ಅವರು ನಮಗೋಸ್ಕರ ಒಂದು ಮಾದರಿಯನ್ನು ಇಟ್ಟರು
ಕ್ರೇಗ್ ಜ್ಯಾಂಕರ್ರಿಂದ ಹೇಳಲ್ಪಟ್ಟಂತೆ
ಎಂಟು ವರುಷಗಳಿಂದ ನನ್ನ ಹೆಂಡತಿ, ಗೇಲ್ ಮತ್ತು ನಾನು ಪಯನೀಯರರಾಗಿ—ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕರಾಗಿ—ಇದ್ದೇವೆ. ಕಳೆದ ಆರು ವರುಷಗಳಿಂದ, ಆಸ್ಟ್ರೇಲಿಯದ ಒಂಟಿ ಗ್ರಾಮಾಂತರ ಪ್ರದೇಶದಲ್ಲಿನ ಮೂಲನಿವಾಸೀ ಜನರ ಮಧ್ಯೆ ನಾವು ಸೇವೆ ಸಲ್ಲಿಸುತ್ತಿದ್ದೇವೆ. ನಾವು ಕೇವಲ, ನನ್ನ ಹೆತ್ತವರಿಂದ ಮತ್ತು ಅಜ್ಜ ಅಜ್ಜಿಯರಿಂದ ನಮಗಾಗಿ ಇಡಲ್ಪಟ್ಟ ಉತ್ತಮ ಮಾದರಿಯನ್ನು ಅನುಸರಿಸುತ್ತಿದ್ದೇವೆ.
ವಿಶೇಷವಾಗಿ ನಿಮಗೆ ನಾನು ನನ್ನ ಅಜ್ಜ ಅಜಿಯ್ಜ ಕುರಿತು ತಿಳಿಸಬಯಸುತ್ತೇನೆ. ನಾವು ಯಾವಾಗಲೂ ಅವರನ್ನು ವಾತ್ಸಲ್ಯದಿಂದ, ಅಜ್ಜ ಮತ್ತು ಅಜ್ಜಿ ಪದಕ್ಕೆ ಡಚ್ ಭಾಷೆಯ ಸಮಾನರ್ಥವುಳ್ಳ, ಓಪಾ ಮತ್ತು ಓಮಾ ಎಂದು ಕರೆದೆವು. ನನ್ನ ಅಜ್ಜ, ಚಾರ್ಲ್ಸ್ ಹ್ಯಾರಿಸ್, ತಾವು ಸಾಧಾರಣ 50 ವರುಷ ಜೀವಿಸುತ್ತಿದ್ದ ಮೆಲ್ಬರ್ನ್ನಲ್ಲಿ ಇನ್ನೂ ಆಸಕ್ತಿಯಿಂದ ಸೇವಿಸುತ್ತಿದ್ದಾರೆ.
ಬೈಬಲ್ ಸತ್ಯಗಳನ್ನು ಕಲಿಯುವುದು
ಆಸ್ಟ್ರೇಲಿಯದ ದ್ವೀಪ ರಾಜ್ಯವಾದ ಟಾಸ್ಮೇನಿಯದಲ್ಲಿ ಒಂದು ಸಣ್ಣ ಪಟ್ಟಣದಲ್ಲಿ ಓಪಾ ಜನಿಸಿದರು. ಇಸವಿ 1924 ರಲ್ಲಿ ಅವರು 14 ವಯಸ್ಸಿನವರಾಗಿದ್ದಾಗ, ಅವರ ತಂದೆಯು ಒಂದು ಹರಾಜಿನಲ್ಲಿ ನಾವಿಕನ ಸಾಮಾನಿನ ಪೆಟ್ಟಿಗೆಯನ್ನು ಕೊಂಡರು. ಆತ್ಮಿಕವಾಗಿ ಹೇಳುವಲ್ಲಿ, ಅದೊಂದು ನಿಜ ಖಜಾನೆಯ ಪೆಟ್ಟಿಗೆಯಾಗಿ ಪರಿಣಮಿಸಿತು, ಯಾಕಂದರೆ ಅದರೊಳಗೆ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಮೊದಲ ಅಧ್ಯಕ್ಷರಾದ ಚಾರ್ಲ್ಸ್ ಟೇಜ್ ರಸಲರಿಂದ ಬರೆಯಲ್ಪಟ್ಟ ಪುಸ್ತಕಗಳ ಒಂದು ಕಟ್ಟು ಇತ್ತು.
ಓಪಾರ ತಂದೆಗೆ ಆ ಪುಸ್ತಕಗಳಲ್ಲಿ ವಿಶೇಷ ಆಸಕ್ತಿ ಇರಲಿಲ್ಲವೆಂದು ಕಾಣುತ್ತದೆ, ಆದರೆ ಓಪಾ ಅವುಗಳನ್ನು ಓದಲಾರಂಭಿಸಿದರು ಮತ್ತು ಅವುಗಳಲ್ಲಿ ಪ್ರಮುಖ ಬೈಬಲ್ ಸತ್ಯಗಳಿವೆ ಎಂದು ಕೂಡಲೆ ಗುರುತಿಸಿದರು. ಆದುದರಿಂದ ಅವರು, ಈಗ ಯೆಹೋವನ ಸಾಕ್ಷಿಗಳೆಂದು ಪ್ರಸಿದ್ಧವಾಗಿರುವ ಆ ಪುಸ್ತಕಗಳ ಪ್ರಕಾಶಕರ ಪ್ರತಿನಿಧಿಗಳಾದ, ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳನ್ನು ಹುಡುಕಲು ಪ್ರಾರಂಭಿಸಿದರು. ಕಲಿಯುತ್ತಿರುವ ಬೈಬಲ್ ಸತ್ಯಗಳ ಹೆಚ್ಚಿನ ವಿವರಣೆಗಳನ್ನು ಪಡೆಯಶಕ್ತರಾಗುವಂತೆ ಅವರೊಂದಿಗೆ ಮಾತಾಡಲು ಬಯಸಿದರು.
ಅನೇಕ ವಿಚಾರಣೆಗಳನ್ನು ಮಾಡಿದ ಅನಂತರ ಅವರು, ಇತರರನ್ನು ಬೋಧಿಸುವುದರಲ್ಲಿ ಸಕ್ರಿಯುರಾಗಿದ್ದ ಮೂವರು ವಯಸ್ಸಾದ ಸ್ತ್ರೀಯರನ್ನು ಕಂಡುಕೊಂಡರು. ಅವರು ಯುವ ಚಾರ್ಲ್ಸ್ರ ಮೇಲೆ ಪ್ರಚಂಡ ಪ್ರಭಾವ ಬೀರಿದರು. ಕಟ್ಟಕಡೆಗೆ, 1930 ರಲ್ಲಿ, ಅವರು ಯೆಹೋವನಿಗೆ ಸಮರ್ಪಿಸಿಕೊಂಡರು ಮತ್ತು ನೀರಿನ ದೀಕ್ಷಾಸ್ನಾನ ಪಡೆದರು. ಅವರು ತಮ್ಮ ಕಟುಕನ ಕೆಲಸಕ್ಕೆ ರಾಜಿನಾಮೆ ಕೊಟ್ಟರು ಮತ್ತು ಉತ್ತರದ ಸಿಡ್ನಿಗೆ ಪ್ರಯಾಣಿಸಿ ಅಲ್ಲಿ ಪೂರ್ಣ ಸಮಯದ ಸೌವಾರ್ತಿಕರೋಪಾದಿ ಒಂದು ನೇಮಕವನ್ನು ಪಡೆದರು.
ಆಸ್ಟ್ರೇಲಿಯದಲ್ಲಿ ಪಯನೀಯರ ಸೇವೆ
ಅನಂತರದ ಕೆಲವು ವರುಷಗಳವರೆಗೆ, ಚಾರ್ಲ್ಸ್ರ ಸಾರುವ ಟೆರಿಟೊರಿಗಳಲ್ಲಿ ಸಿಡ್ನಿಯ ಬಾಂಡೈಯ ಸಮುದ್ರಬದಿಯ ಉಪನಗರ ಮತ್ತೂ ನ್ಯೂ ಸೌತ್ ವೇಲ್ಸ್ ರಾಜ್ಯದಲ್ಲಿನ ಗ್ರಾಮಾಂತರ ಪ್ರದೇಶಗಳೂ ಸೇರಿದ್ದವು. ಅನಂತರ ಅವರಿಗೆ ಖಂಡದ ಇನ್ನೊಂದು ಬದಿ, ಸಾವಿರಾರು ಕಿಲೋಮೀಟರ್ ದೂರ, ಪಶ್ಚಿಮ ಆಸ್ಟ್ರೇಲಿಯದ ಪರ್ತ್ಗೆ ನೇಮಕವಾಯಿತು. ಅವರು ಆರು ತಿಂಗಳು ಪರ್ತಿನ ವ್ಯಾಪಾರ ಕ್ಷೇತ್ರದಲ್ಲಿ ಸಾಕ್ಷಿಯನ್ನಿತ್ತರು, ಮತ್ತು ಅನಂತರ ಅವರು, ಇತರ ಇಬ್ಬರು ಪಯನೀಯರರ ಜೊತೆಗೆ, ವಾಯುವ್ಯ ಆಸ್ಟ್ರೇಲಿಯದ ದೂರ ದೂರವಾಗಿ ಚೆದರಿರುವ ಜನಸಂಖ್ಯೆಯ ಪ್ರದೇಶಕ್ಕೆ ನೇಮಿಸಲ್ಪಟ್ಟರು.
ಈ ಮೂವರ ತಂಡದ—ಆರ್ಥರ್ ವಿಲಿಸ್, ಜಾರ್ಜ್ ರೋಲ್ಸ್ಟನ್, ಮತ್ತು ಚಾರ್ಲ್ಸ್—ಸಾರುವ ನೇಮಕವು ಇಟೆಲಿಯ ಗಾತ್ರದ ನಾಲ್ಕು ಪಟ್ಟು ಪ್ರದೇಶವಾಗಿತ್ತು! ಜನಸಂಖ್ಯೆಯು ವಿರಳವಾಗಿತ್ತು, ಗ್ರಾಮೀಣ ಪ್ರದೇಶವು ಬಂಜರಾಗಿತ್ತು, ಮತ್ತು ಶೆಖೆಯು ಗಾಢವಾಗಿತ್ತು. ಕೆಲವೊಮ್ಮೆ ದನಕರುಗಳ ನೆಲೆ ಎಂದು ತಿಳಿದಿರುವ, ಪಶುಪಾಲನ ಕ್ಷೇತ್ರಗಳ ನಡುವೆ 500 ಕಿಲೋಮೀಟರ್ಗಳಿಗಿಂತಲೂ ಹೆಚ್ಚು ಪ್ರಯಾಣಿಸುವುದು ಅವಶ್ಯವಾಗಿತ್ತು. ಅವರು ಬಳಸಿದ್ದ ವಾಹನವು 1930ರ ಮಟ್ಟಗಳಲಿಯ್ಲು ಕೂಡ, ಶಿಥಿಲಾವಸ್ಥೆಯದ್ದಾಗಿತ್ತು, ಆದರೆ ಅವರಲ್ಲಿ ಬಲವಾದ ನಂಬಿಕೆ ಮತ್ತು ಬಹಳಷ್ಟು ದೃಢ ಮನಸ್ಸಿತ್ತು.
ಕಿರಿದಾದ, ಮಡಕೆಯಾಕಾರದ ಕುಳಿಗಳಿರುವ ಮಣ್ಣುರಸ್ತೆ ಒಂಟೆ ಹಾದಿಗಳಿಂದ ಅಡ್ಡ ಹಾಯುತ್ತಿದ್ದವು, ಮತ್ತು (ಬುಲ್ಡಸ್ಟ್ ಎಂದು ಕರೆಯಲ್ಪಡುವ) ಸೂಕ್ಷ್ಮ ಧೂಳು ಹಲವೆಡೆ ಅಪಾಯಕರ ಮರದ ಮೋಟುಗಳನ್ನು ಮರೆಮಾಡಿತ್ತು. ವಾಹನದ ಸ್ಪ್ರಿಂಗುಗಳು ಅನೇಕಬಾರಿ ಮುರಿಯುತ್ತಿದ್ದುದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಹಿಂದಿನ ಇರಚು ಎರಡು ಸಂದರ್ಭಗಳಲ್ಲಿ ಸೀಳಲ್ಪಟ್ಟಿತು, ಮತ್ತು ಟಯರುಗಳು ಅನೇಕಬಾರಿ ಕತ್ತರಿಸಲ್ಪಟ್ಟವು. ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿರಲು, ಪಯನೀಯರರು ಅನೇಕ ಬಾರಿ ಹಳೇ ಟಯರುಗಳಿಂದ ಇರುವ ಟಯರುಗಳಿಗೆ ಒಳ ಪದರಗಳನ್ನು ಮಾಡಿ ಬೋಲ್ಟಿನಿಂದ ಅವುಗಳನ್ನು ಭದ್ರಪಡಿಸಿದರು.
ನಾನು ಕೇವಲ ಹುಡುಗನಾಗಿದ್ದಾಗ, ಅಂಥ ಕಷ್ಟಮಯ ಪರಿಸ್ಥಿತಿಗಳಲ್ಲಿ ಮುಂದಕ್ಕೆ ಹೋಗುವಂತೆ ಅವರನ್ನು ಉತ್ತೇಜಿಸಿದ್ದು ಯಾವುದೆಂದು ನಾನು ಓಪಾಗೆ ಕೇಳಿದೆನು. ಅವರು ವಿವರಿಸಿದ್ದು, ಅವರು ಇತರರಿಂದ ಒಂಟಿಯಾಗಿದ್ದ ಸಂದರ್ಭಗಳಲ್ಲಿ ಅವರಿಗೆ ಯೆಹೋವನೊಂದಿಗೆ ಸಾಮೀಪ್ಯತೆ ಇತ್ತು. ಕೆಲವೊಮ್ಮೆ ಯಾವುದು ಶಾರೀರಿಕ ಕಷ್ಟದೆಸೆಯಾಗಿತ್ತೋ ಅದು ಆತ್ಮಿಕ ಆಶೀರ್ವಾದವಾಯಿತು ಎಂದವರು ಹೇಳಿದರು.
ಎಷ್ಟೋ ಜನರು ಪ್ರಾಪಂಚಿಕ ಸ್ವತ್ತುಗಳನ್ನು ಶೇಖರಿಸುವುದರಲ್ಲಿ ಅತಿಯಾಗಿ ಚಿಂತಿತರಾಗಿರುವಂತೆ ಕಾಣುವುದರ ಕುರಿತು, ಹೆಚ್ಚುಗಾರಿಕೆಯ ಯಾ ಸ್ವನೀತಿಯ ಯಾವುದೇ ಸುಳಿವು ಇಲ್ಲದೆ, ಓಪಾ ಆಶ್ಚರ್ಯವನ್ನು ವ್ಯಕ್ತಪಡಿಸಿದರು. ಅವರು ನನಗೆ ನೆನಪಿಸಿದ್ದು, “ಅತಿ ಕಡಮೆ ಗಂಟುಮೂಟೆಗಳಿದ್ದರೆ ಜೀವನದಲ್ಲಿ ಹೆಚ್ಚು ಉತ್ತಮವಾಗಿ ಪ್ರಯಾಣಿಸಬಹುದು. ಯೇಸುವು ಅವಶ್ಯವಿದ್ದಾಗ ನಕ್ಷತ್ರಗಳ ಕೆಳಗೆ ಮಲಗಲು ಇಷ್ಟಪಟ್ಟಿರುವುದಾದರೆ, ನಮ್ಮ ನೇಮಕವು ಅದನ್ನು ಅವಶ್ಯಪಡಿಸುವಲ್ಲಿ ಅದನ್ನೇ ಮಾಡಲು ನಾವು ಸಂತೋಷಿಗಳಾಗಬೇಕು.” (ಮತ್ತಾಯ 8:19, 20) ಮತ್ತು, ಅವರು ಮತ್ತು ಅವರ ಜೊತೆಗಾರರು ಅದನ್ನೇ ಮಾಡಿದರು.
ಒಂದು ಪರ ಕ್ಷೇತ್ರಕ್ಕೆ ಆಮಂತ್ರಿಸಲ್ಪಟ್ಟದ್ದು
ಇಸವಿ 1935 ರಲ್ಲಿ, ಒಂದು ಹೊಸ ಸಾರುವ ನೇಮಕವು—ದಕ್ಷಿಣ ಶಾಂತ ಸಾಗರದ ದ್ವೀಪ ನಿವಾಸಿಗಳಿಗೆ ಸಾಕ್ಷಿ ಕೊಡಲು—ಓಪಾಗೆ ದೊರಕಿತು. ಇತರ ಆರು ನಾವಿಕರ ತಂಡದೊಂದಿಗೆ, ಅವರು ವಾಚ್ ಟವರ್ ಸೊಸೈಟಿಯ 52 ಅಡಿ ಉದ್ದದ ಲೈಟ್ಬೇರರ್ ಹಾಯಿ ಹಡಗಿನಲ್ಲಿ ಸಮುದ್ರ ಪ್ರಯಾಣಕ್ಕೆ ಹೊರಟರು.
ಒಮ್ಮೆ, ಉತ್ತರ ಆಸ್ಟ್ರೇಲಿಯದ ಹವಳ ಸಮುದ್ರಲ್ಲಿದ್ದಾಗ, ಲೈಟ್ಬೇರರಿನ ಸಹಾಯಕ ಯಂತ್ರವು ಕೆಟ್ಟಿತು. ಏನೂ ಗಾಳಿಯೂ ಇರಲಿಲ್ಲ, ಹೀಗೆ ಅವರು ಭೂಮಿಯಿಂದ ಅನೇಕ ಕಿಲೋಮೀಟರ್ಗಳಷ್ಟು ದೂರ ಸಿಕ್ಕಿಕೊಂಡರು. ಗ್ರೇಟ್ ಬ್ಯಾರಿಯರ್ ರೀಫ್ ಮೇಲೆ ಹಡಗು ಒಡೆತದ ಅಪಾಯವಿದ್ದರೂ, ಓಪಾ ಪರಮ ಪ್ರಶಾಂತತೆಯ ಮೂಲಕ ಪ್ರಭಾವಿತರಾದರು. ಅವರು ತಮ್ಮ ದಿನಚರಿಯಲ್ಲಿ ಬರೆದದ್ದು, “ಸಮುದ್ರವು ತೀರಾ ಪ್ರಶಾಂತವಾಗಿತ್ತು, ಆ ಪ್ರಶಾಂತ ಸಮುದ್ರದ ಮೇಲೆ ಪ್ರತಿಯೊಂದು ಸಂಜೆ ಸೂರ್ಯಾಸ್ತಮಾನವನ್ನು ನಾನು ಎಂದಿಗೂ ಮರೆಯಲಾರೆ. ಆ ನೋಟವು ಎಷ್ಟೊಂದು ಸುಂದರವಾಗಿತ್ತೆಂದರೆ ಅದು ನನ್ನ ನೆನಪಿನಲ್ಲಿ ನಿತ್ಯಕ್ಕಾಗಿ ಅಚ್ಚೊತ್ತಲ್ಪಟ್ಟಿದೆ.”
ಸಂತೋಷಕರವಾಗಿ, ಅವರು ದಿಬ್ಬದ ಮೇಲೆ ತೇಲುವ ಮುಂಚೆ, ಗಾಳಿಯು ಹಿಂದಿರುಗಿತು, ಮತ್ತು ಅವರು ಹಾಯಿಗಳನ್ನು ಹರಡಿ ಪ್ಯಾಪುವ ನ್ಯೂ ಗಿನೀಯ ಪೋರ್ಟ್ ಮೋರ್ಸ್ಬಿಯೊಳಗೆ ಸುರಕ್ಷಿತವಾಗಿ ಪ್ರಯಾಣಿಸಿದರು ಮತ್ತು ಅಲ್ಲಿ ಅವರು ಯಂತ್ರವನ್ನು ದುರಸ್ತುಗೊಳಿಸಿದರು. ಮೋರ್ಸ್ಬಿ ಪೋರ್ಟ್ನಿಂದ ಅವರು ತರ್ಜ್ಡೇ ದ್ವೀಪಕ್ಕೆ ಮತ್ತು ಅನಂತರ ಇಂಡೊನೀಷದ ದೊಡ್ಡ ದ್ವೀಪವಾದ ಜಾವಾಕ್ಕೆ ಸಾಗಿದರು. “ಭೂಮಧ್ಯ ರೇಖೆಯ ಅಡವ್ಡಾಗಿ ಕಟ್ಟಿದ ಹವಳದ ಸರ”ವೆಂದು ವರ್ಣಿಸಲಾಗಿರುವ ಈ ದೇಶಕ್ಕಾಗಿ ಓಪಾ ಆಳವಾದ ಪ್ರೀತಿಯನ್ನು ಬೆಳೆಸಿದರು. ಆ ಸಮಯದಲ್ಲಿ, ಇಂಡೊನೀಷವು ಡಚ್ ವಸಾಹತು ಆಗಿತ್ತು, ಆದುದರಿಂದ ಅಜ್ಜ ಡಚ್ ಮತ್ತು ಇಂಡೊನೀಷನ್ ಎರಡೂ ಭಾಷೆಗಳನ್ನು ಕಲಿತರು. ಆದಾಗ್ಯೂ, ಅವರು ತಮ್ಮ ಸಾರುವ ಚಟುವಟಿಕೆಯಲ್ಲಿ ನೀಡಿದ ಸಾಹಿತ್ಯವು ಐದು ಭಾಷೆಗಳಲ್ಲಿದ್ದವು: ಡಚ್, ಇಂಡೊನೀಷನ್, ಚೈನಿಸ್, ಇಂಗ್ಲಿಷ್ ಮತ್ತು ಆ್ಯರಬಿಕ್.
ಬೈಬಲ್ ಸಾಹಿತ್ಯವನ್ನು ನೀಡುವುದರಲ್ಲಿ ಓಪಾ ಅತ್ಯಂತ ಯಶಸ್ವಿಯಾಗಿದ್ದರು. ಒಮ್ಮೆ ಬಟೇವಿಯದಲ್ಲಿನ ವಾಚ್ ಟವರ್ ಉಗ್ರಾಣದ ಮೇಲ್ವಿಚಾರಕನಾದ ಕೆಮ್ಲ್ ಡೇಶಾನರು, ನಮ್ಮ ಸಾರುವ ಕೆಲಸವನ್ನು ಸೂಕ್ಷ್ಮವಾಗಿ ನೋಡಿಕೊಳ್ಳುತ್ತಿದ್ದ ಒಬ್ಬ ಡಚ್ ಅಧಿಕಾರಿಯ ಮುಂದೆ ಕರೆಯಲ್ಪಟ್ಟರು. “ಪೂರ್ವ ಜಾವದಲ್ಲಿ ನಿಮ್ಮವರು ಎಷ್ಟು ಮಂದಿ ಕೆಲಸಮಾಡುತ್ತಾರೆ?” ಎಂದು ಆ ಅಧಿಕಾರಿಯು ವಿಚಾರಿಸಿದನು.
“ಕೇವಲ ಒಬ್ಬರು,” ಎಂದುತ್ತರಿಸಿದರು ಸಹೋದರ ಡೇಶಾನ್.
“ನಾನದನ್ನು ನಂಬಬೇಕೆಂದು ನೀನು ನಿರೀಕ್ಷಿಸುತ್ತಿಯೊ?” ಒದರಿದನು ಆ ಅಧಿಕಾರಿ. “ಎಲ್ಲಾಕಡೆಗಳಲ್ಲಿ ವಿತರಿಸಲ್ಪಟ್ಟ ನಿಮ್ಮ ಸಾಹಿತ್ಯದ ಮೊತ್ತದಿಂದ ತೀರ್ಮಾನಿಸುವಲ್ಲಿ, ಖಂಡಿತವಾಗಿ ಒಂದು ಸೈನ್ಯದಷ್ಟು ಕೆಲಸಗಾರರು ನಿಮಗಲ್ಲಿ ಇರಬೇಕು!”
ಅದು ಅವರ ಜೀವಿತದ ಅತೀ ತೃಪ್ತಿಕರ ಅಭಿನಂದನೆಗಳಲ್ಲಿ ಒಂದಾಗಿತ್ತೆಂದು ಓಪಾ ಭಾವಿಸುತ್ತಾರೆ. ಅದಕ್ಕೆ ಅವರು ನಿಶ್ಚಯವಾಗಿಯೂ ಅರ್ಹರಾಗಿದ್ದರು, ಯಾಕಂದರೆ ಪ್ರತಿಯೊಂದು ತಿಂಗಳಲ್ಲಿ 1,500 ರಿಂದ 3,000 ಸಾಹಿತ್ಯದ ಪ್ರತಿಗಳನ್ನು ನೀಡುವುದು ಅವರಿಗೆ ಅಸಮಾನ್ಯವಾಗಿರಲಿಲ್ಲ.
ಮದುವೆ, ನಿಷೇಧ, ಮತ್ತು ಯುದ್ಧ
ದಶಂಬರ 1938 ರಲ್ಲಿ, ಓಪಾ, ನನ್ನ ಅಜಿಯ್ಜಾದ, ವಿಲ್ಹೆಲ್ಮೀನ ಎಂಬ ಹೆಸರಿನ ಒಬ್ಬ ಯುವ ಇಂಡೊನೀಷನ್ ಸ್ತ್ರೀಯನ್ನು ಮದುವೆಯಾದರು. ಓಮಾ, ಯಾ ಅಜಿಯ್ಜು, ದಯಾಳು, ಶಾಂತಳು, ಉದ್ಯೋಗಶೀಲಳು, ಮತ್ತು ಮೃದು ಭಾಷಿಯಾಗಿದಳ್ದು. ನನಗೆ ಇದು ಗೊತ್ತು, ಯಾಕಂದರೆ ನನ್ನ ಬಾಲ್ಯಾವಸ್ಥೆಯಲ್ಲಿ ಅವರು ನನ್ನ ಸಮೀಪ ಸ್ನೇಹಿತರಾಗಿದ್ದರು.
ಅವರ ಮದುವೆಯ ಅನಂತರ ಓಪಾ ಮತ್ತು ಓಮಾ ಜೊತೆಯಾಗಿ ಪಯನೀಯರ್ ಸೇವೆಯನ್ನು ಮುಂದುವರಿಸಿದರು. ಅಷ್ಟರೊಳಗೆ ಲೈಟ್ಬೇರರ್ನ ಇತರ ನಾವಿಕ ಸದಸ್ಯರು ಲೋಕದ ಇತರ ಭಾಗಗಳಿಗೆ ಚೆದರಿದ್ದರು ಇಲ್ಲವೇ ಮನೆಗೆ ಹಿಂತಿರುಗಿದ್ದರು. ಆದರೆ ಓಪಾ ಇಂಡೊನೀಷವನ್ನು ತನ್ನ ಮನೆಯಾಗಿ ಮಾಡಿಕೊಂಡರು, ಮತ್ತು ಉಳಿದುಕೊಳ್ಳಲು ದೃಢ ಮನಸ್ಸಿನವರಾಗಿದ್ದರು.
ಎರಡನೇ ಲೋಕ ಯುದ್ಧ ಹತ್ತರಿಸಿದಂತೆ, ಇಂಡೊನೀಷವನ್ನು ಆಳುತ್ತಿದ್ದ, ಮತ್ತು ವೈದಿಕರ ಒತ್ತಡದ ಕೆಳಗೆ ಕಾರ್ಯನಿರ್ವಹಿಸುತ್ತಿದ್ದ ಡಚ್ ಸರಕಾರವು, ಯೆಹೋವನ ಸಾಕ್ಷಿಗಳ ಚಟುವಟಿಕೆಯ ಮೇಲೆ ನಿರ್ಬಂಧವನ್ನಿಡಲಾರಂಭಿಸಿ, ಕಟ್ಟಕಡೆಗೆ ನಮ್ಮ ಕೆಲಸವನ್ನು ನಿಷೇಧಿಸಿತು. ಹೀಗೆ ಸಾರುವಿಕೆಯು ಬೈಬಲನ್ನು ಮಾತ್ರ ಉಪಯೋಗಿಸಿ, ಕಷ್ಟದಿಂದ ಮಾಡಲ್ಪಟ್ಟಿತು. ಓಪಾ ಮತ್ತು ಓಮಾ ಸಂದರ್ಶಿಸಿದ ಸಾಮಾನ್ಯ ಎಲ್ಲಾ ಪಟ್ಟಣಗಳಲ್ಲಿ, ಅವರು ಅಧಿಕಾರಿಗಳ ಮುಂದೆ ಬಲವಂತದಿಂದ ಎಳೆದೊಯ್ಯಲ್ಪಟ್ಟರು ಮತ್ತು ಪ್ರಶ್ನೆ ಹಾಕಿ ಪರೀಕ್ಷಿಸಲ್ಪಟ್ಟರು. ಅವರನ್ನು ಪಾತಕಿಗಳಂತೆ ನೋಡಿಕೊಳ್ಳಲಾಯಿತು. ನಿಷೇಧವು ಬಂದ ಸ್ವಲ್ಪ ಸಮಯದೊಳಗೆ ಓಮಾರ ಭಾವ ಅವರ ಕ್ರೈಸ್ತ ತಾಟಸ್ಥ್ಯದ ಕಾರಣ ಜೈಲಿಗೆ ಹಾಕಲ್ಪಟ್ಟರು. ಅವರು ಒಂದು ಡಚ್ ಸೆರೆಮನೆಯಲ್ಲಿ ಮೃತರಾದರು.
ಓಪಾ ಮತ್ತು ಓಮಾ ವಾಸದ ಚಾವಣಿ ಕೂಡಿಸಲ್ಪಟ್ಟಿರುವ ಟ್ರಕ್ಕಿನಲ್ಲಿ ವಾಸಿಸಿದರು. ಈ ಸಾಗಣೆಯ ಮನೆಯನ್ನು ಬಳಸಿ, ಅವರು ಜಾವಾದ ಎಲ್ಲಾ ಕಡೆ ಸಾರಿದರು. ಇಸವಿ 1940 ರಲ್ಲಿ ಜಪಾನೀ ಸೈನಿಕರ ಅತಿಕ್ರಮಣದ ಬೆದರಿಕೆಯು ಕಾಣಿಸಿಕೊಂಡಾಗ, ಅವರು ನನ್ನ ತಾಯಿಯಾಗಿ ಪರಿಣಮಿಸಿದ ಒಬ್ಬ ಮಗಳಿಂದ ಆಶೀರ್ವದಿಸಲ್ಪಟ್ಟರು. ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಆಗಿನ ಅದ್ಯಕ್ಷರಾದ ಜೆ. ಎಫ್. ರಧರ್ಫೋರರ್ಡ ಮೂಲಕ ಎರಡು ವರುಷಗಳ ಹಿಂದೆ ಕೊಡಲ್ಪಟ್ಟ ಭಾಷಣದ ಮುಖ್ಯ ವಿಷಯವನ್ನಾಧಾರಿಸಿ, ಅವರು ಆ ಮಗುವಿಗೆ ವಿಕ್ಟರಿ ಎಂದು ನಾಮಕರಣ ಮಾಡಿದರು. ಮಗುವಿನ ಜನನದ ಸಮಯದಲ್ಲಿಯೂ ಅವರು ಪಯನೀಯರ್ ಸೇವೆಯನ್ನು ಮುಂದುವರಿಸಿದರು.
ಇಸವಿ 1942ರ ಆರಂಭದಲ್ಲಿ, ಓಪಾ, ಓಮಾ, ಮತ್ತು ವಿಕ್ಟರಿ, ಬೋರ್ನಿಯೊದಿಂದ ಹಿಂದಿರುಗುತ್ತಿದ್ದ ಒಂದು ಡಚ್ ಸಾಮಾನು ಹಡಗಿನಲ್ಲಿದ್ದಾಗ ಜಪಾನಿ ಯುದ್ಧನೌಕೆಯಿಂದ ಬಂದೂಕಿನ ಒಂದು ದೊಡ್ಡ ಸಿಡಿತವಾಯಿತು. ಎಲ್ಲಾ ಬೆಳಕುಗಳು ಆರಿದವು, ಮತ್ತು ಜನರು ಚೀತ್ಕರಿಸಿದರು. ಈ ವಿಧದಲ್ಲಿ ಯುದ್ಧವು ನನ್ನ ಕುಟುಂಬದ ಜೀವಿತಗಳನ್ನು ಪ್ರವೇಶಿಸಿತು. ಅವರು ಬಂದರಿಗೆ ಸುರಕ್ಷಿತವಾಗಿ ತಲುಪಲ್ಪಟ್ಟರೂ, ಜಪಾನೀಯರು ಕೆಲವೇ ದಿನಗಳ ಅನಂತರ ಜಾವಾವನ್ನು ಕ್ರಮಿಸಿದರು, ಮತ್ತು ಒಬ್ಬ ಡಚ್ ಅಧಿಕಾರಿಯು ಜಪಾನಿ ಸೈನಿಕರಿಗೆ, ಓಪಾ ಮತ್ತು ಓಮಾರ ಪತ್ತೆಯನ್ನು ಹೊರಗೆಡಹಿದನು.
ಜಪಾನೀಯರು ಅವರನ್ನು ಕಂಡುಹಿಡಿದಾಗ, ಚಿಕ್ಕ ವಿಕ್ಟರಿಯ ಆಟಿಕೆಗಳನ್ನೂ ಸೇರಿಸಿ, ಅವರ ಎಲ್ಲ ಸ್ವತ್ತುಗಳನ್ನು ಕಸಿದುಕೊಂಡರು, ಮತ್ತು ಎರಡು ವಿವಿಧ ಕೂಟ ಶಿಬಿರಗಳಿಗೆ ಕೊಂಡೊಯ್ದರು. ವಿಕ್ಟರಿಯನ್ನು ಓಮಾರೊಂದಿಗಿರಲು ಬಿಟ್ಟರು, ಮತ್ತು ಓಪಾ ಮುಂದಿನ ಮೂರುವರೆ ವರ್ಷಗಳವರೆಗೆ ಅವರನ್ನು ನೋಡಲಿಲ್ಲ.
ಕೂಟ ಶಿಬಿರಗಳಲ್ಲಿ ಜೀವನ
ಅವರು ಪ್ರದೇಶ ನಿರ್ಬಂಧದಲ್ಲಿದ್ದಾಗ, ಓಪಾ—ಸುರಬಾಯದಿಂದ ಎನ್ಗಾವೀಗೆ, ಬಾಂಡುಂಗಿಗೆ, ಮತ್ತು ಅಂತಿಮವಾಗಿ ಚಿಮಾಹಿಗೆ—ಪಟ್ಟಣದಿಂದ ಪಟ್ಟಣಕ್ಕೆ ವರ್ಗಾಯಿಸಲ್ಪಟ್ಟರು. ಒಂದು ಸಂಘಟಿತ ಪಲಾಯನ ಯೋಜನೆಯ ಯಾವುದೇ ಯತ್ನವನ್ನು ಕೆಡಿಸಲು ಇವು ಸತತ ಸ್ಥಳಾಂತರಗಳಾಗಿದ್ದವು. ಕೊಂಚ ಬ್ರಿಟಿಷ್ ಮತ್ತು ಕೆಲವು ಆಸ್ಟ್ರೇಲಿಯದವರೊಂದಿಗೆ, ಹೆಚ್ಚಾಗಿ ಕೈದಿಗಳು ಡಚ್ಚರಾಗಿದ್ದರು. ಅವರು ಇನ್ನೂ ಕೆಲವೊಮ್ಮೆ ಬಳಸುತ್ತಿರುವ ಕೌಶಲವಾದ, ಕ್ಷೌರಿಕ ಉದ್ಯೋಗವನ್ನು ಓಪಾ ಶಿಬಿರಗಳಲ್ಲಿರುವಾಗ ಕಲಿತರು. ಅವರು ಇಡಲು ಅನುಮತಿಸಲ್ಪಟ್ಟ ಒಂದೇ ಧಾರ್ಮಿಕ ಪುಸ್ತಕವು ಬೈಬಲಾಗಿತ್ತು—ಅವರ ಕಿಂಗ್ ಜೇಮ್ಸ್ ವರ್ಷನ್.
ಅದೇ ಸಮಯದಲ್ಲಿ, ಓಮಾ ಮತ್ತು ವಿಕ್ಟರಿಯನ್ನೂ ಶಿಬಿರದಿಂದ ಶಿಬಿರಕ್ಕೆ ಸ್ಥಳಾಂತರಿಸಲಾಗುತ್ತಿತ್ತು. ಈ ಶಿಬಿರಗಳಲ್ಲಿ ಸ್ತ್ರೀಯರು “ಸಮಾಜ ಸೇವೆ”ಗಳಿಗಾಗಿ ಹೊರಗೆ ಸೇವೆ ಮಾಡುವಂತೆ ಶಿಬಿರದ ಅಧಿಪತಿಯಿಂದ ಹೇಳಲ್ಪಡುತ್ತಿದ್ದರು. ಆದಾಗ್ಯೂ, ಯಾವುದೋ ಕಾರಣಕ್ಕಾಗಿ, ಓಮಾ ಎಂದೂ ಆರಿಸಲ್ಪಡಲಿಲ್ಲ. ಜಪಾನೀ ಸೈನಿಕರಿಗಾಗಿ ಸೂಳೆಯರಂತೆ ವರ್ತಿಸಲು ಸ್ತ್ರೀಯರು ಒಯ್ಯಲ್ಪಡುತ್ತಿದ್ದರೆಂದು ಅನಂತರ ಅವರು ತಿಳಿದುಕೊಂಡರು.
ಜಪಾನೀ ಸೈನಿಕರು ಹೆಣ್ಣು ಮಕ್ಕಳನ್ನು ಮೆಚ್ಚುತ್ತಿರಲಿಲ್ಲವಾದುದರಿಂದ, ಓಮಾ ವಿಕ್ಟರಿಯನ್ನು ಯಾವಾಗಲೂ ಹುಡುಗನ ಉಡುಪಿನಲ್ಲಿಟ್ಟರು ಮತ್ತು ಅವಳ ಕೂದಲನ್ನು ಮೊಟಕಾಗಿಡುತ್ತಿದ್ದರು. ಶಿಬಿರದ ಅಧಿಪತಿಯು ವಿಕ್ಟರಿ ಎಂಬ ಹೆಸರು ಏನನ್ನು ಸೂಚಿಸುತ್ತದೆ—ವಿಜಯ (ವಿಕ್ಟರಿ) ಸಾಮ್ರಾಜ್ಯದ ಜಪಾನೀ ಸೈನ್ಯಕ್ಕೋ ಯಾ ಅಮೆರಿಕದವರಿಗೋ?—ಎಂದು ತಿಳಿಯಬಯಸಿದಾಗ ದೊಡ್ಡ ಸಮಸ್ಯೆಯನ್ನುಂಟು ಮಾಡಿತು.
“ಭೂಮಿಯ ಎಲ್ಲಾ ಸರಕಾರಗಳ ಮೇಲೆ ದೇವರ ರಾಜ್ಯಕ್ಕೆ ವಿಜಯ!” ಎಂದು ನನ್ನ ಆಜ್ಜಿ ಹೆಮ್ಮೆಯಿಂದ ಉತ್ತರಿಸಿದರು.
“ಜಪಾನೀ ಸಾಮ್ರಾಜ್ಯದ ಸೈನ್ಯಕ್ಕೆ ವಿಜಯ,” ಎಂದು ಹೇಳಲು ನಿರಾಕರಿಸಿದ್ದಕ್ಕೆ ಶಿಕ್ಷೆಯಾಗಿ, ಓಮಾ ಮತ್ತು ಆಕೆಯ ಐದು ವರುಷದ ಮಗಳಿಗೆ, ಉಷ್ಣವಲಯದ ಪ್ರಜ್ವಲಿಸುವ ಸೂರ್ಯನ ಕೆಳಗೆ ಎಂಟು ತಾಸುಗಳ ವರೆಗೆ ನೆಟ್ಟಗೆ ಮತ್ತು ಸಾವಧಾನವಾಗಿ ನಿಲ್ಲಲು ಬಲವಂತ ಮಾಡಲಾಯಿತು. ನೆರಳಿಲ್ಲ, ನೀರಿಲ್ಲ, ಕುಳಿತುಕೊಳ್ಳಲಿಕ್ಕಿಲ್ಲ, ಜೋಲುವಿಕೆಯಿಲ್ಲ. ಆದರೆ ಯೆಹೋವನ ಸಹಾಯದಿಂದ ಅವರು ಈ ಅತಿ ಭಯಂಕರವಾದ ಕಠಿನ ಪರೀಕ್ಷೆಯನ್ನು ಪಾರಾದರು.
ಓಮಾರ ಪ್ರದೇಶ ನಿರ್ಬಂಧದ ಒಂದು ವರುಷದ ಅನಂತರ, ಶಿಬಿರದ ಅಧಿಪತಿಯು ಅವರ ಗಂಡನು ಸತ್ತನೆಂದು ಅವರಿಗೆ ಹೇಳಿದನು! ದುಃಖವಿದ್ದರೂ, ಅವರು ಖಿನ್ನತೆಯಿಂದ ಅವರ ಜಜ್ಜಲ್ಪಟ್ಟ ಉಡುಪಿನ ಪೆಟ್ಟಿಗೆಯ ತಳದಲ್ಲಿ ಓಪಾರ ಚಿತ್ರವನ್ನು ಇಟ್ಟು, ಮುಂದುವರಿದರು.
ಸೆರೆಮನೆ-ಶಿಬಿರದ ಜೀವನವು ಕಷ್ಟಮಯವಾಗಿತ್ತು. ಮೊದಲೂಟಕ್ಕಾಗಿ ಒಂದು ಕಪ್ ಮರ ಗೆಣಸು, ಮಧ್ಯಾಹ್ನದ ಊಟಕ್ಕಾಗಿ 190 ಗ್ರಾಮ್ಗಳಷ್ಟು ಸಬ್ಬಕ್ಕಿಯಿಂದ ಮಾಡಿದ ರೊಟ್ಟಿ, ಮತ್ತು ಸಂಜೆಯೂಟಕ್ಕೆ ತರಕಾರಿಯ ನೀರಿನಂತಹ ಸಾರಿನಲ್ಲಿ ಬೇಯಿಸಿದ ಒಂದು ಕಪ್ ಅನ್ನವು ಪ್ರತಿಯೊಬ್ಬ ವ್ಯಕ್ತಿಗೆ ದಿನನಿತ್ಯದ ಪಡಿತರಗಳಾಗಿದ್ದವು. ಅಂಥಾ ಅತ್ಯಲ್ಪ ಪಡಿತರಗಳಿಂದಾಗಿ, ನ್ಯೂನಪೋಷಣೆಯು ಸಾಮಾನ್ಯವಾಗಿತ್ತು, ಮತ್ತು ಅಮಶಂಕೆಗೆ ಬಲಿಯಾದವರು ದಿನಾಲು ಸಾಯುತ್ತಿದ್ದರು.
ಓಪಾರ ಪ್ರದೇಶ ನಿರ್ಬಂಧದ ಸಮಯದಲ್ಲಿ, ಅವರು ಚರ್ಮ ಬಿರಿಯುವ ವ್ಯಾಧಿ ಮತ್ತು ಪೋಷಕಾಂಶದ ಬಾತುಕೊಳ್ಳುವಿಕೆಯನ್ನು (ಉಪವಾಸ ಅನಾರೋಗ್ಯತೆ) ಅನುಭವಿಸಿದರು. ಸಣ್ಣ ಹುಡುಗಿಯು ಹೊಟ್ಟೆಗಿಲ್ಲದೆ ಸಾಯುವುದನ್ನು ತಡೆಯಲಿಕ್ಕಾಗಿ ಓಮಾ ಅನೇಕಬಾರಿ ಅವರ ಆಹಾರವನ್ನು ವಿಕ್ಟರಿಗೆ ಕೊಟ್ಟದ್ದರಿಂದ, ಅವರು ಕೂಡ ಮರಣಕ್ಕೆ ಹತ್ತಿರವಾಗಿದ್ದರು. ಕ್ರೂರತೆ ಮತ್ತು ಉಪವಾಸವು ಸಂತತ ಸಂಗಾತಿಗಳಾದುವು. ಅವರ ದೇವರಾದ ಯೆಹೋವನಿಗೆ ಸಮೀಪ ಇಟ್ಟುಕೊಳ್ಳುವುದರ ಮೂಲಕ ಮಾತ್ರ ಅವರು ಪಾರಾಗಲು ಸಾಧ್ಯವಾಯಿತು.
ಓಪಾರ ಒಂದು ಮೆಚ್ಚಿನ ಹೇಳಿಕೆಯು ನನಗೆ ಒಳ್ಳೇದಾಗಿ ನೆನಪುಂಟು: “ದೈವಿಕನಾದ, ಯೆಹೋವನೊಂದಿಗೆ ಹೊಂದಿಕೆಯಲ್ಲಿರುವುದು ಸ್ವತಂತ್ರತೆಯಾಗಿದೆ.” ಹೀಗೆ, ನಿರ್ದಯ ಸೆರೆಮನೆವಾಸವನ್ನು ತಾಳಿಕೊಂಡಿರುವಾಗಲೂ ಓಪಾ ತನ್ನನ್ನು ನಿಜ ಅರ್ಥದಲ್ಲಿ ಸ್ವತಂತ್ರರೆಂದು ಪರಿಗಣಿಸಿದರು. ಯೆಹೋವನಿಗಾಗಿ ಅವರಿಗೆ ಮತ್ತು ಓಮಾಗಿದ್ದ ಪ್ರೀತಿಯು ಅವರನ್ನು ‘ಎಲ್ಲವನ್ನು ತಾಳಿಕೊಳ್ಳುವಂತೆ’ ನಿಶ್ಚಯವಾಗಿಯೂ ಸಹಾಯಿಸಿತು. (1 ಕೊರಿಂಥ 13:7) ದೇವರೊಂದಿಗಿನ ಆ ನಿಕಟ ಸಂಬಂಧವನ್ನೇ ಗೇಲ್ ಮತ್ತು ನಾನು ಈಗ ಕಾಪಾಡಿಕೊಳ್ಳಲು ನೋಡುತ್ತೇವೆ.
ವಿಮೋಚನೆ ಮತ್ತು ಗಮನಾರ್ಹ ಪುನರ್ಮಿಲನ
ಅಂತಿಮವಾಗಿ, 1945 ರಲ್ಲಿ IIನೇ ಲೋಕ ಯುದ್ಧವು ಕೊನೆಗೊಂಡಿತು. ಜಪಾನಿನ ಶರಣಾಗತಿಯ ಸ್ವಲ್ಪದರಲ್ಲಿಯೆ, ಓಪಾ ರೈಲು ಬಂಡಿಯ ಮೂಲಕ ಸಾಗಿಸಲ್ಪಡುತ್ತಿದ್ದರು. ಜಕಾರ್ತದಿಂದ ಬಾಂಡುಂಗಿನ ದಾರಿಯಲ್ಲಿ, ಇಂಡೊನೀಷದ ಸೈನಿಕರಿಂದ ರೈಲು ಬಂಡಿಯು ನಿಲ್ಲಿಸಲ್ಪಟ್ಟಿತು. ಜಪಾನೀಯರೊಂದಿಗೆ ವೈರತ್ವವು ನಿಂತುಹೋಗಿದ್ದರೂ, ಇಂಡೊನೀಷದವರು ಡಚ್ಚರಿಂದ ಸ್ವಾತಂತ್ರ್ಯವನ್ನು ಗಳಿಸಲು ಹೋರಾಡುತ್ತಿದ್ದರು. ರೈಲು ಬಂಡಿಯಿಂದ ಒಮ್ಮೆಗೆ ತೆಗೆಯಲ್ಪಟ್ಟದ್ದರಿಂದ ಓಪಾ ಎಷ್ಟು ಚಕಿತರಾದರೆಂದರೆ ಅವರು ಇಂಗ್ಲಿಷ್ ಮಾತಾಡುವುದನ್ನು ಮರೆತರು ಮತ್ತು ಅದರ ಬದಲಿಗೆ ಡಚ್ ಭಾಷೆಯಲ್ಲಿ ಮಾತಾಡಲಾರಂಭಿಸಿದರು. ಇಂಡೊನೀಷದವರಿಗೆ, ಡಚ್ ಶತ್ರುಗಳ ಭಾಷೆಯಾಗಿತ್ತು, ಮತ್ತು ಶತ್ರುವು ಕೊಲ್ಲಲ್ಪಡಬೇಕಾಗಿತ್ತು.
ಸಂತೋಷಕರವಾಗಿಯೆ, ಸೈನಿಕರು ಓಪಾರನ್ನು ಶೋಧಿಸುತ್ತಿದ್ದಾಗ, ಅವರಿಗೆ, ಓಪಾ ಅದರ ಬಗ್ಗೆ ಪೂರ್ಣವಾಗಿ ಮರೆತಿದ್ದ, ಅವರ ಆಸ್ಟ್ರೇಲಿಯದ ಚಾಲಕನ ಲೈಸನ್ಸು ಸಿಕ್ಕಿತು. ಆನಂದಕರವಾಗಿ, ಇಂಡೊನೀಷದವರು ಆಸ್ಟ್ರೇಲಿಯದೊಂದಿಗೆ ಯುದ್ಧದಲ್ಲಿರಲಿಲ್ಲ. ಓಪಾ ಇಂದಿನವರೆಗೂ, ಆಸ್ಟ್ರೇಲಿಯದ ನಾಗರಿಕತೆಯನ್ನು ರುಜುಪಡಿಸಿದ ಲೈಸನ್ಸಿನ ಕಂಡುಕೊಳ್ಳುವಿಕೆಯು ದೈವಿಕ ಮಧ್ಯವರ್ತಿಸುವಿಕೆ ಎಂದೆಣಿಸುತ್ತಾರೆ, ಯಾಕಂದರೆ ಕೆಲವೇ ತಾಸುಗಳ ಅನಂತರ ಆ ನಿಲುಗಡೆಯಲ್ಲೇ, ಅದೇ ದಂಡು ರೈಲು ಬಂಡಿಯಲ್ಲಿ ಹಾದು ಹೋಗುತ್ತಿದ್ದ 12 ಡಚ್ಚರನ್ನು ಕೊಂದಿತು.
ಈ ಘಟನೆಯ ಸ್ವಲ್ಪ ಸಮಯಾನಂತರ, ಓಮಾ ಮತ್ತು ವಿಕ್ಟರಿ ಯುದ್ಧ ಛಿದ್ರ ಪ್ರದೇಶಗಳಿಂದ ಸಾಗಣೆಗಾಗಿ ಕಾಯುತ್ತಿದ್ದರು. ಅವರು ರಸ್ತೆಬದಿಯಲ್ಲಿ ಕೂತಿದ್ದಾಗ, ಸೈನಿಕರನ್ನು ಮತ್ತು ನಾಗರಿಕರನ್ನು ಸಾಗಿಸುತ್ತಿದ್ದ ಒಂದು ಅಂತ್ಯವಿಲ್ಲದ ಟ್ರಕ್ಕುಗಳ ಸಾಲು ದಾಟಿ ಹೋಯಿತು. ಥಟ್ಟನೆ, ಪ್ರತ್ಯಕ್ಷ ಕಾರಣವಿಲ್ಲದೆ, ಆ ಸಾಲು ನಿಂತಿತು. ಹತ್ತಿರದ ಟ್ರಕ್ಕಿನ ತೆರೆದ ಹಿಂಬದಿಗೆ ಓಮಾರ ದೃಷ್ಟಿ ಬಿತ್ತು, ಮತ್ತು ಅಲ್ಲಿ, ಅವರ ವಿಸ್ಮಯಕ್ಕೆ, ಅವರು ಆ ಕೂಡಲೆ ಗುರುತು ಹಿಡಿದ ಕೃಶಗೊಂಡ ಒಬ್ಬ ಮನುಷ್ಯನು ಕೂತಿದ್ದನು. ಅದು ಅವರ ಗಂಡನಾಗಿದ್ದನು! ಅವರ ಪುನರ್ಮಿಲನದ ಭಾವೂದ್ವೇಗವನ್ನು ಯಾವುದೇ ಶಬ್ದಗಳು ತಿಳಿಸಲಾರವು.
ಪುನಃ ಆಸ್ಟ್ರೇಲಿಯದಲ್ಲಿ
ಇಂಡೊನೀಷದಲ್ಲಿ 11 ವರುಷ ಜೀವಿಸಿದ ಅನಂತರ, ಅಜ್ಜ ತನ್ನ ಕುಟುಂಬದೊಂದಿಗೆ 1946 ರಲ್ಲಿ ಆಸ್ಟ್ರೇಲಿಯಕ್ಕೆ ಹಿಂದಿರುಗಿದಾಗ, ಅವರಿಗೆ ಜೀವನವು ಸುಲಭವಾಗಿರಲಿಲ್ಲ. ಅವರು ಯುದ್ಧ ನಿರಾಶ್ರಿತರಂತೆ—ನಿರ್ಗತಿಕರಂತೆ, ನ್ಯೂನಪೋಷಿತರಂತೆ,—ಹಿಂದಿರುಗಿದರು, ಮತ್ತು ಅನೇಕ ಸ್ಥಳೀಯರು ಅವರನ್ನು ಸಂದೇಹದಿಂದ ಕಂಡರು. ಓಮಾ ಮತ್ತು ವಿಕ್ಟರಿಯು ಏಷಿಯದ ವಲಸೆ ಬಂದವರ ವಿರುದ್ಧ ಕುಲ ದ್ವೇಷವನ್ನು ಅನುಭವಿಸಬೇಕಾಯಿತು. ಓಪಾ ತಮ್ಮ ಕುಟುಂಬವನ್ನು ಪರಾಮರಿಸಲು ಮತ್ತು ಅವರಿಗೆ ಒಂದು ಮನೆಯನ್ನು ಒದಗಿಸಲು ಪ್ರಯಾಸಕರ ಮತ್ತು ದೀರ್ಘ ಸಮಯದ ಕೆಲಸವನ್ನು ಮಾಡಬೇಕಾಯಿತು. ಈ ಕಷ್ಟ ದೆಸೆಗಳಿದ್ದರೂ, ಅವರು ತಾಳಿಕೊಂಡರು ಮತ್ತು ಅವರ ಅಖಂಡವಾದ ಆತ್ಮಿಕತೆಯೊಂದಿಗೆ ಪಾರಾದರು.
ಈಗ, 48 ಕ್ಕಿಂತಲೂ ಹೆಚ್ಚು ವರುಷಗಳ ಅನಂತರ, ಓಪಾ ಮೆಲ್ಬರ್ನ್ನಲ್ಲಿ ಜೀವಿಸುತ್ತಿದ್ದಾರೆ, ಮತ್ತು ಅಲ್ಲಿ ಅವರು ಇನ್ನು ಕೂಡ ಮನೆ ಮನೆಯ ಶುಶ್ರೂಷೆಯಲ್ಲಿ ಭಾಗವಹಿಸುತ್ತಾರೆ. ವಿಕ್ಟರಿ ಮತ್ತು ಅವಳ ಮಕ್ಕಳು ಸತ್ಯವನ್ನು ಅವಲಂಬಿಸುವುದನ್ನು, ಯೆಹೋವನಿಗೆ ತಮ್ಮ ಜೀವಿತಗಳನ್ನು ಸಮರ್ಪಿಸುವುದನ್ನು, ಮತ್ತು ಪ್ರತಿಯೊಬ್ಬರು, ಸರದಿಯಾಗಿ ಪೂರ್ಣ ಸಮಯದ ಪಯನೀಯರ ಸೇವೆಯೊಳಗೆ ಸೇರಿದ್ದನ್ನು ಅವರು ಕಂಡಿದ್ದಾರೆ.
ನನ್ನ ತಂದೆಯಾಗಿ ಪರಿಣಮಿಸಿದ ಡೆಸ್ ಜ್ಯಾಂಕರ್ ಮತ್ತು ವಿಕ್ಟರಿ 1950ರ ಆರಂಭದಲ್ಲಿ ದೀಕ್ಷಾಸ್ನಾನ ಪಡೆದುಕೊಂಡರು, ಮತ್ತು ಡೆಸ್ 1958 ರಲ್ಲಿ ಆಸ್ಟ್ರೇಲಿಯ ಬೆತೆಲ್ ಕುಟುಂಬದ ಸದಸ್ಯರಾದರು. ಅವರು ವಿಶೇಷ ಪಯನೀಯರರಾಗಿ ಸೇವಿಸುತ್ತಿದ್ದ ವಿಕ್ಟರಿಯನ್ನು ಮದುವೆಯಾದ ಅನಂತರ, ಸ್ವಲ್ಪ ಸಮಯ ಪಯನೀಯರಿಂಗ್ ಮಾಡಿದರು ಮತ್ತು ಅನಂತರ ಅವರು ಸಂಚರಣಾ ಶುಶ್ರೂಷೆಗೆ ಆಮಂತ್ರಿಸಲ್ಪಟ್ಟರು. ತದನಂತರ ನಾನು ಜನಿಸಿದೆ, ಮತ್ತು ನನ್ನನ್ನು ಬೆಳಸಲು ಅವರು ಸಂಚರಣೆಯ ಕೆಲಸವನ್ನು ಬಿಡಬೇಕಾಯಿತು. ಆದರೂ, 27 ವರುಷಗಳಾನಂತರ, ತಂದೆಯು ಇನ್ನೂ ಪಯನೀಯರ್ ಸೇವೆಯನ್ನು ಮುಂದುವರಿಸುತ್ತಿದ್ದಾರೆ.
ಇಸವಿ 1990ರ ಆರಂಭದಲ್ಲಿ, ಓಮಾ, ನನ್ನ ತಾಯಿಯು ಬೆಳೆಸಲ್ಪಟ್ಟ ಮನೆಯಲ್ಲಿಯೆ, ಶಾಂತವಾಗಿ ಮರಣ ಹೊಂದಿದರು. ನಾನು ಹಾಗೂ ನನ್ನ ಕಿರಿಯ ತಮ್ಮ ಮತ್ತು ತಂಗಿಯೂ ಇದೇ ಮೆಲ್ಬರ್ನ್ ಮನೆಯಲ್ಲಿ ಬೆಳೆಯಿಸಲ್ಪಟ್ಟಿದ್ದೆವು. ಒಂದು ಮನೆಯಲ್ಲಿ ಭಾಗಿಗಳಾಗುವುದು ನಮ್ಮ ಕುಟುಂಬಕ್ಕೆ ನಿಜವಾದ ಆಶೀರ್ವಾದವಾಗಿದೆ. ಕೆಲವೊಮ್ಮೆ ಅದು ಹೆಚ್ಚು ಜನಭರಿತವಾಗಿತ್ತು, ಆದರೆ ಅದರ ಕುರಿತು ಚಿಂತಿಸಿದ್ದನ್ನು ನಾನೆಂದೂ ಜ್ಞಾಪಿಸಿಕೊಳ್ಳಲಾರೆ. ನಮ್ಮ ಮದುವೆಯ ಮೊದಲ ನಾಲ್ಕು ವರುಷಗಳಲ್ಲಿಯೂ, ನನ್ನ ಹೆಂಡತಿ ಗೇಲ್, ಅದರೊಳಗೆ ಎಲ್ಲಿಯೋ ಹೊಂದಿಕೊಂಡು ಅದನ್ನು ಪ್ರೀತಿಸಿದಳು. ನಾವು ಕೊನೆಗೆ ನಮ್ಮ ಹೊಸ ನೇಮಕಕ್ಕೆ ಹೊರಡುವಾಗ, ನಾನು ಅತ್ತೆನು. ಎಷ್ಟೊಂದು ಬೆಂಬಲ ಮತ್ತು ಪ್ರೀತಿಯು ಆ ಮನೆಯಲ್ಲಿ ನನಗೆ ದೊರಕಿತ್ತು.
ಈಗಲಾದರೊ, ನನ್ನ ಹೆತ್ತವರು ಮತ್ತು ಅವರ ಮುಂಚೆ ಅವರ ಹೆತ್ತವರು ಮಾಡಿದ್ದನ್ನು ನಾವು ಮಾಡಲು ಶಕ್ತರಾದುದ್ದರಿಂದ ಗೇಲ್ ಮತ್ತು ನನಗೆ ಹೇರಳ ಆನಂದಕ್ಕೆ ಕಾರಣವಿದೆ. ನಾವು ಮನೆಯನ್ನು ಬಿಟ್ಟಾಗ, ಪೂರ್ಣ ಸಮಯದ ಸೇವೆಯಲ್ಲಿ ಯೆಹೋವನ ಚಿತ್ತವನ್ನು ಮಾಡುವ ನಮ್ಮ ಹೋಗುವಿಕೆಯ ಕಾರಣದಲ್ಲಿ ನಾವು ಆದರಣೆಯನ್ನು ಕಂಡುಕೊಂಡೆವು. ಕಠಿನ ನೇಮಕಗಳಲ್ಲಿ ಕೆಲಸ ಮಾಡುವಾಗ, ತೀವ್ರ ಬಡತನದಲ್ಲಿದ್ದಾಗ, ಮತ್ತು ಜಪಾನಿನ ಕೂಟ ಶಿಬಿರಗಳಲ್ಲಿ ವರುಷಾನುಗಟ್ಟಲೆ ಇಡಲ್ಪಟ್ಟಾಗಲೂ, ಅದೇ ತರಹದ ಆದರಣೆಯನ್ನು ಕಂಡುಕೊಂಡ ಆ ನಮ್ಮ ನಂಬಿಗಸ್ತ ಪೂರ್ವಜರ ಉತ್ತಮ ಉದಾಹರಣೆಯನ್ನು ಅನುಸರಿಸಲು ನಾವು ಕಷ್ಟಪಟ್ಟು ಪ್ರಯತ್ನಿಸುತ್ತೇವೆ.—2 ಕೊರಿಂಥ 1:3, 4.
ಯೆಹೋವನಿಗೆ ರಾಜ ದಾವೀದನ ಪ್ರೇರಿತ ಮಾತುಗಳಲ್ಲಿ ಓಪಾ ಯಾವಾಗಲೂ ಸಂತೈಸುವಿಕೆಯನ್ನು ಕಂಡುಕೊಂಡಿದ್ದಾರೆ: “ನಿನ್ನ ಪ್ರೇಮಾನುಭವವು ಜೀವಕ್ಕಿಂತಲೂ ಶ್ರೇಷ್ಠ.” (ಕೀರ್ತನೆ 63:3) ಆ ಪ್ರೇಮಾನುಭವವನ್ನು ನಿತ್ಯಕ್ಕೂ ಅನುಭವಿಸುವದು ಯಾವಾಗಲೂ ನನ್ನ ಅಜ್ಜನ ಆಳವಾದ ಬಯಕೆಯಾಗಿತ್ತು. ಅದರಲ್ಲಿ ಅವರೊಂದಿಗೆ ಭಾಗಿಯಾಗುವುದು ಅವರ ಇಡೀ ಕುಟುಂಬದ ಬಯಕೆಯಾಗಿದೆ.
[ಪುಟ 21 ರಲ್ಲಿರುವ ಚಿತ್ರ]
ಓಮಾ ಮತ್ತು ಓಪಾ ಹ್ಯಾರಿಸ್
[ಪುಟ 23 ರಲ್ಲಿರುವ ಚಿತ್ರ]
ಕ್ರೇಗ್ ಜ್ಯಾಂಕರ್ (ಹಿಂದೆ), ಅವನ ಹೆಂಡತಿ, ಹೆತ್ತವರು, ಮತ್ತು ತಮ್ಮ ಮತ್ತು ತಂಗಿಯೊಂದಿಗೆ