ರಾಜ್ಯ ಘೋಷಕರು ವರದಿ ಮಾಡುತ್ತಾರೆ
“ವಿವೇಕವನ್ನು ಪಡೆಯುವವನು ಸಂತೋಷಿತನು”
ಈ ಜ್ಞಾನೋಕ್ತಿಯು, ಎಲ್ಲಿ ಈಗ 71,000 ಕ್ಕಿಂತಲೂ ಹೆಚ್ಚು ಸಂತೋಷಿತ ಯೆಹೋವನ ಸಾಕ್ಷಿಗಳಿದ್ದಾರೋ ಆ ಕೊರಿಯದಲ್ಲಿ ಸತ್ಯವಾಗಿ ಪರಿಣಮಿಸಿಯದೆ. (ಜ್ಞಾನೋಕ್ತಿ 3:13, NW) ಮತ್ತು ಈ ಶುಶ್ರೂಷಕರಲ್ಲಿ 42 ಪ್ರತಿಶತ ಪೂರ್ಣ ಸಮಯದ ಸೇವೆಯಲ್ಲಿರುವುದನ್ನು ಊಹಿಸಿಕೊಳ್ಳಿರಿ! ಸಂತೋಷವು ನಿಜ ವಿವೇಕವನ್ನು ಹುಡುಕುವವರ ಪಾಲಿನದ್ದಾಗಿದೆ ಎಂದು ಕೆಳಗಿನ ಅನುಭವಗಳು ತೋರಿಸುವುವು.
ಪುಸಾನ್ನ ಒಬ್ಬಾಕೆ ಸ್ತ್ರೀಯು 16 ವರ್ಷಗಳಿಂದ ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿ ಒಂದಕ್ಕೆ ಹಾಜರಾಗಿದ್ದಳು. ಅಶಾಸ್ತ್ರೀಯವಾದ ಎಷ್ಟು ಪದ್ಧತಿಗಳನ್ನು ಆಕೆ ಅವಲೋಕಿಸಿದಳೆಂದರೆ ದೇವರೇ ಇರಸಾಧ್ಯವಿಲ್ಲ ಎಂದು ಯೋಚಿಸಲಾರಂಭಿಸಿದಳು. ಇನ್ನೊಂದು ಕಡೆ, ದೇವರ ಅಸ್ತಿತ್ವವನ್ನು ಆಕೆ ಅಲ್ಲಗಳೆಯಲು ಶಕ್ಯಳಿರಲಿಲ್ಲ, ಆದುದರಿಂದ ಸತ್ಯ ಚರ್ಚು ಎಂಬುದೊಂದು ಇದ್ದಿರುವುದಾದರೆ ತಾನದನ್ನು ಕಂಡುಕೊಳ್ಳಲಾಗುವಂತೆ ಆಕೆ ಪ್ರಾಮಾಣಿಕತೆಯಿಂದ ದೇವರಿಗೆ ಪ್ರಾರ್ಥಿಸಿದಳು. ಈ ಬಿಂದುವಲ್ಲಿ ಥಟ್ಟನೆ ಆಕೆಗೆ ಯೆಹೋವನ ಸಾಕ್ಷಿಗಳ ನೆನಪು ಬಂತು, ಮತ್ತು ಅವಳ ಚರ್ಚು ಅವರನ್ನು ಕಡೆಗಣಿಸಿದ್ದನ್ನೂ, ಮತ್ತು ಸಾಕ್ಷಿಗಳು ತ್ರಯೈಕ್ಯ, ನರಕಾಗ್ನಿ, ಮತ್ತು ಕ್ರೈಸ್ತಪ್ರಪಂಚದ ಬೇರೆ ಬೋಧನೆಗಳನ್ನು ನಂಬದಿರುವ ಕಾರಣ ಚರ್ಚ್ಹೋಕರನ್ನು ಅವರ ವಿರುದ್ಧ ಎಚ್ಚರಿಸಿದ್ದನ್ನೂ ಆಕೆ ನೆನಪಿಸಿದಳು. ಪ್ರಾಯಶಃ ಅವರೇ ನಿಜ ಚರ್ಚು ಆಗಿರಬಹುದೆ? ನೆರೆಯವಳೊಬ್ಬಳ ಸಹಾಯದಿಂದ ರಾಜ್ಯ ಸಭಾಗೃಹದ ಸ್ಥಳವನ್ನು ಆಕೆ ಕಂಡುಕೊಂಡಳು. ಮರುದಿನವೇ ಅವಳು ಒಂದು ಕೂಟಕ್ಕೆ ಹಾಜರಾದಳು.
ಕೂಟದ ಕ್ರಮಬದ್ಧತೆಯು ಅವಳನ್ನು ಅಚ್ಚರಿಗೊಳಿಸಿತು. ಅವಳ ಚರ್ಚಿನಲ್ಲಿದ್ದಂತೆ ಉನ್ಮಾದದ ಕಿರಿಚಾಟ ಮತ್ತು ಭಾವಾವೇಶದ ಹಾಡುವಿಕೆ ಅಲ್ಲಿರಲಿಲ್ಲ. ಅವಳೊಂದಿಗೆ ಬೈಬಲಭ್ಯಾಸ ನಡಿಸಲು ಸಿದ್ಧಳಿದ್ದ ಒಬ್ಬ ಸಾಕ್ಷಿಗೆ ಅವಳನ್ನು ಪರಿಚಯಿಸಲಾಯಿತು, ಮತ್ತು ಮೊದಲನೆಯ ಅಭ್ಯಾಸವು ಹಲವಾರು ತಾಸುಗಳ ತನಕ ನಡೆಯಿತು ಯಾಕಂದರೆ ಅವಳಿಗೆ ಅನೇಕ ಪ್ರಶ್ನೆಗಳಿದ್ದವು. ಎರಡನೆಯ ಅಭ್ಯಾಸದಲ್ಲಿಯೇ ಆಕೆ, ತಾನು ಚರ್ಚಿಗೆ ರಾಜೀನಾಮೆ ಕೊಟ್ಟು, ಸಾಕ್ಷಿಯಾಗುತ್ತೇನೆ ಎಂದು ಪ್ರಕಟಿಸಿದಳು. ತಾನು ಕೂಟಗಳಿಗೆ ಹಾಜರಾಗುತ್ತಾ ಇರುವುದರಿಂದ, ತನ್ನೊಂದಿಗೆ ಇನ್ನು ಮುಂದೆ ಅಭ್ಯಾಸ ಮಾಡುವ ಅಗತ್ಯವಿಲ್ಲವೆಂದು ಆಕೆ ಸಹೋದರಿಗೆ ತಿಳಿಸಿದಳು. ಆದರೂ, ಕೂಟಗಳಿಗೆ ಹಾಜರಾಗುವುದಲ್ಲದೆ ವೈಯಕ್ತಿಕ ಬೈಬಲಭ್ಯಾಸವನ್ನು ಪಡೆಯುವ ಮೂಲ್ಯವನ್ನು ಆಕೆಗೆ ತೋರಿಸಲಾಯಿತು. ಅವಳು ಸಲಹೆಯನ್ನು ಸ್ವೀಕರಿಸಿದಳು, ತನ್ನ ಅಭ್ಯಾಸಗಳಲ್ಲಿ ನಿರತಳಾದಳು ಮತ್ತು ತಕ್ಕ ಸಮಯದಲ್ಲಿ ದೀಕ್ಷಾಸ್ನಾನ ಪಡೆದಳು.
ಸತ್ಯ ದೇವರಾದ ಯೆಹೋವನ ನಿಜ ವಿವೇಕವನ್ನು ಕಂಡುಕೊಂಡದ್ದಕ್ಕಾಗಿ ಆಕೆಯೀಗ ಬಹು ಸಂತೋಷಿತಳಾಗಿದ್ದಾಳೆ, ಮತ್ತು ದೇವರ ಹೊಸ ಲೋಕದಲ್ಲಿ ಸದಾ ಜೀವಿಸುವ ನಿರೀಕ್ಷೆಯು ಅವಳಿಗಿದೆ.
ನಿವೃತ್ತ ಸೇನಾಧಿಪತಿ ಸತ್ಯ ಕಲಿಯುತ್ತಾನೆ
ಒಬ್ಬ ಸೇನಾಧಿಪತಿಯ ಪತ್ನಿಗೆ 1962 ರಲ್ಲಿ ದೀಕ್ಷಾಸ್ನಾನವಾಯಿತು. ಅವಳ ಗಂಡನು ಅವಳನ್ನು ಮೊದಮೊದಲು ವಿರೋಧಿಸಿದನು, ಅನಂತರ ವಿರೋಧಿಸುವುದನ್ನು ನಿಲ್ಲಿಸಿದನು, ಮತ್ತು ಮುಂದಿನ 28 ವರ್ಷಗಳಲ್ಲಿ ಹಲವಾರು ಸಹೋದರರು ಸತ್ಯದಲ್ಲಿ ಅವನ ಆಸಕ್ತಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಾ, ಅವನೊಂದಿಗೆ ಬಿಟ್ಟು ಬಿಟ್ಟು ಅಭ್ಯಾಸ ನಡಿಸಿದರು. ಅವನು ಕೆಲವು ಕೂಟಗಳನ್ನು ಮತ್ತು ಅಧಿವೇಶನಗಳನ್ನು ಹಾಜರಾದನು, ಅದರೆ ಸತ್ಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದರಿಂದ ಹಿಂಜರಿಯುತ್ತಿದ್ದವರಲ್ಲಿ ಅವನು ಒಬ್ಬನಾಗಿದ್ದನು. ಇಸವಿ 1990 ರಲ್ಲಿ ಅವನೂ ಅವನ ಪತ್ನಿಯೂ ಜಪಾನಿಗೆ ಹೋಗಿ, ಒಂದು ಜಿಲ್ಲಾ ಅಧಿವೇಶನಕ್ಕೆ ಹಾಜರಾದರು. ಈ ಸಂದರ್ಭದಲ್ಲಿ ಅವನು—ಮುಂಚೆ ಮಾಡಿರದ ಒಂದು ಸಂಗತಿಯನ್ನು—ಭಾಷಣಗಳಿಗೆ ನಿಕಟವಾದ ಗಮನವನ್ನು ಕೊಟ್ಟನು. ಸುಳ್ಳು ಧರ್ಮವನ್ನು ಬಯಲುಪಡಿಸಿದ ಧೀರ ಭಾಷಣಗಳು ಅವನಿಗೆ ಧಕ್ಕೆಬರಿಸಿದವು, ಆದರೆ ಅವು ನಿಶ್ಚಯವಾಗಿ ಕ್ರೈಸ್ತಪ್ರಪಂಚದ ಕಪಟತನಕ್ಕೆ ಅವನ ಕಣ್ಣುಗಳನ್ನು ತೆರೆದವು. ಜಪಾನಿನಲ್ಲಿ ದೇವಜನರ ಕ್ರಮಬದ್ಧತೆ ಮತ್ತು ಆನಂದದಿಂದ ಅವನು ಪ್ರಭಾವಿತನಾದನು, ಅದು ಕೊರಿಯದಲ್ಲಿ ಅವನು ನೋಡಿದ್ದಂತೆಯೇ ಇತ್ತು. ಕೊರಿಯಕ್ಕೆ ಹಿಂತಿರುಗಿದಾಗ, ಅವನು ಒಂದು ಗಂಭೀರ ಬೈಬಲಧ್ಯಯನ ಆರಂಭಿಸಿದನು, ಕೊನೆಗೆ ದೀಕ್ಷಾಸ್ನಾನ ಪಡೆದನು.
ಹೀಗೆ ದೀಕ್ಷಾಸ್ನಾನದ ಅನಂತರ ಅವನೇನು ಮಾಡಬೇಕು? ಒಂದು ಪ್ರಖ್ಯಾತ ಟೂರಿಸ್ಟ್ ಹೊಟೇಲಿನ ಅಧ್ಯಕ್ಷನಾಗಿದ್ದ ತನ್ನ ಸ್ಥಾನಕ್ಕೆ ಅವನು ರಾಜೀನಾಮೆ ಕೊಟ್ಟು, ತನ್ನ ಪತ್ನಿಯೊಂದಿಗೆ ಪೂರ್ಣ ಸಮಯದ ಸೇವೆಯಲ್ಲಿ ಜತೆಗೂಡಿದನು. ಹಿಂಜರಿದಿದ್ದಾಗ ಕಳಕೊಂಡ 28 ವರ್ಷಗಳ ನಷ್ಟಭರ್ತಿಗೆ ಕ್ರಮದ ಪಯನೀಯರ ಸೇವೆಯು ಅತ್ಯುತ್ತಮ ಮಾರ್ಗವೆಂದು ಅವನ ಅಭಿಪ್ರಾಯವಾಗಿದೆ.
“ವಿವೇಕವನ್ನು ಪಡೆಯುವವನು ಸಂತೋಷಿತನು” ಎಂಬ ಜ್ಞಾನೋಕ್ತಿಯು ತನಗೂ ಅನ್ವಯಿಸುತ್ತದೆಂದು ಅವನೀಗ ತಿಳಿಯುತ್ತಾನೆ!