ಮೃತರಾದ ನಿಮ್ಮ ಪ್ರಿಯರು ನೀವು ಅವರನ್ನು ಪುನಃ ನೋಡುವಿರೊ?
ಜಾನ್ನ ತಾಯಿ ಸತ್ತಾಗ, ಅವನು ಕೇವಲ ಒಂಬತ್ತು ವರ್ಷದವನಾಗಿದ್ದನು. ತದನಂತರ, ಶವಸಂಸ್ಕಾರದ ಮನೆಯಲ್ಲಿ ಏನು ಸಂಭವಿಸಿತೆಂದು ಅವನು ಜ್ಞಾಪಿಸಿಕೊಂಡನು: “ನಾನು ಅವಳಿಗಾಗಿ ಒಂದು ಚಿತ್ರವನ್ನು ಬಿಡಿಸಿದೆ ಮತ್ತು ನಮ್ಮೆಲ್ಲರಿಗಾಗಿ ಸ್ವರ್ಗದಲ್ಲಿ ಕಾಯುವಂತೆ ಅವಳನ್ನು ಕೇಳಿಕೊಳ್ಳುವ ಒಂದು ಚಿಕ್ಕ ಟಿಪ್ಪಣಿಯನ್ನು ಅದರ ಮೇಲೆ ಬರೆದೆ. ಅವಳೊಂದಿಗೆ ಹೆಣದ ಪೆಟ್ಟಿಗೆಯಲ್ಲಿ ಅದನ್ನು ಹಾಕುವಂತೆ ನನ್ನ ತಂದೆಗೆ ಅದನ್ನು ಕೊಟ್ಟೆ, ಮತ್ತು ಅವಳು ಸತ್ತಿದ್ದರೂ ಕೂಡ, ನನ್ನಿಂದ ಆ ಕೊನೆಯ ಸಂದೇಶವು ಅವಳಿಗೆ ಸಿಕ್ಕಿತೆಂದು ನೆನಸಲು ನಾನು ಬಯಸುತ್ತೇನೆ.”—ಹೆತ್ತವರಲ್ಲೊಬ್ಬರು ಸತ್ತಾಗ ಹೇಗನಿಸುತ್ತದೆ, (ಇಂಗ್ಲಿಷ್ನಲ್ಲಿ) ಜಿಲ್ ಕ್ರೆಮೆಂಟ್ಸ್ ಬರೆದದ್ದು.
ಜಾನ್ ತನ್ನ ತಾಯಿಯನ್ನು ಬಹಳವಾಗಿ ಪ್ರೀತಿಸಿದನು ಎಂಬ ವಿಷಯದಲ್ಲಿ ಯಾವ ಸಂದೇಹವೂ ಇರಲು ಸಾಧ್ಯವಿಲ್ಲ. ಆಕೆಯ ಒಳ್ಳೆಯ ಗುಣಗಳನ್ನು ವರ್ಣಿಸಿಯಾದ ಬಳಿಕ, ಅವನಂದದ್ದು: “ಬಹುಶಃ ನಕಾರಾತ್ಮಕ ವಿಷಯಗಳ ಕುರಿತು ಜ್ಞಾಪಿಸಿಕೊಳ್ಳಲು ನಾನು ಬಯಸದೆ ಇರಬಹುದು, ಆದರೆ ಆಕೆಯ ಕುರಿತು ಯಾವುದೇ ಕೆಟ್ಟದನ್ನು ಯೋಚಿಸಲು ನನಗೆ ಸಾಧ್ಯವಿಲ್ಲ. ನನ್ನ ಇಡೀ ಜೀವಿತದಲ್ಲಿ ನಾನು ಕಂಡಂತಹ ಅತಿ ಸುಂದರವಾದ ಸ್ತ್ರೀ ಆಕೆಯಾಗಿದ್ದಳು.”
ಜಾನ್ನಂತೆ, ಅನೇಕರಿಗೆ ಮೃತರಾದ ತಮ್ಮ ಪ್ರಿಯರ ಸವಿ ನೆನಪುಗಳಿವೆ ಮತ್ತು ಅವರನ್ನು ಪುನಃ ನೋಡುವ ಭಾವನಾತ್ಮಕ ಅಗತ್ಯವನ್ನು ಅವರು ಒಪ್ಪಿಕೊಳ್ಳುತ್ತಾರೆ. ಕ್ಯಾನ್ಸರ್ನಿಂದ ಸತ್ತ ತನ್ನ 26 ವರ್ಷ ಪ್ರಾಯದ ಮಗನ ಕುರಿತು ಈಡಿತ್ ಹೇಳಿದ್ದು: “ನನ್ನ ಮಗ ಎಲ್ಲಿಯೋ ಅಸ್ತಿತ್ವದಲ್ಲಿದ್ದಾನೆಂದು ನಂಬುವ ಅಗತ್ಯ ನನಗಿದೆ, ಆದರೆ ಎಲ್ಲಿ ಎಂದು ನನಗೆ ಗೊತ್ತಿರುವುದಿಲ್ಲ. ನಾನು ಅವನನ್ನು ಪುನಃ ನೋಡುವೆನೊ? ನನಗೆ ಗೊತ್ತಿರುವುದಿಲ್ಲ, ಆದರೆ ನೋಡುವೆನೆಂದು ನಾನು ನಿರೀಕ್ಷಿಸುತ್ತೇನೆ.”
ನಿಶ್ಚಯವಾಗಿಯೂ, ಸಾಧಾರಣವಾದ ಈ ಮಾನವ ಬಯಕೆಯ ಕುರಿತು ಮನುಷ್ಯನ ಪ್ರೀತಿಪರ ಸೃಷ್ಟಿಕರ್ತನು ಕಲ್ಲೆದೆಯವನಾಗಿರುವುದಿಲ್ಲ. ಆದುದರಿಂದಲೇ ಲಕ್ಷಾಂತರ ಜನರು ಮೃತರಾದ ತಮ್ಮ ಪ್ರಿಯರೊಂದಿಗೆ ಮತ್ತೆ ಸೇರುವ ಸಮಯವು ಬರುವುದೆಂದು ಆತನು ವಾಗ್ದಾನಿಸಿದ್ದಾನೆ. ಸತ್ತವರ ಮುಂಬರುವ ಪುನರುತ್ಥಾನದ ಈ ವಾಗ್ದಾನದ ಬಗ್ಗೆ ಹಲವಾರು ಉಲ್ಲೇಖಗಳು ದೇವರ ವಾಕ್ಯದಲ್ಲಿವೆ.—ಯೆಶಾಯ 26:19; ದಾನಿಯೇಲ 12:2, 13; ಹೋಶೇಯ 13:14; ಯೋಹಾನ 5:28, 29; ಪ್ರಕಟನೆ 20:12, 13.
ಸ್ವರ್ಗಕ್ಕೆ ಪುನರುತ್ಥಾನಗೊಳ್ಳುವವರು ಯಾರು?
ತನ್ನ ಪ್ರೀತಿಯ ತಾಯಿ ಅವನಿಗಾಗಿ ಸ್ವರ್ಗದಲ್ಲಿ ಕಾಯುತ್ತಿರುವಳು ಎಂಬ ಜಾನ್ನ ನಿರೀಕ್ಷೆಯನ್ನು ನಾವು ಪರಿಗಣಿಸೋಣ. ಅನೇಕ ಚರ್ಚ್ಹೋಕರಿಗೆ ಈ ನಿರೀಕ್ಷೆ ಅಥವಾ ವಿಶ್ವಾಸವಿದೆ. ಇಂತಹ ದೃಷ್ಟಿಕೋನಗಳನ್ನು ಬೆಂಬಲಿಸುವ ಪ್ರಯತ್ನದಲ್ಲಿ, ಪಾದ್ರಿಗಳು ಮತ್ತು ಕೆಲವು ಸಮಾಜ ಸೇವಕರು ಬೈಬಲಿನಿಂದ ವಚನಗಳನ್ನು ತಪ್ಪಾಗಿ ಅನ್ವಯಿಸುತ್ತಾರೆ.
ಉದಾಹರಣೆಗೆ, ವಿಯೋಗಿಗಳಿಗೆ ಸಹಾಯ ಮಾಡುವುದರಲ್ಲಿ ಪರಿಣತರಾದ ಡಾ. ಎಲಿಜಾಬೆತ್ ಕುಬ್ಲ್ರ್ ರಾಜ್, ಆನ್ ಚಿಲ್ಡ್ರನ್ ಆ್ಯಂಡ್ ಡೆತ್ (ಇಂಗ್ಲಿಷ್ನಲ್ಲಿ) ಎಂಬ ತನ್ನ ಪುಸ್ತಕದಲ್ಲಿ ಹೇಳಿದ್ದು: “ಸಾಯುವುದೆಂದರೆ, ಒಂದು ಹಳೆಯ ಸವೆದುಹೋದ ಕೋಟನ್ನು ನಾವು ತ್ಯಜಿಸಿಬಿಡುವಂತೆ, ಯಾ ಒಂದು ಕೋಣೆಯಿಂದ ಇನ್ನೊಂದಕ್ಕೆ ಕಾಲಿಟ್ಟಂತೆ, ನಮ್ಮ ದೇಹವನ್ನು ತ್ಯಜಿಸುವುದಾಗಿದೆ. ಪ್ರಸಂಗಿ 12:7 ರಲ್ಲಿ, ನಾವು ಓದುವುದು: ‘ಮಣ್ಣು ಭೂಮಿಗೆ ಸೇರಿ ಇದ್ದ ಹಾಗಾಗುವದು; ಆತ್ಮವು [ಸ್ಪಿರಿಟ್] ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವದು.’ ಯೇಸು ಹೇಳಿದ್ದು: ‘ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡುವೆನು ಯಾಕೆಂದರೆ ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು.’ ಮತ್ತು ಶಿಲುಬೆಯ ಮೇಲಿದ್ದ ಕಳ್ಳನಿಗೆ: ‘ಈಹೊತ್ತೇ ನನ್ನ ಸಂಗಡ ಪರದೈಸಿನಲ್ಲಿರುವಿ.’”
ಮೃತರಾದ ನಮ್ಮ ಪ್ರಿಯರು ಈಗ ಜೀವಂತರಾಗಿದ್ದು ಸ್ವರ್ಗದಲ್ಲಿ ನಮಗಾಗಿ ಕಾಯುತ್ತಿರುವರೆಂದು ಮೇಲಿನ ವಚನಗಳು ನಿಜವಾಗಿಯೂ ಅರ್ಥೈಸುತ್ತವೊ? ಪ್ರಸಂಗಿ 12:7 ರಿಂದ ಆರಂಭಿಸಿ, ವಚನಗಳನ್ನು ನಾವು ಹೆಚ್ಚು ಜಾಗ್ರತೆಯಿಂದ ಪರಿಗಣಿಸೋಣ. ಆ ಮಾತುಗಳನ್ನು ಬರೆದ ವಿವೇಕಿಯು ಅದೇ ಬೈಬಲ್ ಪುಸ್ತಕದಲ್ಲಿ ತಾನು ಈಗಾಗಲೇ ಹೇಳಿದ್ದ ವಿಷಯದ ಪ್ರತಿಹೇಳಲು ಉದ್ದೇಶಿಸಲಿಲ್ಲ ಎಂಬುದು ಸ್ಪಷ್ಟ. ಅವನು ಹೇಳಿದ್ದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” (ಪ್ರಸಂಗಿ 9:5) ಸಾರ್ವತ್ರಿಕವಾಗಿ ಮಾನವಕುಲದ ಮರಣದ ಕುರಿತು ಅವನು ಚರ್ಚಿಸುತ್ತಾ ಇದ್ದನು. ತಮ್ಮ ಮರಣದ ಅನಂತರ ಎಲ್ಲ ವಚನಬದ್ಧ ನಾಸ್ತಿಕರು ಮತ್ತು ಕಠೋರವಾದ ಅಪರಾಧಿಗಳು ದೇವರ ಕಡೆಗೆ ಹಿಂದಿರುಗುತ್ತಾರೆಂದು ನಂಬುವುದು ನ್ಯಾಯವೊ? ನಿಶ್ಚಯವಾಗಿಯೂ ನ್ಯಾಯವಲ್ಲ. ವಾಸ್ತವವಾಗಿ, ನಮ್ಮನ್ನು ನಾವು ಒಳ್ಳೆಯವರೆಂದು ಯಾ ಕೆಟ್ಟವರೆಂದು ಪರಿಗಣಿಸುತ್ತೇವೊ ಇಲ್ಲವೊ ಎಂಬುದನ್ನು ಲಕ್ಷಿಸದೆ, ನಮ್ಮಲ್ಲಿ ಯಾರ ವಿಷಯವಾಗಿಯೂ ಅದನ್ನು ಹೇಳಲು ಸಾಧ್ಯವಿಲ್ಲ. ನಮ್ಮಲ್ಲಿ ಯಾರೂ ದೇವರೊಂದಿಗೆ ಸ್ವರ್ಗದಲ್ಲಿ ಇರದಿದ್ದ ಕಾರಣ, ನಾವು ಆತನ ಕಡೆಗೆ ಹಿಂದಿರುಗುತ್ತೇವೆ ಎಂಬುದಾಗಿ ಹೇಗೆ ಹೇಳಸಾಧ್ಯ?
ಹಾಗಾದರೆ, ಮರಣದಲ್ಲಿ ‘ಆತ್ಮವು ಸತ್ಯ ದೇವರಿಗೆ ಹಿಂದಿರುಗುವುದು’ ಎಂಬುದಾಗಿ ಹೇಳುವ ಮೂಲಕ, ಬೈಬಲ್ ಬರಹಗಾರನು ಏನನ್ನು ಅರ್ಥೈಸಿದನು? “ಪ್ರಾಣ” ಎಂಬುದಾಗಿ ಭಾಷಾಂತರಿಸಲಾದ ಹಿಬ್ರೂ ಪದವನ್ನು ಉಪಯೋಗಿಸುವ ಮೂಲಕ, ಒಬ್ಬ ಮಾನವನನ್ನು ಇನ್ನೊಬ್ಬನಿಂದ ಭೇದಿಸುವ ಯಾವುದೊ ಅಪೂರ್ವವಾದ ವಿಷಯಕ್ಕೆ ಅವನು ಸೂಚಿಸುತ್ತಾ ಇರಲಿಲ್ಲ. ಬದಲಿಗೆ, ಪ್ರಸಂಗಿ 3:19 ರಲ್ಲಿ, ಅದೇ ಪ್ರೇರಿತ ಬೈಬಲ್ ಬರಹಗಾರನು, ಮನುಷ್ಯನಿಗೆ ಮತ್ತು ಪಶುಗಳಿಗೆ “ಎಲ್ಲಕ್ಕೂ ಪ್ರಾಣ ಒಂದೇ” ಎಂಬುದಾಗಿ ವಿವರಿಸಿದನು. “ಪ್ರಾಣ”ವು ಮನುಷ್ಯ ಮತ್ತು ಪಶುಗಳ ಭೌತಿಕ ಶರೀರಗಳನ್ನು ರಚಿಸುವ ಕಣಗಳಲ್ಲಿರುವ ಜೀವ ಶಕ್ತಿ ಎಂದವನು ಅರ್ಥೈಸಿದ್ದು ಸ್ಪಷ್ಟ. ಈ ಪ್ರಾಣವನ್ನು ನಾವು ದೇವರಿಂದ ನೇರವಾಗಿ ಪಡೆಯಲಿಲ್ಲ. ಅದು ನಮಗೆ ನಾವು ಗರ್ಭದಲ್ಲಿ ರೂಪಗೊಂಡು ತದನಂತರ ಜನಿಸಿದಾಗ, ನಮ್ಮ ಮಾನವ ಹೆತ್ತವರ ಮೂಲಕ ಸಾಗಿಸಲ್ಪಟ್ಟಿತು. ಇನ್ನೂ ಹೆಚ್ಚಾಗಿ, ಮರಣವು ಸಂಭವಿಸಿದಾಗ ಈ ಪ್ರಾಣವು ಅಕ್ಷರಾರ್ಥಕವಾಗಿ ಬಾಹ್ಯಾಕಾಶದ ಮುಖಾಂತರ ಪ್ರಯಾಣಿಸಿ ದೇವರ ಕಡೆಗೆ ಹಿಂದಿರುಗುವುದಿಲ್ಲ. ‘ಆತ್ಮವು ಸತ್ಯ ದೇವರಿಗೆ ಹಿಂದಿರುಗುವುದು’ ಎಂಬ ಅಭಿವ್ಯಕ್ತಿಯು, ಒಬ್ಬ ಸತ್ತ ವ್ಯಕ್ತಿಯ ಭವಿಷ್ಯತ್ತಿನ ಜೀವಿತದ ಪ್ರತೀಕ್ಷೆಗಳು ಈಗ ದೇವರಲ್ಲಿವೆ ಎಂಬುದನ್ನು ಅರ್ಥೈಸುವ ಒಂದು ರೂಪಕವಾಗಿದೆ. ಆತನು ಯಾರನ್ನು ಜ್ಞಾಪಿಸಿಕೊಳ್ಳುವನು ಮತ್ತು ಕಟ್ಟಕಡೆಗೆ ಪುನರುತ್ಥಾನಗೊಳಿಸುವನು ಎಂಬದನ್ನು ನಿರ್ಧರಿಸುವುದು ಆತನಿಗೆ ಬಿಟ್ಟಿದೆ. ಇದನ್ನು ಬೈಬಲ್ ಕೀರ್ತನೆ 104:29, 30 ರಲ್ಲಿ ಎಷ್ಟು ಸ್ಪಷ್ಟವಾಗಿಗಿ ತೋರಿಸುತ್ತದೆ ಎಂಬುದನ್ನು ಸ್ವತಃ ನೀವೇ ಗಮನಿಸಿರಿ.
ಕ್ರಿಸ್ತನ ನಂಬಿಗಸ್ತ ಹಿಂಬಾಲಕರ ಒಂದು ಸೀಮಿತ ಸಂಖ್ಯೆಯು, ಒಟ್ಟು 1,44,000 ಮಾತ್ರ ಸ್ವರ್ಗೀಯ ಜೀವಿತಕ್ಕೆ ದೇವರ ಆತ್ಮಿಕ ಪುತ್ರರಂತೆ ಪುನರುತ್ಥಾನಗೊಳಿಸಲ್ಪಡುವರೆಂದು ಯೆಹೋವ ದೇವರು ಉದ್ದೇಶಿಸಿದ್ದಾನೆ. (ಪ್ರಕಟನೆ 14:1, 3) ಭೂಮಿಯ ಮೇಲೆ ಮಾನವಕುಲದ ಆಶೀರ್ವಾದಕ್ಕಾಗಿ ಇವರು ಕ್ರಿಸ್ತನೊಂದಿಗೆ ಸ್ವರ್ಗೀಯ ಸರಕಾರವನ್ನು ರಚಿಸುತ್ತಾರೆ.
ಇದರ ಕುರಿತು ಕಲಿತವರಲ್ಲಿ ಪ್ರಥಮರು ಯೇಸುವಿನ ನಂಬಿಗಸ್ತ ಅಪೊಸ್ತಲರಾಗಿದ್ದರು. ಅವರಿಗೆ ಅವನಂದದ್ದು: “ನನ್ನ ತಂದೆಯ ಮನೆಯಲ್ಲಿ ಬಹಳ ಬಿಡಾರಗಳು ಅವೆ; ಇಲ್ಲದಿದ್ದರೆ ನಿಮಗೆ ಹೇಳುತ್ತಿದ್ದೆನು; ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗುತ್ತೇನಲ್ಲಾ. ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಯಾಕಂದರೆ ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು.” (ಯೋಹಾನ 14:2, 3) ಆ ಅಪೊಸ್ತಲರು ಮತ್ತು ಇತರ ಆದಿ ಕ್ರೈಸ್ತರು ಸತ್ತರು ಮತ್ತು ಸ್ವರ್ಗೀಯ ಪುನರುತ್ಥಾನದ ಪ್ರತಿಫಲವನ್ನು ಕೊಡಲಿಕ್ಕಾಗಿ ಯೇಸುವಿನ ಬರೋಣದ ವರೆಗೆ ಅವರು ಮರಣದಲ್ಲಿ ಪ್ರಜ್ಞಾಹೀನರಾಗಿ ಕಾಯಬೇಕಿತ್ತು. ಆದುದರಿಂದಲೇ, ಪ್ರಥಮ ಕ್ರೈಸ್ತ ಹುತಾತ್ಮನಾದ ಸೆಫ್ತನನು, “ಮರಣದಲ್ಲಿ ನಿದ್ರೆಹೋದನು” ಎಂಬುದಾಗಿ ನಾವು ಓದುತ್ತೇವೆ.—ಅ. ಕೃತ್ಯಗಳು 7:60, NW; 1 ಥೆಸಲೊನೀಕ 4:13.
ಭೂಮಿಯ ಮೇಲೆ ಜೀವಿತಕ್ಕೆ ಪುನರುತ್ಥಾನ
ಆದರೆ ತನ್ನೊಂದಿಗೆ ಸತ್ತ ಅಪರಾಧಿಗೆ ಯೇಸು ಕೊಟ್ಟ ವಾಗ್ದಾನದ ಕುರಿತೇನು? ಭೂಮಿಯ ಮೇಲೆ ಒಂದು ರಾಜ್ಯವನ್ನು ಸ್ಥಾಪಿಸಿ ಯೆಹೂದ್ಯ ಜನಾಂಗಕ್ಕೆ ಶಾಂತಿ ಮತ್ತು ಭದ್ರತೆಯನ್ನು ಪುನಃಸ್ಥಾಪಿಸುವ ಒಬ್ಬ ಮೆಸ್ಸೀಯನನ್ನು ದೇವರು ಕಳುಹಿಸುವನೆಂದು, ಆ ಸಮಯದ ಅನೇಕ ಯೆಹೂದ್ಯರಂತೆ ಈ ಮನುಷ್ಯನು ನಂಬಿದನು. (1 ಅರಸು 4:20-25ನ್ನು ಲೂಕ 19:11; 24:21 ಮತ್ತು ಅ. ಕೃತ್ಯಗಳು 1:6 ರೊಂದಿಗೆ ಹೋಲಿಸಿ.) ಇನ್ನೂ ಹೆಚ್ಚಾಗಿ, ರಾಜನಾಗಿರುವಂತೆ ದೇವರ ಮೂಲಕ ಆರಿಸಲ್ಪಟ್ಟವನು ಯೇಸುವೇ ಆಗಿದ್ದನೆಂದು ಆ ದುಷ್ಟನು ನಂಬಿಕೆಯನ್ನು ವ್ಯಕ್ತಪಡಿಸಿದನು. ಆದರೂ, ಆ ಗಳಿಗೆಯಲ್ಲಿ, ಮರಣದಂಡನೆಯಾಗಿರುವ ಮನುಷ್ಯನಂತೆ ಯೇಸುವಿನ ಆಸನ್ನ ಮರಣವು, ಇದನ್ನು ಅಸಂಭವನೀಯವಾಗಿ ತೋರುವಂತೆ ಮಾಡಿತು. ಆದುದರಿಂದ ಈ ಮಾತುಗಳಿಂದ ತನ್ನ ವಾಗ್ದಾನವನ್ನು ಸಾದರಪಡಿಸುವ ಮೂಲಕ, ಯೇಸು ಅಪರಾಧಿಗೆ ಭರವಸೆಯನ್ನು ನೀಡಿದನು: “ಈಹೊತ್ತೇ ನಿನಗೆ ಸತ್ಯವಾಗಿ ಹೇಳುತ್ತೇನೆ, ನನ್ನ ಸಂಗಡ ನೀನು ಪ್ರಮೋದವನ [ಪರದೈಸ] ದಲ್ಲಿರುವಿ.”—ಲೂಕ 23:42, 43, NW.
“ಟುಡೇ” ಎಂಬ ಪದದ ಮೊದಲು ಒಂದು ಅಲ್ಪವಿರಾಮ ಚಿಹ್ನೆಯನ್ನು ಸೇರಿಸುವ ಇಂಗ್ಲಿಷ್ ಭಾಷೆಯ ಬೈಬಲ್ ಭಾಷಾಂತರಗಳು, ಯೇಸುವಿನ ಮಾತುಗಳನ್ನು ತಿಳಿದುಕೊಳ್ಳಲು ಬಯಸುವ ಜನರಿಗೆ ಒಂದು ಸಮಸ್ಯೆಯನ್ನು ಸೃಷ್ಟಿಸುತ್ತವೆ. ಅದೇ ದಿನ ಯೇಸು ಯಾವುದೇ ಪರದೈಸಿಗೆ ಹೋಗಲಿಲ್ಲ. ಬದಲಿಗೆ, ದೇವರು ಅವನನ್ನು ಪುನರುತ್ಥಾನಗೊಳಿಸುವ ತನಕ ಮೂರು ದಿನಗಳ ವರೆಗೆ ಅವನು ಮರಣದಲ್ಲಿ ಪ್ರಜ್ಞಾಹೀನನಾಗಿದ್ದನು. ಯೇಸುವಿನ ಪುನರುತ್ಥಾನ ಮತ್ತು ಸ್ವರ್ಗಾರೋಹಣದ ಅನಂತರವೂ, ಮಾನವಕುಲದ ಮೇಲೆ ರಾಜನಾಗಿ ಅವನು ಆಳುವ ಸಮಯ ಬರುವ ತನಕ ಅವನ ತಂದೆಯ ಬಲಗಡೆಯಲ್ಲಿ ಅವನು ಕಾಯಬೇಕಿತ್ತು. (ಇಬ್ರಿಯ 10:12, 13) ಬೇಗನೆ, ಯೇಸುವಿನ ರಾಜ್ಯಾಳುವಿಕೆಯು ಮಾನವಕುಲಕ್ಕೆ ಪರಿಹಾರವನ್ನು ತರುವುದು ಮತ್ತು ಇಡೀ ಭೂಮಿಯನ್ನು ಒಂದು ಪ್ರಮೋದವನವಾಗಿ ಮಾರ್ಪಡಿಸುವುದು. (ಲೂಕ 21:10, 11, 25-31) ಆ ಅಪರಾಧಿಯನ್ನು ಭೂಮಿಯ ಮೇಲೆ ಜೀವಿತಕ್ಕೆ ಪುನರುತ್ಥಾನಗೊಳಿಸುವ ಮೂಲಕ ಅವನಿಗೆ ಮಾಡಿದ ವಾಗ್ದಾನವನ್ನು ಯೇಸು ನೆರವೇರಿಸುವನು. ದೇವರ ನೀತಿಯ ನಿಯಮಗಳಿಗೆ ಹೊಂದಾಣಿಕೆಯಲ್ಲಿ ಅವನ ಜೀವನ ಶೈಲಿಯನ್ನು ತರುವ ಅಗತ್ಯವನ್ನು ಸೇರಿಸಿ, ಆ ಮನುಷ್ಯನ ಎಲ್ಲ ಅಗತ್ಯಗಳಿಗೆ ಯೇಸು ನೆರವು ನೀಡುವ ಅರ್ಥದಲ್ಲಿ ಅವನು ಆ ಮನುಷ್ಯನೊಂದಿಗೆ ಇರುವನು.
ಅನೇಕರ ಪುನರುತ್ಥಾನ
ಪಶ್ಚಾತಾಪ್ತಪಟ್ಟ ಆ ಅಪರಾಧಿಯ ಹಾಗೆ, ಅನೇಕ ಮಾನವರ ಪುನರುತ್ಥಾನವು ಇಲ್ಲಿ—ಭೂಮಿಯ ಮೇಲೆ ಸಂಭವಿಸುವುದು. ಮನುಷ್ಯನನ್ನು ಸೃಷ್ಟಿಸುವುದರಲ್ಲಿ ದೇವರ ಉದ್ದೇಶದೊಂದಿಗೆ ಇದು ಹೊಂದಾಣಿಕೆಯಲ್ಲಿದೆ. ಪ್ರಥಮ ಪುರುಷ ಮತ್ತು ಸ್ತ್ರೀಯು ಒಂದು ಪ್ರಮೋದವನದಲ್ಲಿ ಇರಿಸಲ್ಪಟ್ಟರು ಮತ್ತು ಭೂಮಿಯನ್ನು ವಶಮಾಡಿಕೊಳ್ಳುವಂತೆ ಹೇಳಲ್ಪಟ್ಟರು. ಅವರು ದೇವರಿಗೆ ವಿಧೇಯರಾಗಿ ಉಳಿದಿದ್ದರೆ, ಅವರು ಎಂದಿಗೂ ವೃದ್ಧರಾಗಿ ಸಾಯುತ್ತಿರಲಿಲ್ಲ. ದೇವರ ತಕ್ಕ ಸಮಯದಲ್ಲಿ, ಇಡೀ ಭೂಮಿಯು ವಶಪಡಿಸಿಕೊಳ್ಳಲ್ಪಟ್ಟು, ಆದಾಮ ಮತ್ತು ಅವನ ಪರಿಪೂರ್ಣ ಸಂತತಿಯವರಿಂದ ಭೌಗೋಲಿಕ ಪ್ರಮೋದವನವಾಗಿ ಮಾಡಲ್ಪಡುತ್ತಿತ್ತು.—ಆದಿಕಾಂಡ 1:28; 2:8, 9.
ಹಾಗಿದ್ದರೂ, ಆದಾಮ ಮತ್ತು ಹವ್ವರು ಉದ್ದೇಶಪೂರ್ವಕವಾಗಿ ಪಾಪಮಾಡಿದ ಕಾರಣ, ಅವರು ತಮ್ಮ ಮೇಲೆ ಮತ್ತು ತಮ್ಮ ಮುಂದಿನ ಸಂತಾನದ ಮೇಲೆ ಮರಣವನ್ನು ತಂದುಕೊಂಡರು. (ಆದಿಕಾಂಡ 2:16, 17; 3:17-19) ಆದುದರಿಂದಲೇ ಬೈಬಲ್ ಹೇಳುವುದು: “ಒಬ್ಬ ಮನುಷ್ಯ [ಆದಾಮ] ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”—ರೋಮಾಪುರ 5:12.
ಪಿತ್ರಾರ್ಜಿತವಾಗಿ ಪಡೆದ ಪಾಪದಿಂದ ಮುಕ್ತವಾಗಿ ಜನಿಸಿದ ಏಕೈಕ ಮಾನವನಿದ್ದನು. ಅವನು ದೇವರ ಪರಿಪೂರ್ಣ ಮಗನಾದ ಯೇಸು ಕ್ರಿಸ್ತನಾಗಿದ್ದನು. ಅವನ ಜೀವವು ಪರಲೋಕದಿಂದ ಯೆಹೂದ್ಯ ಕನ್ಯೆಯಾದ ಮರಿಯಳ ಗರ್ಭಕ್ಕೆ ವರ್ಗಾಯಿಸಲ್ಪಟ್ಟಿತ್ತು. ಯೇಸು ಪಾಪರಹಿತನಾಗಿ ಉಳಿದನು ಮತ್ತು ಕೊಲ್ಲಲ್ಪಡಲು ಅರ್ಹನಾಗಿರಲಿಲ್ಲ. ಆದುದರಿಂದ, ಅವನ ಮರಣಕ್ಕೆ “ಲೋಕದ ಪಾಪ”ದ ಪರವಾಗಿ ಪ್ರಾಯಶ್ಚಿತವ್ತಾಗಿಸುವ ಮೌಲ್ಯವಿದೆ. (ಯೋಹಾನ 1:29; ಮತ್ತಾಯ 20:28) ಆದುದರಿಂದಲೇ ಯೇಸು ಹೀಗೆ ಹೇಳಬಹುದಿತ್ತು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು.”—ಯೋಹಾನ 11:25.
ಆದುದರಿಂದ, ಹೌದು, ಮೃತರಾದ ನಿಮ್ಮ ಪ್ರಿಯರೊಂದಿಗೆ ಪುನರ್ಮಿಲನವಾಗುವ ಪ್ರತೀಕ್ಷೆಯನ್ನು ನೀವು ಆದರಿಸಬಲ್ಲಿರಿ, ಆದರೆ ನಿಮ್ಮ ವಿಮೋಚಕನೋಪಾದಿ ಯೇಸುವಿನಲ್ಲಿ ನಂಬಿಕೆಯನ್ನು ಪ್ರದರ್ಶಿಸುವಂತೆ ಮತ್ತು ದೇವರ ನೇಮಿತ ರಾಜನೋಪಾದಿ ಅವನಿಗೆ ವಿಧೇಯರಾಗುವಂತೆ ಇದು ಅವಶ್ಯಪಡಿಸುತ್ತದೆ. ಬೇಗನೆ ದೇವರ ರಾಜ್ಯವು ಈ ಭೂಮಿಯಿಂದ ಎಲ್ಲ ಕೆಟ್ಟತನವನ್ನು ತೆಗೆದುಹಾಕುವುದು. ಅದರ ಆಳಿಕೆಗೆ ಅಧೀನರಾಗಲು ನಿರಾಕರಿಸುವ ಎಲ್ಲ ಮಾನವರು ನಾಶಮಾಡಲ್ಪಡುವರು. ಆದರೆ, ದೇವರ ರಾಜ್ಯದ ಪ್ರಜೆಗಳು ಬದುಕಿ ಉಳಿಯುವರು ಮತ್ತು ಈ ಭೂಮಿಯನ್ನು ಒಂದು ಪ್ರಮೋದವನವಾಗಿ ರೂಪಾಂತರಿಸುವ ಕಾರ್ಯದಲ್ಲಿ ತಮ್ಮನ್ನು ಮಗ್ನರಾಗಿಸಿಕೊಳ್ಳುವರು.—ಕೀರ್ತನೆ 37:10, 11; ಪ್ರಕಟನೆ 21:3-5.
ಆಗ ಪುನರುತ್ಥಾನವನ್ನು ಆರಂಭಿಸುವ ರೋಮಾಂಚಕ ಸಮಯವು ಬರುವುದು. ಸತ್ತವರನ್ನು ಮತ್ತೆ ಸ್ವಾಗತಿಸಲು ನೀವು ಅಲ್ಲಿರುವಿರೊ? ಅದೆಲ್ಲವೂ ನೀವು ಈಗ ಮಾಡುವುದರ ಮೇಲೆ ಅವಲಂಬಿಸಿದೆ. ಆತನ ಮಗನಾದ ಯೇಸು ಕ್ರಿಸ್ತನ ಮೂಲಕ ಯೆಹೋವನ ರಾಜ್ಯದ ಆಳಿಕೆಗೆ ಈಗ ಅಧೀನರಾಗುವವರೆಲ್ಲರಿಗೆ ಅದ್ಭುತವಾದ ಆಶೀರ್ವಾದಗಳು ಕಾದಿವೆ.