“ಯೆಹೋವನ ಸಾಕ್ಷಿಗಳು ನನ್ನನ್ನು ಕಾಪಾಡಿದರು!”
ಈ ಕಡೇ ದಿನಗಳಲ್ಲಿ, ತಾವು “ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ” ಆಗಿದ್ದೇವೆಂದು ಅನೇಕರು ಸಿದ್ಧಪಡಿಸಿದ್ದಾರೆ. (2 ತಿಮೊಥೆಯ 3:1, 3) ಪಶ್ಚಿಮ ಆಫ್ರಿಕದಲ್ಲಿರುವ ವಾಚ್ ಟವರ್ ಸೊಸೈಟಿಯ ಒಂದು ಬ್ರಾಂಚ್ ಆಫೀಸಿನಲ್ಲಿ ಒಬ್ಬ ಸ್ವಯಂ ಶುಶ್ರೂಷಕನಾಗಿರುವ ಐಜಿಕ್ ಇದನ್ನು ನಿಜವೆಂದು ಕಂಡುಕೊಂಡನು. ಅವನು ವರದಿಸುವುದು:
“ಜನವರಿ 1992 ರಲ್ಲಿ, ಇತರ ಐವರು ಪ್ರಯಾಣಿಕರೊಂದಿಗೆ ಭಾಗೀ ಟ್ಯಾಕ್ಸಿಯೊಂದರಲ್ಲಿ ನಿರ್ಜನವಾದ ರಸ್ತೆಯಲ್ಲಿ ನಾನು ಪ್ರಯಾಣಿಸುತ್ತಿದ್ದೆ. ನನ್ನ ಪಕ್ಕದಲ್ಲಿ ಕುಳಿತಿದ್ದ ಹೆಂಗಸಿನೊಂದಿಗೆ ನಾನೊಂದು ಸಂಭಾಷಣೆಯನ್ನು ಆರಂಭಿಸಿದೆ, ಮತ್ತು ಆಕೆ ಸಂತೋಷದಿಂದ ಒಂದು ಬೈಬಲಾಧಾರಿತ ಬ್ರೋಷರನ್ನು ನನ್ನಿಂದ ಸ್ವೀಕರಿಸಿದಳು.
“ಇದ್ದಕ್ಕಿದ್ದಹಾಗೆ, ಮಧ್ಯಾಹ್ನದಲ್ಲಿ ಸುಮಾರು ನಾಲ್ಕು ಗಂಟೆಗೆ, ಲೈಸೆನ್ಸ್ ಫಲಕವಿಲ್ಲದ ಒಂದು ಹೊಸ ಕಾರು ನಮ್ಮ ಮುಂದೆ ಥಟ್ಟನೆ ಬಂದಾಗ, ನಮ್ಮ ಕಾರು ಕರ್ಕಶವಾಗಿ ಚೀರುತ್ತಾ ಹಠಾತ್ತಾಗಿ ನಿಂತಿತು. ದೃಢಕಾಯವುಳ್ಳ ಮೂವರು ಪುರುಷರು, ಪ್ರತಿಯೊಬ್ಬರು ಒಂದು ಬಂದೂಕಿನೊಂದಿಗೆ ಇನ್ನೊಂದು ಕಾರಿನಿಂದ ಹೊರಗೆ ಜಿಗಿದು, ನಮ್ಮ ಕಾರಿನ ಬಾಗಿಲುಗಳನ್ನು ಥಟ್ಟನೆ ಎಳೆದರು. ‘ನೀವೆಲ್ಲರೂ ಹೊರಗೆ ಬನ್ನಿ,’ ಎಂದು ಅವರಲ್ಲೊಬ್ಬನು ಅರಚಿದನು.
“ಇನ್ನೊಬ್ಬ ಮನುಷ್ಯನು ನನ್ನ ಪುಸ್ತಕ ಬ್ಯಾಗನ್ನು ಕಸಿದುಕೊಂಡನು. ಬ್ಯಾಗ್ನಲ್ಲಿ ಬೈಬಲ್ ಸಾಹಿತ್ಯ ಮಾತ್ರ ಇರುವುದನ್ನು ಕಂಡು, ಅವನು ಅದನ್ನು ದೂರ ಎಸೆದನು. ನನ್ನ ಕಡೆಗೆ ಅವನ ಬಂದೂಕಿನ ಗುರಿಯನ್ನು ನೇರವಾಗಿಡುತ್ತಾ, ‘ನಿನ್ನ ಹತ್ತಿರ ಮತ್ತೇನಿದೆ?’ ಎಂದು ಅವನು ಕೇಳಿದನು. ನಾನು ಕೂಡಲೆ ನನ್ನ ಹಣದ ಚೀಲದಿಂದ ಅವನಿಗೆ ಹಣವನ್ನು ಕೊಟ್ಟೆ. ‘ಇಷ್ಟೇ ಇರುವುದೊ?’ ಎಂದು ಅವನು ಕೇಳಿದ. ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೆಂದು ಮತ್ತು ಸಾಕ್ಷಿಗಳು ಸುಳ್ಳು ಹೇಳುವುದಿಲ್ಲವೆಂದು ನಾನು ಅವನಿಗೆ ಹೇಳಿದೆ. ನನ್ನ ಹಣದ ಚೀಲವನ್ನು ಅವನು ಕಸಿದುಕೊಂಡು, ನನ್ನ ವಾಚ್ ಟವರ್ ಗುರುತು ಚೀಟಿಯನ್ನು (ಐಡೆಂಟಿಫಿಕೇಷನ್ ಕಾರ್ಡ್) ನೋಡಿ, ಆಮೇಲೆ ಹೇಳಿದ್ದು, ‘ಸರಿ, ವಾಚ್ಟವರ್. ಇಲ್ಲಿ ಕಾದಿರು.’
“ಅನಂತರ, ನಾನು ಮೋಟಾರುಗಾಡಿಯಲ್ಲಿ ಸಂಭಾಷಿಸಿದ್ದ ಮಹಿಳೆಯ ಕಡೆಗೆ ಅವನು ತಿರುಗಿದ. ಅವಳು ಅವಸರದಿಂದ ತನ್ನ ಕಂಠಹಾರವನ್ನು ತೆಗೆದಳು ಮತ್ತು ತನ್ನ ಹಣದ ಚೀಲದಲ್ಲಿದ್ದ ಹಣವನ್ನು ಅವನಿಗೆ ಕೊಟ್ಟಳು. ಸುಲಿಗೆಕೋರನು ಆಕೆಯ ನಡುಗುತ್ತಿರುವ ಕೈಯಲ್ಲಿದ್ದ ಬ್ರೋಷರನ್ನು ಗಮನಿಸಿದಾಗ, ನಾವಿಬ್ಬರೂ ಜೊತೆಯಲ್ಲಿದ್ದೇವೆಂದು ಭಾವಿಸಿದ್ದರಿಂದ ನನ್ನೊಂದಿಗೆ ಇರುವಂತೆ ಆಕೆಗೆ ಕೈಸನ್ನೆಯ ಮೂಲಕ ಸೂಚಿಸಿದನು.
“ಅಷ್ಟರಲ್ಲಿ, ಇತರ ಶಸ್ತ್ರಸಜ್ಜಿತ ದಾರಿಗಳ್ಳರು ಕ್ರೂರವಾಗಿ ನಮ್ಮ ಸಹ ಪ್ರಯಾಣಿಕರನ್ನು ಆಕ್ರಮಿಸಿದರು. ನಮ್ಮೊಂದಿಗೆ ಪ್ರಯಾಣಿಸುತ್ತಿದ್ದ ಗಾಡಿಚಾಲಕನನ್ನು ಮತ್ತು ಇನ್ನೊಬ್ಬ ಮನುಷ್ಯನನ್ನು ಅವರು ಹೊಡೆದು ಅವರಲ್ಲಿ ಇದ್ದದ್ದನ್ನು ಕಸಿದುಕೊಂಡರು. ಒಬ್ಬ ಕಳ್ಳನು ಎರಡನೆಯ ಹೆಂಗಸಿನ ಕಂಠಹಾರವನ್ನು ಕಸಿದುಕೊಂಡನು. ಅವಳು ಪ್ರತಿಭಟಿಸಿದಾಗ, ಸಾಯುವ ತನಕ ಅವಳ ತಲೆ ಮತ್ತು ಎದೆಯ ಮೇಲೆ ಬಂದೂಕಿನ ದಪ್ಪ ತುದಿಗಳಿಂದ ಅವರು ಕ್ರೂರವಾಗಿ ಹೊಡೆದರು. ಮೂರನೆಯ ಹೆಂಗಸನ್ನು ವಾಹನದಿಂದ ಹೊರಗೆ ಎಳೆದು, ಎದೆಗೆ ಗುಂಡನ್ನು ಹಾರಿಸಿದರು. ವಿಷಾದಕರವಾಗಿ, ಅವಳೂ ಮರಣ ಹೊಂದಿದಳು. ನಾನು ಮತ್ತು ನನ್ನೊಂದಿಗೆ ಇದ್ದ ಯುವ ಹೆಂಗಸು ಮಾತ್ರ ಸಂಪೂರ್ಣವಾಗಿ ಗಾಯಗೊಳ್ಳದೆ ಉಳಿದೆವು.
“ತದನಂತರ ಹಾದುಹೋಗುತ್ತಿರುವ ಒಬ್ಬ ಮೋಟರ್ ಚಾಲಕನ ಮೂಲಕ ನಮಗೊಂದು ಸವಾರಿ ಕೊಡಲ್ಪಟ್ಟಾಗ, ಗಾಬರಿಗೊಂಡ ಹೆಂಗಸು ಪುನರುಚ್ಚರಿಸುತ್ತಾ ಇದ್ದದ್ದು, ‘ಯೆಹೋವನ ಸಾಕ್ಷಿಗಳು ನನ್ನನ್ನು ಕಾಪಾಡಿದರು!’”