ವಿಕಾಸ ವಾದ ವಿಚಾರಣೆಗೊಳಗಾಗುತ್ತದೆ
ಬದ್ಧರಾಗಿರುವ ವಿಕಾಸ ವಾದಿಗಳು ಈಗ ಜೈವಿಕ ಮೂಲಗಳ ಪೂರ್ತಿ ಪುನರ್ಪರಿಶೀಲನೆಗಾಗಿ ಕೂಗಾಡುತ್ತಿದ್ದಾರೆ
ನೀವು ಒಂದು ಕ್ರಿಮಿನಲ್ ವಿಚಾರಣೆಯಲ್ಲಿ ಒಬ್ಬ ನ್ಯಾಯ ಶಾಸ್ತ್ರಜ್ಞರೆಂದು ಭಾವಿಸಿ. ಪ್ರತಿವಾದಿ ತಾನು ನಿರ್ದೋಷಿಯೆಂದು ಕಂಠೋಕ್ತವಾಗಿ ಹೇಳುತ್ತಾನೆ, ಮತ್ತು ಸಾಕ್ಷಿಗಳು ಅವನ ಪರವಾಗಿ ಸಾಕ್ಷಿ ಹೇಳಲು ಮುಂದೆ ಬರುತ್ತಾರೆ. ಆದರೆ ಅವರ ಸಾಕ್ಷಿಗೆ ಕಿವಿಗೊಡುತ್ತಿರುವ ನೀವು, ಪ್ರತಿಯೊಬ್ಬ ಸಾಕ್ಷಿಯು ಇನ್ನೊಬ್ಬನಿಗೆ ಪರಸ್ಪರ ವಿರುದ್ಧವಾಗಿ ಮಾತಾಡುತ್ತಾನೆಂದು ಗಮನಿಸುತ್ತೀರಿ. ಬಳಿಕ, ಪ್ರತಿವಾದಿ ಸಾಕ್ಷಿಗಳನ್ನು ಪುನಃ ವೇದಿಕೆಯ ಮೇಲೆ ಕರೆಯುವಾಗ ಅವರ ಕಥೆಗಳು ಬದಲಾವಣೆಗೊಳ್ಳುತ್ತವೆ. ನ್ಯಾಯ ಶಾಸ್ತ್ರಜ್ಞರಾದ ನೀವು ಅವರ ಸಾಕ್ಷ್ಯಕ್ಕೆ ಮಹತ್ವವನ್ನು ಕೊಡುವಿರೊ? ಆಪಾದಿತನನ್ನು ಬಿಡುಗಡೆ ಮಾಡುವ ಪ್ರವೃತ್ತಿ ನಿಮಗಿದ್ದೀತೊ? ಅಸಂಭವನೀಯ, ಏಕೆಂದರೆ ಪ್ರತಿವಾದದಲ್ಲಿ ಯಾವುದೇ ಅಸಮಂಜಸತೆಯು ಪ್ರತಿವಾದಿಯ ವಿಶ್ವಾಸಾರ್ಹತೆಯನ್ನು ಬಲಹೀನಗೊಳಿಸುತ್ತದೆ.
ವಿಕಾಸ ವಾದದ ಪರಿಸ್ಥಿತಿಯೂ ಹೀಗೆಯೇ. ಜೀವದ ಮೂಲದ ಕುರಿತು ವಿವಿಧ ಕಥೆಗಳನ್ನು ಹೇಳಿ ವಿಕಾಸ ವಾದವನ್ನು ಸಮರ್ಥಿಸಲು ಸಾಕ್ಷಿಗಳ ಸಮೂಹವೇ ತನ್ನನ್ನು ತೋರಿಸಿಕೊಂಡಿದೆ. ಆದರೆ ಅವರ ಸಾಕ್ಷ್ಯಗಳು ನ್ಯಾಯಾಲಯದಲ್ಲಿ ವಿಶ್ವಾಸಾರ್ಹವಾಗಿ ಪರಿಣಮಿಸುವುವೊ? ಆ ವಾದವನ್ನು ಸಮರ್ಥಿಸುವವರು ಒಮ್ಮತದಿಂದ ಮಾತಾಡುತ್ತಾರೊ?
ವಿರೋಧಾತ್ಮಕ ರುಜುವಾತು
ಜೀವವು ಹೇಗೆ ಆರಂಭಗೊಂಡಿತು? ಪ್ರಾಯಶಃ ಇನ್ನಾವ ಪ್ರಶ್ನೆಯೂ ಇದಕ್ಕಿಂತ ಹೆಚ್ಚಿನ ಊಹಾಪೋಹಗಳನ್ನು ಎಬ್ಬಿಸಿದ್ದಾಗಲಿ ಹೆಚ್ಚು ಚರ್ಚೆಗೆ ಬೆಂಕಿಹಚ್ಚಿದ್ದಾಗಲಿ ಇಲ್ಲ. ಆದರೂ, ವಾಗ್ವಾದವು ಕೇವಲ ವಿಕಾಸ ವಾದ ಮತ್ತು ಸೃಷ್ಟಿವಾದದ ಮೇಲೆ ಅಲ್ಲ; ವಾಗ್ವಾದದಲ್ಲಿ ಅಧಿಕಾಂಶ ವಿಕಾಸ ವಾದಿಗಳ ನಡುವೆ ನಡೆಯುತ್ತದೆ. ವಿಕಾಸ ವಾದದ ಕಾರ್ಯತಃ ಪ್ರತಿಯೊಂದು ವಿವರವನ್ನು—ಅದು ಹೇಗೆ ಸಂಭವಿಸಿತು, ಎಲ್ಲಿ ಆರಂಭಗೊಂಡಿತು, ಅದನ್ನು ಯಾರು ಅಥವಾ ಯಾವುದು ಆರಂಭಿಸಿತು, ಮತ್ತು ಆ ಕಾರ್ಯವಿಧಾನಕ್ಕೆ ಎಷ್ಟು ಸಮಯ ಹಿಡಿಯಿತು—ತೀಕ್ಷೈವಾಗಿ ವಿವಾದಿಸಲಾಗುತ್ತದೆ.
ವಿಕಾಸ ವಾದಿಗಳು ಅನೇಕ ವರ್ಷಗಳಿಂದ, ಜೀವವು ಒಂದು ಬೆಚ್ಚಗೆನ ಜೈವಿಕ “ಸಾರು” ಕೊಳದಲ್ಲಿ ಆರಂಭಗೊಂಡಿತೆಂದು ವಾದಿಸುತ್ತಾರೆ. ಸಾಗರದ ನೊರೆಯು ಜೀವವನ್ನು ಉತ್ಪಾದಿಸಸಾಧ್ಯವಿತ್ತು ಎಂದು ಈಗ ಕೆಲವರು ನಂಬುತ್ತಾರೆ. ಸಮುದ್ರದಡಿಯ ಚಿಲುಮೆಗಳು ಜೀವದ ಮೂಲದ ಇನ್ನೊಂದು ಸೂಚಿತ ನಿವೇಶನ. ಜೀವಧಾರಿ ಜೀವಿಗಳು ಭೂಮಿಗೆ ಬಂದ ಉಲ್ಕೆಗಳ ಮೇಲೆ ಬಂದವೆಂದು ಕೆಲವರ ಭಾವನೆ. ಇಲ್ಲವೆ ಪ್ರಾಯಶಃ, ಆ್ಯಸ್ಟರಾಯ್ಡ್ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸಿ ವಾಯುಮಂಡಲವನ್ನು ಬದಲಾಯಿಸಿ, ಈ ಕಾರ್ಯವಿಧಾನದಲ್ಲಿ ಜೀವವನ್ನು ವಿಕಸಿಸಿದವು, ಎನ್ನುತ್ತಾರೆ ಇನ್ನು ಕೆಲವರು. ಒಬ್ಬ ಸಂಶೋಧಕನು ಹೇಳುವುದು: “ಒಂದು ದೊಡ್ಡ ಕಬ್ಬಿಣದ ಆಸ್ಟರಾಯ್ಡ್ನಿಂದ ಭೂಮಿಯನ್ನು ಉಳುವಲ್ಲಿ ರಸಕರವಾದ ವಿಷಯಗಳು ಸಂಭವಿಸಬಲ್ಲವು.”
ಜೀವದ ಆರಂಭದ ಪ್ರಕೃತಿಯನ್ನೂ ಪುನರಾಲೋಚಿಸಲಾಗುತ್ತಿದೆ. ಟೈಮ್ ಪತ್ರಿಕೆ ಸೂಚಿಸುವುದು, “ಜೀವವು ನಿಶ್ಚಲವಾದ ಶಾಂತ ಪರಿಸ್ಥಿತಿಯಲ್ಲಿ ಎದ್ದು ಬರಲಿಲ್ಲ. ಆದರೆ ಯಾವುದು ಜ್ವಾಲಾಮುಖಿಯ ಚಿಮ್ಮುವಿಕೆಗಳಿಂದ ಮತ್ತು ಧೂಮಕೇತು ಮತ್ತು ಆಸ್ಟರಾಯ್ಡ್ಗಳಿಂದ ಕೇಡಿಗೊಳಗಾದಂತಹ ಗೃಹದ ನರಕಾತ್ಮಕ ಆಕಾಶಗಳ ಕೆಳಗೆ ಎದ್ದು ಬಂದಿತು.” ಇಂತಹ ಅವ್ಯವಸ್ಥೆಯ ಮಧ್ಯೆ, ಜೀವವು ವಿಕಾಸಗೊಂಡಿರಬೇಕಾದರೆ, ಆ ಪೂರ್ತಿ ಕಾರ್ಯವಿಧಾನವು, ಮೊದಲು ಭಾವಿಸಿದ್ದುದಕ್ಕಿಂತ ಕಡಮೆ ಸಮಯಾವಧಿಯಲ್ಲಿ ಸಂಭವಿಸಿರಬೇಕು.
ದೇವರು—“ಅವನು ಇರುವಲ್ಲಿ”—ಇದರಲ್ಲಿ ಯಾವ ಪಾತ್ರ ವಹಿಸುತ್ತಾನೆ ಎಂಬುದರ ಕುರಿತೂ ವಿಜ್ಞಾನಿಗಳಿಗೆ ವಿಭಿನ್ನ ವೀಕ್ಷಣಗಳಿವೆ. ಒಬ್ಬ ಸೃಷ್ಟಿಕರ್ತನ ಹಸ್ತಕ್ಷೇಪವಿಲ್ಲದೇ ಜೀವ ವಿಕಾಸಗೊಂಡಿತು ಎಂದು ಕೆಲವರು ಹೇಳುವಾಗ, ಇನ್ನು ಕೆಲವರು, ದೇವರು ಈ ಕಾರ್ಯವಿಧಾನವನ್ನು ಆರಂಭಿಸಿ, ಬಳಿಕ ವಿಕಾಸವು ಜವಾಬ್ದಾರಿ ವಹಿಸುವಂತೆ ಬಿಟ್ಟನೆಂದು ಹೇಳುತ್ತಾರೆ.
ಜೀವವು ಆರಂಭಗೊಂಡ ಬಳಿಕ ವಿಕಾಸವು ಸಂಭವಿಸಿತೊ? ಇಲ್ಲಿ ಕೂಡ, ಕಥೆಗಳು ವಿರೋಧಾತ್ಮಕವಾಗಿವೆ. ಇಸವಿ 1958 ರಲ್ಲಿ, ದಿ ಆರಿಜಿನ್ ಆಫ್ ಸ್ಪೀಷೀಸ್ ಪುಸ್ತಕ ಪ್ರಕಾಶವಾಗಿ ಒಂದು ಶತಮಾನ ಕಳೆದ ಬಳಿಕ, ವಿಕಾಸ ವಾದಿ ಸರ್ ಜೂಲ್ಯನ್ ಹಕ್ಸ್ಲಿ ಹೇಳಿದ್ದು: “ಡಾರ್ವಿನನ ಮಹಾ ಕಂಡುಹಿಡಿತವಾದ ನೈಸರ್ಗಿಕ ಆಯ್ಕೆಯೆಂಬ ಸಾರ್ವತ್ರಿಕ ಮೂಲತತ್ವವು ಭಾರೀ ವಿಕಾಸಾತ್ಮಕ ಪರಿವರ್ತನೆಯಲ್ಲಿ ಏಕಮಾತ್ರ ಸಾಧನವಾಗಿದೆಯೆಂದು ಸ್ಥಿರವಾಗಿ ಮತ್ತು ಅಂತಿಮವಾಗಿ ಸ್ಥಾಪಿಸಲ್ಪಡುತ್ತದೆ.” ಆದರೆ ಇಪ್ಪತ್ತನಾಲ್ಕು ವರ್ಷಗಳಾದ ಮೇಲೆ, ವಿಕಾಸ ವಾದಿ ಮೈಕಲ್ ರೂಜ್ ಬರೆದುದು: “ಜೀವಶಾಸ್ತ್ರಜ್ಞರ ಹೆಚ್ಚುತ್ತಿರುವ ಸಂಖ್ಯೆಯು . . . ಡಾರ್ವಿನರ ಮೂಲತತ್ವದ—ವಿಶೇಷವಾಗಿ, ವಿಕಾಸಾತ್ಮಕ ಪರಿವರ್ತನೆಗೆ ನೈಸರ್ಗಿಕ ಆಯ್ಕೆಯೇ ಇರುವ ಕೀಲಿ ಕೈ ಎಂದು ನೋಡುವ ಯಾವುದೇ ವಾದ—ಮೇಲೆ ಆಧಾರಿತವಾದ ಯಾವುದೇ ವಿಕಾಸಾತ್ಮಕ ವಾದವು ದಾರಿ ತಪ್ಪಿಸುವಷ್ಟು ಅಪೂರ್ಣವಾಗಿದೆ ಎಂದು ವಾದಿಸುತ್ತಾರೆ.”
ವಿಕಾಸ ವಾದವನ್ನು ಬೆಂಬಲಿಸಲು “ಅನೇಕ ಭದ್ರವಾದ ನಿಜತ್ವಗಳು” ಇವೆಯೆಂದು ಟೈಮ್ ಪತ್ರಿಕೆ ಹೇಳುತ್ತದಾದರೂ, ವಿಕಾಸವು, “ಅನೇಕ ದೋಷಗಳಿದ್ದು, ಲೋಪವಾಗಿರುವ ರುಜುವಾತಿನ ಅಂಶಗಳನ್ನು ಹೇಗೆ ತುಂಬಿಸಬೇಕೆಂಬ ವಿಷಯದಲ್ಲಿ ಸ್ಪರ್ಧಾತ್ಮಕ ಊಹೆಗಳಿಗೆ ಕೊರತೆಯೇ ಇಲ್ಲದ” ಜಟಿಲ ಕಥೆಯಾಗಿದೆ ಎಂದು ಒಪ್ಪಿಕೊಳ್ಳುತ್ತದೆ. ಮೊಕದ್ದಮೆಯು ಮುಕ್ತಾಯಗೊಂಡಿತೆಂದು ಸೂಚಿಸುವ ಬದಲು, ಅತಿ ಬದ್ಧರಾದ ವಿಕಾಸ ವಾದಿಗಳಲ್ಲಿ ಕೆಲವರು ಈಗ ಜೈವಿಕ ಮೂಲಗಳ ಪೂರ್ತಿ ಪುನರ್ಪರಿಶೀಲನೆಗಾಗಿ ಕೂಗಾಡುತ್ತಿದ್ದಾರೆ.
ಹೀಗೆ, ವಿಕಾಸದ ವಾದವು—ವಿಶೇಷವಾಗಿ ವಿಕಾಸ ವಾದಕ್ಕನುಸಾರ ಜೀವದ ಆರಂಭದ ಪರವಾಗಿ—ಹೊಂದಿಕೆಯಿರುವ ರುಜುವಾತಿನ ಮೇಲೆ ಆಧಾರಿಸಿರುವುದಿಲ್ಲ. ವಿಕಾಸ ವಾದವನ್ನು ಸಮರ್ಥಿಸುವವರು, “ಗತಿಸಿಹೋಗಿರುವ ವರ್ಷಗಳಲ್ಲಿ ಅನೇಕ ತಪ್ಪು ಕಲ್ಪನೆಗಳನ್ನು ವಿಕಸಿಸಿ, ತ್ಯಜಿಸಿದ್ದಾರೆ ಮತ್ತು ವಿಜ್ಞಾನಿಗಳು ಇದುವರೆಗೆ ಯಾವುದೇ ಒಂದು ಕಲ್ಪನೆಯನ್ನು ಒಪ್ಪಿಕೊಳ್ಳಲು ಅಸಮರ್ಥರಾಗಿದ್ದಾರೆ,” ಎಂದು ವಿಜ್ಞಾನಿ ಟಿ. ಎಚ್. ಜನಾಬಿ ಗಮನಿಸುತ್ತಾರೆ.
ರಸಕರವಾಗಿ, ಚಾರ್ಲ್ಸ್ ಡಾರ್ವಿನ್ ಇಂತಹ ಘರ್ಷಣೆಯನ್ನು ಮುಂಭಾವಿಸಿದನು. ದಿ ಆರಿಜಿನ್ ಆಫ್ ಸ್ಪೀಷೀಸ್ನ ಮುನ್ನುಡಿಯಲ್ಲಿ ಅವನು ಬರೆದುದು: “ಈ ಪುಸ್ತಕದಲ್ಲಿ ನಿಜತ್ವಗಳಿಗೆ ಸಾಕ್ಷ್ಯ ಒದಗಿಸಲಾಗದ ವಿಷಯಗಳು ಚರ್ಚಿಸಲ್ಪಡದೆ ಇರುವುದು ವಿರಳವಾದರೂ, ನಾನು ಬಂದಿರುವ ತೀರ್ಮಾನಗಳಿಗೆ ನೇರ ವಿರುದ್ಧವಾಗಿ ಅವು ನಡೆಸುವಂತೆ ಅನೇಕ ವೇಳೆ ತೋರಿಬರುತ್ತವೆಂಬುದು ನನಗೆ ಚೆನ್ನಾಗಿ ಗೊತ್ತು.”
ನಿಶ್ಚಯವಾಗಿ, ಇಂತಹ ವಿರೋಧಾತ್ಮಕ ರುಜುವಾತು ವಿಕಾಸ ವಾದದ ರುಜುವಾತಿನ ವಿಶ್ವಾಸಾರ್ಹತೆಯ ಮೇಲೆ ಸಂದೇಹವನ್ನೆಬ್ಬಿಸುತ್ತದೆ.
ವಿಕಾಸ ವಾದವು ಬೌದ್ಧಿಕ ಆಯ್ಕೆಯೊ?
ಇತಿಹಾಸದ ಮೈಲಿಗಲ್ಲುಗಳು (ಇಂಗ್ಲಿಷ್) ಎಂಬ ಪುಸ್ತಕ ಗಮನಿಸುವುದೇನಂದರೆ, ವಿಕಾಸ ವಾದವು, “ಅನೇಕ ಜನರಿಗೆ ಹಿಡಿಸಿದ ಕಾರಣವು ಅದು ವಿಶೇಷ ಸೃಷ್ಟಿಗಳ ವಾದಕ್ಕಿಂತ ನಿಜವಾಗಿಯೂ ಹೆಚ್ಚು ವೈಜ್ಞಾನಿಕವೆಂದು ತೋರಿಬಂದದರ್ದಿಂದಲೇ.”
ಇದಲ್ಲದೆ, ಕೆಲವು ವಿಕಾಸ ವಾದಿಗಳ ಅಧಿಕಾರಯುಕ್ತ ಹೇಳಿಕೆಗಳು ಹೆದರಿಸುವಂಥವುಗಳಾಗಿರಬಲ್ಲವು. ದೃಷ್ಟಾಂತಕ್ಕೆ, ವಿಜ್ಞಾನಿ ಎಚ್. ಎಸ್. ಶೆಲ್ಟನ್, ವಿಶೇಷ ಸೃಷ್ಟಿವಾದದ ಕಲ್ಪನೆಯು “ಗಂಭೀರ ಪರಿಗಣನೆಗೆ ತೀರ ಮೂರ್ಖತನದ್ದು,” ಎಂದು ಒತ್ತಿಹೇಳುತ್ತಾರೆ. ಜೀವಶಾಸ್ತ್ರಜ್ಞ ರಿಚರ್ಡ್ ಡಾಕಿನ್ಸ್ ಒರಟಾಗಿ ಹೇಳುವುದು: “ತಾನು ವಿಕಾಸವನ್ನು ನಂಬುವುದಿಲ್ಲವೆಂದು ಹೇಳುವ ಒಬ್ಬನನ್ನು ನೀವು ಭೇಟಿಮಾಡುವಲ್ಲಿ, ಆ ವ್ಯಕ್ತಿ ಅರಿವಿಲ್ಲದವನು, ಮೂಢನು ಅಥವಾ ಮತಿವಿಕಲನು.” ತದ್ರೀತಿ, ಪ್ರೊಫೆಸರ್ ರೆನೆ ಡ್ಯೂಬೊ ಹೇಳುವುದು: “ತಿಳಿವಳಿಕೆಯಿರುವ ಅಧಿಕಾಂಶ ವ್ಯಕ್ತಿಗಳು ಈಗ, ವಿಶ್ವದಲ್ಲಿರುವ—ಆಕಾಶಸ್ಥ ಕಾಯಗಳಿಂದ ಮಾನವ ಜೀವಿಗಳ ವರೆಗೆ—ಎಲ್ಲವೂ ವಿಕಾಸಾತ್ಮಕ ಕಾರ್ಯವಿಧಾನಗಳ ಮೂಲಕ ವಿಕಾಸಗೊಂಡಿವೆ ಮತ್ತು ವಿಕಾಸಗೊಳ್ಳುತ್ತಾ ಹೋಗುತ್ತಿವೆ ಎಂಬುದನ್ನು ನಿಜತ್ವವಾಗಿ ಅಂಗೀಕರಿಸುತ್ತಾರೆ.”
ಈ ಹೇಳಿಕೆಗಳಿಂದ, ಸ್ವಲ್ಪ ಬುದ್ಧಿಶಕ್ತಿಯಿರುವ ಯಾವನೂ ವಿಕಾಸವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸುವನೆಂಬಂತೆ ತೋರಿಬರುವುದು. ಹೇಗೆಂದರೂ, ಹಾಗೆ ಮಾಡುವುದು, ಒಬ್ಬನು “ತಿಳಿವಳಿಕೆ” ಇರುವವನು ಮತ್ತು “ಮೂಢ” ನಲ್ಲವೆಂಬ ಅರ್ಥವನ್ನು ತರುವುದು. ಆದರೂ, ವಿಕಾಸ ವಾದದ ಪಕ್ಷವಾದಿಗಳಾಗಿರದ ಹೆಚ್ಚು ವಿದ್ಯಾವಂತರಾಗಿರುವ ಪುರುಷರೂ ಸ್ತ್ರೀಯರೂ ಇದ್ದಾರೆ. “ಸ್ವಂತ ಸಂಶಯಗಳಿದ್ದ ಅನೇಕ ವಿಜ್ಞಾನಿಗಳನ್ನು ನಾನು ಕಂಡುಕೊಂಡೆ,” ಎಂದು ಜಿರಾಫೆಯ ಕತ್ತು (ಇಂಗ್ಲಿಷ್) ಪುಸ್ತಕದಲ್ಲಿ ಫ್ರಾನ್ಸಿಸ್ ಹಿಚಿಂಗ್ ಬರೆಯುತ್ತಾರೆ. “ಕೆಲವರು ಡಾರ್ವಿನನ ವಿಕಾಸ ವಾದವು ವೈಜ್ಞಾನಿಕ ವಾದವಾಗಿ ಪರಿಣಮಿಸಿಯೇ ಇಲ್ಲವೆನ್ನುವಷ್ಟರ ವರೆಗೂ ಹೋಗಿದ್ದಾರೆ.”
ಚಂದ್ರ ವಿಕ್ರಮಸಿಂಘ ಎಂಬ ಬಹು ಪ್ರಶಂಸಿಸಲ್ಪಟ್ಟಿರುವ ಬ್ರಿಟಿಷ್ ವಿಜ್ಞಾನಿ, ಇದೇ ರೀತಿಯ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ. ಅವರನ್ನುವುದು: “ಡಾರ್ವಿನ್ ಸಂಬಂಧಿತ ವಿಕಾಸವಾದದ ಮೂಲತತ್ವಗಳಿಗೆ ಯಾವ ರುಜುವಾತೂ ಇಲ್ಲ. ಲೋಕವನ್ನು 1860 ರಲ್ಲಿ ತನ್ನ ಕೈಯಲ್ಲಿ ತೆಗೆದುಕೊಂಡದ್ದು ಒಂದು ಸಾಮಾಜಿಕ ಶಕ್ತಿಯಾಗಿತ್ತು, ಮತ್ತು ಅಂದಿನಿಂದ ವಿಜ್ಞಾನದ ಪರಿಣಾಮ ಅತಿ ಕೆಟ್ಟದ್ದಾಗಿದೆ ಎಂದು ನನ್ನ ನಂಬಿಕೆ.”
ಟಿ. ಎಚ್. ಜನಾಬಿ ವಿಕಾಸ ವಾದಿಗಳು ಮುಂದೆ ತಂದ ವಾದಗಳ ವಿಚಾರಣೆ ನಡಸಿದರು. “ಪರಿಸ್ಥಿತಿಯು ನಾವು ನಂಬುವಂತೆ ಮಾಡಿರುವುದಕ್ಕಿಂತ ತೀರ ಭಿನ್ನವೆಂದು ನಾನು ಕಂಡುಹಿಡಿದೆ,” ಎನ್ನುತ್ತಾರೆ ಅವರು. “ಜೀವದ ಮೂಲದಷ್ಟು ಜಟಿಲವಾದ ಕಲ್ಪನೆಯನ್ನು ಬೆಂಬಲಿಸಲು ಇರುವ ರುಜುವಾತು ತೀರ ಕಡಮೆ ಮತ್ತು ತೀರ ಮುರುಕು.”
ಹೀಗೆ, ವಿಕಾಸ ವಾದಕ್ಕೆ ಆಕ್ಷೇಪಣೆಯನ್ನೆತ್ತುವವರನ್ನು, “ಅರಿವಿಲ್ಲದವರು, ಮೂಢರು ಅಥವಾ ಮತಿವಿಕಲರು” ಎಂದು ಹೇಳಿ ಬದಿಗೊತ್ತಬಾರದು. ವಿಕಾಸವನ್ನು ಪಂಥಾಹ್ವಾನಿಸುವ ಅಭಿಪ್ರಾಯಗಳ ಕುರಿತು, ನಿಷ್ಠೆಯ ವಿಕಾಸ ವಾದಿ ಜಾರ್ಜ್ ಗೇಲಾರ್ಡ್ ಸಿಂಪ್ಸನ್ ಸಹ ಇದನ್ನು ಒಪ್ಪಿಕೊಳ್ಳಬೇಕಾಯಿತು: “ಈ ವೀಕ್ಷಣಗಳನ್ನು ಕೇವಲ ನಸುನಗೆ ಬೀರಿ ತ್ಯಜಿಸುವುದಾಗಲಿ ಅವುಗಳಿಗೆ ಕುಚೋದ್ಯ ಮಾಡುವುದಾಗಲಿ ನಿಶ್ಚಯವಾಗಿಯೂ ತಪ್ಪಾಗಿರುವುದು. ಅವುಗಳ ಪ್ರತಿಪಾದಕರು ಪರಿಜ್ಞಾನ ಮತ್ತು ಬುದ್ಧಿಶಕ್ತಿಯುಳ್ಳ ವಿದ್ಯಾರ್ಥಿಗಳು ಆಗಿದ್ದರು (ಮತ್ತು ಆಗಿದ್ದಾರೆ).”
ನಂಬುಗೆಯ ವಿಚಾರ
ವಿಕಾಸವು ನಿಜತ್ವದ ಮೇಲೆ ಆಧಾರಿತವಾಗಿರುವಾಗ ಸೃಷ್ಟಿಯಲ್ಲಿ ವಿಶ್ವಾಸವು ನಂಬುಗೆಯ ಮೇಲೆ ಆಧರಿಸಿದೆ ಎಂದು ಕೆಲವರು ಯೋಚಿಸುತ್ತಾರೆ. ದೇವರನ್ನು ಯಾವ ಮನುಷ್ಯನೂ ಕಂಡಿಲ್ಲವೆಂಬುದು ನಿಜವೇ. (ಯೋಹಾನ 1:18; ಹೋಲಿಸಿ 2 ಕೊರಿಂಥ 5:7.) ಆದರೂ ಈ ಸಂಬಂಧದಲ್ಲಿ ವಿಕಾಸ ವಾದ ಯಾವುದೇ ಲಾಭವನ್ನು ಹೊಂದಿರುವುದಿಲ್ಲ, ಏಕೆಂದರೆ ಅದು ಆಧಾರಿತವಾಗಿರುವುದು ಎಂದಿಗೂ ಯಾವುದೇ ಮಾನವರು ನೋಡದಿರದ ಮತ್ತು ನಕಲು ಮಾಡದಿರದ ಸಂಭವಗಳ ಮೇಲೆ.
ದೃಷ್ಟಾಂತಕ್ಕೆ, ಹೊಸ ಜೀವರೂಪಗಳನ್ನು ಉತ್ಪಾದಿಸುವ ರೂಪ ಬದಲಾವಣೆಯನ್ನು—ಪ್ರಯೋಜನಕಾರಿಯಾಗಿರುವುವುಗಳನ್ನು ಸಹ—ವಿಜ್ಞಾನಿಗಳು ಎಂದಿಗೂ ಗಮನಿಸಿದ್ದಿಲ್ಲ, ಆದರೂ ಹೊಸ ಜಾತಿಗಳು ಬಂದಿರುವುದು ನಿಷ್ಕೃಷ್ಟವಾಗಿಯೂ ಹಾಗೆಯೆ ಎಂದು ಅವರು ನಿಶ್ಚಯತೆಯಿಂದಿದ್ದಾರೆ. ಜೀವದ ಅಜೀವಜನ್ಯತೆಯನ್ನು ಅವರು ನೋಡಿದ್ದಿಲ್ಲ; ಆದರೂ ಜೀವವು ಆರಂಭಗೊಂಡದ್ದು ಹಾಗೆಯೆ ಎಂದು ಅವರು ಪಟ್ಟು ಹಿಡಿಯುತ್ತಾರೆ.
ಇಂತಹ ಪುರಾವೆಯ ಕೊರತೆಯು ವಿಕಾಸವಾದವು “ಕೇವಲ ಒಂದು ನಂಬುಗೆ,” ಎಂದು ಟಿ. ಎಚ್. ಜನಾಬಿ ಕರೆಯುವಂತೆ ಮಾಡಿದೆ. ಭೌತವಿಜ್ಞಾನಿ ಫ್ರೆಡ್ ಹೈಲ್ ಇದನ್ನು, “ಡಾರ್ವಿನನು ಬರೆದ ಸುವಾರ್ತೆ,” ಎಂದು ಕರೆಯುತ್ತಾರೆ. ಡಾ. ಎವನ್ ಶೂಟ್ ಹೆಚ್ಚು ಬಲವಾದ ಹೇಳಿಕೆಯನ್ನು ಕೊಡುತ್ತಾರೆ. “ಸಮಾಧಾನ ಹೇಳಲು ಪೂರ್ಣ ಹೃದಯದ ವಿಕಾಸ ವಾದಿಗಿಂತ ಸೃಷ್ಟಿವಾದಿಗೆ ಕಡಮೆ ರಹಸ್ಯಗಳಿವೆ,” ಎನ್ನುತ್ತಾರೆ ಅವರು.
ಇತರ ಪರಿಣತರು ಒಪ್ಪುತ್ತಾರೆ. ಖಗೋಲ ವಿಜ್ಞಾನಿ ರಾಬರ್ಟ್ ಜ್ಯಾಸ್ಟ್ರೋ ಒಪ್ಪಿಕೊಳ್ಳುವುದು: “ನಾನು ಮಾನವ ಪ್ರಕೃತಿಯ ಕುರಿತು ಧ್ಯಾನಿಸುವಾಗ, ಒಂದು ಬೆಚ್ಚಗೆನ ನೀರಿನ ಕೊಳದಿಂದ ಕರಗಿಸಿರುವ ರಾಸಾಯನಿಕ ವಸ್ತುಗಳಿಂದ ಈ ಅಸಾಮಾನ್ಯ ಜೀವಿಯ ನಿರ್ಗಮನವು ಅವನ ಮೂಲದ ಕುರಿತ ಬೈಬಲಿನ ವೃತ್ತಾಂತದಷ್ಟೇ ಅದ್ಭುತವಾಗಿದೆ ಎಂದು ತೋರಿಬರುತ್ತದೆ.”
ಹಾಗಾದರೆ, ಜೀವವು ಸೃಷ್ಟಿಸಲ್ಪಟ್ಟದ್ದೆಂಬ ವಿಚಾರವನ್ನು ಅನೇಕರು ಇನ್ನೂ ತಳ್ಳಿಹಾಕುವುದೇಕೆ?
[ಪುಟ 3 ರಲ್ಲಿರುವ ಚಿತ್ರ]
ಕೆಲವರ ಅಧಿಕಾರಯುಕ್ತ ಹೇಳಿಕೆಗಳು ಹೆದರಿಸುವಂಥವುಗಳಾಗಿರಬಲ್ಲವು