ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಬೈಬಲ್ ಸತ್ಯವು ಒಂದು ಕುಟುಂಬವನ್ನು ಐಕ್ಯಗೊಳಿಸುತ್ತದೆ
ಇಂದು, ಲೋಕದ ಅನೇಕ ಭಾಗಗಳಲ್ಲಿ, ಕುಟುಂಬ ಐಕ್ಯವು ಬಹುಮಟ್ಟಿಗೆ ಒಂದು ಗತ ವಿಷಯವಾಗಿದೆ. ಆದರೂ, ಕುಟುಂಬ ಐಕ್ಯದ ರಹಸ್ಯವನ್ನು ಬೈಬಲ್ ಪ್ರಕಟಿಸುತ್ತದೆ. ಯೇಸುವಿನ ಮಾತುಗಳನ್ನು ಪರಿಗಣಿಸಿ: “ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುವವನು ಬಂಡೆಯ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಯುಳ್ಳ ಮನುಷ್ಯನನ್ನು ಹೋಲುವನು.” (ಮತ್ತಾಯ 7:24) ಈ ಮಾತುಗಳನ್ನು ಅನ್ವಯಿಸುವುದರ ಮೂಲಕ ಮತ್ತು ಒಂದು ಐಕ್ಯಗೊಂಡ ಕುಟುಂಬವನ್ನು ಕಟಲ್ಟಿಕ್ಕಾಗಿ ಬೈಬಲನ್ನು ಒಂದು ಅಸ್ತಿವಾರದೋಪಾದಿ ಉಪಯೋಗಿಸುವ ಮೂಲಕ, ಯೆಹೋವನ ಸಾಕ್ಷಿಗಳ ನಡುವೆ, ಸಾವಿರಾರು ಕುಟುಂಬಗಳು ಐಕ್ಯವನ್ನು ಸಾಧಿಸಿವೆ. ಮುಂದಿನ ಅನುಭವವು ತೋರಿಸುವಂತೆ, ಇತರ ಕುಟುಂಬಗಳು ಸಹ ಅಂತಹ ಐಕ್ಯವನ್ನು ಸಾಧಿಸುತ್ತಿವೆ.
ಫ್ರಾನ್ಸ್ನ ಸೇನಾ ಪಡೆಯೊಂದರಲ್ಲಿ ಡ್ಯಾನಿಯೆಲನು ಸೇವೆ ಸಲ್ಲಿಸುತ್ತಿರುವಾಗ, ಸೇನಾ ಪಾದ್ರಿಯೊಬ್ಬನು ಒಂದು ಬೈಬಲನ್ನು ಖರೀದಿಸುವಂತೆ ಡ್ಯಾನಿಯೆಲನಿಗೆ ಸಲಹೆ ನೀಡಿದಾಗ, ಅವನು ಹಾಗೆ ಮಾಡಿದನು, ಮತ್ತು ಅದನ್ನು ಕ್ರಮವಾಗಿ ಓದಲು ಪ್ರಾರಂಭಿಸಿದನು. ಕೊನೆಗೆ, ಅವನು ಟಹೀಟಿಗೆ ವರ್ಗಾಯಿಸಲ್ಪಟ್ಟನು. ಡ್ಯಾನಿಯೆಲನ ಜೊತೆ ಸೈನಿಕರಲ್ಲಿ ಕೆಲವರು ಪುನರಾಗಮನವಾದಿಗಳಾಗಿದ್ದರು, ಮತ್ತು ಇತರರು ಮಾರ್ಮನರಾಗಿದ್ದರು. ಅನೇಕ ವೇಳೆ ಅವರ ಸಂಭಾಷಣೆಯು ಧರ್ಮದ ವಿಷಯದ ಕಡೆಗೆ ತೆರಳುತ್ತಿತ್ತು. ಒಂದು ದಿನ ದಳದ ಮುಖ್ಯಾಧಿಕಾರಿಯು ಡ್ಯಾನಿಯೆಲನನ್ನು, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದ ತನ್ನ ಹೆಂಡತಿಗೆ ಪರಿಚಯಿಸಿದನು. ಡ್ಯಾನಿಯೆಲನ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತಾ ಇಡೀ ಅಪರಾಹ್ನವನ್ನು ಅವಳು ಕಳೆದಳು ಮತ್ತು ಟಹೀಟಿಯಲ್ಲಿರುವ ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಗಳಲ್ಲಿ ಒಂದಕ್ಕೆ ಅವನನ್ನು ಪರಿಚಯಿಸಿದಳು. ಕೂಡಲೆ ಅವನು ಕ್ರಮವಾದ ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಿದನು.
ಫ್ರಾನ್ಸ್ನಲ್ಲಿ ವಾಸಿಸುತ್ತಿದ್ದ ಡ್ಯಾನಿಯೆಲನ ಹೆತ್ತವರು ತೀರ ಪ್ರಾಮಾಣಿಕರಾದ ಕ್ಯಾತೊಲಿಕರಾಗಿದ್ದರು. ಅವನ ತಂದೆ ಒಂದು ಶಾಲೆಯಲ್ಲಿ ಸಲಹೆಗಾರರಾಗಿದ್ದರು ಮತ್ತು ಕ್ಯಾತೊಲಿಕ್ ಶಾಲೆಯೊಂದರ ಧಾರ್ಮಿಕ ಬೋಧನೆಯ ಮೇಲ್ವಿಚಾರಕರಾಗಿದ್ದರು. ತನ್ನ ಹೆತ್ತವರೊಂದಿಗೆ ತಾನು ಕಲಿಯುತ್ತಿರುವ ಆತ್ಮಿಕ ರತ್ನಗಳಲ್ಲಿ ಕೆಲವನ್ನು ಹಂಚಿಕೊಳ್ಳಲು ಬಯಸುತ್ತಾ, ಅವರಿಗೆ ತನ್ನ ಪತ್ರಗಳಲ್ಲಿ ಬೈಬಲಿನ ಕೆಲವೊಂದು ವಿಚಾರಗಳನ್ನು ಡ್ಯಾನಿಯೆಲನು ಕ್ರಮೇಣ ಒಳಗೂಡಿಸಲಾರಂಭಿಸಿದನು.
ಡ್ಯಾನಿಯೆಲನ ತಾಯಿ ಆರಂಭದಲ್ಲಿ ಹರ್ಷಿಸಿದರು, ಆದರೆ ಬಳಿಕ ತನ್ನ ಮಗನ ಪತ್ರಗಳೊಂದರಲ್ಲಿ ಯೆಹೋವ ಎಂಬ ಹೆಸರನ್ನು ಕಂಡುಕೊಂಡಾಗ ಅವರು ಗಾಬರಿಗೊಂಡರು. ಕೆಲವು ದಿನಗಳ ಅನಂತರ, ಯೆಹೋವನ ಸಾಕ್ಷಿಗಳನ್ನು ಒಂದು “ಅಪಾಯಕರ ಪಂಥ” ಎಂದು ಪ್ರಸ್ತುತ ಪಡಿಸಿದ ಒಂದು ರೇಡಿಯೋ ಕಾರ್ಯಕ್ರಮವನ್ನು ಅವರು ಕೇಳಿದರು. ಯೆಹೋವನ ಸಾಕ್ಷಿಗಳೊಂದಿಗಿರುವ ಎಲ್ಲಾ ಸಂಬಂಧವನ್ನು ನಿಲ್ಲಿಸುವಂತೆ ಕೇಳಿಕೊಳ್ಳುತ್ತಾ, ಅವರು ಡ್ಯಾನಿಯೆಲನಿಗೆ ಪತ್ರಬರೆದರು. ಆದರೂ, ಡ್ಯಾನಿಯೆಲನು ತನ್ನ ಬೈಬಲ್ ಅಭ್ಯಾಸದಲ್ಲಿ ಪ್ರಗತಿ ಮಾಡುತ್ತಾ ಮುಂದುವರಿದನು ಮತ್ತು ಬೇಗನೆ ಸೇನಾ ಪಡೆಯನ್ನು ತ್ಯಜಿಸಲು ಮತ್ತು ಫ್ರಾನ್ಸ್ಗೆ ಹಿಂದಿರುಗಲು ಏರ್ಪಾಡುಗಳನ್ನು ಮಾಡಿದನು.
ಮನೆಗೆ ಹಿಂದಿರುಗಿದ ಕೂಡಲೆ, ಡ್ಯಾನಿಯೆಲನು ಪ್ರತಿ ಸಾಯಂಕಾಲವನ್ನು—ಕೆಲವೊಮ್ಮೆ ರಾತ್ರಿ ಬಹಳ ಸಮಯದ ತನಕ—ತನ್ನ ತಾಯಿಯೊಂದಿಗೆ ದೀರ್ಘವಾದ ಬೈಬಲ್ ಚರ್ಚೆಗಳಲ್ಲಿ ಕಳೆದನು. ಕೊನೆಗೆ ರಾಜ್ಯ ಸಭಾಗೃಹವೊಂದಕ್ಕೆ ಡ್ಯಾನಿಯೆಲನೊಂದಿಗೆ ಬರಲು ಅವರು ಒಪ್ಪಿಕೊಂಡರು. ತಮ್ಮ ಪ್ರಥಮ ಕೂಟಕ್ಕೆ ಅವರು ಹಾಜರಾದಾಗ, ಅವರು ಎಷ್ಟೊಂದು ಪ್ರಭಾವಿತರಾದರೆಂದರೆ, ಅವರು ಸ್ವಂತ ಬೈಬಲ್ ಅಭ್ಯಾಸವನ್ನು ಪಡೆಯಲು ಆರಂಭಿಸಿದರು. ಅವರು ತ್ವರಿತವಾದ ಪ್ರಗತಿಯನ್ನು ಮಾಡಿದರು ಮತ್ತು ಬೇಗನೆ ದೀಕ್ಷಾಸ್ನಾನವನ್ನು ಹೊಂದಿದರು.
ಡ್ಯಾನಿಯೆಲನ ತಂದೆ ಸೈರಣೆಯುಳ್ಳವರಾಗಿದ್ದರು ಆದರೆ ತಮ್ಮ ಔದ್ಯೋಗಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ತುಂಬಾ ನಿಷ್ಠರಾಗಿದ್ದರು. ಆದರೂ, ಒಂದು ಸಂದರ್ಭದಲ್ಲಿ ಅವರು ತಮ್ಮ ಹೆಂಡತಿಯನ್ನು ಮತ್ತು ಡ್ಯಾನಿಯೆಲನನ್ನು ಜಿಲ್ಲಾ ಅಧಿವೇಶನವೊಂದಕ್ಕೆ ಕರೆದೊಯ್ದರು. ಅದು ಜುಲೈ 14 ಆಗಿತ್ತು, ಮತ್ತು ನಗರದಲ್ಲಿ ಬ್ಯಾಸೀಲ್ಟ್ ದಿನದ ಮೆರವಣಿಗೆಯನ್ನು ವೀಕ್ಷಿಸುವುದು ಅವರ ಮನಸ್ಸಿನಲ್ಲಿತ್ತು. ಅವರು ಕಾಯುತ್ತಿರುವಾಗ, ಕುತೂಹಲದ ಕಾರಣದಿಂದ, ಅಧಿವೇಶನ ಸಭಾಂಗಣದ ಒಳಗೆ ನೋಡಲು ನಿರ್ಧರಿಸಿದರು. ಯೆಹೋವನ ಜನರ ಮಧ್ಯೆ ತಾನು ಕಂಡಂತಹ ಶಾಂತಿ ಮತ್ತು ವ್ಯವಸ್ಥೆಯನ್ನು, ಮತ್ತು ಅಧಿವೇಶನದ ಬೇರೆ ಬೇರೆ ವಿಭಾಗಗಳ ಮೂಲಕ ಅವರು ನಡೆಯುತ್ತಿದ್ದಾಗ, ಪ್ರತಿಯೊಬ್ಬರೂ ಅವರನ್ನು “ಸಹೋದರ” ಎಂದು ಕರೆಯುತ್ತಿದ್ದುದನ್ನು ಕಂಡು ಪ್ರಭಾವಿತರಾದರು. ಬ್ಯಾಸೀಲ್ಟ್ ದಿನದ ಮೆರವಣಿಗೆಯ ಕುರಿತು ಅವರು ಎಲ್ಲವನ್ನೂ ಮರೆತರು ಮತ್ತು ಅಧಿವೇಶನದ ಅಂತ್ಯದ ತನಕ ಉಳಿದರು. ಒಂದು ಬೈಬಲ್ ಅಭ್ಯಾಸಕ್ಕಾಗಿ ಅವರು ಕೇಳಿಕೊಂಡರು ಮತ್ತು ಸತ್ಯವನ್ನು ಕಲಿಯುವುದರಲ್ಲಿ ತೀವ್ರವಾದ ಪ್ರಗತಿಯನ್ನು ಮಾಡಿದರು. ಆದರೂ, ಅವರು ಹೆಚ್ಚೆಚ್ಚು ವಿಷಯಗಳನ್ನು ಕಲಿತಂತೆ, ತಮ್ಮ ಕೆಲಸದ ಪರಿಸ್ಥಿತಿಗಳ ಕಾರಣದಿಂದ ಅತೃಪ್ತರಾಗಲು ಆರಂಭಿಸಿದರು, ಆದುದರಿಂದ 58ರ ಪ್ರಾಯದಲ್ಲಿ, ಅವರು ತಮ್ಮ ಕೆಲಸವನ್ನು ಬಿಟ್ಟರು. ಇಂದು ಕುಟುಂಬದ ಎಲ್ಲಾ ಮೂವರು ಸದಸ್ಯರು ಸಮರ್ಪಿತ ಹಾಗೂ ಸ್ನಾನಿತ ಸೇವಕರಾಗಿದ್ದಾರೆ ಮತ್ತು ಐಕ್ಯದಿಂದ ಒಟ್ಟಿಗೆ ಯೆಹೋವನನ್ನು ಸೇವಿಸುತ್ತಿದ್ದಾರೆ.
ಬೈಬಲ್ ಸತ್ಯವು ಡ್ಯಾನಿಯೆಲನ ಕುಟುಂಬವನ್ನು ಐಕ್ಯಗೊಳಿಸಿತು. ಅವರು ಅದನ್ನು ಕಲಿಯುವುದಾದರೆ ಮತ್ತು ಮನಃಪೂರ್ವಕವಾಗಿ ಅನ್ವಯಿಸುವುದಾದರೆ ಇತರ ಕುಟುಂಬಗಳನ್ನೂ ಅದು ಐಕ್ಯಗೊಳಿಸಬಲ್ಲದು.