ಯೆಹೋವನ ಅಮೂಲ್ಯ ಕುರಿಗಳನ್ನು ಕೋಮಲವಾಗಿ ಪರಿಪಾಲಿಸುವುದು
ಹಿರಿಯರು ಏಕಾಗ್ರತೆಯಿಂದ ಆಲಿಸಿದರು. ಅವರು ಅಪೊಸ್ತಲ ಪೌಲನಿಂದ ಬೋಧನೆಯನ್ನು ಪಡೆಯಲು ಎಫೆಸದಿಂದ ಮಿಲೇತಕ್ಕೆ ಸುಮಾರು 50 ಕಿಲೊ ಮೀಟರ್ ಪ್ರಯಾಣಿಸಿದ್ದರು. ಈಗ ಅವರು ಅವನನ್ನು ನೋಡುವುದು ಇದೇ ಕಡೆಯ ಬಾರಿ ಎಂದು ಕೇಳಿ ಬಹಳ ವ್ಯಥೆಪಟ್ಟರು. ಆದ್ದರಿಂದ ಅನುಸರಿಸಿ ಬರುವ ಮಾತುಗಳು ಅತ್ಯಂತ ಮಹತ್ವದ್ದಾಗಿತ್ತೆಂದು ಅವರು ಅರಿತಿದ್ದರು: “ನಿಮಗೆ ಮತ್ತು ತನ್ನ ಸ್ವಂತ ಕುಮಾರನ ರಕ್ತದಿಂದ ಕೊಂಡುಕೊಂಡ ದೇವರ ಸಭೆಯನ್ನು ಪಾಲಿಸಲು ಯಾವುದರ ಮಧ್ಯೆ ಪವಿತ್ರಾತ್ಮವು ನಿಮ್ಮನ್ನು ಮೇಲ್ವಿಚಾರಕರಾಗಿ ನೇಮಿಸಿದೆಯೋ ಆ ಸಕಲ ಹಿಂಡಿಗೆ ಗಮನ ಕೊಡಿರಿ.”—ಅ.ಕೃತ್ಯಗಳು 20:25, 28, NW, 38.
ಕುರುಬರಿಗೆ ಪೌಲನ ಸಂಕ್ಷಿಪ್ತ ಪರಾಮರ್ಶೆಯು ನಿಶ್ಚಯವಾಗಿಯೂ ಎಫೆಸದ ಆ ಹಿರಿಯರಿಗೆ ಒಂದು ಮಾಹಿತಿಯ ಸಂಪತ್ತನ್ನೇ ನೀಡಿತ್ತು. ಗ್ರಾಮಾಂತರ ಪ್ರದೇಶದ ಸುತ್ತಮುತ್ತಲಲ್ಲಿ ಕುರಿಗಳನ್ನು ಮೇಯಿಸುವ ಕೆಲಸದೊಂದಿಗೆ ಅವರು ಪರಿಚಯಸ್ಥರಾಗಿದ್ದರು. ಹೀಬ್ರೂ ಶಾಸ್ತ್ರ ಗ್ರಂಥದಲ್ಲಿ ಕುರುಬರಿಗಾಗಿ ಕೊಡಲ್ಪಟ್ಟ ಅನೇಕ ಆಧಾರವಿಷಯಗಳಿಗೆ ಕೂಡ ಅವರು ಪರಿಚಿತರಾಗಿದ್ದರು. ಮತ್ತು ಯೆಹೋವನು ತಾನೇ ತನ್ನನ್ನು ಜನರ ಕುರುಬನಿಗೆ ಹೋಲಿಸಿಕೊಂಡದ್ದನ್ನು ಅವರು ತಿಳಿದಿದ್ದರು.—ಯೆಶಾಯ 40:10, 11.
“ಹಿಂಡಿ” ನಲ್ಲಿ “ಮೇಲ್ವಿಚಾರಕ” ರಾಗಿ, ಮತ್ತು “ಹಿಂಡಿನ” “ಕುರುಬ”ರಾಗಿ ಅವರ ಕುರಿತು ಪೌಲನು ಮಾತಾಡಿದನು. “ಮೇಲ್ವಿಚಾರಕರು” ಎಂಬ ಪದವು ಅವರ ನೇಮಕವು ಏನು ಎಂದು ಸೂಚಿಸುವಾಗ, “ಕುರುಬ” ಎಂಬ ಪದವು ಅವರು ಆ ಮೇಲ್ವಿಚಾರಣೆಯನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂದು ವಿವರಿಸುತ್ತದೆ. ಹೌದು, ಕುರುಬನೊಬ್ಬನು ತನ್ನ ಮಂದೆಯನ್ನು ಪ್ರೀತಿಯಿಂದ ನೋಡುವ ಅದೇ ವಿಧಾನದಲ್ಲಿ ಮೇಲ್ವಿಚಾರಕರು ಸಭೆಯ ಪ್ರತಿಯೊಬ್ಬ ಸದಸ್ಯನನ್ನು ಉಪಚರಿಸತಕ್ಕದ್ದು.
ಇಂದು, ಕೆಲವೇ ಹಿರಿಯರು ಅಕ್ಷರಾರ್ಥ ಕುರಿಪಾಲನೆಯಲ್ಲಿ ನೇರವಾದ ಅನುಭವವನ್ನು ಪಡೆದಿದ್ದಾರೆ. ಆದರೆ ಬೈಬಲು ಕುರಿ ಮತ್ತು ಕುರುಬರಿಗೆ, ವಿಶೇಷವಾಗಿ ಸಾಂಕೇತಿಕಾರ್ಥದಲ್ಲಿ ಎಷ್ಟೊಂದು ಉಲ್ಲೇಖಗಳನ್ನು ಕೊಡುತ್ತದೆಂದರೆ, ಪೌಲನ ಮಾತುಗಳಲ್ಲಿರುವ ಪ್ರಭಾವವು ಅನಂತ ಪರಿಣಾಮವನ್ನು ಹೊಂದಿವೆ. ಮತ್ತು ಪ್ರಾಚೀನ ಕಾಲದಲ್ಲಿ ಯಾರು ದೇವರ ಅನುಗ್ರಹ ಪಾತ್ರರಾದರೊ ಆ ಕುರುಬರ ಕುರಿತಾದ ದಾಖಲೆಗಳಿಂದ ಹೆಚ್ಚನ್ನು ಕಲಿಯಸಾಧ್ಯವಿದೆ. ದೇವರ ಸಭೆಯನ್ನು ಪರಿಪಾಲಿಸುವುದಕ್ಕಾಗಿ ಯಾವ ಗುಣಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂಬ ಅವರ ಗಮನಾರ್ಹ ಮಾದರಿಗಳು ಆಧುನಿಕ ದಿನದ ಹಿರಿಯರಿಗೆ ಸಹಾಯಮಾಡಬಲ್ಲವು.
ನಿರ್ಭಯನಾಗಿದ್ದ ಕುರುಬ ದಾವೀದ
ಬೈಬಲ್ ಸಮಯದ ಕುರಿಪಾಲಕರ ಕುರಿತು ಯೋಚಿಸುವಾಗ, ದಾವೀದನನ್ನು ನಾವು ಬಹುಮಟ್ಟಿಗೆ ಜ್ಞಾಪಿಸಿಕೊಳ್ಳುವೆವು, ಏಕೆಂದರೆ ಅವನು ಕುರಿ ಕಾಯುವವನೋಪಾದಿ ತನ್ನ ಕೆಲಸವನ್ನು ಪ್ರಾರಂಭಿಸಿದನು. ಒಬ್ಬ ಕುರುಬನಾಗಿರುವುದು ಒಂದು ಪ್ರಧಾನತೆಯ ಸ್ಥಾನವಲ್ಲವೆಂಬದೇ ದಾವೀದನ ಜೀವನದಿಂದ ನಾವು ಕಲಿಯುವ ಪ್ರಥಮ ಪಾಠಗಳಲ್ಲಿ ಒಂದಾಗಿದೆ. ವಾಸ್ತವವಾಗಿ, ಪ್ರವಾದಿಯಾದ ಸಮುವೇಲನು ಇಷಯನ ಮಕ್ಕಳಲ್ಲೊಬ್ಬನನ್ನು ಇಸ್ರಾಯೇಲ್ಯರ ಮುಂದಿನ ಅರಸನನ್ನಾಗಿ ಅಭಿಷೇಕಿಸಲು ಆಗಮಿಸಿದಾಗ, ಯುವಕ ದಾವೀದನು ಆರಂಭದಲ್ಲಿ ಸಂಪೂರ್ಣವಾಗಿ ಅಲಕ್ಷ್ಯಮಾಡಲ್ಪಟ್ಟನು. ಯೆಹೋವನು ಅವನ ಏಳು ಮಂದಿ ಅಣ್ಣಂದಿರನ್ನು ನಿರಾಕರಿಸಿದ ಅನಂತರವೇ ಹೊಲದಲ್ಲಿ “ಕುರಿಮೇಯಿಸುತ್ತಾ” ಇದ್ದ ದಾವೀದನ ಕುರಿತು ಪ್ರಸ್ತಾಪಿಸಲಾಯಿತು. (1 ಸಮುವೇಲ 16:10, 11) ಆದರೂ, ದಾವೀದನು ಕುರುಬನೋಪಾದಿ ಕಳೆದ ವರ್ಷಗಳು ಇಸ್ರಾಯೇಲ್ ಜನಾಂಗವನ್ನು ಪರಿಪಾಲಿಸುವ ಜರೂರಿಯ ಕೆಲಸಕ್ಕೆ ಅವನನ್ನು ಸಿದ್ದಗೊಳಿಸಿತು. ಕೀರ್ತನೆ 78:70, 71 ಹೇಳುವುದು: “ಇದಲ್ಲದೆ ಆತನು ತನ್ನ ಸೇವಕನಾದ ದಾವೀದನನ್ನು ಆರಿಸಿ. . . ತನ್ನ ಪ್ರಜೆಗಳಾದ ಇಸ್ರಾಯೇಲ್ಯರನ್ನು ಸಾಕುವದಕ್ಕೆ ನೇಮಿಸಿದನು.” ಉಚಿತವಾಗಿಯೇ, ದಾವೀದನು ಸುಂದರ ಮತ್ತು ಹೆಸರಾಂತ 23 ನೆಯ ಕೀರ್ತನೆಯನ್ನು: “ಯೆಹೋವನು ನನಗೆ ಕುರುಬನು”, ಎಂಬ ಮಾತುಗಳಿಂದ ಪ್ರಾರಂಭಿಸಿ ಬರೆದನು.
ಕ್ರೈಸ್ತ ಸಭೆಯಲ್ಲಿರುವ ಹಿರಿಯರು, ದಾವೀದನಂತೆ, ದೀನ ಉಪಕುರುಬರಾಗಿ ಸೇವೆ ಮಾಡಬೇಕು ಮತ್ತು ಅನುಚಿತ ಪ್ರಧಾನತೆಯನ್ನು ಹುಡುಕಬಾರದು. ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆದಂತೆ, ಈ ಕುರಿಪಾಲನೆಯ ಹೊಣೆಗಾರಿಕೆಯನ್ನು ಪಡಕೊಳ್ಳಬೇಕೆಂದಿರುವವರು ಪ್ರಧಾನತೆಯನ್ನಲ್ಲ, “ಒಳ್ಳೇ ಕೆಲಸವನ್ನು ಅಪೇಕ್ಷಿಸು” ವವರಾಗಿದ್ದಾರೆ.—1 ತಿಮೊಥೆಯ 3:1.
ಅಕ್ಷರಶಃ ಒಬ್ಬ ಕುರಿಪಾಲಕನೋಪಾದಿ ದಾವೀದನ ಕೆಲಸವು ವಿನೀತವಾಗಿದ್ದರೂ, ಆಗಾಗ ಅದು ಮಹಾ ಎದೆಗಾರಿಕೆಗೆ ಕರೆನೀಡುತಿತ್ತು. ಉದಾಹರಣೆಗೆ, ಒಂದು ಸಂದರ್ಭದಲ್ಲಿ ಅವನ ತಂದೆಯ ಹಿಂಡಿನಿಂದ ಕುರಿಗಳು ಸಿಂಹವೊಂದರಿಂದ ಮತ್ತು ಇನ್ನೊಮ್ಮೆ ಕರಡಿಯಿಂದ ಕೊಂಡೊಯ್ಯಲ್ಪಟ್ಟಾಗ, ದಾವೀದನು ನಿರ್ಭಯವಾಗಿ ಅವುಗಳನ್ನು ಎದುರಿಸಿದನು ಮತ್ತು ಆ ಮಾಂಸಾಹಾರಿ ಪ್ರಾಣಿಗಳನ್ನು ಕೊಂದುಹಾಕಿದನು. (1 ಸಮುವೇಲ 17:34-36) ಸಿಂಹವೊಂದು ಅದಕ್ಕಿಂತಲೂ ಅತ್ಯಂತ ದೊಡ್ಡ ಪ್ರಾಣಿಗಳನ್ನು ಕೊಲ್ಲಬಲ್ಲದೆಂದು ಒಬ್ಬನು ಪರಿಗಣಿಸುವಾಗ ಇದೊಂದು ಧೈರ್ಯದ ಗಮನಾರ್ಹವಾದ ಪ್ರದರ್ಶನವಾಗಿತ್ತು. ಮತ್ತು ಪ್ಯಾಲೆಸ್ತೀನ್ನಲ್ಲಿ ಹಿಂದೆ ನೆಲೆಸಿದ್ದ, 140 ಕಿಲೋಗ್ರಾಮ್ಗಳಷ್ಟು ತೂಕವಿರುವ, ಸಿರಿಯನ್ ಕಂದು ಕರಡಿಯು ಅದರ ಬಲಿಷ್ಟವಾದ ಪಂಜಾದ ಒಂದೇ ಹೊಡೆದಿಂದ ಜಿಂಕೆಯೊಂದನ್ನು ಕೊಲ್ಲಬಲ್ಲದು.
ತನ್ನ ತಂದೆಯ ಕುರಿ ಹಿಂಡಿನ ಕಡೆಗಿದ್ದ ದಾವೀದನ ನಿರ್ಭೀತ ಚಿಂತೆಯು, ಕ್ರೈಸ್ತ ಸಭೆಯಲ್ಲಿರುವ ಕುರುಬರಿಗೆ ಒಂದು ಒಳ್ಳೇ ಮಾದರಿಯಾಗಿದೆ. “ಹಿಂಡನ್ನು ಕೋಮಲತೆಯಿಂದ ಉಪಚರಿಸದ” “ಕ್ರೂರವಾದ ತೋಳಗಳ” ಕುರಿತು ಅಪೊಸ್ತಲ ಪೌಲನು ಎಫೆಸದ ಹಿರಿಯರನ್ನು ಎಚ್ಚರಿಸಿದನು. (ಅ. ಕೃತ್ಯಗಳು 20:29, NW) ಆಧುನಿಕ ಸಮಯಗಳಲ್ಲಿಯೂ, ಯೆಹೋವನ ಮಂದೆಯ ಆತ್ಮಿಕ ಒಳಿತಿನ ಸಂರಕ್ಷಣೆಗಾಗಿ ಕ್ರೈಸ್ತ ಕುರುಬರು ಧೈರ್ಯವನ್ನು ಪ್ರದರ್ಶಿಸುವ ಸಂದರ್ಭಗಳೇಳಬಲ್ಲವು.
ಕುರಿಗಳು ಧೈರ್ಯವಾಗಿ ಸಂರಕ್ಷಿಸಲ್ಪಡುವಾಗ, ಪ್ರೀತಿಯ ಕುರುಬನಾದ ದಾವೀದ ಮತ್ತು ಒಳ್ಳೇ ಕುರುಬನಾದ, ಯೇಸು ಕ್ರಿಸ್ತನ ಅನುಕರಣೆಯಲ್ಲಿ ಅವುಗಳು ಅತ್ಯಂತ ಕೋಮಲವಾಗಿ ಉಪಚರಿಸಲ್ಪಡಬೇಕು. (ಯೋಹಾನ 10:11) ಮಂದೆಯು ಯೆಹೋವನಿಗೆ ಸೇರಿದ್ದೆಂದು ತಿಳಿದವರಾಗಿ ಹಿರಿಯರು ಮಂದೆಯೊಂದಿಗೆ ಒರಟಾಗಿರುವವರು, “ದೇವರ ಒಡೆತನವುಳ್ಳವರ ಮೇಲೆ ದೊರೆತನಮಾಡುವವರು” ಎಂದಿಗೂ ಆಗಿರಬಾರದು.—1 ಪೇತ್ರ 5:2, 3, NW; ಮತ್ತಾಯ 11:28-30; 20:25-27.
ಲೆಕ್ಕವನ್ನು ಒಪ್ಪಿಸುವುದು
ಪೂರ್ವಜನಾದ ಯಾಕೋಬನು ಇನೊಬ್ಬ ಹೆಸರಾಂತ ಕುರುಬನಾಗಿದ್ದನು. ಅವನ ವಶಕ್ಕೆ ಒಪ್ಪಿಸಲ್ಪಟ್ಟ ಪ್ರತಿಯೊಂದು ಕುರಿಗೂ ತಾನೇ ವೈಯಕ್ತಿಕವಾಗಿ ಜವಾಬ್ದಾರನೆಂದು ಅವನು ಪರಿಗಣಿಸಿದನು. ಎಷ್ಟೊಂದು ನಂಬಿಗಸ್ತಿಕೆಯಿಂದ ಅವನು ತನ್ನ ಮಾವನಾದ ಲಾಬಾನನ ಕುರಿಮಂದೆಗಳ ಪರಾಮರಿಕೆ ಮಾಡಿದನೆಂದರೆ, ಅವನ ಇಪ್ಪತ್ತು ವರುಷಗಳ ಸೇವೆಯ ಅನಂತರ, ಯಾಕೋಬನು ಹೇಳಶಕ್ತನಾದದ್ದು: “ನಾನು ಇಪ್ಪತ್ತು ವರುಷ ನಿನ್ನ ಬಳಿಯಲ್ಲಿದ್ದೆನಲ್ಲಾ. ನಿನ್ನ ಆಡುಕುರಿಗಳು ಕಂದು ಹಾಕಲಿಲ್ಲ; ನಿನ್ನ ಹಿಂಡಿನ ಟಗರುಗಳನ್ನು ನಾನೇನೂ ತಿಂದುಬಿಡಲಿಲ್ಲ; ಕಾಡುಮೃಗಗಳು ಕೊಂದ ಪಶುಗಳನ್ನು ನಿನ್ನ ಭಾಗಕ್ಕೆ ಹಾಕದೆ ನಾನೇ ಬದಲುಕೊಟ್ಟೆನು; ಹಗಲಾಗಲಿ ಇರುಳಾಗಲಿ ಕದ್ದುಹೋದದ್ದರ ಲೆಕ್ಕವನ್ನು ನನ್ನಿಂದಲೇ ತೆಗೆದುಕೊಂಡಿ.”—ಆದಿಕಾಂಡ 31:38, 39.
ನಮ್ಮ ಆತ್ಮಗಳ ಕುರುಬನಾದ ಯೆಹೋವ ದೇವರು, “ಸ್ವಂತ ಮಗನ ರಕ್ತದಿಂದ ಸಂಪಾದಿಸಿಕೊಂಡ,” ಕುರಿಗಳಿಗಾಗಿ ಇನ್ನೂ ಮಹತ್ತಾದ ಚಿಂತೆಯನ್ನು ಕ್ರೈಸ್ತ ಮೇಲ್ವಿಚಾರಕರು ಪ್ರದರ್ಶಿಸುತ್ತಾರೆ. (ಅ. ಕೃತ್ಯಗಳು 20:28, NW; 1 ಪೇತ್ರ 2:25; 5:4) ಸಭೆಯಲ್ಲಿ ಮುಂದಾಳತ್ವ ವಹಿಸುವ ಪುರುಷರು, “ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆಂದು” ಇಬ್ರಿಯ ಕ್ರೈಸ್ತರಿಗೆ ನೆನಪಿಗೆ ತರುವಾಗ ಈ ಪ್ರಾಮುಖ್ಯ ಜವಾಬ್ದಾರಿಯನ್ನು ಪೌಲನು ಒತ್ತಿ ಹೇಳಿದನು.—ಇಬ್ರಿಯ 13:17.
ಯಾಕೋಬನ ಮಾದರಿಯು ಕುರುಬನ ಕೆಲಸಕ್ಕೆ ಸಮಯದ ಮಿತಿ ಇಲ್ಲದಿರುವುದನ್ನು ಕೂಡ ತೋರಿಸಿಕೊಡುತ್ತದೆ. ಅದು ಹಗಲು ರಾತ್ರಿಯ ಕೆಲಸವಾಗಿದೆ ಮತ್ತು ಅನೇಕ ಬಾರಿ ಸ್ವತ್ಯಾಗವನ್ನು ಕೇಳಿಕೊಳ್ಳುತ್ತದೆ. ಅವನು ಲಾಬಾನನಿಗಂದದ್ದು: “ಹಗಲಲ್ಲಿ ಬಿಸಿಲಿನಿಂದಲೂ ಇರುಳಲ್ಲಿ ಚಳಿಯಿಂದಲೂ ಬಾಧೆಪಟ್ಟೆನು; ನಿದ್ದೆಮಾಡುವುದಕ್ಕಾದರೂ ಅವಕಾಶವಾಗಲಿಲ್ಲ; ನನ್ನ ಸ್ಥಿತಿ ಹೀಗಿತ್ತು.”—ಆದಿಕಾಂಡ 31:40.
ಮುಂದಿನ ಅನುಭವವು ದೃಷ್ಟಾಂತಿಸುವಂತೆ, ಇಂದಿನ ಅನೇಕ ಪ್ರೀತಿಪೂರ್ಣ ಹಿರಿಯರ ಕುರಿತು ಇದು ನಿಶ್ಚಯವಾಗಿಯೂ ಸತ್ಯವಾಗಿದೆ. ಮಿದುಳು ಗಡ್ಡೆ ಅಂಗಾಂಶಛೇದನವು ಜಟಿಲ ಪರಿಸ್ಥಿತಿಯನ್ನು ಫಲಿಸಿದ ಮೇಲೆ ಒಂದು ಆಸ್ಪತ್ರೆಯ ಇಂಟೆನ್ಸಿವ್ ಕೇರ್ ಯೂನಿಟ್ಗೆ ಒಬ್ಬ ಸಹೋದರನನ್ನು ಸೇರಿಸಲಾಯಿತು. ಅವನ ಕುಟುಂಬವು ದಿನ ಮತ್ತು ರಾತ್ರಿ ಆಸ್ಪತ್ರೆಯಲ್ಲಿ ಅವನ ಬಳಿಯಲ್ಲಿರಲು ಏರ್ಪಡಿಸಿತು. ಅಗತ್ಯದ ನೈತಿಕ ಬೆಂಬಲ ಮತ್ತು ಉತ್ತೇಜನವನ್ನೀಯಲು, ಆ ರೋಗಿಯನ್ನು ಮತ್ತವನ ಕುಟುಂಬಕ್ಕೆ ಪ್ರತಿ ದಿನ ಭೇಟಿ ಕೊಡುವಂತೆ ಸ್ಥಳೀಯ ಹಿರಿಯರಲ್ಲಿ ಒಬ್ಬನು ತನ್ನ ಕಾರ್ಯಮಗ್ನ ಕಾಲತಖ್ತೆಯನ್ನು ಹೊಂದಿಸಿಕೊಂಡನು. ಆದರೂ, ಆಸ್ಪತ್ರೆಯ ತೀವ್ರ ಚಿಕಿತ್ಸಾಕ್ರಮದ ದಿನಚರಿಯ ಕಾರಣ, ಅವನಿಗೆ ಪ್ರತಿನಿತ್ಯ ದಿನದಲ್ಲಿ ಭೇಟಿ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದರ ಅರ್ಥವು ಅನೇಕ ಬಾರಿ ಆ ಹಿರಿಯನು ರಾತ್ರಿ ಹೊತ್ತಾಗಿ ಆಸ್ಪತ್ರೆಯಲ್ಲಿರಬೇಕಾಗಿತ್ತು. ಆದರೆ ಪ್ರತಿ ರಾತ್ರಿ ಸಂತೋಷದಿಂದ ಅವನಲಿಗ್ಲೆ ಹೋದನು. “ನನಗೆ ಅನುಕೂಲವಾದ ಸಮಯದಲ್ಲಲ್ಲ, ರೋಗಿಗೆ ಸರಿಬೀಳುವ ಸಮಯಕ್ಕೆ ಭೇಟಿ ಕೊಡಬೇಕಾಗಿರುವುದನ್ನು ನಾನು ಗ್ರಹಿಸಿದೆನು,” ಎಂದು ಆ ಹಿರಿಯನಂದನು. ಆ ಆಸ್ಪತ್ರೆಯ ಮತ್ತೊಂದು ಜಾಗಕ್ಕೆ ಸ್ಥಳಾಂತರಿಸಲ್ಪಡಲು ಆ ಸಹೋದರನು ಸಾಕಷ್ಟು ಗುಣಹೊಂದಿದಾಗಲೂ, ಆ ಹಿರಿಯನು ತನ್ನ ಪ್ರತಿದಿನದ ಪ್ರೋತ್ಸಾಹಕರ ಭೇಟಿಗಳನ್ನು ಮುಂದುವರಿಸಿದನು.
ಮೋಶೆಯು ಕುರುಬನೋಪಾದಿ ಕಲಿತ ಸಂಗತಿ
“ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಸಾತ್ವಿಕನು,” ಎಂದು ಬೈಬಲು ಮೋಶೆಯನ್ನು ವರ್ಣಿಸುತ್ತದೆ. (ಅರಣ್ಯಕಾಂಡ 12:3) ಆದಾಗ್ಯೂ, ವಿಷಯವು ಯಾವಾಗಲೂ ಹೀಗೆಯೇ ಇದ್ದಿರಲಿಲ್ಲವೆಂದು ದಾಖಲೆಯು ತೋರಿಸುತ್ತದೆ. ಯೌವನಸ್ಥ ಪುರುಷನಾಗಿದ್ದಾಗ ಅವನು, ಜತೆ ಇಸ್ರಾಯೇಲನನ್ನು ಹೊಡೆದದ್ದಕ್ಕಾಗಿ ಐಗುಪ್ತ್ಯನೊಬ್ಬನನ್ನು ಕೊಂದು ಹಾಕಿದ್ದನು. (ವಿಮೋಚನಕಾಂಡ 2:11, 12) ನಿಶ್ಚಯವಾಗಿಯೂ ಇದು ಸಾತ್ವಿಕ ವ್ಯಕ್ತಿಯ ಕೃತ್ಯವಾಗಿರಲಿಲ್ಲ! ಆದರೂ, ಅನಂತರ ಲಕ್ಷಾಂತರ ಮಂದಿಯ ಜನಾಂಗವನ್ನು ಅರಣ್ಯದೊಳಗಿಂದ ವಾಗ್ದಾನ ದೇಶಕ್ಕೆ ಕರಕೊಂಡು ಹೋಗಲು ದೇವರು ಮೋಶೆಯನ್ನು ಉಪಯೋಗಿಸಿದನು. ಹಾಗಾದರೆ ಸ್ಪಷ್ಟವಾಗಿಗಿ, ಇನ್ನೂ ಹೆಚ್ಚಿನ ತರಬೇತಿಯ ಅಗತ್ಯ ಮೋಶೆಗಿತ್ತು.
ಮೋಶೆಗೆ “ಐಗುಪ್ತದೇಶದವರ ಸರ್ವವಿದ್ಯೆಗಳಲ್ಲಿ” ಪ್ರಾಪಂಚಿಕ ತರಬೇತಿಯು ಆಗಲೇ ದೊರಕಿದ್ದರೂ, ಯೆಹೋವನ ಮಂದೆಯನ್ನು ಪಾಲಿಸಲು ಅವನಿಗೆ ಹೆಚ್ಚಿನ ತರಬೇತಿಯ ಅಗತ್ಯವಿತ್ತು. (ಅ. ಕೃತ್ಯಗಳು 7:22) ಈ ಹೆಚ್ಚಿನ ತರಬೇತಿಯು ಪ್ರಾಯಶಃ ಯಾವ ರೂಪವನ್ನು ತಕ್ಕೊಳ್ಳಸಾಧ್ಯವಿತ್ತು? ಒಳ್ಳೇದು, ದೇವರು ಮೋಶೆಯನ್ನು 40 ವರುಷ ಕಾಲ ಮಿದ್ಯಾನ್ ದೇಶದಲ್ಲಿ ವಿನೀತ ಕುರುಬನಾಗಿ ಸೇವಿಸುವಂತೆ ಬಿಟ್ಟನು. ಅವನ ಮಾವ ಇತ್ರೋನನ, ಕುರಿ ಹಿಂಡುಗಳನ್ನು ಪಾಲಿಸುತ್ತಿರುವಾಗ, ಸೈರಣೆ, ಸಾತ್ವಿಕತ್ವ, ದೈನ್ಯಭಾವ, ದೀರ್ಘಶಾಂತಿ, ಮತ್ತು ತಾಳ್ಮೆಗಳಂಥ ಉತ್ತಮ ಗುಣಗಳನ್ನು ಮೋಶೆಯು ಬೆಳೆಸಿಕೊಂಡನು. ಯೆಹೋವನಿಗಾಗಿ ಕಾದುಕೊಂಡಿರಲು ಕೂಡ ಅವನು ಕಲಿತನು. ಹೌದು, ವಾಚ್ಯಾರ್ಥದ ಕುರಿಗಳನ್ನು ಪಾಲಿಸುವುದು ಮೋಶೆಗೆ ಇಸ್ರಾಯೇಲ್ ಜನಾಂಗದ ಸಮರ್ಥ ಕುರುಬನಾಗಲು ಯೋಗ್ಯತೆ ಪಡೆಯುವಂತೆ ಮಾಡಿತು.—ವಿಮೋಚನಕಾಂಡ 2:15–3:1; ಅ. ಕೃತ್ಯಗಳು 7:29, 30.
ಇಂದು ದೇವ ಜನರ ಜಾಗ್ರತೆ ವಹಿಸುವಲ್ಲಿ ಒಬ್ಬ ಹಿರಿಯನಿಗೆ ಅವಶ್ಯವಿರುವುದು ಇವೇ ಗುಣಗಳಲ್ಲವೆ? ಹೌದು, ಯಾಕಂದರೆ ಪೌಲನು ತಿಮೊಥೆಯನಿಗೆ ನೆನಪು ಹುಟ್ಟಿಸಿದ್ದು “ಕರ್ತನ ದಾಸನು . . . ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವದರಲ್ಲಿ ಪ್ರವೀಣನೂ ಕೇಡನ್ನು ಸಹಿಸಿಕೊಳ್ಳುವವನೂ ಎದುರಿಸುವವರನ್ನು ನಿಧಾನದಿಂದ ತಿದ್ದುವವನೂ ಆಗಿರಬೇಕು.”—2 ತಿಮೊಥೆಯ 2:24.
ಇಂಥ ಗುಣಗಳನ್ನು ಬೆಳೆಸಿಕೊಳ್ಳುವುದರಲ್ಲಿ ಕಷ್ಟವಿರುವ ಕಾರಣ ಒಬ್ಬ ಹಿರಿಯನು ತನ್ನೊಂದಿಗೆ ತಾನೇ ಆಶಾಭಂಗಗೊಂಡಂತೆ ಭಾವಿಸುವ ಸಮಯಗಳಿರಬಹುದು. ಆದರೂ, ಅವನು ಬಿಟ್ಟುಕೊಡಬಾರದು. ಮೋಶೆಯಂತೆ, ಒಬ್ಬನಿಗೆ ಒಳ್ಳೆಯ ಕುರುಬನಾಗಲು ಅಗತ್ಯವಿರುವ ಗುಣಗಳನ್ನು ಪೂರ್ಣವಾಗಿ ಬೆಳೆಸಲು ದೀರ್ಘ ಸಮಯವು ಹಿಡಿಯಬಹುದು. ಹೇಗೂ, ಸಮಯಾನಂತರ ಅಂತಹ ಶೃದ್ಧಾಪೂರ್ವಕ ಪ್ರಯತ್ನಗಳು ಪ್ರತಿಫಲ ಹೊಂದುವವು.—ಹೋಲಿಸಿ 1 ಪೇತ್ರ 5:10.
ಒಬ್ಬ ಹಿರಿಯನೋಪಾದಿ, ಪಾಯಶಃ ಇತರರು ಉಪಯೋಗಿಸಲ್ಪಟ್ಟಂತೆ ನೀವು ಪೂರ್ಣವಾಗಿ ಉಪಯೋಗಿಸಲ್ಪಡದೇ ಇರಬಹುದು. ಮೋಶೆಯೊಂದಿಗಾದಂತೆ, ನಿರ್ದಿಷ್ಟ ಪ್ರಾಮುಖ್ಯ ಗುಣಗಳನ್ನು ಹೆಚ್ಚು ಪೂರ್ಣವಾಗಿ ಬೆಳೆಸಲು ಯೆಹೋವನು ನಿಮ್ಮನ್ನು ಅನುಮತಿಸುತ್ತಿದ್ದಾನೆಂದು ಅದರ ಅರ್ಥವಾಗಿರಬಲದ್ಲೊ? ಯೆಹೋವನು “ನಿಮಗೋಸ್ಕರ ಚಿಂತಿಸುತ್ತಾನೆ” ಎಂಬುದನ್ನು ಎಂದಿಗೂ ಮರೆಯ ಬೇಡಿರಿ. ಆದಾಗ್ಯೂ, ‘ದೇವರು ಅಂಹಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನಾದ ಕಾರಣ, ನಾವೆಲ್ಲರೂ ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಳ್ಳಬೇಕು’ ಎಂದೂ ನಾವು ಮನಸ್ಸಿನಲ್ಲಿಡಬೇಕು. (1 ಪೇತ್ರ 5:5-7) ಸ್ವತಃ ಶ್ರದ್ಧೆವಹಿಸಿಕೊಂಡು, ಯೆಹೋವನು ಅನುಮತಿಸುವ ತರಬೇತಿಯನ್ನು ಸ್ವೀಕರಿಸುವಲ್ಲಿ, ಮೋಶೆಯಂತೆ, ನೀವು ಆತನಿಗೆ ಹೆಚ್ಚು ಉಪಯುಕ್ತರಾಗಬಲ್ಲಿರಿ.
ಯೆಹೋವನ ಎಲ್ಲ ಕುರಿಗಳು ಅಮೂಲ್ಯವಾದವುಗಳು
ಬೈಬಲಿನ ಸಮಯಗಳ ವಿಶ್ವಾಸಾರ್ಹ, ಪ್ರೀತಿಯ ಕುರುಬರಿಗೆ ಪ್ರತಿಯೊಂದು ವೈಯಕ್ತಿಕ ಕುರಿಗಳ ಕಡೆಗೆ ಜವಾಬ್ದಾರಿಯ ಭಾವನೆಯಿತ್ತು. ಆತ್ಮಿಕ ಕುರುಬರ ವಿಷಯದಲ್ಲಿಯೂ ಅದು ನಿಜವಾಗಿರತಕ್ಕದ್ದು. ಇದು ಪೌಲನ ಮಾತುಗಳಿಂದ ಸ್ಪಷ್ಟವಾಗಿಗಿದೆ: “ಆ ಸಕಲ ಹಿಂಡಿಗೆ ಗಮನ ಕೊಡಿರಿ.” (ಅ. ಕೃತ್ಯಗಳು 20:28, NW) “ಸಕಲ ಹಿಂಡಿನ”ಲ್ಲಿ ಯಾರು ಸಹ ಒಳಗೂಡಿರಬಹುದು?
ನೂರು ಕುರಿಗಳಿದ್ದ ಆದರೂ ತಪ್ಪಿಕೊಂಡ ಒಂದನ್ನು ಹಿಂದೆ ತರಲು ವಿಳಂಬಿಸದೆ ಹುಡುಕಿದ ಒಬ್ಬ ಮನುಷ್ಯನ ದೃಷ್ಟಾಂತವನ್ನು ಯೇಸು ಕೊಟ್ಟನು. (ಮತ್ತಾಯ 18:12-14; ಲೂಕ 15:3-7) ಅದೇ ವಿಧದಲ್ಲಿ ಒಬ್ಬ ಮೇಲ್ವಿಚಾರಕನಿಗೆ ಸಭೆಯ ಪ್ರತಿಯೊಂದು ಸದಸ್ಯನಿಗಾಗಿ ಚಿಂತೆ ಇರಬೇಕು. ಶುಶ್ರೂಷೆಯಲ್ಲಿ ಯಾ ಕ್ರೈಸ್ತ ಕೂಟಗಳಿಗೆ ಹಾಜರಾಗುವಲ್ಲಿ ನಿಷ್ಕ್ರಿಯೆಯು ಕುರಿಯು ಇನ್ನು ಮೇಲೆ ಹಿಂಡಿಗೆ ಸಂಬಂಧಪಟ್ಟದ್ದಲ್ಲವೆಂದು ಅರ್ಥಕೊಡುವುದಿಲ್ಲ. ಯಾರಿಗಾಗಿ ಹಿರಿಯರು ಯೆಹೋವನಿಗೆ “ಲೆಕ್ಕ ಒಪ್ಪಿಸ”ಬೇಕೋ ಆ “ಸಕಲ ಹಿಂಡಿನ” ಭಾಗವಾಗಿ ಅವನಿರುತ್ತಾನೆ.
ಸಭೆಯೊಂದಿಗೆ ಸಹವಸಿಸುತ್ತಿದ್ದ ಕೆಲವರು ಅಕ್ರಿಯೆಯೊಳಗೆ ತೇಲಿಹೋದಾಗ ಒಂದು ಹಿರಿಯ ಮಂಡಳಿಯು ತೀರ ಚಿಂತಿತವಾಯಿತು. ಈ ವ್ಯಕ್ತಿಗಳ ಪಟ್ಟಿಯನ್ನು ತಯಾರಿಸಲಾಯಿತು, ಮತ್ತು ಅವರನ್ನು ಭೇಟಿಯಾಗಲು ಮತ್ತು ಯೆಹೋವನ ಕುರಿಹಿಂಡಿಗೆ ಹಿಂತಿರುಗುವಂತೆ ಸಹಾಯ ಮಾಡಲು ವಿಶೇಷ ಪ್ರಯತ್ನವನ್ನು ಮಾಡಲಾಯಿತು. ಎರಡುವರೆ ವರ್ಷದೊಳಗಾಗಿ, 30 ಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಯೆಹೋವನ ಸೇವೆಯಲ್ಲಿ ಮತ್ತೊಮ್ಮೆ ಕ್ರಿಯಾಶೀಲರಾಗುವಂತೆ ಮಾಡಲು ಅವರಿಗೆ ಸಾಧ್ಯವಾದುದಕ್ಕಾಗಿ ಅವರು ದೇವರಿಗೆ ಎಷ್ಟೊಂದು ಅಭಾರಿಗಳಾಗಿದ್ದರು. ಹೀಗೆ ಸಹಾಯ ಮಾಡಿದವರಲ್ಲೊಬ್ಬನು ಸಾಧಾರಣ 17 ವರ್ಷಗಳಿಂದ ಅಕ್ರಿಯನಾಗಿದ್ದನು!
ಕುರಿಗಳು “[ದೇವರ] ಸ್ವಂತ ಕುಮಾರನ ರಕ್ತದಿಂದ ಕೊಂಡು”ಕೊಳ್ಳಲ್ಪಟ್ಟಿವೆ ಎಂಬ ನಿಜತ್ವದ ಮೂಲಕ ಈ ಜವಾಬ್ದಾರಿಯ ಭಾರವನ್ನು ಮೇಲ್ವಿಚಾರಕರ ಮೇಲೆ ಇನ್ನೂ ಒತ್ತಿಹೇಳಲಾಗಿದೆ. (ಅ. ಕೃತ್ಯಗಳು 20:28) ಈ ಅಮೂಲ್ಯ ಕುರಿಗಳಿಗಾಗಿ ಇದಕ್ಕಿಂತ ಮೇಲಿನ ಮೌಲ್ಯವನ್ನು ಕೊಡುವುದು ಸಾಧ್ಯವಿದ್ದಿರಲಿಲ್ಲ. ಮತ್ತು ಪ್ರತಿಯೊಂದು ಕುರಿಯಂಥ ವ್ಯಕ್ತಿಯನ್ನು ಕಂಡುಹಿಡಿಯಲು ಮತ್ತು ಸಹಾಯ ಮಾಡಲು ಶುಶ್ರೂಷೆಯಲ್ಲಿ ವ್ಯಯಿಸಲಾಗುವ ಎಲ್ಲ ಸಮಯ ಮತ್ತು ಪ್ರಯತ್ನವನ್ನು ಆಲೋಚಿಸಿರಿ! ಅವರೆಲ್ಲರನ್ನು ದೇವರ ಕುರಿಹಿಂಡಿನೊಳಗೆ ಇಡಲು ಅಂಥದ್ದೇ ಪ್ರಯತ್ನವನ್ನು ಮಾಡಬಾರದೊ? ನಿಶ್ಚಯವಾಗಿಯೂ, ಸಭೆಯಲ್ಲಿರುವ ಪ್ರತಿ ಒಂದು ಕುರಿಯು ಅಮೂಲ್ಯವಾಗಿದೆ.
ಹಿಂಡಿನ ಸದಸ್ಯನೊಬ್ಬನು ಗಂಭೀರ ತರಹದ ತಪ್ಪಿನಲ್ಲಿ ಒಳಗೂಡಿದಾಗಲೂ, ಹಿರಿಯರ ಜವಾಬ್ದಾರಿಯು ಬದಲಾಗುವುದಿಲ್ಲ. ಅವರು ಚಿಂತೆಯಿರುವ ಕುರುಬರಂತೆಯೆ ಸಾಗುತ್ತಾರೆ, ಸಾಧ್ಯವಿರುವಲ್ಲಿ ತಪ್ಪಿತಸ್ಥನನ್ನು ಕೋಮಲತೆಯಿಂದ ಮತ್ತು ಶಾಂತಭಾವದಿಂದ ರಕ್ಷಿಸಲು ಪ್ರಯತ್ನಿಸುತ್ತಾರೆ. (ಗಲಾತ್ಯ 6:1, 2) ವಿಷಾದಕರವಾಗಿ, ಕೆಲವೊಂದು ಸಂದರ್ಭಗಳಲ್ಲಿ ಒಬ್ಬ ಸಭೆಯ ಸದಸ್ಯನಲ್ಲಿ ಅವನು ಗೈದಿರುವ ಗಂಭೀರ ಪಾಪಗಳಿಗಾಗಿ ದೈವಿಕ ದುಃಖದ ಕೊರತೆಯು ವ್ಯಕ್ತವಾಗುತ್ತದೆ. ಈ ಅಶುದ್ಧ ಪ್ರಭಾವದ ವಿರುದ್ಧ ಹಿಂಡಿನ ಉಳಿದವರನ್ನು ಸಂರಕ್ಷಿಸುವ ಶಾಸ್ತ್ರೀಯ ಜವಾಬ್ದಾರಿಯು ಪ್ರೀತಿಯ ಕುರುಬರಿಗಿದೆ.—1 ಕೊರಿಂಥ 5:3-7, 11-13.
ಆದಾಗ್ಯೂ, ದಾರಿ ತಪ್ಪಿದ ಕುರಿಗೆ ಕೃಪೆಯನ್ನು ವಿಸ್ತರಿಸಲು ಯೆಹೋವ ದೇವರು ಪರಿಪೂರ್ಣ ಮಾದರಿಯನ್ನು ಇಟ್ಟಿರುತ್ತಾನೆ. ನಮ್ಮ ಸಹಾನುಭೂತಿಯ ಕುರುಬನು ಹೇಳುವುದು: “ತಪ್ಪಿಸಿಕೊಂಡದನ್ನು ಹುಡುಕುವೆನು, ಓಡಿಸಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದದ್ದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು.” (ಯೆಹೆಜ್ಕೇಲ 34:15, 16; ಯೆರೆಮೀಯ 31:10) ಈ ಅತ್ಯುತ್ತಮ ಮಾದರಿಯನ್ನು ಅನುಕರಿಸುತ್ತಾ, ಅವರ ಸಹಾಯಕ್ಕೆ ಈಗ ಪ್ರತಿಕ್ರಿಯಿಸಬಹುದಾದ, ಬಹಿಷ್ಕ್ರತ ವ್ಯಕ್ತಿಗಳಿಗೆ ಆಧುನಿಕ ದಿನದ ಆತ್ಮಿಕ ಕುರುಬರಿಂದ ಭೇಟಿ ನೀಡುವ ಪ್ರೀತಿಯ ಏರ್ಪಾಡನ್ನು ಮಾಡಲಾಗಿರುತ್ತದೆ. ಕಳೆದು ಹೋದ ಕುರಿಯನ್ನು ಪುನಃ ಕಂಡುಕೊಳ್ಳುವ ಈ ಕೃಪಾಭರಿತ ಪ್ರಯತ್ನಗಳು ಉತ್ತಮ ಫಲವನ್ನು ಕೊಟ್ಟಿರುತ್ತದೆ. ಒಬ್ಬಾಕೆ ಪುನಃ ಸ್ಥಾಪಿತಳಾಗಿದ್ದ ಸಹೋದರಿಯು ಹೇಳಿದ್ದು: “ಹಿರಿಯರು ಭೇಟಿಯನ್ನಿತ್ತಾಗ, ನಾನು ಹಿಂದಿರುಗಿ ಬರಲು ನನಗೆ ಅಗತ್ಯವಿದ್ದ ಪ್ರೋತ್ಸಾಹನೆಯೇ ಅದಾಗಿತ್ತು.”
ಮಿಲೆತದಲ್ಲಿ ಎಫೆಸದ ಹಿರಿಯರಿಗೆ ಪೌಲನ ಮಾತುಗಳು—ಅವರಿಗೆ ಮತ್ತು ಇಂದಿನ ಮೇಲ್ವಿಚಾರಕರಿಗೆ—ಅರ್ಥದಿಂದ ತುಂಬಿದ್ದವೆಂಬುದು ಸಂಶಯಾತೀತ. ಕುರುಬರ ಕುರಿತು ಅವನ ಪರಾಮರ್ಶೆಯು ಮೇಲ್ವಿಚಾರಕರಲ್ಲಿ ಕಂಡುಬರಬೇಕಾದಂಥ ಆಕರ್ಷಕ ಗುಣಗಳ ನೆನಪು ಹುಟ್ಟಿಸುವಿಕೆಯಾಗಿತ್ತು—ಕುರುಬ ರಾಜ ದಾವೀದನ ಮೂಲಕ ಉದಾಹರಿಸಲ್ಪಟ್ಟಂತೆ, ದೀನತೆ ಮತ್ತು ಧೈರ್ಯ; ಯಾಕೋಬನ ಹಗಲು ಮತ್ತು ರಾತ್ರಿಯ ಸೇವೆಯಲ್ಲಿ ಕಂಡುಬರುವಂತೆ, ವೈಯಕ್ತಿಕ ಜವಾಬ್ದಾರಿಯ ಭಾವ ಮತ್ತು ಸಂರಕ್ಷಣಾ ಲಕ್ಷ್ಯ; ಮೋಶೆಯ ಮೂಲಕ ತೋರಿಸಲ್ಪಟ್ಟಂತೆ, ಸೈರಣೆಯಿಂದ ಮುಂದಿನ ತರಬೇತಿಯನ್ನು ಸ್ವೀಕರಿಸಲು ಇಷ್ಟಪೂರ್ವಕತೆಯಂತಹ ಗುಣಗಳು. ಬೈಬಲಿನ ಈ ಮಾದರಿಗಳು, “ತನ್ನ ಸ್ವಂತ ಕುಮಾರನ ರಕ್ತದಿಂದ ಕೊಂಡುಕೊಂಡ ಸಭೆಯನ್ನು ಪಾಲಿಸಲು” (NW) ಅಗತ್ಯವಿರುವ ಗುಣಗಳನ್ನು ಬೆಳೆಸಲು ಮತ್ತು ಪ್ರದರ್ಶಿಸಲು ಸಭೆಯ ಹಿರಿಯರಿಗೆ ಸಹಾಯ ಮಾಡುವವು.