“ನಾನು ನಂಬಿಕೆಯನ್ನು ಪಾಲಿಸಿದ್ದೇನೆ”
ಬ್ರೂನೆಲ ಇನ್ಕಾಂಡಿಟಿಯ ಸ್ನೇಹಿತರಿಂದ ಹೇಳಲ್ಪಟ್ಟಂತೆ
“ಶನಿವಾರ ಒಂದು ಅತಿ ನಿಧಾನದ ಮತ್ತು ಏಕಾಂತ ದಿನವಾಗಿತ್ತು. ನಿರಾಶೆ ತಾಳುತ್ತಾ, ನಾನು ಕೋಣೆಯಲ್ಲಿ ಒಬ್ಬಂಟಿಗಳಾಗಿ ಇದ್ದೆ. ಅದು ಒಂದು ಮೊಗಸಾಲೆಯೊಳಗಿಂದ ತೂರಿಕೊಂಡು ಹೋಗುವಂತೆ ಭಾಸವಾಗುತ್ತಿತ್ತು. ಎಲ್ಲವೂ ಚೆನ್ನಾಗಿ ಸಾಗಿತ್ತು, ಮತ್ತು ಥಟ್ಟನೆ ಯಾರೊ ಒಬ್ಬರು ನನ್ನ ಮುಖದೆದುರು ಬಾಗಲನ್ನು ಧಡಾರನೆ ಮುಚ್ಚಿದರು, ಮತ್ತು ನಾನೆಷ್ಟು ಕಷ್ಟಪಟ್ಟು ಪ್ರಯತ್ನಿಸಿದರೂ, ಹೊರಗೆ ಬರುವ ದಾರಿ ಇರಲಿಲ್ಲ.”
ಅತಿರೇಕ ಆಶಾಭಂಗವು 15 ವರ್ಷ ಪ್ರಾಯದ ಬ್ರೂನೆಲ ಇನ್ಕಾಂಡಿಟಿಯ ಹೃದಯವನ್ನು ಅತಿ ಭಾರಗೊಳಿಸಿತ್ತು. ಅವಳ ಯುವ ಜೀವಿತದಲ್ಲಿನ ಅತಿ ಮಹತ್ವದ ದಿನವು ಜಾರಿಹೋಗುತಲ್ತಿತ್ತು. ಆ ವರ್ಷದಾರಂಭದಲ್ಲಿ ಯೆಹೋವನಿಗಾಗಿ ಮತ್ತು ಬೈಬಲಿನೆಡೆಗೆ ಅವಳ ಬೆಳೆಯುವ ಪ್ರೀತಿಯು, ಆತನಿಗೆ ತನ್ನ ಜೀವಿತವನ್ನು ಸಮರ್ಪಿಸುವುದಕ್ಕೆ ಅವಳನ್ನು ಪ್ರೇರೇಪಿಸಿತ್ತು. ಜುಲೈ 1990 ರಲ್ಲಿ, ಕೆನಡದ ಮಾಂಟ್ರಿಯಾಲ್ನಲ್ಲಿ ಯೆಹೋವನ ಸಾಕ್ಷಿಗಳ “ಶುದ್ಧ ಭಾಷೆ” ಜಿಲ್ಲಾ ಅಧಿವೇಶನದಲ್ಲಿ ಅವಳಿಗೆ ದೀಕ್ಷಾಸ್ನಾನವಾಗಲಿಕ್ಕಿತ್ತು. ಬದಲಿಗೆ, ಬ್ರೂನೆಲ ಅವಳ ಉಳಿದ ಜೀವಿತವೆಲ್ಲ ಬಾಳುವ ಒಂದು ನಂಬಿಕೆಯ ಪರೀಕ್ಷೆಯನ್ನು ಬೇಗನೆ ಎದುರಿಸಲಿಕ್ಕಿದ್ದಳು.
ನೀರಿನ ದೀಕ್ಷಾಸ್ನಾನದ ಮೂಲಕ ತನ್ನ ಸಮರ್ಪಣೆಯನ್ನು ಸೂಚಿಸಲು ನಿರೀಕ್ಷಿಸಿದ್ದ ಎರಡು ದಿನ ಮುಂಚಿತವಾಗಿ ತನಗೆ ಲೂಕೀಮಿಯ ರೋಗವಿದ್ದದ್ದು ಬ್ರೂನೆಲಳಿಗೆ ತಿಳಿದುಬಂತು. ಸ್ಥಳಿಕ ಮಕ್ಕಳ ಆಸ್ಪತ್ರೆಯ ಡಾಕ್ಟರರು ಆ ಕೂಡಲೆ ಔಷದೋಪಚಾರವನ್ನು ಪ್ರಾರಂಭಿಸಲು ಬಯಸಿದರು, ಆದುದರಿಂದ ಬ್ರೂನೆಲ ಆಸ್ಪತ್ರೆಯಲ್ಲಿ ಉಳಿದಳು.
ಅವಳ ಸ್ವಂತ ಮಾತುಗಳು ವೈದ್ಯರನ್ನು ಪ್ರೇರಿಸುತ್ತವೆ
ರಕ್ತವು ಯೆಹೋವ ದೇವರಿಗೆ ಪವಿತ್ರವಾದದ್ದೆಂದು ಬ್ರೂನೆಲಳಿಗೆ ತಿಳಿದಿತ್ತು. (ಯಾಜಕಕಾಂಡ 17:11) ತಮ್ಮ ಮಗಳ ಚಿಕಿತ್ಸೆಯಲ್ಲಿ ಯಾವ ರಕ್ತಪೂರಣಗಳೂ ಬಳಸಲ್ಪಡಬಾರದೆಂದು ಅವಳ ಹೆತ್ತವರಾದ ಏಡ್ಮೊಂಡೊ ಮತ್ತು ನಿಕೊಲೆಟ ವಿಧಿಸಿದ್ದರು. “ಅವಳು ಚಿಕ್ಕವಳಾಗಿದ್ದರೂ ಅವಳಿಂದ ಸಹ ಡಾಕ್ಟರುಗಳು ಅದನ್ನು ಆಲಿಸುವಂತೆ ಬ್ರೂನೆಲ ಬಯಸಿದ್ದಳು,” ಎಂದು ಸ್ಮರಿಸಿಕೊಳ್ಳುತ್ತಾನೆ ಅವಳ ತಂದೆ. “‘ರಕ್ತವನ್ನು ವಿಸರ್ಜಿಸ’ಲಿಕ್ಕೆ ಬೈಬಲ್ ಕೊಟ್ಟ ಆಜ್ಞೆಯನ್ನು ಉಲ್ಲಂಘನೆ ಮಾಡುವ ಒಂದು ಚಿಕಿತ್ಸೆಯು ತನಗೆ ಬೇಡವೆಂದು ಆಕೆ ಅವರಿಗೆ ದೃಢವಾಗಿ ಹೇಳಿದಳು.”—ಅ. ಕೃತ್ಯಗಳು 15:20.
ಜುಲೈ 10, 1990 ರಂದು, ಮೂವರು ಡಾಕ್ಟರುಗಳು ಮತ್ತು ಒಬ್ಬಳು ಸಮಾಜ ಸೇವಿಕೆಯು, ಬ್ರೂನೆಲಳ ಹೆತ್ತವರನ್ನು ಮತ್ತು ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯ ಇಬ್ಬರು ಶುಶ್ರೂಷಕರನ್ನು ಭೇಟಿಮಾಡಿದರು. ಬ್ರೂನೆಲಗೆ ತೀವ್ರತರದ ಲೂಕೀಮಿಯವಿದೆಯೆಂದು ರೋಗ ಪರೀಕ್ಷೆಗಳು ದೃಢಪಡಿಸಿದವು. ರೋಗವನ್ನು ಹೋರಾಡುವ ತಮ್ಮ ಯೋಜನೆಗಳನ್ನು ಡಾಕ್ಟರುಗಳು ವಿವರಿಸಿದರು. ಅದು ಉಪಚರಿಸಲು ಅತಿ ಕಷ್ಟವೆಂದು ಅವರು ಔಚಿತ್ಯಜ್ಞಾನದಿಂದ ವರ್ಣಿಸಿದರು. “ಬ್ರೂನೆಲಳ ನಡವಳಿಕೆ ಮತ್ತು ದೇವರಿಗೆ ವಿಧೇಯಳಾಗಲು ದೃಢನಿಶ್ಚಯ ಡಾಕ್ಟರುಗಳ ಮತ್ತು ಸಮಾಜ ಸೇವಿಕೆಯ ಮನಸ್ಸನ್ನು ಸ್ಪರ್ಶಿಸಿತ್ತು. ಅವಳ ಹೆತ್ತವರ ಪ್ರೀತಿಯಿಂದ ಮತ್ತು ಕ್ರೈಸ್ತ ಸಭೆಯ ಸ್ನೇಹಿತರ ಬೆಂಬಲದಿಂದ ಅವರು ಪ್ರಭಾವಿತರಾಗಿದ್ದರು. ಅವರ ಸ್ಥಾನವನ್ನು ನಾವು ತಿಳಿದುಕೊಂಡಿರುವ ಮತ್ತು ಗೌರವಿಸುವ ರೀತಿಯನ್ನು ಸಹ ಅವರು ಗಣ್ಯಮಾಡಿದ್ದರು,” ಎಂಬದಾಗಿ ಸಭೆಯ ಹಿರಿಯರಲ್ಲಿ ಒಬ್ಬನು ನೆನಪಿಸುತ್ತಾನೆ.
ಡಾಕ್ಟರರು ರಕ್ತಪೂರಣವನ್ನು ವರ್ಜಿಸಲು ಯೋಚಿಸಿದರು. ಬ್ರೂನೆಲ ವ್ಯಾಪಕವಾದ ಕೆಮೊತೆರಪಿಯನ್ನು ಪಡೆಯಲಿದ್ದಳು, ಆದರೆ ಎಂದಿಗಿಂತ ಅದು ಕಡಿಮೆ ತೀವ್ರತರದ್ದಾಗಿರಲಿತ್ತು. ಚಿಕಿತ್ಸೆಯಿಂದ ಉಂಟಾಗುವ ರಕ್ತ ಕಣಗಳ ನಷ್ಟವನ್ನು ಇದು ಕಡಿಮೆಗೊಳಿಸುವುದು. “ಡಾಕ್ಟರುಗಳು ಬ್ರೂನೆಲಳ ಶಾರೀರಿಕ, ಮಾನಸಿಕ, ಮತ್ತು ಆತ್ಮಿಕ ಆವಶ್ಯಕತೆಗಳನ್ನು ಪರಿಗಣಿಸಿದರು,” ಎಂದು ವಿವರಿಸುತ್ತಾಳೆ ನಿಕೊಲೆಟ. “ಬಾಲ್ಯಕಾಲದ ಲೂಕೀಮಿಯದ ಅರಕ್ತ ಚಿಕಿತ್ಸೆಯಲ್ಲಿ ಅನುಭವವಿರುವ ಒಬ್ಬ ಪರಿಣತನನ್ನು ಸಂಪರ್ಕಿಸುವಂತೆ ನಾವು ಅವರನ್ನು ಕೇಳಿದಾಗ, ಅವರು ಒಪ್ಪಿದರು.” ಬ್ರೂನೆಲ ಮತ್ತು ಆಸ್ಪತ್ರೆ ಸಿಬ್ಬಂದಿ ವರ್ಗವು ಮಮತೆಯ ಒಂದು ಅನುರಾಗದ ಬಂಧವನ್ನು ರಚಿಸಿಕೊಂಡಿತು.
ಆತ್ಮಿಕ ಗುರಿಗಳು
ಆರಂಭದ ಚಿಕಿತ್ಸೆಯು ಕೆಲವು ಒಳ್ಳೇ ಫಲಿತಾಂಶಗಳನ್ನು ಉತ್ಪಾದಿಸಿದರೂ, ಬ್ರೂನೆಲಳ ವಿಷಮ ಪರೀಕ್ಷೆಯು ಆಗಲೆ ಆರಂಭಿಸ ತೊಡಗಿತ್ತು. ನವಂಬರ 1990 ರೊಳಗೆ ಅವಳ ರೋಗವು ಸ್ವಲ್ಪ ಗುಣವಾಯಿತು, ಆದುದರಿಂದ ವಿಳಂಬವಿಲ್ಲದೆ ಅವಳು ದೀಕ್ಷಾಸ್ನಾನ ಹೊಂದಿದಳು. ದಾಟಿದ ಕೆಲವು ತಿಂಗಳುಗಳ ಕುರಿತು ಪುನರಾಲೋಚಿಸುತ್ತಾ ಬ್ರೂನೆಲ ಒಪ್ಪಿಕೊಂಡದ್ದು: “ಅದು ಎಷ್ಟು ಮಾತ್ರವೂ ಸುಲಭವಾಗಿರಲಿಲ್ಲ. ನಮಗೆ ಬಹಳ ಬಲದ ಅಗತ್ಯವಿದೆ, ಮತ್ತು ನಮಗೆ ಸಕಾರಾತ್ಮಕವಾಗಿ ಯೋಚಿಸುವ ಅಗತ್ಯವಿದೆ. . . . ನನ್ನ ನಂಬಿಕೆಯು ಪರೀಕೆಗ್ಷೆ ಹಾಕಲ್ಪಟ್ಟಿತು, ಆದರೆ ನಾನು ಸ್ಥಿರವಾಗಿ ನಿಂತೆ, ಮತ್ತು ನನಗಿನ್ನೂ ಕ್ರಮದ ಪಯನೀಯರ [ಪೂರ್ಣ ಸಮಯದ ಶುಶ್ರೂಷಕಳು] ಸೇವೆಯನ್ನು ನನ್ನ ಜೀವಿತದ ಕಾರ್ಯವಾಗಿ ಮಾಡುವ ಯೋಜನೆ ಇದೆ.”
ವರ್ಷ 1991ರ ಆರಂಭದಲ್ಲಿ ಬ್ರೂನೆಲಳ ಕಾಯಿಲೆ ಮರುಕೊಳಿಸಿತು. ಕೆಮೊತೆರಪಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವಳು ಬಹಳಮಟ್ಟಿಗೆ ಸತ್ತಳು, ಆದರೆ ಎಲ್ಲರ ಆಶ್ಚರ್ಯಕ್ಕೆ ಮತ್ತು ಸಂತೋಷಕ್ಕೆ, ಅವಳು ಗುಣಹೊಂದಿದಳು. ಆಗಸ್ಟಿನೊಳಗೆ ಅವಳು ಸಹಾಯಕ ಪಯನೀಯರಳಾಗಿ ಬಹಿರಂಗ ಶುಶ್ರೂಷೆಯಲ್ಲಿ ಒಂದು ತಿಂಗಳನ್ನು ಕಳೆಯಲು ಸಾಕಷ್ಟು ಗುಣಹೊಂದಿದ್ದಳು. ಅವಳ ಕಾಯಿಲೆ ಪುನಃ ತೀವ್ರಗೊಂಡಿತು, ಮತ್ತು ನವಂಬರ 1991 ರೊಳಗೆ ಕ್ಯಾನ್ಸರ್ ಅವಳ ದೇಹದ ವಿವಿಧ ಭಾಗಗಳನ್ನು ಆಕ್ರಮಿಸಿತ್ತು. ಇನ್ನೊಂದು ಆಸ್ಪತ್ರೆಯಲ್ಲಿ ಇನ್ನೊಂದು ಡಾಕ್ಟರುಗಳ ತಂಡವು ಅವಳನ್ನು ರೇಡಿಯೇಶನ್ ತೆರಪಿಯಿಂದ ಉಪಚರಿಸಲಾರಂಭಿಸಿತು.
ಅಂಥ ಕಷ್ಟದ ಪರಿಸ್ಥಿತಿಗಳ ಕೆಳಗೂ, ಬ್ರೂನೆಲ ದೃಢಚಿತ್ತಳಾಗಿ ಉಳಿದಳು ಮತ್ತು ತನಗಾಗಿ ಆತ್ಮಿಕ ಗುರಿಗಳನ್ನು ಇಟ್ಟುಕೊಂಡಳು. ಲೂಕೀಮಿಯದ ಕುರಿತು ಮೊದಲಾಗಿ ತಿಳಿದಾಗ, ಕೇವಲ ಆರು ತಿಂಗಳು ಮಾತ್ರ ಬದುಕಬಹುದೆಂದು ಅವಳಿಗೆ ಹೇಳಲಾಯಿತು. ಈಗ, ಬಹುಮಟ್ಟಿಗೆ ಒಂದೂವರೆ ವರ್ಷ ದಾಟಿದ ಮೇಲೆ, ಬ್ರೂನೆಲಳಿನ್ನೂ ಭವಿಷ್ಯತ್ತಿಗಾಗಿ ಯೋಜನೆ ಮಾಡುತ್ತಿದ್ದಳು. “ಅವಳ ಗುರಿಗಳೆಡೆಗೆ ಕ್ರಿಯೆ ನಡಿಸುವುದರಲ್ಲಿ ಅವಳು ಸ್ವಲ್ಪ ಸಮಯವನ್ನೂ ವ್ಯರ್ಥಮಾಡಲಿಲ್ಲ,” ಎಂದು ಹೇಳಿದನು ಸಭೆಯ ಒಬ್ಬ ಹಿರಿಯನು. “ದೇವರ ವಾಗ್ದತ್ತ ಪ್ರಮೋದವನದಲ್ಲಿ ಬ್ರೂನೆಲಳ ನಂಬಿಕೆಯು ಆಕೆಯ ವಿಷಮ ಪರೀಕ್ಷೆಯಲ್ಲಿಲ್ಲಾ ಅವಳನ್ನು ಪೋಷಿಸಿತು. ವಯಸ್ಸಿನಲ್ಲಿ ಚಿಕ್ಕವಳಾಗಿದ್ದಾಗ್ಯೂ ಅವಳು ಕ್ರೈಸ್ತ ಪಕ್ವತೆಗೆ ಬೆಳೆದಳು. ಅವಳ ನಡತೆ ಮತ್ತು ಮನೋಭಾವವು ಸಭೆಯನ್ನು ಪ್ರೇರೇಪಿಸಿತು ಮತ್ತು ಆಸ್ಪತ್ರೆ ಸಿಬ್ಬಂದಿಯನ್ನೂ ಸೇರಿಸಿ ಅವಳನ್ನು ತಿಳಿದಿದ್ದ ಎಲ್ಲರ ಹೃದಯಗಳನ್ನು ಗೆದ್ದಿತ್ತು.” ಅವಳ ತಾಯಿ ಸ್ಮರಿಸಿಕೊಳ್ಳುವುದು: “ಆವಳೆಂದೂ ಗುಣುಗುಟ್ಟಲಿಲ್ಲ. ಅವಳು ಹೇಗಿದ್ದಾಳೆಂದು ಯಾರಾದರೂ ಕೇಳಿದಾಗ, ‘ಚೆನ್ನಾಗಿದ್ದೇನೆ’ ಅಥವಾ, ‘ಸಾಧಾರಣ ಒಳ್ಳೇದಿದ್ದೇನೆ, ನೀವು ಹೇಗಿದ್ದೀರಿ?’ ಎಂದು ಅವಳು ಉತ್ತರಿಸುತ್ತಿದ್ದಳು.”
ಭವಿಷ್ಯತ್ತಿನ ಅಭಯ
ಜುಲೈ 1992 ರಲ್ಲಿ “ಜ್ಯೋತಿ ವಾಹಕ” ಜಿಲ್ಲಾ ಅಧಿವೇಶನವನ್ನು ಹಾಜರಾಗಲು ಬ್ರೂನೆಲ ಯೋಜಿಸಿದಳು. ಆದರೆ, ಅಧಿವೇಶನದ ಸಮಯದೊಳಗೆ, ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು, ಮತ್ತು ಅವಳು ಸಾವನ್ನು ಸಮೀಪಿಸಿದಳ್ದು. ಆದರೂ ಯೆಹೋವನ ದೃಷ್ಟಿಯಲ್ಲಿ ಯಾವುದು ಯೋಗ್ಯವೊ ಅದನ್ನು ಮಾಡುವುದು ಎಂಬ ಡ್ರಾಮವನ್ನು ನೋಡುವ ತೀವ್ರಾಭಿಲಾಷೆಯಿಂದ ಅವಳು ಗಾಲಿಕುರ್ಚಿಯಲ್ಲಿ ಅಧಿವೇಶನಕ್ಕೆ ಹಾಜರಾದಳು.
ಅವಳ ಜೀವಿತದ ಕೊನೆಯ ಕೆಲವು ದಿನಗಳಿಗಾಗಿ ಅವಳು ಮನೆಗೆ ಆಕೆಯ ಕುಟುಂಬಕ್ಕೆ ಹಿಂದಿರುಗಿದಳು. “ಕಡೆಯ ತನಕ ಅವಳು ತನ್ನ ವಿಷಯಕ್ಕಿಂತ ಬೇರೆಯವರ ಕುರಿತು ಹೆಚ್ಚು ಪರಿಗಣನೆ ತೋರಿಸುತ್ತಿದ್ದಳು,” ಅನ್ನುತ್ತಾಳೆ ನಿಕೊಲೆಟ. “ಅವರಿಗೆ ಬೈಬಲನ್ನು ಅಭ್ಯಾಸಿಸಲು ಉತ್ತೇಜನ ಕೊಡುತ್ತಾ, ‘ನಾವು ಪ್ರಮೋದವನದಲ್ಲಿ ಒಟ್ಟಿಗಿರುವೆವು’ ಎನ್ನುತ್ತಿದ್ದಳು.”
ಭೂಮಿಯ ಮೇಲೆ ಪ್ರಮೋದವನದಲ್ಲಿ ಜೀವಿತಕ್ಕಾಗಿ ಒಂದು ಪುನರುತ್ಥಾನದ ತನ್ನ ನಿರೀಕ್ಷೆಯಲ್ಲಿ ದೃಢಳಾಗಿದ್ದು, ಜುಲೈ 27, 1992 ರಲ್ಲಿ ಬ್ರೂನೆಲ ತೀರಿಕೊಂಡಳು. ಅವಳು ತನ್ನ ಗುರಿಗಳನ್ನು ಬೆನ್ನಟಲ್ಟು ಕೇವಲ ಆರಂಭಿಸಿದ್ದಳು, ಆದರೆ ತನ್ನ ಸಮರ್ಪಿತ ವರ್ತನಾ ರೀತಿಯನ್ನು ತನ್ನ ಪುನರುತ್ಥಾನದ ಅನಂತರ ಮುಂದುವರಿಸಲು ಅಕೆ ಯೋಜಿಸಿದಳು. ಅವಳು ತೀರಿಹೋಗುವ ಕೆಲವೇ ದಿನಗಳ ಮುಂಚಿತವಾಗಿ, ಅವಳ ಸ್ಮಾರಕ ಕೂಟದಲ್ಲಿ ಓದಲ್ಪಟ್ಟ ಈ ಕೆಳಗಿನ ಪತ್ರವನ್ನು, ಬ್ರೂನೆಲ ಬರೆದಳು.
“ಪ್ರಿಯ ಸ್ನೇಹಿತರೇ:
“ನೀವು ಬಂದದಕ್ಕಾಗಿ ಉಪಕಾರ. ನಿಮ್ಮ ಉಪಸ್ಥಿತಿ ನನ್ನ ಕುಟುಂಬಕ್ಕೆ ಬಹಳಷ್ಟು ಅರ್ಥವತ್ತಾಗಿರುತ್ತದೆ.
“ನನಗೆ ಆಪ್ತರಾಗಿದ್ದ ಜನರಿಗೆ—ನಾವು ಬಹಳಷ್ಟು ಕಷ್ಟವನ್ನು ಅನುಭವಿಸಿದೆವು. ಕಷ್ಟದ ಸಮಯಗಳು ನಮಗೆ ಬಹಳವಿದ್ದವು, ಆದರೆ ಕೆಲವು ವಿನೋದದ ಅವಧಿಗಳೂ ಇದ್ದವು. ಅದೊಂದು ಕಠಿಣವಾದ ದೀರ್ಘ ಹೋರಾಟವಾಗಿತ್ತು, ಆದರೆ ನಾನು ಸೋತುಹೋದ ಅನಿಸಿಕೆ ನನಗಾಗುವುದಿಲ್ಲ. ಶಾಸ್ತ್ರಗ್ರಂಥದಲ್ಲಿ ಹೇಳುವಂತೆ, ‘ಒಳ್ಳೇ ಹೋರಾಟವನ್ನು ಮಾಡಿದ್ದೇನೆ. ನನ್ನ ಓಟವನ್ನು ಕೊನೆಗಾಣಿಸಿದ್ದೇನೆ, ನಂಬಿಕೆಯನ್ನು ಪಾಲಿಸಿದ್ದೇನೆ.’—2 ತಿಮೊಥೆಯ 4:7, NW.
“ನಾನು ಬಹಳಷ್ಟನ್ನು ಕಲಿತೆನು ಸಹ, ತುಂಬಾ ಬೆಳವಣಿಗೆ ಹೊಂದಿದೆನು, ನನ್ನ ಸುತ್ತಲಿದ್ದವರು ಆ ಬದಲಾವಣೆಯನ್ನು ಕಂಡರು. ತಮ್ಮ ಬೆಂಬಲವನ್ನು ಕೊಟ್ಟ ಆ ಎಲ್ಲಾ ಜನರಿಗೆ ನಾನು ಉಪಕಾರ ಹೇಳಬಯಸುತ್ತೇನೆ.
“ಹೊಸ ವ್ಯವಸ್ಥೆಯಲ್ಲಿ ಮತ್ತು ಯೆಹೋವನಲ್ಲಿ ನಂಬಿಕೆಯಿಡುವವರಾದ ನಿಮಗೆ, ಯೋಹಾನ 5:28, 29 ಹೇಳುವ ಪ್ರಕಾರ, ಒಂದು ಪುನರುತ್ಥಾನವಿದೆಯೆಂದು ಗೊತ್ತಿದೆ. ಆದುದರಿಂದ ಸತ್ಯದಲ್ಲಿ ದೃಢವಾಗಿರ್ರಿ, ಮತ್ತು ನಾವು ಒಬ್ಬರನ್ನೊಬ್ಬರು ಪುನಃ ನೋಡಲು ಶಕ್ತರಾಗಿರುವೆವು.
“ನಾನು ಏನನ್ನು ಅನುಭವಿಸಿದ್ದೆನು ಎಂದು ತಿಳಿದಿರುವ ಆ ಜನರಿಗೆ ನಾನು ಉಪಕಾರ ಹೇಳಬಯಸುತ್ತೇನೆ. ನಿಮಗೆ ಪ್ರತಿಯೊಬ್ಬರಿಗೆ ಒಂದು ದೀರ್ಘ ಅಲಿಂಗನ ಮತ್ತು ಮುದ್ದನ್ನು ನೀಡುತ್ತೇನೆ. ನಿಮ್ಮೆಲ್ಲರನ್ನು ನಾನು ಪ್ರೀತಿಸುತ್ತೇನೆ.”
ಅವಳ ಹರೆಯವಾಗಲಿ ಕಾಯಿಲೆಯಾಗಲಿ ದೇವರಿಗೆ ಅವಳ ಸಮರ್ಪಣೆಯನ್ನು ಮುಂದೂಡುವಂತೆ ಬ್ರೂನೆಲ ಬಿಡಲಿಲ್ಲ. ನಂಬಿಕೆ ಮತ್ತು ದೃಢ ನಿಶ್ಚಯದ ಅವಳ ಮಾದರಿಯು, ಯುವಕರನ್ನೂ ವೃದ್ಧರನ್ನೂ ಒಂದೇ ತೆರನಾಗಿ, ಜೀವಿತದೋಟವನ್ನು ಓಡುವುದರಿಂದ ಅವರನ್ನು ತಡೆಯಬಹುದಾದ ಯಾವುದನ್ನಾದರೂ ತಳ್ಳಿಹಾಕುವಂತೆ ಪ್ರೋತ್ಸಾಹಿಸುತ್ತದೆ.—ಇಬ್ರಿಯ 12:1.