗಿದೆ. ಆದರೆ ಪ್ರಾಮಾಣಿಕವಾದ ಗಣ್ಯತೆಯ ಹಾಗೂ ಉತ್ತೇಜನದ ಮಾತುಗಳು ಅವರ ಭಾರವನ್ನು ಹಗುರವಾಗಿ ತೋರುವಂತೆ ಮಾಡಬಲ್ಲದು.
ನಮ್ಮಲ್ಲಿ ಕಠಿನ ಪರಿಸ್ಥಿತಿಗಳನ್ನು ತಾಳಿಕೊಳ್ಳುತ್ತಿರುವವರಿಗೂ ಉತ್ತೇಜನದ ಅಗತ್ಯವಿದೆ. “ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ,” ಎಂದು ಬೈಬಲ್ ಸಲಹೆ ನೀಡುತ್ತದೆ. (1 ಥೆಸಲೊನೀಕ 5:14) ಆಗಿಂದಾಗ್ಗೆ ನಿರುತ್ಸಾಹಗೊಳ್ಳುವ ಅಥವಾ ಆತ್ಮಿಕವಾಗಿ ಬಲಹೀನರೆಂದು ಭಾವಿಸುವ ವ್ಯಕ್ತಿಗಳಲ್ಲಿ, ಒಂಟಿ ಹೆತ್ತವರು, ವಿಧವೆಯರು, ಹದಿವಯಸ್ಕರು, ವೃದ್ಧರು, ಮತ್ತು ದುರ್ಬಲರು ಸೇರಿದ್ದಾರೆ.
ಮರಿಯಾ, ಇದ್ದಕ್ಕಿದ್ದಹಾಗೆ ತನ್ನ ಗಂಡನಿಂದ ತೊರೆಯಲ್ಪಟ್ಟ ಒಬ್ಬ ಕ್ರೈಸ್ತ ಸ್ತ್ರೀ. ಆಕೆ ಹೇಳಿದ್ದು: “ಯೋಬನಂತೆ, ಕೆಲವೊಮ್ಮೆ ನಾನು ಸಾಯಲು ಬಯಸಿದೆ. [ಯೋಬ 14:13] ಆದರೆ, ನನಗೆ ಸಿಕ್ಕಂಥ ಉತ್ತೇಜನದ ನಿಮಿತ್ತ, ನಾನು ಬಿಟ್ಟುಕೊಡಲಿಲ್ಲ. ನಾನು ಬಹಳ ಚೆನ್ನಾಗಿ ಅರಿತಿದ್ದ ಇಬ್ಬರು ಹಿರಿಯರು, ಪೂರ್ಣ ಸಮಯದ ಸೇವೆಯಲ್ಲಿ ಮುಂದುವರಿಯುವುದರ ಮೌಲ್ಯವನ್ನು ನಾನು ಮನಗಾಣುವಂತೆ ಸಹಾಯಮಾಡುವುದರಲ್ಲಿ ಅನೇಕ ತಾಸುಗಳನ್ನು ವ್ಯಯಿಸಿದರು. ಮತ್ತು ನನ್ನ ಸಮಸ್ಯೆಗಳನ್ನು ಅವರಲ್ಲಿ ಮನಬಿಚ್ಚಿ ಹೇಳಿಕೊಂಡಾಗ ತಾಳ್ಮೆಯಿಂದ ಆಲಿಸುತ್ತಾ, ಸಹಾನುಭೂತಿಯುಳ್ಳ ಇಬ್ಬರು ಸಹೋದರಿಯರೂ ನನ್ನನ್ನು ಸಂತೈಸಿದರು. ಬೈಬಲನ್ನು ಉಪಯೋಗಿಸುವ ಮೂಲಕ, ಯೆಹೋವನ ದೃಷ್ಟಿಕೋನದಿಂದ ವಿಷಯಗಳನ್ನು ನೋಡುವಂತೆ ಅವರು ನನ್ನನ್ನು ಶಕ್ತಗೊಳಿಸಿದರು. ಕೀರ್ತನೆ 55:22ನ್ನು ನಾವು ಎಷ್ಟು ಬಾರಿ ಓದಿದೆವೆಂದು ನನಗೆ ಗೊತ್ತಿಲ್ಲ, ಆದರೆ ಆ ವಚನವನ್ನು ಅನ್ವಯಿಸುವ ಮೂಲಕ, ನಿಧಾನವಾಗಿ ನನ್ನ ಆತ್ಮಿಕ ಹಾಗೂ ಭಾವನಾತ್ಮಕ ಸಮತೂಕವನ್ನು ನಾನು ಮರಳಿ ಪಡೆದೆನೆಂದು ನನಗೆ ಗೊತ್ತಿದೆ. ಇದೆಲ್ಲಾ 12 ವರ್ಷಗಳ ಹಿಂದೆ ಸಂಭವಿಸಿತು, ಮತ್ತು ಇಷ್ಟರ ತನಕ ಪೂರ್ಣ ಸಮಯದ ಸೇವೆಯಲ್ಲಿ ಮುಂದುವರಿದಿದ್ದೇನೆಂದು ಹೇಳಲು ನಾನು ಸಂತೋಷ ಪಡುತ್ತೇನೆ. ಆಗಾಗ ಸಂಭವಿಸುವ ಭಾವನಾತ್ಮಕ ವೇದನೆಯ ಹೊರತೂ, ನನ್ನ ಜೀವಿತವು ಪ್ರತಿಫಲದಾಯಕವೂ ಸಂತೋಷಭರಿತವೂ ಆಗಿದೆ. ಆ ರೀತಿಯ ಸಮಯದಲ್ಲಿ ಸಿಗುವ ಉತ್ತೇಜನವು, ಒಬ್ಬ ವ್ಯಕ್ತಿಯ ಜೀವಿತದಲ್ಲಿ ಬಹಳಷ್ಟು ವ್ಯತ್ಯಾಸವನ್ನುಂಟುಮಾಡಬಲ್ಲದೆಂದು ನಾನು ಮನಗಂಡಿದ್ದೇನೆ.”
ಕೆಲವರಿಗೆ ಉತ್ತೇಜನದ ಅಗತ್ಯವಿದೆ ಯಾಕೆಂದರೆ, ಅವರು ತಪ್ಪುಗಳನ್ನು ಮಾಡಿದ್ದಾರೆ ಮತ್ತು ಈಗ ಅವುಗಳನ್ನು ಸರಿಪಡಿಸಲು ಪ್ರಯಾಸಪಡುತ್ತಿದ್ದಾರೆ. ಬಹುಶಃ ಅವರು ಪ್ರೀತಿಯ ಗದರಿಕೆಯನ್ನು ಪಡೆದಿದ್ದಾರೆ. (ಜ್ಞಾನೋಕ್ತಿ 27:6) ಗದರಿಕೆಯನ್ನು ಕೊಟ್ಟಂಥ ಹಿರಿಯರು, ಶಾಸ್ತ್ರೀಯ ಸಲಹೆಯು ಅನ್ವಯಿಸಲ್ಪಡುತ್ತಿದೆ ಎಂಬುದನ್ನು ನೋಡುವಾಗ, ಪ್ರಶಂಸೆಯನ್ನು ಕೊಡಲು ಎಚ್ಚರವಾಗಿರಬಲ್ಲರು. ಉತ್ತೇಜನದ ಅವರ ಮಾತುಗಳು ಇಮ್ಮಡಿ ಪ್ರಯೋಜನದ್ದಾಗಿರುವವು—ತಪ್ಪುಮಾಡುವವನು ‘ಅಧಿಕವಾಗಿ ದುಃಖಿತ’ ನಾಗದಂತೆ ಅವನಿಗಾಗಿರುವ ತಮ್ಮ ಪ್ರೀತಿಯನ್ನು ದೃಢೀಕರಿಸುವುದು ಮತ್ತು ಸಲಹೆಯನ್ನು ಅನ್ವಯಿಸುವುದರ ಪ್ರಯೋಜನಗಳ ಕುರಿತು ಅವನಿಗೆ ಜ್ಞಾಪಕ ಹುಟ್ಟಿಸುವುದು.—2 ಕೊರಿಂಥ 2:7, 8.
ಒಬ್ಬಾನೊಬ್ಬ ಹಿರಿಯನು ಗಂಭೀರವಾದೊಂದು ತಪ್ಪನ್ನು ಮಾಡಿದನು ಮತ್ತು ಸಭೆಯಲ್ಲಿ ತನ್ನ ಮೇಲ್ವಿಚಾರಣೆಯ ಸುಯೋಗವನ್ನು ಕಳೆದುಕೊಂಡನು. “ಹಿರಿಯನೋಪಾದಿ ನನ್ನ ತೆಗೆದುಹಾಕುವಿಕೆಯ ಕುರಿತಾದ ಪ್ರಕಟನೆಯನ್ನು ಮಾಡಿದಾಗ, ನನ್ನ ಸಹವಾಸವು ಸಹೋದರರಿಗೆ ಅಹಿತಕರವೆನಿಸುವುದೆಂದು ನಾನು ನೆನಸಿದೆ,” ಎಂದು ಅವನು ಹೇಳುತ್ತಾನೆ. “ಆದರೆ, ಹಿರಿಯರು ಕಾರಣವನ್ನು ಬಹಳ ಗುಪ್ತವಾಗಿಟ್ಟರು ಮತ್ತು ನನಗೆ ಉತ್ತೇಜನವನ್ನು ನೀಡಲು ಪ್ರಯಾಸಪಟ್ಟರು. ಸಭೆಯಲ್ಲಿದ್ದ ಉಳಿದವರು ಸಹ ಅಂತೆಯೇ ಪ್ರೀತಿ ಮತ್ತು ಸಾಹಚರ್ಯವನ್ನು ನೀಡಿದರು, ಇದು ಖಂಡಿತವಾಗಿಯೂ ನನ್ನ ಆತ್ಮಿಕ ಗುಣಹೊಂದುವಿಕೆಯನ್ನು ಪ್ರವರ್ಧಿಸಿತು.”
ಉತ್ತೇಜನ ನೀಡುವವರಾಗಿರ್ರಿ
ನಮ್ಮ ಕಾರ್ಯಮಗ್ನ ಜೀವಿತಗಳಲ್ಲಿ, ಉತ್ತೇಜನವನ್ನು ಕಡೆಗಣಿಸುವುದು ಸುಲಭ. ಆದರೆ ಅದು ಎಷ್ಟು ಒಳಿತನ್ನು ಮಾಡಬಲ್ಲದು! ಪರಿಣಾಮಕಾರಿ ಉತ್ತೇಜನವನ್ನು ನೀಡಲು, ನೀವು ಎರಡು ವಿಷಯಗಳನ್ನು ಮನಸ್ಸಿನಲ್ಲಿಡಬೇಕು. ಮೊದಲನೆಯದಾಗಿ, ನಿಮ್ಮ ಉತ್ತೇಜನವು ನಿರ್ದಿಷ್ಟವಾಗಿರುವಂತೆ, ಹೇಳಲಿಕ್ಕಿರುವ ವಿಷಯದ ಕುರಿತು ಯೋಚಿಸಿರಿ. ಎರಡನೆಯದಾಗಿ, ಪ್ರಶಂಸೆಗೆ ಅರ್ಹನಾಗಿರುವ ಅಥವಾ ಆತ್ಮೋನ್ನತಿಯ ಅಗತ್ಯವಿರುವ ವ್ಯಕ್ತಿಯನ್ನು ಸಮೀಪಿಸಲು, ಅವಕಾಶಕ್ಕಾಗಿ ಎದುರುನೋಡಿರಿ.
ನೀವು ಇದನ್ನು ಎಷ್ಟು ಹೆಚ್ಚು ಬಾರಿ ಮಾಡುತ್ತೀರೊ, ನೀವು ಅಷ್ಟು ಹೆಚ್ಚು ಸಂತುಷ್ಟರಾಗಿರುವಿರಿ. ಎಷ್ಟಾದರೂ, ಯೇಸು ನಮಗೆ ಆಶ್ವಾಸನೆ ನೀಡುವುದು: “ತೆಗೆದುಕೊಳ್ಳುವದಕ್ಕಿಂತ ಕೊಡುವದರಲ್ಲಿ ಹೆಚ್ಚಿನ ಸಂತೋಷವಿದೆ.” (ಅ. ಕೃತ್ಯಗಳು 20:35, NW) ಇತರರನ್ನು ಉತ್ತೇಜಿಸುವ ಮೂಲಕ, ನೀವು ನಿಮ್ಮನ್ನು ಉತ್ತೇಜಿಸಿಕೊಳ್ಳುವಿರಿ. ಪ್ರತಿದಿನ ಯಾರಾದರೊಬ್ಬರಿಗೆ ಉತ್ತೇಜನ ನೀಡುವುದನ್ನು ನಿಮ್ಮ ಗುರಿಯನ್ನಾಗಿ ಯಾಕೆ ಮಾಡಿಕೊಳ್ಳಬಾರದು?