ಧೈರ್ಯವುಳ್ಳವರಾಗಿರ್ರಿ!
“ಧೈರ್ಯವುಳ್ಳವರಾಗಿದ್ದು, ‘ಯೆಹೋವನು ನನ್ನ ಸಹಾಯಕನು’ ಎಂದು ಹೇಳಿರಿ.”—ಇಬ್ರಿಯ 13:6, NW.
1. ಸಾ.ಶ. ಒಂದನೆಯ ಶತಮಾನದಲ್ಲಿ ದೇವರ ಸತ್ಯವನ್ನು ಕಲಿತವರಿಂದ ಯಾವ ರೀತಿಯ ಧೈರ್ಯವು ಪ್ರದರ್ಶಿಸಲ್ಪಟ್ಟಿತು?
ನಮ್ಮ ಸಾಮಾನ್ಯ ಶಕದ ಒಂದನೆಯ ಶತಮಾನವು ಅದಾಗಿತ್ತು. ಬಹುಕಾಲದಿಂದ ಎದುರುನೋಡಲ್ಪಟ್ಟ ಮೆಸ್ಸೀಯನು ಬಂದಿದ್ದನು. ಅವನ ಶಿಷ್ಯರಿಗೆ ತನ್ನ ಉತ್ತಮವಾಗಿ ಕಲಿಸಿದ್ದನು ಮತ್ತು ಪ್ರಾಮುಖ್ಯವಾದೊಂದು ಸಾರುವ ಕಾರ್ಯವನ್ನು ಆರಂಭಿಸಿದ್ದನು. ದೇವರ ರಾಜ್ಯದ ಸುವಾರ್ತೆಯನ್ನು ಜನರು ಕೇಳುವ ಸಮಯವು ಅದಾಗಿತ್ತು. ಆದಕಾರಣ, ಸತ್ಯವನ್ನು ಕಲಿತಿದ್ದ ಪುರುಷರು ಮತ್ತು ಸ್ತ್ರೀಯರು, ಆ ಅದ್ಭುತಕರವಾದ ಸಂದೇಶವನ್ನು ಧೈರ್ಯದಿಂದ ಘೋಷಿಸಿದರು.—ಮತ್ತಾಯ 28:19, 20.
2. ಇಂದು ಯೆಹೋವನ ಸಾಕ್ಷಿಗಳಿಗೆ ಧೈರ್ಯದ ಅಗತ್ಯವಿದೆ ಯಾಕೆ?
2 ಆ ದಿನಗಳಲ್ಲಿ ರಾಜ್ಯವು ಸ್ಥಾಪಿತವಾಗಿರಲಿಲ್ಲ. ಆದರೆ ನಿಯುಕ್ತ ಅರಸ, ಯೇಸು ಕ್ರಿಸ್ತನು, ರಾಜ್ಯ ಅಧಿಕಾರದಲ್ಲಿ ಅವನ ಭವಿಷ್ಯದ ಅದೃಶ್ಯ ಸಾನ್ನಿಧ್ಯದ ಕುರಿತು ಪ್ರವಾದಿಸಿದ್ದನು. ಸರಿಸಾಟಿಯಿಲ್ಲದ ಯುದ್ಧ ಕಾರ್ಯಾಚರಣೆ, ಬರ, ಅಂಟುರೋಗಗಳು, ಭೂಕಂಪಗಳು, ಮತ್ತು ಸುಸಮಾಚಾರದ ಲೋಕವ್ಯಾಪಕ ಸಾರುವಿಕೆಯಂಥ ವಿಷಯಗಳಿಂದ ಅದು ಗುರುತಿಸಲ್ಪಡುವುದು. (ಮತ್ತಾಯ 24:3-14; ಲೂಕ 21:10, 11) ಯೆಹೋವನ ಸಾಕ್ಷಿಗಳೋಪಾದಿ, ಈ ಪರಿಸ್ಥಿತಿಗಳೊಂದಿಗೆ ಮತ್ತು ನಾವು ಅನುಭವಿಸುವ ಹಿಂಸೆಯೊಂದಿಗೆ ನಿಭಾಯಿಸಲು ನಮಗೆ ಧೈರ್ಯದ ಅಗತ್ಯವಿದೆ. ಆದುದರಿಂದ ಸಾ.ಶ. ಒಂದನೆಯ ಶತಮಾನದ ಧೈರ್ಯದ ರಾಜ್ಯ ಘೋಷಕರ ಕುರಿತಾದ ಬೈಬಲ್ ದಾಖಲೆಗಳನ್ನು ಪರಿಗಣಿಸುವುದು ಪ್ರಯೋಜನಕಾರಿಯಾಗಿರುವುದು.
ಕ್ರಿಸ್ತನನ್ನು ಅನುಕರಿಸಲು ಧೈರ್ಯ
3. ಧೈರ್ಯದ ಅತ್ಯುತ್ತಮ ಮಾದರಿಯನ್ನು ಯಾರು ಒದಗಿಸುತ್ತಾನೆ, ಮತ್ತು ಅವನ ಕುರಿತು ಇಬ್ರಿಯ 12:1-3 ರಲ್ಲಿ ಏನನ್ನು ಹೇಳಲಾಗಿದೆ?
3 ಧೈರ್ಯದ ಅತ್ಯುತ್ತಮ ಮಾದರಿಯನ್ನು ಯೇಸು ಕ್ರಿಸ್ತನು ಒದಗಿಸುತ್ತಾನೆ. ಯೆಹೋವನ ‘ಮೇಘದೋಪಾದಿ’ ಧೈರ್ಯದ ಕ್ರೈಸ್ತಪೂರ್ವ ಸಾಕ್ಷಿಗಳ ಕುರಿತು ಉದ್ಧರಿಸಿದ ಬಳಿಕ, ಅಪೊಸ್ತಲ ಪೌಲನು ಹೀಗೆ ಹೇಳುವ ಮೂಲಕ ಯೇಸುವಿನ ಮೇಲೆ ಕೇಂದ್ರೀಕರಿಸುತ್ತಾನೆ: “ಆದಕಾರಣ ಇಷ್ಟುಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ. ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಆತನನ್ನು ಆಲೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು.”—ಇಬ್ರಿಯ 12:1-3.
4. ಸೈತಾನನಿಂದ ಶೋಧಿಸಲ್ಪಟ್ಟಾಗ ಯೇಸು ಧೈರ್ಯವನ್ನು ಹೇಗೆ ಪ್ರದರ್ಶಿಸಿದನು?
4 ತನ್ನ ದೀಕ್ಷಾಸ್ನಾನ ಮತ್ತು ಅರಣ್ಯದಲ್ಲಿ 40 ದಿನಗಳ ಮನನ, ಪ್ರಾರ್ಥನೆ, ಮತ್ತು ಉಪವಾಸದ ಬಳಿಕ, ಯೇಸು ಸೈತಾನನನ್ನು ಧೈರ್ಯದಿಂದ ಎದುರಿಸಿದನು. ಕಲ್ಲುಗಳನ್ನು ರೊಟ್ಟಿಯಾಗಿ ಮಾಡಲು ಸೈತಾನನಿಂದ ಶೋಧಿಸಲ್ಪಟ್ಟಾಗ, ಯೇಸು ನಿರಾಕರಿಸಿದನು ಯಾಕಂದರೆ, ವೈಯಕ್ತಿಕ ಬಯಕೆಯನ್ನು ತೃಪ್ತಿಗೊಳಿಸಲು ಒಂದು ಅದ್ಭುತಕಾರ್ಯವನ್ನು ಮಾಡುವುದು ತಪ್ಪಾಗಿತ್ತು. ಯೇಸುವು “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ,” ಅಂದನು. ದೇವಾಲಯದ ಶಿಖರದಿಂದ ಧುಮುಕುವಂತೆ ಸೈತಾನನು ಅವನನ್ನು ಆಹ್ವಾನಿಸಿದಾಗ, ಯೇಸು ನಿರಾಕರಿಸಿದನು ಯಾಕಂದರೆ, ಸಂಭಾವ್ಯ ಆತ್ಮಹತ್ಯೆಯಿಂದ ತನ್ನನ್ನು ಕಾಪಾಡುವಂತೆ ದೇವರನ್ನು ಶೋಧಿಸುವುದು ಪಾಪವಾಗುತ್ತಿತ್ತು. ಅದಕ್ಕೆ ಯೇಸು, “ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು ಎಂಬದಾಗಿ ಸಹ ಬರೆದದೆ,” ಅಂದನು. ಲೋಕದ ಎಲ್ಲಾ ರಾಜ್ಯಗಳನ್ನು ಒಂದು “ಸಾಷ್ಟಾಂಗನಮಸ್ಕಾರ”ಕ್ಕೆ ಸೈತಾನನು ಅವನಿಗೆ ನೀಡಿದನು, ಆದರೆ ಯೇಸು ಧರ್ಮಭ್ರಷ್ಟನಾಗಿ, ಪರೀಕ್ಷೆಯ ಕೆಳಗೆ ಮಾನವರು ದೇವರಿಗೆ ನಂಬಿಗಸ್ತರಾಗಿ ಉಳಿಯುವುದಿಲ್ಲ ಎಂಬ ಪಿಶಾಚನ ದೂರನ್ನು ಬೆಂಬಲಿಸುವವನಾಗಿರಲಿಲ್ಲ. ಆದುದರಿಂದ ಯೇಸು ಘೋಷಿಸಿದ್ದು: “ಸೈತಾನನೇ, ನೀನು ತೊಲಗಿ ಹೋಗು. ನಿನ್ನ ದೇವರಾಗಿರುವ ಕರ್ತನಿಗೆ [ಯೆಹೋವನಿಗೆ, NW] ಅಡಬ್ಡಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ.” ಆಗ, ಶೋಧಕನು, “ಸ್ವಲ್ಪಕಾಲ ಆತನನ್ನು ಬಿಟ್ಟು ಹೊರಟುಹೋದನು.”—ಮತ್ತಾಯ 4:1-11; ಲೂಕ 4:13.
5. ಶೋಧನೆಯನ್ನು ಎದುರಿಸಲು ಯಾವುದು ನಮಗೆ ಸಹಾಯ ಮಾಡಬಲ್ಲದು?
5 ಯೇಸು ಯೆಹೋವನಿಗೆ ಅಧೀನನಾಗಿದ್ದನು ಮತ್ತು ಸೈತಾನನಿಗೆ ವಿರೋಧವಾಗಿದ್ದನು. ನಾವು ಅದೇ ರೀತಿಯಲ್ಲಿ ‘ದೇವರಿಗೆ ಒಳಗಾಗಿ, ಸೈತಾನನನ್ನು ಎದುರಿಸಿದರೆ, ಅವನು ನಮ್ಮನ್ನು ಬಿಟ್ಟು ಓಡಿಹೋಗುವನು.’ (ಯಾಕೋಬ 4:7) ಯೇಸುವಿನಂತೆ, ಪಾಪಕರವಾದ ಯಾವುದಾದರೂ ವಿಷಯವನ್ನು ಮಾಡುವಂತೆ ನಾವು ಶೋಧಿಸಲ್ಪಡುವ ಸಮಯದಲ್ಲಿ ಶಾಸ್ತ್ರವಚನಗಳನ್ನು ಬಹುಶಃ ಉದ್ಧರಿಸುವ ಮೂಲಕ ಅವುಗಳನ್ನು ನಾವು ಅನ್ವಯಿಸುವುದಾದರೆ, ಶೋಧನೆಯನ್ನು ನಾವು ಧೈರ್ಯದಿಂದ ಎದುರಿಸಬಲ್ಲೆವು. “ಕದಿಯಬಾರದು” ಎಂಬ ದೇವರ ನಿಯಮವನ್ನು ನಾವು ನಮ್ಮೊಳಗೆಯೇ ಪುನರುಚ್ಚರಿಸುವ ಸಮಯದಲ್ಲಿ ಕಳ್ಳತನವನ್ನು ಮಾಡುವ ಶೋಧನೆಗೆ ನಾವು ಶರಣಾಗತರಾಗುವೆವು ಎಂಬುದು ಸಂಭವನೀಯವೊ? “ವ್ಯಭಿಚಾರ ಮಾಡಬಾರದು” ಎಂಬ ಮಾತುಗಳನ್ನು ಅವರಲ್ಲಿ ಒಬ್ಬರಾದರೂ ಧೈರ್ಯದಿಂದ ಉದ್ಧರಿಸಿದರೆ, ಇಬ್ಬರು ಕ್ರೈಸ್ತರು ಲೈಂಗಿಕ ಅನೈತಿಕತೆಗೆ ಬಲಿಯಾಗುವ ಸಾಧ್ಯತೆಯಿದೆಯೋ?—ರೋಮಾಪುರ 13:8-10; ವಿಮೋಚನಕಾಂಡ 20:14, 15.
6. ಯೇಸು ಹೇಗೆ ಒಬ್ಬ ಧೈರ್ಯದ ಲೋಕ ಜಯಶಾಲಿಯಾಗಿದ್ದನು?
6 ಈ ಲೋಕದಿಂದ ದ್ವೇಷಿಸಲ್ಪಟ್ಟ ಕ್ರೈಸ್ತರೋಪಾದಿ, ಅದರ ಆತ್ಮವನ್ನು ಮತ್ತು ಪಾಪಪೂರ್ಣ ನಡತೆಯನ್ನು ನಾವು ತೊರೆಯಬಲ್ಲೆವು. ಯೇಸು ಅವನ ಹಿಂಬಾಲಕರಿಗೆ ಹೇಳಿದ್ದು: “ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರ್ರಿ, ನಾನು ಲೋಕವನ್ನು ಜಯಿಸಿದ್ದೇನೆ.” (ಯೋಹಾನ 16:33) ಲೋಕದಂತೆ ಆಗದೆ ಇರುವ ಮೂಲಕ ಅವನು ಅದನ್ನು ಜಯಿಸಿದನು. ಜಯಶಾಲಿಯೋಪಾದಿ ಅವನ ಮಾದರಿಯು ಮತ್ತು ಸಮಗ್ರತೆಯನ್ನು ಕಾಪಾಡುವ ಅವನ ಮಾರ್ಗದ ಫಲಿತಾಂಶವು, ಈ ಲೋಕದಿಂದ ಬೇರೆಯಾಗಿ ಮತ್ತು ಅದರಿಂದ ನಿಷ್ಕಳಂಕರಾಗಿ ಉಳಿಯುವ ಮೂಲಕ ಅವನನ್ನು ಅನುಕರಿಸುವಂತೆ ನಮ್ಮನ್ನು ಧೈರ್ಯದಿಂದ ತುಂಬಬಲ್ಲದು.—ಯೋಹಾನ 17:16.
ಸಾರುತ್ತಾ ಇರಲು ಧೈರ್ಯ
7, 8. ಹಿಂಸೆಯ ನಡುವೆಯೂ ಸಾರುತ್ತಾ ಇರಲು ನಮಗೆ ಯಾವುದು ಸಹಾಯ ಮಾಡುವುದು?
7 ಹಿಂಸೆಯ ನಡುವೆಯೂ ಸಾರುತ್ತಾ ಇರಲು ಧೈರ್ಯಕ್ಕಾಗಿ ಯೇಸು ಮತ್ತು ಅವನ ಶಿಷ್ಯರು ದೇವರ ಮೇಲೆ ಆತುಕೊಂಡರು. ಹಿಂಸೆಯ ಎದುರಿನಲ್ಲಿಯೂ ಕ್ರಿಸ್ತನು ತನ್ನ ಶುಶ್ರೂಷೆಯನ್ನು ಧೈರ್ಯದಿಂದ ನೆರವೇರಿಸಿದನು, ಮತ್ತು ಸಾ.ಶ. 33ರ ಪಂಚಾಶತ್ತಮದ ಬಳಿಕ, ಅವರನ್ನು ಯೆಹೂದಿ ಧಾರ್ಮಿಕ ಮುಖಂಡರು ತಡೆಯಲು ಪ್ರಯತ್ನಿಸಿದರೂ ಕೂಡ ಹಿಂಸಿಸಲ್ಪಟ್ಟ ಅವನ ಹಿಂಬಾಲಕರು ಸುವಾರ್ತೆಯನ್ನು ಘೋಷಿಸುವುದನ್ನು ಮುಂದುವರಿಸಿದರು. (ಅ. ಕೃತ್ಯಗಳು 4:18-20; 5:29) ಶಿಷ್ಯರು ಪ್ರಾರ್ಥಿಸಿದ್ದು: “ಕರ್ತನೇ, ಈಗ ನೀನು ಅವರ ಬೆದರಿಸುವಿಕೆಗಳನ್ನು ನೋಡಿ . . . ನಿನ್ನ ದಾಸರು ನಿನ್ನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ ಅನುಗ್ರಹಿಸು ಅಂದರು.” ಏನು ಸಂಭವಿಸಿತು? “ಹೀಗೆ ಪ್ರಾರ್ಥನೆ ಮಾಡಿದ ಮೇಲೆ ಅವರು ಕೂಡಿದ್ದ ಸ್ಥಳವು ನಡುಗಿತು, ಅವರೆಲ್ಲರು ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳುವವರಾದರು,” ಎಂದು ದಾಖಲೆಯು ಹೇಳುತ್ತದೆ.—ಅ. ಕೃತ್ಯಗಳು 4:24-31.
8 ಇಂದು ಜನರಲ್ಲಿ ಹೆಚ್ಚಿನ ಭಾಗವು ಸುವಾರ್ತೆಯನ್ನು ಸ್ವೀಕರಿಸದೇ ಇರುವುದರಿಂದ, ಅವರಿಗೆ ಸಾರುತ್ತಾ ಇರಲು ಅನೇಕ ಬಾರಿ ಧೈರ್ಯವು ಬೇಕಾಗಿದೆ. ವಿಶೇಷವಾಗಿ ಹಿಂಸಿಸಲ್ಪಟ್ಟಾಗ, ಸಮಗ್ರವಾಗಿ ಸಾಕ್ಷಿಯನ್ನು ನೀಡಲು ದೇವದತ್ತ ಧೈರ್ಯದ ಅಗತ್ಯವು ಯೆಹೋವನ ಸೇವಕರಿಗೆ ಇರುತ್ತದೆ. (ಅ. ಕೃತ್ಯಗಳು 2:40; 20:24) ಆದುದರಿಂದ ಧೈರ್ಯವಂತ ರಾಜ್ಯ ಘೋಷಕನಾದ ಪೌಲನು, ತರುಣ, ಕಡಮೆ ಅನುಭವದ ಒಬ್ಬ ಸಹಕೆಲಸಗಾರನಿಗೆ ಹೇಳಿದ್ದು: “ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ. ಆದದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ ಸಾಕ್ಷಿಯ ವಿಷಯದಲ್ಲಾಗಲಿ ಆತನ ಸೆರೆಯವನಾದ ನನ್ನ ವಿಷಯದಲ್ಲಾಗಲಿ ನಾಚಿಕೆಪಡದೆ ದೇವರ ಬಲವನ್ನು ಆಶ್ರಯಿಸಿ ನನ್ನೊಂದಿಗೆ ಸುವಾರ್ತೆಗೋಸ್ಕರ ಶ್ರಮೆಯನ್ನನುಭವಿಸು.” (2 ತಿಮೊಥೆಯ 1:7, 8) ನಾವು ಧೈರ್ಯಕ್ಕಾಗಿ ಪ್ರಾರ್ಥಿಸುವುದಾದರೆ, ಸಾರುತ್ತಾ ಇರಲು ನಾವು ಶಕ್ತರಾಗುವೆವು, ಮತ್ತು ರಾಜ್ಯ ಘೋಷಕರೋಪಾದಿ ನಮ್ಮ ಆನಂದವನ್ನು ನಮ್ಮಿಂದ ಹಿಂಸೆಯು ಕೂಡ ಕಸಿದುಕೊಳ್ಳದು.—ಮತ್ತಾಯ 5:10-12.
ಯೆಹೋವನ ಪಕ್ಷವಹಿಸಲು ಧೈರ್ಯ
9, 10. (ಎ) ಕ್ರಿಸ್ತನ ದೀಕ್ಷಾಸ್ನಾನ ಪಡೆದ ಹಿಂಬಾಲಕರಾಗಲು ಪ್ರಥಮ ಶತಮಾನದ ಯೆಹೂದ್ಯರು ಮತ್ತು ಅನ್ಯ ಜನರು ಏನು ಮಾಡಿದರು? (ಬಿ) ಕ್ರೈಸ್ತರಾಗಲು ಧೈರ್ಯದ ಅಗತ್ಯವಿತ್ತು ಯಾಕೆ?
9 ಒಂದನೆಯ ಶತಮಾನದ ಅನೇಕ ಯೆಹೂದ್ಯರು ಮತ್ತು ಅನ್ಯಜನಾಂಗದವರು ಕ್ರಿಸ್ತನ ದೀಕ್ಷಾಸ್ನಾನ ಪಡೆದ ಹಿಂಬಾಲಕರಾಗಲು ಅಶಾಸ್ತ್ರೀಯವಾದ ಸಂಪ್ರದಾಯಗಳನ್ನು ಧೈರ್ಯದಿಂದ ತೊರೆದರು. ಸಾ.ಶ. 33ರ ಪಂಚಾಶತ್ತಮದ ತರುವಾಯ ಸ್ವಲ್ಪದರಲ್ಲಿಯೇ, “ಶಿಷ್ಯರ ಸಂಖ್ಯೆಯು ಯೆರೂಸಲೇಮಿನಲ್ಲಿ ಬಹಳವಾಗಿ ಹೆಚ್ಚುತ್ತಾ ಬಂತು. ಯಾಜಕರಲ್ಲಿಯೂ ಬಹುಜನರು ಕ್ರಿಸ್ತನಂಬಿಕೆಗೆ ಒಳಗಾಗುತ್ತಾ ಇದ್ದರು.” (ಅ. ಕೃತ್ಯಗಳು 6:7) ಧಾರ್ಮಿಕ ಸಂಬಂಧಗಳನ್ನು ಮುರಿಯಲು ಮತ್ತು ಯೇಸುವನ್ನು ಮೆಸ್ಸೀಯನಂತೆ ಸ್ವೀಕರಿಸಲು ಆ ಯೆಹೂದ್ಯರಿಗೆ ಧೈರ್ಯವಿತ್ತು.
10 ಸಾ.ಶ. 36 ರಲ್ಲಿ ಆರಂಭಿಸಿ, ಅನೇಕ ಅನ್ಯಜನರು ನಂಬುವವರಾದರು. ಕೊರ್ನೇಲ್ಯನು, ಅವನ ಕುಟುಂಬದ ಸದಸ್ಯರು, ಮತ್ತು ಇತರ ಅನ್ಯಜನರು ಸುವಾರ್ತೆಯನ್ನು ಕೇಳಿದಾಗ, ಅವರು ಕೂಡಲೇ ಅದನ್ನು ಸ್ವೀಕರಿಸಿದರು, ಪವಿತ್ರಾತ್ಮವನ್ನು ಪಡೆದರು, ಮತ್ತು “ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ” ಕೊಂಡರು. (ಅ. ಕೃತ್ಯಗಳು 10:1-48) ಫಿಲಿಪ್ಪಿಯಲ್ಲಿ, ಸೆರೆಯ ಯಜಮಾನನಾಗಿದ್ದ ಒಬ್ಬ ಅನ್ಯಜನಾಂಗದವನು ಮತ್ತು ಅವನ ಮನೆಯವರು ಕ್ರೈಸ್ತತ್ವವನ್ನು ಕ್ಷಿಪ್ರವಾಗಿ ಸ್ವೀಕರಿಸಿದರು, ಮತ್ತು “ಕೂಡಲೇ ತಾನು ತನ್ನವರೆಲ್ಲರ ಸಹಿತವಾಗಿ ದೀಕ್ಷಾಸ್ನಾನಮಾಡಿಸಿಕೊಂಡನು.” (ಅ. ಕೃತ್ಯಗಳು 16:25-34) ಕ್ರೈಸ್ತರು ಹಿಂಸಿಸಲ್ಪಟ್ಟ, ಜನಪ್ರಿಯವಲ್ಲದ ಅಲ್ಪಸಂಖ್ಯಾತ ಗುಂಪು ಆಗಿದ್ದ ಕಾರಣ ಇಂತಹ ಹೆಜ್ಜೆಗಳನ್ನು ತೆಗೆದುಕೊಳ್ಳಲು ಧೈರ್ಯವು ಅವಶ್ಯವಾಗಿತ್ತು. ಅವರು ಇನ್ನೂ ಹಾಗೆಯೇ ಇದ್ದಾರೆ. ಆದರೆ ನೀವು ದೇವರಿಗೆ ಒಂದು ಸಮರ್ಪಣೆಯನ್ನು ಮಾಡದೆ ಮತ್ತು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಂತೆ ದೀಕ್ಷಾಸ್ನಾನ ಪಡೆಯದೆ ಇರುವುದಾದರೆ, ಈ ಧೈರ್ಯದ ಹೆಜ್ಜೆಗಳನ್ನು ನೀವು ತೆಗೆದುಕೊಳ್ಳುವ ಸಮಯವು ಇದಾಗಿರುವುದಿಲ್ಲವೊ?
ವಿಭಾಗಿಸಲ್ಪಟ್ಟ ಮನೆವಾರ್ತೆಗಳಲ್ಲಿ ಧೈರ್ಯ
11. ಧೈರ್ಯದ ಯಾವ ಉತ್ತಮ ಮಾದರಿಗಳನ್ನು ಯೂನೀಕೆ ಮತ್ತು ತಿಮೊಥೆಯು ಒದಗಿಸಿದರು?
11 ಧಾರ್ಮಿಕವಾಗಿ ವಿಭಾಗಿಸಲ್ಪಟ್ಟ ಮನೆವಾರ್ತೆಯಲ್ಲಿ ಯೂನೀಕೆ ಮತ್ತು ಆಕೆಯ ಮಗ ತಿಮೊಥೆಯನು ಧೈರ್ಯದ ನಂಬಿಕೆಯ ಉತ್ತಮವಾದ ಉದಾಹರಣೆಗಳನ್ನಿಟ್ಟರು. ಯೂನೀಕೆಗೆ ವಿಧರ್ಮಿ ಗಂಡನು ಇದ್ದರೂ ಕೂಡ, ಅವಳು ಆಕೆಯ ಮಗನಿಗೆ ಚಿಕ್ಕಂದಿನಿಂದಲೂ “ಪರಿಶುದ್ಧಗ್ರಂಥಗಳ”ನ್ನು ಕಲಿಸಿಕೊಟ್ಟಳು. (2 ತಿಮೊಥೆಯ 3:14-17) ಕ್ರೈಸ್ತಳಾದ ಮೇಲೆ, ‘ನಿಷ್ಕಪಟವಾದ ನಂಬಿಕೆಯ’ನ್ನು ಅವಳು ವ್ಯಕ್ತಪಡಿಸಿದಳು. (2 ತಿಮೊಥೆಯ 1:5) ನಂಬಲಾರದ ಆಕೆಯ ಗಂಡನ ತಲೆತನಕ್ಕೆ ಗೌರವವನ್ನು ತೋರಿಸುವ ಸಮಯದಲ್ಲಿ ತಿಮೊಥೆಯನಿಗೆ ಕ್ರೈಸ್ತ ಬೋಧನೆಯನ್ನು ನೀಡುವ ಧೈರ್ಯವು ಕೂಡ ಅವಳಲ್ಲಿ ಇತ್ತು. ಖಂಡಿತವಾಗಿಯೂ, ಉತ್ತಮವಾಗಿ ಕಲಿಸಲ್ಪಟ್ಟ ಆಕೆಯ ಮಗನು ಪೌಲನೊಂದಿಗೆ ಮಿಷನೆರಿ ಪ್ರಯಾಣಗಳಿಗೆ ಜೊತೆಯಾಗಿ ಹೋಗಲು ಆರಿಸಲ್ಪಟ್ಟಾಗ, ಅವಳ ನಂಬಿಕೆಗೆ ಮತ್ತು ಧೈರ್ಯಕ್ಕೆ ಪ್ರತಿಫಲವು ಸಿಕ್ಕಿತು. ಅದೇ ರೀತಿಯ ಪರಿಸ್ಥಿತಿಗಳಲ್ಲಿ ತಮ್ಮನ್ನು ಕಂಡುಕೊಳ್ಳುವ ಕ್ರೈಸ್ತ ಹೆತ್ತವರಿಗೆ ಇದು ಎಷ್ಟು ಉತ್ತೇಜನಕಾರಿಯಾಗಿರಬಲ್ಲದು!
12. ತಿಮೊಥೆಯು ಯಾವ ರೀತಿಯ ವ್ಯಕ್ತಿಯಾದನು, ಮತ್ತು ಈಗ ಯಾರು ಅವನಂತೆ ಪರಿಣಮಿಸುತ್ತಿದ್ದಾರೆ?
12 ತಿಮೊಥೆಯನು ಧಾರ್ಮಿಕವಾಗಿ ವಿಭಾಗಿಸಲ್ಪಟ್ಟ ಮನೆವಾರ್ತೆಯಲ್ಲಿ ಜೀವಿಸಿದರೂ ಕೂಡ, ಅವನು ಧೈರ್ಯದಿಂದ ಕ್ರೈಸ್ತತ್ವವನ್ನು ಸ್ವೀಕರಿಸಿದನು ಮತ್ತು ಪೌಲನು ಅವನ ಕುರಿತು ಹೀಗೆ ಹೇಳಬಹುದಾದ ಆತ್ಮಿಕ ವ್ಯಕ್ತಿಯಾದನು: “ಆದರೆ ಕರ್ತನಾದ ಯೇಸುವಿನ ಚಿತ್ತವಾದರೆ ನಾನು ತಿಮೊಥೆಯನನ್ನು ಬೇಗನೆ ನಿಮ್ಮ [ಫಿಲಿಪ್ಪಿಯವರ] ಬಳಿಗೆ ಕಳುಹಿಸಬೇಕೆಂದು ನಿರೀಕ್ಷಿಸುತ್ತೇನೆ. ಅವನ ಮುಖಾಂತರ ನಿಮ್ಮ ಸಂಗತಿಗಳನ್ನು ತಿಳಿದು ನಾನೂ ಧೈರ್ಯ ತಂದುಕೊಂಡೇನು. ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ. . . . ತಿಮೊಥೆಯನ ಗುಣವನ್ನು ನೀವು ನೋಡಿ ತಿಳುಕೊಂಡಿದ್ದೀರಿ; ಮಗನು ತಂದೆಗೆ ಹೇಗೋ ಹಾಗೆಯೇ ಅವನು ನನ್ನ ಜೊತೆಯಲ್ಲಿ ಸುವಾರ್ತಾಪ್ರಚಾರಕ್ಕಾಗಿ ಕಷ್ಟಪಟ್ಟು ಕೆಲಸನಡಿಸಿದನೆಂಬದು ನಿಮಗೆ ಗೊತ್ತುಂಟು.” (ಫಿಲಿಪ್ಪಿ 2:19-22) ಇಂದು, ಧಾರ್ಮಿಕವಾಗಿ ವಿಭಾಗಿಸಲ್ಪಟ್ಟ ಮನೆಗಳಲ್ಲಿರುವ ಅನೇಕ ಹುಡುಗ ಹುಡುಗಿಯರು ನಿಜ ಕ್ರೈಸ್ತತ್ವವನ್ನು ಧೈರ್ಯದಿಂದ ಸ್ವೀಕರಿಸುತ್ತಾರೆ. ತಿಮೊಥೆಯನಂತೆ ಅವರು ತಮ್ಮ ಕುರಿತಾಗಿ ರುಜುವಾತನ್ನು ಕೊಡುತ್ತಿದ್ದಾರೆ, ಮತ್ತು ಅವರು ಯೆಹೋವನ ಸಂಸ್ಥೆಯ ಭಾಗವಾಗಿದ್ದಾರೆಂಬುದಕ್ಕೆ ನಾವು ಎಷ್ಟು ಹರ್ಷಿಸುತ್ತೇವೆ!
‘ಪ್ರಾಣವನ್ನು ಅಪಾಯಕ್ಕೆ ಗುರಿಮಾಡಲು’ ಧೈರ್ಯ
13. ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಯಾವ ರೀತಿಯಲ್ಲಿ ಧೈರ್ಯವನ್ನು ಪ್ರದರ್ಶಿಸಿದರು?
13 ಅಕ್ವಿಲ ಮತ್ತು ಅವನ ಹೆಂಡತಿ ಪ್ರಿಸ್ಕಿಲ್ಲ (ಪ್ರಿಸ್ಕ) ಒಬ್ಬ ಜೊತೆವಿಶ್ವಾಸಿಗಾಗಿ ಧೈರ್ಯದಿಂದ ‘ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡುವ’ ಮೂಲಕ, ಮಾದರಿಯನ್ನಿಟ್ಟರು. ತಮ್ಮ ಮನೆಯೊಳಗೆ ಅವರು ಪೌಲನನ್ನು ಬರಮಾಡಿಕೊಂಡರು, ಗುಡಾರಮಾಡುವುದರಲ್ಲಿ ಅವನ ಜೊತೆ ಕೆಲಸಮಾಡಿದರು, ಮತ್ತು ಕೊರಿಂಥದಲ್ಲಿ ಹೊಸ ಸಭೆಯನ್ನು ಕಟ್ಟುವುದರಲ್ಲಿ ಅವನಿಗೆ ಸಹಾಯಮಾಡಿದರು. (ಅ. ಕೃತ್ಯಗಳು 18:1-4) ಅವರ 15 ವರ್ಷದ ಗೆಳೆತನದ ಸಮಯದಲ್ಲಿ, ತಿಳಿಸಲ್ಪಡದ ವಿಧದಲ್ಲಿ ಅವರು ಅವನ ಪರವಾಗಿ ಅವರ ಜೀವಗಳನ್ನೂ ಕೂಡ ಗಂಡಾಂತರದಲ್ಲಿ ಹಾಕಿದರು. ಅಲ್ಲಿನ ಕ್ರೈಸ್ತರಿಗೆ ಅವನು ಹೀಗೆ ಹೇಳಿದಾಗ, ಅವರು ರೋಮಿನಲ್ಲಿ ಜೀವಿಸುತ್ತಾ ಇದ್ದರು: “ಕ್ರಿಸ್ತ ಯೇಸುವಿನ ಸೇವೆಯಲ್ಲಿ ನನ್ನ ಜೊತೆಕೆಲಸದವರಾದ ಪ್ರಿಸ್ಕಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ಹೇಳಿರಿ. ಅವರು ನನ್ನ ಪ್ರಾಣದ ಸಂರಕ್ಷಣೆಗಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡಿದರು. ನಾನು ಮಾತ್ರವೇ ಅಲ್ಲ, ಅನ್ಯಜನರ ಸಭೆಗಳವರೆಲ್ಲರೂ ಅವರ ಉಪಕಾರವನ್ನು ಸ್ಮರಿಸುತ್ತಾರೆ.”—ರೋಮಾಪುರ 16:3, 4.
14. ಪೌಲನಿಗೋಸ್ಕರ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡುವ ಮೂಲಕ, ಅಕ್ವಿಲ ಮತ್ತು ಪ್ರಿಸ್ಕರು ಯಾವ ಆಜೆಗ್ಞೆ ತಕ್ಕಂತೆ ಕಾರ್ಯಮಾಡುತ್ತಾ ಇದ್ದರು?
14 ಪೌಲನಿಗಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡುವ ಮೂಲಕ, ಅಕ್ವಿಲ ಮತ್ತು ಪ್ರಿಸ್ಕರು ಯೇಸುವಿನ ಮಾತುಗಳಿಗನುಸಾರ ಕಾರ್ಯವೆಸಗಿದರು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ.” (ಯೋಹಾನ 13:34) ಒಬ್ಬ ವ್ಯಕ್ತಿಯು ತನ್ನನ್ನು ಪ್ರೀತಿಸಿದಂತೆ ತನ್ನ ನೆರೆಯವನನ್ನು ಪ್ರೀತಿಸಬೇಕು ಎಂಬ ಮೋಶೆಯ ನಿಯಮದ ಆವಶ್ಯಕತೆಗಿಂತಲೂ ಮೀರಿ ಹೋದ ಕಾರಣ ಈ ಆಜ್ಞೆಯು “ಹೊಸ” ದಾಗಿತ್ತು. (ಯಾಜಕಕಾಂಡ 19:18) ಯೇಸು ಮಾಡಿದಂತೆ, ಇತರರಿಗಾಗಿ ಒಬ್ಬನ ಜೀವವನ್ನು ಕೊಡುವಷ್ಟರ ಮಟ್ಟಿಗೆ ಹೋಗುವ ಸ್ವತ್ಯಾಗದ ಪ್ರೀತಿಯನ್ನು ಅದು ಕೇಳಿಕೊಂಡಿತು. ಸಾ.ಶ. ಎರಡನೆಯ ಮತ್ತು ಮೂರನೆಯ ಶತಮಾನಗಳ ಬರಹಗಾರನಾದ ತೆರ್ತುಲ್ಲಿಯಾನ್, ಹೀಗೆ ಬರೆದಾಗ, ಕ್ರೈಸ್ತರ ಕುರಿತು ಲೌಕಿಕ ಜನರ ಮಾತುಗಳನ್ನು ಉದ್ಧರಿಸಿದನು: “‘ನೋಡಿ,’ ಅವರು ಹೇಳುತ್ತಾರೆ, ‘ಅವರು ಒಬ್ಬರನ್ನೊಬ್ಬರು ಹೇಗೆ ಪ್ರೀತಿಸುತ್ತಾರೆ . . . ಮತ್ತು ಅವರು ಒಬ್ಬರು ಇನ್ನೊಬ್ಬರಿಗಾಗಿ ಸಾಯಲು ಕೂಡ ಹೇಗೆ ಸಿದ್ಧರಾಗಿರುತ್ತಾರೆ.’” ಸಮರ್ಥನವಾದ (ಅಪಾಲೊಜಿ, ಅಧ್ಯಾಯ XXXIX, 7) ವಿಶೇಷವಾಗಿ ಹಿಂಸೆಯ ಮಧ್ಯದಲ್ಲಿ ವೈರಿಗಳ ಕೈಗಳಲ್ಲಿ ಜೊತೆ ವಿಶ್ವಾಸಿಗಳನ್ನು ಕ್ರೂರತೆಗೆ ಯಾ ಮರಣಕ್ಕೆ ಈಡುಮಾಡುವುದನ್ನು ಹೋಗಲಾಡಿಸಲು ನಮ್ಮ ಪ್ರಾಣಗಳನ್ನು ಅಪಾಯಕ್ಕೆ ಧೈರ್ಯದಿಂದ ಗುರಿಮಾಡುವ ಮೂಲಕ ಸಹೋದರ ಪ್ರೀತಿಯನ್ನು ಪ್ರದರ್ಶಿಸುವ ಹಂಗುಳ್ಳವರಾಗಿ ನಾವಿರೋಣ.—1 ಯೋಹಾನ 3:16.
ಧೈರ್ಯವು ಆನಂದವನ್ನು ತರುತ್ತದೆ
15, 16. ಅ. ಕೃತ್ಯಗಳು 16 ನೆಯ ಅಧ್ಯಾಯದಲ್ಲಿ ತೋರಿಸಲಾದಂತೆ, ಧೈರ್ಯವನ್ನು ಮತ್ತು ಆನಂದವನ್ನು ಹೇಗೆ ಜೊತೆಗೂಡಿಸಬಹುದು?
15 ಕಷ್ಟಗಳ ಮಧ್ಯದಲ್ಲಿ ಧೈರ್ಯವನ್ನು ಪ್ರದರ್ಶಿಸುವುದು ಆನಂದವನ್ನು ತರಬಲ್ಲದೆಂದು ಪೌಲ ಮತ್ತು ಸೀಲರು ಪ್ರಮಾಣವನ್ನು ಒದಗಿಸುತ್ತಾರೆ. ಫಿಲಿಪ್ಪಿ ಪಟ್ಟಣದಲ್ಲಿ ನ್ಯಾಯಾಧೀಶರ ಆಜ್ಞೆಯ ಮೇರೆಗೆ, ಚಡಿಗಳಿಂದ ಅವರನ್ನು ಬಹಿರಂಗವಾಗಿ ಹೊಡೆಯಲಾಯಿತು ಮತ್ತು ಸೆರೆಮನೆಯೊಳಗೆ ಹಾಕಲಾಯಿತು. ಆದರೂ, ಅವರು ಭಯದಲ್ಲಿ ಖಿನ್ನತೆಯಿಂದ ಕುಗ್ಗಲಿಲ್ಲ. ಪರಿಶೋಧನೆಯ ಪರಿಸ್ಥಿತಿಗಳ ನಡುವೆಯೂ, ದೇವದತ್ತ ಧೈರ್ಯ ಮತ್ತು ಅದು ನಂಬಿಗಸ್ತ ಕ್ರೈಸರಿಗೆ ತರುವ ಆನಂದವು ಅವರಲ್ಲಿ ಇನ್ನೂ ಇತ್ತು.
16 ಸುಮಾರು ಅರ್ಧರಾತ್ರಿಯ ಸಮಯಕ್ಕೆ, ಪೌಲ ಮತ್ತು ಸೀಲರು ಪ್ರಾರ್ಥನೆಮಾಡುತ್ತಾ, ಸ್ತುತಿಪದಗಳಲ್ಲಿ ದೇವರಿಗೆ ಸ್ತೋತ್ರಮಾಡುತ್ತಾ ಇದ್ದರು. ಥಟ್ಟನೆ, ಒಂದು ಭೂಕಂಪವು ಸೆರೆಮನೆಯನ್ನು ಕದಲಿಸಿ, ಅವರ ಬೇಡಿಗಳನ್ನು ಕಳಚಿ, ಕದಗಳನ್ನು ತೆರೆಯಿತು. ಹೆದರಿದ್ದ ಸೆರೆಮನೆಯ ಯಜಮಾನ ಮತ್ತು ಅವನ ಕುಟುಂಬಕ್ಕೆ, ಯೆಹೋವನ ಸೇವಕರಾಗಿ ಅವರ ದೀಕ್ಷಾಸ್ನಾನಕ್ಕೆ ನಡೆಸಿದ ಧೈರ್ಯದ ಸಾಕ್ಷಿಯೊಂದನ್ನು ನೀಡಲಾಯಿತು. ಅವನು ತಾನೇ “ತನ್ನ ಮನೆಯವರೆಲ್ಲರ ಸಂಗಡ ನಂಬಿ ಉಲ್ಲಾಸಗೊಂಡನು.” (ಅ. ಕೃತ್ಯಗಳು 16:16-34) ಇದು ಪೌಲ ಮತ್ತು ಸೀಲರಿಗೆ ಎಂತಹ ಆನಂದವನ್ನು ತಂದಿರಬೇಕು! ಇದನ್ನು ಮತ್ತು ಧೈರ್ಯದ ಇತರ ಶಾಸ್ತ್ರೀಯ ಉದಾಹರಣೆಗಳನ್ನು ಪರಿಗಣಿಸಿದ್ದರಿಂದ, ಯೆಹೋವನ ಸೇವಕರೋಪಾದಿ ನಾವು ಹೇಗೆ ಧೈರ್ಯವಂತರಾಗಿ ಉಳಿಯಬಲ್ಲೆವು?
ಧೈರ್ಯವುಳ್ಳವರಾಗಿ ಮುಂದುವರಿಯಿರಿ
17. ಕೀರ್ತನೆ 27 ನೆಯ ಅಧ್ಯಾಯದಲ್ಲಿ ತೋರಿಸಲಾದಂತೆ, ಯೆಹೋವನಲ್ಲಿ ನಿರೀಕ್ಷೆಯನ್ನಿಡುವುದು ಧೈರ್ಯಕ್ಕೆ ಹೇಗೆ ಸಂಬಂಧಿಸಿದೆ?
17 ಯೆಹೋವನಲ್ಲಿ ನಿರೀಕ್ಷೆಯುಳ್ಳವರಾಗಿರುವುದು ಧೈರ್ಯವಂತರಾಗಿ ಉಳಿಯಲು ನಮಗೆ ಸಹಾಯಮಾಡುವುದು. ದಾವೀದನು, “ಯೆಹೋವನನ್ನು ನಿರೀಕ್ಷಿಸಿಕೊಂಡಿರು; ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು,” ಎಂದು ಹಾಡಿದನು. (ಕೀರ್ತನೆ 27:14) ದಾವೀದನು ಯೆಹೋವನ ಮೇಲೆ ತನ್ನ ಪ್ರಾಣದ “ಆಧಾರ” ದಂತೆ ಆತುಕೊಂಡನೆಂದು ಕೀರ್ತನೆ 27 ತೋರಿಸುತ್ತದೆ. (ವಚನ 1) ದಾವೀದನ ವೈರಿಗಳೊಂದಿಗೆ ಪೂರ್ವದಲ್ಲಿ ದೇವರು ವ್ಯವಹರಿಸಿದ ವಿಧವನ್ನು ಕಂಡಿರುವ ಸಂಗತಿಯು ಅವನಲ್ಲಿ ಧೈರ್ಯವನ್ನು ತುಂಬಿತು. (ವಚನಗಳು 2, 3) ಯೆಹೋವನ ಆರಾಧನಾ ಕೇಂದ್ರಕ್ಕಾಗಿರುವ ಗಣ್ಯತೆಯು ಇನ್ನೊಂದು ಅಂಶವಾಗಿತ್ತು. (ವಚನ 4) ಯೆಹೋವನ ಸಹಾಯ, ಸಂರಕ್ಷಣೆ, ಮತ್ತು ಬಿಡುಗಡೆಯಲ್ಲಿ ಭರವಸವಿಡುವುದು ಕೂಡ ದಾವೀದನ ಧೈರ್ಯವನ್ನು ಕಟ್ಟಿದವು. (ವಚನಗಳು 5-10) ಯೆಹೋವನ ನೀತಿಯ ಮಾರ್ಗದ ತತ್ವಗಳಲ್ಲಿ ಮುಂದುವರಿದ ಉಪದೇಶವು ಕೂಡ ಸಹಾಯಕಾರಿಯಾಗಿತ್ತು. (ವಚನ 11) ವಿಶ್ವಾಸ ಮತ್ತು ನಿರೀಕ್ಷೆಯೊಂದಿಗೆ ಜೊತೆಗೂಡಿ, ಅವನ ವೈರಿಗಳಿಂದ ಬಿಡುಗಡೆಗಾಗಿರುವ ಭರವಸೆಯ ಪ್ರಾರ್ಥನೆಯು ಧೈರ್ಯವಂತನಾಗಿರಲು ದಾವೀದನಿಗೆ ಸಹಾಯ ಮಾಡಿತು. (ವಚನಗಳು 12-14) ಹೀಗೆ ನಾವು ನಿಜವಾಗಿಯೂ “ಯೆಹೋವನಲ್ಲಿ ನಿರೀಕ್ಷಿಸುತ್ತೇವೆ” ಎಂಬುದನ್ನು ತೋರಿಸುತ್ತಾ, ನಮ್ಮ ಧೈರ್ಯವನ್ನು ನಾವು ಸಮಾನವಾದ ಮಾರ್ಗಗಳಲ್ಲಿ ಕಟ್ಟಬಲ್ಲೆವು.
18. (ಎ) ಯೆಹೋವನ ಜೊತೆ ಆರಾಧಕರೊಂದಿಗೆ ಕ್ರಮವಾದ ಸಹವಾಸವು ಧೈರ್ಯವಂತರಾಗಿ ಉಳಿಯಲು ನಮಗೆ ಸಹಾಯಮಾಡಬಲ್ಲದೆಂದು ಯಾವುದು ತೋರಿಸುತ್ತದೆ? (ಬಿ) ಧೈರ್ಯವನ್ನು ಕಟ್ಟುವುದರಲ್ಲಿ ಕ್ರೈಸ್ತ ಕೂಟಗಳು ಯಾವ ಪಾತ್ರವನ್ನು ವಹಿಸುತ್ತವೆ?
18 ಯೆಹೋವನ ಜೊತೆ ಆರಾಧಕರೊಂದಿಗೆ ಕ್ರಮವಾದ ಸಹವಾಸವು, ಧೈರ್ಯವಂತರಾಗಿ ಉಳಿಯಲು ನಮಗೆ ಸಹಾಯ ಮಾಡಬಲ್ಲದು. ಪೌಲನು ಕೈಸರನಿಗೆ ಅಪ್ಪೀಲ್ ಮಾಡಿ, ರೋಮಿಗೆ ಪ್ರಯಾಣಿಸುತ್ತಿರುವಾಗ, ಅಪ್ಪಿಯಪೇಟೆ ಮತ್ತು ತ್ರಿಛತ್ರವೆಂಬ ಸ್ಥಳದಲ್ಲಿ ಜೊತೆ ವಿಶ್ವಾಸಿಗಳು ಅವನನ್ನು ಭೇಟಿಯಾದರು. ದಾಖಲೆಯು ಹೇಳುವುದು: “ಪೌಲನು ಅವರನ್ನು ನೋಡಿ ದೇವರ ಸ್ತೋತ್ರವನ್ನು ಮಾಡಿ ಧೈರ್ಯಗೊಂಡನು.” (ಅ. ಕೃತ್ಯಗಳು 28:15) ನಾವು ಕ್ರಮವಾಗಿ ಕ್ರೈಸ್ತ ಕೂಟಗಳಿಗೆ ಹಾಜರಾಗುವಾಗ, ಪೌಲನ ಬುದ್ಧಿವಾದವನ್ನು ನಾವು ಆಲಿಸುತ್ತಿರುತ್ತೇವೆ: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ.” (ಇಬ್ರಿಯ 10:24, 25) ಒಬ್ಬರನ್ನೊಬ್ಬರು ಪ್ರೇರೇಪಿಸುವ ಅರ್ಥವೇನಾಗಿದೆ? ಪ್ರೇರೇಪಿಸುವುದು ಅಂದರೆ, “ಧೈರ್ಯ, ಆತ್ಮ, ಯಾ ನಿರೀಕ್ಷೆಯಿಂದ ತುಂಬುವುದು” ಎಂಬುದಾಗಿದೆ. (ವೆಬ್‌ಸ್ಟರ್ಸ್ ನೈನ್ತ್ ನ್ಯೂ ಕಲಿಜಿಯೇಟ್ ಡಿಕ್ಷನರಿ) ಧೈರ್ಯದಿಂದ ಇತರ ಕ್ರೈಸ್ತರನ್ನು ಪ್ರೇರೇಪಿಸಲು ನಾವು ಹೆಚ್ಚಿನದನ್ನು ಮಾಡಬಲ್ಲೆವು, ಮತ್ತು ಅವರ ಪ್ರೋತ್ಸಾಹವು ನಮ್ಮಲ್ಲಿ ಈ ಗುಣವನ್ನು ತದ್ರೀತಿಯಲ್ಲಿ ಕಟ್ಟಬಲ್ಲದು.
19. ಧೈರ್ಯವಂತರಾಗಿ ನಾವು ಉಳಿಯುವುದಕ್ಕೆ ಶಾಸ್ತ್ರಗಳು ಮತ್ತು ಕ್ರಿಸ್ತೀಯ ಪ್ರಕಾಶನಗಳು ಹೇಗೆ ಸಂಬಂಧಿಸಲ್ಪಟ್ಟಿವೆ?
19 ಧೈರ್ಯವಂತರಾಗಿ ಉಳಿಯಲು, ನಾವು ಕ್ರಮವಾಗಿ ದೇವರ ವಾಕ್ಯವನ್ನು ಅಭ್ಯಾಸಿಸಬೇಕು ಮತ್ತು ಅದರ ಬುದ್ಧಿವಾದವನ್ನು ನಮ್ಮ ಜೀವಿತಗಳಲ್ಲಿ ಅನ್ವಯಿಸಬೇಕು. (ಧರ್ಮೋಪದೇಶಕಾಂಡ 31:9-12; ಯೆಹೋಶುವ 1:8) ನಮ್ಮ ಕ್ರಮವಾದ ಅಭ್ಯಾಸವು ಶಾಸ್ತ್ರವಚನಗಳ ಮೇಲೆ ಆಧಾರಿತವಾದ ಕ್ರಿಸ್ತೀಯ ಪ್ರಕಾಶನಗಳನ್ನು ಒಳಗೊಂಡಿರಬೇಕು; ಹೀಗೆ ಒದಗಿಸಲಾದ ಸ್ವಸ್ಥ ಬುದ್ಧಿವಾದವು ದೇವದತ್ತ ಧೈರ್ಯದೊಂದಿಗೆ ವಿಶ್ವಾಸದ ಪರೀಕ್ಷೆಗಳನ್ನು ಎದುರಿಸಲು ನಮಗೆ ಸಹಾಯ ಮಾಡುವವು. ಬೈಬಲ್ ದಾಖಲೆಗಳಿಂದ, ವಿಭಿನ್ನ ಸನ್ನಿವೇಶಗಳಲ್ಲಿ ಯೆಹೋವನ ಸೇವಕರು ಹೇಗೆ ಧೈರ್ಯವಂತರಾಗಿದ್ದರೆಂದು ನಾವು ಕಂಡಿದ್ದೇವೆ. ಈ ಕ್ಷಣ, ಅಂಥ ಮಾಹಿತಿಯು ನಮಗೆ ಹೇಗೆ ಸಹಾಯಮಾಡಬಲ್ಲದೆಂದು ನಮಗೆ ಗೊತ್ತಿರದೆ ಇರಬಹುದು, ಆದರೆ ದೇವರ ವಾಕ್ಯಕ್ಕೆ ಶಕ್ತಿಯಿದೆ, ಮತ್ತು ನಾವು ಅದರಿಂದ ಏನನ್ನು ಕಲಿಯುತ್ತೇವೊ ಅದು ಯಾವಾಗಲೂ ನಮಗೆ ಪ್ರಯೋಜನ ತರಬಲ್ಲದು. (ಇಬ್ರಿಯ 4:12) ಉದಾಹರಣೆಗೆ, ಮನುಷ್ಯನ ಭಯವು ನಮ್ಮ ಶುಶ್ರೂಷೆಯ ಮೇಲೆ ಪ್ರಭಾವ ಬೀರಲು ಆರಂಭಿಸಿದರೆ, ದೇವರ ಸಂದೇಶವನ್ನು ಭಕ್ತಿಹೀನರಿಗೆ ನೀಡಲು ಹನೋಕನಿಗೆ ಧೈರ್ಯ ಇತ್ತು ಎಂಬುದನ್ನು ನಾವು ಜ್ಞಾಪಕಮಾಡಿಕೊಳ್ಳಬಹುದು.—ಯೂದ 14, 15.
20. ಯೆಹೋವನ ಸೇವಕರೋಪಾದಿ ಧೈರ್ಯವಂತರಾಗಿ ನಾವು ಉಳಿಯಲು, ಪ್ರಾರ್ಥನೆಯು ಪ್ರಾಮುಖ್ಯವಾಗಿದೆ ಎಂದು ಯಾಕೆ ಹೇಳಸಾಧ್ಯವಿದೆ?
20 ಯೆಹೋವನ ಸೇವಕರೋಪಾದಿ ಧೈರ್ಯವಂತರಾಗಿ ಉಳಿಯಲು, ಪ್ರಾರ್ಥನೆಯಲ್ಲಿ ನಾವು ನಿರತರಾಗಿರಬೇಕು. (ರೋಮಾಪುರ 12:12) ಯೇಸು ತನ್ನ ಕಷ್ಟಗಳನ್ನು ಧೈರ್ಯದಿಂದ ತಾಳಿಕೊಂಡನು ಯಾಕಂದರೆ, ಅವನು “ಮರಣಕ್ಕೆ ತಪ್ಪಿಸಿ ಕಾಪಾಡ ಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು.” (ಇಬ್ರಿಯ 5:7) ಪ್ರಾರ್ಥನೆಯಲ್ಲಿ ದೇವರಿಗೆ ನಿಕಟವಾಗಿ ಇರುವುದರ ಮೂಲಕ, ಪುನರುತ್ಥಾನವಿಲ್ಲದ “ಎರಡನೆಯ ಮರಣ” ವನ್ನು ಅನುಭವಿಸಲು ನಿಯಮಿಸಲ್ಪಟ್ಟ ಲೌಕಿಕ ಹೇಡಿಗಳ ಹಾಗೆ ನಾವು ಇರುವುದಿಲ್ಲ. (ಪ್ರಕಟನೆ 21:8) ದೈವಿಕ ಸಂರಕ್ಷಣೆ ಮತ್ತು ದೇವರ ಹೊಸ ಲೋಕದಲ್ಲಿ ಜೀವನ, ಆತನ ಧೈರ್ಯವಂತ ಸೇವಕರಿಗಾಗಿ ಇರುತ್ತದೆ.
21. ಯೆಹೋವನ ನಿಷ್ಠಾವಂತ ಸಾಕ್ಷಿಗಳು ಯಾಕೆ ಧೈರ್ಯವಂತರಾಗಿರಬಲ್ಲರು?
21 ಯೆಹೋವನ ನಿಷ್ಠಾವಂತ ಸಾಕ್ಷಿಗಳೋಪಾದಿ, ದೇವರ ಬೆಂಬಲ ಮತ್ತು ಲೋಕದ ಜಯಶಾಲಿಯಂತೆ ಯೇಸುವಿನ ಧೈರ್ಯದ ಮಾದರಿ ನಮಗೆ ಇರುವುದರಿಂದ, ದೆವ್ವ ಮತ್ತು ಮಾನವ ವೈರಿಗಳಿಗೆ ಹೆದರುವ ಅಗತ್ಯ ನಮಗಿರುವುದಿಲ್ಲ. ತದ್ರೀತಿಯಲ್ಲಿ, ಯೆಹೋವನ ಜನರೊಂದಿಗೆ ಆತ್ಮಿಕವಾಗಿ ಕಟ್ಟುವ ಸಹವಾಸವು ಕೂಡ ಧೈರ್ಯವಂತರಾಗಿರಲು ನಮಗೆ ಸಹಾಯಮಾಡುತ್ತದೆ. ಶಾಸ್ತ್ರಗಳ ಮತ್ತು ಕ್ರೈಸ್ತ ಪ್ರಕಾಶನಗಳ ಮಾರ್ಗದರ್ಶನ ಮತ್ತು ಬುದ್ಧಿವಾದದ ಮುಖಾಂತರವು ಕೂಡ ನಮ್ಮ ಧೈರ್ಯವು ಕಟ್ಟಲ್ಪಡುತ್ತದೆ. ಮತ್ತು ದೇವರ ಪೂರ್ವದ ಸೇವಕರ ಬೈಬಲ್ ದಾಖಲೆಗಳೂ ಕೂಡ ಆತನ ಮಾರ್ಗಗಳಲ್ಲಿ ನಾವು ಧೈರ್ಯದಿಂದ ನಡೆಯಲು ಸಹಾಯ ಮಾಡುತ್ತವೆ. ಆದುದರಿಂದ, ಈ ಕಠಿನವಾದ ಕಡೇ ದಿನಗಳಲ್ಲಿ, ಪವಿತ್ರ ಸೇವೆಯಲ್ಲಿ ನಾವು ಧೈರ್ಯದಿಂದ ಮುನ್ನಡೆಯೋಣ. ಹೌದು, ಯೆಹೋವನ ಎಲ್ಲಾ ಜನರು ಧೈರ್ಯವುಳ್ಳವರಾಗಿರಲಿ!
ನೀವು ಹೇಗೆ ಉತ್ತರಿಸುವಿರಿ?
▫ ಯೇಸುವಿನ ಮಾದರಿಯು ನಮ್ಮನ್ನು ಧೈರ್ಯದಿಂದ ಹೇಗೆ ತುಂಬಬಲ್ಲದು?
▫ ಸಾರುತ್ತಾ ಇರುವಂತೆ ಯೇಸು ಮತ್ತು ಅವನ ಶಿಷ್ಯರಿಗೆ ಯಾವುದು ಧೈರ್ಯವನ್ನು ಕೊಟ್ಟಿತು?
▫ ಯೆಹೋವನ ಪಕ್ಷವನ್ನು ವಹಿಸಲು ಯೆಹೂದ್ಯರಿಗೆ ಮತ್ತು ಅನ್ಯಜನರಿಗೆ ಧೈರ್ಯದ ಅಗತ್ಯವಿತ್ತು ಯಾಕೆ?
▫ ಯೂನೀಕೆ ಮತ್ತು ತಿಮೊಥೆಯನಿಂದ ಧೈರ್ಯದ ಯಾವ ಮಾದರಿಗಳು ಒದಗಿಸಲ್ಪಟ್ಟವು?
▫ ಹಿಂಸೆಯ ಮಧ್ಯದಲ್ಲಿಯೂ ಧೈರ್ಯವು ಆನಂದವನ್ನು ತರುತ್ತದೆ ಎಂಬುದಕ್ಕೆ ಯಾವ ಪ್ರಮಾಣವಿದೆ?
[ಪುಟ 18 ರಲ್ಲಿರುವ ಚಿತ್ರ]
ಯೇಸುವಿನಂತೆ, ನಾವು ಶಾಸ್ತ್ರವಚನಗಳನ್ನು ಅನ್ವಯಿಸಿ, ಉದ್ಧರಿಸುವುದಾದರೆ ಶೋಧನೆಯನ್ನು ಎದುರಿಸಬಲ್ಲೆವು