ನೈಸರ್ಗಿಕ ವಿಪತ್ತುಗಳು—ದೇವರು ಜವಾಬ್ದಾರನೋ?
“ದೇವರೇ, ನೀನು ನಮಗೆ ಇದೇನು ಮಾಡಿದ್ದೀ?”
ನವಂಬರ 13, 1985 ರಲ್ಲಿ ಕೊಲಂಬಿಯದ ಹಿಮಾವೃತ ನಿವಾಡೊ ಡೆಲ್ ರೂಈಸ್ ಹೊರಚಿಮ್ಮುವಿಕೆಯಿಂದ ಉಂಟಾದ ನಾಶನವನ್ನು ಸಮೀಕ್ಷಿಸಿದ, ಒಬ್ಬ ಪಾರಾದ ವ್ಯಕ್ತಿಯ ವದಂತಿ ಪ್ರತಿಕ್ರಿಯೆಯು ಅದಾಗಿತ್ತು. ಕೆಳಗುರುಳಿ ಬಿದ್ದ ಕಲ್ಮಣ್ಣು ಪ್ರವಾಹವು ಇಡೀ ಆರ್ಮೆರೊ ಶಹರವನ್ನು ಹುಗಿದು ಹಾಕಿ, 20,000 ಕ್ಕಿಂತಲೂ ಹೆಚ್ಚು ಜನರನ್ನು ಒಂದೇ ರಾತ್ರಿಯಲ್ಲಿ ಕೊಂದಿತು.
ಪಾರಾದ ಆ ವ್ಯಕ್ತಿಯು ಆ ರೀತಿ ಪ್ರತಿಕ್ರಿಯಿಸಬಹುದೆಂಬದು ಗ್ರಾಹ್ಯ. ಭಯಚಕಿತ ನಿಸರ್ಗದ ಶಕ್ತಿಗಳ ಎದುರಲ್ಲಿ ಸಹಾಯಶೂನ್ಯರಾಗಿ, ಜನರು ಅತಿ ಆದಿಕಾಲದಿಂದಲೂ ಅಂಥ ವಿಪತ್ಕಾರಕ ಘಟನೆಗಳನ್ನು ದೇವರಿಗೆ ಅಧ್ಯಾರೋಪಿಸಿದ್ದಾರೆ. ಆದಿಕಾಲದ ಜನರು ಸಮುದ್ರ, ಆಕಾಶ, ಭೂಮಿ, ಪರ್ವತ, ಜ್ವಾಲಾಮುಖಿಯ ದೇವತೆಗಳನ್ನು ಮತ್ತು ಇತರ ಅಪಾಯದ ಮೂಲಗಳನ್ನು ಶಾಂತಗೊಳಿಸುವುದಕ್ಕಾಗಿ ಬಲಿಗಳನ್ನು, ಮನುಷ್ಯಾಹುತಿಗಳನ್ನೂ ಅರ್ಪಿಸುತ್ತಿದ್ದರು. ಇಂದು ಸಹ ಕೆಲವರು, ವಿಪತ್ಕಾರಕ ನೈಸರ್ಗಿಕ ಘಟನೆಗಳ ಫಲಿತಾಂಶಗಳನ್ನು ಕೇವಲ ವಿಧಿನಿಯತವಾದದ್ದಾಗಿ ಅಥವಾ ದೇವರು ಗೈದದ್ದಾಗಿ ಅಂಗೀಕರಿಸುತ್ತಾರೆ.
ಭೂಸುತ್ತಲೂ ಅಷ್ಟು ಹೆಚ್ಚು ಮಾನವ ಕಷ್ಟಾನುಭವ ಮತ್ತು ನಷ್ಟವನ್ನು ಬರಮಾಡುವ ವಿಪತ್ತುಗಳಿಗಾಗಿ ನಿಜವಾಗಿ ದೇವರು ಜವಾಬ್ದಾರನೋ? ತಪ್ಪು ಅವನದೋ? ಉತ್ತರಗಳನ್ನು ಕಂಡುಹಿಡಿಯಲು, ಅಂಥ ವಿಪತ್ತುಗಳಲ್ಲಿ ಏನು ಒಳಗೂಡಿದೆಯೆಂಬದರ ಮೇಲೆ ನಿಕಟ ದೃಷ್ಟಿಯನ್ನಿಡುವ ಅಗತ್ಯವಿದೆ. ವಾಸ್ತವವಾಗಿ, ಕೆಲವು ಚಿರಪರಿಚಿತ ನಿಜತ್ವಗಳನ್ನು ಪುನಃ ಪರೀಕ್ಷಿಸುವ ಅಗತ್ಯ ನಮಗಿದೆ.
“ನೈಸರ್ಗಿಕ ವಿಪತ್ತು” ಎಂದರೇನು?
ಒಂದು ಭೂಕಂಪವು ಚೀನಾದ ಟಾಂಗ್ಷಾನನ್ನು ಹೊಡೆದಾಗ, ಮತ್ತು ಅಧಿಕೃತ ಚೀನೀ ವರದಿಗಳಿಗನುಸಾರ 2,42,000 ಜನರನ್ನು ಕೊಂದಾಗ, ಮತ್ತು ಚಂಡಮಾರುತ ಆ್ಯಂಡ್ರೂ ಅಮೆರಿಕದಲ್ಲಿನ ಫಾರ್ಲಿಡ ಮತ್ತು ಲೂಯಿಸಿಯಾನವನ್ನು ಬಡಿದು, ಬಿಲ್ಯಾಂತರ ಡಾಲರುಗಳ ನಷ್ಟವನ್ನುಂಟುಮಾಡಿದಾಗ, ಅಂಥ ನೈಸರ್ಗಿಕ ವಿಪತ್ತುಗಳು ವಾರ್ತಾ ಮಾಧ್ಯಮದಲ್ಲಿ ಅಂತಾರಾಷ್ಟ್ರೀಯ ತಲೆಪಂಕ್ತಿಗಳನ್ನು ಮಾಡಿದವು. ಆದರೂ, ಒಂದುವೇಳೆ ಆ ಭೂಕಂಪವು ಟಾಂಗ್ಷಾನ್ನ ವಾಯುವ್ಯದಲ್ಲಿ 1,100 ಕಿಲೊಮೀಟರ್ ದೂರದಲ್ಲಿರುವ ನಿರ್ಜನವಾದ ಗೋಬಿ ಮರುಭೂಮಿಯನ್ನು ತಟ್ಟಿದ್ದರೆ, ಅಥವಾ ಚಂಡಮಾರುತ ಆ್ಯಂಡ್ರೂ ಒಂದು ವೇಳೆ ಬೇರೆ ದಾರಿಯಾಗಿ ಬೀಸುತ್ತಾ, ಭೂಪ್ರದೇಶವನ್ನು ಪೂರಾ ತಪ್ಪಿ, ಸಮುದ್ರದಲ್ಲಿ ತಾನೇ ಕೊನೆಗೊಂಡಿದ್ದರೆ ಆಗೇನು? ಅವುಗಳ ಜ್ಞಾಪಕ ಸಹ ಈಗ ಇರುತ್ತಿರಲಿಲ್ಲವಲ್ಲಾ.
ಹೀಗಿರಲಾಗಿ, ನಾವು ನೈಸರ್ಗಿಕ ವಿಪತ್ತುಗಳ ಕುರಿತು ಮಾತಾಡುವಾಗ, ಪ್ರಕೃತಿಯ ಶಕ್ತಿಗಳ ಕೇವಲ ನಾಟಕೀಯ ಪ್ರದರ್ಶನಗಳ ಕುರಿತು ಹೇಳುವುದಲ್ಲ ಎಂಬದು ಸ್ಪಷ್ಟ. ಪ್ರತಿ ವರ್ಷ ದೊಡ್ಡ ಮತ್ತು ಚಿಕ್ಕ ಸಾವಿರಾರು ಭೂಕಂಪಗಳು, ಕೆಲವಾರು ಬಿರುಗಾಳಿಗಳು, ಸುಳಿಗಾಳಿಗಳು, ಚಂಡಮಾರುತಗಳು, ತುಫಾನುಗಳು, ಜ್ವಾಲಾಮುಖಿಯ ಹೊರಚಿಮ್ಮುವಿಕೆಗಳು ಮತ್ತು ಇತರ ಪ್ರಚಂಡವಾದ ಪ್ರಕೃತಿ ಘಟನೆಗಳು ಕೇವಲ ಕೆಲವು ದಾಖಲೆ ಪುಸ್ತಕದಲ್ಲಿ ಸಂಖ್ಯಾ ಸಂಗ್ರಹಣವಾಗುತ್ತವಲ್ಲದೆ ಹೆಚ್ಚೇನೂ ಇಲ್ಲ. ಅದರೂ, ಅಂಥ ಘಟನೆಗಳು ಜೀವ ಮತ್ತು ಸ್ವತ್ತಿಗೆ ಮಹಾ ನಾಶವನ್ನು ತರುವಾಗ ಮತ್ತು ಸಾಮಾನ್ಯ ಜೀವನ ಕ್ರಮವನ್ನು ಭಂಗಗೊಳಿಸುವಾಗ, ಅವು ವಿಪತ್ತುಗಳಾಗಿ ಪರಿಣಮಿಸುತ್ತವೆ.
ಹಾನಿ ಮತ್ತು ಫಲಿತಾಂಶವಾಗಿ ಬರುವ ನಷ್ಟಗಳು, ಒಳಗೂಡಿರುವ ನೈಸರ್ಗಿಕ ಶಕಿಗ್ತಳಿಗೆ ಯಾವಾಗಲೂ ಪ್ರಮಾಣಾನುಗುಣವಾಗಿಲ್ಲವೆಂಬದನ್ನು ಗಮನಕ್ಕೆ ತರಬೇಕಾಗಿದೆ. ಅತ್ಯಂತ ಮಹತ್ತಾದ ವಿಪತ್ತು, ನೈಸರ್ಗಿಕ ಶಕ್ತಿಗಳ ಅತಿ ಶಕ್ತಿಯುತವಾದ ಪ್ರದರ್ಶನದಿಂದಲೇ ಉಂಟಾಗುವ ಆವಶ್ಯಕತೆ ಇರುವುದಿಲ್ಲ. ಉದಾಹರಣೆಗೆ, ರಿಕ್ಟರ್ ಮಾಪಕದಲ್ಲಿ 6.6 ಅಳತೆಯ ಒಂದು ಭೂಕಂಪವು 1971 ರಲ್ಲಿ ಕ್ಯಾಲಿಫೋರ್ನಿಯದ ಸಾನ್ ಫರ್ನಾಂಡೊವನ್ನು ಹೊಡೆದಾಗ ಕೊಂದದ್ದು 65 ಮಂದಿಯನ್ನು. ಆದರೆ ಒಂದು ವರ್ಷದ ಅನಂತರ ನಿಕರಾಗುವದ ಮನಾಗದ್ವಲ್ಲಿ ಆದ 6.2 ಅಳತೆಯ ಕಂಪವು 5,000 ಜನರನ್ನು ಕೊಂದಿತು!
ಹೀಗೆ, ನೈಸರ್ಗಿಕ ವಿಪತ್ತುಗಳ ವೃದ್ಧಿಯಾಗುತ್ತಿರುವ ದ್ವಂಸದ ಸಂಬಂಧದಲ್ಲಿ, ನಾವು ಹೀಗೆ ಕೇಳಲೇಬೇಕು, ಪ್ರಕೃತಿ ಶಕ್ತಿಗಳು ಅಧಿಕ ಉಗ್ರವಾಗಿ ಪರಿಣಮಿಸಿವೆಯೋ? ಅಥವಾ ಮಾನುಷ ಸಂಗತಿಗಳು ಆ ಸಮಸ್ಯೆಗೆ ನೆರವಾಗಿವೆಯೋ?
ಯಾರು ಜವಾಬ್ದಾರನು?
ಈ ಭೂಮಿಯ ನೈಸರ್ಗಿಕ ಶಕ್ತಿಗಳೂ ಸೇರಿ, ಸಮಸ್ತ ವಸ್ತುಗಳ ಮಹಾ ನಿರ್ಮಾಣಿಕನು ಯೆಹೋವ ದೇವರು ಎಂದು ಬೈಬಲ್ ಗುರುತಿಸುತ್ತದೆ. (ಆದಿಕಾಂಡ 1:1; ನೆಹೆಮೀಯ 9:6; ಇಬ್ರಿಯ 3:4; ಪ್ರಕಟನೆ 4:11) ಗಾಳಿಯ ಪ್ರತಿಯೊಂದು ಚಲನೆಯನ್ನು ಮತ್ತು ಪ್ರತಿಯೊಂದು ಮಳೆ ಸುರಿತವನ್ನು ಆತನು ಉಂಟುಮಾಡುತ್ತಾನೆಂದು ಇದರ ಅರ್ಥವಲ್ಲ. ಬದಲಿಗೆ, ಭೂಮಿಯನ್ನು ಮತ್ತು ಅದರ ವಾತಾವರಣವನ್ನು ಆಳುವ ನಿರ್ದಿಷ್ಟ ನಿಯಮಗಳನ್ನು ಆತನು ಚಲನೆಯಲ್ಲಿಟ್ಟಿದ್ದಾನೆ. ಉದಾಹರಣೆಗೆ, ಪ್ರಸಂಗಿ 1:5-7 ರಲ್ಲಿ, ಭೂಮಿಯ ಮೇಲಿನ ಜೀವವನ್ನು ಶಕ್ಯಗೊಳಿಸುವ ಮೂರು ಮೂಲಭೂತ ಕಾರ್ಯಗತಿಗಳ—ಸೂರ್ಯನ ದಿನನಿತ್ಯದ ಉದಯಿಸುವಿಕೆ ಮತ್ತು ಮುಳುಗುವಿಕೆ, ಗಾಳಿಗಳ ಬದಲಾಗದ ನಮೂನೆ ಮತ್ತು ನೀರಿನ ಚಕ್ರಗತಿ—ಕುರಿತು ನಾವು ಓದುತ್ತೇವೆ. ಮಾನವ ಕುಲವು ಅವುಗಳ ಕುರಿತು ಅರಿತಿರಲಿ ಇಲ್ಲದಿರಲಿ, ಈ ಪ್ರಾಕೃತಿಕ ವ್ಯವಸ್ಥೆಗಳು, ಮತ್ತು ಹವಾಮಾನ, ಭೂವಿಜ್ಞಾನ, ಮತ್ತು ಭೂಮಿಯ ಜೀವ ವಿಜ್ಞಾನವನ್ನು ಒಳಗೂಡಿರುವ ಅವುಗಳಂತಹ ಬೇರೆಯವುಗಳು, ಸಾವಿರಾರು ವರ್ಷಗಳಿಂದ ಕಾರ್ಯನಡಿಸಿರುತ್ತವೆ. ವಾಸ್ತವವಾಗಿ ಪ್ರಸಂಗಿಯ ಲೇಖಕನು, ಸೃಷ್ಟಿಯ ಬದಲಾಗದ ಮತ್ತು ಅನಂತವಾದ ಮಾರ್ಗಗಳ ನಡುವೆ ಮತ್ತು ಮಾನವ ಜೀವದ ಕಿಂಚಿತ್ ಕಾಲದ ಮತ್ತು ತಾತ್ಕಾಲಿಕ ರೀತಿಯ ನಡುವೆ ಇರುವ ಮಹಾ ತಾರತಮ್ಯಕ್ಕೆ ಗಮನ ಸೆಳೆಯುತ್ತಿದ್ದನು.
ಯೆಹೋವನು ನೈಸರ್ಗಿಕ ಶಕ್ತಿಗಳ ನಿರ್ಮಾಣಿಕನು ಮಾತ್ರವೇ ಅಲ್ಲ, ಅವುಗಳನ್ನು ಹತೋಟಿಯಲ್ಲಿಡುವ ಶಕ್ತಿಯು ಸಹ ಅವನಿಗಿದೆ. ಅಂಥ ಶಕ್ತಿಗಳನ್ನು ತನ್ನ ಉದ್ದೇಶದ ಪೂರೈಕೆಗಾಗಿ ಯೆಹೋವನು ಹತೋಟಿಯಲ್ಲಿಡುವ ಮತ್ತು ಕೌಶಲದಿಂದ ನಡಿಸುವ ವೃತ್ತಾಂತಗಳನ್ನು ಬೈಬಲಿನಲ್ಲೆಲ್ಲೂ ನಾವು ಕಾಣುತ್ತೇವೆ. ಮೋಶೆಯ ದಿನದಲ್ಲಿ ಕೆಂಪು ಸಮುದ್ರವನ್ನು ವಿಭಾಗಗೊಳಿಸಿದ್ದು ಮತ್ತು ಯೆಹೋಶುವನ ಕಾಲದಲ್ಲಿ ಸೂರ್ಯ ಮತ್ತು ಚಂದ್ರರನ್ನು ಆಕಾಶ ಮಧ್ಯದ ತಮ್ಮ ಪಥಗಳಲ್ಲಿ ನಿಲ್ಲಿಸಿದ್ದು ಇವುಗಳಲ್ಲಿ ಒಳಗೂಡಿವೆ. (ವಿಮೋಚನಕಾಂಡ 14:21-28; ಯೆಹೋಶುವ 10:12, 13) ದೇವರ ಕುಮಾರನೂ ವಾಗ್ದತ್ತ ಮೆಸ್ಸೀಯನೂ ಆದ ಯೇಸು ಕ್ರಿಸ್ತನು ಕೂಡ, ಉದಾಹರಣೆಗಾಗಿ, ಗಲಿಲಾಯ ಸಮುದ್ರದ ಬಿರುಗಾಳಿಯನ್ನು ಶಾಂತಗೊಳಿಸಿದಾಗ, ನೈಸರ್ಗಿಕ ಶಕ್ತಿಗಳ ಮೇಲೆ ತನಗಿದ್ದ ಅಧಿಕಾರವನ್ನು ಪ್ರದರ್ಶಿಸಿದನು. (ಮಾರ್ಕ 4:37-39) ಈ ರೀತಿಯ ವೃತ್ತಾಂತಗಳು, ಇಲ್ಲಿ ಭೂಮಿಯ ಮೇಲೆ ಜೀವವನ್ನು ಬಾಧಿಸುವ ಎಲ್ಲವನ್ನು ಯೆಹೋವ ದೇವರು ಮತ್ತು ಆತನ ಮಗನಾದ ಯೇಸು ಕ್ರಿಸ್ತನು ಪೂರ್ಣವಾಗಿ ಹತೋಟಿಯಲ್ಲಿಡ ಶಕ್ತರೆಂಬದನ್ನು ಸಂದೇಹಿಸುವುದಕ್ಕೆ ಎಡೆಯನ್ನೇ ಕೊಡುವುದಿಲ್ಲ.—2 ಪೂರ್ವಕಾಲವೃತ್ತಾಂತ 20:6; ಯೆರೆಮೀಯ 32:17; ಮತ್ತಾಯ 19:26.
ನಿಜ ಸಂಗತಿಯು ಹೀಗಿರುವಾಗ, ಇತ್ತೀಚಿಗಿನ ಸಮಯಗಳಲ್ಲಿ ನೈಸರ್ಗಿಕ ವಿಪತ್ತುಗಳಿಂದಾಗಿ ಉಂಟಾದ ಅಧಿಕಾಧಿಕ ಹಾವಳಿ ಮತ್ತು ಧ್ವಂಸಕ್ಕೆ ನಾವು ದೇವರನ್ನು ಹೊಣೆಗಾರನಾಗಿ ಮಾಡಬಲ್ಲೆವೋ? ಈ ಪ್ರಶ್ನೆಯನ್ನು ಉತ್ತರಿಸಲು, ನೈಸರ್ಗಿಕ ಶಕ್ತಿಗಳು ಇತ್ತೀಚೆಗೆ ನಾಟಕೀಯವಾಗಿ ಹೆಚ್ಚು ಉಗ್ರವೂ ಪ್ರಾಯಶಃ ಅಂಕೆತಪ್ಪಿಹೋಗಿರುವವೂ ಆಗಿವೆ ಎಂಬದಕ್ಕೆ ಪುರಾವೆ ಇದೆಯೋ ಎಂಬದನ್ನು ನಾವು ಮೊದಲಾಗಿ ಗಮನಿಸಬೇಕಾಗಿದೆ.
ಈ ಸಂಬಂಧದಲ್ಲಿ, ನೈಸರ್ಗಿಕ ವಿಪತ್ತು—ದೈವಘಟನೆಯೊ, ಮಾನವನದ್ದೊ? ಪುಸ್ತಕಕ್ಕೆ ಏನು ಹೇಳಲಿಕ್ಕಿದೆಯೆಂದು ಗಮನಿಸಿರಿ: “ಅನಾವೃಷ್ಟಿಗಳು, ನೆರೆಗಳು ಮತ್ತು ಸುಳಿಗಾಳಿಗಳೊಂದಿಗೆ ಸಂಬಂಧಿತವಾದ ವಾಯುಗುಣ ಶಾಸ್ತ್ರದ ಕಾರ್ಯವಿಧಾನಗಳು ಬದಲಾಗುತ್ತಿವೆಯೆಂಬದಕ್ಕೆ ಯಾವ ಪುರಾವೆಯೂ ಇಲ್ಲ. ಮತ್ತು ಭೂಕಂಪಗಳು, ಜ್ವಾಲಾಮುಖಿ ಮತ್ತು ಸುನಾಮಿ (ಭೂಕಂಪ ಅಲೆ) ಗಳೊಂದಿಗೆ ಜತೆಗೂಡಿರುವ ಭೂಮಿಯ ಚಲನೆಗಳು ಹೆಚ್ಚು ಉಗ್ರವಾಗುತ್ತಿವೆ ಎಂದು ಯಾವ ಭೂವಿಜ್ಞಾನಿಯೂ ವಾದಿಸುತ್ತಿಲ್ಲ.” ಅಂತೆಯೇ, ಅರ್ತ್ಷಾಕ್ ಪುಸ್ತಕವು ಅವಲೋಕಿಸುವುದು: “ಪ್ರತಿಯೊಂದು ಭೂಖಂಡದ ಶಿಲೆಗಳಲ್ಲಿ ಅಸಂಖ್ಯಾತ ದೊಡ್ಡ ಮತ್ತು ಚಿಕ್ಕ ಭೂವಿಜ್ಞಾನದ ಘಟನೆಗಳ ದಾಖಲೆಯು ಅಡಕವಾಗಿವೆ, ಮತ್ತು ಅವು ಇಂದು ಸಂಭವಿಸುವುದಾದರೆ, ಅವುಗಳಲ್ಲಿ ಪ್ರತಿಯೊಂದು ಮಾನವ ಕುಲಕ್ಕೆ ಆಪತ್ಕಾರಕ ವಿಪತ್ತಾಗಿ ಇರುವುದು—ಮತ್ತು ಅಂಥ ಘಟನೆಗಳು ಭವಿಷ್ಯತ್ತಿನಲ್ಲಿ ಪುನಃ ಪುನಃ ಸಂಭವಿಸಲಿರುವುವು ಎಂಬುದು ವೈಜ್ಞಾನಿಕವಾಗಿ ಖಂಡಿತ.” ಬೇರೊಂದು ಮಾತುಗಳಲ್ಲಿ, ಭೂಮಿಯೂ ಅದರ ಬಲವತ್ತಾದ ಶಕ್ತಿಗಳೂ ಯುಗಾಂತರಗಳಲ್ಲಿಲ್ಲಾ ಹೆಚ್ಚು ಕಡಿಮೆ ಒಂದೇ ರೀತಿಯಾಗಿ ಉಳಿದಿವೆ. ಆದಕಾರಣ, ಭೂವಿಜ್ಞಾನದ ಕೆಲವು ರೂಪಗಳಲ್ಲಿ ಅಥವಾ ಇತರ ಚಟುವಟಿಕೆಗಳಲ್ಲಿ ಒಂದು ವೃದ್ಧಿಯನ್ನು ಕೆಲವು ಸಂಖ್ಯಾ ಸಂಗ್ರಹಣಗಳು ಸೂಚಿಸಲಿ ಯಾ ಇಲ್ಲದಿರಲಿ, ಭೂಮಿಯು ಇತ್ತೀಚಿಗಿನ ಸಮಯಗಳಲ್ಲಿ ಅಂಕೆ ತಪ್ಪುವಷ್ಟು ಉಗ್ರವಾಗಿ ಪರಿಣಮಿಸಿರುವುದಿಲ್ಲ.
ಹಾಗಾದರೆ, ನಾವು ಓದುತ್ತಿರುವಂತಹ ನೈಸರ್ಗಿಕ ವಿಪತ್ತುಗಳ ಸಂಭವಪ್ರಮಾಣದಲ್ಲಿ ಮತ್ತು ನಾಶಕಾರಕತೆಯಲ್ಲಿ ಅಭಿವೃದ್ಧಿಗೆ ಕಾರಣವಾದರೂ ಏನು? ಅದು ನಿಸರ್ಗದ ಶಕ್ತಿಗಳ ತಪ್ಪಲ್ಲವಾದರೆ, ದೋಷಾರೋಪವು ಮಾನವರೆಡೆಗೇ ಕೈತೋರಿಸುವಂತೆ ಕಾಣುತ್ತದೆ. ಮತ್ತು ಮಾನವ ಚಟುವಟಿಕೆಗಳು ನಮ್ಮ ಪರಿಸರವನ್ನು ನೈಸರ್ಗಿಕ ವಿಪತ್ತುಗಳಿಗೆ ಹೆಚ್ಚು ಒಲವುಳ್ಳದಾಗಿ ಮತ್ತು ಹೆಚ್ಚು ಸುಲಭಭೇದ್ಯವಾಗಿ ಮಾಡಿರುತ್ತವೆಯೆಂದು ಅಧಿಕಾರಿಗಳು ಖಂಡಿತವಾಗಿಯೂ ಅಂಗೀಕರಿಸಿರುತ್ತಾರೆ. ವಿಕಾಸಶೀಲ ದೇಶಗಳಲ್ಲಿ, ಆಹಾರದ ವರ್ಧಿಸುತ್ತಿರುವ ಆವಶ್ಯಕತೆಯು ರೈತರು ತಮಗಿರುವ ಯಾವುದೇ ಜಮೀನನ್ನು ಅತಿರೇಕ ಕೃಷಿಮಾಡುವಂತೆ ಅಥವಾ ಆವಶ್ಯಕ ಅರಣ್ಯ ಹರವನ್ನು ಕಡಿದುಹಾಕುವ ಮೂಲಕ ನೆಲವನ್ನು ಕೃಷಿಯೋಗ್ಯವಾಗಿ ಮಾಡುವಂತೆ ಒತ್ತಾಯಪಡಿಸುತ್ತದೆ. ಇದು ಗಂಭೀರವಾದ ಮಣ್ಣು ಕೊರೆತಕ್ಕೆ ನಡಿಸುತ್ತದೆ. ವೃದ್ಧಿಯಾಗುತ್ತಿರುವ ಜನಸಂಖ್ಯೆಯು ಹೊಲಸು ಕೇರಿಗಳ ಮತ್ತು ಅಸುರಕ್ಷಿತ ಕ್ಷೇತ್ರಗಳಲ್ಲಿ ಸಿಕ್ಕಾಬಟ್ಟೆ ಮಾಡಿದ ಜೋಪಡಿ ಪುರಗಳ ವೃದ್ಧಿಯನ್ನು ಸಹ ತೀವ್ರಗೊಳಿಸುತ್ತದೆ. ಹೆಚ್ಚು ಮುಂಬರಿದ ರಾಷ್ಟ್ರಗಳಲ್ಲಿ ಸಹ, ಕ್ಯಾಲಿಫೋರ್ನಿಯದಲ್ಲಿ ಸಾನ್ ಆ್ಯಂಡ್ರಿಯಸ್ ಫಾಲ್ಟ್ನ ಉದ್ದಕ್ಕೂ ಜೀವಿಸುತ್ತಿರುವ ಲಕ್ಷಾಂತರ ಜನರಂತೆ, ಸ್ಪಷ್ಟವಾಗಿದ ಎಚ್ಚರಿಕೆಗಳ ಮಧ್ಯೆಯೂ ಜನರು ತಮ್ಮನ್ನು ಅಪಾಯಕ್ಕೆ ಒಡ್ಡಿಕೊಂಡಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಒಂದು ಅಸಾಧಾರಣ ಘಟನೆಯು—ಬಿರುಗಾಳಿ, ನೆರೆ ಅಥವಾ ಭೂಕಂಪ—ಸಂಭವಿಸುವಾಗ, ಅದರ ವಿಪತ್ಕಾರಕ ಫಲಿತಾಂಶವನ್ನು ನಿಜವಾಗಿ “ನೈಸರ್ಗಿಕ” ಎಂದು ಕರೆಯ ಸಾಧ್ಯವಿದೆಯೇ?
ಒಂದು ಸಹಜ ಸ್ವರೂಪದ ಮಾದರಿಯು ಆಫ್ರಿಕದ ಸಾಹಿಲ್ನಲ್ಲಿನ ಅನಾವೃಷ್ಟಿಯಾಗಿದೆ. ನಾವು ಸಾಮಾನ್ಯವಾಗಿ ಅನಾವೃಷ್ಟಿಯನ್ನು ಕ್ಷಾಮ, ಹೊಟ್ಟೆಗಿಲ್ಲದಿರುವಿಕೆ, ಮತ್ತು ಸಾವಿಗೆ ನಡಿಸುವ ಮಳೆಯ ಯಾ ನೀರಿನ ಅಭಾವವಾಗಿ ಎಣಿಸುತ್ತೇವೆ. ಆದರೆ ಆ ಕ್ಷೇತ್ರದ ಮಹಾ ಕ್ಷಾಮವು ಮತ್ತು ಹೊಟ್ಟೆಗಿಲ್ಲದಿರುವಿಕೆಯು ನೀರಿನ ಅಭಾವದ ಕಾರಣ ಮಾತ್ರದಿಂದಲೋ? ಆವೇಶದಿಂದ ವರ್ತಿಸುತ್ತಿರುವ ನಿಸರ್ಗ (ನೇಚರ್ ಆನ್ ದ ರ್ಯಾಂಪೇಜ್) ಪುಸ್ತಕವು ಹೇಳುವುದು: “ವೈಜ್ಞಾನಿಕ ಮತ್ತು ಪರಿಹಾರ ಸಂಘಗಳಿಂದ ಒಟ್ಟುಗೂಡಿಸಲ್ಪಟ್ಟ ಪುರಾವೆಯು ಸೂಚಿಸುವುದೇನಂದರೆ ಇಂದಿನ ಕ್ಷಾಮವು ಪಟ್ಟುಹಿಡಿದಿರುವುದು ಲಂಬಿತವಾದ ಅನಾವೃಷ್ಟಿಯಿಂದಾಗಿ ಅಷ್ಟಲ್ಲ, ನೆಲ ಮತ್ತು ಜಲ ಮೂಲಗಳ ಲಂಬಿತವಾದ ದುರುಪಯೋಗಗಳಿಂದಾಗಿಯೇ. . . . ಸಾಹಿಲಿನ ಮುಂದರಿಯುತ್ತಿರುವ ಬಂಜರೀಕರಣವು ಬಹು ಮಟ್ಟಿಗೆ ಮಾನವ-ನಿರ್ಮಿತ ಪ್ರಕೃತಿ ಘಟನೆಯಾಗಿದೆ.” ದಕ್ಷಿಣ ಆಫ್ರಿಕದ ವಾರ್ತಾಪತ್ರ, ದ ನೇಟಲ್ ವಿಟ್ನೆಸ್, ಅವಲೋಕಿಸಿದ್ದು: “ಕ್ಷಾಮವು ಆಹಾರದ ಕೊರತೆಯ ಕುರಿತಲ್ಲ; ಆಹಾರವನ್ನು ಪಡೆಯುವುದಕ್ಕೆ ಪ್ರವೇಶಮಾರ್ಗದ ಕೊರತೆಯ ಕುರಿತಾಗಿದೆ. ಬೇರೊಂದು ಮಾತುಗಳಲ್ಲಿ, ಅದು ಬಡತನದ ವಿಷಯವಾಗಿದೆ.”
ಬೇರೆ ವಿಪತ್ತುಗಳಿಂದ ಉಂಟಾಗುವ ಹೆಚ್ಚಿನ ನಾಶನದ ವಿಷಯದಲ್ಲೂ ಇದನ್ನೇ ಹೇಳಸಾಧ್ಯವಿದೆ. ಅಧ್ಯಯನಗಳು ತೋರಿಸುವುದೇನಂದರೆ ಲೋಕದ ಶ್ರೀಮಂತ ರಾಷ್ಟ್ರಗಳಿಗಿಂತ ಬಡ ರಾಷ್ಟ್ರಗಳು ನೈಸರ್ಗಿಕ ವಿಪತ್ತುಗಳಿಂದ ಅನುಭವಿಸುವ ಸಾವಿನ ಸಂಖ್ಯೆಯು ಪ್ರಮಾಣಾನುಗುಣವಾಗಿ ಹೆಚ್ಚು. ಉದಾಹರಣೆಗೆ, ಒಂದು ಅಧ್ಯಯನಕ್ಕನುಸಾರ, 1960 ರಿಂದ 1981 ರ ವರೆಗೆ, ಜಪಾನ್ನಲ್ಲಾದ 43 ಭೂಕಂಪಗಳಲ್ಲಿ ಮತ್ತು ಇತರ ವಿಪತ್ತುಗಳಲ್ಲಿ, ಪ್ರತಿಯೊಂದು ವಿಪತ್ತಿನಲ್ಲಿ ಸರಾಸರಿ 63 ಮರಣಗಳಂತೆ 2,700 ಮಂದಿ ಜೀವ ಕಳಕೊಂಡರು. ಅದೇ ಅವಧಿಯಲ್ಲಿ, ಪೆರು ದೇಶದಲ್ಲಾದ 31 ವಿಪತ್ತುಗಳಲ್ಲಿ 91,000 ಮರಣಗಳಾದವು, ಅಥವಾ ಪ್ರತಿಯೊಂದು ವಿಪತ್ತಿನಲ್ಲಿ 2,900 ಮಂದಿ ಸತ್ತರು. ಈ ಅಂತರವೇಕೆ? ಪ್ರಕೃತಿಯ ಶಕ್ತಿಗಳು ನೈಸರ್ಗಿಕ ವಿಪತ್ತನ್ನು ಉಂಟುಮಾಡಿರಬಹುದು, ಆದರೆ ಜೀವನಷ್ಟದಲ್ಲಿ ಮತ್ತು ಸ್ವತ್ತುಗಳ ನಾಶನದಲ್ಲಿ ಫಲಿಸಿದ ಆ ದೊಡ್ಡ ಅಂತರಕ್ಕಾಗಿ ಜವಾಬ್ದಾರಿಯನ್ನು ಮನುಷ್ಯರ—ಸಾಮಾಜಿಕ, ಆರ್ಥಿಕ, ರಾಜಕೀಯ—ಚಟುವಟಿಕೆಯೇ ಹೊರಬೇಕಾಗಿದೆ.
ಪರಿಹಾರಗಳೇನು?
ನೈಸರ್ಗಿಕ ವಿಪತ್ತುಗಳನ್ನು ನಿಭಾಯಿಸುವ ಹಾದಿಗಳನ್ನು ಯೋಜಿಸಲು ವಿಜ್ಞಾನಿಗಳು ಮತ್ತು ಪರಿಣತರು ಅನೇಕ ವರ್ಷಗಳಿಂದ ಪ್ರಯತ್ನಿಸಿದ್ದಾರೆ. ಭೂಕಂಪಗಳ ಮತ್ತು ಜ್ವಾಲಾಮುಖಿಯ ಹೊರಚಿಮ್ಮುವಿಕೆಗಳ ಕಾರ್ಯಗತಿಗಳ ತಿಳಿವಳಿಕೆಯನ್ನು ಹುಡುಕಲು ಅವರು ಭೂಮಿಯನ್ನು ಆಳವಾಗಿ ಹೊಕ್ಕಿ ಶೋಧಿಸುತ್ತಾರೆ. ಸುಳಿಗಾಳಿಗಳು ಮತ್ತು ಚಂಡಮಾರುತಗಳ ಹಾದಿಗಳನ್ನು ಶೋಧಿಸಲು ಅಥವಾ ನೆರೆಗಳು ಮತ್ತು ಅನಾವೃಷ್ಟಿಯನ್ನು ಮುಂತಿಳಿಸಲು ಅವರು ಅಂತರಾಳ ಉಪಗ್ರಹಗಳೊಂದಿಗೆ ತಾಪಮಾನ ನಮೂನೆಗಳನ್ನು ವೀಕ್ಷಿಸುತ್ತಾರೆ. ಈ ಎಲ್ಲಾ ಸಂಶೋಧನೆಯು ಅವರಿಗೆ, ಈ ನೈಸರ್ಗಿಕ ಶಕ್ತಿಗಳ ಆಘಾತವನ್ನು ಕಡಿಮೆಮಾಡಲು ತಮ್ಮನ್ನು ಶಕ್ತಗೊಳಿಸುವದೆಂದು ಅವರು ನಿರೀಕ್ಷಿಸುವ ಮಾಹಿತಿಯನ್ನು ಕೊಟ್ಟಿರುತ್ತದೆ.
ಅಂಥ ಪ್ರಯತ್ನಗಳು ಒಳ್ಳೆಯ ಫಲಿತಾಂಶಗಳನ್ನು ತಂದಿವೆಯೋ? ಈ ರೀತಿಯ ದುಬಾರಿ, ಉಚ್ಚ-ತಾಂತ್ರಿಕ ವಿಧಾನಗಳ ಕುರಿತು ನೈಸರ್ಗಿಕ ಪರಿಸರದ ಒಂದು ಕಾವಲುಗಾರ ಸಂಸ್ಥೆಯು ಅವಲೋಕಿಸಿದ್ದು: “ಇವುಗಳಿಗೆ ಅವುಗಳ ಸಂಬಂಧಿತ ಪ್ರಾಮುಖ್ಯತೆ ಇದೆ. ಆದರೆ ಅವು ಅಸಮ ಪ್ರಮಾಣದ ಹಣ ಮತ್ತು ಪ್ರಯತ್ನವನ್ನು ತಿಂದುಬಿಡುವುದಾದರೆ—ಬಲಿಪಶುಗಳ ಸಮಾಜಗಳೊಳಗೆ ಒಳಸೇರಿರುವ ವಿಪತ್ತುಗಳನ್ನು ದುರ್ಲಕ್ಷಿಸಲು ನೆವನವಾಗಿ ಕಾರ್ಯನಡಿಸಿದಲ್ಲಿ—ಆಗ ಅವು ಒಳ್ಳೆಯದಕ್ಕಿಂತ ಹೆಚ್ಚು ಕೆಡುಕನ್ನೇ ಮಾಡಬಲ್ಲವು.” ಉದಾಹರಣೆಗೆ, ಬಾಂಗ್ಲಾದೇಶದ ಕರಾವಳಿ ಕುದುರು ಸದಾ ನೆರೆಗಳಿಂದ ಮತ್ತು ಭರತ ಅಲೆಗಳಿಂದ ಬೆದರಿಸಲ್ಪಡುತ್ತಿದೆಯೆಂದು ತಿಳಿಯುವುದು ಉಪಯುಕ್ತವಾಗಿದ್ದರೂ, ಆ ತಿಳಿವಳಿಕೆಯು ಬಾಂಗ್ಲದೇಶವಾಸಿಗಳನ್ನು ಲಕ್ಷಗಟ್ಟಲೆಯಲ್ಲಿ ಅಲ್ಲಿ ಜೀವಿಸುವಂತೆ ಒತ್ತಾಯಿಸುವುದರಿಂದ ತಡೆಯುವುದಿಲ್ಲ. ಲಕ್ಷಾಂತರ ಸಂಖ್ಯೆಯ ಸಾವುಗಳೊಂದಿಗೆ ಪದೇ ಪದೇ ಹೊಡೆಯುವ ವಿಪತ್ತುಗಳೇ ಅದರ ಫಲಿತಾಂಶ.
ತಾಂತ್ರಿಕ ಮಾಹಿತಿಯು ಒಂದು ಸೀಮಿತ ಬಿಂದುವಿನ ತನಕ ಮಾತ್ರವೇ ಉಪಯುಕ್ತವಾಗಬಲ್ಲದೆಂಬದು ಸ್ಫುಟ. ಬೇಕಾದ ಇನ್ನೊಂದು ವಿಷಯವು ಯಾವುದೆಂದರೆ, ಅಪಾಯಗಳಿಗೆ ವಿಶಿಷ್ಟವಾಗಿ ಬಯಲಾಗಿರುವ ಕ್ಷೇತ್ರಗಳಲ್ಲಿ ಜೀವಿಸದ ಹೊರತು ಅಥವಾ ಪರಿಸರವನ್ನು ದ್ವಂಸಗೊಳಿಸುವ ರೀತಿಯಲ್ಲಿ ಜೀವಿಸದ ಹೊರತು ಬೇರೆ ಆಯ್ಕೆಯಿಲ್ಲದೆ ಬಿಡಲ್ಪಡುವ ಜನರ ಒತ್ತಡಗಳನ್ನು ಉಪಶಮನಗೊಳಿಸುವ ಶಕ್ತಿಯೇ. ಬೇರೊಂದು ಮಾತುಗಳಲ್ಲಿ, ಘಟಕಗಳಿಂದಾದ ಹಾನಿಯನ್ನು ಕಡಿಮೆಮಾಡಲು, ನಾವು ಯಾವುದರ ಕೆಳಗೆ ಜೀವಿಸುತ್ತೇವೋ ಆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಪೂರಾ ರೀತಿಯಲ್ಲಿ ಪುನರ್ರೂಪಿಸುವುದು ಬೇಕಾಗಿರುತ್ತದೆ. ಅಂಥ ಒಂದು ಕೆಲಸವನ್ನು ಯಾರು ನಿರ್ವಹಿಸಶಕ್ತರು? ನೈಸರ್ಗಿಕ ವಿಪತ್ತುಗಳನ್ನು ತರುವ ಶಕ್ತಿಗಳನ್ನು ಸಹ ಅಂಕೆಯಲ್ಲಿಡಬಲ್ಲಾತನು ಮಾತ್ರವೇ ಅದನ್ನು ಮಾಡಶಕ್ತನು.
ಮುಂದಿರುವ ದೇವರ ಕೃತ್ಯಗಳು
ಯೆಹೋವನು ಕೇವಲ ರೋಗ ಲಕ್ಷಣಗಳೊಂದಿಗೆ ವ್ಯವಹರಿಸುವುದಿಲ್ಲ, ಬದಲಿಗೆ ಮಾನವ ದುರವಸ್ಥೆಯ ಮೂಲ ಕಾರಣಕ್ಕೆ ಆತನು ಹೋಗುವನು. “ಮನುಷ್ಯನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡಿದ” ದುರಾಸೆಯ ಮತ್ತು ದಬ್ಬಾಳಿಕೆಯ ರಾಜಕೀಯ, ವಾಣಿಜ್ಯ ಮತ್ತು ಧಾರ್ಮಿಕ ವ್ಯವಸ್ಥೆಗಳನ್ನು ಅವನು ಅಂತ್ಯಗೊಳಿಸಲಿರುವನು. (ಪ್ರಸಂಗಿ 8:9) ದೇವರು ಈ ಭೂಮಿಯಿಂದ ದುಷ್ಟತನ ಮತ್ತು ಕಷ್ಟಾನುಭವವನ್ನು ನಿರ್ಮೂಲಗೊಳಿಸುವ ಸಮಯಕ್ಕೆ ಮತ್ತು ಶಾಂತಿ ಮತ್ತು ನೀತಿಯುಳ್ಳ ಒಂದು ಭೂಪ್ರಮೋದವನವನ್ನು ಪುನಃ ಸ್ಥಾಪಿಸುವ ಸಮಯಕ್ಕೆ ಕೈತೋರಿಸುವ ಅನೇಕಾನೇಕ ಪ್ರವಾದನೆಗಳು ಬೈಬಲಿನಲ್ಲೆಲ್ಲೂ ಇರುವುದನ್ನು ಅದರ ಪರಿಚಯವುಳ್ಳ ಯಾವನಾದರೂ ಗಮನಿಸಲು ತಪ್ಪಲಾರನು.—ಕೀರ್ತನೆ 37:9-11, 29; ಯೆಶಾಯ 13:9; 65:17, 20-25; ಯೆರೆಮೀಯ 25:31-33; 2 ಪೇತ್ರ 3:7; ಪ್ರಕಟನೆ 11:18.
ಕಾರ್ಯತಃ ಯೇಸು ಕ್ರಿಸ್ತನು ತನ್ನ ಹಿಂಬಾಲಕರೆಲ್ಲರಿಗೆ ಪ್ರಾರ್ಥಿಸಲು ಕಲಿಸಿದ್ದು ಅದನ್ನೇ, ಏನಂದರೆ, “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:10) ಪ್ರವಾದಿ ದಾನಿಯೇಲನು ಮುಂತಿಳಿಸಿದಂತೆಯೇ, ಮೆಸ್ಸೀಯ ಸಂಬಂಧಿತ ರಾಜ್ಯವು ಅಸಂಪೂರ್ಣ ಮಾನವ ಆಳಿಕೆಯನ್ನೆಲ್ಲಾ ತೆಗೆದುಹಾಕುವುದು ಮತ್ತು ಸ್ಥಾನಪಲ್ಲಟ ಮಾಡುವುದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿ ಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:44.
ಇಂದು ರಾಷ್ಟ್ರಗಳು ಮಾಡಲಶಕ್ತವಾಗಿರುವ ಯಾವುದನ್ನು ದೇವರ ರಾಜ್ಯವು ಪೂರೈಸಲಿದೆ? ಏನು ಬರಲಿದೆಯೋ ಅದರ ಮುಗ್ಧಗೊಳಿಸುವ ಮುಂಬೆಳಕನ್ನು ಬೈಬಲು ಕೊಡುತ್ತದೆ. ಈ ಪುಟಗಳಲ್ಲಿ ದೃಷ್ಟಾಂತಿಸಿರುವ ಬರ ಮತ್ತು ಬಡತನಗಳಂತಹ ಪರಿಸ್ಥಿತಿಗಳ ಬದಲಿಗೆ, “ಭೂಮಿಯ ಮೇಲೆ ಹೇರಳವಾದ ಧಾನ್ಯವಿರುವುದು; ಬೆಟ್ಟಗಳ ತುದಿಯು ಸಮೃದ್ಧಿಯಿಂದ ತುಳುಕುವದು,” ಮತ್ತು “ಹೊಲದ ವೃಕ್ಷವು ಫಲಕೊಡುವದು, ಭೂಮಿಯು ತಾನೇ ಅದರ ಬೆಳೆಯನ್ನೀಯುವುದು, ಮತ್ತು ಅವರು ನಿಜವಾಗಿಯೂ ತಮ್ಮ ದೇಶಗಳಲ್ಲಿ ಸುರಕ್ಷಿತವಾಗಿ ವಾಸಿಸುವರು.” (ಕೀರ್ತನೆ 72:16; ಯೆಹೆಜ್ಕೇಲ 34:27) ನೈಸರ್ಗಿಕ ಪರಿಸರದ ಕುರಿತು ಬೈಬಲು ನಮಗೆ ಹೇಳುವುದು: “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು. . . . ಅರಣ್ಯದಲ್ಲಿ ಒರತೆಗಳು ಒಡೆಯುವವು, ಒಣನೆಲದಲ್ಲಿ ನದಿಗಳು ಹುಟ್ಟಿ ಹರಿಯುವವು. ಬೆಂಗಾಡು ಸರೋವರವಾಗುವದು; ಒಣನೆಲದಲ್ಲಿ ಬುಗ್ಗೆಗಳುಕ್ಕುವವು.” (ಯೆಶಾಯ 35:1, 6, 7) ಮತ್ತು ಯುದ್ಧಗಳು ಇನ್ನೆಂದಿಗೂ ಇರವು.—ಕೀರ್ತನೆ 46:9.
ಯೆಹೋವ ದೇವರು ಅವೆಲ್ಲವನ್ನು ಹೇಗೆ ನಿರ್ವಹಿಸಲಿಕ್ಕಿರುವನು, ಮತ್ತು ನೈಸರ್ಗಿಕ ಶಕ್ತಿಗಳು ಇನ್ನು ಮುಂದೆ ಯಾವ ಹಾನಿಯನ್ನೂ ತಾರದಿರುವಂತೆ ಆತನು ಅವುಗಳೊಂದಿಗೆ ಹೇಗೆ ವ್ಯವಹರಿಸಲಿಕ್ಕಿರುವನು ಎಂಬದನ್ನು ಬೈಬಲು ತಿಳಿಸುವುದಿಲ್ಲ. ಆದರೂ ಒಂದು ಖಂಡಿತ ಏನಂದರೆ, ಆ ನೀತಿಯುಳ್ಳ ಸರಕಾರದ ಕೆಳಗೆ ಜೀವಿಸುವವರೆಲ್ಲರೂ, “ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರ ವ್ಯಾಧಿಗೆ ಗುರಿಯಾಗರು, ಅವರು ಯೆಹೋವನ ಆಶೀರ್ವಾದವನ್ನು ಹೊಂದಿದವರ ಸಂತಾನವಷ್ಟೆ.”—ಯೆಶಾಯ 65:23.
ಈ ಪತ್ರಿಕೆಯ ಪುಟಗಳಲ್ಲಿ ಹಾಗೂ ವಾಚ್ ಟವರ್ ಸೊಸೈಟಿಯ ಇತರ ಪ್ರಕಾಶನಗಳಲ್ಲಿ, ದೇವರ ರಾಜ್ಯವು ಪರಲೋಕದಲ್ಲಿ 1914 ನೆಯ ವರ್ಷದಲ್ಲಿ ಸ್ಥಾಪನೆಗೊಂಡಿದೆ ಎಂದು ಯೆಹೋವನ ಸಾಕ್ಷಿಗಳು ಪದೇ ಪದೇ ಕೈತೋರಿಸಿದ್ದಾರೆ. ಆ ರಾಜ್ಯದ ಮಾರ್ಗದರ್ಶನದ ಕೆಳಗೆ, ಒಂದು ಭೂವ್ಯಾಪಕ ಸಾಕ್ಷಿಯನ್ನು ಸುಮಾರು 80 ವರ್ಷಗಳಿಂದ ಕೊಡಲಾಗುತ್ತಿದೆ ಮತ್ತು ನಾವಿಂದು ವಾಗ್ದತ್ತ “ನೂತನಾಕಾಶಮಂಡಲ ಮತ್ತು ನೂತನಭೂಮಂಡಲ”ದ ಪ್ರವೇಶದ್ವಾರದಲ್ಲೇ ಇದ್ದೇವೆ. ಮಾನವ ಕುಲವು ನೈಸರ್ಗಿಕ ವಿಪತ್ತುಗಳ ಹಾವಳಿಗಳಿಂದ ಮುಕ್ತವಾಗಲಿರುವುದು ಮಾತ್ರವೇ ಅಲ್ಲ, ಕಳೆದ ಆರು ಸಾವಿರ ವರ್ಷಗಳಿಂದ ಮಾನವತೆಯನ್ನು ಬಾಧಿಸುತ್ತಿರುವ ಎಲ್ಲಾ ಬೇನೆ ಮತ್ತು ಕಷ್ಟಾನುಭವದಿಂದಲೂ ಮುಕ್ತವಾಗುವುದು. ಆ ಸಮಯದ ಕುರಿತು “ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು” ಎಂದು ಸತ್ಯವಾಗಿ ಹೇಳಸಾಧ್ಯವಾಗಲಿದೆ.—2 ಪೇತ್ರ 3:13; ಪ್ರಕಟನೆ 21:4.
ಪ್ರಚಲಿತ ಸಮಯದ ಕುರಿತಾದರೂ ಏನು? ನೈಸರ್ಗಿಕ ಪರಿಸ್ಥಿತಿಗಳು ಅಥವಾ ಬೇರೆಯವುಗಳ ಕಾರಣದಿಂದಾಗಿ ಕಷ್ಟಪಡುತ್ತಿರುವವರ ಪರವಾಗಿ ದೇವರು ಕಾರ್ಯನಡಿಸುತ್ತಿದ್ದಾನೋ? ಅತಿ ಖಂಡಿತವಾಗಿಯೂ ಹೌದು, ಆದರೆ ಹೆಚ್ಚಿನ ಜನರು ನಿರೀಕ್ಷಿಸಬಹುದಾದ ರೀತಿಯಲ್ಲಿ ಅನಿವಾರ್ಯವಾಗಿ ಅಲ್ಲ.
[ಪುಟ 8 ರಲ್ಲಿರುವಚಿತ್ರ]
ಮಾನವ ಚಟುವಟಿಕೆಗಳು ನಮ್ಮ ಪರಿಸರವನ್ನು ನೈಸರ್ಗಿಕ ವಿಪತ್ತುಗಳ ಕಡೆಗೆ ಹೆಚ್ಚು ಓಲುವಂತೆ ಮಾಡಿವೆ
[ಕೃಪೆ]
Laif/Sipa Press
Chamussy/Sipa Press
Wesley Bocxe/Sipa Press
Jose Nicolas/Sipa Press