ಅಸ್ವಸ್ಥರನ್ನೂ ವೃದ್ಧರನ್ನೂ ಯೆಹೋವನು ನೆನಪಿಸುತ್ತಾನೆ
“ವಿಪತ್ಕಾಲ” ವನ್ನು ಎದುರಿಸಲಿಕ್ಕಿರುವುದು ಅತ್ಯಂತ ಕಷ್ಟಕರವಾಗಿರಬಲ್ಲದು. (ಕೀರ್ತನೆ 37:18, 19) ಅಂಥ ಒಂದು ಸಮಯವು ಮುದೀ ಪ್ರಾಯ ಮತ್ತು ಅದರೊಂದಿಗೆ ಬರುವ ಬಲಹೀನತೆಗಳಲ್ಲಿ ತಲೆದೋರಬಹುದು. ಕೆಲವರು ವಿಪತ್ಕಾಲವನ್ನು ಪ್ರವೇಶಿಸುವುದು ಗುರುತರವಾದ, ದೀರ್ಘಾವಧಿಯ ಕಾಯಿಲೆಯನ್ನು ಅನುಭವಿಸುವಾಗ. ಅವರ ಅಸ್ವಸ್ಥವು ಅವರೆಲ್ಲಾ ಯೋಚನೆಗಳನ್ನು ಮತ್ತು ಕ್ರಿಯೆಗಳನ್ನು ಆಳುತ್ತಾ, ಅವರ ಜೀವಿತದ ಮೇಲ್ವಿಚಾರವನ್ನು ತಕ್ಕೊಂಡಿದೆಯೋ ಎಂಬಂತೆ ಅವರಿಗೆ ಭಾಸವಾಗಬಹುದು.
ಆದರೆ ಯೆಹೋವನು ತನ್ನ ನೇತ್ರಗಳನ್ನು ಅವನ ಎಲ್ಲಾ ಸೇವಕರ ಮೇಲಿಡುತ್ತಾನೆ ಎಂದು ನೆನಪಿಡುವುದು ಅಭಯದಾಯಕವು. ವೃದ್ಧಾಪ್ಯ, ಅಸ್ವಸ್ಥ, ಯಾ ಇತರ ಸಂಕಷ್ಟದ ಸನ್ನಿವೇಶಗಳ ಮಧ್ಯೆಯೂ ಆತನ ಭಯಭಕ್ತಿಯ ಸೇವಕರು ನಿಷ್ಠೆಯನ್ನೂ ವಿವೇಕವನ್ನೂ ತೋರಿಸುತ್ತಾ ಇರುವಾಗ ಆತನ ಹೃದಯವು ಸಂತೋಷಗೊಳ್ಳುತ್ತದೆ. (2 ಪೂರ್ವಕಾಲವೃತ್ತಾಂತ 16:9ಎ; ಜ್ಞಾನೋಕ್ತಿ 27:11) ರಾಜ ದಾವೀದನು ನಮಗೆ ಆಶ್ವಾಸನೆ ಕೊಡುವುದು: “ಯೆಹೋವನಿಗೆ ಮೊರೆಯಿಡುವವರು ಯಥಾರ್ಥವಾಗಿ ಮೊರೆಯಿಡುವದಾದರೆ, ಆತನು ಹತ್ತಿರವಾಗಿಯೇ ಇದ್ದಾನೆ. . . . ಅವರ ಕೂಗನ್ನು ಕೇಳು” ತ್ತಾನೆ. ಹೌದು, ಅವರ ಹೋರಾಟದ ಅರಿವು ಆತನಿಗಿದೆ. ತನ್ನ ಆತ್ಮದಿಂದ ಆತನು ಅವರನ್ನು ಬಲಪಡಿಸುತ್ತಾನೆ. ಮತ್ತು “ರಕ್ಷಿಸುತ್ತಾನೆ.” ಅವರನ್ನು ಆತನು ನೆನಪು ಮಾಡುತ್ತಾನೆ ಮತ್ತು ತಾಳಿಕೊಳ್ಳುವಂತೆ ಸಹಾಯಮಾಡುತ್ತಾನೆ. (ಕೀರ್ತನೆ 145:18, 19) ಆದರೆ ನಮ್ಮ ವಿಷಯದಲ್ಲೇನು? ಯೆಹೋವನಂತೆ ನಾವು, ಅಸ್ವಸ್ಥರನ್ನೂ ವೃದ್ಧರನ್ನೂ ನೆನಪಿಸುತ್ತೇವೋ?
ಅನಾರೋಗ್ಯ ಅಥವಾ ವೃದ್ಧಾಪ್ಯದಿಂದಾಗಿ ಬಲಹೀನತೆಗಳು ಈ ಪ್ರಸ್ತುತ ವ್ಯವಸ್ಥೆಯಲ್ಲಿ ಜೀವಿತದ ವಾಸ್ತವಿಕತೆಗಳಾಗಿವೆ. ಭೂಮಿಗಾಗಿ ಮತ್ತು ಮಾನವ ಕುಲಕ್ಕಾಗಿ ತನ್ನ ಉದ್ದೇಶವನ್ನು ಯೆಹೋವನು ಸಿದ್ಧಿಗೆ ತರುವ ತನಕ ಯಾವುದರೊಂದಿಗೆ ನಾವು ಹೆಣಗಾಡಲೇಬೇಕೋ ಆ ವಾಸ್ತವಿಕತೆಗಳು ಅವಾಗಿವೆ. ಇಂದು ಅಧಿಕಾಧಿಕ ಜನರು ತೀರ ಮುದಿ ಪ್ರಾಯದ ತನಕ ಜೀವಿಸುತ್ತಾರಾದ್ದರಿಂದ, ಅಂಥವರ ಬಲಹೀನತೆಗಳ ಕುರಿತು ಅಧಿಕ ಸಂಖ್ಯಾತರು ಪರಿಚಿತರಾಗಿದ್ದಾರೆ. ಅದಲ್ಲದೆ, ಅನೇಕರು ಇನ್ನೂ ಯುವಕರಿರುವಾಗಲೇ, ಜೀವ-ನಷ್ಟದ ಅಥವಾ ಶಕ್ತಿಗುಂದಿಸುವ ಅಪಘಾತಗಳಿಂದ ಅಥವಾ ರೋಗಗಳಿಂದ ಬಾಧಿತರಾಗುತ್ತಾರೆ. ಈ ಹಳೇ ಲೋಕವು ದಾಟಿಹೋಗುವ ತನಕ, ರೋಗ ಮತ್ತು ವೃದ್ಧಾಪ್ಯಗಳು ಪ್ರಧಾನ ಪಂಥಾಹ್ವಾನಗಳಾಗಿ ಮುಂದರಿಯುತ್ತಿರುವುವು.
“ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ” ಮಾದರಿಗಳಾಗಿ ಮುಂದುವರಿಯುತ್ತಿರುವ ನಮ್ಮ ಅಸ್ವಸ್ಥರನ್ನು ಮತ್ತು ವೃದ್ಧರನ್ನು ನಾವೆಷ್ಟು ಗಣ್ಯಮಾಡುತ್ತೇವೆ! ಹೌದು, “ತಾಳಿಕೊಂಡಿರುವವರನ್ನು ಧನ್ಯರೆಂದು ನಾವು ಹೇಳುತ್ತೇವೆ.” (ಯಾಕೋಬ 5:10, 11) ಈಗ ಶಕ್ತಿಗುಂದಿದವರಾಗಿರುವ ಅನೇಕ ವೃದ್ಧ ಜನರು ದಶಕಗಳ ತನಕ, ಸಭೆಯಲ್ಲಿ ಈಗ ನಾಯಕತ್ವ ವಹಿಸುತ್ತಿರುವವರಿಗೆ ಕಲಿಸುವುದರಲ್ಲಿ, ಅವರನ್ನು ತರಬೇತು ಮಾಡುವುದರಲ್ಲಿ ಮತ್ತು ರೂಪಿಸುವುದರಲ್ಲಿ ಪಾಲಿಗರಾಗಿದ್ದರು. ಹಲವಾರು ವೃದ್ಧ ಜನರು ತಮ್ಮ ಮಕ್ಕಳು ಪೂರ್ಣ ಸಮಯದ ಸೇವೆಯಲ್ಲಿ ಪಾಲಿಗರಾಗಿರುವುದನ್ನು ಕಾಣಲು ಸಹ ಸಂತೋಷಪಡುತ್ತಾರೆ.—ಕೀರ್ತನೆ 71:17, 18; 3 ಯೋಹಾನ 4.
ತದ್ರೀತಿಯಲ್ಲಿ ನಮ್ಮ ನಡುವೆ, ಗುರುತರವಾದ ಕಾಯಿಲೆ ಇದ್ದರೂ ತಮ್ಮೆಲ್ಲಾ ಕಷ್ಟಾನುಭವಗಳ ಮಧ್ಯೆ ತಮ್ಮ ನಂಬಿಗಸ್ತಿಕೆಯ ಮೂಲಕ ನಮ್ಮನ್ನು ಉತ್ತೇಜಿಸಲು ಶಕ್ತರಾಗಿರುವವರನ್ನು ನಾವು ಗಣ್ಯಮಾಡುತ್ತೇವೆ. ಇವರು ನಿಶ್ಚಂಚಲವಾಗಿ ತಮ್ಮ ನಿರೀಕ್ಷೆಯ ರುಜುವಾತನ್ನು ಕೊಡುವಾಗ, ಫಲಿತಾಂಶವು ಅತ್ಯಂತ ಉತ್ತೇಜನಕಾರಿಯೂ ನಂಬಿಕೆ-ವರ್ಧಕವೂ ಆಗಿರುತ್ತದೆ. ಅವರ ಮನೋಶಾಂತಿ ಮತ್ತು ಸಂತೃಪ್ತಿಯು ನಿಜವಾಗಿಯೂ ಅನುಕರಣಾರ್ಹವಾದ ಒಂದು ನಂಬಿಕೆಯನ್ನು ಪ್ರಕಟಪಡಿಸುತ್ತದೆ.
ಒಬ್ಬನ ಜೀವಿತವನ್ನೇ ಬದಲಾಯಿಸಿಬಿಡುವ ಕ್ಯಾನ್ಸರ್, ಲಕ್ವಾ, ಅಥವಾ ಬೇರೊಂದು ರೋಗಸ್ಥಿತಿಯಿಂದ ದಿಢೀರನೆ ಹೊಡೆಯಲ್ಪಡುವುದು ಯಾರಿಗಾದರೂ ಧಕ್ಕೆ ಬರಿಸುತ್ತದೆ. ತಮ್ಮ ಮಕ್ಕಳು ಕಾಯಿಲೆ ಬೀಳುವುದನ್ನು ಅಥವಾ ಒಂದು ಅಪಘಾತದ ಫಲಿತಾಂಶವಾಗಿ ಕಷ್ಟಾನುಭವ ಪಡುವುದನ್ನು ಕಾಣುವುದು ಸಹ ಹೆತ್ತವರಿಗೆ ಒಂದು ಕಠಿಣ ಪರೀಕೆಯ್ಷಾಗಿದೆ. ಸಹಾಯ ಮಾಡಲು ಇತರರು ಏನು ಮಾಡಸಾಧ್ಯವಿದೆ? ಅಂಥ ಯಾವುದೇ ವಿಪತ್ಕಾಲವು ಇಡೀ ಕ್ರೈಸ್ತ ಸಹೋದರತ್ವಕ್ಕೆ ಒಂದು ಪರೀಕೆಯ್ಷಾಗಿರುತ್ತದೆ. ‘ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ’ ವೆಂದು ತೋರಿಸಲು ಅದೊಂದು ಸಂದರ್ಭವಾಗಿರುತ್ತದೆ. (ಜ್ಞಾನೋಕ್ತಿ 17:17) ರೋಗಿಗಳಾಗಿರುವ ಮತ್ತು ವೃದ್ಧರಾಗಿರುವ ಎಲ್ಲರು, ಸಭೆಯ ಪ್ರತಿಯೊಬ್ಬ ಸದಸ್ಯನಿಂದ ವೈಯಕ್ತಿಕ ಸಹಾಯವನ್ನು ನಿರೀಕ್ಷಿಸ ಸಾಧ್ಯವಿಲ್ಲವೆಂಬದು ಸಹಜ. ಆದರೆ ವಿವಿಧ ರೀತಿಯಲ್ಲಿ ಸಹಾಯ ಮಾಡಲು ಅನೇಕರು ಆತನ ಆತ್ಮದ ಮೂಲಕ ಪ್ರೇರೇಪಿಸಲ್ಪಡುವಂತೆ ಯೆಹೋವನು ನಿಶ್ಚಯವಾಗಿಯೂ ನೋಡಿಕೊಳ್ಳುವನು. ಮತ್ತು ಯಾರೊಬ್ಬನೂ ದುರ್ಲಕ್ಷಿಸಲ್ಪಡದಂತೆ ಖಾತ್ರಿಯಿಂದಿರಲು ಹಿರಿಯರು ಎಚ್ಚರವಾಗಿರ ಸಾಧ್ಯವಿದೆ.—ನೋಡಿರಿ ವಿಮೋಚನಕಾಂಡ 18:17, 18.
ತಿಳುಕೊಳ್ಳಲು ಪ್ರಯತ್ನಿಸಿರಿ
ಒಬ್ಬನಿಗೆ ಸಹಾಯಮಾಡಲು ಪ್ರಯತ್ನಿಸುವಲ್ಲಿ, ಒಂದು ಒಳ್ಳೇ ಸಂಸರ್ಗವಿರುವುದು ಪ್ರಾಮುಖ್ಯವಾಗಿದೆ, ಮತ್ತು ಅದಕ್ಕೆ ಸಮಯ, ತಾಳ್ಮೆ, ಮತ್ತು ಅನುಭೂತಿಯು ಅತ್ಯಗತ್ಯ. ಸಹಾಯಕರೋಪಾದಿ ನೀವು ‘ಬಾಯಿ ಮಾತುಗಳಿಂದ ಬಲಗೊಳಿಸಲು’ ಅಪೇಕ್ಷಿಸುವುದು ಸ್ವಾಭಾವಿಕವಾಗಿದೆ; ಆದರೆ ನೀವು ಮಾತಾಡುವ ಯಾ ಕ್ರಿಯೆಗೈಯುವ ಮೊದಲು ಜಾಗರೂಕತೆಯಿಂದ ಕಿವಿಗೊಡಿರಿ, ಇಲ್ಲವಾದರೆ ‘ತ್ರಾಸದಾಯಕ ಸಾಂತ್ವನಗಾರರಾಗಿ’ ಕೊನೆಗೊಂಡೀರಿ.—ಯೋಬ 16:2, 5.
ಅಸ್ವಸ್ಥರು ಮತ್ತು ವೃದ್ಧರು ಕೆಲವೊಮ್ಮೆ ತಮ್ಮ ಹತಾಶೆಯನ್ನು ಮರೆಮಾಡಲು ಕಷ್ಟಕರವಾಗಿ ಕಾಣುವರು. ಮಹಾ ಸಂಕಟವನ್ನು ಪಾರಾಗಲು ಬದುಕಿ ಉಳಿಯುವ ನಿರೀಕ್ಷೆಯನ್ನು ಅನೇಕರು ನೆಚ್ಚಿದವರಾಗಿದ್ದಾರೆ, ಮತ್ತು ಈಗ ತಮ್ಮ ಮರಣದ ಗಳಿಗೆಯು ಮಹಾ ಸಂಕಟಕ್ಕೆ ಮುಂಚೆಯೇ ಬರುವುದಾಗಿ ಅವರು ಹೆದರುತ್ತಾರೆ. ಅಲ್ಲದೆ, ಅವರ ಪರಿಸ್ಥಿತಿಯು ಆಗಿಂದಾಗ್ಗೆ ಅವರನ್ನು ಬಳಲಿಸುತ್ತದೆ ಮತ್ತು ಚಿಂತಿತರನ್ನಾಗಿ ಮಾಡುತ್ತದೆ. ನಂಬಿಕೆಯನ್ನು ಸಜೀವವಾಗಿ ಮತ್ತು ದೃಢವಾಗಿ ಇಡುವುದು, ವಿಶೇಷವಾಗಿ ಕ್ರೈಸ್ತ ಶುಶ್ರೂಷೆಯಲ್ಲಿ ಪೂರ್ಣ ಪಾಲಿಗರಾಗುವ ಹೃದಯದಪೇಕ್ಷೆಯನ್ನು ಒಬ್ಬನು ಇನ್ನು ಮುಂದೆ ಪಾಲಿಸಲಾರದವನಾಗಿ ಇರುವಾಗ, ಒಂದು ಹೋರಾಟವಾಗಿ ಇರುತ್ತದೆ. ಒಬ್ಬ ಕ್ರೈಸ್ತ ಹಿರಿಯನು ಒಬ್ಬಾಕೆ ವೃದ್ಧೆ ಸಹೋದರಿಯನ್ನು ಸಂದರ್ಶಿಸಿದನು; ಅವಳೊಂದಿಗೆ ಪ್ರಾರ್ಥನೆ ಮಾಡುವಾಗ, ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸುವಂತೆ ಅವನು ಭಿನ್ನವಿಸಿದನು. ಪ್ರಾರ್ಥನೆಯ ಅನಂತರ ಸಹೋದರಿಯು ಅಳುತ್ತಿರುವುದನ್ನು ಆತನು ಕಂಡನು. ಮನೆ ಮನೆಯ ಸಾರುವಿಕೆಯಲ್ಲಿ ಇನ್ನು ಮುಂದೆ ಪಾಲಿಗಳಾಗಲು ಶಕ್ತಳಾಗದೆ ಇದದ್ದಕ್ಕಾಗಿ ಯೆಹೋವನ ವಿಶೇಷ ಕ್ಷಮೆಯು ಅವಳಿಗೆ ಬೇಕಾಗಿದ್ದ ಅನಿಸಿಕೆಯನ್ನು ಅವಳು ವಿವರಿಸಿದಳು. ಹೌದು, ಅಶಕ್ತಿಯ ಯಾ ನ್ಯೂನತೆಯ ಭಾವವು, ಕೆಲವು ಸಾರಿ ಅಯುಕ್ತವಾಗಿದ್ದರೂ, ಒಬ್ಬ ವ್ಯಕ್ತಿಯನ್ನು ಹೃದಯದಲ್ಲಿ ಅತ್ಯಂತ ದುಃಖಿಯನ್ನಾಗಿ ಮಾಡಬಲ್ಲದು.
ಚಿಂತೆ ಮತ್ತು ಬಳಲಿಕೆಯು ಮಾನಸಿಕ ಸಮತೂಕವನ್ನು ಪ್ರಭಾವಿಸಬಲ್ಲದೆಂಬ ಅರುಹುಳ್ಳವರಾಗಿರಿ. ಮುದೀ ಪ್ರಾಯದ ಬಲಹೀನತೆಗಳ ಅಥವಾ ರೋಗದ ಶಕ್ತಿಗುಂದಿಸುವ ಒತ್ತಡದ ಕಾರಣ, ಯೆಹೋವನಿಂದ ತ್ಯಜಿಸಲ್ಪಟ್ಟ ಭಾವನೆಯು ಒಬ್ಬನಿಗಾಗಬಹುದು, ಪ್ರಾಯಶಃ ಹೀಗನ್ನಬಹುದು: “ನಾನೇನು ಮಾಡಿದೆ? ನನಗೇಕೆ ಈ ಕಷ್ಟಾನುಭವ?” ಜ್ಞಾನೋಕ್ತಿ 12:25 ರ ಮಾತುಗಳನ್ನು ನೆನಪಿಗೆ ತನ್ನಿರಿ: “ಕಳವಳವು ಮನಸ್ಸನ್ನು ಕುಗ್ಗಿಸುವದು; ಕನಿಕರದ ಮಾತು ಅದನ್ನು ಹಿಗ್ಗಿಸುವದು.” ಸಾಂತ್ವನಕೊಡುವ ಒಳ್ಳೇ ಮಾತುಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿರಿ. ಬೇನೆಯಲ್ಲಿರುವ ವೃದ್ಧ ಜನರು, ಯೋಬನಂತೆ, ಸಾಯುವ ಒಂದು ಅಪೇಕ್ಷೆಯನ್ನೂ ವ್ಯಕ್ತಪಡಿಸಬಹುದು. ಇದು ಧಕ್ಕೆಬರಿಸುವುದಾಗಿರುವ ಅಗತ್ಯವಿಲ್ಲ; ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಅಂಥ ಗೋಳುಗಳು ನಂಬಿಕೆ ಯಾ ಭರವಸೆಯ ಕೊರತೆಯ ರುಜುವಾತಾಗಿರುವ ಅಗತ್ಯವಿಲ್ಲ. ಯೋಬನು ತನ್ನನ್ನು ‘ಶಿಯೋಲಿನಲ್ಲಿ ಬಚ್ಚಿಡುವಂತೆ’ ಪ್ರಾರ್ಥನೆ ಮಾಡಿದನು, ಆದರೂ ಅದನ್ನು ವ್ಯಕ್ತಪಡಿಸಿದ ಬೆನ್ನಿನಲ್ಲಿಯೇ ಅವನಂದ ಮಾತುಗಳು, ಯೆಹೋವನು ಅನಂತರ ಅವನನ್ನು ಎಬ್ಬಿಸುವನೆಂಬದರಲ್ಲಿ ದೃಢ ವಿಶ್ವಾಸವನ್ನು ಪ್ರಕಟಪಡಿಸುತ್ತವೆ. ಬಲವಾದ ನಂಬಿಕೆಯು ಸಂಕಟದ ಮತ್ತು ಕುಗ್ಗಿನ ಅವಧಿಗಳನ್ನು ಪಾರಾಗಲು ಸಾಧ್ಯಗೊಳಿಸಿ, ಯೆಹೋವನಿಗೆ ಇನ್ನೂ ಹತ್ತಿರವಾಗಿ ಉಳಿಯಲು ಸಹಾಯ ಮಾಡುತ್ತದೆ.—ಯೋಬ 14:13-15.
ಅಸ್ವಸ್ಥರಿಗೆ ಮತ್ತು ವೃದ್ಧರಿಗೆ ಗೌರವ ತೋರಿಸುವುದು
ಅಸ್ವಸ್ಥರನ್ನು ಮತ್ತು ವೃದ್ಧರನ್ನು ಗೌರವ ಮತ್ತು ಮರ್ಯಾದೆಯಿಂದ ಉಪಚರಿಸುವುದು ಅತ್ಯಂತ ಮಹತ್ವವುಳ್ಳದ್ದು. (ರೋಮಾಪುರ 12:10) ಮುಂಚಿನಷ್ಟು ವೇಗವಾಗಿ ಅವರು ಪ್ರತಿಕ್ರಿಯೆ ತೋರಿಸದಿದ್ದರೆ ಅಥವಾ ಮುಂಚಿನಷ್ಟನ್ನು ಮಾಡಲು ಅವರು ಶಕ್ತರಾಗದೆ ಇದ್ದರೆ, ನಿಮ್ಮ ತಾಳ್ಮೆಯನ್ನು ಕಳಕೊಳ್ಳಬೇಡಿರಿ. ಬೇಗನೆ ಅಡ್ಡಬಂದು, ಅವರಿಗಾಗಿ ನಿರ್ಣಯಗಳನ್ನು ಮಾಡುವರೆ ತರ್ವೆಪಡಬೇಡಿರಿ. ನಾವೆಷ್ಟೇ ಸದ್ಭಾವನೆಯಿಂದಿರಲಿ, ಆಳುವವರಂತೆ ಯಾ ಅಧಿಕಾರ ನಡಿಸುವವರಂತೆ ನಾವು ವರ್ತಿಸಿದರೆ, ಅದು ಯಾವಾಗಲೂ ಆ ಬೇರೆ ವ್ಯಕ್ತಿಯ ಸ್ವ-ಗೌರವವನ್ನು ಅಪಹರಿಸುತ್ತದೆ. ಇಸವಿ 1988 ರಲ್ಲಿ ಪ್ರಕಾಶಿತವಾದ ಒಂದು ವೈದ್ಯಕೀಯ ಪ್ರಬಂಧದಲ್ಲಿ, ಸಂಶೋಧಕ ಜೆಟ್ ಇಂಗರ್ಸೆವ್ಲ್, 85-ವರ್ಷ-ಪ್ರಾಯದವರ ಒಂದು ಗುಂಪು ತಾವಾಗಿಯೇ, ತಮ್ಮ ಜೀವಿತದ ಗುಣಮಟ್ಟಕ್ಕೆ ಯಾವುದು ಅತ್ಯಂತ ಮಹತ್ವವೆಂದು ಪರಿಗಣಿಸುತ್ತಾರೆಂಬದನ್ನು ವಿವರಿಸಿದನು: “ಅಧಿಕ ಪ್ರಾಮುಖ್ಯತೆಯ ಮೂರು ಕ್ಷೇತ್ರಗಳನ್ನು ಅವರು ಕೊಟ್ಟರು: ಸಂಬಂಧಿಕರೊಂದಿಗೆ ಇರುವುದು; ಒಳ್ಳೆಯ ಆರೋಗ್ಯ; ಮತ್ತು ಕೊನೆಯದಾಗಿ ಆದರೆ ಸ್ವಲ್ಪವೂ ಕನಿಷ್ಠವಲ್ಲದ, ತಮ್ಮ ಸ್ವಂತ ನಿರ್ಣಯಗಳನ್ನು ತಾವೇ ಮಾಡಶಕ್ತರಾಗಿರುವುದು.” ಮೂಲಪಿತ ಯಾಕೋಬನು ವೃದ್ಧನಾದಾಗ, ಅವನ ಗಂಡು ಮಕ್ಕಳು ಅವನೆಡೆಗೆ ಸಲುಗೆಯಿಂದ ವರ್ತಿಸಲಿಲ್ಲವೆಂಬದನ್ನು ಗಮನಿಸಿರಿ; ಅವನ ಇಷ್ಟಗಳು ಗೌರವಿಸಲ್ಪಟ್ಟವು.—ಆದಿಕಾಂಡ 47:29, 30; 48:17-20.
ಯಾರು ಅಸ್ವಸ್ಥರೋ ಅವರನ್ನು ಸಹ ಮರ್ಯಾದೆಯಿಂದ ಉಪಚರಿಸಬೇಕು. ಒಂದು ಶಸ್ತ್ರಕ್ರಿಯೆಯ ಸಮಯದಲ್ಲಾದ ಪ್ರಮಾದದಿಂದಾಗಿ, ಒಬ್ಬ ಹಿರಿಯನು ಮಾತಾಡುವ, ಓದುವ, ಮತ್ತು ಬರೆಯುವ ತನ್ನ ಶಕ್ತಿಯನ್ನು ಕಳಕೊಂಡನು. ಇದೊಂದು ಭಾರೀ ಆಘಾತವಾಗಿತ್ತು, ಆದರೆ, ನಿಷ್ಪ್ರಯೋಜಕನೆಂಬ ಭಾವನೆಯಿಂದ ಅವನನ್ನು ತಡೆಯುವಂತೆ ಅವನ ಜೊತೆ ಹಿರಿಯರು ತಮ್ಮಿಂದಾದದ್ದೆಲ್ಲವನ್ನು ಮಾಡುವಂತೆ ನಿರ್ಣಯಿಸಿದರು. ಅವರೀಗ ಎಲ್ಲಾ ಸಭಾ ಪತ್ರವ್ಯವಹಾರಗಳನ್ನು ಅವನಿಗೆ ಓದಿಹೇಳುತ್ತಾರೆ ಮತ್ತು ಸಭೆಗೆ ಸಂಬಂಧಿಸಿದ ಬೇರೆ ವಿಷಯಗಳಲ್ಲಿ ಅವನನ್ನು ಸೇರಿಸುತ್ತಾರೆ. ಹಿರಿಯರುಗಳ ಕೂಟದಲ್ಲಿ, ಅವನ ಅಭಿಪ್ರಾಯವೇನೆಂದು ತಿಳಿಯಲು ಅವರು ಪ್ರಯತ್ನಮಾಡುತ್ತಾರೆ. ಅವರಿನ್ನೂ ಅವನನ್ನು ಒಬ್ಬ ಜೊತೆ ಹಿರಿಯನಾಗಿ ಪರಿಗಣಿಸುತ್ತಾರೆಂದೂ ಅವನ ಹಾಜರಿಯನ್ನು ಗಣ್ಯಮಾಡುತ್ತಾರೆಂದೂ ಅವನು ತಿಳಿಯುವಂತೆ ಮಾಡುತ್ತಾರೆ. ಕ್ರೈಸ್ತ ಸಭೆಯಲ್ಲಿ ಯಾವ ರೋಗಿಯಾಗಲಿ ವೃದ್ಧನಾಗಲಿ ‘ಧಿಕ್ಕರಿಸಲ್ಪಟ್ಟ’ ಯಾ ಕೈಬಿಡಲ್ಪಟ್ಟ ಭಾವವನ್ನು ತಾಳದಂತೆ ನಾವೆಲ್ಲರೂ ಪ್ರಯತ್ನವನ್ನು ಮಾಡಬಲ್ಲೆವು.—ಕೀರ್ತನೆ 71:9.
ಆತ್ಮಿಕ ಬಲವನ್ನು ಗಳಿಸುವುದಕ್ಕೆ ಸಹಾಯ
ನಮ್ಮ ನಂಬಿಕೆಯನ್ನು ಸಜೀವವಾಗಿ ಮತ್ತು ದೃಢವಾಗಿ ಇಡಲು ನಮಗೆಲ್ಲರಿಗೆ ಆತ್ಮಿಕ ಆಹಾರದ ಅಗತ್ಯವಿದೆ. ಆದುದರಿಂದಲೇ ನಾವು ಬೈಬಲ್ ಮತ್ತು ಬೈಬಲ್ ಪ್ರಕಾಶನಗಳನ್ನು ದಿನದಿನವೂ ಓದುವಂತೆ ಮತ್ತು ಕ್ರೈಸ್ತ ಕೂಟಗಳಲ್ಲಿ ಮತ್ತು ಸಾರುವ ಚಟುವಟಿಕೆಗಳಲ್ಲಿ ಹುರುಪಿನಿಂದ ಪಾಲಿಗರಾಗುವಂತೆ ಪ್ರೋತ್ಸಾಹಿಸಲ್ಪಡುತ್ತೇವೆ. ಇದನ್ನು ಪೂರೈಸಲು ಅಸ್ವಸ್ಥರಿಗೆ ಮತ್ತು ವೃದ್ಧರಿಗೆ ಆಗಿಂದಾಗ್ಗೆ ಸಹಾಯದ ಅಗತ್ಯವಿದೆ, ಮತ್ತು ಅವರ ವಿಶಿಷ್ಟ ವಿದ್ಯಮಾನದಲ್ಲಿ ಯಾವುದು ವಾಸ್ತವಿಕವೋ ಅದನ್ನು ಮಾಡುವುದು ಮಹತ್ವದ್ದಾಗಿದೆ. ವಾಹನ ಸೌಕರ್ಯವನ್ನು ಕೊಟ್ಟಲ್ಲಿ ಮತ್ತು ರಾಜ್ಯ ಸಭಾಗೃಹದಲ್ಲಿ ತುಸು ನೆರವನ್ನಿತ್ತಲ್ಲಿ ಅನೇಕರು ಇನ್ನೂ ಕೂಟಗಳಿಗೆ ಹಾಜರಾಗಬಲ್ಲರೆಂಬದು ಸಂತೋಷಕರ. ಅಂಥ ಕೂಟಗಳಿಗೆ ಅವರ ಹಾಜರಾಗುವಿಕೆಯು ಸಭೆಗೆ ಮಹಾ ಪ್ರೋತ್ಸಾಹನೆಯಾಗಿ ಇದೆ. ಅವರ ತಾಳ್ಮೆಯು ಉತ್ತೇಜನಕಾರಿಯೂ ನಂಬಿಕೆ-ವರ್ಧಕವೂ ಆಗಿದೆ.
ಅನೇಕ ಸಂದರ್ಭಗಳಲ್ಲಿ ಅಸ್ವಸ್ಥರು ಮತ್ತು ವೃದ್ಧರು ಸಹ ಕ್ರೈಸ್ತ ಶುಶ್ರೂಷೆಯಲ್ಲಿ ಅರ್ಥಪೂರ್ಣ ಪಾಲನ್ನು ತಕ್ಕೊಳ್ಳಬಲ್ಲರು. ಕೆಲವರನ್ನು ಸಾಕ್ಷಿಕಾರ್ಯದ ಒಂದು ಕಾರ್ ಗುಂಪಿನಲ್ಲಿ ಸೇರಿಸ ಸಾಧ್ಯವಿದೆ, ಮತ್ತು ಕೆಲವೇ ಸಂದರ್ಶನಗಳನ್ನು ಮಾಡಲು ಶಕ್ತರಾದದಕ್ಕಾಗಿ ನಿಸ್ಸಂಶಯವಾಗಿ ಅವರು ಚೈತನ್ಯಕರ ಅನುಭವವನ್ನು ಹೊಂದುವರು. ಇದು ಶಕ್ಯವಾಗದೆ ಹೋಗುವಾಗ, ತಾವು ಸಂಪರ್ಕಕ್ಕೆ ಬರುವ ವ್ಯಕ್ತಿಗಳಿಗೆ ಅವಿಧಿಯಾಗಿ ಸಾಕ್ಷಿಕೊಡುವುದರಲ್ಲಿ ಅವರು ಸಂತೋಷವನ್ನು ಕಂಡುಕೊಳ್ಳುತ್ತಾರೆ. ಕ್ಯಾನ್ಸರ್ನಿಂದ ಬಾಧಿತಳಾಗಿದ್ದ ಒಬ್ಬ ಸಹೋದರಿಯು ತನ್ನ ಜೀವಿತದಲ್ಲಿ ಉಳಿದಿರುವ ಯಾವುದೇ ಸಮಯವನ್ನು ಸುವಾರ್ತೆಯ ಪ್ರವರ್ಧನೆಗಾಗಿ ವಿಶೇಷ ಪ್ರಯತ್ನ ಮಾಡುವುದರಲ್ಲಿ ಬಳಸುವಂತೆ ನಿರ್ಣಯಿಸಿದಳು. ಅವಳ ಧೀರ ಸಾರುವಿಕೆಯು ಎಲ್ಲರಿಗೆ ಒಂದು ಪ್ರೋತ್ಸಾಹನೆಯಾಗಿತ್ತು. ನಂಬದ ಸಂಬಂಧಿಕರಿಗೆ, ಸಹೋದ್ಯೋಗಿಗಳಿಗೆ, ಮತ್ತು ನೆರೆಯವರಿಗೆ ಒಂದು ಒಳ್ಳೇ ಸಾಕ್ಷಿಯು ಕೊಡಲ್ಪಡುವಂತೆ ಅವಳು ತನ್ನ ಸ್ವಂತ ಶವಸಂಸ್ಕಾರವನ್ನು ಸಹ ಯೋಜಿಸಿಟಳ್ಟು. ಅವಳ ಸಂಕಟಕರ ಸನ್ನಿವೇಶಗಳು ಹೀಗೆ “ಸುವಾರ್ತೆಯ ಪ್ರಸಾರಣೆಗೇ ಸಹಾಯವಾಯಿತು,” ಮತ್ತು ನಂಬಿಕೆ ಮತ್ತು ಭರವಸೆಯನ್ನು ವ್ಯಕ್ತಪಡಿಸಲು ಅವಳ ದೃಢ ನಿಶ್ಚಯವು ಅವಳ ಅಂತಿಮ ದಿನಗಳಿಗೆ ವಿಶೇಷಾರ್ಥವನ್ನು ಕೊಟ್ಟಿತು.—ಫಿಲಿಪ್ಪಿ 1:12-14.
ಆತ್ಮಿಕವಾಗಿ ಬಲಪಡಿಸಲ್ಪಡುವಂತೆ ಅಸ್ವಸ್ಥರಿಗೆ ಮತ್ತು ವೃದ್ಧರಿಗೆ ಸಹಾಯಕೊಡುವದು ಒಳ್ಳೆಯದು. ಹಿತಕರವಾದ ಸಹವಾಸದಲ್ಲಿ ಒಂದು ಸಂಜೆಯನ್ನು ಕಳೆಯುವಂತೆ ಅವರನ್ನು ಕುಟುಂಬಗಳು ಆಮಂತ್ರಿಸಬಹುದು ಅಥವಾ ತಮ್ಮ ಕುಟುಂಬ ಅಭ್ಯಾಸದ ಒಂದು ಭಾಗವನ್ನು ಹೊರಗೆ ಹೋಗಲಾಗದವರ ಮನೆಗೆ ಸಂದರ್ಭಾನುಸಾರ ವರ್ಗಾಯಿಸ ಸಾಧ್ಯವಿದೆ. ಒಬ್ಬಾಕೆ ತಾಯಿ ತನ್ನ ಎರಡು ಕಿರಿಯ ಮಕ್ಕಳನ್ನು ಒಬ್ಬ ಮುದೀ ಸಹೋದರಿಯ ಮನೆಗೆ, ಮೈ ಬುಕ್ ಆಫ್ ಬೈಬಲ್ ಸೋರ್ಟಿಸ್ ನ್ನು ಒಟ್ಟುಗೂಡಿ ಓದುವಂತೆ ಕರೆತರುತ್ತಿದ್ದಳು. ಇದು ವೃದ್ಧೆ ಸಹೋದರಿಯನ್ನು ಸಂತೋಷಗೊಳಿಸಿತು, ಮತ್ತು ಅವಳು ಮಕ್ಕಳಿಗೆ ಕೊಟ್ಟ ಗಮನದಲ್ಲಿ ಅವರೂ ಆನಂದಿಸಿದರು.
ಆದರೂ, ನಿರ್ಬಲ ವ್ಯಕ್ತಿಯನ್ನು ಬಹಳವಾಗಿ ಭಂಗಗೊಳಿಸದೆ ಇರಬೇಕಾದ ಸಮಯವಿರುತ್ತದೆ, ಆಗ ಸಂದರ್ಭಾನುಸಾರ ಕೆಲವು ಸಮಾಚಾರವನ್ನು ಅವರಿಗೆ ಗಟ್ಟಿಯಾಗಿ ಬರೇ ಓದಿಹೇಳುವುದು ಉತ್ತಮವಾಗಿರಬಹುದು. ಯಾರಾದರೂ ಒಂದು ಸಂಭಾಷಣೆಯಲ್ಲಿ ಪಾಲಿಗರಾಗಲು ಶಾರೀರಿಕವಾಗಿ ತೀರ ದುರ್ಬಲರಾಗಿರುವಾಗ, ಅವರಿಗಿನ್ನೂ ಕೊಂಚಮಟ್ಟಿನ ಆತ್ಮಿಕ ಸಹವಾಸದ ಅಗತ್ಯ ಮತ್ತು ಆಪೇಕ್ಷೆಯು ಇರಬಹುದೆಂದು ನೆನಪಿನಲ್ಲಿಡಿರಿ. ನಾವು ಅಂಥವರೊಂದಿಗೆ ಪ್ರಾರ್ಥನೆ ಮಾಡಬಲ್ಲೆವು, ಅವರಿಗೆ ಓದಿಹೇಳಬಲ್ಲೆವು, ಅಥವಾ ಅನುಭವಗಳನ್ನು ತಿಳಿಸಬಲ್ಲೆವು; ಆದರೆ ಅವರು ನಿರ್ವಹಿಸ ಶಕ್ತರಾಗುವದಕ್ಕಿಂತ ಹೆಚ್ಚು ಸಮಯ ಉಳಿಯದಂತೆ ನಾವು ಜಾಗ್ರತೆ ವಹಿಸಬೇಕು.
ಸ್ವಸ್ಥವಿಲ್ಲದ ಮತ್ತು ವೃದ್ಧರಾದ ಹೆಚ್ಚಿನವರು ಇನ್ನೂ ನಿರ್ವಹಿಸ ಶಕ್ತರಾಗಿರುವ ಒಂದು ಪವಿತ್ರ ಸೇವೆಯು ಇದೆ: ಇತರರ ಪರವಾಗಿ ಪ್ರಾರ್ಥನೆ. ಆದಿ ಶಿಷ್ಯರು ಈ ಶುಶ್ರೂಷೆಗೆ ಮಹಾ ಪ್ರಾಮುಖ್ಯತೆಯನ್ನು ಜೋಡಿಸಿದ್ದರು. ಒಂದು ಸಂದರ್ಭದಲ್ಲಿ ಅವರು ಸಭಾ ಕೆಲಸದ ಹೊರೆಯನ್ನು ಎಂಥ ರೀತಿಯಲ್ಲಿ ಹಂಚಿಕೊಂಡರೆಂದರೆ ಅಪೊಸ್ತಲರು ಪ್ರಾರ್ಥನೆಯಲ್ಲಿ ನಿರತರಾಗಲು ಸಾಧ್ಯವಾಯಿತು. ನಂಬಿಗಸ್ತ ಎಪಫ್ರನು ‘ತನ್ನ ಪ್ರಾರ್ಥನೆಗಳಲ್ಲೆಲ್ಲಾ ಇತರರ ಪರವಾಗಿ ಪ್ರಯಾಸ’ ಪಟ್ಟನು ಎಂದು ಹೇಳಲಾಗಿದೆ. (ಕೊಲೊಸ್ಸೆ 4:12; ಅ. ಕೃತ್ಯಗಳು 6:4) ಅಂತಹ ಪ್ರಾರ್ಥನೆಯು ಅತ್ಯಂತ ಮಹತ್ವವುಳ್ಳದ್ದು ಮತ್ತು ಪ್ರಯೋಜನಕರವು.—ಲೂಕ 2:36-38; ಯಾಕೋಬ 5:16.
ಯೆಹೋವನು ಅಸ್ವಸ್ಥರನ್ನೂ ವೃದ್ಧರನ್ನೂ ನೆನಪು ಮಾಡುತ್ತಾನೆ ಮತ್ತು ಅವರ ಆಪತ್ಕಾಲದಲ್ಲಿ ಅವರ ಪರಾಮರಿಕೆ ಮಾಡುತ್ತಾನೆ. ಅವರ ಸಹಾಯ ಮತ್ತು ಬೆಂಬಲಕ್ಕಾಗಿ ನಾವೂ ಏನು ಮಾಡ ಸಾಧ್ಯವಿದೆಯೆಂದು ಪರಿಗಣಿಸುವಂತೆ ಆತನು ನ್ಯಾಯವಾಗಿ ಅಪೇಕ್ಷಿಸುತ್ತಾನೆ. ನಾವು ತೋರಿಸುವ ಚಿಂತೆಯು ನಮ್ಮ ಸ್ವಂತ ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಮಗಿರುವ ದೃಢ ನಿಶ್ಚಯವನ್ನು ಪ್ರತಿಬಿಂಬಿಸುತ್ತದೆ. ಮತ್ತು ರಾಜ ದಾವೀದನ ಮಾತುಗಳನ್ನು ನೆನಪಿಸಲು ನಾವು ಸಂತೋಷಪಡುತ್ತೇವೆ: “ಯೆಹೋವನು ಸದ್ಭಕ್ತರ ಜೀವಮಾನವನ್ನು ಲಕ್ಷಿಸುತ್ತಾನೆ; ಅವರ ಸ್ವಾಸ್ತ್ಯವು ಶಾಶ್ವತವಾಗಿ ನಿಲ್ಲುವದು.”—ಕೀರ್ತನೆ 37:18.
[ಪುಟ 28 ರಲ್ಲಿರುವ ಚೌಕ]
ವ್ಯಾವಹಾರಿಕ ಸಹಾಯವನ್ನು ಕೊಡುವುದು ತಿಳಿವಳಿಕೆಯೊಂದಿಗೆ
ಅಸ್ವಸ್ಥರ ಮತ್ತು ವೃದ್ಧರ ಪರಾಮರಿಕೆಯ ವಿಧಾನದ ಕುರಿತ ಪ್ರಾಥಮಿಕ ಆದರೆ ಸರಿಯಾದ ಜ್ಞಾನವನ್ನು ಮಿತ್ರರು ಮತ್ತು ಸಂಬಂಧಿಕರು ಪಡಕೊಳ್ಳಬೇಕು. ಮುಖ್ಯವಾಗಿ, ಜೀವಿತದ ಕಡೆಗೆ ಒಂದು ಸಕಾರಾತ್ಮಕ ಮನೋಭಾವವನ್ನು ಇಡುವಂತೆ, ತಾವು ಬೇಕಾಗಿದ್ದೇವೆ ಮತ್ತು ಗಣ್ಯಮಾಡಲ್ಪಡುತ್ತೇವೆಂದು ಭಾವಿಸುವಂತೆ, ಮತ್ತು ಆತ್ಮ-ಪಾತ್ರತೆಯ ಅನಿಸಿಕೆಯಾಗುವಂತೆ ಅವರಿಗೆ ಉತ್ತೇಜನ ಕೊಡಸಾಧ್ಯವಿದೆ. ಹೀಗೆ ಅವರ ಜೀವಿತದ ಗುಣಮಟ್ಟವು, ನೋವು ಮತ್ತು ಬೇನೆಗಳ ಮಧ್ಯೆಯೂ, ಯೆಹೋವನಲ್ಲಿ ತಮ್ಮ ಆನಂದವನ್ನು ಕಾಪಾಡಿಕೊಳ್ಳುವ ಒಂದು ಸಮತಲದಲ್ಲಿ ಉಳಿಯುವುದು. ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಒಂದು ಮುಪ್ಪಿನ ಪ್ರಾಯದ ತನಕ ಜೀವಿಸುತ್ತಾರೆಂಬದನ್ನು ಗಮನಿಸಲಾಗಿದೆ. ಇದಕ್ಕೆ ನೆರವಾಗುವ ಒಂದು ಬಲವತ್ತಾದ ಸಂಗತಿಯು ನಿಸ್ಸಂದೇಹವಾಗಿ, ಮುಂದಿರುವ ನಿರೀಕ್ಷೆಯಲ್ಲಿ ಅವರಿಗಿರುವ ಸಜೀವಾಸಕ್ತಿ, ಅವರ ಉಜ್ವಲ ಮಾನಸಿಕ ಪ್ರವೃತ್ತಿ, ಮತ್ತು ಸಾಧ್ಯವಾದ ಮಟ್ಟಿಗೆ ರಾಜ್ಯ ಚಟುವಟಿಕೆಯಲ್ಲಿ ಅವರ ಭಾಗವಹಿಸುವಿಕೆಯೇ ಆಗಿದೆ. ಒಂದು ಸಂತೋಷಯುಕ್ತ ಫಲದಾಯಕ ಜೀವಿತದ ನಂತರ, ತನ್ನ 100 ನೆಯ ವಯಸ್ಸಿನಲ್ಲಿ ಸಮಾಧಾನದಿಂದ ತೀರಿಕೊಂಡ, ವಾಚ್ ಟವರ್ ಸೊಸೈಟಿಯ ಮಾಜಿ ಅಧ್ಯಕ್ಷರಾದ ಫ್ರೆಡ್ರಿಕ್ ಡಬ್ಲ್ಯೂ. ಫ್ರಾನ್ಜ್, ಇದರಲ್ಲಿ ಒಂದು ಅತ್ಯುತ್ತಮ ಮಾದರಿಯಾಗಿದ್ದರು.—ಹೋಲಿಸಿರಿ 1 ಪೂರ್ವಕಾಲವೃತ್ತಾಂತ 29:28.
ಸಾಮಾನ್ಯವಾಗಿ, ನಿತ್ಯದ ಪರಾಮರಿಕೆಯ ಮೂಲ ವಿಷಯಗಳಿಗೆ ಗಮನಕೊಡುವಿಕೆಯು ಹೆಚ್ಚನ್ನು ಮಾಡಬಲ್ಲದು: ಒಳ್ಳೆಯ ಆರೋಗ್ಯ ತತ್ವಗಳು, ಯೋಗ್ಯ ಪೋಷಣೆ, ಸಾಕಷ್ಟು ದ್ರವವಸ್ತುಗಳು ಮತ್ತು ಉಪ್ಪು, ಸಮಂಜಸ ವ್ಯಾಯಾಮ, ತಿಳಿಯಾದ ಗಾಳಿ, ಮೃದುವಾದ ನೀವುವಿಕೆ, ಮತ್ತು ಹುರಿದುಂಬಿಸುವ ಸಂಭಾಷಣೆ. ಯೋಗ್ಯ ಪೋಷಣೆಯು ಹೆಚ್ಚು ಉತ್ತಮ ಕಿವಿಕೇಳುವಿಕೆ, ದೃಷ್ಟಿ, ಮಾನಸಿಕ ಕಾರ್ಯಗತಿ, ಮತ್ತು ಶಾರೀರಿಕ ಸೌಖ್ಯ ಹಾಗೂ ರೋಗ ಪ್ರತಿಭಟನಾ ಶಕ್ತಿಯನ್ನು ಹೆಚ್ಚಿಸಲು ನೆರವಾಗಬಲ್ಲದು. ವೃದ್ಧ ಜನರಿಗೆ ಯೋಗ್ಯ ಪೋಷಣೆ ಮತ್ತು ತುಂಬಾ ದ್ರವ ಪದಾರ್ಥಗಳು, ಒಂದು ಸುಸ್ಥಿತಿ ಮತ್ತು ಮನೋದೌರ್ಬಲ್ಯದ ನಡುವಣ ವ್ಯತ್ಯಾಸದ ಅರ್ಥದಲ್ಲಿರಬಲ್ಲವು. ವ್ಯಕ್ತಿಗೆ ಒಪ್ಪುವ ಒಂದು ರೀತಿಯ ವ್ಯಾಯಾಮವನ್ನು ಕಂಡುಹಿಡಿಯಲು ಗಮನಕೊಡುವದು ಆವಶ್ಯಕವಾದೀತು. ಒಬ್ಬ ಮುಪ್ಪಿನ ಮತ್ತು ಬಹಳಮಟ್ಟಿಗೆ ಕುರುಡಳೇ ಆಗಿರುವ ಸಹೋದರಿಗೆ ಓದಿಹೇಳಲು ಬರುವ ಒಬ್ಬಾಕೆ ಸಹೋದರಿ ತನ್ನ ಸಾಪ್ತಾಹಿಕ ಸಂದರ್ಶನದ ಪ್ರಾರಂಭ ಮತ್ತು ಅಂತ್ಯವನ್ನು, ಕೋಣೆಯ ಸುತ್ತಲೂ ಸಹೋದರಿಯೊಂದಿಗೆ ಮೃದುವಾಗಿ ನರ್ತಿಸುವದರೊಂದಿಗೆ ಮಾಡುತ್ತಾಳೆ. ಆಯ್ದ ಸಂಗೀತದೊಂದಿಗೆ ಟೇಪ್ ರೆಕಾರ್ಡರ್ ಯಾವಾಗಲೂ ಸಿದ್ಧವಿದೆ, ಮತ್ತು ಈ “ವ್ಯಾಯಾಮ” ದಲ್ಲಿ ಇಬ್ಬರೂ ಆನಂದಿಸುತ್ತಾರೆ.
ಅನೇಕ ದೇಶಗಳಲ್ಲಿ ಸಹಾಯಕ ವ್ಯವಸ್ಥಾಪನೆಗಳು ಬೆಲೆಯುಳ್ಳ ವ್ಯಾವಹಾರಿಕ ಸಹಾಯವನ್ನು ಒದಗಿಸಬಲ್ಲವು ಮತ್ತು ವಿಶಿಷ್ಟ ಸ್ಥಿತಿಗಳ ಬಗ್ಗೆ ಮತ್ತು ಅವುಗಳನ್ನು ನಿಭಾಯಿಸುವ ವಿಷಯದಲ್ಲಿ ಮಾಹಿತಿ ಮತ್ತು ಸಲಹೆಯನ್ನು ನೀಡಶಕ್ತವು. (ನಿಶ್ಚಯವಾಗಿ, ನಮ್ಮ ನಿಜ ಕ್ರೈಸ್ತ ಶುಶ್ರೂಷೆಯಿಂದ ಅಪಕರ್ಷಿಸುವ ಚಟುವಟಿಕೆಗಳಿಗೆ ಸೆಳೆಯಲ್ಪಡದಂತೆ ಕ್ರೈಸ್ತನೊಬ್ಬನು ಯಾವಾಗಲೂ ಜಾಗ್ರತೆ ವಹಿಸಬೇಕು.) ಕೆಲವು ಸಾರಿ ಒಂದು ಆಸ್ಪತ್ರೆಯ ಮೇಲೆತ್ತುವ ಮತ್ತು ಇಳಿಸುವ ಸಾಧನವಿರುವ ಮಂಚ, ಆಸರೆಗಳು, ಬಿಗಿಪಟ್ಟಿಗಳು, ಗಾಲಿಕುರ್ಚಿ, ಕಿವಿಕೇಳಿಸುವ ಸಾಧನ ಮುಂತಾದವುಗಳನ್ನು ಎರವಲಿನ ರೂಪದಲ್ಲಿ ಕೊಡಲಾಗುತ್ತವೆ. ಅನೇಕ ವಯೋವೃದ್ಧರು ತಮಗೆ ಏನೂ ಅಗತ್ಯವಿಲ್ಲ ಮತ್ತು ಅಂಥ ಹೊಸ ವಸ್ತುಗಳನ್ನು ಪಡೆಯುವುದರಲ್ಲಿ ಪ್ರಯೋಜನವಿಲ್ಲವೆಂದು ಭಾವಿಸುವುದರಿಂದ, ಸಂಬಂಧಿಕರು ಆಗಿಂದಾಗ್ಗೆ ಯೋಗ್ಯ ಸಲಹೆಯನ್ನು ಕೊಡಬೇಕು, ಪ್ರೇರೇಪಿಸುವಿಕೆಯನ್ನೂ ಬಳಸಬೇಕು. ಸ್ನಾನಗೃಹದ ಬಾಗಲಿಗೆ ಒಂದು ವ್ಯಾವಹಾರಿಕ ಕೈಹಿಡಿಯು ಒಂದು ಹೂಗೊಂಚಲಿಗಿಂತಲೂ ಹೆಚ್ಚು ನಿಜ ಸಂತೋಷವನ್ನು ಉಂಟುಮಾಡಬಲ್ಲದು.
ವೃದ್ಧರ ಪರಾಮರಿಕೆಯು ಮಹಾ ಮಾನಸಿಕ ಒತ್ತಡವನ್ನು ತರಬಲ್ಲದು, ವಿಶೇಷವಾಗಿ ಆ ವ್ಯಕ್ತಿಯು ಮನೋದೌರ್ಬಲ್ಯಕ್ಕೆ ಒಳಗಾಗಿರುವಾಗ. ಮನೋದೌರ್ಬಲ್ಯವು ಹೆಚ್ಚಾಗಿ ಆಂತರಿಕವಾಗಿ ಗೋಚರವಾಗುತ್ತದೆ. ರೋಗಿಯು ಅನಾವಶ್ಯಕವಾಗಿ ನಿಷ್ಕ್ರಿಯನಾಗಿರುವುದರಿಂದ ತಡೆಯುವ ಮೂಲಕ ಅದನ್ನು ಪ್ರತಿಭಟಿಸಲು ಒಬ್ಬನು ಪ್ರಯತ್ನಿಸಬಲ್ಲನು. ಮುಪ್ಪಿನ ರೋಗಿಯು ತಾನು ಅತಿಯಾಗಿ ಒಲುಮೆಯಲ್ಲಿದ್ದ ಒಬ್ಬ ವ್ಯಕ್ತಿಯೆಡೆಗೆ ಥಟ್ಟನೆ ಕೆರಳಬಹುದು. ಮುದೀ ಪ್ರಾಯದವರು ಸತ್ಯದ ಸಂಬಂಧವಾದ ಎಲ್ಲವನ್ನು ಮರೆತುಬಿಡಲೂ ಬಹುದೆಂಬದನ್ನು ಸಂಬಂಧಿಕರು ಅಂಗೀಕರಿಸಲೇಬೇಕು—ನಂಬಿಕೆ ಕಳಕೊಂಡ ರುಜುವಾತಲ್ಲ, ಶಾರೀರಿಕ ಒಡೆತದ ಶೋಚನೀಯ ಪರಿಣಾಮವು.
ರೋಗಿಯು ಒಂದು ಆಸ್ಪತ್ರೆಯಲ್ಲಿ ಅಥವಾ ನರ್ಸಿಂಗ್ ಹೋಮ್ನಲ್ಲಿ ಇರುವುದಾದರೆ, ಜನನ ದಿನಗಳು, ಕ್ರಿಸ್ಮಸ್, ಅಥವಾ ಇತರ ಐಹಿಕ ಹಬ್ಬಗಳ ಸಂಬಂಧದಲ್ಲಿ ಏನು ಮಾಡಬೇಕೆಂದು ಸಿಬ್ಬಂದಿ ಸದಸ್ಯರಿಗೆ ತಿಳಿದಿರುವಂತೆ ಅಧಿಕಾರಿಗಳೊಂದಿಗೆ ಯೋಗ್ಯ ಸಂಪರ್ಕವು ಆವಶ್ಯಕವು. ಒಂದು ಶಸ್ತ್ರಕ್ರಿಯೆಯು ಅಗತ್ಯವಾಗಿದ್ದಲ್ಲಿ, ರಕ್ತಪೂರಣದ ಸಂಬಂಧದಲ್ಲಿ ರೋಗಿಯ ವೀಕ್ಷಣೆಗಳನ್ನು ಸಂಬಂಧಿಕರು ವಿವರಿಸಿ, ದಾಖಲೆ ಮಾಡಿಡಬಹುದು.