ಸ್ವರ್ಗಾರೋಹಣ—ದೇವರಿಂದ ಪ್ರಕಟಿತವಾದ ತತ್ವವೋ?
ಸ್ವರ್ಗಾರೋಹಣ—ಯೇಸುವಿನ ತಾಯಿಯಾದ ಮರಿಯಳು ಮಾಂಸಿಕ ದೇಹದಲ್ಲಿ ಸ್ವರ್ಗಕ್ಕೆ ಏರಿಹೋದಳು ಎಂಬ ಬೋಧನೆಯು—ಲಕ್ಷಾಂತರ ರೋಮನ್ ಕ್ಯಾತೊಲಿಕರಿಂದ ನೆಚ್ಚಲ್ಪಡುತ್ತದೆ. ಇತಿಹಾಸಕಾರ ಜಾರ್ಜ್ ವಿಲ್ಯಮ್ ಡಗ್ಲಸ್ ಹೇಳುವುದು: “ಸ್ವರ್ಗಾರೋಹಣ, ಅಥವಾ ಮೇರಿ ಕನ್ಯೆಯನ್ನು ಸ್ವರ್ಗಕ್ಕೆ ತಕ್ಕೊಳ್ಳುವಿಕೆಯು [ಬಹಳ] ಕಾಲದಿಂದ ಅವಳ ಉತ್ಸವಗಳಲ್ಲಿ ಅತ್ಯಂತ ದೊಡ್ಡದಾಗಿ ಪೂಜ್ಯವೆನಿಸಲ್ಪಟ್ಟಿದೆ ಮತ್ತು ಚರ್ಚ್ ವರ್ಷದ ಮುಖ್ಯ ಸಂಸ್ಕಾರಗಳಲ್ಲಿ ಒಂದಾಗಿದೆ.”
ಕ್ಯಾತೊಲಿಕ್ ವೇದ ಶಾಸ್ತ್ರಜ್ಞರಾದರೋ, ಅಂಥ ಒಂದು ಸ್ವರ್ಗಾರೋಹಣವನ್ನು ಮರಿಯಳು ಮಾಡಿದ್ದಾಳೆಂಬದಾಗಿ ಬೈಬಲ್ ಹೇಳುವುದಿಲ್ಲ ಎಂಬದನ್ನು ಒಪ್ಪುತ್ತಾರೆ. ಈ ಪ್ರೀತಿಪಾತ್ರ ಬೋಧನೆಯು ಶತಮಾನಗಳಷ್ಟು ಹಳೆಯ ವಾಗ್ವಾದದ ಮತ್ತು ಕಟು ಚರ್ಚಾಸ್ಪದ ವಿಷಯವಾಗಿರುತ್ತದೆಂದು ಅರಿತಿರುವ ಕ್ಯಾತೊಲಿಕರಾದರೋ ಕೊಂಚಜನ ನಿಶ್ಚಯ. ಹೀಗೆ, ಮರಿಯಳ ಸ್ವರ್ಗಾರೋಹಣವನ್ನು ಚರ್ಚು ಮತೀಯ ತತ್ವವಾಗಿ ಸ್ವೀಕರಿಸುವಂಥಾದದ್ದು ಹೇಗೆ?a ಅದು ದೈವಿಕವಾಗಿ ಪ್ರಕಟಿತವಾದದ್ದೆಂದು ವೀಕ್ಷಿಸುವುದಕ್ಕೆ ಯಾವ ಕಾರಣವಾದರೂ ಇದೆಯೇ? ಈ ಪ್ರಶ್ನೆಗಳಿಗೆ ಉತ್ತರವು ಕೇವಲ ತಾತ್ವಿಕವಲ್ಲ. ಸತ್ಯ ಪ್ರೇಮಿಗಳಾದ ಯಾರನ್ನಾದರೂ ಅವು ಗಾಢವಾದ ಪರಿಣಾಮಗಳಲ್ಲಿ ತೊಡಕಿಸುತ್ತವೆ.
ಒಂದು ಮತೀಯ ತತ್ವದ ವಿಕಸನ
ಯೇಸುವಿನ ಮರಣದ ಅನಂತರದ ಮೊದಲ ಶತಕಗಳಲ್ಲಿ, ಮರಿಯಳ ಸ್ವರ್ಗಾರೋಹಣದ ವಿಚಾರವು ಕ್ರೈಸ್ತರ ವಿವೇಚನಾಶಕ್ತಿಗೆ ಪೂರಾ ಅಪರಿಚಿತವಾಗಿತ್ತೆಂದು ತಿಳಿಯುವುದು ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ವೇದಶಾಸ್ತ್ರಜ್ಞ ಜಾನ್ ಗ್ಯಾಲೊ, ಲೊಸ್ಸರ್ವೆಟೊರ್ ರೊಮಾನೊ ದಲ್ಲಿ ಬರೆಯುವುದು: “ಆರಂಭದಲ್ಲಿ, ಮರಿಯಳ ಮರಣದ ಯಾವ ಸ್ಮರಣೆಯೂ ಕ್ರೈಸ್ತ ಸಮಾಜದಲ್ಲಿ ಜತೆಗೂಡಿರಲಿಲ್ಲ.”
ತ್ರಯೈಕ್ಯ ಬೋಧನೆಯು ಅಧಿಕೃತ ಚರ್ಚ್ ತತ್ವವಾದಾಗಲಾದರೋ, ಮರಿಯಳಿಗೆ ಅಧಿಕಾಧಿಕ ಮಹತ್ವದ ಪಾತ್ರವು ಕೊಡಲ್ಪಡತೊಡಗಿತು. “ದೇವರ ಮಾತೆ,” “ಪಾಪರಹಿತವಾಗಿ ಗರ್ಭಧರಿಸಿದವಳು,” “ಮಧ್ಯಸ್ಥಗಾರ್ತಿ,” ಮತ್ತು “ಸ್ವರ್ಗದ ರಾಣಿ” ಯಂತಹ ಉಜ್ವಲ ನಾಮಗಳು ಆಕೆಗೆ ಅನ್ವಯಿಸಲ್ಪಡ ತೊಡಗಿದವು. ಕಾಲಾನಂತರ, ವೇದಶಾಸ್ತ್ರಜ್ಞ ಗ್ಯಾಲೊ ವಿವೇಚಿಸುವುದು, “ಮರಿಯಳ ಮರಣದ ಸಂಬಂಧದಲ್ಲಿ ಆದಿಕಾಲದ ಸಂಪ್ರದಾಯದ ಮೌನವು, ಮರಿಯಳ ಪರಿಪೂರ್ಣತೆಯನ್ನು ಅಂಗೀಕರಿಸಿದ ಮತ್ತು ಆಕೆಯನ್ನು ಪೂಜಿಸ ಬಯಸಿದ ಆ ಕ್ರೈಸ್ತರನ್ನು ಪೂರ್ಣವಾಗಿ ತೃಪ್ತಿಗೊಳಿಸಲು ಸಾಧ್ಯವಿರಲಿಲ್ಲ. ಹೀಗೆ, ಜನಪ್ರಿಯ ಕಲ್ಪನೆಗಳ ಉತ್ಪಾದನೆಗಳಾದ ಸ್ವರ್ಗಾರೋಹಣದ ವರ್ಣನೆಗಳು, ಸೂತ್ರೀಕರಿಸಲ್ಪಟ್ಟವು.”
ಸುಮಾರು ಸಾ.ಶ. ನಾಲ್ಕನೆಯ ಶತಮಾನದಲ್ಲಿ, ಸ್ವರ್ಗಾರೋಹಣದ ಪ್ರಮಾಣವೆನಿಸಿದ ಬರಹಗಳು ಪ್ರಚಾರವಾಗತೊಡಗಿದವು. ಈ ಬರಹಗಳು ಮರಿಯಳ ಊಹಿತ ಸ್ವರ್ಗಾರೋಹಣದ ಚಿತ್ರ ವಿಚಿತ್ರವಾದ ವೃತ್ತಾಂತಗಳನ್ನು ಕೊಟ್ಟವು. ದೃಷ್ಟಾಂತಕ್ಕೆ, “ದೇವರ ಪವಿತ್ರ ಮಾತೆಯ ನಿದ್ರೆಹೋಗುವಿಕೆ” ಎಂಬ ವಚನವನ್ನು ತಕ್ಕೊಳ್ಳಿರಿ. ಅದು ಬೇರೆ ಯಾರಿಗೂ ಅಲ್ಲದೆ ಅಪೊಸ್ತಲ ಯೋಹಾನನಿಗೇ ಅಧ್ಯಾರೋಪಿಸಲ್ಪಟ್ಟಿದೆ, ಆದರೂ, ಅಧಿಕ ಸಂಭವನೀಯವಾಗಿ ಅದು ಯೋಹಾನನ ಮರಣದ ಸುಮಾರು 400 ವರ್ಷಗಳ ಅನಂತರ ರಚಿಸಲ್ಪಟ್ಟಿತ್ತು. ಈ ಹುಸಿ ವೃತ್ತಾಂತಕ್ಕೆ ಅನುಸಾರವಾಗಿ, ಕ್ರಿಸ್ತನ ಶಿಷ್ಯರು, ಎಲ್ಲಿ ಮರಿಯಳು ಕುರುಡರನ್ನು, ಕಿವುಡರನ್ನು, ಮತ್ತು ಕುಂಟರನ್ನು ವಾಸಿಮಾಡುವುದನ್ನು ಕಂಡರೋ ಅಲ್ಲಿ ಅದ್ಭುತಕರವಾಗಿ ಅವಳಿಗೆ ಸೇರಿಸಲ್ಪಟ್ಟರು. ಕೊನೆಗೆ, ಇಲ್ಲಿ ಹೇಳಲ್ಪಟ್ಟಂತೆ, ಕರ್ತನು ಮರಿಯಳಿಗೆ ಹೀಗನ್ನುವುದನ್ನು ಅಪೊಸ್ತಲರು ಕೇಳಿದರು: “ಇಗೋ, ಇಂದಿನಿಂದ ನಿನ್ನ ಅಮೂಲ್ಯ ದೇಹವು ಪರದೈಸಕ್ಕೆ ವರ್ಗಾಯಿಸಲ್ಪಡುವುದು, ಮತ್ತು ನಿನ್ನ ಪವಿತ್ರ ಆತ್ಮವು, ಎಲ್ಲಿ ಪವಿತ್ರ ದೇವದೂತರ ಶಾಂತಿಯೂ ಉಲ್ಲಾಸವೂ ಇರುವುದೋ ಆ ಪರಲೋಕದಲ್ಲಿ ನನ್ನ ತಂದೆಯ ನಿಕ್ಷೇಪಗಳಲ್ಲಿ ಅತಿಶಯ ಪ್ರಭೆಯಲ್ಲಿರುತ್ತಾ, ನಿರಂತರತೆಯಲ್ಲಿ ನೆಲೆಸುವುದು.”
ಅಂತಹ ಬರಹಗಳಿಗೆ ವಿಶ್ವಾಸಿಗಳು ಹೇಗೆ ಪ್ರತಿಕ್ರಿಯಿಸಿದರು? ಮೇರಿ ಕನ್ಯೆ ಶಾಸ್ತ್ರಜ್ಞ ರೆನಿ ಲಾರೆಂಟನ್ ವಿವರಿಸುವುದು: “ಪ್ರತಿಕ್ರಿಯೆಗಳು ಅತಿ ಭಿನ್ನವಾಗಿದ್ದವು. ಸುಲಭವಾಗಿ ನಂಬಿಬಿಡುವವರು, ಯಾವುದೇ ಹೆಚ್ಚಿನ ಆಕ್ಷೇಪಣೆಯಿಲ್ಲದೆ ಅಂದವಾಗಿ ಹೆಣೆದ ಕಥೆಯ ಮಿರುಗಿನಿಂದ ಸೆಳೆಯಲ್ಪಟ್ಟರು. ಇತರರು, ಹೆಚ್ಚಾಗಿ ವಿರೋಧಾತ್ಮಕವಾದ ಮತ್ತು ಅಧಿಕೃತವಲ್ಲದ ಈ ಅಸಂಗತ ವೃತ್ತಾಂತಗಳನ್ನು ಹೇಸುತ್ತಾರೆ.” ಹೀಗೆ ಸ್ವರ್ಗಾರೋಹಣ ಕಲ್ಪನೆಗೆ ಅಧಿಕೃತವಾಗಿ ಸ್ವೀಕರಿಸಲ್ಪಡಲು ಒದ್ದಾಡ ಬೇಕಾಯಿತು. ಕೆಲವು ಸ್ಥಳಗಳಲ್ಲಿ ಮರಿಯಳ ದೇಹದ ಊಹಿತ ಅವಶೇಷಗಳು ಪೂಜಿಸಲ್ಪಡುತ್ತಿದ್ದ ನಿಜತ್ವವು, ಗಲಿಬಿಲಿಗೆ ಇನ್ನಷ್ಟನ್ನು ಕೂಡಿಸಿತು. ಅವಳ ಮಾಂಸಿಕ ದೇಹವು ಸ್ವರ್ಗಕ್ಕೆ ತಕ್ಕೊಳ್ಳಲ್ಪಟ್ಟಿದೆ ಎಂಬ ನಂಬಿಕೆಯೊಂದಿಗೆ ಇದನ್ನು ಹೊಂದಿಸಿಕೊಳ್ಳಲು ಕಷ್ಟವಾಗಿತ್ತು.
“ಶಾಸ್ತ್ರಗ್ರಂಥವು ಅದನ್ನು ಕಲಿಸದೆ” ಇರುವುದರಿಂದ, ಸ್ವರ್ಗಾರೋಹಣವನ್ನು ಮತೀಯ ತತ್ವವಾಗಿ ನಿರೂಪಿಸುವುದಕ್ಕೆ ಶಕ್ಯವಿಲ್ಲವೆಂಬದನ್ನು ಹದಿಮೂರನೆಯ ಶತಮಾನದಲ್ಲಿ, ತಾಮಸ್ ಅಕಿನ್ವಾಸ್, ಬೇರೆ ಅನೇಕ ವೇದಶಾಸ್ತ್ರಜ್ಞರಂತೆ ಸಮರ್ಥನೆ ಮಾಡಿದನು. ಆದರೂ, ಆ ನಂಬಿಕೆ ಜನಪ್ರಿಯತೆಯಲ್ಲಿ ಬೆಳೆಯುತ್ತಾ ಮುಂದರಿಯಿತು, ಮತ್ತು ರಫೇಲ್, ಕೊರೆಗ್ಯೊ, ಟೈಟ್ಯನ್, ಕೆರಸ್ಸಿ, ಮತ್ತು ರ್ಯೂಬೆನ್ಸ್ರಂಥ ಖ್ಯಾತ ಕಲಾಕಾರರಿಂದ ಮರಿಯಳ ಊಹಕ ಸ್ವರ್ಗಾರೋಹಣದ ಭಾವಚಿತ್ರ ರಚಿಸುವಿಕೆಗಳು ಹೆಚ್ಚುತ್ತಾ ಹೋದವು.
ತೀರ ಇತ್ತೀಚೆಯ ತನಕ ವಾಗ್ವಾದವು ಅನಿರ್ಧರಿತವಾಗಿಯೇ ಉಳಿದಿತ್ತು. ಜೆಸ್ಯುಯಿಟ್ ಜುಚೆಪ್ಪ್ ಫಿಲೊಗ್ರೇಸ್ಗೆ ಅನುಸಾರವಾಗಿ, ನಮ್ಮ ಶತಮಾನದ ಪೂರ್ವಾರ್ಧದಷ್ಟು ಈಚೆಗೆ, ಕ್ಯಾತೊಲಿಕ್ ವಿದ್ವಾಂಸರು, ಸ್ವರ್ಗಾರೋಹಣ ಕಲ್ಪನೆಗೆ “ಯಾವಾಗಲೂ ಬೆಂಬಲ ಕೊಡದ ಅಧ್ಯಯನ ಮತ್ತು ಚರ್ಚೆಗಳನ್ನು” ಪ್ರಕಟಿಸುವುದನ್ನು ಮುಂದರಿಸಿದ್ದರು. ಪೋಪರುಗಳಾದ XIII ನೆಯ ಲಿಯೊ, X ನೆಯ ಪೈಅಸ್, ಮತ್ತು XV ನೆಯ ಬೆನೆಡಿಕ್ಟ್ರು ಸಹ “ವಿಷಯದ ಮೇಲೆ ಹೆಚ್ಚಾಗಿ ಅಪ್ರಕಟವಾಗಿದ್ದರು.” ಆದರೆ ನವಂಬರ 1, 1950 ರಲ್ಲಿ, ಚರ್ಚು ಕೊನೆಗೆ ಒಂದು ನಿರ್ಧಾರಕ ನಿಲುವನ್ನು ತಕ್ಕೊಂಡಿತು. ಪೋಪ್ XI ನೆಯ ಪೈಅಸ್ ಪ್ರಕಟಿಸಿದ್ದು: “ಸದಾ ಕನ್ನಿಕೆಯಾಗಿರುವ ಮೂಲ ಪಾಪದೋಷವಿಲ್ಲದ ದೇವ ಮಾತೆ ಮೇರಿಯು, ಅವಳ ಭೂ ಜೀವನ ಯಾತ್ರೆಯು ಮುಗಿದಾಗ, ದೇಹಾತ್ಮ ಸಹಿತವಾಗಿ ಪರಲೋಕದ ಮಹಿಮೆಗೆ ಒಯ್ಯಲ್ಪಟ್ಟಳೆಂಬದನ್ನು ದೇವರಿಂದ ಪ್ರಕಟಿಸಲ್ಪಟ್ಟ ಮತೀಯ ತತ್ವವಾಗಿ ನಾವು ನಿರೂಪಿಸುತ್ತೇವೆ.”—ಮ್ಯುನಿಫಿಕೆಂಟಿಸ್ಮಸ್ ಡಿಯೊಸ್.
ಪರಲೋಕಕ್ಕೆ ಮರಿಯಳ ದೈಹಿಕ ಪಯಣದಲ್ಲಿ ನಂಬಿಕೆಯು ಕ್ಯಾತೊಲಿಕರ ನಡುವೆ ಇನ್ನುಮುಂದೆ ಐಚ್ಛಿಕವಾಗಿರಲಿಲ್ಲ—ಅದೀಗ ಚರ್ಚ್ ಬೋಧನೆಯಾಗಿತ್ತು. ಪೋಪ್ XII ನೆಯ ಪೈಅಸ್ ಘೋಷಿಸಿದ್ದೇನಂದರೆ “ಯಾರಾದರೂ . . . ನಾವು ಏನನ್ನು ನಿರೂಪಿಸಿದ್ದೇವೋ ಅದನ್ನು ಅಲ್ಲಗಳೆಯಲು ಸಾಹಸಪಟ್ಟರೆ ಯಾ ಸಯ್ವಿಚ್ಛೆಯಿಂದ ಅದನ್ನು ಸಂದೇಹಿಸಿದ್ದಾದರೆ, ಅವನು ದೈವಿಕ ಮತ್ತು ಕ್ಯಾತೊಲಿಕ್ ನಂಬಿಕೆಯ ಮಟ್ಟವನ್ನು ಮುಟ್ಟಲು ತಪ್ಪಿದವನೆಂದು ತಿಳಿದುಕೊಳ್ಳತಕ್ಕದ್ದು.”
ಶಾಸ್ತ್ರವಚನಗಳು ನಿಜವಾಗಿಯೂ ಹೇಳುವ ವಿಷಯ
ಆದರೆ ಈ ಧೀರ ನಿಲುವನ್ನು ಚರ್ಚು ತಕ್ಕೊಂಡದ್ದು ಯಾವ ಆಧಾರದ ಮೇಲೆ? ಪೋಪ್ XII ನೆಯ ಪೈಅಸ್ ವಾದಿಸಿದ್ದೇನಂದರೆ ಸ್ವರ್ಗಾರೋಹಣ ತತ್ವಕ್ಕೆ “ಪವಿತ್ರ ಶಾಸ್ತ್ರದಲ್ಲಿ ಅದರ ಮೂಲಭೂತ ಅಸ್ತಿವಾರವಿದೆ.” ಮರಿಯಳ ಸ್ವರ್ಗಾರೋಹಣಕ್ಕೆ ರುಜುವಾತಾಗಿ ಆಗಿಂದಾಗ್ಗೆ ಉದಾಹರಿಸಲ್ಪಡುವ ವಚನಗಳಲ್ಲಿ ಲೂಕ 1:28, 42 ಒಂದಾಗಿದೆ. ಈ ವಚನಗಳು ಮರಿಯಳ ಕುರಿತು ಹೇಳುವುದು: “ಕೃಪಾಪೂರ್ಣಳೇ, ನಿನಗೆ ಜಯಕಾರವಾಗಲಿ; ಕರ್ತನು ನಿನ್ನ ಸಂಗಡ ಇದ್ದಾನೆ. . . . ನೀನು ಸ್ತ್ರೀಯರೊಳಗೆ ಆಶೀರ್ವಾದ ಹೊಂದಿದವಳು ಮತ್ತು ನಿನ್ನ ಗರ್ಭಫಲವು ಆಶೀರ್ವಾದ ಹೊಂದಿದ್ದು.” (Douay) ಮರಿಯಳು “ಕೃಪಾಪೂರ್ಣಳು” ಆಗಿದ್ದ ಕಾರಣ ಆಕೆಯೆಂದೂ ಮರಣಾಧೀನವಾಗಿರಲಿಲ್ಲವೆಂದು ಸ್ವರ್ಗಾರೋಹಣವಾದಿಗಳು ಸಮರ್ಥಿಸುತ್ತಾರೆ. ಮತ್ತು ‘ಆಕೆಯ ಗರ್ಭಫಲದಂತೆ,’ ಆಕೆ “ಆಶೀರ್ವಾದಿತಳು” ಆಗಿರುವುದರಿಂದ, ಯೇಸುವಿನ ಸುಯೋಗಗಳಿಗೆ ಸಮಾನವಾದವುಗಳು—ಆತನ ದಿವಾರೋಹಣ ಸಹಿತ—ಆಕೆಗೆ ಸಿಗತಕ್ಕದ್ದು. ಇದು ತರ್ಕಬದ್ಧವಾದ ನಿರೂಪಣೆಯೆಂದು ನೀವು ನೆನಸುತ್ತೀರೋ?
ಒಂದು ವಿಷಯವೇನಂದರೆ, “ಕೃಪಾಪೂರ್ಣಳು” ಎಂಬ ಅಭಿವ್ಯಕ್ತಿಯು ನಿಕರವಾದ ಭಾಷಾಂತರವಲವ್ಲೆಂದೂ ಮತ್ತು ಲೂಕನಿಂದ ಉಪಯೋಗಿಸಲ್ಪಟ್ಟ ಮೂಲ ಗ್ರೀಕ್ ಅಭಿವ್ಯಕ್ತಿಯು “ದೇವರ ದಯೆಗೆ ಪಾತ್ರಳು” ಎಂದು ಅಧಿಕ ನಿಷ್ಕೃಷ್ಟವಾಗಿ ತರ್ಜುಮೆಯಾಗಿದೆ ಎಂದು ಭಾಷಾ ಪಂಡಿತರು ಹೇಳುತ್ತಾರೆ. ಕ್ಯಾತೊಲಿಕ್ ಜೆರೂಸಲೇಮ್ ಬೈಬಲ್ ಲೂಕ 1:28ನ್ನು ಹೀಗೆ ಭಾಷಾಂತರ ಮಾಡಿದೆ: “ಅತಿಶಯ ದಯೆ ಹೊಂದಿದವಳೇ, ಉಲ್ಲಾಸಿಸು!” ದೇವರಿಂದ “ಅತಿಶಯ ದಯೆ” ಹೊಂದಿದ ಕಾರಣ ಮರಿಯಳು ದೇಹಸಹಿತ ಪರಲೋಕಕ್ಕೆ ಒಯ್ಯಲ್ಪಟ್ಟಳು ಎಂದು ತೀರ್ಮಾನಿಸುವುದಕ್ಕೆ ಯಾವ ಕಾರಣವೂ ಇರುವುದಿಲ್ಲ. ಮೊದಲನೆಯ ಕ್ರೈಸ್ತ ಹುತಾತ್ಮನಾದ ಸೆಫ್ತನನು ತದ್ರೀತಿಯಲ್ಲಿ ಕ್ಯಾತೊಲಿಕ್ ಡುಯೇ ಬೈಬಲಿನಲ್ಲಿ ಅತಿಶಯವಾಗಿ ದಯೆ ಹೊಂದಿದವನು ಅಥವಾ “ಕೃಪಾಪೂರ್ಣನು” ಎಂದು ಹೇಳಲ್ಪಟ್ಟಿದ್ದಾನೆ—ಮತ್ತು ಯಾವ ದೈಹಿಕ ಪುನರುತ್ಥಾನವೂ ಅವನಿಗೆ ವಹಿಸಲ್ಪಡಲಿಲ್ಲ.—ಅ. ಕೃತ್ಯಗಳು 6:8.
ಆದರೂ, ಮರಿಯಳು ಆಶೀರ್ವದಿಸಲ್ಪಟ್ಟಿರಲ್ಲಿಲವೇ ಯಾ ದಯೆಯನ್ನು ಹೊಂದಿರಲಿಲ್ಲವೇ? ಹೌದು, ಆದರೆ ರಸಕರವಾಗಿಯೇ, ಹಿಂದೆ ಇಸ್ರಾಯೇಲ್ಯರ ನ್ಯಾಯಸ್ಥಾಪಕರ ದಿನದಲ್ಲಿ ಯಾಯೇಲ್ ಎಂಬ ಹೆಸರಿನ ಹೆಂಗಸು “ಸ್ತ್ರೀಯರೊಳಗೆ ಆಶೀರ್ವಾದ” ಹೊಂದಿದವಳೆಂದು ಪರಿಗಣಿಸಲ್ಪಟ್ಟಿದ್ದಳು. (ನ್ಯಾಯಸ್ಥಾಪಕರು 5:24, Dy) ಯಾಯೇಲಳು ಕೂಡ ಪರಲೋಕಕ್ಕೆ ದೈಹಿಕವಾಗಿ ಒಯ್ಯಲ್ಪಟ್ಟಳೆಂದು ನಿಶ್ಚಯವಾಗಿ ಯಾರೊಬ್ಬನೂ ವಾದಿಸನು. ಅದಲ್ಲದೆ, ಸ್ವರ್ಗಾರೋಹಣದ ಪೂರ ವಿಚಾರವು ಯೇಸು ತಾನೇ ಮಾಂಸಿಕವಾಗಿ ಪರಲೋಕಕ್ಕೇರಿ ಹೋದನು ಎಂಬ ತರ್ಕದ ಮೇಲೆ ಆಧಾರಿಸಿದೆ. ಆದರೂ, ಯೇಸು “ಆತ್ಮದಲ್ಲಿ” “ತಿರುಗಿ ಜೀವಿತನಾದನು,” ಅಥವಾ ಪುನರುತ್ಥಾನವಾದನು ಎಂದು ಬೈಬಲ್ ಹೇಳುತ್ತದೆ. (1 ಪೇತ್ರ 3:18, Dy; ಹೋಲಿಸಿ 1 ಕೊರಿಂಥ 15:45.) ಅಪೊಸ್ತಲ ಪೌಲನು ಮತ್ತೂ ಹೇಳುವುದೇನಂದರೆ “ರಕ್ತ ಮಾಂಸವು ದೇವರ ರಾಜ್ಯವನ್ನು ಹೊಂದಲಾರದು.”—1 ಕೊರಿಂಥ 15:42-50, Dy.
ಆತ್ಮದಿಂದ ಅಭಿಷಿಕ್ತರಾದ ನಂಬಿಗಸ್ತ ಕ್ರೈಸ್ತರಿಗಾಗಿ ಒಂದು ಸ್ವರ್ಗೀಯ ಪುನರುತ್ಥಾನದ ಕುರಿತು ಬೈಬಲು ಹೇಳುತ್ತದೆ, ನಿಜ. ಆದರೂ ಈ ಪುನರುತ್ಥಾನವು ಈ ದುಷ್ಟ ಯುಗದ ಕಡೇ ದಿನಗಳಲ್ಲಿ “ಕರ್ತನ ಸಾನ್ನಿಧ್ಯ” ದ ತನಕ ಆರಂಭವಾಗದೆಂದು 1 ಥೆಸಲೊನೀಕ 4:13-17 ಸ್ಪಷ್ಟಪಡಿಸುತ್ತದೆ. ಆ ಸಮಯದ ತನಕ, ಮರಿಯಳು, ಇತರ ಸಾವಿರಾರು ನಂಬಿಗಸ್ತ ಕ್ರೈಸ್ತರೊಂದಿಗೆ ಮರಣದಲ್ಲಿ ನಿದ್ರೆಹೋಗಿರುವವಳಾಗಿ ಇರುವಳು.—1 ಕೊರಿಂಥ 15:51, 52.
ಮರಿಯ—ನಂಬಿಕೆಯ ಹೆಂಗಸು
ಮೇಲಿನದನ್ನು ಹೇಳಿದುದರಲ್ಲಿ ಮರಿಯಳಿಗೆ ಯಾವ ಅಗೌರವವೂ ನಮ್ಮ ಮನಸ್ಸಿನಲ್ಲಿಲ್ಲ ಎಂಬ ಆಶ್ವಾಸನೆಯುಳ್ಳವರಾಗಿರ್ರಿ. ನಿಸ್ಸಂದೇಹವಾಗಿ, ಮರಿಯಳು ಒಬ್ಬಾಕೆ ಆದರ್ಶಪ್ರಾಯ—ಅನುಕರಣಾರ್ಹವಾದ ನಂಬಿಕೆಯುಳ್ಳ ಹೆಂಗಸಾಗಿದ್ದಳು. ಯೇಸುವಿನ ತಾಯಿಯಾಗುವ ಸೌಭಾಗ್ಯದ ಜವಾಬ್ದಾರಿಯನ್ನು, ಅದು ತರುವ ಎಲ್ಲಾ ಸಂಕಟಗಳು ಮತ್ತು ತ್ಯಾಗಗಳೊಂದಿಗೆ ಆಕೆ ಸಿದ್ಧಮನಸ್ಸಿನಿಂದ ಸ್ವೀಕರಿಸಿದಳು. (ಲೂಕ 1:38; 2:34, 35) ಯೋಸೇಫನೊಂದಿಗೆ ಕೂಡಿಕೊಂಡು, ಅವಳು ಯೇಸುವನ್ನು ದಿವ್ಯ ವಿವೇಕದಲ್ಲಿ ಬೆಳೆಸಿದಳು. (ಲೂಕ 2:51, 52) ಕಂಭದ ಮೇಲೆ ಯೇಸುವಿನ ಕಷ್ಟಾನುಭವದ ಸಮಯದಲ್ಲಿ ಆಕೆ ಆತನೊಂದಿಗೆ ಉಳಿದುಕೊಂಡಳು. (ಯೋಹಾನ 19:25-27) ಮತ್ತು ನಂಬಿಗಸ್ತೆ ಶಿಷ್ಯೆಯೋಪಾದಿ, ಆಕೆ ವಿಧೇಯತೆಯಿಂದ ಯೆರೂಸಲೇಮಿನಲ್ಲಿ ಉಳಿದು, ಪಂಚಾಶತ್ತಮದಲ್ಲಿ ದೇವರ ಆತ್ಮದ ಸುರಿಯುವಿಕೆಯನ್ನು ಅನುಭವಿಸಿದಳು.—ಅ. ಕೃತ್ಯಗಳು 1:13, 14; 2:1-4.
ಮರಿಯಳ ಕುರಿತ ಒಂದು ವಕ್ರವಾದ ನೋಟವು ನಿರ್ಮಾಣಿಕನನ್ನಾಗಲಿ ಮರಿಯಳನ್ನಾಗಲಿ ಗೌರವಿಸುವುದಿಲ್ಲ. ಮರಿಯಳು ದೇವರೊಂದಿಗೆ ಮಧ್ಯಸ್ಥಳಾಗಿದ್ದಾಳೆಂಬ ನಿರಾಧಾರ ವಾದವನ್ನು ಬಲಪಡಿಸಲು ಸ್ವರ್ಗಾರೋಹಣ ಬೋಧನೆಯು ಸಾಧನವಾಗಿರುತ್ತದೆ. ಆದರೆ ಯೇಸು ಕ್ರಿಸ್ತನು ಎಂದಾದರೂ ಅಂಥ ಬೋಧನೆಯನ್ನು ಅನುಮೋದಿಸಿದ್ದನೋ? ಪ್ರತಿ ವಿರುದ್ಧವಾಗಿ ಆತನಂದದ್ದು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ. ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಬೇಡಿಕೊಂಡರೆ ಅದನ್ನು ನೆರವೇರಿಸುವೆನು.” (ಯೋಹಾನ 14:6, 14; ಹೋಲಿಸಿರಿ ಅ. ಕೃತ್ಯಗಳು 4:12.) ಹೌದು, ನಿರ್ಮಾಣಿಕನೊಂದಿಗೆ ಮಧ್ಯಸಿಕ್ಥೆ ಮಾಡುವಾತನು ಯೇಸು ಕ್ರಿಸ್ತನು ಮಾತ್ರವೇ, ಮರಿಯಳಲ್ಲ. “ಅಗತ್ಯದ ಸಮಯದಲ್ಲಿ ಸಹಾಯ” ಕ್ಕಾಗಿ ನಾವು ಜೀವದಾತನನ್ನು ಗೋಚರಿಸಬೇಕಾದದ್ದು ಯೇಸುವಿನ ಮೂಲಕ—ಮರಿಯಳ ಮೂಲಕ ಅಲ್ಲ.—ಇಬ್ರಿಯ 4:16, ರಿವೈಸ್ಡ್ ಸ್ಟ್ಯಾಂಡರ್ಡ್ ವರ್ಷನ್, ಕ್ಯಾತೊಲಿಕ್ ಎಡಿಷನ್.
ಮರಿಯಳ ಕುರಿತಾದ ಸತ್ಯವನ್ನು ಸ್ವೀಕರಿಸುವುದು ಕೆಲವರಿಗೆ ನೋವನ್ನುಂಟುಮಾಡಬಹುದು. ಅತಿ ಕಡಿಮೆಯೆಂದರೆ ಅದು, ದೀರ್ಘಕಾಲದಿಂದ ಹಿಡಿದಿದ್ದ ಕೆಲವು ನಂಬಿಕೆಗಳನ್ನು ಮತ್ತು ನೆಚ್ಚಿನ ಕಲ್ಪನೆಗಳನ್ನು ತ್ಯಜಿಸಿಬಿಡುವ ಅರ್ಥದಲ್ಲಿರಬಹುದು. ಆದರೂ, ಕೆಲವೊಮ್ಮೆ ನೋವನ್ನುಂಟು ಮಾಡಿದರೂ, ಸತ್ಯವು ಕಟ್ಟಕಡೆಗೆ ‘ಒಬ್ಬನನ್ನು ಬಿಡುಗಡೆ ಮಾಡುತ್ತದೆ.’ (ಯೋಹಾನ 8:32) “ಆತ್ಮದಿಂದ ಮತ್ತು ಸತ್ಯದಿಂದ” ಆರಾಧಿಸುವವರಿಗಾಗಿ ಅವನ ತಂದೆಯು ಹುಡುಕುತ್ತಿದ್ದಾನೆ ಎಂದು ಯೇಸು ಹೇಳಿದ್ದಾನೆ. (ಯೋಹಾನ 4:24, Dy) ಪ್ರಾಮಾಣಿಕರಾದ ಕ್ಯಾತೊಲಿಕರಿಗೆ, ಈ ಮಾತುಗಳು ಒಂದು ಪಂಥಾಹ್ವಾನವಾಗಿ ನಿಲ್ಲುತ್ತವೆ.
[ಅಧ್ಯಯನ ಪ್ರಶ್ನೆಗಳು]
a ಕ್ಯಾತೊಲಿಕ್ ಧರ್ಮದಲ್ಲಿ ಒಂದು ಮತೀಯ ತತ್ವವು, ಒಂದು ಸರಳವಾದ ನಂಬಿಕೆಯ ಹಾಗಿರದೆ, ಸಾರ್ವತ್ರಿಕ ಕ್ರೈಸ್ತ ಮಂಡಲಿಯಿಂದ ಅಥವಾ “ಪೋಪರ ತಪ್ಪಿಗವಕಾಶವಿಲ್ಲದ ದಂಡಾಧಿಕಾರ” ದಿಂದ ಗಂಭೀರವಾಗಿ ಸೂತ್ರೀಕರಿಸಲ್ಪಟ್ಟ ಸತ್ಯತೆಯಾಗಿ ಹೇಳಲ್ಪಡುತ್ತದೆ. ಕ್ಯಾತೊಲಿಕ್ ಚರ್ಚಿನಿಂದ ಹೀಗೆ ನಿರೂಪಿಸಲ್ಪಟ್ಟ ಬೋಧನೆಗಳಲ್ಲಿ ಅತ್ಯಂತ ಇತ್ತೀಚಿನದ್ದು, ಮರಿಯಳ ಸ್ವರ್ಗಾರೋಹಣವಾಗಿರುತ್ತದೆ.
[ಪುಟ 27 ರಲ್ಲಿರುವ ಚೌಕ]
ಮರಿಯಳು ಸತ್ತಳೋ?
ಮರಿಯಳ ಊಹಕ ಸ್ವರ್ಗಾರೋಹಣಕ್ಕೆ ಮುಂಚೆ ಅವಳು ಕಾರ್ಯತಃ ಮೃತಳಾಗಿದ್ದಳೋ? ಈ ಪ್ರಶ್ನೆಯ ಮೇಲೆ ಕ್ಯಾತೊಲಿಕ ವೇದಶಾಸ್ತ್ರಜ್ಞರು ಎರಡು ಸಮಾನ ಅಹಿತಕರ ದೇವತಾಶಾಸ್ತ್ರದ ಬದಲಿಗಳನ್ನು ಎದುರಿಸುತ್ತಾರೆ. ನ್ಯೂವೋ ಡೆಸಿಯ್ಟೊನರ್ಯೊ ಡಿ ಟಿಯೊಲೊಜಿಯ ನಿರ್ದೇಶಿಸುವುದೇನಂದರೆ “ಯಾವುದನ್ನು ಕ್ರಿಸ್ತನು ಸಹ ಹೊಂದಿರಲಿಲ್ಲವೋ ಆ ಮರಣದಿಂದ ವಿನಾಯಿತಿಯ ಸುಯೋಗವನ್ನು ಮರಿಯಳಿಗೆ ಅಧ್ಯಾರೋಪಿಸುವುದು ಕಷ್ಟಕರವಾಗಿರುವುದು.” ಇನ್ನೊಂದು ಕಡೆ, ಮರಿಯಳು ನಿಜವಾಗಿ ಸತ್ತಿದ್ದಳು ಎಂದು ಹೇಳುವುದು ಸರಿಸಮಾನವಾದ ಕಷ್ಟಕರ ಪ್ರಶ್ನೆಯನ್ನು ಎಬ್ಬಿಸುತ್ತದೆ. ವೇದಶಾಸ್ತ್ರಜ್ಞೆ ಕ್ಯಾರಿ ಬೊರೆಸ್ಸನ್ ಗಮನಿಸುವುದೇನಂದರೆ “ಮೂಲ ಪಾಪಕ್ಕಾಗಿ ಶಿಕ್ಷೆಯೇ ಮರಣವಾಗಿದೆ, ಇದು [“ಮೂಲ ಪಾಪದೋಷವಿಲ್ಲದ ಗರ್ಭಧಾರಣೆ”ಯ ಬೋಧನೆಗನುಸಾರ] ಮರಿಯಳನ್ನು ಬಾಧಿಸಲಿಲ್ಲ.” ಹಾಗಾದರೆ, ಆಕೆ ಯಾವ ಮೂಲಾಧಾರದ ಮೇಲೆ ಸತ್ತಿದ್ದಿರಬೇಕು? ಸ್ವರ್ಗಾರೋಹಣದ ತತ್ವವನ್ನು ನಿರೂಪಿಸುವಾಗ ಮರಿಯಳ ಮರಣದ ಇಡೀ ಪ್ರಶ್ನೆಯನ್ನು XII ನೆಯ ಪೋಪ್ ಪೈಅಸ್ ಜಾಗ್ರತೆಯಿಂದ ಜಾಡಿಸಿಬಿಟ್ಟರು.
ಸುಯೋಗದಿಂದಲೇ, ಬೈಬಲಿನ ಬೋಧನೆಯು ಅಂಥ ಗಲಿಬಿಲಿಯಿಂದ ಸ್ವತಂತ್ರವಾಗಿರುತ್ತದೆ. ಮರಿಯಳು “ಮೂಲ ಪಾಪದೋಷವಿಲ್ಲದ ಗರ್ಭಧಾರಣೆ” ಯ ಉತ್ಪಾದನೆ ಎಂದು ಅದೆಲ್ಲಿಯೂ ಕಲಿಸುವುದಿಲ್ಲ—ಅದರ ಸುಳಿವನ್ನು ಸಹ ಕೊಡುವುದಿಲ್ಲ. ಅದಕ್ಕೆ ಪ್ರತಿ ವಿರುದ್ಧವಾಗಿ, ಮರಿಯಳು ವಿಮೋಚನೆಯ ಅಗತ್ಯದಲ್ಲಿದ್ದ ಅಸಂಪೂರ್ಣ ಮನುಷ್ಯಳಾಗಿದ್ದಳೆಂದು ಅದು ಸೂಚಿಸುತ್ತದೆ. ಈ ಕಾರಣಕ್ಕಾಗಿಯೇ, ಯೇಸುವಿನ ಜನನದ ಅನಂತರ, ಆಕೆ ದೇವಾಲಯಕ್ಕೆ ಹೋಗಿ ದೋಷ ಪರಿಹಾರಕ್ಕಾಗಿ ದೇವರಿಗೆ ಅರ್ಪಣೆಯನ್ನು ಮಾಡಿದ್ದಳು. (ಯಾಜಕಕಾಂಡ 12:1-8; ಲೂಕ 2:22-24) ಬೇರೆಲ್ಲಾ ಅಸಂಪೂರ್ಣ ಮಾನವರಂತೆ, ಮರಿಯಳೂ ಕಟ್ಟಕಡೆಗೆ ಸತ್ತಳು.—ರೋಮಾಪುರ 3:23; 6:23.
ಈ ಸರಳವಾದ ಸತ್ಯವು ಸ್ವರ್ಗಾರೋಹಣ ತತ್ವದಿಂದ ಎಬ್ಬಿಸಲ್ಪಡುವ ಉತ್ತರಿಸಲಾಗದ ಪ್ರಶ್ನೆಗಳಿಗೆ ಪೂರ್ತಿ ವೈದೃಶ್ಯದಲ್ಲಿ ನಿಲ್ಲುತ್ತದೆ.
[ಪುಟ 26 ರಲ್ಲಿರುವ ಚಿತ್ರ]
‘ಕನ್ಯೆಯ ಸ್ವರ್ಗಾರೋಹಣ,’ ಟೈಟ್ಯನ್ನಿಂದ ಚಿತ್ರಿಸಲ್ಪಟ್ಟದ್ದು (ಸುಮಾರು 1488-1576)
[ಕೃಪೆ]
Giraudon/Art Resource, N.Y.
[ಪುಟ 28 ರಲ್ಲಿರುವ ಚಿತ್ರ]
ಯೇಸುವಿನ ಜನನದ ಅನಂತರ ಒಂದು ದೋಷ ಪರಿಹಾರಕ ಅರ್ಪಣೆಯನ್ನು ದೇವಾಲಯಕ್ಕೆ ತರುವ ಮೂಲಕ, ಮರಿಯಳು ತನ್ನನ್ನು ವಿಮೋಚನೆಯ ಅಗತ್ಯವಿರುವ ಒಬ್ಬಾಕೆ ಪಾಪಿಯಾಗಿ ತಿಳಿಯಪಡಿಸಿದಳು