ವೈದೃಶ್ಯಗಳ ದೇಶವೊಂದರಲ್ಲಿ ಸಾರುವುದು
ಆಸ್ಟ್ರೇಲಿಯದ ಕುರಿತು ಜನರು ಎಣಿಸುವಾಗ, ಕ್ಯಾಂಗರೂಗಳು, ಕೋಆಲಗಳು, ಹೊಟ್ಟೆಚೀಲವುಳ್ಳ ಪ್ರಾಣಿಗಳು [ವಾಂಬ್ಯಾಟ್ಸ್], ಮತ್ತು ಬಾತಿನ ಕೊಕ್ಕಿನಂತೆ ಮೂತಿಯಿರುವ ಪ್ರಾಣಿಗಳು [ಪ್ಲ್ಯಾಟಿಪಸ್], ಏಯರ್ಸ್ ರಾಕ್ಸ್ ಮತ್ತು ಗ್ರೇಟ್ ಬ್ಯಾರಿಯರ್ ರೀಫ್—ಇವೆಲ್ಲಾ ಹೆಸರುಗಳು ಮನಸ್ಸಿಗೆ ಬರುತ್ತವೆ. ಆದರೆ ಅಚ್ಚರಿಯ ಸಂಗತಿಯೆಂದರೆ ಅಧಿಕಾಂಶ ಆಸ್ಟ್ರೇಲಿಯನರು ಏಯರ್ಸ್ ರಾಕ್ಸ್ ಮತ್ತು ಗ್ರೇಟ್ ಬ್ಯಾರಿಯರ್ ರೀಫ್ನ್ನು ಪ್ರಾಯಶಃ ಸಂದರ್ಶಿಸಿರಲಿಕ್ಕಿಲ್ಲ ಯಾ ಪ್ರಾಣಿ ಸಂಗ್ರಹಾಲಯದ ಹೊರಗಡೆ ಒಂದು ಕೋಆಲ, ವಾಂಬ್ಯಾಟ್, ಯಾ ಪ್ಲ್ಯಾಟಿಪಸ್ನ್ನು ನೋಡಿರಲಿಕ್ಕಿಲ್ಲ. ಕಾರಣವೇನಂದರೆ ದೇಶದ ಒಂದು ಕೋಟಿ 73 ಲಕ್ಷ ಜನಸಂಖ್ಯೆಯವರಲ್ಲಿ 85 ಪ್ರತಿಶತ ನಗರವಾಸಿಗಳಾಗಿದ್ದು, ಕರಾವಳಿ ತೀರದ ಐದು ಪ್ರಧಾನ ನಗರಗಳಲ್ಲಿ ಜೀವಿಸುತ್ತಿದ್ದಾರೆ.
ಕರಾವಳಿಯ ಅಂಚನ್ನು ಬಿಟ್ಟು, ಹೆಚ್ಚುಕಡಿಮೆ ಸುಮಾರು 200 ಕಿಲೊಮೀಟರುಗಳಷ್ಟು ಒಳನಾಡಿನಲ್ಲಿ ಪ್ರಯಾಣಿಸುವುದಾದರೆ, ಖಂಡದ ಪ್ರಖ್ಯಾತಿಗೊಂಡ ಹಿನ್ನಾಡಿನ ಆರಂಭಕ್ಕೆ ಒಬ್ಬನು ಬರುತ್ತಾನೆ. ಭೂಪ್ರದೇಶದ ಹುಲುಸಾದ ಮಳೆಕಾಡು ಮತ್ತು ವ್ಯವಸಾಯಕ್ಷೇತ್ರಗಳಿಂದ ಭೂಪ್ರದೇಶವು ಕೇವಲ ಕುರುಚಲು ಗಿಡ ಮತ್ತು ಒರಟು ಹುಲ್ಲು ಮಾತ್ರವೇ ಉಳಿಯುವ ಬಿಸಿಯಾಗಿರುವ, ಒಣ ತೆರೆದ ದೇಶಕ್ಕೆ ಬದಲಾಗುತ್ತದೆ. ಆದಾಗ್ಯೂ, ಹಿನ್ನಾಡಿನಲ್ಲಿ ಜೀವನವು ಅಸ್ತಿತ್ವದಲ್ಲಿದೆ. ಕುರಿ ಮತ್ತು ಪಶುಗಳ ದೊಡ್ಡ ಪಾಲನಕ್ಷೇತ್ರಗಳು, ಯಾ ಕೆಲವೊಮ್ಮೆ ಸೇಷ್ಟನುಗಳೆಂದು ಕರೆಯಲ್ಪಡುವವು ಅಲ್ಲಿದ್ದು, ನೂರಾರು ಚದರಮೈಲುಗಳನ್ನು ಆವರಿಸುತ್ತದೆ. ಇನ್ನೂ ಒಳನಾಡಿನಲ್ಲಿ ಸುಡುವ ಮರುಭೂಮಿಗಳು ಇದ್ದು, ಯೋಗ್ಯ ಮುಂಜಾಗ್ರತೆಗಳನ್ನು ತೆಗೆದುಕೊಳ್ಳದಿದ್ದಲ್ಲಿ ಕೆಲವೊಮ್ಮೆ ಜನರು ಸಾಯುತ್ತಾರೆ.
ಸುವಾರ್ತೆಯು ಪ್ರವರ್ಧಿಸುತ್ತದೆ
ಈ ಅಭಿಮುಖಪಾದ ದೇಶ [ಆಸ್ಟ್ರೇಲಿಯ]ದ ಇಂತಹ ಸನ್ನಿವೇಶದಲ್ಲಿ ದೇವರ ರಾಜ್ಯದ ಸುವಾರ್ತೆಯು ಸಾರಲ್ಪಡುತ್ತಿದೆ. ನೀತಿಯ ಹೊಸ ಲೋಕವೊಂದರ ಯೆಹೋವನ ವಾಗ್ದಾನಕ್ಕೆ ಸಾವಿರಾರು ಮಂದಿ ಪ್ರತಿವರ್ಷ ಪ್ರತಿವರ್ತನೆ ತೋರಿಸುತ್ತಿದ್ದಾರೆ. ಕಳೆದ ಸೇವಾ ವರ್ಷದಲ್ಲಿ ರಾಜ್ಯ ಪ್ರಚಾರಕರ ಸಂಖ್ಯೆ ಉಚ್ಚಾಂಕವು 57,000 ಕ್ಕಿಂತಲೂ ಅಧಿಕವಾಗಿ ತಲುಪಿದ್ದು, ಇದು ಹಿಂದಿನ ಹತ್ತು ವರ್ಷಗಳಿಗಿಂತಲೂ ಬಹುತೇಕ ಎರಡು ಪಟ್ಟು ಆಗಿದೆ. ಜನಸಂಖ್ಯೆಯ ಪ್ರಧಾನ ಭಾಗದಂತೆಯೇ, ಅಧಿಕಾಂಶ ಪ್ರಚಾರಕರು ಕರಾವಳಿ ತೀರದಲ್ಲಿ ಕೇಂದ್ರಿತವಾಗಿರುವಾಗ, ಸುವಾರ್ತೆಯು ಒಳನಾಡಿನಲ್ಲೂ ಪ್ರವರ್ಧಿಸುತ್ತದೆ.
ವೈದೃಶ್ಯಗಳ ಈ ವಿಸ್ತಾರವಾದ ದೇಶದಲ್ಲಿ ಸಾರುವುದು ಹೇಗಿರುತ್ತದೆಂಬುದರ ಒಂದು ನಸು ನೋಟ ಪಡೆಯಲು, ಮೂಲೆಕಾಡಿನ ಒಳಪ್ರದೇಶಗಳಲ್ಲಿರುವ ಕೆಲವು ಸಭೆಗಳಿಗೆ ನಮ್ಮ ಐದು ಜಿಲ್ಲಾ ಮೇಲ್ವಿಚಾರಕರುಗಳಲ್ಲಿ ಒಬ್ಬರು ಮತ್ತು ಅವರ ಪತ್ನಿಯು ಭೇಟಿಯನ್ನೀಯುತ್ತಿರುವಾಗ, ನಾವು ಅವರೊಂದಿಗೆ ಜತೆಗೂಡೋಣ. ಅವರ ಸಂಚಾರವು ಪಶ್ಚಿಮ ಆಸ್ಟ್ರೇಲಿಯದ ರಾಜ್ಯವನ್ನು, ಕ್ವೀನ್ಸ್ಲೇಂಡಿನ ರಾಜ್ಯದ ಅರ್ಧಭಾಗವನ್ನು ಮತ್ತು ಉತ್ತರ ಕ್ಷೇತ್ರವನ್ನು ಅಂದರೆ 47 ಲಕ್ಷ ಚದರ ಕಿಲೊಮೀಟರುಗಳಿಗಿಂತಲೂ ಅಧಿಕ ಪ್ರದೇಶವನ್ನು ಆವರಿಸುತ್ತದೆ. ಅದು ಹಿಂದಿನ ಸೋವಿಯೆಟ್ ಯೂನಿಯನ್ ಹೊರತುಪಡಿಸಿ, ಯೂರೋಪಿನ ಗಾತ್ರದ ಅಧಿಕತಮ ಅರ್ಧಾಂಶವಾಗುತ್ತದೆ.
ಪಶ್ಚಿಮ ಆಸ್ಟ್ರೇಲಿಯದ ರಾಜಧಾನಿಯಾದ ಪರ್ತ್ನಿಂದ ನಮ್ಮ ಪಯಣವು ಆರಂಭಿಸುತ್ತದೆ. ಹನ್ನೆರಡು ಲಕ್ಷ ಜನರ ಸಮಗ್ರವಾಗಿ ಆಧುನಿಕವಾಗಿರುವ ಈ ನಗರದಲ್ಲಿ, ಯೆಹೋವನ ಸಾಕ್ಷಿಗಳ 49 ಸಭೆಗಳಿವೆ. ಇಂಗ್ಲಿಷ್ಗೆ ಕೂಡಿಸಿ, ಗ್ರೀಕ್, ಇಟಾಲಿಯನ್, ಪೋರ್ಚುಗೀಸ್, ಸ್ಪಾನಿಶ್ ಸಭೆಗಳು ಹಾಗೂ ಇತರ ಭಾಷೆಗಳ ಸಣ್ಣ ಗುಂಪುಗಳೂ ಇವೆ. ಇಲ್ಲಿ ಮೂಲನಿವಾಸಿ (ಅಬ್ಆರಿಜನ್ಸ್) ಸಹೋದರ, ಸಹೋದರಿಯರಿಗಾಗಿ ಮಾತ್ರವೇ ಒಂದು ಸಭೆಯು ಮಾಡಲ್ಪಟ್ಟಿದ್ದು, ಅವರು ತಮ್ಮ ಸಾರುವಿಕೆಯ ಪ್ರಯತ್ನಗಳನ್ನು ಖಂಡದ ಸ್ಥಳಜನ್ಯ ಜನರ ನಡುವೆ ಕೇಂದ್ರೀಕರಿಸುತ್ತಾರೆ. ಈ ವಿನೀತ ಜನರಲ್ಲಿ ಅನೇಕರು ರಾಜ್ಯದ ಸಂದೇಶಕ್ಕೆ ಈಗ ಪ್ರತಿವರ್ತನೆ ತೋರಿಸುತ್ತಿದ್ದಾರೆ. ಆದರೆ ದೊಡ್ಡ ನಗರಗಳಿಂದ ದೂರದಲ್ಲಿ ವಿಷಯಗಳು ಹೇಗಿವೆ?
ಪರ್ತ್ನಿಂದ ನಾವು 1,800 ಕಿಲೊಮೀಟರ್ ದೂರ ಉತ್ತರಕ್ಕಿರುವ ಪೋರ್ಟ್ ಹೆಡ್ಲೆಂಡ್ಗೆ ಪ್ರಯಾಣಿಸುತ್ತೇವೆ, ಅಲ್ಲಿ ಒಂದು ಸರ್ಕಿಟ್ ಸಮ್ಮೇಳನವು ಜರುಗಲಿದೆ. ಅಲ್ಲಿ ಹಾಜರಿದ್ದ 289 ಮಂದಿಗಳಲ್ಲಿ ಹೆಚ್ಚಿನವರು ಅಲ್ಲಿರುವಂತೆ 200 ರಿಂದ ಹಿಡಿದು 700 ಕಿಲೊಮೀಟರುಗಳಷ್ಟು ದೂರದಿಂದ ಪ್ರಯಾಣಿಸಿದ್ದಾರೆ. ಅವರು ಚದರಿಸಲ್ಪಟ್ಟ ಪ್ರದೇಶಗಳಿಂದ ಬಂದಿರುತ್ತಾರೆ, ಅಲ್ಲಿ ಅವರ ಅತಿ ಸಮೀಪದ ಸಭೆಯು ಸುಮಾರು 250 ಕಿಲೊಮೀಟರುಗಳಷ್ಟು ದೂರವಿರಬಹುದು, ನೆಲಗಟ್ಟು ಮಾಡಲ್ಪಡದ ರಸ್ತೆಗಳಲ್ಲಿರುವ ಚೂಪಾದ ಕಲ್ಲುಗಳು ಕೆಲವೊಮ್ಮೆ ಕಾರಿನ ಟಯರುಗಳನ್ನು ಚುಚ್ಚಿ ತೂರಿಹೋಗುತ್ತವೆ. ಈ ಪ್ರದೇಶದಲ್ಲಿ ಮೂರು ಸಭೆಗಳು, ಕ್ಷಿಪ್ರ ವಿಧಾನದ ಕಟ್ಟುವಿಕೆಯನ್ನು ಬಳಸಿಕೊಂಡು ಇತ್ತೀಚೆಗೆ ರಾಜ್ಯ ಸಭಾಗೃಹಗಳನ್ನು ಕಟ್ಟಿವೆ.
ಚದರಿರುವ ಪ್ರದೇಶಗಳಲ್ಲಿ ಶೀಘ್ರವಾಗಿ ಕಟ್ಟಿದ ಸಭಾಗೃಹಗಳು
ಈ ಪ್ರದೇಶಗಳಲ್ಲಿ ಮತ್ತು ದೊಡ್ಡ ಪಟ್ಟಣ ಮತ್ತು ನಗರಗಳಲ್ಲಿ ರಾಜ್ಯ ಸಭಾಗೃಹವೊಂದನ್ನು ಕಟ್ಟುವುದರಲ್ಲಿ ಎಂತಹ ವೈದೃಶ್ಯವಿದೆ! ದಕ್ಷಿಣದಲ್ಲಿ ಸುಮಾರು 1,600 ಕಿಲೊಮೀಟರುಗಳಷ್ಟು ದೂರದಲ್ಲಿರುವ ಪರ್ತ್ನಿಂದ ಹೆಚ್ಚಿನ ಕಟ್ಟಡದ ಸಾಮಗ್ರಿಗಳನ್ನು ಸಾಗಿಸತಕ್ಕದ್ದು. ನೂರಾರು ಸಹೋದರ, ಸಹೋದರಿಯರು ಈ ದೂರಕ್ಕೆ ಪ್ರಯಾಣಿಸಬೇಕು ಮತ್ತು ನಿಗದಿತಗೊಳಿಸಿದ ವಾರಾಂತ್ಯದಲ್ಲಿ ಹೆಚ್ಚಿನವರು ಬರುತ್ತಾರೆ ಮತ್ತು 40° ಯಿಂದ 45° ಶತಾಂಶ (C) ತಾಪಮಾನದಲ್ಲಿ ರಾಜ್ಯ ಸಭಾಗೃಹವನ್ನು ಕಟ್ಟುತ್ತಾರೆ. ಚದರಿರುವ ಅಂತಹ ಚಿಕ್ಕ ಸಮುದಾಯಗಳಲ್ಲಿ ಅಷ್ಟೊಂದು ಜನಪ್ರವಾಹವು ತಾನೇ ಒಂದು ಎದ್ದುಕಾಣುವ ಸಾಕ್ಷಿಯಾಗಿದೆ! ಒಂದು ಚಿಕ್ಕ ಕಬ್ಬಿಣದ ಅದುರು ತೆಗೆಯುವ ಪಟ್ಟಣವಾದ ಟೊಮ್ ಪ್ರೆಸ್ನಲ್ಲಿ ರಾಜ್ಯ ಸಭಾಗೃಹವೊಂದು ಕಟ್ಟಲ್ಪಟ್ಟಾಗ, ಸ್ಥಳಿಕ ವಾರ್ತಾಪತ್ರದ ಮುಖಪುಟವು ಘೋಷಿಸಿದ್ದು: “ಟೊಮ್ ಪ್ರೆಸ್ನಲ್ಲಿ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದ ಮೂರು ದಿನಗಳ ‘ಕ್ಷಿಪ್ರ ಕಟ್ಟೋಣ’ ದಲ್ಲಿ ಒಳಗೂಡಿರುವ ಸ್ವಯಂಸೇವಕರಾಗಿದ್ದ ಕುಶಲಕರ್ಮಿಗಳಿಗೆ ಮತ್ತು ಅವರ ಸಹಾಯಕರುಗಳಿಗೆ ಒಂದು ಆದರಪೂರ್ವಕ ಸುಸ್ವಾಗತ.”
ಪಟ್ಟಣದಲ್ಲಿದ್ದ ಬಹುಮಟ್ಟಿಗೆ ಪ್ರತಿಯೊಬ್ಬರೂ ಸಹಕರಿಸಲು ಹುಮ್ಮನಸ್ಸುಳ್ಳವರಾಗಿದ್ದರೆಂದು ತೋರುತ್ತಿತ್ತು. ಐವತ್ತು ಟನ್ನುಗಳಷ್ಟು ಸಾಮಗ್ರಿಗಳನ್ನು ತರಲು ಸಾಮಾನ್ಯವಾಗಿ 11,000 ಆಸ್ಟ್ರೇಲಿಯನ್ ಡಾಲರುಗಳ ತಗಲುವ ಬದಲಿಗೆ, ಒಬ್ಬ ಉದಾರಿ ಟ್ರಕ್ ಧನಿಯು ಕೇವಲ ಇಂಧನಕ್ಕಾಗಿ ಸಹೋದರರು ಕಾಣಿಕೆ ಕೊಟ್ಟರೆ ಸಾಕೆಂದು ಹೇಳಿದನು. ಸ್ಥಳಿಕ ಪೆಯಿಂಟ್ ಬಳಿಯುವ ಗುತ್ತಿಗೆದಾರರು (ಕಂಟ್ರ್ಯಾಕ್ಟರರು) 100 ಲೀಟರು ಪೆಯಿಂಟ್ ದಾನವಾಗಿತರ್ತು. ಮಣ್ಣು-ಸಾಗಾಟದ ಗುತ್ತಿಗೆದಾರರು ಯಂತ್ರಗಳನ್ನು ದೊರಕಿಸಿದರು, ಮತ್ತು ಗನಿತೋಡುವ ಕಂಪನಿಯು ಉಚಿತವಾಗಿ ಎತ್ತುಯಂತ್ರ (ಕ್ರೇನ್) ದೊರಕುವಂತೆ ಮಾಡಿದರು. ಮುನ್ನೂರು ಜನರ ಸಂದರ್ಶಕರಿಗೆ ವಸತಿಗಳನ್ನು ಕಂಡುಕೊಳ್ಳುವುದು ಒಂದು ಸಮಸ್ಯೆಯಾಗಿ ತಲೆದೋರಿತು, ಆದರೆ ನಗರವಾಸಿಗಳ ಸಹಕಾರವು ಗಮನಾರ್ಹವಾಗಿತ್ತು. ಕೆಲವರು ಟೆಲಿಫೊನ್ ಮಾಡಿದರು ಮತ್ತು ತಮ್ಮ ಹಾಸಿಗೆಗಳನ್ನು ಕೊಟ್ಟರು. ಒಬ್ಬ ಮನುಷ್ಯನು ಟೆಲಿಫೊನ್ ಮಾಡಿ, ವಾರಾಂತ್ಯದಲ್ಲಿ ತಾನು ದೂರಹೋಗಲಿದ್ದೇನೆಂದೂ, ಮನೆಯ ಹಿಂದಣ ಬಾಗಲನ್ನು ತೆರೆದಿಟ್ಟುಹೋಗುವೆನೆಂದೂ ಹೇಳಿದನು. ಅವನಂದದ್ದು: “ಯೋಜನೆಯ ಸಮಯಾವಧಿಯಲ್ಲಿ ಮನೆಯು ನಿಮ್ಮದು.”
ಸ್ಥಳಿಕ ಸರ್ಕಿಟಿನ ಒಂದು ಎಳೆಬಂಡಿಯನ್ನು (ಟ್ರೆಯ್ಲ್ರ್) ತೆಗೆದುಕೊಂಡುಬರುವಂತೆ ಕೆಲವು ಸಹೋದರರಿಗೆ ಒಂದು ವಿಳಾಸವನ್ನು ಕೊಟ್ಟಾಗ ಒಂದು ಹಾಸ್ಯಮಯ ಘಟನೆಯು ಸಂಭವಿಸಿತು. ದ್ವಾರದಲ್ಲಿ “ಧಾರ್ಮಿಕ ಸಂದರ್ಶಕರು ಬರಕೂಡದು” ಎಂದು ಹೇಳುವ ಒಂದು ಸೂಚಕವನ್ನು ನೋಡುವುದರಲ್ಲಿ ಗೊಂದಲಕ್ಕೀಡಾದರು. ಆದರೆ ಎಳೆಬಂಡಿಯು ಅಲ್ಲಿತ್ತು. ಮನೆಯ ಒಡತಿಗೆ, ತುಂಬಾ ಕಸತುಂಬಿಕೊಂಡಿದ್ದ ಎಳೆಬಂಡಿಯನ್ನು ತಾವು ಕೊಂಡೊಯ್ಯುತ್ತೇವೆಂದು ತಿಳಿಸಿದರು. ಅವರು ಅದನ್ನು ಶುಚಿಗೊಳಿಸುತ್ತಿರುವಾಗ, ಅದು ಸರ್ಕಿಟಿನ ಎಳೆಬಂಡಿಯಲ್ಲವೆಂದು ಅವರಿಗೆ ಪಕ್ಕನೆ ತಿಳಿದುಬಂತು! ಎಳೆಬಂಡಿಯ ಯಜಮಾನನು ಮನೆಗೆ ಬಂದಾಗ, ಅವನ ಎಳೆಬಂಡಿಯನ್ನು ಯೆಹೋವನ ಸಾಕ್ಷಿಗಳು ಕೊಂಡೊಯ್ದರು ಎಂದು ಅವನ ಹೆಂಡತಿಯು ಅವನಿಗೆ ತಿಳಿಸಿದಳು. ಈಗ ಖಾಲಿ ಮಾಡಿದ ಎಳೆಬಂಡಿಯೊಂದಿಗೆ ಸಹೋದರರು ಬಲುಬೇಗನೆ ಹಿಂದಿರುಗಿ ಬಂದು, ಆದ ತಪ್ಪನ್ನು ವಿವರಿಸಿದರು. ಒಂದು ಒಳ್ಳೆಯ ಸಂಭಾಷಣೆಯು ನಡೆಯಿತು, ಮತ್ತು ಹಿಂದೆ ವಿರೋಧಿಗಳಾಗಿದ್ದ ಇವರಲ್ಲಿ ನಮ್ಮ ಕುರಿತು ಮತ್ತು ನಮ್ಮ ಕೆಲಸದ ಕುರಿತು ಅನೇಕ ಪ್ರಶ್ನೆಗಳಿದ್ದವು. ಈಗ ಅವರು ಬಂದು, ನಮ್ಮ ಹೊಸ ರಾಜ್ಯ ಸಭಾಗೃಹವನ್ನು ನೋಡಲು ತವಕಪಡುತ್ತಿದ್ದಾರೆ.
ಈ ಪ್ರದೇಶದಲ್ಲಿ ಸುವಾರ್ತೆಯನ್ನು ಸಾರಲು ತಾಳ್ಮೆಯು ಆವಶ್ಯಕವಾಗಿದೆ. ಮೊದಲಾಗಿ, ಬಹಳ ದೂರದ ಪ್ರದೇಶಗಳು ಒಳಗೊಂಡಿರುತ್ತವೆ. ಒಬ್ಬಳು ಪಯನೀಯರ್ ಸಹೋದರಿ ಮತ್ತು ಅವಳ ಗಂಡನು ನಿಯತಕ್ರಮವಾಗಿ, ಪುನಃ ಸಂದರ್ಶನಗಳನ್ನು ಮತ್ತು ಮನೇ ಬೈಬಲ್ ಅಧ್ಯಯನಗಳನ್ನು ಮಾಡಲಿಕ್ಕೆ ಪೋರ್ಟ್ ಹೆಡ್ಲೇಂಡ್ನಿಂದ ಮೊರ್ಬಲ್ ಬೊರ್ಗೆ ನೆಲಗಟ್ಟುಹಾಕಿರದ, ಧೂಳು ತುಂಬಿರುವ ರಸ್ತೆಗಳಲ್ಲಿ 350 ಕಿಲೊಮೀಟರುಗಳಷ್ಟು ಸುತ್ತು ಸಂಚಾರದ ಡ್ರೈವಿಂಗ್ ಮಾಡಬೇಕಿತ್ತು. ಆಸ್ಟ್ರೇಲಿಯದಲ್ಲಿರುವ ಅತಿ ಶಾಕದ ಪ್ರದೇಶಗಳಲ್ಲಿ ಮೊರ್ಬಲ್ ಬೊರ್ ಇದ್ದು, ಶಾಕಾಂಶವು ಕೆಲವೊಮ್ಮೆ ಅಕ್ಟೋಬರದಿಂದ ಮಾರ್ಚ್ನ ತನಕ 50° ಶತಾಂಕಗಿಂತಲೂ ಮೇಲಕ್ಕೆ ಏರುತ್ತದೆ.
“ನೆತ್ತಿ ಕೊನೆ”ಗೆ ಮುಂದುವರಿಯುವುದು
ಡಾರ್ವಿನ್, 2,500 ಕಿಲೊಮೀಟರುಗಳಷ್ಟು ಇನ್ನು ಉತ್ತರದಲ್ಲಿದ್ದು ಸರ್ಕಿಟ್ ಸಮ್ಮೇಳನದ ಮುಂದಿನ ನಗರವಾಗಿದೆ. ಜಿಲ್ಲಾ ಮೇಲ್ವಿಚಾರಕರು ಮತ್ತು ಅವರ ಹೆಂಡತಿ ಡ್ರೈವಿಂಗ್ನ ದೀರ್ಘ ತಾಸುಗಳ ಉಪಯೋಗವನ್ನು ವೈಯಕ್ತಿಕ ಅಧ್ಯಯನವನ್ನು ರೂಢಿಯಲ್ಲಿಟ್ಟುಕೊಳ್ಳಲು ಬಳಸುತ್ತಾರೆ. ಮೊದಲು ಅವರು ದೈನಿಕ ವಚನವನ್ನು ಓದುತ್ತಾರೆ ಮತ್ತು ಪರಿಗಣಿಸುತ್ತಾರೆ. ಅನಂತರ ಅವರು ಬೈಬಲ್ ವಾಚನದ ಟೇಪನ್ನು ಆಲಿಸುತ್ತಾರೆ. ಅವರು ಡ್ರೈವಿಂಗ್ ಮಾಡಲು ತಮ್ಮ ಸರದಿಯನ್ನು ತೆಗೆದುಕೊಳ್ಳುವಾಗ, ಕಾವಲಿನಬುರುಜು ಮತ್ತು ಎಚ್ಚರ!ದ ಲೇಖನಗಳನ್ನು ಓದಲು ಸರದಿಯನ್ನು ತೆಗೆದುಕೊಳ್ಳುತ್ತಾರೆ.
ರಸ್ತೆಯ ಒಂದು ಸೂಚಕವು “ರಸ್ತೆರೈಲುಗಳ” ಕುರಿತು ಅವರನ್ನು ಎಚ್ಚರಿಸುತ್ತದೆ. ಇವುಗಳು ಉದ್ದವಾಗಿರುವ ಶಕ್ತಿಶಾಲಿ ಟ್ರಕ್ಕುಗಳಾಗಿದ್ದು ಮೂರು ಯಾ ನಾಲ್ಕು ಎಳೆಬಂಡಿಗಳನ್ನೊಳಗೊಂಡು, ಇಡೀ ವಾಹನದ ಉದ್ದವು 55 ಮೀಟರುಗಳಷ್ಟು ಇರುತ್ತದೆ. ಇವುಗಳನ್ನು ದಾಟಿ ಮುಂದಕ್ಕೆ ಹೋಗಬೇಕಾದರೆ ತುಂಬಾ ಸ್ಥಳಾವಕಾಶ ಬೇಕಾಗುತ್ತದೆ. ಚದರಿರುವ ಪಟ್ಟಣಗಳಿಗೆ ಪಶುಗಳನ್ನು ಮತ್ತು ಇತರ ಸಾಮಗ್ರಿಗಳನ್ನು ಕೊಂಡೊಯ್ಯಲು ಅವುಗಳು ಬಳಸಲ್ಪಡುತ್ತವೆ.
ಹವಾಮಾನವು ಯಾವಾಗಲೂ ಬಿಸಿಯಾಗಿದ್ದು, ಗ್ರಾಮಪ್ರದೇಶಗಳಲ್ಲಿ ಸಂತತವಾಗಿ ಒಣಹವೆಯು ಇರುತ್ತದೆ. ಸಸ್ಯಶೂನ್ಯ ಭೂದೃಶ್ಯವು ಪ್ರಾಯಶಃ ಒಂದು ವಿಸ್ತಾರವಾದ ಸ್ಮಶಾನವೆಂದು ತಪ್ಪಾಗಿ ಪರಿಗಣಿಸಲ್ಪಡಬಹುದು ಯಾಕಂದರೆ ನೆಲದ ಮೇಲೆ ಸಮಾನಾಂತರಗಳಲ್ಲಿ ಇರುವೆ-ಹುತಗ್ತಳು ಹಬ್ಬಿಕೊಂಡಿರುತ್ತವೆ. ಈ ಇರುವೆ-ಹುತಗ್ತಳು ಅವುಗಳು ಬಳಸುವ ಮಣ್ಣಿನ ಮೇಲೆ ಹೊಂದಿಕೊಂಡು, ಬಣ್ಣದಲ್ಲಿ ವ್ಯತ್ಯಾಸಗಳುಳ್ಳದ್ದಾಗಿರುತ್ತವೆ, ಮತ್ತು ಇವು ಒಂದರಿಂದ 2.5 ಮೀಟರುಗಳಷ್ಟು ಎತ್ತರವಿರಬಲ್ಲವು. ಅನಂತರ, ನಮ್ಮ ಪ್ರಯಾಣಿಕರು ವಿಕ್ಟೋರಿಯ ನದಿಯನ್ನು ದಾಟುತ್ತಿರುವಾಗ, ಮನೆಗಳಲ್ಲಿ ಮಾಡಿದ ಅನೇಕ ಸೂಚಕಗಳು ಅವರ ಗಮನವನ್ನು ಸೆಳೆಯುತ್ತವೆ. “ಅಪಾಯ: ಈಜಾಟಕ್ಕೆ ಅನುಮತಿ ಇಲ್ಲ. ಮನುಷ್ಯನನ್ನು ತಿನ್ನುವ ಮೊಸಳೆಗಳು ಈ ನದಿಗಳಲ್ಲಿ ಇವೆ!” ಎಂದು ಅನ್ನುತ್ತದೆ ಒಂದು. ವಿವೇಕಭರಿತವಾಗಿಯೇ, ಮೀಯಲು ಮತ್ತು ತಂಪಾಗಿರಿಸಿಕೊಳ್ಳಲು ಅವರು ಬೇರೆ ವಿಧಾನಗಳನ್ನು ಕಂಡುಹಿಡಿಯಲು ತೀರ್ಮಾನಿಸುತ್ತಾರೆ!
ಕೊನೆಯಲ್ಲಿ, ಅವರು ಆಸ್ಟ್ರೇಲಿಯದ ಉತ್ತರ ತುದಿಗೆ ತಲುಪುತ್ತಾರೆ, ಅದು ಸಾಮಾನ್ಯವಾಗಿ “ನೆತ್ತಿ ಕೊನೆ” [ಟಾಪ್ ಎಂಡ್] ಎಂದು ಪರಿಚಿತವಾಗಿದೆ. ಉತ್ತರ ಕ್ಷೇತ್ರದ ರಾಜಧಾನಿ ನಗರವಾದ ಡಾರ್ವಿನ್ ಯೆಹೋವನ ಸಾಕ್ಷಿಗಳ ಎರಡು ಸಭೆಗಳನ್ನು ಹೊಂದಿರುತ್ತದೆ. ಡಾರ್ವಿನ್ನ ಬಹುಸಾಂಸ್ಕೃತಿಕ ಸ್ವಭಾವವನ್ನು ಸರ್ಕಿಟ್ ಸಮ್ಮೇಳನಕ್ಕೆ ಹಾಜರಾಗುವಾಗ ಸುಲಭವಾಗಿ ಕಾಣಬಹುದು. ಮೂಲತಃ ಇಂಡೊನೇಶಿಯದ ಯುದ್ಧಛಿದ್ರಿತ ಪೂರ್ವ ಟಿಮೋರ್ನಿಂದ ಬಂದಿದ್ದ 30 ವರುಷ ವಯಸ್ಸಿನ ಚಾರ್ಲ್ಸ್ನ್ನು ಭೇಟಿಮಾಡಿರಿ. ಅವನ ಚೈನೀಸ್ ಹೆತ್ತವರು, ಪೂರ್ವಜರ ಆರಾಧನೆಯನ್ನು ನಡಿಸುವಂತೆ ಅವನನ್ನು ಬೆಳೆಸಿದ್ದರು. ಯುದ್ಧೋಚಿತ ಕ್ರೀಡೆಗಳಲ್ಲೂ ಅವನು ಬಹಳವಾಗಿ ಒಳಗೂಡಿದ್ದನು. ಪ್ರೇತಾರಾಧನೆಯೊಂದಿಗಿನ ಬಲವಾದ ಸಂಬಂಧಗಳ ಕಾರಣ ತೊರೆಯುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಆದಾಗ್ಯೂ, “ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು” ಎಂಬ ಯೇಸುವಿನ ವಾಗ್ದಾನವನ್ನು ಮನಸ್ಸಿನಲ್ಲಿಟ್ಟುಕೊಂಡು, ಅವನು ಈ ಜೀವಿತ ಕ್ರಮದಿಂದ ಸ್ವತಂತ್ರಗೊಂಡನು. (ಯೋಹಾನ 8:32) “ಇಂದು,” ಅವನನ್ನುವುದು, “ಯೆಹೋವನ ಮುಂದೆ ನನಗೆ ಒಂದು ಶುದ್ಧವಾದ ಮನಸ್ಸಾಕ್ಷಿ ಇದೆ, ಮತ್ತು ನಾನೊಬ್ಬ ಶುಶ್ರೂಷಕಾ ಸೇವಕನಾಗಿ ಪ್ರಚಲಿತದಲ್ಲಿ ಸೇವೆ ಸಲ್ಲಿಸುತ್ತಾ ಇದ್ದೇನೆ. ಮಿನಿಸ್ಟಿರಿಯಲ್ [ಶುಶ್ರೂಷಕಾ] ತರಬೇತಿ ಶಾಲೆಗೆ ಹಾಜರಾಗುವುದೇ ನನ್ನ ಧ್ಯೇಯ.”
ಅನಂತರ, ಪಪುವ ನ್ಯೂ ಗಿನಿಯದ ಬೆವ್ರ್ಲಿಯನ್ನು ಭೇಟಿಯಾಗಿರಿ. “ಬಿಳಿಜನರಿಗೆ ಸಾಕ್ಷಿನೀಡಲು ಮೊತ್ತಮೊದಲು ನನ್ನಲ್ಲಿ ಸ್ವಲ್ಪವೇ ಆತ್ಮವಿಶ್ವಾಸವಿತ್ತು,” ಎಂದು ಒಪ್ಪಿಕೊಳ್ಳುತ್ತಾಳೆ ಬಿವ್ರ್ಲಿ, “ಇಂಗ್ಲಿಷ್ ನನ್ನ ಎರಡನೆಯ ಭಾಷೆಯಾಗಿದ್ದ ಕಾರಣ ಮತ್ತು ಆಸ್ಟ್ರೇಲಿಯನ್ ಉಚ್ಚಾರಣಾರೀತಿಯೊಂದಿಗೆ ನಿರ್ದಿಷ್ಟ ವಾಕ್ಸರಣಿಗಳು ನನಗೆ ಅರ್ಥೈಸಿಕೊಳ್ಳಲು ಕಷ್ಟಕರವನ್ನಾಗಿ ಮಾಡಿದವು. ಯೆಹೋವನಲ್ಲಿ ಭರವಸೆಯನ್ನಿಡುವಂತೆ ಮತ್ತು ಅವನು ಉತ್ತಮನೆಂದು ಸವಿನೋಡುವಂತೆ ಬೈಬಲು ಹೇಳಿರುವುದನ್ನು ನೆನಪಿಸಿಕೊಂಡು, ಜನವರಿ 1991 ರಲ್ಲಿ ನಾನು ಪೂರ್ಣ ಸಮಯದ ಪಯನೀಯರ್ ಶುಶ್ರೂಷೆಯನ್ನು ಆರಂಭಿಸಿದೆನು. ನನ್ನ ಮೊದಲ ಬೈಬಲ್ ವಿದ್ಯಾರ್ಥಿಯು ಈಗ ಒಬ್ಬ ಪಯನೀಯರಳಾಗಿದ್ದಾಳೆ. ಅವಳ ಪುತ್ರಿಯರಲ್ಲಿ ಕೂಡ ಇಬ್ಬರು ಸತ್ಯವನ್ನು ಸ್ವೀಕರಿಸಿದ್ದಾರೆ, ಮತ್ತು ಅವರಲ್ಲೊಬ್ಬಳು ತನ್ನ ಗಂಡನೊಂದಿಗೆ ಪಯನೀಯರಿಂಗ್ ಮಾಡುತ್ತಿದ್ದಾಳೆ.”
ಡಾರ್ವಿನ್ ಬಿಡುವ ಮೊದಲು, 250 ಕಿಲೊಮೀಟರುಗಳಷ್ಟು ದೂರದಲ್ಲಿರುವ, ಅದರ ಸಮೃದ್ಧ ಪಕ್ಷಿ ಜೀವಿತಕ್ಕಾಗಿ ಪ್ರಖ್ಯಾತವಾಗಿರುವ ಕಕಾಡು ರಾಷ್ಟ್ರೀಯ ಉದ್ಯಾನಕ್ಕೆ ನಾವೊಂದು ತ್ವರಿತದ ಸಂಚಾರವನ್ನು ಕೈಗೊಳ್ಳೋಣ. ಇಲ್ಲಿ ನಾವು ಇಡೀ ಪ್ರದೇಶದಲ್ಲಿ ಬೇರ್ಪಡಿಸಲ್ಪಟ್ಟಿರುವ ಸುವಾರ್ತೆಯ ಏಕ ಪ್ರಚಾರಕಳಾಗಿರುವ ಡಬೀಯನ್ನು ಭೇಟಿಯಾಗುತ್ತೇವೆ. ಅಂತಹ ಬೇರ್ಪಡಿಸಲ್ಪಟ್ಟಿರುವ ಸ್ಥಿತಿಯಲ್ಲಿ ಅವಳು ಆತ್ಮಿಕವಾಗಿ ದೃಢವಾಗಿಟ್ಟುಕೊಳ್ಳಲು ಹೇಗೆ ನಿಭಾಯಿಸಿಕೊಳ್ಳುತ್ತಾಳೆಂದು ನಾವು ಅವಳನ್ನು ವಿಚಾರಿಸಿದೆವು. ಅವಳು ಉತ್ತರಿಸಿದ್ದು: “ಪ್ರಥಮವಾಗಿ, ಪ್ರಾರ್ಥನೆಯಿಂದ. . . . ಮತ್ತು ಯೆಶಾಯ 41:10 ರಂತಹ ಶಾಸ್ತ್ರವಚನಗಳಿಂದ ಆದರಣೆಯನ್ನು ಪಡೆದುಕೊಳ್ಳುತ್ತೇನೆ, ಅದು ಅನ್ನುವುದು: ‘ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ; ದಿಗ್ಭಮ್ರೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.’”
ಡಾರ್ವಿನ್ನಿಂದ 450 ಕಿಲೊಮೀಟರ್ ದಕ್ಷಿಣಕ್ಕೆ ಜಿಲ್ಕ್ಮಿನ್ಇನ್ನಲ್ಲಿ ನಾವು ಮೂಲನಿವಾಸಿಗಳ ಒಂದು ಚಿಕ್ಕ ಗುಂಪನ್ನು ಭೇಟಿಮಾಡುತ್ತೇವೆ. ಹಲವಾರು ವರ್ಷಗಳಿಂದ ಈ ಮೂಲನಿವಾಸಿಗಳ ಸಮುದಾಯವನ್ನು ಯೆಹೋವನ ಸಾಕ್ಷಿಗಳ ಒಂದು ಸಮುದಾಯದೋಪಾದಿ ವೀಕ್ಷಿಸಲಾಗುತ್ತಿತ್ತು, ಯಾಕಂದರೆ ಅವರಲ್ಲಿ ಯಾರೊಬ್ಬರು ದೀಕ್ಷಾಸ್ನಾನವಾಗದಿದ್ದರೂ, ಅನೇಕರು ಅಧಿವೇಶನಗಳಿಗೆ ಮತ್ತು ಸಮ್ಮೇಳನಗಳಿಗೆ ಕ್ರಮವಾಗಿ ಹಾಜರಾಗುತ್ತಿದ್ದರು. ಅದರ ಶುಭ್ರತೆಗಾಗಿ ಆ ಸಮುದಾಯವು ಹೆಸರುಹೊಂದಿತ್ತು. ಸಂತಸಕರವಾಗಿಯೇ, ಕೆಲವರು ಸತ್ಯಕ್ಕಾಗಿ ದೃಢ ನಿಲುವನ್ನು ಈಗ ತೆಗೆದುಕೊಂಡಿದ್ದಾರೆ ಮತ್ತು ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ. ಗ್ರಾಮ್ಯ ನಿವಾಸಿತ ಮೂಲನಿವಾಸಿಗಳಲ್ಲಿ ಅವರು ಹಾಗೆ ಮಾಡುವುದರಲ್ಲಿ ಮೊತ್ತಮೊದಲಿಗರಾಗಿರುತ್ತಾರೆ. ಈ ವಿನಮ್ರ ಜನರು ಶತಕಗಳ ಪುರಾತನದ ಸಂಪ್ರದಾಯಗಳನ್ನು ಮತ್ತು ಅವರು ಬುಡಕಟ್ಟಿನ ಪ್ರೇತಾಚಾರದ ಹವ್ಯಾಸಗಳನ್ನು ತೊರೆದು, ಸ್ವತಂತ್ರರಾಗಲು ನಿಜವಾದ ಧೈರ್ಯ ಮತ್ತು ಯೆಹೋವನ ಪವಿತ್ರ ಆತ್ಮದ ಮೇಲೆ ಆತುಕೊಳ್ಳುವಿಕೆಯನ್ನು ಕೇಳಿಕೊಳ್ಳುತ್ತದೆ.
ಆ್ಯಲಿಸ್ ಸ್ಪ್ರಿಂಗ್ಸ್ಗೆ ಮತ್ತು ಹಿನ್ನಾಡಿನಿಂದ ಹೊರಗೆ
ಈಗ “ನೆತ್ತಿಕೊನೆ” ಯನ್ನು ಬಿಡುವ ಮತ್ತು ಪ್ರಸಿದ್ಧಿಯ ಆಯರ್ಸ್ ರಾಕ್ನ ಬಳಿಯ ಖಂಡದ “ಕೆಂಪು ಕೇಂದ್ರ” [ರೆಡ್ ಸೆಂಟರ್] ದಲ್ಲಿರುವ, 1,600 ಕಿಲೊಮೀಟರುಗಳಷ್ಟು ದಕ್ಷಿಣಕ್ಕಿರುವ ಆ್ಯಲಿಸ್ ಸ್ಪ್ರಿಂಗ್ಸ್ಗೆ ಹೋಗುವ ಸಮಯ ಆಗಮಿಸಿತು. ಇಲ್ಲಿ ವಾತಾನುಕೂಲದ ರಾಜ್ಯ ಸಭಾಗೃಹದಲ್ಲಿ, ಸಮ್ಮೇಳನಕ್ಕಾಗಿ ಆರಾಮಕರ ಆಸನಗಳು ಒದಗಿಸಲ್ಪಟ್ಟಿವೆ, ಈ ಪ್ರದೇಶದಲ್ಲಿರುವ ಎರಡು ಸಭೆಗಳ 130 ಯಾ ಹೆಚ್ಚು ಜನರು ಹಾಜರಿಯಿದ್ದರು. ಪುನಃ, ಕ್ರೈಸ್ತ ಸಹವಾಸದಲ್ಲಿ ಪೊಲಿನೆಶಿಯನ್ಸ್, ಯೂರೋಪಿಯನ್ಸ್, ಮತ್ತು ಮೂಲನಿವಾಸಿಗಳು ಒಟ್ಟಾಗಿ ಸಂಮಿಶ್ರಣಗೊಳ್ಳುವ ಒಂದು ಆನಂದದ ದೃಶ್ಯವನ್ನು ನಾವು ನೋಡುತ್ತೇವೆ.
ಕಟ್ಟಕಡೆಗೆ ನಾವು ಆ್ಯಲಿಸ್ ಸ್ಪ್ರಿಂಗ್ಸ್ನ್ನು ಬಿಟ್ಟು, ನಮ್ಮ ಸಂಚಾರೀ ಜಿಲ್ಲಾ ಮೇಲ್ವಿಚಾರಕರು ಮತ್ತು ಅವರ ಪತ್ನಿಯೊಂದಿಗೆ ಪ್ರಯಾಣದ ಕೊನೆಯ ಭಾಗವನ್ನು ಆರಂಭಿಸುತ್ತೇವೆ. ಈ ಪ್ರಯಾಣವು ನಮ್ಮನ್ನು ಸುಮಾರು 2,000 ಕಿಲೊಮೀಟರುಗಳಷ್ಟು ಭೂಖಂಡವನ್ನು ದಾಟುವಂತೆ ಮಾಡುತ್ತಾ, ಉತ್ತರದಿಂದ ಪೂರ್ವಾಭಿಮುಖವಾಗಿ ನಡಿಸುತ್ತದೆ. ನಾವು ಹಾಗೆ ಮಾಡುತ್ತಿರುವಾಗ, ಹಿನ್ನಾಡಿಗೆ ನಾವು ವಿದಾಯಕೋರುತ್ತೇವೆ, ಯಾಕಂದರೆ ಕೊನೆಗೆ ನಾವು ಕ್ವೀನ್ಸ್ಲೇಂಡಿನ ಉಷ್ಣವಲಯದ ಹುಲುಸಾದ ಮಳೆಕಾಡಿಗೆ ತಲುಪುತ್ತೇವೆ. ಇಲ್ಲಿ, ಉತ್ತರ ಕ್ವೀನ್ಸ್ಲೇಂಡಿನ ಕರಾವಳಿಯಲ್ಲಿ—ಗ್ರೇಟ್ ಬ್ಯಾರಿಯರ್ ರೀಫ್ನ ಪ್ರದೇಶಕ್ಕೆ—ಜನಸಂಖ್ಯೆಗೆ ಉನ್ನತ ಪ್ರಮಾಣದ ಸಾಕ್ಷಿಗಳಿರುವ ಅನೇಕ ಸಭೆಗಳು ಇರುತ್ತವೆ.
ಆದಾಗ್ಯೂ, ಇನ್ನೊಂದು ಸರ್ಕಿಟ್ ಸಮ್ಮೇಳನಕ್ಕೆ ಹಾಜರಾಗುವ ತನಕ ನಮ್ಮ ಸಂಚಾರವನ್ನು ನಾವಿನ್ನೂ ಮುಕ್ತಾಯಗೊಳಿಸಿರುವುದಿಲ್ಲ. ಕರ್ನ್ಜ್ನಲ್ಲಿ—ಬ್ಯಾರಿಯರ್ ರೀಫ್ನ ಪ್ರಖ್ಯಾತದ ಕ್ವೀನ್ಸ್ಲೇಂಡಿನ ಉಷ್ಣವಲಯದ ಪಟ್ಟಣ—ಒಂದು ವಿಮಾನವನ್ನೇರಿ ಆಸ್ಟ್ರೇಲಿಯದ ವಿಸ್ತಾರವಾದ ಭೂಭಾಗವನ್ನು ಬಿಟ್ಟು, ಟೊರ್ರಿಸ್ ಜಲಸಂಧಿಯನ್ನು ದಾಟಿ, ಕೇಪ್ ಯಾರ್ಕ್ ದ್ವೀಪಕಲ್ಪದ ಉತ್ತರ ತುದಿಯಲ್ಲಿರುವ ತರ್ಜ್ಡೇ ದ್ವೀಪಕ್ಕೆ ಒಂದು ಚಿಕ್ಕ ಕುಪ್ಪಳಿಸುವಿಕೆ ಮಾಡುತ್ತೇವೆ. ಇಲ್ಲಿ ಕೇವಲ 23 ಪ್ರಚಾರಕರಿರುವ ಒಂದು ಚಿಕ್ಕ ಸಭೆಯಿದೆ. ನಮ್ಮ ಈ ಪ್ರಯಾಣದ ಕೊನೆಯ ಸಮ್ಮೇಳನದಲ್ಲಿ 63 ಮಂದಿ ಹಾಜರಿರುವುದನ್ನು ಕಾಣುವುದು ಎಂತಹ ಆನಂದ!
ವೈದೃಶ್ಯಗಳ ಈ ದೇಶದಲ್ಲಿ ರಾಜ್ಯ ಸಾರುವಿಕೆಯ ಈ ನಸುನೋಟದಲ್ಲಿ ನೀವು ಆನಂದಿಸಿದಿರಿ ಎಂದು ನಾವು ನಿರೀಕ್ಷಿಸುತ್ತೇವೆ. ಕೆಳ ಸರ್ತದ ಕುತೂಹಲ ಕೆರಳಿಸುವ ಈ ದೇಶದಲ್ಲಿ ನಮ್ಮನ್ನು ಭೇಟಿಯಾಗಲು ಮತ್ತು ಅವರ ಅಸದೃಶ ನೇಮಕದಲ್ಲಿ ತಮ್ಮ ಶುಶ್ರೂಷೆಯನ್ನು ನಂಬಿಗಸ್ತಿಕೆಯಿಂದ ನಿರ್ವಹಿಸುತ್ತಿರುವ ಸಹೋದರ, ಸಹೋದರಿಯರನ್ನು ಮುಖತಃ ಭೇಟಿಯಾಗಲು ಪ್ರಾಯಶಃ ಒಂದಾನೊಂದು ದಿನ ನಿಮಗೆ ಸಾಧ್ಯವಾಗಬಹುದು.
[ಪುಟ 23ರಲ್ಲಿರುವಚಿತ್ರ/ಚಿತ್ರಗಳು]
(For fully formatted text, see publication)
ಪೋರ್ಟ್ ಹೆಡ್ಲೆಂಡ್
ಕ್ಯಾನಬೆರಾ
ಟೊಮ್ ಪ್ರೆಸ್
ಮೊರ್ಬಲ್ ಬೊರ್
ನ್ಯೂಮ್ಯಾನ್
ಡಾರ್ವಿನ್
ಕ್ಯಾಥರೀನ್
ಆ್ಯಲೀಸ್ ಸ್ಪ್ರಿಂಗ್ಸ್
ಆಯೇರ್ಸ್ ರಾಕ್
ತರ್ಜ್ಡೇ ದ್ವೀಪ
ಕೆಯ್ರ್ನ್ಸ್
ಅಡೆಲೈಡ್
ಮೇಲ್ಬೊರ್ನ್
ಹೊಬಾರ್ಟ್
ಸಿಡ್ನಿ
ಬ್ರಿಸ್ಬೇನ್
ಪರ್ತ್
[ಪುಟ 24 ರಲ್ಲಿರುವ ಚಿತ್ರ]
ಪರ್ತ್, ಪಶ್ಚಿಮ ಆಸ್ಟ್ರೇಲಿಯದ ರಾಜಧಾನಿ
[ಪುಟ 25 ರಲ್ಲಿರುವ ಚಿತ್ರ]
ರಸ್ತೇಪಕ್ಕದ ಸಾಕ್ಷಿ ನೀಡುವಿಕೆಯು ಒಳ್ಳೆಯ ಫಲಿತಾಂಶಗಳನ್ನು ಉತ್ಪಾದಿಸುತ್ತದೆ