ಗಾತ್ ಭಾಷೆಯ ಬೈಬಲ್ ಒಂದು ಗಮನಾರ್ಹ ನಿರ್ವಹಣ
ಗಾತ್ ಜನರು, ಪ್ರಾಯಶಃ ಸ್ಕ್ಯಾಂಡಿನೇವ್ಯ ಮೂಲದ ಜರ್ಮನ್ ಕುಲಗಳ ಒಂದು ಒಕ್ಕೂಟವಾಗಿದ್ದರು. ನಮ್ಮ ಸಾಮಾನ್ಯ ಶಕದ ಆದಿ ಶತಮಾನಗಳಲ್ಲಿ, ಅವರು ಕಪ್ಪು ಸಮುದ್ರ ಮತ್ತು ಡ್ಯಾನ್ಯೂಬ್ ನದಿಯಷ್ಟು ದಕ್ಷಿಣಕ್ಕೆ, ರೋಮನ್ ಸಾಮ್ರಾಜ್ಯದ ಗಡಿಯ ವರೆಗೂ ವಲಸೆ ಹೋದರು.
ಜರ್ಮನ್ ಸಂಬಂಧಿತವಾದ ಯಾವುದೇ ಭಾಷೆಯಲ್ಲಿ ಉತ್ಪಾದಿಸಿದ ಪ್ರಥಮ ಸಾಹಿತ್ಯಿಕ ಕೃತಿಯು ಗಾತ್ ಭಾಷೆಯ ಬೈಬಲು. ಇಂದು ಈ ಭಾಷಾಂತರವು ಕೇವಲ ಅವಶಿಷ್ಟ ರೂಪದಲ್ಲಿ ಅಸ್ತಿತ್ವದಲ್ಲಿದೆ. ಆದರೂ ಇದು ಪವಿತ್ರ ಶಾಸ್ತ್ರಗಳ ಒಂದು ಅದ್ವಿತೀಯ ಮತ್ತು ಬೆಲೆ ಬಾಳುವ ತರ್ಜುಮೆಯಾಗಿ ಉಳಿದಿದೆ. ಏಕೆ?
ಉಲ್ಫಲಾಸ್—ಮಿಷನೆರಿ ಮತ್ತು ಬೈಬಲ್ ಭಾಷಾಂತರಕಾರ
ಈ ಬೈಬಲಿನ ಭಾಷಾಂತರಕಾರನು, ಅನ್ಯಥಾ ತನ್ನ ಗಾತ್ ಭಾಷೆಯ ವುಲ್ಫಲ ಎಂಬ ಹೆಸರಿನಿಂದ ಪ್ರಸಿದ್ಧನಾಗಿದ್ದ ಉಲ್ಫಲಾಸ್. ಇತಿಹಾಸಗಾರ ಫಿಲಸ್ಟಾರ್ಜೀಯಸ್ಗನುಸಾರ, ಉಲ್ಫಲಾಸನು, ಈಗ ಪೂರ್ವ ಟರ್ಕಿಯ ಭಾಗವಾಗಿರುವ ಕಪದೋಷಿಯಕ್ಕೆ ಗಾತ್ ಜನರು ಮಾಡಿದ ದಾಳಿಯಲ್ಲಿ ಬಂದಿಯಾಗಿ ತೆಗೆದುಕೊಳ್ಳಲ್ಪಟ್ಟವರ ವಂಶಜನು. ಸುಮಾರು ಸಾ.ಶ. 311 ರಲ್ಲಿ ಜನಿಸಿದ ಇವನು, ಸುಮಾರು 30 ವರ್ಷಗಳ ಬಳಿಕ, ನಿಕೊಮೀಡ್ಯದ ಯೂಸೀಬೀಯಸನಿಂದ ದೀಕ್ಷೆ ಪಡೆದು ಗಾತ್ ಜನರ ಮಧ್ಯೆ ಮಿಷನೆರಿಯಾಗಿ ಕೆಲಸ ಮಾಡಲು ತರಬೇತು ಹೊಂದಿದನು.
ಇತಿಹಾಸಕಾರ ವಿಲ್ ಡ್ಯುರ್ಯಾಂಟ್ ಹೇಳುವುದು: “ತನ್ನ ಮತಾಂತರಿತರನ್ನು ಉಪದೇಶಿಸಿ ಹೆಚ್ಚಿಸಲು, ಅವನು ಅರಸುಗಳ ಪುಸ್ತಕಗಳನ್ನು ಬಿಟ್ಟು, ಇಡೀ ಬೈಬಲನ್ನು ಗ್ರೀಕಿನಿಂದ ಗಾತ್ ಭಾಷೆಗೆ ತಾಳ್ಮೆಯಿಂದ ತರ್ಜುಮೆ ಮಾಡಿದನು.” (ದಿ ಏಜ್ ಆಫ್ ಫೆಯ್ತ್) ಇಂದು, ನೆಹೆಮೀಯ ಪುಸ್ತಕದ ಒಂದು ಅವಶಿಷ್ಟವನ್ನು ಬಿಟ್ಟರೆ, ಗಾತಿಕ್ ಬೈಬಲಿನ ನಾಶವಾಗದೆ ಉಳಿದಿರುವ ಹಸ್ತಪ್ರತಿಗಳಲ್ಲಿ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥಗಳ ಭಾಗಗಳು ಮಾತ್ರ ಇವೆ.
ಗಾತಿಕ್ ಭಾಷೆ ಲಿಖಿತ ಭಾಷೆಯಾಗಿರಲಿಲ್ಲ. ಈ ಕಾರಣದಿಂದ, ಉಲ್ಫಲಾಸನು ವಿಶೇಷ ಕೌಶಲವನ್ನು ಕೇಳಿಕೊಳ್ಳುವ ಭಾಷಾಂತರದ ಪಂಥಾಹ್ವಾನವನ್ನು ಎದುರಿಸಿದನು. ಪುರಾತನ ಕ್ರೈಸ್ತ ಮಠೀಯ ಇತಿಹಾಸಕಾರರು, ಪ್ರಧಾನವಾಗಿ ಗ್ರೀಕ್ ಮತ್ತು ಲ್ಯಾಟಿನ್ ಅಕ್ಷರಮಾಲೆಯ ಮೇಲೆ ಆಧಾರಿಸಿದ 27 ಸಂಕೇತಗಳ ಗಾತಿಕ್ ಅಕ್ಷರಮಾಲೆಗಾಗಿ ಅವನಿಗೆ ಪ್ರಶಸ್ತಿ ಸಲ್ಲಿಸುತ್ತಾರೆ. ಇದಲ್ಲದೆ, ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ, “ಅವನು ಜರ್ಮನ್ ಸಂಬಂಧಿತ ಕ್ರೈಸ್ತ ಪರಿಭಾಷೆಯನ್ನು ಕಂಡುಹಿಡಿದನೆಂದೂ, ಅವುಗಳಲ್ಲಿ ಕೆಲವು ಇನ್ನೂ ಬಳಕೆಯಲ್ಲಿವೆ,” ಎಂದೂ ಹೇಳುತ್ತದೆ.
ಗಾತ್ ಭಾಷೆಯ ಬೈಬಲಿನ ಆರಂಭದ ಚರಿತ್ರೆ
ಉಲ್ಫಲಾಸನು ತನ್ನ ಭಾಷಾಂತರವನ್ನು ಸಾ.ಶ. 381ರ ಮೊದಲು ಮುಗಿಸಿ, ಎರಡೋ ಮೂರೋ ವರ್ಷಗಳ ಬಳಿಕ ಮರಣ ಹೊಂದಿದನು. ಅವನ ಕೃತಿಯ ಜನಪ್ರಿಯತೆಯನ್ನು ದಿ ಎನ್ಸೈಕ್ಲೊಪೀಡಿಯ ಅಮೆರಿಕಾನ ದೃಢೀಕರಿಸಿ ಹೇಳಿದ್ದು, “ಸಾಮಾನ್ಯವಾಗಿ ಸ್ಪೆಯ್ನ್ ಮತ್ತು ಇಟೆಲಿಗೆ ವಲಸೆಹೋದ ಗಾತ್ ಜನರಿಂದ ಈ ಭಾಷಾಂತರ ಉಪಯೋಗಿಸಲ್ಪಟ್ಟಿತು.” ಉಳಿದಿರುವ ಅವಶಿಷ್ಟಗಳ ಸಂಖ್ಯೆಯಿಂದ ತೀರ್ಮಾನಿಸುವುದಾದರೆ, ಈ ಗಾತಿಕ್ ಬೈಬಲಿನ ಅನೇಕ ಪ್ರತಿಗಳು ಮಾಡಲ್ಪಟ್ಟಿದ್ದವೆಂದು ತೋರಿಬರುತ್ತದೆ. ಗಾತ್ ಜನರು ತಮ್ಮ ರಾಜ್ಯವನ್ನು ಸ್ಥಾಪಿಸಿದ್ದ ಪ್ರದೇಶವಾದ ರವೆನ ಮತ್ತು ವರೋನ ಲೇಖನಶಾಲೆಗಳಲ್ಲಿ ಅನೇಕ ಹಸ್ತಪ್ರತಿಗಳನ್ನು ತಯಾರಿಸಿರುವುದು ಸಂಭವನೀಯ. ಈ ಲೇಖನಶಾಲೆಗಳು ಹಸ್ತಪ್ರತಿಗಳನ್ನು ಬರೆದು ನಕಲು ಮಾಡಲಾಗುತ್ತಿದ್ದ ಸಂನ್ಯಾಸಿ ಮಠಗಳ ಕೋಣೆಗಳು.
ಬಜ್ಯಾಂಟೀಯಮಿನ ಸಮ್ರಾಟ ಜಸ್ಟಿನೀಯನ್ I, ಇಟೆಲಿಯನ್ನು ಪುನರ್ಸ್ವಾಧೀನ ಮಾಡಿಕೊಂಡ ಬಳಿಕ, ಸಾ.ಶ. 555 ರಲ್ಲಿ ಈ ಗಾತ್ ಜನರು ರಾಷ್ಟ್ರವಾಗಿ ತಮ್ಮ ಅಂತ್ಯಕ್ಕೆ ಬಂದರು. ಅವರು ಅಳಿದ ಬಳಿಕ, ಟೀನೆಸ್ ಕೇಬ್ಲರ್ಗ್ ಹೇಳುವುದು: “ಇಟೆಲಿಯಲ್ಲಿ ಗಾತ್ ಭಾಷೆ ಮತ್ತು ಗಾತ್ ಸಂಪ್ರದಾಯಗಳು, ಯಾವ ಗುರುತನ್ನೂ ಬಿಡದೆ, ಕಣ್ಮರೆಯಾದವು. ಗಾತಿಕ್ ಹಸ್ತಪ್ರತಿಗಳು ಆ ಬಳಿಕ ಯಾವದೇ ಆಸಕ್ತಿಯನ್ನು ಹುಟ್ಟಿಸುವುವುಗಳಾಗಿರಲಿಲ್ಲ. . . . ಅವುಗಳನ್ನು ಹೆಚ್ಚಾಗಿ ಪ್ರತ್ಯೇಕಿಸಿ ಬರೆವಣಿಗೆಯನ್ನು ತೆಗೆಯಲು ಉಜ್ಜಿಹಾಕಲಾಯಿತು. ತುಟ್ಟಿಯಾಗಿದ್ದ ಚರ್ಮ ಕಾಗದವನ್ನು ಆ ಬಳಿಕ ಹೊಸ ವಿಷಯಗಳನ್ನು ಬರೆಯಲು ಉಪಯೋಗಿಸಲಾಯಿತು.”
ಪಾರಾಗಿರುವ ಹಸ್ತಪ್ರತಿಗಳು
ಈ ಹಸ್ತಪ್ರತಿಗಳ ಕೆಲವು ಪ್ರತಿಗಳಲ್ಲಿ, ಉಜ್ಜುವಿಕೆಯನ್ನು ಅಸಂಪೂರ್ಣವಾಗಿ ಮಾಡಿರುವುದರಿಂದ, ಮೂಲ ಬರೆವಣಿಗೆ ಅಸ್ಪಷ್ಟವಾಗಿಗಿ ಇನ್ನೂ ಕಾಣುತ್ತಿತ್ತು. ಇಂತಹ ಅನೇಕ ಪ್ಯಾಲಿಂಪ್ಸೆಸ್ಟ್ ಎಂದು ಕರೆಯಲ್ಪಡುವ ಹಸ್ತಪ್ರತಿಗಳು ಕಂಡುಹಿಡಿಯಲ್ಪಟ್ಟು, ಅವುಗಳ ಅರ್ಥವನ್ನು ಮಾಡಿಕೊಳ್ಳಲಾಗಿದೆ. ಗಮನಾರ್ಹವಾಗಿ, ಮತ್ತಾಯ, ಯೋಹಾನ, ಲೂಕ, ಮತ್ತು ಮಾರ್ಕ—ಈ ಕ್ರಮದಲ್ಲಿರುವ ನಾಲ್ಕು ಸುವಾರ್ತೆಗಳು ಸೇರಿರುವ ಪ್ರಸಿದ್ಧ ಕೋಡೆಕ್ಸ್ ಆರ್ಜೆಂಟೇವೋಸ್, ಯಾವ ಅಪಾಯವೂ ಆಗದೆ ರಕ್ಷಿಸಲ್ಪಟ್ಟಿತು.
ಈ ಅತ್ಯುತ್ಕೃಷ್ಟ ಹಸ್ತಾಕ್ಷರ ಗ್ರಂಥದ ಮೂಲವು ಸಾ.ಶ. ಆರನೆಯ ಶತಮಾನದ ಆರಂಭದಲ್ಲಿ ರವೆನ ಲೇಖನಶಾಲೆಯಲ್ಲಿ ಆಯಿತೆಂದು ಯೋಚಿಸಲಾಗುತ್ತದೆ. ಇದನ್ನು ಕೋಡೆಕ್ಸ್ ಆರ್ಜೆಂಟೇವೋಸ್ ಅಂದರೆ “ಬೆಳ್ಳಿ ಗ್ರಂಥ” ಎಂದು ಕರೆಯಲಾಗುತ್ತದೆ. ಏಕೆಂದರೆ ಇದನ್ನು ಬೆಳ್ಳಿ ಶಾಯಿಯಲ್ಲಿ ಬರೆಯಲಾಗಿದೆ. ಪ್ರಾಯಶಃ ಒಬ್ಬ ರಾಜನಿಗಾಗಿ ಸಿದಮ್ಧಾಡಲ್ಪಟ್ಟಿದೆ ಎಂಬುದನ್ನು ಸೂಚಿಸುತ್ತಾ, ಈ ಚರ್ಮಕಾಗದದ ಪುಟಗಳನ್ನು ಕೆನ್ನೀಲಿ ಬಣ್ಣದಲ್ಲಿ ಅದಲ್ದಾಗಿದೆ. ಪ್ರತಿ ಸುವಾರ್ತೆಯ ಮೊದಲನೆಯ ಮೂರು ಗೆರೆಗಳನ್ನು ಹಾಗೂ ವಿವಿಧ ವಿಭಾಗಗಳ ಆದಿಗಳನ್ನು ಬಂಗಾರದ ಅಕ್ಷರಗಳು ಅಲಂಕರಿಸುತ್ತವೆ. ಬರವಣಿಗೆಯ ಪ್ರತಿ ಅಂಕಣದ ಅಡಿಯಲ್ಲಿ ಹಾಕಿರುವ ನಾಲ್ಕು ಸಮಾನಾಂತರ “ಕಮಾನು ದಾರಿ” ಗಳ ಮೇಲ್ಭಾಗದಲ್ಲಿ ಸುವಾರ್ತೆಯ ಲೇಖಕರ ಹೆಸರುಗಳು ಸಹ ಬಂಗಾರದಲ್ಲಿ ಕಂಡುಬರುತ್ತವೆ. ಇವು ಸುವಾರ್ತೆಗಳ ಸಮಾನಾಂತರ ಭಾಗಗಳಿಗೆ ಸಂಬಂಧ ನಿರ್ದೇಶವನ್ನು ಕೊಡುತ್ತವೆ.
ಗಾತಿಕ್ ಬೈಬಲಿನ ಮೂಲಗ್ರಂಥವನ್ನು ಪೂರ್ವಸ್ಥಿತಿಗೆ ತರುವುದು
ಗಾತ್ ಜನಾಂಗದ ವಿಘಟನೆಯನ್ನು ಅನುಸರಿಸಿ, ಆ ಬೆಲೆ ಬಾಳುವ ಕೋಡೆಕ್ಸ್ ಆರ್ಜೆಂಟೇವೋಸ್ ಕಣ್ಮರೆಯಾಯಿತು. ಅದನ್ನು ಪುನಃ, ಅದು 16 ನೆಯ ಶತಮಾನದ ಮಧ್ಯಭಾಗದಲ್ಲಿ ಜರ್ಮನಿಯ ಕಲೋನಿನ ಹತ್ತಿರದ ವೆರ್ಡೆನಿನ ಸಂನ್ಯಾಸಿ ಮಠದಲ್ಲಿ ಬೆಳಕಿಗೆ ಬರುವ ತನಕ ನೋಡಲಾಗಲಿಲ್ಲ.
ವರ್ಷ 1569 ರಲ್ಲಿ, ಕರ್ತನ ಪ್ರಾರ್ಥನೆಯ ಗಾತ್ ಭಾಷಾಂತರವು ಪ್ರಕಟಿಸಲ್ಪಟ್ಟು, ಹೀಗೆ ಅದು ತೆಗೆಯಲ್ಪಟ್ಟಿದ್ದ ಬೈಬಲಿಗೆ ಗಮನವನ್ನು ಸೆಳೆಯಿತು. ಕೋಡೆಕ್ಸ್ ಆರ್ಜೆಂಟೇವೋಸ್ ಎಂಬ ಹೆಸರು ಮುದ್ರಣದಲ್ಲಿ ಪ್ರಥಮ ಬಾರಿ 1597 ರಲ್ಲಿ ತೋರಿಬಂತು. ವೆರ್ಡೆನಿನಿಂದ ಈ ಹಸ್ತಪ್ರತಿ ಪ್ರಾಗ್ನಲ್ಲಿ ಸಮ್ರಾಟನ ಕಲಾಕೃತಿ ಸಂಗ್ರಹಣಕ್ಕೆ ಹೋಯಿತು. ಆದರೆ ಮೂವತ್ತು ವರ್ಷಗಳ ಯುದ್ಧದ ಅಂತ್ಯದಲ್ಲಿ, 1648 ರಲ್ಲಿ, ವಿಜಯಿಗಳಾದ ಸ್ವೀಡನಿನವರು, ಇತರ ನಿಕ್ಷೇಪಗಳೊಂದಿಗೆ ಅದನ್ನು ತೆಗೆದುಕೊಂಡು ಹೋದರು. ಈ ಹಸ್ತಪ್ರತಿ ಗ್ರಂಥ, 1669 ರಿಂದ, ಸ್ವೀಡನಿನ ಉಪ್ಸಾಲ ವಿಶ್ವವಿದ್ಯಾಲಯದ ಲೈಬ್ರೆರಿಯಲ್ಲಿ ಒಂದು ಕಾಯಂ ಸ್ಥಳವನ್ನು ಪಡೆದಿದೆ.
ಈ ಕೋಡೆಕ್ಸ್ ಆರ್ಜೆಂಟೇವೋಸ್ನಲ್ಲಿ ಮೂಲದಲ್ಲಿ 336 ಪುಟಗಳಿದ್ದವು. ಇವುಗಳಲ್ಲಿ 187 ಉಪ್ಸಾಲದಲ್ಲಿವೆ. ಇನ್ನೊಂದು ಪುಟವನ್ನು—ಮಾರ್ಕನ ಸುವಾರ್ತೆಯಲ್ಲಿ ಕೊನೆಯದನ್ನು—1970 ರಲ್ಲಿ ಜರ್ಮನಿಯ ಶ್ಪೈಅರ್ನಲ್ಲಿ ಕಂಡುಹಿಡಿಯಲಾಯಿತು.
ಈ ಕೋಡೆಕ್ಸ್ ಪುನಃ ಕಂಡುಬಂದಾಗಿನಿಂದ, ಪಂಡಿತರು ಈ ಮೃತ ಗಾತ್ ಭಾಷೆಯ ಅರ್ಥವನ್ನು ಕಂಡುಹಿಡಿಯಲು ಈ ಬರವಣಿಗೆಯನ್ನು ಅಧ್ಯಯನಿಸಲು ಪ್ರಾರಂಭಿಸಿದರು. ದೊರೆಯುವ ಎಲ್ಲ ಹಸ್ತಪ್ರತಿಗಳನ್ನು ಮತ್ತು ಮೂಲಗ್ರಂಥವನ್ನು ಪೂರ್ವಸ್ಥಿತಿಗೆ ತರುವ ಪ್ರಯತ್ನಗಳನ್ನು ಉಪಯೋಗಿಸುತ್ತ, ಜರ್ಮನ್ ವಿದ್ವಾಂಸ ವಿಲ್ಹೆಲ್ಮ್ ಸ್ಟ್ರೈಟ್ಬರ್ಕ್ 1908 ರಲ್ಲಿ, ಅಭಿಮುಖ ಪುಟಗಳಲ್ಲಿ ಗ್ರೀಕ್ ಮತ್ತು ಗಾತಿಕ್ ಮೂಲಗ್ರಂಥಗಳಿರುವ “ಡೀ ಗೋಟಿಶೆ ಬೀಬಲ್” ಇದನ್ನು ಸಂಕಲಿಸಿ, ಪ್ರಕಾಶಿಸಿದರು.
ಇಂದು ಈ ಗಾತಿಕ್ ಬೈಬಲು ಪ್ರಧಾನವಾಗಿ ಪಂಡಿತರಿಗೆ ಆಸಕ್ತಿಯ ವಿಷಯವಾಗಿದೆ. ಆದರೂ, ಬೈಬಲ್ ಭಾಷಾಂತರದ ಆದಿ ದಿನಗಳಲ್ಲಿ ಇದನ್ನು ತಯಾರಿಸಿ ಪೋಷಿಸಿದ ಸಂಗತಿಯು, ಆಗ ಯಾವುದು ಆಧುನಿಕ ಭಾಷೆಯಾಗಿತ್ತೋ ಅದಕ್ಕೆ ದೇವರ ವಾಕ್ಯವನ್ನು ಭಾಷಾಂತರಿಸಲು ಉಲ್ಫಲಾಸನಿಗಿದ್ದ ಬಯಕೆ ಮತ್ತು ದೃಢತೆಗೆ ಸಾಕ್ಷ್ಯವಾಗಿದೆ. ಈ ಮುಖಾಂತರವಾಗಿ ಮಾತ್ರ ಗಾತ್ ಜನರು ಕ್ರೈಸ್ತ ಸತ್ಯವನ್ನು ತಿಳಿಯಲು ನಿರೀಕ್ಷಿಸಬಲ್ಲರೆಂದು ಅವನು ಸರಿಯಾಗಿಯೇ ಗುರುತಿಸಿದನು.
[ಪುಟ 9 ರಲ್ಲಿರುವ ಚಿತ್ರ ಕೃಪೆ]
Courtesy of the Uppsala University Library, Sweden