ವಿಲಿಯಮ್ ಹಿಸ್ವ್ಟನ್—ಪಾಷಂಡಿಯೊ, ಪ್ರಾಮಾಣಿಕ ವಿದ್ವಾಂಸನೊ?
ನಿಮ್ಮ ನಂಬಿಕೆಗಳಿಗಾಗಿ ನೀವು ನಿಮ್ಮ ಜೀವನೋಪಾಯವನ್ನು ತ್ಯಾಗಮಾಡುವಿರೋ? ವಿಲಿಯಮ್ ಹಿಸ್ವ್ಟನ್ ಹಾಗೆ ಮಾಡಿದನು.
ಅವನು 18 ನೆಯ ಶತಮಾನದ ಆರಂಭದಲ್ಲಿ ಬೈಬಲ್ ಬೋಧನೆಗಳ ಮೇಲೆ ಚರ್ಚ್ ಆಫ್ ಇಂಗ್ಲೆಂಡ್ನೊಂದಿಗೆ ಒಪ್ಪಿಕೊಳ್ಳದಿದ್ದಾಗ, ಧಾರ್ಮಿಕ ವಾಗ್ವಾದದ ಪ್ರತಿರೂಪವಾದನು. ಫಲಿತಾಂಶವಾಗಿ, ಅವನೊಬ್ಬ ಪಾಷಂಡಿಯೆಂದು ಕಳಂಕಿಸಲ್ಪಟ್ಟನು. ಹೀಗೆ ಅವನ ಮಾರ್ಗಕ್ರಮವು ಅವನಿಗೆ ಅಪಹಾಸ್ಯವನ್ನು ತಂದಿತಾದರೂ, ಅವನು ಗೌರವವನ್ನು ಗಳಿಸುವಂತೆಯೂ ಮಾಡಿತು.
ವಿಲಿಯಮ್ ಹಿಸ್ವ್ಟನ್ ಯಾರಾಗಿದ್ದನು? ಮತ್ತು ಅವನು ಏನನ್ನು ಸಾಧಿಸಿದನು?
ಒಬ್ಬ ಬೈಬಲ್ ವಿದ್ವಾಂಸ
ವಿಲಿಯಮ್ ಹಿಸ್ವ್ಟನನು ಸರ್ ಐಸಕ್ ನ್ಯೂಟನನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ತೀಕ್ಷೈಬುದ್ಧಿಯುಳ್ಳ ಸಹೋದ್ಯೋಗಿಯಾಗಿದ್ದನು. ಮೊದಲನೆಯ ಶತಮಾನದ ಯೆಹೂದಿ ಇತಿಹಾಸಗಾರನಾದ ಫ್ಲೇವಿಯಸ್ ಜೋಸೀಫಸನ ಬರವಣಿಗೆಗಳ ಇಂಗ್ಲಿಷ್ ಮುದ್ರಣವನ್ನು ನೀವು ಪರಿಗಣಿಸುವುದಾದರೆ, ಬಹುಶಃ ನೀವು 1736 ರಲ್ಲಿ ಹಿಸ್ವ್ಟನ್ನ ಮೂಲಕ ಮಾಡಲಾದ ಭಾಷಾಂತರಗಳನ್ನು ಓದುತ್ತಿರುವಿರಿ. ಇತರ ಭಾಷಾಂತರಗಳು ಅಸ್ತಿತ್ವದಲ್ಲಿ ಇರುವುದಾದರೂ, ಅವನ ಟಿಪ್ಪಣಿಗಳು ಮತ್ತು ಪ್ರಬಂಧಗಳೊಂದಿಗೆ ಅವನ ಪಾಂಡಿತ್ಯಪೂರ್ಣ ಭಾಷಾಂತರವು ಇನ್ನೂ ಮೀರಿಸಲಾಗದಿರುವ ಮತ್ತು ಪ್ರಕಾಶಕರಿಂದ ಇನ್ನೂ ಪಡೆಯಬಹುದಾದ ಪುಸ್ತಕವಾಗಿದೆ. ಅನೇಕರು ಈ ಕೃತಿಯನ್ನು ಹಿಸ್ವ್ಟನನ ಸಾಧನೆಗಳ ಪರಾಕಾಷ್ಠೆಯೆಂದು ಪರಿಗಣಿಸುತ್ತಾರೆ.
ಹಾಗಿದ್ದರೂ ಕಡೆಗಣಿಸಲಾಗದ ವಿಷಯವು, ಹಿಸ್ವ್ಟನನ ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳ ಭಾಷಾಂತರ—ಪ್ರಿಮಿಟಿವ್ ನ್ಯೂ ಟೆಸ್ಟಮೆಂಟ್ ಆಗಿದೆ. ಅದು ಅವನ 78 ನೆಯ ವಯಸ್ಸಿನಲ್ಲಿ, 1745 ರಲ್ಲಿ ಪ್ರಕಾಶಿಸಲ್ಪಟ್ಟಿತು. ಹಿಸ್ವ್ಟನ್ ನಾಲ್ಕು ಸುವಾರ್ತೆಗಳನ್ನು ಮತ್ತು ಅಪೊಸ್ತಲರ ಕೃತ್ಯಗಳನ್ನು ಕೋಡೆಕ್ಸ್ ಬೀಜೈ ಯಿಂದ, ಪೌಲನ ಪತ್ರಗಳನ್ನು ಕರ್ಲ್ಮಾಂಟ್ ಕೋಡೆಕ್ಸ್ನಿಂದ, ಮತ್ತು ಪ್ರಕಟನೆಯನ್ನು ಸೇರಿಸಿ ಉಳಿದ ಭಾಗವನ್ನು ಆ್ಯಲಿಗ್ಜ್ಯಾಂಡ್ರೀನ್ ಹಸ್ತಪ್ರತಿಯಿಂದ ಭಾಷಾಂತರಿಸಿದನು. ಅವನು ಜಾಗರೂಕತೆಯಿಂದ 1 ಯೋಹಾನ 5:7ರ ಕೃತ್ರಿಮ ಭಾಗವನ್ನು ಬಿಟ್ಟುಬಿಟ್ಟನು. ಆ ಸಮಯದಲ್ಲಿ ಲಭ್ಯವಿದ್ದ ಅತ್ಯುತ್ತಮ ಮೂಲಗಳಾಗಿ ಹಿಸ್ವ್ಟನ್ ಈ ಮೂರು ಪ್ರಾಚೀನ ಗ್ರೀಕ್ ಮೂಲಗಳನ್ನು ಆಯ್ದುಕೊಂಡನು.
ಬೈಬಲಿಗಾಗಿರುವ ಪ್ರೀತಿ ಹಿಸ್ವ್ಟನ್ ಮಾಡಿದ್ದಕ್ಕೆ ಸುವ್ಯಕ್ತ ಪ್ರಚೋದನೆಯಾಗಿತ್ತು. ದೇವರಲ್ಲಿ ನಂಬಿಕೆಗಾಗಿ ತರ್ಕವು ಏಕಮಾತ್ರ ಪರ್ಯಾಪ್ತ ಆಧಾರವಾಗಿದೆ ಎಂಬ ಬೋಧನೆ—ತಾರ್ಕಿಕ ದೈವವಾದ—ಯು ಅವನ ದಿನದಲ್ಲಿ ಪ್ರಚಲಿತವಾಗಿತ್ತು. ವಿಲಿಯಮ್ ಹಿಸ್ವ್ಟನ್—ಆನೆಸ್ಟ್ ನ್ಯೂಟೋನಿಯನ್ ಎಂಬ ಪುಸಕಕ್ಕನುಸಾರ, “ಬೈಬಲ್, ಪ್ರಾಚೀನ ಇತಿಹಾಸದ ಒಂದು ನಿಶ್ಚಿತ ಮೂಲವಾಗಿದೆಯೆಂಬ ಸಂಪ್ರದಾಯಸ್ಥ ನೋಟವನ್ನು” ಅವನು ದೃಢವಾಗಿ ಎತ್ತಿಹಿಡಿದನು. ವಿಶ್ವ ಗುರುತ್ವಾಕರ್ಷಣೆಯ ನಿಯಮವನ್ನು ನಿರೂಪಿಸಿದ ಪ್ರಿಂಸಿಪೀಯಾ ಕ್ಕಾಗಿ ಬಹು ಪ್ರಸಿದ್ಧನಾಗಿರುವ ಐಸಕ್ ನ್ಯೂಟನ್ ಗೆ “ನ್ಯೂಟೋನಿಯನ್” ಎಂಬ ಪದವು ಸೂಚಿಸುತ್ತದೆ. ನ್ಯೂಟನನ ಆಲೋಚನೆಯು ವಿಲಿಯಮ್ ಹಿಸ್ವ್ಟನನ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿತು. ಹೇಗೆ?
ಭಿನ್ನಸ್ವಭಾವದ ವ್ಯಕ್ತಿತ್ವಗಳು
ಚರ್ಚ್ ಆಫ್ ಇಂಗ್ಲೆಂಡಿನ ಪಾದ್ರಿಯ ಮಗನಾಗಿ ವಿಲಿಯಮ್ ಹಿಸ್ವ್ಟನ್ 1667 ರಲ್ಲಿ ಜನಿಸಿದನು. ಇಸವಿ 1693 ರಲ್ಲಿ ಅವನ ದೀಕ್ಷೆಯ ಬಳಿಕ, ಗಣಿತ ಶಾಸ್ತ್ರವನ್ನು ಅಭ್ಯಾಸಿಸಿ ನ್ಯೂಟನನಿಗೆ ಸಹಾಯಕನಾಗಲು ಅವನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಹಿಂದಿರುಗಿದನು. ನಿಕಟವಾದೊಂದು ಬಂಧವು ಅವರ ನಡುವೆ ವಿಕಸಿಸಿತು. ಸುಮಾರು ಮೂರು ವರ್ಷಗಳಾನಂತರ ನ್ಯೂಟನ್ ಗಣಿತ ಶಾಸ್ತ್ರದ ಲೂಕೇಷನ್ ಪ್ರೊಫೆಸರನೋಪಾದಿ ತನ್ನ ಸ್ಥಾನವನ್ನು ತ್ಯಜಿಸಿದಾಗ, ಅವನ ಬದಲು ಹಿಸ್ವ್ಟನ್ ಆ ಹುದ್ದೆಗೆ ನೇಮಿಸಲ್ಪಡುವಂತೆ ಖಚಿತಮಾಡಿಕೊಂಡನು. ತನ್ನ ವೃತ್ತಿಯಲ್ಲಿ ತೊಡಗಿರುತ್ತಾ ಹಿಸ್ವ್ಟನ್, ಖಗೋಳ ಶಾಸ್ತ್ರ ಮತ್ತು ಗಣಿತ ಶಾಸ್ತ್ರದ ಕುರಿತು ಉಪನ್ಯಾಸ ಮಾಡಿದನಾದರೂ, ಬೈಬಲಿನ ಕಾಲಗಣನ ಶಾಸ್ತ್ರ ಮತ್ತು ಸಿದ್ಧಾಂತದಲ್ಲಿ ಆಳವಾದ ಆಸಕ್ತಿಯನ್ನು ತೆಗೆದುಕೊಳ್ಳುವಂತೆ ನ್ಯೂಟನನ ಪ್ರಭಾವವು ಅವನನ್ನು ಪ್ರಚೋದಿಸಿತು.
ನ್ಯೂಟನ್ ಒಬ್ಬ ಧಾರ್ಮಿಕ ಮನುಷ್ಯನಾಗಿದ್ದನು. ಬೈಬಲಿನ ಸಹಸ್ರ ವರ್ಷದ ಆಳಿಕೆಯ ಬದ್ಧನಾದ ವಿಶ್ವಾಸಿಯಂತೆ, ದಾನಿಯೇಲ ಮತ್ತು ಪ್ರಕಟನೆಯ ಪ್ರವಾದನೆಗಳ ಮೇಲೆ ಅವನು ವಿಸ್ತಾರವಾಗಿ ಬರೆದನು. ಆದರೂ, ಈ ಬರವಣಿಗೆಗಳಲ್ಲಿ ಯಾವುದೂ ಕೂಡ ಅವನ ಜೀವಮಾನಕಾಲದಲ್ಲಿ ಪ್ರಕಾಶಿಸಲ್ಪಡಲೇ ಇಲ್ಲ. ತ್ರಯೈಕ್ಯ ತತ್ವವನ್ನು ಅವನು ತ್ಯಜಿಸಿಬಿಟ್ಟನು. ಆದರೆ ತ್ರಯೈಕ್ಯದ ವಿರುದ್ಧ ಅವನ ಪ್ರಮಾಣವನ್ನು ಪ್ರಕಾಶಿಸುವ ವಿಷಯ ಬಂದಾಗ, “ತನ್ನ ತ್ರಯೈಕ್ಯ ವಿರುದ್ಧ ದೃಷ್ಟಿಕೋನಗಳು ಗೊತ್ತಾಗಿ ಬರುತ್ತವೆ ಎಂಬ ಭಯದಲ್ಲಿ ನ್ಯೂಟನ್ ಹಿಮೆಟ್ಟಿದನು,” ಎಂಬುದಾಗಿ ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಗಮನಿಸುತ್ತದೆ. ಎಫ್. ಇ. ಮ್ಯಾನ್ಯುಎಲ್, ಐಸಕ್ ನ್ಯೂಟನ್, ಹಿಸ್ಟೋರಿಯನ್ ಎಂಬ ಪುಸ್ತಕದಲ್ಲಿ ಈ ರೀತಿಯಾಗಿ ಹೇಳುತ್ತಾರೆ: “ನ್ಯೂಟನನ ಗುಂಪು ತಮ್ಮ ಅಭಿಪ್ರಾಯಗಳನ್ನು ಒಂದೋ ಗೋಪ್ಯವಾಗಿಟ್ಟರು ಯಾ ತಮ್ಮ ಉತ್ಸಾಹವನ್ನು ತಡೆದುಕೊಂಡರು. . . . ನ್ಯೂಟನ್ ಗೋಪ್ಯಪ್ರವೃತ್ತಿಯವನಾಗಿದ್ದರೆ, ಹಿಸ್ವ್ಟನ್ ಮುಚ್ಚುಮರೆಯಿಲ್ಲದೆ ಮಾತಾಡುವವನಾಗಿದ್ದನು.” ಹೀಗೆ ಆ ಇಬ್ಬರು ಪುರುಷರಿಗೆ ಭಿನ್ನಸ್ವಭಾವದ ವ್ಯಕ್ತಿತ್ವಗಳಿದ್ದವು.
ಬಹಿಷ್ಕಾರ
ಆ್ಯಥನೇಷಿಯನ್ ಮತಸೂತ್ರದಲ್ಲಿ ಪ್ರತಿಬಿಂಬಿಸಲ್ಪಟ್ಟಂತೆ, ತ್ರಯೈಕ್ಯದ ಸುಳ್ಳು ಬೋಧನೆಯ ನೋಟದಲ್ಲಿ ಚರ್ಚ್ ಆಫ್ ಇಂಗ್ಲೆಂಡ್ ತತ್ವದ ಸುಧಾರಣೆಯನ್ನು ಪ್ರಚೋದಿಸುತ್ತಾ, ಜುಲೈ 1708 ರಲ್ಲಿ ಹಿಸ್ವ್ಟನ್ ಕ್ಯಾಂಟರ್ಬರಿ ಮತ್ತು ಯಾರ್ಕ್ನ ಪ್ರಧಾನ ಬಿಷಪ್ಗಳಿಗೆ ಬರೆದನು. ಗ್ರಾಹ್ಯವಾಗಿಯೇ, ಎಚ್ಚರವಾಗಿರುವಂತೆ ಅವನಿಗೆ ಸಲಹೆ ದೊರೆಯಿತು. ಆದರೂ ಹಿಸ್ವ್ಟನ್ ದೃಢವಾಗಿದ್ದನು. “ನಾನು ಈ ಅಂಶಗಳನ್ನು ಸಂಪೂರ್ಣವಾಗಿ ಅಭ್ಯಾಸಿಸಿದ್ದೇನೆ ಮತ್ತು ಕ್ರೈಸ್ತ ಚರ್ಚು ಈ ಅಂಶಗಳ ಕುರಿತು ಬಹಳ ಕಾಲದಿಂದ ವಂಚಿಸಲ್ಪಟ್ಟಿದೆ ಎಂದು ನನಗೆ ಸಂಪೂರ್ಣವಾಗಿ ಮನದಟ್ಟಾಗಿದೆ; ಮತ್ತು ದೇವರ ಆಶೀರ್ವಾದದಿಂದ, ಅದು ನನ್ನ ಶಕ್ತಿಯಲ್ಲಿರುವುದಾದರೆ, ಕ್ರೈಸ್ತ ಚರ್ಚು ಇನ್ನು ಮುಂದೆ ಮೋಸಹೋಗಲಾರದು” ಎಂದು ಅವನು ಹೇಳಿದನು.
ತನ್ನ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಾನಕ್ಕಾಗಿ ನ್ಯೂಟನ್ ಭಯಪಟ್ಟನು. ಇನ್ನೊಂದು ಕಡೆಯಲ್ಲಿ ಹಿಸ್ವ್ಟನ್ ಹಾಗೆ ಭಯಪಡಲಿಲ್ಲ. ತನ್ನ ತ್ರಯೈಕ್ಯ ವಿರುದ್ಧ ನಂಬಿಕೆಗಳನ್ನು ರೂಪಿಸಿದ ಮೇಲೆ, ತನ್ನ ದೃಷ್ಟಿಕೋನಗಳನ್ನು ಸಾದರಪಡಿಸುವ ಒಂದು ಲಘು ಪುಸ್ತಕವನ್ನು ಅವನು ಬರೆದನು. ಆದರೆ ಆಗಸ್ಟ್ 1708 ರಲ್ಲಿ, ಅದು ಸ್ವತಂತ್ರ ವಿಚಾರದ್ದೆಂದು ಪರಿಗಣಿಸಲ್ಪಟ್ಟ ಕಾರಣದಿಂದ, ಹಿಸ್ವ್ಟನನಿಗೆ ಈ ವಿಷಯವನ್ನು ಮುದ್ರಿಸುವ ಅನುಮತಿಯನ್ನು ನೀಡಲು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯವು ನಿರಾಕರಿಸಿತು.
ಇಸವಿ 1710 ರಲ್ಲಿ, ಚರ್ಚ್ ಆಫ್ ಇಂಗ್ಲೆಂಡಿನ ನಂಬಿಕೆಗೆ ವಿರುದ್ಧವಾಗಿರುವ ತತ್ವವನ್ನು ಕಲಿಸುವ ವಿಷಯಕ್ಕಾಗಿ ಹಿಸ್ವ್ಟನ್ ಆರೋಪಿಸಲ್ಪಟ್ಟನು. ಅವನು ದೋಷಿಯಾಗಿ ಕಂಡುಬಂದು, ತನ್ನ ಪ್ರೊಫೆಸರ್ ವೃತ್ತಿಯನ್ನು ಕಳೆದುಕೊಂಡು, ಕೇಂಬ್ರಿಡ್ಜ್ ನಿಂದ ದೂರೀಕರಿಸಲ್ಪಟ್ಟನು. ಹಾಗಿದ್ದರೂ, ಅವನ ವಿರುದ್ಧ ಸುಮಾರು ಇನ್ನೂ ಐದು ವರ್ಷಗಳ ಕಾಲ ಮುಂದುವರಿದ ಕಾನೂನಿನ ಕಾರ್ಯವಿಧಿಗಳ ಹೊರತೂ, ಹಿಸ್ವ್ಟನ್ ಪಾಷಂಡವಾದದ ಕುರಿತಾಗಿ ತಪ್ಪಿತಸ್ಥನೆಂದು ಎಂದೂ ನಿರ್ಣಯಿಸಲ್ಪಡಲಿಲ್ಲ.
ತನ್ನ ತ್ರಯೈಕ್ಯ ವಿರುದ್ಧವಾದ ನೋಟಗಳು ಹಿಸ್ವ್ಟನನ ನೋಟಗಳಿಗೆ ಸಮಾನವಾಗಿದ್ದರೂ, ನ್ಯೂಟನ್ ತನ್ನ ಸ್ನೇಹಿತನ ಪರವಾಗಿ ಮಾತಾಡಲಿಲ್ಲ ಮತ್ತು ಅಂತಿಮವಾಗಿ ಅವನನ್ನು ಬಹಿಷ್ಕರಿಸಿದನು. ಇಸವಿ 1754 ರಲ್ಲಿ, ಅವನ ಮರಣದ 27 ವರ್ಷಗಳಾನಂತರ, ತ್ರಯೈಕ್ಯವನ್ನು ಬಯಲುಗೊಳಿಸುವ ನ್ಯೂಟನನ ಬೈಬಲಿನ ಪಾಂಡಿತ್ಯ ಕೊನೆಯದಾಗಿ ಪ್ರಕಟಿಸಲಾಯಿತು. ಇದಕ್ಕೆ ಎರಡು ವರ್ಷಗಳ ಮುಂದೆ ತೀರಿ ಹೋಗಿದ್ದ ಹಿಸ್ವ್ಟನನಿಗೆ ಯಾವುದೇ ಸಹಾಯದ್ದಾಗಿರಲು ಅದು ತುಂಬಾ ತಡವಾಗಿತ್ತು.
ಹಿಸ್ವ್ಟನನನ್ನು ಪ್ರತಿಷ್ಠೆಯ ರಾಯಲ್ ಸೊಸೈಟಿಯಿಂದ ನಿಷೇಧಿಸುವುದಕ್ಕಾಗಿ ಸಹ ನ್ಯೂಟನ್ ಹೊಣೆಗಾರನೆಂದು ಪರಿಗಣಿಸಲಾಗಿದೆ. ಆದರೆ ಹಿಸ್ವ್ಟನ್ ಅಧೈರ್ಯಗೊಳ್ಳಲಿಲ್ಲ. ಆದ್ಯ ಕ್ರೈಸ್ತತ್ವವನ್ನು ಪ್ರವರ್ತಿಸಲು ಸಂಸ್ಧೆಯೊಂದನ್ನು ತಾನು ಎಲ್ಲಿ ಸ್ಥಾಪಿಸಿದನೋ ಆ ಲಂಡನ್ಗೆ ಅವನು ಮತ್ತು ಅವನ ಕುಟುಂಬವು ಸ್ಥಳಬದಲಾಯಿಸಿತು. ತನ್ನ ಎಲ್ಲಾ ಶಕ್ತಿಗಳನ್ನು ಅವನು ಬರವಣಿಗೆಯಲ್ಲಿ ವ್ಯಯಿಸಿದನು, ಮತ್ತು ಆ ಸಮಯದ ವರೆಗೆ ಅವನ ಅತ್ಯಂತ ಪ್ರಾಮುಖ್ಯ ಕೃತಿಯು ಪ್ರಿಮಿಟಿವ್ ಕ್ರಿಸ್ಟ್ಯಾನಿಟಿ ರಿವೈವ್ಡ್ನ ನಾಲ್ಕು ಸಂಪುಟಗಳಾಗಿದ್ದವು.
ಅಂತ್ಯದ ವರೆಗೆ ವಿವಾದಾತ್ಮಕ
ಒಬ್ಬ ವಿಜ್ಞಾನಿಯೋಪಾದಿ ಹಿಸ್ವ್ಟನ್, ಸಮುದ್ರದಲ್ಲಿ ರೇಖಾಂಶವನ್ನು ನಿಶ್ಚಯಿಸಲು ನಾವಿಕರಿಗಾಗಿ ವಿಭಿನ್ನ ಮಾರ್ಗಗಳ ಮೇಲೆ ಕೆಲಸಮಾಡಿದನು. ಅವನ ವಿಚಾರಗಳು ಸ್ವೀಕರಿಸಲ್ಪಡದಿದ್ದರೂ ಕೂಡ, ಅವನ ಪಟ್ಟುಹಿಡಿದಿರುವಿಕೆ ಕಟ್ಟಕಡೆಗೆ ಕಡಲಿನ ಕಾಲಮಾಪಕದ ವಿಕಾಸಕ್ಕೆ ನಡೆಸಿತು. ಅವನ ಸಮಕಾಲೀನರಂತೆ ಬೈಬಲ್ ಪ್ರವಾದನೆಗಳ ಬಗ್ಗೆ ಹಿಸ್ವ್ಟನನ ಅನೇಕ ದೃಷ್ಟಿಕೋನಗಳು ನಿಷ್ಕೃಷ್ಟವಲ್ಲವೆಂದು ರುಜುವಾಗಿವೆಯಾದರೂ, ಸತ್ಯಕ್ಕಾಗಿ ಅವನ ಅನ್ವೇಷಣೆಯಲ್ಲಿ ಸಾಧ್ಯವಿದ್ದ ಎಲ್ಲಾ ವಿಧಾನಗಳನ್ನು ಅವನು ಪ್ರಯತ್ನಿಸಿದನು. ಧೂಮಕೇತುಗಳ ಕಕ್ಷೆಯ ಕುರಿತಾದ ಅವನ ಕಿರುಹೊತ್ತಗೆಗಳು ಮತ್ತು ನೋಹನ ದಿನದ ಜಲಪ್ರಳಯದ ಪರಿಣಾಮಗಳ ಬಗ್ಗೆ ಅವನ ಆಧಾರದ ಪ್ರತಿಜ್ಞೆಗಳು, ವೈಜ್ಞಾನಿಕ ಹಾಗೂ ಬೈಬಲಿನ ಸತ್ಯವನ್ನು ಸಮರ್ಥಿಸಲು ಅವನು ಬರೆದ ಅನೇಕ ವಿಷಯಗಳಲ್ಲಿ ಕೆಲವಾಗಿವೆ. ಹಾಗಿದ್ದರೂ, ಅವನ ಇತರ ಬರವಣಿಗೆಗಳಿಗೆ ಅತೀತವಾಗಿರುವ ಬರವಣಿಗೆಗಳು, ತ್ರಯೈಕ್ಯ ತತ್ವವನ್ನು ಅಶಾಸ್ತ್ರೀಯವೆಂದು ಬಯಲುಪಡಿಸುವುವುಗಳೇ.
ಅವನು ಸಾಮಾನ್ಯವಾಗಿ ವರ್ತಿಸುತ್ತಿದ್ದಂತೆಯೇ, ಹಿಸ್ವ್ಟನ್ ಚರ್ಚ್ ಆಫ್ ಇಂಗ್ಲೆಂಡನ್ನು 1747 ರಲ್ಲಿ ಬಿಟ್ಟನು. ಆ್ಯಥನೇಷಿಯನ್ ಮತಸೂತ್ರವನ್ನು ಪಾದ್ರಿಯೊಬ್ಬನು ಓದಲಾರಂಭಿಸಿದಾಗ ಅವನು ಹೊರಗೆ ಎದ್ದು ಹೋದಂತೆ ಅವನು ಅಕ್ಷರಾರ್ಥಕವಾಗಿಯೂ ಸಾಂಕೇತಿಕವಾಗಿಯೂ ಚರ್ಚನ್ನು ಬಿಟ್ಟನು. ಹಿಸ್ವ್ಟನನ ಕುರಿತು ಎ ರಿಲಿಜಿಯಸ್ ಎನ್ಸೈಕ್ಲೊಪೀಡಿಯ ಹೇಳುವುದು: “ಅವನ ಗುಣದ ಪುರುಷಯೋಗ್ಯ ಬಿಚ್ಚುಮನಸ್ಸು ಮತ್ತು ಸತ್ಯತೆ, ಅವನ ಜೀವಿತದ ಸಮಂಜಸತೆ, ಮತ್ತು ಅವನ ನಡತೆಯ ಮುಚ್ಚುಮರೆಯಿಲ್ಲದಿರುವಿಕೆಯನ್ನು ಒಬ್ಬನು ಮೆಚ್ಚಬೇಕು.”
ವಿಲಿಯಮ್ ಹಿಸ್ವ್ಟನನಿಗೆ, ಸತ್ಯದ ಸಂಬಂಧದಲ್ಲಿ ಒಪ್ಪಂದ ಮಾಡುವುದು ಅಸಾಧ್ಯವಾಗಿತ್ತು, ಮತ್ತು ವೈಯಕ್ತಿಕ ನಂಬಿಕೆಗಳು ಮನುಷ್ಯರ ಪ್ರಶಂಸೆ ಮತ್ತು ಗೌರವಕ್ರಿಯೆಗಳಿಗಿಂತಲೂ ಅಧಿಕ ಅಮೂಲ್ಯವಾಗಿದ್ದವು. ಹಿಸ್ವ್ಟನ್ ವಿವಾದಾತ್ಮಕನಾಗಿದ್ದರೂ, ಬೈಬಲನ್ನು ದೇವರ ವಾಕ್ಯವೆಂದು ಭಯವಿಲ್ಲದೆ ಸಮರ್ಥಿಸಿದ ಪ್ರಾಮಾಣಿಕ ವಿದ್ವಾಂಸನಾಗಿದ್ದನು.—2 ತಿಮೊಥೆಯ 3:16, 17.
[ಪುಟ 26 ರಲ್ಲಿರುವ ಚಿತ್ರ ಕೃಪೆ]
Copyright British Museum