ಹಿಮ ಮತ್ತು ಬೆಂಕಿಯ ದೇಶದಲ್ಲಿ ತಾಳ್ಮೆಯಿಂದ ಸಾರುವುದು
ಉತ್ತರ ಅಮೆರಿಕ ಮತ್ತು ಯೂರೋಪಿನ ನಡುವೆ ಉತ್ತರ ಅಟ್ಲಾಂಟಿಕ್ನ ಸುಮಾರು ಮಧ್ಯ ಮಾರ್ಗದಲ್ಲಿ ಐಸ್ಲೆಂಡ್ ನೆಲೆಸಿದೆ. ಉತ್ತರ ಧ್ರುವ ವೃತ್ತಕ್ಕೆ ಕೆಳಭಾಗದಲ್ಲಿ ಅದು ಇರುವುದಾದರೂ, ಅದರ ವಾತಾವರಣವು ನಿರೀಕ್ಷಿಸಬಹುದಾಗಿರುವದಕ್ಕಿಂತಲೂ ಹಿತಕರವಾಗಿದೆ, ಕೊಲ್ಲಿಯಿಂದ ಹರಿದು ಬರುವ ಉಷ್ಣೋದಕ ಪ್ರವಾಹದ ಬೆಚ್ಚಗೆನ ಪರಿಣಾಮಗಳಿಗೆ ಉಪಕಾರಗಳು. ಅದು ಯೂರೋಪಿನ ಅತ್ಯಂತ ದೊಡ್ಡದಾದ ನೀರ್ಗಲ್ಲ ನದಿಯನ್ನು ಹೊಂದಿದೆ ಮತ್ತು ಪ್ರಪಂಚದಲ್ಲೇ ಅತ್ಯಂತ ಹೆಚ್ಚಿನ ಕ್ರಿಯಾಶೀಲ ಜ್ವಾಲಾಮುಖಿಯ ಕ್ಷೇತ್ರಗಳಲ್ಲಿ ಇದು ಒಂದಾಗಿರುವ ಕಾರಣದಿಂದ ಸಹ ಐಸ್ಲೆಂಡ್ ಹಿಮ ಮತ್ತು ಬೆಂಕಿಯ ದೇಶ ಎಂದು ಕರೆಯಲ್ಪಟ್ಟಿದೆ. ಅದರ ಅನೇಕ ಬಿಸಿನೀರ ಬುಗ್ಗೆಗಳು ಮತ್ತು ಬಿಸಿ ಆವಿಯನ್ನು ಮತ್ತು ಗಂಧಕದ ಅನಿಲಗಳನ್ನು ಹೊರಸೂಸುವ ಜ್ವಾಲಾಮುಖಿಯ ಕ್ಷೇತ್ರಗಳು ಹೆಚ್ಚು ಪ್ರಸಿದ್ಧವಾಗಿವೆ.
ಯೂರೋಪಿನ ಅತ್ಯಂತ ದೊಡ್ಡ ದ್ವಿತೀಯ ದ್ವೀಪವಾದ ಇದರ 2,60,000 ನಿವಾಸಿಗಳು, 1,100 ವರ್ಷಗಳಿಗಿಂತಲೂ ಅಧಿಕ ಪೂರ್ವದಲ್ಲಿ ಇಲ್ಲಿ ನೆಲೆಸಿದ ಐಸ್ಲೆಂಡಿನ ಭಾಷೆಯ ಮೂಲತಃ, ಕಡಲುಗಳ್ಳರ ಯುಗದ ಸ್ಕಾಂಡಿನೇವಿಯನ್ ಭಾಷೆಯಾದ ಹಳೆಯ ನಾರ್ವೆ ದೇಶದ ಭಾಷೆಯಂತೆಯೇ ಇದೆ. ಪ್ರಾಯಶಃ 13 ನೆಯ ಶತಮಾನದಲ್ಲಿ ಬರೆಯಲ್ಪಟ್ಟ ಅವರ ಹಳೆಯ ವೀರ ಕಥೆಗಳನ್ನು, ಓದುವುದರಲ್ಲಿ ಐಸ್ಲೆಂಡಿನವರು ಹೆಚ್ಚು ಒಲುಮೆಯುಳ್ಳವರಾದುದರಿಂದ ಅದು ಬಹುಮಟ್ಟಿಗೆ ಬದಲಾವಣೆಯಾಗದೆ ಉಳಿದಿದೆ.
ಹದಿನಾರನೆಯ ಶತಮಾನದಿಂದ, ಐಸ್ಲೆಂಡ್ ಭಾಷೆಯಲ್ಲಿ ಬೈಬಲು ತರ್ಜುಮೆಯಾಗಲು ಆರಂಭವಾಯಿತು. ಇಸವಿ 1540 ರಲ್ಲಿ ಒಂದು “ಹೊಸ ಒಡಂಬಡಿಕೆ” ಮತ್ತು 1584 ರಲ್ಲಿ ಒಂದು ಪೂರ್ಣ ಬೈಬಲ್ ಪ್ರಕಟಗೊಂಡವು. ತೊಂಬತ್ತು ಪ್ರತಿಶತಕ್ಕಿಂತಲೂ ಹೆಚ್ಚಿನ ಜನರು ಅಧಿಕೃತ ರಾಜ್ಯ ಧರ್ಮವಾದ ಇವ್ಯಾಂಜಲಿಕಲ್ ಲೂತರನ್ ಚರ್ಚ್ಗೆ ಸೇರಿದವರಾಗಿದ್ದರು. ಬಹುಮಟ್ಟಿಗೆ ಪ್ರತಿಯೊಂದು ಮನೆಯಲ್ಲಿ ಬೈಬಲ್ ಕಂಡುಬರುತ್ತದಾದರೂ, ಕೆಲವರು ಅದು ದೇವರ ವಾಕ್ಯವಾಗಿದೆಯೆಂದು ನಂಬುವವರು ಕೊಂಚ ಜನ. ಐಸ್ಲೆಂಡ್ನ ಹೆಚ್ಚಿನ ನಿವಾಸಿಗಳು ಧರ್ಮದ ಕುರಿತು ಉದಾರ ನೋಟವುಳ್ಳವರಾಗಿದ್ದಾರೆ ಮತ್ತು, ಸಾಮಾನ್ಯವಾಗಿ, ಸ್ವತಂತ್ರ ಮನೋಭಾವವುಳ್ಳವರಾಗಿದ್ದಾರೆ.
ಸುವಾರ್ತೆಯು ಐಸ್ಲೆಂಡನ್ನು ಮುಟ್ಟುತ್ತದೆ
ಐಸ್ಲೆಂಡಿನವರಲ್ಲಿ ರಾಜ್ಯದ ಸುವಾರ್ತೆಯನ್ನು ಪ್ರಥಮವಾಗಿ ಆಲಿಸಿದವರು ಆಗ ಕೆನಡದಲ್ಲಿ ವಾಸಿಸುತ್ತಿದ್ದರು. ಅವರಲ್ಲಿ ಒಬ್ಬರು ಜಾರ್ಜ್ ಫಿಯೋಲ್ನಿರ್ ಲಿಂಡಾಲ್ರಾಗಿದ್ದರು. ಅವರ ಹೆತ್ತವರು ಐಸ್ಲೆಂಡ್ನವರಾಗಿದ್ದರು, ಮತ್ತು ಅವರು ಐಸ್ಲೆಂಡ್ ಭಾಷೆಯನ್ನು ಮಾತಾಡುತ್ತಿದ್ದರು. ಅವರ ಜೀವಿತವನ್ನು ಯೆಹೋವ ದೇವರಿಗೆ ಸಮರ್ಪಿಸಿಕೊಂಡ ತರುವಾಯ, ಅವರು ಸುವಾರ್ತೆಯ ಒಬ್ಬ ಪೂರ್ಣ ಸಮಯದ ಸೇವಕರಾದರು. ಇಸವಿ 1929 ರಲ್ಲಿ, ಅವರು 40 ವರ್ಷ ಪ್ರಾಯದವರಾಗಿದ್ದಾಗ, ಅವರು ಸುವಾರ್ತೆಯನ್ನು ಆ ಹಿಮ ಮತ್ತು ಬೆಂಕಿಯ ದೇಶದಲ್ಲಿರುವ ಜನರಿಗೆ ಕೊಂಡೊಯ್ದರು.
ಒಬ್ಬ ವ್ಯಕ್ತಿಗೆ ಎಂತಹ ಒಂದು ಪ್ರಚಂಡವಾದ ಕೆಲಸದ ಹೊರೆ! ಐಸ್ಲೆಂಡ್, ಉತ್ತರದಿಂದ ದಕ್ಷಿಣಕ್ಕೆ ಸುಮಾರು 320 ಕಿಲೊಮೀಟರುಗಳು ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಸುಮಾರು 500 ಕಿಲೊಮೀಟರ್ಗಳಷ್ಟು ವಿಸ್ತಾರವಾಗಿದೆ. ನದಿಗಳನ್ನು ಮತ್ತು ಸಮುದ್ರದ ಪ್ರವೇಶ ದ್ವಾರಗಳನ್ನು ಒಳಗೊಂಡ ಕಡಲಂಚು, ಸುಮಾರು 6,400 ಕಿಲೊಮೀಟರ್ಗಳಷ್ಟು ದೀರ್ಘವಾಗಿದೆ. ಆ ಸಮಯದಲ್ಲಿ, ನಿಜವಾದ ರಸ್ತೆಗಳು ಅಲ್ಲಿರಲಿಲ್ಲ ಮತ್ತು ಕಾರ್ಯತಃ ಮೋಟಾರು ವಾಹನಗಳು ಅಥವಾ ಸುತ್ತಲೂ ಸಂಚರಿಸಲು ಇತರ ಯಾವುದೇ ಆಧುನಿಕ ವಿಧಾನಗಳಿರಲಿಲ್ಲ. ಆದರೂ, ಸಹೋದರ ಲಿಂಡಾಲ್ ಇಡೀ ದ್ವೀಪವನ್ನು ಹತ್ತು ವರ್ಷಗಳೊಳಗೆ ಆವರಿಸಿದರು ಮತ್ತು ಸಾವಿರಾರು ಪುಸ್ತಕಗಳನ್ನು ಹಂಚಿದರು. ಕರಾವಳಿಯ ಉದ್ದಕ್ಕೂ ದೋಣಿಗಳಲ್ಲಿ ಪ್ರಯಾಣಿಸಿದರು, ಮತ್ತು ಒಳನಾಡುಗಳಲ್ಲಿ ಹೊಲಮನೆಗಳನ್ನು ಅವರು ಸಂದರ್ಶಿಸಿದಾಗ, ಅವರು ಎರಡು ಕುದುರೆಗಳನ್ನು, ಒಂದು ಅವರನ್ನು ಕೊಂಡೊಯ್ಯಲು ಮತ್ತು ಇನ್ನೊಂದನ್ನು ಅವರ ಸಾಹಿತ್ಯ ಮತ್ತು ಅವರ ಸ್ವತ್ತುಗಳನ್ನು ಸಾಗಿಸಲಿಕ್ಕಾಗಿ ಉಪಯೋಗಿಸಿದರು.
ಬಹುಮಟ್ಟಿಗೆ 18 ವರ್ಷಗಳ ವರೆಗೆ, ಐಸ್ಲೆಂಡ್ನಲ್ಲಿ ಸಹೋದರ ಲಿಂಡಾಲ್ ಒಬ್ಬರೇ ಸಾಕ್ಷಿಯಾಗಿದ್ದರು. ಅವರು ಪರಿಶ್ರಮದಿಂದ ಕೆಲಸ ಮಾಡಿದಾಗ್ಯೂ, ಆ ಸಮಯದಲ್ಲಿ ಯಾರೊಬ್ಬರೂ ರಾಜ್ಯಕ್ಕಾಗಿ ಒಂದು ನಿಲುವನ್ನು ತೆಗೆದುಕೊಂಡದ್ದನ್ನು ಅವರು ಕಾಣಲಿಲ್ಲ. ಮಾರ್ಚ್ 25, 1947, ರಲ್ಲಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ನ ಪ್ರಥಮ ಪದವೀಧರರು ಆಗಮಿಸಿದಾಗ, ಅವರ ದೀರ್ಘವಾದ, ಒಂಟಿವಾಸವು ಮುಕ್ತಾಯಗೊಂಡಿತು. ಕೊಯ್ಲಿನ ಕೆಲಸಕ್ಕಾಗಿ ಹೆಚ್ಚು ಕೆಲಸಗಾರರಿಗಾಗಿ ಅವರು ಮಾಡಿದ ಪ್ರಾರ್ಥನೆಗಳನ್ನು ಅಂತಿಮವಾಗಿ ಯೆಹೋವನು ಉತ್ತರಿಸಿದಾಗ ಅವರಿಗಾದ ಆನಂದವನ್ನು ನೀವು ಊಹಿಸಿಕೊಳ್ಳಬಲ್ಲಿರಿ. (ಮತ್ತಾಯ 9:37, 38) ಇಸವಿ 1953 ರಲ್ಲಿ ಕೆನಡಕ್ಕೆ ಹಿಂದಿರುಗುವ ತನಕ ಸಹೋದರ ಲಿಂಡಾಲ್ ಅವರ ಸೇವೆಯನ್ನು ಐಸ್ಲೆಂಡ್ನಲ್ಲಿ ಮುಂದುವರಿಸಿದರು.
ಕೊಯ್ಲಿಗಾಗಿ ಹೆಚ್ಚಿನ ಕೆಲಸಗಾರರು
ಇಸವಿ 1947 ರಲ್ಲಿ ಬಂದ ಮಿಷನೆರಿಗಳು ಡೆನ್ಮಾರ್ಕಿನ ಇಬ್ಬರು ಸಹೋದರರಾಗಿದ್ದರು. ಎರಡು ವರ್ಷಗಳ ಅನಂತರ ಇನ್ನೂ ಇಬ್ಬರು ಮಿಷನೆರಿಗಳು ಆಗಮಿಸಿದರು. ಐಸ್ಲೆಂಡ್ಗೆ ಸ್ಥಳ ಬದಲಾಯಿಸಿದ ಕೆಲವೊಂದು ಸ್ನೇಹಿತರ ಒಟ್ಟಿಗೆ ಸಾರುವ ಕಾರ್ಯವನ್ನು ಅವರು ಮುಂದುವರಿಸಿದಾಗ, ಸಾವಿರಾರು ಪ್ರಕಾಶನಗಳು ಹಂಚಲ್ಪಟ್ಟವು. ಐಸ್ಲೆಂಡ್ನ ಅಧಿಕಾಂಶ ನಿವಾಸಿಗಳು ಹುರುಪಿನ ಓದುಗಾರರಾಗಿದ್ದಾರೆ, ಆದರೆ ಸುವಾರ್ತೆಗೆ ಅನೇಕರು ಪ್ರತಿವರ್ತನೆ ತೋರಿಸಲಿಲ್ಲ. ಇಪ್ಪತ್ತೇಳು ವರ್ಷಗಳ ಸಸಿನೆಡುವಿಕೆ ಮತ್ತು ನೀರುಹೊಯ್ಯುವಿಕೆಯ ಅನಂತರ, ಆ ತಾಳ್ಮೆಯುಳ್ಳ ಸಹೋದರರು ಅವರ ಪರಿಶ್ರಮದ ಫಲಗಳನ್ನು ಕಾಣಲಾರಂಭಿಸಿದರು. 1956 ರಲ್ಲಿ ಏಳು ಮಂದಿ ಹೊಸಬರು ರಾಜ್ಯಕ್ಕಾಗಿ ತಮ್ಮ ನಿಲುವನ್ನು ತೆಗೆದುಕೊಂಡರು ಮತ್ತು ಅವರ ಜೀವಿತಗಳನ್ನು ಯೆಹೋವನಿಗೆ ಸಮರ್ಪಿಸಿಕೊಂಡರು.
ಕಳೆದ ಹತ್ತು ವರ್ಷಗಳಲ್ಲಿ, ರಾಜ್ಯ ಪ್ರಚಾರಕರ ಸಂಖ್ಯೆಯು ಇಮ್ಮಡಿಗಿಂತಲೂ ಅಧಿಕವಾಗಿದೆ. ಈಗ, ಅಲ್ಲಿ ಏಳು ಸಭೆಗಳು ಮತ್ತು ಮೊತ್ತದಲ್ಲಿ 280 ಸುವಾರ್ತಾ ಘೋಷಕರ ಒಂದು ಪ್ರತ್ಯೇಕವಾದ ಗುಂಪು ಇದೆ. ಈ ಸಭೆಗಳನ್ನು ಸಂದರ್ಶಿಸಲು ಈ ದ್ವೀಪದ ಸುತ್ತಲೂ ಒಂದು ಪ್ರವಾಸವನ್ನು ಕೈಗೊಳ್ಳೋಣ.
ರಾಜಧಾನಿಯ ಹತ್ತಿರ
ಆ ಎಲ್ಲಾ ವರ್ಷಗಳಲ್ಲಿ ತಾಳ್ಮೆಯಿಂದ ಮುಂದುವರಿದ ಸಹೋದರ ಮತ್ತು ಸಹೋದರಿಯರು ಹೇರಳವಾಗಿ ಆಶೀರ್ವಾದವನ್ನು ಹೊಂದಿದರು. ಈಗ ಅಭಿವೃದ್ಧಿಯಾಗುತ್ತಿರುವ ಎರಡು ಸಭೆಗಳು ರಾಜಧಾನಿ ಪಟ್ಟಣವಾದ, ರೆಕ್ಯಾವಿಕ್ನಲ್ಲಿವೆ. ಅವರು 1975 ರಲ್ಲಿ ಸಮರ್ಪಿತವಾದ ಬ್ರಾಂಚ್ ಆಫೀಸಿನ ಕಟ್ಟಡದಲ್ಲಿಯೇ ನೆಲೆಸಿರುವ ಒಂದು ಸೊಗಸಾದ ರಾಜ್ಯ ಸಭಾಗೃಹದಲ್ಲಿ ಕೂಟವಾಗಿ ಕೂಡುತ್ತಾರೆ.
ಫ್ರೆಧ್ರಿಕ್ ಮತ್ತು ಎಡ, ಹಿಂದೆ 1956 ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡ ಏಳು ಮಂದಿಯಲ್ಲಿ ಸೇರಿದವರಾಗಿದ್ದರು. ಫ್ರೆಧ್ರಿಕ್ ಹೇಳುವುದು: “ಮಿಷನೆರಿಗಳು ವಾಸಿಸುತ್ತಿದ್ದ ಮೇಲಟ್ಟದ ಒಂದು ಸಣ್ಣ ಕೊಠಡಿಯಲ್ಲಿ ನಾವು ಕೂಟಗಳನ್ನು ಹೊಂದಿರುತ್ತಿದ್ದೆವು. ಅಲ್ಲಿ 12 ಕುರ್ಚಿಗಳಿಗೆ ಮಾತ್ರ ಸ್ಥಳವಿತ್ತು, ಆದರೆ ಕೆಲವೊಮ್ಮೆ, ಸಾಮಾನ್ಯ ಸಂಖ್ಯೆಗಿಂತಲೂ ಹೆಚ್ಚಾಗಿ ಕೂಡಿಬಂದಲ್ಲಿ, ನಾವು ಪಕ್ಕದ ಚಿಕ್ಕದಾದ ಕೊಠಡಿಯನ್ನು ತೆರೆಯುತ್ತಿದ್ದೆವು. ಇಂದು ಎರಡು ಸಭೆಗಳು ರಾಜ್ಯ ಸಭಾಗೃಹವನ್ನು ತುಂಬುತ್ತಿರುವುದು ಎಂತಹ ಒಂದು ವ್ಯತ್ಯಾಸವಾಗಿದೆ!”
ಪ್ರಥಮ ಸಮ್ಮೇಳನಗಳು ಜರುಗಿದಾಗ ಫ್ರೆಧ್ರಿಕ್ ಆಹಾರ ಸೇವಾ ಇಲಾಖೆಯ ಜವಾಬ್ದಾರಿ ಹೊತ್ತವರಾಗಿದ್ದರು. “ಅಧಿಕಾಂಶ ಕೆಲಸವನ್ನು ನಾನು ಸ್ವತಃ ಮಾಡಿದೆನು, ಮತ್ತು ಅದೇ ಸಮಯದಲ್ಲಿ, ಪ್ರತಿ ದಿನ ಕಾರ್ಯಕ್ರಮದಲ್ಲಿ ಮೂರು ಅಥವಾ ನಾಲ್ಕು ಭಾಗಗಳನ್ನು ಹೊಂದಿರುವುದು ನನಗೆ ಅಸಾಮಾನ್ಯವಾದದ್ದಲ್ಲ. ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ, ಒಂದು ಧೂಳುಪಾವುಡ (ಏಪ್ರನ್) ವನ್ನು ನಾನು ಧರಿಸುತ್ತಿದ್ದೆ. ಒಂದು ಭಾಷಣವನ್ನು ಕೊಡುವ ಸಮಯವು ಬಂದಾಗ, ನಾನು ನನ್ನ ಜ್ಯಾಕೆಟನ್ನು ಧರಿಸಿಕೊಳ್ಳುತ್ತಿದ್ದೆ ಮತ್ತು ಸಭಾಂಗಣಕ್ಕೆ ಆತುರದಿಂದ ಹೋಗುತ್ತಿದ್ದೆ. ಕೆಲವು ಸಮಯಗಳಲ್ಲಿ ಸಹೋದರರು ನನಗೆ ಏಪ್ರನನ್ನು ತೆಗೆಯುವಂತೆ ಜ್ಞಾಪಿಸಬೇಕಾಗುತ್ತಿತ್ತು. ಕಾರ್ಯಕ್ರಮದ ಭಾಗಗಳನ್ನು ನಿರ್ವಹಿಸುವುದರಲ್ಲಿ ಪಾಲಿಗರಾಗುವ ಉತ್ತಮ ಹಿರಿಯರನ್ನು ಒಳಗೊಂಡು, ಈಗ 400 ರಿಂದ 500 ಜನರು ಸಮ್ಮೇಳನಗಳನ್ನು ಹಾಜರಾಗುತ್ತಾರೆ. ಆಹಾರ ಸೇವಾ ಇಲಾಖೆಯಲ್ಲಿ ಸಹಾಯಮಾಡುವ ಅನೇಕ ಸಿದ್ಧ ಹಸ್ತಗಳು ಕೂಡ ಅಲ್ಲಿವೆ.”
ರೆಕ್ಯಾವಿಕ್ಗೆ ಅತ್ಯಂತ ಸಮೀಪದಲ್ಲಿರುವ ಸಭೆಯು, ಅಲ್ಲಿಂದ ಸುಮಾರು 50 ಕಿಲೊಮೀಟರ್ಗಳಷ್ಟು ಪಶ್ಚಿಮಕ್ಕಿರುವ ಕೆಫ್ಲಾವಿಕ್ ಆಗಿದೆ. ಬಂಡಿಸವಾರಿಯು ನಮ್ಮನ್ನು ಶಿಲಾ ಪ್ರವಾಹ ಕ್ಷೇತ್ರದ ಮೂಲಕ ಕೊಂಡೊಯ್ಯುತ್ತದೆ. ಐಸ್ಲೆಂಡ್ನ ಸೇಕಡಾ ಹತ್ತು ಭಾಗವು ಶಿಲಾ ಪ್ರವಾಹದಿಂದ ಆವೃತವಾಗಿದೆ. ಈ ಕ್ಷೇತ್ರಗಳಲ್ಲಿ ಪ್ರಥಮವಾಗಿ ಗೋಚರಿಸುವ ಸಸ್ಯಗಳು ಶಿಲಾವಲ್ಕಗಳು ಮತ್ತು ಪಾಚಿಗಳಿಂದ ಒಳಗೊಂಡಿರುತ್ತವೆ, ಆದರೆ ಅತ್ಯಂತ ಪ್ರಾಚೀನ ಶಿಲಾ ಪ್ರವಾಹದ ಕ್ಷೇತ್ರಗಳಲ್ಲಿ, ಕಾಡು ಬೆರಿಹಣ್ಣುಗಳನ್ನು ಮತ್ತು ಹೆಚ್ಚು ಬೆಳವಣಿಗೆಯಿಲ್ಲದ ಕುರುಚಲು ಗಿಡಗಳನ್ನು ನೀವು ಕಾಣುವಿರಿ.
ಕೆಫ್ಲಾವಿಕ್ನಲ್ಲಿರುವ ಸಭೆಯಲ್ಲಿ 19 ಪ್ರಚಾರಕರಿದ್ದಾರೆ ಮತ್ತು ಅದು 1965 ರಲ್ಲಿ ಸ್ಥಾಪಿಸಲ್ಪಟ್ಟಿತು. ಸಮೀಪದಲ್ಲಿಯೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ, ಮತ್ತು ಅಮೆರಿಕದ ಒಂದು ಮಿಲಿಟರಿ ಕಾರ್ಯಾಚರಣೆಯ ಕೇಂದ್ರವೂ ಸಹ ಇಲ್ಲಿದೆ. ಸಾಕ್ಷಿಗಳು ಮನೆಯಿಂದ ಮನೆಯ ಸಾಕ್ಷಿ ಕಾರ್ಯವನ್ನು ಮಾಡಲು ಎಂದಿಗೂ ಶಕ್ತರಾಗದಿದ್ದಾಗ್ಯೂ ಮಿಲಿಟರಿ ಕಾರ್ಯಾಚರಣೆಯ ಕೇಂದ್ರದಲ್ಲಿಯೇ, ಅನೇಕ ಬೈಬಲ್ ಅಭ್ಯಾಸಗಳು ಅಲ್ಲಿ ನಡೆಸಲ್ಪಡುತ್ತಿವೆ, ಮತ್ತು ಹಲವಾರು ವ್ಯಕ್ತಿಗಳು ಪೂರ್ತಿಯಾಗಿ ಸತ್ಯವನ್ನು ಕಲಿತಿದ್ದಾರೆ.
ಇನ್ನೊಂದು ಸಭೆಯು, ರೆಕ್ಯಾವಿಕ್ನಿಂದ 55 ಕಿಲೊಮೀಟರ್ಗಳಷ್ಟು ಪೂರ್ವಕ್ಕಿರುವ ಸೆಲ್ಫಾಸ್ನಲ್ಲಿದೆ. ಐಸ್ಲೆಂಡ್ನ ಅತ್ಯಂತ ದೊಡ್ಡ ಡೈರಿಯನ್ನು ಒಳಗೊಂಡು, ದನಕರುಗಳು ಮತ್ತು ಕುರಿಗಳೊಂದಿಗೆ ಹಸಿರು ಬೆಳೆಯ ವ್ಯವಸಾಯದ ಪ್ರದೇಶವನ್ನು ಇಲ್ಲಿ ನಾವು ಕಾಣುತ್ತೇವೆ. ಪ್ರಯಾಣದಲ್ಲಿ, ನಾವು ಆಕರ್ಷಕ ಚಿತ್ರದಂಥ ಒಂದು ಕಣಿವೆಯಲ್ಲಿರುವ ವೆರಾಜೆರ್ಥಿ ಎಂಬ ಒಂದು ಸಣ್ಣ ಪಟ್ಟಣವನ್ನು ಹಾದು ಹೋಗುತ್ತೇವೆ. ಬಿಸಿನೀರಿನ ಬುಗ್ಗೆಗಳಿಂದ ಹೊರಬರುವ ಕಂಬಾಕಾರದ ಹೊಗೆಯ ರಾಶಿಯು ಇಡೀ ಕಣಿವೆಯಲ್ಲಿಲ್ಲಾ ಪಸರಿಸಿರುವುದನ್ನು ಬಹಳ ದೂರದಿಂದ ನಾವು ಗಮನಿಸಿದೆವು. ಇದು ಆ ದೇಶದಲ್ಲೇ ಅತ್ಯಂತ ಹೆಚ್ಚು ವಿಸ್ತಾರವಾದ ಉಷ್ಣ ಕ್ಷೇತ್ರಗಳಲ್ಲಿ ಒಂದಾಗಿದೆ, ಮತ್ತು ಈ ಸಂಪನ್ಮೂಲಗಳನ್ನು ಉಪಯೋಗಿಸಿಕೊಳ್ಳಲು ಮತ್ತು ಕೃತಕ ಶಾಕದ ಟೊಮೆಟೊಗಳು, ಸೌತೆಕಾಯಿಗಳು, ಮತ್ತು ವಿವಿಧ ರೀತಿಯ ಹೂವುಗಳನ್ನು ಒದಗಿಸಲಿಕ್ಕಾಗಿ, ಸಸ್ಯಗಳನ್ನು ಬೆಳೆಸುವ ಅನೇಕ ಗಾಜಿನ ಮನೆಗಳನ್ನು ಕಟ್ಟಲಾಗಿದೆ.
ಈ ಕ್ಷೇತ್ರದಲ್ಲಿ ಒಂದು ಚಿಕ್ಕದಾದ ಆದರೆ 19 ಮಂದಿ ರಾಜ್ಯ ಪ್ರಚಾರಕರಿಂದ ಕೂಡಿದ ಒಂದು ಕ್ರಿಯಾಶೀಲ ಸಭೆಯು ಅಲ್ಲಿದೆ. ಸುಮಾರು 1988 ರಲ್ಲಿ ಸಭೆಯು ಸ್ಥಾಪಿಸಲ್ಪಟ್ಟ ಸಮಯದಿಂದ ಈ ಚಿಕ್ಕ ಗುಂಪನ್ನು ಬೆಂಬಲಿಸಲಿಕ್ಕಾಗಿ ಸಿಕ್ಉರ್ಥರ್ ಮತ್ತು ಗ್ವೊತ್ರೂನ್ ಸ್ವಾವಾ, ರೆಕ್ಯಾವಿಕ್ನಿಂದ ಇಲ್ಲಿಗೆ ಪ್ರಯಾಣಿಸಿದ್ದರು. ಸಿಕ್ಉರ್ಥರ್ ಒಬ್ಬರೇ ಇಲ್ಲಿನ ಹಿರಿಯರಾಗಿದ್ದಾರೆ. ಬಹುಮಟ್ಟಿಗೆ ಹತ್ತು ವರ್ಷಗಳಿಗೆ ಹಿಂದೆ ಅವರು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗುವುದಕ್ಕೆ ಮೊದಲು ಅವರು ಡ್ರಮ್ಮುಗಳನ್ನು ವಿವಿಧ ವಾದ್ಯ ಗುಂಪುಗಳಲ್ಲಿ ಬಾರಿಸುವ ಒಬ್ಬ ಪ್ರಖ್ಯಾತ ಸಂಗೀತಗಾರರಾಗಿದ್ದರು. ಇಂದು, ಒಬ್ಬ ಕಿಟಕಿಗಳನ್ನು ಚೊಕ್ಕಟಗೊಳಿಸುವವರಾಗಿ ಕೆಲಸ ಮಾಡಿ ತಮ್ಮ ಜೀವನವನ್ನು ಸಾಗಿಸುತ್ತಾರೆ ಮತ್ತು ಸಂಗೀತವನ್ನು ಸಹ ಅವರು ಕಲಿಸುತ್ತಾರೆ. ಮನೋರಂಜಕರೋಪಾದಿ ಅವರ ಜೀವನ ಶೈಲಿಯು ಅಮಲೌಷಧದ ದುರುಪಯೋಗ, ಕುಡಿಕತನ, ಮತ್ತು ಒಡಕು ವಿವಾಹದಂತಹ ಅನೇಕ ಸಮಸ್ಯೆಗಳನ್ನು ತಂದಿತು. ಈಗ, ಜೀವಿತದಲ್ಲಿ ಒಂದು ಉದ್ದೇಶವನ್ನು ಹೊಂದಿರುವುದು ಮತ್ತು ಯೆಹೋವನನ್ನು ಸೇವಿಸುತ್ತಿರುವುದಕ್ಕೆ ಅವರೆಷ್ಟು ಸಂತೃಪ್ತರಾಗಿದ್ದಾರೆ!
ಪೂರ್ವದ ಎಲೆಯ್ಲ ಕಡೆಗೆ
ಸೆಲ್ಫಾಸ್ ನ್ನು ಬಿಟ್ಟು, ನಾವು ಅಧಿಕಾಂಶ ಕಿರಿದಾದ ಮತ್ತು ಒರಟಾದ ಮರಳು ಮತ್ತು ಕಲ್ಲಿನ ರಸ್ತೆಗಳ ಮೂಲಕ 680 ಕಿಲೊಮೀಟರ್ ದೂರದ ಪ್ರಯಾಣವನ್ನು ಪ್ರಾರಂಭಿಸಿದೆವು. ನಾವು ಮುಂದಿನ ಪೂರ್ವ ಕರಾವಳಿಯ, ರೆಥೊರ್ಫ್ಯೂರ್ಥೊರ್ ಪಟ್ಟಣದಲ್ಲಿರುವ ಸಭೆಯ ಕಡೆಗೆ ಹೋದೆವು. ಅರ್ಧ ಗಂಟೆಯೊಳಗೆ, ಐಸ್ಲೆಂಡ್ನ ಅತ್ಯಂತ ಹೆಚ್ಚು ಪ್ರಸಿದ್ಧ ಜ್ವಾಲಾಮುಖಿಯಾದ ಹೆಕ್ಲಾವನ್ನು ಕಂಡೆವು. ಈ ಶತಮಾನದಲ್ಲಿ ಅದು ನಾಲ್ಕು ಬಾರಿ ಹೊರಚಿಮ್ಮಿತು.
ಜ್ವಾಲಾಮುಖಿಯ ಒಂದು ನಾಟಕೀಯವಾದ ಹೊರಚಿಮ್ಮುವಿಕೆಯು 1973 ರಲ್ಲಿ ವೆಸ್ಟ್ಮಾನಿಯಾರ್ನಲ್ಲಿ (ವೆಸ್ಟ್ಮನ್ ದ್ವೀಪಗಳು) ಸಂಭವಿಸಿತು. ಸುಮಾರು 5,300 ಮಂದಿಯ ಇಡೀ ಜನಸಂಖ್ಯೆಯು ಕೇವಲ ಕೆಲವೇ ತಾಸುಗಳಲ್ಲಿ ಮುಖ್ಯ ಭೂಭಾಗಕ್ಕೆ ಸುರಕ್ಷಿತವಾಗಿ ವರ್ಗಾಯಿಸಲ್ಪಟ್ಟಿತು. ಪಟ್ಟಣದ ಪುನಃ ಸ್ಥಾಪನೆಯ ಅನಂತರ, ಅಧಿಕಾಂಶ ನಿವಾಸಿಗಳು ಕ್ರಮೇಣ ಹಿಂದಿರುಗಿದರು. ಈಗ ಅಲ್ಲಿ ಇಬ್ಬರು ಸಾಕ್ಷಿಗಳು ವಾಸಿಸುತ್ತಾರೆ ಮತ್ತು ಈ ಚಿಕ್ಕ ಸಮುದಾಯದ ಜನರಿಗೆ ಸುವಾರ್ತೆಯನ್ನು ಸಾರುತ್ತಾರೆ. ಇನ್ನೆರಡು ತಾಸುಗಳಷ್ಟು ಪ್ರಯಾಣಿಸುವಾಗ, ಸುಮಾರು 8,300 ಚದರ ಕಿಲೊಮೀಟರ್ಗಳಷ್ಟು ಐಸ್ಲೆಂಡಿನ ನೀರ್ಗಲ್ಲ ನದಿಗಳಲ್ಲಿ ಅತ್ಯಂತ ದೊಡ್ಡದಾದ ವೈಭವಯುಕ್ತ ವಾಟ್ನಾಯೆಕೂಟೆಲ್ನ ಒಂದು ಸುಂದರವಾದ ನೋಟವನ್ನು ನೋಡಿದೆವು. ದಾರಿಯುದ್ದಕ್ಕೂ, ನಾವು ಅನೇಕ ಸುಂದರ ಜಲಪಾತಗಳು ಮತ್ತು ನದಿಗಳನ್ನು ಸಹ ಹಾದು ಹೋಗುತ್ತೇವೆ.
ಸುಮಾರು ಹತ್ತು ತಾಸುಗಳನ್ನು ಮಾರ್ಗದಲ್ಲಿ ಕಳೆದ ಅನಂತರ, ನಾವು ನಮ್ಮ ಗಮ್ಯಸ್ಥಾನಕ್ಕೆ ತಲುಪುತ್ತೇವೆ. ರೆಥೊರ್ಫ್ಯೂರ್ಥೊರ್ನಲ್ಲಿರುವ ಐಸ್ಲೆಂಡ್ನ ಅತ್ಯಂತ ಕಿರಿಯ ಸಭೆಯ 12 ಪ್ರಚಾರಕರನ್ನು ನಾವು ಭೇಟಿಯಾಗುತ್ತೇವೆ. 1988ರ ಅಂತ್ಯಭಾಗದಲ್ಲಿ ಒಂದು ಮಿಷನೆರಿ ಗೃಹವು ಸ್ಥಾಪಿಸಲ್ಪಡುವ ವರೆಗೆ ಈ ಕ್ಷೇತ್ರದಲ್ಲಿ ಸಾಕ್ಷಿಗಳು ವಾಸಿಸತ್ತಿರಲಿಲ್ಲ. ಐಸ್ಲೆಂಡ್ನಲ್ಲಿ 1963 ರಿಂದ ಸೇವೆ ಸಲ್ಲಿಸುತ್ತಿದ್ದ, ಚೆಲ್ ಮತ್ತು ಐರಿಸ್ ಎಂಬ ಸ್ವೀಡನ್ ದೇಶದ ಮಿಷನೆರಿ ದಂಪತಿಗಳು, 15,000 ಜನರಿರುವ ಈ ಗ್ರಾಮೀಣ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ನೇಮಿಸಲ್ಪಟ್ಟರು. ಸುಮಾರು 500 ಕಿಲೊಮೀಟರ್ಗಳಷ್ಟು ವಿಸ್ತರಿಸಿರುವ, ಕಡಲಂಚಿನ ಉದ್ದಕ್ಕೂ ಇರುವ ಮೀನು ಹಿಡಿಯುವ ಚಿಕ್ಕ ಹಳ್ಳಿಗಳಲ್ಲಿ ಅನೇಕರು ವಾಸಿಸುತ್ತಾರೆ.
ಚೆಲ್ ವಿವರಿಸುವುದು: “ಐಸ್ಲೆಂಡ್ನ ಈ ಭಾಗದಲ್ಲಿ ರಾಜ್ಯ ಕಾರ್ಯವನ್ನು ಯೆಹೋವನು ಹೇರಳವಾಗಿ ಆಶೀರ್ವದಿಸಿದನೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಜನವರಿ 1, 1993 ರಲ್ಲಿ ಒಂದು ಸಭೆಯು ರಚಿಸಲ್ಪಟ್ಟಿತು, ಮತ್ತು ಉತ್ತಮವಾಗಿ ಪ್ರಗತಿಯನ್ನು ಮಾಡುತ್ತಿರುವ ಅನೇಕ ವ್ಯಕ್ತಿಗಳೊಂದಿಗೆ ಅನೇಕ ಒಳ್ಳೆಯ ಬೈಬಲ್ ಅಭ್ಯಾಸಗಳನ್ನು ನಾವು ನಡಿಸುತ್ತಿದ್ದೇವೆ. ಸಹೋದರ ಲಿಂಡಾಲ್ ಕುದುರೆಯ ಮೇಲೆ ಪ್ರಯಾಣಿಸಿದಂದಿನಿಂದ ವಾಹನ ಸೌಕರ್ಯದ ಮಾಧ್ಯಮಗಳು ಬದಲಾಗಿರುವುದಾದರೂ, ನಾಲ್ಕು ಚಕ್ರಗಳುಳ್ಳ ವಾಹನವಾದ ಜೀಪೊಂದರಲ್ಲಿ ಸಹ, ಚಳಿಗಾಲದ ತಿಂಗಳುಗಳ ಕತ್ತಲಿನ ಸಮಯದಲ್ಲಿ ಹಿಮದ ರಸ್ತೆಗಳಲ್ಲಿ ಪರ್ವತಗಳ ಮೇಲೆ ವಾಹನ ಸಂಚಾರವು ಯಾವಾಗಲೂ ಸುಲಭವಾಗಿಲ್ಲ. ಒಮ್ಮೆ, ಹಿಮಮಯ ರಸ್ತೆಯಲ್ಲಿ ಜೀಪು ದೂಡಲ್ಪಟ್ಟಿತು ಮತ್ತು ಒಂದು ಇಳಿಜಾರಿನಲ್ಲಿ ಎರಡು ಅಥವಾ ಮೂರು ಬಾರಿ ಉರುಳಿತು. ಯಾವುದೇ ಹಾನಿಯಾಗದೆ ತಪ್ಪಿಸಿಕೊಂಡದ್ದಕ್ಕಾಗಿ ನಾವೆಷ್ಟು ಸಂತೋಷಿತರು!”
ಐಸ್ಲೆಂಡ್ನಲ್ಲಿ 30 ವರ್ಷಗಳನ್ನು ಕಳೆದ ಅನಂತರ, ಐರಿಸ್ ಹೇಳುವುದು: “ಗತಿಸಿದ ವರ್ಷಗಳಲ್ಲಿ ಇತರ ದೇಶಗಳಿಂದ ಅನೇಕರು ಸಹಾಯಮಾಡಲು ಬಂದಿದ್ದಾರೆ. ಅವರಲ್ಲಿ ಹೆಚ್ಚಿನವರು ಅನೇಕ ಕಾರಣಗಳಿಂದ ಹಿಂದಿರುಗಬೇಕಾಗಿ ಬಂದರೂ, ನಿಸ್ಸಂದೇಹವಾಗಿ ಅವರು ನೆಡುವಿಕೆ ಮತ್ತು ನೀರು ಹೊಯ್ಯುವಿಕೆಯ ಕೆಲಸದಲ್ಲಿ ಹೆಚ್ಚಾಗಿ ಪಾಲಿಗರಾಗಿದ್ದಾರೆ. ಕೊಯ್ಲಿನ ಒಟ್ಟುಗೂಡಿಸುವಿಕೆಯನ್ನು ಕಾಣುವ ಸುಯೋಗವು ಈಗ ನಮಗಿರುವುದರಿಂದ, ನಾವು ಇಲ್ಲಿ ನಿಲ್ಲಲು ಶಕ್ತರಾದುದಕ್ಕಾಗಿ ಸಂತೋಷಿಸುತ್ತೇವೆ. ಯೆಹೋವನು ತನ್ನ ಕೆಲಸವನ್ನು ಇಲ್ಲಿ ಸಹ ತರ್ವೆಗೊಳಿಸುತ್ತಿದ್ದಾನೆ.”
ಹೊಸಬರು ಅವರ ಸಹೋದ್ಯೋಗಿಗಳಿಗೆ ಸಾಕ್ಷಿ ನೀಡುವುದರಿಂದ ಹೆಚ್ಚಿನ ಅಭಿವೃದ್ಧಿಯು ಸಂಭವಿಸುತ್ತಿದೆ. ಆ್ಯಟ್ಲಿ ಮಿಷನೆರಿಗಳಿಂದ ಸತ್ಯವನ್ನು ಕಲಿತುಕೊಂಡನು ಮತ್ತು ಅವನು ಕೆಲಸಮಾಡುತ್ತಿದ್ದ ಕಟ್ಟಡ ನಿರ್ಮಾಣ ಕಂಪನಿಯಲ್ಲಿರುವ ಇತರರೊಂದಿಗೆ ಇದರ ಕುರಿತು ಮಾತಾಡಲಾರಂಭಿಸಿದನು. ಅವನ ಸಹೋದ್ಯೋಗಿಗಳಲ್ಲಿ ಇಬ್ಬರು ಈಗ ಸಾರುವ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ, ಮತ್ತು ಒಬ್ಬನು ಅವನ ಹೆಂಡತಿಯೊಂದಿಗೆ 1992ರ ನವಂಬರದಲ್ಲಿ ದೀಕ್ಷಾಸ್ನಾನ ಪಡೆದುಕೊಂಡನು. ಮೂರನೇ ಸಹೋದ್ಯೋಗಿಯೊಬ್ಬನು ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸುತ್ತಿದ್ದಾನೆ.
ಉತ್ತರದ ಮಾರ್ಗವನ್ನು ಹಿಡಿಯುವುದು
ರೆಥೊರ್ಫ್ಯೂರ್ಥೊರನ್ನು ಬಿಟ್ಟು, ನಾವು ಪಶ್ಚಿಮದ ಕಡೆಗೆ ಅಭಿಮುಖವಾದೆವು. ಮುಂದಿನ ಸಭೆಯು 300 ಕಿಲೊಮೀಟರ್ಗಳಷ್ಟು ದೂರ, ಆಕ್ಅರಾರಿ ಪಟ್ಟಣದಲ್ಲಿದೆ. 1950 ರುಗಳ ಆರಂಭದಲ್ಲಿಯೇ ಅಲ್ಲಿ ಕೆಲಸ ಮಾಡಲಿಕ್ಕಾಗಿ ಪೂರ್ಣಸಮಯದ ವಿಶೇಷ ಪಯನೀಯರರು ನೇಮಿಸಲ್ಪಟ್ಟಿದ್ದರು. ಅತಿ ಆರಂಭದಲ್ಲಿಯೇ, ಸಾಕ್ಷಿ ಕಾರ್ಯವು ಕೆಲವು ವೈದಿಕರಿಂದ ತೀವ್ರ ವಿರೋಧವನ್ನು ಅನುಭವಿಸಿತು. ಜನರನ್ನು ಯೆಹೋವನ ಸಾಕ್ಷಿಗಳ ವಿರುದ್ಧ ಎಚ್ಚರಿಸಲಿಕ್ಕಾಗಿ ಸ್ಥಳೀಯ ವಾರ್ತಾಪತ್ರಿಕೆಗಳಲ್ಲಿ ಲೇಖನಗಳು ಪ್ರಕಾಶಿಸಲ್ಪಟ್ಟವು. ಪಟ್ಟಣದ ಜನರಲ್ಲಿ ಅನೇಕರು ಪ್ರೇತಾರಾಧನೆಯಲ್ಲಿ ಒಳಗೂಡಿದ್ದರು. ಆದರೆ ಇಂದು 35 ರಾಜ್ಯ ಪ್ರಚಾರಕರಿಂದ ಕೂಡಿದ ಒಂದು ಕ್ರಿಯಾಶೀಲ ಮತ್ತು ಪ್ರೀತಿ ಪಾತ್ರವಾದ ಸಭೆಯು ಅಲ್ಲಿದೆ, ಅನೇಕ ಪಯನೀಯರರ ಮತ್ತು ಮಿಷನೆರಿಗಳ ಸಹನೆ ಮತ್ತು ತಾಳ್ಮೆಗೆ ಧನ್ಯವಾದಗಳು.
ಇಲ್ಲಿರುವ ಹಿರಿಯರಲ್ಲಿ ಒಬ್ಬರಾದ ಫ್ರೆಧ್ರಿಕ್, ಒಬ್ಬ ಬೆಸ್ತರಾಗಿದ್ದರು. ಇಸವಿ 1982 ರಲ್ಲಿ ಜಿಲ್ಲಾ ಅಧಿವೇಶನವನ್ನು ಹಾಜರಾದ ಬಳಿಕ, ಅವರು ಏನನ್ನು ಕಲಿಯುತ್ತಿದ್ದರೊ ಅದು ಸತ್ಯವೆಂದು ಮನಗಂಡರು. ಅವರ ಕುಟುಂಬಕ್ಕೆ, ಸ್ನೇಹಿತರಿಗೆ, ಮತ್ತು ಸಹೋದ್ಯೋಗಿಗಳಿಗೆ ಸಾಕ್ಷಿನೀಡುವ ನಿರ್ಧಾರದಿಂದ ಅವರು ಆಕ್ಅರಾರಿಗೆ ಹಿಂದಿರುಗಿದರು. ಸಭೆಯೊಂದಿಗೆ ಹೆಚ್ಚಿನ ಸಮಯವನ್ನು ಹೊಂದಿರಲಿಕ್ಕಾಗಿ ಫ್ರೆಧ್ರಿಕ್ ತಮ್ಮ ಬೆಸ್ತನ ಕಸುಬನ್ನು ಬಿಟ್ಟುಬಿಡಲು ಯೋಜನೆಗಳನ್ನು ಮಾಡಿದರು. ಅವರು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಲಿರುವುದರಿಂದ, ಅವರಿಬ್ಬರು ವಿವಾಹವಾಗುವ ವರೆಗೆ ಒಟ್ಟಿಗೆ ಜೀವನ ನಡೆಸಲು ಇನ್ನು ಮುಂದೆ ಸಾಧ್ಯವಿಲ್ಲವೆಂದು ಅವರ ಸ್ನೇಹಿತೆ ಹೆಲ್ಗಳಿಗೆ ಅವರು ಹೇಳಿದರು. ‘ಅವಿಶ್ವಾಸಿಯನ್ನು ವಿವಾಹವಾಗಲು’ ಅವರು ಒಪ್ಪದ ಕಾರಣ ಅವಳು ಸಹ ಬೈಬಲನ್ನು ಅಭ್ಯಾಸಿಸುವಂತೆ ಫ್ರೆಧ್ರಿಕ್ ಅಪೇಕ್ಷಿಸಿದರು. (1 ಕೊರಿಂಥ 7:39, NW) ಅವರ ಆಶ್ಚರ್ಯಕ್ಕೆ ಹೆಲ್ಗ ಅಭ್ಯಾಸಿಸಲು ಆರಂಭಿಸಿದಳು. 1983ರ ಫೆಬ್ರವರಿಯಲ್ಲಿ ಅವರು ವಿವಾಹವಾದರು ಮತ್ತು ತರುವಾಯ ಬೇಗನೆ ದೀಕ್ಷಾಸ್ನಾನವನ್ನು ಪಡಕೊಂಡರು. ಸಕಾಲದಲ್ಲಿ ಫ್ರೆಧ್ರಿಕ್ರ ತಾಯಿ ಮತ್ತು ತಂಗಿ ಸಹ ಸತ್ಯವನ್ನು ಅಂಗೀಕರಿಸಿದರು.
ಮೂರು ಪರ್ವತ ಶ್ರೇಣಿಗಳ ಮೇಲೆ ಮತ್ತು ಅನೇಕ ಸುಂದರವಾದ ಕಣಿವೆಗಳ ಮೂಲಕ, ಆಕ್ಅರಾರಿಯಿಂದ 350 ಕಿಲೊಮೀಟರ್ ದೂರದಲ್ಲಿರುವ ಆಕ್ರೆನ್ಸ್ ನಮ್ಮ ಕೊನೆಯ ನಿಲುಗಡೆಯಾಗಿದೆ. ನಾವು ಮಾರ್ಗದಲ್ಲಿ ಪ್ರಯಾಣಿಸಿದ ಅಧಿಕಾಂಶ ಒರಟಾದ ಮತ್ತು ಕಿರಿದಾದ ಮರಳು ಮತ್ತು ಕಲ್ಲಿನ ರಸ್ತೆಗಳಿಗೆ ಹೋಲಿಸುವಾಗ, ಇಲ್ಲಿನ ರಸ್ತೆಯು ನೆಲಗಟ್ಟು ಮಾಡಲ್ಪಟ್ಟು, ಇದೊಂದು ಹಿತಕರವಾದ ವಾಹನ ಸಂಚಾರವನ್ನಾಗಿ ಮಾಡಿತ್ತು. ಆಕ್ರೆನ್ಸ್ನಲ್ಲಿ, ಐಸ್ಲೆಂಡ್ನಲ್ಲೇ ಅತ್ಯಂತ ಚಿಕ್ಕದಾದ ಸಭೆಯನ್ನು ನಾವು ಹೊಂದಿದ್ದೇವೆ—ಐದು ಪ್ರಚಾರಕರು, ಅವರಲ್ಲಿ ಇಬ್ಬರು ಹಿರಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕೆದೋನ್ಯದ ಕರೆಗೆ ಕಿವಿಗೊಟ್ಟಂಥ ಎರಡು ಕುಟುಂಬಗಳನ್ನು ಅವರು ಒಳಗೊಂಡಿದ್ದಾರೆ, ರೆಕ್ಯಾವಿಕ್ನಲ್ಲಿರುವ ದೊಡ್ಡದಾದ ಸಭೆಗಳಲ್ಲಿ ಒಂದನ್ನು ಬಿಟ್ಟು ಬಂದರು ಮತ್ತು ಎಲ್ಲಿ ಅಗತ್ಯವು ಹೆಚ್ಚಾಗಿದೆಯೋ ಅಲ್ಲಿ ಸೇವೆ ಸಲ್ಲಿಸಲಿಕ್ಕಾಗಿ ಈ ಚಿಕ್ಕ ಪಟ್ಟಣದಲ್ಲಿ ನೆಲೆಸಿದರು. (ಅ. ಕೃತ್ಯಗಳು 16:9, 10) ಯೆಹೋವನು ವಿಷಯಗಳನ್ನು ಬೆಳೆಯುವಂತೆ ಮಾಡುವನೆಂಬ ಭರವಸೆಯುಳ್ಳವರಾಗಿದ್ದು, ಎರಡು ವರ್ಷಗಳಿಗಿಂತಲೂ ಹೆಚ್ಚಿನ ಸಮಯದ ತನಕ, ಈ ಟೆರಿಟೊರಿಯಲ್ಲಿ ಸುವಾರ್ತೆಯನ್ನು ಅವರು ತಾಳ್ಮೆಯಿಂದ ಸಾರಿದ್ದಾರೆ.—1 ಕೊರಿಂಥದವರಿಗೆ 3:6.
ಅಭಿವೃದ್ಧಿಗಾಗಿರುವ ಉಜ್ವಲ ಪ್ರತೀಕ್ಷೆಗಳು
ಭೂಮಿಯ ಶಾಖದ ಶಕ್ತಿ ಮತ್ತು ಕೃತಕ ಮಿಂಚಿನಿಂದ ಬಿಸಿ ಮಾಡಲ್ಪಟ್ಟ ಗಾಜಿನ ಮನೆಗಳಿಂದ, ಐಸ್ಲೆಂಡಿನ ಬೇಸಾಯಗಾರರು ಭಾರಿ ಬಗೆ ಬಗೆಯ ಹಣ್ಣುಗಳನ್ನು, ತರಕಾರಿಗಳನ್ನು, ಮತ್ತು ಇತರ ಸಸ್ಯಗಳನ್ನು ಬೆಳೆಸಲು ಶಕ್ತರಾಗಿದ್ದಾರೆ. ತದ್ರೀತಿಯಲ್ಲಿ, ಸಾಕ್ಷಿಗಳು, ಆತ್ಮಿಕ ಸತ್ಯ, ಸೌಮ್ಯವಾಗಿ ಮನವೊಪ್ಪಿರುವ ಪ್ರವೃತ್ತಿ, ಮತ್ತು ಯೆಹೋವನ ಪವಿತ್ರಾತ್ಮದ ಆಶೀರ್ವಾದದಿಂದ ಸನ್ನದ್ಧರಾಗಿ, ಐಸ್ಲೆಂಡ್ನ ಕ್ಷೇತ್ರದಲ್ಲಿ ಆಶ್ಚರ್ಯಕರವಾದ ಫಲಿತಾಂಶಗಳನ್ನು ಅನುಭವಿಸುತ್ತಿದ್ದಾರೆ.
ಈ ವರ್ಷ 542 ವ್ಯಕ್ತಿಗಳು ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಹಾಜರಾಗಿದ್ದರು, ಮತ್ತು ಸುಮಾರು 200 ಮನೆ ಬೈಬಲ್ ಅಭ್ಯಾಸಗಳನ್ನು ಈಗ ನಡೆಸಲಾಗುತ್ತಿದೆ. ಇದಕ್ಕೆ ಕೂಡಿಸಿ ನೇಮಕ ಹೊಂದಿರದ ಟೆರಿಟೊರಿಗಳಲ್ಲಿ ಸೇವೆ ಸಲ್ಲಿಸಲಿಕ್ಕಾಗಿ ಕೊಡಲ್ಪಟ್ಟ ಪ್ರೋತ್ಸಾಹಕ್ಕೆ ತೋರಿಸಲ್ಪಟ್ಟ ಸಕಾರಾತ್ಮಕವಾದ ಪ್ರತಿಕ್ರಿಯೆಯು, ಈ ವಿಸ್ತಾರವಾದ ದ್ವೀಪದಲ್ಲಿರುವ ಕುರಿಗಳಂಥ ಎಲ್ಲಾ ಜನರು ಒಳ್ಳೇ ಕುರುಬನಾದ, ಯೇಸು ಕ್ರಿಸ್ತನ ಸರ್ವವನ್ನು ಕೇಳುವರೆಂಬ ಭರವಸೆಯನ್ನು ನಮಗೆ ಕೊಡುತ್ತದೆ. (ಯೋಹಾನ 10:14-16) ಕಳೆದ 64 ವರ್ಷಗಳಲ್ಲಿ ಹಿಮ ಮತ್ತು ಬೆಂಕಿಯ ದೇಶದಲ್ಲಿ ಸುವಾರ್ತೆಯನ್ನು ಸಾರುವುದರಲ್ಲಿ ಅಷ್ಟೊಂದು ತಾಳ್ಮೆ ಮತ್ತು ಸಹನೆಯನ್ನು ತೋರಿಸಿದ ನಂಬಿಗಸ್ತ ರಾಜ್ಯ ಘೋಷಕರೆಲ್ಲರಿಗೆ ಎಂತಹ ಒಂದು ಆನಂದಭರಿತವಾದ ಅಂತ್ಯಫಲವಿದು!
[ಪುಟ 24ರಲ್ಲಿರುವಚಿತ್ರ]
(For fully formatted text, see publication)
ಆಕ್ಅರಾರಿ
ಆಕ್ರೆನ್ಸ್
ಕೆಫ್ಲಾವಿಕ್
ಸೆಲ್ಫಾಸ್
ವೆಸ್ಟ್ಮಾನಿಯಾರ್
ರೆಥೊರ್ಫ್ಯೂರ್ಥೊರ್
ಹೆಕ್ಲಾ
ಗೈಜರ್
ವಾಟ್ನಾಯೆಕೂಟೆಲ್
ರೆಕ್ಯಾವಿಕ್
[ಕೃಪೆ]
Based on map by Jean-Pierre Biard